०१३ अशोकवाटिकाप्रस्थानम्

वाचनम्
ಭಾಗಸೂಚನಾ

ಸೀತಾದೇವಿಯು ವಿನಾಶಹೊಂದಿರಬಹುದೆಂದು ಹನುಮಂತನು ಪುನಃ ಶಂಕಿಸಿದುದು, ಸೀತೆಯು ಸಿಕ್ಕಲಿಲ್ಲವೆಂದು ರಾಮನಿಗೆ ತಿಳಿಸುವುದರಿಂದ ಉಂಟಾಗುವ ಅನರ್ಥವನ್ನು ನೆನೆದು, ಕಿಷ್ಕಿಂಧೆಗೆ ಹಿಂದಿರುಗದಿರಲು ನಿಶ್ಚಯಿಸಿ ಅಶೋಕವನದಲ್ಲಿ ಸೀತೆಯನ್ನು ಹುಡುಕಲು ಹೊರಟಿದುದು

ಮೂಲಮ್ - 1

ವಿಮಾನಾತ್ತು ಸುಸಂಕ್ರಮ್ಯ ಪ್ರಾಕಾರಂ ಹರಿಪುಂಗವಃ ।
ಹನುಮಾನ್ ವೇಗವಾನಾಸೀದ್ಯಥಾ ವಿದ್ಯುದ್ಘನಾಂತರೇ ॥

ಅನುವಾದ

ಕಪಿಸೈನ್ಯದ ರಕ್ಷಕನಾದ ಹನುಮಂತನು ವಿಮಾನದಿಂದ ಕೆಳಗಿಳಿದು, ಪ್ರಾಕಾರವನ್ನು ದಾಟಿ ಮೋಡಗಳ ಮಧ್ಯದಲ್ಲಿ ಅರೆಕ್ಷಣದಲ್ಲಿ ಕಣ್ಮರೆಯಾಗುವ ವಿದ್ಯುಲ್ಲತೆಯಂತೆ ಅತಿವೇಗವಾಗಿ ನಡೆದನು.॥1॥

ಮೂಲಮ್ - 2

ಸಂಪರಿಕ್ರಮ್ಯ ಹನುಮಾನ್ ರಾವಣಸ್ಯ ನಿವೇಶನಮ್ ।
ಅದೃಷ್ಟ್ವಾ ಜಾನಕೀಂ ಸೀತಾಮಬ್ರವೀದ್ವಚನಂ ಕಪಿಃ ॥

ಅನುವಾದ

ಕಪಿಶ್ರೇಷ್ಠನಾದ ಮಾರುತಿಯು ರಾವಣನ ಅರಮನೆಯಿಂದ ಹೊರಟು ಎಲ್ಲ ಕಡೆಗಳಲ್ಲಿಯೂ ಸುತ್ತಾಡಿ, ಸೀತಾದೇವಿಯ ಜಾಡನ್ನು ತಿಳಿಯದೆ, ಅವನು ತನ್ನಲ್ಲೇ ಹೀಗೆ ಹೇಳಿಕೊಂಡನು.॥2॥

ಮೂಲಮ್ - 3

ಭೂಯಿಷ್ಠಂ ಲೋಲಿತಾ ಲಂಕಾ ರಾಮಸ್ಯ ಚರತಾ ಪ್ರಿಯಮ್ ।
ನಹಿ ಪಶ್ಯಾಮಿ ವೈದೇಹೀಂ ಸೀತಾಂ ಸರ್ವಾಂಗಶೋಭನಾಮ್ ॥

ಅನುವಾದ

‘‘ರಾಮನಿಗೆ ಪ್ರಿಯವಾದ ಕಾರ್ಯವನ್ನು ಮಾಡುವ ಆಶಯದಿಂದಲೂ, ಸೀತೆಯನ್ನು ಕಾಣಬೇಕೆಂಬ ಹಂಬಲದಿಂದ ಲಂಕೆಯನ್ನು ಹಲವಾರು ಬಾರಿ ಜಾಲಾಡಿದೆನು. ಆದರೆ ಸರ್ವಾಂಗ ಶೋಭನೆಯಾದ ವೈದೇಹಿಯು ಎಲ್ಲಿಯೂ ಕಾಣದೆ ಹೋದಳು.॥3॥

ಮೂಲಮ್ - 4

ಪಲ್ವಲಾನಿ ತಟಾಕಾನಿ ಸರಾಂಸಿ ಸರಿತಸ್ತಥಾ ।
ನದ್ಯೋಽನೂಪವನಾಂತಾಶ್ಚ ದುರ್ಗಾಶ್ಚ ಧರಣೀಧರಾಃ ॥

ಮೂಲಮ್ - 5

ಲೋಲಿತಾ ವಸುಧಾ ಸರ್ವಾ ನ ತು ಪಶ್ಯಾಮಿ ಜಾನಕೀಮ್ ।
ಇಹ ಸಂಪಾತಿನಾ ಸೀತಾ ರಾವಣಸ್ಯ ನಿವೇಶನೇ ॥

ಅನುವಾದ

ಸಣ್ಣ ಜಲಾಶಯಗಳ ಬಳಿಯಲ್ಲೂ, ಕೆರೆಗಳ ಬಳಿಯಲ್ಲಿಯೂ, ಸರೋವರಗಳ ತೀರಗಳಲ್ಲಿಯೂ, ಜೌಗಾದ ಸ್ಥಳಗಳಲ್ಲಿಯೂ, ಉಪನದಿ-ಮಹಾನದಿಗಳ ತೀರಗಳಲ್ಲಿಯೂ, ಅರಣ್ಯಗಳಲ್ಲಿಯೂ, ವನ-ಪರ್ವತಗಳಲ್ಲಿಯೂ, ಇತರ ಎಲ್ಲ ಪ್ರದೇಶಗಳಲ್ಲಿಯೂ ಸೀತೆಯನ್ನು ಹುಡುಕಿದೆನು. ಆದರೆ ಅವಳು ಮಾತ್ರ ಸಿಗಲಿಲ್ಲ. ಗೃಧ್ರರಾಜನಾದ ಸಂಪಾತಿಯು ಈ ರಾವಣನ ಅರಮನೆಯಲ್ಲೇ ಸೀತೆಯಿರುವಳೆಂದು ಹೇಳಿದ್ದನು. ಆದರೆ ನಾನು ಅವಳನ್ನಿಲ್ಲಿ ಕಾಣಲಾಗಲಿಲ್ಲ.॥4-5॥

ಮೂಲಮ್ - 6

ಆಖ್ಯಾತಾ ಗೃಧ್ರರಾಜೇನ ನ ಚ ಪಶ್ಯಾಮಿ ತಾಮಹಮ್ ।
ಕಿಂ ನು ಸೀತಾಥ ವೈದೇಹೀ ಮೈಥಿಲೀ ಜನಕಾತ್ಮಜಾ ॥

ಅನುವಾದ

ರಾವಣನಿಂದ ಬಲಾತ್ಕಾರವಾಗಿ ಸೆಳೆದುತರಲ್ಪಟ್ಟ ವಿದೇಹರಾಜನ ಮಗಳಾದ ವೈದೇಹಿಯು ಅಸ್ವತಂತ್ರಳಾಗಿ ದುರಾಚಾರಿಯಾದ ರಾವಣನಿಗೆ ವಶಳಾಗಿರಬಹುದೇ?(ಇದು ಅಸಂಭವವು).॥6॥

ಮೂಲಮ್ - 7

ಉಪತಿಷ್ಠೇತ ವಿವಶಾ ರಾವಣಂ ದುಷ್ಟಚಾರಿಣಮ್ ।
ಕ್ಷಿಪ್ರಮುತ್ಪತತೋ ಮನ್ಯೇ ಸೀತಾಮಾದಾಯ ರಕ್ಷಸಃ ॥

ಅನುವಾದ

ಅಥವಾ ರಾಮನ ಬಾಣಗಳಿಗೆ ಹೆದರಿದ ರಾಕ್ಷಸನಾದ ರಾವಣನು ವೇಗವಾಗಿ ಸೀತೆಯನ್ನು ಎತ್ತಿಕೊಂಡು ಸಮುದ್ರದ ಮೇಲಿನಿಂದ ಹೋಗುತ್ತಿದ್ದಾಗ, ಅವನ ಹಿಡಿತದಿಂದ ಜಾರಿ ಸಮುದ್ರದಲ್ಲಿ ಬಿದ್ದುಬಿಟ್ಟಿರಬಹುದೇ?॥7॥

ಮೂಲಮ್ - 8

ಬಿಭ್ಯತೋ ರಾಮಬಾಣಾನಾಮಂತರಾ ಪತಿತಾ ಭವೇತ್ ।
ಅಥವಾ ಹ್ರಿಯಮಾಣಾಯಾಃ ಪಥಿ ಸಿದ್ಧನಿಷೇವಿತೇ ॥

ಅನುವಾದ

ಅಥವಾ ಸಿದ್ಧರಿಂದ ಸೇವಿತವಾದ ಆಕಾಶಮಾರ್ಗದಿಂದ ರಾವಣನು ಸೆಳೆದುಕೊಂಡು ಹೋಗುತ್ತಿದ್ದಾಗ ಆರ್ಯೆಯಾದ ಸೀತಾದೇವಿಯು ಮಹಾಸಾಗರವನ್ನು ನೋಡಿದೊಡನೆಯೇ ಅವಳ ಹೃದಯ ಭಗ್ನವಾಗಿ ಸಮುದ್ರದಲ್ಲಿ ಬಿದ್ದಿರಬಹುದೇ?॥8॥

ಮೂಲಮ್ - 9

ಮನ್ಯೇ ಪತಿತಮಾರ್ಯಾಯಾ ಹೃದಯಂ ಪ್ರೇಕ್ಷ್ಯ ಸಾಗರಮ್ ।
ರಾವಣಸ್ಯೋರುವೇಗೇನ ಭುಜಾಭ್ಯಾಂ ಪೀಡಿತೇನ ಚ ॥

ಅನುವಾದ

ರಾವಣನು ಅತಿಯಾದ ವೇಗದಿಂದ ಒಯ್ಯುವಾಗ ಅವನ ಭುಜಬಲಗಳಿಂದ ಕಂಗೆಟ್ಟುಹೋದ ಪುನೀತಳಾದ, ವಿಶಾಲನೇತ್ರೆಯಾದ ಸೀತೆಯು ಜೀವಿತವನ್ನೇ ತ್ಯಜಿಸಿರಬಹುದೇ?॥9॥

ಮೂಲಮ್ - 10

ತಯಾ ಮನ್ಯೇ ವಿಶಾಲಾಕ್ಷ್ಯಾ ತ್ಯಕ್ತಂ ಜೀವಿತಮಾರ್ಯಯಾ ।
ಉಪರ್ಯುಪರಿ ವಾ ನೂನಂ ಸಾಗರಂ ಕ್ರಮತಸ್ತದಾ ॥

ಅನುವಾದ

ರಾವಣನು ಸೀತೆಯನ್ನು ಎತ್ತಿಕೊಂಡು ಸಮುದ್ರದ ಮೇಲಿನಿಂದ ಹೋಗುತ್ತಿದ್ದಾಗ ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಹೆಣಗಾಡಿದಾಗ ಸಮುದ್ರದಲ್ಲಿ ಬಿದ್ದಿರಬಹುದೇ?॥10॥

ಮೂಲಮ್ - 11

ವಿವೇಷ್ಟಮಾನಾ ಪತಿತಾ ಸಮುದ್ರೇ ಜನಕಾತ್ಮಜಾ ।
ಅಹೋ ಕ್ಷುದ್ರೇಣ ಚಾನೇನ ರಕ್ಷಂತೀ ಶೀಲಮಾತ್ಮನಃ ॥

ಅನುವಾದ

ಅಯ್ಯೋ! ಬಂಧುಗಳಿಂದ ದೂರವಾಗಿದ್ದು, ನಿಃಸಹಾಯಕಳಾಗಿ ದೀನಾವಸ್ಥೆಯನ್ನು ಹೊಂದಿ, ತನ್ನ ಶೀಲವನ್ನು ರಕ್ಷಿಸಿಕೊಳ್ಳುವುದರಲ್ಲೇ ಪ್ರಯತ್ನಶೀಲಳಾದ ತಪಸ್ವಿನಿಯಾದ ಸೀತಾದೇವಿಯನ್ನು ಕ್ಷುದ್ರನಾದ ರಾವಣನು ಭಕ್ಷಿಸಿರಲೂಬಹುದು. ॥11॥

ಮೂಲಮ್ - 12

ಅಬಂಧುರ್ಭಕ್ಷಿತಾ ಸೀತಾ ರಾವಣೇನ ತಪಸ್ವಿನೀ ।
ಅಥವಾ ರಾಕ್ಷಸೇಂದ್ರಸ್ಯ ಪತ್ನೀಭಿರಸಿತೇಕ್ಷಣಾ ॥

ಅನುವಾದ

ಚೆಲುವಾದ ಕಣ್ಣುಗಳ್ಳುವಳೂ, ಸೌಶೀಲ್ಯವತಿಯೂ ಆದ ಸೀತಾದೇವಿಯನ್ನು ಪರಮದುಷ್ಟೆಯರಾದ ರಾಕ್ಷಸೇಂದ್ರನ ಮಡದಿಯರು ಅಸೂಯೆಯಿಂದ ತಿಂದುಹಾಕಿರಬಹುದೇ?॥12॥

ಮೂಲಮ್ - 13

ಅದುಷ್ಟಾ ದುಷ್ಟಭಾವಾಭಿರ್ಭಕ್ಷಿತಾ ಸಾ ಭವಿಷ್ಯತಿ ।
ಸಂಪೂರ್ಣಚಂದ್ರ ಪ್ರತಿಮಂ ಪದ್ಮ ಪತ್ರನಿಭೇಕ್ಷಣಮ್ ॥

ಅನುವಾದ

ಪೂರ್ಣಚಂದ್ರಸದೃಶವಾದ, ಕಮಲ ಪತ್ರಕ್ಕೆ ಸಮಾನವಾದ ಕಣ್ಣುಗಳಿಂದ ಕಂಗೊಳಿಸುವ ದೀನಳಾದ ಸೀತಾದೇವಿಯು ಶ್ರೀರಾಮನ ಮುಖಕಮಲವನ್ನೇ ಧ್ಯಾನ ಮಾಡುತ್ತಾ ವಿರಹವನ್ನು ತಾಳಲಾರದೆ ಸಾವನ್ನಪ್ಪಿರಬಹುದು.॥13॥

ಮೂಲಮ್ - 14

ರಾಮಸ್ಯ ಧ್ಯಾಯತೀ ವಕ್ತ್ರಂ ಪಂಚತ್ವಂ ಕೃಪಣಾ ಗತಾ ।
ಹಾ ರಾಮ ಲಕ್ಷ್ಮಣೇತ್ಯೇವಂ ಹಾಽಯೋಧ್ಯೇ ಚೇತಿ ಮೈಥಿಲೀ ॥

ಅನುವಾದ

ವಿದೇಹರಾಜನ ಮಗಳಾದ ಮೆೃಥಿಲಿಯು ‘‘ಹಾ ರಾಮಾ! ಹಾ ಲಕ್ಷ್ಮಣಾ! ಹಾ ಅಯೋಧ್ಯೆ!’’ ಎಂದು ಪರಿ-ಪರಿಯಾಗಿ ವಿಲಾಪಿಸುತ್ತಾ ತನ್ನ ತನುವನ್ನು ತ್ಯಜಿಸಿದಳೋ ಏನೋ?॥14॥

ಮೂಲಮ್ - 15

ವಿಲಪ್ಯ ಬಹು ವೈದೇಹೀ ನ್ಯಸ್ತದೇಹಾ ಭವಿಷ್ಯತಿ ।
ಅಥವಾ ನಿಹಿತಾ ಮನ್ಯೇ ರಾವಣಸ್ಯ ನಿವೇಶನೇ ॥

ಅನುವಾದ

ಅಥವಾ ಯಾರ ಕಣ್ಣುಗಳಿಗೂ ಬೀಳದಂತೆ ರಾವಣನ ಅರಮನೆಯ ಒಂದು ಭಾಗದಲ್ಲಿ ಬಂಧಿತಳಾಗಿ ಸೀತಾದೇವಿಯು ಪಂಜರದಲ್ಲಿರುವ ಮೈನಾಹಕ್ಕಿಯಂತೆ ಸತತವಾಗಿ ವಿಲಾಪಿಸುತ್ತಿರಬಹುದು.॥15॥

ಮೂಲಮ್ - 16

ನೂನಂ ಲಾಲಪ್ಯತೇ ಸೀತಾ ಪಂಜರಸ್ಥೇವ ಶಾರಿಕಾ ।
ಜನಕಸ್ಯ ಸುತಾ ಸೀತಾ ರಾಮಪತ್ನೀ ಸುಮಧ್ಯಮಾ ॥

ಅನುವಾದ

ಮಹಾನುಭಾವನಾದ ಜನಕಮಹಾರಾಜನ ಮಗಳೂ, ಪುರುಷೋತ್ತಮನಾದ ಶ್ರೀರಾಮನ ಪತ್ನಿಯೂ, ಸುಮಧ್ಯಮೆಯೂ, ಅಂದವಾದ ನೀಲೋತ್ಪಲ ನೇತ್ರಗಳುಳ್ಳ ಸೀತಾದೇವಿಯು ಹೇಗೆ ತಾನೇ ರಾವಣನ ಅಧೀನಳಾಗುವಳು?॥16॥

ಮೂಲಮ್ - 17

ಕಥಮುತ್ಪಲಪತ್ರಾಕ್ಷೀ ರಾವಣಸ್ಯ ವಶಂ ವ್ರಜೇತ್ ।
ವಿನಷ್ಟಾ ವಾ ಪ್ರನಷ್ಟಾ ವಾ ಮೃತಾ ವಾ ಜನಕಾತ್ಮಜಾ ॥

ಅನುವಾದ

ಜಾನಕಿಯು ಅದೃಶ್ಯಳಾದುದನ್ನು, ತಪ್ಪಿಸಿಕೊಂಡಿರುವುದನ್ನು, ವಿನಾಶಹೊಂದಿದುದನ್ನು, ಶ್ರೀರಾಮನನ್ನೇ ಸತತವಾಗಿ ಚಿಂತಿಸುತ್ತಾ ಸಾವನ್ನಪ್ಪಿದುದನ್ನು, ಅವಳ ಸ್ಥಿತಿ-ಗತಿಗಳನ್ನು ಸರಿಯಾಗಿ ತಿಳಿಯದೆ, ಭಾರ್ಯೆಯ ವಿಷಯದಲ್ಲಿ ಹೆಚ್ಚು ಪ್ರೇಮವನ್ನಿಟ್ಟಿರುವ ರಾಮಚಂದ್ರನಿಗೆ ಸಂದೇಹಕ್ಕೆ ಆಸ್ಪದವಾದ ವಾರ್ತೆಯನ್ನು ತಿಳಿಸುವುದು ಯುಕ್ತವಾಗಿ ಕಾಣುವುದಿಲ್ಲ. ॥17 ॥

ಮೂಲಮ್ - 18

ರಾಮಸ್ಯ ಪ್ರಿಯಭಾರ್ಯಸ್ಯ ನ ನಿವೇದಯಿತುಂ ಕ್ಷಮಮ್ ।
ನಿವೇದ್ಯಮಾನೇ ದೋಷಃ ಸ್ಯಾದ್ದೋಷಃ ಸ್ಯಾದನಿವೇದನೇ ॥

ಅನುವಾದ

‘‘ಸೀತೆಯು ಸಿಕ್ಕಲಿಲ್ಲ’’ ಎಂಬ ಅಪ್ರಿಯವಾರ್ತೆಯನ್ನು ತಿಳಿಸುವುದೂ ದೋಷವಾಗುತ್ತದೆ. ಹೇಳದೆ ಹೋದರೂ ಸ್ವಾಮಿಗೆ ವಂಚನೆ ಮಾಡಿದಂತಾಗುತ್ತದೆ. ಹೀಗಿರುವಾಗ ಈಗ ನನ್ನ ಕರ್ತವ್ಯವೇನು? ನನಗಂತೂ ಇದು ಇಕ್ಕಟ್ಟಿನ ಪರಿಸ್ಥಿತಿಯಾಗಿದೆ. ॥18 ॥

ಮೂಲಮ್ - 19

ಕಥಂ ನು ಖಲು ಕರ್ತವ್ಯಂ ವಿಷಮಂ ಪ್ರತಿಭಾತಿ ಮೇ ।
ಅಸ್ಮಿನ್ನೇವಂ ಗತೇ ಕಾರ್ಯೇ ಪ್ರಾಪ್ತಕಾಲಂ ಕ್ಷಮಂ ಚ ಕಿಮ್ ॥

ಅನುವಾದ

ಹನುಮಂತನ ಸೀತಾನ್ವೇಷಣೆಯ ಕಾರ್ಯವು ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ಮುಟ್ಟಲಾಗಿ, ತತ್ಕಾಲೋಚಿತವಾದ ಯಾವ ಕಾರ್ಯಮಾಡಬಹುದು ಎಂಬುದರ ಬಗ್ಗೆ ಪುನಃ ಕಪೀಶ್ವರನು ಯೋಚಿಸತೊಡಗಿದನು.॥19॥

ಮೂಲಮ್ - 20

ಭವೇದಿತಿ ಮತಂ ಭೂಯೋ ಹನೂಮಾನ್ ಪ್ರವಿಚಾರಯನ್ ।
ಯದಿ ಸೀತಾಮದೃಷ್ಟ್ವಾಹಂ ವಾನರೇಂದ್ರಪುರೀಮಿತಃ ॥

ಅನುವಾದ

‘‘ಒಂದು ವೇಳೆ ನಾನು ಸೀತೆಯನ್ನು ಕಾಣದೆಯೇ ವಾನರೇಂದ್ರನಾದ ಸುಗ್ರೀವನ ಪಟ್ಟಣವಾದ ಕಿಷ್ಕಿಂಧೆಗೆ ಹೋದುದಾದರೆ ನನಗೆ ಲಭಿಸುವ ಪುರುಷಾರ್ಥವಾದರೂ ಏನು?॥20॥

ಮೂಲಮ್ - 21

ಗಮಿಷ್ಯಾಮಿ ತತಃ ಕೋ ಮೇ ಪುರುಷಾರ್ಥೋ ಭವಿಷ್ಯತಿ ।
ಮಮೇದಂ ಲಂಘನಂ ವ್ಯರ್ಥಂ ಸಾಗರಸ್ಯ ಭವಿಷ್ಯತಿ ॥

ಅನುವಾದ

(ಸೀತೆಯನ್ನು ಕಾಣದೆ ನಾನು ಹಿಂದಿರುಗಿದರೆ) ನನ್ನ ಈ ಸಮುದ್ರ ಲಂಘನವೂ, ಲಂಕಾಪ್ರವೇಶವೂ, ರಾಕ್ಷಸರ ದರ್ಶನವೂ ವ್ಯರ್ಥವೇ ಆಗುತ್ತದೆ.॥21॥

ಮೂಲಮ್ - 22

ಪ್ರವೇಶಶ್ಚೈವ ಲಂಕಾಯಾ ರಾಕ್ಷಸಾನಾಂ ಚ ದರ್ಶನಮ್ ।
ಕಿಂ ಮಾಂ ವಕ್ಷ್ಯತಿ ಸುಗ್ರೀವೋ ಹರಯೋ ವಾ ಸಮಾಗತಾಃ ॥

ಅನುವಾದ

ಕಾರ್ಯವನ್ನು ಸಾಧಿಸದೆ ಕಿಷ್ಕಿಂಧೆಗೆ ಹಿಂದಿರುಗಿದ ನನ್ನನ್ನು ನೋಡಿ ಸುಗ್ರೀವನೂ, ಅಲ್ಲಿಗೆ ಆಗಮಿಸಿರುವ ಇತರ ವಾನರ ಶ್ರೇಷ್ಠರೂ ದಶರಥನ ಮಕ್ಕಳಾದ ರಾಮ-ಲಕ್ಷ್ಮಣರು ಏನು ಹೇಳುವರು?॥22॥

ಮೂಲಮ್ - 23

ಕಿಷ್ಕಿಂಧಾಂ ಸಮನುಪ್ರಾಪ್ತಂ ತೌ ವಾ ದಶರಥಾತ್ಮಜೌ ।
ಗತ್ವಾ ತು ಯದಿ ಕಾಕುತ್ಸ್ಥಂ ವಕ್ಷ್ಯಾಮಿ ಪರಮಪ್ರಿಯಮ್ ॥

ಅನುವಾದ

ಅಲ್ಲಿಗೆ ಹೋಗಿ ಶ್ರೀರಾಮನಿಗೆ ‘ನಾನು ಸೀತಾದೇವಿಯನ್ನು ಎಲ್ಲಿಯೂ ನೋಡಲಿಲ್ಲ’ ಎಂದು ಹೇಳಿ ಬಿಟ್ಟರೆ ಆ ಕರ್ಣಕಠೋರವಾದ ವಾರ್ತೆಯನ್ನು ಕೇಳಿದೊಡನೆಯೇ ಮಹಾ ಪುರುಷನಾದ ಅವನು ಜೀವಿತವನ್ನೇ ತ್ಯಜಿಸಬಹುದು.॥23॥

ಮೂಲಮ್ - 24

ನ ದೃಷ್ಟೇತಿ ಮಯಾ ಸೀತಾ ತತಸ್ತ್ಯಕ್ಷ್ಯತಿ ಜೀವಿತಮ್ ।
ಪರುಷಂ ದಾರುಣಂ ಕ್ರೂರಂ ತೀಕ್ಷ್ಣಮಿಂದ್ರಿಯತಾಪನಮ್ ॥

ಅನುವಾದ

ದಾರುಣವಾದ, ಅತಿತೀಕ್ಷ್ಣವಾದ, ಕ್ರೂರವಾದ, ಮನಸ್ಸಿಗೆ ತಾಪವನ್ನುಂಟುಮಾಡುವ ‘‘ನಾನು ಸೀತೆಯನ್ನು ನೋಡಲಿಲ್ಲ’’ ಎಂಬ ದುರ್ವಾಕ್ಯವನ್ನು ಕೇಳಿ ರಾಮನು ಉಳಿಯಲಾರನು.॥24॥

ಮೂಲಮ್ - 25

ಸೀತಾನಿಮಿತ್ತಂ ದುರ್ವಾಕ್ಯಂ ಶ್ರುತ್ವಾ ಸ ನ ಭವಿಷ್ಯತಿ ।
ತಂ ತು ಕೃಚ್ಛ್ರಗತಂ ದೃಷ್ಟ್ವಾ ಪಂಚತ್ವಗತಮಾನಸಮ್ ॥

ಅನುವಾದ

ತೀವ್ರವಾದ ವೇದನೆಗೆ ಗುರಿಯಾದ, ಮರಣೋನ್ಮುಖನಾದ ಶ್ರೀರಾಮನನ್ನು ನೋಡಿ, ಅಣ್ಣನಲ್ಲಿ ಅತ್ಯಂತ ಅನುರಕ್ತನಾದ ಮೇಧಾವಿಯಾದ ಲಕ್ಷ್ಮಣನೂ ಬದುಕಿರಲಾರನು.॥25॥

ಮೂಲಮ್ - 26

ಭೃಶಾನುರಕ್ತೋ ಮೇಧಾವಿ ನ ಭವಿಷ್ಯತಿ ಲಕ್ಷ್ಮಣಃ ।
ವಿನಷ್ಟೌ ಭ್ರಾತರೌ ಶ್ರುತ್ವಾ ಭರತೋಽಪಿ ಮರಿಷ್ಯತಿ ॥

ಅನುವಾದ

ಅರಣ್ಯಕ್ಕೆ ಹೋದ ಸಹೋದರರಿಬ್ಬರೂ ಮೃತರಾದರೆಂದು ತಿಳಿದೊಡನೆಯೇ ಅತ್ತ ಭರತನು ಸಾಯುತ್ತಾನೆ. ಭರತನು ಸತ್ತುದನ್ನು ನೋಡಿ ಶತ್ರುಘ್ನನು ಉಳಿಯುವುದಿಲ್ಲ.॥26॥

ಮೂಲಮ್ - 27

ಭರತಂ ಚ ಮೃತಂ ದೃಷ್ಟ್ವಾ ಶತ್ರುಘ್ನೋ ನ ಭವಿಷ್ಯತಿ ।
ಪುತ್ರಾನ್ ಮೃತಾನ್ ಸಮೀಕ್ಷ್ಯಾಥ ನ ಭವಿಷ್ಯಂತಿ ಮಾತರಃ ॥

ಅನುವಾದ

ನಾಲ್ಕು ಮಕ್ಕಳೂ ಸತ್ತಿದುದನ್ನು ನೋಡಿ ಅವರ ತಾಯಂದಿರಾದ ಕೌಸಲ್ಯಾ, ಸುಮಿತ್ರಾ, ಕೈಕೇಯಿ ಇವರೂ ಸಾಯುತ್ತಾರೆ.॥27॥

ಮೂಲಮ್ - 28

ಕೌಸಲ್ಯಾ ಚ ಸುಮಿತ್ರಾ ಚ ಕೈಕೇಯಾ ಚ ನ ಸಂಶಯಃ ।
ಕೃತಜ್ಞಃ ಸತ್ಯಸಂಧಶ್ಚ ಸುಗ್ರೀವಃ ಪ್ಲವಗಾಧಿಪಃ ॥

ಅನುವಾದ

ವಾನರ ಪ್ರಭುವಾದ ಸುಗ್ರೀವನು ಸತ್ಯಸಂಧನು. ಪಡೆದ ಉಪಕಾರವನ್ನು ಸದಾ ಸ್ಮರಿಸುವವನು. ರಾಮನ ಪ್ರಿಯ ಮಿತ್ರನಾದ್ದರಿಂದ ರಾಮನು ಸತ್ತುದನ್ನು ತಿಳಿದು ಅವನೂ ಸಾಯುತ್ತಾನೆ.॥28॥

ಮೂಲಮ್ - 29

ರಾಮಂ ತಥಾಗತಂ ದೃಷ್ಟ್ವಾ ತತಸ್ತ್ಯಕ್ಷತಿ ಜೀವಿತಮ್ ।
ದುರ್ಮನಾ ವ್ಯಥಿತಾ ದೀನಾ ನಿರಾನಂದಾ ತಪಸ್ವಿನೀ ॥

ಅನುವಾದ

ಪತಿಯ ಮರಣಶೋಕದಿಂದ ಪೀಡಿತಳಾದ, ನಿರಾನಂದಳಾದ, ತಪಸ್ವಿನಿಯಾದ ರುಮಾದೇವಿಯೂ ಅತ್ಯಂತ ದುಃಖಿತಳಾಗಿ ಮನಸ್ಸನ್ನು ಕೆಡಿಸಿಕೊಂಡು, ದೀನಳಾಗಿ ಜೀವಿತವನ್ನು ತೊರೆಯುತ್ತಾಳೆ.॥29॥

ಮೂಲಮ್ - 30

ಪೀಡಿತಾ ಭರ್ತೃಶೋಕೇನ ರುಮಾ ತ್ಯಕ್ಷತಿ ಜೀವಿತಮ್ ।
ವಾಲಿಜೇನ ತು ದುಃಖೇನ ಪೀಡಿತಾ ಶೋಕಕರ್ಶಿತಾ ॥

ಅನುವಾದ

ವಾಲಿಯ ಮರಣದಿಂದುಂಟಾದ ದುಃಖದಿಂದ ಪೀಡಿತಳಾದ, ಶೋಕಾಕುಲಳಾದ, ಮಹಾರಾಣಿಯಾದ ತಾರಾದೇವಿಯೂ, ರಾಜನಾದ ಸುಗ್ರೀವನು ಅವಸಾನಹೊಂದಿದ ಬಳಿಕ ಬದುಕಿರಲಾರಳು.॥30॥

ಮೂಲಮ್ - 31

ಪಂಚತ್ವಂ ಚ ಗತೇ ರಾಜ್ಞಿ ತಾರಾಪಿ ನ ಭವಿಷ್ಯತಿ ।
ಮಾತಾಪಿತ್ರೋರ್ವಿನಾಶೇನ ಸುಗ್ರೀವವ್ಯಸನೇನ ಚ ॥

ಅನುವಾದ

ಮಾತಾ-ಪಿತೃಗಳಾದ ತಾರಾ-ವಾಲಿಯರ ನಿಧನದಿಂದಲೂ, ಸುಗ್ರೀವನನ್ನು ಅಗಲಿದ ದುಃಖದಿಂದ ವ್ಯಾಕುಲಿತನಾದ ಅಂಗದ ಕುಮಾರನು ಹೇಗೆ ತಾನೇ ಜೀವಿಸಿರುವನು?॥31॥

ಮೂಲಮ್ - 32

ಕುಮಾರೋಽಪ್ಯಂಗದಃ ಕಸ್ಮಾದ್ಧಾರಯಿಷ್ಯತಿ ಜೀವಿತಮ್ ।
ಭರ್ತೃಜೇನ ತು ದುಃಖೇನ ಹ್ಯಭಿಭೂತಾ ವನೌಕಸಃ ॥

ಅನುವಾದ

ಸ್ವಾಮಿಯ ಮರಣದಿಂದ ಕಂಗೆಡುವ ವಾನರವೀರರು ಅಂಗೈಗಳಿಂದಲೂ, ಮುಷ್ಟಿಗಳಿಂದಲೂ ತಲೆಯನ್ನು ಚಚ್ಚಿಕೊಂಡು ಸಾಯುತ್ತಾರೆ.॥32॥

ಮೂಲಮ್ - 33

ಶಿರಾಂಸ್ಯಭಿಹನಿಷ್ಯಂತಿ ತಲೈರ್ಮುಷ್ಟಿಭಿರೇವ ಚ ।
ಸಾಂತ್ವೇನಾನುಪ್ರದಾನೇನ ಮಾನೇನ ಚ ಯಶಸ್ವಿನಾ ॥

ಅನುವಾದ

ಯಶಸ್ವಿಯಾದ ಕಪಿರಾಜ ಸುಗ್ರೀವನು ಪ್ರಜೆಗಳನ್ನು ಸಾಂತ್ವನ ವಚನಗಳಿಂದಲೂ, ದಾನಾದಿಗಳಿಂದಲೂ, ಗೌರವದಿಂದಲೂ ಲಾಲಿಸಿ-ಪೋಷಿಸುತ್ತಿರುವನು. ತಮ್ಮ ರಾಜನ ಮರಣದಿಂದಾಗಿ ದುಃಖಿತರಾಗುವ ವಾನರರೆಲ್ಲರೂ ಪ್ರಾಣಗಳನ್ನು ಪರಿತ್ಯಜಿಸುತ್ತಾರೆ.॥33॥

ಮೂಲಮ್ - 34

ಲಾಲಿತಾಃ ಕಪಿರಾಜೇನ ಪ್ರಾಣಾಂಸ್ತ್ಯಕ್ಷ್ಯಂತಿ ವಾನರಾಃ ।
ನ ವನೇಷು ನ ಶೈಲೇಷು ನ ನಿರೋಧೇಷು ವಾ ಪುನಃ ॥

ಮೂಲಮ್ - 35

ಕ್ರೀಡಾಮನುಭವಿಷ್ಯಂತಿ ಸಮೇತ್ಯ ಕಪಿಕುಂಜರಾಃ ।
ಸಪುತ್ರದಾರಾಃ ಸಾಮಾತ್ಯಾ ಭರ್ತೃವ್ಯಸನಪೀಡಿತಾಃ ॥

ಅನುವಾದ

ಹೀಗೆಲ್ಲ ಆದನಂತರ ಕಪಿಶ್ರೇಷ್ಠರು ಅರಣ್ಯಗಳಲ್ಲಿಯೂ, ಪರ್ವತ ಪ್ರದೇಶಗಳಲ್ಲಿಯೂ, ಗುಹೆಗಳಲ್ಲಿಯೂ, ಒಟ್ಟಾಗಿ ಸೇರಿ ವಿನೋದ-ಪ್ರಮೋದಗಳನ್ನು ಅನುಭವಿಸಲಾರರು. ರಾಜನ ವಿಯೋಗ ದುಃಖದಿಂದ ಪೀಡಿತರಾದ ಕಪಿಶ್ರೇಷ್ಠರು ಪುತ್ರ-ಪತ್ನಿಯರೊಡನೆ ಪರ್ವತಗಳ ಮೇಲಿನಿಂದ ಧುಮುಕಿ, ಸಮತಟ್ಟಾದ ಪ್ರದೇಶಗಳಲ್ಲಿಯೂ, ಹಳ್ಳ-ಕೊಳ್ಳಗಳಲ್ಲಿಯೂ ಬಿದ್ದು ಅಸುನೀಗುತ್ತಾರೆ.॥34-35॥

ಮೂಲಮ್ - 36

ಶೈಲಾಗ್ರೇಭ್ಯಃ ಪತಿಷ್ಯಂತಿ ಸಮೇತ್ಯ ವಿಷಮೇಷು ಚ ।
ವಿಷಮುದ್ಬಂಧನಂ ವಾಪಿ ಪ್ರವೇಶಂ ಜ್ವಲನಸ್ಯ ವಾ ॥

ಮೂಲಮ್ - 37

ಉಪವಾಸಮಥೋ ಶಸ್ತ್ರಂ ಪ್ರಚರಿಷ್ಯಂತಿ ವಾನರಾಃ ।
ಘೋರಮಾರೋದನಂ ಮನ್ಯೇ ಗತೇ ಮಯಿ ಭವಿಷ್ಯತಿ ॥

ಅನುವಾದ

ಕೆಲವು ವಾನರರು ವಿಷವನ್ನು ಕುಡಿದು, ಕೆಲವರು ನೇಣುಗಳನ್ನು ಹಾಕಿಕೊಂಡು, ಕೆಲವರು ಬೆಂಕಿಯಲ್ಲಿ ಬಿದ್ದು, ಕೆಲವರು ಮರಣಾಂತ ಉಪವಾಸ ಮಾಡಿ, ಕೆಲವರು ಶಸ್ತ್ರಗಳಿಂದ ಚುಚ್ಚಿಕೊಂಡು ಅಸುನೀಗುತ್ತಾರೆ. ನಾನೇನಾದರೂ ಕೃತ-ಕೃತ್ಯನಾಗದೆ ಕಿಷ್ಕಿಂಧೆಗೆ ಮರಳಿ ಸೀತೆಯು ಸಿಗಲಿಲ್ಲವೆಂಬ ಕೆಟ್ಟ ಸಮಾಚಾರವನ್ನು ತಿಳಿಸಿದರೆ, ಇಕ್ಷ್ವಾಕುವಂಶವು ನಾಶವಾಗುತ್ತದೆ. ಕಪಿಕುಲವೂ ನಾಶವಾಗುತ್ತದೆ. ಮಹಾ ಘೋರವಾದ ರೋದನವೇ ನಾನು ಕೇಳಬೇಕಾಗುತ್ತದೆ. ಇದರಿಂದ ಅಂತಹ ಸರ್ವನಾಶಕ್ಕೆ ಕಾರಣನಾಗುವ ನಾನು ಕಿಷ್ಕಿಂಧೆಗೆ ಹೋಗುವುದೇ ಇಲ್ಲ.॥36-37॥

ಮೂಲಮ್ - 38

ಇಕ್ಷ್ವಾಕುಕುಲನಾಶಶ್ಚ ನಾಶಶ್ಚೈವ ವನೌಕಸಾಮ್ ।
ಸೋಽಹಂ ನೈವ ಗಮಿಷ್ಯಾಮಿ ಕಿಷ್ಕಿಂಧಾಂ ನಗರೀಮಿತಃ ॥

ಅನುವಾದ

ಮೈಥಿಲಿಯನ್ನು ಕಾಣದೆ ಸುಗ್ರೀವನನ್ನು ಸಂದರ್ಶಿಸುವ ಸಾಮರ್ಥ್ಯವೂ ನನಗಿಲ್ಲ. ನಾನು ಕಿಷ್ಕಿಂಧೆಗೆ ಹೋಗದೆ ಇಲ್ಲಿಯೇ ಇದ್ದುಬಿಟ್ಟರೆ ಧರ್ಮಾತ್ಮರಾದ ರಾಮ-ಲಕ್ಷ್ಮಣರು ಸೀತೆಯು ಸಿಕ್ಕುವಳು ಎಂಬ ಪ್ರತ್ಯಾಶೆಯಿಂದಲಾದರೂ ಪ್ರಾಣಗಳನ್ನು ಧರಿಸಿರುತ್ತಾರೆ.॥38॥

ಮೂಲಮ್ - 39

ನ ಚ ಶಕ್ಷ್ಯಾಮ್ಯಹಂ ದ್ರಷ್ಟುಂ ಸುಗ್ರೀವಂ ಮೈಥಿಲೀಂ ವಿನಾ ।
ಮಯ್ಯಗಚ್ಛತಿ ಚೇಹಸ್ಥೇ ಧರ್ಮಾತ್ಮಾನೌ ಮಹಾರಥೌ ॥

ಮೂಲಮ್ - 40

ಆಶಯಾ ತೌ ಧರಿಷ್ಯೇತೇ ವಾನರಾಶ್ಚ ಮನಸ್ವಿನಃ ।
ಹಸ್ತಾದಾನೋ ಮುಖಾದಾನೋ ನಿಯತೋ ವೃಕ್ಷಮೂಲಿಕಃ ॥

ಮೂಲಮ್ - 41

ವಾನಪ್ರಸ್ಥೋ ಭವಿಷ್ಯಾಮಿ ಹ್ಯದೃಷ್ಟ್ವಾ ಜನಕಾತ್ಮಜಾಮ್ ।
ಸಾಗರಾನೂಪಜೇ ದೇಶೇ ಬಹುಮೂಲಫಲೋದಕೇ ॥

ಮೂಲಮ್ - 42

ಚಿತಾಂ ಕೃತ್ವಾ ಪ್ರವೇಕ್ಷ್ಯಾಮಿ ಸಮಿದ್ಧಮರಣೀಸುತಮ್ ।
ಉಪವಿಷ್ಟಸ್ಯ ವಾ ಸಮ್ಯಗ್ಲಿಂಗಿನಂ ಸಾಧಯಿಷ್ಯತಃ ॥

ಅನುವಾದ

ಅವರೊಡನೆ ಬುದ್ಧಿವಂತರಾದ ವಾನರರೂ ಜೀವಿಸಿರುತ್ತಾರೆ. ಜನಕನ ಮಗಳಾದ ಸೀತಾದೇವಿಯನ್ನು ಕಾಣದಿರುವ ನಾನು ಇನ್ನು ಮುಂದೆ ಜಿತೇಂದ್ರಿಯನಾಗಿ ವಾನಪ್ರಸ್ಥವನ್ನು ಆಶ್ರಯಿಸಿ, ಮರದ ಬುಡದಲ್ಲಿ ವಾಸಿಸುತ್ತಾ, ತಾನಾಗಿಯೇ ಕೈಮೇಲೆ ಬೀಳುವ ಅಥವಾ ಬಾಯೊಳಗೆ ಬೀಳುವ ಫಲವನ್ನು ಮಾತ್ರ ತಿನ್ನುತ್ತಾ ಜೀವಿಸಿರುತ್ತೇನೆ. ಅನೇಕ ಫಲ-ಮೂಲಗಳಿಂದ ವಿಶಿಷ್ಟವಾದ ಸಮುದ್ರತೀರದಲ್ಲಿ ಚಿತೆಯೊಂದನ್ನು ನಿರ್ಮಿಸಿ ಅರಣಿಯಿಂದ ಹುಟ್ಟಿದ ಪ್ರಜ್ವಲಿಸುವ ಅಗ್ನಿಯಲ್ಲಿ ಪ್ರವೇಶಿಸುತ್ತೇನೆ. ಪ್ರಾಯೋಪವೇಶ ವ್ರತವನ್ನು ಕೈಗೊಂಡು ಯೋಗಸಾಧನೆಯ ಮೂಲಕ ಜೀವಾತ್ಮನ ಶರೀರಸಂಬಂಧವನ್ನು ಬೇರೆಯಾಗಿಸಿಕೊಂಡು ಶರೀರವನ್ನು ತ್ಯಾಗಮಾಡುವೆನು.॥39-42॥

ಮೂಲಮ್ - 43

ಶರೀರಂ ಭಕ್ಷಯಿಷ್ಯಂತಿ ವಾಯಸಾಃ ಶ್ವಾಪದಾನಿ ಚ ।
ಇದಂ ಮಹರ್ಷಿಭಿರ್ದೃಷ್ಟಂ ನಿರ್ಯಾಣಮಿತಿ ಮೇ ಮತಿಃ ॥

ಅನುವಾದ

ಅನಂತರ ಈ ಶರೀರವನ್ನು ಕಾಗೆಗಳೂ, ಮಾಂಸಾಹಾರಿ ಇತರ ಪ್ರಾಣಿಗಳು ತಿಂದುಹಾಕುತ್ತಾರೆ. ನಾನು ಸೀತಾದೇವಿಯನ್ನು ಕಾಣದಿದ್ದರೆ ಜಲಸಮಾಧಿಯ ಮೂಲಕ ಸಾಯುವೆನು. ನನ್ನ ಅಭಿಪ್ರಾಯದಂತೆ ಈ ವಿಧವಾದ ದೇಹತ್ಯಾಗವನ್ನು ಮಹರ್ಷಿಗಳು ಕಂಡುಕೊಂಡಿದ್ದರು.॥43॥

ಮೂಲಮ್ - 44

ಸಮ್ಯಗಾಪಃ ಪ್ರವೇಕ್ಷ್ಯಾಮಿ ನ ಚೇತ್ ಪಶ್ಯಾಮಿ ಜಾನಕೀಮ್ ।
ಸುಜಾತಮೂಲಾ ಸುಭಗಾ ಕೀರ್ತಿಮಾಲಾ ಯಶಸ್ವಿನಿ ॥

ಅನುವಾದ

ಈ ರಾತ್ರಿಯ ಪ್ರಾರಂಭದಲ್ಲೇ ಲಂಕಾಧಿದೇವತೆಯನ್ನು ನಾನು ಜಯಿಸಿದೆನು. ಅದರಿಂದ ಇದು ನನಗೆ ಶುಭದಾಯಕ ರಾತ್ರಿಯು. ರಮ್ಯವಾದ ಚಂದ್ರೋದಯದಿಂದ ಸೀತಾನ್ವೇಷಣೆಗೆ ಅನುಕೂಲವಾಯಿತು, ಇದರಿಂದ ಸುಭಗ, ಪ್ರಾರಂಭಿಕ ವಿಜಯವು. ಕೀರ್ತಿ ತರುವಂತಹುದು, ಅದರಿಂದ ನನಗೆ ಕೀರ್ತಿದಾಯಕವು. ನಾನು ಲಂಕೆಯಲ್ಲಿ ಪ್ರವೇಶಿಸಿದ ಖ್ಯಾತಿವೆತ್ತ ರಾತ್ರಿಯು, ಅದರಿಂದ ಇದು ವಿಖ್ಯಾತ. ಜಾಗರಣದಿಂದ ಇದು ದೀರ್ಘವಾದ್ದರಿಂದ ವೀರರಾತ್ರಿಯು. ಇಷ್ಟರವರೆಗೆ ಶುಭವೇ ಜರಗಿದೆ, ಆದರೆ ಸೀತಾದೇವಿಯ ಜಾಡನ್ನು ತಿಳಿಯದೇ ಇರುವುದರಿಂದ ಇವೆಲ್ಲವೂ ಬೂದಿಯಲ್ಲಿ ಪನ್ನೀರು ಸುರಿದಂತಾಯಿತು. (ಅರ್ಥಾತ್ ವ್ಯರ್ಥವಾಗಿ ಕಳೆದುಹೋಗುತ್ತಿದೆ.)॥44॥

ಮೂಲಮ್ - 45

ಪ್ರಭಗ್ನಾ ಚಿರರಾತ್ರೀಯಂ ಮಮ ಸೀತಾಮಪಶ್ಯತಃ ।
ತಾಪಸೋ ವಾ ಭವಿಷ್ಯಾಮಿ ನಿಯತೋ ವೃಕ್ಷಮೂಲಿಕಃ ॥

ಅನುವಾದ

ಆದುದರಿಂದ ಸೀತಾದೇವಿಯನ್ನು ಕಾಣದೆ ನಾನು ಕಿಷ್ಕಿಂಧೆಗೆ ಹೋಗುವುದೇ ಇಲ್ಲ. ನಾನೀಗ ತಪಸ್ವಿಯಾದರೂ ಆಗುತ್ತೇನೆ, ಅಥವಾ ನಿಯತವಾದ ವ್ರತವನ್ನು ಕೈಗೊಂಡು ವೃಕ್ಷದ ಬುಡದಲ್ಲಿ ವಾಸಿಸುತ್ತೇನೆ.॥45॥

ಮೂಲಮ್ - 46

ನೇತಃ ಪ್ರತಿಗಮಿಷ್ಯಾಮಿ ತಾಮದೃಷ್ಟ್ವಾಸಿತೇಕ್ಷಣಾಮ್ ।
ಯದೀತಃ ಪ್ರತಿಗಚ್ಛಾಮಿ ಸೀತಾಮನಧಿಗಮ್ಯ ತಾಮ್ ॥

ಮೂಲಮ್ - 47

ಅಂಗದಃಸಹ ತೈಃಸರ್ವೈರ್ವಾನರೈರ್ನ ಭವಿಷ್ಯತಿ ।
ವಿನಾಶೇ ಬಹವೋ ದೋಷಾ ಜೀವನ್ ಭದ್ರಾಣಿ ಪಶ್ಯತಿ ॥

ಅನುವಾದ

ಪೂಜ್ಯಳಾದ ಸೀತಾದೇವಿಯನ್ನು ದರ್ಶಿಸದೆ ಇಲ್ಲಿಂದ ನಾನು ಮಿತ್ರರಲ್ಲಿಗೆ ಮರಳಿ ಹೋದರೆ ಅಂಗದಾದಿ ವಾನರರೂ ಜೀವಿಸಿರಲಾರರು. ‘‘ನಿರಾಶೆಯಿಂದ ಅಸುನೀಗಿದರೆ ಅನೇಕ ದೋಷಗಳು ಉಂಟಾಗುತ್ತವೆ. ಜೀವಿಸಿದ್ದರೆ ಎಂದಾದರೊಂದು ದಿನ ಶುಭವನ್ನು ಕಾಣಬಹುದು.॥46-47॥

ಮೂಲಮ್ - 48

ತಸ್ಮಾತ್ ಪ್ರಾಣಾನ್ ಧರಿಷ್ಯಾಮಿ ಧ್ರುವೋ ಜೀವತಿ ಸಂಗಮಃ ।
ಏವಂ ಬಹುವಿಧಂ ದುಃಖಂ ಮನಸಾ ಧಾರಯನ್ ಮುಹುಃ ॥

ಅನುವಾದ

ಅದರಿಂದ ನಾನು ಪ್ರಾಣಗಳನ್ನು ತೊರೆಯುವುದಿಲ್ಲ ; ಬದುಕಿಯೇ ಇರುವೆನು. ಜೀವಿಸಿರುವವನಿಗೆ ಸುಖವು ಲಭಿಸುವುದು ನಿಶ್ಚಯವು.’’ ಕಪಿಶ್ರೇಷ್ಠನಾದ ಹನುಮಂತನು ಹೀಗೆ ಪರಿ-ಪರಿಯಾಗಿ ಯೋಚಿಸುತ್ತಾ ನಾನಾ ವಿಧವಾದ ದುಃಖಗಳನ್ನು ಮನಸ್ಸಿನಲ್ಲಿ ತುಂಬಿ ಕೊಂಡಿದ್ದನು.॥48॥

ಮೂಲಮ್ - 49

ನಾಧ್ಯಗಚ್ಛತ್ತದಾ ಪಾರಂ ಶೋಕಸ್ಯ ಕಪಿಕುಂಜರಃ ।
ತತೋ ವಿಕ್ರಮಮಾಸಾದ್ಯ ಧೈರ್ಯವಾನ್ ಕಪಿಕುಂಜರಃ ॥

ಮೂಲಮ್ - 50

ರಾವಣಂ ವಾ ವಧಿಷ್ಯಾಮಿ ದಶಗ್ರೀವಂ ಮಹಾಬಲಮ್ ।
ಕಾಮಮಸ್ತು ಹೃತಾ ಸೀತಾ ಪ್ರತ್ಯಾಚೀರ್ಣಂ ಭವಿಷ್ಯತಿ ॥

ಮೂಲಮ್ - 51

ಅಥವೈನಂ ಸಮುತ್ಕ್ಷಿಪ್ಯ ಉಪರ್ಯುಪರಿ ಸಾಗರಮ್ ।
ರಾಮಾಯೋಪಹರಿಷ್ಯಾಮಿ ಪಶುಂ ಪಶುಪತೇರಿವ ॥

ಅನುವಾದ

ಈ ಶೋಕದಿಂದ ಹೊರಬರಲು ಅವನಿಗೆ ಸಾಧ್ಯವಾಗಲೇ ಇಲ್ಲ. ಅನಂತರ ಧೈರ್ಯಶಾಲಿಯೂ, ಕಪಿಶ್ರೇಷ್ಠನೂ ಆದ ಮಾರುತಿಯು ತನ್ನ ಪರಾಕ್ರಮವನ್ನು ಸ್ಮರಿಸುತ್ತಾ ಹೀಗೆ ಅಂದುಕೊಂಡನು ಅಪಹೃತಳಾದ ಸೀತಾದೇವಿಯು ತನ್ನ ಪಾಡಿಗೆ ಎಲ್ಲಾದರೂ ಇರಲಿ, ಮುಂದೇನಾಗುವುದೋ ಆಗಲೀ, ಆದರೆ ನಾನೀಗ ಮೊದಲಿಗೆ ಮಹಾಬಲನಾದ ಹತ್ತು ತಲೆಯ ರಾವಣನನ್ನೇ ಸಂಹಾರ ಮಾಡುತ್ತೇನೆ. ಇದರಿಂದ ಅವನು ಮಾಡಿದ ಅಪರಾಧಕ್ಕೆ ತಕ್ಕ ಪ್ರತೀಕಾರ ಆದಂತಾಗುತ್ತದೆ. ಹಾಗಿಲ್ಲದಿದ್ದರೆ ಇವನನ್ನೇ ಎತ್ತಿಕೊಂಡು ಸಮುದ್ರವನ್ನು ಲಂಘಿಸಿ ಪಶುಪತಿಗೆ ಪಶುವನ್ನು ಒಪ್ಪಿಸುವಂತೆ ರಾಮನಿಗೆ ಒಪ್ಪಿಸಿಬಿಡುತ್ತೇನೆ.*॥49-51॥

ಟಿಪ್ಪನೀ
  • ‘‘ಇಮಂ ಪಶುಂ ಪಶುಪತೇ ತೇ ಅದ್ಯ ಬಧ್ನಾಮ್ಯಗ್ನೇ’’
    (ತೈತ್ತಿರೀಯ ಸಂಹಿತಾ)
    ಪಶುಪತಿ ಅಂದರೆ ಅಗ್ನಿ ಎಂದರ್ಥ.
ಮೂಲಮ್ - 52

ಇತಿ ಚಿಂತಾಂ ಸಮಾಪನ್ನಃ ಸೀತಾಮನಧಿಗಮ್ಯತಾಮ್ ।
ಧ್ಯಾನಶೋಕಪರೀತಾತ್ಮಾ ಚಿಂತಯಾಮಾಸ ವಾನರಃ ॥

ಮೂಲಮ್ - 53

ಯಾವತ್ ಸೀತಾಂಹಿ ಪಶ್ಯಾಮಿ ರಾಮಪತ್ನೀಂ ಯಶಸ್ವಿನೀಮ್ ।
ತಾವದೇತಾಂ ಪುರೀಂ ಲಂಕಾಂ ವಿಚಿನೋಮಿ ಪುನಃ ಪುನಃ ॥

ಅನುವಾದ

ಮಹಾಭಾಗೆಯಾದ ಸೀತಾದೇವಿಯನ್ನು ಕಾಣದೇ ಹನುಮಂತನು ಹೀಗೆ ಪರಿ-ಪರಿಯಾಗಿ ಚಿಂತಿಸುತ್ತಿದ್ದನು. ಚಿಂತೆ ಮತ್ತು ಶೋಕಗಳಿಂದ ಅವನ ಮನಸ್ಸು ತುಂಬಿಹೋಗಿತ್ತು. ಮುಂದೇನು ಮಾಡಬೇಕೆಂಬುದರ ಬಗೆಗೆ ಪುನಃ-ಪುನಃ ಚಿಂತಿಸುತ್ತಲೇ ಇದ್ದನು. ‘ಯಶೋವತಿಯಾದ, ಶ್ರೀರಾಮನ ಪತ್ನಿಯಾದ ಸೀತಾದೇವಿಯನ್ನು ಕಾಣುವವರೆಗೆ ನಾನು ಈ ಲಂಕೆಯಲ್ಲಿ ಮರಳಿ-ಮರಳಿ ಹುಡುಕುತ್ತಲೇ ಇರುತ್ತೇನೆ.॥52-53॥

ಮೂಲಮ್ - 54

ಸಂಪಾತಿವಚನಾಚ್ಚಾಪಿ ರಾಮಂ ಯದ್ಯಾನಯಾಮ್ಯಹಂ ।
ಅಪಶ್ಯನ್ ರಾಘವೋ ಭಾರ್ಯಾಂ ನಿರ್ದಹೇತ್ ಸರ್ವವಾನರಾನ್ ॥

ಮೂಲಮ್ - 55

ಇಹೈವ ನಿಯತಾಹಾರೋ ವತ್ಸ್ಯಾಮಿ ನಿಯತೇಂದ್ರಿಯಃ ।
ನ ಮತ್ಕೃತೇ ವಿನಶ್ಯೇಯುಃ ಸರ್ವೇ ತೇ ನರವಾನರಾಃ ॥

ಅನುವಾದ

ಸಂಪಾತಿಯ ಮಾತಿನಂತೆ ಸೀತೆಯು ಲಂಕೆಯಲ್ಲಿರುವಳೆಂದು ತಿಳಿದು ಒಂದು ವೇಳೆ ಶ್ರೀರಾಮನನ್ನು ನಾನು ಇಲ್ಲಿಗೆ ಕರತಂದರೆ ತನ್ನ ಭಾರ್ಯೆಯಾದ ಸೀತೆಯನ್ನು ಕಣದೆ, ರಾಘವನು ಕುಪಿತನಾಗಿ ಎಲ್ಲ ವಾನರರನ್ನು ಸುಟ್ಟುಬಿಡುವನು. ಆದುದರಿಂದ ನಾನು ನಿಯತವಾದ ಆಹಾರವನ್ನು ಸೇವಿಸುತ್ತಾ ಜಿತೇಂದ್ರಿಯನಾಗಿ ಇಲ್ಲಿಯೇ ಇದ್ದುಬಿಡುವೆನು. ನನ್ನ ಸಲುವಾಗಿ ನರರೂ-ವಾನರರೂ ವಿನಾಶಹೊಂದದಿರಲಿ.॥54-55॥

ಮೂಲಮ್ - 56

ಅಶೋಕವನಿಕಾ ಚೇಯಂ ದೃಶ್ಯತೇ ಯಾ ಮಹಾದ್ರುಮಾ ।
ಇಮಾಮಭಿಗಮಿಷ್ಯಾಮಿ ನ ಹೀಯಂ ವಿಚಿತಾ ಮಯಾ ॥

ಅನುವಾದ

ಇದೋ ಮುಂದೆ ಕಾಣುತ್ತಿರುವ ಅನೇಕ ಮಹಾವೃಕ್ಷಗಳಿಂದ ಕೂಡಿರುವ, ವಿಸ್ತಾರವಾದ ಈ ಅಶೋಕವನದಲ್ಲಿ ನಾನು ಇದುವರೆವಿಗೂ ಸೀತೆಯನ್ನು ಹುಡುಕಿಲ್ಲ. ಈಗ ಈ ವನವನ್ನು ಹೊಕ್ಕು ಸೀತೆಯನ್ನು ಇಲ್ಲಿಯೂ ಹುಡುಕುತ್ತೇನೆ.॥56॥

ಮೂಲಮ್ - 57

ವಸೂನ್ ರುದ್ರಾಂಸ್ತಥಾದಿತ್ಯಾನಶ್ವಿನೌ ಮರುತೋಽಪಿ ಚ ।
ನಮಸ್ಕೃತ್ವಾ ಗಮಿಷ್ಯಾಮಿ ರಕ್ಷಸಾಂ ಶೋಕವರ್ಧನಃ ॥

ಅನುವಾದ

ರಾಕ್ಷಸರಿಗೆ ಶೋಕವನ್ನು ಹೆಚ್ಚಿಸಲು ಬಂದಿರುವ ನಾನು ಅಷ್ಟವಸುಗಳನ್ನೂ, ಏಕಾದಶರುದ್ರರನ್ನೂ, ದ್ವಾದಶಾದಿತ್ಯರನ್ನೂ ಅಶ್ವಿನೀದೇವತೆಗಳನ್ನೂ, ಮರುತ್ತರನ್ನೂ ನಮಸ್ಕರಿಸಿ, ಸೀತೆಯನ್ನು ಹುಡುಕಲು ಈ ಅಶೋಕವನವನ್ನು ಪ್ರವೇಶಿಸುತ್ತೇನೆ. ॥57॥

ಮೂಲಮ್ - 58

ಜಿತ್ವಾ ತು ರಾಕ್ಷಸಾನ್ ಸರ್ವಾನಿಕ್ಷ್ವಾಕುಕುಲನಂದಿನೀಮ್ ।
ಸಂಪ್ರದಾಸ್ಯಾಮಿ ರಾಮಾಯ ಯಥಾ ಸಿದ್ಧಿಂ ತಪಸ್ವಿನೇ ॥

ಅನುವಾದ

ರಾಕ್ಷಸರೆಲ್ಲರನ್ನು ಸಂಹರಿಸಿ, ಇಕ್ಷ್ವಾಕುಕುಲನಂದಿನಿಯಾದ ಸೀತಾದೇವಿಯನ್ನು, ಓರ್ವ ಮಹಾತಪಸ್ವಿಗೆ ಪ್ರಾಪ್ತವಾಗುವ ತಪಃಫಲದಂತೆ ಶ್ರೀರಾಮನಿಗೆ ಒಪ್ಪಿಸುತ್ತೇನೆ.’’॥58॥

ಮೂಲಮ್ - 59

ಸ ಮುಹೂರ್ತಮಿವ ಧ್ಯಾತ್ವಾ ಚಿಂತಾವಗ್ರಥಿತೇಂದ್ರಿಯಃ ।
ಉದತಿಷ್ಠನ್ಮಹಾತೇಜಾ ಹನೂಮಾನ್ ಮಾರುತಾತ್ಮಜಃ ॥

ಅನುವಾದ

ಚಿಂತೆಯಿಂದ ವ್ಯಾಕುಲವಾದ ಮನಸ್ಸಿನಿಂದ ಕೂಡಿದ್ದ, ಮಹಾತೇಜಸ್ವಿಯಾದ ವಾಯುಪುತ್ರನು ಕ್ಷಣಕಾಲ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದು ಥಟ್ಟನೆ ಎದ್ದುನಿಂತು ದೇವತೆಗಳನ್ನು ಪ್ರಾರ್ಥಿಸಿದನು.॥59॥

ಮೂಲಮ್ - 60

ನಮೋಽಸ್ತು ರಾಮಾಯ ಸಲಕ್ಷ್ಮಣಾಯ
ದೇವ್ಯೈ ಚ ತಸ್ಯೈ ಜನಕಾತ್ಮಜಾಯೈ ।
ನಮೋಽಸ್ತು ರುದ್ರೇಂದ್ರಯಮಾನಿಲೇಭ್ಯೋ
ನಮೋಽಸ್ತು ಚಂದ್ರಾರ್ಕಮರುದ್ಗಣೇಭ್ಯಃ ॥

ಅನುವಾದ

‘‘ಶ್ರೀರಾಮನಿಗೆ ನಮಸ್ಕಾರವು. ಜನಕಸುತೆಯಾದ ಜಾನಕಿಗೆ ನಮಸ್ಕಾರವು. ಲಕ್ಷ್ಮಣದೇವನಿಗೂ ನಮಸ್ಕಾರವು. ರುದ್ರನಿಗೂ, ಇಂದ್ರನಿಗೂ, ಯಮನಿಗೂ, ವಾಯುದೇವರಿಗೂ, ನಮಸ್ಕಾರಗಳು. ಸೂರ್ಯ, ಚಂದ್ರ, ಮರುದ್ಗಣರಿಗೂ, ನಮಸ್ಕಾರ ಮಾಡುತ್ತೇನೆ.॥60॥

ಮೂಲಮ್ - 61

ಸ ತೇಭ್ಯಸ್ತು ನಮಸ್ಕೃತ್ವಾ ಸುಗ್ರೀವಾಯ ಚ ಮಾರುತಿಃ ।
ದಿಶಃ ಸರ್ವಾಃ ಸಮಾಲೋಕ್ಯ ಹ್ಯಶೋಕವನಿಕಾಂ ಪ್ರತಿ ॥

ಅನುವಾದ

ಹೀಗೆ ಮಾರುತಿಯು ಎಲ್ಲರಿಗೂ ನಮಸ್ಕರಿಸಿ ಒಡೆಯನಾದ ಸುಗ್ರೀವನನ್ನು ಮನಸ್ಸಿನಲ್ಲೇ ನಮಸ್ಕರಿಸಿ, ಸುತ್ತಲೂ ಎಲ್ಲ ಕಡೆಗಳಲ್ಲಿಯೂ ದೃಷ್ಟಿ ಹರಿಸಿ ಅಶೋಕವನದ ಕಡೆಗೆ ಹೊರಟನು.॥61॥

ಮೂಲಮ್ - 62

ಸ ಗತ್ವಾ ಮನಸಾ ಪೂರ್ವಮಶೋಕವನಿಕಾಂ ಶುಭಾಮ್ ।
ಉತ್ತರಂ ಚಿಂತಯಾಮಾಸ ವಾನರೋ ಮಾರುತಾತ್ಮಜಃ ॥

ಅನುವಾದ

ಹನುಮಂತನು ಮೊದಲು ಅಶೋಕವನವನ್ನು ಮನಸ್ಸಿನಿಂದಲೇ ಪ್ರವೇಶಿಸಿ, ಅಲ್ಲೇ ಇರುವೆನೆಂದು ಭಾವಿಸಿ, ಮುಂದೆ ಮಾಡಬೇಕಾದ ಕಾರ್ಯಗಳ ಬಗೆಗೆ ಹಾಗೂ ಅಲ್ಲಿರಬಹುದಾದ ವಾತಾವರಣದ ಬಗ್ಗೆ ಯೋಚಿಸತೊಡಗಿದನು.॥62॥

ಮೂಲಮ್ - 63

ಧ್ರುವಂ ತು ರಕ್ಷೋಬಹುಲಾ ಭವಿಷ್ಯತಿ ವನಾಕುಲಾ ।
ಅಶೋಕವನಿಕಾಽಚಿಂತ್ಯಾ ಸರ್ವಸಂಸ್ಕಾರಸಂಸ್ಕೃತಾ ॥

ಅನುವಾದ

‘‘ಉದ್ಯಾನವನಗಳ ಸಮೂಹಗಳಿಂದ ವ್ಯಾಪ್ತವಾಗಿರುವ, ಪುಣ್ಯತಮವಾದ, ಸಕಲವಿಧವಾದ ಸಂಸ್ಕಾರಗಳಿಂದಲೂ ಸಂಸ್ಕೃತವಾಗಿ ಚೆನ್ನಾಗಿ ಬೆಳೆದಿರುವ ಗಿಡ-ಮರ-ಬಳ್ಳಿಗಳಿಂದ ತುಂಬಿರುವ ಈ ಅಶೋಕವನವನ್ನು ಮೊದಲು ನೋಡಿಲ್ಲ. ಇಲ್ಲಿ ಅನೇಕ ರಾಕ್ಷಸರು ಇರಬಹುದೆಂಬುದು ನಿಶ್ಚಯವು.॥63॥

ಮೂಲಮ್ - 64

ರಕ್ಷಿಣಶ್ಚಾತ್ರ ವಿಹಿತಾ ನೂನಂ ರಕ್ಷಂತಿ ಪಾದಪಾನ್ ।
ಭಗವಾನಪಿ ಸರ್ವಾತ್ಮಾ ನಾತಿಕ್ಷೋಭಂ ಪ್ರವಾತಿ ವೈ ॥

ಅನುವಾದ

ಇಲ್ಲಿ ವನದ ವೃಕ್ಷರಕ್ಷಣೆಗಾಗಿ ರಾಕ್ಷಸಭಟರು ತಪ್ಪದೇ ನಿಯೋಜಿತರಾಗಿರಬಹುದು. ಸರ್ವಾತ್ಮನಾದ ಭಗವಾನ್ ವಾಯುದೇವರೂ ಕೂಡ ವೃಕ್ಷಗಳು ಹೆಚ್ಚು ಅಲ್ಲಾಡದಂತೆ ಮೆಲ್ಲ-ಮೆಲ್ಲನೆ ಬೀಸುತ್ತಿರುವನು.॥64॥

ಮೂಲಮ್ - 65

ಸಂಕ್ಷಿಪ್ತೋಽಯಂ ಮಯಾತ್ಮಾ ಚ ರಾಮಾರ್ಥೇ ರಾವಣಸ್ಯ ಚ ।
ಸಿದ್ಧಿಂ ಮೇ ಸಂವಿಧಾಸ್ಯಂತಿ ದೇವಾಃ ಸರ್ಷಿಗಣಾಸ್ತ್ವಿಹ ॥

ಅನುವಾದ

ಶ್ರೀರಾಮನ ಕಾರ್ಯಸಾಧನೆಗಾಗಿಯೂ, ರಾವಣನು ನೋಡದಿರಲೆಂದು ನಾನು ನನ್ನ ಶರೀರವನ್ನು ಸಣ್ಣದಾಗಿಸಿಕೊಂಡಿದ್ದೇನೆ. ದೇವತೆಗಳೂ, ಮಹರ್ಷಿಗಳ ಸಮೂಹಗಳೂ, ನನ್ನ ಕಾರ್ಯವು ಸಿದ್ಧಿಸುವಂತೆ ಅನುಗ್ರಹಿಸಲಿ.॥65॥

ಮೂಲಮ್ - 66

ಬ್ರಹ್ಮಾ ಸ್ವಯಂಭೂರ್ಭಗವಾನ್ ದೇವಾಶ್ಚೈವ ದಿಶಂತು ಮೇ ।
ಸಿದ್ಧಿಮಗ್ನಿಶ್ಚ ವಾಯುಶ್ಚ ಪುರುಹೂತಶ್ಚ ವಜ್ರಭೃತ್ ॥

ಮೂಲಮ್ - 67

ವರುಣಃ ಪಾಶಹಸ್ತಶ್ಚ ಸೋಮಾದಿತ್ಯೌ ತಥೈವ ಚ ।
ಅಶ್ವಿನೌ ಚ ಮಹಾತ್ಮಾನೌ ಮರುತಃ ಸರ್ವ ಏವ ಚ ॥

ಅನುವಾದ

ಸ್ವಯಂಭುವಾದ ಬ್ರಹ್ಮದೇವರೂ, ಇತರ ದೇವತೆಗಳೂ, ಅಗ್ನಿಯೂ, ವಾಯುವೂ, ವಜ್ರಪಾಣಿಯಾದ ಇಂದ್ರನೂ ಪಾಶಹಸ್ತನಾದ ವರುಣನೂ ಹಾಗೇ ಸೂರ್ಯ-ಚಂದ್ರರೂ, ಮಹಾತ್ಮರಾದ ಅಶ್ವಿನೀದೇವತೆಗಳೂ, ಮರುತ್ತುಗಳೂ, ಶಿವನು ನನ್ನ ಕಾರ್ಯವು ಸಿದ್ಧಿಸುವಂತೆ ಅನುಗ್ರಹಿಸಲಿ.॥66-67॥

ಮೂಲಮ್ - 68

ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂ ಚೈವ ಯಃ ಪ್ರಭುಃ ।
ದಾಸ್ಯಂತಿ ಮಮ ಯೇ ಚಾನ್ಯೇ ಹ್ಯದೃಷ್ಟಾಃ ಪಥಿ ಗೋಚರಾಃ ॥

ಅನುವಾದ

ಸಕಲ ಪ್ರಾಣಿಗಳೂ, ಸಮಸ್ತ ಜೀವಕೋಟಿಗೆ ಅಧಿಪತಿಯಾದ ಶ್ರೀಮಹಾವಿಷ್ಣುವು ಅದೃಶ್ಯರಾಗಿ ಸಂಚರಿಸುವ ಇತರ ದೇವತೆಗಳೂ ನನ್ನ ಕಾರ್ಯ ಸಿದ್ಧಿಗಾಗಿ ಆಶೀರ್ವದಿಸಲಿ.॥68॥

ಮೂಲಮ್ - 69

ತದುನ್ನಸಂ ಪಾಂಡರದಂತಮವ್ರಣಂ
ಶುಚಿಸ್ಮಿತಂ ಪದ್ಮಪಲಾಶಲೋಚನಮ್ ।
ದ್ರಕ್ಷ್ಯೇ ತದಾರ್ಯಾವದನಂ ಕದಾ ನ್ವಹಂ
ಪ್ರಸನ್ನ ತಾರಾಧಿಪತುಲ್ಯದರ್ಶನಮ್ ॥

ಅನುವಾದ

ಆರ್ಯೆಯಾದ ಸೀತಾದೇವಿಯ ಮುಖಾರವಿಂದವು, ಅಂದವಾದ ಮೂಗಿನಿಂದ ಕೂಡಿದೆ. ಬಿಳುಪಾದ ಹಲ್ಲುಗಳಿಂದ ಶೋಭಾಯಮಾನವಾಗಿದೆ. ಆ ಸುಂದರ ಮುಖದಲ್ಲಿ ಯಾವುದೇ ಕಲೆಗಳು ಇಲ್ಲ. ಶುಭ್ರವಾದ ಮಂದಹಾಸದಿಂದ ಯುಕ್ತವಾಗಿದೆ. ತಾವರೆಯ ಎಸಳಿಗೆ ಸಮಾನವಾದ ಕಣ್ಣುಗಳಿಂದ ಕೂಡಿದ್ದು, ತಾರಾಗಣ ಅಧಿಪತಿಯಾದ ಚಂದ್ರನಂತೆ ಪ್ರಭೆಯಿಂದೊಡಗೂಡಿದೆ. ಅಂತಹ ಸುಂದರವಾದ ಮುಖಾರವಿಂದವನ್ನು ನಾನು ಎಂದು ನೋಡುವೆನೋ?॥69॥

ಮೂಲಮ್ - 70

ಕ್ಷುದ್ರೇಣ ಪಾಪೇನ ನೃಶಂಸಕರ್ಮಣಾ
ಸುದಾರುಣಾಲಂಕೃತವೇಷಧಾರಿಣಾ ।
ಬಲಾಭಿಭೂತಾ ಹ್ಯಬಲಾ ತಪಸ್ವಿನೀ
ಕಥಂ ನು ಮೇ ದೃಷ್ಟಿಪಥೇಽದ್ಯ ಸಾ ಭವೇತ್ ॥

ಅನುವಾದ

ರಾವಣನು ಕ್ಷುದ್ರನೂ, ಪಾಪಿಷ್ಠನೂ, ಕ್ರೂರಕರ್ಮನೂ, ಭಯಂಕರವಾದ ವೇಷವನ್ನು ಧರಿಸುವವನೂ ಆದ ಆ ದುಷ್ಟನು ಅಬಲೆಯಾದ, ಶ್ರೀರಾಮನನ್ನೇ ಸದಾಕಾಲ ಧ್ಯಾನಿಸುತ್ತಿರುವ, ಪತಿ ಪರಾಯಣಳಾದ ಸೀತಾದೇವಿಯನ್ನು ಬಲವಂತವಾಗಿ ಅಪಹರಿಸಿಕೊಂಡು ಬಂದು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವನು. ಅಂತಹವಳು ನನ್ನ ದೃಷ್ಟಿಗೆ ಹೇಗೆ ಗೋಚರಿಸುವಳು? ನನಗೆಲ್ಲಿ ಸಿಗುವಳು?॥70॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಯೋದಶಃ ಸರ್ಗಃ ॥ 13 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹದಿಮೂರನೆಯ ಸರ್ಗವು ಮುಗಿಯಿತು.