०१४ अशोकवाटिकाप्रवेशः

वाचनम्
ಭಾಗಸೂಚನಾ

ಹನುಮಂತನು ಅಶೋಕವನವನ್ನು ಪ್ರವೇಶಿಸಿ ಅದರ ಸೊಬಗನ್ನು ನೋಡಿದುದು, ಅಶೋಕವೃಕ್ಷದ ಮೇಲೆ ಕುಳಿತು ಸೀತೆಯಿರುವ ಸ್ಥಳವನ್ನು ಹುಡುಕಿದುದು

ಮೂಲಮ್ - 1

ಸ ಮುಹೂರ್ತಮಿವ ಧ್ಯಾತ್ವಾ ಮನಸಾ ಚಾಧಿಗಮ್ಯತಾಮ್ ।
ಅವಪ್ಲುತೋ ಮಹಾತೇಜಾಃ ಪ್ರಾಕಾರಂ ತಸ್ಯ ವೇಶ್ಮನಃ ॥

ಅನುವಾದ

ಮಹಾತೇಜಸ್ವಿಯಾದ ಆ ಹನುಮಂತನು ಕ್ಷಣಕಾಲದವರೆಗೆ ಮುಂದೆ ಮಾಡಬೇಕಾದ ಕಾರ್ಯದ ಬಗೆಗೆ ಯೋಚಿಸುತ್ತಾ, ಸೀತಾದೇವಿಯನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ, ಮಾನಸಿಕವಾಗಿ ಅಶೋಕವನವನ್ನು ಸೇರಿದನು. ಅನಂತರ ರಾವಣನ ಭವನದಿಂದ ಹಾರಿ ಅಶೋಕವನದ ಪ್ರಾಕಾರವನ್ನು ಅಡರಿದನು.॥1॥

ಮೂಲಮ್ - 2

ಸ ತು ಸಂಹೃಷ್ಟಸರ್ವಾಂಗಃ ಪ್ರಾಕಾರಸ್ಥೋ ಮಹಾಕಪಿಃ ।
ಪುಷ್ಪಿತಾಗ್ರಾನ್ ವಸಂತಾದೌ ದದರ್ಶ ವಿವಿಧಾನ್ ದ್ರುಮಾನ್ ॥

ಅನುವಾದ

ಪ್ರಾಕಾರದ ಮೇಲಿದ್ದ ಆ ಮಹಾಕಪಿವರನು ಪುಲಕಿತಗಾತ್ರನಾಗಿ, ವಸಂತ ಋತುವಿನ ಪ್ರಾರಂಭದಲ್ಲಿ ಸಮೃದ್ಧವಾಗಿ ಪುಷ್ಪಗಳಿಂದ ಕೂಡಿರುವ ವಿಧ-ವಿಧವಾದ ವೃಕ್ಷಗಳನ್ನು ಆ ಅಶೋಕವನದಲ್ಲಿ ನೋಡಿದನು.॥2॥

ಮೂಲಮ್ - 3

ಸಾಲಾನಶೋಕಾನ್ ಭವ್ಯಾಂಶ್ಚ ಚಂಪಕಾಂಶ್ಚ ಸುಪುಷ್ಟಿತಾನ್ ।
ಉದ್ದಾಲಕಾನ್ನಾಗವೃಕ್ಷಾಂಶ್ಚೂತಾನ್ ಕಪಿಮೂಖಾನಪಿ ॥

ಮೂಲಮ್ - 4

ಅಥಾಮ್ರವಣಸಂಛನ್ನಾಂ ಲತಾಶತಸಮಾವೃತಾಮ್ ।
ಜ್ಯಾಮುಕ್ತ ಇವ ನಾರಾಚಃ ಪುಪ್ಲುವೇ ವೃಕ್ಷವಾಟಿಕಾಮ್ ॥

ಅನುವಾದ

ಅಲ್ಲಿ ಅನೇಕ ಮತ್ತಿಮರಗಳೂ, ಭವ್ಯವಾದ ಅಶೋಕ ವೃಕ್ಷಗಳೂ, ಹೂವುಗಳಿಂದ ಅಲಂಕೃತವಾದ ಸಂಪಿಗೆಯ ಮರಗಳೂ, ಚಳ್ಳೆಮರಗಳೂ, ನಾಗಸಂಪಿಗೆ ಮರಗಳೂ, ಅನೇಕ ಜಾತಿಯ ಮಾವಿನಮರಗಳೂ ಇದ್ದುವು. ಕೋತಿಮಾವಿನ ಹಣ್ಣಿನ ಮರಗಳೂ ಅಲ್ಲಿ ಹೇರಳವಾಗಿದ್ದವು. ನೂರಾರು ಬಳ್ಳಿಗಳಿಂದ ಸುತ್ತುವರಿಯಲ್ಪಟ್ಟ ಆ ವೃಕ್ಷವಾಟಿಕೆಯನ್ನು ಬಿಲ್ಲಿನ ನಾಣಿನಿಂದ ಹೊರಟ ಬಾಣದಂತೆ ಹನುಮಂತನು ವೇಗವಾಗಿ ಒಂದೇ ನೆಗೆತಕ್ಕೆ ಅಶೋಕವನಕ್ಕೆ ಹಾರಿದನು.॥3-4॥

ಮೂಲಮ್ - 5

ಸ ಪ್ರವಿಶ್ಯ ವಿಚಿತ್ರಾಂ ತಾಂ ವಿಹಗೈರಭಿನಾದಿತಾಮ್ ।
ರಾಜತೈಃ ಕಾಂಚನೈಶ್ಚೈವ ಪಾದಪೈಃ ಸರ್ವತೋ ವೃತಾಮ್ ॥

ಮೂಲಮ್ - 6

ವಿಹಗೈರ್ಮೃಗಸಂಘೈಶ್ಚ ವಿಚಿತ್ರಾಂ ಚಿತ್ರಕಾನನಾಮ್ ।
ಉದಿತಾದಿತ್ಯಸಂಕಾಶಾಂ ದದರ್ಶ ಹನುಮಾನ್ ಕಪಿಃ ॥

ಅನುವಾದ

ಅವನು ಚಿತ್ರ-ವಿಚಿತ್ರವಾದ ವೃಕ್ಷವಾಟಿಕೆಯನ್ನು ಹೊಕ್ಕನು. ಅಲ್ಲಿ ಪಕ್ಷಿಗಳ ಕಿಲ-ಕಿಲ ಧ್ವನಿಗಳು ತುಂಬಿದ್ದವು. ಚಿನ್ನ ಮತ್ತು ಬೆಳ್ಳಿಯಂತೆ ಶೋಭಿಸುವ ವೃಕ್ಷಗಳಿಂದಲೂ, ಪಕ್ಷಿಗಳ, ಮೃಗಗಳ ಸಮೂಹಗಳಿಂದ ಕೂಡಿದ್ದು ವಿಚಿತ್ರವಾಗಿ ಕಾಣುತ್ತಿತ್ತು. ಅದು ಉದಿಸಿದ ಸೂರ್ಯಕಾಂತಿಯಂತೆ ಪ್ರಕಾಶಿಸುತ್ತಾ ವಿರಾಜಿಸುತ್ತಿದ್ದಿತು. ಹನುಮಂತನು ಅಂತಹ ವಿಚಿತ್ರವಾದ ಉದ್ಯಾನವನವನ್ನು ನೋಡಿದನು.॥5-6॥

ಮೂಲಮ್ - 7

ವೃತಾಂ ನಾನಾವಿಧೈವೃಕ್ಷೈಃ ಪುಷ್ಪೋಪಗಲೋಪಗೈಃ ।
ಕೋಕಿಲೈರ್ಭೃಂಗರಾಜೈಶ್ಚ ಮತ್ತೈರ್ನಿತ್ಯನಿಷೇವಿತಾಮ್ ॥

ಮೂಲಮ್ - 8

ಪ್ರಹೃಷ್ಟಮನುಜೇ ಕಾಲೇ ಮೃಗಪಕ್ಷಿಸಮಾಕುಲೇ ।
ಮತ್ತಬರ್ಹಿಣಸಂಘುಷ್ಟಾಂ ನಾನಾದ್ವಿಜಗಣಾಯುತಾಮ್ ॥

ಅನುವಾದ

ಆ ಸಮಯವು ಮಾನವರೆಲ್ಲರೂ ನಕ್ಕು-ನಲಿಯುವ ವಸಂತಕಾಲವಾಗಿದ್ದಿತು. ಫಲ-ಪುಷ್ಪಗಳಿಂದ ಸಮೃದ್ಧವಾದ ನಾನಾವಿಧ ವೃಕ್ಷಗಳಿಂದ ವ್ಯಾಪ್ತವಾಗಿದ್ದಿತು. ಮದಿಸಿದ ದುಂಬಿಗಳೂ, ಕೋಗಿಲೆಗಳೂ ಆ ವೃಕ್ಷಗಳನ್ನು ಆಶ್ರಯಿಸಿದ್ದವು. ಮತ್ತ ಮಯೂರಗಳು ನಿನಾದ ಮಾಡುತ್ತಿದ್ದವು. ನಾನಾವಿಧವಾದ ಪಕ್ಷಿಗಳ ಸಮೂಹಗಳಿಂದ, ಮೃಗಗಳ ಹಿಂಡಿನಿಂದ ಸಮಾವೃತವಾಗಿತ್ತು. ಅಂತಹ ಸುಂದರವಾದ ಅಶೋಕವನವನ್ನು ಹನುಮಂತನು ನೋಡಿದನು.॥7-8॥

ಮೂಲಮ್ - 9

ಮಾರ್ಗಮಾಣೋ ವರಾರೋಹಾಂ ರಾಜಪುತ್ರೀಮನಿಂದಿತಾಮ್ ।
ಸುಖಪ್ರಸುಪ್ತಾನ್ ವಿಹಗಾನ್ ಬೋಧಯಾಮಾಸ ವಾನರಃ ॥

ಅನುವಾದ

ಸರ್ವಶುಭಲಕ್ಷಣಸಂಪನ್ನೆಯೂ ಸೌಂದರ್ಯರಾಶಿಯೂ ಆದ ಜನಕಸುತೆಯನ್ನು ಹುಡುಕುತ್ತಿದ್ದ ಹನುಮಂತನು ಸುಖ ನಿದ್ದೆಯಲ್ಲಿದ್ದ ಪಕ್ಷಿಗಳನ್ನು ರೆಂಬೆಗಳನ್ನು ಅಲ್ಲಾಡಿಸಿ ಎಚ್ಚರಿಸಿದನು.॥9॥

ಮೂಲಮ್ - 10

ಉತ್ಪತದ್ಭಿರ್ದ್ವಿಜಗಣೈಃ ಪಕ್ಷೈಃ ಸಾಲಾಃ ಸಮಾಹತಾಃ ।
ಅನೇಕವರ್ಣಾ ವಿವಿಧಾ ಮುಮುಚುಃ ಪುಷ್ಪವೃಷ್ಟಯಃ ॥

ಅನುವಾದ

ಗಾಬರಿಗೊಂಡು ಮೇಲಕ್ಕೆ ಹಾರುತ್ತಿದ್ದ ಪಕ್ಷಿಗಳ ರೆಕ್ಕೆಗಳ ಬಡಿತದಿಂದಾಗಿ ಪುಷ್ಪಭರಿತವಾಗಿದ್ದ ವೃಕ್ಷಗಳು ನೂರಾರು ಬಣ್ಣ-ಬಣ್ಣದ ಹೂಮಳೆಯನ್ನೇ ಸುರಿಸಿದವು.॥10॥

ಮೂಲಮ್ - 11

ಪುಷ್ಪಾವಕೀರ್ಣಃ ಶುಶುಭೇ ಹನುಮಾನ್ ಮಾರುತಾತ್ಮಜಃ ।
ಅಶೋಕವನಿಕಾಮಧ್ಯೇ ಯಥಾ ಪುಷ್ಪಮಯೋ ಗಿರಿಃ ॥

ಅನುವಾದ

ವಾಯು ಪುತ್ರನಾದ ಹನುಮಂತನ ಮೇಲೆ ಸುರಿಯುತ್ತಿದ್ದ ಹೂಮಳೆಯಿಂದ ಮುಳುಗಿ ಮಾರುತಿಯು ಆ ಅಶೋಕವನದ ಮಧ್ಯದಲ್ಲಿ ಪುಷ್ಪಮಯ ಪರ್ವತದಂತೆ ಪ್ರಕಾಶಿಸುತ್ತಿದ್ದನು.॥11॥

ಮೂಲಮ್ - 12

ದಿಶಃ ಸರ್ವಾಃ ಪ್ರಧಾವಂತಂ ವೃಕ್ಷಷಂಡಗತಂ ಕಪಿಮ್ ।
ದೃಷ್ಟ್ವಾ ಸರ್ವಾಣಿ ಭೂತಾನಿ ವಸಂತ ಇತಿ ಮೇನಿರೇ ॥

ಅನುವಾದ

ಹನುಮಂತನು ಅಶೋಕವನದ ಎಲ್ಲ ಕಡೆಗಳಲ್ಲಿ ಸೀತೆಯನ್ನು ಹುಡುಕುತ್ತಾ ವೃಕ್ಷಗಳ ಸಮೂಹದಲ್ಲಿ ನುಸುಳಿಕೊಂಡು ಓಡಾಡುತ್ತಿದ್ದನು. ಅವನನ್ನು ನೋಡಿದ ಎಲ್ಲ ಪ್ರಾಣಿಗಳು, ವಸಂತನೇ ಮೂರ್ತಿಮಂತನಾಗಿ ಬಂದಿರಬಹುದೆಂದು ಭಾವಿಸಿದವು. (ಏಕೆಂದರೆ ಮಾರುತಿಯು ಅತೀವ ಸುಂದರನಾಗಿದ್ದನು.)॥12॥

ಮೂಲಮ್ - 13

ವೃಕ್ಷೇಭ್ಯಃ ಪತಿತೈಃ ಪುಷ್ಪೈರವಕೀರ್ಣಾ ಪೃಥಗ್ವಿಧೈಃ ।
ರರಾಜ ವಸುಧಾ ತತ್ರ ಪ್ರಮದೇವ ವಿಭೂಷಿತಾ ॥

ಅನುವಾದ

ವೃಕ್ಷಗಳಿಂದ ಉದುರಿದ್ದ ನಾನಾವಿಧವಾದ ಪುಷ್ಪಗಳಿಂದ ತುಂಬಿ ಹೋದ ಭೂದೇವಿಯು ಆಭರಣಗಳಿಂದ ಸಮಲಂಕೃತಳಾದ ಪ್ರಮದೆಯಂತೆ ರಾರಾಜಿಸುತ್ತಿದ್ದಳು.॥13॥

ಮೂಲಮ್ - 14

ತರಸ್ವಿನಾ ತೇ ತರವಸ್ತರಸಾಭಿಪ್ರಕಂಪಿತಾಃ ।
ಕುಸುಮಾನಿ ವಿಚಿತ್ರಾಣಿ ಮುಮುಚುಃ ಕಪಿನಾ ತದಾ ॥

ಅನುವಾದ

ಮಹಾಬಲಶಾಲಿಯಾದ ಆ ಹನುಮಂತನು ತನ್ನ ಬಲದಿಂದ ಅಲ್ಲಿದ್ದ ವೃಕ್ಷಗಳನ್ನು ಅಲ್ಲಾಡಿಸುತ್ತಿರುವಾಗ ಅವುಗಳಲ್ಲಿದ್ದ ಹಲವಾರು ಬಣ್ಣದ ಹೂವುಗಳು ಉದುರುತ್ತಿದ್ದವು.॥14॥

ಮೂಲಮ್ - 15

ನಿರ್ಧೂತಪತ್ರಶಿಖರಾಃ ಶೀರ್ಣಪುಷ್ಪಲಾ ದ್ರುಮಾಃ ।
ನಿಕ್ಷಿಪ್ತ ವಸ್ತ್ರಾಭರಣಾ ಧೂರ್ತಾ ಇವ ಪರಾಜಿತಾಃ ॥

ಅನುವಾದ

ಹನುಮಂತನು ಆ ವೃಕ್ಷಗಳನ್ನು ಅಲ್ಲಾಡಿಸುವಾಗ ಅವುಗಳ ಎಲೆಗಳೂ, ಹೂವುಗಳೂ, ಫಲಗಳೂ ಪೂರ್ಣವಾಗಿ ಬಿದ್ದುಹೋದುವು. ಆಗ ಬೋಳಾದ ಆ ಮರಗಳು, ಜೂಜಿನಲ್ಲಿ ಪರಾಜಿತರಾಗಿ ವಸ್ತ್ರಾಭರಣಗಳನ್ನು ಕಳೆದುಕೊಂಡ ಜೂಜುಕೋರರಂತೆ* ಕಾಣುತ್ತಿದ್ದವು.॥15॥

ಟಿಪ್ಪನೀ
  • ಜೂಜಿನಲ್ಲಿ ಹೆಚ್ಚಾದ ವ್ಯಸನಕ್ಕೆ ಒಳಗಾದವರು ವಿವೇಕಭ್ರಷ್ಟರಾಗಿ, ಅಮೂಲ್ಯವಾದ ವಸ್ತುಗಳನ್ನು, ಹಣವನ್ನು, ವಸ್ತ್ರಗಳನ್ನು ಕೂಡ ಜೂಜಿನ ಪಣಕ್ಕೆ ಕಟ್ಟಿ ಕಳೆದುಕೊಳ್ಳುತ್ತಾರೆ. ಇಷ್ಟಾದರೂ ಅದರಿಂದ ದೂರವುಳಿಯುವುದಿಲ್ಲ. ಆದುದರಿಂದ ಜೂಜು ಎಂಬುದು ಬಲು ಕೆಟ್ಟದ್ದಾಗಿದೆ.
ಮೂಲಮ್ - 16

ಹನೂಮತಾ ವೇಗವತಾ ಕಂಪಿತಾಸ್ತೇ ನಗೋತ್ತಮಾಃ ।
ಪುಷ್ಪಪರ್ಣಲಾನ್ಯಾಶು ಮುಮುಚುಃ ಪುಷ್ಪಶಾಲಿನಃ ॥

ಅನುವಾದ

ವೇಗಶಾಲಿಯಾದ ಹನುಮಂತನು ರಭಸದಿಂದ ಅಲ್ಲಾಡಿಸುತ್ತಿದ್ದ ವೃಕ್ಷಗಳು ಕ್ಷಣಮಾತ್ರದಲ್ಲಿ ಹೂವು, ಹಣ್ಣು, ಎಲೆಗಳನ್ನು ಕಳಕೊಂಡವು.॥16॥

ಮೂಲಮ್ - 17

ವಿಹಂಗಸಂಘೈರ್ಹೀನಾಸ್ತೇ ಸ್ಕಂಧಮಾತ್ರಾಶ್ರಯಾ ಧ್ರುಮಾಃ ।
ಬಭೂವುರಗಮಾಃ ಸರ್ವೇ ಮಾರುತೇನೇವ ನಿರ್ಧುತಾಃ ॥

ಅನುವಾದ

ಕಾಂಡಗಳು ಮಾತ್ರ ಉಳಿದು ಬೋಳು ಮರಗಳಾಗಿ, ಅವುಗಳಲ್ಲಿದ್ದ ಪಕ್ಷಿಗಳು ದಿಕ್ಕಾಪಾಲಾಗಿ ಓಡಿಹೋದುವು. ಆಶ್ರಯಿಸುವವರಿಲ್ಲದೆ ಆ ಮರಗಳು ನಿರುಪಯೋಗಿಗಳಾದವು.॥17॥

ಮೂಲಮ್ - 18

ನಿರ್ಧೂತಕೇಶೀ ಯುವತಿರ್ಯಥಾ ಮೃದಿತವರ್ಣಕಾ ।
ನಿಷ್ಪೀತಶುಭದಂತೋಷ್ಠೀ ನಖೈರ್ದಂತೈಶ್ಚ ವಿಕ್ಷತಾ ॥

ಮೂಲಮ್ - 19

ತಥಾ ಲಾಂಗೂಲಹಸ್ತೈಶ್ಚ ಚರಣಾಭ್ಯಾಂ ಚ ಮರ್ದಿತಾ ।
ಬಭೂವಾಶೋಕವನಿಕಾ ಪ್ರಭಗ್ನವರಪಾದಪಾ ॥

ಅನುವಾದ

ಹನುಮಂತನು ತನ್ನ ಬಾಲದಿಂದಲೂ, ಕೈ-ಕಾಲುಗಳಿಂದಲೂ ಅಶೋಕವನದಲ್ಲಿದ್ದ ವೃಕ್ಷಗಳನ್ನು ಒಂದಾದ ಮೇಲೊಂದರಂತೆ ಹಾಳುಗೆಡಹಿದನು. ಆ ಸಮಯದಲ್ಲಿ ಆ ಅಶೋಕವನವು ಪ್ರಿಯಕರನುಗೈದ ಶೃಂಗಾರಚೇಷ್ಟೆಗಳಿಂದ ನಲುಗಿಹೋದ, ಕೆದರಿದ ಕೂದಲುಗಳಿಂದ, ಮಾಸಿದ ಅಂಗರಾಗದಿಂದ ಒಪ್ಪುತ್ತಿದ್ದ ಯುವತಿಯಂತೆ ಗೋಚರಿಸುತ್ತಿತ್ತು.॥18-19॥

ಮೂಲಮ್ - 20

ಮಹಾಲತಾನಾಂ ದಾಮಾನಿ ವ್ಯಧಮತ್ತರಸಾ ಕಪಿಃ ।
ಯಥಾ ಪ್ರಾವೃಷಿ ವಿಂಧ್ಯಸ್ಯ ಮೇಘಜಾಲಾನಿ ಮಾರುತಃ ॥

ಅನುವಾದ

ವರ್ಷಾಕಾಲದಲ್ಲಿ ಬಿರುಗಾಳಿಯು ವೇಗವಾಗಿ ಬೀಸುತ್ತಾ ಮೇಘಗಳ ಸಮೂಹವನ್ನೇ ಛಿದ್ರ-ವಿಚ್ಛಿದ್ರಗೊಳಿಸುವಂತೆ, ಕಪೀಶ್ವರನಾದ ಹನುಮಂತನು ಕ್ಷಣಮಾತ್ರದಲ್ಲಿ ಆ ಅಶೋಕವನದಲ್ಲಿದ್ದ ಮಹಾಲತಾವಲಯವನ್ನು ಧ್ವಂಸಮಾಡಿದನು.॥20॥

ಮೂಲಮ್ - 21

ಸ ತತ್ರ ಮಣಿಭೂಮೀಶ್ಚ ರಾಜತೀಶ್ಚ ಮನೋರಮಾಃ ।
ತಥಾ ಕಾಂಚನಭೂಮೀಶ್ಚ ದದರ್ಶ ವಿಚರನ್ ಕಪಿಃ ॥

ಅನುವಾದ

ಹನುಮಂತನು ಅಶೋಕವನದಲ್ಲಿ ಸಂಚರಿಸುತ್ತಿದ್ದಾಗ ಮನೋಹರವಾದ, ಮಣಿಮಯವಾದ, ರಜತ-ಸ್ವರ್ಣಮಯವಾದ ಭೂಮಿಗಳನ್ನು (ವೇದಿಕೆಗಳನ್ನು) ನೋಡಿದನು.॥21॥

ಮೂಲಮ್ - 22

ವಾಪೀಶ್ಚ ವಿವಿಧಾಕಾರಾಃ ಪೂರ್ಣಾಃ ಪರಮವಾರಿಣಾ ।
ಮಹಾರ್ಹೈರ್ಮಣಿಸೋಪಾನೈರುಪಪನ್ನಾಸ್ತತಸ್ತತಃ ॥

ಮೂಲಮ್ - 23

ಮುಕ್ತಾಪ್ರವಾಲಸಿಕತಾಃ ಸ್ಫಾಟಿಕಾಂತರ ಕುಟ್ಟಿಮಾಃ ।
ಕಾಂಚನೈಸ್ತರುಭಿಶ್ಚಿತ್ರೈಸ್ತೀರಜೈರುಪಶೋಭಿತಾಃ ॥

ಮೂಲಮ್ - 24

ಫುಲ್ಲಪದ್ಮೋತ್ಪಲ ವನಾಶ್ಚಕ್ರವಾಕೋಪಕೂಜಿತಾಃ ।
ನತ್ಯೂಹರುತಸಂಘುಷ್ಟಾ ಹಂಸಸಾರಸನಾದಿತಾಃ ॥

ಮೂಲಮ್ - 25

ದೀರ್ಘಾಭಿರ್ದ್ರುಮಯುಕ್ತಾಭಿಃ ಸರಿದ್ಭಿಶ್ಚ ಸಮಂತತಃ ।
ಅಮೃತೋಪಮತೋಯಾಭಿಃ ಶಿವಾಭಿರುಪಸಂಸ್ಕೃತಾಃ ॥

ಮೂಲಮ್ - 26

ಲತಾಶತೈರವತತಾಃ ಸಂತಾನ ಕುಸುಮಾವೃತಾಃ ।
ನಾನಾಗುಲ್ಮಾವೃತಘನಾಃ ಕರವೀರಕೃತಾಂತರಾಃ ॥

ಅನುವಾದ

ಸ್ವಚ್ಛವಾದ ಮಧುರ ಜಲದಿಂದ ತುಂಬಿದ್ದ, ಮಹಾಮೌಲ್ಯದ ಮಣಿಮಯ ಸೋಪಾನಗಳಿಂದ ಸಂಪನ್ನವಾಗಿದ್ದ, ವಿವಿಧಾಕಾರಗಳಲ್ಲಿದ್ದ ಕೊಳಗಳನ್ನು ಅಲ್ಲಲ್ಲಿ ನೋಡಿದನು. ಅವುಗಳು ಹವಳ, ಮುತ್ತುಗಳೇ ಮಳಲರೂಪದಿಂದ ಕೂಡಿದ್ದವು. ತಳಭಾಗವು ಸ್ಫಟಿಕಮಯವಾಗಿತ್ತು. ತೀರಪ್ರದೇಶಗಳಲ್ಲಿ ಹುಟ್ಟಿ ಬೆಳೆದಿದ್ದ ಸುವರ್ಣಮಯವಾದ ಸಂಪಿಗೆ, ಹೊನ್ನೆ ಮುಂತಾದ ಅದ್ಭುತವಾದ ವೃಕ್ಷಗಳಿದ್ದು, ಅವು ಶೋಭಾಯಮಾನವಾಗಿ ಕಾಣಿತ್ತಿದ್ದವು. ವಿಕಸಿತವಾದ ಕಮಲಗಳಿಂದಲೂ, ಕನ್ನೆದಿಲೆಗಳಿಂದಲೂ ಕೂಡಿದ್ದ ಸರೋವರಗಳನ್ನು ಹನುಮಂತನು ನೋಡಿದನು. ಆ ಸರೋವರಗಳು ಚಕ್ರವಾಕ ಪಕ್ಷಿಗಳಿಂದ ಶೋಭಿಸುತ್ತಿದ್ದವು. ನೀರುಕೋಳಿಗಳ ಧ್ವನಿಗಳಿಂದ ನಿನಾದಿತವಾಗಿದ್ದವು. ಹಂಸ, ಸಾರಸ ಪಕ್ಷಿಗಳಿಂದ ನಿಬಿಡವಾಗಿದ್ದವು. ಆ ಸರೋವರಗಳಿಗೆ ನದಿಯಿಂದ ಸಣ್ಣ-ಸಣ್ಣ ಕಾಲುವೆಗಳಿದ್ದವು. ಅವು ಅಮೃತೋಪಮವಾದ ನೀರಿನಿಂದ ತುಂಬಿದ್ದವು. ಅವುಗಳ ಸುತ್ತಲೂ ಎತ್ತರವಾದ ವಿಶಾಲವಾದ ವೃಕ್ಷಗಳು ಶೋಭಿಸುತ್ತಿದ್ದವು. ಎಲ್ಲವೂ ನೂರಾರು ಲತೆಗಳಿಂದಲೂ, ಕಲ್ಪವೃಕ್ಷದ ಪುಷ್ಪಗಳಿಂದಲೂ ಸಮಾವೃತವಾಗಿದ್ದವು. ಅಂತಹ ಸುಂದರವಾದ ಸರೋವರಗಳನ್ನು ಹನುಮಂತನು ಅಶೋಕ ವನದಲ್ಲಿ ನೋಡಿದನು.॥22-26॥

ಮೂಲಮ್ - 27

ತತೋಽಂಬುಧರಸಂಕಾಶಂ ಪ್ರವೃದ್ಧಶಿಖರಂ ಗಿರಿಮ್ ।
ವಿಚಿತ್ರಕೂಟಂ ಕೂಟೈಶ್ಚ ಸರ್ವತಃ ಪರಿವಾರಿತಮ್ ॥

ಮೂಲಮ್ - 28

ಶಿಲಾಗೃಹೈರವತತಂ ನಾನಾವೃಕ್ಷೈಃ ಸಮಾವೃತಮ್ ।
ದದರ್ಶ ಹರಿಶಾರ್ದೂಲೋ ರಮ್ಯಂ ಜಗತಿ ಪರ್ವತಮ್ ॥

ಅನುವಾದ

ಹಾಗೆಯೇ ಮುಂದೆ ಹೋಗುತ್ತಿದ್ದಾಗ ಕಪೀಶ್ವರನು ಪ್ರಪಂಚದಲ್ಲೇ ಅತ್ಯಂತ ರಮ್ಯವಾಗಿದ್ದ, ಮೇಘಸದೃಶವಾದ ಎತ್ತರವಾದ ಪರ್ವತವೊಂದನ್ನು ನೋಡಿದನು. ಅದು ಉನ್ನತವಾದ ವಿಚಿತ್ರವಾದ ಶಿಖರಗಳಿಂದಲೂ, ಸಣ್ಣ-ಪುಟ್ಟ ಶಿಖರಗಳಿಂದಲೂ ಸುತ್ತುವರಿಯಲ್ಪಟ್ಟಿತ್ತು. ಅಲ್ಲಲ್ಲಿ ಶಿಲಾಮಯವಾದ ಗುಹೆಗಳಿದ್ದು, ನಾನಾ ವಿಧವಾದ ವೃಕ್ಷಗಳಿಂದ ನಿಬಿಡವಾಗಿತ್ತು.॥27-28॥

ಮೂಲಮ್ - 29

ದದರ್ಶ ಚ ನಗಾತ್ತಸ್ಮಾನ್ನದೀಂ ನಿಪತಿತಾಂ ಕಪಿಃ ।
ಅಂಕಾದಿವ ಸಮುತ್ಪತ್ಯ ಪ್ರಿಯಸ್ಯ ಪತಿತಾಂ ಪ್ರಿಯಾಮ್ ॥

ಅನುವಾದ

ಪ್ರಿಯತಮನ ತೊಡೆಯಿಂದ ಮೇಲೆದ್ದು ದೂರಸರಿದು ನಿಲ್ಲುವ ಪ್ರೇಯಸಿಯಂತೆ ಆ ಪರ್ವತದಿಂದ ಕೆಳಕ್ಕೆ ಧುಮುಕುತ್ತಿದ್ದ ನದಿಯೊಂದನ್ನು ಹನುಮಂತನು ನೋಡಿದನು.॥29॥

ಮೂಲಮ್ - 30

ಜಲೇ ನಿಪತಿತಾಗ್ರೈಶ್ಚ ಪಾದಪೈರುಪಶೋಭಿತಾಮ್ ।
ವಾರ್ಯಮಾಣಾಮಿವ ಕ್ರುದ್ಧಾಂ ಪ್ರಮದಾಂ ಪ್ರಿಯಬಂಧುಭಿಃ ॥

ಅನುವಾದ

ಅಲ್ಲಿದ್ದ ವೃಕ್ಷಗಳ ತುದಿಗಳು ಧುಮುಕುತ್ತಿದ್ದ ನದಿಯ ನೀರಿನಿಂದ ತೊಯ್ದುಹೋಗಿದ್ದವು. ಪರ್ವತದ ಮೇಲಿನಿಂದ ಹರಿದುಬರುತ್ತಿದ್ದ ನದಿಯ ನೀರು ದಟ್ಟವಾಗಿ ಬೆಳೆದು ನಿಂತಿದ್ದ ವೃಕ್ಷಗಳಿಂದ ತಡೆಯಲ್ಪಡುತ್ತಿತ್ತು. ಅದನ್ನು ನೋಡಿದರೆ ಕ್ರುದ್ಧಳಾಗಿ ಪ್ರಿಯನನ್ನು ಅಗಲಿ ಹೊರಟ ಪ್ರಮದೆಯನ್ನು ಸಖೀಗಡಣವು ತಡೆಯುತ್ತಿರುವರೋ ಎಂಬಂತೆ ಕಾಣುತ್ತಿತ್ತು.॥30॥

ಮೂಲಮ್ - 31

ಪುನರಾವೃತ್ತತೋಯಾಂ ಚ ದದರ್ಶ ಸ ಮಹಾಕಪಿಃ ।
ಪ್ರಸನ್ನಾಮಿವ ಕಾಂತಸ್ಯ ಕಾಂತಾಂ ಪುನರುಪಸ್ಥಿತಾಮ್ ॥

ಅನುವಾದ

ಪ್ರಸನ್ನಳಾದ ಪ್ರೇಯಸಿಯು ಪುನಃ ಪ್ರಿಯಕರನೊಡನೆ ಸೇರಿಕೊಳ್ಳುವಂತೆ ದಟ್ಟವಾದ ವೃಕ್ಷಗಳಿಂದ ತಡೆಯಲ್ಪಟ್ಟು ಪರ್ವತಾಭಿಮುಖವಾಗಿ ಪ್ರವಹಿಸುತ್ತಿರುವ ನದಿಯನ್ನು ಆ ಕಪೀಶ್ವನು ನೋಡಿದನು.॥31॥

ಮೂಲಮ್ - 32

ತಸ್ಯಾದೂರಾಚ್ಚ ಪದ್ಮಿನ್ಯೋ ನಾನಾದ್ವಿಜಗಣಾಯುತಾಃ ।
ದದರ್ಶ ಹರಿಶಾರ್ದೂಲೋ ಹನುಮಾನ್ ಮಾರುತಾತ್ಮಜಃ ॥

ಅನುವಾದ

ಹರಿಪ್ರವರನಾದ ವಾಯುನಂದನನು ಆ ಪರ್ವತದ ಸಮೀಪದಲ್ಲೇ ನಾನಾವಿಧವಾದ ಪಕ್ಷಿಗಳ ಸಮೂಹಗಳಿಂದ ಸಮಾವೃತವಾಗಿದ್ದ ಪದ್ಮ ಸರೋವರಗಳನ್ನು ನೋಡಿದನು.॥32॥

ಮೂಲಮ್ - 33

ಕೃತ್ರಿಮಾಂ ದೀರ್ಘಿಕಾಂ ಚಾಪಿ ಪೂರ್ಣಾಂ ಶಿತೇನ ವಾರಿಣಾ ।
ಮಣಿಪ್ರವರಸೋಪಾನಾಂ ಮುಕ್ತಾಸಿಕತಶೋಭಿತಾಮ್ ॥

ಅನುವಾದ

ಮುಂದೆ ಹೋಗುತ್ತಿದ್ದಾಗ ಹನುಮಂತನು ಅಲ್ಲಿ ಕೃತ್ರಿಮವಾದ ಸರೋವರಗಳನ್ನು ನೋಡಿದನು. ಅವು ಶೀತಲವಾದ ನೀರಿನಿಂದ ತುಂಬಿದ್ದವು. ಶ್ರೇಷ್ಠವಾದ ರತ್ನಗಳಿಂದ ಕಲ್ಪಿತವಾದ ಸೋಪಾನಗಳಿಂದ ಕೂಡಿದ್ದು, ಮುತ್ತಿನ ಮರಳಿನಿಂದ ಶೋಭಿಸುತ್ತಿದ್ದವು.॥33॥

ಮೂಲಮ್ - 34

ವಿವಿಧೈರ್ಮೃಗಸಂಘೈಶ್ಚ ವಿಚಿತ್ರಾಂ ಚಿತ್ರಕಾನನಾಮ್ ।
ಪ್ರಾಸಾದೈಃ ಸುಮಹದ್ಭಿಶ್ಚ ನಿರ್ಮಿತೈರ್ವಿಶ್ವಕರ್ಮಣಾ ॥

ಅನುವಾದ

ಅಲ್ಲಿಂದ ಮುಂದೆ ಮಾರುತಿಯು ಉದ್ಯಾನವನಗಳಿಂದ ಸರ್ವತ್ರ ಶೋಭಾಯಮಾನವಾಗಿ ಕಾಣುತ್ತಿದ್ದ ವಿಶ್ವಕರ್ಮನಿಂದ ನಿರ್ಮಿತವಾದ ಕಾಡನ್ನು ನೋಡಿದನು. ಅದು ವಿವಿಧವಾದ ಮೃಗಗಳ ಗುಂಪಿನಿಂದ ಕೂಡಿದ್ದು ವಿಚಿತ್ರವಾಗಿ ಕಾಣುತ್ತಿತ್ತು. ॥34॥

ಮೂಲಮ್ - 35

ಕೃತ್ರಿಮೈಃ ಕಾನನೈಶ್ಚಾಪಿ ಸರ್ವತಃ ಸಮಲಂಕೃತಾಮ್ ।
ಯೇ ಕೇಚಿತ್ ಪಾದಪಾಸ್ತತ್ರ ಪುಷ್ಪೋಪಗಫಲೋಪಗಾಃ ॥

ಅನುವಾದ

ಕೃತ್ರಿಮವಾಗಿ ನಿರ್ಮಿಸಿದ್ದ ಕಾನನವು ಎಲ್ಲ ಕಡೆ ಅಲಂಕೃತವಾಗಿತ್ತು. ಕೆಲವು ವೃಕ್ಷಗಳು ಎಲ್ಲ ಕಾಲಗಳಲ್ಲಿಯೂ ಫಲ- ಪುಷ್ಪಭರಿತವಾಗಿದ್ದುವು.॥35॥

ಮೂಲಮ್ - 36

ಸಚ್ಛತ್ರಾಃ ಸವಿತರ್ದೀಕಾಃ ಸರ್ವೇ ಸೌವರ್ಣವೇದಿಕಾಃ ।
ಲತಾಪ್ರತಾನೈರ್ಬಹುಭಿಃ ಪರ್ಣೈಶ್ಚ ಬಹುಭಿರ್ವೃತಾಮ್ ॥

ಅನುವಾದ

ಅವೆಲ್ಲವೂ ಛತ್ರಿಯ ಆಕಾರದಲ್ಲಿ ಇದ್ದು ಬುಡಗಳಲ್ಲಿ ಸುವರ್ಣಮಯವಾದ ಜಗುಲಿಗಳೂ, ಸೋಪಾನಗಳೂ ಇದ್ದುವು. ಅವುಗಳ ಸುತ್ತಲೂ ಅನೇಕ ಲತಾವಿತಾನಗಳಿಂದಲೂ ದಟ್ಟವಾದ ಎಲೆಗಳಿಂದಲೂ ಶೋಭಿಸುತ್ತಿದ್ದವು.॥36॥

ಮೂಲಮ್ - 37

ಕಾಂಚನೀಂ ಶಿಂಶಪಾಮೇಕಾಂ ದದರ್ಶ ಹನುಮಾನ್ ಕಪಿಃ ।
ವೃತಾಂ ಹೇಮಮಯಾಭಿಸ್ತು ವೇದಿಕಾಭಿಃ ಸಮಂತತಃ ॥

ಅನುವಾದ

ಅನಂತರ ಹನುಮಂತನು ಸುವರ್ಣಮಯವಾದ ಒಂದು ಶಿಂಶುಪಾವೃಕ್ಷವನ್ನು ನೋಡಿದನು. ಅದರ ಸುತ್ತಲೂ ಭಂಗಾರದಿಂದ ನಿರ್ಮಿತವಾದ ವೇದಿಕೆಗಳಿಂದ ಶೋಭಿಸುತ್ತಿತ್ತು.॥37॥

ಮೂಲಮ್ - 38

ಸೋಽಪಶ್ಯದ್ಭೂಮಿಭಾಗಾಂಶ್ಚ ಗರ್ತಪ್ರಸ್ರವಣಾನಿ ಚ ।
ಸುವರ್ಣವೃಕ್ಷಾನಪರಾನ್ ದದರ್ಶ ಶಿಖಿಸಂನಿಭಾನ್ ॥

ಮೂಲಮ್ - 39

ತೇಷಾಂ ದ್ರುಮಾಣಾಂ ಪ್ರಭಯಾ ಮೇರೋರಿವ ದಿವಾಕರಃ ।
ಅಮನ್ಯತ ತದಾ ವೀರಃ ಕಾಂಚನೋಽಸ್ಮೀತಿ ವಾನರಃ ॥

ಅನುವಾದ

ಹನುಮಂತನು ಆ ಅಶೋಕವನದಲ್ಲಿ ಸುಂದರವಾಗಿದ್ದ ಇನ್ನೂ ಅನೇಕ ಭೂ ಪ್ರದೇಶಗಳನ್ನು, ಪರ್ವತದ ಝರಿಗಳನ್ನು, ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಕನಕವೃಕ್ಷಗಳನ್ನು ನೋಡಿದನು. ಮೇರುಪರ್ವತದ (ಸುವರ್ಣ)ಪ್ರಭೇಯಿಂದ ಸೂರ್ಯನು ಬೆಳಗುವಂತೆ, ಆ ಕನಕ ವೃಕ್ಷಗಳ ಪ್ರಭೆಯಿಂದ ಪ್ರಭಾವಿತನಾದ ಮಾರುತಿಯು ತನ್ನನ್ನು ಸುವರ್ಣಮಯನೆಂದೇ ಭಾವಿಸಿಕೊಂಡನು.॥38-39॥

ಮೂಲಮ್ - 40

ತಾಂ ಕಾಂಚನೈಸ್ತರುಗಣೈರ್ಮಾರುತೇನ ಚ ವೀಜಿತಾಮ್ ।
ಕಿಂಕಿಣೀಶತನಿರ್ಘೋಷಾಂ ದೃಷ್ಟ್ವಾ ವಿಸ್ಮಯ ಮಾಗತಮ್ ॥

ಅನುವಾದ

ಆ ಶಿಂಶುಪಾವೃಕ್ಷದ ಸುತ್ತಲೂ ಕಾಂಚನ ಮೃಗಗಳಿದ್ದವು. ಆ ಶಿಂಶುಪಾವೃಕ್ಷದಲ್ಲಿ ನೂರಾರು ಕಿರುಗೆಜ್ಜೆಗಳನ್ನು ಅಳವಡಿಸಿದ್ದರು. ಗಾಳಿಯು ಬೀಸುವಾಗ ಕದಲುತ್ತಿರುವ ಆ ಗಂಟೆಗಳು ಧ್ವನಿ ಮಾಡುತ್ತಿದ್ದವು. ಅಂತಹ ಆ ದೃಶ್ಯವನ್ನು ನೋಡಿ ಹನುಮಂತನು ಆಶ್ಚರ್ಯಪಟ್ಟನು.॥40॥

ಮೂಲಮ್ - 41

ಸ ಪುಷ್ಪಿತಾಗ್ರಾಂ ರುಚಿರಾಂ ತರುಣಾಂಕುರಪಲ್ಲವಾಮ್ ।
ತಾಮಾರುಹ್ಯ ಮಹಾಬಾಹುಃ ಶಿಂಶಪಾಂ ಪರ್ಣಸಂವೃತಾಮ್ ॥

ಅನುವಾದ

ಆ ಶಿಂಶುಪಾವೃಕ್ಷದ ಮೇಲೆ ರೆಂಬೆಗಳಲ್ಲಿ ಹೂಗಳು ಅರಳಿದ್ದವು. ಅದು ಸುಂದರವಾದ ಮೊಗ್ಗುಗಳಿಂದ, ಚಿಗುರುಗಳಿಂದ ಮನೋಹರವಾಗಿತ್ತು. ನಿಬಿಡವಾದ ಎಲೆಗಳಿಂದ ಸಮಾವೃತವಾಗಿದ್ದ ಆ ಶಿಂಶುಪಾವೃಕ್ಷವನ್ನು ಹತ್ತಿ ಕುಳಿತು ಹೀಗೆ ಯೋಚಿಸಿದನು.॥41॥

ಮೂಲಮ್ - 42

ಇತೋ ದ್ರಕ್ಷ್ಯಾಮಿ ವೈದೇಹಿಂ ರಾಮದರ್ಶನಲಾಲಸಾಮ್ ।
ಇತತ್ಚೇತಶ್ಚ ದುಃಖಾರ್ತಾಂ ಸಂಪತಂತೀಂ ಯದೃಚ್ಛಯಾ ॥

ಅನುವಾದ

‘‘ಶ್ರೀರಾಮನನ್ನು ನೋಡಲು ತವಕಗೊಂಡಿರುವ, ದುಃಖ ಪೀಡಿತಳಾದ ವೈದೇಹಿಯು ಅತ್ತ-ಇತ್ತ ಸಂಚರಿಸುತ್ತಿರುವಾಗ, ದೈವವಶಾತ್ ಇಲ್ಲಿಗೂ ಬರಬಹುದು. ಆಗ ನಾನು ಅವಳನ್ನು ನೋಡುವೆನು.॥42॥

ಮೂಲಮ್ - 43

ಅಶೋಕವನಿಕಾ ಚೇಯಂ ದೃಢಂ ರಮ್ಯಾ ದುರಾತ್ಮನಃ ।
ಚಂಪಕೈಶ್ಚಂದನೈಶ್ಚಾಪಿ ವಕುಲೈಶ್ಚ ವಿಭೂಷಿತಾ ॥

ಅನುವಾದ

ದುರ್ಮಾರ್ಗಿಯಾದ ರಾವಣನ ಈ ಅಶೋಕವನವು ಚಂದನ, ಸಂಪಿಗೆ, ಬಕುಳ ಮುಂತಾದ ವೃಕ್ಷಗಳಿಂದ ಅಲಂಕೃತವಾಗಿರುವುದರಿಂದ ಇದು ವರ್ಣನಾತೀತವಾಗಿ ನಿಶ್ಚಯವಾಗಿ ರಮ್ಯವಾಗಿದೆ.॥43॥

ಮೂಲಮ್ - 44

ಇಯಂ ಚ ನಲಿನೀ ರಮ್ಯಾ ದ್ವಿಜಸಂಘನಿಷೇವಿತಾ ।
ಇಮಾಂ ಸಾ ರಾಮಮಹಿಷೀ ನೂನಮೇಷ್ಯತಿ ಜಾನಕೀ ॥

ಅನುವಾದ

ಸಾವಿರಾರು ಪಕ್ಷಿಗಳು ಆಶ್ರಯಿಸಿರುವ ಈ ಸರೋವರವು ಅತ್ಯಂತ ರಮಣಿಯವಾಗಿದೆ. ಶ್ರಿರಾಮನ ಪತ್ನಿಯಾದ ಜಾನಕಿಯು ಈ ಅಶೋಕವನದಲ್ಲಿಯೇ ಇದ್ದುದಾದರೆ ರಮ್ಯವಾದ ಈ ಸರೋವರದ ಬಳಿಗೆ ತಪ್ಪದೇ ಬರುವಳು.॥44॥

ಮೂಲಮ್ - 45

ಸಾ ರಾಮಾ ರಾಮಮಹಿಷೀ ರಾಘವಸ್ಯ ಪ್ರಿಯಾ ಸತೀ ।
ವನಸಂಚಾರಕುಶಲಾ ಧ್ರುವಮೇಷ್ಯತಿ ಜಾನಕೀ ॥

ಮೂಲಮ್ - 46

ಅಥವಾ ಮೃಗಶಾವಾಕ್ಷೀ ವನಸ್ಯಾಸ್ಯ ವಿಚಕ್ಷಣಾ ।
ವನಮೇಷ್ಯತಿ ಸಾರ್ಯೇಹ ರಾಮಚಿಂತಾನುಕರ್ಶಿತಾ ॥

ಅನುವಾದ

ವನಸಂಚಾರದಲ್ಲಿ ನಿಪುಣೆಯಾದ, ರಾಘವನ ಪ್ರಿಯೆಯಾದ, ಕಡುಚೆಲುವೆಯಾದ ಜಾನಕಿಯು ಇಲ್ಲಿಗೆ ನಿಶ್ಚಯವಾಗಿಯೂ ಬರುವಳೆಂದು ನನ್ನ ಮನಸ್ಸಿಗೆ ಭಾಸವಾಗುತ್ತದೆ. ಅಂದವಾದ ಕಣ್ಣುಗಳುಳ್ಳವಳೂ, ಶ್ರೀರಾಮನ ಧ್ಯಾನದಲ್ಲಿ ಕೃಶಳಾಗಿರುವ, ಈ ವನವಿಷಯವನ್ನು ಚೆನ್ನಾಗಿ ತಿಳಿದು ಕೊಂಡಿರುವ ಆರ್ಯೆಯಾದ ಆ ಸೀತಾದೇವಿಯು ಈ ವನವನ್ನು ಸಂಚರಿಸುವಾಗ ಇಲ್ಲಿಗೆ ತಪ್ಪದೇ ಬರುವಳು.॥45-46॥

ಮೂಲಮ್ - 47

ರಾಮಶೋಕಾಭಿಸಂತಪ್ತಾ ಸಾ ದೇವೀ ವಾಮಲೋಚನಾ ।
ವನವಾಸೇ ರತಾ ನಿತ್ಯಮೇಷ್ಯತೇ ವನಚಾರಿಣೀ ॥

ಅನುವಾದ

ಶ್ರೀರಾಮನಿಗಾಗಿ ಪರಿತಪಿಸುತ್ತಿರುವ, ಹದಿನಾಲ್ಕು ಸಂವತ್ಸರಗಳಲ್ಲಿ ನಿತ್ಯವು ವನವಾಸ ನಿಯಮಗಳನ್ನು ಪಾಲಿಸುತ್ತಿರುವ ಆ ವಾಮಲೋಚನೆ ಸೀತಾದೇವಿಯು ಇಲ್ಲಿಗೆ ತಪ್ಪದೇ ಬರುವಳು.॥47॥

ಮೂಲಮ್ - 48

ವನೇಚರಾಣಾಂ ಸತತಂ ನೂನಂ ಸ್ಪೃಹಯತೇ ಪುರಾ ।
ರಾಮಸ್ಯ ದಯಿತಾ ಭಾರ್ಯಾ ಜನಕಸ್ಯ ಸುತಾ ಸತೀ ॥

ಅನುವಾದ

ಜನಕನಂದಿನಿಯೂ, ಶ್ರೀರಾಮನ ಪ್ರಿಯಪತ್ನಿಯೂ ಆದ ಸಾಧ್ವಿಸೀತಾದೇವಿಯು ಅರಣ್ಯದಲ್ಲಿರುವ ಮೃಗ-ಪಕ್ಷಿಗಳನ್ನು ಯಾವಾಗಲೂ ನೋಡಬೇಕೆಂಬ ಆಸೆಯುಳ್ಳವಳೂ ಆದಕಾರಣ ಅವಳಿಲ್ಲಿಗೆ ಬಂದೇ ಬರುವಳು.॥48॥

ಮೂಲಮ್ - 49

ಸಂಧ್ಯಾಕಾಲಮನಾಃ ಶ್ಯಾಮಾ ಧ್ರುವಮೇಷ್ಯತಿ ಜಾನಕೀ ।
ನದೀಂ ಚೇಮಾಂ ಶಿವಜಲಾಂ ಸಂಧ್ಯಾರ್ಥೇ ವರವರ್ಣಿನೀ ॥

ಅನುವಾದ

ಶ್ರೇಷ್ಠವಾದ ದೇಹವನ್ನು ಹೊಂದಿದವಳೂ, ಅಕ್ಷಯ ಯೌವನ ಸಂಪನ್ನೆಯೂ, ಪ್ರಾತಃ ಸಂಧ್ಯಾಕಾಲವನ್ನು ಗಮನಿಸುತ್ತಿರುವಳಾದ ಜಾನಕಿಯು ಪವಿತ್ರ ಜಲವಾದ ಈ ನದೀತೀರಕ್ಕೆ ಸ್ನಾನ-ಧ್ಯಾನಾದಿಗಳಿಗಾಗಿ ಬಂದೇ ಬರುವಳು.॥49॥

ಮೂಲಮ್ - 50

ತಸ್ಯಾಶ್ಚಾಪ್ಯನುರೂಪೇಯಮಶೋಕವನಿಕಾ ಶುಭಾ ।
ಶುಭಾ ಯಾ ಪಾರ್ಥಿವೇಂದ್ರಸ್ಯ ಪತ್ನೀ ರಾಮಸ್ಯ ಸಂಮತಾ ॥

ಅನುವಾದ

ಪಾರ್ಥಿವೇಂದ್ರನಾದ ಶ್ರೀರಾಮನಿಗೆ ಆದರಣೀಯಪತ್ನಿಯಾದ, ಶುಭಸ್ವರೂಪಳಾದ ಸೀತಾದೇವಿಗೆ ಶುಭಾವಹವಾದ ಈ ಅಶೋಕವನವು ಎಲ್ಲ ರೀತಿಯಿಂದ ವಾಸಕ್ಕೆ ಯೋಗ್ಯವಾಗಿದೆ.॥50॥

ಮೂಲಮ್ - 51

ಯದಿ ಜೀವತಿ ಸಾ ದೇವಿ ತಾರಾಧಿಪನಿಭಾನನಾ ।
ಆಗಮಿಷ್ಯತಿ ಸಾವಶ್ಯವಿಮಾಂ ಶಿವಜಲಾಂ ನದೀಮ್ ॥

ಅನುವಾದ

ಚಂದ್ರ ಬಿಂಬಾನನೆಯಾದ ಆ ಸೀತಾದೇವಿಯು ಜೀವಿಸಿರುವುದೇ ಖಂಡಿತವಾದರೆ, ಶೀತಲವಾದ ನೀರಿನಿಂದ ಕೂಡಿರುವ ರಮ್ಯವಾದ ಈ ನದಿಯ ಬಳಿಗೆ ಬಂದೇ ಬರುವಳು.॥51॥

ಮೂಲಮ್ - 52

ಏವಂ ತು ಮತ್ವಾ ಹನುಮಾನ್ ಮಹಾತ್ಮಾ
ಪ್ರತೀಕ್ಷಮಾಣೋ ಮನುಜೇಂದ್ರಪತ್ನೀಮ್ ।
ಅವೇಕ್ಷಮಾಣಶ್ಚ ದದರ್ಶ ಸರ್ವಂ
ಸುಪುಷ್ಪಿತೇ ಪತ್ರಘನೇ ನಿಲೀನಃ ॥

ಅನುವಾದ

ಮಹಾತ್ಮನಾದ ಹನುಮಂತನು ಹೀಗೆ ನಿಶ್ಚಯಿಸಿ ಪುಷ್ಪಿತವಾದ ಹಾಗೂ ದಟ್ಟವಾದ ಎಲೆಗಳಿಂದ ಕೂಡಿದ ಸುವರ್ಣಮಯವಾದ ಶಿಂಶುಪಾವೃಕ್ಷದಲ್ಲಿ ಅಡಗಿ ಕುಳಿತು ಮನುಜೇಂದ್ರನ ಪತ್ನಿಯಾದ ಸೀತಾದೇವಿಯನ್ನೇ ಪ್ರತೀಕ್ಷೆ ಮಾಡುತ್ತಾ ಎಲ್ಲ ಕಡೆಗಳಲ್ಲಿಯೂ ನೋಡುತ್ತಾ ಇದ್ದನು.॥52॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುರ್ದಶಃ ಸರ್ಗಃ ॥ 14 ॥
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹದಿನಾಲ್ಕನೆಯ ಸರ್ಗವು ಮುಗಿಯಿತು.

ಅನುವಾದ