०५६ वसिष्ठ-विश्वामित्र-सङ्घर्षः

वाचनम्
ಭಾಗಸೂಚನಾ

ವಿಶ್ವಾಮಿತ್ರರು ವಸಿಷ್ಠರ ಮೇಲೆ ನಾನಾ ವಿಧವಾದ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದುದು, ವಸಿಷ್ಠರ ಬ್ರಹ್ಮದಂಡದಿಂದ ಎಲ್ಲ ಅಸ್ತ್ರಗಳ ಉಪಶಮನ

ಮೂಲಮ್ - 1

ಏವಮುಕ್ತೋವಸಿಷ್ಠೇನ ವಿಶ್ವಾಮಿತ್ರೋ ಮಹಾಬಲಃ ।
ಆಗ್ನೇಯಮಸ್ತ್ರಮುದ್ದಿಷ್ಯ ತಿಷ್ಠ ತಿಷ್ಠೇತಿ ಚಾಬ್ರವೀತ್ ॥

ಅನುವಾದ

‘ಎಲೈ ಮೂಢನೇ! ನೀನು ಹೆಚ್ಚು ದಿನ ಉಳಿಯಲಾರೆ’ ಎಂದು ಹೇಳಿದ ವಸಿಷ್ಠರ ಮೇಲೆ ಪ್ರಯೋಗಿಸಲು ಮಹಾಬಲಿ ವಿಶ್ವಾಮಿತ್ರನು ಆಗ್ನೆಯಾಸ್ತ್ರವನ್ನು ಎತ್ತಿಕೊಂಡು - ‘ಎಲವೋ ನಿಲ್ಲು, ನಿಲ್ಲು’ ಎಂದು ಹೇಳಿದನು.॥1॥

ಮೂಲಮ್ - 2

ಬ್ರಹ್ಮದಂಡಂ ಸಮುದ್ಯಮ್ಯ ಕಾಲದಂಡಮಿವಾಪರಮ್ ।
ವಸಿಷ್ಠೋ ಭಗವಾನ್ ಕ್ರೋಧಾದಿದಂ ವಚನಮಬ್ರವೀತ್ ॥

ಅನುವಾದ

ಆಗ ಇನ್ನೊಂದು ಕಾಲದಂಡದಂತೆ ಇರುವ ಬ್ರಹ್ಮದಂಡವನ್ನು ಎತ್ತಿಕೊಂಡು ಭಗವಾನ್ ವಸಿಷ್ಠರು ಕ್ರೋಧದಿಂದ ಹೀಗೆ ನುಡಿದರು.॥2॥

ಮೂಲಮ್ - 3

ಕ್ಷತ್ರಬಂಧೋ ಸ್ಥಿತೋಽಸ್ಮ್ಯೇಷ ಯದ್ಬಲಂ ತದ್ವಿದರ್ಶಯ ।
ನಾಶಯಾಮ್ಯದ್ಯ ತೇ ದರ್ಪಂ ಶಸ್ತ್ರಸ್ಯ ತವ ಗಾಧಿಜ ॥

ಅನುವಾದ

ಕ್ಷತ್ರಿಯಾಧಮನೇ! ನೋಡು, ನಾನು ನಿಂತಿರುವೆನು. ನಿನ್ನ ಬಳಿ ಇರುವ ಬಲವನ್ನು ತೋರಿಸು. ಗಾಧಿಪುತ್ರನೇ! ಇಂದು ನಿನ್ನ ಅಸ್ತ್ರ-ಶಸ್ತ್ರಗಳ ಗರ್ವವನ್ನು ಕ್ಷಣಮಾತ್ರದಲ್ಲಿ ನಾಶಮಾಡಿಬಿಡುವೆ.॥3॥

ಮೂಲಮ್ - 4

ಕ್ವ ಚ ತೇ ಕ್ಷತ್ರಿಯಬಲಂ ಕ್ವ ಚ ಬ್ರಹ್ಮಬಲಂಮಹತ್ ।
ಪಶ್ಯ ಬ್ರಹ್ಮಬಲಂ ದಿವ್ಯಂ ಮಮ ಕ್ಷತ್ರಿಯಪಾಂಸನ ॥

ಅನುವಾದ

ಕ್ಷತ್ರಿಯ ಕುಲ ಕಲಂಕಿತನೇ! ಎಲ್ಲಿ ನಿನ್ನ ಕ್ಷತ್ರಿಯ ಬಲ ಹಾಗೂ ಎಲ್ಲಿ ಮಹಾ ಬ್ರಹ್ಮಬಲ? ನನ್ನ ದಿವ್ಯ ಬ್ರಹ್ಮಬಲವನ್ನು ನೋಡು.॥4॥

ಮೂಲಮ್ - 5

ತಸ್ಯಾಸ್ತ್ರಂ ಗಾಧಿಪುತ್ರಸ್ಯ ಘೋರಮಾಗ್ನೇಯಮುತ್ತಮಮ್ ।
ಬ್ರಹ್ಮದಂಡೇನ ತಚ್ಛಾಂತಮಗ್ನೇರ್ವೇಗ ಇವಾಂಭಸಾ ॥

ಅನುವಾದ

ಗಾಧಿಪುತ್ರ ವಿಶ್ವಾಮಿತ್ರನ ಆ ಉತ್ತಮ ಹಾಗೂ ಭಯಂಕರ ಆಗ್ನೇಯಾಸ್ತ್ರವು ವಸಿಷ್ಠರ ಬ್ರಹ್ಮದಂಡದಿಂದ ನೀರಿನಿಂದ ಉರಿಯುವ ಬೆಂಕಿಯು ಶಾಂತವಾಗುವಂತೆಯೇ ಆ ಅಸ್ತ್ರವು ಶಾಂತವಾಯಿತು.॥5॥

ಮೂಲಮ್ - 6

ವಾರುಣಂ ಚೈವ ರೌದ್ರಂ ಚ ಐಂದ್ರಂ ಪಾಶುಪತಂ ತಥಾ ।
ಐಷೀಕಂ ಚಾಪಿ ಚಿಕ್ಷೇಪ ಕುಪಿತೋ ಗಾಧಿನಂದನಃ ॥

ಅನುವಾದ

ಆಗ ಗಾಧೀಪುತ್ರ ವಿಶ್ವಾಮಿತ್ರನು ಕುಪಿತನಾಗಿ ವಾರುಣ, ರೌದ್ರ, ಐಂದ್ರ, ಪಾಶುಪತ ಮತ್ತು ಐಷಿಕ ಮೊದಲಾದ ಅಸಗಳನ್ನು ಪ್ರಯೋಗಿಸಿದನು.॥6॥

ಮೂಲಮ್ - 7

ಮಾನವಂ ಮೋಹನಂ ಚೈವ ಗಾಂಧರ್ವಂ ಸ್ವಾಪನಂ ತಥಾ ।
ಜೃಂಭಣಂ ಮಾದನಂ ಚೈವ ಸಂತಾಪನವಿಲಾಪನೇ ॥

ಮೂಲಮ್ - 8

ಶೋಷಣಂ ದಾರಣಂ ಚೈವ ವಜ್ರಮಸ್ತ್ರಂ ಸುದುರ್ಜಯಮ್ ।
ಬ್ರಹ್ಮಪಾಶಂ ಕಾಲಪಾಶಂವಾರುಣಂ ಪಾಶಮೇವ ಚ ॥

ಮೂಲಮ್ - 9

ಪಿನಾಕಮಸಂ ದಯಿತಂ ಶುಷ್ಕಾರ್ದ್ರೇ ಅಶಿನೀ ತಥಾ ।
ದಂಡಾಸ್ತ್ರಮಥ ಪೈಶಾಚಂ ಕ್ರೌಂಚಮಸ್ತ್ರಂ ತಥೈವ ಚ ॥

ಮೂಲಮ್ - 10

ಧರ್ಮಚಕ್ರಂ ಕಾಲಚಕ್ರಂ ವಿಷ್ಣುಚಕ್ರಂ ತಥೈವ ಚ ।
ವಾಯವ್ಯಂ ಮಥನಂ ಚೈವ ಅಸ್ತ್ರಂ ಹಯಶಿರಸ್ತಥಾ ॥

ಮೂಲಮ್ - 11

ಶಕ್ತಿದ್ವಯಂ ಚ ಚಿಕ್ಷೇಪ ಕಂಕಾಲಂ ಮುಸಲಂ ತಥಾ ।
ವೈದ್ಯಾಧರಂ ಮಹಾಸ್ತ್ರಂ ಚ ಕಾಲಾಸ್ತ್ರಮಥ ದಾರುಣಮ್ ॥

ಮೂಲಮ್ - 12

ತ್ರಿಶೂಲಮಸ್ತ್ರಂ ಘೋರಂ ಚ ಕಾಪಾಲಮಥಕಂಕಣಮ್ ।
ಏತಾನ್ಯಸ್ತ್ರಾಣಿ ಚಿಕ್ಷೇಪ ಸರ್ವಾಣಿ ರಘುನಂದನ ॥

ಅನುವಾದ

ರಘುನಂದನ! ಅನಂತರ ಕ್ರಮವಾಗಿ ಮಾನವ, ಮೋಹನ, ಗಾಂಧರ್ವ ಸ್ವಾಪನ, ಜೃಂಭಣ, ವಾದನ, ಸಂತಾಪನ, ವಿಲಾಪನ, ಶೋಷಣ, ವಿದಾರಣ, ಸುದುರ್ಜಯ, ವಜ್ರಾಸ್ತ್ರ, ಬ್ರಹ್ಮಪಾಶ, ಕಾಲಪಾಶ, ವಾರುಣಪಾಶ, ಪರಮಪ್ರಿಯ ಪಿನಾಕಾಸ, ಒಣಗಿದ - ಹಸಿಯಾದ ಎರಡು ಪ್ರಕಾರದ ಅಶನಿ, ದಂಡಾಸ್ತ್ರ, ಪೈಶಾಚಾಸ್ತ್ರ, ಕ್ರೌಂಚಾಸ್ತ್ರ, ಧರ್ಮಚಕ್ರ, ಕಾಲಚಕ್ರ, ವಿಷ್ಣುಚಕ್ರ, ವಾಯುವ್ಯಾಯಾಸ್ತ್ರ, ಮಂಥನಾಸ್ತ್ರ, ಹಯಶಿರಾ, ಎರಡು ವಿಧದ ಶಕ್ತಿಗಳು, ಕಂಕಾಲ, ಮುಸಲ, ಮಹಾ ವೈದ್ಯಾಧರಾಸ್ತ್ರ, ದಾರುಣ, ಕಾಲಾಸ್ತ್ರ, ಭಯಂಕರ ತ್ರಿಶೂಲಾಸ್ತ್ರ, ಕಾಪಾಲಾಸ್ತ್ರ ಮತ್ತು ಕಂಕಣಾಸ್ತ್ರ - ಇವೆಲ್ಲ ಅಸ್ತ್ರಗಳನ್ನು ಕ್ರಮವಾಗಿ ಅವನು ವಸಿಷ್ಠರ ಮೇಲೆ ಪ್ರಯೋಗಿಸಿದನು.॥7-12॥

ಮೂಲಮ್ - 13

ವಸಿಷ್ಠೇ ಜಪತಾಂ ಶ್ರೇಷ್ಠೇ ತದದ್ಭುತಮಿವಾಭವತ್ ।
ತಾನಿ ಸರ್ವಾಣಿ ದಂಡೇನ ಗ್ರಸತೇ ಬ್ರಹ್ಮಣಃ ಸುತಃ ॥

ಅನುವಾದ

ಜಪಮಾಡುವವರಲ್ಲಿ ಶ್ರೇಷ್ಠರಾದ ಮಹರ್ಷಿ ವಸಿಷ್ಠರ ಮೇಲೆ ಮಾಡಿದ ಇಷ್ಟು ಅಸ್ತ್ರಗಳ ಪ್ರಹಾರಗಳೂ ಒಂದು ಅದ್ಭುತ ಘಟನೆಯಾಗಿತ್ತು. ಆದರೆ ಬ್ರಹ್ಮಪುತ್ರ ವಸಿಷ್ಠರು ಆ ಎಲ್ಲ ಅಸ್ತ್ರಗಳನ್ನು ಕೇವಲ ತನ್ನ ಬ್ರಹ್ಮದಂಡದಿಂದ ನಾಶಗೊಳಿಸಿದರು.॥13॥

ಮೂಲಮ್ - 14

ತೇಷುಶಾಂತೇಷು ಬ್ರಹ್ಮಾಸ್ತ್ರಂ ಕ್ಷಿಪ್ತವಾನ್ಗಾಧಿನಂದನಃ ।
ತದಸ್ತ್ರಮುದ್ಯತಂ ದೃಷ್ಟ್ವಾ ದೇವಾಃ ಸಾಗ್ನಿಪುರೋಗಮಾಃ ॥

ಮೂಲಮ್ - 15

ದೇವರ್ಷಯಶ್ಚ ಸಂಭ್ರಾಂತಾ ಗಂಧರ್ವಾಃ ಸಮಹೋರಗಾಃ ।
ತ್ರೈಲೋಕ್ಯಮಾಸೀತ್ಸಂತ್ರಸ್ತಂಬ್ರಹ್ಮಾಸ್ತ್ರೇ ಸಮುದೀರಿತೇ ॥

ಅನುವಾದ

ಆ ಎಲ್ಲ ಅಸ್ತ್ರಗಳು ಶಾಂತವಾದಾಗ ಗಾಧಿನಂದನ ವಿಶ್ವಾಮಿತ್ರನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಬ್ರಹ್ಮಾಸ್ತ್ರವನ್ನು ನೋಡಿ ಅಗ್ನಿಯೇ ಮೊದಲಾದ ದೇವತೆಗಳು, ಗಂಧರ್ವರು, ದೊಡ್ಡ-ದೊಡ್ಡ ನಾಗಗಳೂ ಭ್ರಾಂತರಾದರು. ಬ್ರಹ್ಮಾಸ್ತ್ರವು ಹೂಡುತ್ತಲೇ ಮೂರು ಲೋಕಗಳ ಪ್ರಾಣಿಗಳು ನಡುಗಿಹೋದರು.॥14-15॥

ಮೂಲಮ್ - 16

ತದಪ್ಯಸ್ತ್ರಂ ಮಹಾಘೋರಂ ಬ್ರಾಹ್ಮಂ ಬ್ರಾಹ್ಮೇಣ ತೇಜಸಾ ।
ವಸಿಷ್ಠೋಗ್ರಸತೇ ಸರ್ವಂ ಬ್ರಹ್ಮದಂಡೇನ ರಾಘವ ॥

ಅನುವಾದ

ರಾಘವ! ವಸಿಷ್ಠರು ತಮ್ಮ ಬ್ರಹ್ಮತೇಜದ ಪ್ರಭಾವದಿಂದ ಆ ಭಯಂಕರ ಬ್ರಹ್ಮಾಸ್ತ್ರವನ್ನು ಬ್ರಹ್ಮದಂಡದಿಂದಲೇ ಶಾಂತ ಗೊಳಿಸಿದರು.॥16॥

ಮೂಲಮ್ - 17

ಬ್ರಹ್ಮಾಸ್ತ್ರಂ ಗ್ರಸಮಾನಸ್ಯ ವಸಿಷ್ಠಸ್ಯ ಮಹಾತ್ಮನಃ ।
ತ್ರೈಲೋಕ್ಯಮೋಹನಂ ರೌದ್ರಂ ರೂಪಮಾಸೀತ್ಸುದಾರುಣಮ್ ॥

ಅನುವಾದ

ಆ ಬ್ರಹ್ಮಾಸ್ತ್ರವನ್ನು ಶಾಂತಗೊಳಿಸುವ ಸಮಯ ವಸಿಷ್ಠರ ಆ ರೌದ್ರರೂಪವು ಮೂರು ಲೋಕಗಳನ್ನು ಭ್ರಾಂತಿಗೊಳಿಸುವ, ಅತ್ಯಂತ ಭಯಂಕರವಾಗಿ ಅನಿಸುತ್ತಿತ್ತು.॥17॥

ಮೂಲಮ್ - 18

ರೋಮಕೂಪೇಷು ಸರ್ವೇಷು ವಸಿಷ್ಠಸ್ಯ ಮಹಾತ್ಮನಃ ।
ಮರೀಚ್ಯ ಇವ ನಿಷ್ಪೇತುರಗ್ನೇರ್ಧೂಮಾಕುಲಾರ್ಚಿಷಃ ॥

ಅನುವಾದ

ಮಹಾತ್ಮಾ ವಸಿಷ್ಠರ ಸಮಸ್ತ ರೋಮಕೂಪಗಳಿಂದ ಕಿರಣಗಳಂತೆ ಹೊಗೆಯಿಂದ ಕೂಡಿದ ಅಗ್ನಿಜ್ವಾಲೆಗಳು ಹೊರಟವು.॥18॥

ಮೂಲಮ್ - 19

ಪ್ರಾಜ್ವಲದ್ ಬ್ರಹ್ಮದಂಡಶ್ಚ ವಸಿಷ್ಠಸ್ಯ ಕರೋದ್ಯತಃ ।
ವಿಧೂಮ ಇವ ಕಾಲಾಗ್ನೇರ್ಯಮದಂಡ ಇವಾಪರಃ ॥

ಅನುವಾದ

ವಸಿಷ್ಠರು ಕೈಯಲ್ಲೆತ್ತಿಕೊಂಡ ಇನ್ನೊಂದು ಯಮದಂಡದಂತೆ ಆ ಬ್ರಹ್ಮದಂಡವು ಹೊಗೆ ಇಲ್ಲದ ಕಾಲಾಗ್ನಿಯಂತೆ ಪ್ರಜ್ವಲಿತವಾಗುತ್ತಿತ್ತು.॥19॥

ಮೂಲಮ್ - 20

ತತೋಽಸ್ತುವನ್ ಮುನಿಗಣಾ ವಸಿಷ್ಠಂ ಜಪತಾಂ ವರಮ್ ।
ಅಮೋಘಂ ತೇ ಬಲಂ ಬ್ರಹ್ಮಂಸ್ತೇಜೋ ಧಾರಯ ತೇಜಸಾ ॥

ಅನುವಾದ

ಆಗ ಸಮಸ್ತ ಮುನಿಗಳು ಮಂತ್ರಜಪದಲ್ಲಿ ಶ್ರೇಷ್ಠರಾದ ವಸಿಷ್ಠ ಮುನಿಯನ್ನು ಸ್ತುತಿಸುತ್ತಾ-ಬ್ರಹ್ಮರ್ಷಿಯೇ! ನಿಮ್ಮ ಬಲವು ಅಮೋಘವಾಗಿದೆ. ನೀವು ನಿಮ್ಮ ತೇಜವನ್ನು ನಿಮ್ಮ ಶಕ್ತಿಯಿಂದಲೇ ಅಡಗಿಸಿಕೊಳ್ಳಿ ಎಂದು ಹೇಳಿದರು.॥20॥

ಮೂಲಮ್ - 21

ನಿಗೃಹೀತಸ್ತ್ವಯಾ ಬ್ರಹ್ಮನ್ ವಿಶ್ವಾಮಿತ್ರೋ ಮಹಾಬಲಃ ।
ಅಮೋಘಂ ತೇ ಬಲಂ ಶ್ರೇಷ್ಠ ಲೋಕಾಃ ಸಂತು ಗತವ್ಯಥಾಃ ॥

ಅನುವಾದ

ಮಹಾಬಲಿ ವಿಶ್ವಾಮಿತ್ರನು ನಿಮ್ಮಿಂದ ಪರಾಜಿತನಾಗಿರುವನು. ಮುನಿಶ್ರೇಷ್ಠರೇ! ನಿಮ್ಮ ಸಾಮರ್ಥ್ಯ ಅಮೋಘವಾಗಿದೆ. ಈಗ ನೀವು ಶಾಂತರಾಗಿರಿ. ಅದರಿಂದ ಜನರ ವ್ಯಥೆಯನ್ನು ದೂರಗೊಳಿಸಿರಿ.॥21॥

ಮೂಲಮ್ - 22

ಏವಮುಕ್ತೋ ಮಹಾತೇಜಾಃ ಶಮಂ ಚಕ್ರೇ ಮಹಾಬಲಃ ।
ವಿಶ್ವಾಮಿತ್ರೋ ವಿನಿಕೃತೋ ವಿನಿಃಶ್ವಸ್ಯೇದಮಬ್ರವೀತ್ ॥

ಅನುವಾದ

ಮಹರ್ಷಿಗಳು ಹೀಗೆ ಹೇಳಿದಾಗ ಮಹಾತೇಜಸ್ವೀ ಮಹಾಬಲಿ, ವಸಿಷ್ಠರು ಶಾಂತರಾದರು. ಪರಾಜಿತನಾದ ವಿಶ್ವಾಮಿತ್ರನು ನಿಟ್ಟುಸಿರುಬಿಡುತ್ತಾ ಹೀಗೆ ಹೇಳಿದನು.॥22॥

ಮೂಲಮ್ - 23

ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋಬಲಂ ಬಲಮ್ ।
ಏಕೇನ ಬ್ರಹ್ಮದಂಡೇನ ಸರ್ವಾಸ್ತ್ರಾಣಿ ಹತಾನಿ ಮೇ ॥

ಅನುವಾದ

ಕ್ಷತ್ರಿಯ ಬಲಕ್ಕೆ ಧಿಕ್ಕಾರವಿರಲಿ. ಬ್ರಹ್ಮತೇಜದಿಂದ ಪ್ರಾಪ್ತವಾಗುವ ಬಲವೇ ವಾಸ್ತವ ಬಲವಾಗಿದೆ; ಏಕೆಂದರೆ ಇಂದು ಒಂದು ಬ್ರಹ್ಮದಂಡವು ನನ್ನ ಎಲ್ಲ ಅಸ್ತ್ರಗಳನ್ನು ನಾಶಮಾಡಿತು.॥23॥

ಮೂಲಮ್ - 24

ತದೇತ್ ಪ್ರಸಮೀಕ್ಷ್ಯಾಹಂ ಪ್ರಸನ್ನೇಂದ್ರಿಯಮಾನಸಃ ।
ತಪೋ ಮಹತ್ ಸಮಾಸ್ಥಾಸ್ಯೇ ಯದ್ವೈ ಬ್ರಹ್ಮತ್ವಕಾರಣಮ್ ॥

ಅನುವಾದ

ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿ ಈಗ ನಾನು ನನ್ನ ಮನಸ್ಸು, ಇಂದ್ರಿಯಗಳನ್ನು ನಿರ್ಮಲಗೊಳಿಸಿ, ನನಗೆ ಬ್ರಾಹ್ಮಣತ್ವದ ಪ್ರಾಪ್ತಿಗೆ ಕಾರಣವಾದ ಮಹಾತಪಸ್ಸನ್ನು ಆಚರಿಸುವೆನು, ಎಂದು ಅಂದುಕೊಂಡನು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತಾರನೆಯ ಸರ್ಗ ಪೂರ್ಣವಾಯಿತು. ॥56॥