११८ अनसूयया आभरणदानम्

वाचनम्
ಭಾಗಸೂಚನಾ

ಸೀತಾ-ಅನಸೂಯೆಯರ ಸಂಭಾಷಣೆ, ಅನಸೂಯೆಯು ವೈದೇಹಿಗೆ ದಿವ್ಯವಾದ ಮಾಲ್ಯಾಭರಣಗಳನ್ನು ನೀಡಿದುದು, ಅನಸೂಯೆಯು ಕೇಳಿದಾಗ ಸೀತೆಯು ತನ್ನ ಸ್ವಯಂವರದ ಕಥೆಯನ್ನು ತಿಳಿಸಿದುದು

ಮೂಲಮ್ - 1

ಸಾ ತ್ವೇವಮುಕ್ತಾ ವೈದೇಹೀ ತ್ವನಸೂಯಾನಸೂಯಯಾ ।
ಪ್ರತಿಪೂಜ್ಯ ವಚೋ ಮಂದಂ ಪ್ರವಕ್ತುಮುಪಚಕ್ರಮೇ ॥

ಅನುವಾದ

ತಪಸ್ವಿನೀ ಅನಸೂಯೆಯು ಹೀಗೆ ಉಪದೇಶಿಸಿದಾಗ ಯಾರ ಕುರಿತೂ ದೋಷದೃಷ್ಟಿ ಇರಿಸದಿರುವ ವಿದೇಹ ರಾಜ ಕುಮಾರೀ ಸೀತೆಯು ಆಕೆಯ ವಚನಗಳನ್ನು ಭೂರಿ - ಭೂರಿ ಪ್ರಶಂಸಿಸಿ ನಿಧಾನವಾಗಿ ಹೀಗೆ ಹೇಳಲು ಪ್ರಾರಂಭಿಸಿದಳು.॥1॥

ಮೂಲಮ್ - 2

ನೈತದಾಶ್ಚರ್ಯಮಾರ್ಯಾಯಾಂ ಯನ್ಮಾಂ ತ್ವಮನುಭಾಷಸೇ ।
ವಿದಿತಂ ತು ಮಯಾಪ್ಯೇತದ್ ಯಥಾ ನಾರ್ಯಾಃ ಪತಿರ್ಗುರುಃ ॥

ಅನುವಾದ

ದೇವಿ! ನೀವು ಜಗತ್ತಿನ ಸ್ತ್ರೀಯರಲ್ಲಿ ಸರ್ವಶ್ರೇಷ್ಠರಾಗಿರುವಿರಿ. ನಿಮ್ಮಿಂದ ಇಂತಹ ಮಾತು ಕೇಳುವುದು ಆಶ್ಚರ್ಯದ ಸಂಗತಿಯಲ್ಲ. ನಾರಿಗೆ ಪತಿಯೇ ಗುರು ಆಗಿರುವನು, ಈ ವಿಷಯದಲ್ಲಿ ನೀವು ಉಪದೇಶಿಸಿದಂತೆ ನನಗೆ ಮೊದಲಿನಿಂದಲೂ ಅರಿವಿದೆ.॥2॥

ಮೂಲಮ್ - 3

ಯದ್ಯಪ್ಯೇಷ ಭವೇದ್ಭರ್ತಾ ಅನಾರ್ಯೋ ವೃತ್ತಿವರ್ಜಿತಃ ।
ಅದ್ವೈಧಮತ್ರ ವರ್ತವ್ಯಂ ಯಥಾಪ್ಯೇಷ ಮಯಾ ಭವೇತ್ ॥

ಅನುವಾದ

ನನ್ನ ಪತಿದೇವರು ಅನಾರ್ಯ (ಚರಿತ್ರಹೀನ) ಹಾಗೂ ಜೀವನ ನಿರ್ವಹಣೆಗೆ ನಿರ್ಧನನಾಗಿದ್ದರೂ ನಾನು ಯಾವುದನ್ನೂ ವಿವೇಚಿಸದೆ ಇವರ ಸೇವೆಯಲ್ಲಿ ತೊಡಗಿರುತ್ತಿದ್ದೆ.॥3॥

ಮೂಲಮ್ - 4

ಕಿಂ ಪುನರ್ಯೋ ಗುಣಶ್ಲಾಘ್ಯಃಸಾನುಕ್ರೋಶೋಜಿತೇಂದ್ರಿಯಃ ।
ಸ್ಥಿರಾನುರಾಗೋ ಧರ್ಮಾತ್ಮಾ ಮಾತೃವತ್ಪಿತೃವತ್ಪ್ರಿಯಃ ॥

ಅನುವಾದ

ಹೀಗಿದ್ದರೂ ಇವರು ತಮ್ಮ ಗುಣಗಳಿಂದಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಹಾಗಿರುವಾಗ ಇವರ ಸೇವೆಯಲ್ಲಿ ಇರುವುದರ ಬಗ್ಗೆ ಹೇಳುವುದೇನು? ಈ ರಘುನಾಥರು ಪರಮ ದಯಾಳುಗಳೂ, ಜಿತೇಂದ್ರಿಯರೂ, ದೃಢವಾದ ಅನುರಾಗವುಳ್ಳವರೂ, ಧರ್ಮಾತ್ಮರೂ ಆಗಿದ್ದು, ತಾಯಿ-ತಂದೆಯಂತೆ ಪ್ರಿಯರಾಗಿದ್ದಾರೆ.॥4॥

ಮೂಲಮ್ - 5

ಯಾಂ ವೃತ್ತಿಂ ವರ್ತತೇ ರಾಮಃ ಕೌಸಲ್ಯಾಯಾಂ ಮಹಾಬಲಃ ।
ತಾಮೇವ ನೃಪನಾರೀಣಾಮನ್ಯಾಸಾಮಪಿ ವರ್ತತೇ ॥

ಅನುವಾದ

ಮಹಾಬಲಿ ಶ್ರೀರಾಮನು ತನ್ನ ತಾಯಿ ಕೌಸಲ್ಯೆಯ ಕುರಿತು ವರ್ತಿಸುವಂತೆಯೇ ದಶರಥ ಮಹಾರಾಜರ ಇತರ ರಾಣಿಯರೊಂದಿಗೂ ವರ್ತಿಸುತ್ತಾರೆ.॥5॥

ಮೂಲಮ್ - 6

ಸಕೃದ್ ದೃಷ್ಟಾಸ್ವಪಿ ಸ್ತ್ರೀಷು ನೃಪೇಣ ನೃಪವತ್ಸಲಃ ।
ಮಾತೃವದ್ವರ್ತತೇ ವೀರೋ ಮಾನಮುತ್ಸೃಜ್ಯ ಧರ್ಮವಿತ್ ॥

ಅನುವಾದ

ದಶರಥನು ಪತ್ನೀಭಾವದಿಂದ ಯಾರಾದರೂ ಸ್ತ್ರೀಯರನ್ನು ಒಂದೇ ಒಂದು ಬಾರಿಗೆ ನೋಡಿದ್ದರೂ - ಪಿತೃವತ್ಸಲ ಧರ್ಮಜ್ಞ ವೀರ ಶ್ರೀರಾಮನು ರಾಜಪುತ್ರನೆಂಬ ಅಭಿಮಾನ ಬಿಟ್ಟು ಅವರೊಡನೆಯೂ ತಾಯಿಯಂತೆ ವರ್ತಿಸುತ್ತಿರುವನು.॥6॥

ಮೂಲಮ್ - 7

ಆಗಚ್ಛಂತ್ಯಾಶ್ಚ ವಿಜನಂ ವನಮೇವಂ ಭಯಾವಹಮ್ ।
ಸಮಾಹಿತಂ ಹಿ ಮೇ ಶ್ವಶ್ವ್ರಾಹೃದಯೇ ಯತ್ಸ್ಥಿರಂ ಮಮ ॥

ಅನುವಾದ

ನಾನು ಪತಿಯೊಂದಿಗೆ ನಿರ್ಜನ ವನಕ್ಕೆ ಹೊರಟಾಗ ನನ್ನ ಅತ್ತೆ ಕೌಸಲ್ಯೆಯು ನನಗೆ ಮಾಡಿದ ಕರ್ತವ್ಯದ ಉಪದೇಶವು ನನ್ನ ಹೃದಯದಲ್ಲಿ ಹಾಗೆಯೇ ಸ್ಥಿರವಾಗಿ ಅಚ್ಚೊತ್ತಿರುವುದು.॥7॥

ಮೂಲಮ್ - 8

ಪಾಣಿಪ್ರದಾನಕಾಲೇ ಚ ಯತ್ಪುರಾ ತ್ವಗ್ನಿಸಂನಿಧೌ ।
ಅನುಶಿಷ್ಟಂ ಜನನ್ಯಾಮೇ ವಾಕ್ಯಂ ತದಪಿ ಮೇ ಧೃತಮ್ ॥

ಅನುವಾದ

ಮೊದಲು ನನ್ನ ವಿವಾಹ ಸಮಯದಲ್ಲಿ ಅಗ್ನಿಯ ಸನ್ನಿಧಿಯಲ್ಲಿ ತಾಯಿಯು ನನಗೆ ಮಾಡಿದ ಉಪದೇಶವು ನನಗೆ ಚೆನ್ನಾಗಿ ನೆನಪಿದೆ.॥8॥

ಮೂಲಮ್ - 9

ನ ವಿಸ್ಮೃತಂ ತು ಮೇ ಸರ್ವಂ ವಾಕ್ಯೈಃ ಸ್ವೈರ್ಧರ್ಮಚಾರಿಣಿ ।
ಪತಿಶುಶ್ರೂಷಣಾನ್ನಾರ್ಯಾಸ್ತಪೋ ನಾನ್ಯದ್ ವಿಧೀಯತೇ ॥

ಅನುವಾದ

ಧರ್ಮಚಾರಿಣಿಯೇ! ಇವರಲ್ಲದೆ ನನ್ನ ಇತರ ಸ್ವಜನರು ತಮ್ಮ ವಚನಗಳಿಂದ ಕೊಟ್ಟಿರುವ ಉಪದೇಶಗಳನ್ನೂ ನಾನು ಮರೆಯಲಿಲ್ಲ. ಸ್ತ್ರೀಗೆ ಪತಿಯ ಸೇವೆ ಬಿಟ್ಟು ಬೇರೆ ಯಾವುದೇ ತಪಸ್ಸಿನ ವಿಧಾನವಿಲ್ಲ.॥9॥

ಮೂಲಮ್ - 10

ಸಾವಿತ್ರೀ ಪತಿಶುಶ್ರೂಷಾಂ ಕೃತ್ವಾ ಸ್ವರ್ಗೇ ಮಹೀಯತೇ ।
ತಥಾವೃತ್ತಿಶ್ಚ ಯಾತಾ ತ್ವಂ ಪತಿಶುಶ್ರೂಷಯಾ ದಿವಮ್ ॥

ಅನುವಾದ

ಸತ್ಯವಾನನ ಪತ್ನೀ ಸಾವಿತ್ರೀ ಪತಿಯ ಸೇವೆ ಮಾಡಿಯೇ ಸ್ವರ್ಗಲೋಕದಲ್ಲಿ ಪೂಜಿತಳಾಗಿದ್ದಾಳೆ. ಆಕೆಯಂತೆಯೇ ವರ್ತಿಸುವ ನೀವೂ ಕೂಡ ಪತಿಯ ಸೇವೆಯ ಪ್ರಭಾವದಿಂದಲೇ ಸ್ವರ್ಗಲೋಕದಲ್ಲಿ ಸ್ಥಾನಗಳಿಸಿಕೊಂಡಿರುವಿರಿ.॥10॥

ಮೂಲಮ್ - 11

ವರಿಷ್ಠಾ ಸರ್ವನಾರೀಣಾಮೇಷಾಚ ದಿವಿ ದೇವತಾ ।
ರೋಹಿಣೀ ನ ವಿನಾ ಚಂದ್ರಂ ಮುಹೂರ್ತಮಪಿದೃಶ್ಯತೇ ॥

ಅನುವಾದ

ಸಂಪೂರ್ಣ ಸ್ತ್ರೀಯರಲ್ಲಿ ಶ್ರೇಷ್ಠಳಾದ ಸ್ವರ್ಗದ ದೇವೀ ರೋಹಿಣಿಯು ಪತಿಸೇವೆಯ ಪ್ರಭಾವದಿಂದಲೇ ಒಂದು ಮುಹೂರ್ತವಾದರೂ ಚಂದ್ರನಿಂದ ಅಗಲಿರುವುದಿಲ್ಲ.॥11॥

ಮೂಲಮ್ - 12

ಏವಂವಿಧಾಶ್ಚ ಪ್ರವರಾಃ ಸ್ತ್ರಿಯೋ ಭರ್ತೃದೃಢವ್ರತಾಃ ।
ದೇವಲೋಕೇ ಮಹೀಯಂತೇ ಪುಣ್ಯೇನ ಸ್ವೇನಕರ್ಮಣಾ ॥

ಅನುವಾದ

ಹೀಗೆ ದೃಢತೆಯಿಂದ ಪಾತಿವ್ರತ್ಯ ಧರ್ಮವನ್ನು ಪಾಲಿಸುವ ಅನೇಕ ಸಾಧ್ವೀ ಸ್ತ್ರೀಯರು ತಮ್ಮ ಪುಣ್ಯಕರ್ಮದ ಬಲದಿಂದ ದೇವಲೋಕದಲ್ಲಿ ಆದರ ಪಡೆಯುತ್ತಿದ್ದಾರೆ.॥12॥

ಮೂಲಮ್ - 13

ತತೋಽನಸೂಯಾ ಸಂಹೃಷ್ಟಾ ಶ್ರುತ್ವೋಕ್ತಂ ಸೀತಯಾ ವಚಃ ।
ಶಿರಸ್ಯಾಽಽಘ್ರಾಯ ಚೋವಾಚ ಮೈಥಿಲೀಂ ಹರ್ಷಯಂತ್ಯುತ ॥

ಅನುವಾದ

ಅನಂತರ ಸೀತೆಯು ಹೇಳಿದ ಮಾತನ್ನು ಕೇಳಿ ಅನಸೂಯೆಗೆ ಬಹಳ ಹರ್ಷವಾಯಿತು. ಆಕೆಯು ಸೀತೆಯ ಶಿರಸ್ಸನ್ನು ಆಘ್ರಾಣಿಸಿ, ಆ ಮಿಥಿಲೇಶ ಕುಮಾರಿಯ ಹರ್ಷವನ್ನು ಹೆಚ್ಚಿಸಲು ಹೀಗೆ ಹೇಳಿದಳು.॥13॥

ಮೂಲಮ್ - 14

ನಿಯಮೈರ್ವಿವಿಧೈರಾಪ್ತಂ ತಪೋ ಹಿ ಮಹದಸ್ತಿ ಮೇ ।
ತತ್ ಸಂಶ್ರಿತ್ಯ ಬಲಂ ಸೀತೇ ಛಂದಯೇ ತ್ವಾಂ ಶುಚಿವ್ರತೇ ॥

ಅನುವಾದ

ಶುಚಿವ್ರತೇ ಸೀತೇ! ನಾನು ಅನೇಕ ಪ್ರಕಾರದ ನಿಯಮಗಳನ್ನು ಪಾಲಿಸಿ ಬಹಳ ದೊಡ್ಡ ತಪಸ್ಸನ್ನು ಗಳಿಸಿರುವೆನು. ಆ ತಪೋಬಲವನ್ನೇ ಆಶ್ರಯಿಸಿ ನಾನು ನಿನಗೆ ಇಚ್ಛಿತ ವರವನ್ನು ಕೇಳಲು ಹೇಳುತ್ತಿದ್ದೇನೆ.॥14॥

ಮೂಲಮ್ - 15

ಉಪಪನ್ನಂ ಚಯುಕ್ತಂ ಚ ವಚನಂ ತವ ಮೈಥಿಲಿ ।
ಪ್ರೀತಾ ಚಾಸ್ಮ್ಯುಚಿತಾಂ ಸೀತೇ ಕರವಾಣಿ ಪ್ರಿಯಂ ಚ ಕಿಮ್ ॥

ಅನುವಾದ

ಮಿಥಿಲೇಶ ಕುಮಾರೀ ಸೀತೇ! ನೀನು ಬಹಳ ಯುಕ್ತಿಯುಕ್ತ ಉತ್ತಮ ಮಾತನ್ನು ಹೇಳಿರುವೆ. ಅದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ, ಆದ್ದರಿಂದ ನಾನು ನಿನ್ನ ಯಾವ ಪ್ರಿಯಕಾರ್ಯವನ್ನು ಮಾಡಲಿ? ಹೇಳು.॥15॥

ಮೂಲಮ್ - 16

ತಸ್ಯಾಸ್ತದ್ವಚನಂ ಶ್ರುತ್ವಾ ವಿಸ್ಮಿತಾ ಮಂದವಿಸ್ಮಯಾ ।
ಕೃತಮಿತ್ಯಬ್ರವೀತ್ ಸೀತಾ ತಪೋಬಲಸಮನ್ವಿತಾಮ್ ॥

ಅನುವಾದ

ಆಕೆಯ ಈ ಮಾತನ್ನು ಕೇಳಿ ಸೀತೆಗೆ ಬಹಳ ಆಶ್ಚರ್ಯವಾಯಿತು. ಅವಳು ತಪೋಬಲಸಂಪನ್ನ ಅನಸೂಯೆಯಲ್ಲಿ ಮಂದಹಾಸವನ್ನು ಬೀರಿ ಹೇಳಿದಳು - ತಾವು ನಿಮ್ಮ ಮಾತುಗಳಿಂದಲೇ ನನ್ನ ಎಲ್ಲ ಪ್ರಿಯಕಾರ್ಯ ಮಾಡಿದಂತಾಯಿತು. ಈಗ ಬೇರೆ ಇನ್ನೇನೂ ಮಾಡುವ ಅವಶ್ಯಕತೆ ಇಲ್ಲ.॥16॥

ಮೂಲಮ್ - 17

ಸಾ ತ್ವೇವಮುಕ್ತಾ ಧರ್ಮಜ್ಞಾ ತಯಾ ಪ್ರೀತತರಾಭವತ್ ।
ಸಫಲಂ ಚ ಪ್ರಹರ್ಷಂ ತೇ ಹಂತ ಸೀತೇ ಕರೋಮ್ಯಹಮ್ ॥

ಅನುವಾದ

ಸೀತೆಯು ಹೀಗೆ ಹೇಳಿದಾಗ ಧರ್ಮಜ್ಞ ಅನಸೂಯೆಗೆ ಬಹಳ ಆನಂದವಾಯಿತು. ಅವಳು ಹೇಳಿದಳು - ಸೀತೆ! ನಿನ್ನ ನಿರ್ಲೋಭತೆಯಿಂದ ನನಗೆ ವಿಶೇಷ ಹರ್ಷವಾಗಿದೆ. (ಅಥವಾ ನಿನ್ನಲ್ಲಿ ಇರುವ ಲೋಭಹೀನತೆಯಿಂದಾಗಿಯೇ ಸದಾ ಆನಂದೋತ್ಸವ ತುಂಬಿರುತ್ತದೆ.) ಅದನ್ನು ನಾನು ಅವಶ್ಯವಾಗಿ ಸಫಲಗೊಳಿಸುವೆನು.॥17॥

ಮೂಲಮ್ - 18

ಇದಂ ದಿವ್ಯಂ ವರಂ ಮಾಲ್ಯಂ ವಸ್ತ್ರಮಾಭರಣಾನಿ ಚ ।
ಅಂಗರಾಗಂ ಚ ವೈದೇಹಿ ಮಹಾರ್ಹಮನುಲೇಪನಮ್ ॥

ಮೂಲಮ್ - 19

ಮಯಾ ದತ್ತಮಿದಂ ಸೀತೇ ತವ ಗಾತ್ರಾಣಿ ಶೋಭಯೇತ್ ।
ಅನುರೂಪಮಸಂಕ್ಲಿಷ್ಟಂ ನಿತ್ಯಮೇವ ಭವಿಷ್ಯತಿ ॥

ಅನುವಾದ

ಈ ಸುಂದರ ದಿವ್ಯಹಾರ, ಈ ವಸ್ತ್ರ, ಈ ಒಡವೆಗಳು, ಅಂಗರಾಗ ಮತ್ತು ಅಮೂಲ್ಯ ಅನುಲೇಪನಗಳನ್ನು ನಾನು ನಿನಗೆ ಕೊಡುತ್ತಿದ್ದೇನೆ. ವಿದೇಹನಂದಿನೀ ಸೀತೇ! ನಾನು ಕೊಟ್ಟಿರುವ ಈ ವಸ್ತುಗಳು ನಿನ್ನ ಶರೀರದ ಶೋಭೆ ಹೆಚ್ಚಿಸೀತು. ಇವೆಲ್ಲವೂ ನಿನಗೆ ಯೋಗ್ಯವೇ ಆಗಿವೆ, ಸದಾ ಉಪಯೋಗಿಸಿದಾಗ ನೀನು ನಿರ್ದೋಷ ಹಾಗೂ ನಿರ್ವಿಕಾರವಾಗಿರುವೆ.॥18-19॥

ಮೂಲಮ್ - 20

ಅಂಗರಾಗೇಣ ದಿವ್ಯೇನ ಲಿಪ್ತಾಂಗೀ ಜನಕಾತ್ಮಜೇ ।
ಶೋಭಯಿಷ್ಯಸಿ ಭರ್ತಾರಂ ಯಥಾ ಶ್ರೀರ್ವಿಷ್ಣುಮವ್ಯಯಮ್ ॥

ಅನುವಾದ

ಜನಕಕಿಶೋರಿ! ಈ ದಿವ್ಯ ಅಂಗರಾಗವನ್ನು ಶರೀರಕ್ಕೆ ಹಚ್ಚಿಕೊಂಡು ಲಕ್ಷ್ಮಿಯು ಅವಿನಾಶೀ ಭಗವಾನ್ ವಿಷ್ಣುವಿನ ಶೋಭೆಯನ್ನು ಹೆಚ್ಚಿಸುವಂತೆ, ನೀನೂ ನಿನ್ನ ಪತಿಯನ್ನು ಹಾಗೆಯೇ ಸುಶೋಭಿತಗೊಳಿಸುವೆ.॥20॥

ಮೂಲಮ್ - 21

ಸಾ ವಸ್ತ್ರಮಂಗರಾಗಂ ಚ ಭೂಷಣಾನಿ ಸ್ರಜಸ್ತಥಾ ।
ಮೈಥಿಲೀ ಪ್ರತಿಜಗ್ರಾಹ ಪ್ರೀತಿದಾನಮನುತ್ತಮಮ್ ॥

ಮೂಲಮ್ - 22

ಪ್ರತಿಗೃಹ್ಯ ಚ ತತ್ಸೀತಾ ಪ್ರೀತಿದಾನಂ ಯಶಸ್ವಿನೀ ।
ಶಿಲಷ್ಟಾಂಜಲಿಪುಟಾ ಧೀರಾ ಸಮುಪಾಸ್ತ ತಪೋಧನಾಮ್ ॥

ಅನುವಾದ

ಅನಸೂಯೆಯ ಆಜ್ಞೆಯಂತೆ ಧೀರಸ್ವಭಾವವುಳ್ಳ ಯಶಸ್ವಿನೀ ಮಿಥಿಲೇಶಕುಮಾರೀ ಸೀತೆಯು ಆ ವಸ್ತ್ರಗಳನ್ನು, ಅಂಗರಾಗ, ಒಡವೆಗಳನ್ನು, ಹಾರಗಳನ್ನು ಆಕೆಯ ಸಂತೋಷಕ್ಕಾಗಿ ಸ್ವೀಕರಿಸಿದಳು. ಆ ಉಡುಗೊರೆಗಳನ್ನು ತೆಗೆದುಕೊಂಡು, ಕೈಗಳನ್ನು ಮುಗಿದು ಆ ತಪೋಧನಾ ಅನಸೂಯೆಯ ಬಳಿಯಲ್ಲಿ ಕುಳಿತುಕೊಂಡಳು.॥21-22॥

ಮೂಲಮ್ - 23

ತಥಾ ಸೀತಾಮುಪಾಸೀನಾಮನಸೂಯಾ ದೃಢವ್ರತಾ ।
ವಚನಂ ಪ್ರಷ್ಟುಮಾರೇಭೇ ಕಥಾಂಕಾಂಚಿದನುಪ್ರಿಯಾಮ್ ॥

ಅನುವಾದ

ಅನಂತರ ಹೀಗೆ ತನ್ನ ಬಳಿಯಲ್ಲಿ ಕುಳಿತಿರುವ ಸೀತೆಯಲ್ಲಿ ದೃಢವ್ರತಳಾದ ಅನಸೂಯೆಯು ಯಾವುದಾದರೂ ಪ್ರಿಯವಾದ ಕಥೆಯನ್ನು ಹೇಳುವಂತೆ ಕೋರಿದಳು.॥23॥

ಮೂಲಮ್ - 24

ಸ್ವಯಂವರೇ ಕಿಲ ಪ್ರಾಪ್ತಾ ತ್ವಮನೇನ ಯಶಸ್ವಿನಾ ।
ರಾಘವೇಣೇತಿ ಮೇ ಸೀತೇ ಕಥಾ ಶ್ರುತಿಮುಪಾಗತಾ ॥

ಅನುವಾದ

ಸೀತೆ! ಈ ಯಶಸ್ವೀ ರಾಘವೇಂದ್ರನು ನಿನ್ನನ್ನು ಸ್ವಯಂವರದಲ್ಲಿ ಪಡೆದಿದ್ದನು ಎಂದು ನಾನು ಕೇಳಿದ್ದೇನೆ.॥24॥

ಮೂಲಮ್ - 25

ತಾಂ ಕಥಾಂ ಶ್ರೋತುಮಿಚ್ಛಾಮಿ ವಿಸ್ತರೇಣ ಚ ಮೈಥಿಲಿ ।
ಯಥಾಭೂತಂ ಚ ಕಾರ್ತ್ಸ್ನ್ಯೇನ ತನ್ಮೇ ತ್ವಂ ವಕ್ತುಮರ್ಹಸಿ ॥

ಅನುವಾದ

ಮಿಥಿಲೇಶನಂದಿನೀ! ನಾನು ಆ ವೃತ್ತಾಂತವನ್ನು ವಿಸ್ತಾರದಿಂದ ಕೇಳಲು ಬಯಸುತ್ತಿರುವೆನು. ಆದ್ದರಿಂದ ಆಗ ನಡೆದುದೆಲ್ಲವನ್ನೂ ಯಥಾವತ್ತಾಗಿ ನನಗೆ ತಿಳಿಸು.॥25॥

ಮೂಲಮ್ - 26

ಏವಮುಕ್ತಾ ತು ಸಾ ಸೀತಾ ತಾಪಸೀಂ ಧರ್ಮಚಾರಿಣೀಮ್ ।
ಶ್ರೂಯತಾಮಿತಿ ಚೋಕ್ತ್ವಾ ವೈ ಕಥಯಾಮಾಸ ತಾಂಕಥಾಮ್ ॥

ಅನುವಾದ

ಅವಳು ಹೀಗೆ ಅಪ್ಪಣೆ ಮಾಡಿದಾಗ ಸೀತೆಯು ಆ ಧರ್ಮಚಾರಿಣೀ ತಾಪಸೀ ಅನಸೂಯೆಯಲ್ಲಿ ಹೇಳಿದಳು - ಅಮ್ಮಾ! ಕೇಳು, ಹೀಗೆ ಹೇಳಿ ಆಕೆಯು ಆ ಕಥೆಯನ್ನು ಈ ಪ್ರಕಾರ ಹೇಳಲು ಪ್ರಾರಂಭಿಸಿದಳು.॥26॥

ಮೂಲಮ್ - 27

ಮಿಥಿಲಾಧಿಪತಿರ್ವೀರೋ ಜನಕೋ ನಾಮ ಧರ್ಮವಿತ್ ।
ಕ್ಷತ್ರಕರ್ಮಣ್ಯಭಿರತೋ ನ್ಯಾಯತಃ ಶಾಸ್ತಿ ಮೇದಿನೀಮ್ ॥

ಅನುವಾದ

ಮಿಥಿಲಾ ದೇಶದಲ್ಲಿ ಜನಕ ಎಂಬ ವೀರ ರಾಜನಿದ್ದನು. ಅವನು ಧರ್ಮಜ್ಞನೂ, ಕ್ಷತ್ರಿಯೋಚಿತ ಕರ್ಮದಲ್ಲಿ ತತ್ಪರನಾಗಿ ನ್ಯಾಯದಿಂದ ಪೃಥಿವಿಯನ್ನು ಆಳುತ್ತಿದ್ದನು.॥27॥

ಮೂಲಮ್ - 28

ತಸ್ಯ ಲಾಂಗಲಹಸ್ತಸ್ಯ ಕರ್ಷತಃ ಕ್ಷೇತ್ರಮಂಡಲಮ್ ।
ಅಹಂ ಕಿಲೋತ್ಥಿತಾ ಭಿತ್ತ್ವಾ ಜಗತೀಂ ನೃಪತೇಃ ಸುತಾ ॥

ಅನುವಾದ

ಒಮ್ಮೆ ಅವನು ಯಜ್ಞಕ್ಕಾಗಿ ಯೋಗ್ಯ ಭೂಮಿಯನ್ನು ಉಳುತ್ತಿದ್ದನು, ಆಗ ನಾನು ಭೂಮಿ ಒಡೆದು ಪೃಥಿವಿಯಿಂದ ಪ್ರಕಟಳಾದೆ. ಇದರಿಂದಲೇ ನಾನು ಜನಕರಾಜನ ಪುತ್ರಿಯಾದೆ.॥28॥

ಮೂಲಮ್ - 29

ಸ ಮಾಂ ದೃಷ್ಟ್ವಾ ನರಪತಿರ್ಮುಷ್ಟಿವಿಕ್ಷೇಪತತ್ಪರಃ ।
ಪಾಂಸುಗುಂಠಿತಸರ್ವಾಂಗೀಂ ವಿಸ್ಮಿತೋ ಜನಕೋಽಭವತ್ ॥

ಅನುವಾದ

ಆ ರಾಜನು ಆ ಕ್ಷೇತ್ರದಲ್ಲಿ ಔಷಧಿಗಳನ್ನು ಬಿತ್ತುತ್ತಿದ್ದನು. ಅಷ್ಟರಲ್ಲಿ ಅವನ ದೃಷ್ಟಿ ನನ್ನ ಮೇಲೆ ಬಿತ್ತು. ನನ್ನ ಶರೀರವಿಡೀ ಧೂಳಿನಿಂದ ಮೆತ್ತಿಕೊಂಡಿತ್ತು. ಆ ಸ್ಥಿತಿಯಲ್ಲಿ ನನ್ನನ್ನು ನೋಡಿ ಜನಕನಿಗೆ ಭಾರೀ ವಿಸ್ಮಯವಾಯಿತು.॥29॥

ಮೂಲಮ್ - 30

ಅನಪತ್ಯೇನ ಚ ಸ್ನೇಹಾದಂಕಮಾರೋಪ್ಯ ಚ ಸ್ವಯಮ್ ।
ಮಮೇಯಂ ತನಯೇತ್ಯುಕ್ತ್ವಾ ಸ್ನೇಹೋ ಮಯಿ ನಿಪಾತಿತಃ ॥

ಅನುವಾದ

ಆಗ ಅವನಿಗೆ ಯಾವುದೇ ಬೇರೆ ಸಂತಾನವಿರಲಿಲ್ಲ. ಅದಕ್ಕಾಗಿ ಸ್ನೇಹವಶ ಅವನು ನನ್ನನ್ನು ಎತ್ತಿಕೊಂಡು ‘ಈಕೆ ನನ್ನ ಮಗಳು’ ಎಂದು ಹೇಳಿ ತನ್ನ ಹೃದಯದ ಎಲ್ಲ ಸ್ನೇಹವನ್ನು ನನ್ನ ಮೇಲೆ ಹರಿಸಿದನು.॥30॥

ಮೂಲಮ್ - 31

ಅಂತರಿಕ್ಷೇ ಚ ವಾಗುಕ್ತಾ ಪ್ರತಿಮಾಮಾನುಷೀ ಕಿಲ ।
ಏವಮೇತನ್ನರಪತೇ ಧರ್ಮೇಣ ತನಯಾ ತವ ॥

ಅನುವಾದ

ಅದೇ ಸಮಯದಲ್ಲಿ ಮಾನವೀ ಮಾತಿನಿಂದ ಆಕಾಶವಾಣಿ ಹೀಗೆ ನುಡಿಯಿತು - (ಅಥವಾ ನನ್ನ ವಿಷಯದಲ್ಲಿ ಪ್ರಕಟವಾದ ಆ ವಾಣಿಯು ಅಮಾನುಷೀ-ದಿವ್ಯವಾಗಿತ್ತು) ಎಲೈ ನರೇಶ್ವರನೇ! ನೀನು ಹೇಳಿದುದು ಸರಿಯಾಗಿದೆ. ಈ ಕನ್ಯೆಯು ಧರ್ಮತಃ ನಿನ್ನ ಪುತ್ರಿಯೇ ಆಗಿರುವಳು.॥31॥

ಮೂಲಮ್ - 32

ತತಃ ಪ್ರಹೃಷ್ಟೋ ಧರ್ಮಾತ್ಮಾ ಪಿತಾಮೇಮಿಥಿಲಾಧಿಪಃ ।
ಅವಾಪ್ತೋ ವಿಪುಲಾಮೃದ್ಧಿಂ ಮಾಮವಾಪ್ಯ ನರಾಧಿಪಃ ॥

ಅನುವಾದ

ಈ ಆಕಾಶವಾಣಿ ಕೇಳಿ ನನ್ನ ಧರ್ಮಾತ್ಮಾ ಪಿತನಾದ ಮಿಥಿಲೇಶ ರಾಜನು ಬಹಳ ಆನಂದಗೊಂಡು, ನನ್ನನ್ನು ಪಡೆದು ಅವನಿಗೆ ಯಾವುದೋ ದೊಡ್ಡ ಸಮೃದ್ಧಿಯೇ ಸಿಕ್ಕಿದಂತಾಯಿತು.॥32॥

ಮೂಲಮ್ - 33

ದತ್ತಾ ಚಾಸ್ಮೀಷ್ಟವದ್ದೇವ್ಯೈ ಜ್ಯೇಷ್ಠಾಯೈ ಪುಣ್ಯಕರ್ಮಣೆ ।
ತಯಾ ಸಂಭಾವಿತಾ ಚಾಸ್ಮಿ ಸ್ನಿಗ್ಧಯಾ ಮಾತೃಸೌಹೃದಾತ್ ॥

ಅನುವಾದ

ಅವನಿಗೆ ಹೆಚ್ಚು ಪ್ರಿಯಳಾದ ರಾಣೀ ಪುಣ್ಯಕರ್ಮಪರಾಯಣಳಿಗೆ ನನ್ನನ್ನು ಒಪ್ಪಿಸಿದನು. ಆ ಸ್ನೇಹಮಯೀ ಮಹಾರಾಣಿಯು ಮಾತೃಸಹಜ ಸೌಹಾರ್ದದಿಂದ ನನ್ನನ್ನು ಲಾಲಿಸಿ-ಪಾಲಿಸಿದಳು.॥33॥

ಮೂಲಮ್ - 34

ಪತಿಸಂಯೋಗಸುಲಭಂ ವಯೋ ದೃಷ್ಟ್ವಾ ತು ಮೇ ಪಿತಾ ।
ಚಿಂತಾಮಭ್ಯಗಮದ್ದೀನೋ ವಿತ್ತನಾಶಾದಿವಾಧನಃ ॥

ಅನುವಾದ

ನಾನು ವಿವಾಹ ವಯಸ್ಕಳಾಗಿರುವುದನ್ನು ನೋಡಿದಾಗ ಅವರಿಗೆ ಬಹಳ ಚಿಂತೆ ಇಟ್ಟುಕೊಂಡಿತು. ಗಳಿಸಿದ ಧನವು ನಾಶವಾದಾಗ ನಿರ್ಧನ ಮನುಷ್ಯನಿಗೆ ಬಹಳ ದುಃಖವಾಗುವಂತೆ ಅವರು ನನ್ನ ವಿವಾಹದ ಚಿಂತೆಯಲ್ಲಿ ಮುಳುಗಿದರು.॥34॥

ಮೂಲಮ್ - 35

ಸದೃಶಾಚ್ಚಾಪಕೃಷ್ಟಾಚ್ಚ ಲೋಕೇ ಕನ್ಯಾಪಿತಾ ಜನಾತ್ ।
ಪ್ರಘರ್ಷಣಮವಾಪ್ನೋತಿ ಶಕ್ರೇಣಾಪಿ ಸಮೋ ಭುವಿ ॥

ಅನುವಾದ

ಜಗತ್ತಿನಲ್ಲಿ ಕನ್ಯಾಪಿತೃವು ಇಂದ್ರನಿಗೆ ಸಮಾನನಾಗಿದ್ದರೂ, ವರಪಕ್ಷದವರು ತನಗೆ ಸಮಾನರಾಗಿದ್ದರೂ ಅಥವಾ ತನಗಿಂತ ಬಡವರಾಗಿದ್ದರೂ ಅವರಿಂದ ಅಪಮಾನಿತನಾಗಬೇಕಾಗುತ್ತದೆ.॥35॥

ಮೂಲಮ್ - 36

ತಾಂ ಧರ್ಷಣಾಮದೂರಸ್ಥಾಂ ಸಂದೃಶ್ಯಾತ್ಮನಿ ಪಾರ್ಥಿವಃ ।
ಚಿಂತಾರ್ಣವಗತಃ ಪಾರಂನಾಸಸಾದಾಪ್ಲವೋಯಥಾ ॥

ಅನುವಾದ

ಆ ಅಪಮಾನ ಸಹಿಸುವ ಸಮಯ ನನಗೆ ಬಹಳ ಹತ್ತಿರ ಬಂದಿದೆ. ಇದನ್ನು ನೋಡಿ ಜನಕನು, ಚಿಂತಾಸಮುದ್ರದಲ್ಲಿ ಮುಳುಗಿದನು, ದೋಣಿಯಿಲ್ಲದೆ ಮನುಷ್ಯನು ನದೀ ದಾಟಲಾರನು, ಅದರಂತೆ ನನ್ನ ತಂದೆಯು ಚಿಂತೆಯಿಂದ ದಾಟಲಾರದಾದರು.॥36॥

ಮೂಲಮ್ - 37

ಅಯೋನಿಜಾಂ ಹಿ ಮಾಂ ಜ್ಞಾತ್ವಾ ನಾಧ್ಯಗಚ್ಛತ್ ಸಚಿಂತಯನ್ ।
ಸದೃಶಂ ಚಾಭಿರೂಪಂ ಚ ಮಹೀಪಾಲಃಪತಿಂಮಮ ॥

ಅನುವಾದ

ನಾನು ಅಯೋನಿಜೆ ಕನ್ಯೆಯೆಂದು ತಿಳಿದು ಆ ರಾಜನು ನನಗಾಗಿ ಯೋಗ್ಯ, ಪರಮಸುಂದರ ಪತಿಯ ಕುರಿತು ವಿಚಾರಪರರಾದರು; ಆದರೂ ಯಾವುದೇ ನಿಶ್ಚಯಕ್ಕೆ ಬರಲಾಗಲಿಲ್ಲ.॥37॥

ಮೂಲಮ್ - 38

ತಸ್ಯ ಬುದ್ಧಿರಿಯಂಜಾತಾ ಚಿಂತಯಾನಸ್ಯ ಸಂತತಮ್ ।
ಸ್ವಯಂವರಂ ತನೂಜಾಯಾಃ ಕರಿಷ್ಯಾಮೀತಿ ಧರ್ಮತಃ ॥

ಅನುವಾದ

ಸದಾ ನನ್ನ ವಿವಾಹದ ಚಿಂತೆಯಲ್ಲಿದ್ದ ಆ ಮಹಾರಾಜರ ಮನಸ್ಸಿನಲ್ಲಿ - ನಾನು ಧರ್ಮತಃ ತನ್ನ ಪುತ್ರಿಯ ಸ್ವಯಂವರ ಮಾಡುವೆನು ಎಂಬ ವಿಚಾರ ಉಂಟಾಯಿತು.॥38॥

ಮೂಲಮ್ - 39

ಮಹಾಯಜ್ಞೇತದಾ ತಸ್ಯ ವರುಣೇನ ಮಹಾತ್ಮನಾ ।
ದತ್ತಂ ಧನುರ್ವರಂ ಪ್ರೀತ್ಯಾ ತೂಣೀ ಚಾಕ್ಷಯ್ಯಸಾಯಕೌ ॥

ಅನುವಾದ

ಅದೇ ಸಮಯದಲ್ಲಿ ಅವನು ಒಂದು ಮಹಾಯಜ್ಞದಲ್ಲಿ ಪ್ರಸನ್ನನಾದ ಮಹಾತ್ಮಾ ವರುಣನು ಒಂದು ಶ್ರೇಷ್ಠ ಧನುಸ್ಸು ಹಾಗೂ ಎರಡು ಅಕ್ಷಯ ತುಣೀರ ತುಂಬಿದ ಬತ್ತಳಿಕೆಗಳನ್ನು ಕೊಟ್ಟನು.॥39॥

ಮೂಲಮ್ - 40

ಅಸಂಚಾಲ್ಯಂ ಮನುಷ್ಯೈಶ್ಚ ಯತ್ನೇನಾಪಿ ಚ ಗೌರವಾತ್ ।
ತನ್ನ ಶಕ್ತಾ ನಮಯಿತುಂ ಸ್ವಪ್ನೇಷ್ವಪಿ ನರಾಧಿಪಾಃ ॥

ಅನುವಾದ

ಆ ಧನುಸ್ಸು ಮನುಷ್ಯನು ಪೂರ್ಣ ಪ್ರಯತ್ನಿಸಿದರೂ ಅಲುಗಾಡಿಸಲಾರದಷ್ಟು ಭಾರಿಯಾಗಿತ್ತು. ಭೂಮಂಡಲದ ರಾಜರು ಸ್ವಪ್ನದಲ್ಲಿಯೂ ಆ ಧನುಸ್ಸನ್ನು ಬಗ್ಗಿಸಿ ಹೆದೆ ಏರಿಸಲು ಅಸಮರ್ಥರಾಗಿದ್ದರು.॥40॥

ಮೂಲಮ್ - 41

ತದ್ಧನುಃ ಪ್ರಾಪ್ಯ ಮೇ ಪಿತ್ರಾ ವ್ಯಾಹೃತಂಸತ್ಯವಾದಿನಾ ।
ಸಮವಾಯೇ ನರೇಂದ್ರಾಣಾಂ ಪೂರ್ವಮಾಮಂತ್ರ್ಯ ಪಾರ್ಥಿವಾನ್ ॥

ಅನುವಾದ

ಆ ಧನುಸ್ಸನ್ನು ಪಡೆದು ನನ್ನ ಸತ್ಯವಾದೀ ತಂದೆಯು ಮೊದಲಿಗೆ ಭೂಮಂಡಲದ ಎಲ್ಲ ರಾಜರನ್ನು ಆಮಂತ್ರಿಸಿ ಆ ಅರಸರ ಸಮೂಹದಲ್ಲಿ ಹೀಗೆ ಹೇಳಿದನು.॥41॥

ಮೂಲಮ್ - 42

ಇದಂ ಚ ಧನುರುದ್ಯಮ್ಯ ಸಜ್ಯಂ ಯಃ ಕುರುತೇ ನರಃ ।
ತಸ್ಯ ಮೇ ದುಹಿತಾ ಭಾರ್ಯಾ ಭವಿಷ್ಯತಿ ನ ಸಂಶಯಃ ॥

ಅನುವಾದ

ಈ ಧನುಸ್ಸನ್ನು ಎತ್ತಿ ಬಗ್ಗಿಸಿ ಇದಕ್ಕೆ ನೇಣನ್ನು ಬಿಗಿಯು ವವನು ನನ್ನ ಪುತ್ರೀ ಸೀತೆಯ ಪತಿಯಾಗುವನು, ಇದರಲ್ಲಿ ಸಂಶಯವೇ ಇಲ್ಲ.॥42॥

ಮೂಲಮ್ - 43

ತಚ್ಚ ದೃಷ್ಟ್ವಾ ಧನುಃಶ್ರೇಷ್ಠಂ ಗೌರವಾದ್ ಗಿರಿಸನ್ನಿಭಮ್ ।
ಅಭಿವಾದ್ಯ ನೃಪಾ ಜಗ್ಮುರಶಕ್ತಾಸ್ತಸ್ಯ ತೋಲನೇ ॥

ಅನುವಾದ

ಬೆಟ್ಟದಂತೆ ಭಾರವಾದ ಆ ಶ್ರೇಷ್ಠ ಧನುಸ್ಸನ್ನು ನೋಡಿ ಅಲ್ಲಿಗೆ ಬಂದಿರುವ ರಾಜರೆಲ್ಲರೂ ಅದನ್ನು ಎತ್ತಲು ಅಸಮರ್ಥರಾದಾಗ, ಅದಕ್ಕೆ ನಮಸ್ಕರಿಸಿ ಹೊರಟು ಹೋದರು.॥43॥

ಮೂಲಮ್ - 44

ಸುದೀರ್ಘಸ್ಯ ತು ಕಾಲಸ್ಯ ರಾಘವೋಽಯಂ ಮಹಾದ್ಯುತಿಃ ।
ವಿಶ್ವಾಮಿತ್ರೇಣ ಸಹಿತೋ ಯಜ್ಞಂ ದ್ರಷ್ಟುಂ ಸಮಾಗತಃ ॥

ಮೂಲಮ್ - 45

ಲಕ್ಷ್ಮಣೇನ ಸಹ ಭ್ರಾತ್ರಾ ರಾಮಃ ಸತ್ಯಪರಾಕ್ರಮಃ ।
ವಿಶ್ವಾಮಿತ್ರಸ್ತು ಧರ್ಮಾತ್ಮಾ ಮಮ ಪಿತ್ರಾ ಸುಪೂಜಿತಃ ॥

ಅನುವಾದ

ಅನಂತರ ಬಹಳ ದಿವಸಗಳ ತರುವಾಯ ಈ ಮಹಾತೇಜಸ್ವೀ ರಘುಕುಲನಂದನ ಸತ್ಯಪರಾಕ್ರಮಿ ಶ್ರೀರಾಮನನ್ನು ಅವನ ಸಹೋದರ ಲಕ್ಷ್ಮಣನೊಂದಿಗೆ ವಿಶ್ವಾಮಿತ್ರರು ನನ್ನ ತಂದೆಯವರ ಯಜ್ಞವನ್ನು ನೋಡಲು ಮಿಥಿಲೆಗೆ ಕರೆದುಕೊಂಡು ಬಂದರು. ಆಗ ನನ್ನ ತಂದೆಯವರು ಧರ್ಮಾತ್ಮಾ ಮುನಿಯನ್ನು ಆದರಿಸಿ ಸತ್ಕರಿಸಿದರು.॥44-45॥

ಮೂಲಮ್ - 46

ಪ್ರೋವಾಚ ಪಿತರಂ ತತ್ರರಾಘವೌ ರಾಮಲಕ್ಷ್ಮಣೌ ।
ಸುತೌ ದಶರಥಸ್ಯೇಮೌ ಧನುರ್ದರ್ಶನಕಾಂಕ್ಷಿಣೌ ।
ಧನುರ್ದರ್ಶಯ ರಾಮಾಯ ರಾಜಪುತ್ರಾಯ ದೈವಿಕಮ್ ॥

ಅನುವಾದ

ಆಗ ವಿಶ್ವಾಮಿತ್ರರು ನನ್ನ ತಂದೆಯವರಲ್ಲಿ ಹೇಳಿದರು - ರಾಜನೇ! ಈ ರಘುಕುಲಭೂಷಣ ರಾಮ-ಲಕ್ಷ್ಮಣರಿಬ್ಬರೂ ದಶರಥನ ಪುತ್ರರಾಗಿರುವರು ಹಾಗೂ ನಿನ್ನ ಆ ದಿವ್ಯಧನುಸ್ಸನ್ನು ದರ್ಶಿಸಲು ಬಯಸುತ್ತಿರುವರು. ನಿಮಗೆ ದೇವತೆಗಳು ಕೊಟ್ಟ ಆ ಧನುಸ್ಸನ್ನು ಶ್ರೀರಾಮನಿಗೆ ತೋರಿಸಿರಿ.॥46॥

ಮೂಲಮ್ - 47

ಇತ್ಯುಕ್ತಸ್ತೇನ ವಿಪ್ರೇಣ ತದ್ಧನುಃ ಸಮುಪಾನಯತ್ ।
ತದ್ಧನುರ್ದರ್ಶಯಾಮಾಸ ರಾಜಪುತ್ರಾಯ ದೈವಿಕಮ್ ॥

ಅನುವಾದ

ವಿಪ್ರವರ ವಿಶ್ವಾಮಿತ್ರರು ಹೀಗೆ ಹೇಳಿದಾಗ ತಂದೆಯವರು ಆ ದಿವ್ಯ ಧನುಸ್ಸನ್ನು ತರಿಸಿ, ರಾಜಕುಮಾರ ಶ್ರೀರಾಮನಿಗೆ ತೋರಿಸಿದರು.॥47॥

ಮೂಲಮ್ - 48

ನಿಮೇಷಾಂತರಮಾತ್ರೇಣ ತದಾನಮ್ಯ ಮಹಾಬಲಃ ।
ಜ್ಯಾಂ ಸಮಾರೋಪ್ಯ ಝಟಿತಿ ಪೂರಯಾಮಾಸವೀರ್ಯವಾನ್ ॥

ಅನುವಾದ

ಮಹಾಬಲೀ, ಪರಮಪರಾಕ್ರಮಿ ಶ್ರೀರಾಮನು ಕಣ್ಣುರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ,ಆ ಧನುಸ್ಸಿಗೆ ನಾಣನ್ನು ಏರಿಸಿ, ಅದನ್ನು ಎತ್ತಿ ಕರ್ಣಾಂತವಾಗಿ ಸೆಳೆದನು.॥48॥

ಮೂಲಮ್ - 49

ತೇನಾಪೂರಯತಾ ವೇಗಾನ್ಮಧ್ಯೇ ಭಗ್ನಂ ದ್ವಿಧಾ ಧನುಃ ।
ತಸ್ಯ ಶಬ್ದೋಽಭವದ್ಭೀಮಃ ಪತಿತಸ್ಯಾಶನೇರ್ಯಥಾ ॥

ಅನುವಾದ

ಅವರು ವೇಗವಾಗಿ ಸೆಳೆಯುವಾಗ ಆ ಧನುಸ್ಸು ನಡುವಿನಲ್ಲಿ ಮುರಿದು ಎರಡು ತುಂಡಾಯಿತು. ಅದು ತುಂಡಾಗುವಾಗ ಸಿಡಿಲು ಬಡಿದಂತೆ ಭಯಂಕರ ಶಬ್ದವಾಯಿತು.॥49॥

ಮೂಲಮ್ - 50

ತತೋಽಹಂ ತತ್ರ ರಾಮಾಯ ಪಿತ್ರಾ ಸತ್ಯಾಭಿಸಂಧಿನಾ ।
ಉದ್ಯತಾ ದಾತುಮುದ್ಯಮ್ಯಜಲಭಾಜನಮುತ್ತಮಮ್ ॥

ಅನುವಾದ

ಆಗ ಸತ್ಯಪ್ರತಿಜ್ಞರಾದ ನಮ್ಮ ತಂದೆಯವರು ಉತ್ತಮ ಜಲಪಾತ್ರೆಯನ್ನೆತ್ತಿಕೊಂಡು ಶ್ರೀರಾಮರ ಕೈಯಲ್ಲಿ ನನ್ನನ್ನು ದಾನಮಾಡಲು ಉದ್ಯುಕ್ತರಾದರು.॥50॥

ಮೂಲಮ್ - 51

ದೀಯಮಾನಾಂ ನ ತು ತದಾ ಪ್ರತಿಜಗ್ರಾಹ ರಾಘವಃ ।
ಅವಿಜ್ಞಾಯ ಪಿತುಶ್ಛಂದಮಯೋಧ್ಯಾಧಿಪತೇಃ ಪ್ರಭೋಃ ॥

ಅನುವಾದ

ಆಗ ತನ್ನ ತಂದೆ ಅಯೋಧ್ಯಾಧಿಪತಿ ದಶರಥನ ಅಭಿಪ್ರಾಯವನ್ನು ತಿಳಿಯದೆ ಶ್ರೀರಾಮರು ಜನಕರಾಜನು ಕೊಟ್ಟರೂ ನನ್ನನ್ನು ಸ್ವೀಕರಿಸಲಿಲ್ಲ.॥51॥

ಮೂಲಮ್ - 52

ತತಃ ಶ್ವಶುರಮಾಮಂತ್ರ್ಯ ವೃದ್ಧಂ ದಶರಥಂ ನೃಪಮ್ ।
ಮಮ ಪಿತ್ರಾ ತ್ವಹಂ ದತ್ತಾ ರಾಮಾಯ ವಿದಿತಾತ್ಮನೇ ॥

ಅನುವಾದ

ಅನಂತರ ವೃದ್ಧರಾದ ನನ್ನ ಮಾವನವರ ಅನುಮತಿ ಪಡೆದು ನನ್ನ ತಂದೆಯವರು ಆತ್ಮಜ್ಞಾನೀ ಶ್ರೀರಾಮನಿಗೆ ನನ್ನನ್ನು ದಾನಮಾಡಿದರು.॥52॥

ಮೂಲಮ್ - 53

ಮಮ ಚೈವಾನುಜಾ ಸಾಧ್ವೀ ಊರ್ಮಿಲಾ ಶುಭದರ್ಶನಾ ।
ಭಾರ್ಯಾರ್ಥೇ ಲಕ್ಷ್ಮಣಸ್ಯಾಪಿ ದತ್ತಾ ಪಿತ್ರಾ ಮಮ ಸ್ವಯಮ್ ॥

ಅನುವಾದ

ಬಳಿಕ ತಂದೆಯವರು ಸ್ವತಃ ನನ್ನ ತಂಗಿಯಾದ ಸತೀ ಸಾಧ್ವೀ ಪರಮಸುಂದರೀ ಊರ್ಮಿಳೆಯನ್ನು ಲಕ್ಷ್ಮಣನಿಗೆ ಪತ್ನಿ ರೂಪದಲ್ಲಿ ಅವನ ಕೈಗೆ ಒಪ್ಪಿಸಿದರು.॥53॥

ಮೂಲಮ್ - 54

ಏವಂ ದತ್ತಾಸ್ಮಿ ರಾಮಾಯ ತಥಾ ತಸ್ಮಿನ್ ಸ್ವಯಂವರೇ ।
ಅನುರಕ್ತಾಸ್ಮಿ ಧರ್ಮೇಣ ಪತಿಂ ವೀರ್ಯವತಾಂ ವರಮ್ ॥

ಅನುವಾದ

ಹೀಗೆ ಆ ಸ್ವಯಂವರದಲ್ಲಿ ತಂದೆಯವರು ಶ್ರೀರಾಮರ ಕೈಗೆ ನನ್ನನ್ನು ಒಪ್ಪಿಸಿದರು. ಬಲವಂತರಲ್ಲಿ ಶ್ರೇಷ್ಠರಾದ ನನ್ನ ಪತಿ ಶ್ರೀರಾಮರಲ್ಲಿ ಸದಾ ಧರ್ಮಾನುಸಾರ ಅನುರಕ್ತಳಾಗಿ ಇರುವೆನು.॥54॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಹದಿನೆಂಟನೆಯ ಸರ್ಗ ಪೂರ್ಣವಾಯಿತು ॥118॥