०६२ शत्रुघ्न-नियोगः

[ಅರವತ್ತನೆಯ ಸರ್ಗ]

ಭಾಗಸೂಚನಾ

ಶ್ರೀರಾಮನ ಸಭಾಭವನಕ್ಕೆ ಚ್ಯವನರೇ ಮೊದಲಾದ ಮಹರ್ಷಿಗಳ ಆಗಮನ, ಶ್ರೀರಾಮನು ಅವರನ್ನು ಸತ್ಕರಿಸಿ ಅವರ ಆಶಯವನ್ನು ಈಡೇರಿಸಿಕೊಡಲು ಪ್ರತಿಜ್ಞೆ ಮಾಡಿದುದು, ಮಹರ್ಷಿಗಳಿಂದ ಶ್ರೀರಾಮನ ಪ್ರಶಂಸೆ

ಮೂಲಮ್ - 1

ತಯೋಃ ಸಂವದತೋರೇವಂ ರಾಮಲಕ್ಷ್ಮಣಯೋಸ್ತದಾ ।
ವಾಸಂತಿಕೀ ನಿಶಾ ಪ್ರಾಪ್ತಾ ನ ಶೀತಾ ನ ಚ ಘರ್ಮದಾ ॥

ಅನುವಾದ

ಶ್ರೀರಾಮ - ಲಕ್ಷ್ಮಣರು ಪರಸ್ಪರವಾಗಿ ಮಾತನಾಡಿ ಕೊಳ್ಳುತ್ತಾ ಪ್ರಜೆಗಳ ರಕ್ಷಣೆಯಲ್ಲಿ ನಿರತರಾಗಿದ್ದರು. ಆಗ ವಸಂತ ಋತುವು ಪ್ರಾರಂಭವಾಯಿತು. ಅದರಲ್ಲಿ ಹೆಚ್ಚು ಚಳಿಯಾಗಲೀ ಸೆಕೆಯಾಗಲಿ ಇರಲಿಲ್ಲ.॥1॥

ಮೂಲಮ್ - 2

ತತಃ ಪ್ರಭಾತೇ ವಿಮಲೇ ಕೃತಪೌರ್ವಾಹ್ಣಿಕಕ್ರಿಯಃ ।
ಅಭಿಚಕ್ರಾಮ ಕಾಕುತ್ಸ್ಥೌ ದರ್ಶನಂ ಪೌರಕಾರ್ಯವಿತ್ ॥

ಅನುವಾದ

ಒಂದು ದಿನ ನಿರ್ಮಲ ಪ್ರಭಾತ ಕಾಲ ಬಂದಾಗ ಪುರವಾಸಿಗಳ ಕಾರ್ಯವನ್ನು ತಿಳಿಯುವ ಶ್ರೀರಾಮನು ಬೆಳಗಿನ ನಿತ್ಯಕರ್ಮ ಸಂಧ್ಯಾವಂದನಾದಿಗಳಿಂದ ನಿವೃತ್ತನಾಗಿ ಹೊರಗೆ ಸಭಾ ಭವನಕ್ಕೆ ಬಂದನು.॥2॥

ಮೂಲಮ್ - 3

ತತಃ ಸುಮಂತ್ರಸ್ತ್ವಾಗಮ್ಯ ರಾಘವಂ ವಾಕ್ಯಮಬ್ರವೀತ್ ।
ಏತೇ ಪ್ರತಿಹತಾ ರಾಜನ್ದ್ವ್ವಾರಿ ತಿಷ್ಠಂತಿ ತಾಪಸಾಃ ॥

ಮೂಲಮ್ - 4

ಭಾರ್ಗವಂ ಚ್ಯವನಂ ಚೈವ ಪುರಸ್ಕೃತ್ಯ ಮಹರ್ಷಯಃ ।
ದರ್ಶನಂ ತೇ ಮಹಾರಾಜ ಚೋದಯಂತಿ ಕೃತತ್ವರಾಃ ॥

ಅನುವಾದ

ಆಗಲೇ ಸುಮಂತ್ರನು ಬಂದು ಶ್ರೀರಾಮಚಂದ್ರನಲ್ಲಿ ಹೇಳಿದನು - ರಾಜನೇ! ತಪಸ್ವೀ ಮಹರ್ಷಿಗಳು ಭೃಗುಪುತ್ರ ಚ್ಯವನ ಮುನಿಯನ್ನು ಮುಂದೆಮಾಡಿ ಮಹಾದ್ವಾರದಲ್ಲಿ ನಿಂತಿರುವರು. ದ್ವಾರಪಾಲಕರು ಒಳಗೆ ಬರಲು ತಡೆದಿದ್ದಾರೆ. ಮಹಾರಾಜ! ಇವರು ನಿಮ್ಮ ದರ್ಶನಕ್ಕಾಗಿ ಅವಸರ ಮಾಡುತ್ತಿದ್ದಾರೆ. ಇವರು ತಮ್ಮ ಆಗಮನವನ್ನು ನಿಮಗೆ ತಿಳಿಸಲು ಪದೇ-ಪದೇ ಒತ್ತಾಯಿಸುತ್ತಿದ್ದಾರೆ.॥3-4॥

ಮೂಲಮ್ - 5½

ಪ್ರೀಯಮಾಣಾನರವ್ಯಾಘ್ರ ಯಮುನಾತೀರವಾಸಿನಃ ।
ತಸ್ಯ ತದ್ವಚನಂ ಶ್ರುತ್ವಾ ರಾಮಃ ಪ್ರೋವಾಚಧರ್ಮವಿತ್ ॥
ಪ್ರವೇಶ್ಯಂತಾಂ ಮಹಾಭಾಗಾ ಭಾರ್ಗವಪ್ರಮುಖಾ ದ್ವಿಜಾಃ ।

ಅನುವಾದ

ಪುರುಷಸಿಂಹನೇ! ಇವರೆಲ್ಲ ಮಹರ್ಷಿಗಳು ಯಮುನಾ ತೀರದಲ್ಲಿ ವಾಸಿಸುತ್ತಿದ್ದಾರೆ ಹಾಗೂ ನಿಮ್ಮಲ್ಲಿ ವಿಶೇಷ ಪ್ರೇಮವಿಟ್ಟಿರುವರು. ಸುಮಂತ್ರನ ಮಾತನ್ನು ಕೇಳಿ ಧರ್ಮಜ್ಞ ಶ್ರೀರಾಮನು ಹೇಳಿದನು - ಸೂತನೇ! ಭಾರ್ಗವ ಚ್ಯವನಾದಿ ಎಲ್ಲ ಮಹಾತ್ಮಾ ಬ್ರಹ್ಮರ್ಷಿಗಳನ್ನು ಒಳಗೆ ಕರೆದು ಬಾ.॥5½॥

ಮೂಲಮ್ - 6½

ರಾಜ್ಞಸ್ತ್ವಾಜ್ಞಾಂ ಪುರಸ್ಕೃತ್ಯ ದ್ವಾಃಸ್ಥೋ ಮೂರ್ಧ್ನಾ ಕೃತಾಂಜಲಿಃ ॥
ಪ್ರವೇಶಯಾಮಾಸ ತದಾ ತಾಪಸಾನ್ಸುದುರಾಸದಾನ್ ।

ಅನುವಾದ

ರಾಜನ ಆಜ್ಞೆಯನ್ನು ಶಿರಸಾವಹಿಸಿ ದ್ವಾರಪಾಲಕನು ಶಿರದ ಮೇಲೆ ಅಂಜಲೀಬದ್ಧನಾಗಿ ಆ ಅತ್ಯಂತ ದುರ್ಜಯ ತೇಜಸ್ವೀ ತಾಪಸರನ್ನು ರಾಜಸಭೆಗೆ ಕರೆತಂದನು.॥6½॥

ಮೂಲಮ್ - 7

ಶತಂ ಸಮಧಿಕಂ ತತ್ರ ದೀಪ್ಯಮಾನಂ ಸ್ವತೇಜಸಾ ॥
ಪ್ರವಿಷ್ಟಂ ರಾಜಭವನಂ ತಾಪಸಾನಾಂ ಮಹಾತ್ಮನಾಮ್ ।

ಮೂಲಮ್ - 8½

ತೇ ದ್ವಿಜಾಃ ಪೂರ್ಣಕಲಶೈಃ ಸರ್ವತೀರ್ಥಾಂಬುಸತ್ತೃತೈಃ ॥
ಗೃಹೀತ್ವಾ ಫಲಮೂಲಂ ಚ ರಾಮಸ್ಯಾಭ್ಯಾಹರನ್ಬಹು ।

ಅನುವಾದ

ನೂರಕ್ಕಿಂತಲೂ ಹೆಚ್ಚಾಗಿದ್ದ ಆ ತಪಸ್ವೀ ಮಹಾತ್ಮರೆಲ್ಲರೂ ತಮ್ಮ ತೇಜದಿಂದ ಪ್ರಕಾಶಿತರಾಗಿದ್ದರು. ಅವರೆಲ್ಲರೂ ರಾಜ ಸಭೆಯನ್ನು ಪ್ರವೇಶಿಸಿ, ಸಮಸ್ತ ತೀರ್ಥಗಳಿಂದ ತುಂಬಿದ ಕಲಶಗಳೊಂದಿಗೆ ಅನೇಕ ಫಲಮೂಲಗಳನ್ನು ಶ್ರೀರಾಮಚಂದ್ರನಿಗೆ ಕಾಣಿಕೆಯಾಗಿ ಅರ್ಪಿಸಿದರು.॥7-8½॥

ಮೂಲಮ್ - 9

ಪ್ರತಿಗೃಹ್ಯ ತು ತತ್ಸರ್ವಂ ರಾಮಃ ಪ್ರೀತಿಪುರಸ್ಕೃತಃ ॥

ಮೂಲಮ್ - 10

ತೀರ್ಥೋದಕಾನಿಸರ್ವಾಣಿ ಫಲಾನಿ ವಿವಿಧಾನಿ ಚ ।
ಉವಾಚ ಚ ಮಹಾಬಾಹುಃ ಸರ್ವಾನೇನ ಮಹಾಮುನೀನ್ ॥

ಅನುವಾದ

ಮಹಾ ಬಾಹು ಶ್ರೀರಾಮನು ತುಂಬಾ ಸಂತೋಷದಿಂದ ಅದೆಲ್ಲ ಕಾಣಿಕೆ ಎಲ್ಲ ತೀರ್ಥಜಲ, ನಾನಾ ರೀತಿಯ ಫಲಗಳನ್ನು ಸ್ವೀಕರಿಸಿ ಎಲ್ಲ ಮಹಾಮುನಿಗಳಲ್ಲಿ ಹೇಳಿದನು.॥9-10॥

ಮೂಲಮ್ - 11½

ಇಮಾನ್ಯಾಸನಮುಖ್ಯಾನಿ ಯಥಾರ್ಹಮುಪವಿಶ್ಯತಾಮ್ ।
ರಾಮಸ್ಯ ಭಾಷಿತಂ ಶ್ರುತ್ವಾ ಸರ್ವ ಏವಮಹರ್ಷಯಃ ॥
ಬೃಸೀಷು ರುಚಿರಾಖ್ಯಾಸುನಿಷೇದುಃ ಕಾಂಚನೀಷು ತೇ ।

ಅನುವಾದ

ಮಹಾತ್ಮರೇ! ಇದೋ ಉತ್ತಮೋತ್ತಮ ಆಸನ ಸಿದ್ಧವಿದೆ, ನೀವು ಯಥಾಯೋಗ್ಯ ಆಸನಗಳಲ್ಲಿ ಆಸೀನರಾಗಿರಿ. ಶ್ರೀರಾಮನ ಮಾತನ್ನು ಕೇಳಿ ಮಹರ್ಷಿಗಳೆಲ್ಲರೂ ಶೋಭಾಸಂಪನ್ನ ಸ್ವರ್ಣ ಆಸನಗಳಲ್ಲಿ ಕುಳಿತುಕೊಂಡರು.॥11½॥

ಮೂಲಮ್ - 12

ಉಪವಿಷ್ಟಾನೃಷೀಂಸ್ತತ್ರ ದೃಷ್ಟ್ವಾ ಪರಪುರಂಜಯಃ ।
ಪ್ರಯತಃ ಪ್ರಾಂಜಲಿರ್ಭೂತ್ವಾ ರಾಘವೋ ವಾಕ್ಯಮಬ್ರವೀತ್ ॥

ಅನುವಾದ

ಮಹರ್ಷಿಗಳು ಆಸನಗಳಲ್ಲಿ ವಿರಾಜಮಾನರಾಗಿರುವುದನ್ನು ಕಂಡು ಪರಪುರಂಜಯ ಶ್ರೀರಘುನಾಥನು ಕೈಮುಗಿದು ಕೊಂಡು ವಿನೀತನಾಗಿ ಹೇಳಿದನು.॥12॥

ಮೂಲಮ್ - 13

ಕಿಮಾಗಮನಕಾರ್ಯಂ ವಃ ಕಿಂ ಕರೋಮಿ ಸಮಾಹಿತಃ ।
ಆಜ್ಞಾಪ್ಯೋಽಹಂ ಮಹರ್ಷೀಣಾಂ ಸರ್ವಕಾಮಕರಃ ಸುಖಮ್ ॥

ಅನುವಾದ

ಮಹರ್ಷಿಗಳೇ! ಯಾವ ಕಾರ್ಯಕ್ಕಾಗಿ ತಮ್ಮ ಶುಭಾಗಮನ ಇಲ್ಲಿಗೆ ಆಗಿದೆ? ನಾನು ಏಕಾಗ್ರಚಿತ್ತನಾಗಿ ನಿಮ್ಮ ಯಾವ ಸೇವೆ ಮಾಡಲಿ? ಈ ಸೇವಕನು ನಿಮ್ಮ ಆಜ್ಞೆಯನ್ನು ಪಡೆಯಲು ಯೋಗ್ಯನಾಗಿದ್ದೇನೆ. ಆದೇಶ ಪಡೆದು ನಾನು ಸುಖವಾಗಿ ನಿಮ್ಮ ಎಲ್ಲ ಇಚ್ಛೆಗಳನ್ನು ಪೂರ್ಣಗೊಳಿಸಬಲ್ಲೆನು.॥13॥

ಮೂಲಮ್ - 14

ಇದಂ ರಾಜ್ಯಂ ಚ ಸಕಲಂ ಜೀವಿತಂ ಚ ಹೃದಿಸ್ಥಿತಮ್ ।
ಸರ್ವಮೇತದ್ವಜಾರ್ಥಂ ಮೇ ಸತ್ಯಮೇತದ್ಬ್ರವೀಮಿ ವಃ ॥

ಅನುವಾದ

ಈ ಇಡೀ ರಾಜ್ಯ, ಈ ಹೃದಯದಲ್ಲಿ ವಿರಾಜಮಾನ ಜೀವಾತ್ಮಾ, ನನ್ನ ಸಮಸ್ತ ವೈಭವ ಬ್ರಾಹ್ಮಣರ ಸೇವೆಗಾಗಿಯೇ ಇದೆ; ಇದನ್ನು ನಾನು ನಿಮ್ಮ ಮುಂದೆ ನಿಜವಾಗಿ ಹೇಳುತ್ತಿದ್ದೇನೆ.॥14॥

ಮೂಲಮ್ - 15

ತಸ್ಯ ತದ್ವಚನಂ ಶ್ರುತ್ವಾ ಸಾಧುಕಾರೋ ಮಹಾನಭೂತ್ ।
ಋಷೀಣಾಮುಗ್ರತಪಸಾಂ ಯಮುನಾತೀರವಾಸಿನಾಮ್ ॥

ಅನುವಾದ

ಶ್ರೀರಘುನಾಥನ ಮಾತನ್ನು ಕೇಳಿ ಆ ಯಮುನಾತೀರ ನಿವಾಸೀ ಉಗ್ರ ತಪಸ್ವೀ ಮಹರ್ಷಿಗಳು ಉಚ್ಚಸ್ವರದಿಂದ ಸಾಧುವಾದವನ್ನು ಉಚ್ಚರಿಸಿದರು.॥15॥

ಮೂಲಮ್ - 16

ಊಚುಶ್ಚೈವ ಮಹಾತ್ಮಾನೋ ಹರ್ಷೇಣ ಮಹತಾ ವೃತಾಃ ।
ಉಪಪನ್ನಂ ನರಶ್ರೇಷ್ಠ ತವೈವ ಭುವಿ ನಾನ್ಯತಃ ॥

ಅನುವಾದ

ಮತ್ತೆ ಆ ಮಹಾತ್ಮರು ಬಹಳ ಹರ್ಷದೊಂದಿಗೆ ಹೇಳಿದರು - ನರಶ್ರೇಷ್ಠ! ಇಂತಹ ಮಾತುಗಳು ಈ ಭೂಮಂಡಲದಲ್ಲಿ ನಿನಗೇ ಯೋಗ್ಯವಾಗಿದೆ. ಬೇರೆ ಯಾರೂ ಹೀಗೆ ಹೇಳಲಾರರು.॥16॥

ಮೂಲಮ್ - 17

ಬಹವಃ ಪಾರ್ಥಿವಾ ರಾಜನ್ನತಿಕ್ರಾಂತಾ ಮಹಾಬಲಾಃ ।
ಕಾರ್ಯಸ್ಯ ಗೌರವಂ ಮತ್ವಾ ಪ್ರತಿಜ್ಞಾಂ ನಾಭ್ಯರೋಚಯನ್ ॥

ಅನುವಾದ

ರಾಜನೇ! ನಾವು ಅನೇಕ ಮಹಾಬಲಿ ರಾಜರ ಬಳಿಗೆ ಹೋದೆವು; ಆದರೆ ಅವರು ಕಾರ್ಯದ ಗೌರವವನ್ನು ತಿಳಿದು ಕೇಳಿದ ಮೇಲೆ ಮಾಡುವೆವು ಎಂದು ಹೇಳಿ ಇಂತಹ ಪ್ರತಿಜ್ಞೆ ಮಾಡಲು ಮುಂದಾಗಲಿಲ್ಲ.॥17॥

ಮೂಲಮ್ - 18

ತ್ವಯಾ ಪುನರ್ಬ್ರಾಹ್ಮಣಗೌರವಾದಿಯಂ
ಕೃತಾ ಪ್ರತಿಜ್ಞಾ ಹ್ಯನವೇಕ್ಷ್ಯ ಕಾರಣಮ್ ।
ತತಶ್ಚ ಕರ್ತಾ ಹ್ಯಸಿ ನಾತ್ರ ಸಂಶಯೋ
ಮಹಾಭಯಾತ್ತ್ರಾತುಮೃಷೀಂಸ್ತ್ವಮರ್ಹಸಿ ॥

ಅನುವಾದ

ಆದರೆ ನೀನು ನಾವು ಬಂದಿರುವ ಕಾರಣ ತಿಳಿಯದೆಯೇ, ಕೇವಲ ಬ್ರಾಹ್ಮಣರ ಕುರಿತು ಆದರ ಭಾವ ಇರುವುದರಿಂದ ನಮ್ಮ ಕೆಲಸ ಮಾಡುವ ಪ್ರತಿಜ್ಞೆ ಮಾಡಿರುವೆ. ಇದರಿಂದ ನೀನು ಅವಶ್ಯವಾಗಿ ಈ ಕಾರ್ಯ ಮಾಡಬಲ್ಲೆ, ಇದರಲ್ಲಿ ಸಂಶಯವೇ ಇಲ್ಲ. ನೀನೇ ಮಹಾಭಯದಿಂದ ಋಷಿಗಳನ್ನು ಕಾಪಾಡಬಲ್ಲೆ.॥18॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಅರವತ್ತನೆಯ ಸರ್ಗ ಪೂರ್ಣವಾಯಿತು. ॥60॥

ಅನುವಾದ