०२१ लक्ष्मणस्य वीर्योक्तिः

वाचनम्
ಭಾಗಸೂಚನಾ

ಲಕ್ಷ್ಮಣನ ಕೋಪ, ರಾಜ್ಯಾಧಿಕಾರವನ್ನು ತಂದೆಯಿಂದ ಬಲವಂತವಾಗಿ ಪಡೆದುಕೊಳ್ಳಲು ಸಲಹೆ ನೀಡಿದುದು, ಶ್ರೀರಾಮನು ಪಿತೃವಾಕ್ಯಪರಿಪಾಲನೆಯೇ ಪರಮಧರ್ಮವೆಂದು ತಿಳಿಸಿ ಲಕ್ಷ್ಮಣನನ್ನು ಸಮಾಧಾನಗೊಳಿಸಿದುದು

ಮೂಲಮ್ - 1

ತಥಾ ತು ವಿಲಪಂತೀಂ ತಾಂ ಕೌಸಲ್ಯಾಂ ರಾಮಮಾತರಮ್ ।
ಉವಾಚ ಲಕ್ಷ್ಮಣೋ ದೀನಸ್ತತ್ಕಾಲಸದೃಶಂ ವಚಃ ॥

ಅನುವಾದ

ಈ ಪ್ರಕಾರ ವಿಲಪಿಸುತ್ತಿರುವ ಶ್ರೀರಾಮಮಾತೆ ಕೌಸಲ್ಯೆಯ ಬಳಿ ಅತ್ಯಂತ ದುಃಖಿತನಾದ ಲಕ್ಷ್ಮಣನು ಆ ಸಮಯಕ್ಕೆ ಸರಿಯಾಗಿ ಇಂತೆಂದನು.॥1॥

ಮೂಲಮ್ - 2

ನ ರೋಚತೇ ಮಮಾಪ್ಯೇತದಾರ್ಯೇ ಯದ್ರಾಘವೋ ವನಮ್ ।
ತ್ಯಕ್ತ್ವಾ ರಾಜ್ಯಶ್ರಿಯಂ ಗಚ್ಛೇತ್ ಸ್ತ್ರಿಯಾ ವಾಕ್ಯವಶಂಗತಃ ॥

ಮೂಲಮ್ - 3

ವಿಪರೀತಶ್ಚ ವೃದ್ಧಶ್ಚ ವಿಷಯೈಶ್ಚ ಪ್ರಧರ್ಷಿತಃ ।
ನೃಪಃ ಕಿಮಿವ ನ ಬ್ರೂಯಾಚ್ಚೋದ್ಯಮಾನಃ ಸಮನ್ಮಥಃ ॥

ಅನುವಾದ

ದೊಡ್ಡಮ್ಮ! ಶ್ರೀರಾಮನು ರಾಜ್ಯಲಕ್ಷ್ಮೀಯನ್ನು ತ್ಯಜಿಸಿ ಕಾಡಿಗೆ ಹೋಗುವುದು ನನಗೂ ಒಳ್ಳೆಯದೆನಿಸುವುದಿಲ್ಲ. ಮಹಾರಾಜರಾದರೋ ಈಗ ಸ್ತ್ರೀಯ ಮಾತಿಗೆ ಮರುಳಾಗಿ ಅವರ ಪ್ರಕೃತಿ ವಿಪರೀತವಾಗಿದೆ. ಒಂದು ಅವರು ಮುದುಕರಾಗಿದ್ದಾರೆ, ಇನ್ನೊಂದು ವಿಷಯಗಳಿಗೆ ವಶೀಭೂತವಾಗಿರುವರು. ಆದ್ದರಿಂದ ಮನ್ಮಥನಿಗೆ ವಶೀಭೂತರಾಗಿ ಆ ರಾಜರು ಕೈಕೆಯಂತಹ ಸ್ತ್ರೀಯ ಪ್ರೇರಣೆಯಿಂದ ಏನು ತಾನೆ ಮಾಡಲಾರರು.॥2-3॥

ಮೂಲಮ್ - 4

ನಾಸ್ಯಾಪರಾಧಂ ಪಶ್ಯಾಮಿ ನಾಪಿ ದೋಷಂ ತಥಾವಿಧಮ್ ।
ಯೇನ ನಿರ್ವಾಸ್ಯತೇ ರಾಷ್ಟ್ರಾದ್ ವನವಾಸಾಯ ರಾಘವಃ ॥

ಅನುವಾದ

ಶ್ರೀರಘುನಾಥನಲ್ಲಿ ರಾಜ್ಯದಿಂದ ಹೊರಗಟ್ಟಿ ವನವಾಸ ಮಾಡುವಂತಹ ಯಾವುದೇ ಅಪರಾಧ ಅಥವಾ ದೋಷವನ್ನು ನಾನು ನೋಡುವುದಿಲ್ಲ.॥4॥

ಮೂಲಮ್ - 5

ನ ತಂ ಪಶ್ಯಾಮಹಂ ಲೋಕೇ ಪರೋಕ್ಷಮಪಿ ಯೋ ನರಃ ।
ಸ್ವಮಿತ್ರೋಽಪಿ ನಿರಸ್ತೋಽಪಿ ಯೋಽಸ್ಯ ದೋಷಮುದಾಹರೇತ್ ॥

ಅನುವಾದ

ಜಗತ್ತಿನಲ್ಲಿ ಯಾವುದೇ ಮನುಷ್ಯನು ಅತ್ಯಂತ ಶತ್ರು ಹಾಗೂ ತಿರಸ್ಕೃತನಾಗಿದ್ದರೂ ಪರೋಕ್ಷದಲ್ಲಿಯೂ ಶ್ರೀರಾಮನಲ್ಲಿ ಯಾವುದೇ ದೋಷವನ್ನು ತೋರಿಸುವುದನ್ನು ನಾನು ನೋಡಿಲ್ಲ.॥5॥

ಮೂಲಮ್ - 6

ದೇವಕಲ್ಪಮೃಜುಂ ದಾಂತಂ ರಿಪೂಣಾಮಪಿ ವತ್ಸಲಮ್ ।
ಅವೇಕ್ಷಮಾಣಃ ಕೋ ಧರ್ಮಂ ತ್ಯಜೇತ್ ಪುತ್ರಮಕಾರಣಾತ್ ॥

ಅನುವಾದ

ದೇವತೆಗಳಂತೆ ಶುದ್ಧನೂ, ಸರಳನೂ, ಜಿತೇಂದ್ರಿಯನೂ, ಶತ್ರುಗಳ ಮೇಲೆಯೂ ಸ್ನೇಹವಿಡುವವನೂ (ಶ್ರೀರಾಮ ನಂತಹ) ಆದ ಪುತ್ರನನ್ನು ಧರ್ಮದ ಮೇಲೆ ದೃಷ್ಟಿಯಿಟ್ಟಿರುವ ಯಾವ ರಾಜನು ತಾನೇ ತ್ಯಜಿಸಬಲ್ಲನು.॥6॥

ಮೂಲಮ್ - 7

ತದಿದಂ ವಚನಂ ರಾಜ್ಞಃ ಪುನರ್ಬಾಲ್ಯಮುಪೇಯುಷಃ ।
ಪುತ್ರಃ ಕೋ ಹೃದಯೇಕುರ್ಯಾದ್ರಾಜವೃತ್ತಮನುಸ್ಮರನ್ ॥

ಅನುವಾದ

ವೃದ್ಧಾಪ್ಯದಿಂದ ಬಾಲಭಾವವನ್ನು ಹೊಂದಿರುವ ವಿವೇಕಶೂನ್ಯನಾದ ಈ ರಾಜನ ವಿವೇಕರಹಿತವಾದ ಮಾತಗಳನ್ನು ರಾಜನೀತಿಯನ್ನು ಪೂರ್ಣವಾಗಿ ತಿಳಿದಿರುವ ಯಾವ ರಾಜಪುತ್ರನು ತಾನೇ ಮನಸ್ಸಿಗೆ ತಂದುಕೊಳ್ಳುತ್ತಾನೆ.॥7॥

ಮೂಲಮ್ - 8

ಯಾವದೇವ ನ ಜಾನಾತಿ ಕಶ್ಚಿದರ್ಥಮಿಮಂ ನರಃ ।
ತಾವದೇವ ಮಯಾ ಸಾರ್ಧಮಾತ್ಮಸ್ಥಂ ಕುರು ಶಾಸನಮ್ ॥

ಅನುವಾದ

ರಘುನಂದನ! ನಿನ್ನ ವನವಾಸದ ಮಾತನ್ನು ಯಾವ ಮನುಷ್ಯನೂ ತಿಳಿಯದಿರುವಾಗ ನೀನು ನನ್ನ ಸಹಾಯದಿಂದ ಈ ರಾಜ್ಯದ ಶಾಸ್ತ್ರನವನ್ನು ಕೈಗೆತ್ತಿಕೋ.॥8॥

ಮೂಲಮ್ - 9

ಮಯಾ ಪಾರ್ಶ್ವೇ ಸಧನುಷಾತವ ಗುಪ್ತಸ್ಯ ರಾಘವ ।
ಕಃ ಸಮರ್ಥೋಽಧಿಕಂ ಕರ್ತುಂ ಕೃತಾಂತಸ್ಯೇವ ತಿಷ್ಠತಃ ॥

ಅನುವಾದ

ರಘುವೀರ! ನಾನು ಧನುಸ್ಸನ್ನೆತ್ತಿ ನಿನ್ನ ಬಳಿಯಿದ್ದು ನಿನ್ನನ್ನು ರಕ್ಷಿಸುತ್ತಿರುವಾಗ, ನಾನು ಕಾಲನಂತೆ ಯುದ್ಧಕ್ಕೆ ಸಿದ್ಧನಾಗಿ ನಿಂತಿರುವಾಗ, ನನಗಿಂತ ಹೆಚ್ಚು ಪೌರುಷವನ್ನು ಪ್ರಕಟಿಸಬಲ್ಲ ಸಮರ್ಥರು ಯಾರು ತಾನೇ ಇರುವರು.॥9॥

ಮೂಲಮ್ - 10

ನಿರ್ಮನುಷ್ಯಾಮಿಮಾಂ ಸರ್ವಾಮಯೋಧ್ಯಾಂ ಮನುಜರ್ಷಭ ।
ಕರಿಷ್ಯಾಮಿ ಶರೈಸ್ತೀಕ್ಷ್ಣೈರ್ಯದಿ ಸ್ಥಾಸ್ಯತಿ ವಿಪ್ರಿಯೇ ॥

ಅನುವಾದ

ನರಶ್ರೇಷ್ಠ! ನಗರದ ಜನರು ವಿರೋಧಿಸಿ ಎದುರಿಸಿದರೆ ನಾನು ನನ್ನ ಹರಿತವಾದ ಬಾಣಗಳಿಂದ ಇಡೀ ಅಯೋಧ್ಯೆಯನ್ನು ಜನರಹಿತವನ್ನಾಗಿ ಮಾಡಿಬಿಡುವೆನು.॥10॥

ಮೂಲಮ್ - 11

ಭರತಸ್ಯಾಥ ಪಕ್ಷ್ಯೋ ವಾ ಯೋವಾಸ್ಯ ಹಿತಮಿಚ್ಛತಿ ।
ಸರ್ವಾಂಸ್ತಾಂಶ್ಚ ವಧಿಷ್ಯಾಮಿ ಮೃದುರ್ಹಿ ಪರಿಭೂಯತೇ ॥

ಅನುವಾದ

ಯಾರು-ಯಾರು ಭರತನ ಪಕ್ಷವನ್ನು ವಹಿಸಿ ಬರುವರೋ, ಅಥವಾ ಕೇವಲ ಅವನ ಹಿತವನ್ನು ಬಯಸುವರೋ ಅವರನ್ನು ನಾನು ಕೊಂದು ಬಿಡುವೆನು; ಏಕೆಂದರೆ ಯಾರು ಕೋಮಲ ಇಲ್ಲವೇ ನಮ್ರನಾಗಿರುವನೋ ಅವನನ್ನು ಎಲ್ಲರೂ ತಿರಸ್ಕರಿಸುತ್ತಾರ.॥11॥

ಮೂಲಮ್ - 12

ಪ್ರೋತ್ಸಾಹಿತೋಽಯಂ ಕೈಕೇಯ್ಯಾ ಸಂತುಷ್ಟೋ ಯದಿ ನಃ ಪಿತಾ ।
ಅಮಿತ್ರಭೂತೋ ನಿಃಸಂಗಂ ವಧ್ಯತಾಂ ವಧ್ಯತಾಮಪಿ ॥

ಅನುವಾದ

ಕೈಕೆಯ ಪ್ರೋತ್ಸಾಹನೆಯಿಂದ ಆಕೆಯ ಮೇಲೆ ಸಂತುಷ್ಟನಾಗಿ ತಂದೆಯವರೇ ನಮಗೆ ಶತ್ರುಗಳಾಗಿದ್ದರೆ ನಾವೂ ಕೂಡ ಮೋಹ-ಮಮತೆಯನ್ನು ಬಿಟ್ಟು ಅವರನ್ನು ಬಂಧಿಸಿಡಬೇಕು ಇಲ್ಲವೇ ಕೊಂದುಹಾಕಬೇಕು.॥12॥

ಮೂಲಮ್ - 13

ಗುರೋರಪ್ಯವಲಿಪ್ತಸ್ಯ ಕರ್ಯಾಕಾರ್ಯಮಜಾನತಃ ।
ಉತ್ಪಥಂ ಪ್ರತಿಪನ್ನಸ್ಯ ಕಾರ್ಯಂ ಭವತಿ ಶಾಸನಮ್ ॥

ಅನುವಾದ

ಏಕೆಂದರೆ, ಗುರುವೇ ಉದ್ಧ್ಧಟತನದಿಂದ ಕಾರ್ಯಾ ಕಾರ್ಯದ ಜ್ಞಾನವಿಲ್ಲದೆ, ಕೆಟ್ಟ ದಾರಿಯಲ್ಲಿ ನಡೆದರೆ ಅವನನ್ನು ದಂಡಿಸುವುದು ಆವಶ್ಯಕವಾಗಿದೆ.॥13॥

ಮೂಲಮ್ - 14

ಬಲಮೇಷ ಕಿಮಾಶ್ರಿತ್ಯ ಹೇತುಂ ವಾ ಪುರುಷೋತ್ತಮ ।
ದಾತುಮಿಚ್ಛತಿ ಕೈಕೇಯ್ಯೈ ಉಪಸ್ಥಿತಮಿದಂ ತವ ॥

ಅನುವಾದ

ಪುರುಷೋತ್ತಮನೇ! ರಾಜನು ಯಾವ ಬಲವನ್ನು ಆಶ್ರಯಿಸಿ ಅಥವಾ ಯಾವ ಕಾರಣದಿಂದ ನಿನಗೆ ನ್ಯಾಯವಾಗಿ ಸಿಗಬೇಕಾದ ಈ ರಾಜ್ಯವನ್ನು ಈಗ ಕೈಕೆಗೆ ಕೊಡಲು ಬಯಸುತ್ತಿರುವನು.॥14॥

ಮೂಲಮ್ - 15

ತ್ವಯಾ ಚೈವ ಮಯಾ ಚೈವ ಕೃತ್ವಾ ವೈರಮನುತ್ತಮಮ್ ।
ಕಾಸ್ಯ ಶಕ್ತಿಃ ಶ್ರಿಯಂ ದಾತುಂ ಭರತಾಯಾರಿಶಾಸನ ॥

ಅನುವಾದ

ಶತ್ರುದಮನ ಶ್ರೀರಾಮಾ! ನನ್ನೊಂದಿಗೆ ಮತ್ತು ನಿನ್ನೊಂದಿಗೆ ಭಾರೀ ವೈರ ಕಟ್ಟಿಕೊಂಡು ಈ ರಾಜ್ಯಲಕ್ಷ್ಮಿಯನ್ನು ಭರತನಿಗೆ ಕೊಡುವಂತಹ ಯಾವ ಶಕ್ತಿ ಇದೆ ಇವರಲ್ಲಿ.॥15॥

ಮೂಲಮ್ - 16

ಅನುರಕ್ತೋಸ್ಮಿ ಭಾವೇನ ಭ್ರಾತರಂ ದೇವಿ ತತ್ತ್ವತಃ ।
ಸತ್ಯೇನ ಧನುಷಾ ಚೈವ ದತ್ತೇನೇಷ್ಟೇನ ತೇ ಶಪೇ ॥

ಅನುವಾದ

ದೇವಿ! ದೊಡ್ಡಮ್ಮ! ನಾನು ಸತ್ಯ, ಧನುಸ್ಸು, ದಾನ ಹಾಗೂ ಯಜ್ಞ ಇವುಗಳ ಮೇಲೆ ಆಣೆಮಾಡಿ ನಿನಗೆ ಹೇಳುತ್ತೇನೆ- ನನಗೆ ನನ್ನ ಪೂಜ್ಯ ಅಣ್ಣನ ಮೇಲೆ ಹಾರ್ದಿಕ ಅನುರಾಗವಿದೆ.॥16॥

ಮೂಲಮ್ - 17

ದೀಪ್ತಮಗ್ನಿಮರಣ್ಯಂ ವಾ ಯದಿ ರಾಮಃ ಪ್ರವೇಕ್ಷ್ಯತಿ ।
ಪ್ರವಿಷ್ಟಂ ತತ್ರ ಮಾಂ ದೇವಿ ತ್ವಂ ಪೂರ್ವಮವಧಾರಯ ॥

ಅನುವಾದ

ದೇವಿ! ಶ್ರೀರಾಮನು ಉರಿಯುವ ಅಗ್ನಿಯಲ್ಲಿ ಅಥವಾ ಘೋರ ವನವನ್ನು ಪ್ರವೇಶಿಸಿದರೆ ನಾನು ಅವನಿಗಿಂತಲೂ ಮೊದಲೇ ಪ್ರವೇಶಿಸುವೆನು ಎಂದು ವಿಶ್ವಾಸವಿಡಿರಿ.॥17॥

ಮೂಲಮ್ - 18

ಹರಾಮಿ ವೀರ್ಯಾದ್ದುಃಖಂ ತೇ ತಮಃ ಸೂರ್ಯ ಇವೋದಿತಃ ।
ದೇವೀ ಪಶ್ಯತು ಮೇ ವೀರ್ಯಂ ರಾಘವಶ್ಚೈವ ಪಶ್ಯತು ॥

ಅನುವಾದ

ಈಗ ನೀವು, ರಘುನಾಥನು ಹಾಗೂ ಇತರ ಎಲ್ಲರೂ ನನ್ನ ಪರಾಕ್ರಮವನ್ನು ನೋಡಿರಿ. ಸೂರ್ಯನು ಉದಯಿಸಿದಾಗ ಅಂಧಕಾರವನ್ನು ನಾಶ ಮಾಡುವಂತೆ ನಾನು ನನ್ನ ಶಕ್ತಿಯಿಂದ ನಿಮ್ಮ ಎಲ್ಲ ದುಃಖಗಳನ್ನು ದೂರಗೊಳಿಸುವೆನು.॥18॥

ಮೂಲಮ್ - 19

ಹನಿಷ್ಯೇ ಪಿತರಂ ವೃದ್ಧಂ ಕೈಕೇಯ್ಯಾಸಕ್ತಮಾನಸಮ್ ।
ಕೃಪಣಂ ಚ ಸ್ಥಿರಂ ಬಾಲ್ಯೇಂ ವೃದ್ಧಭಾವೇನ ಗರ್ಹಿತಮ್ ॥

ಅನುವಾದ

ಯಾರು ಕೈಕೆಯಲ್ಲಿ ಆಸಕ್ತನಾಗಿ ದೀನನಾಗಿರುವನೋ, ಮುದುಕನಾಗಿ ಬಾಲಭಾವ (ಅವಿವೇಕ)ದಲ್ಲಿ ಸ್ಥಿತನಾಗಿರುವನೋ ವೃದ್ಧಾಪ್ಯದ ಕಾರಣ ನಿಂದಿತನಾಗಿರುವನೋ ಅಂತಹ ತಂದೆಯನ್ನು ನಾನು ಖಂಡಿತವಾಗಿ ಕೊಂದುಹಾಕುವೆನು.॥19॥

ಮೂಲಮ್ - 20

ಏತತ್ತು ವಚನಂ ಶ್ರುತ್ವಾ ಲಕ್ಷ್ಮಣಸ್ಯ ಮಹಾತ್ಮನಃ ।
ಉವಾಚ ರಾಮಂ ಕೌಸಲ್ಯಾ ರುದತೀ ಶೋಕಲಾಲಸಾ ॥

ಅನುವಾದ

ಮಹಾತ್ಮನಾದ ಲಕ್ಷ್ಮಣನ ಈ ಓಜಸ್ವೀ ಮಾತನ್ನು ಕೇಳಿ ಶೋಕಮಗ್ನಳಾದ ಕೌಸಲ್ಯೆಯು ಅಳುತ್ತಾ ಶ್ರೀರಾಮನಲ್ಲಿ ನುಡಿದಳು.॥20॥

ಮೂಲಮ್ - 21

ಭ್ರಾತುಸ್ತೇ ವದತಃ ಪುತ್ರ ಲಕ್ಷ್ಮಣಸ್ಯ ಶ್ರುತಂ ತ್ವಯಾ ।
ಯದತ್ರಾನಂತರಂ ತತ್ತ್ವಂ ಕುರುಷ್ವ ಯದಿ ರೋಚತೇ ॥

ಅನುವಾದ

ಮಗು! ನಿನ್ನ ತಮ್ಮನಾದ ಲಕ್ಷ್ಮಣನು ಆಡಿದ ಎಲ್ಲ ಮಾತುಗಳನ್ನು ನೀನು ಕೇಳಿರುವೆ. ಅವು ಸರಿ ಎನಿಸಿದರೆ ಮುಂದೆ ನಿನಗೆ ಉಚಿತವೆನಿಸಿದಂತೆ ಮಾಡು.॥21॥

ಮೂಲಮ್ - 22

ನ ಚಾಧರ್ಮ್ಯಂ ವಚಃ ಶ್ರುತ್ವಾ ಸಪತ್ನ್ಯಾ ಮಮ ಭಾಷಿತಮ್ ।
ವಿಹಾಯ ಶೋಕಸಂತಪ್ತಾಂ ಗಂತುಮರ್ಹಸಿ ಮಾಮಿತಃ ॥

ಅನುವಾದ

ನನ್ನ ಸವತಿಯು ಆಡಿದ ಅಧರ್ಮಯುಕ್ತ ಮಾತನ್ನು ಕೇಳಿ ಶೋಕ ಸಂತಪ್ತಳಾದ ನಿನ್ನ ತಾಯಿಯಾದ ನನ್ನನ್ನು ಬಿಟ್ಟು ನೀನು ಇಲ್ಲಿಂದ ಹೋಗಬಾರದು.॥22॥

ಮೂಲಮ್ - 23

ಧರ್ಮಜ್ಞ ಇತಿ ಧರ್ಮಿಷ್ಠೋ ಧರ್ಮಂ ಚರಿತುಮಿಚ್ಛಸಿ ।
ಶುಶ್ರೂಷ ಮಾಮಿಹಸ್ಥಸ್ತ್ವಂ ಚರ ಧರ್ಮಮನುತ್ತಮಮ್ ॥

ಅನುವಾದ

ಧರ್ಮಿಷ್ಠನೇ! ನೀನು ಧರ್ಮವನ್ನು ತಿಳಿದವನು, ಇದಕ್ಕಾಗಿ ಧರ್ಮವನ್ನು ಪಾಲಿಸಲು ಬಯಸುವೆಯಾದರೆ ಇಲ್ಲೇ ಇದ್ದು ನನ್ನ ಸೇವೆ ಮಾಡು ಹಾಗೂ ಹೀಗೆ ಉತ್ತಮ ಧರ್ಮವನ್ನು ಆಚರಿಸು.॥23॥

ಮೂಲಮ್ - 24

ಶುಶ್ರೂಷುರ್ಜನನೀಂ ಪುತ್ರ ಸ್ವಗೃಹೇ ನಿಯತೋ ವಸನ್ ।
ಪರೇಣ ತಪಸಾ ಯುಕ್ತಃ ಕಾಶ್ಯಪಸ್ತ್ರಿದಿವಂ ಗತಃ ॥

ಅನುವಾದ

ಮಗನೇ! ತನ್ನ ಮನೆಯಲ್ಲೇ ಇದ್ದು ನಿಯಮಪೂರ್ವಕ ತಾಯಿಯ ಸೇವೆ ಮಾಡಿದ ಕಾಶ್ಯಪನು ಉತ್ತಮ ತಪಸ್ಸಿನಿಂದ ಯುಕ್ತನಾಗಿ ಸ್ವರ್ಗಲೋಕಕ್ಕೆ ಹೊರಟುಹೋಗಿರುವನು.॥24॥

ಮೂಲಮ್ - 25

ಯಥೈವ ರಾಜಾ ಪೂಜ್ಯಸ್ತೇ ಗೌರವೇಣ ತಥಾ ಹ್ಯಹಮ್ ।
ತ್ವಾಂ ಸಾಹಂ ನಾನುಜಾನಾಮಿ ನ ಗಂತವ್ಯಮಿತೋ ವನಮ್ ॥

ಅನುವಾದ

ಗೌರವದ ದೃಷ್ಟಿಯಿಂದ ಮಹಾರಾಜರು ನಿನಗೆ ಪೂಜ್ಯರಾಗಿರುವಂತೆಯೇ ನಾನೂ ಪೂಜ್ಯಳಾಗಿರುವೆ. ನಾನು ನಿನಗೆ ಕಾಡಿಗೆ ಹೋಗಲು ಆಜ್ಞಾಪಿಸುವುದಿಲ್ಲ, ಆದ್ದರಿಂದ ನೀನು ಇಲ್ಲಿಂದ ಕಾಡಿಗೆ ಹೋಗಬಾರದು.॥25॥

ಮೂಲಮ್ - 26

ತದ್ವಿಯೋಗಾನ್ನ ಮೇ ಕಾರ್ಯಂ ಜೀವಿತೇನ ಸುಖೇನ ಚ ।
ತ್ವಯಾ ಸಹ ಮಮ ಶ್ರೇಯಸ್ತೃಣಾನಾಮಪಿ ಭಕ್ಷಣಮ್ ॥

ಅನುವಾದ

ನಿನ್ನೊಡನೆ ಹುಲ್ಲನ್ನು ತಿಂದಾದರೂ ಇರುವುದೂ ನನಗೆ ಶ್ರೇಯಸ್ಕರವಾಗಿದೆ, ಆದರೆ ನಿನ್ನಿಂದ ಅಗಲಿ ಇದ್ದರೆ ನನಗೆ ಈ ಜೀವನದಿಂದಾಗಲೀ, ಸುಖದಿಂದಾಗಲೀ ಯಾವು ಸುಖವೂ ಇಲ್ಲ.॥26॥

ಮೂಲಮ್ - 27

ಯದಿ ತ್ವಂ ಯಾಸ್ಯಸಿ ವನಂ ತ್ಯಕ್ತ್ವಾ ಮಾಂ ಶೋಕಲಾಲಸಾಮ್ ।
ಅಹಂ ಪ್ರಾಯಮಿಹಾಸಿಷ್ಯೇ ನ ಚ ಶಕ್ಷ್ಯಾಮಿ ಜೀವಿತುಮ್ ॥

ಅನುವಾದ

ಶೋಕಸಮುದ್ರದಲ್ಲಿ ಮುಳುಗಿರುವ ನನ್ನನ್ನು ಬಿಟ್ಟು ನೀನು ಕಾಡಿಗೆ ಹೊರಟುಹೋದರೆ ನಾನು ಉಪವಾಸ ಮಾಡಿ ಪ್ರಾಣತ್ಯಾಗ ಮಾಡುವೆನು, ಜೀವಂತವಾಗಿ ಇರಲಾರೆನು.॥27॥

ಮೂಲಮ್ - 28

ತತಸ್ತ್ವಂ ಪ್ರಾಪ್ಸ್ಯಸೇ ಪುತ್ರ ನಿರಯಂ ಲೋಕವಿಶ್ರುತಮ್ ।
ಬ್ರಹ್ಮಹತ್ಯಾಮಿವಾಧರ್ಮಾತ್ ಸಮುದ್ರಃ ಸರಿತಾಂ ಪತಿಃ ॥

ಅನುವಾದ

ಮಗು! ಹೀಗಾದರೆ ನೀನು ಜಗತ್ ಪ್ರಸಿದ್ಧ ಆ ನರಕತುಲ್ಯ ಕಷ್ಟವನ್ನು ಪಡೆಯುವೆ. ಸರಿತೆಗಳ ಸ್ವಾಮಿ ಸಮುದ್ರವು ತನ್ನ ಅಧರ್ಮದ ಫಲರೂಪವಾಗಿ ಬ್ರಹ್ಮಹತ್ಯೆಗೆ ಸಮಾನವಾದ ದುಃಖವನ್ನು ಪಡೆದಿದ್ದನು.॥28॥*

ಟಿಪ್ಪನೀ
  • ಯಾವುದೋ ಕಲ್ಪದಲ್ಲಿ ಸಮುದ್ರನು ತನ್ನ ತಾಯಿಗೆ ದುಃಖ ಕೊಟ್ಟಿದ್ದನು. ಅದಕ್ಕೆ ಪಿಪ್ಪಲಾದ ಎಂಬ ಬ್ರಹ್ಮರ್ಷಿಯು ಅಧರ್ಮದ ದಂಡವನ್ನು ಕೊಡಲು ಅವನ ಮೇಲೆ ಒಂದು ಕೃತ್ಯೆಯನ್ನು ಪ್ರಯೋಗಿಸಿದನು. ಅದರಿಂದ ಸಮುದ್ರನು ನರಕಸದೃಶ ಮಹಾದುಃಖವನ್ನು ಭೋಗಿಸಬೇಕಾಗಿಯಿತು.
ಮೂಲಮ್ - 29

ವಿಲಪಂತೀಂ ತಥಾ ದೀನಾಂ ಕೌಸಲ್ಯಾಂ ಜನನೀಂ ತತಃ ।
ಉವಾಚ ರಾಮೋ ಧರ್ಮಾತ್ಮಾ ವಚನಂ ಧರ್ಮಸಂಹಿತಮ್ ॥

ಅನುವಾದ

ತಾಯಿ ಕೌಸಲ್ಯೆಯು ಹೀಗೆ ದೀನಳಾಗಿ ವಿಲಪಿಸುವುದನ್ನು ನೋಡಿ ಧರ್ಮಾತ್ಮಾ ಶ್ರೀರಾಮಚಂದ್ರನು ಧರ್ಮಯುಕ್ತ ಮಾತನ್ನು ಹೇಳಿದನು.॥29॥

ಮೂಲಮ್ - 30

ನಾಸ್ತಿ ಶಕ್ತಿಃ ಪಿತುರ್ವಾಕ್ಯಂ ಸಮತಿಕ್ರಮಿತುಂ ಮಮ ।
ಪ್ರಸಾದಯೇ ತ್ವಾಂ ಶಿರಸಾ ಗಂತುಮಿಚ್ಛಾಮ್ಯಹಂ ವನಮ್ ॥

ಅನುವಾದ

ಅಮ್ಮಾ! ನಾನು ನಿನ್ನ ಚರಣಗಳಲ್ಲಿ ತಲೆಯನ್ನಿಟ್ಟು ನಿನ್ನನ್ನು ಪ್ರಸನ್ನಗೊಳಿಸಲು ಬಯಸುತ್ತಿರುವೆನು. ತಂದೆಯವರ ಆಜ್ಞೆಯನ್ನು ಉಲ್ಲಂಘಿಸುವ ಶಕ್ತಿ ನನ್ನಲ್ಲಿಲ್ಲ; ಆದ್ದರಿಂದ ನಾನು ವನಕ್ಕೆ ಹೋಗಲು ಬಯಸುತ್ತಿರುವೆನು.॥30॥

ಮೂಲಮ್ - 31

ಋಷಿಣಾ ಚ ಪಿತುರ್ವಾಕ್ಯಂ ಕುರ್ವತಾ ವನಚಾರಿಣಾ ।
ಗೌರ್ಹತಾ ಜಾನತಾ ಧರ್ಮಂ ಕಂಡುನಾ ಚ ವಿಪಶ್ಚಿತಾ ॥

ಅನುವಾದ

ವನವಾಸೀ ವಿದ್ವಾನ್ ಕಂಡು ಮುನಿಯು ತಂದೆಯ ಆಜ್ಞೆಯನ್ನು ಪಾಲಿಸಲಿಕ್ಕಾಗಿ ಅಧರ್ಮವೆಂದು ತಿಳಿದಿದ್ದರೂ ಗೋವನ್ನು ವಧಿಸಿಬಿಟ್ಟಿದ್ದನು.॥31॥

ಮೂಲಮ್ - 32

ಅಸ್ಮಾಕಂ ಚ ಕುಲೇ ಪೂರ್ವಂ ಸಗರಸ್ಯಾಜ್ಞಯಾ ಪಿತುಃ ।
ಖನದ್ಭಿಃ ಸಾಗರೈರ್ಭೂಮಿಮವಾಪ್ತಃ ಸುಮಹಾನ್ವಧಃ ॥

ಅನುವಾದ

ರಾಜಾ ಸಗರನ ಪುತ್ರರು ಪಿತನ ಆಜ್ಞೆಯಂತೆ ಭೂಮಿಯನ್ನು ಅಗೆಯುತ್ತಾ ಕೆಟ್ಟ ರೀತಿಯಿಂದ ಸತ್ತುಹೋಗಿದ್ದರು; ಇಂತಹವರು ನಮ್ಮ ಕುಲದಲ್ಲಿಯೂ ಮೊದಲು ಆಗಿದ್ದರು.॥32॥

ಮೂಲಮ್ - 33

ಜಾಮದಗ್ನ್ಯೇನ ರಾಮೇಣ ರೇಣುಕಾ ಜನನೀ ಸ್ವಯಮ್ ।
ಕೃತ್ತಾ ಪರಶುನಾರಣ್ಯೇ ಪಿತುರ್ವಚನಕಾರಣಾತ್ ॥

ಅನುವಾದ

ಜಮದಗ್ನಿ ಪುತ್ರ ಪರಶುರಾಮನು ತಂದೆಯ ಆಜ್ಞೆಯನ್ನು ಪಾಲಿಸಲು ಗಂಡುಗೊಡಲಿಯಿಂದ ತನ್ನ ತಾಯಿ ರೇಣುಕೆಯ ಕತ್ತನ್ನೇ ತುಂಡರಿಸಿಬಿಟ್ಟಿದ್ದನು.॥33॥

ಮೂಲಮ್ - 34

ಏತೈರನ್ಯೈಶ್ಚ ಬಹುಭಿರ್ದೇವಿ ದೇವಸಮೈಃ ಕೃತಮ್ ।
ಪಿತುರ್ವಚನಮಕ್ಲೀಬಂ ಕರಿಷ್ಯಾಮಿ ಪಿತುರ್ಹಿತಮ್ ॥

ಅನುವಾದ

ದೇವಿ! ಇವರೆಲ್ಲ ಹಾಗೂ ಅನೇಕ ದೇವತುಲ್ಯ ಮನುಷ್ಯರು ಉತ್ಸಾಹದಿಂದ ತಂದೆಯ ಆದೇಶವನ್ನು ಪಾಲಿಸಿರುವರು. ಆದ್ದರಿಂದ ನಾನೂ ಹೇಡಿತನವನ್ನು ಬಿಟ್ಟು ತಂದೆಯ ಹಿತವನ್ನು ಮಾಡುವೆನು.॥34॥

ಮೂಲಮ್ - 35

ನ ಖಲ್ವೇತನ್ಮಯೈಕೇನ ಕ್ರಿಯತೇ ಪಿತೃಶಾಸನಮ್ ।
ಏತೈರಪಿ ಕೃತಂ ದೇವಿ ಯೇ ಮಯಾ ಪರಿಕೀರ್ತಿತಾಃ ॥

ಅನುವಾದ

ದೇವಿ! ಕೇವಲ ನಾನೇ ಈ ಪ್ರಕಾರ ತಂದೆಯ ಆದೇಶವನ್ನು ಪಾಲಿಸುವುದಿಲ್ಲ. ನಾನು ಈಗ ಹೇಳಿರುವವರೆಲ್ಲರೂ ತಂದೆಯ ಆದೇಶವನ್ನು ಪಾಲಿಸಿರುವರು.॥35॥

ಮೂಲಮ್ - 36

ನಾಹಂ ಧರ್ಮಮಪೂರ್ವಂ ತೇ ಪ್ರತಿಕೂಲಂ ಪ್ರವರ್ತಯೇ ।
ಪೂರ್ವೈರಯಮಭಿಪ್ರೇತೋ ಗತೋ ಮಾರ್ಗೋಽನುಗಮ್ಯತೇ ॥

ಅನುವಾದ

ಅಮ್ಮಾ! ನಾನು ನಿನಗೆ ಪ್ರತಿಕೂಲವಾದ ಯಾವುದೇ ಹೊಸ ಧರ್ಮವನ್ನು ಪ್ರಚಾರ ಮಾಡುತ್ತಿಲ್ಲ. ಹಿಂದೆ ಧರ್ಮಾತ್ಮ ಪುರುಷರಿಗೂ ಇದೇ ಅಭೀಷ್ಟವಾಗಿತ್ತು. ಅದರಿಂದ ನಡೆದುಬಂದಿರುವ ಮಾರ್ಗವನ್ನೇ ನಾನು ಅನುಸರಿಸುತ್ತಿರುವೆನು.॥36॥

ಮೂಲಮ್ - 37

ತದೇತತ್ತು ಮಯಾ ಕಾರ್ಯಂ ಕ್ರಿಯತೇ ಭುವಿ ನಾನ್ಯಥಾ ।
ಪಿತುರ್ಹಿವಚನಂ ಕುರ್ವನ್ನ ಕಶ್ಚಿನ್ನಾಮ ಹೀಯತೇ ॥

ಅನುವಾದ

ಈ ಭೂಮಂಡಲದಲ್ಲಿ ಎಲ್ಲರಿಗೂ ಮಾಡಲು ಯೋಗ್ಯವಾದುದನ್ನೇ ನಾನೂ ಮಾಡಲು ಹೊರಟಿರುವೆನು. ಇದಕ್ಕೆ ವಿಪರೀತವಾಗಿ ಯಾರೂ ಮಾಡಬಾರದ ಕಾರ್ಯವನ್ನು ನಾನು ಮಾಡುತ್ತಿಲ್ಲ. ಪಿತನ ಆಜ್ಞೆಯನ್ನು ಪಾಲನೆ ಮಾಡುವ ಯಾವುದೇ ಪುರುಷನು ಧರ್ಮದಿಂದ ಭ್ರಷ್ಟನಾಗುವುದಿಲ್ಲ.॥37॥

ಮೂಲಮ್ - 38

ತಾಮೇವಮುಕ್ತ್ವಾ ಜನನೀಂ ಲಕ್ಷ್ಮಣಂ ಪುನರಬ್ರವೀತ್ ।
ವಾಕ್ಯಂ ವಾಕ್ಯವಿದಾಂ ಶ್ರೇಷ್ಠಃ ಶ್ರೇಷ್ಠಃ ಸರ್ವಧನುಷ್ಮತಾಮ್ ॥

ಅನುವಾದ

ತನ್ನ ತಾಯಿಯ ಬಳಿ ಹೀಗೆ ಹೇಳಿ ಮಾತುಬಲ್ಲವರಲ್ಲಿ ಶ್ರೇಷ್ಠನಾದ, ಸಮಸ್ತ ಧನುರ್ಧರರಲ್ಲಿ ಶಿರೋಮಣಿಯಾದ ಶ್ರೀರಾಮನು ಪುನಃ ಲಕ್ಷ್ಮಣನಲ್ಲಿ ಹೇಳಿದನು.॥38॥

ಮೂಲಮ್ - 39

ತವ ಲಕ್ಷ್ಮಣ್ಯ ಜಾನಾಮಿಮಯಿ ಸ್ನೇಹಮನುತ್ತಮಮ್ ।
ವಿಕ್ರಮಂ ಚೈವ ಸತ್ತ್ವಂ ಚ ತೇಜಶ್ಚ ಸುದುರಾಸದಮ್ ॥

ಅನುವಾದ

ಲಕ್ಷ್ಮಣ! ನನ್ನ ಕುರಿತು ನಿನ್ನಲ್ಲಿ ಇರುವ ಉತ್ತಮ ಪ್ರೇಮವನ್ನು ನಾನು ಬಲ್ಲೆನು. ನಿನ್ನ ಪರಾಕ್ರಮ, ಧೈರ್ಯ ಹಾಗೂ ದುರ್ಧರ್ಷ ತೇಜವನ್ನು ನಾನು ತಿಳಿದಿರುವೆನು.॥39॥

ಮೂಲಮ್ - 40

ಮಮ ಮಾತುರ್ಮಹದ್ದುಃಖಮತುಲಂ ಶುಭಲಕ್ಷಣ ।
ಅಭಿಪ್ರಾಯಂ ನ ವಿಜ್ಞಾಯ ಸತ್ಯಸ್ಯ ಚ ಶಮಸ್ಯ ಚ ॥

ಅನುವಾದ

ಶುಭಲಕ್ಷಣ ಲಕ್ಷ್ಮಣಾ! ನನ್ನ ತಾಯಿಗೆ ಆಗುತ್ತಿರುವ ಅನುಪಮ ಹಾಗೂ ಮಹಾದುಃಖವು ಸತ್ಯ ಮತ್ತು ಶಮದ ವಿಷಯದಲ್ಲಿ ನನ್ನ ಅಭಿಪ್ರಾಯವು ತಿಳಿಯದಿರುವುದರಿಂದ ಆಗುತ್ತಿದೆ.॥40॥

ಮೂಲಮ್ - 41

ಧರ್ಮೋ ಹಿ ಪರಮೋ ಲೋಕೇ ಧರ್ಮೇ ಸತ್ಯಂ ಪ್ರತಿಷ್ಠಿತಮ್ ।
ಧರ್ಮಸಂಶ್ರಿತಮಪ್ಯೇತತ್ ಪಿತುರ್ವಚನಮುತ್ತಮಮ್ ॥

ಅನುವಾದ

ಜಗತ್ತಿನಲ್ಲಿ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠವಾಗಿದೆ. ಧರ್ಮದಲ್ಲೇ ಸತ್ಯದ ಪ್ರತಿಷ್ಠೆ ಇದೆ. ತಂದೆಯವರ ಈ ಮಾತೂ ಕೂಡ ಧರ್ಮವನ್ನು ಆಶ್ರಯಿಸಿದ್ದರಿಂದ ಪರಮೋತ್ತಮವಾಗಿದೆ.॥41॥

ಮೂಲಮ್ - 42

ಸಂಶ್ರುತ್ಯ ಚ ಪಿತುರ್ವಾಕ್ಯಂ ಮಾತುರ್ವಾ ಬ್ರಾಹ್ಮಣಸ್ಯ ವಾ ।
ನ ಕರ್ತವ್ಯಂ ವೃಥಾ ವೀರ ಧರ್ಮಮಾಶ್ರಿತ್ಯ ತಿಷ್ಠತಾ ॥

ಅನುವಾದ

ವೀರನೇ! ಧರ್ಮವನ್ನು ಆಶ್ರಯಿಸಿದ ಪುರುಷನು ತಂದೆ, ತಾಯಿ ಅಥವಾ ಬ್ರಾಹ್ಮಣರ ಮಾತನ್ನು ಪಾಲಿಸಲು ಪ್ರತಿಜ್ಞೆ ಮಾಡಿ, ಅದನ್ನು ಸುಳ್ಳಾಗಿಸಬಾರದು.॥42॥

ಮೂಲಮ್ - 43

ಸೋಽಹಂ ನ ಶಕ್ಷ್ಯಾಮಿ ಪಿತುರ್ನಿಯೋಗಮತಿವರ್ತಿತುಮ್ ।
ಪಿತುರ್ಹಿ ವಚನಾದ್ವೀರ ಕೈಕೇಯ್ಯಾಹಂ ಪ್ರಚೋದಿತಃ ॥

ಅನುವಾದ

ವೀರನೇ! ಆದ್ದರಿಂದ ನಾನು ತಂದೆಯ ಮಾತನ್ನು ಉಲ್ಲಂಘಿಸಲಾರೆನು; ಏಕೆಂದರೆ ಪಿತನು ಹೇಳುವುದರಿಂದಲೇ ಕೈಕೆಯಿಯು ನನಗೆ ಕಾಡಿಗೆ ಹೋಗಲು ಆಜ್ಞಾಪಿಸಿದುದು.॥43॥

ಮೂಲಮ್ - 44

ತದೇತಾಂ ವಿಸೃಜಾನಾರ್ಯಾಂ ಕ್ಷತ್ರಧರ್ಮಾಶ್ರಿತಾಂ ಮತಿಮ್ ।
ಧರ್ಮಮಾಶ್ರಯ ಮಾ ತೈಕ್ಷ್ಣ್ಯಂ ಮದ್ಬುದ್ಧಿರನುಗಮ್ಯತಾಮ್ ॥

ಅನುವಾದ

ಅದಕ್ಕಾಗಿ ಕೇವಲ ಕ್ಷಾತ್ರಧರ್ಮದ ಅವಲಂಬನ ಮಾಡುವ ಈ ಕೀಳಾದ ಬುದ್ಧಿಯನ್ನು ಬಿಡು. ಧರ್ಮವನ್ನು ಆಶ್ರಯಿಸು, ಕಠೋರತೆಯನ್ನು ತ್ಯಜಿಸು; ನನ್ನ ವಿಚಾರಕ್ಕೆ ಅನುಸಾರವಾಗಿ ನಡೆ.॥44॥

ಮೂಲಮ್ - 45

ತಮೇವಮುಕ್ತ್ವಾ ಸೌಹಾರ್ದಾದ್ ಭ್ರಾತರಂಲಕ್ಷ್ಮಣಾಗ್ರಜಃ ।
ಉವಾಚ ಭೂಯಃ ಕೌಸಲ್ಯಾಂ ಪ್ರಾಂಜಲಿಃ ಶಿರಸಾ ನತಃ ॥

ಅನುವಾದ

ತಮ್ಮನಾದ ಲಕ್ಷ್ಮಣನಲ್ಲಿ ಸೌಹಾರ್ದಮಯನಾಗಿ ಹೀಗೆ ಹೇಳಿ ಶ್ರೀರಾಮನು ಪುನಃ ಕೌಸಲ್ಯೆಯ ಚರಣಗಳಿಗೆ ವಂದಿಸಿಕೊಂಡು ಕೈಮುಗಿದು ಹೇಳಿದನು.॥45॥

ಮೂಲಮ್ - 46

ಅನುಮನ್ಯಸ್ವ ಮಾಂ ದೇವಿ ಗಮಿಷ್ಯಂತಮಿತೋ ವನಮ್ ।
ಶಾಪಿತಾಸಿ ಮಮ ಪ್ರಾಣೈಃ ಕುರು ಸ್ವಸ್ತ್ಯಯನಾನಿ ಮೇ ॥

ಅನುವಾದ

ದೇವಿ! ನಾನು ಇಲ್ಲಿಂದ ಕಾಡಿಗೆ ಹೋಗುವೆನು. ನೀನು ನನಗೆ ಅಪ್ಪಣೆ ಮಾಡಿ, ಸ್ವಸ್ತಿವಾಚನ ಮಾಡಿಸು. ಈ ಮಾತನ್ನು ನಾನು ಪ್ರಾಣಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ.॥46॥

ಮೂಲಮ್ - 47

ತೀರ್ಣಪ್ರತಿಜ್ಞಶ್ಚ ವನಾತ್ ಪುನರೇಷ್ಯಾಮ್ಯಹಂ ಪುರೀಮ್ ।
ಯಯಾತಿರಿವ ರಾಜರ್ಷಿಃ ಪುರಾ ಹಿತ್ವಾ ಪುನರ್ದಿವಮ್ ॥

ಅನುವಾದ

ಹಿಂದೆ ರಾಜರ್ಷಿ ಯಯಾತಿಯು ಸ್ವರ್ಗಲೋಕವನ್ನು ತ್ಯಜಿಸಿ ಪುನಃ ಭೂತಳಕ್ಕೆ ಇಳಿದು ಬಂದಂತೆಯೇ ನಾನೂ ಕೂಡ ಪ್ರತಿಜ್ಞೆ ಪೂರ್ಣಗೊಳಿಸಿ ಪುನಃ ಕಾಡಿನಿಂದ ಅಯೋಧ್ಯೆಗೆ ಮರಳಿ ಬರುವೆನು.॥47॥

ಮೂಲಮ್ - 48

ಶೋಕಃ ಸಂಧಾರ್ಯತಾಂ ಮಾತರ್ಹೃದಯೇ ಸಾಧು ಮಾ ಶುಚಃ ।
ವನವಾಸಾದಿಹೈಷ್ಯಾಮಿ ಪುನಃ ಕೃತ್ವಾ ಪಿತುರ್ವಚಃ ॥

ಅನುವಾದ

ಅಮ್ಮಾ! ಶೋಕವನ್ನು ತನ್ನ ಹೃದಯದಲ್ಲಿ ಅದುಮಿ ಇಡಿರಿ. ಶೋಕ ಮಾಡಬೇಡಿ. ಪಿತೃವಾಕ್ಯವನ್ನು ಪಾಲಿಸಿ ನಾನು ಪುನಃ ವನವಾಸದಿಂದ ಇಲ್ಲಿಗೆ ಬರುವೆನು.॥48॥

ಮೂಲಮ್ - 49

ತ್ವಯಾ ಮಯಾ ಚ ವೈದೇಹ್ಯಾ ಲಕ್ಷ್ಮಣೇನ ಸುಮಿತ್ರಯಾ ।
ಪಿತುರ್ನಿಯೋಗೇ ಸ್ಥಾತವ್ಯಮೇಷಧರ್ಮಃ ಸನಾತನಃ ॥

ಅನುವಾದ

ನೀನು, ನಾನು, ಸೀತೆ, ಲಕ್ಷ್ಮಣ ಮತ್ತು ಸುಮಿತ್ರಾದೇವಿ ಹೀಗೆ ಎಲ್ಲರೂ ತಂದೆಯ ಆಜ್ಞೆಯಲ್ಲೇ ಇರಬೇಕು. ಇದೇ ಸನಾತನ ಧರ್ಮವಾಗಿದೆ.॥49॥

ಮೂಲಮ್ - 50

ಅಂಬ ಸಂಹೃತ್ಯ ಸಂಭಾರಾನ್ ದುಃಖಂ ಹೃದಿ ನಿಗೃಹ್ಯ ಚ ।
ವನವಾಸಕೃತಾ ಬುದ್ಧಿರ್ಮಮಮ ಧರ್ಮ್ಯಾನುವರ್ತ್ಯತಾಮ್ ॥

ಅನುವಾದ

ಅಮ್ಮ! ಈ ಅಭಿಷೇಕದ ಸಾಮಗ್ರಿಗಳನ್ನು ಹಾಗೆಯೇ ತೆಗೆದಿಡು. ಮನಸ್ಸಿನ ದುಃಖವನ್ನು ಮನಸ್ಸಿನಲ್ಲೇ ಅದುಮಿಕೋ ಹಾಗೂ ವನವಾಸದ ಸಂಬಂಧವಾದ ನನ್ನ ಧರ್ಮಾನುಕೂಲ ವಿಚಾರವನ್ನು ಅನುಸರಿಸು. ನನಗೆ ಹೋಗಲು ಆಜ್ಞೆ ಕೊಡು.॥50॥

ಮೂಲಮ್ - 51

ಏತದ್ವಚಸ್ತಸ್ಯ ನಿಶಮ್ಯ ಮಾತಾ
ಸುಧರ್ಮ್ಯಮವ್ಯಗ್ರಮವಿಕ್ಲವಂ ಚ ।
ಮೃತೇವ ಸಂಜ್ಞಾಂ ಪ್ರತಿಲಭ್ಯ ದೇವೀ
ಸಮೀಕ್ಷ್ಯ ರಾಮಂ ಪುನರಿತ್ಯುವಾಚ ॥

ಅನುವಾದ

ಶ್ರೀರಾಮಚಂದ್ರನ ಈ ಧರ್ಮಾನುಕೂಲ ಹಾಗೂ ವ್ಯಗ್ರತೆ ಮತ್ತು ಆಕುಲತೆ ರಹಿತನಾದ ಮಾತನ್ನು ಕೇಳಿ ಸತ್ತಿರುವ ಮನುಷ್ಯನು ಪ್ರಾಣಸಂಚಾರವಾಗಿ ಎದ್ದು ಕುಳಿತಿರುವಂತೆ, ದೇವಿ ಕೌಸಲ್ಯೆಯು ಮೂರ್ಛೆತಳೆದು ಎಚ್ಚರಗೊಂಡು ತನ್ನ ಪುತ್ರ ಶ್ರೀರಾಮನ ಕಡೆಗೆ ನೋಡಿ ಈ ಪ್ರಕಾರ ನುಡಿದಳು.॥51॥

ಮೂಲಮ್ - 52

ಯಥೈವ ತೇ ಪುತ್ರ ಪಿತಾ ತಥಾಹಂ
ಗುರುಃ ಸ್ವಧರ್ಮೇಣ ಸುಹೃತ್ತಯಾ ಚ ।
ನ ತ್ವಾನುಜಾನಾಮಿ ನ ಮಾಂ ವಿಹಾಯ
ಸುದುಃಖಿತಾಮರ್ಹಸಿ ಪುತ್ರ ಗಂತುಮ್ ॥

ಅನುವಾದ

ಮಗು! ಧರ್ಮ ಮತ್ತು ಸೌಹಾರ್ದದ ದೃಷ್ಟಿಯಿಂದ ತಂದೆಯು ನಿನಗೆ ಆದರಣೀಯನಾಗಿರುವಂತೆಯೇ, ನಾನೂ ಕೂಡ ಗೌರವಾರ್ಹಳಾಗಿದ್ದೇನೆ. ನಾನು ನಿನಗೆ ಕಾಡಿಗೆ ಹೋಗಲು ಆಜ್ಞೆ ಕೊಡುವುದಿಲ್ಲ. ವತ್ಸ! ದುಃಖಿತೆಯಾದ ನನ್ನನ್ನು ಬಿಟ್ಟು ಎಲ್ಲಿಗೂ ಹೋಗಬಾರದು.॥52॥

ಮೂಲಮ್ - 53

ಕಿಂ ಜೀವೀತೇನೇಹ ವಿನಾ ತ್ವಯಾ ಮೇ
ಲೋಕೇನ ವಾಕಿಂ ಸ್ವಧಯಾಮೃತೇನ ।
ಶ್ರೇಯೋ ಮುಹೂರ್ತಂ ತವ ಸಂನಿಧಾನಂ
ಮಮೇಹ ಕೃತ್ಸ್ನಾದಪಿ ಜೀವಲೋಕಾತ್ ॥

ಅನುವಾದ

ನೀನಿಲ್ಲದೆ ನಾನು ಇಲ್ಲಿ ಬದುಕುವುದರಲ್ಲಿ ಏನು ಲಾಭವಿದೆ? ಈ ಸ್ವಜನರಿಂದ, ದೇವಪಿತೃಗಳ ಪೂಜೆಯಿಂದ, ಹೆಚ್ಚೇನ ಅಮೃತದಿಂದಲೂ ನನಗೇನಾಗಬೇಕು? ನೀನು ಮುಹೂರ್ತ ಕಾಲ ನನ್ನ ಬಳಿ ಇದ್ದರೇ ಅದೇ ನನಗೆ ಸಮಸ್ತ ಜಗತ್ತಿನ ರಾಜ್ಯಕ್ಕಿಂತಲೂ ಮಿಗಿಲಾದ ಸುಖ ಕೊಡುವುದಾಗಿದೆ.॥53॥

ಮೂಲಮ್ - 54

ನರೈರಿವೋಲ್ಕಾಭಿರಪೋಹ್ಯಮಾನೋ
ಮಹಾಗಜೋ ಧ್ವಾಂತಮಭಿಪ್ರವಿಷ್ಟಃ ।
ಭೂಯಃ ಪ್ರಜಜ್ವಾಲ ವಿಲಾಪಮೇವಂ
ನಿಶಮ್ಯ ರಾಮಃ ಕರುಣಂ ಜನನ್ಯಾಃ ॥

ಅನುವಾದ

ಮದಿಸಿದ ಕಾಡಾನೆಯನ್ನು ಗಜಗ್ರಾಹಿಗಳು ಕೊಳ್ಳಿಗಳಿಂದ ಮುಂದೆ ಹೋಗದಂತೆ ತಡೆಯುತ್ತಿದ್ದರೂ ಕಾಡಾನೆಯು ಮುನ್ನುಗ್ಗುವಂತೆ, ಶ್ರೀರಾಮನು ಕಾಡಿಗೆ ಹೋಗುವುದಕ್ಕೆ ಪ್ರತಿಬಂಧರೂಪವಾದ ತಾಯಿಯ ಕರುಣಾಜನಕವಾದ ಮಾತನ್ನು ಕೇಳಿಯೂ ತನ್ನ ನಿರ್ಧಾರವನ್ನು ಬದಲಿಸದೆ ಕಾಡಿಗೆ ಹೋಗುವುದನ್ನು ದೃಢಪಡಿಸಿದ ಮುಖಭಾವದಿಂದ ವಿರಾಜಿಸಿದನು.॥54॥

ಮೂಲಮ್ - 55

ಸ ಮಾತರಂ ಚೈವ ವಿಸಂಜ್ಞಕಲ್ಪಾ
ಮಾರ್ತಂ ಚ ಸೌಮಿತ್ರಿಮಭಿಪ್ರತಪ್ತಮ್ ।
ಧರ್ಮೇ ಸ್ಥಿತೋ ಧರ್ಮ್ಯಮುವಾಚ ವಾಕ್ಯಂ
ಯಥಾ ಸ ಏವಾರ್ಹತಿ ತತ್ರ ವಕ್ತುಮ್ ॥

ಅನುವಾದ

ಶ್ರೀರಾಮನು ಧರ್ಮದಲ್ಲಿ ದೃಢವಾಗಿ ಸ್ಥಿತನಾಗಿ ಅಚೇತಳಂತೆ ಇದ್ದ ತಾಯಿಯ ಬಳಿ ಮತ್ತು ಆರ್ತನೂ, ಸಂತಪ್ತನೂ ಆದ ಸುಮಿತ್ರಾಕುಮಾರ ಲಕ್ಷ್ಮಣನಲ್ಲಿ ಇಂತಹ ಸಂದರ್ಭದಲ್ಲಿ ಅವನು ಮಾತ್ರ ಹೇಳಬಹುದಾದ ಧರ್ಮಾನುಕೂಲ ಮಾತನ್ನು ಹೇಳಿದನು.॥55॥

ಮೂಲಮ್ - 56

ಅಹಂ ಹಿ ತೇ ಲಕ್ಷ್ಮಣ ನಿತ್ಯಮೇವ
ಜಾನಾಮಿ ಭಕ್ತಿಂ ಚ ಪರಾಕ್ರಮಂ ಚ ।
ಮಮ ತ್ವಭಿಪ್ರಾಯಮಸಂನಿರೀಕ್ಷ್ಯ
ಮಾತ್ರಾ ಸಹಾಭ್ಯರ್ದಸಿ ಮಾ ಸುದುಃಖಮ್ ॥

ಅನುವಾದ

ಲಕ್ಷ್ಮಣಾ! ನೀನು ಸದಾ ನನ್ನಲ್ಲೇ ಭಕ್ತಿಯನ್ನಿಡುತ್ತಿರುವೆ ಎಂದು ನಾನು ತಿಳಿದಿದ್ದೇನೆ. ನಿನ್ನ ಪರಾಕ್ರಮವು ಎಷ್ಟು ಮಹತ್ತರವಾಗಿದೆ ಎಂಬುದು ನಾನು ಬಲ್ಲೆನು. ಆದರೂ ನೀನು ನನ್ನ ಅಭಿಪ್ರಾಯವನ್ನು ಗಮನಿಸದೆ ಮಾತೆಯ ಜೊತೆಗೆ ನನಗೂ ಪೀಡೆಯನ್ನು ಕೊಡುತ್ತಿರುವೆ. ಈ ರೀತಿ ನನ್ನನ್ನು ಅತ್ಯಂತ ದುಃಖದಲ್ಲಿ ಕೆಡಹಬೇಡ.॥56॥

ಮೂಲಮ್ - 57

ಧರ್ಮಾರ್ಥಕಾಮಾಃ ಖಲು ಜೀವ ಲೋಕೇ
ಸಮೀಕ್ಷಿತಾ ಧರ್ಮಲೋದಯೇಷು ।
ಯೇ ತತ್ರ ಸರ್ವೇ ಸ್ಯುರಸಂಶಯಂ ಮೇ
ಭಾರ್ಯೇವ ವಶ್ಯಾಭಿಮತಾ ಸಪುತ್ರಾ ॥

ಅನುವಾದ

ಈ ಜೀವಜಗತ್ತಿನಲ್ಲಿ ಪೂರ್ವಕೃತ ಧರ್ಮದ ಪ್ರಾಪ್ತಿಯ ಸಂದರ್ಭದಲ್ಲಿ ನೋಡಲಾಗುವ ಧರ್ಮ, ಅರ್ಥ ಮತ್ತು ಕಾಮ ಈ ಮೂರೂ ಧರ್ಮವಿರುವಲ್ಲಿ ಅವಶ್ಯವಾಗಿ ಪ್ರಾಪ್ತವಾಗುತ್ತವೆ. ಇದರಲ್ಲಿ ಸಂಶಯವೇ ಇಲ್ಲ; ಭಾರ್ಯೆಯು ಧರ್ಮ, ಅರ್ಥ ಮತ್ತು ಕಾಮ ಈ ಮೂರರ ಸಾಧನವಾಗುತ್ತಾಳೆ. ಅವಳು ಪತಿಯ ವಶದಲ್ಲಿದ್ದು, ಅನುಕೂಲಳಾಗಿ ಅತಿಥಿಸತ್ಕಾರ ಮೊದಲಾದ ಧರ್ಮಪಾಲನೆಯಲ್ಲಿ ಸಹಾಯಕವಾಗುತ್ತಾಳೆ. ಪ್ರೇಯಸಿಯಾಗಿ ಕಾಮಕ್ಕೆ ಸಾಧನಳಾಗುತ್ತಾಳೆ. ಪುತ್ರವತೀಯಾಗಿ ಉತ್ತಮ ಲೋಕಪ್ರಾಪ್ತಿರೂಪ ಅರ್ಥದ ಸಾಧನಾಭೂತಳಾಗುವಳು, ಇದು ಧರ್ಮವಿರುವಲ್ಲೇ ದೊರೆಯುತ್ತವೆ.॥57॥

ಮೂಲಮ್ - 58

ಯಸ್ಮಿಂಸ್ತು ಸರ್ವೇ ಸ್ಯುರಸಂನಿವಿಷ್ಟಾ
ಧರ್ಮೋ ಯತಃ ಸ್ಯಾತ್ತದುಪಕ್ರಮೇತ ।
ದ್ವೇಷ್ಯೋ ಭವತ್ಯರ್ಥಪರೋ ಹಿ ಲೋಕೇ
ಕಾಮಾತ್ಮತಾ ಖಲ್ವಪಿ ನ ಪ್ರಶಸ್ತಾ ॥

ಅನುವಾದ

ಯಾವ ಕರ್ಮದಲ್ಲಿ ಧರ್ಮಾದಿ ಎಲ್ಲ ಪುರುಷಾರ್ಥಗಳ ಸಮಾವೇಶವಿಲ್ಲವೋ ಅದನ್ನು ಮಾಡಬಾರದು. ಯಾವುದರಿಂದ ಧರ್ಮದ ಸಿದ್ಧಿಯಾಗುವುದೋ ಅದನ್ನೇ ಆಚರಿಸಬೇಕು. ಕೇವಲ ಅರ್ಥಪರಾಯಣನಾದವನು ಲೋಕದಲ್ಲಿ ಎಲ್ಲರ ದ್ವೇಷಕ್ಕೆ ಪಾತ್ರನಾಗುತ್ತಾನೆ. ಧರ್ಮ ವಿರುದ್ಧವಾದ ಕಾಮದಲ್ಲಿ ಅತ್ಯಂತ ಆಸಕ್ತನಾಗುವನು ಅತಿನಿಂದ್ಯವಾಗುತ್ತಾನೆ.॥58॥

ಮೂಲಮ್ - 59

ಗುರುಶ್ಚ ರಾಜಾ ಚ ಪಿತಾ ಚ ವೃದ್ಧ
ಕ್ರೋಧಾತ್ ಪ್ರಹರ್ಷಾದಥವಾಪಿ ಕಾಮಾತ್ ।
ಯದ್ವ್ಯಾದಿಶೇತ್ಕಾರ್ಯಮವೇಕ್ಷ್ಯ ಧರ್ಮಂ
ಕಸ್ತಂ ನ ಕುರ್ಯಾದನೃಶಂಸವೃತ್ತಿಃ ॥

ಅನುವಾದ

ಮಹಾರಾಜರು ನಮಗೆ ಗುರು, ರಾಜ ಮತ್ತು ತಂದೆಯಾಗಿರುವಂತೆ ಹಿರಿಯ ಮಾನನೀಯರಾಗಿದ್ದಾರೆ. ಅವರು ಕ್ರೋಧದಿಂದ, ಹರ್ಷದಿಂದ ಅಥವಾ ಕಾಮದಿಂದ ಪ್ರೇರಿತನಾಗಿಯಾದರೂ ಯಾವುದೇ ಕಾರ್ಯಕ್ಕಾಗಿ ಆಜ್ಞೆ ಕೊಟ್ಟರೆ, ನಾವು ಅದನ್ನು ಧರ್ಮವೆಂದು ತಿಳಿದು ಪಾಲಿಸಬೇಕು. ಆಚರಣೆಯಲ್ಲಿ ಕ್ರೂರತೆ ಇಲ್ಲದ ಪುರುಷನು ತಂದೆಯ ಆಜ್ಞೆಯ ಪಾಲನರೂಪೀ ಧರ್ಮವನ್ನು ಏಕೆ ಆಚರಿಸಬಾರದು.॥59॥

ಮೂಲಮ್ - 60

ನ ತೇನ ಶಕ್ನೋಮಿ ಪಿತುಃ ಪ್ರತಿಜ್ಞಾ-
ಮಿಮಾಂ ನ ಕರ್ತುಂ ಸಕಲಾಂ ಯಥಾವತ್ ।
ಸ ಹ್ಯಾವಯೋಸ್ತಾತ ಗುರುರ್ನಿಯೋಗೇ
ದೇವ್ಯಾಶ್ಚ ಭರ್ತಾ ಸ ಗತಿಶ್ಚ ಧರ್ಮಃ ॥

ಅನುವಾದ

ಅದಕ್ಕಾಗಿ ನಾನು ಪಿತನ ಈ ಪ್ರತಿಜ್ಞೆಯನ್ನು ಯಥಾವತ್ ಪಾಲನೆ ಮಾಡುವುದರಲ್ಲಿ ಹಿಂಜರಿಯಲಾರೆ. ಅಯ್ಯಾ ಲಕ್ಷ್ಮಣ! ಅವರು ನಮ್ಮಿಬ್ಬರಿಗೂ ಆಜ್ಞೆ ಮಾಡಲು ಸಮರ್ಥ ಗುರುವಾಗಿದ್ದಾರೆ. ತಾಯಿಗಾದರೋ ಅವರೇ ಪತಿ, ಗತಿ ಮತ್ತು ಧರ್ಮ ಆಗಿರುವರು.॥60॥

ಮೂಲಮ್ - 61

ತಸ್ಮಿನ್ ಪುನರ್ಜೀವತಿ ಧರ್ಮರಾಜೇ
ವಿಶೇಷತಃ ಸ್ವೇ ಪಥಿ ವರ್ತಮಾನೇ ।
ದೇವೀ ಮಯಾ ಸಾರ್ಧಮಿತೋಽಭಿಗಚ್ಛೇತ
ಕಥಂಸ್ವಿದನ್ಯಾ ವಿಧವೇವ ನಾರೀ ॥

ಅನುವಾದ

ಧರ್ಮದ ಪ್ರವರ್ತಕ ಮಹಾರಾಜರು ಇನ್ನೂ ಜೀವಿಸಿರುವರು ಹಾಗೂ ವಿಶೇಷತಃ ತನ್ನ ಧರ್ಮದ ಮಾರ್ಗದಲ್ಲಿ ಸ್ಥಿತರಾಗಿದ್ದಾರೆ; ಇಂತಹ ಸ್ಥಿತಿಯಲ್ಲಿ - ಅಮ್ಮಾ! ಬೇರೆ ಯಾವುದೋ ವಿಧವಾ ಸ್ತ್ರೀ ಮಗನೊಂದಿಗೆ ಇರುವಂತೆ ನನ್ನ ಜೊತೆಗೆ ಕಾಡಿಗೆ ಹೇಗೆ ಬರಬಲ್ಲಳು.॥61॥

ಮೂಲಮ್ - 62

ಸಾ ಮಾನುಮನ್ಯಸ್ವ ವನಂ ವ್ರಜಂತಂ
ಕುರುಷ್ವನಃ ಸ್ವಸ್ತ್ಯ ಯನಾನಿ ದೇವಿ ।
ಯಥಾ ಸಮಾಪ್ತೇ ಪುನರಾವ್ರಜೇಯಂ
ಯಥಾ ಹಿ ಸತ್ಯೇನ ಪುನರ್ಯಯಾತಿಃ ॥

ಅನುವಾದ

ಆದ್ದರಿಂದ ದೇವಿ! ನನಗೆ ಕಾಡಿಗೆ ಹೋಗಲು ನೀನು ಆಜ್ಞೆಯನ್ನು ಕೊಡು ಹಾಗೂ ನಮ್ಮ ಶ್ರೇಯಸ್ಸಿಗಾಗಿ ಸ್ವಸ್ತಿವಾಚನ ಮಾಡಿಸು, ಅದರಿಂದ ವನವಾಸದ ಅವಧಿ ಮುಗಿದಾಗ ರಾಜಾ ಯಯಾತಿಯು ಸತ್ಯದ ಪ್ರಭಾವದಿಂದ ಪುನಃ ಸ್ವರ್ಗದಿಂದ ಬಂದಂತೆ ನಾನು ಪುನಃ ನಿನ್ನ ಸೇವೆಗಾಗಿ ಹಾಜರಾಗುವೆನು.॥62॥

ಮೂಲಮ್ - 63

ಯಶೋ ಹ್ಯಹಂ ಕೇವಲರಾಜ್ಯಕಾರಣಾ-
ನ್ನ ಪೃಷ್ಟತಃ ಕರ್ತುಮಲಂ ಮಹೋದಯಮ್ ।
ಅದೀರ್ಘಕಾಲೇನ ತು ದೇವಿ ಜೀವಿತೇ
ವೃಣೇಽವರಾಮದ್ಯ ಮಹೀಮಧರ್ಮತಃ ॥

ಅನುವಾದ

ಕೇವಲ ಧರ್ಮಹೀನ ರಾಜ್ಯಕ್ಕಾಗಿ ನಾನು ಮಹಾ ಫಲದಾಯಕ ಧರ್ಮಪಾಲನರೂಪೀ ಸುಯಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅಮ್ಮಾ! ಜೀವನವು ಹೆಚ್ಚುಕಾಲ ಇರುವಂತಹುದಲ್ಲ; ಅದಕ್ಕಾಗಿ ನಾನು ಇಂದು ಅಧರ್ಮಪೂರ್ವಕ ಈ ತುಚ್ಛ ಪೃಥಿಯ ರಾಜ್ಯವನ್ನು ಪಡೆಯಲು ಬಯಸುವುದಿಲ್ಲ.॥63॥

ಮೂಲಮ್ - 64

ಪ್ರಸಾದಯನ್ನರವೃಷಭಃ ಸ ಮಾತರಂ
ಪರಾಕ್ರಮಾಜ್ಜಿಗಮಿಷುರೇವ ದಂಡಕಾನ್ ।
ಅಥಾನುಜಂ ಭೃಶಮನುಶಾಸ್ಯ ದರ್ಶನಂ
ಚಕಾರ ತಾಂ ಹೃದಿ ಜನನೀಂ ಪ್ರದಕ್ಷಿಣಮ್ ॥

ಅನುವಾದ

ಈ ಪ್ರಕಾರ ನರಶ್ರೇಷ್ಠ ಶ್ರೀರಾಮಚಂದ್ರನು ಧೈರ್ಯದಿಂದ ದಂಡಕಾರಣ್ಯಕ್ಕೆ ಹೋಗುವ ಇಚ್ಛೆಯಿಂದ ತಾಯಿಯನ್ನು ಸಂತೋಷಗೊಳಿಸಲು ಪ್ರಯತ್ನಿಸಿದನು ಹಾಗೂ ತಮ್ಮನಾದ ಲಕ್ಷ್ಮಣನನ್ನು ತನ್ನ ವಿಚಾರಕ್ಕನುಸಾರ ಚೆನ್ನಾಗಿ ಧರ್ಮದ ರಹಸ್ಯವನ್ನು ತಿಳಿಸಿ, ತಾಯಿಯನ್ನು ಮನಸ್ಸಿನಲ್ಲೇ ಪ್ರದಕ್ಷಿಣೆ ಮಾಡಿದನು.॥64॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು.॥21॥