೦೫ ಹೃದಯದ ವಿಜ್ಞಾನ

ಹೃದಯದ ವಿಜ್ಞಾನದ ಬಗ್ಗೆ ಮಹರ್ಷಿಗಳು ವಿಸ್ತಾರವಾಗಿ ವಿವರಣೆಯನ್ನು ಕರುಣಿಸಿದ್ದಾರೆ.

ಮಹರ್ಷಿಗಳು. ದೇಹಧಾರಿಯಾದ ಮಾನವನಲ್ಲಿ, ಎಲ್ಲ ರೀತಿಯ ಯೋಚನೆಗಳು ಹೃದಯದಿಂದ ಉದ್ಭವವಾಗುತ್ತದೆ. ಅಂತಹ ಎಲ್ಲ ವಿಷಯಗಳು ಮನಸ್ಸಿನ ಬರಿಯ ಕಲ್ಪನೆಗಳೇ. ಎಲ್ಲ ಯೋಚನೆಗಳ ಮೂಲವೇ ನಾನು ನಾನು ಎಂಬ ಚಿಂತನಾಸ್ಥಿತಿ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಯಾವ ಒಂದು ನೆಲೆಯಿಂದ ಈ ‘ನಾನು’ ಎಂಬುವುದು ಉದ್ಭವವಾಗುತ್ತದೆಯೋ ಅದಕ್ಕೆ ಹೃದಯ ಎಂದು ಹೆಸರು.

ಪ್ರಶ್ನೆ. ಅನಾಹತ ಚಕ್ರದಲ್ಲಿ ಹೃದಯವು ಇರುವುದಾದರೆ ಯೋಗದ ಅಭ್ಯಾಸಗಳು ಮೂಲಾಧಾರ ಚಕ್ರದಿಂದ ಹೇಗೆ ತಾನೆ ಸಾಧ್ಯವಾಗಬಲ್ಲದು?

ಮಹರ್ಷಿಗಳು. ನಾನು ತಿಳಿಸುತ್ತಿರುವ ಈ ಹೃದಯ, ರಕ್ತಚಲನೆಯನ್ನು ಮಾಡುತ್ತಿರುವ ಉಪಕರಣವಾದ ಹೃದಯಕ್ಕಿಂತ ಬೇರೆಯದ್ದು. ಹೃದಯಂ ಎನ್ನುವುದು ಹೃತ್ ಎಂಬುವುದರ ಮೂಲ. ಎಂದರೆ ಎಲ್ಲವನ್ನೂ ತನ್ನಲ್ಲಿ ಸೆಳೆದುಕೊಳ್ಳುವ ಕೇಂದ್ರ. ಅಯಂ ಎಂದರೆ ಇದು ಎಂದು. ಆದ್ದರಿಂದ “ಇದು ಆತ್ಮ” ಎಂದು ಆಗುತ್ತದೆ.

ಈ ಹೃದಯವು ಎದೆಯ ಗೂಡಿನ ಬಲಭಾಗದಲ್ಲಿದೆ. ಎಂದೆಂದೂ ಎಡಭಾಗದಲ್ಲಿ ಇಲ್ಲ. ಅರಿವಿನ ಬೆಳಕು, ಹೃದಯದಿಂದ ಹೊರಟು, ಸುಷುಮ್ನ ನಾಡಿಯ ಮೂಲಕ ಸಹಸ್ರಾರವನ್ನು ಸೇರುತ್ತದೆ. ಅಲ್ಲಿಂದ ಪೂರ್ಣ ದೇಹವನ್ನು ಆಕ್ರಮಿಸಿಕೊಂಡ ಕೂಡಲೇ ನಮಗೆ ಈ ಪ್ರಪಂಚದ ಅನುಭವವು ಗೋಚರವಾಗುತ್ತದೆ.

ನಮ್ಮ ಎಲ್ಲಾ ವೀಕ್ಷಣೆಗಳು ಬೆಳಕಿನಿಂದ ಬೇರೆಯೇ ಎಂದು ತಿಳಿದುಕೊಂಡಾಗ ನಾವು ಸಂಸಾರ ಚಕ್ರದಲ್ಲಿ ಸಿಕ್ಕಿಬಿಡುತ್ತೇವೆ. ಆದರೆ. ಆತ್ಮನಲ್ಲಿ ನೆಲೆನಿಂತವನಿಗೆ, ನಾನು ಪರಿಶುದ್ಧ ಪ್ರಜ್ಞೆಯಲ್ಲದೆ ಬೇರೆ ಏನೂ ಅಲ್ಲ, (ಬರಿಯ ಅರಿವಿನ ಇರುವಿಕೆ) ಎಂದು ಖಚಿತವಾಗಿ ತಿಳಿದವನಿಗೆ ಸಹಸ್ರಾರದಲ್ಲಿ ಶುದ್ಧಜ್ಯೋತಿಯೇ ಇರುತ್ತದೆ. ಈ ಜ್ಯೋತಿಯೇ, ಅವನನ್ನು ಸುತ್ತುವರಿದಿರುವುದರಿಂದ, ಅವನಿಗೆ, ಯಾವ ರೀತಿಯಾದ ಗೊಂದಲಗಳು ಇರುವುದಿಲ್ಲ. ನಾನು ದೇಹ,ನಾನು ಇಂದ್ರಿಯ, ಇದು ನನ್ನ ಮನಸ್ಸು, ಎಂಬ ಯಾವ ರೀತಿಯ ಯೋಚನೆಗಳು ಏಳುವುದೇ ಇಲ್ಲ. ಕಣ್ಣಿಗೆ ಕಾಣುವ ಎಲ್ಲವೂ ಚೈತನ್ಯವೇ ಎಂಬ ಜಡವಾದ ನೋಟ ಇರುತ್ತದೆ.

ಬಾಹ್ಯಪ್ರಪಂಚದ ಕಾರ್ಯಗಳಿಂದ ಅವನಿಗೆ ಯಾವ ಬಾಧೆಯೂ ಆಗುವುದಿಲ್ಲ,ಏಕೆಂದರೆ ಅಲ್ಲಿ ನೋಡುವವ, ಎಂಬುವರೇ ಇಲ್ಲ. ಬರಿಯ ನೋಟವೇ ಇರುವುದರಿಂದ, ಅವನು ವಸ್ತುವನ್ನು ಗುರುತಿಸುವಾಗಲೂ, ಒಂದೇ ಸಮನಾದ ಸ್ಥಿತಿಯಲ್ಲಿ ಇರುತ್ತಾನೆ. ಇಂತಹ ಸ್ಥಿತಿಗೆ ಸಹಜಸ್ಥಿತಿ ಎಂದು ಹೆಸರು. ಅಂತಹ ಸ್ಥಿತಿಯಲ್ಲಿ ಇರುವವನು, ಯಾವ ವಿಕಲ್ಪಗಳು ಇಲ್ಲದ ನಿರ್ವಿಕಲ್ಪ ಸಮಾಧಿಯಲ್ಲಿ ಇರುತ್ತಾನೆ

ಸಮಸ್ತ ಬ್ರಹ್ಮಾಂಡವು ನಮ್ಮ ದೇಹದಲ್ಲಿ ಇದೆ ಮತ್ತು ನಮ್ಮ ಪೂರ್ಣ ದೇಹ ಹೃದಯದಲ್ಲಿದೆ ಆದ್ದರಿಂದ ಬ್ರಹ್ಮಾಂಡವೇ ನಮ್ಮ ಹೃದಯದಲ್ಲಿ ಇದೆ. ಪ್ರಪಂಚವು ಮನಸ್ಸು ಅಲ್ಲದೆ ಬೇರೆ ಏನೂ ಅಲ್ಲ. ಮನಸ್ಸು ಹೃದಯವಲ್ಲದೆ ಬೇರೆ ಏನೂ ಅಲ್ಲ. ಆದ್ದರಿಂದ ಪ್ರಪಂಚದ ಎಲ್ಲಾ ಕಥೆಗಳು ಹೃದಯದಲ್ಲಿ ಕೊನೆಗೊಳ್ಳುತ್ತದೆ.

ಈ ಪ್ರಪಂಚಕ್ಕೆ, ಸೂರ್ಯನು ಯಾವ ರೀತಿಯೋ,ಅದೇ ರೀತಿ ದೇಹಕ್ಕೆ ಹೃದಯವೇ ಸೂರ್ಯ. ಸಹಸ್ರಾರದಲ್ಲಿ ತೋರುವ ಮನಸ್ಸು, ಪ್ರಪಂಚದಲ್ಲಿ ತೋರುವ ಚಂದ್ರನ ಕಲೆಯಂತೆ ಇದೆ. ಸೂರ್ಯನು ಚಂದ್ರನಿಗೆ ಯಾವ ರೀತಿ ಬೆಳಕನ್ನು ನೀಡುವನೋ ಅದೇರೀತಿ ಹೃದಯವು ಮನಸ್ಸಿಗೆ ಬೆಳಕನ್ನು ನೀಡುತ್ತದೆ.

ಸೂರ್ಯನು ಇಲ್ಲದಿದ್ದರೂ, ಸೂರ್ಯನ ಕಿರಣಗಳ ಸಹಾಯದಿಂದಲೇ, ಹುಣ್ಣಿಮೆಯ ದಿನ,, ಯಾವ ರೀತಿ ಚಂದ್ರನು ಕಂಡುಬರುವನೋ, ಅದೇ ರೀತಿ ಹೃದಯಸ್ಥಾನದಲ್ಲಿ ಇಲ್ಲದ ಮನುಷ್ಯನು ಬರಿಯ ಮನಸ್ಸನ್ನು ತಿಳಿಯುತ್ತಾನೆ.

ತನ್ನ ನಿಜವಾದ ಆತ್ಮಜ್ಯೋತಿಯನ್ನು ತನ್ನಲ್ಲಿ ಕಂಡುಕೊಳ್ಳದವ ಮತ್ತು ಎಲ್ಲ ವಸ್ತುಗಳನ್ನು ಮನಸ್ಸಿನಿಂದಲೇ ತಿಳಿಯುತ್ತಿರುವಂತವ, ಭ್ರಾಂತಿಗೆ ಸಿಲುಕಿದ ಅಜ್ಞಾನಿ ಎನ್ನಬೇಕು. ಮನಸ್ಸಿಗೆ ಮರುಳಾಗಿ ತನ್ನ ನಿಜ ಸ್ವರೂಪವನ್ನು ಮರೆತಿರುತ್ತಾನೆ. ಬೆಳಗಿನ ಬೆಳಕಿನಲ್ಲಿ, ಬೆಳದಿಂಗಳು ಯಾವ ರೀತಿಯಲ್ಲಿ ಸೇರಿರುವುದೋ, ಅದೇ ರೀತಿಯಲ್ಲಿ,ಹೃದಯದಲ್ಲಿ ನೆಲೆಸಿರುವ ಜ್ಞಾನಿಗಳು, ಮನೋ ಕಲ್ಪನೆಗಳು ಮತ್ತು ವಿಕಲ್ಪಗಳು ಎಲ್ಲಾ ತೊಲಗಿ,, ಹೃದಯದಲ್ಲಿರುವ ಜ್ಯೋತಿಯಲ್ಲಿ ಸೇರಿರುವುದನ್ನು ನೋಡುತ್ತಾರೆ.

ಪ್ರಜ್ಞಾನ ಎನ್ನುವುದು ಮನಸ್ಸಿನ ಮೇಲ್ನೋಟದ ಅರ್ಥ. ಆದರೆ ಅದರ ನಿಜವಾದ ಅರ್ಥ ಹೃದಯ ಎಂದು ಜ್ಞಾನಿಗಳು ತಿಳಿದಿರುತ್ತಾರೆ. ಉತ್ಕೃಷ್ಟವಾದದ್ದು ಹೃದಯವಲ್ಲದೆ ಬೇರೆ ಏನೋ ಅಲ್ಲ..

ನೋಡುವವನು ಮತ್ತು ನೋಡಿದ ವಸ್ತುಗಳು ಬೇರೆ ಬೇರೆ, ಎಂದು ತಿಳಿಯುವ ಕಲ್ಪನೆ, ಆಗುವುದು ಮನಸ್ಸಿನಲ್ಲಿಯೇ. ಹೃದಯದಲ್ಲಿ ನೆಲೆನಿಂತಿರುವವರಿಗೆ ನೋಡುವವ ಮತ್ತು ನೋಡಿದ ವಸ್ತು ಎರಡೂ ಒಂದೇ ಆಗಿರುತ್ತದೆ.

ನಿದ್ರೆಯಲ್ಲಿ, ಅತಿಯಾದ ಸಂತೋಷದಲ್ಲಿ, ದುಃಖದಲ್ಲಿ, ಹೆದರಿಕೆಯಲ್ಲಿ ಅಥವಾ ಮೂರ್ಛೆಯಲ್ಲಿ ಗೋಚರವಾಗದ ಆಲೋಚನೆಗಳು, ತನ್ನ ಮೂಲ ಸ್ಥಾನವಾದ ಹೃದಯವನ್ನು, ಹೋಗಿ ಸೇರುತ್ತದೆ. ಅಂತಹ ಸಮಯಗಳಲ್ಲಿ ಹೃದಯದಲ್ಲಿ ಯೋಚನೆಗಳು ವಿಲೀನವಾಗಿರುವುದನ್ನು, ಅಜ್ಞಾನಿಯ ತಿಳಿಯಲಾರ. ಜ್ಞಾನಿಯಾದವನು ಅಥವಾ ಸಮಾಧಿಯಲ್ಲಿರುವವ ಅದನ್ನು ತಿಳಿಯುತ್ತಾನೆ. ಆದ್ದರಿಂದಲೇ ಅಜ್ಞಾನಿಗಳು ಮತ್ತು ಜ್ಞಾನಿಗಳು ಎಂಬ ನಾಮಗಳು ಉಂಟಾಗಿವೆ.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಹೃದಯದ ವಿಜ್ಞಾನ ಎಂಬ ಐದನೆಯ ಅಧ್ಯಾಯ.