०८१ राजसभागमनम्

वाचनम्
ಭಾಗಸೂಚನಾ

ಪ್ರಾತಃಕಾಲದಲ್ಲಿ ವಂದಿ-ಮಾಗಧರ ಮಂಗಳವಾದ್ಯ ಘೋಷದಿಂದ ಭರತನು ದುಃಖಿತನಾಗಿ ಅದನ್ನು ನಿಲ್ಲಿಸಿದುದು, ಸಭಾಭವನದಲ್ಲಿ ಎಲ್ಲರೂ ಸೇರುವಂತೆ ವಸಿಷ್ಠರ ಆದೇಶ

ಮೂಲಮ್ - 1

ತತೋ ನಾಂದೀಮುಖೀಂ ರಾತ್ರಿಂ ಭರತಂ ಸೂತಮಾಗಧಾಃ ।
ತುಷ್ಟುವುಃ ಸವಿಶೇಷಜ್ಞಾಃ ಸ್ತವೈರ್ಮಂಗಲಸಂಸ್ತವೈಃ ॥

ಅನುವಾದ

ಇತ್ತ ಅಯೋಧ್ಯೆಯಲ್ಲಿ ಆ ಅಭ್ಯುದಯಸೂಚಕ ರಾತ್ರಿಯ ಸ್ವಲ್ಪಭಾಗ ಉಳಿದಾಗ ಸ್ತುತಿಕಾಲದ ವಿಶೇಷಜ್ಞ ಸೂತ-ಮಾಗಧರು ಮಂಗಲಮಯ ಸ್ತುತಿಗಳಿಂದ ಭರತನನ್ನು ಸ್ತುತಿಸತೊಡಗಿದರು.॥1॥

ಮೂಲಮ್ - 2

ಸುವರ್ಣಕೋಣಾಭಿಹತಃಪ್ರಾಣಾದದ್ಯಾಮದುಂದುಭಿಃ ।
ದಧ್ಮುಃ ಶಂಖಾಂಶ್ಚ ಶತಶೋ ವಾದ್ಯಾಂಶ್ಚೋಚ್ಚಾವಚಸ್ವರಾನ್ ॥

ಅನುವಾದ

ಪ್ರಹರ ಸಮಾಪ್ತಿಯನ್ನು ಸೂಚಿಸುವ ದುಂದುಭಿಯು ಚಿನ್ನದ ಕೋಲಿನಿಂದ ಬಾರಿಸಲಾಯಿತು. ವಾದ್ಯದವರು ಶಂಖ ಹಾಗೂ ಬೇರೆ-ಬೇರೆ ಪ್ರಕಾರದ ನೂರಾರು ವಾದ್ಯಗಳನ್ನು ನುಡಿಸಿದರು.॥2॥

ಮೂಲಮ್ - 3

ಸ ತೂರ್ಯಘೋಷಃ ಸುಮಹಾನ್ ದಿವಮಾಪೂರಯನ್ನಿವ ।
ಭರತಂ ಶೋಕಸಂತಪ್ತಂ ಭೂಯಃ ಶೋಕೈರರಂಧಯತ್ ॥

ಅನುವಾದ

ವಾದ್ಯಗಳ ಆ ಮಹಾ ತುಮುಲಘೋಷವು ಆಕಾಶದಲ್ಲೆಲ್ಲ ವ್ಯಾಪಿಸಿ ಪ್ರತಿಧ್ವನಿಸಿತು ಮತ್ತು ಶೋಕಸಂತಪ್ತ ಭರತನಿಗೆ ಪುನಃ ಶೋಕಾಗ್ನಿಯು ಸುಡಲುತೊಡಗಿತು.॥3॥

ಮೂಲಮ್ - 4

ತತಃ ಪ್ರಬುದ್ಧೋ ಭರತಸ್ತಂ ಘೋಷಂ ಸಂನಿವರ್ತ್ಯ ಚ ।
ನಾಹಂ ರಾಜೇತಿ ಚೋಕ್ತ್ವಾ ತಂ ಶತ್ರುಘ್ನಮಿದಮಬ್ರವೀತ್ ॥

ಅನುವಾದ

ವಾದ್ಯಗಳ ಆ ಧ್ವನಿಯಿಂದ ಭರತನು ನಿದ್ದೆಯಿಂದ ಎದ್ದು ‘ನಾನು ರಾಜನಲ್ಲ’ ಎಂದು ಹೇಳಿ ಅವನು ಆ ವಾದ್ಯಗಳನ್ನು ನಿಲ್ಲಿಸಿಬಿಟ್ಟನು. ಅನಂತರ ಶತ್ರುಘ್ನನಲ್ಲಿ ಇಂತೆಂದನು.॥4॥

ಮೂಲಮ್ - 5

ಪಶ್ಯ ಶತ್ರುಘ್ನ ಕೈಕೇಯ್ಯಾ ಲೋಕಸ್ಯಾಪಕೃತಂ ಮಹತ್ ।
ವಿಸೃಜ್ಯ ಮಯಿ ದುಃಖಾನಿ ರಾಜಾ ದಶರಥೋ ಗತಃ ॥

ಅನುವಾದ

ಶತ್ರುಘ್ನನೇ! ನೋಡಲ್ಲಿ ಕೈಕೇಯಿಯು ಜಗತ್ತಿನ ಎಷ್ಟು ಮಹಾ ಅಪಕಾರ ಮಾಡಿರುವಳು. ದಶರಥ ಮಹಾರಾಜರು ನನ್ನ ಮೇಲೆ ಬಹಳ ದೊಡ್ಡ ದುಃಖದ ಹೊರೆಯನ್ನು ಹೊರಿಸಿ ಸ್ವರ್ಗಲೋಕಕ್ಕೆ ತೆರಳಿದರು.॥5॥

ಮೂಲಮ್ - 6

ತಸ್ಯೈಷಾ ಧರ್ಮರಾಜಸ್ಯ ಧರ್ಮಮೂಲಾ ಮಹಾತ್ಮನಃ ।
ಪರಿಭ್ರಮತಿ ರಾಜಶ್ರೀರ್ನೌರಿವಾಕರ್ಣಿಕಾ ಜಲೇ ॥

ಅನುವಾದ

ಇಂದು ಆ ಧರ್ಮರಾಜ ಮಹಾಮನಾ ನರೇಶನ ಈ ಧರ್ಮಮೂಲಾ ರಾಜಲಕ್ಷ್ಮಿಯು ನೀರಿನಲ್ಲಿ ಇರುವ ನಾವಿಕನಿಲ್ಲದ ನೌಕೆಯಂತೆ ಅತ್ತ-ಇತ್ತ ಅಲ್ಲಾಡುತ್ತಿದೆ.॥6॥

ಮೂಲಮ್ - 7

ಯೋ ಹಿ ನಃ ಸುಮಹಾನ್ನಾಥಃ ಸೋಽಪಿ ಪ್ರವ್ರಾಜಿತೋವನೇ ।
ಅನಯಾ ಧರ್ಮಮುತ್ಸೃಜ್ಯ ಮಾತ್ರಾ ಮೇ ರಾಘವಃಸ್ವಯಮ್ ॥

ಅನುವಾದ

ನಮ್ಮೆಲ್ಲರಿಗಿಂತ ಹಿರಿಯವನಾದ ಸ್ವಾಮಿ ಮತ್ತು ಸಂರಕ್ಷಕನಾದ ಶ್ರೀರಘುನಾಥನನ್ನು ಸ್ವತಃ ನನ್ನ ತಾಯಿಯು ಧರ್ಮಕ್ಕೆ ತಿಲಾಂಜಲಿಯನ್ನಿತ್ತು ಕಾಡಿಗೆ ಕಳಿಸಿಬಿಟ್ಟಳು.॥7॥

ಮೂಲಮ್ - 8

ಇತ್ಯೇವಂ ಭರತಂ ವೀಕ್ಷ್ಯ ವಿಲಪಂತಮಚೇತನಮ್ ।
ಕೃಪಣಾ ರುರುದುಃ ಸರ್ವಾಃ ಸುಸ್ವರಂ ಯೋಷಿತಸ್ತದಾ ॥

ಅನುವಾದ

ಆಗ ಭರತನು ಹೀಗೆ ಎಚ್ಚರ ತಪ್ಪಿದವನಂತೆ ವಿಲಾಪ ಮಾಡುತ್ತಿರುವುದನ್ನು ನೋಡಿ ರಾಣೀವಾಸದ ಎಲ್ಲ ಸ್ತ್ರೀಯರೂ ದೀನಭಾವದಿಂದ ಬಿಕ್ಕಿ-ಬಿಕ್ಕಿ ಅಳತೊಡಗಿದರು.॥8॥

ಮೂಲಮ್ - 9

ತಥಾ ತಸ್ಮಿನ್ ವಿಲಪತಿ ವಸಿಷ್ಠೋ ರಾಜಧರ್ಮವಿತ್ ।
ಸಭಾಮಿಕ್ಷ್ವಾಕುನಾಥಸ್ಯ ಪ್ರವಿವೇಶ ಮಹಾಯಶಾಃ ॥

ಅನುವಾದ

ಭರತನು ಈ ಪ್ರಕಾರ ವಿಲಾಪಿಸುತ್ತಿರುವಾಗಲೇ ರಾಜಧರ್ಮವನ್ನು ತಿಳಿದ ಮಹಾಯಶಸ್ವೀ ಮಹರ್ಷಿ ವಸಿಷ್ಠರು ಇಕ್ಷ್ವಾಕುನಾಥ ದಶರಥನ ಸಭಾಭವನವನ್ನು ಪ್ರವೇಶಿಸಿದರು.॥9॥

ಮೂಲಮ್ - 10

ಶಾತಕುಂಭಮಯೀಂ ರಮ್ಯಾಂ ಮಣಿ ಹೇಮಸಮಾಕುಲಾಮ್ ।
ಅಧ್ಯಾಸ್ತ ಸರ್ವವೇದಜ್ಞೋ ದೂತಾನನುಶಶಾಸ ಚ ॥

ಮೂಲಮ್ - 11

ಸ ಕಾಂಚನಮಯಂ ಪೀಠಂ ಸ್ವಸ್ತ್ಯಾಸ್ತರಣಸಂವೃತಮ್ ।
ಸುಧರ್ಮಾಮಿವ ಧರ್ಮಾತ್ಮಾ ಸಗಣಃ ಪ್ರತ್ಯಪದ್ಯತ ॥

ಅನುವಾದ

ಆ ಸಭಾಭವನದ ಹೆಚ್ಚಿನ ಭಾಗ ಚಿನ್ನದಿಂದ ಮಾಡಲಾಗಿತ್ತು. ಅದರಲ್ಲಿ ಬಂಗಾರದ ಕಂಭಗಳಿದ್ದವು. ಆ ರಮಣೀಯ ಸಭೆಯು ದೇವತೆಗಳ ಸುಧರ್ಮಾ ಸಭೆಯಂತೆ ಶೋಭಿಸುತ್ತಿತ್ತು. ಸಮಸ್ತ ವೇದಗಳ ಜ್ಞಾತಾ ಧರ್ಮಾತ್ಮಾ ವಸಿಷ್ಠರು ತಮ್ಮ ಶಿಷ್ಯರೊಂದಿಗೆ ಆ ಸಭೆಯನ್ನು ಹೊಕ್ಕು ಸ್ವಸ್ತಿಕಾಕಾರ ಹಾಸಿಗೆಯನ್ನು ಹಾಸಿದ ಸುವರ್ಣಮಯ ಪೀಠದಲ್ಲಿ ವಿರಾಜಮಾನರಾದರು. ಆಸನಾರೂಢರಾದ ಮೇಲೆ ಅವರು ದೂತರಲ್ಲಿ ಆಜ್ಞಾಪಿಸಿದರು.॥10-11॥

ಮೂಲಮ್ - 12

ಬ್ರಾಹ್ಮಣಾನ್ಕ್ಷತ್ರಿಯಾನ್ ಯೋಧಾನಮಾತ್ಯಾನ್ ಗಣವಲ್ಲಭಾನ್ ।
ಕ್ಷಿಪ್ರಮಾನಯತಾವ್ಯಗ್ರಾಃ ಕೃತ್ಯಮಾತ್ಯಯಿಕಂ ಹಿ ನಃ ॥

ಮೂಲಮ್ - 13

ಸರಾಜಪುತ್ರಂ ಶತ್ರುಘ್ನಂ ಭರತಂ ಚ ಯಶಸ್ವಿನಮ್ ।
ಯುಧಾಜಿತಂ ಸುಮಂತ್ರಂ ಚ ಯೇ ಚತತ್ರ ಹಿತಾ ಜನಾಃ ॥

ಅನುವಾದ

ನೀವು ಶಾಂತಭಾವದಿಂದ ಹೋಗಿ ಬ್ರಾಹ್ಮಣರನ್ನು, ಕ್ಷತ್ರಿಯರನ್ನು, ಯೋಧರನ್ನು, ಅಮಾತ್ಯರನ್ನು, ಸೇನಾಪತಿಗಳನ್ನು ಇವರೆಲ್ಲರನ್ನು ಶೀಘ್ರವಾಗಿ ಕರೆದುಕೊಂಡು ಬನ್ನಿರಿ. ಇತರ ರಾಜಕುಮಾರರೊಂದಿಗೆ ಭರತ-ಶತ್ರುಘ್ನರನ್ನೂ, ಮಂತ್ರಿ ಯುಧಾಜಿತ್ತುವನ್ನೂ, ಸುಮಂತ್ರನನ್ನೂ ಹಾಗೂ ಇತರ ಹಿತೈಷಿಯರನ್ನೂ ಹೀಗೆ ಎಲ್ಲರನ್ನೂ ಕರೆದುಕೊಂಡು ಬನ್ನಿರಿ. ನನಗೆ ಅವರಲ್ಲಿ ಆವಶ್ಯಕ ಕಾರ್ಯವಿದೆ.॥12-13॥

ಮೂಲಮ್ - 14

ತತೋ ಹಲಹಲಾಶಬ್ದೋ ಮಹಾನ್ ಸಮುದಪದ್ಯತ ।
ರಥೈರಶ್ವೈರ್ಗಜೈಶ್ಚಾಪಿ ಜನಾನಾಮುಪಗಚ್ಛತಾಮ್ ॥

ಅನುವಾದ

ಅನಂತರ ಅಲ್ಲಿ ಕುದುರೆ, ಆನೆ, ರಥಗಳಲ್ಲಿ ಬರುವ ಜನರ ಮಹಾ ಕೋಲಾಹಲ ಪ್ರಾರಂಭವಾಯಿತು.॥14॥

ಮೂಲಮ್ - 15

ತತೋ ಭರತಮಾಯಾಂತಂ ಶತಕ್ರತುಮಿವಾಮರಾಃ ।
ಪ್ರತ್ಯನಂದನ್ ಪ್ರಕೃತಯೋ ಯಥಾ ದಶರಥಂ ತಥಾ ॥

ಅನುವಾದ

ಬಳಿಕ ದೇವತೆಗಳು ಇಂದ್ರನನ್ನು ಅಭಿನಂದಿಸುವಂತೆ ಸಮಸ್ತ ಮಂತ್ರಿಗಳು, ಪ್ರಜೆಗಳೇ ಆದಿ ಎಲ್ಲರೂ ಬರುತ್ತಲೇ ದಶರಥನಂತೆ ಭರತನನ್ನು ಅಭಿನಂದಿಸಿದರು.॥15॥

ಮೂಲಮ್ - 16

ಹ್ರದ ಇವ ತಿಮಿನಾಗಸಂವೃತಃ
ಸ್ತಿಮಿತಜಲೋ ಮಣಿಶಂಖಶರ್ಕರಃ ।
ದಶರಥಸುತಶೋಭಿತಾ ಸಭಾ
ಸದಶರಥೇವ ಬಭೂವ ಸಾಥ ಪುರಾ ॥

ಅನುವಾದ

ತಿಮಿ ಎಂಬ ಮಹಾಮತ್ಸ್ಯ ಮತ್ತು ಜಲಹಸ್ತಿಯಿಂದ ಕೂಡಿದ ಸ್ಥಿರ ಜಲವುಳ್ಳ ಹಾಗೂ ಮುತ್ತುಗಳೇ ಆದಿಮಣಿಗಳಿಂದ ಕೂಡಿದ ಶಂಖ ಮತ್ತು ಮರಳು ಉಳ್ಳ ಜಲಾಶಯದಂತೆ ಆ ಸಭೆಯು ದಶರಥಪುತ್ರ ಭರತನಿಂದ ಸುಶೋಭಿತವಾಗಿ, ಹಿಂದೆ ದಶರಥನ ಉಪಸ್ಥಿತಿಯಲ್ಲಿ ಹೇಗೆ ಶೋಭಿಸುತ್ತಿತ್ತೋ ಹಾಗೆಯೇ ಶೋಭಿಸುತ್ತಿತ್ತು.॥16॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಭತ್ತೊಂದನೆಯ ಸರ್ಗ ಪೂರ್ಣವಾಯಿತು.॥81॥