०७८ मन्थराशासनम्

वाचनम्
ಭಾಗಸೂಚನಾ

ಕ್ರುದ್ಧನಾದ ಶತ್ರುಘ್ನನಿಂದ ಮಂಥರೆಯ ಭರ್ತ್ಸನೆ, ಭರತನಿಂದ ಸಾಂತ್ವನ

ಮೂಲಮ್ - 1

ಅಥ ಯಾತ್ರಾಂ ಸಮೀಹಂತಂ ಶತ್ರುಘ್ನೋಲಕ್ಷ್ಮಣಾನುಜಃ ।
ಭರತಂ ಶೋಕಸಂತಪ್ತಮಿದಂ ವಚನಮಬ್ರವೀತ್ ॥

ಅನುವಾದ

ಹದಿಮೂರನೆಯ ದಿವಸದ ಕಾರ್ಯ ಪೂರ್ಣಗೊಳಿಸಿ ಶ್ರೀರಾಮನ ಬಳಿಗೆ ಹೋಗುವ ವಿಚಾರ ಮಾಡುತ್ತಾ ಶೋಕ ಸಂತಪ್ತನಾದ ಭರತನಲ್ಲಿ ಲಕ್ಷ್ಮಣನ ತಮ್ಮ ಶತ್ರುಘ್ನನು ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಗತಿರ್ಯಃ ಸರ್ವಭೂತಾನಾಂ ದುಃಖೇ ಕಿಂ ಪುನರಾತ್ಮನಃ ।
ಸ ರಾಮಃ ಸತ್ತ್ವಸಂಪನ್ನಃ ಸ್ತ್ರಿಯಾ ಪ್ರವ್ರಾಜಿತೋ ವನಮ್ ॥

ಅನುವಾದ

ಯಾರು ದುಃಖದಲ್ಲಿ ತನ್ನ ಹಾಗೂ ಆತ್ಮೀಯ ಜನರಿಗಾಗಿ ಏನು, ಸಮಸ್ತ ಪ್ರಾಣಿಗಳಿಗೂ ಆಸರೆಕೊಡುವ ಆ ಸತ್ತ್ವಗುಣ ಸಂಪನ್ನ ಶ್ರೀರಾಮನನ್ನು ಓರ್ವ ಸ್ತ್ರೀಯಿಂದಾಗಿ ಕಾಡಿಗೆ ಕಳಿಸಲಾಯಿತು. (ಇದು ಎಷ್ಟು ಖೇದದ ಮಾತಾಗಿದೆ?॥2॥

ಮೂಲಮ್ - 3

ಬಲವಾನ್ ವೀರ್ಯಸಂಪನ್ನೋ ಲಕ್ಷ್ಮಣೋ ನಾಮಯೋಽಪ್ಯಸೌ ।
ಕಿಂ ನ ಮೋಚಯತೇ ರಾಮಂ ಕೃತ್ವಾಪಿ ಪಿತೃನಿಗ್ರಹಮ್ ॥

ಅನುವಾದ

ಬಲ ಮತ್ತು ಪರಾಕ್ರಮ ಸಂಪನ್ನ ಹೆಸರುವಾಸಿ ಶೂರವೀರ ಲಕ್ಷ್ಮಣನೂ ಏನನ್ನೂ ಮಾಡಲಿಲ್ಲ. ನಾನು ಕೇಳುತ್ತೇನೆ. ಅವನು ತಂದೆಯನ್ನು ಬಂಧಿಸಿಯಾದರೂ ಶ್ರೀರಾಮನನ್ನು ಈ ಸಂಕಟದಿಂದ ಏಕೆ ಪಾರು ಮಾಡಲಿಲ್ಲ.॥3॥

ಮೂಲಮ್ - 4

ಪೂರ್ವಮೇವ ತು ನಿಗ್ರಾಹ್ಯಃಸಮವೇಕ್ಷ್ಯ ನಯಾನಯೌ ।
ಉತ್ಪಥಂ ಯಃ ಸಮಾರೂಢೋ ನಾರ್ಯಾ ರಾಜಾ ವಶಂ ಗತಃ ॥

ಅನುವಾದ

ಮಹಾರಾಜರು ಒಬ್ಬ ನಾರಿಗೆ ವಶನಾಗಿ ಕೆಟ್ಟದಾರಿ ಹಿಡಿದಾಗ ನ್ಯಾಯಾನ್ಯಾಯದ ವಿಚಾರಮಾಡಿ ಅವನನ್ನು ಮೊದಲೇ ಬಂಧಿಸಬೇಕಿತ್ತು.॥4॥

ಮೂಲಮ್ - 5

ಇತಿ ಸಂಭಾಷಮಾಣೇ ತು ಶತ್ರುಘ್ನೇ ಲಕ್ಷ್ಮಣಾನುಜೇ ।
ಪ್ರಾಗ್ದ್ವಾರೇಽಭೂತ್ತದಾ ಕುಬ್ಜಾ ಸರ್ವಾಭರಣಭೂಷಿತಾ ॥

ಅನುವಾದ

ಲಕ್ಷ್ಮಣನ ಅನುಜ ಶತ್ರುಘ್ನನು ಈ ಪ್ರಕಾರ ರೋಷಗೊಂಡು ಮಾತನಾಡುತ್ತಿರುವಾಗಲೇ ಕುಬ್ಜೆಯು ಸರ್ವಾಭರಣ ಭೂಷಿತೆಯಾಗಿ ಆ ಅರಮನೆಯ ಪೂರ್ವದ್ವಾರದಲ್ಲಿ ಬಂದು ನಿಂತುಕೊಂಡಳು.॥5॥

ಮೂಲಮ್ - 6

ಲಿಪ್ತಾ ಚಂದನಸಾರೇಣ ರಾಜವಸ್ತ್ರಾಣಿ ಬಿಭ್ರತೀ ।
ವಿವಿಧಂ ವಿವಿಧೈಸ್ತೈಸ್ತೈರ್ಭೂಷಣೈಶ್ಚ ವಿಭೂಷಿತಾ ॥

ಅನುವಾದ

ಶರೀರಕ್ಕೆಲ್ಲ ಉತ್ತಮೋತ್ತಮ ಚಂದನವನ್ನು ಪೂಸಿಕೊಂಡಿದ್ದಳು ಹಾಗೂ ಅವಳು ಮಹಾರಾಣಿಯರು ಉಡಲು ಯೋಗ್ಯವಾದ ವಸ್ತ್ರಗಳನ್ನು ಧರಿಸಿ ಬಗೆ-ಬಗೆಯ ಒಡವೆಗಳಿಂದ ಅಲಂಕರಿಸಿಕೊಂಡು ಅಲ್ಲಿಗೆ ಬಂದಿದ್ದಳು.॥6॥

ಮೂಲಮ್ - 7

ಮೇಖಲಾದಾಮಭಿಶ್ಚಿತ್ರೈರನ್ಯೈಶ್ಚ ವರಭೂಷಣೈಃ ।
ಬಭಾಸೇ ಬಹುಭಿರ್ಬದ್ಧಾ ರಜ್ಜುಭಿರಿವ ವಾನರೀ ॥

ಅನುವಾದ

ಸೊಂಟಕ್ಕೆ ವಿಚಿತ್ರವಾದ ಒಡ್ಯಾಣವನ್ನು ಹಾಗೂ ಅನೇಕ ಸುಂದರ ಅಲಂಕಾರಗಳಿಂದ ಸಿಂಗರಿಸಿಕೊಂಡು ಬಂದಿರುವ ಆಕೆಯು ಹಗ್ಗಗಳಿಂದ ಕಟ್ಟಿ ತಂದಿರುವ ಹೆಣ್ಣು ಕೋತಿಯಂತೆ ಕಾಣುತ್ತಿದ್ದಳು.॥7॥

ಮೂಲಮ್ - 8

ತಾಂ ಸಮೀಕ್ಷ್ಯ ತದಾ ದ್ವಾಃಸ್ಥೋಭೃಶಂ ಪಾಪಸ್ಯ ಕಾರಿಣೀಮ್ ।
ಗೃಹೀತ್ವಾಕರುಣಂ ಕುಬ್ಜಾಂ ಶತ್ರುಘ್ನಾಯ ನ್ಯವೇದಯತ್ ॥

ಅನುವಾದ

ಎಲ್ಲ ಅನಾಹುತಗಳ ಬೇರು ಆಕೆಯೇ ಆಗಿದ್ದಳು. ಅವಳೇ ಶ್ರೀರಾಮನ ವನವಾಸರೂಪೀ ಪಾಪದ ಮೂಲ ಕಾರಣಳಾಗಿದ್ದಳು. ಆಕೆಯನ್ನು ನೋಡುತ್ತಲೇ ದ್ವಾರ ಪಾಲಕರು ಅವಳನ್ನು ಹಿಡಿದು ನಿರ್ದಯತೆಯಿಂದ ಎಳೆದಾಡುತ್ತಾ ಶತ್ರುಘ್ನನ ಕೈಗೆ ಒಪ್ಪಿಸಿ ಈ ರೀತಿ ಹೇಳಿದರು.॥8॥

ಮೂಲಮ್ - 9

ಯಸ್ಯಾಃ ಕೃತೇ ವನೇ ರಾಮೋ ನ್ಯಸ್ತದೇಹಶ್ಚ ವಃ ಪಿತಾ ।
ಸೇಯಂ ಪಾಪಾ ನೃಶಂಸಾ ಚ ತಸ್ಯಾಃ ಕುರುಯಥಾಮತಿ ॥

ಅನುವಾದ

ರಾಜಕುಮಾರಾ! ಕ್ರೂರಕರ್ಮ ಮಾಡುವ ಈ ಪಾಪಿಯಿಂದಲೇ ಶ್ರೀರಾಮನು ವನವಾಸಕ್ಕೆ ಹೋಗಬೇಕಾಯಿತು ಮತ್ತು ನಿಮ್ಮ ತಂದೆಯವರು ಶರೀರ ತ್ಯಜಸಿದರು. ನೀವು ಈಕೆಗೆ ಉಚಿತವೆಸಿದ ಶಿಕ್ಷೆ ಕೊಡಿರಿ.॥9॥

ಮೂಲಮ್ - 10

ಶತ್ರುಘ್ನಶ್ಚ ತದಾಜ್ಞಾಯ ವಚನಂ ಭೃಶದುಃಖಿತಃ ।
ಅಂತಃಪುರಚರಾನ್ ಸರ್ವಾನಿತ್ಯುವಾಚ ಧೃತವ್ರತಃ ॥

ಅನುವಾದ

ದ್ವಾರಪಾಲಕನ ಮಾತನ್ನು ಕೇಳಿ ಶತ್ರುಘ್ನನ ದುಃಖ ಇನ್ನೂ ಹೆಚ್ಚಾಯಿತು. ಅವನು ತನ್ನ ಕರ್ತವ್ಯವನ್ನು ನಿಶ್ಚಯಿಸಿ, ಅಂತಃಪುರದಲ್ಲಿರುವ ಎಲ್ಲ ಜನರು ಕೇಳುವಂತೆ ಇಂತೆಂದನು.॥10॥

ಮೂಲಮ್ - 11

ತೀವ್ರಮುತ್ಪಾದಿತಂ ದುಃಖಂ ಭ್ರಾತೃಣಾಂ ಮೇತಥಾ ಪಿತುಃ ।
ಯಥಾ ಸೇಯಂ ನೃಶಂಸಸ್ಯ ಕರ್ಮಣಃ ಲಮಶ್ನುತಾಮ್ ॥

ಅನುವಾದ

ಈ ಪಾಪಿನಿಯು ನನ್ನ ಅಣ್ಣಂದಿರಿಗೆ ಹಾಗೂ ತಂದೆಗೆ ಸಹ ದುಃಖವನ್ನು ಕೊಟ್ಟಿರುವಂತೆಯೇ ಈ ಕ್ರೂರಕರ್ಮದ ದುಃಖದ ಫಲ ಅನುಭವಿಸಲಿ.॥11॥

ಮೂಲಮ್ - 12

ಏವಮುಕ್ತ್ವಾ ತು ತೇನಾಶು ಸಖೀಜನಸಮಾವೃತಾ ।
ಗೃಹೀತಾ ಬಲವತ್ ಕುಬ್ಜಾ ಸಾ ತದ್ ಗೃಹಮನಾದಯತ್ ॥

ಅನುವಾದ

ಹೀಗೆ ಹೇಳಿ ಸಖಿಯರಿಂದ ಸುತ್ತುವರಿದ ಕುಬ್ಜೆಯನ್ನು ಕೂಡಲೇ ಬಲವಾಗಿ ಹಿಡಿದುಕೊಂಡನು. ಅವಳು ಭಯದಿಂದ ಕಿರುಚಾಡಿದಾಗ ಇಡೀ ಅರಮನೆ ಪ್ರತಿಧ್ವನಿಸಿತು.॥12॥

ಮೂಲಮ್ - 13

ತತಃ ಸುಭೃಶಸಂತಪ್ತಸ್ತಸ್ಯಾಃ ಸರ್ವಃ ಸಖೀಜನಃ ।
ಕ್ರುದ್ಧಮಾಜ್ಞಾಯ ಶತ್ರುಘ್ನಂ ವಿಪಲಾಯತ ಸರ್ವಶಃ ॥

ಅನುವಾದ

ಮತ್ತೆ ಆಕೆಯ ಸಖಿಯರು ಅತ್ಯಂತ ಸಂತಪ್ತರಾಗಿ, ಶತ್ರುಘ್ನನು ಕುಪಿತನಾಗಿರುವುದನ್ನು ಕಂಡು ಎಲ್ಲರೂ ಓಡಿಹೋದರು.॥13॥

ಮೂಲಮ್ - 14

ಅಮಂತ್ರಯತ ಕೃತ್ಸ್ನಶ್ಚ ತಸ್ಯಾಃ ಸರ್ವಃ ಸಖೀಜನಃ ।
ಯಥಾಯಂ ಸಮುಪಕ್ರಾಂತೋ ನಿಃಶೇಷಂ ನಃ ಕರಿಷ್ಯತಿ ॥

ಅನುವಾದ

ಅವರೆಲ್ಲ ಒಂದೆಡೆ ಸೇರಿ ಪರಸ್ಪರ ಮಾತನಾಡಿಕೊಂಡರು - ಶತ್ರುಘ್ನನು ಬಲವಾಗಿ ಈಕೆಯನ್ನು ಹಿಡಿದಿರುವುದನ್ನು ನೋಡಿದರೆ ನಮ್ಮಲ್ಲಿ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ ಅಂತ ಅನಿಸುತ್ತದೆ.॥14॥

ಮೂಲಮ್ - 15

ಸಾನುಕ್ರೋಶಾಂ ವದಾನ್ಯಾಂ ಚ ಧರ್ಮಜ್ಞಾಂ ಚ ಯಶಸ್ವಿನೀಮ್ ।
ಕೌಸಲ್ಯಾಂ ಶರಣಂ ಯಾಮಃ ಸಾ ಹಿ ನೋಽಸ್ತಿ ಧ್ರುವಾ ಗತಿಃ ॥

ಅನುವಾದ

ಆದ್ದರಿಂದ ನಾವು ಪರಮ ದಯಾಳು, ಉದಾರ, ಧರ್ಮಜ್ಞ ಮತ್ತು ಯಶಸ್ವಿನೀ ಮಹಾರಾಣಿ ಕೌಸಲ್ಯೆಗೆ ಶರಣಾಗುವಾ. ಈಗ ಆಕೆಯೇ ನಮಗೆ ನಿಶ್ಚಲಗತಿಯಾಗಿದ್ದಾಳೆ.॥15॥

ಮೂಲಮ್ - 16

ಸ ಚ ರೋಷೇಣ ಸಂವೀತಃ ಶತ್ರುಘ್ನಃ ಶತ್ರುಶಾಸನಃ ।
ವಿಚಕರ್ಷ ತದಾ ಕುಬ್ಜಾಂ ಕ್ರೋಶಂತೀಂ ಪೃಥಿವೀತಲೇ ॥

ಅನುವಾದ

ಶತ್ರುದಮನ ಶತ್ರುಘ್ನನು ರೋಷಗೊಂಡು ಕುಬ್ಜೆಯನ್ನು ನೆಲದಲ್ಲಿ ಎಳೆದಾಡಿದನು. ಆಗ ಅವಳು ಜೋರಾಗಿ ಕೂಗುತ್ತಿದ್ದಳು.॥16॥

ಮೂಲಮ್ - 17

ತಸ್ಯಾಂ ಹ್ಯಾಕೃಷ್ಯಮಾಣಾಯಾಂ ಮಂಥರಾಂಯಾಂತತಸ್ತತಃ ।
ಚಿತ್ರಂ ಬಹುವಿಧಂ ಭಾಂಡಂ ಪೃಥಿವ್ಯಾಂ ತದ್ವ್ಯಶೀರ್ಯತ ॥

ಅನುವಾದ

ಮಂಥರೆಯನ್ನು ಹೀಗೆ ಎಳೆದಾಡುತ್ತಿರುವಾಗ ಆಕೆಯ ನಾನಾ ರೀತಿಯ ಒಡವೆಗಳು ಕಡಿದು ನೆಲದಲ್ಲಿ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.॥17॥

ಮೂಲಮ್ - 18

ತೇನ ಭಾಂಡೇನ ಸಂಕೀರ್ಣಂಶ್ರೀಮದ್ ರಾಜನಿವೇಶನಮ್ ।
ಅಶೋಭತ ತದಾ ಭೂಯಃ ಶಾರದಂ ಗಗನಂ ಯಥಾ ॥

ಅನುವಾದ

ಆಭೂಷಣಗಳ ಆ ತುಂಡುಗಳಿಂದ ಶೋಭಾಸಂಪನ್ನ ವಿಶಾಲವಾದ ಆ ಅರಮನೆ ನಕ್ಷತ್ರಮಾಲೆಗಳಿಂದ ಅಲಂಕೃತವಾದ ಶರತ್ಕಾಲದ ಆಕಾಶದಂತೆ ಹೆಚ್ಚು ಶೋಭಿಸುತ್ತಿತ್ತು.॥18॥

ಮೂಲಮ್ - 19

ಸ ಬಲೀ ಬಲವತ್ಕ್ರೋಧಾದ್ ಗೃಹೀತ್ವಾ ಪುರುಷರ್ಷಭಃ ।
ಕೈಕೇಯೀಮಭಿನಿರ್ಭರ್ತ್ಯ್ಸ ಬಭಾಷೇ ಪರುಷಂವಚಃ ॥

ಅನುವಾದ

ಬಲವಂತನಾದ ನರಶ್ರೇಷ್ಠ ಶತ್ರುಘ್ನನು ರೋಷಗೊಂಡು ಮಂಥರೆಯನ್ನು ಜೋರಾಗಿ ಅಪ್ಪಳಿಸಿ ಎಳೆದಾಡುತ್ತಿರುವಾಗ ಆಕೆಯನ್ನು ಬಿಡಿಸಲು ಕೈಕೇಯಿಯು ಅವನ ಬಳಿಗೆ ಬಂದಳು. ಆಗ ಅವನು ಆಕೆಯನ್ನು ಧಿಕ್ಕರಿಸುತ್ತಾ, ಕಠೋರವಾದ ಮಾತುಗಳನ್ನಾಡಿ, ಸಿಟ್ಟಿನಿಂದ ಗದರಿಸಿದನು.॥19॥

ಮೂಲಮ್ - 20

ತೈರ್ವಾಕ್ಯೈಃ ಪರುಷೈರ್ದುಃಖೈಃ ಕೈಕೇಯೀ ಭೃಶದುಃಖಿತಾ ।
ಶತ್ರುಘ್ನಭಯಸಂತ್ರಸ್ತಾ ಪುತ್ರಂ ಶರಣಮಾಗತಾ ॥

ಅನುವಾದ

ಶತ್ರುಘ್ನನ ಆ ಮಾತುಗಳು ಬಹಳ ದುಃಖದಾಯಕವಾಗಿದ್ದವು. ಅವನ್ನು ಕೇಳಿ ಕೈಕೇಯಿಗೆ ತುಂಬಾ ದುಃಖವಾಯಿತು. ಅವಳು ಶತ್ರುಘ್ನನ ಭಯದಿಂದ ನಡುಗಿ ಹೋಗಿ, ತನ್ನ ಪುತ್ರನಲ್ಲಿ ಶರಣಾದಳು.॥20॥

ಮೂಲಮ್ - 21

ತಂ ಪ್ರೇಕ್ಷ್ಯ ಭರತಃ ಕ್ರುದ್ಧಂ ಶತ್ರುಘ್ನಮಿದಮಬ್ರವೀತ್ ।
ಅವಧ್ಯಾಃ ಸರ್ವಭೂತಾನಾಂ ಪ್ರಮದಾಃ ಕ್ಷಮ್ಯತಾಮಿತಿ ॥

ಅನುವಾದ

ಕ್ರೋಧಗೊಂಡ ಶತ್ರುಘ್ನನನ್ನು ನೋಡಿ ಭರತನು ಅವನಲ್ಲಿ ಹೇಳಿದನು - ಸುಮಿತ್ರಾಕುಮಾರ! ಕ್ಷಮಿಸು. ಸ್ತ್ರೀಯರು ಎಲ್ಲ ಪ್ರಾಣಿಗಳಿಗೆ ಅವಧ್ಯರಾಗಿದ್ದಾರೆ.॥21॥

ಮೂಲಮ್ - 22

ಹನ್ಯಾಮಹಮಿಮಾಂ ಪಾಪಾಂ ಕೈಕೇಯೀಂದುಷ್ಟಚಾರಿಣೀಮ್ ।
ಯದಿ ಮಾಂ ಧಾರ್ಮಿಕೋ ರಾಮೋ ನಾಸೂಯೇನ್ಮಾತೃಘಾತಕಮ್ ॥

ಅನುವಾದ

ಧರ್ಮಾತ್ಮಾ ಶ್ರೀರಾಮನು ಮಾತೃಘಾತಿ ಎಂದು ತಿಳಿದು ನನ್ನನ್ನು ನಿಂದಿಸದಿದ್ದರೆ ದುಷ್ಟಚಾರಿಣಿಯಾದ, ಪಾಪಿಷ್ಠೆಯಾದ ಈ ಕೈಕೇಯಿಯನ್ನು ಕೊಂದುಬಿಡುತ್ತಿದ್ದೆ.॥22॥

ಮೂಲಮ್ - 23

ಇಮಾಮಪಿ ಹತಾಂ ಕುಬ್ಜಾಂ ಯದಿ ಜಾನಾತಿ ರಾಘವಃ ।
ತ್ವಾಂ ಚ ಮಾಂ ಚೈವ ಧರ್ಮಾತ್ಮಾ ನಾಭಿಭಾಷಿಷ್ಯತೇ ಧ್ರುವಮ್ ॥

ಅನುವಾದ

ನಾವೀಗ ಮಂಥರೆಯನ್ನು ಕೊಂದರೂ, ಇದು ರಾಮನಿಗೇನಾದರೂ ತಿಳಿದರೆ ಧರ್ಮಾತ್ಮನಾದ ಅವನು ನಿನ್ನೊಡನೆಯಾಗಲೀ, ನನ್ನೊಡನೆಯಾಗಲೀ ಖಂಡಿತವಾಗಿ ಮಾತನಾಡಲಾರನು.॥23॥

ಮೂಲಮ್ - 24

ಭರತಸ್ಯ ವಚಃ ಶ್ರುತ್ವಾ ಶತ್ರುಘ್ನೋ ಲಕ್ಷ್ಮಣಾನುಜಃ ।
ನ್ಯವರ್ತತ ತತೋ ರೋಷಾತ್ ತಾಂ ಮುಮೋಚ ಚ ಮೂರ್ಛಿತಾಮ್ ॥

ಅನುವಾದ

ಭರತನ ಮಾತನ್ನು ಕೇಳಿ ಲಕ್ಷ್ಮಣಾನುಜ ಶತ್ರುಘ್ನನು ಮಂಥರೆಯ ವಧರೂಪೀ ದೋಷದಿಂದ ನಿವೃತ್ತನಾದನು ಮತ್ತು ಆಕೆಯನ್ನು ಮೂರ್ಛಿತ ಸ್ಥಿತಿಯಲ್ಲೇ ಬಿಟ್ಟುಬಿಟ್ಟನು.॥24॥

ಮೂಲಮ್ - 25

ಸಾ ಪಾದಮೂಲೇ ಕೈಕೇಯ್ಯಾ ಮಂಥರಾ ನಿಪಪಾತ ಹ ।
ನಿಃಶ್ವಸಂತಿಸುದುಃಖಾರ್ತಾ ಕೃಪಣಂ ವಿಲಲಾಪ ಹ ॥

ಅನುವಾದ

ಮಂಥರೆಯು ಕೈಕೇಯಿಯ ಕಾಲಿಗೆ ಬಿದ್ದು, ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಅತ್ಯಂತ ದುಃಖದಿಂದ ಆರ್ತಳಾಗಿ ಕರುಣಾಪೂರ್ಣವಾಗಿ ವಿಲಪಿಸತೊಡಗಿದಳು.॥25॥

ಮೂಲಮ್ - 26

ಶತ್ರುಘ್ನವಿಕ್ಷೇಪವಿಮೂಢಸಂಜ್ಞಾಂ
ಸಮೀಕ್ಷ್ಯ ಕುಬ್ಜಾಂ ಭರತಸ್ಯ ಮಾತಾ ।
ಶನೈಃ ಸಮಾಶ್ವಾಸಯದಾರ್ತರೂಪಾಂ
ಕ್ರೌಂಚೀಂ ವಿಲಗ್ನಾಮಿವ ವೀಕ್ಷಮಾಣಾಮ್ ॥

ಅನುವಾದ

ಶತ್ರುಘ್ನನು ಅಪ್ಪಳಿಸಿ ಎಳೆದಾಡುತ್ತಿರುವ ಮಂಥರೆಯು ಆರ್ತಳಾಗಿ ನಿಶ್ಚೇಷ್ಟಿತಳಾದ ಆಕೆಯನ್ನು ನೋಡಿ ಕೈಕೇಯಿಯು ನಿಧಾನವಾಗಿ ಆಕೆಗೆ ಆಶ್ವಾಸನೆಯನ್ನು ಕೊಡುತ್ತಾ, ಎಚ್ಚರಿಸತೊಡಗಿದಳು. ಆಗ ಕುಬ್ಜೆಯು ಪಂಜರದೊಳಗೆ ಬಂಧಿತವಾದ ಕ್ರೌಂಚಪಕ್ಷಿಯಂತೆ ಕಾತರಳಾಗಿ ಆಕೆಯನ್ನು ನೋಡುತ್ತಾ ಇದ್ದಳು.॥26॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತೆಂಟನೆಯ ಸರ್ಗ ಪೂರ್ಣವಾಯಿತು.॥78॥