०२७ रामायास्त्रप्रदानम्

वाचनम्
ಭಾಗಸೂಚನಾ

ವಿಶ್ವಾಮಿತ್ರರು ಶ್ರೀರಾಮನಿಗೆ ದಿವ್ಯಾಸ್ತ್ರಗಳನ್ನು ಕರುಣಿಸಿದುದು

ಮೂಲಮ್ - 1

ಅಥ ತಾಂ ರಜನೀಮುಷ್ಯ ವಿಶ್ವಾಮಿತ್ರೋ ಮಹಾಯಶಾಃ ।
ಪ್ರಹಸ್ಯ ರಾಘವಂ ವಾಕ್ಯಮುವಾಚ ಮಧುರಸ್ವರಮ್ ॥

ಅನುವಾದ

ತಾಟಕಾವನದಲ್ಲಿ ಆ ರಾತ್ರಿಯನ್ನು ಕಳೆದು ಮಹಾ ಯಶಸ್ವೀ ವಿಶ್ವಾಮಿತ್ರರು ನಗುತ್ತಾ ಶ್ರೀರಾಮಚಂದ್ರನಲ್ಲಿ ಮಧುರವಾಗಿ ಇಂತೆಂದರು.॥1॥

ಮೂಲಮ್ - 2

ಪರಿತುಷ್ಟೋಽಸ್ಮಿ ಭದ್ರಂ ತೇ ರಾಜಪುತ್ರ ಮಹಾಯಶಃ ।
ಪ್ರೀತ್ಯಾ ಪರಮಯಾ ಯುಕ್ತೋ ದದಾಮ್ಯಸ್ತ್ರಾಣಿ ಸರ್ವಶಃ ॥

ಅನುವಾದ

ಮಹಾಯಶಸ್ವೀ ರಾಜಕುಮಾರ! ನಿನಗೆ ಮಂಗಳವಾಗಲಿ. ತಾಟಕಾವಧೆಯಿಂದಾಗಿ ನಾನು ನಿನ್ನ ಮೇಲೆ ಬಹಳ ಸಂತುಷ್ಟನಾಗಿರುವೆನು. ಆದ್ದರಿಂದ ಸಂತೋಷವಾಗಿ ನಿನಗೆ ಎಲ್ಲ ಪ್ರಕಾರದ ಅಸ್ತ್ರಗಳನ್ನು ಕೊಡುತ್ತಿದೇನೆ.॥2॥

ಮೂಲಮ್ - 3

ದೇವಾಸುರಗಣಾನ್ವಾಪಿ ಸಗಂಧರ್ವೋರಗಾನ್ ಭುವಿ ।
ಯೈರಮಿತ್ರಾನ್ ಪ್ರಸಹ್ಯಾಜೌ ವಶೀಕೃತ್ಯ ಜಯಿಷ್ಯಸಿ ॥

ಅನುವಾದ

ಇವುಗಳ ಪ್ರಭಾದಿಂದ ನೀನು ನಿನ್ನ ಶತ್ರುಗಳನ್ನು ಬೇಕಾದರೆ ಅವರು ದೇವತೆಗಳು, ಅಸುರರು, ಗಂಧರ್ವರು, ನಾಗರು, ಯಾರೇ ಇರಲಿ, ರಣಭೂಮಿಯಲ್ಲಿ ಅವರನ್ನು ವಶಪಡಿಸಿಕೊಂಡು ಅವರ ಮೇಲೆ ವಿಜಯಸಾಧಿಸುವೆ.॥3॥

ಮೂಲಮ್ - 4

ತಾನಿ ದಿವ್ಯಾನಿ ಭದ್ರಂ ತೇ ದದಾಮ್ಯಸ್ತ್ರಾಣಿ ಸರ್ವಶಃ ।
ದಂಡಚಕ್ರಂ ಮಹದ್ದಿವ್ಯಂ ತವ ದಾಸ್ಯಾಮಿ ರಾಘವ ॥

ಮೂಲಮ್ - 5

ಧರ್ಮಚಕ್ರಂ ತತೋ ವೀರ ಕಾಲಚಕ್ರಂ ತಥೈವ ಚ ।
ವಿಷ್ಣುಚಕ್ರಂ ತಥಾತ್ಯುಗ್ರಮೈಂದ್ರಂ ಚಕ್ರಂ ತಥೈವ ಚ ॥

ಅನುವಾದ

ರಘುನಂದನ! ನಿನಗೆ ಮಂಗಳವಾಗಲಿ. ಇಂದು ನಾನು ನಿನಗೆ ಅವೆಲ್ಲ ಅಸ್ತ್ರಗಳನ್ನು ಕೊಡುತ್ತಾ ಇದ್ದೇನೆ. ವೀರನೇ! ನಾನು ನಿನಗೆ ದಿವ್ಯ ಹಾಗೂ ಮಹಾನ್ ದಂಡಚಕ್ರ, ಧರ್ಮಚಕ್ರ, ಕಾಲಚಕ್ರ, ವಿಷ್ಣುಚಕ್ರ, ಹಾಗೂ ಅತ್ಯಂತ ಭಯಂಕರ ಐಂದ್ರಚಕ್ರ ಕೊಡುವೆನು.॥4-5॥

ಮೂಲಮ್ - 6½

ವಜ್ರಮಸ್ತ್ರಂ ನರಶ್ರೇಷ್ಠ ಶೈವಂ ಶೂಲವರಂ ತಥಾ ।
ಅಸ್ತ್ರಂ ಬ್ರಹ್ಮಶಿರಶ್ಚೈವ ಐಷೀಕಮಪಿ ರಾಘವ ॥
ದದಾಮಿ ತೇ ಮಹಾಬಾಹೋ ಬ್ರಾಹ್ಮಮಸ್ತ್ರಮನುತ್ತಮಮ್ ।

ಅನುವಾದ

ನರಶ್ರೇಷ್ಠ ರಘುವರನೇ! ಇಂದ್ರನ ವಜ್ರಾಸ್ತ್ರ, ಶಿವನ ಶ್ರೇಷ್ಠ ತ್ರಿಶೂಲ, ಬ್ರಹ್ಮದೇವರ ಬ್ರಹ್ಮಶಿರ ಎಂಬ ಅಸ್ತ್ರವನ್ನು ಕೊಡುವೆನು. ಮಹಾಬಾಹೋ! ಜೊತೆಗೆ ಐಷೀಕಾಸ್ತ್ರ ಹಾಗೂ ಪರಮೋತ್ತಮ ಬ್ರಹ್ಮಾಸ್ತ್ರವನ್ನೂ ನಿನಗೆ ಕೊಡುವೆನು.॥6½॥

ಮೂಲಮ್ - 7

ಗದೇ ದ್ವೇ ಚೈವ ಕಾಕುತ್ಸ್ಥ ಮೋದಕೀಶಿಖರೀ ಉಭೇ ॥
ಪ್ರದೀಪ್ತೇ ನರಶಾರ್ದೂಲ ಪ್ರಯಚ್ಛಾಮಿ ನೃಪಾತ್ಮಜ ।

ಮೂಲಮ್ - 8½

ಧರ್ಮಪಾಶಮಹಂ ರಾಮ ಕಾಲಪಾಶಂ ತಥೈವ ಚ ॥
ವಾರುಣಂ ಪಾಶಮಸ್ತ್ರಂ ಚ ದದಾಮ್ಯಹಮನುತ್ತಮಮ್ ।

ಅನುವಾದ

ಕಾಕುತ್ಸ್ಥನೇ! ಇವಲ್ಲದೆ ಎರಡು ಅತ್ಯಂತ ಉಜ್ವಲ ಮತ್ತು ಸುಂದರ ಮೋದಕೀ ಹಾಗೂ ಶಿಖರಿ ಎಂಬ ಗದೆಗಳನ್ನು ನಿನಗೆ ಅರ್ಪಿಸುವೆನು. ಪುರುಷಸಿಂಹ ರಾಮಾ! ಧರ್ಮಪಾಶ, ಕಾಲಪಾಶ ಮತ್ತು ವರುಣಪಾಶ, ಇವು ಬಹಳ ಉತ್ತಮ ಅಸ್ತ್ರಗಳಾಗಿವೆ. ಅವನ್ನು ಕರುಣಿಸುವೆನು.॥7-8½॥

ಮೂಲಮ್ - 9½

ಅಶನೀ ದ್ವೇ ಪ್ರಯಚ್ಛಾಮಿ ಶುಷ್ಕಾರ್ದ್ರೇ ರಘುನಂದನ ॥
ದದಾಮಿ ಚಾಸ್ತ್ರಂ ಪೈನಾಕಮಸ್ತ್ರಂ ನಾರಾಯಣಂತಥಾ ।

ಅನುವಾದ

ರಘುನಂದನ! ಒಣಗಿದ ಮತ್ತು ಹಸಿಯಾದ ಎರಡು ರೀತಿಯ ಅಶನಿ ಹಾಗೂ ಪಿನಾಕ, ನಾರಾಯಣಾಸ್ತ್ರವನ್ನೂ ಕೊಡುತ್ತಿದ್ದೇನೆ.॥9½॥

ಮೂಲಮ್ - 10½

ಅಗ್ನೇಯಮಸ್ತ್ರಂ ದಯಿತಂ ಶಿಖರಂ ನಾಮ ನಾಮತಃ ॥
ವಾಯವ್ಯಂ ಪ್ರಥಮಂ ನಾಮ ದದಾಮಿ ತವ ಜಾನಘ ।

ಅನುವಾದ

ಅಗ್ನಿಯ ಪ್ರಿಯ ಆಗ್ನೇಯಾಸ್ತ್ರವು ಶಿಖರಾಸ್ತ್ರ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿರುವುದನ್ನು ನಿನಗೆ ಅರ್ಪಿಸುತ್ತಿದ್ದೇನೆ.॥10½॥

ಮೂಲಮ್ - 11½

ಅಸ್ತ್ರಂ ಹಯಶಿರೋ ನಾಮ ಕ್ರೌಂಚಮಸ್ತ್ರಂ ತಥೈವ ಚ ॥
ಶಕ್ತಿದ್ವಯಂ ಚ ಕಾಕುತ್ಸ್ಥ ದದಾಮಿ ತವ ರಾಘವ ।

ಅನುವಾದ

ಕಕುತ್ಸ್ಥಕುಲಭೂಷಣ ರಾಘವ! ಹಯಶಿರ ಎಂಬ ಅಸ್ತ್ರ, ಕ್ರೌಂಚಾಸ್ತ್ರ ಹಾಗೂ ಎರಡು ಶಕ್ತಿಗಳನ್ನೂ ನಿನಗೆ ಕೊಡುವೆನು.॥11½॥

ಮೂಲಮ್ - 12½

ಕಂಕಾಲಂ ಮುಸಲಂ ಘೋರಂ ಕಾಪಾಲಮಥ ಕಂಕಿಣೀಮ್ ॥
ವಧಾರ್ಥಂ ರಕ್ಷಸಾಂ ಯಾನಿ ದದಾಮ್ಯೇತಾನಿ ಸರ್ವಶಃ ।

ಅನುವಾದ

ಕಂಕಾಲ, ಘೋರ, ಮೂಸಲ, ಕಪಾಲ ಹಾಗೂ ಕಿಂಕಿಣಿ ಮೊದಲಾದ ಎಲ್ಲ ಅಸ್ತ್ರಗಳು ರಾಕ್ಷಸರ ವಧೆಯಲ್ಲಿ ಉಪಯೋಗಿ ಆಗುವುವು, ಅವನ್ನೂ ನಿನಗೆ ನೀಡುವೆ.॥12½॥

ಮೂಲಮ್ - 13½

ವೈದ್ಯಾಧರಂ ಮಹಾಸ್ತ್ರಂ ಚ ನಂದನಂ ನಾಮ ನಾಮತಃ ॥
ಅಸಿರತ್ನಂ ಮಹಾಬಾಹೋ ದದಾಮಿ ನೃವರಾತ್ಮಜ ।

ಅನುವಾದ

ಮಹಾಬಾಹು ರಾಜಕುಮಾರ! ನಂದನ ಎಂಬ ಪ್ರಸಿದ್ಧ ವಿದ್ಯಾಧರರ ಮಹಾಸ್ತ್ರ ಹಾಗೂ ಉತ್ತಮ ಖಡ್ಗವನ್ನೂ ನಿನಗೆ ಅರ್ಪಿಸುತ್ತಿದ್ದೇನೆ.॥13½॥

ಮೂಲಮ್ - 14½

ಗಾಂಧರ್ವಮಸ್ತ್ರಂ ದಯಿತಂ ಮೋಹನಂ ನಾಮ ನಾಮತಃ ॥
ಪ್ರಸ್ವಾಪನಂ ಪ್ರಶಮನಂ ದದ್ಮಿ ಸೌಮ್ಯಂ ಚ ರಾಘವ ।

ಅನುವಾದ

ರಘುನಂದನ! ಗಂಧರ್ವರ ಪ್ರಿಯ ಸಮ್ಮೋಹನ ಎಂಬ ಅಸ್ತ್ರವನ್ನೂ, ಪ್ರಸ್ವಾಪನ, ಪ್ರಶಮನ ಹಾಗೂ ಸೌಮ್ಯ ಅಸ್ತ್ರವನ್ನೂ ನೀಡುತ್ತಿದ್ದೇನೆ.॥14½॥

ಮೂಲಮ್ - 15

ವರ್ಷಣಂ ಶೋಷಣಂ ಚೈವ ಸಂತಾಪನವಿಲಾಪನೇ ॥

ಮೂಲಮ್ - 16

ಮದನಂ ಚೈವ ದುರ್ಧರ್ಷಂ ಕಂದರ್ಪದಯಿತಂ ತಥಾ ।
ಗಾಂಧರ್ವಮಸ್ತ್ರಂ ದಯಿತಂ ಮಾನವಂ ನಾಮ ನಾಮತಃ ॥

ಮೂಲಮ್ - 17

ಪೈಶಾಚಮನ್ತ್ರಂ ದಯಿತಂ ಮೋಹನಂ ನಾಮ ನಾಮತಃ ।
ಪ್ರತೀಚ್ಛ ನರಶಾರ್ದೂಲ ರಾಜಪುತ್ರ ಮಹಾಯಶಃ ॥

ಅನುವಾದ

ಮಹಾಯಶಸ್ವೀ ಪುರುಷಸಿಂಹ ರಾಜಕುಮಾರ! ವರ್ಷಣ, ಶೋಷಣ, ಸಂತಾಪನ, ವಿಲಾಪನ, ಕಾಮದೇವನ ಪ್ರಿಯ ದುರ್ಜಯ ಅಸ್ತ್ರವಾದ ವಾದನ, ಗಂಧರ್ವರ ಪ್ರಿಯ ಮಾನವಾಸ್ತ್ರ, ಪಿಶಾಚಿಗಳ ಪ್ರಿಯ ಮೋಹನಾಸ್ತ್ರವನ್ನೂ ನನ್ನಿಂದ ಸ್ವೀಕರಿಸು.॥15-17॥

ಮೂಲಮ್ - 18

ತಾಮಸಂ ನರಶಾರ್ದೂಲ ಸೌಮನಂ ಚ ಮಹಾಬಲಮ್ ।
ಸಂವರ್ತಂ ಚೈವ ದುರ್ಧರ್ಷಂ ಮೌಸಲಂ ಚ ನೃಪಾತ್ಮಜ ॥

ಮೂಲಮ್ - 19

ಸತ್ಯಮಸ್ತ್ರಂ ಮಹಾಬಾಹೋ ತಥಾ ಮಾಯಾಮಯಂ ಪರಮ್ ।
ಸೌರಂ ತೇಜಃಪ್ರಭಂ ನಾಮ ಪರತೇಜೋಽಪಕರ್ಷಣಮ್ ॥

ಅನುವಾದ

ನರಶ್ರೇಷ್ಠ ರಾಜನ ಪುತ್ರ, ಮಹಾಬಾಹು ರಾಮ! ತಾಮಸ, ಮಹಾಬಲಿ, ಸೌಮನ, ಸಂವರ್ತ, ದುರ್ಜಯ, ನೌಸಲ, ಸತ್ಯ, ಮತ್ತು ಮಾಯಾಮಯ ಉತ್ತಮ ಅಸ್ತ್ರವನ್ನು ನಿನಗೆ ಅರ್ಪಿಸುತ್ತಿದ್ದೇನೆ. ಶತ್ರುವಿನ ತೇಜವನ್ನು ನಾಶ ಮಾಡುವಂತಹ ತೇಜಃಪ್ರಭ ಎಂಬ ಅಸ್ತ್ರವನ್ನು ನಿನಗೆ ಅರ್ಪಿಸುತ್ತಿದ್ದೇನೆ.॥18-19॥

ಮೂಲಮ್ - 20

ಸೋಮಾಸ್ತ್ರಂ ಶಿಶಿರಂ ನಾಮ ತ್ವಾಷ್ಟ್ರಮಸ್ತ್ರಂ ಸುದಾರುಣಮ್ ।
ದಾರುಣಂ ಚ ಭಗಸ್ಯಾಪಿ ಶೀತೇಷುಮಥ ಮಾನವಮ್ ॥

ಅನುವಾದ

ಸೋಮದೇವತೆಯ ಶಿಶಿರ ಎಂಬ ಅಸ್ತ್ರ ತ್ವಷ್ಟಾ (ವಿಶ್ವಕರ್ಮನ ಅತ್ಯಂತ ದಾರುಣ ಅಸ್ತ್ರ, ಭಗದೇವತೆಯ ಭಯಂಕರ ಅಸ್ತ್ರ ಹಾಗೂ ಮನುವಿನ ಶೀತೇಷು ಎಂಬ ಅಸ್ತ್ರವನ್ನು ನಿನಗೆ ಕೊಡುತ್ತೇನೆ.॥20॥

ಮೂಲಮ್ - 21

ಏತಾನ್ನಾಮ ಮಹಾಬಾಹೋ ಕಾಮರೂಪಾನ್ಮಹಾಬಲಾನ್ ।
ಗೃಹಾಣ ಪರಮೋದಾರಾನ್ ಕ್ಷಿಪ್ರಮೇವ ನೃಪಾತ್ಮಜ ॥

ಅನುವಾದ

ಮಹಾಬಾಹು ರಾಜಕುಮಾರ ಶ್ರೀರಾಮ! ಇವೆಲ್ಲ ಅಸ್ತ್ರಗಳು ಇಚ್ಛಾನುಸಾರ ರೂಪವನ್ನು ಧರಿಸಬಲ್ಲವು, ಮಹಾನ್ ಬಲದಿಂದ ಸಂಪನ್ನ ಹಾಗೂ ಪರಮ ಉದಾರವಾಗಿವೆ. ನೀನು ಬೇಗನೆ ಇವನ್ನು ಸ್ವೀಕರಿಸು.॥21॥

ಮೂಲಮ್ - 22

ಸ್ಥಿತಸ್ತು ಪ್ರಾಙ್ಮುಖೋ ಭೂತ್ವಾ ಶುಚಿರ್ಮುನಿವರಸ್ತದಾ ।
ದದೌ ರಾಮಾಯ ಸುಪ್ರೀತೋ ಮಂತ್ರಗ್ರಾಮಮನುತ್ತಮಮ್ ॥

ಅನುವಾದ

ಹೀಗೆ ಹೇಳಿ ಮುನಿವರ ವಿಶ್ವಾಮಿತ್ರರು ಆಗ ಸ್ನಾನಾದಿಗಳಿಂದ ಶುದ್ಧರಾಗಿ ಪೂರ್ವಾಭಿಮುಖವಾಗಿ ಕುಳಿತು, ಅತ್ಯಂತ ಪ್ರಸನ್ನತೆಯಿಂದ ಅವರು ಶ್ರೀರಾಮಚಂದ್ರನಿಗೆ ಆ ಎಲ್ಲ ಉತ್ತಮ ಅಸ್ತ್ರಗಳನ್ನು ಉಪದೇಶಿಸಿದರು.॥22॥

(ಶ್ಲೋಕ 23)

ಮೂಲಮ್

ಸರ್ವಸಂಗ್ರಹಣಂ ಯೇಷಾಂ ದೈವತೈರಪಿ ದುರ್ಲಭಮ್ ।
ತಾನ್ಯಸ್ತ್ರಾಣಿ ತದಾ ವಿಪ್ರೋ ರಾಘವಾಯ ನ್ಯವೇದಯತ್ ॥

ಅನುವಾದ

ಪೂರ್ಣ ರೂಪದಿಂದ ಸಂಗ್ರಹಿಸಲು ದೇವತೆಗಳಿಗೂ ದುರ್ಲಭವಾದ ಎಲ್ಲ ಅಸ್ತ್ರಗಳನ್ನು ವಿಪ್ರವರ ವಿಶ್ವಾಮಿತ್ರರು ಶ್ರೀರಾಮಚಂದ್ರನಿಗೆ ಸಮರ್ಪಿಸಿದರು.॥23॥

ಮೂಲಮ್ - 24

ಜಪತಸ್ತು ಮುನೇಸ್ತಸ್ಯ ವಿಶ್ವಾಮಿತ್ರಸ್ಯ ಧೀಮತಃ ।
ಉಪತಸ್ಥುರ್ಮಹಾರ್ಹಾಣಿ ಸರ್ವಾಣ್ಯಸ್ತ್ರಾಣಿ ರಾಘವಮ್ ॥

ಮೂಲಮ್ - 25½

ಉಚುಶ್ಚ ಮುದಿತಾ ರಾಮಂ ಸರ್ವೇ ಪ್ರಾಂಜಲಯಸ್ತದಾ ।
ಇಮೇ ಚ ಪರಮೋದಾರ ಕಿಂಕರಾಸ್ತವ ರಾಘವ ॥
ಯದ್ಯದಿಚ್ಛಸಿ ಭದ್ರಂ ತೇ ತತ್ಸರ್ವಂ ಕರವಾಮ ವೈ।

ಅನುವಾದ

ವಿಶ್ವಾಮಿತ್ರರು ಅಸ್ತ್ರ ಮಂತ್ರಗಳನ್ನು ಜಪಿಸಲು ಪ್ರಾರಂಭಿಸುತ್ತಲೇ ಆ ಎಲ್ಲ ಪರಮಪೂಜ್ಯ ದಿವ್ಯಾಸ್ತ್ರಗಳು ಸ್ವತಃ ಬಂದು ಶ್ರೀರಘುನಾಥನ ಬಳಿ ಉಪಸ್ಥಿತವಾದುವು ಹಾಗೂ ಅತ್ಯಂತ ಹರ್ಷದಿಂದ ಶ್ರೀರಾಮಚಂದ್ರನಿಗೆ ಕೈಮುಗಿದು ‘ಪರಮ ಉದಾರ ರಘುನಂದನ! ನಿನಗೆ ಮಂಗಳವಾಗಲೀ. ನಾವೆಲ್ಲರೂ ನಿನಗೆ ಕಿಂಕರರಾಗಿದ್ದೇವೆ. ನೀನು ನಮ್ಮಿಂದ ಬಯಸುವ ಎಲ್ಲ ಸೇವೆಯನ್ನು ನಾವು ಮಾಡಲು ಸಿದ್ಧರಾಗಿದೇವೆ.’ ಎಂದು ಬೇಡಿಕೊಂಡರು.॥24-25½॥

ಮೂಲಮ್ - 26

ತತೋ ರಾಮಃ ಪ್ರಸನ್ನಾತ್ಮಾ ತೈರಿತ್ಯುಕ್ತೋ ಮಹಾಬಲೈಃ ॥

ಮೂಲಮ್ - 27

ಪ್ರತಿಗೃಹ್ಯ ಚ ಕಾಕುತ್ಸ್ಥಃ ಸಮಾಲಭ್ಯ ಚ ಪಾಣಿನಾ ।
ಮಾನಸಾ ಮೇ ಭವಿಷ್ಯಧ್ವಮಿತಿ ತಾನ್ಯಭ್ಯಚೋದಯತ್ ॥

ಅನುವಾದ

ಆ ಮಹಾ ಪ್ರಭಾವಶಾಲಿ ಅಸ್ತ್ರಗಳೂ ಹೀಗೆ ಹೇಳಿದಾಗ ಶ್ರೀರಾಮಚಂದ್ರನು ಸಂತೋಷಗೊಂಡು ಅವನ್ನು ಪರಿಗ್ರಹಿಸಿ, ಕೈಯಿಂದ ಅವನ್ನು ಸ್ಪರ್ಶಿಸಿ - ‘ನೀವೆಲ್ಲ ನನ್ನ ಮನಸ್ಸಿನಲ್ಲಿ ವಾಸಿಸಿರಿ’ ಎಂದು ಹೇಳಿದನು.॥26-27॥

ಮೂಲಮ್ - 28

ತತಃ ಪ್ರೀತಮನಾ ರಾಮೋ ವಿಶ್ವಾಮಿತ್ರಂ ಮಹಾಮುನಿಮ್ ।
ಅಭಿವಾದ್ಯ ಮಹಾತೇಜಾ ಗಮನಾಯೋಪಚಕ್ರಮೇ ॥

ಅನುವಾದ

ಅನಂತರ ಮಹಾತೇಜಸ್ವೀ ಶ್ರೀರಾಮನು ಪ್ರಸನ್ನಚಿತ್ತನಾಗಿ ಮಹಾಮುನಿ ವಿಶ್ವಾಮಿತ್ರರಿಗೆ ವಂದಿಸಿದನು. ಮತ್ತೆ ಅವರ ಮುಂದಿನ ಪ್ರವಾಸ ಪ್ರಾರಂಭವಾಯಿತು.॥28॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು. ॥27॥