०२९ खरनिर्भर्त्सनम्

वाचनम्
ಭಾಗಸೂಚನಾ

ಶ್ರೀರಾಮನಿಂದ ಖರನ ನಿಂದನೆ, ಖರನ ಕಠೋರವಾದ ಪ್ರತ್ಯುತ್ತರ, ಖರನಿಂದ ಗದಾಪ್ರಹಾರ, ಶ್ರೀರಾಮನಿಂದ ಅದರ ಖಂಡನೆ

ಮೂಲಮ್ - 1

ಖರಂ ತು ವಿರಥಂ ರಾಮೋ ಗದಾಪಾಣಿಮವಸ್ಥಿತಮ್ ।
ಮೃದು ಪೂರ್ವಂ ಮಹಾತೇಜಾಃ ಪರುಷಂ ವಾಕ್ಯಮಬ್ರವೀತ್ ॥

ಅನುವಾದ

ರಥಹೀನನಾಗಿ ಗದೆಯನ್ನೆತ್ತಿಕೊಂಡು ಎದುರಿಗೆ ನಿಂತಿದ್ದ ಖರನನ್ನು ನೋಡಿ ಮಹಾತೇಜಸ್ವೀ, ಭಗವಾನ್ ಶ್ರೀರಾಮನು ಮೊದಲಿಗೆ ಮೃದುವಾಗಿ ಮತ್ತೆ ಕಠೋರವಾಣಿಯಿಂದ ನುಡಿದನು-॥1॥

ಮೂಲಮ್ - 2

ಗಜಾಶ್ವರಥಸಂಬಾಧೇ ಬಲೇ ಮಹತಿ ತಿಷ್ಠತಾ ।
ಕೃತಂ ತೇದಾರುಮಂ ಕರ್ಮ ಸರ್ವಲೋಕಜುಗುಪ್ಸಿತಮ್ ॥

ಮೂಲಮ್ - 3

ಉದ್ವೇಜನೀಯೋ ಭೂತಾನಾಂ ನೃಶಂಸಃ ಪಾಪಕರ್ಮಕೃತ್ ।
ತ್ರಯಾಣಾಮಪಿ ಲೋಕಾನಾಮೀಶ್ಚರೋಽಪಿ ನ ತಿಷ್ಠತಿ ॥

ಮೂಲಮ್ - 4

ಕರ್ಮ ಲೋಕವಿರುದ್ಧಂ ತು ಕುರ್ವಾಣಂ ಕ್ಷಣದಾಚರ ।
ತೀಕ್ಷ್ಣಂ ಸರ್ವಜನೋ ಹಂತಿ ಸರ್ಪಂ ದುಷ್ಟಮಿವಾಗತಮ್ ॥

ಅನುವಾದ

ನಿಶಾಚರನೇ! ಆನೆ, ಕುದುರೆ, ಮತ್ತು ರಥಗಳಿಂದ ಕೂಡಿದ ವಿಶಾಲ ಸೈನ್ಯದ ನಡುವೆ ನಿಂತು (ಅಸಂಖ್ಯ ರಾಕ್ಷಸರ ಒಡೆಯನೆಂಬ ಅಭಿವಾನದಿಂದ) ನೀನು ಸದಾ ಮಾಡುತ್ತಿದ್ದ ಕ್ರೂರವಾದ ಕರ್ಮವು ಸಮಸ್ತ ಜನರಿಂದ ನಿಂದಿತವಾಗಿದೆ. ಸಮಸ್ತ ಪ್ರಾಣಿಗಳನ್ನು ಉದ್ವೇಗಗೊಳಿಸುವ ಕ್ರೂರಿ ಮತ್ತು ಪಾಪಾಚಾರಿಯು ಮೂರು ಲೋಕಗಳ ಒಡೆಯನಾಗಿದ್ದರೂ ಹೆಚ್ಚುಕಾಲ ಉಳಿಯಲಾರನು. ಲೋಕ ವಿರೋಧಿ ಕಠೋರ ಕರ್ಮಮಾಡುವಂತಹವನನ್ನು ಎಲ್ಲ ಜನರು ಎದುರಿಗೆ ಬಂದಿರುವ ಸರ್ಪದಂತೆ ಹೊಡೆಯುತ್ತಾರೆ.॥2-4॥

ಮೂಲಮ್ - 5

ಲೋಭಾತ್ಪಾಪಾನಿ ಕುರ್ವಾಣಃ ಕಾಮಾದ್ವಾ ಯೋನ ಬುಧ್ಯತೇ ।
ಭ್ರಷ್ಟಃ ಪಶ್ಯತಿ ತಸ್ಯಾಂತಂ ಬ್ರಾಹ್ಮಣೀ ಕರಕಾದಿವ ॥

ಅನುವಾದ

ಪ್ರಾಪ್ತವಾಗದ ವಸ್ತುವಿನ ಇಚ್ಛೆಯನ್ನು ‘ಕಾಮ’ ವೆಂದು ಹೇಳುತ್ತಾರೆ. ಪ್ರಾಪ್ತವಾದ ವಸ್ತುವು ಹೆಚ್ಚೆಚ್ಚು ಪಡೆಯುವ ಇಚ್ಛೆಯ ಹೆಸರು ‘ಲೋಭ’ವಾಗಿದೆ. ಕಾಮ ಅಥವಾ ಲೋಭದಿಂದ ಪ್ರೇರಿತನಾಗಿ ಪಾಪ ಮಾಡುವವನು ತನ್ನ ವಿನಾಶಕಾರಿ ಪರಿಣಾಮವನ್ನು ತಿಳಿಯದೆ ಆ ಪಾಪದಲ್ಲೇ ಹರ್ಷಪಡುವವನು - ಮಳೆಯ ಜೊತೆಗೆ ಬಿದ್ದ ಆಲಿಕಲ್ಲುಗಳನ್ನು ತಿಂದು ಬ್ರಾಹ್ಮಣೀ (ರಕ್ತಪುಚ್ಛಕ) ಎಂಬ ಹುಳ ತನ್ನ ನಾಶಮಾಡಿಕೊಳ್ಳುವಂತೆ, (ಕೆಂಪುಬಾಲವುಳ್ಳ ಒಂದು ಹುಳು ಆಲಿಕಲ್ಲು ತಿಂದಾಗ ಸತ್ತುಹೋಗುತ್ತದೆ. ಅದು ಅದಕ್ಕೆ ವಿಷದಂತೆ ಆಗಿದೆ. ಈ ಮಾತು ಲೋಕ ಪ್ರಸಿದ್ಧವಾಗಿದೆ.) ತನ್ನ ವಿನಾಶರೂಪೀ ಪರಿಣಾಮವನ್ನು ನೋಡುವುದಿಲ್ಲ.॥5॥

ಮೂಲಮ್ - 6

ವಸತೋ ದಂಡಕಾರಣ್ಯೇತಾಪಸಾನ್ ಧರ್ಮಚಾರಿಣಃ ।
ಕಿಂ ನು ಹತ್ವಾ ಮಹಾಭಾಗಾನ್ ಫಲಂ ಪ್ರಾಪ್ಸ್ಯಸಿ ರಾಕ್ಷಸ ॥

ಅನುವಾದ

ರಾಕ್ಷಸನೇ! ದಂಡಕಾರಣ್ಯದಲ್ಲಿ ವಾಸಿಸುವ ತಪಸ್ವೀ, ಧರ್ಮಪರಾಯಣ ಮಹಾಭಾಗ ಮುನಿಗಳನ್ನು ಹತ್ಯೆಮಾಡಿ ನೀನು ಯಾವ ಫಲವನ್ನು ಪಡೆಯುವೆಯೋ ತಿಳಿಯದು.॥6॥

ಮೂಲಮ್ - 7

ನ ಚಿರಂ ಪಾಪಕರ್ಮಾಣಃ ಕ್ರೂರಾ ಲೋಕಜುಗುಪ್ಸಿತಾಃ ।
ಐಶ್ವರ್ಯಂ ಪ್ರಾಪ್ಯ ತಿಷ್ಠಂತಿ ಶೀರ್ಣಮೂಲಾ ಇವ ದ್ರುಮಾಃ ॥

ಅನುವಾದ

ಬೇರುಗಳು ಸಡಿಲಾದ ಮರವು ಹೆಚ್ಚುದಿನ ಉಳಿಯಲಾರದೋ ಹಾಗೆಯೇ ಪಾಪಕರ್ಮ ಮಾಡುವ ಲೋಕನಿಂದಿತ ಕ್ರೂರ ಪುರುಷರು (ಯಾವುದೋ ಪೂರ್ವದ ಪುಣ್ಯದ ಪ್ರಭಾವದಿಂದ) ಐಶ್ವರ್ಯವನ್ನು ಪಡೆದಿದ್ದರೂ ಚಿರಕಾಲ ಅದರಲ್ಲಿ ಇರಲಾರರು. (ಅದರಿಂದ ಭ್ರಷ್ಟರಾಗುತ್ತಾರೆ..॥7॥

ಮೂಲಮ್ - 8

ಅವಶ್ಯಂ ಲಭತೇ ಕುರ್ತಾ ಫಲಂ ಪಾಪಸ್ಯ ಕರ್ಮಣಃ ।
ಘೋರಂ ಪರ್ಯಾಗತೇ ಕಾಲೇ ದ್ರುಮಃ ಪುಷ್ಪಮಿವಾರ್ತವಮ್ ॥

ಅನುವಾದ

ಸಮಯ ಬಂದಾಗ ವೃಕ್ಷಗಳಲ್ಲಿ ಋತುಗಳಿಗನುಸಾರ ಹೂವು ಬಿಡುವಂತೆಯೇ ಪಾಪಕರ್ಮ ಮಾಡುವ ಮನುಷ್ಯನಿಗೆ ಸಮಯಾನುಸಾರ ತನ್ನ ಪಾಪಕರ್ಮದ ಭಯಂಕರ ಫಲವು ಅವಶ್ಯವಾಗಿ ಸಿಗುತ್ತದೆ.॥8॥

ಮೂಲಮ್ - 9

ನಚಿರಾತ್ಪ್ರಾಪ್ಯತೇ ಲೋಕೇ ಪಾಪಾನಾಂ ಕರ್ಮಣಾಂ ಫಲಮ್ ।
ಸವಿಷಾಣಾಮಿವಾನ್ನಾನಾಂ ಭುಕ್ತಾನಾಂ ಕ್ಷಣದಾಚರ ॥

ಅನುವಾದ

ನಿಶಾಚರನೇ! ತಿಂದಿರುವ ವಿಷಮಿಶ್ರಿತ ಅನ್ನದ ಪರಿಣಾಮವು ಕೂಡಲೇ ಭೋಗಿಸಬೇಕಾಗುವಂತೆಯೇ ಲೋಕದಲ್ಲಿ ಮಾಡಿದ ಪಾಪಕರ್ಮಗಳ ಫಲವು ಶೀಘ್ರವಾಗಿ ಪ್ರಾಪ್ತವಾಗುತ್ತದೆ.॥9॥

ಮೂಲಮ್ - 10

ಪಾಪಮಾಚರತಾಂ ಘೋರಂ ಲೋಕಸ್ಯಾಪ್ರಿಯಮಿಚ್ಛತಾಮ್ ।
ಅಹಮಾಸಾದಿತೋ ರಾಜ್ಞಾ ಪ್ರಾಣಾನ್ ಹಂತುಂ ನಿಶಾಚರ ॥

ಅನುವಾದ

ರಾಕ್ಷಸನೇ! ಜಗತ್ತಿನ ಕೆಡುಕನ್ನು ಬಯಸುವವರಿಗೆ, ಘೋರ ಪಾಪ ಕರ್ಮದಲ್ಲಿ ತೊಡಗಿರುವವನಿಗೆ, ಪ್ರಾಣದಂಡ ಕೊಡಲಿಕ್ಕಾಗಿಯೇ ನನ್ನ ತಂದೆ ದಶರಥ ಮಹಾರಾಜರು ನನ್ನನ್ನು ಇಲ್ಲಿಗೆ ಕಳಿಸಿರುವರು.॥10॥

ಮೂಲಮ್ - 11

ಅದ್ಯ ಭಿತ್ವಾ ಮಯಾ ಮುಕ್ತಾಃ ಶರಾಃ ಕಾಂಚನಭೂಷಣಾಃ ।
ವಿದಾರ್ಯಾತಿಪತಿಷ್ಯಂತಿ ವಲ್ಮೀಕಮಿವ ಪನ್ನಗಾಃ ॥

ಅನುವಾದ

ಇಂದು ನಾನು ಬಿಟ್ಟ ಸುವರ್ಣಭೂಷಿತ ಬಾಣಗಳು ಹಾವು ಹುತ್ತವನ್ನು ಒಡೆದು ಹೊರಬರುವಂತೆ, ನಿನ್ನ ಶರೀರವನ್ನು ಹರಿದು ಭೂಮಿಯನ್ನು ವಿದೀರ್ಣಗೊಳಿಸಿ ಪಾತಾಳಕ್ಕೆ ಹೋಗಿ ಬೀಳುವವು.॥11॥

ಮೂಲಮ್ - 12

ಯೇ ತ್ವಯಾ ದಂಡಕಾರಣ್ಯೇ ಭಕ್ಷಿತಾಧರ್ಮಚಾರಿಣಃ ।
ತಾನದ್ಯ ನಿಹತಃ ಸಂಖ್ಯೇ ಸಸೈನ್ಯೋಽನುಗಮಿಷ್ಯಸಿ ॥

ಅನುವಾದ

ನೀನು ದಂಡಕಾರಣ್ಯದಲ್ಲಿ ಯಾವ ಧರ್ಮಪರಾಯಣ ಋಷಿಗಳನ್ನು ಭಕ್ಷಿಸಿರುವೆಯೋ, ಇಂದು ಯುದ್ಧದಲ್ಲಿ ಸತ್ತು ಹೋಗಿ ನೀನೂ ಕೂಡ ಅವರನ್ನು ಅನುಸರಿಸುವೆ.॥12॥

ಮೂಲಮ್ - 13

ಅದ್ಯ ತ್ವಾಂ ನಿಹತಂ ಬಾಣೈಃ ಪಶ್ಯಂತು ಪರಮರ್ಷಯಃ ।
ನಿರಯಸ್ಥಂ ವಿಮಾನಸ್ಥಾ ಯೇ ತ್ವಯಾ ನಿಹಿತಾಃ ಪುರಾ ॥

ಅನುವಾದ

ನೀನು ಮೊದಲು ಯಾರನ್ನು ವಧಿಸಿರುವೆಯೋ, ಆ ಮಹರ್ಷಿಗಳು ವಿಮಾನದಲ್ಲಿ ಕುಳಿತು ಇಂದು ನನ್ನ ಬಾಣಗಳಿಂದ ನೀನು ಸತ್ತುಹೋಗಿ ನರಕತುಲ್ಯ ಕಷ್ಟಭೋಗಿಸುವುದನ್ನು ನೋಡುವರು.॥13॥

ಮೂಲಮ್ - 14

ಪ್ರಹರ ಸ್ವಂ ಯಥಾಕಾಮಂ ಕುರು ಯತ್ನಂ ಕುಲಾಧಮ ।
ಅದ್ಯ ತೇ ಪಾತಯಿಷ್ಯಾಮಿ ಶಿರಸ್ತಾಲಫಲಂ ಯಥಾ ॥

ಅನುವಾದ

ಕುಲಾಧಮನೇ! ನಿನಗೆ ಇಚ್ಛೆ ಇದ್ದಷ್ಟು ಪ್ರಹಾರ ಮಾಡು, ಸಾಧ್ಯವಿದ್ದಷ್ಟು ನನ್ನನ್ನು ಸೋಲಿಸಲು ಪ್ರಯತ್ನಿಸು. ಆದರೆ ಇಂದು ನಾನು ನಿನ್ನ ತಲೆಯನ್ನು ತಾಳೆಹಣ್ಣನ್ನು ಕೀಳುವಂತೆ ಅವಶ್ಯವಾಗಿ ಕಡಿದು ಉರುಳಿಸುವೆನು.॥14॥

ಮೂಲಮ್ - 15

ಏವಮುಕ್ತಸ್ತು ರಾಮೇಣ ಕ್ರುದ್ಧಃ ಸಂರಕ್ತಲೋಚನಃ ।
ಪ್ರತ್ಯುವಾಚ ಖರೋ ರಾಮಂ ಪ್ರಹಸನ್ ಕ್ರೋಧಮೂರ್ಛಿತಃ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಖರನು ಕುಪಿತನಾಗಿ, ಅವನ ಕಣ್ಣುಗಳು ಕೆಂಪಾದವು. ಅವನು ಕ್ರೋಧದಿಂದ ಮೈಮರೆತು ನಗುತ್ತಾ ಶ್ರೀರಾಮನಿಗೆ ಹೀಗೆ ಪ್ರತ್ಯುತ್ತರಿಸತೊಡಗಿದನು.॥15॥

ಮೂಲಮ್ - 16

ಪ್ರಾಕೃತಾನ್ರಾಕ್ಷಸಾನ್ ಹತ್ವಾ ಯುದ್ಧೇ ದಶರಥಾತ್ಮಜ ।
ಆತ್ಮನಾ ಕಥಮಾತ್ಮಾನಮಪ್ರಶಸ್ಯಂ ಪ್ರಶಂಸಸಿ ॥

ಅನುವಾದ

ದಶರಥಕುಮಾರ! ನೀನು ಸಾಧಾರಣ ರಾಕ್ಷಸರನ್ನು ಯುದ್ಧದಲ್ಲಿ ಕೊಂದು ಸ್ವತಃ ತನ್ನನ್ನು ಪ್ರಶಂಸಿಸಿಕೊಳ್ಳುತ್ತಿರುವೆಯಲ್ಲ? ನೀನು ಪ್ರಶಂಸೆಗೆ ಸರ್ವಥಾ ಯೋಗ್ಯನಲ್ಲ.॥16॥

ಮೂಲಮ್ - 17

ವಿಕ್ರಾಂತಾ ಬಲವಂತೋ ವಾ ಯೇ ಭವಂತಿ ನರರ್ಷಭಾಃ ।
ಕಥಯಂತಿ ನ ತೇ ಕಿಂಚಿತ್ ತೇಜಸಾ ಚಾತಿಗರ್ವಿತಾಃ ॥

ಅನುವಾದ

ಯಾವ ಶ್ರೇಷ್ಠ ಪುರುಷನು ಪರಾಕ್ರಮಿ ಅಥವಾ ಬಲವಂತನಾಗಿರುವನೋ, ಅವನು ತನ್ನ ಪ್ರತಾಪದ ಗರ್ವದಿಂದ ಯಾವ ಮಾತನ್ನೂ ಆಡುವುದಿಲ್ಲ. ತನ್ನ ವಿಷಯದಲ್ಲಿ ಮೌನವಾಗಿಯೇ ಇರುತ್ತಾನೆ.॥17॥

ಮೂಲಮ್ - 18

ಪ್ರಾಕೃತಾಸ್ತ್ವಕೃತಾತ್ಮಾನೋ ಲೋಕೇ ಕ್ಷತ್ರಿಯಪಾಂಸನಾಃ ।
ನಿರರ್ಥಕಂ ವಿಕತ್ಥಂತೇ ಯಥಾ ರಾಮ ವಿಕತ್ಥಸೇ ॥

ಅನುವಾದ

ರಾಮಾ! ಈಗ ನೀನು ತನ್ನ ವಿಷಯದಲ್ಲಿ ಹೊಗಳಿಕೊಳ್ಳುತ್ತಿರುವೆಯೋ ಅಂತೆಯೇ ಕ್ಷುದ್ರನೂ, ಅಜಿತಾತ್ಮನೂ, ಕ್ಷತ್ರಿಯ ಕುಲಕಲಂಕನೂ, ಆದವನೇ ಜಗತ್ತಿನಲ್ಲಿ ತನ್ನ ಹಿರಿಮೆಯನ್ನು ವ್ಯರ್ಥವಾಗಿ ಕೊಚ್ಚಿಕೊಳ್ಳುವನು.॥18॥

ಮೂಲಮ್ - 19

ಕುಲಂ ವ್ಯಪದಿಶನ್ ವೀರಃ ಸಮರೇ ಕೋಽಭಿಧಾಸ್ಯತಿ ।
ಮೃತ್ಯುಕಾಲೇ ತು ಸಂಪ್ರಾಪ್ತೇ ಸ್ವಯಮಪ್ರಸ್ತವೇ ಸ್ತವಮ್ ॥

ಅನುವಾದ

ಮೃತ್ಯುವಿಗೆ ಸಮಾನವಾದ ಯುದ್ಧದ ಸಂದರ್ಭ ಒದಗಿದಾಗ ಯಾವುದೇ ಪ್ರಸ್ತಾಪವಿಲ್ಲದೆಯೇ ಸಮರಾಂಗಣದಲ್ಲಿ ಯಾವ ವೀರನು ತನ್ನ ಕುಲೀನತೆಯನ್ನು ಪ್ರಕಟಿಸುತ್ತಾ ತನ್ನನ್ನು ತಾನೇ ಸ್ತುತಿಸಿಕೊಳ್ಳುವನು.॥19॥

ಮೂಲಮ್ - 20

ಸರ್ವಥಾ ತು ಲಘುತ್ವಂ ತೇ ಕತ್ಥನೇನ ವಿದರ್ಶಿತಮ್ ।
ಸುವರ್ಣಪ್ರತಿರೂಪೇಣ ತಪ್ತೇನೇವ ಕುಶಾಗ್ನಿನಾ ॥

ಅನುವಾದ

ಹಿತ್ತಾಳೆಯು ಸುವರ್ಣಶೋಧಕ ಬೆಂಕಿಯಲ್ಲಿ ಕಾಯಿಸಿದಾಗ ತನ್ನ ಲಘುತ್ವ (ಕಪ್ಪುಬಣ್ಣ)ವನ್ನೇ ವ್ಯಕ್ತಪಡಿಸುವಂತೆಯೇ ನೀನು ಬಡಾಯಿ ಕೊಚ್ಚಿದ್ದರಿಂದ ತನ್ನ ಸಣ್ಣತನ ಪ್ರದರ್ಶನ ಮಾಡಿಕೊಟ್ಟಂತೆ ಆಯಿತು.॥20॥

ಮೂಲಮ್ - 21

ನ ತು ಮಾಮಿಹ ತಿಷ್ಠಂತಂ ಪಶ್ಯಸಿ ತ್ವಂ ಗದಾಧರಮ್ ।
ಧರಾಧರಮಿವಾಕಂಪ್ಯಂ ಪರ್ವತಂ ಧಾತುಭಿಶ್ಚಿತಮ್ ॥

ಅನುವಾದ

ನಾನಾ ಪ್ರಕಾರದ ಧಾತುಗಳ ಗಣಿಗಳಿಂದ ಕೂಡಿದ ಪೃಥ್ವಿವಿಯನ್ನು ಧಾರಣಮಾಡುವ ಅವಿಚಲ ಕುಲ ಪರ್ವತದಂತೆ ನಾನು ಇಲ್ಲಿ ಸ್ಥಿರಭಾವದಿಂದ ನಿನ್ನ ಎದುರಿಗೆ ಗದೆಯನ್ನೆತ್ತಿಕೊಂಡು ನಿಂತಿರುವುದು ನಿನಗೆ ಕಾಣುತ್ತಿಲ್ಲವೆ.॥21॥

ಮೂಲಮ್ - 22

ಪರ್ಯಾಪ್ತೋಽಹಂ ಗದಾಪಾಣಿರ್ಹಂತು ಪ್ರಾಣಾನ್ರಣೇ ತವ ।
ತ್ರಯಾಣಾಮಪಿ ಲೋಕಾನಾಂ ಪಾಶಹಸ್ತ ಇವಾಂತಕಃ ॥

ಅನುವಾದ

ನಾನೊಬ್ಬನೇ ಪಾಶಧಾರೀ ಯಮನಂತೆ ಗದೆಯನ್ನು ಕೈಯಲ್ಲೆತ್ತಿಕೊಂಡು ರಣಭೂಮಿಯಲ್ಲಿ ನಿನ್ನ ಮತ್ತು ಮೂರು ಲೋಕಗಳ ಜನರ ಪ್ರಾಣಗಳನ್ನು ತೆಗೆಯಲು ಶಕ್ತನಾಗಿದ್ದೇನೆ.॥22॥

ಮೂಲಮ್ - 23

ಕಾಮಂ ಬಹ್ವಪಿ ವಕ್ತವ್ಯಂ ತ್ವಯಿ ವಕ್ಷ್ಯಾಮಿ ನ ತ್ವಹಮ್ ।
ಅಸ್ತಂ ಪ್ರಾಪ್ನೋತಿ ಸವಿತಾ ಯುದ್ಧವಿಘ್ನಸ್ತತೋ ಭವೇತ್ ॥

ಅನುವಾದ

ನಿನ್ನ ವಿಷಯದಲ್ಲಿ ನಾನು ಇಚ್ಛಾನುಸಾರ ಬಹಳಷ್ಟು ಹೇಳಬಲ್ಲೆನು, ಆದರೂ ಈಗ ಏನನ್ನೂ ಹೇಳುವುದಿಲ್ಲ. ಏಕೆಂದರೆ ಸೂರ್ಯನು ಅಸ್ತಾಚಲಕ್ಕೆ ಹೋಗುತ್ತಿದ್ದಾನೆ, ಆದ್ದರಿಂದ ಯುದ್ಧದಲ್ಲಿ ವಿಘ್ನ ಉಂಟಾದೀತು.॥23॥

ಮೂಲಮ್ - 24

ಚತುರ್ದಶ ಸಹಸ್ರಾಣಿ ರಾಕ್ಷಸಾನಾಂ ಹತಾನಿ ತೇ ।
ತ್ವದ್ವಿನಾಶಾತ್ ಕರೋಮ್ಯದ್ಯ ತೇಷಾಮಶ್ರುಪ್ರಮಾರ್ಜನಮ್ ॥

ಅನುವಾದ

ನೀನು ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿರುವೆ, ಆದ್ದರಿಂದ ಇಂದು ನಿನ್ನನ್ನು ವಿನಾಶಗೈದು ನಾನು ಅವರ ಬಂಧುಗಳ ಕಣ್ಣೀರನ್ನು ಒರೆಸುವೆನು ಮತ್ತು ಅವರ ಸಾವಿನ ಪ್ರತೀಕಾರ ತೀರಿಸಿಕೊಳ್ಳುವೆನು.॥24॥

ಮೂಲಮ್ - 25

ಇತ್ಯುಕ್ತ್ವಾ ಪರಮಕ್ರುದ್ಧಃಸ ಗದಾಂ ಪರಮಾಂಗದಾಮ್ ।
ಖರಶ್ಚಿಕ್ಷೇಪ ರಾಮಾಯ ಪ್ರದೀಪ್ತಾಮಶನಿಂ ಯಥಾ ॥

ಅನುವಾದ

ಹೀಗೆ ಹೇಳಿ ಅತ್ಯಂತ ಕ್ರೋಧಗೊಂಡು ಖರನು ಸ್ವರ್ಣವಿಭೂಷಿತ, ಪ್ರಜ್ವಲಿತ ಭಯಂಕರ ವಜ್ರದಂತಹ ಗದೆಯನ್ನು ಶ್ರೀರಾಮಚಂದ್ರನ ಮೇಲೆ ಪ್ರಯೋಗಿಸಿದನು.॥25॥

ಮೂಲಮ್ - 26

ಖರಬಾಹುಪ್ರಮುಕ್ತಾ ಸಾ ಪ್ರದೀಪ್ತಾಮಹತೀ ಗದಾ ।
ಭಸ್ಮ ವೃಕ್ಷಾಂಶ್ಚ ಗುಲ್ಮಾಂಶ್ಚ ಕೃತ್ವಾಗಾತ್ ತತ್ಸಮೀಪತಃ ॥

ಅನುವಾದ

ಖರನು ಎಸೆದಿರುವ ಆ ಪ್ರಕಾಶ ವಾನ ವಿಶಾಲಗದೆಯು ವೃಕ್ಷಗಳನ್ನೂ, ಲತೆಗಳನ್ನೂ ಭಸ್ಮಗೊಳಿಸುತ್ತಾ ಶ್ರೀರಾಮನ ಸಮೀಪಕ್ಕೆ ಬಂದಿತು.॥26॥

ಮೂಲಮ್ - 27

ತಾಮಾಪತಂತೀಂ ಮಹತೀಂ ಮೃತ್ಯುಪಾಶೋಪಮಾಂ ಗದಾಮ್ ।
ಅಂತರಿಕ್ಷಗತಾಂ ರಾಮಶ್ಚಿಚ್ಛೇದ ಬಹುಧಾ ಶರೈಃ ॥

ಅನುವಾದ

ಮೃತ್ಯುಪಾಶದಂತೆ ಆ ವಿಶಾಲ ಗದೆಯು ತನ್ನೆಡೆಗೆ ಬರುತ್ತಿರುವುದನ್ನು ನೋಡಿ ಶ್ರೀರಾಮನು ಬಾಣವನ್ನು ಹೂಡಿ ಅದನ್ನು ಆಕಾಶದಲ್ಲೇ ನುಚ್ಚುನೂರಾಗಿಸಿಬಿಟ್ಟನು.॥27॥

ಮೂಲಮ್ - 28

ಸಾ ವಿಶೀರ್ಣಾ ಶರೈರ್ಭಿನ್ನಾ ಪಪಾತ ಧರಣೀತಲೇ ।
ಗದಾ ಮಂತ್ರೌಷಧಿಬಲೈರ್ವ್ಯಾಲೀವ ವಿನಿಪಾತಿತಾ ॥

ಅನುವಾದ

ಯಾವುದಾದರೂ ಸರ್ಪಿಣಿಯನ್ನು ಮಂತ್ರ ಮತ್ತು ಔಷಧಗಳ ಬಲದಿಂದ ಬೀಳಿಸುವಂತೆಯೇ ಬಾಣಗಳಿಂದ ವಿವರ್ಣವಾಗಿ ತುಂಡು-ತುಂಡಾಗಿ ಆ ಗದೆಯು ಭೂಮಿಗೆ ಬಿದ್ದುಹೋಯಿತು.॥28॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥29॥