०३६ बल-विस्मृतिः

[ಮೂವತ್ತಾರನೆಯ ಸರ್ಗ]

ಭಾಗಸೂಚನಾ

ಬ್ರಹ್ಮಾದಿ ದೇವತೆಗಳು ಹನುಮಂತನನ್ನು ಜೀವಂತಗೊಳಿಸಿ, ಅವನಿಗೆ ನಾನಾ ಪ್ರಕಾರದ ವರಗಳನ್ನು ಅನುಗ್ರಹಿಸಿದುದು, ವಾಯುದೇವರು ಪುತ್ರನನ್ನು ಕರೆದುಕೊಂಡು ಅಂಜನಾದೇವಿಯ ಬಳಿಗೆ ಹೋದುದು, ಋಷಿಗಳ ಶಾಪದಂತೆ ಹನುಮಂತನಿಗೆ ತನ್ನ ಬಲದ ವಿಸ್ಮೃತಿ, ಶ್ರೀರಾಮನು ಅಗಸ್ತ್ಯರೇ ಮೊದಲಾದ ಮಹರ್ಷಿಗಳಿಗೆ ತಾನು ಮಾಡಲಿರುವ ಯಜ್ಞಕ್ಕೆ ಬರಲು ಆಹ್ವಾನಿಸಿದುದು, ಅಗಸ್ತ್ಯಾದಿ ಮುನಿಗಳ ಪ್ರಯಾಣ

ಮೂಲಮ್ - 1

ತತಃ ಪಿತಾಮಹಂ ದೃಷ್ಟ್ವಾ ವಾಯುಃ ಪುತ್ರವಧಾರ್ದಿತಃ ।
ಶಿಶುಕಂ ತಂ ಸಮಾದಾಯ ಉತ್ತಸ್ಥೌ ಧಾತುರಗ್ರತಃ ॥

ಅನುವಾದ

ರಾಘವ ! ಪುತ್ರನು ವಜ್ರಾಘಾತದಿಂದ ಮರಣ ಹೊಂದಿರಲು ವಾಯುವಿಗೆ ಬಹಳ ದುಃಖವಾಯಿತು. ಅವನು ಮಗುವನ್ನೆತ್ತಿಕೊಂಡು ಬ್ರಹ್ಮನ ಮುಂದೆ ನಿಂತನು.॥1॥

ಮೂಲಮ್ - 2

ಚಲಕುಂಡಲಮೌಲಿಸ್ರಕ್ ತಪನೀಯವಿಭೂಷಣಃ ।
ಪಾದಯೋರ್ನ್ಯಪತದ್ವಾಯುಸ್ತ್ರಿರುಪಸ್ಥಾಯ ವೇಧಸೇ ॥

ಅನುವಾದ

ಕಿವಿಗಳಲ್ಲಿ ಅಳ್ಳಾಡುವ ಕುಂಡಲಗಳಿಂದಲೂ, ಕಿರೀಟದಿಂದಲೂ, ಕತ್ತಿನಲ್ಲಿದ ಚಿನ್ನದ ಹಾರದಿಂದಲೂ, ಸ್ವರ್ಣಾಭೂಷಣಗಳಿಂದಲೂ ವಿಭೂಷಿತನಾದ ವಾಯುದೇವರು ಬ್ರಹ್ಮನಿಗೆ ಮೂರುಬಾರಿ ಪ್ರದಕ್ಷಿಣೆ ಮಾಡಿ ಕಾಲಿಗೆ ಬಿದ್ದು ನಮಸ್ಕರಿಸಿದನು.॥2॥

ಮೂಲಮ್ - 3

ತಂ ತು ವೇದವಿದಾತೇನ ಲಂಬಾಭರಣಶೋಭಿನಾ ।
ವಾಯುಮುತ್ಥಾಪ್ಯ ಹಸ್ತೇನ ಶಿಶುಂ ತಂ ಪರಿಮೃಷ್ಟವಾನ್ ॥

ಅನುವಾದ

ವೇದವೇತ್ತರಾದ ಬ್ರಹ್ಮದೇವರು ತಮ್ಮ ಆಭರಣಭೂಷಿತ ದೀರ್ಘಬಾಹುಗಳನ್ನು ಚಾಚಿ, ವಾಯುದೇವರನ್ನು ಎಬ್ಬಿಸಿ, ಅವನ ಶಿಶುವಿನ ಮೇಲೆಯೂ ಕೈಯಾಡಿಸಿದರು.॥3॥

ಮೂಲಮ್ - 4

ಸ್ಪೃಷ್ಟಮಾತ್ರಸ್ತತಃ ಸೋಽಥ ಸಲೀಲಂ ಪದ್ಮಜನ್ಮನಾ ।
ಜಲಸಿಕ್ತಂ ಯಥಾ ಸಸ್ಯಂ ಪುನರ್ಜೀವಿತಮಾಪ್ತವಾನ್ ॥

ಅನುವಾದ

ನೀರುಣಿಸಿದ ಒಣಗಿತ ಪೈರು ನಳನಳಿಸುವಂತೆ ಕಮಲಯೋನೀ ಬ್ರಹ್ಮದೇವರ ಲೀಲೆಯಿಂದ ಕೈಯ್ಯ ಸ್ಪರ್ಶವಾಗುತ್ತಲೇ ಶಿಶು ಹನುಮಂತನು ಪುನಃ ಜೀವಿತನಾದನು.॥4॥

ಮೂಲಮ್ - 5

ಪ್ರಾಣವಂತಮಿಮಂ ದೃಷ್ಟ್ವಾ ಪ್ರಾಣೋಗಂಧವಹೋ ಮುದಾ ।
ಚಚಾರ ಸರ್ವಭೂತೇಷು ಸಂನಿರುದ್ಧಂ ಯಥಾ ಪುರಾ ॥

ಅನುವಾದ

ಹನುಮಂತನು ಜೀವಿತನಾದುದನ್ನು ನೋಡಿ ಜಗತ್ತಿಗೆ ಪ್ರಾಣಸ್ವರೂಪ ಗಂಧವಾಹ ವಾಯುದೇವರು ಸಮಸ್ತ ಪ್ರಾಣಿಗಳೊಳಗೆ ನಿಂತು ಹೋದ ಪ್ರಾಣವಾಯು ಹಿಂದಿನಂತೆ ಸಂಚರಿಸತೊಡಗಿದನು.॥5॥

ಮೂಲಮ್ - 6

ಮರುದ್ರೋಧಾದ್ವಿನಿರ್ಮುಕ್ತಾಸ್ತಾಃ ಪ್ರಜಾ ಮುದಿತಾಽಭವನ್ ।
ಶೀತವಾತವಿನಿರ್ಮುಕ್ತಾಃ ಪದ್ಮಿನ್ಯ ಇವ ಸಾಂಬುಜಾಃ ॥

ಅನುವಾದ

ಹಿಮಯುಕ್ತ ವಾಯುವಿನ ಆಘಾತದಿಂದ ಮುಕ್ತವಾಗಿ ಅರಳಿದ ಕಮಲಗಳಿಂದ ಕೂಡಿದ ಪುಷ್ಕರಿಣಿಗಳು ಶೋಭಿಸುವಂತೆ ವಾಯುವಿನ ತಡೆಯಿಂದ ಬಿಡುಗಡೆ ಹೊಂದಿ ಎಲ್ಲ ಪ್ರಜೆಗಳು ಸಂತಸಗೊಂಡರು.॥6॥

ಮೂಲಮ್ - 7

ತತಸ್ತ್ರಿ ಯುಗ್ಮಸ್ತ್ರಿ ಕಕುತ್ರಿಧಾಮಾ ತ್ರಿದಶಾರ್ಚಿತಃ ।
ಉವಾಚ ದೇವತಾ ಬ್ರಹ್ಮಾ ಮಾರುತಪ್ರಿಯಕಾಮ್ಯಯಾ ॥

ಅನುವಾದ

ಅನಂತರ ಮೂರು ಜೋಡಿಗಳಿಂದ1 ಸಂಪನ್ನವಾದ ತ್ರಿಮೂರ್ತಿ ಸ್ವರೂಪನಾದ2 ತ್ರಿಲೋಕವಾಸಿಯಾದ ಮೂರು ಅವಸ್ಥೆಗಳಿಂದ3 ಕೂಡಿದ ದೇವತೆಗಳಿಂದ ಪೂಜಿತ ಬ್ರಹ್ಮನು ವಾಯುವಿನ ಪ್ರಿಯಮಾಡಲು ದೇವತೆಗಳಲ್ಲಿ ಹೇಳಿದನು.॥7॥

ಟಿಪ್ಪನೀ
  1. ಮೂರು ಜೋಡಿಗಳ ತಾತ್ಪರ್ಯ - ಆರು ಐಶ್ವರ್ಯದೊಂದಿಗೆ ಇದೆ. ಐಶ್ವರ್ಯ, ಧರ್ಮ, ಯಶ, ಶ್ರೀ, ಜ್ಞಾನ, ವೈರಾಗ್ಯ ಇವು ಆರು ಐಶ್ವರ್ಯಗಳು. 2. ಬ್ರಹ್ಮಾ, ವಿಷ್ಣು, ಶಿವ - ಇವು ತ್ರಿಮೂರ್ತಿಗಳು. 3. ಬಾಲ್ಯ, ಪೌಗಂಡ, ಕೌಶೋರ - ಇವೇ ದೇತೆಗಳ ಮೂರು ಅವಸ್ಥೆಗಳು.
ಮೂಲಮ್ - 8

ಭೋಮಹೇಂದ್ರಾಗ್ನಿವರುಣಾ ಮಹೇಶ್ವರಧನೇಶ್ವರಾಃ ।
ಜಾನತಾಮಪಿ ವಃ ಸರ್ವಂ ವಕ್ಷ್ಯಾಮಿ ಶ್ರೂಯತಾಂ ಹಿತಮ್ ॥

ಅನುವಾದ

ಇಂದ್ರ, ಅಗ್ನಿ, ವರುಣ, ಮಹಾದೇವ, ಕುಬೇರಾದಿಗಳೇ! ನೀವೆಲ್ಲರೂ ತಿಳಿದಿದ್ದರೂ ನಾನು ನಿಮ್ಮ ಹಿತದ ಎಲ್ಲ ಮಾತನ್ನು ತಿಳಿಸುವೆನು, ಕೇಳಿರಿ.॥8॥

ಮೂಲಮ್ - 9

ಅನೇನ ಶಿಶುನಾ ಕಾರ್ಯಂ ಕರ್ತವ್ಯಂ ವೋ ಭವಿಷ್ಯತಿ ।
ತದ್ದದಧ್ವಂ ವರಾನ್ಸರ್ವೇ ಮಾರುತಸ್ಯಾಸ್ಯ ತುಷ್ಟಯೇ ॥

ಅನುವಾದ

ಈ ಬಾಲಕನಿಂದ ಭವಿಷ್ಯದಲ್ಲಿ ನಿಮ್ಮ ಬಹಳಷ್ಟು ಕಾರ್ಯಸಿದ್ಧವಾಗುವುದು. ಆದ್ದರಿಂದ ವಾಯುದೇವತೆಯ ಸಂತೋಷಕ್ಕಾಗಿ ನೀವೆಲ್ಲರೂ ಇವನಿಗೆ ವರವನ್ನು ಕೊಡಿರಿ.॥9॥

ಮೂಲಮ್ - 10

ತತಃ ಸಹಸ್ರನಯನಃ ಪ್ರೀತಿಯುಕ್ತಃ ಶುಭಾನನಃ ।
ಕುಶೇಶಯಮಯೀಂ ಮಾಲಾಮುತ್ಕ್ಷೇಪ್ಯೇದಂ ವಚೋಬ್ರವೀತ್ ॥

ಅನುವಾದ

ಆಗ ಸುಂದರಮುಖವುಳ್ಳ ಸಹಸ್ರನೇತ್ರನಾದ ಇಂದ್ರನು ಶಿಶು ಹನುಮಂತನ ಕೊರಳಿಗೆ ಸಂತೋಷ ದಿಂದ ಕಮಲದ ಮಾಲೆಯನ್ನು ತೊಡಿಸಿ ಹೀಗೆ ಹೇಳಿದನು.॥10॥

ಮೂಲಮ್ - 11

ಮತ್ಕರೋತ್ಸೃಷ್ಟವಜ್ರೇಣ ಹನುರಸ್ಯ ಯಥಾ ಹತಃ ।
ನಾಮ್ನಾ ವೈ ಕಪಿಶಾರ್ದೂಲೋ ಭವಿತಾ ಹನುಮಾನಿತಿ ॥

ಅನುವಾದ

ನಾನು ಪ್ರಯೋಗಿಸಿದ ವಜ್ರಾಯುಧದಿಂದ ಈ ಬಾಲಕನ ದವಡೆ (ಹನು)ಯು ಮುರಿದ ಕಾರಣ ಈ ಕಪಿಶ್ರೇಷ್ಠನ ಹೆಸರು ಹನುಮಂತ ಎಂದೇ ಆಗುವುದು.॥11॥

ಮೂಲಮ್ - 12

ಅಹಮಸ್ಯಪ್ರದಾಸ್ಯಾಮಿ ಪರಮಂ ವರಮದ್ಭುತಮ್ ।
ಇತಃಪ್ರಭೃತಿ ವಜ್ರಸ್ಯ ಮಮಾವಧ್ಯೋ ಭವಿಷ್ಯತಿ ॥

ಅನುವಾದ

ಇದಲ್ಲದೆ ಇಂದಿನಿಂದ ಇವನು ನನ್ನ ವಜ್ರಾಯುಧದಿಂದಲೂ ಕೊಲ್ಲಲಾರನು ಎಂಬ ಇನ್ನೊಂದು ವರವನ್ನೂ ಇವನಿಗೆ ಕೊಡುತ್ತೇನೆ.॥12॥

ಮೂಲಮ್ - 13

ಮಾರ್ತಂಡಸ್ತ್ವಬ್ರವೀತ್ತತ್ರ ಭಗವಾಂಸ್ತಿಮಿರಾಪಹಃ ।
ತೇಜಸೋಸ್ಯ ಮದೀಯಸ್ಯ ದದಾಮಿ ಶತಿಕಾಂಕಲಾಮ್ ॥

ಅನುವಾದ

ಬಳಿಕ ಅಂಧಕಾರ ನಾಶಕನಾದ ಭಗವಾನ್ ಸೂರ್ಯನು-ನಾನು ಇವನಿಗೆ ನನ್ನ ತೇಜದ ನೂರನೆಯ ಒಂದು ಭಾಗವನ್ನು ಕೊಡುತ್ತೇನೆ, ಎಂದು ಹರಿಸಿದನು.॥13॥

ಮೂಲಮ್ - 14

ಯದಾ ಚ ಶಾಸಾಣ್ಯಧ್ಯೇತುಂ ಶಕ್ತಿರಸ್ಯ ಭವಿಷ್ಯತಿ ।
ತದಾಸ್ಯ ಶಾಸ್ತ್ರಂ ದಾಸ್ಯಾಮಿ ಯೇನ ವಾಗ್ಮೀ ಭವಿಷ್ಯತಿ ।
ನ ಚಾಸ್ಯ ಭವಿತಾ ಕಶ್ಚಿತ್ಸದೃಶಃ ಶಾಸ್ತ್ರದರ್ಶನೇ ॥

ಅನುವಾದ

ಇದಲ್ಲದೆ ಇವನಲ್ಲಿ ಶಾಸ್ತ್ರಾಧ್ಯಯನದ ಶಕ್ತಿ ಬಂದಾಗ ನಾನೇ ಇವನಿಗೆ ಶಾಸ್ತ್ರಗಳ ಜ್ಞಾನವನ್ನು ಕೊಡುವೆನು, ಅದರಿಂದ ಇವನು ಒಳ್ಳೆಯ ವಾಗ್ಮಿಯಾಗುವನು. ಶಾಸ್ತ್ರಜ್ಞಾನದಲ್ಲಿ ಇವನಿಗೆ ಯಾರೂ ಸಮಾನರು ಇರಲಾರರು.॥14॥

ಮೂಲಮ್ - 15

ವರುಣಶ್ಚ ವರಂ ಪ್ರಾದಾನ್ನಾಸ್ಯ ಮೃತ್ಯುರ್ಭವಿಷ್ಯತಿ ।
ವರ್ಷಾಯುತಶತೇನಾಪಿ ಮತ್ಪಾಶಾದುದಕಾದಪಿ ॥

ಅನುವಾದ

ಬಳಿಕ ವರುಣನು ವರವನ್ನು ಕೊಡುವಾಗ - ಹತ್ತುಲಕ್ಷ ವರ್ಷ ಆಯುಸ್ಸು ಆದರೂ ನನ್ನ ಪಾಶ ಮತ್ತು ನೀರಿನಿಂದ ಈ ಬಾಲಕನ ಮೃತ್ಯು ಆಗಲಾರದೆಂದು ಹೇಳಿದನು.॥15॥

ಮೂಲಮ್ - 16

ಯಮೋ ದಂಡಾದವಧ್ಯತ್ವಮರೋಗತ್ವಂ ಚ ದತ್ತವಾನ್ ।
ವರಂ ದದಾಮಿ ಸಂತುಷ್ಟ ಅವಿಷಾದಂಚ ಸಂಯುಗೇ ॥

ಮೂಲಮ್ - 17

ಗದೇಯಂ ಮಾಮಿಕಾ ನೈನಂಸಂಯುಗೇಷು ವಧಿಷ್ಯತಿ ।
ಇತ್ಯೇವಂ ಧನದಃ ಪ್ರಾಹ ತದಾ ಹ್ಯೇಕಾಕ್ಷಿಪಿಂಗಲಃ ॥

ಅನುವಾದ

ಯಮನು ವರ ಕೊಡುವಾಗ-ಇವನು ನನ್ನ ಕಾಲದಂಡದಿಂದ ಅವಧ್ಯನಾಗಿ, ನಿರೋಗಿಯಾಗುವನು ಎಂದು ಹೇಳಿದನು. ಮತ್ತೆ ಪಿಂಗಳವರ್ಣದ ಒಕ್ಕಣ್ಣನಾದ ಕುಬೇರನು - ಇವನಿಗೆ ಯುದ್ಧದಲ್ಲಿ ಎಂದೂ ವಿಷಾದ ಉಂಟಾಗಲಾರದು ಹಾಗೂ ನನ್ನ ಈ ಗದೆಯೂ ಸಂಗ್ರಾಮದಲ್ಲಿ ಇವನನ್ನು ವಧಿಸಲಾರದು ಎಂಬ ವರವನ್ನು ಕೊಟ್ಟನು.॥16-17॥

ಮೂಲಮ್ - 18

ಮತ್ತೋ ಮದಾಯುಧಾನಾಂ ಚ ಅವಧ್ಯೋಽಯಂ ಭವಿಷ್ಯತಿ ।
ಇತ್ಯೇವಂ ಶಂಕರೇಣಾಪಿ ದತ್ತೋಽಸ್ಯ ಪರಮೋವರಃ ॥

ಅನುವಾದ

ಬಳಿಕ ಭಗವಾನ್ ಶಂಕರನು - ಇವನು ನನ್ನಿಂದ ಮತ್ತು ನನ್ನ ಆಯುಧಗಳಿಂದ ಅವಧ್ಯನಾಗುವನು ಎಂಬ ಉತ್ತಮ ವರವನ್ನು ದಯಪಾಲಿಸಿದನು.॥18॥

ಮೂಲಮ್ - 19

ವಿಶ್ವಕರ್ಮಾ ಚ ದೃಷ್ಟ್ವೇಮಂ ಬಾಲಸೂರ್ಯೋಪಮಂ ಶಿಶುಮ್ ।
ಶಿಲ್ಪಿನಾಂ ಪ್ರವರಃ ಪ್ರಾದಾದ್ ವರಮಸ್ಯ ಮಹಾಮತಿಃ ॥

ಅನುವಾದ

ಶಿಲ್ಪಿಗಳಲ್ಲಿ ಶ್ರೇಷ್ಠನಾದ ಪರಮ ಬುದ್ಧಿವಂತ ವಿಶ್ವಕರ್ಮನು ಬಾಲಸೂರ್ಯನಂತೆ ಅರುಣ ಕಾಂತಿಯುಳ್ಳ ಶಿಶುವನ್ನು ನೋಡಿ ಹೀಗೆ ವರವನ್ನು ಕೊಟ್ಟನು.॥19॥

ಮೂಲಮ್ - 20

ಮತ್ಕೃತಾನಿ ಚ ಶಸ್ತ್ರಾಣಿ ಯಾನಿ ದಿವ್ಯಾನಿ ತಾನಿ ಚ ।
ತೈರವಧ್ಯತ್ವಮಾಪನ್ನಶ್ಚಿರಜೀವೀ ಭವಿಷ್ಯತಿ ॥

ಅನುವಾದ

ನನ್ನಿಂದ ರಚಿತವಾದ ಎಲ್ಲ ದಿವ್ಯಾಸ್ತ್ರಗಳಿಂದ ಇವನು ಅವಧ್ಯನಾಗಿ, ಚಿರಂಜೀವಿಯಾಗುವನು.॥20॥

ಮೂಲಮ್ - 21

ದೀರ್ಘಾಯುಶ್ಚ ಮಹಾತ್ಮಾ ಚ ಬ್ರಹ್ಮಾ ತಂ ಪ್ರಾಬ್ರವೀದ್ವಚಃ ।
ಸರ್ವೇಷಾಂ ಬ್ರಹ್ಮದಂಡಾನಾಮವಧ್ಯೋಽಯಂ ಭವಿಷ್ಯತಿ ॥

ಅನುವಾದ

ಕೊನೆಗೆ ಬ್ರಹ್ಮದೇವರು ಆ ಬಾಲಕನನ್ನು ಉದ್ದೇಶಿಸಿ - ಇವನು ದೀರ್ಘಾಯು, ಮಹಾತ್ಮಾ ಹಾಗೂ ಎಲ್ಲ ರೀತಿಯ ಬ್ರಹ್ಮದಂಡಗಳಿಂದ ಅವಧ್ಯನಾಗುವನು ಎಂದು ಹೇಳಿದರು.॥21॥

ಮೂಲಮ್ - 22

ತತಃ ಸುರಾಣಾಂ ತು ವರೈರ್ದೃಷ್ಟ್ವಾ ಹ್ಯೇನಮಲಂಕೃತಮ್ ।
ಚತುರ್ಮುಖಸ್ತುಷ್ಟಮನಾ ವಾಯುಮಾಹ ಜಗದ್ಗುರುಃ ॥

ಅನುವಾದ

ಅನಂತರ ಹನುಮಂತನು ಇಂತಹ ದೇವತೆಗಳ ವರಗಳಿಂದ ಅಲಂಕೃತನಾದುದನ್ನು ನೋಡಿ ಚತುರ್ಮುಖ, ಜಗದ್ಗುರು ಬ್ರಹ್ಮದೇವರ ಮನಸ್ಸು ಸಂತೋಷಗೊಂಡು, ವಾಯುದೇವರಲ್ಲಿ ಹೇಳಿದರು.॥22॥

ಮೂಲಮ್ - 23

ಅಮಿತ್ರಾಣಾಂ ಭಯಕರೋ ಮಿತ್ರಾಣಾಮಭಯಂಕರಃ ।
ಅಜೇಯೋ ಭವಿತಾಪುತ್ರಸ್ತವ ಮಾರುತ ಮಾರುತಿಃ ॥

ಅನುವಾದ

ಮಾರುತನೇ! ನಿನ್ನ ಈ ಪುತ್ರ ಮಾರುತಿಯು ಶತ್ರುಗಳಿಗೆ ಭಯಂಕರ ಹಾಗೂ ಮಿತ್ರರಿಗೆ ಅಭಯದಾತೃನಾಗುವನು. ಯುದ್ಧದಲ್ಲಿ ಯಾರೂ ಇವನನ್ನು ಗೆಲ್ಲಲಾರು.॥23॥

ಮೂಲಮ್ - 24

ಕಾಮರೂಪಃ ಕಾಮಚಾರೀ ಕಾಮಗಃ ಪ್ಲವತಾಂ ವರಃ ।
ಭವತ್ಯವ್ಯಾಹತಗತಿಃ ಕೀರ್ತಿಮಾಂಶ್ಚ ಭವಿಷ್ಯತಿ ॥

ಅನುವಾದ

ಇವನು ಇಚ್ಛಾನುಸಾರ ರೂಪ ಧರಿಸಬಲ್ಲನು, ಬಯಸಿದಲ್ಲಿಗೆ ಹೋಗಬಲ್ಲನು. ಇವನ ಗತಿಯು ಬಯಸಿದಂತೆ ತೀವ್ರ ಅಥವಾ ಮಂದವಾಗಿ, ಅದು ಎಲ್ಲಿಯೂ ತಡೆಯಲಾರದು. ಈ ಕಪಿಶ್ರೇಷ್ಠ ತುಂಬಾ ಯಶಸ್ವಿಯಾಗುವನು.॥24॥

ಮೂಲಮ್ - 25

ರಾವಣೋತ್ಸಾದನಾರ್ಥಾನಿ ರಾಮಪ್ರೀತಿಕರಾಣಿ ಚ ।
ರೋಮಹರ್ಷಕರಾಣ್ಯೇವ ಕರ್ತಾ ಕರ್ಮಾಣಿ ಸಂಯುಗೇ ॥

ಅನುವಾದ

ಇವನು ಯುದ್ಧರಂಗದಲ್ಲಿ ರಾವಣನ ಸಂಹಾರ ಮತ್ತು ಶ್ರೀರಾಮಚಂದ್ರನ ಸಂತೋಷದ ಸಂಪಾದನೆ ಮಾಡುವವನಾಗುವನು, ಅನೇಕ ಅದ್ಭುತ, ರೋಮಾಂಚಕರ ಕರ್ಮ ಮಾಡುವನು.॥25॥

ಮೂಲಮ್ - 26

ಏವಮುಕ್ತ್ವಾ ತಮಾಮಂತ್ರ್ಯ ಮಾರುತಂ ತ್ವಮರೈಃ ಸಹ ।
ಯಥಾಗತಂ ಯಯುಃ ಸರ್ವೇ ಪಿತಾಮಹಪುರೋಗಮಾಃ ॥

ಅನುವಾದ

ಹೀಗೆ ಹನುಮಂತನಿಗೆ ವರವನ್ನು ಕೊಟ್ಟು, ವಾಯು ದೇವರ ಅನುಮತಿ ಪಡೆದು ಬ್ರಹ್ಮಾದಿ ದೇವತೆಗಳು ತಮ್ಮ- ತಮ್ಮ ಸ್ಥಾನಗಳಿಗೆ ತೆರಳಿದರು.॥26॥

ಮೂಲಮ್ - 27

ಸೋಽಪಿ ಗಂಧವಹಃ ಪುತ್ರಂ ಪ್ರಗೃಹ್ಯ ಗೃಹಮಾನಯತ್ ।
ಅಂಜನಾಯಾಸ್ತಮಾಖ್ಯಾಯ ವರದತ್ತಂ ವಿನಿರ್ಗತಃ ॥

ಅನುವಾದ

ಗಂಧವಾಹನ ವಾಯುವೂ ಪುತ್ರನನ್ನು ಕರೆದುಕೊಂಡು ಅಂಜನಾದೇವಿಯ ಮನೆಗೆ ಬಂದು, ಆಕೆಗೆ ದೇವತೆಗಳು ಕೊಟ್ಟ ವರಗಳ ಮಾತನ್ನು ತಿಳಿಸಿ ಹೊರಟು ಹೋದನು.॥27॥

ಮೂಲಮ್ - 28

ಪ್ರಾಪ್ಯ ರಾಮ ವರಾನೇಷ ವರದಾನಬಲಾನ್ವಿತಃ ।
ಜವೇನಾತ್ಮನಿ ಸಂಸ್ಥೇನ ಸೋಽಸೌ ಪೂರ್ಣ ಇವಾರ್ಣವಃ ॥

ಅನುವಾದ

ಶ್ರೀರಾಮಾ! ಹೀಗೆ ಈ ಹನುಮಂತನು ಅನೇಕ ವರಗಳನ್ನು ಪಡೆದು ವರದಾನಜನಿತ ಶಕ್ತಿಯಿಂದ ಸಂಪನ್ನನಾದನು. ತನ್ನೊಳಗೆ ಇರುವ ಅನುಪಮ ವೇಗದಿಂದ ಪೂರ್ಣನಾಗಿ ಮಹಾಸಾಗರದಂತೆ ಶೋಭಿಸಿದನು.॥28॥

ಮೂಲಮ್ - 29

ತರಸಾ ಪೂರ್ಯಮಾಣೋಽಪಿ ತದಾ ವಾನರಪುಂಗವಃ ।
ಆಶ್ರಮೇಷು ಮಹರ್ಷೀಣಾಮಪರಾಧ್ಯತಿ ನಿರ್ಭಯಃ ॥

ಅನುವಾದ

ಆಗ ವೇಗ ತುಂಬಿದ ಈ ವಾನರಶ್ರೇಷ್ಠ ಹನುಮಂತನು ನಿರ್ಭಯನಾಗಿ ಮಹರ್ಷಿಗಳ ಆಶ್ರಮಗಳಿಗೆ ಹೋಗಿ ಉಪದ್ರವ ಕೊಡುತ್ತಿದ್ದನು.॥29॥

ಮೂಲಮ್ - 30

ಸ್ರುಗ್ ಭಾಂಡಾನ್ಯಗ್ನಿಹೋತ್ರಾಣಿ ವಲ್ಕಲಾನಾಂ ಚ ಸಂಚಯಾನ್ ।
ಭಗ್ನವಿಚ್ಛಿನ್ನ ವಿಧ್ವಸ್ತಾನ್ಸಂಶಾಂತಾನಾಂ ಕರೋತ್ಯಯಮ್ ॥

ಅನುವಾದ

ಇವನು ಶಾಂತಚಿತ್ತ ಮಹಾತ್ಮರ ಯಜ್ಞೋಪ ಯೋಗಿ ಪಾತ್ರೆಗಳನ್ನು ಒಡೆದು ಹಾಕಿ, ಅಗ್ನಿಹೋತ್ರದ ಸಾಧನ ಭೂತ ಸ್ರುಕ್, ಸ್ರುವಾದಿಗಳನ್ನು ಮುರಿದು ಹಾಕಿ, ರಾಶಿ-ರಾಶಿಯಾದ ವಲ್ಕಲಗಳನ್ನು ಹರಿದು ಚಿಂದಿ ಮಾಡುತ್ತಿದ್ದನು.॥30॥

ಮೂಲಮ್ - 31½

ಏವಂವಿಧಾನಿ ಕರ್ಮಾಣಿ ಪ್ರಾವರ್ತತ ಮಹಾಬಲಃ ।
ಸರ್ವೇಷಾಂ ಬ್ರಹ್ಮದಂಡಾನಾಮವಧ್ಯಃ ಶಂಭುನಾ ಕೃತಃ ॥
ಜಾನಂತ ಋಷಯಃ ಸರ್ವೇ ಸಹಂತೇ ತಸ್ಯ ಶಕ್ತಿತಃ ।

ಅನುವಾದ

ಮಹಾಬಲಿ ಪವನಕುಮಾರ ಹೀಗೆ ಉಪದ್ರವ ಕಾರ್ಯ ಮಾಡತೊಡಗಿದನು. ಬ್ರಹ್ಮದೇವರು ಇವನನ್ನು ಎಲ್ಲ ರೀತಿಯ ಬ್ರಹ್ಮದಂಡಗಳಿಂದ ಅವಧ್ಯನಾಗಿಸಿರುವರು. ಇದನ್ನು ಎಲ್ಲ ಋಷಿಗಳು ತಿಳಿಯುತ್ತಿದ್ದುದರಿಂದ ಇವನ ಶಕ್ತಿಯಿಂದ ವಿವಶರಾಗಿ ಅವನ ಎಲ್ಲ ಅಪರಾಧಗಳನ್ನು ಮೌನವಾಗಿ ಸಹಿಸುತ್ತಿದ್ದರು.॥31½॥

ಮೂಲಮ್ - 32½

ತಥಾ ಕೇಸರಿಣಾ ತ್ವೇಷ ವಾಯುನಾ ಸೋಽಂಜನೀಸುತಃ ॥
ಪ್ರತಿಷಿದ್ಧೋಽಪಿ ಮರ್ಯಾದಾಂ ಲಂಘಯತ್ವೇವ ವಾನರಃ ।

ಅನುವಾದ

ಕೇಸರಿ ಮತ್ತು ವಾಯುದೇವರೂ ಕೂಡ ಈ ಅಂಜನಾಕುಮಾರನನ್ನು ಪದೇ-ಪದೇ ತಡೆಯುತ್ತಿದ್ದರೂ ಈ ವಾನರವೀರನು ಎಲ್ಲೆಯನ್ನು ಮೀರಿ ನಡೆಯುತ್ತಿದ್ದನು.॥32½॥

ಮೂಲಮ್ - 33½

ತತೋ ಮಹರ್ಷಯಃ ಕ್ರುದ್ಧಾ ಭೃಗ್ವಂಗಿರಸವಂಶಜಾಃ ॥
ಶೇಪುರೇನಂ ರಘುಶ್ರೇಷ್ಠ ನಾತಿಕ್ರುದ್ಧಾತಿಮನ್ಯವಃ ।

ಅನುವಾದ

ಇದರಿಂದ ಭೃಗು ಮತ್ತು ಅಂಗಿರಾನ ವಂಶಸ್ಥರಾದ ಮಹರ್ಷಿಗಳು ಕುಪಿತರಾದರು. ರಘುಶ್ರೇಷ್ಠನೇ! ಅವರು ತಮ್ಮ ಹೃದಯದಲ್ಲಿ ಹೆಚ್ಚು ಖೇದಪಟ್ಟು, ಹೆಚ್ಚು ಕೋಪಗೊಳ್ಳದೆ ಶಾಪ ಕೊಡುವಾಗ ಹೇಳಿದರು.॥33½॥

ಮೂಲಮ್ - 34

ಬಾಧಸೇ ಯತ್ಸಮಾಶ್ರಿತ್ಯ ಬಲಮಸ್ಮಾನ್ ಪ್ಲವಂಗಮ ॥

ಮೂಲಮ್ - 35

ತದ್ದೀರ್ಘಕಾಲಂ ವೇತ್ತಾಸಿ ನಾಸ್ಮಾಕಂ ಶಾಪಮೋಹಿತಃ ।
ಯದಾ ತೇ ಸ್ಮಾರ್ಯತೇ ಕೀರ್ತಿಸ್ತದಾ ತೇ ವರ್ಧತೇ ಬಲಮ್ ॥

ಅನುವಾದ

ವಾನರ ವೀರನೇ! ನೀನು ಯಾವ ಬಲವನ್ನು ಆಶ್ರಯಿಸಿ ನಮ್ಮನ್ನು ಸತಾಯಿಸುತ್ತಿರುವೆಯೋ, ಅದನ್ನು ನಮ್ಮ ಶಾಪದಿಂದ ಮೋಹಿತನಾಗಿ ನೀನು ದೀರ್ಘಕಾಲ ಮರೆತುಬಿಡುವೆ. ನಿನಗೆ ನಿನ್ನ ಬಲದ ಪರಿಚಯವೇ ಇರದು. ಯಾರಾದರೂ ನಿನಗೆ ನಿನ್ನ ಕೀರ್ತಿಯ ಸ್ಮರಣ ಮಾಡಿಸಿದಾಗ ನಿನ್ನ ಬಲವು ಹೆಚ್ಚುವುದು.॥34-35॥

ಮೂಲಮ್ - 36

ತತಸ್ತು ಹೃತತೇಜೌಜಾ ಮಹರ್ಷಿವಚನೌಜಸಾ ।
ಏಷೋಽಶ್ರಮಾಣಿ ತಾನ್ಯೇವ ಮೃದುಭಾವಂ ಗತೋಽಚರತ್ ॥

ಅನುವಾದ

ಹೀಗೆ ಮಹರ್ಷಿಗಳ ವಚನದ ಪ್ರಭಾವದಿಂದ ಇವನ ತೇಜ ಮತ್ತು ಓಜ ಕಡಿಮೆ ಆಯಿತು. ಮತ್ತೆ ಇವನು ಮೃದು ಪ್ರಕೃತಿಯವನಾಗಿ ಆಶ್ರಮಗಳಲ್ಲಿ ಸಂಚರಿಸತೊಡಗಿದನು.॥36॥

ಮೂಲಮ್ - 37

ಅಥರ್ಕ್ಷರಜಸೋ ನಾಮ ವಾಲಿಸುಗ್ರೀವಯೋಃ ಪಿತಾ ।
ಸರ್ವವಾನರರಾಜಾಸೀತ್ತೇಜಸಾ ಇವ ಭಾಸ್ಕರಃ ॥

ಅನುವಾದ

ವಾಲಿ ಮತ್ತು ಸುಗ್ರೀವರ ತಂದೆಯ ಹೆಸರು ಋಕ್ಷರಾಜವಾಗಿತ್ತು. ಅವನು ಸೂರ್ಯನಂತೆ ತೇಜಸ್ವೀ ಮತ್ತು ಸಮಸ್ತ ವಾನರರ ರಾಜನಾಗಿದ್ದನು.॥37॥

ಮೂಲಮ್ - 38

ಸ ತು ರಾಜ್ಯಂ ಚಿರಂ ಕೃತ್ವಾ ವಾನರಾಣಾಂ ಮಹೇಶ್ವರಃ ।
ತತಸ್ತ್ವರ್ಕ್ಷರಜಾ ನಾಮ ಕಾಲಧರ್ಮೇಣ ಯೋಜಿತಃ ॥

ಅನುವಾದ

ಈ ವಾನರ ಋಕ್ಷರಾಜನು ಚಿರಕಾಲ ವಾನರರ ರಾಜ್ಯವಾಳಿ ಕೊನೆಗೆ ಕಾಲಧರ್ಮ (ಮೃತ್ಯು)ವನ್ನೈದಿದನು.॥38॥

ಮೂಲಮ್ - 39

ತಸ್ಮಿನ್ನಸ್ತಮಿತೇ ಚಾಥ ಮಂತ್ರಿಭಿರ್ಮಂತ್ರ ಕೋವಿದೈಃ ।
ಪಿತ್ರ್ಯೇ ಪದೇ ಕೃತೋ ವಾಲೀ ಸುಗ್ರೀವೋ ವಾಲಿನಃ ಪದೇ ॥

ಅನುವಾದ

ಅವನ ದೇಹಾವಸಾನವಾದಾಗ ಮಂತ್ರವೇತ್ತರಾದ ಮಂತ್ರಿಗಳು ತಂದೆಯ ಸ್ಥಾನದಲ್ಲಿ ವಾಲಿಯನ್ನು ರಾಜನನ್ನಾಗಿಸಿ, ಸುಗ್ರೀವನನ್ನು ಯುವರಾಜನನ್ನಾಗಿಸಿದರು.॥39॥

ಮೂಲಮ್ - 40

ಸುಗ್ರೀವೇಣ ಸಮಂ ತ್ವಸ್ಯ ಅದ್ವೈಧಂ ಛಿದ್ರವರ್ಜಿತಮ್ ।
ಆಬಾಲ್ಯಂ ಸಖ್ಯಮಭವದನಿಲಸ್ಯಾಗ್ನಿನಾ ಯಥಾ ॥

ಅನುವಾದ

ಅಗ್ನಿಯೊಂದಿಗೆ ವಾಯುವಿನ ಸ್ವಾಭಾವಿಕ ಮೈತ್ರಿ ಇರುವಂತೆಯೇ ಸುಗ್ರೀವನೊಂದಿಗೆ ವಾಲಿಗೆ ಬಾಲ್ಯದಿಂದಲೇ ಸಖ್ಯಭಾವವಿತ್ತು. ಅವರಿಬ್ಬರಲ್ಲಿ ಯಾವುದೇ ಭೇದಭಾವವಿಲ್ಲದೆ ಗಟ್ಟಿಯಾದ ಪ್ರೇಮವಿತ್ತು.॥40॥

ಮೂಲಮ್ - 41

ಏಷ ಶಾಪವಶಾದೇವ ನ ವೇದ ಬಲಮಾತ್ಮನಃ ।
ವಾಲಿಸುಗ್ರೀವಯೋರ್ವೈರಂ ಯದಾ ರಾಮ ಸಮುತ್ಥಿತಮ್ ॥

ಮೂಲಮ್ - 42

ನ ಹ್ಯೇಷ ರಾಮ ಸುಗ್ರೀವೋ ಭ್ರಾಮ್ಯಮಾಣೋಽಪಿ ವಾಲಿನಾ ।
ದೇವ ಜಾನಾತಿನ ಹ್ಯೇಷ ಬಲಮಾತ್ಮನಿ ಮಾರುತಿಃ ॥

ಅನುವಾದ

ಶ್ರೀರಾಮಾ! ಮತ್ತೆ ವಾಲಿ ಮತ್ತು ಸುಗ್ರೀವರಲ್ಲಿ ವೈರ ಬೆಳೆದಾಗ ಈ ಹನುಮಂತನು ಶಾಪವಶನಾಗಿ ತನ್ನ ಬಲವನ್ನು ತಿಳಿಯದೆ ಹೋದನು. ದೇವ! ವಾಲಿಯ ಭಯದಿಂದ ಅಲೆಯುತ್ತಿದ್ದರೂ ಸುಗ್ರೀವನಿಗೆ ಇವನ ಬಲದ ಸ್ಮರಣೆಯಾಗಲಿಲ್ಲ ಮತ್ತು ಈ ಪವನಕುಮಾರ ಸ್ವತಃ ತನ್ನ ಬಲ ತಿಳಿಯದೇ ಹೋದನು.॥41-42॥

ಮೂಲಮ್ - 43

ಋಷಿಶಾಪಾಹೃತಬಲಸ್ತದೈವ ಕಪಿಸತ್ತಮಃ ।
ಸಿಂಹಃ ಪಂಜರರುದ್ಧೋವಾ ಆಸ್ಥಿತಃ ಸಹಿತೋ ರಣೇ ॥

ಅನುವಾದ

ಸುಗ್ರೀವನ ಮೇಲೆ ವಿಪತ್ತು ಬಂದಾಗ ಋಷಿಗಳ ಶಾಪದಿಂದಾಗಿ ಇವನಿಗೆ ತನ್ನ ಬಲ ಮರೆತುಹೋಗಿತ್ತು. ಅದರಿಂದ ಸಿಂಹವು ಆನೆಯಿಂದ ತಡೆಯಲ್ಪಟ್ಟು ಸುಮ್ಮನೆ ಇರುವಂತೆಯೇ ಇವನು ವಾಲಿ ಮತ್ತು ಸುಗ್ರೀವರ ಯುದ್ಧದಲ್ಲಿ ಸುಮ್ಮನೆ ನಿಂತು, ಏನನ್ನು ಮಾಡದೆ ವಿನೋದ ನೋಡುತ್ತಿದ್ದನು.॥43॥

ಮೂಲಮ್ - 44

ಪರಾಕ್ರಮೋತ್ಸಾಹಮತಿಪ್ರತಾಪ-
ಸೌಶೀಲ್ಯಮಾಧುರ್ಯನಯಾನಯೈಶ್ಚ ।
ಗಾಂಭೀರ್ಯಚಾತುರ್ಯಸುವೀರ್ಯಧೈರ್ಯೈ-
ರ್ಹನೂಮತಃ ಕೋಽಪ್ಯಧಿಕೋಽಸ್ತಿ ಲೋಕೇ ॥

ಅನುವಾದ

ಜಗತ್ತಿನಲ್ಲಿ ಪರಾಕ್ರಮ, ಉತ್ಸಾಹ, ಬುದ್ಧಿ, ಪ್ರತಾಪ, ಸುಶೀಲತೆ, ಮಧುರತೆ, ನೀತಿ-ಅನೀತಿಯ ವಿವೇಕ, ಗಂಭೀರತೆ, ಚತುರತೆ, ಉತ್ತಮ ಬಲ, ಧೈರ್ಯದಲ್ಲಿ ಹನುಮಂತನನ್ನು ಮೀರಿಸುವವರು ಯಾರಿದ್ದಾರೆ.॥44॥

ಮೂಲಮ್ - 45

ಅಸೌ ಪುನರ್ವ್ಯಾಕರಣಂ ಗ್ರಹಿಷ್ಯನ್
ಸೂರ್ಯೋನ್ಮುಖಃ ಪ್ರಷ್ಟುಮನಾಃ ಕಪೀಂದ್ರಃ ।
ಉದ್ಯದ್ಗಿರೇರಸ್ತಗಿರಿಂ ಜಗಾಮ
ಗ್ರಂಥಂ ಮಹದ್ವಾರಯನಪ್ರಮೇಯಃ ॥

ಅನುವಾದ

ಈ ಅಸೀಮ ಶಕ್ತಿಶಾಲಿ ಕಪಿಶ್ರೇಷ್ಠ ಹನುಮಂತನು ವ್ಯಾಕರಣವನ್ನು ಕಲಿಯುತ್ತಾ, ಸಂಶಯಗಳನ್ನು ಪರಿಹರಿಸಿಕೊಳ್ಳಲು ಸೂರ್ಯನ ಕಡೆಗೆ ಮುಖಮಾಡಿ, ಅವನ ಮುಂದೆ-ಮುಂದೆ ಉದಯಾಸ್ತ ಚಲದಿಂದ ಅಸ್ತಾಚಲದವರೆಗೆ ಜೊತೆಯಲ್ಲೇ ಹೋಗುತ್ತಿದ್ದನು.॥45॥

ಮೂಲಮ್ - 46

ಸಸೂತ್ರವೃತ್ತ್ಯರ್ಥಪದಂ ಮಹಾರ್ಥಂ
ಸಸಂಗ್ರಹಂ ಸಿದ್ಧ್ಯತಿ ವೈ ಕಪೀಂದ್ರಃ ।
ನ ಹ್ಯಸ್ಯ ಕಶ್ಚಿತ್ಸದೃಶೋಽಸ್ತಿ ಶಾಸ್ತ್ರೇ
ವೈಶಾರದೇ ಛಂದಗತೌ ತಥೈವ ॥

ಅನುವಾದ

ಇವನು ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಸಂಗ್ರಹಗ್ರಂಥ ಇವೆಲ್ಲವನ್ನು ಚೆನ್ನಾಗಿ ಅಧ್ಯಯನ ಮಾಡಿದನು. ಇತರ ಶಾಸ್ತ್ರಗಳಲ್ಲಿಯೂ, ಛಂದಃ ಶಾಸ್ತ್ರದಲ್ಲಿಯೂ ಇವನಿಗೆ ಸಮಾನರಾದವರು ಯಾರೂ ಇಲ್ಲ.॥46॥

ಮೂಲಮ್ - 47

ಸರ್ವಾಸು ವಿದ್ಯಾಸು ತಪೋವಿಧಾನೇ
ಪ್ರಸ್ಪರ್ಧತೇಽಯಂ ಹಿ ಗುರುಂ ಸುರಾಣಾಮ್ ।
ಸೋಽಯಂ ನವವ್ಯಾಕರಣಾರ್ಥವೇತ್ತಾ
ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್ ॥

ಅನುವಾದ

ಸಮಸ್ತ ವಿದ್ಯೆಗಳ ಜ್ಞಾನ ಹಾಗೂ ತಪಸ್ಸಿನ ಅನುಷ್ಠಾನದಲ್ಲಿ ಇವನು ದೇವಗುರು ಬೃಹಸ್ಪತಿಗೆ ಸಮಾನನಾಗಿದ್ದನು. ನವ ವ್ಯಾಕರಣಗಳ ಸಿದ್ಧಾಂತಗಳನ್ನು ತಿಳಿಯುವ ಈ ಹನುಮಂತನು ನಿಮ್ಮ ಕೃಪೆಯಿಂದ ಸಾಕ್ಷಾತ್ ಬ್ರಹ್ಮನಂತೆ ಆದರಣೀಯನಾಗುವನು.॥47॥

ಮೂಲಮ್ - 48

ಪ್ರವೀವಿವಿಕ್ಷೋರಿವ ಸಾಗರಸ್ಯ
ಲೋಕಾನ್ ದಿಧಕ್ಷೋರಿವ ಪಾವಕಸ್ಯ ।
ಲೋಕಕ್ಷಯೇಷ್ಟೇವ ಯಥಾಂತಕಸ್ಯ
ಹನೂಮತಃ ಸ್ಥಾಸ್ಯತಿ ಕಃ ಪುರಸ್ತಾತ್ ॥

ಅನುವಾದ

ಪ್ರಳಯ ಕಾಲದಲ್ಲಿ ಭೂಮಿಯನ್ನು ಮುಳುಗಿಸಲು ಮೇಲೇರಿ ಬರುವ ಸಮುದ್ರದಂತೆಯೂ, ಸಮಸ್ತ ಲೋಕಗಳನ್ನು ದಹಿಸಲು ಉದ್ಯುಕ್ತವಾದ ಸಂವರ್ತಕಾಗ್ನಿಯಂತೆಯೂ, ಲೋಕಗಳ ಸಂಹಾರಕ್ಕಾಗಿ ಹೊರಟಿರುವ ಕಾಲನಂತೆಯೂ ಇರುವ ಹನುಮಂತನನ್ನು ಎದುರಿಸಿ ನಿಲ್ಲಲು ಯಾರು ತಾನೇ ಸಮರ್ಥರಾಗಿದ್ದಾರೆ.॥48॥

ಮೂಲಮ್ - 49

ಏಷೇವ ಚಾನ್ಯೇ ಚ ಮಹಾಕಪೀಂದ್ರಾಃ
ಸುಗ್ರೀವಮೈಂದದ್ವಿವಿದಾಃ ಸನೀಲಾಃ ।
ಸತಾರತಾರೇಯನಲಾಃ ಸರಂಭಾ -
ಸ್ತ್ವತ್ಕಾರಣಾದ್ರಾಮ ಸುರೈರ್ಹಿ ಸೃಷ್ಟಾಃ ॥

ಅನುವಾದ

ಶ್ರೀರಾಮಾ! ವಾಸ್ತವವಾಗಿ ಇವನನ್ನು ಮತ್ತು ಇವನಿಗೆ ಸಮಾನ ಬಲರಾದ ಸುಗ್ರೀವ, ಮೈಂದ, ದ್ವಿವಿದ, ನೀಲ, ತಾರ, ಅಂಗದ, ನಲ, ರಂಭ ಮೊದಲಾದ ಕಪೀಶ್ವರರೆಲ್ಲರನ್ನು ನಿನ್ನ ಸಹಾಯಕ್ಕಾಗಿಯೇ ದೇವತೆಗಳು ಸೃಷ್ಟಿಸಿರುವರು.॥49॥

ಮೂಲಮ್ - 50

ಗಜೋ ಗವಾಕ್ಷೋ ಗವಯಃ ಸುದಂಷ್ಟ್ರೋ
ಮೈಂದಃ ಪ್ರಭೋ ಜ್ಯೋತಿಮುಖೋ ನಲಶ್ಚ ।
ಏತೇ ಚ ಋಕ್ಷಾಃ ಸಹ ವಾನರೇಂದ್ರೈ -
ಸ್ತ್ವತ್ಕಾರಣಾದ್ರಾಮ ಸುರೈರ್ಹಿಸೃಷ್ಟಾಃ ॥

ಅನುವಾದ

ಶ್ರೀರಾಮಾ! ಗಜ, ಗವಾಕ್ಷ, ಗವಯ, ಸುದಂಷ್ಟ್ರ, ಮೈಂದ, ಪ್ರಭ, ಜ್ಯೋತಿಮುಖ, ನಳ, ಇವರೆಲ್ಲ ವಾನರೇಶ್ವರರನ್ನು ಹಾಗೂ ಕರಡಿಗಳನ್ನು ನಿಮ್ಮ ಸಹಾಯಕ್ಕಾಗಿಯೇ ದೇವತೆಗಳು ಸೃಷ್ಟಿಸಿರುವರು.॥50॥

ಮೂಲಮ್ - 51

ತದೇತತ್ಕಥಿತಂ ಸರ್ವಂ ಯನ್ಮಾಂ ತ್ವಂ ಪರಿಪೃಚ್ಛಸಿ ।
ಹನೂಮತೋ ಬಾಲಭಾವೇ ಕರ್ಮೈತತ್ಕಥಿತಂ ಮಯಾ ॥

ಅನುವಾದ

ರಘುನಂದನ! ನೀನು ನನ್ನಲ್ಲಿ ಕೇಳಿದ್ದನ್ನು ಎಲ್ಲವನ್ನು ನಾನು ತಿಳಿಸಿರುವೆನು. ಹನುಮಂತನ ಬಾಲ್ಯದ ಚರಿತ್ರವನ್ನು ವರ್ಣಿಸಿರುವೆನು.॥51॥

ಮೂಲಮ್ - 52

ಶ್ರುತ್ವಾಗಸ್ತ್ಯಸ್ಯ ಕಥಿತಂ ರಾಮಃ ಸೌಮಿತ್ರಿರೇವ ಚ ।
ವಿಸ್ಮಯಂ ಪರಮಂ ಜಗ್ಮುರ್ವಾನರಾ ರಾಕ್ಷಸೈಃ ಸಹ ॥

ಅನುವಾದ

ಅಗಸ್ತ್ಯರ ಈ ಮಾತನ್ನು ಕೇಳಿ ಶ್ರೀರಾಮ ಮತ್ತು ಲಕ್ಷ್ಮಣರಿಗೆ ಬಹಳ ವಿಸ್ಮಯವಾಯಿತು. ವಾನರರಿಗೆ ಮತ್ತು ರಾಕ್ಷಸರಿಗೂ ಬಹಳ ಆಶ್ಚರ್ಯವಾಯಿತು.॥52॥

ಮೂಲಮ್ - 53

ಅಗಸ್ತ್ಯಸ್ತ್ವಬ್ರವೀದ್ರಾಮಂ ಸರ್ವಮೇತಚ್ಛ್ರುತಂ ತ್ವಯಾ ।
ದೃಷ್ಟಃ ಸಂಭಾಷಿತಶ್ಚಾಸಿ ರಾಮ ಗಚ್ಛಾಮಹೇ ವಯಮ್ ॥

ಅನುವಾದ

ಬಳಿಕ ಅಗಸ್ತ್ಯರು ಶ್ರೀರಾಮಚಂದ್ರನಲ್ಲಿ ಹೇಳಿದರು-ಯೋಗಿಗಳ ಹೃದಯದಲ್ಲಿ ರಮಮಾಣ ಮಾಡುವ ರಾಮಾ! ನೀವು ಇದೆಲ್ಲ ಪ್ರಸಂಗ ಕೇಳಿರುವೆ. ನಾವು ನಿನ್ನ ದರ್ಶನ ಮಾಡಿ, ನಿನ್ನೊಂದಿಗೆ ವಾರ್ತಾಲಾಪ ಮಾಡಿದೆವು. ಅದಕ್ಕಾಗಿ ಈಗ ನಾವು ಹೋಗುತ್ತಿದ್ದೇವೆ.॥53॥

ಮೂಲಮ್ - 54

ಶುತ್ವೈತದ್ರಾಘವೋ ವಾಕ್ಯಮಗಸ್ತ್ಯಸ್ಯೋಗ್ರತೇಜಸಃ ।
ಪ್ರಾಂಜಲಿಃ ಪ್ರಣತಶ್ಚಾಪಿ ಮಹರ್ಷಿಮಿದಮಬ್ರವೀತ್ ॥

ಅನುವಾದ

ಉಗ್ರ ತೇಜಸ್ವೀ ಅಗಸ್ತ್ಯರ ಮಾತನ್ನು ಕೇಳಿ ಶ್ರೀರಘುನಾಥನು ಕೈಮುಗಿದುಕೊಂಡು ವಿನಯದಿಂದ ಆ ಮಹರ್ಷಿಗಳಲ್ಲಿ ಇಂತೆಂದನು.॥54॥

ಮೂಲಮ್ - 55

ಅದ್ಯ ಮೇ ದೇವತಾಸ್ತುಷ್ಟಾಃ ಪಿತರಃ ಪ್ರಪಿತಾಮಹಾಃ ।
ಯುಷ್ಮಾಕಂ ದರ್ಶನಾದೇವ ನಿತ್ಯಂತುಷ್ಟಾಃಸಬಾಂಧವಾಃ ॥

ಅನುವಾದ

ಮುನೀಶ್ವರರೇ! ಇಂದು ನನ್ನ ಮೇಲೆ ದೇವತೆಗಳು, ಪಿತೃಗಳು, ಪಿತಾಮಹರು ಮೊದಲಾದವರು ವಿಶೇಷವಾಗಿ ಸಂತುಷ್ಟರಾಗಿದ್ದಾರೆ. ಬಂಧು-ಬಾಂಧವರೊಂದಿಗೆ ನಮಗೆ ನಿಮ್ಮಂತಹ ಮಹಾತ್ಮರ ದರ್ಶನದಿಂದ ಸದಾ ಸಂತೋಷವಾಗಿದೆ.॥55॥

ಮೂಲಮ್ - 56

ವಿಜ್ಞಾಪ್ಯಂ ತು ಮಮೈತದ್ಧಿ ಯದ್ವದಾಮ್ಯಾಗತಸ್ಪೃಹಃ ।
ತದ್ಭವದ್ಭಿರ್ಮಮ ಕೃತೇ ಕರ್ತವ್ಯಮನುಕಂಪಯಾ ॥

ಅನುವಾದ

ನನ್ನ ಮನಸ್ಸಿನಲ್ಲಿ ಒಂದು ಇಚ್ಛೆ ಉದಯಿಸಿದೆ; ಆದ್ದರಿಂದ ಇದನ್ನು ಸೂಚಿಸಲು ಯೋಗ್ಯವಾದ ಮಾತನ್ನು ನಿಮ್ಮ ಸೇವೆಯಲ್ಲಿ ನಿವೇದಿಸಿಕೊಳ್ಳುವೆನು. ನನ್ನ ಮೇಲೆ ಅನುಗ್ರಹ ಮಾಡಿ ನೀವೆಲ್ಲರೂ ನನ್ನ ಆ ಅಭೀಷ್ಟ ಕಾರ್ಯವನ್ನು ಪೂರ್ಣಗೊಳಿಸಿರಿ.॥56॥

ಮೂಲಮ್ - 57

ಪೌರಜಾನಪದಾನ್ಸ್ಥ್ಥಾಪ್ಯ ಸ್ವಕಾರ್ಯೇಷ್ವಹಮಾಗತಃ ।
ಕ್ರತೂನಹಂ ಕರಿಷ್ಯಾಮಿ ಪ್ರಭಾವಾದ್ಭವತಾಂ ಸತಾಮ್ ॥

ಅನುವಾದ

ಪುರವಾಸೀ ಮತ್ತು ದೇಶವಾಸಿಗಳನ್ನು ತಮ್ಮ-ತಮ್ಮ ಕಾರ್ಯದಲ್ಲಿ ತೊಡಗಿಸಿ, ನಾನು ನಿಮ್ಮಂತಹ ಸತ್ಪುರುಷರ ಪ್ರಭಾವದಿಂದ ಯಜ್ಞಾನುಷ್ಠಾನ ಮಾಡಬೇಕೆಂಬ ಇಚ್ಛೆ ನನಗೆ ಇದೆ.॥57॥

ಮೂಲಮ್ - 58

ಸದಸ್ಯಾ ಮಮ ಯಜ್ಞೇಷು ಭವಂತೋನಿತ್ಯಮೇವ ತು ।
ಭವಿಷ್ಯಥ ಮಹಾವೀರ್ಯಾ ಮಮಾನುಗ್ರಹಕಾಂಕ್ಷಿಣಃ ॥

ಅನುವಾದ

ನನ್ನ ಆ ಯಜ್ಞದಲ್ಲಿ ಮಹಾಶಕ್ತಿಶಾಲಿಯಾದ ಮಹಾತ್ಮರಾದ ನೀವು ನನ್ನ ಮೇಲೆ ಅನುಗ್ರಹ ಮಾಡಲಿಕ್ಕಾಗಿ ಸದಾ ಸದಸ್ಯರಾಗಿ ಇರಬೇಕು.॥58॥

ಮೂಲಮ್ - 59

ಅಹಂ ಯುಷ್ಮಾನ್ಸಮಾಶ್ರಿತ್ಯ ತಪೋನಿರ್ಧೂತಕಲ್ಮಷಾನ್ ।
ಅನುಗೃಹೀತಃ ಪಿತೃಭಿರ್ಭವಿಷ್ಯಾಮಿ ಸುನಿರ್ವೃತಃ ॥

ಅನುವಾದ

ತಪಸ್ಸಿನಿಂದ ನೀವು ನಿಷ್ಪಾಪರಾಗಿರುವಿರಿ. ನಾನು ನಿಮ್ಮ ಆಶ್ರಯ ಪಡೆದು ಸದಾ ಸಂತುಷ್ಟ ಹಾಗೂ ಪಿತೃಗಳಿಂದ ಅನುಗ್ರಹಿತನಾಗುವೆನು.॥59॥

ಮೂಲಮ್ - 60½

ತದಾಗಂತವ್ಯಮನಿಶಂ ಭವದ್ಭಿರಿಹ ಸಂಗತೈಃ ।
ಅಗಸ್ತ್ಯಾದ್ಯಾಸ್ತು ತಚ್ಛ್ರುತ್ವಾ ಋಷಯಃ ಸಂಶಿತವ್ರತಾಃ ॥
ಏವಮಸ್ತ್ವಿತಿ ತಂಪ್ರೋಚ್ಯ ಪ್ರಯಾತುಮುಪಚಕ್ರಮುಃ ।

ಅನುವಾದ

ಯಜ್ಞ ಪ್ರಾರಂಭವಾದಾಗ ನೀವೆಲ್ಲ ಒಂದಾಗಿ ನಿರಂತರ ಇಲ್ಲಿಗೆ ಬರುತ್ತಾ ಇರಿ. ಶ್ರೀರಾಮಚಂದ್ರನ ಈ ಮಾತನ್ನು ಕೇಳಿ ಕಠೋರ ವ್ರತವನ್ನು ಪಾಲಿಸುವ ಅಗಸ್ತ್ಯರೇ ಆದಿ ಮಹರ್ಷಿಗಳು ‘ಹಾಗೆಯೇ ಆಗಲೀ’ ಎಂದು ಹೇಳಿ ಅಲ್ಲಿಂದ ಹೊರಟರು.॥60½॥

ಮೂಲಮ್ - 61½

ಏವಮುಕ್ತ್ವಾ ಗತಾಃ ಸರ್ವೇ ಋಷಯಸ್ತೇ ಯಥಾಗತಮ್ ॥
ರಾಘವಶ್ಚ ತಮೇವಾರ್ಥಂ ಚಿಂತಯಾಮಾಸ ವಿಸ್ಮಿತಃ ।

ಅನುವಾದ

ಹೀಗೆ ಮಾತುಕತೆಯಾಡಿ ಎಲ್ಲ ಋಷಿಗಳು ಬಂದ ಹಾಗೆಯೇ ಹೊರಟು ಹೋದರು. ಇತ್ತ ಶ್ರೀರಾಮಚಂದ್ರನು ವಿಸ್ಮಿತನಾಗಿ ಅವರ ಮಾತುಗಳ ಕುರಿತು ವಿಚಾರ ಮಾಡತೊಡಗಿದನು.॥61½॥

ಮೂಲಮ್ - 62

ತತೋಽಸ್ತಂ ಭಾಸ್ಕರೇ ಯಾತೆ ವಿಸೃಜ್ಯ ನೃಪವಾನರಾನ್ ॥

ಮೂಲಮ್ - 63

ಸಂಧ್ಯಾಮುಪಾಸ್ಯ ವಿಧಿವತ್ತದಾ ನರವರೋತ್ತಮಃ ।
ಪ್ರವೃತ್ತಾಯಾಂ ರಜನ್ಯಾಂ ತು ಸೋಽಂತಃಪುರಚರೋಽಭವತ್ ॥

ಅನುವಾದ

ಅನಂತರ ಸೂರ್ಯಸ್ತವಾದಾಗ ರಾಜರನ್ನು, ವಾನರರನ್ನು ಬೀಳ್ಕೊಟ್ಟು ರಾಜರಲ್ಲಿ ಶ್ರೇಷ್ಠನಾದ ಶ್ರೀರಾಮಚಂದ್ರನು ವಿಧಿವತ್ತಾಗಿ ಸಂಧ್ಯೋಪಾಸನೆ ಮಾಡಿ, ರಾತ್ರೆಯಾದಾಗ ಅಂತಃಪುರಕ್ಕೆ ತೆರಳಿದನು.॥62-63॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಮೂವತ್ತಾರನೆಯ ಸರ್ಗ ಪೂರ್ಣವಾಯಿತು. ॥36॥