೦೧ ಪ್ರಸ್ತಾವನೆ

ಭಗವಾನ್ ರಮಣರ ಆಶ್ರಮಕ್ಕೆ ಬಂದ ಒಬ್ಬ ಪಂಡಿತರೊಂದಿಗೆ,, ಭಗವಾನರು ಭಗವದ್ಗೀತೆಯ ಮಹತ್ವದ ಬಗ್ಗೆ ವಿವರಿಸುತ್ತಿದ್ದಾಗ, ಅಲ್ಲಿ ಬಂದ ಒಬ್ಬ ಭಕ್ತರು ಅವರಲ್ಲಿ ವಿಶೇಷವಾದ ಒಂದು ಕೋರಿಕೆಯನ್ನು ಇಟ್ಟರು. ಏಳುನೂರು ಶ್ಲೋಕಗಳ ಮನನ ಕಷ್ಟಕರವಾದ್ದದ್ದು. ಒಂದೇ ಒಂದು ಶ್ಲೋಕದಿಂದ ಗೀತೆಯ ಸಾರವನ್ನೆಲ್ಲ ಮನನ ಮಾಡುವುದಕ್ಕೆ ಸಾಧ್ಯವೇ ಎಂದು ಕೇಳಿದ ಕೂಡಲೇ, ಭಗವಾನರು ಗೀತೆಯ ಹತ್ತನೆಯ ಅಧ್ಯಾಯದ ಇಪ್ಪತ್ತನೆಯ ಶ್ಲೋಕವನ್ನು ಮನನ ಮಾಡಿದರೆ ಸಾಕು ಎಂದರಂತೆ.

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |

ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ || ಗೀತಾ 10.20

ಇದರ ಸಾರಾಂಶ ಈ ರೀತಿ.

“ನಾನು ಸಮಸ್ತ ಜೀವಿಗಳ ಮತ್ತು ಜಂತುಗಳ ಹೃದಯದಲ್ಲಿ ನೆಲೆಸಿರುವವ ಮತ್ತು ನಾನೇ ಎಲ್ಲಕ್ಕೂ ಆದಿ ಮಧ್ಯ ಅಂತ್ಯ. ಸೃಷ್ಟಿ ಸ್ಥಿತಿ ಮತ್ತು ಲಯಗಳಿಗೆ ನಾನೇ ಕಾರಣ*

ಇದನ್ನು ನೆನಪಿನಲ್ಲಿಟ್ಟು ಸದಾ ಧ್ಯಾನ ಮಾಡು ಎಂದರಂತೆ. (ಮಣಿಮಾಲೆಯ ನಾಲ್ಕನೆಯ ಶ್ಲೋಕ )

ನಂತರ ತಾವೇ, ಭಗವದ್ಗೀತೆಯಿಂದ ನಲವತ್ತೆರಡು ಶ್ಲೋಕಗಳನ್ನು ಆರಿಸಿ,ಅವುಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಅದನ್ನು ದಯಪಾಲಿಸಿದರು. ಇದನ್ನು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಅವರೇ ಯೋಜಿಸಿದರು. ಇದರ ಸಂಸ್ಕೃತದ ಪ್ರತಿಯನ್ನು ವಿಶ್ಲೇಷಣೆಯೊಂದಿಗೆ, ಆಗಿನ ರಮಣಾಶ್ರಮದ ಅಧ್ಯಕ್ಷರಾದ ನಿರಂಜನಾನಂದ ಸ್ವಾಮಿಗಳು ಬಿಡುಗಡೆ ಮಾಡಿ 1951 ರ ಹೊತ್ತಿಗೆ ಇದು, ಐದು ಪುನರ್ ಮುದ್ರಣಗಳು ಆದವು.

ಇದನ್ನು ಕನ್ನಡ ತಿಳಿದ ಮುಮುಕ್ಷುಗಳಿಗೆ ತಲುಪಿಸಲು ಒಂದು ಪ್ರಯತ್ನವನ್ನು ಮಾಡಿದ್ದೇನೆ. ಹಂತಹಂತವಾಗಿ ಮನದಟ್ಟಾಗುವ ರೀತಿಯಲ್ಲಿ ಭಗವಾನರು ಈ ಶ್ಲೋಕಗಳನ್ನು ಜೋಡಿಸಿ, ಮುಮುಕ್ಷುವಿನ ಸಂದೇಹದ ನಿವಾರಣೆಗೆ ಒತ್ತು ಕೊಟ್ಟಿದ್ದಾರೆ. ಶ್ಲೋಕ ಮತ್ತು ಭಾವಾರ್ಥಗಳ ಜೊತೆಗೆ ವಿಶ್ಲೇಷಣೆ ಮುಂದೆ ಕೊಡಲಾಗಿದೆ. ನಂತರ,,ಸ್ವಲ್ಪ ವಿಶ್ಲೇಷಣೆಯನ್ನು ಸೇರಿಸಲಾಗಿದೆ. ಇದನ್ನು ಮನನ ಮಾಡಿ, ಅದರ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ, ರಮಣ ಮಹರ್ಷಿಗಳ ಕೃಪಾಕಟಾಕ್ಷವೂ ಮುಮುಕ್ಷುಗಳಲ್ಲಿ ನಿರಂತರವಾಗಿ ಇರುವುದು ಎಂಬುದರಲ್ಲಿ ಯಾವ ರೀತಿಯ ಸಂದೇಹವೂ ಇಲ್ಲ.

ವಿಶ್ಲೇಷಣೆ ಮಾಡುವ, ಅಂತಹ ಪರಿಶ್ರಮ ನನಗೆ ಇಲ್ಲದಿದ್ದರೂ, ನನ್ನ ಧೀ ಶಕ್ತಿಗೆ ಅನುಗುಣಾಗಿ ನಾಲ್ಕು ಮಾತುಗಳಲ್ಲಿ ಸರಳವಾಗಿ ಮಂಡಿಸಿದ್ದೇನೆ. ಬೇರೆ ಗ್ರಂಥಗಳನ್ನು ಅವಲೋಕನ ಮಾಡಿ ಹೆಚ್ಚಿನ ವಿವರ ತಿಳಿದುಕೊಂಡು, ಅಭ್ಯಾಸದಲ್ಲಿ ತೊಡಗುವುದು ಉತ್ತಮ. ಎಲ್ಲಾ ತಪ್ಪು ಒಪ್ಪುಗಳಿಗೂ ನಾನೇ ಹೊಣೆ.