०५० मिथिला-गतिः

वाचनम्
ಭಾಗಸೂಚನಾ

ಮಿಥಿಲಾಪಟ್ಟಣಕ್ಕೆ ವಿಶ್ವಾಮಿತ್ರರೊಡನೆ ರಾಮ-ಲಕ್ಷ್ಮಣರ ಪ್ರಯಾಣ, ಜನಕನ ಸತ್ಕಾರ, ಜನಕರಾಜನಿಗೆ ವಿಶ್ವಾಮಿತ್ರರು ರಾಜಪುತ್ರರ ಪರಿಚಯ ಮಾಡಿಕೊಟ್ಟಿದ್ದು

ಮೂಲಮ್ - 1

ತತಃ ಪ್ರಾಗುತ್ತರಾಂ ಗತ್ವಾ ರಾಮಃ ಸೌಮಿತ್ರಿಣಾ ಸಹ ।
ವಿಶ್ವಾಮಿತ್ರಂ ಪುರಸ್ಕೃತ್ಯ ಯಜ್ಞವಾಟಮುಪಾಗಮತ್ ॥

ಅನುವಾದ

ಬಳಿಕ ರಾಮ-ಲಕ್ಷ್ಮಣರು ವಿಶ್ವಾಮಿತ್ರರನ್ನು ಮುಂದಿರಿಸಿಕೊಂಡು ಮಹರ್ಷಿ ಗೌತಮರ ಆಶ್ರಮದ ಈಶಾನ್ಯ ದಿಕ್ಕಿನ ಕಡೆಗೆ ನಡೆದು, ಮಿಥಿಲಾನರೇಶನ ಯಜ್ಞಶಾಲೆಗೆ ಹೋದರು.॥1॥

ಮೂಲಮ್ - 2

ರಾಮಸ್ತು ಮುನಿಶರ್ದೂಲಮುವಾಚ ಸಹಲಕ್ಷ್ಮಣಃ ।
ಸಾಧ್ವೀ ಯಜ್ಞಸಮೃದ್ಧಿರ್ಹಿ ಜನಕಸ್ಯ ಮಹಾತ್ಮನಃ ॥

ಮೂಲಮ್ - 3

ಬಹೂನೀಹ ಸಹಸ್ರಾಣಿ ನಾನಾ ದೇಶನಿವಾಸಿನಾಮ್ ।
ಬ್ರಾಹ್ಮಣಾನಾಂ ಮಹಾಭಾಗ ವೇದಾಧ್ಯಯನಶಾಲಿನಾಮ್ ॥

ಅನುವಾದ

ಅಲ್ಲಿ ಲಕ್ಷ್ಮಣಸಹಿತ ಶ್ರೀರಾಮನು ಮುನಿಶ್ರೇಷ್ಠ ವಿಶ್ವಾಮಿತ್ರರಲ್ಲಿ ಇಂತೆಂದನು- ಮಹಾಭಾಗರೇ! ಮಹಾತ್ಮಾ ಜನಕನ ಯಜ್ಞ ಸಮಾರಂಭವು ಬಹಳ ವೈಭವೋಪೇತವಾಗಿ ಕಾಣುತ್ತಿದೆ. ಇಲ್ಲಿ ವೇದಾಧ್ಯಯನ ಸಂಪನ್ನರಾದ ನಾನಾದೇಶದ ಸಾವಿರಾರು ಬ್ರಾಹ್ಮಣರು ನೆರೆದಿರುವರು.॥2-3॥

ಮೂಲಮ್ - 4

ಋಷಿವಾಟಾಶ್ಚ ದಶ್ಯಂತೇ ಶಕಟೀತಶಸಂಕುಲಾಃ ।
ದೇಶೋ ವಿಧೀಯತಾಂ ಬ್ರಹ್ಮನ್ ಯತ್ರ ವತ್ಸ್ಯಾಮಹೇ ವಯಮ್ ॥

ಅನುವಾದ

ಋಷಿಗಳು ಪಯಣಿಸುತ್ತಿದ್ದ ನೂರಾರು ಬಂಡಿಗಳು ಕಂಡುಬರುತ್ತಿವೆ. ಬ್ರಹ್ಮರ್ಷಿಗಳೇ! ಈಗ ನಾವು ಉಳಕೊಳ್ಳಲು ಯಾವುದಾದರೂ ಸ್ಥಾನವನ್ನು ನಿಶ್ಚಯಿಸಿರಿ.॥4॥

ಮೂಲಮ್ - 5

ರಾಮಸ್ಯ ವಚನಂ ಶ್ರುತ್ವಾ ವಿಶ್ವಾಮಿತ್ರೋ ಮಹಾಮುನಿಃ ।
ನಿವಾಸಮಕರೋದ್ ದೇಶೇ ವಿವಿಕ್ತೇ ಸಲಿಲಾನ್ವಿತೇ ॥

ಅನುವಾದ

ಶ್ರೀರಾಮಚಂದ್ರನ ಮಾತನ್ನು ಕೇಳಿ ಮಹಾಮುನಿ ವಿಶ್ವಾಮಿತ್ರರು ಏಕಾಂತವಾದ ನೀರಿನ ಸೌಲಭ್ಯವಿರುವ ಒಂದು ಸ್ಥಾನದಲ್ಲಿ ಬಿಡಾರ ಹೂಡಿದರು.॥5॥

ಮೂಲಮ್ - 6

ವಿಶ್ವಾಮಿತ್ರಮನುಪ್ತಾಪ್ತಂ ಶ್ರುತ್ವಾ ನೃಪವರಸ್ತದಾ ।
ಶತಾನಂದಂ ಪುರಸ್ಕೃತ್ಯ ಪುರೋಹಿತಮನಿಂದಿತಃ ॥

ಅನುವಾದ

ಉತ್ತಮ ಆಚಾರ-ವಿಚಾರವುಳ್ಳ ನೃಪಶ್ರೇಷ್ಠ ಮಹಾರಾಜನು ವಿಶ್ವಾಮಿತ್ರರು ಆಗಮಿಸಿರುವರು ಎಂದು ಕೇಳಿದಾಗ ಕೂಡಲೇ ತನ್ನ ಪುರೋಹಿತರಾದ ಶತಾನಂದರನ್ನು ಮುಂದೆ ಮಾಡಿ, ಅರ್ಘ್ಯ-ಪಾದ್ಯಾದಿಗಳಿಂದ ಅವರನ್ನು ಸ್ವಾಗತಿಸಲು ಹೊರಟನು.॥6॥

ಮೂಲಮ್ - 7½

ಋತ್ವಿಜೋಽಪಿ ಮಹಾತ್ಮಾನಸ್ತ್ವರ್ಘ್ಯಮಾದಾಯ ಸತ್ವರಮ್ ।
ಪ್ರತ್ಯುಜ್ಜಗಾಮ ಸಹಸಾ ವಿನಯೇನ ಸಮನ್ವಿತಃ ॥
ವಿಶ್ವಾಮಿತ್ರಾಯ ಧರ್ಮೇಣ ದದೌ ಧರ್ಮಪುರಸ್ಕೃತಮ್ ।

ಅನುವಾದ

ಅವನೊಂದಿಗೆ ಅರ್ಘ್ಯವನ್ನೆತ್ತಿಕೊಂಡು ಮಹಾತ್ಮಾ ಋತ್ವಿಜರೂ ಶೀಘ್ರವಾಗಿ ಹೊರಟರು. ರಾಜನು ವಿನೀತಭಾವದಿಂದ ತತ್ ಕ್ಷಣ ಮುಂದುವರೆದು ಮಹರ್ಷಿಯನ್ನು ಸ್ವಾಗತಿಸಿದನು. ಹಾಗೂ ಧರ್ಮಶಾಸ್ತ್ರಕ್ಕನುಸಾರ ವಿಶ್ವಾಮಿತ್ರರಿಗೆ ಧರ್ಮಯುಕ್ತ ಅರ್ಘ್ಯವನ್ನು ಸಮರ್ಪಿಸಿದನು.॥7½॥

ಮೂಲಮ್ - 8½

ಪ್ರತಿಗೃಹ್ಯ ತುತಾಂ ಪೂಜಾಂ ಜನಕಸ್ಯ ಮಹಾತ್ಮನಃ ॥
ಪಪ್ರಚ್ಛ ಕುಶಲಂ ರಾಜ್ಞೋ ಯಜ್ಞಸ್ಯ ಚ ನಿರಾಮಯಮ್ ।

ಅನುವಾದ

ಮಹಾತ್ಮಾ ರಾಜಾ ಜನಕನು ಮಾಡಿದ ಪೂಜೆಯನ್ನು ಸ್ವೀಕರಿಸಿ ಮುನಿಯು ಅವನ ಕ್ಷೇಮ ಸಮಾಚಾರ ಕೇಳಿ, ನಿರಾತಂಕವಾಗಿ ನಡೆಯುತ್ತಿರುವ ಯಜ್ಞದ ಕುರಿತು ಪ್ರಶ್ನಿಸಿದರು.॥8½॥

ಮೂಲಮ್ - 9½

ಸ ತಾಂಶ್ಚಾಥ ಮುನೀನ್ ಪೃಷ್ಟ್ವಾಸೋಪಾಧ್ಯಾಯಪುರೋಧಸಃ ॥
ಯಥಾರ್ಹಮೃಷಿಭಿಃ ಸರ್ವೈಃ ಸಮಾಗಚ್ಛತ್ಪ್ರಹೃಷ್ಟವತ್ ।

ಅನುವಾದ

ರಾಜನೊಂದಿಗೆ ಬಂದಿರುವ ಮುನಿ, ಉಪಾಧ್ಯಾಯ, ಪುರೋಹಿತರಲ್ಲಿಯೂ ಕುಶಲವನ್ನು ಕೇಳಿ ವಿಶ್ವಾಮಿತ್ರರು ಬಹಳ ಸಂತೋಷದಿಂದ ಆ ಎಲ್ಲ ಮಹರ್ಷಿಗಳನ್ನು ಭೆಟ್ಟಿಯಾದರು.॥9½॥

ಮೂಲಮ್ - 10½

ಅಥ ರಾಜಾ ಮುನಿಶ್ರೇಷ್ಠಂ ಕೃತಾಂಜಲಿರಭಾಷತ ॥
ಆಸನೇ ಭಗವನಾಸ್ತಾಂ ಸಹೈಭಿರ್ಮುನಿಪುಂಗವೈಃ ।

ಅನುವಾದ

ಇದಾದ ನಂತರ ರಾಜಾಜನಕನು ಮುನಿವರ ವಿಶ್ವಾಮಿತ್ರನಲ್ಲಿ ಕೈಮುಗಿದು ಇಂತೆಂದನು - ‘ಮಹಾತ್ಮರೇ! ತಾವು ಈ ಮುನೀಶ್ವರರ ಸಹಿತ ಆಸನದಲ್ಲಿ ವಿರಾಜಮಾನರಾಗಿರಿ.॥10½॥

ಮೂಲಮ್ - 11

ಜನಕಸ್ಯ ವಚಃ ಶ್ರುತ್ವಾ ನಿಷಸಾದ ಮಹಾಮುನಿಃ ॥

ಮೂಲಮ್ - 12

ಪುರೋಧಾ ಋತ್ವಿಜಶ್ಚೈವ ರಾಜಾ ಚ ಸಹಮಂತ್ರಿಭಿಃ ।
ಆಸನೇಷು ಯಥಾನ್ಯಾಯಮುಪವಿಷ್ಟಾಃ ಸಮಂತತಃ ॥

ಅನುವಾದ

ಬಳಿಕ ಜನಕರಾಜನು ವಿನಂತಿಸಿಕೊಂಡಾಗ ಮುನಿವರ ವಿಶ್ವಾಮಿತ್ರರು ಸುಖಾಸೀನರಾದರು. ತದನಂತರ ಪುರೋಹಿತ, ಋತ್ವಿಜ ಹಾಗೂ ಮಂತ್ರಿಗಳೊಂದಿಗೆ ರಾಜನೂ ಕೂಡ ಯಥಾಯೋಗ್ಯ ಆಸನದಲ್ಲಿ ವಿರಾಜಿಸಿದನು.॥11-12॥

ಮೂಲಮ್ - 13

ದೃಷ್ಟ್ವಾಸ ನೃಪತಿಸ್ತತ್ರ ವಿಶ್ವಾಮಿತ್ರಮಥಾಬ್ರವೀತ್ ।
ಅದ್ಯ ಯಜ್ಞಸಮೃದ್ಧಿರ್ಮೇ ಸಫಲಾ ದೈವತೈಃ ಕೃತಾ ॥

ಅನುವಾದ

ಅನಂತರ ಜನಕರಾಜನು ವಿಶ್ವಾಮಿತ್ರರ ಕಡೆಗೆ ನೋಡಿ ಹೇಳಿದನು - ಪೂಜ್ಯರೇ! ದೇವತೆಗಳು ಇಂದು ನನ್ನ ಯಜ್ಞವನ್ನು ಸಫಲಗೊಳಿಸಿದರು.॥13॥

ಮೂಲಮ್ - 14½

ಅದ್ಯ ಯಜ್ಞಫಲಂ ಪ್ರಾಪ್ತಂ ಭಗವದ್ದರ್ಶನಾನ್ಮಯಾ ।
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯಸ್ಯ ಮೇ ಮುನಿಪುಂಗವಃ ॥
ಯಜ್ಞೋಪಸದನಂ ಬ್ರಹ್ಮನ್ ಪ್ರಾಪ್ತೋಽಸಿ ಮುನಿಭಿಃ ಸಹ ।

ಅನುವಾದ

ಇಂದು ನಿಮ್ಮ ಪೂಜ್ಯ ಚರಣಗಳ ದರ್ಶನದಿಂದ ನಾನು ಯಜ್ಞದ ಫಲವನ್ನು ಪಡೆದುಕೊಂಡೆ. ಬ್ರಹ್ಮರ್ಷಿಗಳೇ! ನೀವು ಮುನಿಗಳಲ್ಲಿ ಶ್ರೇಷ್ಠರಾಗಿರುವಿರಿ. ತಾವು ಇಷ್ಟು ಮಹರ್ಷಿಗಳೊಂದಿಗೆ ನನ್ನ ಯಜ್ಞಶಾಲೆಯನ್ನು ಪ್ರವೇಶಿಸಿದ್ದರಿಂದ ನಾನು ಧನ್ಯನಾದೆನು. ಇದು ನನ್ನ ಮೇಲಿನ ನಿಮ್ಮ ಭಾರೀ ಅನುಗ್ರಹವಾಗಿದೆ.॥14½॥

ಮೂಲಮ್ - 15½

ದ್ವಾದಶಾಹಂ ತು ಬ್ರಹ್ಮರ್ಷೇ ದೀಕ್ಷಾಮಾಹುರ್ಮನೀಷಿಣಃ ॥
ತತೋ ಭಾಗಾರ್ಥಿನೋ ದೇವಾನ್ ದ್ರಷ್ಟುಮರ್ಹಸಿ ಕೌಶಿಕ ।

ಅನುವಾದ

ಬ್ರಹ್ಮರ್ಷಿಗಳೇ! ನನ್ನ ಯಜ್ಞದೀಕ್ಷೆಯಲ್ಲಿ ಹನ್ನೆರಡು ದಿನಗಳು ಮಾತ್ರ ಉಳಿದಿವೆ ಎಂದು ಮನಿಷಿಗಳಾದ ಋತ್ವಿಜರು ಹೇಳುತ್ತಾರೆ. ಆದ್ದರಿಂದ ಕುಶಿಕನಂದನರೇ! ಹನ್ನೆರಡು ದಿನಗಳ ಬಳಿಕ ಯಜ್ಞಭಾಗವನ್ನು ಸ್ವೀಕರಿಸಲು ಇಲ್ಲಿಗೆ ಬಂದಿರುವ ದೇವತೆಗಳನ್ನು ದರ್ಶಿಸಿರಿ.॥15½॥

ಮೂಲಮ್ - 16½

ಇತ್ಯುಕ್ತ್ವಾ ಮುನಿಶಾರ್ದೂಲಂ ಪ್ರಹೃಷ್ಟವದನಸ್ತದಾ ॥
ಪುನಸ್ತಂ ಪರಿಪಪ್ರಚ್ಛ ಪ್ರಾಂಜಲಿಃ ಪ್ರಯತೋನೃಪಃ ।

ಅನುವಾದ

ಮುನಿವರ ವಿಶ್ವಾಮಿತ್ರರಲ್ಲಿ ಹೀಗೆ ಹೇಳಿ ಸಂತೋಷಗೊಂಡ ಜಿತೇಂದ್ರಿಯನಾದ ಜನಕರಾಜನು ಪುನಃ ಕೈಮುಗಿದು ಅವರಲ್ಲಿ ಕೇಳಿದನು.॥16½॥

ಮೂಲಮ್ - 17

ಇಮೌ ಕುಮಾರೌ ಭದ್ರಂ ತೇ ದೇವತುಲ್ಯಪರಾಕ್ರಮೌ ॥

ಮೂಲಮ್ - 18

ಗಜತುಲ್ಯಗತೀ ವೀರೌ ಶಾರ್ದೂಲವೃಷಭೋಪಮೌ ।
ಪದ್ಮಪತ್ರ ವಿಶಾಲಾಕ್ಷೌ ಖಡ್ಗತೂಣೀಧನುರ್ಧರೌ ।
ಅಶ್ವಿನಾವಿವ ರೂಪೇಣ ಸಮುಪಸ್ಥಿತಯೌವನೌ ॥

ಮೂಲಮ್ - 19

ಯದೃಚ್ಛಯೇವ ಗಾಂ ಪ್ರಾಪ್ತೌ ದೇವಲೋಕಾದಿವಾಮರೌ ।
ಕಥಂ ಪದ್ಭ್ಯಾಮಿಹ ಪ್ರಾಪ್ತೌ ಕಿಮರ್ಥಂ ಕಸ್ಯ ವಾ ಮುನೇ ॥

ಮೂಲಮ್ - 20

ವರಾಯುಧದರೌ ವೀರೌ ಕಸ್ಯ ಪುತ್ರೌಮಹಾಮುನೇ
ಭೂಷಯಂತಾವಿಮಂ ದೇಶಂ ಚಂದ್ರಸೂರ್ಯಾವಿವಾಂಬರಮ್ ॥

ಮೂಲಮ್ - 21

ಪರಸ್ಪರಸ್ಯ ಸದೃಶೌ ಪ್ರಮಾಣೇಂಗೀತಚೇಷ್ಟಿತೈಃ ।
ಕಾಕಪಕ್ಷಧರೌ ವೀರೌ ಶ್ರೋತುಮಿಚ್ಛಾಮಿತತ್ತ್ವತಃ ॥

ಅನುವಾದ

ಮಹಾಮುನಿಗಳೇ! ನಿಮಗೆ ಮಂಗಳವಾಗಲಿ. ದೇವತೆಗಳಂತೆ ಪರಾಕ್ರಮಿ ಹಾಗೂ ಸುಂದರ ಆಯುಧಗಳನ್ನು ಧರಿಸಿದ, ಆನೆಯಂತೆ ಮಂದಗತಿಯುಳ್ಳ, ಸಿಂಹದಂತೆ ಅಪ್ರತಿಹತ ಗಮನವುಳ್ಳ, ವೃಷಭದಂತೆ ಉನ್ನತ ಹೆಗಲುಳ್ಳ ವೀರರಾದ, ಪದ್ಮಪತ್ರದಂತೆ ವಿಶಾಲ ಕಣ್ಣುಗಳುಳ್ಳ, ಖಡ್ಗವನ್ನು ಬಿಲ್ಲು ಬತ್ತಳಿಕೆಗಳನ್ನು ಧರಿಸಿರುವ, ಅಶ್ವಿನಿ ದೇವತೆಗಳಂತೆ ರೂಪಾತಿಶಯವುಳ್ಳ, ಪ್ರಾಪ್ತವಯಸ್ಕರಾದ, ದೇವಲೋಕದಿಂದ ಭೂಲೋಕಕ್ಕೆ ಸ್ವೇಚ್ಛೆಯಿಂದ ಬಂದಿರುವ ದೇವತೆಗಳಂತಿರುವ ಈ ಇಬ್ಬರು ಸುಕುಮಾರರು ಯಾರು? ಇವರು ಕಾಲ್ನಡಿಗೆಯಲ್ಲಿಯೂ, ಒಳ-ಹೊರ ವ್ಯಾಪಾರಗಳಲ್ಲಿಯೂ, ಇವರಿಬ್ಬರು ಪರಸ್ಪರವಾಗಿ ಅನುರೂಪರಾಗಿದ್ದಾರೆ. ಕಾಕಪಕ್ಷಧರರಾದ ಈ ಇಬ್ಬರು ವೀರರ ಪರಿಚಯ ಹಾಗೂ ವೃತ್ತಾಂತವನ್ನು ತಿಳಿಯುವ ಅಭಿಲಾಷೆ ನನಗಾಗಿದೆ.॥17-21॥

ಮೂಲಮ್ - 22

ತಸ್ಯ ತದ್ವಚನಂ ಶ್ರುತ್ವಾ ಜನಕಸ್ಯ ಮಹಾತ್ಮನಃ ।
ನ್ಯವೇದಯದಮೇಯಾತ್ಮಾ ಪುತ್ರೌ ದಶರಥಸ್ಯ ತೌ ॥

ಅನುವಾದ

ಮಹಾತ್ಮಾ ಜನಕನ ಈ ಪ್ರಶ್ನೆಯನ್ನು ಕೇಳಿ ಅಮಿತ ಆತ್ಮಬಲದಿಂದ ಸಂಪನ್ನ ವಿಶ್ವಾಮಿತ್ರರು ಹೇಳಿದರು - ರಾಜನೇ! ಇವರಿಬ್ಬರೂ ದಶರಥ ಮಹಾರಾಜನ ಪುತ್ರರಾಗಿದ್ದಾರೆ.॥22॥

ಮೂಲಮ್ - 23

ಸಿದ್ಧಾಶ್ರಮನಿವಾಸಂ ಚ ರಾಕ್ಷಾಸಾನಾಂ ವಧಂ ತಥಾ ।
ತತ್ರಾಗಮನಮವ್ಯಗ್ರಂ ವಿಶಾಲಾಯಾಶ್ಚ ದರ್ಶನಮ್ ॥

ಮೂಲಮ್ - 24

ಅಹಲ್ಯಾದರ್ಶನಂ ಚೈವ ಗೌತಮೇನ ಸಮಾಗಮಮ್ ।
ಮಹಾಧನುಷಿ ಜಿಜ್ಞಾಸಾಂ ಕರ್ತುಮಾಗಮನಂ ತಥಾ ॥

ಅನುವಾದ

ಅನಂತರ ಅವರಿಬ್ಬರು ಸಿದ್ಧಾಶ್ರಮದಲ್ಲಿ ವಾಸಿಸಿದುದು, ರಾಕ್ಷಸರ ವಧೆ, ಯಾವುದೇ ವ್ಯಗ್ರತೆ ಇಲ್ಲದೆ ಮಿಥಿಲೆಯವರೆಗೆ ಆಗಮನ, ವಿಶಾಲಾಪುರಿಯ ದರ್ಶನ, ಅಹಲ್ಯೆಗೆ ಆದ ಸಾಕ್ಷಾತ್ಕಾರ, ಮಹರ್ಷಿ ಗೌತಮರೊಂದಿಗೆ ಸಮಾಗಮ, ಮುಂತಾದುದನ್ನು ವಿಸ್ತಾರವಾಗಿ ವರ್ಣಿಸಿ, ಕೊನೆಗೆ ಇವರು ನಿನ್ನಲ್ಲಿ ಇಟ್ಟಿರುವ ಮಹಾಧನುಸ್ಸಿನ ಸಂಬಂಧವಾಗಿ ತಿಳಿದುಕೊಳ್ಳುವ ಇಚ್ಛೆಯಿಂದ ಇಲ್ಲಿಯವರೆಗೆ ಬಂದಿರುವರು ಎಂಬುದನ್ನು ತಿಳಿಸಿದರು.॥23-24॥

ಮೂಲಮ್ - 25

ಏತತ್ಸರ್ವಂ ಮಹಾತೇಜಾ ಜನಕಾಯ ಮಹಾತ್ಮನೇ ।
ನಿವೇದ್ಯ ವೀರರಾಮಾಥ ವಿಶ್ವಾಮಿತ್ರೋ ಮಹಾಮುನಿಃ ॥

ಅನುವಾದ

ಮಹಾತ್ಮಾ ರಾಜಾ ಜನಕನಲ್ಲಿ ಇದೆಲ್ಲ ಮಾತುಗಳನ್ನು ನಿವೇದಿಸಿ ಮಹಾತೇಜಸ್ವೀ ಮಹಾಮುನಿ ವಿಶ್ವಾಮಿತ್ರರು ಸುಮ್ಮನಾದರು.॥25॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತನೆಯ ಸರ್ಗ ಪೂರ್ಣವಾಯಿತು.॥50॥