०७६ जामदग्न्यपराजयः

वाचनम्
ಭಾಗಸೂಚನಾ

ಶ್ರೀರಾಮನು ವೈಷ್ಣವ ಧನುಸ್ಸಿಗೆ ಹೆದೆಯೇರಿಸಿ ಬಾಣವನ್ನು ಅನುಸಂಧಾನ ಮಾಡಿ ಪರಶುರಾಮನ ತಪಃಫಲವನ್ನು ಲಕ್ಷ್ಯವಾಗಿಸಿ ಪುಣ್ಯಲೋಕಗಳನ್ನು ನಾಶಗೊಳಿಸಿದುದು, ಪರಶುರಾಮನು ಮಹೇಂದ್ರ ಪರ್ವತಕ್ಕೆ ಹಿಂದಿರುಗಿದುದು

ಮೂಲಮ್ - 1

ಶ್ರುತ್ವಾ ತು ಜಾಮದಗ್ನ್ಯಸ್ಯ ವಾಕ್ಯಂ ದಾಶರಥಿಸ್ತದಾ ।
ಗೌರವಾದ್ಯಂತ್ರಿತಕಥಃ ಪಿತೂ ರಾಮಮಥಾಬ್ರವೀತ್ ॥

ಅನುವಾದ

ದಶರಥನಂದನ ಶ್ರೀರಾಮಚಂದ್ರನು ತಂದೆಯ ಮೇಲಿನ ಗೌರವದಿಂದ ಏನನ್ನು ಮಾತನಾಡುತ್ತಿರಲಿಲ್ಲ, ಆದರೆ ಜಮದಗ್ನಿ ಕುಮಾರ ಪರಶುರಾಮನ ಮಾತನ್ನು ಕೇಳಿ ಇನ್ನೂ ಮೌನವಾಗಿರದೆ ಅವನಲ್ಲಿ ಇಂತೆಂದನು.॥1॥

ಮೂಲಮ್ - 2

ಕೃತವಾನಸಿ ಯತ್ಕರ್ಮ ಶ್ರುತವಾನಸ್ಮಿ ಭಾರ್ಗವ ।
ಅನುರುಧ್ಯಾಮಹೇ ಬ್ರಹ್ಮನ್ ಪಿತುರಾನೃಣ್ಯಮಾಸ್ಥಿತಃ ॥

ಅನುವಾದ

ಭೃಗುನಂದನರೇ! ಬ್ರಾಹ್ಮಣೋತ್ತಮ! ಪಿತೃವಿನ ವಧೆಯಿಂದ ಉಂಟಾದ ಕೋಪದ ಪ್ರಶಮನಕ್ಕಾಗಿ ನೀವು ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ನಾಶಮಾಡಿದ ಕಥೆ ನಾನೂ ಕೇಳಿದ್ದೇನೆ. ವೈರಶುದ್ಧಿಗೆ ಅಥವಾ ಕೋಪಶಾಂತಿಗೆ ಶೂರರು ಮಾಡಬೇಕಾದ ಕಾರ್ಯ ಇದೇ ಆಗಿದೆ ಎಂದು ನಾನು ಅನುಮೋದಿಸುತ್ತೇನೆ.॥2॥

ಮೂಲಮ್ - 3

ವೀರ್ಯಹೀನಮಿವಾಶಕ್ತಂ ಕ್ಷತ್ರಧರ್ಮೇಣ ಭಾರ್ಗವ ।
ಅವಜಾನಾಸಿ ಮೇ ತೇಜಃ ಪಶ್ಯ ಮೇಽದ್ಯ ಪರಾಕ್ರಮಮ್ ॥

ಅನುವಾದ

ಭಾರ್ಗವ! ನಾನು ಕ್ಷತ್ರಿಯ ಧರ್ಮದಿಂದ ಕೂಡಿರುವೆನು (ಅದಕ್ಕಾಗಿ ನೀವು ಪೂಜ್ಯ ಬ್ರಾಹ್ಮಣರೆಂದು ತಿಳಿದು ನಾನು ಏನನ್ನೂ ಮಾತನಾಡಲಿಲ್ಲಾ) ಹೀಗಿದ್ದರೂ ನೀವು ನನ್ನನ್ನು ಪರಾಕ್ರಮಹೀನ, ಅಸಮರ್ಥನೆಂದು ತಿಳಿದು ತಿರಸ್ಕರಿಸುತ್ತಿದ್ದೀರಿ. ಸರಿ, ಈಗ ನನ್ನ ಶೌರ್ಯವನ್ನು ನೋಡಿರಿ.॥3॥

ಮೂಲಮ್ - 4

ಇತ್ಯುಕ್ತ್ವಾರಾಘವಃ ಕ್ರುದ್ಧೋ ಭಾರ್ಗವಸ್ಯ ವರಾಯುಧಮ್ ।
ಶರಂ ಚ ಪ್ರತಿಜಗ್ರಾಹ ಹಸ್ತಾಲ್ಲಘುಪರಾಕ್ರಮಃ ॥

ಅನುವಾದ

ಹೀಗೆ ಹೇಳಿ ಶ್ರೀಪರಾಕ್ರಮಿಯಾದ ಶ್ರೀರಾಮನು ಕ್ರುದ್ಧನಾಗಿ ಪರಶುರಾಮರ ಕೈಯಿಂದ ಆ ಉತ್ತಮ ಧನುಸ್ಸು ಮತ್ತು ಬಾಣಗಳನ್ನು ಕಿತ್ತುಕೊಂಡನು. (ಜೊತೆಗೆ ಅವರಿಂದ ತನ್ನ ವೈಷ್ಣವೀ ಶಕ್ತಿಯನ್ನು ಹಿಂದಕ್ಕೆ ಪಡೆದನು..॥4॥

ಮೂಲಮ್ - 5

ಆರೋಪ್ಯ ಸ ಧನೂ ರಾಮಃ ಶರಂ ಸಜ್ಯಂ ಚಕಾರ ಹ ।
ಜಾಮದಗ್ನ್ಯಂ ತತೋ ರಾಮಂ ರಾಮಃಕ್ರುದ್ಧೋಬ್ರವೀದಿದಮ್ ॥

ಅನುವಾದ

ಆ ಧನುಸ್ಸನ್ನು ಕ್ಷಣಮಾತ್ರದಲ್ಲಿ ಬಗ್ಗಿಸಿ, ನಾಣನ್ನು ಬಿಗಿದು ಬಾಣವನ್ನು ಹೂಡಿದನು. ಮತ್ತೆ ಕುಪಿತನಾಗಿ ಅವನು ಜಮದಗ್ನಿ ಕುಮಾರ ಪರಶುರಾಮರಲ್ಲಿ ಹೀಗೆ ಹೇಳಿದನು.॥5॥

ಮೂಲಮ್ - 6

ಬ್ರಾಹ್ಮಣೋಽಸೀತಿ ಪೂಜ್ಯೋ ಮೇ ವಿಶ್ವಾಮಿತ್ರಕೃತೇನ ಚ ।
ತಸ್ಮಾಚ್ಛಕ್ತೋ ನ ತೇ ರಾಮ ಮೋಕ್ತುಂ ಪ್ರಾಣಹರಂ ಶರಮ್ ॥

ಅನುವಾದ

ಭೃಗುನಂದನ ರಾಮಾ! ತಾವು ಬ್ರಾಹ್ಮಣರಾದ್ದರಿಂದ ನನಗೆ ಪೂಜ್ಯರಾಗಿರುವಿರಿ ಹಾಗೂ ವಿಶ್ವಾಮಿತ್ರರೊಂದಿಗೂ ನಿಮಗೆ ಸಂಬಂಧವಿದೆ. ಇವೆಲ್ಲ ಕಾರಣಗಳಿಂದ ನಾನು ಈ ಪ್ರಾಣ ಸಂಹಾರಕ ಬಾಣವನ್ನು ತಮ್ಮ ಶರೀರದ ಮೇಲೆ ಪ್ರಯೋಗಿಸುವುದಿಲ್ಲ.॥6॥

ಮೂಲಮ್ - 7

ಇಮಾಂ ವಾ ತ್ವದ್ಗತಿಂ ರಾಮ ತಪೋಬಲಸಮಾರ್ಜಿತಾನ್ ।
ಲೋಕಾನಪ್ರತಿಮಾನ್ ವಾಪಿ ಹನಿಷ್ಯಾಮೀತಿ ಮೇ ಮತಿಃ ॥

ಮೂಲಮ್ - 8

ನ ಹ್ಯಯಂ ವೈಷ್ಣವೋ ದಿವ್ಯಃ ಶರಃ ಪರಪುರಂಜಯಃ ।
ಮೋಘಃ ಪತತಿ ವೀರ್ಯೇಣ ಬಲದರ್ಪವಿನಾಶನಃ ॥

ಅನುವಾದ

ರಾಮಾ! ನಿಮಗೆ ಎಲ್ಲೆಡೆ ಶೀಘ್ರವಾಗಿ ಸಂಚರಿಸುವ ಶಕ್ತಿ ದೊರಕಿದೆ ಅದನ್ನು ಅಥವಾ ತಾವು ತಪೋಬಲದಿಂದ ಗಳಿಸಿದ ಪುಣ್ಯಲೋಕಗಳನ್ನು ನಾಶಮಾಡಲೋ ಎಂದು ಯೋಚಿಸುತ್ತಿದ್ದೇನೆ; ಏಕೆಂದರೆ ತನ್ನ ಪರಾಕ್ರಮದಿಂದ ವಿಪಕ್ಷ ಬಲದ ಅಹಂಕಾರವನ್ನು ನುಚ್ಚುನೂರಾಗಿಸುವ ಈ ದಿವ್ಯ ವೈಷ್ಣವ ಬಾಣವು ಶತ್ರುಗಳ ನಗರದ ಮೇಲೆ ವಿಜಯ ಪಡೆಯುವುದಾಗಿದೆ. ಇದು ಎಂದೂ ನಿಷ್ಪಲವಾಗುವುದಿಲ್ಲ.॥7-8॥

ಮೂಲಮ್ - 9

ವರಾಯುಧಧರಂ ರಾಮಂ ದ್ರಷ್ಟುಂ ಸರ್ಷಿಗಣಾಃ ಸುರಾಃ ।
ಪಿತಾಮಹಂ ಪುರಸ್ಕೃತ್ಯ ಸಮೇತಾಸ್ತತ್ರ ಸರ್ವಶಃ ॥

ಅನುವಾದ

ಆಗ ಆ ಉತ್ತಮ ಧನುಸ್ಸು ಬಾಣವನ್ನು ಧರಿಸಿ ನಿಂತಿರುವ ಶ್ರೀರಾಮಚಂದ್ರನನ್ನು ನೋಡಲು ಸಮಸ್ತ ದೇವತೆಗಳು ಮತ್ತು ಋಷಿಗಳು ಬ್ರಹ್ಮದೇವರನ್ನು ಮುಂದೆ ಮಾಡಿ ಅಲ್ಲಿ ಒಟ್ಟಾಗಿ ಬಂದರು.॥9॥

ಮೂಲಮ್ - 10

ಗಂಧರ್ವಾಪ್ಸರಸಶ್ಚೈವ ಸಿದ್ಧಚಾರಣಕಿನ್ನರಾಃ ।
ಯಕ್ಷರಾಕ್ಷಸನಾಗಾಶ್ಚ ತದ್ ದ್ರಷ್ಟುಂ ಮಹದದ್ಭುತಮ್ ॥

ಅನುವಾದ

ಗಂಧರ್ವರು, ಅಪ್ಸರೆಯರು, ಸಿದ್ಧರು, ಚಾರಣರು, ಕಿನ್ನರರು, ಯಕ್ಷ-ರಾಕ್ಷಸರು, ನಾಗಗಳು ಇವರೆಲ್ಲರೂ ಕೂಡ ಅತ್ಯಂತ ಅದ್ಭುತ ದೃಶ್ಯವನ್ನು ನೋಡಲು ಅಲ್ಲಿ ನೆರೆದರು.॥10॥

ಮೂಲಮ್ - 11

ಜಡೀಕೃತೇ ತದಾ ಲೋಕೇರಾಮೇ ವರಧನುರ್ಧರೇ ।
ನಿರ್ವೀರ್ಯೋ ಜಾಮದಗ್ನ್ಯೋಽಸೌ ರಾಮೋರಾಮಮುದೈಕ್ಷತ ॥

ಅನುವಾದ

ಶ್ರೀರಾಮಚಂದ್ರನು ಆ ಶ್ರೇಷ್ಠ ಧನುಸ್ಸನ್ನು ಕೈಗೆ ಎತ್ತಿಕೊಂಡಾಗ ಎಲ್ಲ ಜನರು ಆಶ್ಚರ್ಯದಿಂದ ಜಡದಂತೇ ಆದರು. (ಪರಶುರಾಮರ ವೈಷ್ಣವ ತೇಜವು ಹೊರಟು ಶ್ರೀರಾಮಚಂದ್ರನಲ್ಲಿ ಸೇರಿಹೋದದ್ದರಿಂದ) ವೀರ್ಯಹೀನರಾದ ಜಮದಗ್ನಿನಂದನ ಪರಶುರಾಮರು ದಶರಥನಂದನ ಶ್ರೀರಾಮನ ಕಡೆ ನೋಡಿದರು.॥11॥

ಮೂಲಮ್ - 12

ತೇಜೋಭಿರ್ಗತವೀರ್ಯತ್ವಾಜ್ಜಾಮದಗ್ನ್ಯೋ ಜಡೀಕೃತಃ ।
ರಾಮಂ ಕಮಲಪತ್ರಾಕ್ಷಂ ಮಂದಂ ಮಂದಮುವಾಚ ಹ ॥

ಅನುವಾದ

ತೇಜ ಹೊರಟು ಹೋಗಿ ವೀರ್ಯಹೀನರಾದ ಕಾರಣ ಜಡದಂತೆ ಆದ ಪರಶುರಾಮರು ಶ್ರೀರಾಮನಲ್ಲಿ ನಿಧಾನವಾಗಿ ಹೀಗೆ ನುಡಿದರು-॥12॥

ಮೂಲಮ್ - 13

ಕಾಶ್ಯಪಾಯ ಮಯಾ ದತ್ತಾ ಯದಾ ಪೂರ್ವಂ ವಸುಂಧರಾ ।
ವಿಷಯೇ ಮೇ ನ ವಸ್ತವ್ಯಮಿತಿ ಮಾಂ ಕಾಶ್ಯಪೋಽಬ್ರವೀತ್ ॥

ಅನುವಾದ

ರಘುನಂದನ! ಹಿಂದೆ ನಾನು ಕಶ್ಯಪರಿಗೆ ಪೃಥ್ವಿಯನ್ನು ದಾನ ಮಾಡಿದಾಗ ಅವರು ‘ನೀವು ನನ್ನ ರಾಜ್ಯದಲ್ಲಿ ಇರಬಾರದು’ ಎಂದು ನನ್ನಲ್ಲಿ ಹೇಳಿದ್ದರು.॥13॥

ಮೂಲಮ್ - 14

ಸೋಽಹಂ ಗುರುವಚಃ ಕುರ್ವನ್ ಪೃಥಿವ್ಯಾಂ ನ ವಸೇ ನಿಶಾಮ್ ।
ತದಾ ಪ್ರಭೃತಿ ಕಾಕುತ್ಸ್ಥ ಕೃತಾ ಮೇ ಕಾಶ್ಯಪಸ್ಯ ಹಿ ॥

ಅನುವಾದ

ಕಾಕುತ್ಸ್ಥನೇ! ಅಂದಿನಿಂದ ಗುರು ಕಶ್ಯಪರ ಈ ಆಜ್ಞೆಯನ್ನು ಪಾಲಿಸುತ್ತಾ, ನಾನು ಎಂದೂ ರಾತ್ರೆಯಲ್ಲಿ ಭೂಮಿಯ ಮೇಲೆ ವಾಸಿಸುವುದಿಲ್ಲ, ಏಕೆಂದರೆ ನಾನು ಕಶ್ಯಪರ ಎದುರಿಗೆ ‘ರಾತ್ರಿ ಪೃಥ್ವಿಯ ಮೇಲೆ ಇರಲಾರೆ’ ಎಂಬ ಪ್ರತಿಜ್ಞೆ ಮಾಡಿದುದು ಸರ್ವವಿಧಿತವಾಗಿದೆ.॥14॥

ಮೂಲಮ್ - 15

ತಾಮಿಮಾಂ ಮದ್ಗತಿಂ ವೀರ ಹಂತುಂ ನಾರ್ಹಸಿ ರಾಘವ ।
ಮನೋಜವಂ ಗಮಿಷ್ಯಾಮಿ ಮಹೇಂದ್ರಂ ಪರ್ವತೋತ್ತಮಮ್ ॥

ಅನುವಾದ

ವೀರ ರಾಘವನೇ! ಆದ್ದರಿಂದ ನನ್ನ ಗಮನಶಕ್ತಿಯನ್ನು ನಾಶಮಾಡಬೇಡ. ನಾನು ಮನೋವೇಗದಿಂದ ಈಗಲೇ ಮಹೇಂದ್ರ ಎಂಬ ಶ್ರೇಷ್ಠ ಪರ್ವತಕ್ಕೆ ಹೊರಟು ಹೋಗುವೆನು.॥15॥

ಮೂಲಮ್ - 16

ಲೋಕಾಸ್ತ್ವಪ್ರತಿಮಾ ರಾಮ ನಿರ್ಜಿತಾಸ್ತಪಸಾ ಮಯಾ ।
ಜಹಿ ತಾನ್ ಶರಮುಖ್ಯೇನ ಮಾ ಭೂತ್ಕಾಲಸ್ಯಪರ್ಯಯಃ ॥

ಅನುವಾದ

ಆದರೆ ಶ್ರೀರಾಮನೇ! ನಾನು ನನ್ನ ತಪಸ್ಸಿನಿಂದ ಅನುಪಮ ಲೋಕಗಳ ಮೇಲೆ ವಿಜಯ ಪಡೆದಿರುವೆನು. ನೀನು ಅದನ್ನೇ ಈ ಶ್ರೇಷ್ಠ ಬಾಣದಿಂದ ನಾಶಮಾಡಿಬಿಡು. ಈಗ ಇನ್ನು ವಿಳಂಬಿಸಬೇಡ.॥16॥

ಮೂಲಮ್ - 17

ಅಕ್ಷಯಂ ಮಧುಹಂತಾರಂ ಜಾನಾಮಿ ತ್ವಾಂ ಸುರೇಶ್ವರಮ್ ।
ಧನುಷೋಸ್ಯ ಪರಾಮರ್ಶಾತ್ ಸ್ವಸ್ತಿ ತೇಸ್ತು ಪರಂತಪ ॥

ಅನುವಾದ

ವೀರವರ ಪರಂತಪನೇ! ‘ನೀನು ಈ ಧನುಷ್ಯವನ್ನು ಹೆದೆ ಏರಿಸಿದಾಗಲೇ ನೀನು ಮಧು ದೈತ್ಯರನ್ನು ಕೊಂದಿರುವ ಅವಿನಾಶೀ ದೇವೇಶ್ವರ ಮಹಾವಿಷ್ಣುವೇ ಆಗಿರುವೆ’ ಎಂಬುದು ನನಗೆ ನಿಶ್ಚಿತವಾಗಿ ಅರಿವಾಯಿತು. ನಿನಗೆ ಮಂಗಳವಾಗಲಿ.॥17॥

ಮೂಲಮ್ - 18

ಏತೇ ಸುರಗಣಾಃ ಸರ್ವೇ ನಿರೀಕ್ಷಂತೇ ಸಮಾಗತಾಃ ।
ತ್ವಾಮಪ್ರತಿಮಕರ್ಮಾಣಮಪ್ರತಿದ್ವಂದ್ವಮಾಹವೇ ॥

ಅನುವಾದ

ಈ ಎಲ್ಲ ದೇವತೆಗಳು ಸೇರಿ ನಿನ್ನ ಕಡೆಗೆ ನೋಡುತ್ತಿದ್ದಾರೆ. ನಿನ್ನ ಕರ್ಮವು ಅನುಪಮವಾಗಿದೆ. ಯುದ್ಧದಲ್ಲಿ ನಿನ್ನನ್ನು ಇದಿರಿಸುವವನು ಬೇರೆ ಯಾರೂ ಇರಲಾರನು.॥18॥

ಮೂಲಮ್ - 19

ನ ಚೇಯಂ ತವಕಾಕುತ್ಸ್ಥ ವ್ರೀಡಾ ಭವಿತುಮರ್ಹಸಿ ।
ತ್ವಯಾ ತ್ರೈಲೋಕ್ಯನಾಥೇನ ಯದಹಂ ವಿಮುಖೀಕೃತಃ ॥

ಅನುವಾದ

ಕಕುತ್ಸ್ಥಕುಲ ಭೂಷಣನೇ! ನಿನ್ನ ಎದುರಿಗೆ ಪ್ರಕಟವಾದ ಈ ಅಸಮರ್ಥತೆಯು ನನಗೆ ಲಜ್ಜಾಸ್ಪದವಾಗಲಾರದು, ಏಕೆಂದರೆ ಮೂರು ಲೋಕದೊಡೆಯ ಶ್ರೀಹರಿಯಾದ ನೀನೇ ನನ್ನನ್ನು ಪರಾಜಿತಗೊಳಿಸಿರುವೆ.॥19॥

ಮೂಲಮ್ - 20

ಶರಮಪ್ರತಿಮಂ ರಾಮ ಮೋಕ್ತುಮರ್ಹಸಿ ಸುವ್ರತ ।
ಶರಮೋಕ್ಷೇ ಗಮಿಷ್ಯಾಮಿ ಮಹೇಂದ್ರಂ ಪರ್ವತೋತ್ತಮಮ್ ॥

ಅನುವಾದ

ಉತ್ತಮ ವ್ರತವನ್ನು ಪಾಲಿಸುವ ಶ್ರೀರಾಮನೇ! ಈಗ ನೀನು ನಿನ್ನ ಅನುಪಮ ಬಾಣವನ್ನು ಬಿಡು. ಇದು ಬಿಟ್ಟ ಬಳಿಕವೇ ನಾನು ಶ್ರೇಷ್ಠ ಮಹೇಂದ್ರ ಪರ್ವತಕ್ಕೆ ಹೋಗುವೆನು.॥20॥

ಮೂಲಮ್ - 21

ತಥಾ ಬ್ರುವತಿ ರಾಮೇ ತು ಜಾಮದಗ್ನ್ಯೇ ಪ್ರತಾಪವಾನ್ ।
ರಾಮೋ ದಾಶರಥಿಃ ಶ್ರೀಮಾಂಶ್ಚಿಕ್ಷೇಪ ಶರಮುತ್ತಮಮ್ ॥

ಅನುವಾದ

ಜಮದಗ್ನಿ ನಂದನ ಪರುಶುರಾಮರು ಹೀಗೆ ಹೇಳಿದಾಗ ಪ್ರತಾಪೀ ದಶರಥನಂದನ ಶ್ರೀಮಾನ್ ರಾಮಚಂದ್ರನು ಆ ಉತ್ತಮ ಬಾಣವನ್ನು ಪ್ರಯೋಗಿಸಿದನು.॥21॥

ಮೂಲಮ್ - 22

ಸ ಹತಾನ್ ದೃಶ್ಯ ರಾಮೇಣ ಸ್ವಾನ್ಲ್ಲೋಕಾಂಸ್ತಪಸಾರ್ಜಿತಾನ್ ।
ಜಾಮದಗ್ನ್ಯೋ ಜಗಾಮಾಶು ಮಹೇಂದ್ರಂ ಪರ್ವತೋತ್ತಮಮ್ ॥

ಅನುವಾದ

ತನ್ನ ತಪಸ್ಸಿನಿಂದ ಗಳಿಸಿದ ಪುಣ್ಯಲೋಕಗಳು ಶ್ರೀರಾಮಚಂದ್ರನು ಬಿಟ್ಟ ಬಾಣದಿಂದ ನಾಶವಾದುದನ್ನು ಕಂಡು ಪರಶುರಾಮರು ಶೀಘ್ರವಾಗಿ ಉತ್ತರ ಮಹೇಂದ್ರ ಪರ್ವತಕ್ಕೆ ಹೊರಟರು.॥22॥

ಮೂಲಮ್ - 23

ತತೋ ವಿತಿಮಿರಾಃ ಸರ್ವಾ ದಿಶಶ್ಚೋಪದಿಶಸ್ತಥಾ ।
ಸುರಾಃ ಸರ್ಷಿಗಣಾ ರಾಮಂ ಪ್ರಶಶಂಸುರುದಾಯುಧಮ್ ॥

ಅನುವಾದ

ಅವರು ಹೋಗುತ್ತಲೇ ಎಲ್ಲ ದಿಕ್ಕುಗಳ ಅಂಧಕಾರ ದೂರವಾಯಿತು. ಆ ಸಮಸ್ತ ಋಷಿಗಳ ಸಹಿತ ದೇವತೆಗಳು ಆಯುಧಧಾರೀ ಶ್ರೀರಾಮನನ್ನು ಭೂರಿ-ಭೂರಿ ಪ್ರಶಂಸಿಸತೊಡಗಿದರು.॥23॥

ಮೂಲಮ್ - 24

ರಾಮಂ ದಾಶರಥಿಂ ರಾಮೋ ಜಾಮದಗ್ನ್ಯಃಪ್ರಪೂಜಿತಃ ।
ತತಃ ಪ್ರದಕ್ಷಿಣೀಕೃತ್ಯ ಜಗಾಮಾತ್ಮಗತಿಂ ಪ್ರಭುಃ ॥

ಅನುವಾದ

ಅನಂತರ ದಶರಥನಂದನ ಶ್ರೀರಾಮನು ಜಮದಗ್ನಿ ಕುಮಾರ ಪರಶುರಾಮರನ್ನು ಪೂಜಿಸಿನು. ರಾಮನಿಂದ ಪೂಜಿತರಾದ ಪ್ರಭಾವಶಾಲಿ ಪರಶುರಾಮರು ಶ್ರೀರಾಮನಿಗೆ ಪ್ರದಕ್ಷಿಣೆ ಬಂದು ತನ್ನ ಸ್ಥಾನಕ್ಕೆ ತೆರಳಿದರು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತಾರನೆಯ ಸರ್ಗ ಪೂರ್ಣವಾಯಿತು.॥76॥