०१५ हनुमता सीतादर्शनम्

वाचनम्
ಭಾಗಸೂಚನಾ

ವನಸಿರಿಯನ್ನು ನೋಡುತ್ತಿದ್ದ ಹನುಮಂತನು ಚೈತ್ಯಪ್ರಾಸಾದದ ಬಳಿಯಲ್ಲಿ ದಯನೀಯ ಸ್ಥಿತಿಯಲ್ಲಿದ್ದ ಸೀತಾದೇವಿಯನ್ನು ನೋಡಿದುದು

ಮೂಲಮ್ - 1

ಸ ವೀಕ್ಷಮಾಣಸ್ತತ್ರಸ್ಥೋ ಮಾರ್ಗಮಾಣಶ್ಚ ಮೈಥಿಲೀಮ್ ।
ಅವೇಕ್ಷಮಾಣಶ್ಚಮಹೀಂ ಸರ್ವಾಂ ತಾಮನ್ವವೈಕ್ಷತ ॥

ಅನುವಾದ

ಶಿಂಶುಪಾವೃಕ್ಷದ ಮೇಲೆ ಕುಳಿತ್ತಿದ್ದ ಹನುಮಂತನು ಸೀತಾದೇವಿಯ ದರ್ಶನಕ್ಕಾಗಿ ಎದುರು ನೋಡುತ್ತಾ, ಆ ಅಶೋಕವನದ ಸುತ್ತಲೂ ದೃಷ್ಟಿಯನ್ನು ಹರಿಸುತ್ತಾ ಇದ್ದನು.॥1॥

ಮೂಲಮ್ - 2

ಸಂತಾನಕಲತಾಭಿಶ್ಚ ಪಾದಪೈರುಪಶೋಭಿತಾಮ್ ।
ದಿವ್ಯಗಂಧರಸೋಪೇತಾಂ ಸರ್ವತಃ ಸಮಲಂಕೃತಾಮ್ ॥

ಅನುವಾದ

ಅವನು ನೋಡುತ್ತಿದ್ದ ಅಶೋಕವನದ ಭೂಭಾಗವೂ ಕಲ್ಪವೃಕ್ಷದ ಲತೆಗಳಿಂದಲೂ, ವೃಕ್ಷಗಳಿಂದಲೂ ಸುಶೋಭಿತವಾಗಿತ್ತು. ದಿವ್ಯಗಂಧ ಹಾಗೂ ದಿವ್ಯರಸದಿಂದಲೂ ಪರಿಪೂರ್ಣವಾಗಿದ್ದು, ಎಲ್ಲ ಕಡೆಗಳಲ್ಲಿಯೂ ಸಮಲಂಕೃತವಾಗಿತ್ತು.॥2॥

ಮೂಲಮ್ - 3

ತಾಂ ಸ ನಂದನಸಂಕಾಶಾಂ ಮೃಗಪಕ್ಷಿಭಿರಾವೃತಾಮ್ ।
ಹರ್ಮ್ಯಪ್ರಾಸಾದಸಂಬಾಧಾಂ ಕೋಕಿಲಾಕುಲನಿಃಸ್ವನಾಮ್ ॥

ಅನುವಾದ

ಮೃಗ-ಪಕ್ಷಿಗಳಿಂದಲೂ ಸುತ್ತುವರಿಯಲ್ಪಟ್ಟ, ಸುವರ್ಣಮಯವಾದ ಪ್ರಾಸಾದಗಳಿಂದ ನಿಬಿಡವಾಗಿದ್ದು, ಕೋಗಿಲೆಗಳ ಸಮೂಹಗಳಿಂದ ನಿನಾದಿತವಾಗಿತ್ತು. ಅದು ಇಂದ್ರನ ನಂದನವನದಂತೆ ಶೋಭಿಸುತ್ತಿತ್ತು.॥3॥

ಮೂಲಮ್ - 4

ಕಾಂಚನೋತ್ಪಲಪದ್ಮಾಭಿರ್ವಾಪೀಭಿರುಪಶೋಭಿತಾಮ್ ।
ಬಹ್ವಾಸ ನಕುಥೋಪೇತಾಂ ಬಹುಭೂಮಿಗೃಹಾಯುತಾಮ್ ॥

ಅನುವಾದ

ಸುವರ್ಣಮಯವಾದ ಕಮಲ ಹಾಗೂ ಕನ್ನೆದಿಲೆಗಳುಳ್ಳ ಕೊಳಗಳಿಂದ ಶೋಭಾಯಮಾನವಾಗಿತ್ತು. ಅಲ್ಲಿ ಅನೇಕ ನೆಲಮಾಳಿಗೆಗಳು ಇದ್ದುವು. ಅವು ಆಸನಗಳಿಂದಲೂ, ಚಿತ್ರಗಂಬಳಿಗಳಿಂದಲೂ ಅಲಂಕೃತವಾಗಿತ್ತು.॥4॥

ಮೂಲಮ್ - 5

ಸರ್ವರ್ತುಕುಸುಮೈ ರಮ್ಯಾಂ ಫಲವದ್ಭಿಶ್ಚ ಪಾದಪೈಃ ।
ಪುಷ್ಪಿತಾನಾಮಶೋಕಾನಾಂ ಶ್ರಿಯಾ ಸೂರ್ಯೋದಯಪ್ರಭಾಮ್ ॥

ಅನುವಾದ

ಆ ವನವು ಎಲ್ಲ ಋತುಗಳಲ್ಲಿಯೂ ಹೂ-ಹಣ್ಣುಗಳನ್ನು ನೀಡುವ ಫಲಭರಿತ ವೃಕ್ಷಗಳಿಂದ ಕೂಡಿದ್ದಿತು. ಪುಷ್ಪಿತವಾದ ಅಶೋಕ ವೃಕ್ಷಗಳ ಕಾಂತಿಯು ಉದಿತಸೂರ್ಯನ ಪ್ರಭೆಯನ್ನು ಅನುಕರಿಸುತ್ತಿದ್ದು ದೇದೀಪ್ಯಮಾನವಾಗಿ ಶೋಭಿಸುತ್ತಿತ್ತು.॥5॥

ಮೂಲಮ್ - 6

ಪ್ರದೀಪ್ತಾಮಿವ ತತ್ರಸ್ಥೋ ಮಾರುತಿಃ ಸಮುದೈಕ್ಷತ ।
ನಿಷ್ಪತ್ರಶಾಖಾಂ ವಿಹಗೈಃ ಕ್ರಿಯಮಾಣಾಮಿವಾಸಕೃತ್ ॥

ಮೂಲಮ್ - 7

ವಿನಿಷ್ಪತದ್ಭಿಃ ಶತಶಶ್ಚಿತ್ರೈಃ ಪುಷ್ಪಾವತಂಸಕೈಃ ।
ಆಮೂಲಪುಷ್ಪನಿಚಿತೈರಶೋಕೈಃ ಶೋಕನಾಶನೈಃ ॥

ಅನುವಾದ

ಮಾರುತಿಯು ಕುಳಿತಲ್ಲಿಂದಲೇ ನೋಡುತ್ತಾ ಪ್ರಕಾಶಿತವಾದ ವೃಕ್ಷಗಳ ಮೇಲೆ ನೂರಾರು ಪಕ್ಷಿಗಳು ಪದೇ-ಪದೇ ಮರದಲ್ಲಿ ಹಾರಿಬಂದು ಕುಳಿತುಕೊಳ್ಳುತ್ತಿದ್ದವು. ಆಗ ಕೊಂಬೆಗಳ ಮೇಲೆ ಪಕ್ಷಿಗಳು ಕುಳಿತಿರುವಾಗ ಎಲೆಗಳೇ ಇಲ್ಲವೋ ಎಂಬಂತೆ ಕಾಣುತ್ತಿತ್ತು. ಆ ಪಕ್ಷಿಗಳು ಪುಷ್ಪಗಳನ್ನು ಕೊಕ್ಕಿನಿಂದ ಕಚ್ಚಿಕೊಂಡು ಹಾರಿ ಹೋಗುತ್ತಿದ್ದಾಗ ಅವು ಚಿತ್ರದಲ್ಲಿರುವ ಹೂವುಗಳಂತೆ ಅಲಂಕೃತವಾಗುತ್ತಿದ್ದವು. ಈ ವಿಧದಿಂದ ಪಕ್ಷಿಗಳು ಮರಗಳ ಮೇಲೆ ಹಾರುತ್ತಿದ್ದವು. ಅಲ್ಲಿದ್ದ ಅಶೋಕವೃಕ್ಷಗಳು ಆಮೂಲಾಗ್ರವಾಗಿ ಪುಷ್ಪಗಳಿಂದ ತುಂಬಿಹೋಗಿದ್ದವು. ಅದರಿಂದ ಅವು ನೋಡುವವರ ಶೋಕವನ್ನು ಮರೆಸುತ್ತಿದ್ದವು. ಅಂತಹ ಹಲವಾರು ಅಶೋಕ ವೃಕ್ಷಗಳು ಅಲ್ಲಿದ್ದವು.॥6-7॥

ಮೂಲಮ್ - 8

ಪುಷ್ಪಭಾರಾತಿಭಾರೈಶ್ಚ ಸ್ಪೃಶದ್ಭಿರಿವ ಮೇದಿನೀಮ್ ।
ಕರ್ಣಿಕಾರೈಃ ಕುಸುಮಿತೈಃ ಕಿಂಶುಕೈಶ್ಚ ಸುಪುಷ್ಪಿತೈಃ ॥

ಅನುವಾದ

ಆ ಅಶೋಕವನದಲ್ಲಿ ಅರಳಿನಿಂತ ಕಣಗಿಲೆ ಗಿಡಗಳೂ, ಪುಷ್ಪಿತವಾದ ಮುತ್ತುಗದ ಮರಗಳು ಇದ್ದವು. ಅತಿಯಾದ ಪುಷ್ಪಗಳ ಭಾರದಿಂದ ಆ ವೃಕ್ಷಗಳು ಭೂಮಿಯನ್ನೇ ಸ್ಪರ್ಶಿಸುತ್ತಿವೆಯೋ ಎಂಬಂತೆ ಬಾಗಿದ್ದವು.॥8॥

ಮೂಲಮ್ - 9

ಸ ದೇಶಃ ಪ್ರಭಯಾ ತೇಷಾಂ ಪ್ರದೀಪ್ತ ಇವ ಸರ್ವತಃ ।
ಪುನ್ನಾಗಾಃ ಸಪ್ತಪರ್ಣಾಶ್ಚ ಚಂಪಕೋದ್ಧಾಲಕಾಸ್ತಥಾ ॥

ಮೂಲಮ್ - 10

ವಿವೃದ್ಧಮೂಲಾ ಬಹವಃ ಶೋಭಂತೇ ಸ್ಮ ಸುಪುಷ್ಪಿತಾಃ ।
ಶಾತಕುಂಭನಿಭಾಃ ಕೇಚಿತ್ ಕೇಚಿದಗ್ನಿ ಶಿಖೋಪಮಾಃ ॥

ಮೂಲಮ್ - 11

ನೀಲಾಂಜನನಿಭಾಃ ಕೇಚಿತ್ತತ್ರಾಶೋಕಾಃ ಸಹಸ್ರಶಃ ।
ನಂದನಂ ವಿಬುಧೋದ್ಯಾನಂ ಚಿತ್ರಂ ಚೈತ್ರರಥಂ ಯಥಾ ॥

ಅನುವಾದ

ಹನುಮಂತನು ನೋಡುತ್ತಿದ್ದ ಆ ಪ್ರದೇಶವು ಎಲ್ಲ ಪುಷ್ಪ ವೃಕ್ಷಗಳಿಂದ ಕೂಡಿದ್ದು, ಅವುಗಳ ಪ್ರಭೆಯಿಂದ ಉದ್ದಿಪ್ತವಾಗಿದೆಯೋ ಎಂಬಂತೆ ಕಾಣುತ್ತಿತ್ತು. ಮತ್ತೊಂದು ಭಾಗದಲ್ಲಿ ಸುರಹೊನ್ನೆ ಮರಗಳು, ಏಳೆಲೆಬಾಳೆಗಳೂ, ಸಂಪಿಗೆ ಮರಗಳೂ, ಚಳ್ಳೆಮರಗಳೂ, ಬಹಳ ದಪ್ಪವಾದ ಕಾಂಡಗಳಿಂದ ಕೂಡಿದ್ದು, ಸುಗಂಧ ಪುಷ್ಪಗಳಿಂದ ಕಣ್ಮನಗಳಿಗೆ ಆನಂದವನ್ನುಂಟು ಮಾಡುತ್ತಿದ್ದವು. ಅಲ್ಲಿದ್ದ ಕೆಲವು ಮರಗಳು ಸುವರ್ಣಮಯವಾಗಿಯೂ, ಕೆಲವು ಅಗ್ನಿಜ್ವಾಲೆಯಂತಹ ಪ್ರಭೆಯಿಂದಲೂ, ಕೆಲವು ಕಪ್ಪು ಕಾಡಿಗೆಯಂತೆಯೂ ಶೋಭಿಸುತ್ತಿದ್ದವು. ಅಶೋಕ ವೃಕ್ಷಗಳಂತೂ ಸಾವಿರಾರು ಸಂಖ್ಯೆಯಲ್ಲಿದ್ದವು. ಆ ಉದ್ಯಾನವನವು ದೇವತೆಗಳ ಉದ್ಯಾನವಾದ ನಂದನವನವನ್ನು, ಕುಬೇರನ ಉದ್ಯಾನವಾದ ಚೈತ್ರರಥೋದ್ಯಾನವನ್ನೂ ರಮ್ಯತೆಯಲ್ಲಿ ಮೀರಿಸುವಂತಿತ್ತು.॥9-11॥

ಮೂಲಮ್ - 12

ಅತಿವೃತ್ತಮಿವಾಚಿಂತ್ಯಂ ದಿವ್ಯಂ ರಮ್ಯಂ ಶ್ರಿಯಾವೃತಮ್ ।
ದ್ವಿತೀಯಮಿವ ಚಾಕಾಸಂ ಪುಷ್ಪಜ್ಯೋತಿರ್ಗಣಾಯುತಮ್ ॥

ಅನುವಾದ

ಊಹೆಗೂ ನಿಲುಕದಂತಹ ಸೊಬಗಿನಿಂದ ಕೂಡಿದ್ದ ಆ ಉದ್ಯಾನವು ರಮ್ಯವಾದ ಹಾಗೂ ದಿವ್ಯವಾದ ಕಾಂತಿಯಿಂದ ಶೋಭಿಸುತ್ತಿತ್ತು. ಪುಷ್ಪರೂಪವಾದ ತಾರೆಗಳ ಸಮೂಹಗಳಿಂದ ವ್ಯಾಪ್ತವಾಗಿದ್ದು ಮತ್ತೊಂದು ಆಕಾಶದಂತೆ ವಿರಾಜಿಸುತ್ತಿತ್ತು. ॥12॥

ಮೂಲಮ್ - 13

ಪುಷ್ಪರತ್ನ ಶತೈಶ್ಚಿತ್ರಂ ಪಂಚಮಂ ಸಾಗರಂ ಯಥಾ ।
ಸರ್ವರ್ತುಪುಷ್ಪೆರ್ನಿಚಿತಂ ಪಾದಪೈರ್ಮಧುಗಂಧಿಭಿಃ ॥

ಅನುವಾದ

ಪುಷ್ಪರೂಪವಾದ ನೂರಾರು ರತ್ನಗಳಿಂದ ಚಿತ್ರಿತವಾಗಿದ್ದ ಆ ವನವು ಐದನೆಯ ಸಮುದ್ರದಂತೆ ಕಂಗೊಳಿಸುತ್ತಿತ್ತು. ಎಲ್ಲ ಋತುಗಳಲ್ಲಿಯೂ ಬಿಡುವ ಪುಷ್ಪಗಳಿಂದ ವ್ಯಾಪ್ತವಾಗಿದ್ದು, ಮಧುವಿನ ಗಂಧದಿಂದ ಕೂಡಿರುವ ವೃಕ್ಷಗಳಿಂದ ಸಮಲಂಕೃತವಾದ್ದಿತು. ॥13॥

ಮೂಲಮ್ - 14

ನಾನಾನಿನಾದೈರುದ್ಯಾನಂ ರಮ್ಯಂ ಮೃಗಗಣೈರ್ದ್ವಿಜೈಃ ।
ಅನೇಕಗಂಧಪ್ರವಹಂ ಪುಣ್ಯಗಂಧಂ ಮನೋರಮಮ್ ॥

ಅನುವಾದ

ನಾನಾ ಪ್ರಕಾರವಾಗಿ ಧ್ವನಿಮಾಡುತ್ತಿದ್ದ ಮೃಗ-ಪಕ್ಷಿಗಳ ಸಮೂಹಗಳಿಂದ ನಿಬಿಡವಾಗಿ, ಅನೇಕ ವಿಧವಾದ ಗಂಧವನ್ನು ಹೊರಸೂಸುತ್ತಾ ಪುಣ್ಯಗಂಧ ಯುಕ್ತವಾಗಿದ್ದಿತು.॥14॥

ಮೂಲಮ್ - 15

ಶೈಲೇಂದ್ರಮಿವ ಗಂಧಾಢ್ಯಂ ದ್ವಿತೀಯಂ ಗಂಧಮಾದನಮ್ ।
ಅಶೋಕವನಿಕಾಯಾಂ ತು ತಸ್ಯಾಂ ವಾನರಪುಂಗವಃ ॥

ಅನುವಾದ

ಅತ್ಯಂತ ಮನೋಹರವಾದ ಆ ಉದ್ಯಾನವನವು ಪರ್ವತಗಳಲ್ಲಿ ಶ್ರೇಷ್ಠವಾದ ಎರಡನೆಯ ಗಂಧಮಾದನ ಪರ್ವತವೋ ಎಂಬಂತೆ ಭಾಸವಾಗುತ್ತಿದ್ದಿತು. ಹೀಗೆ ಶೋಭಿಸುತ್ತಿರುವ ಆ ಅಶೋಕವನವನ್ನು ವಾನರಶ್ರೇಷ್ಠನಾದ ಮಾರುತಿಯು ನೋಡಿದನು.॥15॥

ಮೂಲಮ್ - 16

ಸ ದದರ್ಶಾವಿದೂರಸ್ಥಂ ಚೈತ್ಯಪ್ರಾಸಾದಮುಚ್ಛ್ರಿತಮ್ ।
ಮಧ್ಯೇ ಸ್ತಂಭಸಹಸ್ರೇಣ ಸ್ಥಿತಂ ಕೈಲಾಸಪಾಂಡರಮ್ ॥

ಅನುವಾದ

ಬಳಿಕ ವಾನರೋತ್ತಮನು ಮತ್ತೊಂದು ಕಡೆಗೆ ದೃಷ್ಟಿಯನ್ನು ಹರಿಸಿದಾಗ, ದೂರದಲ್ಲಿದ್ದ ಅತ್ಯುನ್ನತವಾದ ನಿರ್ಮಲವಾದ ವರ್ತುಲಾಕಾರದ ಒಂದು ಚೈತ್ಯಪ್ರಾಸಾದವನ್ನು ನೋಡಿದನು. ಅಶೋಕವನದ ಮಧ್ಯಭಾಗದಲ್ಲಿದ್ದ, ಸಾವಿರಾರು ಕಂಬಗಳಿಂದ ಕೂಡಿದ್ದ ಆ ಪ್ರಾಸಾದವು ಧವಳ ಕೈಲಾಸಪರ್ವತದಂತೆ ಬಿಳಿಯಾಗಿ ಶೋಭಿಸುತ್ತಿತ್ತು.॥16॥

ಮೂಲಮ್ - 17

ಪ್ರವಾಲಕೃತಸೋಪಾನಂ ತಪ್ತಕಾಂಚನವೇದಿಕಮ್ ।
ಮುಷ್ಣಂತಮಿವ ಚಕ್ಷೂಂಷಿ ದ್ಯೋತಮಾನಮಿವ ಶ್ರಿಯಾ ॥

ಅನುವಾದ

ಅದರ ಸೋಪಾನವು ಹವಳದ ಮಣಿಗಳಿಂದ ನಿರ್ಮಿತವಾಗಿತ್ತು. ಜಗುಲಿಗಳು ಪುಟಕ್ಕೆ ಹಾಕಿದ ಚಿನ್ನದಿಂದ ರಚಿಸಿದ್ದರು. ಉಜ್ವಲಕಾಂತಿಯಿಂದ ಪ್ರಜ್ವಲಿಸುತ್ತಿದ್ದ ಆ ಚೈತ್ಯಪ್ರಾಸಾದವು ತನ್ನ ರಮ್ಯತೆಯಿಂದ ನೋಡುವವರ ಕಣ್ಣುಗಳನ್ನೇ ಅಪಹರಿಸುವಂತಿದ್ದಿತು. ಹೆಚ್ಚು ಎತ್ತರವಾಗಿದ್ದು ಆಕಾಶದೊಡನೆ ಸ್ಪರ್ಧಿಸುತ್ತಿದೆಯೋ ಎಂಬಂತೆ ಕಾಣುತ್ತಿತ್ತು.॥17॥

ಮೂಲಮ್ - 18

ವಿಮಲಂ ಪ್ರಾಂಶುಭಾವತ್ವಾದುಲ್ಲಿಖಂತಮಿವಾಂಬರಮ್ ।
ತತೋ ಮಲಿನಸಂವೀತಾಂ ರಾಕ್ಷಸ್ತ್ರೀಭಿಃ ಸಮಾವೃತಾಮ್ ॥

ಮೂಲಮ್ - 19

ಉಪವಾಸಕೃಶಾಂ ದೀನಾಂ ನಿಃಶ್ವಸಂತೀಂ ಪುನಃ ಪುನಃ ।
ದದರ್ಶ ಶುಕ್ಲಪಕ್ಷಾದೌ ಚಂದ್ರರೇಖಾಮಿವಾಮಲಾಮ್ ॥

ಅನುವಾದ

ಅದರ ಬಳಿಯಲ್ಲೇ ಹನುಮಂತನು ಬಹಳ ಹೊತ್ತಿನಿಂದ ನಿರೀಕ್ಷಿಸುತ್ತಿದ್ದ, ಬಿದಿಗೆಯ ಚಂದ್ರರೇಖೆಯಂತೆ ಅಮಲಾಂಗಿಯಾದ ಸೀತಾದೇವಿಯನ್ನು ನೋಡಿದನು. ಆಗ ಅವಳ ವಸ್ತ್ರವು ಮಲಿನವಾಗಿತ್ತು. ಘೋರರೂಪಿಣಿಯರಾದ ರಾಕ್ಷಸಿಯರಿಂದ ಸುತ್ತುವರಿಯಲ್ಪಟ್ಟಿದ್ದಳು. ನಿತ್ಯೋಪವಾಸದಿಂದ ಕೃಶಕಾಯಳಾಗಿದ್ದಳು. ಅತ್ಯಂತ ದೀನವದನೆಯಾಗಿದ್ದು, ಪದೇ-ಪದೇ ನಿಟ್ಟುಸಿರು ಬಿಡುತ್ತಿದ್ದಳು.॥18-19॥

ಮೂಲಮ್ - 20

ಮಂದಂ ಪ್ರಖ್ಯಾಯಮಾನೇನ ರೂಪೇಣ ರುಚಿರಪ್ರಭಾಮ್ ।
ಪಿನದ್ಧಾಂ ಧೂಮಜಾಲೇನ ಶಿಖಾಮಿವ ವಿಭಾವಸೋಃ ॥

ಅನುವಾದ

ಜಾಜ್ವಲ್ಯಮಾನವಾಗಿ ಪ್ರಕಾಶಿಸುವ ಅಗ್ನಿಯು ಧೂಮಜಾಲದಿಂದ ಪರಿವೃತವಾದಾಗ, ಅದರ ಕಾಂತಿಯು ಸ್ಪಷ್ಟವಾಗಿ ಕಾಣುವುದಿಲ್ಲ. ಅದರಂತೆ ಮನೋಹರವಾದ ರೂಪ ಸಂಪತ್ತಿನಿಂದ ಕೂಡಿದ್ದ ಅವಳ ಶೋಭೆಯು ಯುಕ್ತಿ-ಯುಕ್ತವಾಗಿ ತರ್ಕದಿಂದ ಆಲೋಚಿಸಿದರೆ ಮಾತ್ರ ಗೋಚರಿಸುತ್ತಿತ್ತು.॥20॥

ಮೂಲಮ್ - 21

ಪೀತೇನೈಕೇನ ಸಂವೀತಾಂ ಕ್ಲಿಷ್ಟೇನೋತ್ತಮವಾಸಸಾ ।
ಸಪಂಕಾಮನಲಂಕಾರಾಂ ವಿಪದ್ಮಾಮಿವ ಪದ್ಮಿನೀಮ್ ॥

ಅನುವಾದ

ಅವಳು ಒಂದೇ ಒಂದು ಪೀತಾಂಬರವನ್ನು ಧರಿಸಿದ್ದಳು. ಅದೂ ಮಲಿನವಾಗಿತ್ತಾದರೂ ಉತ್ತಮವಾಗಿತ್ತು. ಯಾವ ವಿಧವಾದ ಅಲಂಕಾರವನ್ನು ಮಾಡಿಕೊಳ್ಳದೆ ಇರುವುದರಿಂದ ಕಮಲಪುಷ್ಪಗಳಿಂದ ರಹಿತವಾದ, ಕೆಸರಿನಿಂದ ಕೂಡಿದ ಸರೋವರದಂತೆ ಕಾಣುತ್ತಿದ್ದಳು.॥21॥

ಮೂಲಮ್ - 22

ವ್ರೀಡಿತಾಂ ದುಃಖಸಂತಪ್ತಾಂ ಪರಿಮ್ಲಾನಾಂ ತಪಸ್ವಿನೀಮ್ ।
ಗ್ರಹೇಣಾಂಗಾರಕೇಣೇವ ಪೀಡಿತಾಮಿವ ರೋಹಿಣೀಮ್ ॥

ಅನುವಾದ

ಲಜ್ಜಾಯುಕ್ತಳಾಗಿಯೂ, ದುಃಖದಿಂದ ಪರಿತಪಿಸುತ್ತಲೂ, ತಪಸ್ವಿನಿಯಂತೇ ಇದ್ದಳು. ಪಾಪಗ್ರಹ ಅಂಗಾರಕನಿಂದ ಪೀಡಿತವಾದ ರೋಹಿಣಿಯಂತೆ ಕಾಣುತ್ತಿದ್ದಳು.॥22॥

ಮೂಲಮ್ - 23

ಅಶ್ರುಪೂರ್ಣಮುಖೀಂ ದೀನಾಂ ಕೃಶಾಮನಶನೇನ ಚ ।
ಶೋಕಧ್ಯಾನಪರಾಂ ದೀನಾಂ ನಿತ್ಯಂ ದುಃಖಪರಾಯಣಾಮ್ ॥

ಅನುವಾದ

ಕಂಬನಿ ದುಂಬಿದ ಕಣ್ಣುಗಳಿಂದ ಕೂಡಿ ದೀನಳಾಗಿದ್ದಳು. ಆಹಾರವನ್ನು ಸೇವಿಸದೆ ಇದ್ದುದರಿಂದ ಅತ್ಯಂತಕೃಶಳಾಗಿದ್ದಳು. ಶೋಕಿಸುತ್ತಾ ಧ್ಯಾನಮಗ್ನಳಾಗಿದ್ದು ದುಃಖವೆಂಬ ಸಾಗರದಲ್ಲಿ ಮುಳುಗಿಹೋಗಿದ್ದಳು.॥23॥

ಮೂಲಮ್ - 24

ಪ್ರಿಯಂ ಜನಮಪಶ್ಯಂತೀ ಪಶ್ಯಂತೀಂ ರಾಕ್ಷಸೀಗಣಮ್ ।
ಸ್ವಗಣೇನ ಮೃಗೀಂ ಹೀನಾಂ ಶ್ವಗಣಾಭಿವೃತಾಮಿವ ॥

ಅನುವಾದ

ಆತ್ಮೀಯ ಜನರನ್ನು ಕಾಣದೆ ಘೋರರೂಪಿಣಿಯರಾದ ರಾಕ್ಷಸಿಯರನ್ನೇ ನೋಡುತ್ತಿದ್ದ ಅವಳು-ಜಿಂಕೆಗಳ ಸಮೂಹದಿಂದ ತಪ್ಪಿಸಿಕೊಂಡು ನಾಯಿಗಳ ಮಧ್ಯದಲ್ಲಿರುವ ಹೆಣ್ಣುಜಿಂಕೆಯಂತೆ ಕಾಣುತ್ತಿದ್ದಳು.॥24॥

ಮೂಲಮ್ - 25

ನೀಲನಾಗಾಭಯಾ ವೇಣ್ಯಾ ಜಘನಂ ಗತಯೈಕಯಾ ।
ನೀಲಯಾ ನಿರದಾಪಾಯೇ ವನರಾಜ್ಯಾ ಮಹೀಮಿವ ॥

ಅನುವಾದ

ಕೃಷ್ಣಸರ್ಪಸದೃಶವಾದ ಅವಳ ಜಡೆಗಟ್ಟಿದ ನೀಳ್ಗೂದಲುಗಳು ಕಟಿಪ್ರದೇಶದವರೆಗೂ ಪಸರಿಸಿದ್ದವು. ಅಂತಹ ಕಪ್ಪಾದ, ನೀಳವಾದ ತಲೆಗೂದಲಿನಿಂದ ಒಪ್ಪುತ್ತಿದ್ದ ಸೀತಾದೇವಿಯು ಶರತ್ಕಾಲದಲ್ಲಿ ವನರಾಜಿಯಿಂದ ಶೋಭಿಸುವ ಭೂಮಿಯಂತೆ ಕಂಗೊಳಿಸುತ್ತಿದ್ದಳು.॥25॥

ಮೂಲಮ್ - 26

ಸುಖಾರ್ಹಾಂ ದುಃಖಸಂತಪ್ತಾಂ ವ್ಯಸನಾನಾಮಕೋವಿದಾಮ್ ।
ತಾಂ ಸಮೀಕ್ಷ್ಯ ವಿಶಾಲಾಕ್ಷೀಮಧಿಕಂ ಮಲಿನಾಂ ಕೃಶಾಮ್ ॥

ಮೂಲಮ್ - 27

ತರ್ಕಯಾಮಾಸ ಸೀತೇತಿ ಕಾರಣೈರುಪಪಾದಿಭಿಃ ।
ಹ್ರಿಯಮಾಣಾ ತದಾ ತೇನ ರಕ್ಷಸಾ ಕಾಮರೂಪಿಣಾ ॥

ಅನುವಾದ

ರಾಜಕುಮಾರಿಯಾದ ಅವಳು ಸುಖವಾಗಿರಲು ಅರ್ಹಳಾಗಿದ್ದರೂ ದುಃಖದಿಂದ ಪರಿತಪಿಸುತ್ತಿದ್ದಳು. ಈ ಮೊದಲು ವ್ಯಸನವೇನೆಂಬುದನ್ನೇ ಅರಿಯದವಳು. ಈಗಂತೂ ಅಪಾರವಾದ ದುಃಖದಿಂದ ಮಲಿನಳೂ, ಕೃಶಳೂ ಆಗಿದ್ದಳು. ವಿಶಾಲಾಕ್ಷಿಯಾದ ಅವಳನ್ನು ನೋಡಿ ತಾನು ಎಣಿಸಿಕೊಂಡ ಕಾರಣಗಳಿಂದ ಕಾಮ ರೂಪಿಯಾದ ರಾಕ್ಷಸರಾಜನಾದ ರಾವಣನು ಅಪಹರಿಸಿ ತಂದಿರುವ ಸೀತೆಯು ಇವಳೇ ಎಂದು ಹನುಮಂತನು ಭಾವಿಸಿದನು.॥26-27॥

ಮೂಲಮ್ - 28

ಯಥಾರೂಪಾ ಹಿ ದೃಷ್ಟಾ ವೈ ತಥಾರೂಪೇಯಮಂಗನಾ ।
ಪೂರ್ಣಚಂದ್ರಾನನಾಂ ಸುಭ್ರೂಂ ಚಾರುವೃತ್ತಪಯೋಧರಾಮ್ ॥

ಮೂಲಮ್ - 29

ಕುರ್ವಂತೀಂ ಪ್ರಭಯಾ ದೇವಿಂ ಸರ್ವಾ ವಿತಿಮಿರಾ ದಿಶಃ ।
ತಾಂ ನೀಲಕೇಶೀಂ ಬಿಂಬೊಷ್ಠೀಂ ಸುಮಧ್ಯಾಂ ಸುಪ್ರತಿಷ್ಟಿತಾಮ್ ॥

ಮೂಲಮ್ - 30

ಸೀತಾಂ ಪದ್ಮಪಲಾಶಾಕ್ಷೀಂ ಮನ್ಮಥಸ್ಯ ರತಿಂ ಯಥಾ ।
ಇಷ್ಟಾಂ ಸರ್ವಸ್ಯ ಜಗತಃ ಪೂರ್ಣಚಂದ್ರಪ್ರಭಾಮಿವ ॥

ಅನುವಾದ

ಋಷ್ಯಮೂಕ ಪರ್ವತದ ಮೇಲಿಂದ ಅಪಹರಿಸಿಕೊಂಡು ಹೋಗುತ್ತಿದ್ದ ಅಂಗನೆಯಂತೆ ಇವಳು ಗೋಚರಿಸುತ್ತಿರುವಳು. ಹುಣ್ಣಿಮೆಯ ಪೂರ್ಣಚಂದ್ರನಂತೆ ಇವಳ ಮುಖವಿದ್ದು, ಸುಂದರವಾದ ಹಾಗೂ ಡೊಂಕಾದ ಹುಬ್ಬುಗಳಿಂದ ಕೂಡಿದ್ದು, ಸರ್ವಾಂಗಸುಂದರಿಯಾಗಿದ್ದಾಳೆ. ಈ ದೇವಿಯು ತನ್ನ ಶರೀರ ಕಾಂತಿಯಿಂದ ಎಲ್ಲ ಕಡೆಗಳಲ್ಲಿ ಆವರಿಸಿದ ಕತ್ತಲೆಯನ್ನು ಓಡಿಸುತ್ತಿರುವಳು. ನೀಳವಾದ ಕೇಶರಾಶಿಯಿಂದಲೂ, ತೊಂಡೆಯ ಹಣ್ಣಿನಂತೆ ಕೆಂಪಾದ ತುಟಿಗಳಿಂದಲೂ ಕಂಗೊಳಿಸುತ್ತಿದ್ದಳು. ಸುಂದರವಾದ ನಡುವಿನಿಂದ ಕೂಡಿದ್ದು, ಸರ್ವಾಂಗಗಳೂ ಸೌಷ್ಠವತೆಯಿಂದ ಶೋಭಿಸುತ್ತಿದ್ದವು. ಕಣ್ಣುಗಳು ಪದ್ಮ ಪತ್ರದಂತೆ ವಿಶಾಲವಾಗಿದ್ದು, ಈಕೆಯು ಮನ್ಮಥನ ಪತ್ನೀಯಾದ ರತಿಯಂತೆ ಕಾಣುತ್ತಿದ್ದಳು. ಹುಣ್ಣಿಮೆಯ ಬೆಳದಿಂಗಳಂತೆ ಎಲ್ಲರಿಗೂ ಆಹ್ಲಾದವನ್ನುಂಟುಮಾಡುತ್ತಿದ್ದಳು. ಆದ್ದರಿಂದ ನಿಜವಾಗಿ ಈಕೆಯು ಸೀತೆಯೇ ಆಗಿದ್ದಾಳೆ.॥28-30॥

ಮೂಲಮ್ - 31

ಭೂಮೌ ಸುತನುಮಾಸೀನಾಂ ನಿಯತಾಮಿವ ತಾಪಸೀಮ್ ।
ನಿಃಶ್ವಾಸಬಹುಲಾಂ ಭೀರುಂ ಭುಜಗೇಂದ್ರವಧೂಮಿವ ॥

ಮೂಲಮ್ - 32

ಶೋಕಜಾಲೇನ ಮಹತಾ ವಿತತೇನ ನ ರಾಜತೀಮ್ ।
ಸಂಸಕ್ತಾಂ ಧೂಮಜಾಲೇನ ಶಿಖಾಮಿವ ವಿಭಾವಸೋಃ ॥

ಅನುವಾದ

ಈಕೆಯು ಅನುಪಮ ತನು ಸೌಭಾಗ್ಯದಿಂದ ಕಂಗೊಳಿಸುತ್ತಾ ನಿಯಮನಿಷ್ಠಳಾದ ತಾಪಸಿಯಂತೆ ನೆಲದ ಮೇಲೆ ಕುಳಿತಿರುವಳು. ಭಯಗ್ರಸ್ತಳಾಗಿ ತನ್ನ ಬಳಿಗೆ ಯಾರೂ ಬಾರದಿರುವಂತೆ ಫೂತ್ಕರಿಸುವ ಹೆಣ್ಣುಸರ್ಪದಂತೆ, ನಿಟ್ಟುಸಿರುಬಿಡುತ್ತಿರುವಳು. ಬಹಳ ಕಾಲದ ಶೋಕಗಳ ಪರಂಪರೆಯಿಂದ ಕಾಂತಿಶೂನ್ಯಳಾಗಿದ್ದ ಸೀತಾದೇವಿಯು ದಟ್ಟವಾದ ಹೊಗೆಯಿಂದ ಮುಚ್ಚಲ್ಪಟ್ಟ ಯಜ್ಞೇಶ್ವರನಂತೆ ಕಾಣುತ್ತಿದ್ದಾಳೆ.॥31-32॥

ಮೂಲಮ್ - 33

ತಾಂ ಸ್ಮೃತೀಮಿವ ಸಂದಿಗ್ಧಾಮೃದ್ಧಿಂ ನಿಪತಿತಾಮಿವ ।
ವಿಹತಾಮಿವ ಚ ಶ್ರದ್ಧಾಮಾಶಾಂ ಪ್ರತಿಹತಾಮಿವ ॥

ಮೂಲಮ್ - 34

ಸೋಪಸರ್ಗಾಂ ಯಥಾ ಸಿದ್ಧಿಂ ಬುದ್ಧಿಂ ಸಕಲುಷಾಮಿವ ।
ಅಭೂತೇನಾಪವಾದೇನ ಕೀರ್ತಿಂ ನಿಪತಿತಾಮಿವ ॥

ಮೂಲಮ್ - 35

ರಾಮೋಪರೋಧವ್ಯಥಿತಾಂ ರಕ್ಷೋಹರಣಕರ್ಶಿತಾಮ್ ।
ಅಬಲಾಂ ಮೃಗಶಾಬಾಕ್ಷೀಂ ವೀಕ್ಷಮಾಣಾಂ ತತಸ್ತತಃ ॥

ಅನುವಾದ

ಸಂದಿಗ್ಧವಾದ ಅರ್ಥವುಳ್ಳ ಸ್ಮೃತಿವಚನದಂತೆಯೂ, ನಾಶ ಹೊಂದುತ್ತಿರುವ ಐಶ್ಚರ್ಯದಂತೆಯೂ, ದೃಢತೆಯಿಲ್ಲದ ಶ್ರದ್ಧೆಯಂತೆಯೂ, ನೆರವೇರದ ಆಸೆಯಂತೆಯೂ, ವಿಘ್ನದಿಂದ ಕೂಡಿದ ಸಿದ್ಧಿಯಂತೆಯೂ, ಕಲುಷಿತವಾದ ಬುದ್ಧಿಯಂತೆಯೂ, ನಿರಾಧಾರವಾದ ಅಪವಾದದಿಂದ ತಗ್ಗಿಹೋದ ಕೀರ್ತಿಯಂತೆ ಒಪ್ಪುತ್ತಿರುವ, ರಾವಣನಿಂದ ಅಪಹರಿಸಲ್ಪಟ್ಟ ಕಾರಣ ಕೃಶಳಾದ, ಶ್ರೀರಾಮನ ಅಗಲುವಿಕೆಯಿಂದ ವ್ಯಥೆ ಪಡುತ್ತಿರುವ, ಅಬಲೆಯಾದ ಜಿಂಕೆಮರಿಯಂತೆ ಅತ್ತ-ಇತ್ತ ಸುತ್ತಲೂ ನೋಡುತ್ತಿರುವ ಸೀತಾದೇವಿಯನ್ನು ಮಾರುತಿಯು ನೋಡಿದನು.॥33-35॥

ಮೂಲಮ್ - 36

ಬಾಷ್ಪಾಂಬುಪರಿಪೂರ್ಣೇನ ಕೃಷ್ಣವಕ್ರಾಕ್ಷಿಪಕ್ಷ್ಮಣಾ ।
ವದನೇನಾಪ್ರಸನ್ನೇನ ನಿಃಶ್ವಸಂತೀಂ ಪುನಃ ಪುನಃ ॥

ಮೂಲಮ್ - 37

ಮಲಪಂಕಧರಾಂ ದೀನಾಂ ಮಂಡನಾರ್ಹಾಮಮಂಡಿತಾಮ್ ।
ಪ್ರಭಾಂ ನಕ್ಷತ್ರರಾಜಸ್ಯ ಕಾಲಮೇಘೈರಿವಾವೃತಾಮ್ ॥

ಅನುವಾದ

ಆಕೆಯ ಕಣ್ಣುಗಳು ಅಶ್ರುಪೂರ್ಣವಾಗಿದ್ದವು. ಕಣ್ಣಿನ ರೆಪ್ಪೆಗಳು ಡೊಂಕಾಗಿಯೂ ಕಪ್ಪಾಗಿಯೂ ಇದ್ದವು. ಪದೇ-ಪದೇ ನಿಟ್ಟುಸಿರು ಬಿಡುತ್ತಿರುವ ಆಕೆಯ ವದನದಲ್ಲಿ ಪ್ರಸನ್ನತೆಯಿರಲಿಲ್ಲ. ತಪಸ್ಸಿನಿಂದಾಗಿ ಅವಳ ಶರೀರವು ಧೂಳಿನಿಂದಲೂ, ಬೆವರಿನಿಂದಲೂ ಉಂಟಾದ ಕೊಳೆಯಿಂದ ತುಂಬಿಹೋಗಿದ್ದಿತು. ಅಲಂಕರಿಸಿ ಕೊಳ್ಳಲು ಯೋಗ್ಯಳಾಗಿದ್ದರೂ, ಅಲಂಕಾರಾದಿಗಳಿಂದ ರಹಿತಳಾಗಿದ್ದಳು. ದೀನಳಾದ ಆಕೆಯು ಕಾಲಮೇಘಗಳಿಂದ ಸಮಾವೃತನಾದ ನಕ್ಷತ್ರರಾಜನಾದ ಪೂರ್ಣಚಂದ್ರನಂತೆ ಕಾಣುತ್ತಿದ್ದಳು.॥36-37॥

ಮೂಲಮ್ - 38

ತಸ್ಯ ಸಂದಿದಿಹೇ ಬುದ್ಧಿರ್ಮುಹೂಃ ಸೀತಾಂ ನಿರೀಕ್ಷ್ಯ ತು ।
ಆಮ್ನಾ ಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ ॥

ಅನುವಾದ

ಸತತವಾದ ಅಭ್ಯಾಸವಿಲ್ಲದ ಕಾರಣದಿಂದ ವೇದಾದಿ ವಿದ್ಯೆಗಳ ವಿಷಯದಲ್ಲಿ ಸಂದೇಹವು ಉಂಟಾಗುವಂತೆ, ಸೀತೆಯನ್ನು ನೋಡಿ ಹನುಮಂತನಿಗೆ ಇವಳು ಸೀತಾದೇವಿಯು ಹೌದೋ? ಅಲ್ಲವೋ? ಎಂಬ ಸಂದೇಹವು ಉಂಟಾಯಿತು.॥38॥

ಮೂಲಮ್ - 39

ದುಃಖೇನ ಬುಬಧೇ ಸೀತಾಂ ಹನುಮಾನನಲಂಕೃತಾಮ್ ।
ಸಂಸ್ಕಾರೇಣ ಯಥಾ ಹೀನಾಂ ವಾಚಮರ್ಥಾಂತರಂ ಗತಾಮ್ ॥

ಅನುವಾದ

ವ್ಯತ್ಪತ್ತಿ, ವ್ಯಾಕರಣ-ಉಚ್ಚಾರಣೆ ಮುಂತಾದ ಸಂಸ್ಕಾರರಹಿತವಾಗಿ ವಿಪರೀತವಾದ ಅರ್ಥಕೊಡುವ ವಾಕ್ಯದಂತೆ, ತೈಲಾದಿ ಸಂಸ್ಕಾರಗಳಿಲ್ಲದೆ, ಅಲಂಕಾರರಹಿತಳಾದ ಸೀತಾದೇವಿಯನ್ನು, ಆ ಮಾರುತಿಯು ಅತಿ ಕಷ್ಟದಿಂದ ಗುರುತಿಸಿಕೊಂಡನು. ॥39॥

ಮೂಲಮ್ - 40

ತಾಂ ಸಮೀಕ್ಷ್ಯ ವಿಶಾಲಾಕ್ಷೀಂ ರಾಜಪುತ್ರೀಮನಿಂದಿತಾಮ್ ।
ತರ್ಕಯಾಮಾಸ ಸೀತೇತಿ ಕಾರಣೈರುಪಪಾದಿಭಿಃ ॥

ಅನುವಾದ

ಸೌಶೀಲ್ಯವತಿಯೂ, ಜನಕಸುತೆಯೂ, ವಿಶಾಲಾಕ್ಷಿಯೂ ಆದ ಆಕೆಯನ್ನು ಚೆನ್ನಾಗಿ ಪರಿಶೀಲಿಸಿ ನೋಡಿ, ತಾನು ಗಮನಿಸುತ್ತಿದ್ದ ಲಕ್ಷಣಗಳನ್ನು ಕಂಡು ಹನುಮಂತನು ಇವಳೇ ಸೀತಾದೇವಿಯೆಂದು ನಿಶ್ಚಯಿಸಿಕೊಂಡನು.॥40॥

ಮೂಲಮ್ - 41

ವೈದೇಹ್ಯಾ ಯಾನಿ ಚಾಂಗೇಷು ತದಾ ರಾಮೋನ್ವಕೀರ್ತಯತ್ ।
ತಾನ್ಯಾಭರಣಜಾಲಾನಿ ಶಾಖಾಶೋಭೀನ್ಯ ಲಕ್ಷಯತ್ ॥

ಅನುವಾದ

ಶ್ರೀರಾಮನು ವೈದೇಹಿಯು ಯಾವ-ಯಾವ ಅವಯವಗಳಲ್ಲಿ ಯಾವ-ಯಾವ ಆಭರಣಗಳನ್ನು ಧರಿಸುತ್ತಿರುವಳು ಎಂದು ಹನುಮಂತನ ಬಳಿ ಹೇಳಿದ್ದನು. ಅವೆಲ್ಲ ಆಭರಣಗಳು ಅಲ್ಲೇ ಇದ್ದ ಒಂದು ಮರದ ಕೊಂಬೆಯಲ್ಲಿ ತೂಗುಹಾಕಿದ್ದನ್ನು ಮಾರುತಿಯು ನೋಡಿದನು.॥41॥

ಮೂಲಮ್ - 42

ಸುಕೃತೌ ಕರ್ಣವೇಷ್ಟೌ ಚ ಶ್ವದಂಷ್ಟ್ರೌ ಚ ಸುಸಂಸ್ಥಿತೌ ।
ಮಣಿವಿದ್ರುಮಚಿತ್ರಾಣಿ ಹಸ್ತೇಷ್ವಾಭರಣಾನಿ ಚ ॥

ಮೂಲಮ್ - 43

ಶ್ಯಾಮಾನಿ ಚಿರಯುಕ್ತತ್ವಾತ್ತಥಾ ಸಂಸ್ಥಾನವಂತಿ ಚ ।
ತಾನ್ಯೇವೈತಾನಿ ಮನ್ಯೇಹಂ ಯಾನಿ ರಾಮೋನ್ವ ಕೀರ್ತಯತ್ ॥

ಅನುವಾದ

ಸುಂದರವಾಗಿ ನಿರ್ಮಿತವಾದ ಕರ್ಣಾಭರಣಗಳು ಚೆನ್ನಾಗಿ ಕಾಣುವ ‘ಶ್ವದಂಷ್ಟ್ರ’ವೆಂಬ ತ್ರಿಕರ್ಣವೆಂಬ ಕರ್ಣಪುಷ್ಪಗಳೂ, ಮಣಿ-ಹವಳಗಳಿಂದ ನಿರ್ಮಿಸಲ್ಪಟ್ಟ ಚಿತ್ರ-ವಿಚಿತ್ರವಾದ ಹಸ್ತಾಭರಣಗಳೂ ಇಲ್ಲಿವೆ. ಹೆಚ್ಚುಕಾಲ ಧರಿಸದೆ ಇರುವುದರಿಂದ, ಸೀತಾ ವಿರಹತಾಪದಿಂದ ಅವು ಕಪ್ಪಾಗಿ ಹೋಗಿವೆ. ಹಾಗೂ ಅವುಗಳ ಚಿಹ್ನೆಗಳು ಶರೀರದಲ್ಲಿ ಕಾಣುತ್ತಿವೆ. ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಈ ಆಭರಣಗಳು ಶ್ರೀರಾಮನು ವರ್ಣಿಸಿದ ಆಭರಣಗಳೇ ಎಂದು ನಾನು ಭಾವಿಸುತ್ತೇನೆ.॥42-43॥

ಮೂಲಮ್ - 44

ತತ್ರ ಯಾನ್ಯವಹೀನಾನಿ ತಾನ್ಯಹಂ ನೋಪಲಕ್ಷಯೇ ।
ಯಾನ್ಯಸ್ಯಾ ನಾವಹೀನಾನಿ ತಾನೀಮಾನಿ ನ ಸಂಶಯಃ ॥

ಅನುವಾದ

ಋಷ್ಯಮೂಕ ಪರ್ವತದಲ್ಲಿ ಸೀತಾದೇವಿಯು ಯಾವ-ಯಾವ ಆಭರಣಗಳನ್ನು ಕೆಳಕ್ಕೆ ಹಾಕಿದ್ದಳೋ, ಆ ಯಾವ ಆಭರಣಗಳೂ ಇಲ್ಲಿ ಕಾಣುವುದಿಲ್ಲ. ಉಳಿದಿರುವ ಮತ್ತು ಇಲ್ಲಿ ಇರುವ ಆಭರಣಗಳು ಶ್ರೀರಾಮನು ವರ್ಣಿಸಿದ ಆಭರಣಗಳೇ ಆಗಿವೆ. ಇದರಲ್ಲಿ ಸಂದೇಹವೇ ಇಲ್ಲ.॥44॥

ಮೂಲಮ್ - 45

ಪೀತಂ ಕನಕಪಟ್ಟಾಭಂ ಸ್ರಸ್ತಂ ತದ್ವಸನಂ ಶುಭಮ್ ।
ಉತ್ತರೀಯಂ ನಗಾಸಕ್ತಂ ತದಾ ದೃಷ್ಟಂ ಪ್ಲವಂಗಮೈಃ ॥

ಅನುವಾದ

ಅಂದು ಋಷ್ಯಮೂಕ ಪರ್ವತದಲ್ಲಿ ಬೀಳಿಸಿದ ಭಂಗಾರದ ಗಂಟಿನ ಪೀತಾಂಬರದಂತೆ ಹೊಂಬಣ್ಣದ ಉತ್ತರೀಯವು ಮರದಲ್ಲಿ ಸಿಕ್ಕಿಕೊಂಡಿರುವುದನ್ನು ವಾನರ ಮುಖ್ಯರು ನೋಡಿದ್ದರು.॥45॥

ಮೂಲಮ್ - 46

ಭೂಷಣಾನಿ ವಿಚಿತ್ರಾಣಿ ದೃಷ್ಟಾನಿ ಧರಣೀತಲೆ ।
ಅನಯೈವಾಪವಿದ್ಧಾನಿ ಸ್ವನವಂತಿ ಮಹಾಂತಿ ಚ ॥

ಅನುವಾದ

ಸೀತೆಯೇ ಭೂಮಿಗೆ ಎಸೆದಿರುವ, ಝಣ-ಝಣ ಎಂಬ ಶಬ್ದರಿಂದ ಕೂಡಿದ್ದ ಶ್ರೇಷ್ಠವಾದ, ಅತಿಮುಖ್ಯವಾದ ಭೂಷಣಗಳನ್ನು ಕೂಡ ಆ ವಾನರರು ನೋಡಿದ್ದರು.॥46॥

ಮೂಲಮ್ - 47

ಇದಂ ಚಿರಗೃಹೀತತ್ವಾದ್ವಸನಂ ಕ್ಲಿಷ್ಟವತ್ತರಮ್ ।
ತಥಾಪಿ ನೂನಂ ತದ್ವರ್ಣಂ ತಥಾ ಶ್ರೀಮದ್ಯಥೇತರತ್ ॥

ಮೂಲಮ್ - 48

ಇಯಂ ಕನಕವರ್ಣಾಂಗೀ ರಾಮಸ್ಯ ಮಹಿಷೀ ಪ್ರಿಯಾ ।
ಪ್ರನಷ್ಟಾಪಿ ಸತೀ ಯಾಸ್ಯ ಮನಸೋ ನ ಪ್ರಣಶ್ಯತಿ ॥

ಅನುವಾದ

ಈಗ ಇವಳುಟ್ಟಿರುವ ವಸ್ತ್ರವು ಬಹಳ ಕಾಲದಿಂದ ಧರಿಸಿರುವುದರಿಂದ ಮಲಿನವಾಗಿದೆ. ಆದರೆ ಅದರ ಬಣ್ಣ ಸ್ವಲ್ಪವೂ ಮಾಸಿರುವುದಿಲ್ಲ. ಋಷ್ಯಮೂಕಪರ್ವತದಲ್ಲಿ ಬಿದ್ದಿದ್ದ ಮೇಲುವಸ್ತ್ರದಂತೆ, ಈಗ ಉಟ್ಟಿರುವ ವಸ್ತ್ರವೂ ಕಾಂತಿಯುಕ್ತವಾಗಿದೆ. ಚಿನ್ನದಂತೆ ಮೈಬಣ್ಣವಿರುವ, ರಾಮನ ಪಟ್ಟಮಹಿಷಿಯಾದ, ಪತಿವ್ರತೆಯಾದ ಈ ಸೀತಾದೇವಿಯೂ ಶರೀರದಿಂದ ರಾಮನಿಂದ ದೂರವಿದ್ದರೂ, ಮನಸ್ಸಿನಿಂದ ಮಾತ್ರ ಇವಳು ಕೂಡಿಕೊಂಡೇ ಇರುವಳು.॥48॥

ಮೂಲಮ್ - 49

ಇಯಂ ಸಾ ಯತ್ಕೃತೇ ರಾಮಶ್ಚತುರ್ಭಿಃ ಪರಿತಪ್ಯತೇ ।
ಕಾರುಣ್ಯೇನಾನೃ ಶಂಸ್ಯೇನ ಶೋಕೇನ ಮದನೇನ ಚ ॥

ಅನುವಾದ

ಶ್ರೀರಾಮನು ಯಾರ ಸಲುವಾಗಿ ಕಾರುಣ್ಯ, ಅನೃಂಶಸ್ಯ, ಶೋಕ, ಪ್ರೇಮ ಎಂಬ ನಾಲ್ಕರಿಂದಲೂ ಪರಿತಪಿಸುತ್ತಿರುವನೋ ಅಂತಹ ಸೀತಾದೇವಿಯು ಇವಳೇ ಆಗಿದ್ದಾಳೆ.॥49॥

ಮೂಲಮ್ - 50

ಸ್ತ್ರೀ ಪ್ರನಷ್ಟೇತಿ ಕಾರುಣ್ಯಾದಾಶ್ರಿತೇತ್ಯಾನೃ ಶಂಸ್ಯತಃ ।
ಪತ್ನೀ ನಷ್ಟೇತಿ ಶೋಕೇನ ಪ್ರಿಯೇತಿ ಮದನೇನ ಚ ॥

ಅನುವಾದ

ಸ್ತ್ರೀಯೊಬ್ಬಳು ಅಪಹೃತಳಾದಳೆಂಬುದು ಕರುಣಾಮಯ ತಾಪಕ್ಕೆ ಕಾರಣ. ತನಗೆ ಆಶ್ರಿತವಾಗಿದ್ದ ಸ್ತ್ರೀಯ ಅಪಹೃತಳಾದಳೆಂಬುದು ದಯೆಯ ಪರಿಣಾಮದಿಂದ ಉಂಟಾದ ತಾಪಕ್ಕೆ ಕಾರಣ. ಸ್ತ್ರೀಯು ಆಶ್ರಿತಳೂ ಹಾಗೂ ಪತ್ನಿಯೂ ಆದವಳು ಕಣ್ಮರೆಯಾದಳೆಂಬ ಶೋಕರೂಪವಾದ ತಾಪಕ್ಕೆ ಕಾರಣವು. ಸ್ತ್ರೀಯೂ, ಆಶ್ರಿತಳೂ, ಪ್ರಿಯಪತ್ನಿಯೂ, ಆಗಿದ್ದವಳು. ಕಳೆದುಹೋದರಿಂದ ಪ್ರೇಮದಿಂದ ಉಂಟಾದ ವೇದನೆಗೆ ಕಾರಣವು. ಹೀಗೆ ನಾಲ್ಕು ವಿಧವಾದ ಕಾರಣಗಳಿಂದ ಶ್ರೀರಾಮನು ಪರಿತಪಿಸುತ್ತಿದ್ದನು.॥50॥

ಮೂಲಮ್ - 51

ಅಸ್ಯಾ ದೇವ್ಯಾ ಯಥಾ ರೂಪಮಂಗಪ್ರತ್ಯಂಗಸೌಷ್ಟವಮ್ ।
ರಾಮಸ್ಯ ಚ ಯಥಾರೂಪಂ ತಸ್ಯೇಯಮಸಿತೇಕ್ಷಣಾ ॥

ಅನುವಾದ

ಅಂಗಪ್ರತ್ಯಂಗ ಸೌಷ್ಠವಗಳಿಂದ ಕೂಡಿದವಳು ಲೋಕ ಸುಂದರೀ ಸೀತಾದೇವಿಯು. ಸೌಂದರ್ಯದಲ್ಲಿ ಶ್ರೀರಾಮನು ಪುರುಷಮೋಹನಾಕಾರನು. ಎಲ್ಲ ವಿಧದಿಂದಲೂ ಇವರು ಒಬ್ಬರಿಗೊಬ್ಬರು ಸಮಾನರೇ. ಆದುದರಿಂದ ಈ ಸಾಧ್ವಿಯು ಶ್ರೀರಾಮನಿಗೆ ಯೋಗ್ಯಭಾರ್ಯೆಯೇ ಆಗಿದ್ದಾಳೆ.॥51॥

ಮೂಲಮ್ - 52

ಅಸ್ಯಾ ದೇವ್ಯಾ ಮನಸ್ತಸ್ಮಿಂಸ್ತಸ್ಯ ಚಾಸ್ಯಾಂ ಪ್ರತಿಷ್ಠಿತಮ್ ।
ತೇನೇಯಂ ಸ ಚ ಧರ್ಮಾತ್ಮಾ ಮುಹೂರ್ತಮಪಿ ಜೀವತಿ ॥

ಅನುವಾದ

ಸೀತಾದೇವಿಯ ಮನಸ್ಸು ಶ್ರೀರಾಮನಲ್ಲಿಯೇ ಲೀನವಾಗಿಬಿಟ್ಟಿದೆ. ಶ್ರೀರಾಮನ ಮನಸ್ಸು ಸೀತೆಯಲ್ಲಿ ಲೀನವಾಗಿದೆ. ಶರೀರಗಳ ದೃಷ್ಟಿಯಿಂದ ಪರಸ್ಪರ ಬಹಳ ದೂರವಿದ್ದರೂ, ಅಂತರಂಗದಲ್ಲಿ ಪರಸ್ಪರರಿಬ್ಬರೂ ನೋಡುತ್ತಲೇ ಇದ್ದಾರೆ. ಈ ಕಾರಣದಿಂದಲೇ ಸೀತಾದೇವಿಯೂ, ಧರ್ಮಾತ್ಮನಾದ ಶ್ರೀರಾಮನೂ ಇಲ್ಲಿಯವರೆಗೆ ಬದುಕಿದ್ದಾರೆ.॥52॥

ಮೂಲಮ್ - 53

ದುಷ್ಕರಂ ಕೃತವಾನ್ ರಾಮೋ ಹೀನೋ ಯದನಯಾ ಪ್ರಭುಃ ।
ಧಾರಯತ್ಯಾತ್ಮನೋ ದೇಹಂ ನ ಶೋಕೇನಾವಸೀದತಿ ॥

ಅನುವಾದ

ಸಾಧ್ವಿಯೂ, ಸರ್ವಾಂಗ ಸುಂದರಿಯೂ ಆದ ಸೀತಾದೇವಿಯಿಂದ ಆಗಲಿದ್ದರೂ ಶ್ರೀರಾಮನು ತನ್ನ ದೇಹವನ್ನು ಧರಿಸಿಕೊಂಡಿರುವನು. ವಿರಹ ಶೋಕದಿಂದ ನಾಶಹೊಂದಿಲ್ಲ. ಇಂತಹ ದುಃಸ್ಥಿತಿಯಲ್ಲಿ ಅವನು ಕಠೋರವಾದ ಧೈರ್ಯ-ಸ್ಥೈರ್ಯಗಳನ್ನು ಹೊಂದಿರುವನು.॥53॥

ಮೂಲಮ್ - 54

ದುಷ್ಕರಂ ಕರುತೇ ರಾಮೋ ಯ ಇಮಾಂ ಮತ್ತಕಾಶಿನೀಮ್ ।
ಸೀತಾಂ ವಿನಾಂ ಮಹಾಬಾಹುಃ ಮುಹೂರ್ತಮಪಿ ಜೀವತಿ ॥

ಅನುವಾದ

ನಡುಜವ್ವನೆಯಾದ ಈ ಸೀತಾದೇವಿಯನ್ನು ಕ್ಷಣಕಾಲವಾದರೂ ಬಿಟ್ಟು ಇರದೇ ಇರುವ ಶ್ರೀರಾಮನು ಇಷ್ಟರವರೆಗೆ ಜೀವಿಸಿರುವುದು ನಿಜವಾಗಿ ದುಷ್ಕರವಾದ ಕಾರ್ಯವೇ.॥54॥

ಮೂಲಮ್ - 55

ಏವಂ ಸೀತಾಂ ತದಾ ದೃಷ್ಟ್ವಾ ಹೃಷ್ಟಃ ಪವನಸಂಭವಃ ।
ಜಗಾಮ ಮನಸಾ ರಾಮಂ ಪ್ರಶಶಂಸ ಚ ತಂ ಪ್ರಭುಮ್ ॥

ಅನುವಾದ

ಹೀಗೆ ಸೀತೆಯನ್ನು ಕಂಡ ಹನುಮಂತನು ಅನೇಕ ಕಾರಣಗಳಿಂದ ಇವಳೇ ಸೀತೆಯೆಂಬುದನ್ನು ನಿಶ್ಚಯಿಸಿ, ವಾಯುನಂದನನು ಮಹದಾನಂದ ಭರಿತನಾದನು. ಅವನು ಶ್ರೀರಾಮನನ್ನು ಮನಸ್ಸಿನಿಂದಲೇ ಧ್ಯಾನಿಸುತ್ತಾ, ಶ್ರೀರಾಮನನ್ನು ಪ್ರಶಂಸೆ ಮಾಡಿದನು. (ಇಂತಹ ಉತ್ತಮ ಸಾಧ್ವಿಯಾದ ಭಾರ್ಯೆಗಾಗಿ ಪರಿತಪಿಸುವುದು ಶ್ರೀರಾಮನಿಗೆ ಉಚಿತವೇ. ಇಂತಹ ಸೌಶೀಲ್ಯವತಿಯಾದ ಪತ್ನಿಯನ್ನು ಹೊಂದಲು ಅವನೇ ಯೋಗ್ಯನು.)॥55॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚದಶಃ ಸರ್ಗಃ ॥ 15 ॥
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹದಿನೈದನೆಯ ಸರ್ಗವು ಮುಗಿಯಿತು.

ಅನುವಾದ