೦೨ ನಲವತ್ತೆರಡು ಶ್ಲೋಕಗಳು

ಭಗವಾನ್ ರಮಣರು ಆರಿಸಿ ಜೋಡಿಸಿದ ಶ್ಲೋಕಗಳು

ಈ ನಲವತ್ತೆರಡು ಶ್ಲೋಕಗಳು,ಏಳುನೂರು ಶ್ಲೋಕಗಳಿಂದ ಆಯ್ದ ಮುತ್ತು ರತ್ನಗಳು. ಇವು,ಅತ್ಯಂತ ಗಹನವಾದದ್ದು, ಕೂಡ. ಇವುಗಳನ್ನು ಮೇಲ್ನೋಟಕ್ಕೆ ಓದಿಬಿಟ್ಟು ಬಿಡ ಬಾರದು.

ನನ್ನ ಬರಹಗಳಲ್ಲಿ ಒತ್ತಿ ಹೇಳುತ್ತಿರುವುದು ಏನೆಂದರೆ, ಶ್ರುತಿ ಮತ್ತು ಸ್ಮೃತಿಗಳ ವಾಕ್ಯಗಳನ್ನು, ದೀರ್ಘ ಚಿಂತನೆಯಿಂದ, ಪ್ರತಿಯೊಂದು ಶ್ಲೋಕಗಳ ಮತ್ತು ಅದರಲ್ಲಿನ ಪದದ ಗೂಢ ಅರ್ಥವನ್ನು ತಿಳಿಯಬೇಕು. ಒಂದೊಂದು ವಾಕ್ಯವೂ ಕಬ್ಬಿನ ಜಲ್ಲೆಯ ರೀತಿ ಇದೆ. ಅದು,ಬಹಳ ಸಾರವತ್ತು ಆದದ್ದು.(ಇಕ್ಷು ದಂಡ ಸಾರವತ್). ಆದ್ದರಿಂದ, ಅದರ ರಸವನ್ನು ಹಿಂಡಿ, ಅ ರಸವನ್ನು ಅನುಭವಿಸದ ಹೊರತು, ನೀವು ಅ ಒಂದು ಆನಂದ ಸಾಗರದಲ್ಲಿ ಇರಲು ಆಗದು.

ದಯವಿಟ್ಟು, ಇದನ್ನು ಗಮನದಲ್ಲಿ ಇಟ್ಟು, ಮುಂದಿನ ಶ್ಲೋಕಗಳ ಉಪಯೋಗ ಪಡೆಯಿರಿ.

“ಜ್ಞಾನಾತ್ ಏವ ಬ್ರಹ್ಮ ಪ್ರಾಪ್ತಿ.” ಎಂಬ ಶ್ರೀ ಶಂಕರರ ವಾಣಿಯೇ, ಭಗವಾನರು. ಆಚರಿಸುತ್ತಿದ್ದ ಮತ್ತು ತೋರುತ್ತಿದ್ದ ಮಾರ್ಗ. ಜ್ಞಾನ ಮಾರ್ಗವೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ಅವರ ಅನಿಸಿಕೆ, ಏಕೆಂದರೆ, ಕರ್ಮ ಮಾರ್ಗವು, ಫಲಾಪೇಕ್ಷೆಗಳು, ತುಂಬಿರುವ ಹಾದಿ. ಇದನ್ನು, ಚಿತ್ತ ಶುದ್ಧಿಗಾಗಿ ಬೆಳ ಸಿಕೊಳ್ಳಬೇಕೇ ಹೊರತು, ಅದರಿಂದ, ಶಾಶ್ವತ ಸುಖ ಸಿಗಲಾರದು, ಎಂಬುದು ತಾತ್ಪರ್ಯ.

ಶ್ಲೋಕಗಳ ಪದವಿಭಾಗ ಮಾಡದೇ ಇರುವುರಿಂದ, ನೀವು ಮೂಲ ಗ್ರಂಥವನ್ನು ಇಟ್ಟು ನೋಡಿದಾಗ ನಿಮಗೆ ಬೇಕಾದ ಎಲ್ಲಾ ಭಾಗಗಳು ಮತ್ತು ಅದರ ಪ್ರಾಮುಖ್ಯತೆ ದೊರೆಯುವ ಸಾಧ್ಯತೆ ಇದೆ. ಆಗ ಅರ್ಥ ಸ್ಪಷ್ಟವಾಗಿ ತಿಳಿಯುತ್ತದೆ. ಇದಕ್ಕಾಗಿ, ಶ್ಲೋಕಗಳ ಕಡೆಯಲ್ಲಿ ಭಗವದ್ಗೀತೆಯಲ್ಲಿನ ಅಧ್ಯಾಯ ಮತ್ತು ಶ್ಲೋಕವನ್ನು ಸೂಚಿಸಲಾಗಿದೆ.

ಅರ್ಜುನನನ್ನು ನಿಮಿತ್ತನನ್ನಾಗಿ ಮಾಡಿಕೊಂಡು, ಭಗವಾನರು, ನಮ್ಮೆಲ್ಲರಲ್ಲಿಯೂ ಅರ್ಜುನನಂತೆಯೇ, ಧರ್ಮ ಸೂಕ್ಷ್ಮತೆ, ಪಾಪಪ್ರಜ್ಞೆ, ಆಚರಣೆ ಮಾಡದಿದ್ದರೆ ಆಗಬಹುದಾದ ಮನಸ್ಸಿನ ಸಂಕುಚಿತ ಭಾವನೆಯನ್ನು, ಸುಖ ದುಃಖಗಳ ಮಹಾಪೂರ, ಮುಂತಾದುವುಗಳನ್ನು ಮೂಲವಾಗಿ ಇಟ್ಟುಕೊಂಡು, ಇದಕ್ಕೆ ಉಪಾಯವನ್ನು ಮುಂದೆ ಸೂಚಿಸುತ್ತಾರೆ.

**೧. ಸಂಜಯ ಉವಾಚ **

ತಂ ತಥಾ ಕೃಪಯಾವಿಷ್ಟಮ್ ಅಶ್ರುಪೂರ್ಣಾಕುಲೇಕ್ಷಣಂ |

ವಿಷೀದಂತಮಿದಂ ವಾಕ್ಯಮಮ್ ವಾಚ ಮಧುಸೂದನಃ || 2.1

ಸಂಜಯನು ಹೇಳಿದನು “ಕರುಣೆಯಿಂದ ತುಂಬಿ, ಕಂಬನಿ ತುಂಬಿದ, ದುಃಖಿತನಾದ ಅರ್ಜುನನನ್ನು ನೋಡಿ ಮಧುಸೂದನನು ಹೀಗೆ ಹೇಳಿದನು

ಎರಡನೆಯ ಮತ್ತು ಮೂರನೆಯ ಶ್ಲೋಕದಲ್ಲಿ ಶರೀರ ಮತ್ತು ಅದರಲ್ಲಿ ವಾಸಿಸುವ ಶಾರೀರಿಯ ಬಗ್ಗೆ ಕೂಲಂಕಶವಾಗಿ ತಿಳಿಸಲಾಗಿದೆ.. ಕ್ಷೇತ್ರ ಯಾವುದು ಮತ್ತು ಕ್ಷೇತ್ರಜ್ಞ ಯಾರು ಎಂಬ ತಿಳಿವಳಿಕೆಯನ್ನು ಯಾರು ಹೊಂದುತ್ತಾರೆಯೋ, ಅವರು ನಿಜವಾಗಿ ಜ್ಞಾನಿ ಎಂದು ಭಗವಂತನು ಸಮರ್ಥಿಸುತ್ತಾನೆ

**೨. ಶ್ರೀಭಗವಾನುವಾಚ **

**ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ **

ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ || 13.2

ಭಗವಂತನು ಹೇಳಿದನು “ಕೌಂತೇಯ! ಈ ದೇಹವನ್ನು ಕ್ಷೇತ್ರವೆಂದು ಕರೆಯಲಾಗಿದೆ, ಇದನ್ನು ಯಾರು ತಿಳಿಯುತ್ತಾನೋ ಅವನನ್ನು ಕ್ಷೇತ್ರಜ್ಞ ಎಂದು ವೇದಾಂತಿಗಳು ಕರೆಯುವರು”.

೩. ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ |

ಕ್ಷೇತ್ರಕ್ಷೇತ್ರಜ್ಞಯೋಜ್ರ್ಞಾನಂ ಯತ್ತತ್ ಜ್ಞಾನಂ ಮತಂ ಮಮ 13.3

ಭರತವಂಶ ಶ್ರೇಷ್ಠನೇ! ಎಲ್ಲಾ ಕ್ಷೇತ್ರಗಳ ಕ್ಷೇತ್ರಜ್ಞನು ನಾನೇ ಎಂದು ತಿಳಿ. ಈ ದೇಹವನ್ನು ಮತ್ತು ಕ್ಷೇತ್ರಜ್ಞನನ್ನು ತಿಳಿಯುವುದೇ ಜ್ಞಾನವು ಎಂದು ನನ್ನ ಅಭಿಪ್ರಾಯ

( ಕ್ಷೇತ್ರ ಮತ್ತು ಕ್ಷೇತ್ರಜ್ಞ ನಂತೆ ತೋರುವ ಈಶ್ವರ -ಇವರ ತತ್ವವನ್ನು ಬಿಟ್ಟರೆ. ಜ್ಞಾನಕ್ಕೆ ವಿಷಯ ವಾದದ್ದು. ಮತ್ತೆ ಯಾವುದೂ ಉಳಿಯುವುದಿಲ್ಲ )

ಶ್ಲೋಕ, ನಾಲ್ಕರಿಂದ ಹನ್ನೆರಡರವರೆಗೆ, ಆತ್ಮನ ಮಹತ್ವ ಮತ್ತು ಪ್ರಶಂಸೆ ಇದೆ. ನಾವು ಆಡುವ ಭಾಷೆಯಲ್ಲಿ “ಅವನು ಸತ್ತುಹೋದ” ಅಥವಾ “ಅವನ ಸತ್ತು ಹೋಯಿತು” ಎಂದು ಹೇಳಿದಾಗ, ನಮ್ಮಲ್ಲೇ ಇದ್ದ ಯಾರೋ ಒಬ್ಬ ದೇಹವನ್ನು ಬಿಟ್ಟಿದ್ದರಿಂದ, ದೇಹಪಾತವಾಯಿತು ಎಂದು ತಿಳಿಯುತ್ತದೆ. ರಾಧಾಕೃಷ್ಣ ಎಂದು ನಾಮ ಸಂಕೇತವಾದ ದೇಹದಲ್ಲಿ, ಇನ್ನೊಬ್ಬರು ಇದ್ದರು ಎಂಬ ಸೂಚನೆ ತಿಳಿಯುತ್ತದೆ. ಹಾಗಾದರೆ ಈ ಸತ್ ಅಥವಾ ಸತ್ತು ಯಾರು? ಅವನ ಮಹತ್ವ ಏನು ? ಅವನ ಗುಣಗಳೇನು? ಇದನ್ನು ತಿಳಿದಾಗಲೇ ನಮಗೆ ಸೂಕ್ಷ್ಮ ವಿಚಾರಗಳು ಎದ್ದು ಮೂಡುತ್ತವೆ.

ಭಗವಾನ್ ರಮಣರು, ಉತ್ತಮ ಮಟ್ಟದಿಂದ ಕೆಳಕ್ಕೆ ಉಳಿಯುತ್ತಾ ಬಂದು, ಕಡೆಗೆ ನಮ್ಮನ್ನು ಅದೇ ಮೆಟ್ಟಲುಗಳನ್ನು ಹತ್ತಲು ಪ್ರೇರೇಪಿಸುತ್ತಾರೆ. ಮೊದಲು ದೇಹದ ಬಗ್ಗೆ ತಿಳಿದು ನಂತರ ಅದರ ಮಾಲೀಕನ ಬಗ್ಗೆ ತಿಳಿದುಕೊ( ಶ್ಲೋಕ ೩ ಮತ್ತು೪)

ದೇಹವು ಪಂಚಭೂತಗಳಿಂದ ಆದದ್ದು,. ಅದು ಕಾಲದ ನಿಯಮಕ್ಕೆ ಒಳಪಟ್ಟಿದೆ. ಅದಕ್ಕೆ ಶಕ್ತಿ ಇದ್ದರೆ ಮಾತ್ರ ವರ್ಧಿಸುತ್ತದೆ. ಇಲ್ಲದಿದ್ದಲ್ಲಿ ನಶಿಸಿಹೋಗುತ್ತದೆ. ( ಶ್ಲೋಕ೬)

ಆತ್ಮನ ಬಗ್ಗೆ ವಿವರಣೆ ಮತ್ತು ಪ್ರಶಂಸೆ ಮುಂದಿನ ಮೂರು ಶ್ಲೋಕಗಳಲ್ಲಿ ತಿಳಿಸಲಾಗಿದೆ (೭ -೧೦) ಹನ್ನೊಂದು ಮತ್ತು ಹನ್ನೆರಡು ಶ್ಲೋಕಗಳಲ್ಲಿ, ಆತ್ಮದ ನೆಲೆಯನ್ನು ನಿಖರವಾಗಿ ತಿಳಿಸಲಾಗಿದೆ.

೪. ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |

ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ || 10.20

ಗುಡಾಕೇಶ! (ನಿದ್ದೆ, ತಮೋಗುಣ ಅಜ್ಞಾನಗಳನ್ನು ಗೆದ್ದವ), ನಾನು ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುವ ಪರಮಾತ್ಮನು. ನಾನು ಜೀವಿಗಳೆಲ್ಲದರ ಮೂಲನೂ, ಮಧ್ಯವೂ ಮತ್ತು ಅಂತ್ಯವೂ ಆಗಿದ್ದೇನೆ

(ಸಮಸ್ತ ಪ್ರಾಣಿಗಳ ಉತ್ಪತ್ತಿ -ಸ್ಥಿತಿ ಮತ್ತು ಲಯಗಳಿಗೆ ಕಾರಣನಾದವನು )

೫. ಜಾತಸ್ಯ ಹಿ ಧ್ರುವೋ ಮೃತ್ಯುಧ್ರ್ರುವಂ ಜನ್ಮ ಮೃತಸ್ಯ ಚ |

ತಸ್ಮಾದಪರಿಹಾರ್ಯೇ„ರ್ಥೇ ನ ತ್ವಂ ಶೋಚಿತುಮರ್ಹಸಿ || 2.27

ಹುಟ್ಟಿದವನಿಗೆ, ಮೃತ್ಯು ನಿಶ್ಚಯವಾಗಿ ಇರುವುದು. ಸತ್ತಮೇಲೆ ಜನ್ಮವೂ ನಿಶ್ಚಯವಾಗಿ ಇರುವುದು ಅಲ್ಲವೇ. ಹೀಗೆ ಇರುವುದರಿಂದ, ಪರಿಹಾರ ಇಲ್ಲದ ಈ ಅರ್ಥದಲ್ಲಿ ನೀನು ಶೋಕೀಡಬಾರದು

೬. ನ ಜಾಯತೇ ಮ್ರಿಯತೇ ವಾ ಕದಾ ಚಿನ್ ನಾಯಂ ಭೂತ್ವಾ ಭವಿತಾ ವಾ ನ ಭೂಯಃ |

ಅಜೋ ನಿತ್ಯಃ ಶಾಶ್ವತೋ„ಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ || 2.20

ಆತ್ಮ ಎಂಬುದು, ಎಂದಿಗೂ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಆತ್ಮ ಹಿಂದೆ ( ಮೊದಲು)ಇದ್ದು, ಆಮೇಲೆ ಇಲ್ಲದೆ ಇರುವುದು ಕೂಡ ಇಲ್ಲ. ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ. ಅದು ಜನ್ಮರಹಿತ, ನಿತ್ಯ, ಶಾಶ್ವತ, ಪುರಾತನವಾದದ್ದು

೭ ಅಚ್ಛೇದ್ಯೋ„ಯಮ್ ಅದಾಹ್ಯೋ„ಯಮ್ ಅಕ್ಲೇದ್ಯೋ„ಶೋಷ್ಯ ಏವ ಚ |

ನಿತ್ಯಃ ಸರ್ವಗತಃ ಸ್ಥಾಣುರಚಲೋ„ಯಂ ಸನಾತನಃ ||

2.24

ಆತ್ಮವನ್ನು ಛೇದಿಸಲಾಗದು, ನೀರಿನಲ್ಲಿ ಕರಗಿಸಲಾಗದು, ದಹಿಸಲಾಗದು, ಒಣಗಿಸಲಾಗದು. ಆತ್ಮವು ನಿತ್ಯವೂ, ಎಲ್ಲೆಡೆಯೂ ಇರುವಂತಹದ್ದು, ಬದಲಾವಣೆಯಿಲ್ಲದ್ದು, ಸ್ಥಿರವಾದದ್ದು, ಶಾಶ್ವತವಾದದ್ದು

೮. ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಂ |

ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ || 2.17

ಯಾವುದರಿಂದ ಇದೆಲ್ಲವೂ ವ್ಯಕ್ತ ಆಗಿದೆಯೋ,(ದೇಹವೆಲ್ಲಾ ವ್ಯಾಪಿಸಿ ಇದೆಯೋ) ಅದು ಅವಿನಾಶಿ ಎಂದು ನೀನು ತಿಳಿಯಬೇಕು. ನಾಶವಿಲ್ಲದ ಆತ್ಮವನ್ನು ಯಾರೂ ನಾಶಮಾಡಲು ಆಗುವುದಿಲ್ಲ.

.ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ

ಉಭಯೋರಪಿ ದೃಷ್ಟೋ„ಂತಃ ತ್ವನಯೋಸ್ತತ್ತ್ವದರ್ಶಿಭಿಃ || 2.16

ನಾಸತೋ ಎಂದರೆ, ಅಚೇತನ ರೂಪವಾದ ದೇಹಕ್ಕೆ, ಅಸ್ತಿತ್ವ ಇಲ್ಲ. ಸತ್ ಎಂದರೆ ಆತ್ಮ. ಆತ್ಮನಿಗೆ ಯಾವ ನಾಶವೂ ಇಲ್ಲ. ನಿಜವಾಗಿ ಇಲ್ಲದಿರುವುದಕ್ಕೆ, ಇರುವಿಕೆ ಹುಟ್ಟುವುದಿಲ್ಲ. (ಹಗ್ಗದಲ್ಲಿ ಹಾವನ್ನು ಕಂಡಂತೆ) ಇರುವುದು ಒಂದೇ ಆತ್ಮ. ಅದಕ್ಕೆ ಹುಟ್ಟು ಇಲ್ಲಾ, ಸಾವೂ ಇಲ್ಲ ಈ ವ್ಯತ್ಯಾಸವನ್ನು ತಿಳಿದುಕೊಂದವ ದಾರ್ಶನಿಕ.

  • ರಜ್ಜುವಿನಲ್ಲಿ, ಸರ್ಪ… ಇಲ್ಲದಂತೆ… ಇರುವುದು ಅರಿವು , ನಮ್ಮೊಳಗೆ… ಭ್ರಾಂತಿ ಭಾವಕ್ಕೆ ಮೂಲ { ಸ್ವ ಸ್ವರೂಪ }..

* ಅನುಬಂಧ. ೧ ನೋಡಿ

**೧೦. ಯಥಾ ಸರ್ವಗತಂ ಸೌಕ್ಷ್ಮಯಾತ್ ಆಕಾಶಂ ನ ಉಪಲಿಪ್ಯತೇ **

ಸರ್ವತ್ರ ಅವಸ್ಥಿತೋ ದೇಹೇ ತಥಾ ಆತ್ಮಾ ನ ಉಪಲಿಪ್ಯತೇ || 13.32

ಹೇಗೆ ಆಕಾಶವು, ಎಲ್ಲೆಡೆ ವ್ಯಾಪಿಸಿದ್ದರೂ ಸೂಕ್ಷ್ಮ ರೂಪದಿಂದ ಯಾವುದರೊಂದಿಗೂ ಬೆರೆಯವುದಿಲ್ಲವೋ, ಅದರಂತೆಯೇ ಆತ್ಮ, ದೇಹದ ಎಲ್ಲಾ ಕಡೆಗಳಲ್ಲಿ ನೆಲೆಸಿದ್ದರೂ ಬೆರೆಯುವುದಿಲ್ಲ

ಆಕಾಶದ ವಿವರಣೆಗೆ ಅನುಬಂಧ ೨ ರಲ್ಲಿ ನೋಡಿ

೧೧. ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |

ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ || 15.6

ಎಲ್ಲಿ ಸೂರ್ಯ, ಚಂದ್ರ, ಅಗ್ನಿ ಯಾವುದೂ ಪ್ರಕಾಶಿಸುವುದಿಲ್ಲವೋ, ಎಲ್ಲಿ ಹೋದರೆ ಮತ್ತೆ ಹಿಂದಿರುಗುವುದಿಲ್ಲವೋ ಅದು ನನ್ನ ಪರಮ ಧಾಮವು

೧೨. ಅವ್ಯಕ್ತೋ„ಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಂ |

ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ || 8.21

ಯಾವುದನ್ನು ಅವ್ಯಕ್ತವೆಂದು, ಅಕ್ಷರವೆಂದು ಹೇಳಲಾಗಿದೆಯೋ, ಯಾವುದನ್ನು ಪರಮಗತಿಯೆಂದು ತಿಳಿಯಲಾಗಿದೆಯೋ, ಯಾವ ಸ್ಥಾನವನ್ನು ತಲುಪಿ ಮತ್ತೆ ಹಿಂದಿರುಗುವುದಿಲ್ಲವೋ, ಅದು ನನ್ನ ಪರಮೋನ್ನತ ನಿವಾಸವಾಗಿದೆ

ಶ್ಲೋಕ ಹದಿಮೂರರಿಂದ ಹದಿನೆಟನೆರವರೆಗೆ ನಾವು ಯಾವ ರೀತಿಯಲ್ಲಿ ಜ್ಞಾನ ಸಂಪಾದನೆ ಮಾಡಿದರೆ ಶಾಂತಿಯನ್ನು ಹೊಂದಬಹುದು ಎಂಬುದನ್ನು ವಿವರಿಸಲಾಗಿದೆ

ಅವ್ಯಕ್ತ,, ಅಕ್ಷರ, ಎಂಬ ಪದಗಳ ಬಳಕೆಗೆ ವಿವರಣೆಯನ್ನು ಅನುಬಂಧ-೩ ರಲ್ಲಿ ನೋಡಿ

೧೩. ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮ ನಿತ್ಯಾ ವಿನಿವೃತ್ತಕಾಮಾಃ |

ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಃ ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ || 15.5

ಗರ್ವ, ಮೋಹಗಳಿಲ್ಲದ, ಸಹವಾಸ ದೋಷಗಳನ್ನು ಗೆದ್ದ, ಸದಾ ಅಧ್ಯಾತ್ಮದಲ್ಲಿ ನಿರತರಾದ, ಕಾಮನೆಗಳನ್ನು ತ್ಯಜಿಸಿದ, ಸುಖ-ದುಃಖ ಎಂಬ ದ್ವಂದ್ವಗಳಿಂದ ಮುಕ್ತರಾದ, ದಿಗ್ಭ್ರಮೆಗೊಳ್ಳದವರು ಆ ಶಾಶ್ವತ ತಾಣವನ್ನು ಹೊಂದುತ್ತಾರೆ

೧೪. ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ |

ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಂ || 16.23

ಯಾರು ಶಾಸ್ತ್ರದ ( ವೇದ ಮತ್ತು ವೆದಾಂಗಗಳು) ನಿಯಮಗಳನ್ನು ತ್ಯಜಿಸಿ ತನ್ನಿಚ್ಛೆಯಂತೆ ವರ್ತಿಸುತ್ತಾನೋ ಆಂತಹವನು ಎಂದಿಗೂ ಪರಿಪೂರ್ಣತೆಯನ್ನು, ಸುಖವನ್ನು ಅಥವಾ ಪರಮಗತಿಯನ್ನು ಹೊಂದಲಾರ.

೧೫. ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಂ ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ || 13.28

ಯಾರು ಎಲ್ಲಾ ಜೀವಿಗಳಲ್ಲಿ ವಾಸಿಸುತ್ತಿರುವ ಪರಮಾತ್ಮನನ್ನು ಮತ್ತು ವಿನಾಶವಾದವುಗಳಲ್ಲಿ ವಿನಾಶವಾಗದವನನ್ನು ಸಮಾನವಾಗಿ ಕಾಣುತ್ತಾನೋ ಅವನು ನಿಜವಾಗಿಯೂ ಕಾಣುತ್ತಾನೆ.

**೧೬. ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂ ವಿಧೋ„ರ್ಜುನ **

ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ || 11.54

ಪರಂತಪ! (ಶತ್ರುಗಳನ್ನು ನಾಶ ಮಾಡಬಲ್ಲ ಅರ್ಜುನನೇ) ಅನನ್ಯ (ಏಕಚಿತ್ತದ) ಭಕ್ತಿಯಿಂದ ಮಾತ್ರ ನನ್ನನ್ನು ಈ ರೀತಿಯಾಗಿ ನೋಡಲು, ತತ್ತ್ವದಿಂದ ಅರ್ಥಮಾಡಿಕೊಳ್ಳಲು ಮತ್ತು ನನ್ನನ್ನು ಪ್ರವೇಶಿಸಲು (ಸೇರಲು) ಸಾಧ್ಯ.

೧೭. ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ |

ಶ್ರದ್ಧಾಮಯೋ„ಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ || 17.3

ಭರತವಂಶಜನೇ! ಪ್ರತಿಯೊಬ್ಬನು ಪ್ರಕೃತಿ ಗುಣಗಳಿಗೆ ಅನುಸಾರವಾದ ಶ್ರದ್ಧೆಯನ್ನು (ಸತ್ವಾನುರೂಪ ಉಳ್ಳ) ಹೊಂದುವನು. ಈ ಪುರುಷನು ಶ್ರದ್ಧಾಮಯನು. ಜೀವಿಯು ಯಾವ ಶ್ರದ್ಧೆಯುಳ್ಳವನೋ, ಅವನೂ ಅವನೇ. (ಅದರ ದೇಹಧಾರಿಯೂ ಅದೇ ಶ್ರದ್ಧೆ, ಯುಳ್ಳವನೆ ಆಗುತ್ತಾನೆ)

೧೮. ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತ್ ಇಂದ್ರಿಯಃ |

ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ || 4.39

ನಿಯಂತ್ರಿತ ಇಂದ್ರಿಯ ಸಂಯಮ ಗಳಿಂದ ಕೂಡಿದ ಶ್ರದ್ಧಾವಂತನೂ, ತತ್ಪರನೂ ಆಗಿರುವಾತನು, (ದಿವ್ಯ ಜ್ಞಾನದಲ್ಲೇ ಆಸಕ್ತನಾದವನು) ಜ್ಞಾನವನ್ನು ಹೊಂದುವನು. ನಂತರ, ಶೀಘ್ರವಾಗಿ ಅಧ್ಯಾತ್ಮಿಕ ಶಾಂತಿಯನ್ನು ಪಡೆಯುವನು

ಜ್ಞಾನಿಯಾದವ, ಯಾವ ರೀತಿಯಲ್ಲಿ ಮತ್ತು ಹೇಗೆ ಇರಬೇಕು, ಹೇಗೆ ಇದ್ದರೆ ಪರಮ ಪದವನ್ನು ಹೊಂದಬಹುದು, ಎಂಬುದನ್ನು ಶ್ಲೋಕ ೧೯,೨೦,೨೧ ರಲ್ಲಿ ತಿಳಿಸಲಾಗಿದೆ

೧೯. ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿ ಪೂರ್ವಕಂ |

ದದಾಮಿ ಬುದ್ಧಿಯೋಗಂ ತಂಯೇನ ಮಾಮುಪಯಾಂತಿ ತೇ || 10.10

ಪ್ರೇಮ ಭಾವದಿಂದ, ಸತತವಾಗಿ ಭಜಿಸುತ್ತಿರುವ (ಭಕ್ತಿಸೇವೆಯಲ್ಲಿ ನಿರತರಾದ) ಅವರಿಗೆ, ನನ್ನ ಬಳಿಗೆ ಬರಲು,ಬೇಕಾದ ನೈಜ ಬುದ್ಧಿಯನ್ನು ನೀಡುತ್ತೇನೆ

೨೦. ತೇಷಾಮೇವಾನುಕಂಪಾರ್ಥಂ ಅಹಮಜ್ಞಾನಜಂ ತಮಃ |

ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ || 10.11

ಅವರಿಗೆ ವಿಶೇಷವಾದ ದಯೆಯನ್ನು ತೋರಲು ನಾನು ಅವರ ಹೃದಯಗಳಲ್ಲಿ ನೆಲೆಸಿ, ಜ್ಞಾನದ ದೀಪದಿಂದ, ಆತ್ಮಭಾವದಿಂದ ಪ್ರಕಾಶಿಸುತ್ತಾ ಅಜ್ಞಾನದ ಅಂಧಕಾರವನ್ನು(ತಮಸ್ಸನ್ನು) ನಾಶ ಮಾಡುತ್ತೇನೆ.

**೨೧. ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ **

ತೇಷಾಮಾದಿತ್ಯವತ್ ಜ್ಞಾನಂ ಪ್ರಕಾಶಯತಿ ತತ್ಪರಂ || 5.16

ಆದರೆ, ಯಾರಿಗೆ, ಆ ಆತ್ಮನ ಅಜ್ಞಾನವು, ಜ್ಞಾನದಿಂದ ನಾಶವಾಗಿರುವುದೋ, ಅವರಿಗೆ, ಸೂರ್ಯನಂತೆ ಜ್ಞಾನವು ಆ ಪರ (ವಸ್ತು)ವನ್ನು ಬೆಳಗುವುದು. ಅಜ್ಞಾನವು ಜ್ಞಾನದಿಂದ ಎಂದು ನಾಶವಾಗುತ್ತದೋ, ಅಂದು,ಅವನ ಜ್ಞಾನವು ಸೂರ್ಯನಂತೆ ಪರತತ್ತ್ವವನ್ನು ಪ್ರಕಾಶಿಸುತ್ತದೆ)

ಶ್ಲೋಕ ೨೨ ರಿಂದ ೨೯ ರವರೆಗೆ ಭಗವಾನನು, ಆನಂದ ಪ್ರಾಪ್ತಿಯನ್ನು ಹೊಂದಬೇಕಾದರೆ ಯಾವ ರೀತಿ ಚಿಂತನೆಯನ್ನು ನಡೆಸಬೇಕು ಎಂದು ಹಂತಹಂತವಾಗಿ ತಿಳಿಸಿದ್ದಾನೆ

೨೨. ಇಂದ್ರಿಯಾಣಿ ಪರಾಣ್ಯಾಹುಹು ಇಂದ್ರಿಯೇಭ್ಯಃ ಪರಂ ಮನಃ |

ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ || 3.42

ಜಡವಸ್ತುವಿಗಿಂತ ಇಂದ್ರಿಯಗಳು ಶ್ರೇಷ್ಠ, ಮನಸ್ಸು ಇಂದ್ರಿಯಗಳಿಗಿಂತಲೂ ಶ್ರೇಷ್ಠ. ಬುದ್ಧಿಯು ಮನಸ್ಸಿಗಿಂತ ಇನ್ನೂ ಶ್ರೇಷ್ಠ. ಯಾವನು ಬುದ್ಧಿಗಿಂತಲೂ ಶ್ರೇಷ್ಠನೋ ಅವನೇ ಪರತತ್ತ್ವನು.

ಇಂದ್ರಿಯಗಳು ಎಂದರೆ, ಕಿವಿ ಕಣ್ಣು ಮುಂತಾದ ಜ್ಞಾನೇಂದ್ರಿಯಗಳು, ಸ್ಟೂಲ ದೇಹಕ್ಕಿಂತ ಹೆಚ್ಚಿನವು. ಅದಕ್ಕಿಂತ ಹೆಚ್ಚು ಇರುವುದು ಮನಸ್ಸು. ಅದಕ್ಕಿಂತ ನಿಶ್ಚಯ ಮಾಡುವ ಬುದ್ಧಿಯೂ ಹೆಚ್ಚಿನದು. ಇವೆಲ್ಲವನ್ನೂ ನೋಡುತ್ತಿರುವ ಆತ್ಮನು ಬುದ್ದಿಗಿಂತ ಹೆಚ್ಚೀನವನು.

೨೩. ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ |

ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಂ || 3.43

ಮಹಾಬಾಹುವೇ! ಹೀಗೆ ಬುದ್ಧಿಗಿಂತ ಶ್ರೇಷ್ಠವಾದದ್ದು ಆತ್ಮಜ್ಞಾನ ಎಂದು ತಿಳಿದುಕೊಂಡು, ಮನಸ್ಸನ್ನು ಸ್ಥಿರಗೊಳಿಸಿ, ಸಮಾಧಾನದ ಬುದ್ಧಿಯಿಂದ ಕಾಮದ ರೂಪದಲ್ಲಿರುವ ವೈರಿಯನ್ನು ಗೆಲ್ಲಬೇಕು

೨೪. ಯಥೈಧಾಂಸಿ ಸಮಿದ್ಧೋ ಅಗ್ನಿರ್ಭಸ್ಮಸಾತ್ ಕುರುತೇ ಅರ್ಜುನ |

ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ ||

4.37

ಅರ್ಜುನ! ಉರಿಯುವ ಬೆಂಕಿಯು, ಕಟ್ಟಿಗೆಯನ್ನು ಹೇಗೆ ಬೂದಿಯಾಗಿ ಮಾಡುತ್ತದೋ,ಹಾಗೆಯೇ ಜ್ಞಾನವೆಂಬ ಅಗ್ನಿಯು, ಎಲ್ಲಾ ಕರ್ಮಗಳ ಪ್ರತಿಕ್ರಿಯೆಗಳನ್ನು ಸುಟ್ಟು ಭಸ್ಮ ಮಾಡುವುದು

೨೫. ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪ ವರ್ಜಿತಾಃ |

ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ || 4.19

ಯಾರ ಎಲ್ಲಾ ಕರ್ಮಗಳೂ ಇಂದ್ರಿಯಗಳ ತೃಪ್ತಿಯ ಆಸೆಯಿಂದ ಮುಕ್ತ ವಾಗಿರುತ್ತದೋ, ಜ್ಞಾನ ಅಗ್ನಿಯಿಂದ ಸುಟ್ಟ ಕರ್ಮಾಗಳುಳೃ ಆತನನ್ನು ತಿಳಿದವರು, ಪಂಡಿತನೆಂದು ಕರೆಯುವರು.

ಇಂತಹವನು, ಯಾವ ಕರ್ಮದಲ್ಲಿ ಇದ್ದರೂ, ಅದರಲ್ಲಿ ಫಲದ ಬಗ್ಗೆ ಅನಾಸಕ್ತಿಯಿಂದ ಇರುವವನು. ಆದ್ದರಿಂದ ಅವನ ಕರ್ಮವು ಆಕರ್ಮವೇ ಎಂಬುದು ಭಗವಂತನ ಸಂದೇಶ

೨೬. ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಂ |

ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಂ || 5.26

ಆಸೆ, ಕೋಪಗಳಿಂದ ಮುಕ್ತರಾದ, ಪೂರ್ಣವಾಗಿ ಮನಸ್ಸನ್ನು ನಿಗ್ರಹಿಸಿದ ಮತ್ತು ಆತ್ಮಸಾಕ್ಷಾತ್ಕಾರವನ್ನು ಪಡೆದ ಸಾಧು ಪುರುಷರು ಶೀಘ್ರವಾಗಿ ಪರಮೋನ್ನತದಲ್ಲಿ ನಿರ್ವಾಣವನ್ನು ಪಡೆಯುವರು.

೨೭. ಶನೈಃ ಶನೈರುಪರಮೇದ್ಬುದ್ಧ್ಯಾ ಧೃತಿಗೃಹೀತಯಾ |

ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ || 6.25

ಕ್ರಮೇಣ ಹಂತಹಂತವಾಗಿ ದೃಢನಿರ್ಧಾರದ ಬುದ್ಧಿಯಿಂದ ಆತ್ಮದಲ್ಲೇ ನಿಲ್ಲಬೇಕು. ಹೀಗೆ ಮನಸ್ಸನ್ನು ಆತ್ಮದಲ್ಲೇ ಸ್ಥಿರವಾಗಿಸಬೇಕು, ಬೇರೆ ಯಾವುದರ ಬಗ್ಗೆಯೂ ಚಿಂತಿಸಬಾರದು

೨೮. ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಂ |ತತಸ್ತತೋ ನಿಯಮ್ಯೈ ತತ್ ಆತ್ಮನ್ಯೇವ ವಶಂ ನಯೇತ್ | 6.26

ಚಂಚಲವಾದ ಮತ್ತು ಅಸ್ಥಿರವಾದ ಮನಸ್ಸು ಎಲ್ಲೆಲ್ಲಿ ಅಲೆದಾಡುವುದೋ, ಅದನ್ನು ನಿಯಂತ್ರಿಸಿ ಅಲ್ಲಿಂದ ಆತ್ಮದ ನಿಯಂತ್ರಣಕ್ಕೆ ತರಬೇಕು.

೨೯. ಯತೇಂದ್ರಿಯಮನೋಬುದ್ಧಿಃ ಮುನಿ ರ್ಮೋಕ್ಷ ಪರಾಯಣಃ |

ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ | 5.28

ಮನಸ್ಸನ್ನೂ ಇಂದ್ರಿಯಗಳನ್ನೂ ಬುದ್ಧಿಯನ್ನೂ ನಿಯಂತ್ರಿಸಿ ಮೋಕ್ಷವನ್ನೇ ಗುರಿಯನ್ನಾಗಿಸಿ, ಆಸೆ-ಭಯ ಕ್ರೋಧಗಳನ್ನು ವಿಸರ್ಜಿಸಿ ಯಾರು ಯಾವಾಗಲೂ ಶಾಂತ ಸ್ಥಿತಿಯಲ್ಲಿ ಇರುವನೋ ಅವನು ಖಂಡಿತವಾಗಿಯೂ ಮುಕ್ತನು.

ಮುಂದಿನ ನಾಲ್ಕು ಶ್ಲೋಕಗಳಲ್ಲಿ ಜ್ಞಾನಿಯ ಲಕ್ಷಣಗಳನ್ನು ವಿವರವಾಗಿ ತಿಳಿಸಿದೆ

ಕಾಯಾ-ವಾಚಾ-ಮನಸಾ ಅಂದರೆ, ನಡೆ,ನುಡಿ ಮತ್ತು ಮನಸ್ಸಿನ ಸ್ಥಿರತೆಯನ್ನು ಯಾವರೀತಿಯಲ್ಲಿ ಮಾಡಬೇಕು ಎಂಬ ಶರಣಾಗತಿಯ ಮಹತ್ವದ ಬಗ್ಗೆ ವಿವರಣೆ ಇದೆ. ನಿಷ್ಕಾಮ ಕರ್ಮ ಅಂದರೆ ಯಾವ ಕಾರ್ಯವನ್ನು ಮಾಡಿದರೂ, ಫಲದ ಅಪೇಕ್ಷೆಯಿಲ್ಲದ ಮತ್ತು ಆತ್ಮನಲ್ಲಿ ನಿಲ್ಲುವಂತಹ ಸ್ಥಿತಿಯನ್ನು ಪಡೆದುಕೊಳ್ಳಲು ಸೂಚನೆ ನೀಡಿದೆ.

೩೦. ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ |

ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ || 6.29

ಯೋಗವನ್ನು ಹೊಂದಿದವನು (ಯೋಗಿಯು) ಎಲ್ಲಾ ಜೀವಿಗಳಲ್ಲಿಯೂ ನನ್ನನ್ನೇ ಕಾಣುವನು ಮತ್ತು ನನ್ನಲ್ಲಿ ಎಲ್ಲಾ ಜೀವಿಗಳನ್ನೂ ಕಾಣುವನು. ಎಲ್ಲೆಡೆಯೂ ಸಮಾನ ನೋಟವುಳ್ಳವನು (ಪರಬ್ರಹ್ಮನನ್ನೇ ಕಾಣುವನು).

**೩೧. ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ **

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ || 9.22

ಬೇರೆ ಯಾವ ಗುರಿಯಿಲ್ಲದೆ, ನನ್ನನ್ನು ಚಿಂತಿಸುತ್ತ ಯಾರು ಆರಾಧಿಸುತ್ತಾರೋ, ಸದಾ ಅವರ ಭಕ್ತಿಯಲ್ಲಿ ನೆಲೆಸಿದ ಅಪೇಕ್ಷೆಗಳ ಮತ್ತದರ ರಕ್ಷಣೆಯನ್ನು ನಾನು ವಹಿಸಿಕೊಳ್ಳುತ್ತೇನೆ.

೩೨. ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ |

ಪ್ರಿಯೋ ಹಿ ಜ್ಞಾನಿನೋ„ತ್ಯರ್ಥಮಹಂ ಸ ಚ ಮಮ ಪ್ರಿಯಃ 7.17

ಅವರಲ್ಲಿ ಪೂರ್ಣಜ್ಞಾನವುಳ್ಳ ಭಕ್ತಿಸೇವೆಯಲ್ಲಿ ನಿರತನಾದವನು ವಿಶಿಷ್ಟನಾಗಿರುವನು. ಅವನಿಗೆ ನಾನು ಬಹಳ ಪ್ರಿಯನು ಮತ್ತು ನನಗೆ ಅವನೂ ಬಹಳ ಪ್ರಿಯನು.

**೩೩. ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ | **

ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ || 7.19

ಬಹು ಜನ್ಮಗಳ ಕೊನೆಯಲ್ಲಿ, ಜ್ಞಾನವುಳ್ಳವನಾಗಿ, “ವಾಸುದೇವನೇ ಸರ್ವಸ್ವ” ಎಂದು ನನ್ನನ್ನು ಹೊಂದುತ್ತಾನೆ. ಅಂಥ ಮಹಾತ್ಮನು ಸಿಕ್ಕುವುದು ಕಷ್ಟ

ಶ್ಲೋಕ ೩೪ ರಿಂದ ೪೦ ರವರೆಗೆ. ಸ್ತಿತಪ್ರಜ್ಞನ (ಸಮತೆ ಮತ್ತು ಅಲುಗಾಡದ ಮನಸ್ಸಿನ ಭಾವವನ್ನು ಹೊಂಡಿದವ) ಲಕ್ಷಣಗಳ ವಿವರಣೆ ಇದೆ..

೩೪. ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |

ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ || 2.55

“ಪಾರ್ಥ! ಯಾವಾಗ ಮನಸ್ಸಿನ ಕಲ್ಪನೆಗಳಿಂದ ಉಂಟಾದ ಎಲ್ಲಾ ಇಂದ್ರಿಯ ಬಯಕೆಗಳನ್ನು ತ್ಯಜಿಸಿ, ಶುದ್ಧಮನಸ್ಕನಾಗಿ ಆತ್ಮದಲ್ಲೇ ತೃಪ್ತನಾಗುವನೋ, ಆಗ ಅವನನ್ನು ಸ್ಥಿತಪ್ರಜ್ಞ ಎಂದು ಹೇಳಲಾಗುತ್ತದೆ”

೩೫. ವಿಹಾಯ ಕಾಮಾನ್ಯಃ ಸರ್ವಾನ್ಪುಮಾಂಶ್ಚರತಿ ನಿಃಸ್ಪೃಹಃ |

ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ |. 2.71

ಯಾವ ಮನುಷ್ಯನು ಇಂದ್ರಿಯ ತೃಪ್ತಿಯ ಎಲ್ಲಾ ಬಯಕೆಗಳನ್ನು ತ್ಯಜಿಸಿ ಆಶಾಮುಕ್ತನಾಗಿ ಜೀವಿಸುತ್ತಾನೋ, “ನನ್ನದು” ಎಂಬ ಭಾವನೆಯಿಲ್ಲದೆ ಅಹಂಕಾರ ರಹಿತನಾಗುತ್ತಾನೋ ಅವನು ಮಾತ್ರ ಪರಿಪೂರ್ಣ ಶಾಂತಿಯನ್ನು ಪಡೆಯಬಲ್ಲ

೩೬. ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋ ದ್ವಿಜತೇ ಚ ಯಃ |

ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ || 12.15

ಯಾರಿಂದ ಜನರು ಉದ್ವಿಗ್ನ ರಾಗುವುದಿಲ್ಲವೋ, ಯಾರು ಜನರಿಂದ ಉದ್ವಿಗ್ನನಾಗುವುದಿಲ್ಲವೋ, ಯಾರು ಸುಖ-ದುಃಖ, ಭಯ ಉದ್ವೇಗಗಳಿಂದ ಮುಕ್ತನೋ (ಸಮಚಿತ್ತನೋ) ಅವನು ನನಗೆ ಪ್ರಿಯನು

೩೭.ಮಾನಾವಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ |

ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ || 14.25

ಮಾನ-ಅಪಮಾನಗಳಲ್ಲಿ ಸಮಾನನು, ಸ್ನೇಹಿತರ-ಶತ್ರುಗಳ ಪಕ್ಷಗಳಿಗೆ ಸಮಾನನು, ಎಲ್ಲಾ ಫಲಾಪೇಕ್ಷೆಯ ಕರ್ಮಗಳನ್ನು ತ್ಯಜಿಸಿದವನು ಹೀಗಿರುವವನನ್ನು ಗುಣಾತೀತ (ಗುಣಗಳನ್ನು ಮೀರಿದವನು) ಎಂದು ಹೇಳಲಾಗುತ್ತದೆ.

೩೮. ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ |

ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ || 3.17

ಯಾವ ಮನುಷ್ಯನು ಆತ್ಮನಲ್ಲಿಯೇ ಸುಖ ಕಂಡುಕೊಳ್ಳುವನೋ, ಆತ್ಮನಲ್ಲೇ ತೃಪ್ತನೋ,ಆತ್ಮನಲ್ಲಿಯೇ ಸಂತುಷ್ಟನೋ ಅವನಿಗೆ ಖಂಡಿತವಾಗಿಯೂ ಯಾವ ಕರ್ತವ್ಯವೂ, ಇರುವುದಿಲ್ಲ

೩೯. ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ |

ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ || 3.18

ಅಂತಹವನಿಗೆ (ಆತ್ಮಸಾಕ್ಷಾತ್ಕಾರ ಸಾಧಿಸಿದವನಿಗೆ) ನಿಯಮಿತ ಕರ್ತವ್ಯಗಳನ್ನು ಮಾಡುವ ಯಾವ ಉದ್ದೇಶವೂ ಇರುವುದಿಲ್ಲ, ಮಾಡದೆ ಇರಲು ಕಾರಣವೂ ಇರುವುದಿಲ್ಲ. ಇನ್ನೊಂದು ಜೀವಿಯನ್ನು ಅವಲಂಬಿಸುವ ಕಾರಣವೂ ಇರುವುದಿಲ್ಲ

೪೦. ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ |

ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ || 4.22

ತಾನಾಗಿ ಬಂದ ಲಾಭದಲ್ಲಿ ತೃಪ್ತನು, ದ್ವಂದ್ವ ಭಾವವನ್ನು (ಕೀರ್ತಿ-ಅಪಕೀರ್ತಿ, ಮಾನ-ಅಪಮಾನ…) ಮೀರಿದವನು, ಅಸೂಯೆ ಇಲ್ಲದವನು, ಗೆಲವು ಸೋಲುಗಳಲ್ಲಿ ಒಂದೇ ರೀತಿಯಲ್ಲಿರುವವನು ಕರ್ಮವನ್ನು ಮಾಡಿದರೂ ಬಂಧನಕ್ಕೆ ಸಿಲುಕುವುದಿಲ್ಲ

ಸ್ಲೋಕ ೪೧ ರಲ್ಲಿ ಸಂಸಾರಿಕ ಜೀವನದ ನಶ್ವರತೆ ಮತ್ತು ಅದರಲ್ಲಿ ಪ್ರಾಪಂಚಿಕ ಸುಖಗಳ ಭ್ರಮೆಯಲ್ಲಿ, ದೇಹವು ನಾನೇ ಎಂಬ ಅಜ್ಞಾನದ ಮೋಡ ಕವಿದಂತೆ,ಕಂಡೂ ಕಾಣದಂಥ ಸ್ಥಿತಿಯ ಬಗ್ಗೆ ವಿವರಣೆ ಇದೆ. ಇದನ್ನೇ ಮಾಯೆ ಎನ್ನುತ್ತಾರೆ

೪೧. ಈಶ್ವರಃ ಸರ್ವಭೂತಾನಾಂ ಹೃದ್ದೇಶೇ„ರ್ಜುನ ತಿಷ್ಠತಿ |

ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ || 18.61

ಸರ್ವೇಶ್ವರನು, ಎಲ್ಲಾ ಪ್ರಾಣಿಗಳ ಹೃದಯದಲ್ಲಿ ಇದ್ದುಕೊಂಡು, ದೇಹ ಯಂತ್ರದಲ್ಲಿ (ಯಂತ್ರದ ಮೇಲೆ ಏರಿ ಕುಳಿತಂತೆ ಇರುವ) ಎಲ್ಲಾ ಜೀವಿಗಳನ್ನು ತನ್ನ ಮಾಯೆಯಿಂದ ಅವುಗಳನ್ನು ಇಷ್ಟ ಬಂದಂತೆ ತಿರುಗಿಸುತ್ತಾನೆ

ಮಾಯೆಯ. ವಿವರವಾದ ಟಿಪ್ಪಣಿಗೆ, ಅನುಭಾಂದ ೪ ನೋಡಿ

ಶ್ಲೋಕ ೪೨ ರಲ್ಲಿ ,

ಭಗವಂತನ ಇರುವಿಕೆಯ ಅಡಿದಾವರೆಗಳಲ್ಲಿ ನಿಲ್ಲಬೇಕು ಎಂಬ ಖಂಡಿತವಾದ ಸೂತ್ರವನ್ನು ತಿಳಿಸಿ, ಜ್ಞಾನಸಂಪಾದನೆಯೇ ಅತ್ಯುತ್ತಮ ಉನ್ನತ ಗುರಿ, ಆಗಬೇಕು ಎಂಬ ಆಶಯದೊಂದಿಗೆ, ಶ್ರೀ ಭಗವಾನ್ ರಮಣರು ಮುಕ್ತಾಯಗೊಳಿಸುತ್ತಾರೆ.

೪೨. ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |

ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ || 18.62

ಭರತವಂಶಜನೇ! ಖಂಡಿತವಾಗಿ ಅವನಿಗೆ ಪೂರ್ಣ ಮನಸ್ಸಿನಿಂದ ಶರಣಾಗು. ಅವನ ಅನುಗ್ರಹದಿಂದ ದಿವ್ಯಶಾಂತಿಯನ್ನೂ, ಶಾಶ್ವತವಾದ ಪರಮಧಾಮವನ್ನೂ ಹೊಂದುವೆ

Xx ಶ್ಲೋಕಗಳ ಸೂಕ್ಷ್ಮ ವಿವರಣೆ

ಭಗವದ್ಗೀತೆಗೆ,ಅರ್ಜುನ ನಿಮಿತ್ತ. ಅವನಲ್ಲಿ ಮೂಡಿದ ಗೊಂದಲಗಳು,ನಮ್ಮೆಲ್ಲರಲ್ಲೂ ಸಹಜವಾಗಿ ಇರುವುದಕ್ಕೆ ಕಾರಣ, ಪ್ರಾಪಂಚಿಕ ಸುಖವೇ ಮುಖ್ಯ ಎಂದು ತಿಳಿದ ನಾವು, ಸಂಸಾರ ಚಕ್ರದಲ್ಲಿ ಸಿಕ್ಕಿ ದೆಹಾಭಿಮಾನವನ್ನು ಬೆಳೆಸಿಕೊಂಡು ಇರುವುದು. ಆತ್ಮನ ನಿಜ ಸ್ವರೂಪವನ್ನು ಅರಿಯದೆ, ಭ್ರಮೆಯಲ್ಲಿ ಸಿಕ್ಕಿ, ನಿವಾರಣೆಯ ಉಪಾಯವನ್ನು ಹುಡುಕದೆ ಅಲೆದಾಡುವುದು.

ಇದನ್ನು ಮೂಲವಾಗಿ ಇಟ್ಟು, ಭಗವಾನರು, “ನೀನು ಯಾರು” ಎಂದು ಸರಿಯಾಗಿ ತಿಳಿದುಕೋ ಎಂಬ ಸಂದೇಶವನ್ನು ಅವರ ಸತ್ ದರ್ಶನ,ಉಪದೇಶ ಸಾರ ಮತ್ತು ರಮಣ ಗೀತಾಗಳಲ್ಲಿ, ವಿಷದವಾಗಿ ಬೋಧಿಸಿದ್ದಾರೆ.

ಭಗವಾನ್ ರಮಣರು ವಿಚಾರ ಮಾರ್ಗದ ಅನುಸಂಧಾನಕ್ಕೆ ಬಹಳ ಒತ್ತು ಕೊಡುತ್ತಿದ್ದರು. ಅದು ಅವರ ಉಪದೇಶ ಸಾರದಲ್ಲಿ ಬಹಳ ವಿಸ್ತಾರವಾಗಿ ನಮಗೆ ಕಂಡುಬರುತ್ತದೆ.

ಅದೇರೀತಿ ಈ ಭಗವದ್ಗೀತೆಯ ನಲವತ್ತೆರಡು ಶ್ಲೋಕಗಳ ಮಾಲೆಯಲ್ಲಿ,ಅವರ ವಿಚಾರಧಾರೆ ಜ್ಞಾನ ಮತ್ತು ಭಕ್ತಿ ಮಾರ್ಗಗಳ ಕಡೆ,ಅವರ ಬಹಳ ಸೂಕ್ಷ್ಮ ದೃಷ್ಟಿ ಗೋಚರವಾಗುತ್ತದೆ. ನಿಷ್ಕಾಮ ಕರ್ಮದ ಬಗ್ಗೆಯೂ ಅವರ ಅನಿಸಿಕೆಗಳು ವಿಷಯವಾಗಿ ಇವುಗಳಲ್ಲಿ ಇದೆ. ಜ್ಞಾನಿಯಾದವನು ಒಬ್ಬ ಉತ್ತಮವಾದ ಭಕ್ತ ಮತ್ತು ಕರ್ಮಯೋಗಿ ಆಗಬಲ್ಲವ ಎನ್ನುವುದು ಅವರು ನೀಡಿರುವ ಉಪದೇಶದ ಸಾರ.

ಈ 42 ಮಣಿಗಳ ಹಾರದಲ್ಲಿ ಶ್ರೀ ರಮಣ ಮಹರ್ಷಿಗಳು ಸತ್ ಚಿತ್ ಆನಂದ ಸ್ವರೂಪವನ್ನು ಯಾವ ರೀತಿ ಹೊಂದಬೇಕು ಎಂದು ಹಂತಹಂತವಾಗಿ ತಿಳಿಸಿದ್ದಾರೆ. ನಮ್ಮೆಲ್ಲರೊಳಗೆ ಇರುವಂತಹ ಮತ್ತು ಸದಾ ಬೆಳಗುತ್ತಿರುವ, ಆತ್ಮಜ್ಯೋತಿ ಒಂದೇ ಶಾಶ್ವತ. ಇದು ಸತ್ಯವೇ ಹೌದು. ಹೊರಗಿನ ಪ್ರಪಂಚದಲ್ಲಿ

ಕಂಡುಬರುವಂತಹ ಪ್ರತಿಯೊಂದು ವಿಚಾರವೂ ಬಂದು ಹೋಗುವಂತಹ ನಾಶ ಉಳ್ಳ ಸ್ವಭಾವದಿಂದ ಕೂಡಿದ್ದು.

ಆದ್ದರಿಂದ ನಮ್ಮೊಳಗಿರುವ ಸತ್ಯವನ್ನು ಹುಡುಕುವುದೇ ಮುಖ್ಯ ಗುರಿಯಾಗಬೇಕು. ಈ ದೇಹದ ಅಭಿಮಾನವನ್ನು ದಾಟಿ ಆತ್ಮನನ್ನು ತಿಳಿಯುವುದಕ್ಕೆ ನಾವು, ಕ್ಷೇತ್ರ ಕ್ಷೇತ್ರಜ್ಞರ ವಿಚಾರ ಧಾರೆಯಿಂದ,, ಕೂಲಂಕಶವಾಗಿ ವ್ಯತ್ಯಾಸವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಈ ತಿಳುವಳಿಕೆಯ ಜ್ಞಾನ ಮತ್ತು ಅದನ್ನು ತಿಳಿಯುವನ ಸಂಬಂಧ ಮುಖ್ಯ.

ಪರಬ್ರಹ್ಮನೇ ಕ್ಷೇತ್ರಜ್ಞ. ನನ್ನನ್ನು ಆ ರೀತಿ ತಿಳಿದುಕೋ. ಎಲ್ಲರ ಹೃದದಲ್ಲೂ ಇರುವವರು ನಾನೇ ಜ್ಯೋತಿ ಸ್ವರೂಪ. ನಾನೇ ಆದಿ ಮಧ್ಯ ಅಂತ್ಯ ಗಳನ್ನು ನೇಮನ ಮಾಡಿ ನಿಯಮಿಸುವವನು ಕೂಡ.(ಶ್ಲೋಕ ೩-೪)

ಈ ಸರ್ವೋಚ್ಚ ಜ್ಞಾನವೇ ನಿರಂತರ,ಶಾಶ್ವತ ಮತ್ತು ಅನಾದಿ. ಇದನ್ನು ಸ್ಪಷ್ಟವಾಗಿ ತಿಳಿಯಲು ಬಂದಿರುವ ಶ್ಲೋಕಗಳು ಮುಂದಿನವು. ಬೆಂಕಿಯಿಂದ ಸುಡಲಾಗದ, ನೀರು ಗಾಳಿಗಳಿಂದ ಯಾವ ವ್ಯತ್ಯಾಸಕ್ಕೆ ಒಳಗಾಗದ, ನಿರಂತರವಾದ ಸತ್ಯ ಸ್ವರೂಪ ಕ್ಷೇತ್ರಜ್ಞ. ಹನ್ಯತೆ ಹನ್ಯ ಮಾನೆ ಶರೀರೇ- ಎಂದರೆ ದೇಹವು ನಾಶವಾಗುವಂತಹದು. ಆತ್ಮನು ಅವಿನಾಶಿ. ದೇಹ, ಬಿದ್ದು ಹೋಗುವುದೇ ಹೊರತು ಆತ್ಮನಿಗೆ ಅಳಿವು ಎಂಬುವುದೇ ಇಲ್ಲ.

ಹತ್ತನೆಯ ಶ್ಲೋಕದಲ್ಲಿ ತಿಳಿಸಿದ ಹಾಗೆ ಈ ಖಂದತ್ವವಿರುವ ದೇಹದಲ್ಲಿ, ತೋರಿಕೊಳ್ಳುವ ಆತ್ಮನೂ ಮತ್ತು ಸಾರ್ವತ್ರಿಕ ಆತ್ಮನೂ ಇಬ್ಬರೂ ಒಂದೇ. -ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ- ಆತ್ಮನೋ ಸರ್ವವ್ಯಾಪಿ, ಅವಿನಾಶಿ, ಎಲ್ಲೆಡೆ ವ್ಯಾಪಿಸಿರುವ ಮತ್ತು ಸರ್ವತಂತ್ರ ಸ್ವತಂತ್ರ. ಅವನೇ ಆನಂದಸ್ವರೂಪಿಯೂ ಹೌದು. ಆ ಆತ್ಮ ನೀನೇ ಆಗಿರುವೆ.

ನೀನು ಈ ನಶಿಸಿ ಹೋಗುವ ದೇಹವೂ ಅಲ್ಲ, ಪ್ರಾಣ ವ್ಯಾಪಾರದಿಂದ ಬಂಧಿತವಾದ ಮನಸ್ಸೂ ಅಲ್ಲ.(ನಾಲ್ಕರಿಂದ 8ನೇ ಶ್ಲೋಕಗಳ ದೀರ್ಘ ಚಿಂತನೆ,) ಮತ್ತು ನಿನ್ನ ನಿಜಸ್ವರೂಪದ ಸತತ ನೆನಪು ಏನೆಂದರೆ,ನೀನು ಶುದ್ಧ ಬುದ್ಧ ಮುಕ್ತ ಆತ್ಮ ಸ್ವರೂಪವೆಂಬ ಸ್ಮರಣೆ, ಎಲ್ಲ ರೀತಿಯ ತಪ್ಪು ಬಂಧನಗಳಿಂದ ಬಿಡುಗಡೆಗೆ ದಾರಿಯಾಗುತ್ತದೆ (ಶ್ಲೋಕ, ೪-೧೧)

ಯಾರು, ಆತ್ಮನಲ್ಲಿ ನೆಲೆ ನಿಂತಿರುವವರೋ, ಅಂತಹವರಲ್ಲಿ ಯಾವ ರೀತಿಯಾದ ಭ್ರಮೆಯೂ ಇರುವುದಿಲ್ಲ. ಮನಸ್ಸಿನ ಎಲ್ಲಾ ಚಟುವಟಿಕೆಗಳಿಂದ ಕೂಡಿದ ಸುಖ-ದುಃಖ ಆಸೆ-ನಿರಾಸೆ ಗಳನ್ನು ದಾಟಿರುವುವನು ಆಗಿರುತ್ತನೆ. (ಶ್ಲೋಕ೧೨-೧೩)

ಆದ್ದರಿಂದ ಮುಮುಕ್ಷು ಆದವನು, ಶಾಸ್ತ್ರ ಮತ್ತು ಸಜ್ಜನರ ಸಂಗದಿಂದ ಪ್ರೇರೇಪಿತನಾಗಿ, ಸೂಕ್ಷ್ಮ ಸಂವೇದನೆಗಳಿಂದ ದೂರ ಇದ್ದು, ಶಾಸ್ತ್ರಗಳ ನಿಯಮಗಳನ್ನು ಅತ್ಯಗತ್ಯವಾಗಿ ಪಾಲಿಸಬೇಕು. (ಶ್ಲೋಕ ೧೪)

ನಿಧಿಧ್ಯಾಸನ ಬಹಳ ಮುಖ್ಯವಾದ ಅಂಗವಾಗಿ ತೋರಿ, ಒಂದೇ ಸಮದೃಷ್ಟಿಯಿಂದ ಮತ್ತು ಏಕಾಗ್ರತೆಯಿಂದ, ಮನನದಿಂದ ಉಂಟಾದ ಸ್ಥಿರತೆಯಿಂದ ಆತ್ಮನನ್ನು ಪಡೆಯಲು ಸಾಧ್ಯವಾಗುತ್ತದೆ (ಶ್ಲೋಕ ೧೬.)

ಶ್ಲೋಕ ೧೭ ಮತ್ತು ೧೮ ರಲ್ಲಿ ಶ್ರದ್ಧೆಯ ಮಹತ್ವ ಮತ್ತು ಅದರ ಅನಿವಾರ್ಯತೆ ಮತ್ತು ಆಸಕ್ತಿ ಬಹಳ ಮುಖ್ಯವಾದದ್ದು ಎಂದು ವಿವರಿಸಲಾಗಿದೆ. -ಶ್ರದ್ಧಾಮಯೋ„ಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ - ಎಂಬ ಮಾತು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.

ಅಂತಹ ಶ್ರದ್ಧೆ ಇದ್ದಲ್ಲಿ *ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಹ ಸಮ್ಯತೆಂಡ್ರಿಯಃ” ಎಂಬ ವಾಕ್ಯವು ಶ್ರದ್ಧೆಯನ್ನು ಒತ್ತಿ ಒತ್ತಿ ಹೇಳುತ್ತದೆ. ಇದು ಸಪ್ರಭೂಮಿಕೆ. ಎಂಬ ಜ್ಞಾನ ಭೂಮಿಕೆಯ ಮೊದಲನೆಯ ಹೆಜ್ಜೆ.

ಶ್ಲೋಕ ೧೯ರಿಂದ ೨೧ ರಲ್ಲಿ ಭಗವಂತನ ಕರುಣಾಮಯವಾದ ಅನುಗ್ರಹದಿಂದ ಮತ್ತು ಅವನ ಆಶ್ವಾಸನೆ ಇಲ್ಲದೆ ಇದ್ದಲ್ಲಿ, ಜ್ಞಾನ ಸಂಪಾದನೆ ಕಷ್ಟಕರ ಎಂದು ತಿಳಿಸಿದೆ.

ಏಕೋ ರಸ ಕರುಣ ಎವ ಎಂಬ ನಾಣ್ಣುಡಿ, ಇಲ್ಲಿ ಸ್ಮರಿಸಬೇಕಾಗಿದೆ. ಏಕೆಂದರೆ ಅವನೇ ಕರುಣಾರಸ ಭರಿತವಾದ ಶಕ್ತಿಯಿಂದ ಕೂಡಿದ ಒಬ್ಬ ಜ್ಯೋತಿ ಸ್ವರೂಪ ಅಲ್ಲವೇ? ರಸಾನಾಂ ರಸತಮಹ ಮತ್ತು ಸಹ ವೈ ರಸಹ ಎಂಬ ಉಪನಿಷತ್ತು ವಾಕ್ಯಗಳು ಇದನ್ನು ಪುಷ್ಟೀಕರಿಸುತ್ತವೆ.

ಭಗವಂತನ ಕರುಣೆ ನಮಗೆ ದೊರಕಬೇಕಾದರೆ, ನಾವು ಅಹಂಕಾರದಿಂದ ದೂರಸರಿದು, ಸಮರ್ಪಣಾಭಾವಾದತ್ತ ಸಾಗಬೇಕು. ಆತ್ಮನಲ್ಲಿಯೆ ನಮಿಸುತ್ತಾ ರಮಿಸಿತ್ತಾ, ಶ್ರದ್ಧೆಯಿಂದ ಒಡಗೂಡಿದ ಸತತ ಪ್ರಯತ್ನದಿಂದ,ಅವನನ್ನು ಹೊಂದಬಹುದು.

ಶ್ಲೋಕ ೨೨ ರಿಂದ ಭಗವಾನ್ ರಮಣರು, ನಮಗೆ ವಿಚಾರ ಮಾರ್ಗದ ದಾರಿಯನ್ನು ನಿರೂಪಿಸಿತ್ತಾರೆ. ಬುದ್ಧಿ ಅಂತ್ಯವಲ್ಲ. ಇದಕ್ಕಿಂತ ಮಹತ್ತರವಾದ ಮಹತ್ ತತ್ವ, ಅವ್ಯಾಕೃತಗಳನ್ನು ದಾಟಿದ, ಪುರುಷನನ್ನು ಬಯಸಲು,ಎಲ್ಲಾ ರೀತಿಯ ತೊಡರುಗಳನ್ನು ಜಯಿಸಿ ಮುಂದೆ ಸಾಗಬೇಕು. ಇದನ್ನೇ ಶ್ಲೋಕ 23ರಲ್ಲಿ. “ಸಂಸ್ಥಾಭ್ಯಾತ್ಮನಮಾತ್ಮನಾ” ಎಂದು ತಿಳಿಸಿದೆ. ಸಾಧಕನಾದವನು ಮೊದಮೊದಲು ಯಾವ ರೀತಿ ತನ್ನಲ್ಲಿ ಶಿಸ್ತನ್ನು ಬಳಸಿ ಕೊಳ್ಳಬೇಕು ಎಂಬುದನ್ನು ವಿವರವಾಗಿ ತಿಳಿಸಿದೆ

ಶ್ಲೋಕ ೨೭-೨೮ ರಲ್ಲಿರುವ ರೀತಿಯಲ್ಲಿ, ಚಂಚಲ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಸಮತ್ವದ ಚಿತ್ತವನ್ನು ಬೆಳೆಸಿಕೊಳ್ಳಬೇಕು ಎಂಬುವುದನ್ನು ಮಂಡಿಸಲಾಗಿದೆ.

ಶ್ಲೋಕ ೨೪-೨೫-೨೬ ಗಳಲ್ಲಿ, ಋಷಿಮುನಿಗಳು ಯಾವ ರೀತಿ ಉನ್ನತಸ್ಥಿತಿಯನ್ನು ಪಡೆದಿರುವರು ಎಂಬ ಬಗ್ಗೆ ತಿಳಿಸಿದೆ. ಅಂತಹವರ ಮತ್ತು ಸಿದ್ಧಿ ಹೊಂದಿದವರ ಸಮೀಪದಲ್ಲಿ ಇದ್ದು ಅವರಿಂದ ಮಾರ್ಗದರ್ಶನ ಪಡೆಯಬೇಕು ಎಂದು ಸೂಕ್ಷ್ಮವಾಗಿ ವಿವರಿಸಿದೆ. ಇದಕ್ಕಾಗಿ ಅಂತಹವರಲ್ಲಿ ಭಕ್ತಿಯಿಂದ ಮತ್ತು ನಮ್ರತೆಯಿಂದ ಬಳಿ ಸಾರಿ, ಪುನಃ ಪುನಃ ಪ್ರಶ್ನಿಸಿ, ಅದರಿಂದ ಬಂದ ಉತ್ತರಗಳನ್ನು ಪರಾಮರ್ಶಿಸಿ, ಮಾರ್ಗವನ್ನು ಸರಿಯಾಗಿ ತಿಲಿದುಕೊಳ್ಳಬೇಕು.

*ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ , ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್" 4.18

ಕರ್ಮದಲ್ಲಿ ಅಕರ್ಮವನ್ನು, ಅಕರ್ಮದಲ್ಲಿ ಕರ್ಮವನ್ನು ಯಾರು ನೋಡುತ್ತಾನೆಯೋ, ಅವನು ಮನುಷ್ಯರಲ್ಲಿ ಬುದ್ಧಿವಂತನು. ಅವನೇ ಯೋಗಿಯು,ಮತ್ತು ಎಲ್ಲಾ ಕರ್ಮಗಳನ್ನು ಮಾಡಿದವನು.

ಕರ್ಮದಲ್ಲಿ ಅಕರ್ಮ ಎಂದರೆ, ಎಲ್ಲಾ ಕಾರ್ಯಗಳಲ್ಲಿ ತೊಡಗಿದ್ದರೂ,ಅದರ ಆಗು ಹೋಗುಗಳ ಬಗ್ಗೆ, ಕರ್ಮದ ಫಲದ ಬಗ್ಗೆ ಚಿಂತಿಸದೆ,ಮತ್ತು ಅದಕ್ಕೆ ಅಂಟಿಕೊಳ್ಳದೆ ಇರುವುದು. ಇದು ಜ್ಞಾನಿಯ ಲಕ್ಷಣ. ಕರ್ಮ ಮಾಡದೇ ಸುಮ್ಮನೆ ಇರುವುದೂ ಒಂದು ರೀತಿಯಲ್ಲಿ ಕರ್ಮವೇ ಆಗುತ್ತದೆ. ಅಂತಹ ಸ್ಥಿತಿಯಲ್ಲೂ ಜ್ಞಾನಿಯು, ಆನಂದ ಅನುಭೂತಿಯಲ್ಲಿ. ಅಥವಾ ಕೇವಲ ಆನಂದದ ಸ್ಥಿತಿಯಲ್ಲಿಯೇ, ಇರುವವನು .

ಈ ರೀತಿಯಾದ ನಿಷ್ಕಾಮ ಕರ್ಮದಲ್ಲಿ ತೊಡಗಿ ಎಲ್ಲವನ್ನೂ ಸಮಚಿತ್ತದಿಂದ ನೋಡಿದಾಗ ಒಂದು ಸಮತ್ವದ ಅನುಭವ ಆಗಬಲ್ಲದು. ಆದ್ದರಿಂದಲೇ ಜ್ಞಾನಿಯಾದವನು, ಆದರ್ಶ ಕರ್ಮಯೋಗಿ ಎನ್ನುತ್ತಾರೆ ಅವನಿಗೆ ಭೂತ, ವರ್ತಮಾನ, ಭವಿಷ್ಯತ್ ಕಾಲದ ಯಾವ ರೀತಿಯ ಗೋಜುಗಳು ಅಂಟುವುದಿಲ್ಲ.

ಆದ್ದರಿಂದ ಬೇರೆ ಯಾವ ರೀತಿಯ ಚಿಂತೆಯಲ್ಲೂ ಮನಸ್ಸನ್ನು ಕದಲಿಸದೆ ಒಂದೇ ಗುರಿಯತ್ತ ಸಾಗಲು ಪ್ರಯತ್ನವನ್ನು ಮಾಡಬೇಕು. ಈ ರೀತಿಯಾಗಿ ಆತ್ಮನಿಷ್ಠೆಯನ್ನು ಹೊಂದಿದರೆ, ಮುಕ್ತಿಯ ಪಥ ಸುಗಮವಾಗಿ ಸಾಗಬಲ್ಲದು. ಇದಕ್ಕೆ ಸಮದೃಷ್ಟಿಯಿಂದ ಎಲ್ಲರಲ್ಲಿಯೂ ತನ್ನಲ್ಲಿರುವ ಆತ್ಮನನ್ನು ಕಾಣುತ್ತಾ ಧ್ಯಾನ ಮಗ್ನ ಆದರೆ ಬಹಳ ಒಳ್ಳೆಯದು. ಇದಕ್ಕೆ ಸಂಪೂರ್ಣ ಶರಣಾಗತಿ ಮತ್ತು ಅವನಲ್ಲಿ ಅನನ್ಯ ಭಕ್ತಿಯು ಸಹಕಾರಿಯಾಗುವುದು. ತನ್ನ ಇರುವಿಕೆಯ ಅರಿವಿನಲ್ಲೇ ಸತತವಾಗಿ ಇರಬೇಕು( ಶ್ಲೋಕ ೩೧-೩೩) ಈ ರೀತಿಯಾದ ಅರಿವು ಮೂಡಿದಾಗ ಅದು ಒಂದು ರೀತಿಯಾದ ಉನ್ನತಮಟ್ಟದ ಸ್ಥಿತಿ ಆಗುತ್ತದೆ

ಶ್ಲೋಕ ೩೪-೪೦ ರಿಂದ ಸ್ಥಿತಪ್ರಜ್ಞನ ಲಕ್ಷಣಗಳನ್ನು ವಿಷದವಾಗಿ ತಿಳಿಸಿದೆ. ಎಲ್ಲಾ ಕಾಮನೆಗಳನ್ನು ತ್ಯಜಿಸಿ, ಆತ್ಮನಲ್ಲಿಯೇ ಸಂತುಷ್ಟನಾಗಿ, ಯಾವ ರೀತಿಯ ಬಂಧನಕ್ಕಾಗಲೀ, ಪಾಪ ಪುಣ್ಯಗಳ, ಪ್ರಜ್ಞೆಗೆ ಒಳಗಾಗದೆ, ಸುಖ ದುಃಖಗಳಲ್ಲಿ, ಮಾನ ಅಪಮಾನಗಳಲ್ಲಿ, ಸಮ ದೃಷ್ಟಿಯಲ್ಲಿ ಉಳ್ಳವನಾಗಿ ಇರಬಲ್ಲವ, ಉನ್ನತ ಸ್ಥಿತಿಯಲ್ಲಿ ನಿಲ್ಲಬಲ್ಲವನಾಗುತ್ತಾನೆ.

ಅಂತಹವರಿಗೆ ಯಾವ ಉದ್ದೇಶವೂ ಇರುವುದಿಲ್ಲ ಯಾವ ಕರ್ತವ್ಯವೂ ಇರುವುದಿಲ್ಲ. ಮಾಡುವುದಕ್ಕಾಗಲೀ, ಮಾಡದೇ ಇರುವುದಕ್ಕೆ ಆಗಲೀ ಅಥವಾ,ಇನ್ನೊಂದನ್ನು ಅವಲಂಬಿಸುವ ಕಾರಣವೂ ಇರುವುದಿಲ್ಲ. ಇವನು ಯಾವ ಕರ್ಮದಲ್ಲಿ ತೊಡಗಿದರೂ, ಅದರಲ್ಲಿ ಬಂಧಿತನಾಗುವುದಿಲ್ಲ. ಅಂತಹವನು, ಪರಮ ಶಾಂತಿ, ನಿರಂತರ, ನೀರತಿಶಯ ಸುಖ ಮತ್ತು ಶಾಶ್ವತವಾದ ಪರಂಧಾಮವಾದ ಆತ್ಮನ ನೆಲೆಯೇ, ಆಗಿಬಿಡುತ್ತಾನೆ.ಬ್

ಶ್ರೀ ರಮಣರ ಅದ್ಭುತವಾದ ವಿಚಾರ ಮಾರ್ಗದ ಈ ಒಂದು ಬೋಧನೆ, ಅವರ ಕೃಪಾಕಟಾಕ್ಷ ದೊರೆಯಬೇಕಾದರೆ, ಅವರು ತೋರಿದ ದಾರಿಯಲ್ಲಿ ನಡೆದಾಗ ಮಾತ್ರ, ಅವರ ಸಂಪೂರ್ಣ ದೃಷ್ಟಿ ಮತ್ತು ಆಶೀರ್ವಾದ ಎಲ್ಲರನ್ನೂ ತಲುಪಬಲ್ಲದು.

ಸರ್ವೇ ಭವಂತು ಸುಖಿನಃ

ಸರ್ವೇ ಸಂತು ನಿರಾಮಯಾಹ

ಸರ್ವೇ ಭದ್ರಾಣಿ ಪಷ್ಯಂತು

ಮಾ ಕಶ್ಚಿತ್ ದುಃಖ ಭಾಗ್ ಭವೇತ್