०४२ मारीचेन स्वर्णमृगरूपधारणम्

वाचनम्
ಭಾಗಸೂಚನಾ

ಮಾರೀಚನು ಚಿನ್ನದ ಜಿಂಕೆಯಾಗಿ ಶ್ರೀರಾಮನ ಆಶ್ರಮದ ಬಳಿಗೆ ಹೋದುದು, ಸೀತೆಯು ಅದನ್ನು ನೋಡಿದುದು

ಮೂಲಮ್ - 1

ಏವಮುಕ್ತ್ವಾ ತು ಪರುಷಂ ಮಾರೀಚೋ ರಾವಣಂ ತತಃ ।
ಗಚ್ಛಾವೇತ್ಯಬ್ರವೀದ್ದೀನೋ ಭಯಾದ್ ರಾತ್ರಿಂಚರ ಪ್ರಭೋಃ ॥

ಅನುವಾದ

ರಾವಣನಲ್ಲಿ ಈ ಪ್ರಕಾರ ಕಠೋರ ಮಾತುಗಳನ್ನಾಡಿದಾಗ, ಮಾರೀಚನು ರಾಜನ ಭಯದಿಂದ ದುಃಖಿಯಾಗಿ ‘ನಾವಿನ್ನು ಹೊರಡೋಣ’ ಎಂದು ಹೇಳಿದನು.॥1॥

ಮೂಲಮ್ - 2

ದೃಷ್ಟಶ್ಚಾಹಂ ಪುನಸ್ತೇನ ಶರಚಾಪಾಸಿಧಾರಿಣಾ ।
ಮದ್ವಧೋದ್ಯತಶಸ್ತ್ರೇಣ ನಿಹತಂ ಜೀವಿತಂ ಚ ಮೇ ॥

ಮೂಲಮ್ - 3

ನ ಹಿ ರಾಮಂ ಪರಾಕ್ರಮ್ಯ ಜೀವನ್ ಪ್ರತಿನಿವರ್ತತೇ ।
ವರ್ತತೇ ಪ್ರತಿರೂಪೋಽಸೌ ಯಮದಂಡಹತಸ್ಯ ತೇ ॥

ಅನುವಾದ

ನನ್ನ ವಧೆಗಾಗಿಯೇ ಯಾವನ ಆಯುಧ ಸದಾ ಸಜ್ಜಾಗಿರುತ್ತದೋ, ಆ ಧನುರ್ಬಾಣ ಮತ್ತು ಖಡ್ಗಧಾರೀಯಾದ ಶ್ರೀರಾಮಚಂದ್ರನೊಂದಿಗೆ ಪರಾಕ್ರಮ ತೋರಿ ಯಾರೂ ಬದುಕಿಬರುವುದಿಲ್ಲ. ನೀನು ಯಮದಂಡಕ್ಕೆ ಗುರಿಯಾಗಿರುವೆ. ಶ್ರೀರಾಮಚಂದ್ರನು ನನ್ನನ್ನು ನೋಡಿದರೆ ನನ್ನ ಜೀವನದ ಅಂತ್ಯ ನಿಶ್ಚಿತವಾದುದು. (ಅದಕ್ಕಾಗಿ ಅವನನ್ನು ಎದುರಿಸಲು ಯೋಚಿಸುತ್ತಿರುವೆ.) ಆ ರಾಮಚಂದ್ರನು ನಿನಗಾಗಿ ಯಮದಂಡದಂತೆ ಇದ್ದಾನೆ.॥2-3॥

ಮೂಲಮ್ - 4

ಕಿಂ ನು ಕರ್ತುಂ ಮಯಾ ಶಕ್ಯಮೇವಂ ತ್ವಯಿ ದುರಾತ್ಮನಿ ।
ಏಷ ಗಚ್ಛಾಮ್ಯಹಂ ತಾತ ಸ್ವಸ್ತಿ ತೇಽಸ್ತು ನಿಶಾಚರ ॥

ಅನುವಾದ

ಆದರೆ ನೀನು ಇಂತಹ ದುಷ್ಟತೆಗೆ ಹೊರಟಿರುವಾಗ ನಾನು ಏನು ಮಾಡಬಲ್ಲೆನು? ನಡಿ. ನಾನು ಹೊರಟೆ. ಅಯ್ಯಾ ನಿಶಾಚರನೇ! ನಿನಗೆ ಮಂಗಳವಾಗಲಿ.॥4॥

ಮೂಲಮ್ - 5

ಪ್ರಹೃಷ್ಟಸ್ತ್ವಭವತ್ತೇನ ವಚನೇನ ಸ ರಾಕ್ಷಸಃ ।
ಪರಿಷ್ವಜ್ಯ ಸುಸಂಶ್ಲಿಷ್ಟಮಿದಂ ವಚನಮಬ್ರವೀತ್ ॥

ಅನುವಾದ

ಮಾರೀಚನ ಮಾತಿನಿಂದ ರಾಕ್ಷಸ ರಾವಣನಿಗೆ ಬಹಳ ಸಂತೋಷವಾಯಿತು. ಅವನು ಮಾರೀಚನನ್ನು ಬಿಗಿಯಾಗಿ ಅಪ್ಪಿಕೊಂಡು ಹೀಗೆ ಹೇಳಿದನು.॥5॥

ಮೂಲಮ್ - 6

ಏತಚ್ಛೌಟೀರ್ಯಯುಕ್ತಂ ತೇ ಮಚ್ಛಂದವಶವರ್ತಿನಃ ।
ಇದಾನೀಮಸಿ ಮಾರೀಚಃ ಪೂರ್ವಮನ್ಯೋ ಹಿ ರಾಕ್ಷಸಃ ॥

ಅನುವಾದ

ಇದು ನೀನು ವೀರತೆಯ ಮಾತನ್ನು ಹೇಳಿರುವೆ. ಏಕೆಂದರೆ ಈಗ ನೀನು ನನ್ನ ಇಚ್ಛೆಗೆ ವಶವರ್ತಿಯಾಗಿರುವೆ. ಈಗ ನೀನು ನಿಜವಾದ ಮಾರೀಚನಾಗಿರುವೆ. ಮೊದಲು ನಿನ್ನಲ್ಲಿ ಯವುದೇ ಬೇರೆ ರಾಕ್ಷಸನ ಆವೇಶವಾಗಿತ್ತು.॥6॥

ಮೂಲಮ್ - 7

ಆರುಹ್ಯತಾಮಯಂ ಶೀಘ್ರಂ ಖಗೋ ರತ್ನವಿಭೂಷಿತಃ ।
ಮಯಾ ಸಹ ರಥೋ ಯುಕ್ತಃ ಪಿಶಾಚವದನೈಃ ಖರೈಃ ॥

ಅನುವಾದ

ಈ ರತ್ನಗಳಿಂದ ವಿಭೂಷಿತ ಆಕಾಶಗಾಮಿ ರಥವು ಸಿದ್ಧವಾಗಿದೆ. ಇದರಲ್ಲಿ ಪಿಶಾಚಿಮುಖವುಳ್ಳ ಕತ್ತೆಗಳನ್ನು ಹೂಡಲಾಗಿವೆ. ಇದರಲ್ಲಿ ನನ್ನೊಂದಿಗೆ ಬೇಗನೆ ಕುಳಿತುಕೋ.॥7॥

ಮೂಲಮ್ - 8

ಪ್ರಲೋಭಯಿತ್ವಾ ವೈದೇಹೀಂ ಯಥೇಷ್ಟಂ ಗಂತುಮರ್ಹಸಿ ।
ತಾಂ ಶೂನ್ಯೋ ಪ್ರಸಭಂ ಸೀತಾಮಾನಯಿಷ್ಯಾಮಿ ಮೈಥಿಲೀಮ್ ॥

ಅನುವಾದ

(ನಿನಗೆ ಇದೊಂದೇ ಕೆಲಸದ ಜವಾಬ್ದಾರಿ ಇದೆ.) ವಿದೇಹ ಕುಮಾರಿ ಸೀತೆಯ ಮನಸ್ಸಿನಲ್ಲಿ ನಿನ್ನ ಕುರಿತು ಲೋಭ ಉಂಟು ಮಾಡು. ಆಕೆಯನ್ನು ಮರುಳುಗೊಳಿಸಿ ನೀನು ಬೇಕಾದಲ್ಲಿಗೆ ಹೋಗು ಆಶ್ರಮ ಬರಿದಾದಾಗ ನಾನು ಮಿಥಿಲೇಶ ಕುಮಾರಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋಗುವೆನು.॥8॥

ಮೂಲಮ್ - 9½

ತತಸ್ತಥೇತ್ಯುವಾಚೈನಂ ರಾವಣಂ ತಾಟಿಕಾಸುತಃ ।
ತತೋ ರಾವಣಮಾರೀಚೌ ವಿಮಾನಮಿವ ತಂ ರಥಮ್ ॥
ಆರುಹ್ಯಾಯಯತುಃ ಶೀಘ್ರಂ ತಸ್ಮಾದಾಶ್ರಮಮಂಡಲಾತ್ ।

ಅನುವಾದ

ಆಗ ತಾಟಕಾಕುಮಾರ ಮಾರೀಚನು ರಾವಣನಲ್ಲಿ ಹೇಳಿದನು - ‘ಹಾಗೆಯೇ ಆಗಲಿ’ ಅನಂತರ ರಾವಣ ಮತ್ತು ಮಾರೀಚರಿಬ್ಬರೂ ವಿಮಾನಾಕಾರದ ರಥದಲ್ಲಿ ಕುಳಿತು ಶೀಘ್ರವಾಗಿ ಆ ಆಶ್ರಮಮಂಡಲದಿಂದ ಹೊರಟರು.॥9½॥

ಮೂಲಮ್ - 10

ತಥೈವ ತತ್ರ ಪಶ್ಯಂತೌ ಪತ್ತನಾನಿ ವನಾನಿ ಚ ॥

ಮೂಲಮ್ - 11½

ಗಿರೀಂಶ್ಚ ಸರಿತಃ ಸರ್ವಾ ರಾಷ್ಟ್ರಾಣಿ ನಗರಾಣಿ ಚ ।
ಸಮೇತ್ಯ ದಂಡಕಾರಣ್ಯಂ ರಾಘವಸ್ಯಾಶ್ರಮಂ ತತಃ ॥
ದದರ್ಶ ಸಹಮಾರೀಚೋ ರಾವಣೋ ರಾಕ್ಷಸಾಧಿಪಃ ।

ಅನುವಾದ

ಮಾರ್ಗದಲ್ಲಿ ಮೊದಲಿನಂತೆ ಅನೇಕಾನೇಕ ಪಟ್ಟಣ, ವನ, ಪರ್ವತ, ನದಿ, ರಾಷ್ಟ್ರ, ನಗರ, ಮುಂತಾದವನ್ನು ನೋಡುತ್ತಾ ಇಬ್ಬರೂ ದಂಡಕಾರಣ್ಯವನ್ನು ಪ್ರವೇಶಿಸಿದರು. ಅಲ್ಲಿ ಮಾರೀಚನೊಂದಿಗೆ ರಾಕ್ಷಸರಾಜ ರಾವಣನು ಶ್ರೀರಾಮಚಂದ್ರನ ಆಶ್ರಮವನ್ನು ನೋಡಿದನು.॥10-11½॥

ಮೂಲಮ್ - 12½

ಅವತೀರ್ಯ ರಥಾತ್ತಸ್ಮಾತ್ ತತಃ ಕಾಂಚನಭೂಷಣಾತ್ ॥
ಹಸ್ತೇ ಗೃಹೀತ್ವಾ ಮಾರೀಚಂ ರಾವಣೋ ವಾಕ್ಯಮಬ್ರವೀತ್ ।

ಅನುವಾದ

ಆಗ ಸುವರ್ಣಭೂಷಿತ ರಥದಿಂದ ಕೆಳಗಿಳಿದು ರಾವಣನು ಮಾರೀಚನ ಕೈ ಹಿಡಿದುಕೊಂಡು ಹೀಗೆ ಹೇಳಿದನ.॥12½॥

ಮೂಲಮ್ - 13½

ಏತದ್ರಾಮಾಶ್ರಮಪದಂ ದೃಶ್ಯತೇ ಕದಲೀವೃತಮ್ ॥
ಕ್ರಿಯತಾಂ ತತ್ ಸಖೇ ಶೀಘ್ರಂ ಯದರ್ಥಂ ವಯಮಾಗತಾಃ ।

ಅನುವಾದ

ಮಿತ್ರನೇ! ಇದೋ ಬಾಳೆಗಿಡಗಳಿಂದ ಸುತ್ತುವರಿದ ರಾಮನ ಆಶ್ರಮ ಕಂಡುಬರುತ್ತಿದೆ. ಈಗ ಬೇಗನೇ ನಾವು ಬಂದಿರುವ ಕಾರ್ಯವನ್ನು ಕೈಗೊಳ್ಳು.॥13½॥

ಮೂಲಮ್ - 14½

ಸ ರಾವಣ ವಚಃ ಶ್ರುತ್ವಾ ಮಾರೀಚೋ ರಾಕ್ಷಸಸ್ತದಾ ॥
ಮೃಗೋ ಭೂತ್ವಾಽಽಶ್ರಮದ್ವಾರಿ ರಾಮಸ್ಯ ವಿಚಚಾರ ಹ ।

ಅನುವಾದ

ರಾವಣನ ಮಾತನ್ನು ಕೇಳಿ ರಾಕ್ಷಸ ಮಾರೀಚನು ಆಗ ಮೃಗರೂಪವನ್ನು ಧರಿಸಿ ಶ್ರೀರಾಮನ ಆಶ್ರಮದ ಬಾಗಿಲಿಗೆ ಹೋಗಿ ಸಂಚರಿಸತೊಡಗಿದನು.॥14½॥

ಮೂಲಮ್ - 15

ಸ ತು ರೂಪಂ ಸಮಾಸ್ಥಾಯ ಮಹದದ್ಭುತದರ್ಶನಮ್ ॥

ಮೂಲಮ್ - 16

ಮಣಿಪ್ರವರಶೃಂಗಾಗ್ರಃ ಸಿತಾಸಿತಮುಖಾಕೃತಿಃ ।
ರಕ್ತಪದ್ಮೋತ್ಪಲಮುಖ ಇಂದ್ರನೀಲೋತ್ಫಲಶ್ರವಾಃ ॥

ಮೂಲಮ್ - 17

ಕಿಂಚಿದಭ್ಯುನ್ನತಗ್ರೀವ ಇಂದ್ರನೀಲನಿಭೋದರಃ ।
ಮಧೂಕನಿಭಪಾರ್ಶ್ವಶ್ಚ ಕಂಜಕಿಂಜಲ್ಕಸಂನಿಭಃ ॥

ಅನುವಾದ

ಆಗ ಅವನು ನೋಡಲು ಬಹಳ ಅದ್ಭುತ ರೂಪವನ್ನು ಧರಿಸಿದ್ದನು. ಅದರ ಕೊಂಬಿನ ತುದಿಗಳು ಶ್ರೇಷ್ಠ ಇಂದ್ರನೀಲ ಮಣಿಯಂತೆ ಕಾಣುತ್ತಿದ್ದವು. ತಲೆಯ ಭಾಗದಲ್ಲಿ ಬಿಳಿ ಮತ್ತು ಕಪ್ಪು ಚುಕ್ಕೆಗಳಿದ್ದವು. ಮುಖವು ಕೆಂಪು ಕಮಲದಂತೆ ಇತ್ತು. ಅದರ ಕಿವಿಗಳು ನೀಲಕಮಲಗಳಂತೆ ಇದ್ದವು, ಕತ್ತು ಮೇಲಕ್ಕೆತ್ತಿದಂತೆ ಇತ್ತು. ಹೊಟ್ಟೆಯ ಭಾಗವು ಇಂದ್ರನೀಲಮಣಿಯಂತೆ ಶುಭ್ರವಾಗಿತ್ತು. ಶರೀರ ಬಂಗಾರ ಬಣ್ಣದ ಕಮಲ ಕೇಸರದಂತೆ ಸುಶೋಭಿತವಾಗಿತ್ತು.॥15-17॥

ಮೂಲಮ್ - 18

ವೈಡೂರ್ಯಸಂಕಾಶಖುರಸ್ತನುಜಂಘಃ ಸುಸಂಹತಃ ।
ಇಂದ್ರಾಯುಧಸವರ್ಣೇನ ಪುಚ್ಛೇನೋರ್ಧ್ವಂ ವಿರಾಜತಃ ॥

ಅನುವಾದ

ಅದರ ಗೊರಸು ವೈಢೂರ್ಯಮಣಿಯಂತೆ, ಸೊಂಟವು ತೆಳ್ಳಗಿದ್ದು, ಸಂಧಿಬಂಧಗಳು ಹೊಂದಿಕೆಯಾಗಿ ಸೇರಿಕೊಂಡಿದ್ದವು. ಕಾಮನ ಬಿಲ್ಲಿನಂತೆ ಬಾಲವು ನಿಮಿರಿ ನಿಂತು ಪ್ರಕಾಶಮಾನವಾಗಿ ಕಾಣುತಿದ್ದಿತು.॥18॥

ಮೂಲಮ್ - 19

ಮನೋಹರಃ ಸ್ನಿಗ್ಧವರ್ಣೋ ರತ್ನೈರ್ನಾನಾವಿಧೈರ್ವೃತಃ ।
ಕ್ಷಣೇನ ರಾಕ್ಷಸೋ ಜಾತೋ ಮೃಗಃ ಪರಮಶೋಭನಃ ॥

ಅನುವಾದ

ಅದರ ದೇಹಕಾಂತಿಯು ಬಹಳ ಮನೋಹರ ಮತ್ತು ಸ್ನಿಗ್ಧವಾಗಿತ್ತು. ಅದು ನಾನಾ ಪ್ರಕಾರದ ಚುಕ್ಕೆಗಳಿಂದ ವಿಭೂಷಿತವಾಗಿ ಕಾಣುತ್ತಿತ್ತು. ರಾಕ್ಷಸ ಮಾರೀಚನು ಕ್ಷಣಾರ್ಧದಲ್ಲಿ ಪರಮ ಶೋಭಾಶಾಲೀ ಮೃಗ ರೂಪನಾದನು.॥19॥

ಮೂಲಮ್ - 20

ವನಂ ಪ್ರಜ್ವಲಯನ್ ರಮ್ಯಂ ರಾಮಾಶ್ರಮಪದಂ ಚ ತತ್ ।
ಮನೋಹರಂ ದರ್ಶನೀಯಂ ರೂಪಂ ಕೃತ್ವಾ ಸ ರಾಕ್ಷಸಃ ॥

ಮೂಲಮ್ - 21

ಪ್ರಲೋಭನಾರ್ಥಂ ವೈದೇಹ್ಯಾ ನಾನಾಧಾತುವಿಚಿತ್ರಿತಮ್ ।
ವಿಚರನ್ಗಚ್ಛತೇ ಸಮ್ಯಕ್ ಶಾದ್ವಲಾನಿ ಸಮಂತತಃ ॥

ಅನುವಾದ

ಸೀತೆಯನ್ನು ಮರುಳುಗೊಳಿಸಲು ವಿವಿಧ ಧಾತುಗಳಿಂದ ಚಿತ್ರಿತ ಮನೋಹರ, ದರ್ಶನೀಯ ರೂಪವನ್ನಾಂತು ಆ ನಿಶಾಚರನು ಆ ವನ ಮತ್ತು ಶ್ರೀರಾಮನ ಆಶ್ರಮವನ್ನು ಪ್ರಕಾಶಿತಗೊಳಿಸುತ್ತಾ ಎಲ್ಲೆಡೆ ಉತ್ತಮ ಹುಲ್ಲನ್ನು ಮೇಯುತ್ತಾ ಓಡಾಡಲುತೊಡಗಿದನು.॥20-21॥

ಮೂಲಮ್ - 22

ರೌಪ್ಯೈರ್ಬಿಂದುಶತೈಶ್ಚಿತ್ರಂ ಭೂತ್ವಾ ಚ ಪ್ರಿಯದರ್ಶನಃ ।
ವಿಟಪೀನಾಂ ಕಿಸಲಯಾನ್ ಭಕ್ಷಯನ್ವಿ ಚಚಾರ ಹ ॥

ಅನುವಾದ

ಸಾವಿರಾರು ಬೆಳ್ಳಿಯ ಚುಕ್ಕಿಗಳಿಂದ ಕೂಡಿದ ವಿಚಿತ್ರ ರೂಪಧರಿಸಿಕೊಂಡ ಆ ಮೃಗವು ಬಹಳ ಪ್ರಿಯಾವಾಗಿ ಕಾಣುತ್ತಿತ್ತು. ಅದು ವೃಕ್ಷಗಳ ಎಳೆಯ ತಳಿರುಗಳನ್ನು ತಿನ್ನುತ್ತಾ ಅತ್ತ-ಇತ್ತ ಸಂಚರಿಸತೊಡಗಿತು.॥22॥

ಮೂಲಮ್ - 23

ಕದಲೀಗೃಹಕಂ ಗತ್ವಾ ಕರ್ಣಿಕಾರಾನಿತಸ್ತತಃ ।
ಸಮಾಶ್ರಯನ್ ಮಂದಗತಿಂ ಸೀತಾಸಂದರ್ಶನಂ ತತಃ ॥

ಅನುವಾದ

ಬಾಳೆಯ ತೋಟಕ್ಕೆ ಹೋಗಿ, ಅದು ಕಣಗಿಲೆ ಕುಂಜಕ್ಕೆ ಹೋಗುತ್ತಾ, ಮತ್ತೆ ಪುನಃ ಸೀತೆಯ ಕಣ್ಣಿಗೆ ಬೀಳುವಂತಹ ಸ್ಥಳಕ್ಕೆ ಹೋಗಿ ಸುತ್ತಲೂ ಸುತ್ತತೊಡಗಿತು.॥23॥

ಮೂಲಮ್ - 24

ರಾಜೀವಚಿತ್ರಪೃಷ್ಠಃ ಸ ವಿರರಾಜ ಮಹಾಮೃಗಃ ।
ರಾಮಾಶ್ರಮಪದಾಭ್ಯಾಶೇ ವಿಚಚಾರ ಯಥಾಸುಖಮ್ ॥

ಅನುವಾದ

ಅದರ ಪೃಷ್ಠಭಾಗವು ಕಮಲದ ಕೇಸರದಂತೆ ಸ್ವರ್ಣ ವರ್ಣ ಇರುವುದರಿಂದ ವಿಚಿತ್ರವಾಗಿ ಕಾಣುತ್ತಿತ್ತು. ಇದರಿಂದ ಆ ಮಹಾಮೃಗವು ಶೋಭಿಸುತ್ತಿತ್ತು. ಶ್ರೀರಾಮನ ಆಶ್ರಮದ ಬಳಿಯಲ್ಲೇ ಅದು ಸ್ವೇಚ್ಛೆಯಾಗಿ ವಿಹರಿಸುತ್ತಿತ್ತು.॥24॥

ಮೂಲಮ್ - 25

ಪುನರ್ಗತ್ವಾ ನಿವೃತ್ತಶ್ಚ ವಿಚಚಾರ ಮೃಗೋತ್ತಮಃ ।
ಗತ್ವಾ ಮುಹೂರ್ತಂ ತ್ವರಯಾ ಪುನಃ ಪ್ರತಿನಿವರ್ತತೇ ॥

ಅನುವಾದ

ಆ ಶ್ರೇಷ್ಠಮೃಗವು ನೆಗೆಯುತ್ತಾ ಸ್ವಲ್ಪ ದೂರ ಹೋಗಿ ಪುನಃ ಹತ್ತಿರ ಬರುತ್ತಿತ್ತು. ಮತ್ತು ಅಲ್ಲೇ ಸುತ್ತಾಡುತ್ತಿತ್ತು. ಮುಹೂರ್ತಮಾತ್ರ ಮರೆಯಾಗಿ ಮತ್ತೆ ತಕ್ಷಣ ಪ್ರಕಟವಾಗುತ್ತಿತ್ತು.॥25॥

ಮೂಲಮ್ - 26

ವಿಕ್ರೀಡಂಶ್ಚ ಕ್ವಚಿದ್ ಭೂಮೌ ಪುನರೇವ ನಿಷೀದತಿ ।
ಆಶ್ರಮದ್ವಾರಮಾಗಮ್ಯ ಮೃಗಯೂಥಾನಿ ಗಚ್ಛತಿ ॥

ಅನುವಾದ

ಅದು ಕೆಲವೆಡೆ ಆಡುತ್ತಾ, ನೆಗೆಯುತ್ತಾ, ಮತ್ತೆ ನೆಲದಲ್ಲಿ ಕುಳಿತುಬಿಡುತ್ತಿತ್ತು. ಬಳಿಕ ಆಶ್ರಮದ ಬಾಗಿಲಿಗೆ ಬಂದು ಜಿಂಕೆಗಳ ಗುಂಪಿನ ಹಿಂದೆ ಹಿಂದೆ ಹೋಗುತ್ತಿತ್ತು.॥26॥

ಮೂಲಮ್ - 27

ಮೃಗಯೂಥೈರನುಗತಃ ಪುನರೇವ ನಿವರ್ತತೇ ।
ಸೀತಾದರ್ಶನಮಾಕಾಂಕ್ಷನ್ ರಾಕ್ಷಸೋ ಮೃಗತಾಂ ಗತಃ ॥

ಅನುವಾದ

ಅನಂತರ ಮೃಗಗಳ ಗುಂಪಿನೊಂದಿಗೆ ಪುನಃ ಮರಳಿ ಬರುತ್ತಿತ್ತು. ಆ ಮೃಗರೂಪೀ ರಾಕ್ಷಸನ ಮನಸ್ಸಿನಲ್ಲಿ ಹೇಗಾದರೂ ಸೀತೆಯ ದೃಷ್ಟಿ ನನ್ನ ಮೇಲೆ ಬೀಳಲಿ ಎಂಬ ಅಭಿಲಾಶೆ ಇತ್ತು.॥27॥

ಮೂಲಮ್ - 28½

ಪರಿಭ್ರಮತಿ ಚಿತ್ರಾಣಿ ಮಂಡಲಾನಿ ವಿನಿಷ್ಪತನ್ ।
ಸಮುದ್ವೀಕ್ಷ್ಯ ಚ ತಂ ಸರ್ವೇ ತಂ ಮೃಗಾ ಯೇಽನ್ಯೇ ವನೇಚರಾಃ ॥
ಉಪಗಮ್ಯ ಸಮಾಘ್ರಾಯ ವಿದ್ರವಂತಿ ದಿಶೋ ದಶ ।

ಅನುವಾದ

ಸೀತೆಯ ಬಳಿಗೆ ಬಂದಾಗ ಅದು ವಿಚಿತ್ರ ಚೇಷ್ಟೆಗಳನ್ನು ತೋರುತ್ತಾ ಸುತ್ತುತ್ತಿತ್ತು. ಆ ವನದಲ್ಲಿ ಸಂಚರಿಸುವ ಇತರ ಮೃಗಗಳೆಲ್ಲ ಅದನ್ನು ನೋಡಿ ಹತ್ತಿರ ಬಂದು ಅದನ್ನು ಮೂಸಿ ಹತ್ತು ದಿಕ್ಕುಗಳಿಗೆ ಓಡಿ ಹೋಗುತ್ತಿದ್ದವು.॥28½॥

ಮೂಲಮ್ - 29½

ರಾಕ್ಷಸಃ ಸೋಽಪಿ ತಾನ್ವನ್ಯಾನ್ ಮೃಗಾನ್ ಮೃಗವಧೇ ರತಃ॥
ಪ್ರಚ್ಛಾದನಾರ್ಥಂ ಭಾವಸ್ಯ ನ ಭಕ್ಷಯತಿ ಸಂಸ್ಪೃಶನ್ ।

ಅನುವಾದ

ರಾಕ್ಷಸ ಮಾರೀಚನು ಮೃಗಗಳ ವಧೆಯಲ್ಲೇ ತತ್ಪರನಾಗಿದ್ದರೂ ಆಗ ತನ್ನ ಸ್ವಭಾವವನ್ನು ಅಡಗಿಸಿಕೊಳ್ಳಲು ಆ ಕಾಡಿನ ಜಿಂಕೆಗಳು ಸ್ಪರ್ಶಿಸಿದರೂ ಅವನ್ನು ತಿನ್ನುತ್ತಿರಲಿಲ್ಲ.॥29½॥

ಮೂಲಮ್ - 30

ತಸ್ಮಿನ್ನೇವ ತತಃ ಕಾಲೇ ವೈದೇಹೀ ಶುಭಲೋಚನಾ॥

ಮೂಲಮ್ - 31

ಕುಸುಮಾಪಚಯೇ ವ್ಯಗ್ರಾ ಪಾದಪಾನತ್ಯವರ್ತತ ।
ಕರ್ಣಿಕಾರಾನಶೋಕಾಂಶ್ಚ ಚೂತಾಂಶ್ಚಮದಿರೇಕ್ಷಣಾ ॥

ಅನುವಾದ

ಅದೇ ಸಮಯದಲ್ಲಿ ಶುಭದರ್ಶನಳಾದ ವಿದೇಹನಂದಿನೀ ಸೀತೆಯು ಅಶೋಕ, ಕಣಗಿಲೆ, ಮುಂತಾದ ಹೂವನ್ನು ಕೀಳುವ ಉತ್ಸಾಹದಿಂದ ಮಾವಿನ ಮರವನ್ನು ದಾಟಿ ಆ ಕಡೆಗೆ ಬಂದಳು.॥30-31॥

ಮೂಲಮ್ - 32½

ಕುಸುಮಾನ್ಯಪಚಿನ್ವಂತೀ ಚಚಾರ ರುಚಿರಾನನಾ ।
ಅನರ್ಹಾವನವಾಸಸ್ಯ ಸಾ ತಂ ರತ್ನಮಯಂ ಮೃಗಮ್ ॥
ಮುಕ್ತಾಮಣಿವಿಚಿತ್ರಾಂಗಂ ದದರ್ಶ ಪರಮಾಂಗನಾ ।

ಅನುವಾದ

ಹೂವುಗಳನ್ನು ಬಿಡಿಸುತ್ತಾ ಅವಳು ಅಲ್ಲೇ ತಿರುಗುತ್ತಿದ್ದಳು. ಆಕೆಯ ಮುಖ ಬಹಳ ಸುಂದರವಾಗಿತ್ತು. ಆಕೆಯು ವನವಾಸದ ಕಷ್ಟಗಳನ್ನು ಅನುಭವಿಸಲು ಯೋಗ್ಯಳಾಗಿರಲಿಲ್ಲ. ಪರಮಸುಂದರೀ ಸೀತೆಯು ಆ ರತ್ನಮಯ ಮೃಗವನ್ನು ನೋಡಿದಳು. ಅದರ ಪ್ರತಿಯೊಂದು ಅಂಗವು ಮುಕ್ತಾಮಣಿಗಳಿಂದ ಚಿತ್ರಿಸಿದಂತೆ ಕಾಣುತ್ತಿತ್ತು.॥32½॥

ಮೂಲಮ್ - 33½

ತಂ ವೈ ರುಚಿರದಂತೋಷ್ಠಂ ರೂಪ್ಯಧಾತುತನೂರುಹಮ್ ॥
ವಿಸ್ಮಯೋತ್ಫುಲ್ಲನಯನಾ ಸಸ್ನೇಹಂ ಸಮುದೈಕ್ಷತ ।

ಅನುವಾದ

ಅದರ ಹಲ್ಲು, ತುಟಿಗಳು ಬಹಳ ಸುಂದರವಾಗಿತ್ತು ಹಾಗೂ ಶರೀರದ ರೋಮಗಳು ಬೆಳ್ಳಿ, ತಾಮ್ರ ಮುಂತಾದ ಧಾತುಗಳಿಂದ ಉಂಟಾದಂತೆ ಅನಿಸುತ್ತಿತ್ತು. ಅದರ ಮೇಲೆ ದೃಷ್ಟಿ ಬೀಳುತ್ತಲೇ ಸೀತೆಯ ಕಣ್ಣುಗಳು ಆಶ್ಚರ್ಯದಿಂದ ಅರಳಿತು ಮತ್ತು ಅವಳು ಬಹಳ ಸ್ನೇಹದಿಂದ ಅದನ್ನು ಅವಲೋಕಿಸತೊಡಗಿದಳು.॥33½॥

ಮೂಲಮ್ - 34½

ಸ ಚ ತಾಂ ರಾಮದಯಿತಾಂ ಪಶ್ಯನ್ ಮಾಯಾಮಯೋ ಮೃಗಃ ॥
ವಿಚಚಾರ ತತಸ್ತತ್ರ ದೀಪಯನ್ನಿವ ತದ್ವನಮ್ ।

ಅನುವಾದ

ಆ ಮಾಯಾಮೃಗವೂ ಕೂಡ ಪ್ರಾಣವಲ್ಲಭೆ ಸೀತೆಯನ್ನು ನೋಡಿ, ಆ ವನವನ್ನು ಬೆಳಗುತ್ತಾ ಅಲ್ಲೇ ಸಂಚರಿಸತೊಡಗಿತು.॥34½॥

ಮೂಲಮ್ - 35

ಅದೃಷ್ಟಪೂರ್ವಂ ದೃಷ್ಟ್ವಾ ತಂ ನಾನಾರತ್ನಮಯಂ ಮೃಗಮ್ ।
ವಿಸ್ಮಯಂ ಪರಮಂ ಸೀತಾ ಜಗಾಮ ಜನಕಾತ್ಮಜಾ ॥

ಅನುವಾದ

ಸೀತೆಯು ಅಂತಹ ಮೃಗವನ್ನು ಹಿಂದೆಂದೂ ನೋಡಿರಲಿಲ್ಲ. ಅದು ನಾನಾ ಪ್ರಕಾರದ ರತ್ನಗಳಿಂದ ಮಾಡಿದಂತೆ ಅನಿಸುತ್ತಿತ್ತು. ಅದನ್ನು ನೋಡಿ ಜಾನಕಿಗೆ ಬಹಳ ವಿಸ್ಮಯವಾಯಿತು.॥35॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥42॥