०७७ भरत-शत्रुघ्नविलापः

वाचनम्
ಭಾಗಸೂಚನಾ

ಭರತನು ತಂದೆಯ ಶ್ರಾದ್ಧಕರ್ಮದಲ್ಲಿ ಬ್ರಾಹ್ಮಣರಿಗೆ ಧನ-ಕನಕ ವಸ್ತುಗಳನ್ನು ದಾನ ಮಾಡಿದುದು, ಹದಿಮೂರನೆಯ ದಿವಸ ಅಸ್ಥಿಸಂಚಯನದ ಕರ್ಮವನ್ನು ಮಾಡಲು ಹೋದ ಭರತ-ಶತ್ರುಘ್ನರು ಚಿತಾಭೂಮಿಯಲ್ಲಿ ವಿಲಪಿಸಿದುದು, ವಸಿಷ್ಠರು ಮತ್ತು ಮಂತ್ರಿಗಳೂ ಸಮಾಧಾನಗೊಳಿಸಿದುದು

ಮೂಲಮ್ - 1

ತತೋ ದಶಾಹೇಽತಿಗತೇ ಕೃತಶೌಚೋ ನೃಪಾತ್ಮಜಃ ।
ದ್ವಾದಶೇಽಹನಿ ಸಂಪ್ರಾಪ್ತೇ ಶ್ರಾದ್ಧ ಕರ್ಮಾಣ್ಯಕಾರಯತ್ ॥

ಅನುವಾದ

ಹತ್ತು ದಿನಗಳು ಕಳೆದ ಬಳಿಕ ಹನ್ನೊಂದನೆಯ ದಿನ ಭರತನು ಸೂತಕವನ್ನು ಕಳೆದುಕೊಂಡು ಹನ್ನೆರಡನೆಯ ದಿವಸ ಸಪಿಂಡೀಕರಣ ಶ್ರಾದ್ಧಕರ್ಮವನ್ನು ಯಥಾವಿಧಿಯಾಗಿ ಮಾಡಿದನು.॥1॥

ಮೂಲಮ್ - 2

ಬ್ರಹ್ಮಣೇಭ್ಯೋ ಧನಂ ರತ್ನಂ ದದಾವನ್ನಂ ಚಪುಷ್ಕಲಮ್ ।
ವಾಸಾಂಸಿ ಚ ಮಹಾರ್ಹಾಣಿ ರತ್ನಾನಿ ವಿವಿಧಾನಿ ಚ ।
ವಾಸ್ತಿಕಂ ಬಹು ಶುಕ್ಲಂ ಚ ಗಾಶ್ಚಾಪಿ ಬಹುಶಸ್ತದಾ ॥

ಅನುವಾದ

ಅದರಲ್ಲಿ ಭರತನು ಬ್ರಾಹ್ಮಣರಿಗೆ ಧನ, ರತ್ನ, ಸಾಕಷ್ಟು ಅನ್ನ, ಅಮೂಲ್ಯವಸ್ತ್ರಗಳು, ನಾನಾ ರೀತಿಯ ರತ್ನಗಳನ್ನು ಆಡುಗಳನ್ನು, ಹೇರಳವಾದ ಬೆಳ್ಳಿಯನ್ನು, ಅನೇಕ ಗೋವುಗಳನ್ನು ದಾನ ಮಾಡಿದನು.॥2॥

ಮೂಲಮ್ - 3

ದಾಸೀರ್ದಾಸಾಂಶ್ಚ ಯಾನಾನಿ ವೇಶ್ಮಾನಿ ಸುಮಹಾಂತಿ ಚ ।
ಬ್ರಹ್ಮಣೇಭ್ಯೋ ದದೌ ಪುತ್ರೋ ರಾಜ್ಞಸ್ತಸ್ಯಯೌರ್ಧ್ವದೇಹಿಕಮ್ ॥

ಅನುವಾದ

ರಾಜಪುತ್ರ ಭರತನು ರಾಜನ ಪಾರಲೌಕಿಕ ಹಿತಕ್ಕಾಗಿ ಅನೇಕ ದಾಸ, ದಾಸಿಯರನ್ನು, ವಾಹನಗಳನ್ನು, ದೊಡ್ಡ-ದೊಡ್ಡ ಮನೆಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು.॥3॥

ಮೂಲಮ್ - 4

ತತಃ ಪ್ರಭಾತಸಮಯೇ ದಿವಸೇ ಚ ತ್ರಯೋದಶೇ ।
ವಿಲಲಾಪ ಮಹಾಬಾಹುರ್ಭರತಃ ಶೋಕಮೂರ್ಛಿತಃ ॥

ಅನುವಾದ

ಅನಂತರ ಹದಿಮೂರನೆಯ ದಿವಸ ಪ್ರಾತಃಕಾಲ ಮಹಾಬಾಹು ಭರತನು ಶೋಕದಿಂದ ಮೂರ್ಛಿತನಾಗಿ ವಿಲಾಪ ಮಾಡತೊಡಗಿದನು.॥4॥

ಮೂಲಮ್ - 5

ಶಬ್ದಾಪಿಹಿತಕಂಠಶ್ಚ ಶೋಧನಾರ್ಥಮುಪಾಗತಃ ।
ಚಿತಾಮೂಲೇ ಪಿತುರ್ವಾಕ್ಯಮಿದಮಾಹಸುದುಃಖಿತಃ ॥

ಮೂಲಮ್ - 6

ತಾತ ಯಸ್ಮಿನ್ನಿಸೃಷ್ಟೋಽಹಂ ತ್ವಯಾ ಭ್ರಾತರಿ ರಾಘವೇ ।
ತಸ್ಮಿನ್ವನಂ ಪ್ರವ್ರಜಿತೇ ಶೂನ್ಯೇ ತ್ಯಕ್ತೋಽಸ್ಮ್ಯಹಂ ತ್ವಯಾ ॥

ಅನುವಾದ

ಆಗ ಅಳುವುದರಿಂದ ಅವನ ಗಂಟಲು ಕಟ್ಟಿಹೋಗಿತ್ತು, ಅವನು ತಂದೆಯ ಚಿತಾಸ್ಥಾನಕ್ಕೆ ಅಸ್ಥಿ ಸಂಚಯನಕ್ಕಾಗಿ ಬಂದಿದ್ದನು ಹಾಗೂ ಅತ್ಯಂತ ದುಃಖಿತನಾಗಿ ಹೀಗೆ ಹೇಳಿದನು-ಅಪ್ಪಾ! ನೀವು ನನ್ನನ್ನು ಅಣ್ಣನಾದ ಶ್ರೀರಘುನಾಥನ ಕೈಗೆ ಒಪ್ಪಿಸಿದ್ದೀರಿ, ಅವನು ಕಾಡಿಗೆ ಹೋದದ್ದರಿಂದ ನೀವು ನನ್ನನ್ನು ಬರಿದಾಗಿಸಿಯೇ ಬಿಟ್ಟುಬಿಟ್ಟಿರಿ. (ಈಗ ನನಗೆ ಯಾವ ಆಸರೆಯೂ ಇಲ್ಲ.॥5-6॥

ಮೂಲಮ್ - 7

ಯಸ್ಯಾ ಗತಿರನಾಥಾಯಾಃ ಪುತ್ರಃ ಪ್ರವ್ರಾಜಿತೋವನಮ್ ।
ತಾಮಂಬಾಂ ತಾತ ಕೌಸಲ್ಯಾಂ ತ್ಯಕ್ತ್ವಾ ತ್ವಂ ಕ್ವಗತೋ ನೃಪ ॥

ಅನುವಾದ

ಅಪ್ಪಾ! ಅನಾಥಳಾದ ಕೌಸಲ್ಯೆಯ ಏಕಮಾತ್ರ ಆಧಾರ ಪುತ್ರನನ್ನು ನೀವು ವನಕ್ಕೆ ಕಳಿಸಿದಿರಿ. ಆ ದೇವಿಯನ್ನು ಬಿಟ್ಟು ನೀವು ಎಲ್ಲಿಗೆ ಹೊರಟು ಹೋದಿರಿ.॥7॥

ಮೂಲಮ್ - 8

ದೃಷ್ಟ್ವಾ ಭಸ್ಮಾರುಣಂ ತಚ್ಛ ದಗ್ಧಾಸ್ಥಿ ಸ್ಥಾನಮಂಡಲಮ್ ।
ಪಿತುಃ ಶರೀರನಿರ್ವಾಣಂ ನಿಷ್ಟನನ್ ವಿಷಸಾದ ಹ ॥

ಅನುವಾದ

ತಂದೆಯ ಚಿತೆಯ ಸ್ಥಾನವು ಭಸ್ಮದಿಂದ ತುಂಬಿದ್ದು, ಅತ್ಯಂತ ದಾಹದ ಕಾರಣ ಕೆಂಪಾಗಿ ಕಂಡುಬರುತ್ತಿತ್ತು. ಅಲ್ಲಿ ತಂದೆಯ ಸುಟ್ಟ ಅಸ್ಥಿಗಳು ಚೆಲ್ಲಿಹೋಗಿದ್ದವು. ತಂದೆಯ ಶರೀರದ ನಿರ್ವಾಹ ಸ್ಥಾನವನ್ನು ನೋಡಿ ಭರತನು ಅತ್ಯಂತ ವಿಲಾಪ ಮಾಡುತ್ತಾ ಶೋಕದಲ್ಲಿ ಮುಳುಗಿದನು.॥8॥

ಮೂಲಮ್ - 9

ಸ ತು ದೃಷ್ಟ್ವಾ ರುದನ್ ದೀನಃ ಪಪಾತ ಧರಣೀತಲೇ ।
ಉತ್ಥಾಪ್ಯಮಾನಃ ಶಕ್ರಸ್ಯ ಯಂತ್ರಧ್ವಜ ಇವೋಚ್ಛ್ರಿತಃ ॥

ಅನುವಾದ

ಆ ಸ್ಥಾನವನ್ನು ನೋಡುತ್ತಲೇ ದೀನಭಾವದಿಂದ ಅಳುತ್ತಾ ಇಂದ್ರನ ಯಂತ್ರಬದ್ಧ ಎತ್ತರವಾದ ಧ್ವಜವು ನಿಲ್ಲಿಸುವಾಗ ಜಾರಿ ಕೆಳಗೆ ಬೀಳುವಂತೆ ನೆಲಕ್ಕೆ ಕುಸಿದು ಬಿದ್ದನು.॥9॥

ಮೂಲಮ್ - 10

ಅಭಿಪೇತುಸ್ತತಃ ಸರ್ವೇ ತಸ್ಯಾಮಾತ್ಯಾಃ ಶುಚಿವ್ರತಮ್ ।
ಅಂತಕಾಲೇ ನಿಪತಿತಂಯಯಾತಿ ಮೃಷಯೋ ಯಥಾ ॥

ಅನುವಾದ

ಪುಣ್ಯವು ಮುಗಿದಾಗ ಸ್ವರ್ಗದಿಂದ ಪತನಗೊಂಡ ರಾಜಾ ಯಯಾತಿಯ ಬಳಿಗೆ ಅಷ್ಟಕ ಆದಿ ರಾಜರ್ಷಿಗಳು ಬಂದಿರುವಂತೆ, ಪವಿತ್ರ ವ್ರತವುಳ್ಳ ಭರತನ ಬಳಿಗೆ ಅವನ ಎಲ್ಲ ಮಂತ್ರಿಗಳು ಬಂದು ತಲುಪಿದರು.॥10॥

ಮೂಲಮ್ - 11

ಶತ್ರುಘ್ನಶ್ಚಾಪಿ ಭರತಂ ದೃಷ್ಟ್ವಾ ಶೋಕಪರಿಪ್ಲುತಮ್ ।
ವಿಸಂಜ್ಞೋ ನ್ಯಪತದ್ ಭೂಮೌ ಭೂಮಿಪಾಲಮನುಸ್ಮರನ್ ॥

ಅನುವಾದ

ಭರತನು ಶೋಕದಲ್ಲಿ ಮುಳುಗಿರುವುದನ್ನು ನೋಡಿ ಶತ್ರುಘ್ನನೂ ತಂದೆ ಮಹಾರಾಜರನ್ನು ಪದೇ-ಪದೇ ನೆನೆಯುತ್ತಾ ಎಚ್ಚರ ತಪ್ಪಿ ನೆಲಕ್ಕೆ ಕುಸಿದನು.॥11॥

ಮೂಲಮ್ - 12

ಉನ್ಮತ್ತ ಇವ ನಿಶ್ಚಿತ್ತೋ ವಿಲಲಾಪ ಸುದುಃಖಿತಃ ।
ಸ್ಮೃತ್ವಾ ಪಿತುರ್ಗುಣಾಂಗಾನಿ ತಾನಿ ತಾನಿ ತದಾ ತದಾ ॥

ಅನುವಾದ

ಅವನು ತಂದೆಯ ಲಾಲನೆ-ಪಾಲನೆಯನ್ನು ನೆನೆದು-ನೆನೆದು ಅತ್ಯಂತ ದುಃಖಿತನಾಗಿ ಉನ್ಮತ್ತನಂತೆ ನಿಶ್ಚೇಷ್ಟಿತನಂತಾಗಿ ವಿಲಪಿಸುತ್ತಿದ್ದನು.॥12॥

ಮೂಲಮ್ - 13

ಮಂಥರಾಪ್ರಭವಸ್ತೀವ್ರ ಕೈಕೇಯೀಗ್ರಾಹಸಂಕುಲಃ ।
ವರದಾನಮಯೋಽಕ್ಷೋಭ್ಯೋಽಮಜ್ಜಯಚ್ಛೋಕಸಾಗರಃ ॥

ಅನುವಾದ

ಅಯ್ಯೋ! ಮಂಥರೆಯಿಂದ ಯಾವುದು ಪ್ರಕಟವಾಯಿತೋ, ಕೈಕೆಯಿರೂಪಿ ಮೊಸಳೆಯಿಂದ ವ್ಯಾಪ್ತವಾದ, ಯಾವ ರೀತಿಯಿಂದಲೂ ಅಳಿಸಲಾಗದ, ಆ ವರದಾನರೂಪೀ ಉಗ್ರಶೋಕ ಸಮುದ್ರದಲ್ಲಿ ನಾವೆಲ್ಲರೂ ಮುಳುಗಿಹೋಗಿದ್ದೇವೆ.॥13॥

ಮೂಲಮ್ - 14

ಸುಕುಮಾರಂ ಚ ಬಾಲಂ ಚ ಸತತಂಲಾಲಿತಂ ತ್ವಯಾ ।
ಕ್ವ ತಾತ ಭರತಂ ಹಿತ್ವಾ ವಿಲಪಂತಂಗತೋ ಭವಾನ್ ॥

ಅನುವಾದ

ಅಪ್ಪಾ! ನೀವು ಸದಾ ಮುದ್ದಿಸುತ್ತಿದ್ದ, ಸುಕುಮಾರ, ಬಾಲಕ ನಾಗಿದ್ದು, ಅಳುತ್ತಾ ಇರುವ ಭರತನನ್ನು ಬಿಟ್ಟು ನೀವು ಎಲ್ಲಿಗೆ ಹೊರಟು ಹೋದಿರಿ.॥14॥

ಮೂಲಮ್ - 15

ನನು ಭೋಜ್ಯೇಷು ಪಾನೇಷು ವಸ್ತ್ರೇಷ್ವಾಭರಣೇಷು ಚ ।
ಪ್ರವಾರಯತಿ ಸರ್ವಾನ್ ನಸ್ತನ್ನಃ ಕೋಽದ್ಯಃ ಕರಿಷ್ಯತಿ ॥

ಅನುವಾದ

ಭೋಜನ, ಪಾನೀಯ, ವಸ್ತ್ರ, ಆಭೂಷಣ ಇವೆಲ್ಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿಸಿ ಹಿಂದೆ ನಮ್ಮೆಲ್ಲರಿಗೆ ತನ್ನ ರುಚಿಗನುಸಾರ ಪಡೆಯಿರಿ ಎಂದು ಹೇಳುತ್ತಾ ಇರುತ್ತಿದ್ದಿರಿ. ಈಗ ಯಾರು ನಮಗಾಗಿ ಇಂತಹ ವ್ಯವಸ್ಥೆ ಮಾಡುವರು.॥15॥

ಮೂಲಮ್ - 16

ಅವದಾರಣಕಾಲೇ ತು ಪೃಥಿವೀ ನಾವದೀರ್ಯತೇ ।
ವಿಹೀನಾಯಾ ತ್ವಯಾ ರಾಜ್ಞಾ ಧರ್ಮಜ್ಞೇನ ಮಹಾತ್ಮನಾ ॥

ಅನುವಾದ

ನಿಮ್ಮಂತಹ ಧರ್ಮಜ್ಞ ಮಹಾತ್ಮಾ ರಾಜನಿಂದ ರಹಿತವಾದ ಈ ಭೂಮಿಯು ಇಬ್ಭಾಗವಾಗಬೇಕು. ಇಂತಹ ಬಿರಿಯುವ ಸಂದರ್ಭದಲ್ಲಿಯೂ ಇದು ಇಬ್ಭಾಗವಾಗದಿರುವುದು ಆಶ್ಚರ್ಯದ ಸಂಗತಿಯಾಗಿದೆ.॥16॥

ಮೂಲಮ್ - 17

ಪಿತರಿ ಸ್ವರ್ಗಮಾಪನ್ನೇ ರಾಮೇ ಚಾರಣ್ಯಮಾಶ್ರಿತೇ ।
ಕಿಂ ಮೇ ಜೀವಿತಸಾಮರ್ಥ್ಯಂ ಪ್ರವೇಕ್ಷ್ಯಾಮಿ ಹುತಾಶನಮ್ ॥

ಅನುವಾದ

ತಂದೆಯವರು ಸ್ವರ್ಗವಾಸಿಗಳಾದರು, ಶ್ರೀರಾಮನು ವನವಾಸಿಯಾದನು. ಈಗ ನನ್ನಲ್ಲಿ ಬದುಕುಳಿಯುವ ಶಕ್ತಿ ಏನಿದೆ? ಈಗಲಾದರೋ ನಾನು ಅಗ್ನಿಯಲ್ಲೇ ಪ್ರವೇಶಿಸುವೆನು.॥17॥

ಮೂಲಮ್ - 18

ಹೀನೋ ಭ್ರಾತ್ರಾ ಚ ಪಿತ್ರಾ ಚ ಶೂನ್ಯಾಮಿಕ್ಷ್ವಾಕುಪಾಲಿತಾಮ್ ।
ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ಪ್ರವೇಕ್ಷ್ಯಾಮಿ ತಪೋವನಮ್ ॥

ಅನುವಾದ

ಅಣ್ಣ ಮತ್ತು ತಂದೆಯನ್ನು ಕಳಕೊಂಡ ನಾನು ಇಕ್ಷ್ವಾಕುವಂಶೀ ರಾಜರು ಆಳಿದ ಈ ಬರಿದಾದ ಅಯೋಧ್ಯೆಯನ್ನು ಪ್ರವೇಶಿಸುವುದಿಲ್ಲ; ತಪೋವನಕ್ಕೆ ಹೋರಟುಹೋಗುವೆನು.॥18॥

ಮೂಲಮ್ - 19

ತಯೋರ್ವಿಲಪಿತಂ ಶ್ರುತ್ವಾ ವ್ಯಸನಂ ಚಾಪ್ಯವೇಕ್ಷ್ಯತತ್ ।
ಭೃಶಮಾರ್ತತರಾ ಭೂಯಃ ಸರ್ವ ಏವಾನುಗಾಮಿನಃ ॥

ಅನುವಾದ

ಅವರಿಬ್ಬರ ವಿಲಾಪವನ್ನು ಕೇಳಿ, ಆ ಸಂಕಟವನ್ನು ನೋಡಿ ಸಮಸ್ತ ಅನುಚರ ಜನರು ಪುನಃ ಅತ್ಯಂತ ಶೋಕದಿಂದ ವ್ಯಾಕುಲರಾದರು.॥19॥

ಮೂಲಮ್ - 20

ತತೋ ವಿಷಣ್ಣೌ ಶ್ರಾಂತೌ ಚ ಶತ್ರುಘ್ನಭರತಾವುಭೌ ।
ಧರಾಯಾಂ ಸ್ಮ ವ್ಯಚೇಷ್ಟೇತಾಂ ಭಗ್ನಶೃಂಗಾವಿವರ್ಷಭೌ ॥

ಅನುವಾದ

ಆಗ ಭರತ-ಶತ್ರುಘ್ನರಿಬ್ಬರೂ ಸಹೋದರರು ವಿಷಾದಗ್ರಸ್ತ ಮತ್ತು ಬಳಲಿದವರಾಗಿ ಕೊಂಬುಗಳು ತುಂಡಾದ ಎತ್ತುಗಳಂತೆ ನೆಲದಲ್ಲಿ ಹೊರಳಾಡುತ್ತಿದ್ದರು.॥20॥

ಮೂಲಮ್ - 21

ತತಃ ಪ್ರಕೃತಿಮಾನ್ವೈದ್ಯಃ ಪಿತುರೇಷಾಂ ಪುರೋಹಿತಃ ।
ವಸಿಷ್ಠೋ ಭರತಂ ವಾಕ್ಯಮುತ್ಥಾಪ್ಯ ತಮುವಾಚ ಹ ॥

ಅನುವಾದ

ಅನಂತರ ದೈವೀ ಪ್ರಕೃತಿಯಿಂದ ಯುಕ್ತರೂ, ಸರ್ವಜ್ಞರೂ, ದಶರಥನಿಗೆ ಪುರೋಹಿತರೂ ಆದ ವಸಿಷ್ಠರು ಭರತನನ್ನು ಎಬ್ಬಿಸಿ ಅವನಲ್ಲಿ ಈ ಪ್ರಕಾರ ಹೇಳಿದರು.॥21॥

ಮೂಲಮ್ - 22

ತ್ರಯೋಽದಶೋಯಂ ದಿವಸಃ ಪಿತುರ್ವೃತ್ತಸ್ಯ ತೇ ವಿಭೋ ।
ಸಾವಶೇಷಾಸ್ಥಿನಿಚಯೇ ಕಿಮಿಹ ತ್ವಂ ವಿಲಂಬಸೇ ॥

ಅನುವಾದ

ಪ್ರಭುವೇ! ನಿನ್ನ ತಂದೆಯು ಮರಣಹೊಂದಿ ಇಂದಿಗೆ ಹದಿಮೂರು ದಿವಸಗಳಾದವು. ಈಗ ಅಸ್ಥಿಸಂಚಯನದ ಉಳಿದ ಕಾರ್ಯವನ್ನು ಮಾಡುವುದಕ್ಕೆ ಇಲ್ಲಿ ಏಕೆ ತಡಮಾಡುತ್ತಿರುವೆ.॥22॥

ಮೂಲಮ್ - 23

ತ್ರೀಣಿ ದ್ವಂದ್ವಾನಿ ಭೂತೇಷು ಪ್ರವೃತ್ತಾನ್ಯವಿಶೇಷತಃ ।
ತೇಷು ಚಾಪರಿಹಾರ್ಯೇಷು ನೈವಂ ಭವಿತುಮರ್ಹಸಿ ॥

ಅನುವಾದ

ಹಸಿವು-ಬಾಯಾರಿಕೆ, ಶೋಕ-ಮೋಹ, ಜರಾ-ಮೃತ್ಯು ಈ ಮೂರು ದ್ವಂದ್ವಗಳು ಎಲ್ಲ ಪ್ರಾಣಿಗಳಿಗೆ ಸಮಾನವಾಗಿ ಇವೆ. ಇವನ್ನು ತಡೆಯುವುದು ಸರ್ವಥಾ ಅಸಂಭವವಾಗಿದೆ. ಇಂತಹ ಸ್ಥಿತಿಯಲ್ಲಿ ನೀನು ಈ ರೀತಿ ಶೋಕಾಕುಲವಾಗಬಾರದು.॥23॥

ಮೂಲಮ್ - 24

ಸುಮಂತ್ರಶ್ಚಾಪಿ ಶತ್ರುಘ್ನಮುತ್ಥಾಪ್ಯಾಭಿಪ್ರಸಾದ್ಯ ಚ ।
ಶ್ರಾವಯಾಮಾಸ ತತ್ತ್ವಜ್ಞಃ ಸರ್ವಭೂತಭವಾಭವೌ ॥

ಅನುವಾದ

ತತ್ತ್ವಜ್ಞ ಸುಮಂತ್ರನೂ ಭರತನನ್ನು ಹಿಡಿದೆತ್ತಿ ಅವನ ಚಿತ್ತವನ್ನು ಶಾಂತಗೊಳಿಸಿದನು ಹಾಗೂ ಸಮಸ್ತ ಪ್ರಾಣಿಗಳ ಜನ್ಮ-ಮರಣದ ಅನಿವಾರ್ಯತೆಯ ಉಪದೇಶ ಮಾಡಿದನು.॥24॥

ಮೂಲಮ್ - 25

ಉತ್ಥಿತೌ ತೌ ನರವ್ಯಾಘ್ರೌ ಪ್ರಕಾಶೇತೇ ಯಶಸ್ವಿನೌ ।
ವರ್ಷಾತಪಪರಿಗ್ಲಾನೌ ಪೃಥಗಿಂದ್ರಧ್ವಜಾವಿವ ॥

ಅನುವಾದ

ಆಗ ಎದ್ದಿರುವ ಆ ಇಬ್ಬರು ಯಶಸ್ವೀ ನರಶ್ರೇಷ್ಠರು ಬಿಸಿಲು-ಮಳೆಯಿಂದ ಮಲಿನಗೊಂಡ ಎರಡು ಬೇರೆ-ಬೇರೆ ಇಂದ್ರ ಧ್ವಜರಂತೆ ಪ್ರಕಾಶಿಸುತ್ತಿದ್ದರು.॥25॥

ಮೂಲಮ್ - 26

ಅಶ್ರೂಣಿ ಪರಿಮೃದ್ಗಂತೌ ರಕ್ತಾಕ್ಷೌ ದೀನಭಾಷಿಣೌ ।
ಅಮಾತ್ಯಾಸ್ತ್ವರಯಂತಿ ಸ್ಮ ತನಯೌ ಚಾಪರಾಃ ಕ್ರಿಯಾಃ ॥

ಅನುವಾದ

ಅವರು ಕಂಬನಿ ಒರೆಸಿಕೊಳ್ಳುತ್ತಾ ದೀನತೆಯಿಂದ ಮಾತನಾಡುತ್ತಿದ್ದರು. ಅವರಿಬ್ಬರ ಕಣ್ಣುಗಳು ಕೆಂಪಗಾಗಿದ್ದವು. ಮಂತ್ರಿಗಳು ಅವರಿಬ್ಬರೂ ರಾಜಕುಮಾರರನ್ನು ಬೇರೆ-ಬೇರೆ ಕ್ರಿಯೆಗಳನ್ನು ಬೇಗ ಮಾಡುವಂತೆ ಪ್ರೇರೇಪಿಸುತ್ತಿದ್ದರು.॥26॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು ॥77॥