०१६ सीतां दृष्ट्वा हनुमान्निर्वेदः

वाचनम्
ಭಾಗಸೂಚನಾ

ಹನುಮಂತನು ಸೀತಾದೇವಿಯ ಶೀಲ-ಸೌಂದರ್ಯಗಳನ್ನು ಮನಸ್ಸಿನಲ್ಲೇ ಶ್ಲಾಘಿಸುತ್ತಾ, ಅವಳ ಕಷ್ಟಕೊಟಲೆಗಳಿಗೆ ಮರುಗಿದುದು

ಮೂಲಮ್ - 1

ಪ್ರಶಸ್ಯ ತು ಪ್ರಶಸ್ತವ್ಯಾಂ ಸೀತಾಂ ತಾಂ ಹರಿಪುಂಗವಃ ।
ಗುಣಾಭಿರಾಮಂ ರಾಮಂ ಚ ಪುನಶ್ಚಿಂತಾಪರೋಭವತ್ ॥

ಅನುವಾದ

ಕಪಿಶ್ರೇಷ್ಠನಾದ ಹನುಮಂತನು ಪ್ರಶಂಸಾರ್ಹಳಾದ ಸೀತಾದೇವಿಯನ್ನು ಮತ್ತು ಸುಗುಣಾಭಿರಾಮನೂ, ಲೋಕವಂದಿತನೂ ಆದ ಶ್ರೀರಾಮನನ್ನು ಕೊಂಡಾಡಿದನು. ಒಡನೆಯೇ ಚಿಂತಾಮಗ್ನನಾದನು.॥1॥

ಮೂಲಮ್ - 2

ಸ ಮುಹೂರ್ತಮಿವ ಧ್ಯಾತ್ವಾ ಬಾಷ್ಪಪರ್ಯಾಕುಲೇಕ್ಷಣಃ ।
ಸೀತಾಮಾಶ್ರಿತ್ಯ ತೇಜಸ್ವೀ ಹನುಮಾನ್ ವಿಲಲಾಪ ಹ ॥

ಅನುವಾದ

ಮಹಾಧೈರ್ಯಶಾಲಿಯಾದ ಹನುಮಂತನು ಒಂದು ಕ್ಷಣಕಾಲ ಧ್ಯಾನಮಗ್ನನಾಗಿ ಸೀತೆಯ ಆಗಿನ ಪರಿಸ್ಥಿತಿಯನ್ನು ಕಂಡು, ಕಣ್ಣೀರು ತುಂಬಿ ಗಟ್ಟಿಯಾಗಿ ವಿಲಪಿಸತೊಡಗಿದನು.॥2॥

ಮೂಲಮ್ - 3

ಮಾನ್ಯಾ ಗುರುವಿನೀತಸ್ಯ ಲಕ್ಷ್ಮಣಸ್ಯ ಗುರುಪ್ರಿಯಾ ।
ಯದಿ ಸೀತಾಪಿ ದುಃಖಾರ್ತಾ ಕಾಲೋ ಹಿ ದುರತಿಕ್ರಮಃ ॥

ಅನುವಾದ

‘‘ಹೆಚ್ಚಾದ ವಿನಯ ವಿಧೇಯನಾದ ಲಕ್ಷ್ಮಣಸ್ವಾಮಿಗೆ ಪೂಜ್ಯಳಾದ ಅವನಣ್ಣನಾದ ಶ್ರೀರಾಮನಿಗೆ ಪ್ರಿಯಪತ್ನಿಯಾಗಿರುವ ಈ ಸೀತೆಯೂ ದುಃಖಪೀಡಿತಳಾಗುವುದೆಂದರೆ ಕಾಲವನ್ನು ಯಾರು ತಾನೇ ಮಿರಲು ಸಾಧ್ಯ?॥3॥

ಮೂಲಮ್ - 4

ರಾಮಸ್ಯ ವ್ಯವಸಾಯಜ್ಞಾ ಲಕ್ಷ್ಮಣಸ್ಯ ಚ ಧೀಮತಃ ।
ನಾತ್ಯರ್ಥಂ ಕ್ಷುಭ್ಯತೇ ದೇವೀ ಗಂಗೇವ ಜಲದಾಗಮೇ ॥

ಅನುವಾದ

ಮಹಾಪರಾಕ್ರಮಿಯಾದ ಶ್ರೀರಾಮನ ಶೌರ್ಯವನ್ನೂ, ಅಭಿಪ್ರಾಯವನ್ನೂ ಹಾಗೂ ಲಕ್ಷ್ಮಣನ ಎಣೆಯಿಲ್ಲದ ಪರಾಕ್ರಮವನ್ನು ತಿಳಿದಿರುವ ಸೀತಾದೇವಿಯು ವರ್ಷಾಕಾಲದಲ್ಲಿ ಮಹಾಪ್ರವಾಹ ಬಂದಾಗಲೂ ಗಂಗಾನದಿಯು ಕ್ಷೋಭೆಗೊಳ್ಳದಂತೆ ಅಧೀರಳಾಗಿಲ್ಲ.॥4॥

ಮೂಲಮ್ - 5

ತುಲ್ಯಶೀಲವಯೋವೃತ್ತಾಂ ತುಲ್ಯಾಭಿಜನಲಕ್ಷಣಾಮ್ ।
ರಾಘವೋರ್ಹತಿ ವೈದೇಹೀಂ ತಂ ಚೇಯಮಸಿತೇಕ್ಷಣಾ ॥

ಅನುವಾದ

ತನಗೆ ಸಮಾನವಾದ ಶೀಲ, ವಯಸ್ಸು, ಚಾರಿತ್ರ್ಯ ಹಾಗೂ ಸತ್ಕುಲ ಲಕ್ಷಣಗಳುಳ್ಳ ಶ್ರೀ ಸೀತಾದೇವಿಯನ್ನು ಪತ್ನಿಯಾಗಿ ಪಡೆಯಲು ನಿಶ್ಚಯವಾಗಿ ಶ್ರೀರಾಮನು ಯೋಗ್ಯನಾಗಿದ್ದಾನೆ. ಹಾಗೆಯೇ ತನಗೆ ಸಮಾನವಾದ ಶೀಲ, ವಯಸ್ಸು, ಚಾರಿತ್ರ್ಯ ಮತ್ತು ಕುಲ-ಲಕ್ಷಣಗಳುಳ್ಳ ಶ್ರೀರಾಮನನ್ನು ಪತಿಯಾಗಿ ಪಡೆಯಲು ಕನ್ನೆದಿಲೆಯಂತೆ ಕಪ್ಪಾದ ಕಣ್ಣುಗಳುಳ್ಳ ವೈದೇಹಿಯೂ ಯೋಗ್ಯಳಾಗಿದ್ದಾಳೆ.’’॥5॥

ಮೂಲಮ್ - 6

ತಾಂ ದೃಷ್ಟ್ವಾ ನವಹೇಮಾಭಾಂ ಲೋಕಕಾಂತಾಮಿವ ಶ್ರೀಯಮ್ ।
ಜಗಾಮ ಮನಸಾ ರಾಮಂ ವಚನಂ ಚೇದಮಬ್ರವೀತ್ ॥

ಅನುವಾದ

ಪುಟಕ್ಕಿಟ್ಟ ಚಿನ್ನದಂತೆ ಶೋಭಿಸುತ್ತಿರುವ, ಲಕ್ಷ್ಮೀದೇವಿಯಂತೆ ಲೋಕಮನೋಹರಳಾದ ಆ ಸೀತಾದೇವಿಯನ್ನು ನೋಡಿ, ಮನಸ್ಸಿನಲ್ಲೇ ಶ್ರೀರಾಮನನ್ನೇ ಧ್ಯಾನಿಸುತ್ತಾ ಹನುಮಂತನು ಪುನಃ ಹೀಗೆ ಹೇಳಿಕೊಂಡನು.॥6॥

ಮೂಲಮ್ - 7

ಅಸ್ಯಾ ಹೇತೋರ್ವಿಶಾಲಾಕ್ಷ್ಯಾ ಹತೋ ವಾಲೀ ಮಹಾಬಲಃ ।
ರಾವಣಪ್ರತಿಮೋ ವೀರ್ಯೇ ಕಬಂಧಶ್ಚ ನಿಪಾತಿತಃ ॥

ಅನುವಾದ

ವಿಶಾಲನೇತ್ರೆಯಾದ ಇವಳ ಸಲುವಾಗಿಯೇ ಮಹಾಬಲಿಷ್ಠನಾದ ವಾಲಿಯ ಸಂಹಾರವಾಯಿತು. ಪರಾಕ್ರಮದಲ್ಲಿ ರಾವಣನಿಗೆ ಸಮಾನವಾಗಿದ್ದ ಕಬಂಧನೂ ಕೂಡ ಹತನಾದನು.॥7॥

ಮೂಲಮ್ - 8

ವಿರಾಧಶ್ಚ ಹತಃ ಸಂಖ್ಯೇ ರಾಕ್ಷಸೋ ಭೀಮವಿಕ್ರಮಃ ।
ವನೇ ರಾಮೇಣ ವಿಕ್ರಮ್ಯ ಮಹೇಂದ್ರೇಣೇವ ಶಂಬರಃ ॥

ಅನುವಾದ

ಮಹೇಂದ್ರನು ಶಂಬರನನ್ನು ಸಂಹರಿಸುವಂತೆ, ಮಹಾಪರಾಕ್ರಮಿಯಾದ ಶ್ರೀರಾಮನು ಅರಣ್ಯದಲ್ಲಿ ಭಯಂಕರ ಪರಾಕ್ರಮಿಯಾದ ವಿರಾಧನನ್ನು ಯುದ್ಧದಲ್ಲಿ ಸಂಹರಿಸಿದನು.॥8॥

ಮೂಲಮ್ - 9

ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ।
ನಿಹತಾನಿ ಜನಸ್ಥಾನೇ ಶರೈರಗ್ನಿ ಶಿಖೋಪಮೈಃ ॥

ಅನುವಾದ

ಜನಸ್ಥಾನದಲ್ಲಿ ಭಯಂಕರಕರ್ಮಿಗಳಾದ ಹದಿನಾಲ್ಕು ಸಾವಿರ ರಾಕ್ಷಸರು ಶ್ರೀರಾಮನ ಅಗ್ನಿಜ್ವಾಲೆಗೆ ಸಮಾನವಾದ ಬಾಣಗಳಿಗೆ ಬಲಿಯಾದರು.॥9॥

ಮೂಲಮ್ - 10

ಖರಶ್ಚ ನಿಹತಃ ಸಂಖ್ಯೇ ತ್ರಿಶಿರಾಶ್ಚ ನಿಪಾತಿತಃ ।
ದೂಷಣಶ್ಚ ಮಹಾತೇಜಾ ರಾಮೇಣ ವಿದಿತಾತ್ಮನಾ ॥

ಅನುವಾದ

ಜಗದ್ವಿಖ್ಯಾತನಾದ ಶ್ರೀರಾಮನಿಂದ ಸಮರಾಂಗಣದಲ್ಲಿ ಖರನೂ, ತ್ರಿಶಿರನೂ ಮಣ್ಣುಗೂಡಿದರು. ಯುದ್ಧವೀರನಾದ ದೂಷಣನೂ ನೆಲಸಮನಾದನು.॥10॥

ಮೂಲಮ್ - 11

ಐಶ್ವರ್ಯಂ ವಾನರಾಣಾಂ ಚ ದುರ್ಲಭಂ ವಾಲಿಪಾಲಿತಮ್ ।
ಅಸ್ಯಾ ನಿಮಿತ್ತೇ ಸುಗ್ರೀವಃ ಪ್ರಾಪ್ತವಾನ್ ಲೋಕಸತ್ಕೃತಮ್ ॥

ಅನುವಾದ

ವಾಲಿಯಿಂದ ರಕ್ಷಿಸಲ್ಪಡುತ್ತಿದ್ದ, ಇತರರಿಂದ ಹೊಂದಲು ಅಶಕ್ಯವಾದ, ಲೋಕ ಪ್ರಸಿದ್ಧವಾದ ವಾನರರ ಅತುಳೈಶ್ವರ್ಯವನ್ನು ಇವಳ ನಿಮಿತ್ತದಿಂದಲೇ ಸುಗ್ರೀವನು ಪಡೆದುಕೊಂಡನು.॥11॥

ಮೂಲಮ್ - 12

ಸಾಗರಶ್ಚ ಮಯಾ ಕ್ರಾಂತಃ ಶ್ರೀಮಾನ್ನದನದೀಪತಿಃ ।
ಅಸ್ಯಾ ಹೇತೋರ್ವಿಶಾಲಾಕ್ಷ್ಯಾಃ ಪುರೀ ಚೇಯಂ ನಿರೀಕ್ಷಿತಾ ॥

ಅನುವಾದ

ವಿಶಾಲಾಕ್ಷಿಯಾದ ಇವಳಿಗಾಗಿಯೇ ನಾನು ನದಿ-ನದಗಳಿಗೆ ಒಡೆಯನೂ, ರತ್ನಾಕರನೂ ಆದ ಸಮುದ್ರವನ್ನು ಲಂಘಿಸಿ ಬಂದು ಈ ಲಂಕಾಪಟ್ಟಣವನ್ನು ನೋಡಿದೆನು.॥12॥

ಮೂಲಮ್ - 13

ಯದಿ ರಾಮಃ ಸಮುದ್ರಾಂತಾಂ ಮೇದಿನೀಂ ಪರಿವರ್ತಯೇತ್ ।
ಅಸ್ಯಾಃ ಕೃತೇ ಜಗಚ್ಚಾಪಿ ಯುಕ್ತಮಿತ್ಯೇವ ಮೇ ಮತಿಃ ॥

ಅನುವಾದ

ಒಂದು ವೇಳೆ ಈ ಸೀತಾ ದೇವಿಗಾಗಿ ಶ್ರೀರಾಮನು ಸಮುದ್ರಾಂತವಾದ ಈ ಭೂಮಂಡಲವೇ ಅಲ್ಲ, ಸಕಲಲೋಕಗಳನ್ನು ತಲೆಕೆಳಗಾಗಿ ಮಾಡಿದರೂ ಅದು ಯುಕ್ತವೆಂದೇ ನನ್ನ ಭಾವನೆಯಾಗಿದೆ.॥13॥

ಮೂಲಮ್ - 14

ರಾಜ್ಯಂ ವಾ ತ್ರಿಷು ಲೋಕೇಷು ಸೀತಾ ವಾ ಜನಕಾತ್ಮಜಾ ।
ತ್ರೈಲೋಕ್ಯರಾಜ್ಯಂ ಸಕಲಂ ಸೀತಾಯಾ ನಾಪ್ನುಯಾತ್ ಕಲಾಮ್ ॥

ಅನುವಾದ

ಶ್ರೀರಾಮನಿಗೆ ಮೂರು ಲೋಕಗಳ ಆಧಿಪತ್ಯವನ್ನು ಪಡೆಯುವುದು ಮುಖ್ಯವೋ? ಜನಕಾತ್ಮಜೆಯಾದ ಸೀತಾದೇವಿಯನ್ನು ಹೊಂದುವುದು ಮುಖ್ಯವೋ? ಎಂದು ಆಲೋಚಿಸಿದರೆ ತ್ರಿಲೋಕಾಧಿಪತ್ಯವು ಸೀತಾಪ್ರಾಪ್ತಿಯ ಮುಂದೆ ಹದಿನಾರನೆಯ ಒಂದು ಅಂಶಕ್ಕೂ ಕೂಡ ಸರಿಯಾಗಲಾರದು.॥14॥

ಮೂಲಮ್ - 15

ಇಯಂ ಸಾ ಧರ್ಮಶೀಲಸ್ಯ ಮೈಥಿಲಸ್ಯ ಮಹಾತ್ಮನಃ ।
ಸುತಾ ಜನಕರಾಜಸ್ಯ ಸೀತಾ ಭರ್ತೃದೃಢವ್ರತಾ ॥

ಮೂಲಮ್ - 16

ಉತ್ಥಿತಾ ಮೇದಿನೀಂ ಭಿತ್ವಾ ಕ್ಷೇತ್ರೇ ಹಲಮುಖಕ್ಷತೇ ।
ಪದ್ಮರೇಣುನಿಭೈಃ ಕಿರ್ಣಾ ಶುಭೈಃ ಕೇದಾರಪಾಂಸುಭಿಃ ॥

ಅನುವಾದ

ಧರ್ಮಶೀಲನೂ, ಮಹಾತ್ಮನೂ ಆದ ಮಿಥಿಲಾಧಿಪತಿ ಜನಕ ಮಹಾರಾಜನು ಯಜ್ಞನಿಮಿತ್ತವಾಗಿ ಭೂಮಿಯನ್ನು ಊಳುತ್ತಿದ್ದಾಗ ಪದ್ಮಪರಾಗದಂತೆ ಶುಭಕರ ಧೂಳಿನಿಂದ ಉದಿಸಿದ ಅಯೋನಿಜೆಯಾದ ಜನಕನ ಮಗಳೂ, ಪತಿಯನ್ನೇ ದೃಢವಾಗಿ ಆಶ್ರಯಿಸಿರುವ ಮಹಾಪತಿವ್ರತೆಯಾದ ಸೀತೆಯು ಇವಳೇ ಆಗಿದ್ದಾಳೆ.॥15-16॥

ಮೂಲಮ್ - 17

ವಿಕ್ರಾಂತಸ್ಯಾರ್ಯಶೀಲಸ್ಯ ಸಂಯುಗೇಷ್ವನಿವರ್ತಿನಃ ।
ಸ್ನುಷಾ ದಶರಥಸ್ಯೈಷಾ ಜ್ಯೇಷ್ಠಾ ರಾಜ್ಞೋ ಯಶಸ್ವಿನೀ ॥

ಅನುವಾದ

ಮಹಾಪರಾಕ್ರಮಿಯಾದ ಆರ್ಯರ ಗುಣ-ಶೀಲಗಳನ್ನೇ ಮೈಗುಡಿಸಿಕೊಂಡಿದ್ದ, ಯುದ್ಧಗಳಲ್ಲಿ ಎಂದೂ ಹಿಂಜರಿಯದೆ ಕೆಚ್ಚಿನಿಂದ ಶತ್ರುಗಳೊಡನೆ ಹೋರಾಡುತ್ತಿದ್ದ ದಶರಥಮಹಾರಾಜನ ಹಿರಿಯ ಸೊಸೆ ಇವಳೇ ಅಲ್ಲವೇ?॥17॥

ಮೂಲಮ್ - 18

ಧರ್ಮಜ್ಞಸ್ಯ ಕೃತಜ್ಞಸ್ಯ ರಾಮಸ್ಯ ವಿದಿತಾತ್ಮನಃ ।
ಇಯಂ ಸಾ ದಯಿತಾ ಭಾರ್ಯಾ ರಾಕ್ಷಸೀವಶಮಾಗತಾ ॥

ಅನುವಾದ

ಧರ್ಮಜ್ಞನೂ, ಮಾಡಿದ ಉಪಕಾರವನ್ನು ಎಂದೂ ಮರೆಯದವನೂ, ಆತ್ಮಜ್ಞಾನಿಯೂ ಆದ ಶ್ರೀರಾಮನಿಗೆ ಪ್ರಾಣಪ್ರಿಯಳೂ, ಧರ್ಮಪತ್ನಿಯೂ ಆದ ಸೀತಾದೇವಿಯು ಇಂದು ರಾಕ್ಷಸಿಯರ ಮಧ್ಯದಲ್ಲಿ ಇರುವಳಲ್ಲ?॥18॥

ಮೂಲಮ್ - 19

ಸರ್ವಾನ್ ಭೋಗಾನ್ ಪರಿತ್ಯಜ್ಯ ಭರ್ತೃಸ್ನೇಹಬಲಾತ್ಕೃತಾ ।
ಅಚಿಂತಯಿತ್ವಾ ದುಃಖಾನಿ ಪ್ರವಿಷ್ಟಾ ನಿರ್ಜನಂ ವನಮ್ ॥

ಅನುವಾದ

ಸಾಧ್ವಿಯಾದ ಇವಳು ಪತಿಯ ಪ್ರೇಮಬಲದಿಂದ ಆಕರ್ಷಿತಳಾಗಿ ಸಕಲ ವಿಧವಾದ ರಾಜಭೋಗಗಳನ್ನು ಪರಿತ್ಯಜಿಸಿ ವನವಾಸ ಕಷ್ಟಗಳನ್ನು ಲೆಕ್ಕಿಸದೆ, ನಿರ್ಜನವಾದ ಅರಣ್ಯಕ್ಕೆ ಪತಿಯೊಡನೆ ಬಂದವಳು.॥19॥

ಮೂಲಮ್ - 20

ಸಂತುಷ್ಟಾ ಫಲಮೂಲೇನ ಭರ್ತೃಶುಶ್ರೂಷಣೇ ರತಾ ।
ಯಾ ಪರಾಂ ಭಜತೇ ಪ್ರೀತಿಂ ವನೇಪಿ ಭವನೇ ಯಥಾ ॥

ಅನುವಾದ

ಪತಿಸೇವಾ ಪರಾಯಣೆಯೂ, ಅರಣ್ಯದಲ್ಲಿ ಸಿಗುವ ಫಲ-ಮೂಲಾದಿಗಳಿಂದಲೇ ಸಂತುಷ್ಟಳಾಗುತ್ತಿದ್ದ, ಶ್ರೀರಾಮನೊಡನೆ ಪರಮ ಪ್ರೀತಿಯಿಂದ ಅರಮನೆಯನ್ನು ಬಿಟ್ಟು ಗೊಂಡಾರಣ್ಯವನ್ನು ಸೇರಿದ ಆ ಸೀತೆಯು ಇವಳೇ.॥20॥

ಮೂಲಮ್ - 21

ಸೇಯಂ ಕನಕವರ್ಣಾಂಗೀ ನಿತ್ಯಂ ಸುಸ್ಮಿತಭಾಷಿಣೀ ।
ಸಹತೇ ಯಾತನಾಮೇತಾಮನರ್ಥಾನಾಮಭಾಗಿನೀ ॥

ಅನುವಾದ

ಯಾವಾಗಲೂ ಮುಗುಳ್ನಗೆಯಿಂದಲೇ ಮಾತನಾಡುವ ಪುತ್ಥಳಿ ಬೊಂಬೆಯಂತಿರುವ, ಯಾವುದೇ ಸಣ್ಣ ಕಷ್ಟಗಳಿಗೂ ಭಾಗಿಯಾಗಲು ಯೋಗ್ಯಳಲ್ಲದ ಸೀತಾದೇವಿಯು ರಾಕ್ಷಸಿಯರು ಕೊಡುತ್ತಿರುವ ಉಪಟಳವನ್ನು ಸಹಿಸಿಕೊಂಡಿದ್ದಾಳೆ.॥21॥

ಮೂಲಮ್ - 22

ಇಮಾಂ ತು ಶೀಲಸಂಪನ್ನಾಂ ದ್ರಷ್ಟುಮಿಚ್ಛತಿ ರಾಘವಃ ।
ರಾವಣೇನ ಪ್ರಮಥಿತಾಂ ಪ್ರಪಾಮಿವ ಪಿಪಾಸಿತಃ ॥

ಅನುವಾದ

ದುಷ್ಟನಾದ ರಾವಣನು ಕೊಡುತ್ತಿರುವ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ತನ್ನ ಶೀಲಸಂಪತ್ತನ್ನು ಸಂರಕ್ಷಿಸಿಕೊಂಡು ಇರುವ ಈ ಸೀತಾದೇವಿಯನ್ನು ನೋಡಲು ಬಾಯಾರಿದವನು ಅರವಟ್ಟಿಗೆಯನ್ನು ಅರಸಿಕೊಂಡು ಹೋಗುವನಂತೆ, ಶ್ರೀರಾಮನು ಕಾತರನಾಗಿದ್ದಾನೆ.॥22॥

ಮೂಲಮ್ - 23

ಅಸ್ಯಾ ನೂನಂ ಪುನರ್ಲಾಭಾದ್ರಾಘವಃ ಪ್ರೀತಿಮೇಷ್ಯತಿ ।
ರಾಜಾ ರಾಜ್ಯಾತ್ ಪರಿಭ್ರಷ್ಟಃ ಪುನಃ ಪ್ರಾಪ್ಯೇವ ಮೇದಿನೀಮ್ ॥

ಅನುವಾದ

ರಾಜ್ಯಭ್ರಷ್ಟನಾದ ರಾಜನು ಪುನಃ ತನ್ನ ರಾಜ್ಯವನ್ನು ಪಡೆದುಕೊಂಡಾಗ ಸಂತೋಷ ಪಡುವಂತೆ ಶ್ರೀರಾಮನು ಸೀತಾದೇವಿಯನ್ನು ಮರಳಿ ಪಡೆದಾಗ ಬಹಳವಾಗಿ ಸಂತೋಷ ಪಡುವನು.॥23॥

ಮೂಲಮ್ - 24

ಕಾಮಭೋಗೈಃ ಪರಿತ್ಯಕ್ತಾ ಹೀನಾ ಬಂಧುಜನೇನ ಚ ।
ಧಾರಯತ್ಯಾತ್ಮನೋ ದೇಹಂ ತತ್ಸಮಾಗಮಕಾಂಕ್ಷಿಣೀ ॥

ಅನುವಾದ

ಕರ್ಮೋಪಭೋಗಗಳೆಲ್ಲವನ್ನು ಪರಿತ್ಯಜಿಸಿ, ಬಂಧುಜನರಿಂದ ದೂರವಾದ ಇವಳು ಶ್ರೀರಾಮನ ಆಗಮನವನ್ನೇ ನಿರಿಕ್ಷಿಸುತ್ತಾ ತನ್ನ ದೇಹವನ್ನು ಧರಿಸಿಕೊಂಡಿದ್ದಾಳೆ.॥24॥

ಮೂಲಮ್ - 25

ನೈಷಾ ಪಶ್ಯತಿ ರಾಕ್ಷಸ್ಯೋ ನೇಮಾನ್ ಪುಷ್ಪಫಲದ್ರುಮಾನ್ ।
ಏಕಸ್ಥಹೃದಯಾ ನೂನಂ ರಾಮಮೇವಾನುಪಶ್ಯತಿ ॥

ಅನುವಾದ

ಸಾಧ್ವಿಯಾದ ಇವಳು ಸುತ್ತಲೂ ಇರುವ ರಾಕ್ಷಸಿಯರನ್ನಾಗಲೀ, ಫಲ-ಪುಷ್ಪಗಳಿಂದ ಸಮೃದ್ಧವಾದ ಸುಂದರ ವೃಕ್ಷಗಳನ್ನಾಗಲಿ ನೊಡುತ್ತಲೇ ಇಲ್ಲ. ಶ್ರೀರಾಮನಲ್ಲೇ ಅನನ್ಯಚಿತ್ತಳಾಗಿ ಹೃನ್ಮಂದಿರಗಳಲ್ಲಿ ಶ್ರೀರಾಮನನ್ನೇ ಎಲ್ಲ ಕಾಲಗಳಲ್ಲಿಯೂ ನೋಡುತ್ತಿದ್ದಾಳೆ. ॥25॥

ಮೂಲಮ್ - 26

ಭರ್ತಾ ನಾಮ ಪರಂ ನಾರ್ಯಾ ಭೂಷಣಂ ಭೂಷಣಾದಪಿ ।
ಏಷಾ ವಿರಹಿತಾ ತೇನ ಭೂಷಣಾರ್ಹಾ ನ ಶೋಭತೇ ॥

ಅನುವಾದ

ಹೆಂಗಸಿಗೆ ಇತರ ಎಲ್ಲ ಆಭರಣಗಳಿಗಿಂತಲೂ ಪತಿಯೇ ಪರಮ ಶ್ರೇಷ್ಠವಾದ ಆಭರಣವು. ಆಭರಣಗಳಿಂದ ಶೋಭಿಸ ಬೇಕಾಗಿರುವ ಇವಳು ಪತಿಯೆಂಬ ಆ ಆಭರಣದಿಂದ ರಹಿತಳಾಗಿ ಶೋಭಿಸುತ್ತಿಲ್ಲ.॥26॥

ಮೂಲಮ್ - 27

ದುಷ್ಕರಂ ಕುರುತೇ ರಾಮೋ ಹೀನೋ ಯದನಯಾ ಪ್ರಭುಃ ।
ಧಾರಯತ್ಯಾತ್ಮನೋ ದೇಹಂ ನ ದುಃಖೇನಾವಸೀದತಿ ॥

ಅನುವಾದ

ಇಂತಹ ಸಾಧ್ವೀಮಣಿಯಿಂದ ವಿಹೀನನಾಗಿರುವ ಶ್ರೀರಾಮನು ವಿರಹ ದುಃಖದಿಂದ ವಿನಾಶಹೊಂದದೆ ತನ್ನ ದೇಹವನ್ನು ಇನ್ನು ಧರಿಸಿಕೊಂಡಿರುವನು. ನಿಶ್ಚಯವಾಗಿಯೂ ಶ್ರೀರಾಮನು ಅತ್ಯಂತ ದುಷ್ಕರವಾದ ಕಾರ್ಯವನ್ನೇ ಮಾಡುತ್ತಿದ್ದಾನೆ.॥27॥

ಮೂಲಮ್ - 28

ಇಮಾಮಸಿತಕೇಶಾಂತಾಂ ಶತಪತ್ರನಿಭೇಕ್ಷಣಾಮ್ ।
ಸುಖಾರ್ಹಾಂ ದುಃಖಿತಾಂ ದೃಷ್ಟ್ವಾ ಮಮಾಪಿ ವ್ಯಥಿತಂ ಮನಃ ॥

ಅನುವಾದ

ಕಪ್ಪಾದ ಕೂದಲುಗಳನ್ನು ಹೊಂದಿರುವ ತಾವರೆಯಂತೆ ಕಣ್ಣುಗಳುಳ್ಳ, ಶ್ರೀರಾಮನನ್ನೇ ಸೇರಿ ಸುಖಪಡಲು ಯೋಗ್ಯಳಾಗಿರುವ ಇವಳು ರಾಕ್ಷಸಿಯರ ಮಧ್ಯದಲ್ಲಿ ದುಃಖಿತಳಾಗಿರುವುದನ್ನು ನೋಡಿ ನನ್ನ ಮನಸ್ಸು ಕೂಡ ವ್ಯಥೆಗೊಂಡಿದೆ. ಅಂತಿರುವಾಗ ಪರಮ ದಯಾಳುವಾದ ಶ್ರೀರಾಮನ ವಿಷಯದಲ್ಲಿ ಹೇಳುವುದೇನಿದೆ?॥28॥

ಮೂಲಮ್ - 29

ಕ್ಷಿತಿಕ್ಷಮಾ ಪುಷ್ಕರಸಂನಿಭಾಕ್ಷೀ
ಯಾ ರಕ್ಷಿತಾ ರಾಘವಲಕ್ಷ್ಮಣಾಭ್ಯಾಮ್ ।
ಸಾ ರಾಕ್ಷಸೀಭಿರ್ವಿಕೃತೇಕ್ಷಣಾಭಿಃ
ಸಂರಕ್ಷ್ಯತೇ ಸಂಪ್ರತಿ ವೃಕ್ಷಮೂಲೇ ॥

ಅನುವಾದ

ಭೂದೇವಿಯಂತೆ ಕ್ಷಮಾಗುಣವುಳ್ಳ ಕಮಲಸದೃಶವಾದ ಕಣ್ಣುಗಳುಳ್ಳ, ರಾಮ-ಲಕ್ಷ್ಮಣರಿಂದ ರಕ್ಷಿಸಲ್ಪಡುತ್ತಿದ್ದ, ಇವಳೀಗ ವೃಕ್ಷಮೂಲದಲ್ಲಿ ವಿಕಾರವಾದ ಕಣ್ಣುಗಳುಳ್ಳ ರಾಕ್ಷಸಿಯರ ಕಾವಲಿನಲ್ಲಿದ್ದು ದೀನಳಾಗಿದ್ದಾಳೆ.॥29॥

ಮೂಲಮ್ - 30

ಹಿಮಹತನಲಿನೀವ ನಷ್ಟ ಶೋಭಾ
ವ್ಯಸನಪರಂಪರಯಾತಿಪೀಡ್ಯಮಾನಾ ।
ಸಹಚರರಹಿತೇವ ಚಕ್ರವಾಕೀ
ಜನಕಸುತಾ ಕೃಪಣಾಂ ದಶಾಂ ಪ್ರಪನ್ನಾ ॥

ಅನುವಾದ

ಹಿಮಪಾತದಿಂದ ನಲುಗಿಹೋದ ಕಮಲದ ಬಳ್ಳಿಯಂತೆ ಶೋಭಾರಹಿತಳಾಗಿರುವ ಕಷ್ಟಪರಂಪರೆಯಿಂದ ಪೀಡಿತಳಾದ ಜಾನಕಿಯು, ಸಹಚರನಿಂದ ಅಗಲಿದ ಹೆಣ್ಣು ಚಕ್ರವಾಕದಂತೆ ದೈನ್ಯಾವಸ್ಥೆಯನ್ನು ಹೊಂದಿದ್ದಾಳೆ.॥30॥

ಮೂಲಮ್ - 31

ಅಸ್ಯಾ ಹಿ ಪುಷ್ಪಾವನತಾಗ್ರಶಾಖಾಃ
ಶೋಕಂ ದೃಢಂ ವೈ ಜನಯಂತ್ಯಶೋಕಾಃ ।
ಹಿಮವ್ಯಪಾಯೇನ ಚ ಶೀತರಶ್ಮಿ-
ರಭ್ಯುತ್ಥಿತೋ ನೈಕಸಹಸ್ರರಶ್ಮಿಃ ॥

ಅನುವಾದ

ಪುಷ್ಪಗಳ ಭಾರದಿಂದ ಬಗ್ಗಿರುವ ರೆಂಬೆಗಳುಳ್ಳ ಅಶೋಕವೃಕ್ಷಗಳು ಈಕೆಗೆ ಶೋಕವನ್ನು ಹೆಚ್ಚಿಸುತ್ತವೆ. ವಸಂತ ನಿಂದೊಡಗೂಡಿದ ಚಂದ್ರನು ಸಾವಿರಾರು ಕಿರಣಗಳಿಂದ ಕೂಡಿ ಶೀತರಶ್ಮಿಗಳನ್ನು ಪಸರಿಸುತ್ತಾ ಈ ಸೀತಾದೇವಿಗೆ ಅತ್ಯಂತ ದಾರುಣವಾದ ವಿರಹ ಶೋಕವನ್ನು ಇಮ್ಮಡಿಗೊಳಿಸುತ್ತಿದ್ದಾನೆ.॥31॥

ಮೂಲಮ್ - 32

ಇತ್ಯೇವಮರ್ಥಂ ಕಪಿರನ್ವವೇಕ್ಷ್ಯ
ಸೀತೇಯಮಿತ್ಯೇವ ನಿವಿಷ್ಟಬುದ್ಧಿಃ ।
ಸಂಶ್ರಿತ್ಯ ತಸ್ಮಿನ್ನಿಷಸಾದ ವೃಕ್ಷೇ
ಬಲೀ ಹರೀಣಾಮೃಷಭಸ್ತರಸ್ವೀ ॥

ಅನುವಾದ

ಹೆಚ್ಚಿನ ಬಲಶಾಲಿಯೂ, ಕಪಿಶ್ರೇಷ್ಠನೂ, ಮಹಾವೀರನೂ, ಆದ ಹನುಮಂತನು ಹೀಗೆ ಯೋಚಿಸುತ್ತಾ - ‘ಇವಳು ಸೀತೆಯೇ ಸರಿ’ ಎಂದು ಬುದ್ಧಿಯಿಂದ ನಿಶ್ಚಯಿಸಿ ಆ ಶಿಂಶುಪಾವೃಕ್ಷದಲ್ಲಿಯೇ ಅಡಗಿ ಕುಳಿತನು.॥32॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷೋಡಶಃ ಸರ್ಗಃ ॥ 16 ॥
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹದಿನಾರನೆಯ ಸರ್ಗವು ಮುಗಿಯಿತು.

ಅನುವಾದ