०७९ भरतं प्रति मन्त्रिमन्त्रणा

वाचनम्
ಭಾಗಸೂಚನಾ

ರಾಜ್ಯಭಾರವನ್ನು ವಹಿಸಿಕೊಳ್ಳುವಂತೆ ಮಂತ್ರಿಗಳು ಭರತನನ್ನು ಒತ್ತಾಯಿಸಿದುದು, ಭರತನು ಅಭಿಷೇಕ ಸಾಮಗ್ರಿಗಳಿಗೆ ಪ್ರದಕ್ಷಿಣೆ ಬಂದು, ಜ್ಯೇಷ್ಠಪುತ್ರನಿಗೇ ರಾಜ್ಯಾಧಿಕಾರವಿರುವುದನ್ನು ಸ್ಪಷ್ಟಪಡಿಸಿ ಶ್ರೀರಾಮನನ್ನು ಕರೆತರಲು ತಕ್ಕ ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದುದು

ಮೂಲಮ್ - 1

ತತಃ ಪ್ರಭಾತಸಮಯೇ ದಿವಸೇಽಥ ಚತುರ್ದಶೇ ।
ಸಮೇತ್ಯ ರಾಜಕರ್ತಾರೋ ಭರತಂ ವಾಕ್ಯಮಬ್ರುವನ್ ॥

ಅನುವಾದ

ರಾಜನ ಉತ್ತರಕ್ರಿಯೆ ಮುಗಿದು ಹದಿನಾಲ್ಕನೆಯ ದಿವಸ ಪ್ರಾತಃಕಾಲ ಮಂತ್ರಿಗಳೆಲ್ಲ ಒಟ್ಟಾಗಿ ಸೇರಿ ಭರತನಲ್ಲಿ ಈ ಪ್ರಕಾರ ಹೇಳಿದರು.॥1॥

ಮೂಲಮ್ - 2

ಗತೋ ದಶರಥಃ ಸ್ವರ್ಗಂ ಯೋ ನೋ ಗುರುತರೋ ಗುರುಃ ।
ರಾಮಂ ಪ್ರವ್ರಾಜ್ಯ ವೈ ಜ್ಯೇಷ್ಠಂ ಲಕ್ಷ್ಮಣಂ ಚಮಹಾಬಲಮ್ ॥

ಮೂಲಮ್ - 3

ತ್ವಮದ್ಯ ಭವ ನೋ ರಾಜಾ ರಾಜಪುತ್ರೋ ಮಹಾಯಶಃ ।
ಸಂಗತ್ಯಾ ನಾಪರಾಧ್ನೋತಿರಾಜ್ಯಮೇತದನಾಯಕಮ್ ॥

ಅನುವಾದ

ಮಹಾಯಶಸ್ವೀ ರಾಜಕುಮಾರ! ನಮ್ಮ ಸರ್ವಶ್ರೇಷ್ಠ ಗುರುಗಳಾಗಿದ್ದ ಮಹಾರಾಜರಾದರೋ ತನ್ನ ಜ್ಯೇಷ್ಠಪುತ್ರ ಶ್ರೀರಾಮ ಮಹಾಬಲಿ ಲಕ್ಷ್ಮಣರನ್ನು ಕಾಡಿಗೆ ಕಳಿಸಿ ಸ್ವತಃ ಸ್ವರ್ಗಲೋಕಕ್ಕೆ ತೆರಳಿದರು. ಈಗ ಈ ರಾಜ್ಯಕ್ಕೆ ಯಾರೂ ಒಡೆಯರಿಲ್ಲ, ಆದ್ದರಿಂದ ನೀನೇ ನಮಗೆ ರಾಜನಾಗು. ನಿನ್ನ ಅಣ್ಣನಿಗೆ ಸ್ವತಃ ಮಹಾರಾಜರೇ ವನವಾಸದ ಆಜ್ಞೆಯನ್ನು ಕೊಟ್ಟು, ನಿನಗೆ ಈ ರಾಜ್ಯವನ್ನು ಕೊಟ್ಟಿರುವರು. ಆದ್ದರಿಂದ ನೀನು ರಾಜನಾಗುವುದು ನ್ಯಾಯಸಮ್ಮತವಾಗಿದೆ. ಇದರಿಂದ ನೀನು ರಾಜ್ಯವನ್ನು ಪಡೆದರೆ ಯಾರಿಗೂ ಅಪರಾಧ ಮಾಡಿದಂತಾಗುವುದಿಲ್ಲ.॥2-3॥

ಮೂಲಮ್ - 4

ಆಭಿಷೇಚನಿಕಂ ಸರ್ವಮಿದಮಾದಾಯ ರಾಘವ ।
ಪ್ರತೀಕ್ಷತೇ ತ್ವಾಂ ಸ್ವಜನಃ ಶ್ರೇಣಯಶ್ಚ ನೃಪಾತ್ಮಜ ॥

ಅನುವಾದ

ರಾಜಕುಮಾರ ರಘುನಂದನ! ಈ ಮಂತ್ರಿಗಳೇ ಆದಿ ಸ್ವಜನರೂ, ಪುರವಾಸಿಗಳೂ, ವರ್ತಕರು ಅಭಿಷೇಕದ ಎಲ್ಲ ಸಾಮಗ್ರಿಯನ್ನು ಅಣಿಗೊಳಿಸಿ ನಿನ್ನ ದಾರಿ ನೋಡುತ್ತಿದ್ದಾರೆ.॥4॥

ಮೂಲಮ್ - 5

ರಾಜ್ಯಂ ಗೃಹಾಣ ಭರತ ಪಿತೃಪೈತಾಮಹಂ ಧ್ರುವಮ್ ।
ಅಭಿಷೇಚಯ ಚಾತ್ಮಾನಂ ಪಾಹಿ ಚಾಸ್ಮಾನ್ನರರ್ಷಭ ॥

ಅನುವಾದ

ಭರತನೇ! ನೀನು ನಿನ್ನ ತಾತ-ಮುತ್ತಾತರ ಈ ರಾಜ್ಯವನ್ನು ಅವಶ್ಯವಾಗಿ ಸ್ವೀಕರಿಸು. ನರಶ್ರೇಷ್ಠನೇ! ರಾಜಪದವಿಯಲ್ಲಿ ಪಟ್ಟಾಭಿಷಿಕ್ತನಾಗಿ ನಮ್ಮೆಲ್ಲರನ್ನು ರಕ್ಷಿಸು.॥5॥

ಮೂಲಮ್ - 6

ಆಭಿಷೇಚನಿಕಂ ಭಾಂಡಂ ಕೃತ್ವಾ ಸರ್ವಂ ಪ್ರದಕ್ಷಿಣಮ್ ।
ಭರತಸ್ತಂ ಜನಂ ಸರ್ವಂ ಪ್ರತ್ಯುವಾಚ ಧೃತವ್ರತಃ ॥

ಅನುವಾದ

ಇದನ್ನು ಕೇಳಿ ಉತ್ತಮ ವ್ರತಧಾರಿಯಾದ ಭರತನು ಅಭಿಷೇಕಕ್ಕಾಗಿ ಇರಿಸಿದ ಕಲಶವೇ ಮೊದಲಾದ ಸಾಮಗ್ರಿಗಳಿಗೆ ಪ್ರದಕ್ಷಿಣೆ ಮಾಡಿ, ಅಲ್ಲಿ ಉಪಸ್ಥಿತರಾದ ಎಲ್ಲ ಜನರಲ್ಲಿ ಈ ಪ್ರಕಾರ ಹೇಳಿದನು.॥6॥

ಮೂಲಮ್ - 7

ಜ್ಯೇಷ್ಠಸ್ಯ ರಾಜತಾ ನಿತ್ಯಮುಚಿತಾ ಹಿ ಕುಲಸ್ಯ ನಃ ।
ನೈವಂ ಭವಂತೋ ಮಾಂ ವಕ್ತುಮರ್ಹಂತಿ ಕುಶಲಾ ಜನಾಃ ॥

ಅನುವಾದ

ಸಜ್ಜನರೇ! ನೀವು ಬುದ್ಧಿವಂತರಾಗಿದ್ದೀರಿ. ನೀವು ನನ್ನಲ್ಲಿ ಇಂತಹ ಮಾತುಗಳನ್ನು ಆಡಬಾರದು. ನಮ್ಮ ಕುಲದಲ್ಲಿ ಸದಾ ಜ್ಯೇಷ್ಠಪುತ್ರನೇ ರಾಜ್ಯದ ಅಧಿಕಾರಿ ಆಗುತ್ತಾ ಬಂದಿರುವನು ಮತ್ತು ಇದೇ ಉಚಿತವಾಗಿದೆ.॥7॥

ಮೂಲಮ್ - 8

ರಾಮಃ ಪೂರ್ವೋ ಹಿ ನೋ ಭ್ರಾತಾ ಭವಿಷ್ಯತಿ ಮಹೀಪತಿಃ ।
ಅಹಂ ತ್ವರಣ್ಯೇ ವತ್ಸ್ಯಾಮಿ ವರ್ಷಾಣಿ ನವ ಪಂಚ ಚ ॥

ಅನುವಾದ

ಶ್ರೀರಾಮಚಂದ್ರನು ನಮ್ಮೆಲ್ಲರಿಗೆ ಹಿರಿಯಣ್ಣನಾಗಿದ್ದಾನೆ, ಆದ್ದರಿಂದ ಅವನೇ ರಾಜನಾಗುವನು. ಅವನ ಬದಲಿಗೆ ನಾನೇ ಹದಿನಾಲ್ಕು ವರ್ಷಗಳವರೆಗೆ ವನದಲ್ಲಿ ವಾಸ ಮಾಡುವೆನು.॥8॥

ಮೂಲಮ್ - 9

ಯುಜ್ಯತಾಂ ಮಹತೀ ಸೇನಾ ಚತುರಂಗಮಹಾಬಲಾ ।
ಆನಯಿಷ್ಯಾಮ್ಯಹಂ ಜ್ಯೇಷ್ಠಂ ಭ್ರಾತರಂ ರಾಘವಂ ವನಾತ್ ॥

ಅನುವಾದ

ಎಲ್ಲ ರೀತಿಯಿಂದ ಪ್ರಬಲವಾದ ವಿಶಾಲ ಚತುರಂಗಿಣೀ ಸೈನ್ಯವನ್ನು ನೀವು ಸಿದ್ಧಪಡಿಸಿರಿ. ನಾನು ಹಿರಿಯಣ್ಣ ಶ್ರೀರಾಮಚಂದ್ರನನ್ನು ಕಾಡಿನಿಂದ ಮರಳಿ ಕರೆತರುವೆ.॥9॥

ಮೂಲಮ್ - 10

ಆಭಿಷೇಚನಿಕಂ ಚೈವ ಸರ್ವಮೇತದುಪಸ್ಕೃತಮ್ ।
ಪುರಸ್ಕೃತ್ಯ ಗಮಿಷ್ಯಾಮಿ ರಾಮಹೇತೋರ್ವನಂ ಪ್ರತಿ ॥

ಮೂಲಮ್ - 11

ತತ್ರೈವ ತಂ ನರವ್ಯಾಘ್ರಮಭಿಷಿಚ್ಯ ಪುರಸ್ಕೃತಮ್ ।
ಆನಯಿಷ್ಯಾಮಿ ವೈ ರಾಮಂ ಹವ್ಯವಾಹಮಿವಾಧ್ವರಾತ್ ॥

ಅನುವಾದ

ಅಭಿಷೇಕಕ್ಕಾಗಿ ಒಟ್ಟುಗೂಡಿಸಿದ ಈ ಎಲ್ಲ ಸಾಮಗ್ರಿಯನ್ನು ಮುಂದಿರಿಸಿಕೊಂಡು ನಾನು ಶ್ರೀರಾಮನನ್ನು ನೋಡಲು ವನಕ್ಕೆ ಹೋಗುವೆನು ಹಾಗೂ ಆ ನರಶ್ರೇಷ್ಠ ಶ್ರೀರಾಮಚಂದ್ರನಿಗೆ ಅಲ್ಲೇ ಪಟ್ಟಾಭಿಷೇಕ ಮಾಡಿ ಯಜ್ಞಕ್ಕಾಗಿ ತರುವ ಅಗ್ನಿಯಂತೆ ಅವನನ್ನು ಮುಂದಿರಿಸಿಕೊಂಡು ಅಯೋಧ್ಯೆಗೆ ಕರೆತರುವೆ.॥10-11॥

ಮೂಲಮ್ - 12

ನ ಸಕಾಮಾಂ ಕರಿಷ್ಯಾಮಿ ಸ್ವಾಮಿಮಾಂ ಮಾತೃಗಂಧಿನೀಮ್ ।
ವನೇ ವತ್ಸ್ಯಾಮ್ಯಹಂ ದುರ್ಗೇ ರಾಮೋ ರಾಜಾ ಭವಿಷ್ಯತಿ ॥

ಅನುವಾದ

ಆದರೆ ಲೇಶಮಾತ್ರ ಮಾತೃಭಾವ ಉಳಿದಿರುವ ನನ್ನ ತಾಯಿ ಎಂದು ಹೇಳಿಸಿಕೊಳ್ಳುವ ಈ ಕೈಕೇಯಿಯ ಮನೋರಥವನ್ನು ಎಂದಿಗೂ ಸಫಲವಾಗಿಸಲು ಬಿಡುವುದಿಲ್ಲ. ಶ್ರೀರಾಮನೇ ಇಲ್ಲಿಯ ರಾಜನಾಗುವನು ಮತ್ತು ನಾನು ದುರ್ಗಮ ವನದಲ್ಲಿ ಇರುವೆನು.॥12॥

ಮೂಲಮ್ - 13

ಕ್ರಿಯತಾಂ ಶಿಲ್ಪಿಭಿಃ ಪಂಥಾಃ ಸಮಾನಿ ವಿಷಮಾಣಿ ಚ ।
ರಕ್ಷಿಣಶ್ಚಾನುಸಂಯಾಂತು ಪಥಿ ದುರ್ಗವಿಚಾರಕಾಃ ॥

ಅನುವಾದ

ಕುಶಲರಾದ ಶಿಲ್ಪಿಗಳು ಮುಂದಾಗಿ ಹೋಗಿ ಎತ್ತರ-ತಗ್ಗುಗಳನ್ನು ಸಮತಟ್ಟಾಗಿಸಿ ಮಾರ್ಗವನ್ನು ರಚಿಸಲಿ ಹಾಗೂ ದುರ್ಗಮ ಸ್ಥಾನಗಳ ಅರಿವು ಇರುವ ರಕ್ಷಕರೂ ಜೊತೆ-ಜೊತೆಯಾಗಿ ನಡೆಯಲಿ.॥13॥

ಮೂಲಮ್ - 14

ಏವಂ ಸಂಭಾಷಮಾಣಂ ತಂರಾಮಹೇತೋರ್ನೃಪಾತ್ಮಜಮ್ ।
ಪ್ರತ್ಯುವಾಚ ಜನಃ ಸರ್ವಃ ಶ್ರೀಮದ್ವಾಕ್ಯಮನುತ್ತಮಮ್ ॥

ಅನುವಾದ

ಶ್ರೀರಾಮನ ಕುರಿತು ಹೀಗೆ ಹೇಳುತ್ತಿರುವ ರಾಜಕುಮಾರ ಭರತನಲ್ಲಿ ಅಲ್ಲಿ ಬಂದಿರುವ ಎಲ್ಲ ಜನರು ಈ ಪ್ರಕಾರ ಸುಂದರ ಹಾಗೂ ಪರಮೋತ್ತಮ ಮಾತನ್ನು ಹೇಳಿದರು.॥14॥

ಮೂಲಮ್ - 15

ಏವಂ ತೇ ಭಾಷಮಾಣಸ್ಯ ಪದ್ಮಾ ಶ್ರೀರುಪತಿಷ್ಠಿತಾಮ್ ।
ಯಸ್ತ್ವಂ ಜ್ಯೇಷ್ಠೇ ನೃಪಸುತೇಪೃಥಿವೀಂ ದಾತುಮಿಚ್ಛಸಿ ॥

ಅನುವಾದ

ಭರತನೇ! ಇಂತಹ ಉತ್ತಮ ಮಾತನ್ನು ಹೇಳುವ ನಿನ್ನ ಬಳಿ ಕಮಲವನದಲ್ಲಿ ವಾಸಿಸುವ ಲಕ್ಷ್ಮಿಯು ನೆಲೆಸಲಿ; ಏಕೆಂದರೆ ನೀನು ರಾಜನ ಜ್ಯೇಷ್ಠಪುತ್ರ ಶ್ರೀರಾಮನಿಗೆ ಸ್ವತಃ ನೀನೇ ಈ ಪೃಥಿವಿಯ ರಾಜ್ಯವನ್ನು ಮರಳಿಸುತ್ತಿರುವೆ.॥15॥

ಮೂಲಮ್ - 16

ಅನುತ್ತಮಂ ತದ್ವಚನಂ ನೃಪಾತ್ಮಜಃ
ಪ್ರಭಾಷಿತಂ ಸಂಶ್ರವಣೇ ನಿಶಮ್ಯ ಚ ।
ಪ್ರಹರ್ಷಜಾಸ್ತಂ ಪ್ರತಿ ಬಾಷ್ಪಬಿಂದವೋ
ನಿಪೇತುರಾರ್ಯಾನನನೇತ್ರಸಂಭವಾಃ ॥

ಅನುವಾದ

ಆ ಜನರು ಹೇಳಿರುವ ಪರಮೋತ್ತಮ ಆಶೀರ್ವಚನ ಕಿವಿಗೆ ಬಿದ್ದಾಗ ಅದನ್ನು ಕೇಳಿ ರಾಜಕುಮಾರ ಭರತನಿಗೆ ಬಹಳ ಸಂತೋಷವಾಯಿತು. ಅವರೆಲ್ಲರ ಕಡೆಗೆ ನೋಡಿ ಭರತನ ಕಣ್ಣುಗಳಿಂದ ಆನಂದಾಶ್ರುಗಳು ಚಿಮ್ಮಿದವು.॥16॥

ಮೂಲಮ್ - 17

ಊಚುಸ್ತೇ ವಚನಮಿದಂ ನಿಶಮ್ಯ ಹೃಷ್ಟಾಃ
ಸಾಮಾತ್ಯಾಃ ಸಪರಿಷದೋ ವಿಯಾತಶೋಕಾಃ ।
ಪಂಥಾನಂ ನರವರಭಕ್ತಿಮಾನ್ ಜನಶ್ಚ
ವ್ಯಾದಿಷ್ಟಸ್ತವ ವಚನಾಚ್ಚ ಶಿಲ್ಪಿವರ್ಗಃ ॥

ಅನುವಾದ

ರಾಮನನ್ನು ಕರೆತರುವ ಮಾತನ್ನು ಭರತನ ಬಾಯಿಂದ ಕೇಳಿ ಆ ಸಭಾಸದರೆಲ್ಲರೂ ಮಂತ್ರಿಗಳ ಸಹಿತ ಆನಂದ ತುಂದಿಲರಾದರು. ಅವರೆಲ್ಲರ ಶೋಕ ದೂರವಾಯಿತು. ಅವರು ಭರತನಲ್ಲಿ ಹೇಳಿದರು - ನರಶ್ರೇಷ್ಠನೇ! ನಿನ್ನ ಆಜ್ಞೆಯಂತೆ ರಾಜ ಪರಿವಾರದ ಕುರಿತು ಭಕ್ತಿಭಾವವುಳ್ಳ ಶಿಲ್ಪಿಗಳನ್ನು, ರಕ್ಷಕರನ್ನು, ಮಾರ್ಗವನ್ನು ರಚಿಸಲು ಕಳಿಸಿಕೊಡಲಾಗಿದೆ.॥17॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥79॥