०८२ रामानयनाय भरतप्रस्थानम्

वाचनम्
ಭಾಗಸೂಚನಾ

ಪಟ್ಟಾಭಿಷಿಕ್ತನಾಗುವಂತೆ ಭರತನಿಗೆ ವಸಿಷ್ಠರ ಆದೇಶ, ಭರತನ ಅಸಮ್ಮತಿ, ಶ್ರೀರಾಮನನ್ನು ಅರಣ್ಯದಿಂದ ಕರೆತರಲು ಸಿದ್ಧರಾಗುವಂತೆ ಎಲ್ಲರಿಗೆ ಆದೇಶ

ಮೂಲಮ್ - 1

ತಾಮಾರ್ಯಗಣಸಂಪೂರ್ಣಾಂ ಭರತಃ ಪ್ರಗೃಹಾಂ ಸಭಾಮ್ ।
ದದರ್ಶಬುದ್ಧಿಸಂಪನ್ನಃ ಪೂರ್ಣಚಂದ್ರಾಂ ನಿಶಾಮಿವ ॥

ಅನುವಾದ

ಆರ್ಯಜನರಿಂದ ತುಂಬಿಹೋಗಿದ್ದ, ವಸಿಷ್ಠರೇ ಮೊದಲಾದ ಮಹರ್ಷಿಗಳಿಂದ ಅಧಿಷ್ಠಿತವಾಗಿದ್ದ ಸಭೆಯನ್ನು ಶುಭ ಗ್ರಹ-ನಕ್ಷತ್ರಗಳಿಂದ ಕೂಡಿರುವ ರಾತ್ರಿಯನ್ನು ಪೂರ್ಣಚಂದ್ರನು ಬೆಳಗುವಂತೆ ಬುದ್ಧಿಸಂಪನ್ನನಾದ ಭರತನು ನೋಡಿದನು.॥1॥

ಮೂಲಮ್ - 2

ಆಸನಾನಿ ಯಥಾನ್ಯಾಯಮಾರ್ಯಾಣಾಂ ವಿಶತಾಂ ತದಾ ।
ವಸ್ತ್ರಾಂಗರಾಗಪ್ರಭಯಾ ದ್ಯೋತಿತಾಸಾ ಸಭೋತ್ತಮಾ ॥

ಅನುವಾದ

ಆಗ ಯಥಾಯೋಗ್ಯ ಆಸನಗಳಲ್ಲಿ ಕುಳಿತಿರುವ ಆರ್ಯಪುರುಷರ ವಸ್ತ್ರ ಹಾಗೂ ಅಂಗರಾಗಗಳ ಪ್ರಭಾವದಿಂದ ಆ ಉತ್ತಮ ಸಭೆ ಹೆಚ್ಚು ಪ್ರಕಾಶಮಾನವಾಗಿತ್ತು.॥2॥

ಮೂಲಮ್ - 3

ಸಾ ವಿದ್ವಜ್ಜನ ಸಂಪೂರ್ಣಾಸಭಾ ಸುರುಚಿರಾ ತಥಾ ।
ಅದೃಶ್ಯತ ಘನಾಪಾಯೇಪೂರ್ಣಚಂದ್ರೇವ ಶರ್ವರೀ ॥

ಅನುವಾದ

ಮಳೆಗಾಲ ಕಲೆದು ಶರದ್ ಋತುವಿನ ಪೂರ್ಣಿಮೆಗೆ ಪೂರ್ಣಚಂದ್ರನಿಂದ ಅಲಂಕೃತ ರಜನಿಯು ಬಹಳ ಮನೋಹರವಾಗಿ ಕಂಡು ಬರುವಂತೆ ವಿದ್ವಾಂಸರ ಸಮುದಾಯದಿಂದ ತುಂಬಿರುವ ಆ ಸಭೆಯು ತುಂಬಾ ಸುಂದರವಾಗಿ ಕಾಣುತ್ತಿತ್ತು.॥3॥

ಮೂಲಮ್ - 4

ರಾಜ್ಞಸ್ತು ಪ್ರಕೃತಿಃ ಸರ್ವಾಃ ಸ ಸಂಪ್ರೇಕ್ಷ್ಯಚ ಧರ್ಮವಿತ್ ।
ಇದಂ ಪುರೋಹಿತೋ ವಾಕ್ಯಂ ಭರತಂ ಮೃದು ಚಾಬ್ರವೀತ್ ॥

ಅನುವಾದ

ಆಗ ಧರ್ಮಜ್ಞರಾದ ಪುರೋಹಿತ ವಸಿಷ್ಠರು, ರಾಜನ ಸಮಸ್ತ ಮಂತ್ರಿಗಳು ಉಪಸ್ಥಿತರಿರುವುದನ್ನು ನೋಡಿ ಭರತನಲ್ಲಿ ಹೀಗೆ ಮಧುರ ಮಾತುಗಳನ್ನು ಹೇಳಿದರು.॥4॥

ಮೂಲಮ್ - 5

ತಾತ ರಾಜಾ ದಶರಥಃ ಸ್ವರ್ಗತೋ ಧರ್ಮಮಾಚರನ್ ।
ಧನಧಾನ್ಯವತೀಂ ಸ್ಫೀತಾಂ ಪ್ರದಾಯ ಪೃಥಿವೀಂ ತವ ॥

ಅನುವಾದ

ಅಯ್ಯಾ! ರಾಜಾ ದಶರಥನು ಈ ಧನ-ಧಾನ್ಯದಿಂದ ತುಂಬಿದ ಸಮೃದ್ಧಶಾಲಿಯಾದ ಪೃಥಿವಿಯನ್ನು ನಿನಗೆ ಕೊಟ್ಟು ಸ್ವತಃ ಧರ್ಮವನ್ನು ಆಚರಿಸುತ್ತಾ ಸ್ವರ್ಗಸ್ಥರಾಗಿರುವರು.॥5॥

ಮೂಲಮ್ - 6

ರಾಮಸ್ತಥಾ ಸತ್ಯವೃತ್ತಿಃ ಸತಾಂ ಧರ್ಮಮನುಸ್ಮರನ್ ।
ನಾಜಹಾತ್ಪಿತುರಾದೇಶಂ ಶಶೀಜ್ಯೋತ್ಸ್ನಾಮಿವೋದಿತಃ ॥

ಅನುವಾದ

ಸತ್ಯಪೂರ್ಣವಾಗಿ ವರ್ತಿಸುವ ಶ್ರೀರಾಮಚಂದ್ರನು ಸತ್ಪುರುಷರ ಧರ್ಮವನ್ನು ನೆನೆದು ತಂದೆಯ ಆಜ್ಞೆಯನ್ನು ಉದಯಿಸಿದ ಚಂದ್ರನು ತನ್ನ ಬೆಳದಿಂಗಳನ್ನು ಬಿಡದಿರುವಂತೆಯೇ ಉಲ್ಲಂಘಿಸಲಿಲ್ಲ.॥6॥

ಮೂಲಮ್ - 7

ಪಿತ್ರಾ ಭ್ರಾತ್ರಾ ಚ ತೇ ದತ್ತಂ ರಾಜ್ಯಂ ನಿಹತಕಂಟಕಮ್ ।
ತದ್ಭುಂಕ್ಷ್ವ ಮುದಿತಾಮಾತ್ಯಃ ಕ್ಷಿಪ್ರಮೇವಾಭಿಷೇಚಯ ॥

ಮೂಲಮ್ - 8

ಉದೀಚ್ಯಾಶ್ಚ ಪ್ರತೀಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಕೇವಲಾಃ ।
ಕೋಟ್ಯಾಪರಾಂತಾಃ ಸಾಮುದ್ರಾ ರತ್ನಾನ್ಯುಪಹರಂತುತೇ ॥

ಅನುವಾದ

ಈ ಪ್ರಕಾರ ತಂದೆ ಮತ್ತು ನಿನ್ನ ಅಣ್ಣ ಇಬ್ಬರೂ ನಿನಗೆ ಈ ಅಕಂಟಕ ರಾಜ್ಯವನ್ನು ಕೊಟ್ಟಿರುವರು. ಆದ್ದರಿಂದ ನೀನು ಮಂತ್ರಿಗಳನ್ನು ಸಂತೋಷಪಡಿಸುತ್ತಾ ಇದನ್ನು ಪಾಲಿಸು ಮತ್ತು ಬೇಗನೆ ಪಟ್ಟಾಭಿಷೇಕ ಮಾಡಿಕೋ. ಇದರಿಂದ ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವದಿಕ್ಕಿನ ರಾಜರು ಹಾಗೂ ಇತರ ರಾಜರೂ, ಸಮುದ್ರದ ಮೂಲಕ ಹಡಗುಗಳಿಂದ ವ್ಯಾಪಾರ ಮಾಡುವ ವ್ಯವಸಾಯಿಗಳು ನಿನಗೆ ಅಸಂಖ್ಯ ರತ್ನವನ್ನು ಒಪ್ಪಿಸುವರು.॥7-8॥

ಮೂಲಮ್ - 9

ತಚ್ಛ್ರುತ್ವಾ ಭರತೋ ವಾಕ್ಯಂ ಶೋಕೇನಾಭಿಪರಿಪ್ಲುತಃ ।
ಜಗಾಮ ಮನಸಾ ರಾಮಂ ಧರ್ಮಜ್ಞೋಧರ್ಮಕಾಂಕ್ಷಯಾ ॥

ಅನುವಾದ

ಈ ಮಾತನ್ನು ಕೇಳಿ ಧರ್ಮಜ್ಞನಾದ ಭರತನು ಶೋಕದಲ್ಲಿ ಮುಳುಗಿದನು ಹಾಗೂ ಧರ್ಮಪಾಲನೆಯ ಇಚ್ಛೆಯಿಂದ ಅವನು ಮನಸ್ಸಿನಲ್ಲೇ ಶ್ರೀರಾಮನಿಗೆ ಶರಣಾದನು.॥9॥

ಮೂಲಮ್ - 10

ಸಬಾಷ್ಪಕಲಯಾ ವಾಚಾ ಕಲಹಂಸಸ್ವರೋ ಯುವಾ ।
ವಿಲಲಾಪ ಸಭಾಮಧ್ಯೇ ಜಗರ್ಹೇ ಚ ಪುರೋಹಿತಮ್ ॥

ಅನುವಾದ

ಯುವಕನಾದ ಭರತನು ಆ ಭಾರೀ ಸಭೆಯಲ್ಲಿ ಕಂಬನಿಗರೆಯುತ್ತಾ, ಗದ್ಗದ ವಾಣಿಯಿಂದ ಕಲಹಂಸದಂತೆ ಮಧುರ ಸ್ವರದಿಂದ ವಿಲಪಿಸುತ್ತಾ ಪುರೋಹಿತರನ್ನು ಆಕ್ಷೇಪಿಸಿದನು.॥10॥

ಮೂಲಮ್ - 11

ಚರಿತಬ್ರಹ್ಮಚರ್ಯಸ್ಯ ವಿದ್ಯಾಸ್ನಾತಸ್ಯ ಧೀಮತಃ ।
ಧರ್ಮೇ ಪ್ರಯತಮಾನಸ್ಯ ಕೋ ರಾಜ್ಯಂ ಮದ್ವಿಧೋ ಹರೇತ್ ॥

ಅನುವಾದ

ಗುರುಗಳೇ! ಬ್ರಹ್ಮಚರ್ಯವನ್ನು ಪಾಲಿಸಿದ, ಸಮಸ್ತ ವಿದ್ಯೆಗಳಲ್ಲಿ ನಿಷ್ಣಾತನಾದ, ಸದಾ ಧರ್ಮಕ್ಕಾಗಿ ಪ್ರಯತ್ನ ಶೀಲನಾಗಿರುವ ಬುದ್ಧಿವಂತ ಶ್ರೀರಾಮಚಂದ್ರನ ರಾಜ್ಯವನ್ನು ನನ್ನಂತಹ ಯಾವ ಮನುಷ್ಯನು ಅಪಹರಿಸಬಲ್ಲನು.॥11॥

ಮೂಲಮ್ - 12

ಕಥಂ ದಶರಥಾಜ್ಜಾತೋ ಭವೇದ್ರಾಜ್ಯಾಪಹಾರಕಃ ।
ರಾಜ್ಯಂ ಚಾಹಂ ಚ ರಾಮಸ್ಯ ಧರ್ಮಂ ವಕ್ತುಮಿಹಾರ್ಹಸಿ ॥

ಅನುವಾದ

ದಶರಥ ಮಹಾರಾಜರ ಯಾವ ಪುತ್ರನು ಹಿರಿಯಣ್ಣನ ರಾಜ್ಯವನ್ನು ಹೇಗೆ ಅಪಹರಿಸಬಲ್ಲನು? ಈ ರಾಜ್ಯ ಮತ್ತು ನಾನು ಎರಡೂ ಶ್ರೀರಾಮನದ್ದೇ ಆಗಿವೆ, ಇದನ್ನು ತಿಳಿದು ನೀವು ಈ ಸಭೆಯಲ್ಲಿ ಧರ್ಮಸಂಗತ ಮಾತನ್ನು ಹೇಳಬೇಕು. (ಅನ್ಯಾಯಯುಕ್ತ ಅಲ್ಲ).॥12॥

ಮೂಲಮ್ - 13

ಜ್ಯೇಷ್ಠಃ ಶ್ರೇಷ್ಠಶ್ಚ ಧರ್ಮಾತ್ಮಾ ದೀಲೀಪನಹುಷೋಪಮಃ ।
ಲಬ್ಧುಮರ್ಹತಿ ಕಾಕುತ್ಸ್ಥೋ ರಾಜ್ಯಂ ದಶರಥೋ ಯಥಾ ॥

ಅನುವಾದ

ಧರ್ಮಾತ್ಮ ಶ್ರೀರಾಮನು ನನ್ನ ವಯಸ್ಸಿಗಿಂತ ಹಿರಿಯವನು ಮತ್ತು ಗುಣಗಳಲ್ಲಿ ಶ್ರೇಷ್ಠನಾಗಿದ್ದಾನೆ. ಅವನು ದಿಲೀಪ, ನಹುಷರಂತೆ ತೇಜಸ್ವಿಯಾಗಿರುವನು. ಆದ್ದರಿಂದ ದಶರಥರಂತೆ ಅವನೇ ಈ ರಾಜ್ಯವನ್ನು ಪಡೆಯಲು ಅಧಿಕಾರಿಯಾಗಿದ್ದಾನೆ.॥13॥

ಮೂಲಮ್ - 14

ಅನಾರ್ಯಜುಷ್ಟಮಸ್ವರ್ಗ್ಯಂ ಕುರ್ಯಾಂ ಪಾಪಮಹಂ ಯದಿ ।
ಇಕ್ಷ್ವಾಕೂಣಾಮಹಂ ಲೋಕೇ ಭವೇಯಂಕುಲಪಾಂಸನಃ ॥

ಅನುವಾದ

ಪಾಪದ ಆಚರಣೆಯನ್ನು ನೀಚ ಜನರು ಮಾಡುತ್ತಾರೆ. ಅದು ನಿಶ್ಚಯವಾಗಿ ಮನುಷ್ಯನನ್ನು ನರಕಕ್ಕೆ ತಳ್ಳುತ್ತದೆ. ಶ್ರೀರಾಮಚಂದ್ರನ ರಾಜ್ಯವನ್ನು ಪಡೆದು ನಾನೂ ಪಾಪಾಚರಣೆ ಮಾಡಿದರೆ ಜಗತ್ತಿನಲ್ಲಿ ಇಕ್ಷ್ವಾಕು ವಂಶದ ಕಲಂಕನಾಗಿ ಹೋಗುವೆನು.॥14॥

ಮೂಲಮ್ - 15

ಯದ್ಧಿ ಮಾತ್ರಾ ಕೃತಂ ಪಾಪಂ ನಾಹಂ ತದಪಿ ರೋಚಯೇ ।
ಇಹಸ್ಥೋ ವನದುರ್ಗಸ್ಥಂ ನಮಸ್ಯಾಮಿ ಕೃತಾಂಜಲಿಃ ॥

ಅನುವಾದ

ನನ್ನ ತಾಯಿಯು ಮಾಡಿದ ಪಾಪವನ್ನು ನಾನು ಎಂದಿಗೂ ಮೆಚ್ಚುವುದಿಲ್ಲ; ಅದಕ್ಕಾಗಿ ಇಲ್ಲಿ ಇದ್ದೇ ನಾನು ದುರ್ಗಮ ವನದಲ್ಲಿ ವಾಸಿಸುವ ಶ್ರೀರಾಮಚಂದ್ರನಿಗೆ ಕೈಮುಗಿಯುತ್ತೇನೆ.॥15॥

ಮೂಲಮ್ - 16

ರಾಮಮೇವಾನುಗಚ್ಛಾಮಿ ಸ ರಾಜಾ ದ್ವಿಪದಾಂ ವರಃ ।
ತ್ರಯಾಣಾಮಪಿ ಲೋಕಾನಾಂ ರಾಘವೋ ರಾಜ್ಯಮರ್ಹತಿ ॥

ಅನುವಾದ

ನಾನು ಶ್ರೀರಾಮನನ್ನೇ ಅನುಸರಿಸುವೆನು. ಮನುಷ್ಯರಲ್ಲಿ ಶ್ರೇಷ್ಠನಾದ ರಘುನಾಥನೇ ಈ ರಾಜ್ಯದ ರಾಜನಾಗಿದ್ದಾನೆ. ಅವನು ಮೂರು ಲೋಕಗಳಿಗೆ ರಾಜನಾಗಲು ಯೋಗ್ಯನಾಗಿದ್ದಾನೆ.॥16॥

ಮೂಲಮ್ - 17

ತದ್ವಾಕ್ಯಂ ಧರ್ಮಸಂಯುಕ್ತಂ ಶ್ರುತ್ವಾ ಸರ್ವೇಸಭಾಸದಃ ।
ಹರ್ಷಾನ್ಮುಮುಚುರಶ್ರೂಣಿ ರಾಮೇನಿಹಿತಚೇತಸಃ ॥

ಅನುವಾದ

ಭರತನ ಆ ಧರ್ಮಯುಕ್ತ ಮಾತನ್ನು ಕೇಳಿ ಎಲ್ಲ ಸಭಾಸದರು ಶ್ರೀರಾಮನಲ್ಲಿ ಚಿತ್ತವನ್ನು ನೆಟ್ಟು ಹರ್ಷಾ ಶ್ರುಗಳನ್ನು ಹರಿಸಿದರು.॥17॥

ಮೂಲಮ್ - 18

ಯದಿ ತ್ವಾರ್ಯಂ ನ ಶಕ್ಷಾ ಮಿ ವಿನಿವರ್ತಯಿತುಂ ವನಾತ್ ।
ವನೇ ತತ್ರೈವ ವತ್ಸ್ಯಾಮಿ ಯಥಾರ್ಯೋ ಲಕ್ಷ್ಮಣಸ್ತಥಾ ॥

ಅನುವಾದ

ಭರತನು ಪುನಃ ಹೇಳಿದನು - ಆರ್ಯನಾದ ಶ್ರೀರಾಮನನ್ನು ವನದಿಂದ ನಾನು ಕರೆದುಕೊಂಡು ಬರದಿದ್ದರೆ ನಾನೂ ಕೂಡ ನರಶ್ರೇಷ್ಠ ಲಕ್ಷ್ಮಣನಂತೆ ಅಲ್ಲೇ ವಾಸಿಸುವೆನು.॥18॥

ಮೂಲಮ್ - 19

ಸರ್ವೋಪಾಯಂ ಚ ವರ್ತಿಷ್ಯೇ ವಿನಿವರ್ತಯಿತುಂ ಬಲಾತ್ ।
ಸಮಕ್ಷಮಾರ್ಯಮಿಶ್ರಾಣಾಂ ಸಾಧೂನಾಂ ಗುಣವರ್ತಿನಾಮ್ ॥

ಅನುವಾದ

ಸದ್ಗುಣಯುಕ್ತ ವರ್ತಿಸುವ ಪೂಜನೀಯ ನೀವೆಲ್ಲ ಶ್ರೇಷ್ಠ ಸಭಾಸದರ ಸಮಕ್ಷಮದಲ್ಲಿ ಶ್ರೀರಾಮಚಂದ್ರನನ್ನು ಬಲವಂತವಾಗಿ ಮರಳಿ ಕರೆದುಕೊಂಡು ಬರಲು ಎಲ್ಲ ಉಪಾಯಗಳಿಂದ ಪ್ರಯತ್ನಿಸುವೆನು.॥19॥

ಮೂಲಮ್ - 20

ವಿಷ್ಟಿಕರ್ಮಾಂತಿಕಾಃ ಸರ್ವೇ ಮಾರ್ಗಶೋಧಕದಕ್ಷಕಾಃ ।
ಪ್ರಸ್ಥಾಪಿತಾ ಮಯಾ ಪೂರ್ವಂ ಯತ್ರಾಪಿ ಮಮ ರೋಚತೇ ॥

ಅನುವಾದ

ನಾನು ಮಾರ್ಗವನ್ನು ನಿರ್ಮಿಸಲು ವೇತನ ಪಡೆಯದ ಹಾಗೂ ವೇತನ ಪಡೆಯುವ ಕುಶಲ ಕಾರ್ಯಕರ್ತರನ್ನು ಮೊದಲೇ ಕಳಿಸಿಕೊಟ್ಟಿರುವೆನು. ಆದ್ದರಿಂದ ಶ್ರೀರಾಮನ ಬಳಿಗೆ ಹೋಗುವುದೇ ನನಗೆ ಒಳ್ಳೆಯದೆಂದು ಅನಿಸುತ್ತದೆ.॥20॥

ಮೂಲಮ್ - 21

ಏವಮುಕ್ತ್ವಾ ತು ಧರ್ಮಾತ್ಮಾ ಭರತೋ ಭ್ರಾತೃವತ್ಸಲಃ ।
ಸಮೀಪಸ್ಥಮುವಾಚೇದಂ ಸುಮಂತ್ರಂ ಮಂತ್ರಕೋವಿದಮ್ ॥

ಅನುವಾದ

ಸಭಾಸದರಲ್ಲಿ ಹೀಗೆ ಹೇಳಿ ಭ್ರಾತೃವತ್ಸಲ ಧರ್ಮಾತ್ಮಾ ಭರತನು ಬಳಿಯಲ್ಲಿ ಕುಳಿತಿರುವ ಮಂತ್ರವೇತ್ತನಾದ ಸುಮಂತ್ರನಲ್ಲಿ ಈ ಪ್ರಕಾರ ಹೇಳಿದನು.॥21॥

ಮೂಲಮ್ - 22

ತೂರ್ಣಮುತ್ಥಾಯ ಗಚ್ಛ ತ್ವಂ ಸುಮಂತ್ರ ಮಮ ಶಾಸನಾತ್ ।
ಯಾತ್ರಾಮಾಜ್ಞಾಪಯ ಕ್ಷಿಪ್ರಂ ಬಲಂ ಚೈವ ಸಮಾನಯ ॥

ಅನುವಾದ

ಸುಮಂತ್ರನೇ! ನೀವು ಬೇಗನೇ ಎದ್ದುಹೋಗಿ, ನನ್ನ ಆಜ್ಞೆಯಂತೆ ಎಲ್ಲರೂ ಕಾಡಿಗೆ ಹೊರಡಲು ಆದೇಶವನ್ನು ಸೂಚಿಸಿರಿ ಹಾಗೂ ಸೈನ್ಯವನ್ನು ಶೀಘ್ರವಾಗಿ ಕರೆಸಿರಿ.॥22॥

ಮೂಲಮ್ - 23

ಏವಮುಕ್ತಃ ಸುಮಂತ್ರಸ್ತು ಭರತೇನ ಮಹಾತ್ಮನಾ ।
ಪ್ರಹೃಷ್ಟಃ ಸೋಽದಿಶತ್ಸರ್ವಂ ಯಥಾಸಂದಿಷ್ಟಮಿಷ್ಟವತ್ ॥

ಅನುವಾದ

ಮಹಾತ್ಮಾ ಭರತನು ಹೀಗೆ ಹೇಳಿದಾಗ ಸುಮಂತ್ರನು ಬಹಳ ಹರ್ಷದಿಂದ ಎಲ್ಲವನ್ನು ಅವನು ಹೇಳಿದಂತೆ ಪ್ರಿಯ ಸಂದೇಶವನ್ನು ತಿಳಿಸಿದನು.॥23॥

ಮೂಲಮ್ - 24

ತಾಃ ಪ್ರಹೃಷ್ಟಾಃ ಪ್ರಕೃತಯೋ ಬಲಾಧ್ಯಕ್ಷಾ ಬಲಸ್ಯ ಚ ।
ಶ್ರುತ್ವಾ ಯಾತ್ರಾಂ ಸಮಾಜ್ಞಪ್ತಾಂ ರಾಘವಸ್ಯ ನಿವರ್ತನೇ ॥

ಅನುವಾದ

‘ಶ್ರೀರಾಮಚಂದ್ರನನ್ನು ಮರಳಿ ಕರೆತರಲು ಭರತನು ಹೋಗುತ್ತಿದ್ದಾನೆ ಹಾಗೂ ಅವನೊಂದಿಗೆ ಹೋಗಲು ಸೈನ್ಯಕ್ಕೂ ಆದೇಶ ಕೊಡಲಾಗಿದೆ’ ಎಂಬ ಸಮಾಚಾರ ತಿಳಿದ ಎಲ್ಲ ಪ್ರಜಾಜನರು ಮತ್ತು ಸೇನಾಪತಿಗಳು ಸಂತೋಷಗೊಂಡರು.॥24॥

ಮೂಲಮ್ - 25

ತತೋ ಯೋಧಾಂಗನಾಃ ಸರ್ವಾ ಭರ್ತೃನ್ಸರ್ವಾನ್ ಗೃಹೇ ಗೃಹೇ ।
ಯಾತ್ರಾಗಮನಮಾಜ್ಞಾಯ ತ್ವರಯಂತಿ ಸ್ಮ ಹರ್ಷಿತಾಃ ॥

ಅನುವಾದ

ಅನಂತರ ಆ ಯಾತ್ರೆಯ ಸುದ್ದಿ ತಿಳಿದ ಸೈನಿಕರ ಪತ್ನಿಯರು ಮನೆ-ಮನೆಯಲ್ಲಿ ಹರ್ಷಗೊಂಡು, ತಮ್ಮ ಪತಿಯರನ್ನು ಶೀಘ್ರವಾಗಿ ಸಿದ್ಧವಾಗುವಂತೆ ಪ್ರೇರೇಪಿಸಿದರು.॥25॥

ಮೂಲಮ್ - 26

ತೇ ಹಯೈರ್ಗೋರಥೈ ಶೀಘ್ರಂ ಸ್ಯಂದನೈಶ್ಚ ಮಹಾಜವೈಃ ।
ಸಹ ಯೋಷಿದ್ಬಲಾಧ್ಯಕ್ಷಾ ಬಲಂ ಸರ್ವಮಚೋದಯನ್ ॥

ಅನುವಾದ

ಸೇನಾಪತಿಗಳು ಕುದುರೆಗಳು, ಎತ್ತಿನಗಾಡಿಗಳು, ಮನೋವೇಗದ ರಥಗಳ ಸಹಿತ ಸಂಪೂರ್ಣ ಸೈನ್ಯವನ್ನು ಸ್ತ್ರೀಯರ ಸಹಿತ ಯಾತ್ರೆಗಾಗಿ ಬೇಗನೇ ಸಿದ್ಧವಾಗುವಂತೆ ಆಜ್ಞಾಪಿಸಿದರು.॥26॥

ಮೂಲಮ್ - 27

ಸಜ್ಜಂ ತು ತದ್ ಬಲಂ ದೃಷ್ಟ್ವಾ ಭರತೋ ಗುರುಸಂನಿಧೌ ।
ರಥಂ ಮೇ ತ್ವರಯಸ್ವೇತಿ ಸುಮಂತ್ರಂ ಪಾರ್ಶ್ವತೋಽಬ್ರವೀತ್ ॥

ಅನುವಾದ

ಪ್ರಯಾಣಕ್ಕೆ ಸಿದ್ಧವಾದ ಸೈನ್ಯವನ್ನು ನೋಡಿ ಭರತನು ಗುರುಗಳ ಬಳಿಯಲ್ಲಿ ನಿಂತಿರುವ ಸುಮಂತ್ರನಲ್ಲಿ ಹೇಳಿದನು - ನೀನು ನನ್ನ ರಥವನ್ನು ಶೀಘ್ರವಾಗಿ ಸಿದ್ಧಗೊಳಿಸಿ ತೆಗೆದು ಕೊಂಡು ಬಾ.॥27॥

ಮೂಲಮ್ - 28

ಭರತಸ್ಯ ತು ತಸ್ಯಾಜ್ಞಾಂ ಪ್ರತಿಗೃಹ್ಯ ಪ್ರಹರ್ಷಿತಃ ।
ರಥಂ ಗೃಹೀತ್ವೋಪಯಯೌ ಯುಕ್ತಂ ಪರಮವಾಜಿಭಿಃ ॥

ಅನುವಾದ

ಭರತನ ಅಪ್ಪಣೆಯನ್ನು ಶಿರಸಾವಹಿಸಿ ಸುಮಂತ್ರನು ಬಹಳ ಹರ್ಷದಿಂದ ಹೋಗಿ, ಉತ್ತಮ ಕುದುರೆಗಳನ್ನು ಹೂಡಿದ ರಥವನ್ನು ತಂದು ನಿಲ್ಲಿಸಿದನು.॥28॥

ಮೂಲಮ್ - 29

ಸ ರಾಘವಃ ಸತ್ಯಧೃತಿಃ ಪ್ರತಾಪವಾನ್
ಬ್ರುವನ್ಸುಯುಕ್ತಂ ದೃಢಸತ್ಯವಿಕ್ರಮಃ ।
।ಗುರುಂ ಮಹಾರಣ್ಯಗತಂ ಯಶಸ್ವಿನಂ
ಪ್ರಸಾದಯಿಷ್ಯನ್ ಭರತೋಽಬ್ರವೀತ್ತದಾ ॥

ಅನುವಾದ

ಆಗ ಸುದೃಢ, ಸತ್ಯ ಪರಾಕ್ರಮವುಳ್ಳ, ಸತ್ಯಪರಾಯಣ ಪ್ರತಾಪಿ ಭರತನು - ವಿಶಾಲವನಕ್ಕೆ ಹೋದ ತನ್ನ ಅಣ್ಣನಾದ ಯಶಸ್ವೀ ಶ್ರೀರಾಮನನ್ನು ಮರಳಿ ಕರೆತರುವ ನಿಮಿತ್ತದಿಂದ ಪ್ರಯಾಣದ ಉದ್ದೇಶದಿಂದ ಈ ಪ್ರಕಾರ ಹೇಳಿದನು.॥29॥

ಮೂಲಮ್ - 30

ತೂರ್ಣಂ ಸಮುತ್ಥಾಯ ಸುಮಂತ್ರ ಗಚ್ಛ
ಬಲಸ್ಯ ಯೋಗಾಯಬಲಪ್ರಧಾನಾನ್ ।
ಆನೇತುಮಿಚ್ಛಾಮಿ ಹಿ ತಂ ವನಸ್ಥಂ
ಪ್ರಸಾದ್ಯ ರಾಮಂ ಜಗತೋ ಹಿತಾಯ ॥

ಅನುವಾದ

ಸುಮಂತ್ರನೇ! ನೀವು ಬೇಗನೆ ಎದ್ದು ಸೇನಾಪತಿಗಳ ಬಳಿಗೆ ಹೋಗಿ, ಅವರಿಗೆ ಸೈನ್ಯವು ನಾಳೆ ಪ್ರಯಾಣಮಾಡುವಂತೆ ಸಿದ್ಧವಾಗಿರುವಂತೆ ವ್ಯವಸ್ಥೆ ಮಾಡಿರಿ; ಏಕೆಂದರೆ ನಾನು ಇಡೀ ಜಗತ್ತಿನ ಕಲ್ಯಾಣ ಮಾಡಲಿಕ್ಕಾಗಿ ಆ ವನವಾಸೀ ಶ್ರೀರಾಮನನ್ನು ಪ್ರಸನ್ನಗೊಳಿಸಿ, ಇಲ್ಲಿಗೆ ಕರೆದುಕೊಂಡು ಬರಲು ಬಯಸುತ್ತೇನೆ.॥30॥

ಮೂಲಮ್ - 31

ಸ ಸೂತಪುತ್ರೋ ಭರತೇನ ಸಮ್ಯ -
ಗಾಜ್ಞಾಪಿತಃ ಸಂಪರಿಪೂರ್ಣಕಾಮಃ ।
ಶಸಾಸ ಸರ್ವಾನ್ ಪ್ರಕೃತಿಪ್ರಧಾನಾನ್
ಬಲಸ್ಯ ಮುಖ್ಯಾಂಶ್ಚ ಸುಹೃಜ್ಜನಂ ಚ ॥

ಅನುವಾದ

ಭರತನ ಈ ಉತ್ತಮ ಆಜ್ಞೆ ಪಡೆದು ಸೂತಪುತ್ರ ಸುಮಂತ್ರನು ತನ್ನ ಮನೋರಥ ಸಫಲವಾಯಿತೆಂದು ತಿಳಿದು, ಅವನು ಪ್ರಜಾವರ್ಗದ ಎಲ್ಲ ಮುಖ್ಯ ವ್ಯಕ್ತಿಗಳಿಗೆ, ಸೇನಾಪತಿಗಳಿಗೆ, ಸುಹೃದರಿಗೆ ಭರತನ ಆದೇಶವನ್ನು ತಿಳಿಸಿದನು.॥31॥

ಮೂಲಮ್ - 32

ತತಃ ಸಮುತ್ಥಾಯ ಕುಲೇ ಕುಲೇ ತೇ
ರಾಜನ್ಯವೈಶ್ಯಾ ವೃಷಲಾಶ್ಚ ವಿಪ್ರಾಃ ।
ಅಯೂಯುಜನ್ನುಷ್ಟ್ರರಥಾನ್ ಖರಾಂಶ್ಚ
ನಾಗಾನ್ ಹಯಾಂಶ್ಚೈವ ಕುಲಪ್ರಸೂತಾನ್ ॥

ಅನುವಾದ

ಆಗ ಪ್ರತಿಯೊಂದು ಮನೆಯ ಬ್ರಾಹ್ಮಣ, ಕ್ಷತ್ರಿಯರು, ವೈಶ್ಯರು, ಶೂದ್ರರು ಎದ್ದು ಒಳ್ಳೆಯ ಜಾತಿಯ ಕುದುರೆಗಳನ್ನು ಒಂಟೆಗಳನ್ನು, ಆನೆಗಳನ್ನು, ಕತ್ತೆಗಳನ್ನು, ರಥಗಳಿಗೆ ಹೂಡಿದರು.॥32॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತೆರಡನೆಯ ಸರ್ಗ ಪೂರ್ಣವಾಯಿತು.॥82॥