೦೧ ಉಪಾಸನೆಯ ಮಹತ್ವ

ಪ್ರಶ್ನೆ. ನಿಜ ಮತ್ತು ತೋರಿಕೆಗೆ ವ್ಯತ್ಯಾಸ ಅಥವಾ ತಾರತಮ್ಯ ತಿಳಿದಕೂಡಲೇ ಮುಕ್ತಿ ದೊರೆಯಬಲ್ಲದೇ? ಅಥವಾ ಬಂಧನದಿಂದ ಬಿಡುಗಡೆಗೆ ಬೇರೆ ಏನಾದರೂ ಉಪಾಯವಿದೆಯೇ?

ಮಹರ್ಷಿಗಳು. ಆತ್ಮ ನೆಲೆಯಲ್ಲಿ ನಿಂತಿರುವುದೇ ಎಲ್ಲ ರೀತಿಯ ಬಂಧನಗಳಿಗೆ ಮುಕ್ತಿ. ನಿಜ ಮತ್ತು ತೋರಿಕೆಗಳ ತಾರತಮ್ಯ ತಿಳಿದಕೂಡಲೇ ಬರಿಯ ಬಾಂಧವ್ಯದಿಂದ ಮುಕ್ತವಾಗುವನೇ ಹೊರತು ಮತ್ತೆ ಏನೂ ಆಗುವುದಿಲ್ಲ.

ಜ್ಞಾನಿಯನ್ನು ಅಳೆಯಲಾಗುವುದಿಲ್ಲ, ಅಳೆಯಲಾಗಲಾರದು. ಅವನು ಎಂದೆಂದಿಗೂ ಆತ್ಮನಲ್ಲಿ ನೆಲೆ ನಿಂತಿರುವವ. ಈ ಬ್ರಹ್ಮಾಂಡವು ತನ್ನಿಂದ ಬೇರೆ ಅಲ್ಲ ಮತ್ತು ತೋರಿಕೆಯು ಅಲ್ಲ ಎಂದು ಖಚಿತವಾಗಿ ತಿಳಿದಿರುತ್ತಾನೆ.

ಪ್ರಶ್ನೆ. ಶಾಸ್ತ್ರಗಳ ಓದುವಿಕೆಯಿಂದ ಮುಕ್ತಿ ದೊರೆಯಬಲ್ಲದೋ ಅಥವಾ ಗುರುಗಳ ಮಾರ್ಗದರ್ಶನ ಇದಕ್ಕೆ ಬೇಕೋ?

ಮಹರ್ಷಿಗಳು. ಬರಿಯ ಶಾಸ್ತ್ರಗಳಿಂದ ಮತ್ತು ಅವುಗಳ ಓದುವಿಕೆಯಿಂದ ಯಾರೂ ತನ್ನ ಜ್ಞಾನದ ಮೂಲವನ್ನು ಅರಿಯಲಾರರು. ಉಪಾಸನೆಯಲ್ಲಿ ತೊಡಗಿದ್ದರೆ ಮಾತ್ರ ಸಾಧನೆಯಲ್ಲಿ ಜಯಗಳಿಸ ಬಹುದು. ಇದು ಖಂಡಿತ.

ಆಧ್ಯಾತ್ಮಿಕ ಸಾಧನೆಯಲ್ಲಿ ತನ್ನ ನೈಸರ್ಗಿಕ ನೆಲೆಯನ್ನು ಅನುಭವಕ್ಕೆ ತಂದುಕೊಳ್ಳುವುದಕ್ಕೆ ಉಪಾಸನೆ ಎನ್ನುತ್ತಾರೆ. ಆ ನೆಲೆ ಎಂದು ಸ್ಥಿರವಾಗಿ ಶಾಶ್ವತವಾಗಿ ನಿಲ್ಲುವುದೊ, ಅದನ್ನೇ ಜ್ಞಾನ ಎನ್ನುತ್ತಾರೆ.

ಇಂದ್ರಿಯಗಳಿಂದ ಬಂದಂತಹ ವಿಷಯಗಳನ್ನು ಗ್ರಹಿಸದೆ (ಅವೆಲ್ಲವನ್ನೂ ನಿರಾಕರಿಸಿ) ತನ್ನ ನಿಜ ಸ್ವರೂಪದಲ್ಲಿ ಜ್ಞಾನದ ಜ್ವಾಲೆಯಲ್ಲಿ ನೆಲೆಸಿರುವುದಕ್ಕೆ ಸಹಜ ಸ್ಥಿತಿ ಎನ್ನುತ್ತಾರೆ.

ಪ್ರಶ್ನೆ. ಸ್ಥಿತಪ್ರಜ್ಞನು ತನ್ನ ನೆಲೆಯನ್ನು ಯಾವ ವಿಧದಿಂದ ಗುರುತಿಸಿಕೊಳ್ಳುತ್ತಾನೆ? ಪೂರ್ಣ ಜ್ಞಾನದ ಅನುಭವದಿಂದಲೋ ಅಥವಾ ಹೊರಗಿನ ಪ್ರಪಂಚದ ಅರಿವು ಇಲ್ಲದಿದ್ದಾಗಲೋ?

ಮಹರ್ಷಿಗಳು. ವಾಸನೆಗಳಿಂದ ಮುಕ್ತನಾಗಿ ಸ್ಥಿರವಾದ ನೈಜ ಸ್ಥಿತಿಯಲ್ಲಿ ಪರಮ ಶಾಂತಿಯಲ್ಲಿ ಇದ್ದಾಗ, ಜ್ಞಾನಿಯ ತನ್ನನ್ನು ತಾನು ಯಾವ ಸಂಶಯವೂ ಇಲ್ಲದೆ ನೋಡಬಲ್ಲವನಾಗಿರುತ್ತಾನೆ.

ಪ್ರಶ್ನೆ. ಜ್ಞಾನಿಯನ್ನು, ತಿಳಿದವರು ಯಾವ ರೀತಿ ಗುರುತಿಸುತ್ತಾರೆ?

ಮಹರ್ಷಿಗಳು. ಎಲ್ಲ ಜೀವಿಗಳಲ್ಲಿಯೂ ಸಮ ಭಾವನೆಯಿಂದ ಕೂಡಿರುವವನು, ತನ್ನ ಜ್ಞಾನದಲ್ಲೇ ಬೀಡುಬಿಟ್ಟಿದ್ದಾನೆ, ಎಂಬುದೇ ತಾತ್ಪರ್ಯ.

ಪ್ರಶ್ನೆ. ಸಮಾಧಿಯ ಅಭ್ಯಾಸದಿಂದ ನಮಗೆ ಬರಿಯ ಜ್ಞಾನವು ದೊರಕುವುದೋ ಅಥವಾ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆಯೋ?

ಮಹರ್ಷಿಗಳು. ಯಾವ ಉದ್ದೇಶದಿಂದ ಸಮಾಧಿ ಅಭ್ಯಾಸ ಮಾಡುವರೋ, ಆ ಉದ್ದೇಶ ಖಂಡಿತವಾಗಿಯೂ ಫಲ ಕೊಡುತ್ತದೆ.

ಪ್ರಶ್ನೆ. ಇಷ್ಟಾರ್ಥಗಳಿಗಾಗಿ ಯೋಗಸಾಧನೆಯಲ್ಲಿ ತೊಡಗಿಸಿಕೊಂಡವನು, ಬರಿಯ ಸ್ಥಿತಪ್ರಜ್ಞೆಯನ್ನು ಹೊಂದುವನೋ ಅಥವಾ ಅವನ ಅಭೀಷ್ಟಗಳು ಕೂಡ ನೆರವೇರುವುದೋ.

ಮಹರ್ಷಿಗಳು. ಆಸೆಗಳಿಂದ ಕೂಡಿದ ಯೋಗಾಭ್ಯಾಸದಿಂದ ಸ್ಥಿತಪ್ರಜ್ಞ ಎನಿಸಿ ಕೊಂಡವನಿಗೆ, ಆಸೆಗಳು ತೀರಿದರೂ ಶಾಶ್ವತವಾದ ಸಂತೋಷದ ಸ್ಥಿತಿ ಇರುವುದಿಲ್ಲ.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಉಪಾಸನೆಯ ಮಹತ್ವ ಎಂಬ ಮೊದಲನೆಯ ಅಧ್ಯಾಯ.