ಸತ್ ದರ್ಶನ

ಸತ್ ದರ್ಶನ, ರಮಣ ಮಹರ್ಷಿಗಳ ಅತ್ಯುನ್ನತ ಶ್ರೇಣಿಯ ನಲವತ್ತು ಪದ್ಯಗಳ ಮಣಿ ಮಾಲೆ. ಉಳ್ಳದು ನಾಲ್ಪದು ಎಂಬ ಅವರ ತಮಿಳು ಕೃತಿಯನ್ನು ಸಂಸ್ಕೃತಕ್ಕೆ ಭಾಷಾಂತರ ಮಾಡಿ ಅವರ ವಾಣಿಯನ್ನು ನಮಗೆ ಉಣಬಡಿಸಿದ ಮಹಾತ್ಮರು ಶ್ರೀ ಕಾವ್ಯಕಂಠ ಗಣಪತಿಮುನಿಗಳು. ಇವರು ಮಹರ್ಷಿಗಳ ನೆಚ್ಚಿನ ಶಿಷ್ಯರುಗಳಲ್ಲಿ ಒಬ್ಬರು. ಈ ಮಾಲೆಗೆ ಸತ್ ದರ್ಶನ ಎಂದು ನಾಮಕರಣ ಮಾಡಿದ್ದಾರೆ. ಇದನ್ನು ಷಟ್ ದರ್ಶನ ಎಂದು ತಪ್ಪು ಕಲ್ಪನೆ ಮಾಡಬಾರದು. (ಷತ್ ದರ್ಶನಗಳು…..ಪೂರ್ವ ಮೀಮಾಂಸೆ, ಉತ್ತರ ಮೀಮಾಂಸೆ,ಸಾಂಖ್ಯ, ನ್ಯಾಯ, ಯೋಗ ಮತ್ತು ವೈಶೇಶಿಕ)

ದರ್ಶನ ಎಂದರೆ ಅರಿವು ಎಂದು ತಿಳಿಯಬೇಕು. ಸಾಧಾರಣವಾಗಿ, ನಾವೆಲ್ಲರೂ ನಮ್ಮ ಪಂಚೇಂದ್ರಿಯಗಳ ಮೂಲಕ ಆಗು ಹೋಗುಗಳನ್ನು ತಿಳಿದುಕೊಂಡು ಒಳ್ಳೆಯದು ಮತ್ತು ಕೆಟ್ಟದ್ದು ಎಂದು ವಿಭಜನೆ ಮಾಡಿಕೊಳ್ಳುತ್ತೇವೆ. ಇದು ಮನಸ್ಸಿನ ಮೇಲ್ಮೆಯಲ್ಲಿ ತಿಳಿಯುವ ಪ್ರಕ್ರಿಯೆ. ಆದರೆ ಮನಸ್ಸಿನ ಅಂತರಾಳದಲ್ಲಿ ಮುಳುಗಿ ಸತ್ಯಾಸತ್ಯತೆಯನ್ನು ಕಂಡು ಕೊಂಡಾಗ ಮೇಲ್ನೋಟಕ್ಕೆ ಗೋಚರಿಸಿದ್ದು ಸರಿಯಲ್ಲ ಎಂದೆಣಿಸಿ ನಮ್ಮ ಚಿಂತನೆಯನ್ನು ಬಲವತ್ತರ ಗೊಳಿಸುತ್ತೇವೆ. ಆದ್ದರಿಂದ ಆಳವಾಗಿ ಅಧ್ಯಯನ ಮಾಡುವ ನಮ್ಮೆಲ್ಲರ ಪ್ರಕ್ರಿಯೆಗೆ .ದರ್ಶನಶಾಸ್ತ್ರ ಅಥವಾ ವೇದಾಂತ ದೃಷ್ಟಿ ಎನ್ನುತ್ತಾರೆ.

ಅಂತಃಕರಣದಲ್ಲಿನ ಬುದ್ಧಿಯಿಂದ ಮನದೊಳಗೆ ಇದನ್ನು ಗ್ರಹಿಸಿದ ಮೇಲೆ ಆತ್ಮಸಾಕ್ಷಾತ್ಕಾರದ ಕಡೆಗೆ ನಮ್ಮ ಚಿತ್ತವನ್ನು ಒಳ ತಿರುಗಿಸಿದಾಗ. ತೀವ್ರ ಮತ್ತು ದೀರ್ಘಕಾಲದ ಚಿಂತನೆಗೆ ಅವಕಾಶ ದೊರೆಯುತ್ತದೆ. ಒದಗಿಬಂದ ಈ ಅವಕಾಶವನ್ನು ಬಲವತ್ತರ ಪಡಿಸಲು ಬೇರೆ ಬೇರೆ ಮಾರ್ಗಗಳನ್ನು ನಾವು ಉಪಯೋಗಿಸಿ ಕೊಳ್ಳಬೇಕಾಗುತ್ತದೆ.

ಇದಕ್ಕೆ ಅವಶ್ಯವಾಗಿ ಸಾಧನ ಷಟ್ ಸಂಪತ್ತಿಗಳನ್ನು ನಾವು ಅಭ್ಯಾಸ ಮಾಡಿ ನಂತರ ರಾಜ ಯೋಗದ ಮಾರ್ಗಗಳನ್ನು ಬಳಸಿದರೆ ಒಂದು ಹಂತವನ್ನು ತಲಪುತ್ತೇವೆ. ಎಲ್ಲ ಆಗು ಹೋಗುಗಳನ್ನು ಸಮಭಾವದಲ್ಲಿ ವಿಚಲತೆ ಇಲ್ಲದೆ ನೋಡುವ ಒಂದು ಮನೋಭಾವ ಬರುತ್ತದೆ. ಇದು ನಮ್ಮ ಆತ್ಮನ ನೈಜಸ್ವರೂಪವನ್ನು ಗುರುತಸಿ ಪಡೆದುಕೊಳ್ಳಲು ಸಹಕಾರಿ ಯಾಗುತ್ತದೆ. ಧರ್ಮದ ಚೌಕಟ್ಟಿನಲ್ಲಿ ನಾವು ನೆಲೆನಿಂತರೆ, ಮನಸ್ಸಿನ ಹೊಯ್ದಾಟ ಕಡಿಮೆಯಾಗಿ ಪಟು ಭಾವ ನಮಗೆ ಬರುತ್ತದೆ. ಇದರಿಂದ ಅಂತಃಕರಣದ ಶುದ್ದಿ ದೊರೆತು ಆತ್ಮಾಭ್ಯಾಸ ಬಹಳ ಸರಳವಾಗಿ ಸಾಗಿ ಆತ್ಮಜ್ಞಾನದ ಕಡೆಗೆ ತಿರುಗುತ್ತದೆ.

ರಮಣಮಹರ್ಷಿಗಳ ಬಗ್ಗೆ ಹೆಚ್ಚೇನೂ ಹೇಳಬೇಕಾದದ್ದು ಇಲ್ಲವೇ ಇಲ್ಲ. ಮುಮುಕ್ಷುಗಳಿಗೆ, ಇವರ ಮಹಿಮೆಯೇ ಅವರನ್ನು ಉತ್ತಮ ಸ್ಥಾನದಲ್ಲಿ ನೆಲೆಸುತ್ತದೆ. ಇಂತಹ ಸರಳವಾದ ವ್ಯಕ್ತಿ ಇದುವರೆಗೆ ನಾವು ಕಂಡಿಲ್ಲ ಕೇಳಿಯೂ ಇಲ್ಲ.

ತಮ್ಮ ಚಿಕ್ಕ ಚಿಕ್ಕ ಸಂದೇಶಗಳಲ್ಲಿ ಯಾವ ಶಾಸ್ತ್ರವನ್ನು ಅಥವಾ ವೇದಾಂತ ಸೂತ್ರವನ್ನೂ ಬಳಸದೆ ಉನ್ನತ ಮಟ್ಟಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. ನಿನ್ನನ್ನು ನೀನು ಕಂಡುಕೋ ಎನ್ನುವುದೇ ಅವರ ಮೂಲ ಮಂತ್ರ. ನೀನು ಯಾರು ಎಂದು ಹುಡುಕಲು ಹೋದಾಗ, ಆ ನಿನ್ನ ರೂಪವೇ ಬಿದ್ದುಹೋಗಿ ಶುದ್ಧ ಆತ್ಮ ಸ್ವರೂಪ ಗೋಚರಿಸುತ್ತದೆ. ಅದೇ ಪರಮಪದ, ಪರಮ ಆನಂದ ಸ್ಥಿತಿ, ಅದೇ ಸ್ವರ್ಗ,ಅದೇ ಮೋಕ್ಷ.

ನೀನು ಯಾರು ಎಂದು ಹುಡುಕುವುದು ಹೇಗೆ? ಇದಕ್ಕೆ ಆವರ ಉತ್ತರ ಬಹಳ ಸರಳ. ನೀನು ಯಾವ ದಾರಿಯಿಂದ ಬಂದಿರುವೆಯೋ ಅದೇ ದಾರಿಯನ್ನು ಹಿಡಿದು ಹಿಂತಿರುಗಿ ಹೋಗು ಮತ್ತು ವಿಚಾರ ಮಾಡು. ಆತ್ಮನಿಂದ ಅಹಂ ಸ್ಪುರಣ ಬಂದಿದೆ. ಅದರಿಂದ ಅಹಂಕಾರ, ಚಿತ್ತ, ಬುದ್ಧಿ, ಮನಸ್ಸು, ಇಂದ್ರಿಯಗಳು ಮತ್ತು ದೇಹ ಬಂದಿದೆ. ಅದೇ ರೀತಿ, ದೇಹದಿಂದ ಆತ್ಮನಲ್ಲಿಗೆ ’ನೀನು ಯಾರು’ ಎಂದು ವಿಚಾರಮಾಡಲು ಹೊರಟಾಗ, ನೀನು ಎಂಬುದೇ ಇಲ್ಲವಾಗಿ ಸತ್ಯದರ್ಶನ ವಾಗುತ್ತದೆ ಎಂಬುದೇ ಅವರ ಉಪದೇಶ. ಇದರಲ್ಲಿ ಇರುವ ಅಡೆ ತಡೆಗಳು, ತಪ್ಪು ತಿಳುವಳಿಕೆಗಳನ್ನು ಬಿಚ್ಚಿ ತೋರಿಸುವುದೇ ಮಹರ್ಷಿಗಳ ನಲವತ್ತು ಪದ್ಯಗಳ ಮಣಿ ಮಾಲೆ. ಈ ಪದ್ಯಗಳ ದೀರ್ಘ ಚಿಂತನೆಯಲ್ಲಿ ಮುಳುಗಿ ನಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳೋಣ.

ಸರಳವಾಗಿ ನನಗೆ ತೋಚಿದ ರೀತಿ, ಈ ಪದ್ಯಗಳ ತರ್ಜುಮೆ ಯನ್ನು ನಿಮ್ಮ ಮುಂದೆ ಮಂಡಿಸಲು ರಮಣ ಮಹರ್ಷಿಗಳ ಆಶೀರ್ವಾದಗಳನ್ನು ಬೇಡಿ ನಾಲ್ಕೈದು ಸಾಲುಗಳನ್ನು ಬರೆದಿದ್ದೇನೆ.

ಈ ಕೃತಿಯು ನನ್ನ ಆತ್ಮೀಯ ಸ್ನೇಹಿತರೊಬ್ಬರ ಪ್ರೇರೇಪಣೆ ಮತ್ತು ಉತ್ತೆಜನದಿ೦ದ ಹೊರಬ೦ದಿದೆ. ನಾನು ಅವರಿಗೆ ಆಭಾರಿಯಾಗಿದ್ದೇನೆ.

ತಪ್ಪು ಒಪ್ಪುಗಳಿಗೆಲ್ಲಾ ನಾನೇ ಹೊಣೆ ಎಂದು ನಿಮ್ಮಲ್ಲಿ ವಿನಯ ಪೂರ್ವಕ ತಿಳಿಸ ಬಯಸುತ್ತೇನೆ.

ಬಹಳ ಅರ್ಥ ಗರ್ಭಿತವಾದ ಈ ನಲವತ್ತು ಪದ್ಯಗಳು,ನಲವತ್ತು ಸೂತ್ರಗಳು ಚಿಕ್ಕದಾಗಿ ಚೊಕ್ಕದಾಗಿ ಇಡಲಾಗಿದೆ. ಒ೦ದೊ೦ದು ಸೂತ್ರದಲ್ಲಿಯೂ ಬಹಳ ಉನ್ನತವಾದ ಮತ್ತು ಗಹನವಾದ ಅರ್ಥವು ಅಡಗಿದೆ. ಯಾವುದೇ ರೀತಿ ಅರ್ಥವನ್ನು ಕಲ್ಪಿಸಿದರೂ ಮತ್ತೆ ಮತ್ತೆ ಮನನ ಮಾಡಿದಾಗ ಹೊಸ ಹೊಸ ಅರ್ಥ ಹೊಳೆಯುತ್ತದೆ. ಆದ್ದರಿ೦ದ, ಶ್ರಿಮಾನ್ ಡಿ. ವಿ. ಜಿ. ಅವರು ತಮ್ಮ ಕಗ್ಗದ ಪೀಠಿಕೆಯಲ್ಲಿ ಬರೆದ೦ತೆ, ಒ೦ದು ಸಕ್ಕರೆ ಬತ್ತಾಸನ್ನು ಬಾಯಲ್ಲಿ ಇಟ್ಟುಕೊ೦ಡು, ಅದರ ರಸದ ಆಸ್ವಾದನೆ ಹೇಗೆ ಮಾಡುತ್ತೇವೆಯೋ, ಅದೇ ರೀತಿ ಈ ಸೂತ್ರಗಳ ಆಳವಾದ ಸ೦ದೇಶವನ್ನು ಮತ್ತು ಅದರಲ್ಲಿನ ರಸವನ್ನು, ವಿಚಾರದಿ೦ದ ಸಾರ್ಥಕಗೊಳಿಸಿಕೊಳ್ಳಬೇಕು

ಈ ಮಣಿಮಾಲೆಯಲ್ಲಿನ ನಲವತ್ತು ನಾಲ್ಕು ಪದ್ಯಗಳಲ್ಲಿ, ಮೊದಲಿನ ಎರಡು ಪದ್ಯಗಳು ಪ್ರಾರ್ಥನಾ ರೂಪದಲ್ಲಿ ಇಡಲಾಗಿದೆ. ಕೊನೆಯ ಎರಡು ಪದ್ಯ, ರಮಣ ಮಹರ್ಷಿಗಳ ಪಾದಕ್ಕೆ ನಮಸ್ಕಾರ ರೂಪದಲ್ಲಿ ಇಡಲಾಗಿದೆ. ಈ ಪದ್ಯಗಳನ್ನು ಅರ್ಥೈಸಿಕೊ೦ಡು ನಿಧಿಧ್ಯಾಸಕ್ಕೆ ಉಪಯೊಗ ಮಾಡಿಕೊಳ್ಳಬೇಕು.. ಇದರಲ್ಲಿನ ಆಳವಾದ ತತ್ವ ಗ್ರಹಿಸಲು ತಾಳ್ಮೆ ಮತ್ತು ಗ೦ಭೀರ ಚಿ೦ತನೆ ಅತ್ಯಗತ್ಯ.

ಅಹ೦ಕಾರವನ್ನುತೊಡೆದು ಹಾಕಲು ಮತ್ತು ನಾಶಮಾಡಲು ಆತ್ಮ ವಿಚಾರವೇ ಅತ್ಯ೦ತ ಉತ್ತಮವಾದ ದಾರಿಯೇ ಹೊರತು ಬೇರೆ ಮಾರ್ಗವೇ ಇಲ್ಲ ಎನ್ನುವುದೇ ಶ್ರೀ ರಮಣ ಮಹರ್ಷಿಗಳ ವಾಣಿ. ಅಹ೦ಕಾರವು,ತಾನೇ ಆತ್ಮವೆ೦ಬ ತಪ್ಪು ತಿಳುವಳಿಕೆಯು ನಮ್ಮನ್ನು ಭೂತದ೦ತೆ ಕಾಡುತ್ತದೆ. ಯಾವಾಗ ಈ ಅಹ೦ ವೃತ್ತಿಯ ಮೂಲವನ್ನು ಹುಡುಕುತ್ತೇವೆಯೊ, ಆಗ ಈ ಆಭಾಸವು ಮಾಯವಾಗಿ ಸತ್ ಸ್ವರೂಪ ಗೊಚರಿಸುತ್ತದೆ.

सत्प्रत्ययाः किं नु विहाय सन्तं हृद्येष चिन्ता रहितो हृदाख्यः।

कथं स्मरामस्तममेयमेकं तस्य स्मृतिस्तत्र दृढैव निष्ठा ॥ १ ॥
ಸತ್ಪ್ರತ್ಯಯಾಃ ಕಿಂ ನು ವಿಹಾಯ ಸನ್ತಂ

ಹೃದ್ಯೇಷ ಚಿನ್ತಾ ರಹಿತೋ ಹೃದಾಖ್ಯಃ|

ಕಥಂ ಸ್ಮರಾಮಸ್ತಮಮೇಯಮೇಕಂ

ತಸ್ಯ ಸ್ಮೃತಿಸ್ತತ್ರ ದೃಢೈವ ನಿಷ್ಠಾ || ೧ ||

ಯಾವ ಬದಲಾವಣೆಯನ್ನು ಹೊಂದದಂತಹ ಒಂದು ಸತ್ಯ ನಿಮ್ಮೊಳಗೆ ಸ್ಪುರಣ ಮಾಡುತ್ತಿರುವಾಗ, ನಾನು ಈ ದೇಹದ ಯಜಮಾನ ಎಂಬ ಭಾವನೆ ನಿಮಗೆ ಹೇಗೆ ಬಂದೀತು. ಮನಸ್ಸಿನಿಂದ ಅಳೆಯ ಲಾಗದ ಮತ್ತು ಹಿಡಿಯಲಾಗದ ಈ ನಿಜ ಸ್ವರೂಪವನ್ನು ಯಾವ ರೀತಿ ಗುರುತಿಸುವುದು? ಈ ರೀತಿಯಾಗಿ ಸದಾ ನಿಮ್ಮಲ್ಲಿ ನೆಲೆಸಿರುವವನ ಮನನ ಯಾವಾಗಲೂ ಮಾಡುತ್ತಿದ್ದರೆ ನಿಮ್ಮ ಸ್ವರೂಪದಲ್ಲಿ ನೆಲೆ ನಿಲ್ಲಬಲ್ಲಿರಿ.

मृत्युञ्जयं मृत्युभियाश्रिताना महंमतिर्मृत्युमुपैति पूर्वम्।
अथ स्वभावादमृतेषु तेषु कथं पुनर्मृत्युधियोऽवकाशः ॥ २ ॥
ಮೃತ್ಯುಞ್ಜಯಂ ಮೃತ್ಯುಭಿಯಾಶ್ರಿತಾನಾ -

ಮಹಂಮತಿರ್ಮೃತ್ಯುಮುಪೈತಿ ಪೂರ್ವಮ್|

ಅಥ ಸ್ವಭಾವಾದಮೃತೇಷು ತೇಷು

ಕಥಂ ಪುನರ್ಮೃತ್ಯುಧಿಯೋಽವಕಾಶಃ ॥ २ ॥

ಮರಣ ಭಯ ಇರುವವರು ದೇವರು ಎಂಬ ವಸ್ತುವನ್ನು ಸೃಷ್ಟಿ ಮಾಡಿ ಅವನಲ್ಲೇ ಶರಣಾಗುತ್ತಾರೆ. ಆದರೆ ಈ ದೇವರು ಎಂಬುವನು ಹುಟ್ಟು ಸಾವುಗಳ ಆಚೆ ಇರುವುದರಿಂದ, ಅಹಂಕಾರವು ಅಳಿಯಲಾಗಿ ದೇಹದ ಮರಣವು ಒದಗುತ್ತದೆ. ಈ ನಂಬಿಕಯೇ ಇದಕ್ಕೆ ಕಾರಣ. ಬಹಳಷ್ಟು ಬದಲಾವಣೆಗಳು ಮನುಷ್ಯನ ಹುಟ್ಟಿನಿಂದ ಅವನ ಅಂತ್ಯದ ವರೆಗೆ ಆಗುತ್ತಲೇ ಇರುತ್ತದೆ. ಆದರೆ,ನಮ್ಮ ನಿಜ ಸ್ಥಿತಿ ಇದರ ಆಚೆ ಇರುವುದು ಎಂಬ ದೃಢ ವಿಶ್ವಾಸ ನಮಗೆ ದೊರೆತಾಗ ಮರಣದ ಭಯ ಮತ್ತು ಯೋಚನೆ ಏಕೆ ಬರುತ್ತದೆ?

सर्वैर्निदानं जगतोऽहमश्च वाच्यः प्रभुः कश्चिदपारशक्तिः ।
चित्रेऽत्र लोक्यं च विलोकितपटः प्रकाशोऽप्यभवत्स एकः ॥

ಸರ್ವೈರ್ನಿದಾನಂ ಜಗತೋಽಹಮಶ್ಚ

ವಾಚ್ಯಃ ಪ್ರಭುಃ ಕಶ್ಚಿದಪಾರಶಕ್ತಿಃ |

ಚಿತ್ರೇಽತ್ರ ಲೋಕ್ಯಂ ಚ ವಿಲೋಕಿತಾ ಚ

ಪಟಃ ಪ್ರಕಾಶೋಽಪ್ಯಭವತ್ಸ ಏಕಃ ||೧ ||

ಈ ಪ್ರಪ೦ಚವು ಉದಯಿಸಲು ಮತ್ತು ನಾನು ನಾನು ಎ೦ಬ ಅನಿಸಿಕೆಗಳು ಎಲ್ಲವೂ ಆ ಸರ್ವೆಶ್ವರನ ಶಕ್ತಿ ಎ೦ಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಆದ್ದರಿ೦ದ, ಈ ಜಗತ್ತಿನಲ್ಲಿ ತೊರುವ ಮತ್ತು ತೋರಿಕೆಯ ಹಿ೦ದೆ ಅಡಗಿರುವ. ಮೂಲ ರೂಪವು ಆ ಸತ್ಯದ ದರ್ಶನದಿ೦ದ ಉ೦ಟಾಗಿದೆಯೆ೦ದು ತಿಳಿಯಬೇಕು.


आरभ्यते जीवजगत्परात्म तत्त्वाभिधानेन मतं समस्तम् ।
इदं त्रयं यावदहंमति स्यात् सर्वोत्तमाऽहंमतिशून्यनिष्ठा ॥ २ ॥
ಆರಭ್ಯತೇ ಜೀವಜಗತ್ಪರಾತ್ಮ -

ತತ್ತ್ವಾಭಿಧಾನೇನ ಮತಂ ಸಮಸ್ತಮ್ |

ಇದಂ ತ್ರಯಂ ಯಾವದಹಂಮತಿ ಸ್ಯಾತ್

ಸರ್ವೋತ್ತಮಾಽಹಂಮತಿಶೂನ್ಯನಿಷ್ಠಾ || ೨ ||

ಎಲ್ಲ ಪಂಥಗಳ ಮತ್ತು ಮತೀಯರ ಅನಿಸಿಕೆ, ವಾದ ಏನೆಂದರೆ, ಜೀವ ಜಗತ್ತು ಈಶ್ವರ ಎಂಬ ಮೂರು ವಿಭಾಗಗಳಿಂದ ಈ ಪ್ರಪಂಚ ಉಂಟಾಗಿದೆ ಎಂಬ ಬಲವತ್ತರವಾದ ಭಾವನೆ.

ಆದರೆ, ನಾನು ನಾನು ಎಂಬ ಭಾವನೆ ಇರುವ ವರೆಗೂ ಈ ಮೂರು ಅಂಶಗಳು ಇದ್ದೇ ಇರುತ್ತದೆ. ಇದೆಲ್ಲವೂ ಮನಸ್ಸಿನ ಅಲೋಚನೆಗಳೇ ಹೊರತು ನಿಜವಲ್ಲ. ಮನಸ್ಸು ಬುದ್ಧಿ ಅಹಂಕಾರ ಇರುವವರೆಗೆ ಈ ಜಗತ್ತು ತೋರುತ್ತಿರುತ್ತದೆ. ಮನಸ್ಸು ಎಂಬ ವಸ್ತುವೇ ಇಲ್ಲದಿರುವಾಗ, ಈ ಆಲೋಚನೆ, ಹೇಗೆ ತಾನೇ ಸಾಧ್ಯ. ಆದ್ದರಿಂದ, ಈ ಸಂಶಯ ಪರಿಹಾರವೇ ನಮ್ಮ ಮೂಲ ಅಹಂಕಾರವನ್ನು ತೊಡೆದುಹಾಕಲು ಕಾರಣ ವಾಗಬೇಕು.

सत्यं मृषा वा चिदिदं जडं वा दुःखं सुखं वेति मुधा विवादः।
अदृष्टलोका निरहंप्रतीति र्निष्ठाऽविकल्पा परमाऽखिलेष्टा ॥ ३ ॥
ಸತ್ಯಂ ಮೃಷಾ ವಾ ಚಿದಿದಂ ಜಡಂ ವಾ

ದುಃಖಂ ಸುಖಂ ವೇತಿ ಮುಧಾ ವಿವಾದಃ|

ಅದೃಷ್ಟಲೋಕಾ ನಿರಹಂಪ್ರತೀತಿ -

ರ್ನಿಷ್ಠಾಽವಿಕಲ್ಪಾ ಪರಮಾಽಖಿಲೇಷ್ಟಾ || ೩ ||

ಈ ಜಗತ್ತು ಇದೆಯೋ ಇಲ್ಲವೋ, ನಿಜವೋ ಸುಳ್ಳೋ, ಇಂದ್ರಿಯ ವ್ಯಾಪಾರಗಳು ಸತ್ಯವೋ ಮಿಥ್ಯವೋ, ಸುಖ ದುಃಖಗಳು ಶಾಶ್ವತವೋ ಇಲ್ಲವೋ, ಎಂದು ವಿಚಾರ ಮಾಡುವುದರಲ್ಲಿ ಏನೂ ಪ್ರಯೋಜನವಿಲ್ಲ. ಮತ್ತು ಅರ್ಥವೂ ಇಲ್ಲ. ಇವೆಲ್ಲಾ ಶುಷ್ಕ (ಅರ್ಥ ಶೂನ್ಯ) ವಾದವಷ್ಟೇ. ಯಾವ ಒಂದು ನಿಲುವಿನಲ್ಲಿ ನಿಂತಾಗ ಈ ಪ್ರಪಂಚವು ಕಾಣುವುದಿಲ್ಲವೋ, ಎಲ್ಲ ಅಹಂಕಾರಗಳು ನಾಶವಾಗುವುವೋ ಎಲ್ಲಿ ಆಲೋಚನೆಗಳ ತರಂಗಗಳು ಇರುವುದಿಲ್ಲವೋ ಆ ಸ್ಥಿತಿಯೇ ಬಹಳ ಆನಂದಾದಾಯಕವಾದ ಮತ್ತು ಸುಖಕರವಾದ ನೆಲೆ.

सरूपबुद्धिर्जगतीश्वरे च सरूपधीरात्मनि यावदस्ति।
अरूप आत्मा यदि कः प्रपश्येत् सा दृष्टिरेकाऽनवधिर्हि पूर्णा ॥ ४ \

ಸರೂಪಬುದ್ಧಿರ್ಜಗತೀಶ್ವರೇ ಚ

ಸರೂಪಧೀರಾತ್ಮನಿ ಯಾವದಸ್ತಿ|

ಅರೂಪ ಆತ್ಮಾ ಯದಿ ಕಃ ಪ್ರಪಶ್ಯೇತ್

ಸಾ ದೃಷ್ಟಿರೇಕಾಽನವಧಿರ್ಹಿ ಪೂರ್ಣಾ || ೪ ||

ತನ್ನ ಇರುವಿಕೆಗೆ, ಎಲ್ಲಿಯವರೆಗೆ ನಾನು ನನ್ನದು ನಾಮ ರೂಪಗಳು ಇದೆ ಎಂದು ನಂಬುತ್ತಾರೋ ಅಲ್ಲಿಯವರೆಗೆ. ಅವನಿಗೆ ಪ್ರಪಂಚ ಮತ್ತು ದೇವರುಗಳು,ಆ ರೂಪಗಳಿಂದ ಕೂಡಿರುತ್ತದೆ. ಒಂದುವೇಳೆ ಆತ್ಮನಿಗೆ ರೂಪ ಇಲ್ಲ ಮತ್ತು ನಾನು ಇಲ್ಲ ಎಂದು ತಿಳಿದರೆ ಯಾವ ದೇವರು ಮತ್ತು ಪ್ರಪಂಚ ಕಾಣುತ್ತದೆ. ಆದ್ದರಿಂದ ಪರಿಮಿತಿಯೇ ಇಲ್ಲದ ವಸ್ತುವು ,ಸತ್ಯ ಒಂದೇ ಮತ್ತು ಎಂದೆಂದಿಗೂ ನಿತ್ಯ ಎಂದು ತಿಳಿಯುವುದೇ ಬುದ್ದಿವಂತಿಕೆ.

यत्पञ्चकोशात्मकमस्ति देहं तदन्तरा किं भुवनं चकास्ति ।
देहं विना पञ्चविधं तदेतत् पश्यन्ति के वा भुवनं भणन्तु ॥ ५ ॥
ಯತ್ಪಞ್ಚಕೋಶಾತ್ಮಕಮಸ್ತಿ ದೇಹಂ

ತದನ್ತರಾ ಕಿಂ ಭುವನಂ ಚಕಾಸ್ತಿ |

ದೇಹಂ ವಿನಾ ಪಞ್ಚವಿಧಂ ತದೇತತ್

ಪಶ್ಯನ್ತಿ ಕೇ ವಾ ಭುವನಂ ಭಣನ್ತು || ೫ ||

ದೇವರಿಗೆ ರೂಪ ಇರುವುದರಿಂದಲೇ ತಾನೇ ಎಲ್ಲವನ್ನೂ ನೋಡಬಲ್ಲ ಮತ್ತು ತಿಳಿಯಬಲ್ಲ ಎಂಬ ಸಂಕುಚಿತ ಭಾವನೆಯಿಂದಲೇ ಎಲ್ಲರಿಗೂ ಈ ಆಭಾಸಗಳು ಉಂಟಾಗುತ್ತಿರುತ್ತದೆ. ನಮ್ಮ ಪಂಚಕೋಶಗಳನ್ನು ನಿಯ೦ತ್ರಣ ಮಾಡುವ ಒಬ್ಬ ವ್ಯಕ್ತಿ ಅವುಗಳ ಹಿಂದೆ ಇದ್ದಾನೆ ಎಂಬ ತಿಳುವಳಿಕ ಇಲ್ಲದಿದ್ದರೆ, ಈ ಕೋಶಗಳು ತನ್ನನ್ನು ತಾನೇ ಹೇಗೆ ತಿಳಿದುಕೊಳ್ಳಲು ಆಗುತ್ತದೆ. ನಿಯಾಮಕನಿಲ್ಲದ ದೇಹ ಮತ್ತು ಪಂಚಕೋಶಗಳನ್ನು ಒಳಗೊಂಡ ಯಾರಾದರೂ ಇದ್ದು ಈ ಪ್ರಪಂಚವನ್ನು ನಾನು ನೋಡಿದ್ದೇನೆ ಎಂದಾಗ, ಅಂತಹವರನ್ನು ನನ್ನಲ್ಲಿಗೆ ಕರೆತನ್ನಿ ನೋಡೋಣ.

शब्दादिरूपं भुवनं समस्तं शब्दादिसत्तेन्द्रियवृत्तिभास्या।
सत्तेन्द्रियाणां मनसो वशे स्यात मनोमयं तद्भुवनं वदामः ॥ ६ ॥
ಶಬ್ದಾದಿರೂಪಂ ಭುವನಂ ಸಮಸ್ತಂ

ಶಬ್ದಾದಿಸತ್ತೇನ್ದ್ರಿಯವೃತ್ತಿಭಾಸ್ಯಾ|

ಸತ್ತೇನ್ದ್ರಿಯಾಣಾಂ ಮನಸೋ ವಶೇ ಸ್ಯಾತ್

ಮನೋಮಯಂ ತದ್ಭುವನಂ ವದಾಮಃ || ೬ ||

ಈ ಜಗತ್ತು, ನಮ್ಮ ಇಂದ್ರಿಯ ಸಮೂಹಗಳಾದ ಶಬ್ದ ಸ್ಪರ್ಷ ರೂಪ ರಸ ಮತ್ತು ಗಂಧಗಳಿಂದ ಉಂಟಾಗಿದೆಯಲ್ಲವೇ. ಇದರಿಂದ ಉತ್ಪತ್ತಿಯಾದ ತರಂಗಗಳು, ಆಲೋಚನೆಯ ಮಾರ್ಗಗಳಲ್ಲವೇ. ಈ ಇಂದ್ರಿಯ ಸಮೂಹಗಳು ಮತ್ತು ಅದರಿಂದ ಉಂಟಾದ ತರಂಗಗಳು ಮನಸ್ಸಿನ ಹಿಡಿತದಲ್ಲಿ ಇದೆಯಲ್ಲವೆ. ಆದ್ದರಿಂದ ಈ ಪ್ರಪಂಚವು, ಗೋಚರವಾದ ಬರಿಯ ಮನಸ್ಸಿನ ಸ್ಥಿತಿಯೇ ಎಂದು ಹೇಳಬಹುದಲ್ಲವೇ.

धिया सहोदेति धियास्तमेति लोकस्ततो धीप्रविभास्य एषः ।
धीलोकजन्मक्षयधाम पूर्णं सद्वस्तु जन्मक्षयशून्यमेकम् ॥ ७ ॥
ಧಿಯಾ ಸಹೋದೇತಿ ಧಿಯಾಸ್ತಮೇತಿ

ಲೋಕಸ್ತತೋ ಧೀಪ್ರವಿಭಾಸ್ಯ ಏಷಃ |

ಧೀಲೋಕಜನ್ಮಕ್ಷಯಧಾಮ ಪೂರ್ಣಂ

ಸದ್ವಸ್ತು ಜನ್ಮಕ್ಷಯಶೂನ್ಯಮೇಕಮ್ || ೭ ||

ಈ ಜಗತ್ತು ನಮ್ಮ ಅಂತಃಕರಣದಲ್ಲಿ ಉದಯವಾಗಿ ಮತ್ತು ಅದರಲ್ಲೇ ಲೀನವಾಗುವುದರಿಂದ ಈ ಅಂತಃಕರಣದಲ್ಲಿನ ತೋರಿಕೆಯೇ (ಅಭಿವ್ಯಕ್ತವಾಗುವುದು) ಈ ಜಗತ್ತು. ಆದ್ದರಿಂದ ನಮ್ಮ ಅಂತಃಕರಣದಲ್ಲಿನ ಅಥವಾ ಅಂತಃಕರಣವೇ ಈ ಜಗತ್ತು ಉದಯಿಸಲು ಮತ್ತು ನಾಶವಾಗಲು ಕಾರಣವಲ್ಲವೇ. ನಮ್ಮ ಶುದ್ಧ ಬುದ್ಧ ಮುಕ್ತ ಸ್ವರೂಪ ಅಂತಃಕರಣದ ಆಚೆ ಇರುವುದರಿಂದ ಎಲ್ಲೆಲ್ಲೂ ತೋರಿ ಉದಯವಾಗಿ, ಆದಿ ಅಂತ್ಯಗಳು ಇಲ್ಲದ ಅದು ತಾನೇ ತಾನಾಗಿದೆಯೇ ಹೊರತು ಮತ್ತೇನೂ ಆಗಲು ಸಾದ್ಯವಿಲ್ಲ.

भवन्तु सद्दर्शनसाधनानि परस्य नामाकृतिभिः सपर्याः।
सद्वस्तुनि प्राप्ततदात्मभावा निष्ठैव सद्दर्शनमित्यवेहि॥ ८ ॥

ಭವನ್ತು ಸದ್ದರ್ಶನಸಾಧನಾನಿ

ಪರಸ್ಯ ನಾಮಾಕೃತಿಭಿಃ ಸಪರ್ಯಾಃ|

ಸದ್ವಸ್ತುನಿ ಪ್ರಾಪ್ತತದಾತ್ಮಭಾವಾ

ನಿಷ್ಠೈವ ಸದ್ದರ್ಶನಮಿತ್ಯವೇಹಿ ॥ ८ ॥

ಒಂದು ವೇಳೆ, ನಾವು ಮಾಡುವ ವಿಧಿ ವಿಧಾನಗಳಿಂದ ಕೂಡಿದ ಪೂಜೆ ಪುನಸ್ಕಾರ ಮತ್ತು ಇತರ ಸೇವೆಗಳು ಮತ್ತು ನಾವು ಆ ದೇವರಿಗೆ ಕೊಡುವ ರೂಪ,ನಾಮಗಳು, ಎಲ್ಲವೂ ಆತ್ಮನನ್ನು ಹೊಂದಲು ನಾವು ಮಾಡುತ್ತಿರುವ ಅಲ್ಪತಮವಾದ ಸಾಧನಗಳು ಎಂಬುದನ್ನು ಒಪ್ಪಿಕೊಂಡರೂ, ಆ ಆತ್ಮನನ್ನು ಪಡೆಯಬಹುದಾದ ಮತ್ತು ತಿಳಿಯಲು ಸಾಧ್ಯವಾಗ ಬಹುದಾದ ಒಂದು ದಾರಿಯೇ ಎಂಬುದು ಖಚಿತವಾಯಿತಲ್ಲವೇ? ಅಂದರೆ ನಾವು ತದೇಕಚಿತ್ತಾರಾಗಿ ಅಂತರ್ಮುಖರಾಗಿ ಮೂಲ ಸ್ವರೂಪದತ್ತ ನಮ್ಮ ಚಿತ್ತವನ್ನು ತಿರಿಗಿಸಿದಂತೆ ಆಯಿತು.

द्वन्द्वानि सर्वाण्यखिलास्त्रिपुट्यः किञ्चित्समाश्रित्य विभान्ति वस्तु।
तन्मार्गणे स्याद्गलितं समस्तं न पश्यतां सच्चलनं कदापि ॥ ९ ॥
ದ್ವನ್ದ್ವಾನಿ ಸರ್ವಾಣ್ಯಖಿಲಾಸ್ತ್ರಿಪುಟ್ಯಃ

ಕಿಞ್ಚಿತ್ಸಮಾಶ್ರಿತ್ಯ ವಿಭಾನ್ತಿ ವಸ್ತು|

ತನ್ಮಾರ್ಗಣೇ ಸ್ಯಾದ್ಗಲಿತಂ ಸಮಸ್ತಂ

ನ ಪಶ್ಯತಾಂ ಸಚ್ಚಲನಂ ಕದಾಪಿ || ೯ ||

ವಿರೋಧ ಪದಗಳಾದ ಉಷ್ಣ ಮತ್ಗು ಶೀತ,, ಸುಖ ಮತ್ತು ದುಃಖ, ಆಸೆ ಮತ್ತು ನಿರಾಸೆ, ಅನುಭವಿಸುವವ ಮತ್ತು ಅನುಭವಿಸಲ್ಪಡುವವ ಮತ್ತು ಅದರಿಂದ ಉಂಟಾದ ಅನುಭವ ಇವೆಲ್ಲವೂ ಒಂದು ಉನ್ನತವಾದ ಶಕ್ತಿ ಮತ್ತು ಅದರ ಅಧಾರದಿಂದಲೇ ತೋರುತ್ತದೆ ಎಂದು ಖಚಿತವಾಯಿತಲ್ಲವೇ. ಆ ಶಕ್ತಿಯನ್ನು ನಾವು ಹುಡುಕತೊಡಗಿದರೆ ಈ ದ್ವಂದಗಳೆಲ್ಲವೂ ನಾಶವಾಗಿ,ಬ್ರಹ್ಮ ವಿಷ್ಣು ಮಹೇಶ್ವರ ಎಂಬ ಮೂರು ರೂಪಗಳು ಮರೆಯಾಗಿ ಬಿಡುತ್ತವೆ. ಯಾರು ಈ ಮೂಲಸ್ವರೂಪದಲ್ಲಿಯೇ ನೆಲೆ ನಿಂತಿರುತ್ತಾರೋ ಅಂತಹವರ ಮನಸ್ಸಿನಲ್ಲಿ ಅಲುಗಾಟ, ತೊಳಲಾಟಗಳು ಇರವುದೇ ಇಲ್ಲ.


विद्या कथं भाति न चेदविद्या विद्यांविना किं प्रविभात्यविद्या।
द्वयं च कस्येति विचार्य मूल स्वरूपनिष्ठा परमार्थविद्या ॥ १० ॥
ವಿದ್ಯಾ ಕಥಂ ಭಾತಿ ನ ಚೇದವಿದ್ಯಾ

ವಿದ್ಯಾಂ ವಿನಾ ಕಿಂ ಪ್ರವಿಭಾತ್ಯವಿದ್ಯಾ|

ದ್ವಯಂ ಚ ಕಸ್ಯೇತಿ ವಿಚಾರ್ಯ ಮೂಲ -

ಸ್ವರೂಪನಿಷ್ಠಾ ಪರಮಾರ್ಥವಿದ್ಯಾ || ೧೦ ||

ಆ ಮೂಢ ಮನಸ್ಸು ಇರುವುದರಿಂದಲೇ ಅಲ್ಲವೇ ಅವಿದ್ಯೆ ಅಥವಾ ಆಜ್ಞಾನ ತೋರಿಕೊಳ್ಳಬಲ್ಲದು? ಜ್ಞಾನದ ದೀವಿಗೆ ಇಲ್ಲದಿದ್ದರೆ ಅವಿದ್ಯೆಯ ಬಗ್ಗೆ ತಿಳಿಯಲು ಅಗುತ್ತಿತ್ತೋ ಇಲ್ಲವೋ? ಈ ದ್ವಂದ್ವಗಳಾದ ಜ್ಞಾನ ಮತ್ತು ಅಜ್ಞಾನದ ಬಗ್ಗೆ ಕೂಲಂಕಶವಾಗಿ ಪರಿಶೀಲಿಸುವ ಒಂದು ಶಕ್ತಿಯೇ ನಿಜವಾದ ಜ್ಞಾನ. ತನ್ನ ಮೂಲ ಸ್ವರೂಪದಲ್ಲಿಯೇ ಮುಳುಗಿ ಅದರಲ್ಲೇ ನೆಲೆ ನಿಂತಾಗ ಗೋಚರವಾಗುವುದೇ ನಮ್ಮ ಶುದ್ದ ಜ್ಞಾನ ಮತ್ತು ಅರಿವು. ಯಾರು ತನ್ನ ಮೂಲ ಸ್ವರೂಪದಲ್ಲಿ ತನ್ನನ್ನು ತಾನು ಕಂಡುಕೊಂಡು ಅದನ್ನು ಸ್ಪಸ್ಟವಾಗಿ ತಿಳಿದು ಕೊಳ್ಳಬಲ್ಲನೋ ಅದೇ ಅವನ ನಿಜವಾದ ಸ್ಥಿತಿ ಮತ್ತು ಇರುವಿಕೆ.

बोद्धारमात्मानमजानतो यो बोधः स किं स्यात्परमार्थबोधः।
बोधस्य बोध्यस्य च संश्रयं स्वं विजानतस्तद्द्वितयं विनश्येत् ॥ ११ ॥
ಬೋದ್ಧಾರಮಾತ್ಮಾನಮಜಾನತೋ ಯೋ

ಬೋಧಃ ಸ ಕಿಂ ಸ್ಯಾತ್ಪರಮಾರ್ಥಬೋಧಃ|

ಬೋಧಸ್ಯ ಬೋಧ್ಯಸ್ಯ ಚ ಸಂಶ್ರಯಂ ಸ್ವಂ

ವಿಜಾನತಸ್ತದ್ದ್ವಿತಯಂ ವಿನಶ್ಯೇತ್ || ೧೧ ||

ಬಾಹ್ಯ ಸಂಬಂಧಗಳಿಂದ ಕಂಡುಂಕೊಂಡ ಜ್ಞಾನ ಎಂದಾದರೂ ತನ್ನ ನಿಜ ಸ್ವರೂಪವನ್ನು ತಿಳಿಯಲು ಸಹಕಾರಿಯಾಗುತ್ತದೆಯೇ ಮತ್ತು ಅದು ಶುದ್ಧ ಆತ್ಮಜ್ಞಾನವಾಗಬಲ್ಲದೇ. ತಿಳಿದಿದ್ದು ಮತ್ಗು ತಿಳಿಯಬೇಕಾದ ಕ್ರಿಯೆ ಎರಡಕ್ಕೂ ಆಧಾರವಾದುದೇ ಆತ್ಮ ಎಂದು ಕಂಡು ಕೊಂಡ ಕೂಡಲೇ ಅದೃಶ್ಯವಾಗಿ ನಾಶವಾಗಿಬಿಡುತ್ತದೆ.

ತಾನು ಯಾರು ಎಂಬ ಮಹತ್ತರವಾದ ವಿಚಾರವನ್ನು ತಿಳಿಯದವ ಎಷ್ಟೇ ವಿದ್ಯಾವಂತನಾದರೂ, ಅವನ ಜ್ಞಾನ ನಿಜವಾದ ಜ್ಞಾನ ಅಲ್ಲವೇ ಅಲ್ಲ

निद्रा न विद्या ग्रहणं न विद्या गृह्णाति किञ्चिन्न यथार्थबोधे।
निद्रापदार्थग्रहणेतरा स्यात् चिदेव विद्या विलसन्त्यशून्या ॥ १२ ॥
ನಿದ್ರಾ ನ ವಿದ್ಯಾ ಗ್ರಹಣಂ ನ ವಿದ್ಯಾ

ಗೃಹ್ಣಾತಿ ಕಿಞ್ಚಿನ್ನ ಯಥಾರ್ಥಬೋಧೇ|

ನಿದ್ರಾಪದಾರ್ಥಗ್ರಹಣೇತರಾ ಸ್ಯಾತ್

ಚಿದೇವ ವಿದ್ಯಾ ವಿಲಸನ್ತ್ಯಶೂನ್ಯಾ || ೧೨ ||

ನಿಮ್ಮ ನಿಜವಾದ ಜ್ಞಾನ ತನಿ ನಿದ್ರೆಯಲ್ಲಿ ಇಲ್ಲ. ಕನಸಿನಲ್ಲಿ ಅಥವಾ ಎಚ್ಚರದಲ್ಲಿ ಇಲ್ಲವೇ ಇಲ್ಲ. ಇವೆರಡರಲ್ಲಿ ಬರಿಯ ತಿಳುವಳಿಕೆ ಮತ್ತು ಆನುಭವಾಗಳಿವೆ. ಏಕೆಂದರೆ ಇಲ್ಲಿನ ಸಂಬಂಧಗಳು ಎಲ್ಲವೂ ಹೊರಗಿನ ವಿಷಯಗಳಿಂದ ತಿಳಿದಿದ್ದು. ಆದರೆ ಬರಿಯ ಅರಿವು ಈ ಮೂರು ಅವಸ್ಥೆಗಳನ್ನು ಮೀರಿದ್ದು. ಅದೇ ಶುದ್ಧ ಸತ್ವ. ಶುದ್ಧ ಜ್ಞಾನ ಮತ್ತು ಸ್ವಯಂಜ್ಯೋತಿಯಿಂದ ಬೆಳಗುತ್ತಿರುವುದು. ಅದು ಶೂನ್ಯವಲ್ಲ. ಶೂನ್ಯಸ್ಥಿತಿ ಅಲ್ಲವೇ ಅಲ್ಲ.

सत्यश्चिदात्मा विविधाकृतिश्चित् सिध्येत्पृथक्सत्यचितो न भिन्ना।
भूषाविकाराः किमु सन्ति सत्यं विना सुवर्णं पृथगत्र लोके ॥ १३ ॥

ಸತ್ಯಶ್ಚಿದಾತ್ಮಾ ವಿವಿಧಾಕೃತಿಶ್ಚಿತ್

ಸಿಧ್ಯೇತ್ಪೃಥಕ್ಸತ್ಯಚಿತೋ ನ ಭಿನ್ನಾ|

ಭೂಷಾವಿಕಾರಾಃ ಕಿಮು ಸನ್ತಿ ಸತ್ಯಂ

ವಿನಾ ಸುವರ್ಣಂ ಪೃಥಗತ್ರ ಲೋಕೇ || ೧೩ ||

ಈ ಜಗತ್ತಿನಲ್ಲಿ ಗೋಚರಿಸುತ್ತಿರುವ ಮತ್ತು ನಮಗೆ ತೋರುವ ಅನೇಕ ನಾಮ, ರೂಪಗಳು, ವಿಶೇಷಣಗಳು, ಎಲ್ಲವೂ ಪರಮ ಸತ್ಯದ ಒಂದು ಮುಖವಷ್ಟೇ. ಆವು ಆತ್ಮನಿಂದ ಬೇರ್ಪಡಿಸಲಾಗದ ಸತ್ಯ. ಯಾವ ರೀತಿಯಲ್ಲಿ ಚಿನ್ನದ ಆಭರಣದಿಂದ ಚಿನ್ನದ ಇರುವಿಕೆಯನ್ನು ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ನಾಮರೂಪಗಳೆಲ್ಲವೂ ಆತ್ಮನ ಚಮತ್ಕಾರಗಳೇ.

तद्युष्मदोरस्मदि संप्रतिष्ठा तस्मिन् विनष्टेऽस्मदि मूलबोधात्।
तद्युष्मदस्मन्मतिवर्जितैका स्थितिर्ज्वलन्ती सहजात्मनः स्यात्॥ १४ ॥
ತದ್ಯುಷ್ಮದೋರಸ್ಮದಿ ಸಂಪ್ರತಿಷ್ಠಾ

ತಸ್ಮಿನ್ ವಿನಷ್ಟೇಽಸ್ಮದಿ ಮೂಲಬೋಧಾತ್|

ತದ್ಯುಷ್ಮದಸ್ಮನ್ಮತಿವರ್ಜಿತೈಕಾ

ಸ್ಥಿತಿರ್ಜ್ವಲನ್ತೀ ಸಹಜಾತ್ಮನಃ ಸ್ಯಾತ್ || ೧೪ ||

ನೀನು ಮತ್ತು ನಿನ್ನದು ಎಂಬ ಭಾವನೆಗೆ ಬುನಾದಿಯಾಗಿ ಇರುವುದು ಈ “ನಾನು” ಎಂಬ ವಸ್ತು. ಆದರೆ ಈ ನಾನು ಎಂಬುದರ ಮೂಲವನ್ನು ತಲುಪಿದಾಗ ನೀನು ನಾನು ಎಲ್ಲವೂ ಇಲ್ಲವಾಗಿಬಿಡುತ್ತದೆ. ನಾನು ನಾನು ಎಂದು ಸ್ಪುರಿಸುತ್ತಿರುವ ಸ್ಥಿತಿಯೇ ಇಲ್ಲವಾದಾಗ ಉಳಿದಿರುವ ಇರುವಿಕೆಯೇ ಪರಬ್ರಹ್ಮ. ಅದೇ ಅವನ ನಿಜವಾದ ಸ್ಥಿತಿ ,ಸ್ವಯಂಪ್ರಕಾಶದ ನೆಲೆ ಮತ್ತು ಎಲ್ಲಾ ಅದ್ಭುತ ತೋರಿಕೆಗಳ ಮೂಲ ಸ್ವರೂಪ.

भूतं भविष्यच्च भवत्स्वकाले तद्वर्तमानस्य विहाय तत्त्वम्।
हास्या न किं स्याद्गतभाविचर्चा विनैकसंख्यां गणनेव लोके ॥ १५ ॥

ಭೂತಂ ಭವಿಷ್ಯಚ್ಚ ಭವತ್ಸ್ವಕಾಲೇ

ತದ್ವರ್ತಮಾನಸ್ಯ ವಿಹಾಯ ತತ್ತ್ವಮ್|

ಹಾಸ್ಯಾ ನ ಕಿಂ ಸ್ಯಾದ್ಗತಭಾವಿಚರ್ಚಾ

ವಿನೈಕಸಂಖ್ಯಾಂ ಗಣನೇವ ಲೋಕೇ || ೧೫ ||

ಹಿಂದೆ ಆಗಿಹೋಗಿದ್ದು ಮುಂದೆ ಆಗಬಹುದಾದದ್ದು ಎಲ್ಲವೂ ಈ ಕ್ಷಣದಲ್ಲಿ ತೋರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಹಿಂದೆ ಆಗಿಹೋದ ,ಸಮಯದ ಬಗ್ಗೆ ಚಿಂತಿಸಿ ಫಲವೇನು? ಮುಂದೆ ಆಗಬಹುದಾದ ಸ್ಥಿತಿಗಳ ಬಗ್ಗೆ ತಳಮಳಗಳ ಬಗ್ಗೆ ಚಿಂತಿಸಿ ಫಲವೇನು? ನಿಮ್ಮ ಮುಂದೆ ಕಾಣುತ್ತಿರುವ ಸತ್ಯ ಸ್ಥಿತಿಯನ್ನು ಬಿಟ್ಟು ಮತ್ತೆಲ್ಲವನ್ನೂ ಚಿಂತಿಸಿದಾಗ, ನೀವು ಒಂದು ಗುಂಪಿನಲ್ಲಿ ನಿಮ್ಮ ಒಬ್ಬನನ್ನು ಬಿಟ್ಟು ಮತ್ತೆಲ್ಲರನ್ನು ಎಣಿಸಿ ಕಳೆದವನ ಚಿಂತೆಯಲ್ಲೇ ಮುಳುಗಿರುವುದೇ ಅಭಾಸ ಎ೦ದು ತಿಳಿಯುವುದಿಲ್ಲವೇ?

क्व भाति दिक्कालकथा विनाऽस्मान् दिक्काललीलेह वपुर्वयं चेत्।
न क्वापि भामो न कदापि भामो वयं तु सर्वत्र सदा च भामः ॥ १६ ॥ಕ್ವ ಭಾತಿ ದಿಕ್ಕಾಲಕಥಾ ವಿನಾಽಸ್ಮಾನದಿಕ್ಕಾಲಲೀಲೇಹ ವಪುರ್ವಯಂ ಚೇತ್|

ನ ಕ್ವಾಪಿ ಭಾಮೋ ನ ಕದಾಪಿ ಭಾಮೋ

ವಯಂ ತು ಸರ್ವತ್ರ ಸದಾ ಚ ಭಾಮಃ || ೧೬ ||

ಕಾಲ ದೇಶಗಳು,ನೊಡಲ್ಪಡುವವನಿ೦ದ ಬೇರೆಯಲ್ಲ ಎಂಬುದು ಸತ್ಯ ಅಲ್ಲವೆ. ನಾನು ದೇಹ, ನಾನು ದೇಹ ಎಂದೇ ನ೦ಬಿರುವವರು, ಕಾಲ ದೇಶಗಳ ಪರಿಮಿತಿಯಲ್ಲೇ ಇದ್ದುಬಿಡುತ್ತಾರೆ. ನಿಜ ಸಂಗತಿ ಏನೆಂದರೆ ನಾವು ಒಂದು ನಿರ್ದಿಷ್ಟ ಸಮಯದಲ್ಲಿ ಆಗಲೀ ಅಥವಾ ನಿರ್ದಿಷ್ಟ ಸ್ಥಳದಲ್ಲೇ ಆಗಲಿ ಎಂದೂ ಇಲ್ಲವೇ ಇಲ್ಲ. ಆದರೂ ನಾವು ಎಲ್ಲೆಲ್ಲಿಯೂ ಯಾವಾಗಲೂ ಇರುವುದು ಸತ್ಯವಲ್ಲವೇ.

देहात्मभावे ज्ञजडौ समाना - वेकस्य देहे हृदि दीप्त आत्मा।
आक्रम्य देहं च जगच्च पूर्णः परस्य मेयं तनुमात्रमात्मा ॥ १७ ॥
ದೇಹಾತ್ಮಭಾವೇ ಜ್ಞಜಡೌ ಸಮಾನಾ -

ವೇಕಸ್ಯ ದೇಹೇ ಹೃದಿ ದೀಪ್ತ ಆತ್ಮಾ|

ಆಕ್ರಮ್ಯ ದೇಹಂ ಚ ಜಗಚ್ಚ ಪೂರ್ಣಃ

ಪರಸ್ಯ ಮೇಯಂ ತನುಮಾತ್ರಮಾತ್ಮಾ || ೧೭ ||

ದೇಹಾಭಿಮಾನ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ಜ್ಞಾನಿ ಮತ್ತು ಅಜ್ಞಾನಿ ಬೇರೆ ಅಲ್ಲ. ಅವರಿಬ್ಬರೂ ಒಂದೇ. ಅದರೆ ಜ್ಞಾನಿಯಾದವನು, ಆತ್ಮನನ್ನು ತನ್ನ ಹೃದಯದಲ್ಲಿ ಗುರುತಿಸಿಕೊಂಡು, ದೇಶ, ಕಾಲ, ಸಮಯ ಸಂಬಂಧಗಳಿಂದ ದಾಟಿ ಪ್ರಪಂಚದ ಎಲ್ಲೆಯಿಂದ ಆಚೆ ಹೊರಟು, ತಾನೇ ಎಲ್ಲೆಲ್ಲೂ ಇರುವಂತೆ ಆಗಿಬಿಡುತ್ತಾನೆ. ಆದರೆ, ಆಜ್ನಾನಿಯಾದರೋ, ತಾನೇ ದೇಹವೆಂದು ತಿಳಿದು ಸಂಕುಚಿತ ಭಾವನೆಯಲ್ಲಿ ಮತ್ತು ತನ್ನ ಸ್ವರೂಪದಲ್ಲಿ ತನ್ನನ್ನು ಉಳಿಸಿಕೊಂಡು ಬಿಡುತ್ತಾನೆ.

देहात्मभावे ज्ञजडौ समाना वेकस्य देहे हृदि दीप्त आत्मा।
आक्रम्य देहं च जगच्च पूर्णःपरस्य मेयतनुमात्रमात्मा॥१७
ಅಜ್ಞಸ್ಯ ವಿಜ್ಞಸ್ಯ ಚ ವಿಶ್ವಮಸ್ತಿ

ಪೂರ್ವಸ್ಯ ದೃಶ್ಯಂ ಜಗದೇವ ಸತ್ಯಮ್|

ಪರಸ್ಯ ದೃಶ್ಯಾಶ್ರಯಭೂತಮೇಕಂ

ಸತ್ಯಂ ಪ್ರಪೂರ್ಣಂ ಪ್ರವಿಭಾತ್ಯರೂಪಮ್ || ೧೮ ||

ಈ ಪ್ರಪಂಚವು,ಅಜ್ಞಾನಿಗಳಿಗೂ ಮತ್ತು ಜ್ಞಾನಿಗಳಿಗೂ ಒಂದೇ ತರಹ ಪ್ರಪಂಚದಂತೆ ತೋರುತ್ತದೆ. ಆದರೆ ಅಜ್ಞಾನಿಗೆ, ತನಗೆ ಕಾಣುತ್ತಿರುವ ಪ್ರಪಂಚವೇ ಸತ್ಯ ಎಂದು ಎನಿಸುತ್ತದೆ. ಆದರೆ ಜ್ಞಾನಿಗಾದರೊ. ಎಲ್ಲ ಕಡೆಯಲ್ಲೂ ತೋರುವ ಮತ್ತು ನಾಮ ರೂಪಗಳು ಇಲ್ಲದ ಆತ್ಮ ಒಂದೇ ಸತ್ಯ. ಈ ಆತ್ಮನೇ ಜಗತ್ತಿಗೆ ಮೂಲ ಕಾರಣ ಎಂದು ಖಚಿತವಾಗಿ ತಿಳಿಯುತ್ತದೆ.

विधेः प्रयत्नस्य च कोऽपि वाद स्तयोर्द्वयोर्मूलमजानतां स्यात्।
विधेः प्रयत्नस्य च मूलवस्तु सञ्जानतां नैव विधिर्न यत्नः ॥ १९ ॥
ವಿಧೇಃ ಪ್ರಯತ್ನಸ್ಯ ಚ ಕೋಽಪಿ ವಾದ -

ಸ್ತಯೋರ್ದ್ವಯೋರ್ಮೂಲಮಜಾನತಾಂ ಸ್ಯಾತ್|

ವಿಧೇಃ ಪ್ರಯತ್ನಸ್ಯ ಚ ಮೂಲವಸ್ತು

ಸಞ್ಜಾನತಾಂ ನೈವ ವಿಧಿರ್ನ ಯತ್ನಃ || ೧೯ ||

ವಿಧಿ ಮತ್ತು ಸ್ವತಂತ್ರ ಪೌರುಷದ ಬಗ್ಗೆ ಮಾತನಾಡುವರಿಗೆ, ಇವೆರಡರ ಬಗ್ಗೆ ಮತ್ತು ಅವುಗಳ ಸತ್ಯಾಸತ್ಯತೆಯ ಬಗ್ಗೆ ತಿಳುವಳಿಕೆಯೇ ಇರುವುದಿಲ್ಲ. ಆದರೆ ತನ್ನನ್ನು ಕಂಡುಕೊಂಡವರಿಗೆ. ಅವೆರಡನ್ನೂ ಅಲ್ಲಗಳೆದು, ಇದು ಸತ್ಯದ ತಳಹದಿ ಎಂದು ತಿಳಿದಾಗ, ವಿಧಿ ಮತ್ತು ಸ್ವಾತ೦ತ್ರ್ಯ ಇವೆರಡೂ ಮಿಥ್ಯ ಎಂದು ತಿಳಿಯುತ್ತದೆ.

यदीशितुर्वीक्षणमीक्षितार मवीक्ष्य तन्मानसिकेक्षणं स्यात्।
न द्रष्टुरन्यः परमो हि तस्य वीक्षा स्वमूले प्रविलीय निष्ठा ॥ २० ॥
ಯದೀಶಿತುರ್ವೀಕ್ಷಣಮೀಕ್ಷಿತಾರ -

ಮವೀಕ್ಷ್ಯ ತನ್ಮಾನಸಿಕೇಕ್ಷಣಂ ಸ್ಯಾತ್|

ನ ದ್ರಷ್ಟುರನ್ಯಃ ಪರಮೋ ಹಿ ತಸ್ಯ

ವೀಕ್ಷಾ ಸ್ವಮೂಲೇ ಪ್ರವಿಲೀಯ ನಿಷ್ಠಾ || ೨೦ ||

ಆತ್ಮನನ್ನು ಅಥವಾ ನೋಡುವವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳದವರಿಗೆ, ದೇವರು ಎಂಬುದು ಒಂದು ಮನಸ್ಸಿನ ಆಟವೇ ಸರಿ. ನೋಡುವವನ ಹೊರತು ಬೇರೆ ದೇವರಿಲ್ಲ. ತನ್ನ ಮೂಲ ಸ್ವರೂಪದಲ್ಲಿ ಮುಳುಗಿ ನಿಲ್ಲುವುದೇ ದೇವರ ದರ್ಶನ ಎಂದು ತಿಳಿಯಬೇಕು.

आत्मानमीक्षेत परं प्रपश्ये दित्यागमोक्तेः सुलभो न भावः।
नात्मैव दृश्यो यदि का कथेशे स्वयं तदन्नीभवनं तदीक्षा ॥ २१ ॥

ಆತ್ಮಾನಮೀಕ್ಷೇತ ಪರಂ ಪ್ರಪಶ್ಯೇ -

ದಿತ್ಯಾಗಮೋಕ್ತೇಃ ಸುಲಭೋ ನ ಭಾವಃ|

ನಾತ್ಮೈವ ದೃಶ್ಯೋ ಯದಿ ಕಾ ಕಥೇಶೇ

ಸ್ವಯಂ ತದನ್ನೀಭವನಂ ತದೀಕ್ಷಾ || ೨೧ ||

ಮೊದಲು ಆತ್ಮ ಜ್ಞಾನವನ್ನು ಪಡೆದುಕೊ, ಆಗ ನಿನಗೆ ಸರ್ವೆಶ್ವರನ ದರ್ಶನವಾಗುತ್ತದೆ ಎಂದು ವೇದಗಳು ಸಾರಿ ಸಾರಿ ಹೇಳುತ್ತಿವೆ. ಆದರೆ ಈ ಸೂಕ್ಷ್ಮವಾದ ಅರ್ಥ ಬಹಳಷ್ಟು ಜನರಿಗೆ ಇನ್ನೂ ಸ್ಪಷ್ಟವಾಗಿಯೇ ಕಾಣುತ್ತಿಲ್ಲ. ಆತ್ಮನನ್ನೇ ನೋಡಲು ನಿಮಗೆ ಅಸಾಧ್ಯವಾದಾಗ ಸರ್ವೇಶ್ವರ ನಿಮಗೆ ಎಲ್ಲಿಂದ ಮತ್ತು ಹೇಗೆ ತೋರುತ್ತಾನೆ? ದೇವರನ್ನು ನೋಡುವುದು ಎಂದರೆ ನಿಮ್ಮ ಮನಸ್ಸನ್ನೇ ದೇವರಿಗೆ ಉಣಬಡಿಸಬೇಕು. ಆಗ ನೀವು ಅವನ ದರ್ಶನದ ಲಾಭ ಪಡೆಯಬಹುದು.

धिये प्रकाशं परमो वितीर्य स्वयं धियोऽन्तः प्रविभाति गुप्तः।
धियं परावर्त्य धियोन्तरेऽत्र संयोजनान्नेश्वरदृष्टिरन्या ॥ २२ ॥
ಧಿಯೇ ಪ್ರಕಾಶಂ ಪರಮೋ ವಿತೀರ್ಯ

ಸ್ವಯಂ ಧಿಯೋಽನ್ತಃ ಪ್ರವಿಭಾತಿ ಗುಪ್ತಃ|

ಧಿಯಂ ಪರಾವರ್ತ್ಯ ಧಿಯೋನ್ತರೇಽತ್ರ

ಸಂಯೋಜನಾನ್ನೇಶ್ವರದೃಷ್ಟಿರನ್ಯಾ || ೨೨ ||

ನಮ್ಮ ಅಂತಃಕರಣಕ್ಕೆ ಬೆಳಕನ್ನು ಚೆಲ್ಲಿ ಅದರ ಮತ್ತು ಎಲ್ಲದರ ಹಿಂದೆ ಇದ್ದುಕೊಂಡು ಆತ್ಮನು ಸ್ವಯಂ ಜ್ಯೋತಿಯಾಗಿ ಬೆಳಗುತ್ತಿರುತ್ತಾನೆ. ಆತ್ಮ ಚಿಂತನೆಯಲ್ಲೇ ಮನಸ್ಸನ್ನು ನಿಲ್ಲಿಸಿಕೊಂಡು ಚಿತ್ತವನ್ನು ದಾಟಿ ಪೂರ್ಣ ಪ್ರಜ್ಞೆಯಲ್ಲಿ ಬೆರೆತು ಹೋಗುವುದೇ ಮತ್ತು ಅಲ್ಲಿ ನಿಲ್ಲುವುದೇ ಆತ್ಮ ಸಾಕ್ಷಾತ್ಕಾರದ ದಾರಿಯೇ ಹೊರತು ,ಬೇರೆ ಯಾವ ಮಾರ್ಗವೂ ಇಲ್ಲ.

न वक्ति देहोऽहमिति प्रसुप्तौ न कोपि नाभूवमिति प्रवक्ति।
यत्रोदिते सर्वमुदेति तस्य धियाऽहमः शोधय जन्मदेशम् ॥ २३ ॥
ನ ವಕ್ತಿ ದೇಹೋಽಹಮಿತಿ ಪ್ರಸುಪ್ತೌ

ನ ಕೋಪಿ ನಾಭೂವಮಿತಿ ಪ್ರವಕ್ತಿ|

ಯತ್ರೋದಿತೇ ಸರ್ವಮುದೇತಿ ತಸ್ಯ

ಧಿಯಾಽಹಮಃ ಶೋಧಯ ಜನ್ಮದೇಶಮ್ || ೨೩ ||

ನಿದ್ರೆಮಾಡುತ್ತಿರುವವ, ನಾನೇ ಈ ದೇಹ ಬುದ್ಧಿ ಮನಸ್ಸು ಎಂದು ಯಾರಾದರೂ ಹೇಳುವುದನ್ನು ಕೇಳಿದ್ದೀರಾ? ಅದೇ ರೀತಿ, ಎಚ್ಚರಗೊಂಡವ, ನಾನು ನಿದ್ದೆಯಲ್ಲಿ ಇರಲೇ ಇಲ್ಲ ಎಂದು ಹೇಳುವುದನ್ನು ಕೇಳಿದ್ದೀರಾ? ಅಥವಾ ನಾನು ನಿದ್ದೆಯಲ್ಲಿ ಇರಲಿಲ್ಲ ಎಂದು ಹೇಳುತ್ತಾನೆಯೇ? ಅಹಂಕಾರದ ಆ ಅಹಂ ಸ್ಪುರಣದ ಮೂಲ ಸ್ವರೂಪವನ್ನು ಹುಡುಕಿ, ಆ ತರಂಗಗಳು ಎಲ್ಲಿ ಏಳುತ್ತಿದೆ ಎಂಬುದರ ಬಗ್ಗೆ ವಿಚಾರ ಮಾಡು.

देहो न जानाति सतो न जन्म देहप्रमाणोऽन्य उदेति मध्ये।
अहङ्कृतिग्रन्थिविबन्धसूक्ष्म शरीरचेतोभवजीवनामा ॥ २४ ॥
ದೇಹೋ ನ ಜಾನಾತಿ ಸತೋ ನ ಜನ್ಮ

ದೇಹಪ್ರಮಾಣೋಽನ್ಯ ಉದೇತಿ ಮಧ್ಯೇ|

ಅಹಙ್ಕೃತಿಗ್ರನ್ಥಿವಿಬನ್ಧಸೂಕ್ಷ್ಮ -

ಶರೀರಚೇತೋಭವಜೀವನಾಮಾ || ೨೪ ||

ಹುಟ್ಟಿದ ದೇಹವು ತನ್ನನ್ನು ತಾನು ಅರಿಯಲಾರದು. ಅರಿಯುವ ಆತ್ಮನಿಗೆ ಹುಟ್ಟೇ ಇಲ್ಲ. ಇವೆರಡರ ಮಧ್ಯೆ ಮತ್ತೊಂದು ರೂಪವು, ಮನಸ್ಸು ಮತ್ತು ಬುದ್ಧಿಗೆ ಸಂಭ೦ದಿಸಿದಂತೆ ಏಳುತ್ತದೆ. ಇದನ್ನು ಹೃದಯಗ್ರಂಥಿ, ಅಹಂಸ್ಪುರಣ ಸೂಕ್ಷ್ಮಶರೀರ, ಅಂತಃಕರಣ, ಸಂಸಾರಿ ಜೀವ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

रूपोद्भवो रूपततिप्रतिष्ठो रूपाशनो धूतगृहीतरूपः।
स्वयं विरूपः स्वविचारकाले धावत्यहङ्कारपिशाच एषः ॥ २५ ॥
ರೂಪೋದ್ಭವೋ ರೂಪತತಿಪ್ರತಿಷ್ಠೋ

ರೂಪಾಶನೋ ಧೂತಗೃಹೀತರೂಪಃ|

ಸ್ವಯಂ ವಿರೂಪಃ ಸ್ವವಿಚಾರಕಾಲೇ

ಧಾವತ್ಯಹಙ್ಕಾರಪಿಶಾಚ ಏಷಃ || ೨೫ ||

ಎಲ್ಲ ನಾಮರೂಪಗಳ ಮೂಲ ಸ್ವರೂಪವೇ ಅಹಂಕಾರ. ಈ ನಾಮ ರೂಪಗಳನ್ನು ಸೃಷ್ಟಿಸಿ, ಅದರಲ್ಲೇ ಬಂಧಿತನಾಗಿ ಅದರಲ್ಲೇ ಅಹ೦ಕಾರ ಬೆಳೆಯುತ್ತಾ ಇರುತ್ತದೆ. ಈ ನಾಮ ರೂಪಗಳನ್ನೇ ಹೊರ ಹಾಕಿ ಅವುಗಳನ್ನು ತನ್ನ ಒಳಗೆ ಮತ್ತೆ ಹಿಂದಕ್ಕೆ ಎಳೆದುಕೊಳ್ಳುತ್ತದೆ. ಯಾವಾಗ ಅಹಂಕಾರವು ತನ್ನ ಸ್ವಂತ ಇರುವಿಕೆಯ ಬಗೆಗೆ ಚಿಂತಿಸಲು ಮೊದಲು ಮಾಡುವುದೋ, ಆಗ ಭೂತವಾಗಿ ತಲೆದೋರುತ್ತಿದ್ದ ಅದೇ ಮಾಯವಾಗಿಬಿಡುತ್ತದೆ.

भावेऽहमः सर्वमिदं विभाति लयेऽहमो नैव विभाति किञ्चित्।
तस्मादहंरूपमिदं समस्तं तन्मार्गणं सर्वजयाय मार्गः ॥ २६ ॥
ಭಾವೇಽಹಮಃ ಸರ್ವಮಿದಂ ವಿಭಾತಿ

ಲಯೇಽಹಮೋ ನೈವ ವಿಭಾತಿ ಕಿಞ್ಚಿತ್|

ತಸ್ಮಾದಹಂರೂಪಮಿದಂ ಸಮಸ್ತಂ

ತನ್ಮಾರ್ಗಣಂ ಸರ್ವಜಯಾಯ ಮಾರ್ಗಃ || ೨೬ ||

ಅಹಂಕಾರವು ತಲೆದೋರಿದಾಗ ಜಗತ್ತಿನ ಎಲ್ಲ ನಾಮ ರೂಪಗಳು ಗೋಚರಿಸುತ್ತದೆ. ಅದು ನಿದ್ರಿಸಿದಾಗ(ಅಹಂಕಾರವು) ಏನೂ ಗೋಚರವಾಗದಂತೆ ಇರುತ್ತದೆ. ಅಂದರೆ ಅದು ಸ್ತಬ್ಧವಾಗಿಬಿಡುತ್ತದೆ. ಆದರಿಂದ ಬಾಹ್ಯ ಪ್ರಪ೦ಚದಲ್ಲಿ ತೊರುವ ಮತ್ತು ನಮ್ಮ ಅನುಭವಕ್ಕೆ ಬರುವ ಎಲ್ಲಾ ನಾಮ ರೂಪಗಳು ಅಹಂಕಾರದ ಒಂದು ಆಯಾಮವಲ್ಲದೆ ಮತ್ತೇನೂ ಬೇರೆ ಅಲ್ಲ. ಆದ್ದರಿ೦ದ, ನಾವು ಸಾಧನಾ ಪಥದಲ್ಲಿ ತೊಡಗಿ ತುದಿಯನ್ನು ಮುಟ್ಟಬೇಕಾದರೆ,ಈ ಅಹಂಕಾರದ ಮೂಲವನ್ನು ಹಿಡಿಯುವುದು ಬಹಳ ಅತ್ಯಗತ್ಯ. ಆಗಲೇ ನಾವು ಚಿನ್ಮಾತ್ರ ಸ್ವರೂಪದಲ್ಲಿ ನಿಲ್ಲಬಹುದು, ಏಕೆ೦ದರೆ, ಎಲ್ಲೆಡೆ ಎನೇನು ಇದೆಯೋ ಅದೆಲ್ಲವೂ ಆ ಚಿತ್ ಸ್ವರೂಪದಲ್ಲಿ ಅಡಕವಾಗಿದೆ/..

सत्या स्थितिर्नाहमुदेति यत्र तच्चोदयस्थानगवेषणेन।
विना न नश्येद्यदि तन्न नश्येत् स्वात्मैक्यरूपा कथमस्तु निष्ठा ॥ २७ ॥
ಸತ್ಯಾ ಸ್ಥಿತಿರ್ನಾಹಮುದೇತಿ ಯತ್ರ

ತಚ್ಚೋದಯಸ್ಥಾನಗವೇಷಣೇನ|

ವಿನಾ ನ ನಶ್ಯೇದ್ಯದಿ ತನ್ನ ನಶ್ಯೇತ್

ಸ್ವಾತ್ಮೈಕ್ಯರೂಪಾ ಕಥಮಸ್ತು ನಿಷ್ಠಾ || ೨೭ ||

ಅಹಂಕಾರವು ಸ್ಪುರಿಸದಂತಹ ಸ್ಥಿತಿಯೇ ನಿಮ್ಮ ನಿಜವಾದ ಇರುವಿಕೆ. ಇದರ ಮೂಲವನ್ನು ಹುಡುಕದಿದ್ದರೆ ಅದನ್ನು ನಾಶ ಮಾಡಲು ಆಗುವುದಿಲ್ಲ. ಅದು ನಾಶವಾಗದಿದ್ದಾಗ ಹೇಗೆ ತಾನೇ ನಿಮ್ಮ ಮೂಲ ಇರುವಿಕೆಯ ಏಕತ್ವವನ್ನು ಮತ್ತು ಅದರ ಭಾವನೆಯನ್ನು ಹೊಂದಬಲ್ಲಿರಿ. ಎಲ್ಲವೂ ಆತ್ಮನ ಒಂದು ಅಂಶವೇ ಎಂದು ನೀವು ತಿಳಿಯುವಂತಹ ಸ್ಥಿತಿ ಬರಲು ಅಹಂಕಾರ ನಾಶವೇ ಕಾರಣ.

कूपे यथा गाढजले तथान्तः निमज्ज्य बुद्ध्या शितया नितान्तम्।
प्राणं च वाचं च नियम्य चिन्वन् विन्देन्निजाहङ्कृतिमूलरूपम् ॥ २८ ॥
ಕೂಪೇ ಯಥಾ ಗಾಢಜಲೇ ತಥಾನ್ತಃ

ನಿಮಜ್ಜ್ಯ ಬುದ್ಧ್ಯಾ ಶಿತಯಾ ನಿತಾನ್ತಮ್|

ಪ್ರಾಣಂ ಚ ವಾಚಂ ಚ ನಿಯಮ್ಯ ಚಿನ್ವನ್

ವಿನ್ದೇನ್ನಿಜಾಹಙ್ಕೃತಿಮೂಲರೂಪಮ್ || ೨೮ ||

ಭಾವಿಯಲ್ಲಿ ಹುದುಗಿರುವ ಒಂದು ವಸ್ತುವನ್ನು ಹೊರತರಲು,ನೀವು ಯಾವ ರೀತಿ ಅದರ ಆಳದ ಉದ್ದಕ್ಕೂ ಇರುವ ನೀರಿನಲ್ಲಿ ತಳಕ್ಕೆ ಮುಳುಗುವಿರೋ,ಅದೇ ರೀತಿ ನಿಮ್ಮ ಸೂಕ್ಷ್ಮ ಬುದ್ಧಿಯಿಂದ ನಿಮ್ಮಲ್ಲಿಯೇ ಅಂತರಾಳಕ್ಕೆ ಮುಳುಗಿ ವಾಕ್ ಮತ್ತು ಉಸಿರನ್ನು ನಿರೋಧಿಸಿ, ಅಹಂಕಾರದ ಮೂಲವನ್ನು ಹುಡುಕಿ ತೆಗೆಯಬೇಕು.

मौनेन मज्जन्मनसा स्वमूल चर्चैव सत्यात्मविचारणं स्यात्।
एषोऽहमेतन्न मम स्वरूप मिति प्रमा सत्यविचारणाङ्गम् ॥ २९ ॥
ಮೌನೇನ ಮಜ್ಜನ್ಮನಸಾ ಸ್ವಮೂಲ -

ಚರ್ಚೈವ ಸತ್ಯಾತ್ಮವಿಚಾರಣಂ ಸ್ಯಾತ್|

ಏಷೋಽಹಮೇತನ್ನ ಮಮ ಸ್ವರೂಪ -

ಮಿತಿ ಪ್ರಮಾ ಸತ್ಯವಿಚಾರಣಾಙ್ಗಮ್ || ೨೯ ||

ಮನಸ್ಸು ಸ್ತಬ್ಧವಾದಾಗ, ಅದೇ, ಅದರ ಅ೦ತರಾಳದಲ್ಲಿ ಮುಳುಗಿ ಮೂಲವನ್ನು ಹುಡುಕಲು ಪ್ರಯತ್ನಿಸುತ್ತದೆ. ಇದನ್ನು ಸ್ವ ದರ್ಶನ ಎನ್ನುತ್ತೇವೆ. ನಾನು ದೇಹವಲ್ಲ ಮನಸ್ಸೂ ಅಲ್ಲ ಬುದ್ಧಿ ಅಥವಾ ಜ್ಞಾನವೂ ಅಲ್ಲ,ನಾನು ಬಚ್ಚ ಬರಿಯ ಆತ್ಮಸ್ವರೂಪ ಎಂಬ ಸಣ್ಣ ಸಣ್ಣ ಸೂಚನೆಗಳು ಆತ್ಮದರ್ಶನಕ್ಕೆ ಸಹಕಾರಿಯಾಗಬಲ್ಲದು.

गवेषणात्प्राप्य हृदन्तरं तत् पतेदहन्ता परिभुग्नशीर्षा।
अथाहमन्यत्स्फुरति प्रकृष्टं नाहङ्कृतिस्तत्परमेव पूर्णम् ॥ ३०

ಗವೇಷಣಾತ್ಪ್ರಾಪ್ಯ ಹೃದನ್ತರಂ ತತ್

ಪತೇದಹನ್ತಾ ಪರಿಭುಗ್ನಶೀರ್ಷಾ|

ಅಥಾಹಮನ್ಯತ್ಸ್ಫುರತಿ ಪ್ರಕೃಷ್ಟಂ

ನಾಹಙ್ಕೃತಿಸ್ತತ್ಪರಮೇವ ಪೂರ್ಣಮ್ || ೩೦


ಈ ರೀತಿಯಾದ ಆತ್ಮನ ಹುಡುಕುವಿಕೆಯಿಂದ ಚಿತ್ ಸ್ವರೂಪದ ತಳವು ಯಾವಾಗ ಕಂಡುಬರುತ್ತದೆಯೋ ಆ ಕ್ಷಣದಲ್ಲಿಯೇ ತಲೆದೋರುತ್ತಿರುವ ಅಹಂಕಾರವು ಕಳಚಿ ಬಿಟ್ಟು ನುಚ್ಚು ನೂರಾಗಿ ಬಿಡುತ್ತದೆ. ಆಗ ನಿಮಗೆ ಮತ್ತೊಂದು ‘ನಾನು’ ಗೋಚರವಾಗಿ,, ಅದೇ ಸ್ವಯಂಜ್ಯೋತಿ ಸ್ವರೂಪ ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ.

अहङ्कृतिं यो लसति ग्रसित्वा किं तस्य कार्यं परिशिष्टमस्ति।
किञ्चिद्विजानाति स नात्मनोऽन्यत्तस्य स्थितिं भावयितुं क्षमः कः॥ ३१ ॥
ಅಹಙ್ಕೃತಿಂ ಯೋ ಲಸತಿ ಗ್ರಸಿತ್ವಾ

ಕಿಂ ತಸ್ಯ ಕಾರ್ಯಂ ಪರಿಶಿಷ್ಟಮಸ್ತಿ|

ಕಿಞ್ಚಿದ್ವಿಜಾನಾತಿ ಸ ನಾತ್ಮನೋಽನ್ಯತ್

ತಸ್ಯ ಸ್ಥಿತಿಂ ಭಾವಯಿತುಂ ಕ್ಷಮಃ ಕಃ || ೩೧ ||

ಅಹಂಕಾರವನ್ನು ನಾಶ ಮಾಡಿದಂತಹವನಿಗೆ ಜಗತ್ತಿನಲ್ಲಿ ಯಾವ ಕಾರ್ಯವಾಗಲೀ ಜವಾಬ್ದಾರಿಗಳಾಗಲೀ ಇರುತ್ತದೆಯೇ? ಅಂತಹವನಿಗೆ ಆತ್ಮದ ಹೊರತು, ತನ್ನಿಂದ ಬೇರೆ ಯಾರೂ ಇಲ್ಲ ಎಂಬುದೇ ದೃಡವಾಗಿಬಿಡುತ್ತದೆ. ಆತ್ಮನ ನಿಜವಾದ ಸ್ವರೂಪದ ಬಗ್ಗೆ ತಾನು “ಚಿ೦ತಿಸಿರುವೆ ಮತ್ತು ಆತ್ಮನನ್ನು ಕ೦ಡಿರುವೆ” ಎಂದು ಖಚಿತವಾಗಿ ದೃಡ ಪಡಿಸುವರು ಯಾರಾದರೂ ಇದ್ದಾರೆಯೇ?

आह स्फुटं तत्त्वमसीति वेद स्तथाप्यसंप्राप्य परात्मनिष्ठाम्।
भूयो विचारो मतिदुर्बलत्वं तत्सर्वदा स्वात्मतया हि भाति ॥ ३२ ॥
ಆಹ ಸ್ಫುಟಂ ತತ್ತ್ವಮಸೀತಿ ವೇದ -

ಸ್ತಥಾಪ್ಯಸಂಪ್ರಾಪ್ಯ ಪರಾತ್ಮನಿಷ್ಠಾಮ್|

ಭೂಯೋ ವಿಚಾರೋ ಮತಿದುರ್ಬಲತ್ವಂ

ತತ್ಸರ್ವದಾ ಸ್ವಾತ್ಮತಯಾ ಹಿ ಭಾತಿ || ೩೨ ||

‘ಅದು ನೀನೇ ಆಗಿದ್ದೀಯೆ’ ಅಥವಾ ಅದು ನೀನೇ ಎಂದು ನಿಖರವಾಗಿ ತಿಳಿಸುತ್ತಿದ್ದರೂ ಆತ್ಮನಿಷ್ಠೆ ಇದ್ದರೂ, ನಿನ್ನ ನಿಜ ಸ್ವರೂಪವನ್ನು ಕಂಡುಕೊಳ್ಳದೆ, ಬರಿಯ ಪೊಳ್ಳು ವಾದದಲ್ಲಿ ನಿನ್ನನ್ನು ತೊಡಗಿಸಿಕೊಂಡೆ ಯಾದರೆ, ಅದು ನಿನ್ನ ಮನಸ್ಸಿನ ಸಂಕುಚಿತ ಅವಸ್ಥೆ ಅಥವಾ ಅದರ ದುರ್ಬಲತೆ ಎಂದು ತಿಳಿಯಬೇಕು.( ನನ್ನಲ್ಲಿ ಆತ್ಮಸ್ವರೂಪ ಇದೆಯೋ ಇಲ್ಲವೋ ಎಂಬ ಶಂಕೆ) ಒಂದು ವೇಳೆ ನಿನಗೆ ಅದರಲ್ಲಿ ನಂಬಿಕೆ ಇಲ್ಲದಿದ್ದರೂ ಸಹ ಆತ್ಮನು ನಿನ್ನಲ್ಲಿ ಸದಾ ಬೆಳಗುತ್ತಿರುವುದು ಸತ್ಯವಾದ ವಿಷಯ.


न वेद्म्यहं मामुत वेद्म्यहं मा - मिति प्रवादो मनुजस्य हास्यः।
दृग्दृश्यभेदात्किमयं द्विधात्मा स्वात्मैकतायां हि धियां न भेदाः ॥ ३३ ॥
ನ ವೇದ್ಮ್ಯಹಂ ಮಾಮುತ ವೇದ್ಮ್ಯಹಂ ಮಾ -

ಮಿತಿ ಪ್ರವಾದೋ ಮನುಜಸ್ಯ ಹಾಸ್ಯಃ|

ದೃಗ್ದೃಶ್ಯಭೇದಾತ್ಕಿಮಯಂ ದ್ವಿಧಾತ್ಮಾ

ಸ್ವಾತ್ಮೈಕತಾಯಾಂ ಹಿ ಧಿಯಾಂ ನ ಭೇದಾಃ || ೩೩ ||

ನನಗೆ ಎಲ್ಲವೂ ಗೊತ್ತಿದೆ ಮತ್ತು ನನಗೆ ಏನೂ ತಿಳಿದಿಲ್ಲ ಎನ್ನುವ ಎರಡು ಆಯಾಮಗಳೂ ಬರಿಯ ಮೂಢತನವೇ ಸರಿ. ನೋಡುವವ ಮತ್ತು ನೋಡಲ್ಪಡುವವ ಎಂಬ ಇಬ್ಬರು ಆತ್ಮರು ಎಲ್ಲಾದರೂ ಇದ್ದಾರೆಯೇ? ನಿನಗೆ ಸಾಕ್ಷಾತ್ಕಾರವಾದರೆ ,ಈ ಆತ್ಮ ಒಂದೇ, ಎರಡಲ್ಲ ಎಂಬುದು ಸ್ಪಷ್ಟವಾಗಿಬಿಡುತ್ತದೆ.

हृत्प्राप्यसद्धाम निजस्वरूपे स्वभावसिद्धेऽनुपलभ्य निष्ठाम्।
मायाविलासः सदसत्सरूप विरूपनानैकमुखप्रवादाः ॥ ३४ ॥
ಹೃತ್ಪ್ರಾಪ್ಯಸದ್ಧಾಮ ನಿಜಸ್ವರೂಪೇ

ಸ್ವಭಾವಸಿದ್ಧೇಽನುಪಲಭ್ಯ ನಿಷ್ಠಾಮ್|

ಮಾಯಾವಿಲಾಸಃ ಸದಸತ್ಸರೂಪ -

ವಿರೂಪನಾನೈಕಮುಖಪ್ರವಾದಾಃ || ೩೪ ||

ಎಲ್ಲರ ಮುಖ್ಯ ಧೇಯವು, ಆ ಆತ್ಮನಿಷ್ಠೆಯಲ್ಲಿ ಮುಳುಗಿ ತನ್ನನ್ನು ತಾನು ಕಂಡುಕೊಳ್ಳುವುದೇ ಆಗಿರಬೇಕು. ಮತ್ತೆ ಯಾವ ರೀತಿಯ ಶಕ್ರಿಯನ್ನೂ ಸಂಪಾದಿಸುವ ಪ್ರಯತ್ನ ಮಾಡಬಾರದು. ಏಕೆಂದರೆ ಇಂತಹ ಶಕ್ತಿಗಳು ಬರಿಯ ಭ್ರಮೆ ಮತ್ತು ಕನಸುಗಳು ಅಷ್ಟೆ. ನಿದ್ರೆಯಿಂದ ಎಚ್ಚೆತವ, ತಾನು ನೋಡಿದ ಕನಸು ಸತ್ಯ ಎಂದು ತಿಳಿಸುವುದನ್ನು ನೀವು ನೋಡಿದ್ದೀರಾ? ಅಥವಾ ಸತ್ಯ ದರ್ಶನ ಆದ ಮೇಲೆ ಯಾರಾದರೂ ಈ ಮಾಯೆಯ ಜೀವನ ಮತ್ತು ಪ್ರಪಂಚದ ಜೀವನದಲ್ಲಿ ಮುಳುಗಿರುವುದನ್ನು ಎಂದಾದರೂ ನೋಡಿದ್ದೀರಾ?


सिद्धस्य वित्तिः सत एव सिद्धिः स्वप्नोपमानाः खलु सिद्धयोऽन्याः।
स्वप्नः प्रबुद्धस्य कथं नु सत्यः सति स्थितः किं पुनरेति मायाम् ॥ ३५ ॥
ಸಿದ್ಧಸ್ಯ ವಿತ್ತಿಃ ಸತ ಏವ ಸಿದ್ಧಿಃ

ಸ್ವಪ್ನೋಪಮಾನಾಃ ಖಲು ಸಿದ್ಧಯೋಽನ್ಯಾಃ|

ಸ್ವಪ್ನಃ ಪ್ರಬುದ್ಧಸ್ಯ ಕಥಂ ನು ಸತ್ಯಃ

ಸತಿ ಸ್ಥಿತಃ ಕಿಂ ಪುನರೇತಿ ಮಾಯಾಮ್ || ೩೫ ||

ಆತ್ಮನು ಇರುವನೋ ಇಲ್ಲವೋ ನಿಜವೋ ಸುಳ್ಳೋ ಅವನು ನಾಮ ರೂಪಗಳಿಂದ ಕೂಡಿದುವವನೋ ಇಲ್ಲವೋ ಅಥವಾ ಬರಿಯ ಮಾಯೆಯೋ, ಅವನು ಒಬ್ಬನೋ ಬಹಳ ಜನರೋ ಎಂಬ ಪೊಳ್ಳುಮಾತುಗಳು ಮತ್ತು ವಾದಗಳು ಆ ಚಿನ್ಮಾತ್ರ ಸ್ವರೂಪವನ್ನು ಪಡೆಯದೆ ಇರುವವರ ಹುಸಿ ಮಾತುಗಳು.

सोऽहंविचारो वपुरात्मभावे साहाय्यकारी परमार्गणस्य।
स्वात्मैक्यसिद्धौ स पुनर्निरर्थो यथा नरत्वप्रमितिर्नरस्य ॥ ३६ ॥

ಸೋಽಹಂವಿಚಾರೋ ವಪುರಾತ್ಮಭಾವೇ

ಸಾಹಾಯ್ಯಕಾರೀ ಪರಮಾರ್ಗಣಸ್ಯ|

ಸ್ವಾತ್ಮೈಕ್ಯಸಿದ್ಧೌ ಸ ಪುನರ್ನಿರರ್ಥೋ

ಯಥಾ ನರತ್ವಪ್ರಮಿತಿರ್ನರಸ್ಯ || ೩೬ ||

ಎಲ್ಲೆಇಯವರೆಗೆ ಮನುಷ್ಯನು, ಈ ದೇಹ ಮನಸ್ಸು ಮತ್ತು ಬುದ್ಧಿಗಳಿಂದ ಆವರಿಸಿಕೊ೦ಡು ಇರುವನೋ, ಅಲ್ಲಿಯವರೆಗೆ ಸೋಹಮ್ ಭಾವನೆಯ ನಿಧಿಧ್ಯಾಸನ, ಆತ್ಮನನ್ನು ಪಡೆಯಲು ಸಹಾಯ ವಾಗಬಹುದು. ಆತ್ಮನ ಏಕತ್ವವನ್ನು ಕಂಡು ಕೊಂಡ ಬಳಿಕ, ಈ ರೀತಿಯಾದ ಸೋಹಮ್ ವಿಚಾರ ಅರ್ಥ ಹೀನ ವಾಗಿ ಬಿಡುತ್ತದೆ. ನಾನು ಮನುಷ್ಯ ನಾನು ಮನುಷ್ಯ ಎಂದು ಪದೇ ಪದೇ ಹೇಳಿಕೊಳ್ಳುವ ಸ್ಥಿತಿ ಅರ್ಥಹೀನ,ಮೂಢತನ ಅಲ್ಲವೇ!


द्वैतं विचारे परमार्थबोधे त्वद्वैतमित्येष न साधुवादः।
गवेषणात्प्राग्दशमे विनष्टे पश्चाच्च लब्धे दशमत्वमेकम् ॥ ३७ ॥
ದ್ವೈತಂ ವಿಚಾರೇ ಪರಮಾರ್ಥಬೋಧೇ

ತ್ವದ್ವೈತಮಿತ್ಯೇಷ ನ ಸಾಧುವಾದಃ|

ಗವೇಷಣಾತ್ಪ್ರಾಗ್ದಶಮೇ ವಿನಷ್ಟೇ

ಪಶ್ಚಾಚ್ಚ ಲಬ್ಧೇ ದಶಮತ್ವಮೇಕಮ್ || ೩೭ ||

ಎಲ್ಲಿಯವರೆಗೆ ದ್ವೈತಭಾವ ಇರುವುದೋ ಅಲ್ಲಿಯವರೆಗೆ ನಾವು ಅಜ್ಞಾನಿಗಳು ಮತ್ತು ಜ್ಞಾನ ಬಂದಕೂಡಲೇ ನಾವು ಅದ್ವೈತಿಗಳು ಎಂಬ ಭಾವನೆ ಬಹಳ ತಪ್ಪು ಮತ್ತು ಅಸಮಂಜಸ. ಹತ್ತು ಜನರ ಗುಂಪಿನಲ್ಲಿ ಎಲ್ಲರನ್ನೂ ಎಣಿಸುವಾಗ, ಹತ್ತನೆಯವ ತಮ್ಮಲ್ಲೇ ಇದ್ದರೂ ಇಲ್ಲವೆಂದು ಹುಡುಕುತ್ತಿರುವಂತೆ ಆಗಿಬಿಡುತ್ತದೆ.


करोमि कर्मेति नरो विजानन् बाध्यो भवेत्कर्मफलं च भोक्तुम्।
विचारधूता हृदि कर्तृता चेत् कर्मत्रयं नश्यति सैव मुक्तिः ॥ ३८ ॥
ಕರೋಮಿ ಕರ್ಮೇತಿ ನರೋ ವಿಜಾನನ್

ಬಾಧ್ಯೋ ಭವೇತ್ಕರ್ಮಫಲಂ ಚ ಭೋಕ್ತುಮ್|

ವಿಚಾರಧೂತಾ ಹೃದಿ ಕರ್ತೃತಾ ಚೇತ್

ಕರ್ಮತ್ರಯಂ ನಶ್ಯತಿ ಸೈವ ಮುಕ್ತಿಃ || ೩೮ ||

ನಾನೇ ಎಲ್ಲ ಕಾರ್ಯಗಳನ್ನು ಮಾಡುವವ ಎಂದು ಆಲೋಚಿಸುವವ, ಆಯಾಯ ಫಲಭೋಗದಲ್ಲಿ ಬಂಧಿತನಾಗಿಬಿಡುತ್ತಾನೆ. ಈ ರೀತಿ ಕಾರ್ಯ ಕಾರಣ ಸಂಬಂಧ, ಜನ್ಯ ಜನಕ ಸಂಬಂಧಗಳಲ್ಲಿ ಮುಳುಗಿರುವವ, ಆತ್ಮ ವಿಚಾರವನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ತನ್ನ ಭೋಕ್ತೃತ್ವ ಕತೃತ್ವ ಎಲ್ಲವೂ ನಾಶವಾಗಿ ತನ್ನ ಎಲ್ಲ ಕರ್ಮಗಳು ನಷ್ಟವಾಗಿ, ತನ್ನ ಪೂರ್ಣ ಸ್ವರೂಪದಲ್ಲಿ ತಾನು ನಿಲ್ಲುವುದೇ ಮೋಕ್ಷ. ಇದೇ ಆನಂದ ಮತ್ತು ಬಿಡುಗಡೆ ಎಂಬುದು ಶುದ್ಧ ಸತ್ಯ ಸಂಗತಿ.

बद्धत्वभावे सति मोक्षचिन्ता बन्धस्तु कस्येति विचारणेन।
सिद्धे स्वयं स्वात्मनि नित्यमुक्ते क्वबन्धचिन्ता क्व च मोक्षचिन्ता॥ ३९ ಬದ್ಧತ್ವಭಾವೇ ಸತಿ ಮೋಕ್ಷಚಿನ್ತಾ

ಬನ್ಧಸ್ತು ಕಸ್ಯೇತಿ ವಿಚಾರಣೇನ|

ಸಿದ್ಧೇ ಸ್ವಯಂ ಸ್ವಾತ್ಮನಿ ನಿತ್ಯಮುಕ್ತೇ

ಕ್ವ ಬನ್ಧಚಿನ್ತಾ ಕ್ವ ಚ ಮೋಕ್ಷಚಿನ್ತಾ || ೩೯ ||

ಎಲ್ಲಿಯವರೆಗೆ ಬಂಧನದ ಭೀತಿ ಇರುವುದೋ, ಅಲ್ಲಿಯವರೆಗೆ,ಅದರ ವಿಮೊಚನೆಯೂ ಕಾಡುತ್ತಿರುತ್ತದೆ. ಯಾರಿಗೆ ಈ ಬಂಧನ ಎಂದು ವಿಚಾರಮಾಡಿದ ಕೂಡಲೇ ಆತ್ಮದರ್ಶನಕ್ಕೆ ದಾರಿಯಾಗುತ್ತದೆ. ನೀವೇ ನಿತ್ಯ ಶುದ್ಧ ಮತ್ತು ಆತ್ಮ ವಾಗಿರುವಾಗ ಎಲ್ಲಿಯ ಬಂಧನ ಎಲ್ಲಿಯ ಭೀತಿ?


रूपिण्यरूपिण्युभयात्मिका च मुक्तिस्त्रिरूपेति विदो वदन्ति।
इदं त्रयं या विविनक्त्यहन्धी स्तस्याः प्रणाशः परमार्थमुक्तिः ॥೪೦॥

ರೂಪಿಣ್ಯರೂಪಿಣ್ಯುಭಯಾತ್ಮಿಕಾ ಚ

ಮುಕ್ತಿಸ್ತ್ರಿರೂಪೇತಿ ವಿದೋ ವದನ್ತಿ|

ಇದಂ ತ್ರಯಂ ಯಾ ವಿವಿನಕ್ತ್ಯಹನ್ಧೀ -

ಸ್ತಸ್ಯಾಃ ಪ್ರಣಾಶಃ ಪರಮಾರ್ಥಮುಕ್ತಿಃ ॥೪೦॥

ಜ್ಞಾನಿಗಳು ಮತ್ತು ಸಂತರ ಪ್ರಕಾರ, ಮುಕ್ತಿಯು ಮೂರು ಬಗೆ.

  1. ಜೀವನ್ಮುಕ್ತಿ 2. ವಿದೇಹ ಮುಕ್ತಿ 3. ದೇಹ ಇದ್ದೂ ಇರದಂತಹ ಮುಕ್ತಿ. ಅಹಂಕಾರ ಇರುವವರೆಗೆ ಇವು ಮೂರು ಅವಸ್ಥೆಗಳಾಗಿ ತಿಳಿಯುತ್ತಿರುತ್ತದೆ. ಅಹಂಕಾರದಿಂದ ಬಂದ ಈ ಮೂರು ಅವಸ್ಥೆಗಳು, ಅಹಂಕಾರ ನಾಶವಾದಾಗ ,ಪೂರ್ಣ ಸತ್ ದರ್ಶನ ಆಗುತ್ತದೆ.

सद्दर्शनं द्राविडवाङ्निबद्धं महर्षिणा श्रीरमणेन शुद्धम्।
प्रबन्धमुत्कृष्टममर्त्यवाण्या मनूद्य वासिष्ठमुनिर्व्यतानीत् ॥ ४१ ॥
ಸದ್ದರ್ಶನಂ ದ್ರಾವಿಡವಾಙ್ನಿಬದ್ಧಂ

ಮಹರ್ಷಿಣಾ ಶ್ರೀರಮಣೇನ ಶುದ್ಧಮ್|

ಪ್ರಬನ್ಧಮುತ್ಕೃಷ್ಟಮಮರ್ತ್ಯವಾಣ್ಯಾ -

ಮನೂದ್ಯ ವಾಸಿಷ್ಠಮುನಿರ್ವ್ಯತಾನೀತ್ || ೪೧ ||

ರಮಣಮಹರ್ಷಿಗಳ ಈ ವಾಣಿಯು ಒಂದು ದೀಪದ ಪ್ರಜ್ವಲನೆಯಂತೆ ಎಲ್ಲ ಕಡೆಗೂ ಬೆಳಗುತ್ತಿರುವ ಜ್ಞಾನ ಸ್ವರೂಪವನ್ನು ಬಿಂಬಿಸುತ್ತಿದೆ. ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ದೀಪವಾಗಿ ಬೆಳಗುತ್ತಿದೆ. ಅದ್ದರಿಂದ ಮಹರ್ಷಿಗಳ ದಿವ್ಯ ತೇಜೋಮುಖದಿಂದ ಹೊರಟುಬಂದ ಈ ನಲವತ್ತು ಪದ್ಯಗಳು ಬಹಳ ಉತ್ಕೃಷ್ಟವಾದ ಪದ್ಯಗಳು.

सत्तत्त्वसारं सरलं दधाना मुमुक्षुलोकाय मुदं ददाना।
अमानुषश्रीरमणीयवाणी मयूखभित्तिर्मुनिवाग्विभाति ॥ ४२ ॥

ಸತ್ತತ್ತ್ವಸಾರಂ ಸರಲಂ ದಧಾನಾ

ಮುಮುಕ್ಷುಲೋಕಾಯ ಮುದಂ ದದಾನಾ|

ಅಮಾನುಷಶ್ರೀರಮಣೀಯವಾಣೀ -

ಮಯೂಖಭಿತ್ತಿರ್ಮುನಿವಾಗ್ವಿಭಾತಿ || ೪೨ ||

ಎಲ್ಲೆಡೆ, ಬೆಳಕಿನ ಪರದೆಯ೦ತೆ ಹರಡಿರುವ ಶ್ರೀ ರಮಣ ಮಹರ್ಶಿಗಳ ಈ ದಿವ್ಯ ವಾಣಿಯು ಮನಸ್ಸಿಗೆ ಮುದ ನೀಡುವ ಸತ್ ಸ್ವರೂಪದ ಸರಳ ನಿರೂಪಣೆಯಾಗಿದೆ

…………………………

ಉಪದೇಶ ಸಾರ

ಶ್ರೀ ರಮಣ ಮಹರ್ಷಿ

ಕನ್ನಡ ಭಾವಾನುವಾದ

ರಾಧಾಕೃಷ್ಣನ್ ಗರಣಿ

(ಖಾಸಗಿ ಹ೦ಚಿಕೆಗಾಗಿ ಸೀಮಿತ)

ಈಶ್ವರೋ ಗುರುರಾತ್ಮೇತಿ ಮೂರ್ತಿ ಭೇದ ವಿಭಾಜಿನೇ

ವ್ಯೋಮವತ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ

ईश्वरो गुरुरात्मेति मूर्ति भेद विभाजिने

व्योमवत् व्याप्त देहाय दक्शिणामूर्तये नमः

ದಕ್ಷಿಣಾಮುರ್ತಿ ಸ್ವರೂಪ ರಮಣ ಮಹರ್ಷಿಯೇ ನಮಃ

दक्षिणामुर्ति स्वरूप रमण महर्षिये नमः