०१७ हनुमता राक्षस्यावृतसीतादर्शनम्

वाचनम्
ಭಾಗಸೂಚನಾ

ಹನುಮಂತನು ಸೀತಾದೇವಿಯನ್ನು ನೋಡಿ ಪ್ರಸನ್ನನಾದುದು

ಮೂಲಮ್ - 1

ತತಃ ಕುಮುದಷಂಡಾಭೋ ನಿರ್ಮಲೋ ನಿರ್ಮಲಂ ಸ್ವಯಮ್ ।
ಪ್ರಜಗಾಮ ನಭಶ್ಚಂದ್ರೋ ಹಂಸೋ ನೀಲಮಿವೋದಕಮ್ ॥

ಅನುವಾದ

ಆಗ ನಿರ್ಮಲವರ್ಣದ ಸರೊವರವನ್ನು ಹಂಸವು ಪ್ರವೇಶಿಸುವಂತೆ ಕನ್ನೆದಿಲೆಗಳ ಕಾಂತಿಯಂತೆ ಕಾಂತಿಯುಕ್ತನಾದ ನಿರ್ಮಲನಾದ ಚಂದ್ರನು ನಿರ್ಮಲವೂ, ನೀಲವೂ ಆದ ಪಶ್ಚಿಮಾಕಾಶಾದಲ್ಲಿ ಪ್ರವೇಶಿಸಿದನು.॥1॥

ಮೂಲಮ್ - 2

ಸಾಚಿವ್ಯಮಿವ ಕುರ್ವನ್ ಸ ಪ್ರಭಯಾ ನಿರ್ಮಲಪ್ರಭಃ ।
ಚಂದ್ರಮಾ ರಶ್ಮಿಭಿಃ ಶೀತೈಃ ಸಿಷೇವೇ ಪವನಾತ್ಮಜಮ್ ॥

ಅನುವಾದ

ನಿರ್ಮಲವಾದ ಪ್ರಭೆಯಿಂದ ಕೂಡಿದ್ದ ಚಂದ್ರನು ತನ್ನ ಪ್ರಭೆಯಿಂದ ಸಹಾಯವೆಸಗುತ್ತಿರುವನೋ ಎಂಬಂತೆ ಶೀತಲವಾದ ಕಿರಣಗಳಿಂದ ಹನುಮಂತನನ್ನು ಸೇವಿಸುತ್ತಿದ್ದನು.॥2॥

ಮೂಲಮ್ - 3

ಸ ದದರ್ಶ ತತಃ ಸೀತಾಂ ಪೂರ್ಣಚಂದ್ರನಿಭಾನನಾಮ್ ।
ಶೋಕಭಾರೈರಿವ ನ್ಯಸ್ತಾಂ ಭಾರೈರ್ನಾವಮಿವಾಂಭಸಿ ॥

ಅನುವಾದ

ಹೆಚ್ಚು ಭಾರದಿಂದ ನೀರಿನಲ್ಲಿ ಮುಳುಗಿ ಹೋಗುತ್ತಿರುವ ನಾವೆಯಂತೆ ಶೋಕಭಾರದಿಂದ ಕುಗ್ಗಿಹೋಗಿದ್ದ ಚಂದ್ರಮುಖಿಯಾದ ಸೀತಾದೇವಿಯನ್ನು ಹನುಮಂತನು ನೋಡಿದನು.॥3॥

ಮೂಲಮ್ - 4

ದಿದೃಕ್ಷಮಾಣೋ ವೈದೇಹೀಂ ಹನುಮಾನ್ ಪವನಾತ್ಮಜಃ ।
ಸ ದದರ್ಶಾವಿದೂರಸ್ಥಾ ರಾಕ್ಷಸೀರ್ಘೋರದರ್ಶನಾಃ ॥

ಅನುವಾದ

ವೈದೇಹಿಯನ್ನು ನೋಡಲು ಬಯಸಿದ್ದ ವಾಯುಪುತ್ರನಾದ ಹನುಮಂತನು ಅವಳ ಸಮೀಪದಲ್ಲಿಯೇ ಇದ್ದ ಭಯಂಕರವಾಗಿ ಕಾಣುತ್ತಿದ್ದ ರಾಕ್ಷಸಿಯರನ್ನು ನೋಡಿದನು.॥4॥

ಮೂಲಮ್ - 5

ಏಕಾಕ್ಷೀಮೇಕಕರ್ಣಾಂ ಚ ಕರ್ಣಪ್ರಾವರಣಾಂ ತಥಾ ।
ಅಕರ್ಣಾಂ ಶಂಕುಕರ್ಣಾಂ ಚ ಮಸ್ತಕೋಚ್ಛ್ವಾಸನಾಸಿಕಾಮ್ ॥

ಮೂಲಮ್ - 6

ಅತಿಕಾಯೋತ್ತಮಾಂಗೀಂ ಚ ತನುದೀರ್ಘಶಿರೋಧರಾಮ್ ।
ಧ್ವಸ್ತ ಕೇಶೀಂ ತಥಾಕೇಶೀಂ ಕೇಶಕಂಬಲಧಾರಿಣೀಮ್ ॥

ಮೂಲಮ್ - 7

ಲಂಬಕರ್ಣಲಲಾಟಾಂ ಚ ಲಂಬೋದರ ಪಯೋಧರಾಮ್ ।
ಲಂಬೋಷ್ಠೀಂ ಚುಬುಕೋಷ್ಠೀಂ ಚ ಲಂಬಾಸ್ಯಾಂ ಲಂಬಜಾನುಕಾಮ್ ॥

ಮೂಲಮ್ - 8

ಹ್ರಸ್ವಾಂ ದೀರ್ಘಾಂ ತಥಾ ಕುಬ್ಜಾಂ ವಿಕಟಾಂ ವಾಮನಾಂ ತಥಾ ।
ಕರಾಲಾಂ ಭುಗ್ನವಕ್ತ್ರಾಂ ಚ ಪಿಂಗಾಕ್ಷೀಂ ವಿಕೃತಾನನಾಮ್ ॥

ಮೂಲಮ್ - 9

ವಿಕೃತಾಃ ಪಿಂಗಲಾಃ ಕಾಲೀಃ ಕ್ರೋಧನಾಃ ಕಲಹಪ್ರಿಯಾಃ ।
ಕಾಲಾಯಸಮಹಾಶೂಲಕೂಟಮುದ್ಗರಧಾರಿಣೀಃ ॥

ಮೂಲಮ್ - 10

ವರಾಹಮೃಗಶಾರ್ದೂಲಮಹಿಷಾಜಶಿವಾಮುಖೀಃ ।
ಗಜೋಷ್ಟ್ರಹಯಪಾದೀಶ್ಚ ನಿಖಾತಶಿರಸೋಪರಾಃ ॥

ಮೂಲಮ್ - 11

ಏಕಹಸ್ತೈಕಪಾದಾಶ್ಚ ಖರಕರ್ಣ್ಯಶ್ವಕರ್ಣಿಕಾಃ ।
ಗೋಕರ್ಣೀರ್ಹಸ್ತಿಕರ್ಣೀಶ್ಚ ಹರಿಕರ್ಣೀಸ್ತಥಾ ಪರಾಃ ॥

ಮೂಲಮ್ - 12

ಅನಾಸಾ ಅತಿನಾಸಾಶ್ಚ ತಿರ್ಯಙ್ನಾಸಾ ವಿನಾಸಿಕಾಃ ।
ಗಜಸಂನಿಭನಾಸಾಶ್ಚ ಲಲಾಟೋಚ್ಛ್ವಾಸನಾಸಿಕಾಃ ॥

ಮೂಲಮ್ - 13

ಹಸ್ತಿಪಾದಾ ಮಹಾಪಾದಾ ಗೋಪಾದಾಃ ಪಾದಚೂಲಿಕಾಃ ।
ಅತಿಮಾತ್ರಶಿರೋಗ್ರೀವಾ ಅತಿಮಾತ್ರಕುಚೋದರೀಃ ॥

ಮೂಲಮ್ - 14

ಅತಿಮಾತ್ರಾಸ್ಯನೇತ್ರಾಶ್ಚ ದೀರ್ಘಜಿಹ್ವಾನಖಾಸ್ತಥಾ ।
ಅಜಾಮುಖೀರ್ಹಸ್ತಿಮುಖೀರ್ಗೋಮುಖೀಃ ಸೂಕರೀಮುಖೀಃ ॥

ಮೂಲಮ್ - 15

ಹಯೋಷ್ಟ್ರಖರವಕಾಶ್ಚ ರಾಕ್ಷಸೀರ್ಘೋರದರ್ಶನಾಃ ।
ಶೂಲಮುದ್ಗರಹಸ್ತಾಶ್ಚ ಕ್ರೋಧನಾಃ ಕಲಹಪ್ರಿಯಾಃ ॥

ಮೂಲಮ್ - 16

ಕರಾಲಾ ಧೂಮ್ರಕೇಶೀಶ್ಚ ರಾಕ್ಷಸೀರ್ವಿಕೃತಾನನಾಃ ।
ಪಿಬಂತೀಃ ಸತತಂ ಪಾನಂ ಸದಾ ಮಾಂಸಸುರಾಪ್ರಿಯಾಃ ॥

ಮೂಲಮ್ - 17

ಮಾಂಸಶೋಣಿತದಿಗ್ಧಾಂಗೀರ್ಮಾಂಸಶೋಣಿತಭೋಜನಾಃ ।
ತಾ ದದರ್ಶ ಕಪಿಶ್ರೇಷ್ಠೋ ರೋಮಹರ್ಷಣದರ್ಶನಾಃ ॥

ಅನುವಾದ

ಆ ರಾಕ್ಷಸಿಯರ ದೇಹರಚನೆಯೇ ಬಹಳ ವಿಚಿತ್ರವಾಗಿತ್ತು. ಅವರಲ್ಲಿ ಕೆಲವು ರಾಕ್ಷಸಿಯರಿಗೆ ಒಂದೇ ಕಣ್ಣು ಒಂದೇ ಕಿವಿಗಳಿದ್ದವು. ಕೆಲವರಿಗೆ ತಲೆಗಳನ್ನೇ ಮುಚ್ಚಿಕೊಂಡಿರುವಂತಹ ವಿಶಾಲವಾದ ಕಿವಿಗಳಿದ್ದವು. ಕೆಲವರಿಗೆ ಮೂಗುಗಳು ಮೇಲ್ಮುಖವಾಗಿದ್ದವು. ಕೆಲವು ರಾಕ್ಷಸಿಯರಿಗೆ ಅತಿದಪ್ಪವಾದ ತಲೆಗಳಿದ್ದವು. ಕೆಲವರಿಗೆ ತೆಳ್ಳಗಾಗಿಯೂ ಮತ್ತು ಉದ್ದವಾಗಿಯೂ ಕುತ್ತಿಗೆಗಳಿದ್ದವು. ಕೆಲವರಿಗೆ ತಲೆಗಳಲ್ಲಿ ಸ್ವಲ್ಪ ಕೂದಲುಗಳಿದ್ದು, ಕೆಲವರಿಗೆ ಕೂದಲೇ ಇರಲಿಲ್ಲ. ಕೆಲವರಿಗೆ ಉಣ್ಣೆಯಂತೆ ಕೂದಲಿದ್ದವು. ಕೆಲವರಿಗೆ ಜೋಲಾಡುತ್ತಿರುವ ಕಿವಿಗಳು ಮತ್ತು ಹಣೆಗಳಿದ್ದವು. ಕೆಲವರಿಗೆ ಜೋತುಬಿದ್ದಿರುವ ಹೊಟ್ಟೆಗಳೂ, ಸ್ತನಗಳೂ ಇದ್ದವು. ಕೆಲವರ ತುಟಿಗಳು ಜೋತುಬಿದ್ದಿದ್ದವು. ಕೆಲವರಿಗೆ ಗಲ್ಲದಲ್ಲೇ ಸೇರಿಹೋದ ತುಟಿಗಳಿದ್ದವು. ಕೆಲವರ ಮುಖಗಳು ಜೋತುಬಿದ್ದಿದ್ದುವು. ಕೆಲವರಿಗೆ ದೀರ್ಘವಾದ ಮಂಡಿಗಳಿದ್ದವು. ಕೆಲವರಿಗೆ ಸೊಂಟದ ಮೇಲು ಭಾಗವೂ ಗಿಡ್ಡಾಗಿಯೂ ಕೆಳಭಾಗವು ಉದ್ದವಾಗಿಯೂ ಇತ್ತು. ಅಲ್ಲಿ ಕೆಲವು ಗೂನುಬೆನ್ನಿನ ರಾಕ್ಷಸಿಯರಿದ್ದರು. ಸ್ಥೂಲವಾದ ಮೊಣಕಾಲುಗಳುಳ್ಳವರಿದ್ದರು. ಕುಳ್ಳಿಯರಿದ್ದರು. ಉಬ್ಬಿದ ಹಲ್ಲುಗಳುಳ್ಳವರಿದ್ದರು. ತಗ್ಗಾದ ಮುಖಗಳುಳ್ಳರಿದ್ದರು. ಕಂದು-ಹಳದಿ ಬಣ್ಣದ ಕಣ್ಣುಗಳುಳ್ಳವರಿದ್ದರು. ಕೆಲವರ ಮುಖಗಳು ವಿಕಾರವಾಗಿದ್ದವು. ಆಕಾರವೂ ವಿಕಾರವಾಗಿದ್ದಿತು. ಅಲ್ಲಿ ಪಿಂಗಲ ವರ್ಣದ, ಕೃಷ್ಣ ವರ್ಣದ ರಾಕ್ಷಸಿಯರಿದ್ದರು. ಕೋಪಿಷ್ಠೆಯರಾದ ರಾಕ್ಷಸಿಯರಿದ್ದರು. ಜಗಳಗಂಟಿಯರಿದ್ದರು. ಅವರಲ್ಲಿ ಕೆಲವರು ಕಾಲದಂಡಗಳನ್ನು, ಕೆಲವರು ಕಬ್ಬಿಣದ ಆಯುಧಗಳನ್ನು, ಕೆಲವರು ಶೂಲಾಯುಧಗಳನ್ನು, ಕೆಲವರು ಪಾಶ-ಮುದ್ಗರಗಳನ್ನು ಹಿಡಿದಿದ್ದರು. ಅವರಲ್ಲಿ ಕೆಲವರಿಗೆ ಹಂದಿ, ಸಿಂಹ, ಎಮ್ಮೆ, ಆಡು, ಗುಳ್ಳೆನರಿ, ಇವೇ ಮುಂತಾದ ಪ್ರಾಣಿಗಳ ಮುಖಗಳಿದ್ದವು. ಆನೆ, ಒಂಟೆ, ಕುದುರೆಗಳ ಕಾಲುಗಳಂತಹ ಕಾಲುಗಳನ್ನು ಕೆಲವರು ಹೊಂದಿದ್ದರು. ಕೆಲವು ರಾಕ್ಷಸಿಯರ ಕಿವಿಗಳು ಕತ್ತೆ, ಕುದುರೆ, ಹಸು, ಆನೆ, ಕಪಿ, ಇವುಗಳ ಕಿವಿಗಳಂತಿದ್ದವು. ಕೆಲವು ರಾಕ್ಷಸಿಯರಿಗೆ ನೀಳವಾದ ಮೂಗುಗಳಿದ್ದವು. ಕೆಲವರಿಗೆ ಅಡ್ಡವಾದ ಮೂಗುಗಳಿದ್ದವು. ಕೆಲವರಿಗೆ ಮೂಗೇ ಇರಲಿಲ್ಲ. ಕೆಲವರಿಗೆ ಆನೆಯ ಮೂಗು, ಕೆಲವರಿಗೆ ಹಣೆಯಲ್ಲಿ ಮೂಗಿದ್ದಿತು. ಕೆಲವು ರಾಕ್ಷಸಿಯರಿಗೆ ಆನೆಯಂತೆ ಕಾಲುಗಳಿದ್ದವು. ಕೆಲವರಿಗೆ ದೊಡ್ಡದಾದ ಹೆಜ್ಜೆಗಳಿದ್ದವು. ಕೆಲವರಿಗೆ ಹಸುವಿನಂತೆ ಪಾದಗಳಿದ್ದವು. ಕೆಲವರಿಗೆ ಕಾಲಿನಲ್ಲಿ ಶಿಖಾರೂಪವಾದ ಕೂದಲುಗಳಿದ್ದವು. ಕೆಲವರಿಗೆ ಅಳತೆಗೆ ಮೀರಿದ ತಲೆ-ಕುತ್ತಿಗೆಗಳಿದ್ದವು. ಕೆಲವರಿಗೆ ಮಿತಿಮೀರಿದ ಸ್ತನಗಳೂ, ಹೊಟ್ಟೆಗಳೂ, ಮುಖ, ನಾಸಿಕಗಳಿದ್ದವು. ಕೆಲವರಿಗೆ ಉದ್ದವಾದ ನಾಲಿಗೆಗಳು, ನೀಳವಾದ ಮುಖಗಳಿದ್ದವು. ಕೆಲವರು ಆಡು, ಆನೆ, ಹಸು, ಹಂದಿ, ಕುದುರೆ, ಒಂಟೆ, ಕತ್ತೆ, ಇವೇ ಮುಂತಾದ ಪ್ರಾಣಿಗಳ ಮುಖಗಳನ್ನು ಹೊಂದಿದ್ದರು. ಕೆಲವರು ಶೂಲ-ಮುದ್ಗರಗಳನ್ನು ಹಿಡಿದಿದ್ದರು. ಕೆಲವರು ಮಹಾ ಕೋಪಿಷ್ಠೆಯರಾಗಿದ್ದರು. ಜಗಳಗಂಟಿಗಳಾಗಿದ್ದರು. ಕೆಲವರು ಕರಾಲವಾದ ಮತ್ತು ಧೂಮ್ರ ವರ್ಣದ ಕೇಶವುಳ್ಳವರಾಗಿದ್ದರು. ಅವರೆಲ್ಲರೂ ಸದಾ ಮಧುಪಾನ ಮಾಡುತ್ತಿದ್ದರು. ಅವರಿಗೆ ಮಾಂಸವನ್ನು ತಿನ್ನುವುದರಲ್ಲಿ, ಸುರಾಪಾನದಲ್ಲಿ ವಿಶೇಷವಾದ ಆಸಕ್ತಿಯಿದ್ದಿತು. ಈ ಕಾರಣದಿಂದ ಅವರ ಶರೀರಗಳು ರಕ್ತ-ಮಾಂಸಗಳಿಂದ ನೆನೆದುಹೋಗಿದ್ದವು. ಅವರು ವಿಕಾರವಾದ ಮುಖಗಳನ್ನು ಹೊಂದಿ ಭಯಂಕರವಾಗಿ ಕಾಣುತ್ತಿದ್ದರು. ನೋಡುವವರಿಗೆ ರೊಮಾಂಚನವನ್ನುಂಟುಮಾಡುತ್ತಿದ್ದರು. ಅಂತಹ ಅನೇಕ ರಾಕ್ಷಸಿಯರು ಶಿಂಶುಪಾ ವೃಕ್ಷವನ್ನು ಸುತ್ತುವರಿದು ಕುಳಿತಿರುವುದನ್ನು ಕಪಿಶ್ರೇಷ್ಠನಾದ ಹನುಮಂತನು ನೋಡಿದನು.॥5-17॥

ಮೂಲಮ್ - 18

ಸ್ಕಂದವಂತಮುಪಾಸೀನಾಃ ಪರಿವಾರ್ಯ ವನಸ್ಪತಿಮ್ ।
ತಸ್ಯಾಧಸ್ತಾಚ್ಚ ತಾಂ ದೇವೀಂ ರಾಜಪುತ್ರೀಮನಿಂದಿತಾಮ್ ॥

ಅನುವಾದ

ಆ ರಾಕ್ಷಸಸ್ತ್ರೀಯರು ದೊಡ್ಡರೆಂಬೆಗಳುಳ್ಳ ವೃಕ್ಷದ ಸುತ್ತಲೂ ಕುಳಿತುಕೊಂಡಿದ್ದರು. ಆ ಮರದ ಕೆಳಗೆ ಕುಳಿತಿರುವ ಪೂಜ್ಯಳಾದ ಜನಕರಾಜನ ಸುತೆಯಾದ ಜಾನಕಿಯನ್ನು ಹನುಮಂತನು ನೋಡಿದನು.॥18॥

ಮೂಲಮ್ - 19

ಲಕ್ಷಯಾಮಾಸ ಲಕ್ಷ್ಮೀವಾನ್ ಹನುಮಾನ್ ಜನಕಾತ್ಮಜಾಮ್ ।
ನಿಷ್ಪ್ರಭಾಂ ಶೋಕಸಂತಪ್ತಾಂ ಮಲಸಂಕುಲಮೂರ್ಧಜಾಮ್ ॥

ಅನುವಾದ

ಆ ಜಾನಕಿಯನ್ನು ದರ್ಶಿಸಿದ ಮಾರುತಿಯು ಮಹದಾನಂದಭರಿತನಾಗಿ ದಿವ್ಯತೇಜದಿಂದ ವಿರಾಜಮಾನನಾದನು. ಶೋಕಸಂತಪ್ತಳಾದ ಆಕೆಯು ಕಾಂತಿಹೀನಳಾಗಿದ್ದು, ಮಲಿನವಾದ ತಲೆಗೂದಲುಗಳಿಂದ ಕೂಡಿದ್ದಳು.॥19॥

ಮೂಲಮ್ - 20

ಕ್ಷೀಣಪುಣ್ಯಾಂ ಚ್ಯುತಾಂ ಭೂಮೌ ತಾರಾಂ ನಿಪತಿತಾಮಿವ ।
ಚಾರಿತ್ರ್ಯವ್ಯಪದೇಶಾಢ್ಯಾಂ ಭರ್ತೃದರ್ಶನದುರ್ಗತಾಮ್ ॥

ಅನುವಾದ

ಆ ಸಮಯದಲ್ಲಿ ಸೀತಾದೇವಿಯು-ಪುಣ್ಯ ಕ್ಷೀಣಿಸಿದಾಗ ಧರೆಗೆ ಉರುಳಿದ ನಕ್ಷತ್ರದಂತೆ ಕಾಣುತ್ತಿದ್ದಳು. ಪತಿವ್ರತಾ ಧರ್ಮವನ್ನು ಪಾಲಿಸುತ್ತಿರುವ ಉತ್ತಮ ಶೀಲಸಂಪನ್ನೆಯಾಗಿದ್ದರೂ ಪತಿದರ್ಶನ ಭಾಗ್ಯವಿಲ್ಲದೇ ಆಕೆಯು ಬಹಳವಾಗಿ ಕಂಗೆಟ್ಟಿದ್ದಳು.॥20॥

ಮೂಲಮ್ - 21

ಭೂಷಣೈರುತ್ತಮೈರ್ಹೀನಾಂ ಭರ್ತೃವಾತ್ಸಲ್ಯಭೂಷಣಾಮ್ ।
ರಾಕ್ಷಸಾಧಿಪಸಂರುದ್ಧಾಂ ಬಂಧುಭಿಶ್ಚ ವಿನಾಕೃತಾಮ್ ॥

ಅನುವಾದ

ಅವಳು ಉತ್ತಮವಾದ ಆಭರಣಗಳನ್ನು ತೊಟ್ಟಿರಲಿಲ್ಲ. ಆದರೂ ಪತಿಪ್ರೇಮವೆಂಬ ಆಭರಣದಿಂದ ಅಲಂಕೃತಳಾಗಿದ್ದಳು. ರಾಕ್ಷಸಾಧಿಪನಾದ ರಾವಣನು ಅವಳನ್ನಿಲ್ಲಿ ಬಂಧಿಸಿಟ್ಟಿದ್ದನು. ಅಲ್ಲಿ ಅವಳಿಗೆ ಬಂಧುಗಳು ಯಾರು ಸನಿಹದಲ್ಲಿ ಇರಲಿಲ್ಲ.॥21॥

ಮೂಲಮ್ - 22

ವಿಯೂಥಾಂ ಸಿಂಹಸಂರುದ್ಧಾಂ ಬದ್ಧಾಂ ಗಜವಧೂಮಿವ ।
ಚಂದ್ರರೇಖಾಂ ಪಯೋದಾಂತೇ ಶಾರದಾಭ್ರೈರಿವಾವೃತಾಮ್ ॥

ಅನುವಾದ

ಆನೆಗಳ ಸಮೂಹದಿಂದ ಬೇರ್ಪಟ್ಟು ಸಿಂಹದಿಂದ ತಡೆಯಲ್ಪಟ್ಟ ಹೆಣ್ಣಾನೆಯಂತೆ ಭಯಭೀತಳಾಗಿದ್ದಳು. ಶರತ್ಕಾಲದಲ್ಲಿ ಮೋಡಗಳಿಂದ ಆವೃತನಾದ ಬಿದಿಗೆಯ ಚಂದ್ರರೇಖೆಯಂತೆ ಕಾಣುತ್ತಿದ್ದಳು.॥22॥

ಮೂಲಮ್ - 23

ಕ್ಲಿಷ್ಟರೂಪಾಮಸಂಸ್ಪರ್ಶಾದಯುಕ್ತಾಮಿವ ವಲ್ಲಕೀಮ್ ।
ಸೀತಾಂ ಭರ್ತೃವಶೇ ಯುಕ್ತಾಮಯುಕ್ತಾಂ ರಾಕ್ಷಸೀವಶೇ ॥

ಅನುವಾದ

ಅಭ್ಯಂಜನಾದಿ ಸಂಸ್ಕಾರಗಳಿಲ್ಲದೆ ಅವಳ ಶರೀರವು ಮಲಿನವಾಗಿದ್ದಿತು. ಅವಳು ವಾದಕನಿಲ್ಲದ ವೀಣೆಯಂತಿದ್ದಳು. ಪತಿಯಾದ ಶ್ರೀರಾಮನ ವಶದಲ್ಲಿರಬೇಕಾದ ಸೀತೆಯು ಇಂದು ರಾಕ್ಷಸಿಯರ ಮಧ್ಯದಲ್ಲಿರುವುದು ಯೋಗ್ಯವಾಗಿ ಕಾಣುವುದಿಲ್ಲ. ॥23॥

ಮೂಲಮ್ - 24

ಅಶೋಕವನಿಕಾಮಧ್ಯೇ ಶೋಕಸಾಗರಮಾಪ್ಲುತಾಮ್ ।
ತಾಭಿಃ ಪರಿವೃತಾಂ ತತ್ರ ಸಗ್ರಹಾಮಿವ ರೋಹಿಣೀಮ್ ॥

ಅನುವಾದ

ಅಶೋಕವನದ ಮಧ್ಯದಲ್ಲಿದ್ದರೂ ಇವಳು ಶೋಕಸಾಗರದಲ್ಲಿ ಮುಳುಗಿದ್ದಾಳೆ. ಕ್ರೂರ ಗ್ರಹಗಳಿಂದ ಪೀಡಿತವಾದ ರೋಹಿಣೀ ನಕ್ಷತ್ರದಂತೆ ಕ್ರೂರ ರಾಕ್ಷಸಿಯರಿಂದ ಪರಿವೃತಳಾಗಿದ್ದಾಳೆ.॥24॥

ಮೂಲಮ್ - 25

ದದರ್ಶ ಹನುಮಾನ್ ದೇವೀಂ ಲತಾಮಕುಸುಮಾಮಿವ ।
ಸಾ ಮಲೇನ ಚ ದಿಗ್ಧಾಂಗೀ ವಪುಷಾ ಚಾಪ್ಯಲಂಕೃತಾ ॥

ಅನುವಾದ

ಅವಳು ಕುಸುಮಗಳಿಲ್ಲದ ಲತೆಯಂತೆ ನಿಸ್ತೇಜವಾಗಿದ್ದಳು. ಅಂಗಾಂಗಳು ಧೂಳಿನಿಂದ ಆವರಿಸಲ್ಪಟ್ಟಿದ್ದವು. ಅಲಂಕಾರಗಳಿಲ್ಲದಿದ್ದರೂ ಶರೀರದಿಂದ ದಿವ್ಯಕಾಂತಿಯು ಹೊರಸೂಸುತ್ತಿದ್ದಿತು. ಕೆಸರಿನಿಂದ ಬಳಿಯಲ್ಪಟ್ಟ ಕಮಲದ ಬಳ್ಳಿಯಂತೆ ಅಪ್ರಕಾಶಳಾಗಿಯೂ ಇದ್ದ ಸೀತಾದೇವಿಯನ್ನು ಹನುಮಂತನು ನೋಡಿದನು.॥25॥

ಮೂಲಮ್ - 26

ಮೃಣಾಲೀ ಪಂಕದಿಗ್ಧೇವ ವಿಭಾತಿ ನ ವಿಭಾತಿ ಚ ।
ಮಲಿನೇನ ಚ ವಸ್ತ್ರೇಣ ಪರಿಕ್ಲಿಷ್ಟೇನ ಭಾಮಿನೀಮ್ ॥

ಮೂಲಮ್ - 27

ಸಂವೃತಾಂ ಮೃಗಶಾವಾಕ್ಷೀಂ ದದರ್ಶ ಹನುಮಾನ್ ಕಪಿಃ ।
ತಾಂ ದೇವೀಂ ದೀನವದನಾಮದೀನಾಂ ಭರ್ತೃತೇಜಸಾ ॥

ಮೂಲಮ್ - 28

ರಕ್ಷಿತಾಂ ಸ್ವೇನ ಶೀಲೇನ ಸೀತಾಮಸಿತಲೋಚನಾಮ್ ।
ತಾಂ ದೃಷ್ಟ್ವಾ ಹನುಮಾನ್ ಸೀತಾಂ ಮೃಗಶಾವನಿಭೇಕ್ಷಣಾಮ್ ॥

ಅನುವಾದ

ಹೆಚ್ಚು ದಿನಗಳು ಉಪಯೋಗಿಸಿದ್ದ ಕಾರಣ ಉಟ್ಟಿದ್ದ ವಸನವು ಮಲಿನವಾಗಿತ್ತು. ಜಿಂಕೆಯ ಮರಿಯ ಕಣ್ಣುಗಳಂತೆ ಚಂಚಲವಾದ ಕಣ್ಣುಗಳಿಂದ ಶೋಭಿಸುತ್ತಿದ್ದ ಜಾನಕಿಯನ್ನು ವಾನರೋತ್ತಮನು ನೋಡಿದನು. ಒಮ್ಮೆ ಅವಳ ಮುಖದಲ್ಲಿ ದೈನ್ಯಭಾವವು ಮೂಡಿದರೆ, ಮತ್ತೊಮ್ಮೆ ಶ್ರೀರಾಮನ ತೇಜಸ್ಸನ್ನು ಸ್ಮರಿಸಿ ದೊಡನೆಯೇ ಆ ದೈನ್ಯಭಾವವು ಅಳಿಸಿಹೋಗುತ್ತಿತ್ತು. ಶೀಲವನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಕೊಳ್ಳುತ್ತಿದ್ದ, ಕಪ್ಪಾದ ಕಣ್ಣುಗಳುಳ್ಳ ಜಾನಕಿಯು ಜಿಂಕೆಯ ಕಣ್ಣುಗಳಂತೆ ಚಂಚಲವಾದ ಕಣ್ಣುಗಳಿಂದ ಭಯಗೊಂಡ ಹುಲ್ಲೆಯಂತೆ ಅತ್ತಲಿತ್ತ ನೋಡುತ್ತಿದ್ದಳು.॥26-28॥

ಮೂಲಮ್ - 29

ಮೃಗಕನ್ಯಾಮಿವ ತ್ರಸ್ತಾಂ ವೀಕ್ಷಮಾಣಾಂ ಸಮಂತತಃ ।
ದಹಂತೀಮಿವ ನಿಃಶ್ವಾಸೈರ್ವೃಕ್ಷಾನ್ ಪಲ್ಲವಧಾರಿಣಃ ॥

ಅನುವಾದ

ಚಿಗುರೊಡೆದ ವೃಕ್ಷಗಳನ್ನು ತನ್ನ ಬಿಸಿ-ಬಿಸಿಯಾದ ನಿಟ್ಟುಸಿರಿನಿಂದ ಸುಟ್ಟುಬಿಡುವಳೋ ಎಂಬಂತೆ ಕಾಣುತ್ತಿದ್ದಳು. ಅವಳು ಶೋಕ ಸಮೂಹವೇ ಮೂರ್ತಿಮತ್ತಾಗಿ ಬಂದಿರುವುದೋ ಎಂಬಂತೆ ಕಾಣುತ್ತಿದ್ದಳು.॥29॥

ಮೂಲಮ್ - 30

ಸಂಘಾತಮಿವ ಶೋಕಾನಾಂ ದುಃಖಸ್ಯೋರ್ಮಿಮಿವೋತ್ಥಿತಾಮ್ ।
ತಾಂ ಕ್ಷಮಾಂ ಸುವಿಭಕ್ತಾಂಗೀಂ ವಿನಾಭರಣಶೋಭಿನೀಮ್ ।ಪ್ರಹರ್ಷಮತುಲಂ ಲೇಭೇ ಮಾರುತಿಃ ಪ್ರೇಕ್ಷ್ಯ ಮೈಥಿಲೀಮ್ ॥

ಅನುವಾದ

ದುಃಖವೆಂಬ ಸಾಗರದಲ್ಲಿ ಮೇಲುಕ್ಕಿಬರುವ ಅಲೆಯೋಪಾದಿಯಲ್ಲಿ ಕಾಣುತ್ತಿದ್ದಳು. ಚೆನ್ನಾದ ಅವಯವ ಸೌಷ್ಠವತೆಯಿಂದ ಆಭರಣಗಳಿಲ್ಲದಿದ್ದರೂ ಶೋಭಿಸುತ್ತಿರುವ ಕ್ಷಮಾಮೂರ್ತಿಯಾದ ಆ ಸೀತಾಮಾತೆಯನ್ನು ನೋಡಿ ಮಾರುತಿಯು ಹೆಚ್ಚಿನ ಆನಂದತುಂದಿಲನಾದನು.॥30॥

ಮೂಲಮ್ - 31

ಹರ್ಷಜಾನಿ ಚ ಸೋಶ್ರೂಣಿ ತಾಂ ದೃಷ್ಟ್ವಾ ಮದಿರೇಕ್ಷಣಾಮ್ ।
ಮುಮೋಚ ಹನುಮಾಂಸ್ತತ್ರ ನಮಶ್ಚಕ್ರೇ ಚ ರಾಘವಮ್ ॥

ಮೂಲಮ್ - 32

ನಮಸ್ಕೃತ್ವಾ ಚ ರಾಮಾಯ ಲಕ್ಷ್ಮಣಾಯ ಚ ವೀರ್ಯವಾನ್ ।
ಸೀತಾದರ್ಶನಸಂಹೃಷ್ಟೋ ಹನುಮಾನ್ ಸಂವೃತೋಭವತ್ ॥

ಅನುವಾದ

ಅಂದವಾದ ಕಣ್ಣುಗಳುಳ್ಳ ಆ ಸೀತಾದೇವಿಯನ್ನು ನೋಡಿದಾಗಲೇ ಹನುಮಂತನ ನೇತ್ರಗಳಿಂದ ಆನಂದಾಶ್ರುಗಳು ಹರಿದವು. ಬಳಿಕ ಮಹಾಪರಾಕ್ರಮಿಯಾದ ಆಂಜನೇಯನು ಮನಸ್ಸಿನಲ್ಲೇ ರಾಘವನಿಗೂ, ಲಕ್ಷ್ಮಣನಿಗೂ ನಮಸ್ಕರಿಸಿ ಸೀತಾದರ್ಶನದಿಂದ ಸಂಹೃಷ್ಟನಾಗಿ ಆ ಶಿಂಶುಪಾ ವೃಕ್ಷದಲ್ಲೇ ಉಡುಗಿದನು.॥31-32॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತದಶಃ ಸರ್ಗಃ ॥ 17 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹದಿನೇಳನೆಯ ಸರ್ಗವು ಮುಗಿಯಿತು.