०७५ कौसल्या-भरतसंवादः

वाचनम्
ಭಾಗಸೂಚನಾ

ಕೌಸಲ್ಯೆಯ ಮುಂದೆ ಭರತನ ಶಪಥ

ಮೂಲಮ್ - 1

ದೀರ್ಘಕಾಲಾತ್ಸಮುತ್ಥಾಯ ಸಂಜ್ಞಾಂ ಲಬ್ಧ್ವಾ ಸ ವೀರ್ಯವಾನ್ ।
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ದೀನಾಮುದ್ವೀಕ್ಷ್ಯ ಮಾತರಮ್ ॥
ಸೋಽಮಾತ್ಯಮಧ್ಯೇ ಭರತೋ ಜನನೀಮಭ್ಯಕುತ್ಸಯತ್ ।

ಅನುವಾದ

ಬಹಳ ಹೊತ್ತಿನ ಬಳಿಕ ಎಚ್ಚರಗೊಂಡಾಗ ಪರಾಕ್ರಮಿ ಭರತನು ಎದ್ದು, (ಆಶಾಭಂಗದಿಂದ) ಅತ್ಯಂತ ದೀನಳಾಗಿದ್ದು ಕಂಬನಿತುಂಬಿ ಕುಳಿತಿದ್ದ ತಾಯಿಯ ಕಡೆಗೆ ನೋಡಿ ಮಂತ್ರಿಗಳ ಮಧ್ಯದಲ್ಲಿ ಆಕೆಯನ್ನು ನಿಂದಿಸುತ್ತಾ ನುಡಿದನು.॥1॥

ಮೂಲಮ್ - 2

ರಾಜ್ಯಂ ನ ಕಾಮಯೇ ಜಾತು ಮಂತ್ರಯೇ ನಾಪಿಮಾತರಮ್ ॥
ಅಭಿಷೇಕಂ ನ ಜಾನಾಮಿ ಯೋಽಭೂದ್ರಾಜ್ಞಾ ಸಮೀಕ್ಷಿತಃ ।

ಮೂಲಮ್ - 3

ವಿಪ್ರಕೃಷ್ಟೇ ಹ್ಯಹಂ ದೇಶೇ ಶತ್ರುಘ್ನಸಹಿತೋಽಭವಮ್ ॥

ಅನುವಾದ

ಮಂತ್ರಿಗಳಿರಾ! ನಾನು ರಾಜ್ಯವನ್ನು ಬಯಸುವುದಿಲ್ಲ ಮತ್ತು ನಾನು ಎಂದೂ ತಾಯಿಯಲ್ಲಿ ಇದಕ್ಕಾಗಿ ಮಾತನಾಡಲೇ ಇಲ್ಲ. ಮಹಾರಾಜರು ನಿಶ್ಚಯಿಸಿದ ಪಟ್ಟಾಭಿಷೇಕದ ವಿಷಯವೂ ನನಗೆ ತಿಳಿಯದು; ಏಕೆಂದರೆ ಆಗ ನಾನು ಶತ್ರುಘ್ನನೊಂದಿಗೆ ದೂರದೇಶದಲ್ಲಿದ್ದೆ.॥2-3॥

ಮೂಲಮ್ - 4

ವನವಾಸಂ ನ ಜಾನಾಮಿರಾಮಸ್ಯಾಹಂ ಮಹಾತ್ಮನಃ ।
ವಿವಾಸನಂ ಚ ಸೌಮಿತ್ರೇಃ ಸೀತಾಯಾಶ್ಚ ಯಥಾಭವತ್ ॥

ಅನುವಾದ

ಮಹಾತ್ಮಾ ಶ್ರೀರಾಮನ ವನವಾಸ ಮತ್ತು ಸೀತೆ, ಲಕ್ಷ್ಮಣರು ಹೊರಟುಹೋದುದೂ ಯಾವಾಗ ಮತ್ತು ಹೇಗಾಯಿತು? ಎಂಬುದೂ ನನಗೆ ತಿಳಿಯದು.॥4॥

ಮೂಲಮ್ - 5

ತಥೈವ ಕ್ರೋಶತಸ್ತಸ್ಯ ಭರತಸ್ಯ ಮಹಾತ್ಮನಃ ।
ಕೌಸಲ್ಯಾಂ ಶಬ್ದಮಾಜ್ಞಾಯ ಸುಮಿತ್ರಾಂ ಚೇದಮಬ್ರವೀತ್ ॥

ಅನುವಾದ

ಮಹಾತ್ಮಾ ಭರತನು ಈ ಪ್ರಕಾರ ತನ್ನ ತಾಯಿಯನ್ನು ನಿಂದಿಸುತ್ತಿರುವಾಗ ಅವನ ಧ್ವನಿಯನ್ನು ಗುರುತಿಸಿ ಕೌಸಲ್ಯೆಯು ಸುಮಿತ್ರೆಯಲ್ಲಿ ಹೀಗೆ ಹೇಳಿದಳು.॥5॥

ಮೂಲಮ್ - 6

ಆಗತಃ ಕ್ರೂರಕಾರ್ಯಾಯಾಃ ಕೈಕೇಯ್ಯಾ ಭರತಃ ಸುತಃ ।
ತಮಹಂ ದ್ರಷ್ಟುಮಿಚ್ಛಾಮಿ ಭರತಂ ದೀರ್ಘದರ್ಶಿನಮ್ ॥

ಅನುವಾದ

ಕ್ರೂರಕರ್ಮ ಮಾಡುವ ಕೈಕೇಯಿಯ ಪುತ್ರ ಭರತನು ಬಂದಿರುವನು. ಅವನು ಬಹಳ ದೂರದರ್ಶಿಯಾಗಿದ್ದಾನೆ, ಆದ್ದರಿಂದ ಅವನನ್ನು ನೋಡಲು ಬಯಸುತ್ತೇನೆ.॥6॥

ಮೂಲಮ್ - 7

ಏವಮುಕ್ತ್ವಾ ಸುಮಿತ್ರಾಂತಾಂ ವಿವರ್ಣಾವದನಾ ಕೃಶಾ ।
ಪ್ರತಸ್ಥೇ ಭರತೋ ಯತ್ರ ವೇಪಮಾನಾ ವಿಚೇತನಾ ॥

ಅನುವಾದ

ಸುಮಿತ್ರೆಯ ಬಳಿ ಹೀಗೆ ಹೇಳಿ ಬಾಡಿದ ಮುಖವುಳ್ಳ ದುರ್ಬಲಳಾದ ಕೌಸಲ್ಯೆಯು ಭರತನು ಇರುವಲ್ಲಿಗೆ ನಡುಗುತ್ತಾ ನಡೆದಳು.॥7॥

ಮೂಲಮ್ - 8

ಸ ತು ರಾಜಾತ್ಮಜಶ್ಚಾಪಿ ಶತ್ರುಘ್ನಸಹಿತಸ್ತದಾ ।
ಪ್ರತಸ್ಥೇ ಭರತೋ ಯೇನಕೌಸಲ್ಯಾಯಾ ನಿವೇಶನಮ್ ॥

ಅನುವಾದ

ಅದೇ ಸಮಯದಲ್ಲಿ ಕೌಸಲ್ಯೆಯ ಅಂತಃಪುರಕ್ಕೆ ಹೋಗಿ-ಬರುವ ದಾರಿಯಿಂದಲೇ ರಾಜಕುಮಾರ ಭರತನು ಶತ್ರುಘ್ನನೊಂದಿಗೆ ನಡೆದು ಬರುತ್ತಿದ್ದನು.॥8॥

ಮೂಲಮ್ - 9

ತತಃ ಶತ್ರುಘ್ನಭರತೌ ಕೌಸಲ್ಯಾಂ ಪ್ರೇಕ್ಷ್ಯ ದುಃಖಿತೌ ।
ಪರ್ಯಷ್ವಜೇತಾಂ ದುಃಖಾರ್ತಾಂ ಪತಿತಾಂ ನಷ್ಟಚೇತನಾಮ್ ॥

ಮೂಲಮ್ - 10

ರುದಂತೌ ರುದತೀ ದುಃಖಾತ್ಸಮೇತ್ಯಾರ್ಯಾ ಮನಸ್ವಿನೀ ।
ಭರತಂ ಪ್ರತ್ಯುವಾಚೇದಂ ಕೌಸಲ್ಯಾ ಭೃಶದುಃಖಿತಾ ॥

ಅನುವಾದ

ಅನಂತರ ಮಾತೆ ಕೌಸಲ್ಯೆಯು ದುಃಖದಿಂದ ವ್ಯಾಕುಲಳಾಗಿ, ಎಚ್ಚರದಪ್ಪಿದವಳಂತೆ ಬಿದ್ದಿರುವುದನ್ನು ಭರತ-ಶತ್ರುಘ್ನರು ದೂರದಿಂದಲೇ ನೋಡಿದರು. ಇದನ್ನು ನೋಡಿ ಅವರಿಗೆ ಬಹಳ ದುಃಖವಾಯಿತು, ಅವರು ಓಡುತ್ತಾ ಹೋಗಿ ಆಕೆಯ ಮಡಿಲನ್ನು ಸೇರಿ ಗಳಗಳನೆ ಅಳತೊಡಗಿದರು. ಆರ್ಯೆ ಮನಸ್ವಿನೀ ಕೌಸಲ್ಯೆಯೂ ದುಃಖದಿಂದ ಅಳುತ್ತಾ ಅವರನ್ನು ಎದೆಗಪ್ಪಿಕೊಂಡು ದುಃಖದಿಂದ ಭರತನಲ್ಲಿ ಹೇಳಿದಳು.॥9-10॥

ಮೂಲಮ್ - 11

ಇದಂ ತೇ ರಾಜ್ಯಕಾಮಸ್ಯ ರಾಜ್ಯಂ ಪ್ರಾಪ್ತಮಕಂಟಕಮ್ ।
ಸಂಪ್ರಾಪ್ತಂ ಬತ ಕೈಕೇಯ್ಯಾ ಶೀಘ್ರಂ ಕ್ರೂರೇಣ ಕರ್ಮಣಾ ॥

ಅನುವಾದ

ಮಗನೇ! ನೀನು ರಾಜ್ಯವನ್ನು ಬಯಸುತ್ತಿದ್ದೆಯಲ್ಲ? ನೋಡು, ಈ ನಿಷ್ಕಂಟಕ ರಾಜ್ಯ ನಿನಗೆ ದೊರಕಿದೆ. ಆದರೆ ಕೈಕೇಯಿಯು ಅವಸರದಿಂದಾಗಿ ಕ್ರೂರಕರ್ಮದ ಮೂಲಕ ಇದನ್ನು ಪಡೆದುದು ಖೇದದ ಸಂಗತಿಯಾಗಿದೆ.॥11॥

ಮೂಲಮ್ - 12

ಪ್ರಸ್ಥಾಪ್ಯ ಚೀರವಸನಂ ಪುತ್ರ ಮೇ ವನವಾಸಿನಮ್ ।
ಕೈಕೇಯೀ ಕಂ ಗುಣಂ ತತ್ರ ಪಶ್ಯತಿ ಕ್ರೂರದರ್ಶಿನೀ ॥

ಅನುವಾದ

ಕ್ರೂರದರ್ಶಿನಿಯಾದ ಕೈಕೇಯಿಯು ನನ್ನ ಮಗನಿಗೆ ನಾರುಮಡಿಯನ್ನು ತೊಡಿಸಿ ಕಾಡಿಗೆ ಕಳಿಸಿ, ಅವನನ್ನು ವನವಾಸಿಯಾಗಿಸುವುದರಿಂದ ಅವಳು ಯಾವ ಲಾಭವನ್ನು ನೋಡುತ್ತಿರುವಳೋ? ತಿಳಿಯದು.॥12॥

ಮೂಲಮ್ - 13

ಕ್ಷಿಪ್ರಂ ಮಾಮಪಿ ಕೈಕೇಯೀ ಪ್ರಸ್ಥಾಪಯಿತುಮರ್ಹತಿ ।
ಹಿರಣ್ಯನಾಭೋ ಯತ್ರಾಸ್ತೇ ಸುತೋ ಮೇ ಸುಮಹಾಯಶಾಃ ॥

ಅನುವಾದ

ಈಗ ಕೈಕೇಯಿಯು ನನ್ನನ್ನು ಬೇಗನೇ ಸುವರ್ಣಮಯ ನಾಭಿಯಿಂದ ಸುಶೋಭಿತ ಮಹಾಯಶಸ್ವೀ ನನ್ನ ಪುತ್ರ ಶ್ರೀರಾಮನಿರುವಲ್ಲಿಗೆ ಈಗ ಕಳಿಸಿಕೊಡಲಿ.॥13॥

ಮೂಲಮ್ - 14

ಅಥವಾ ಸ್ವಯಮೇವಾಹಂ ಸುಮಿತ್ರಾನುಚರಾ ಸುಖಮ್ ।
ಅಗ್ನಿಹೋತ್ರಂ ಪುರಸ್ಕೃತ್ಯ ಪ್ರಸ್ಥಾಸ್ಯೇ ಯತ್ರ ರಾಘವಃ ॥

ಅನುವಾದ

ಅಥವಾ ಸುಮಿತ್ರೆಯನ್ನು ಜೊತೆಗೆ ಕರೆದುಕೊಂಡು, ಅಗ್ನಿಹೋತ್ರವನ್ನು ಮುಂದಿರಿಸಿಕೊಂಡು ನಾನು ಸ್ವತಃ ಸುಖವಾಗಿ ಶ್ರೀರಾಮನು ವಾಸಿಸುವಲ್ಲಿಗೆ ಹೊರಟುಹೋಗುವೆನು.॥14॥

ಮೂಲಮ್ - 15

ಕಾಮಂ ವಾ ಸ್ವಯಮೇವಾದ್ಯ ತತ್ರ ಮಾಂ ನೇತುಮರ್ಹಸಿ ।
ಯತ್ರಾಸೌ ಪುರಷವ್ಯಾಘ್ರಸ್ತಪ್ಯತೇ ಮೇ ಸುತಸ್ತಪಃ ॥

ಅನುವಾದ

ಇಲ್ಲವೇ ನೀನು ಸ್ವತಃ ತನ್ನ ಇಚ್ಛೆಯಂತೆ ಈಗ ನನ್ನನ್ನು ನನ್ನ ಪುತ್ರ ಪುರುಷಸಿಂಹ ಶ್ರೀರಾಮನು ತಪಸ್ಸು ಮಾಡುವಲ್ಲಿಗೆ ಕಳಿಸಿಕೊಡು.॥15॥

ಮೂಲಮ್ - 16

ಇದಂ ಹಿ ತವ ವಿಸ್ತೀರ್ಣಂ ಧನಧಾನ್ಯಸಮಾಚಿತಮ್ ।
ಹಸ್ತ್ಯಶ್ವರಥಸಂಪೂರ್ಣಂ ರಾಜ್ಯಂ ನಿರ್ಯಾತಿತಂತಯಾ ॥

ಅನುವಾದ

ಧನ-ಧಾನ್ಯ ಸಂಪನ್ನ ಹಾಗೂ ಆನೆ, ಕುದುರೆ, ರಥಗಳಿಂದ ತುಂಬಿ-ತುಳುಕುತ್ತಿರುವ ಈ ವಿಸ್ತೃತ ರಾಜ್ಯವನ್ನು ಕೈಕೇಯಿಯು (ಶ್ರೀರಾಮನಿಂದ ಕಸಿದುಕೊಂಡು) ನಿನಗೆ ಕೊಡಿಸಿರುವಳು.॥16॥

ಮೂಲಮ್ - 17

ಇತ್ಯಾದಿಬಹುಭಿರ್ವಾಕ್ಯೈಃ ಕ್ರೂರೈಃ ಸಂಭರ್ತ್ಸಿತೋಽನಘಃ ।
ವಿವ್ಯಥೇ ಭರತೋಽತೀವ್ರ ವ್ರಣೇ ತುದ್ಯೇವ ಸೂಚಿನಾ ॥

ಅನುವಾದ

ಇಂತಹ ಅನೇಕ ಮಾತುಗಳನ್ನಾಡಿ ಕೌಸಲ್ಯೆಯು ನಿರಪರಾಧೀ ಭರತನನ್ನು ಹೀಯಾಳಿಸಿದಳು. ಆಗ ಅವನಿಗೆ ಯಾರೋ ಗಾಯಕ್ಕೆ ಸೂಜಿ ಚುಚ್ಚಿದಂತೆ ಬಹಳ ನೋವಾಯಿತು.॥17॥

ಮೂಲಮ್ - 18

ಪಪಾತ ಚರಣೌ ತಸ್ಯಾಸ್ತದಾ ಸಂಭ್ರಾಂತಚೇತನಃ ।
ವಿಲಪ್ಯ ಬಹುಧಾಸಂಜ್ಞೋ ಲಬ್ಧಸಂಜ್ಞಸ್ತದಾಭವತ್ ॥

ಅನುವಾದ

ಅವನು ಕೌಸಲ್ಯೆಯ ಚರಣದಲ್ಲಿ ಕುಸಿದುಬಿದ್ದನು. ಆಗ ಅವನು ಮನಸ್ಸಿನಲ್ಲಿ ಗಾಬರಿಗೊಂಡಿದ್ದನು. ಅವನು ಪದೇ-ಪದೇ ವಿಲಪಿಸುತ್ತಾ ಎಚ್ಚರ ತಪ್ಪಿದನು, ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಂಡನು.॥18॥

ಮೂಲಮ್ - 19

ಏವಂ ವಿಲಪಮಾನಾಂ ತಾಂ ಪ್ರಾಂಜಲಿರ್ಭರತಸ್ತದಾ ।
ಕೌಸಲ್ಯಾಂ ಪ್ರತ್ಯುವಾಚೇದಂಶೋಕೈರ್ಬಹುಭಿರಾವೃತಾಮ್ ॥

ಅನುವಾದ

ಆಗ ಭರತನು ಅನೇಕ ಪ್ರಕಾರದ ಶೋಕಗಳಿಂದ ಆವರಿಸಿದ, ವಿಲಾಪ ಮಾಡುತ್ತಿರುವ ಕೌಸಲ್ಯೆಯ ಬಳಿ ಕೈಮುಗಿದುಕೊಂಡು ಇಂತೆಂದನು.॥19॥

ಮೂಲಮ್ - 20

ಆರ್ಯೇ ಕಸ್ಮಾದಜಾನಂತ ಗರ್ಹಸೇ ಮಾಮಕಲ್ಮಷಮ್ ।
ವಿಪುಲಾಂ ಚ ಮಮ ಪ್ರೀತಿಂ ಸ್ಥಿತಾಂಜಾನಾಸಿ ರಾಘವೇ ॥

ಅನುವಾದ

ಆರ್ಯೆ! ಇಲ್ಲಿ ನಡೆದುದರ ಕುರಿತು ನನಗೆ ಖಂಡಿತವಾಗಿ ತಿಳಿದಿರಲಿಲ್ಲ. ನಾನು ಸರ್ವಥಾ ನಿರಪರಾಧಿಯಾಗಿದ್ದೇನೆ. ಹೀಗಿದ್ದರೂ ನೀವು ನನ್ನ ಮೇಲೆ ಏಕೆ ದೋಷಾರೋಪಣೆ ಮಾಡುತ್ತಿರುವಿರಿ? ಶ್ರೀರಘುನಾಥನಲ್ಲಿ ನನಗೆ ಎಷ್ಟು ಪ್ರೇಮವಿದೆ ಎಂಬುದನ್ನು ನೀವು ತಿಳಿದೇ ಇರುವಿರಿ.॥20॥

ಮೂಲಮ್ - 21

ಕೃತಶಾಸ್ತ್ರಾನುಗಾ ಬುದ್ಧಿರ್ಮಾ ಭೂತ್ತಸ್ಯ ಕದಾಚನ ।
ಸತ್ಯಸಂಧಃ ಸತಾಂ ಶ್ರೇಷ್ಠೋ ಯಸ್ಯಾ ರ್ಯೋಽನುಮತೇಗತಃ ॥

ಅನುವಾದ

ಯಾರ ಅನುಮತಿಯಿಂದ ಸತ್ಪುರುಷರಲ್ಲಿ ಶ್ರೇಷ್ಠ, ಸತ್ಯ ಪ್ರತಿಜ್ಞ, ಆರ್ಯ ಶ್ರೀರಾಮನು ಕಾಡಿಗೆ ಹೋಗಿರುವನೋ ಆ ಪಾಪಿಯ ಬುದ್ಧಿ ಎಂದೂ ಗುರುಗಳಿಂದ ಕಲಿತ ಶಾಸ್ತ್ರಗಳಲ್ಲಿ ಹೇಳಿದ ಮಾರ್ಗವನ್ನು ಅನುಸರಿಸದಿರಲಿ.॥21॥

ಮೂಲಮ್ - 22

ಪ್ರೇಷ್ಯಂ ಪಾಪೀಯಸಾಂ ಯಾತು ಸೂರ್ಯಂ ಚ ಪ್ರತಿಮೇಹತು ।
ಹಂತು ಪಾದೇನ ಗಾಃ ಸುಪ್ತಾ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಂತೆ ಅಣ್ಣನಾದ ಶ್ರೀರಾಮನಿಗೆ ವನಕ್ಕೆ ಹೋಗಬೇಕಾಯಿತೋ, ಅವನಿಗೆ ಅತ್ಯಂತ ಪಾಪಿಗಳ ಹೀನಜಾತಿಯ ಸೇವಕಳಾಗಲಿ. ಸೂರ್ಯನ ಕಡೆಗೆ ಮುಖಮಾಡಿ ಮೂತ್ರವಿಸರ್ಜಿಸಿದ ಮತ್ತು ಮಲಗಿರುವ ಗೋವನ್ನು ಕಾಲಿಂದ ಒದ್ದ ಪಾಪಕರ್ಮದ ದುಷ್ಪರಿಣಾಮಕ್ಕೆ ಗುರಿಯಾಗಲಿ.॥22॥

ಮೂಲಮ್ - 23

ಕಾರಯಿತ್ವಾ ಮಹತ್ಕರ್ಮ ಭರ್ತಾ ಭೃತ್ಯಮನರ್ಥಕಮ್ ।
ಅಧರ್ಮೋ ಯೋಽಸ್ಯ ಸೋಽಸ್ಯಾಸ್ತು ಯಸ್ಯಾರ್ಯೋಽನುಮತೇಗತಃ ॥

ಅನುವಾದ

ಯಾರ ಸಮ್ಮತಿಯಿಂದ ಅಣ್ಣ ಶ್ರೀರಾಮನು ಕಾಡಿಗೆ ಹೋದನೋ, ಅವನಿಗೆ ಸೇವಕರಿಂದ ತುಂಬಾ ಕೆಲಸ ಮಾಡಿಸಿಕೊಂಡು ಉಚಿತ ವೇತನವನ್ನು ಕೊಡದಿರುವವನಿಗೆ ಬರುವ ಪಾಪವು ತಟ್ಟಲಿ.॥23॥

ಮೂಲಮ್ - 24

ಪರಿಪಾಲಯಮಾನಸ್ಯ ರಾಜ್ಞೋ ಭೂತಾಮಿ ಪುತ್ರವತ್ ।
ತತಸ್ತು ದ್ರುಹ್ಯತಾಂ ಪಾಪಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರು ಹೇಳುವುದರಿಂದ ಆರ್ಯ ಶ್ರೀರಾಮನನ್ನು ಕಾಡಿಗೆ ಕಳಿಸಲಾಯಿತೋ, ಅವನಿಗೆ ಸಮಸ್ತ ಪ್ರಾಣಿಗಳನ್ನು ಪುತ್ರರಂತೆ ಪಾಲಿಸುವ ರಾಜನಲ್ಲಿ ದ್ರೋಹ ಮಾಡುವವನಿಗೆ ತಗಲುವ ಪಾಪವು ಬರಲಿ.॥24॥

ಮೂಲಮ್ - 25

ಬಲಿಷಡ್ಭಾಗಮುದ್ಧೃತ್ಯ ನೃಪಸ್ಯಾರಕ್ಷತುಃ ಪ್ರಜಾಃ ।
ಅಧರ್ಮೋ ಯೋಽಸ್ಯ ಸೋಽಸ್ಯಾಸ್ತು ಯಸ್ಯಾರ್ಯೋಽನುಮತೇಗತಃ ॥

ಅನುವಾದ

ಯಾರ ಅನುಮತಿಯಿಂದ ಆರ್ಯ ಶ್ರೀರಾಮನು ವನಕ್ಕೆ ಹೋಗಿರುವನೋ, ಅವನು ಪ್ರಜೆಯಿಂದ ಅವರ ಆರನೆಯ ಒಂದು ಭಾಗವನ್ನು ಪಡೆದು ಪ್ರಜೆಯನ್ನು ರಕ್ಷಿಸದ ರಾಜನಿಗೆ ದೊರೆಯುವ ಪಾಪಕ್ಕೆ ಭಾಗಿಯಾಗಲಿ.॥25॥

ಮೂಲಮ್ - 26

ಸಂಶ್ರುತ್ಯ ಚ ತಪಸ್ವಿಭ್ಯಃ ಸತ್ರೇ ವೈ ಯಜ್ಞದಕ್ಷಿಣಾಮ್ ।
ತಾಂ ಚಾಪಲತಾಂ ಪಾಪಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಿಂದ ಅಣ್ಣ ಶ್ರೀರಾಮನಿಗೆ ಅರಣ್ಯಕ್ಕೆ ಹೋಗಬೇಕಾಯಿತೋ, ಅವನಿಗೆ ಯಜ್ಞದಲ್ಲಿ ಕಷ್ಟಗಳನ್ನು ಸಹಿಸುವ ಋತ್ವಿಜರಿಗೆ ದಕ್ಷಿಣೆಕೊಡುವ ಪ್ರತಿಜ್ಞೆ ಮಾಡಿ ಕೊಡದಿರುವವರಿಗೆ ಬರುವ ಪಾಪವು ತಗುಲಲಿ.॥26॥

ಮೂಲಮ್ - 27

ಹಸ್ತ್ಯಶ್ವರಥಸಂಬಾಧೇ ಯುದ್ಧೇ ಶಸ್ತ್ರಸಮಾಕುಲೇ ।
ಮಾ ಸ್ಮ ಕಾರ್ಷೀತ್ಸತಾಂ ಧರ್ಮಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಆನೆ, ಕುದುರೆ, ರಥಗಳು ತುಂಬಿ ಹಾಗೂ ಅಸ್ತ್ರ-ಶಸ್ತ್ರಗಳ ವರ್ಷದಿಂದ ವ್ಯಾಪ್ತವಾದ ಸಂಗ್ರಾಮದಲ್ಲಿ ಸತ್ಪುರುಷರ ಧರ್ಮವನ್ನು ಪಾಲಿಸದ ಯೋಧನಿಗೆ ಬರುವ ಪಾಪವು - ಯಾರ ಸಮ್ಮತಿಯಿಂದ ಆರ್ಯ ಶ್ರೀರಾಮನನ್ನು ವನಕ್ಕೆ ಕಳಿಸಲಾಯಿತೋ ಆ ಮನುಷ್ಯನಿಗೂ ಪ್ರಾಪ್ತವಾಗಲೀ.॥27॥

ಮೂಲಮ್ - 28

ಉಪದಿಷ್ಟಂ ಸುಸೂಕ್ಷ್ಮಾರ್ಥಂ ಶಾಸ್ತ್ರಂ ಯತ್ನೇನ ಧೀಮತಾ ।
ಸ ನಾಶಯತು ದುಷ್ಟಾತ್ಮಾ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಿಂದ ಆರ್ಯ ಶ್ರೀರಾಮನಿಗೆ ಕಾಡಿಗೆ ಹೋಗಬೇಕಾಯಿತೋ, ಆ ದುಷ್ಟಾತ್ಮನಿಗೆ ಬುದ್ಧಿವಂತ ಗುರುವಿನಿಂದ ಪ್ರಯತ್ನಪೂರ್ವಕ ಪ್ರಾಪ್ತವಾದ ಶಾಸ್ತ್ರದ ಸೂಕ್ಷ್ಮ ವಿಷಯದ ಉಪದೇಶ ಮರೆತುಹೋಗಲಿ.॥28॥

ಮೂಲಮ್ - 29

ಮಾ ಚ ತಂ ವ್ಯೆಢಬಾಹ್ವಂಸಂ ಚಂದ್ರಭಾಸ್ಕರತೇಜಸಮ್ ।
ದ್ರಾಕ್ಷೀದ್ರಾಜ್ಯಸ್ಥಮಾಸೀನಂ ಯಸ್ಯಾರ್ಯೋಽನುಮತೇಗತಃ ॥

ಅನುವಾದ

ರಾಮನ ಅರಣ್ಯವಾಸಕ್ಕೆ ಯಾವನು ಅನುಮೋದಿಸಿದನೋ, ಅಂತಹವನು ವಿಶಾಲಹೃದಯವಾದ, ದೀರ್ಘ ಬಾಹುವಾದ, ಸೂರ್ಯ-ಚಂದ್ರರಿಗೆ ಸಮಾನ ತೇಜಸ್ಸಿನಿಂದ ಬೆಳಗುತ್ತಿರುವ ಶ್ರೀರಾಮನು ಪಟ್ಟಾಭಿಷಿಕ್ತನಾಗುವುದನ್ನು ನೋಡದಂತಾಗಲಿ.॥29॥

ಮೂಲಮ್ - 30

ಪಾಯಸಂ ಕೃಸರಂ ಛಾಗಂ ವೃಥಾ ಸೋಽಶ್ನಾತು ನಿರ್ಘೃಣಃ ।
ಗುರೂಂಶ್ಚಾಪ್ಯವಜಾನಾತು ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಿಂದ ಆರ್ಯ ಶ್ರೀರಾಮನು ವನಕ್ಕೆ ಹೋಗಿರುವನೋ ಆ ನಿರ್ದಯ ಮನುಷ್ಯನು - ಪಾಯಸ, ಖಿಚಡಿ, ಆಡಿನ ಹಾಲು ದೇವತೆಗಳಿಗೆ, ಪಿತೃಗಳಿಗೆ ಹಾಗೂ ಭಗವಂತನಿಗೆ ನಿವೇದಿಸದೆ ತಿನ್ನುವವನಾಗಲಿ.॥30॥

ಮೂಲಮ್ - 31

ಗಾಶ್ಚ ಸ್ಪೃಶತು ಪಾದೇನ ಗುರೂನ್ ಪರಿವದೇತ ಚ ।
ಮಿತ್ರೇ ದ್ರುಹ್ಯೇತ ಸೋಽತ್ಯರ್ಥಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಮ್ಮತಿಯಿಂದ ಶ್ರೀರಾಮಚಂದ್ರನು ಕಾಡಿಗೆ ಹೋಗಬೇಕಾಯಿತೋ ಆ ಪಾಪೀ ಮನುಷ್ಯನು, ಗೋವನ್ನು ಕಾಲಿನಿಂದ ಒದೆಯಲಿ, ಗುರುಗಳನ್ನು ನಿಂದಿಸಲಿ, ಮಿತ್ರದ್ರೋಹ ಮಾಡಲಿ. (ಇವೆಲ್ಲ ಮಹಾಪಾಪಗಳಾಗಿವೆ.॥31॥

ಮೂಲಮ್ - 32

ವಿಶ್ವಾಸಾತ್ಕಥಿತಂ ಕಿಂಚಿತ್ಪರಿವಾದಂ ಮಿಥಃ ಕ್ವಚಿತ್ ।
ವಿವೃಣೋತು ಸ ದುಷ್ಟಾತ್ಮಾ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರು ಹೇಳುವುದರಿಂದ ಅಣ್ಣ ಶ್ರೀರಾಮನು ವನಕ್ಕೆ ಹೋದನೋ ಆ ದುಷ್ಟಾತ್ಮನು ಗುಪ್ತವಾಗಿಡುವ ವಿಶ್ವಾಸದಿಂದ ಏಕಾಂತದಲ್ಲಿ ಹೇಳಿದ ಯಾರದಾದರೂ ದೋಷವನ್ನು ಬೇರೆಯವರ ಮುಂದೆ ಪ್ರಕಟಿಸಲಿ. ಅರ್ಥಾತ್ ಅವನು ವಿಶ್ವಾಸಘಾತ ಮಾಡಿದ ಪಾಪಕ್ಕೆ ಭಾಗಿಯಾಗಲಿ.॥32॥

ಮೂಲಮ್ - 33

ಅಕರ್ತಾ ಚಾಕೃತಜ್ಞಶ್ಚ ತ್ಯಕ್ತಾತ್ಮಾ ನಿರಪತ್ರಪಃ ।
ಲೋಕೇ ಭವತು ವಿದ್ವಿಷ್ಟೋ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಅನುಮತಿಯಿಂದ ಶ್ರೀರಾಮನು ಕಾಡಿಗೆ ಹೋದನೋ ಆ ಮನುಷ್ಯನು ಉಪಕಾರ ಮಾಡದವನು, ಕೃತಘ್ನ, ಸತ್ಪುರುಷರಿಂದ ತಿರಸ್ಕೃತ, ನಿರ್ಲಜ್ಜ ಮತ್ತು ಎಲ್ಲರ ದ್ವೇಷಕ್ಕೆ ಪಾತ್ರನಾಗಿಲಿ.॥33॥

ಮೂಲಮ್ - 34

ಪುತ್ರೈರ್ದಾಸೈಶ್ಚ ಭೃತ್ಯೈಶ್ಚ ಸ್ವಗೃಹೇ ಪರಿವಾರಿತಃ ।
ಸ ಏಕೋ ಮೃಷ್ಟಮಶ್ನಾತು ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಿಂದ ಆರ್ಯ ಶ್ರೀರಾಮನು ಅರಣ್ಯಕ್ಕೆ ತೆರಳಿರುವನೋ, ಅವನು ತನ್ನ ಮನೆಯಲ್ಲಿ ಪುತ್ರರು, ಸೇವಕರು, ದಾಸರು ಇವರಿಂದ ಕೂಡಿಕೊಂಡಿದ್ದೂ ಒಬ್ಬನೇ ಮೃಷ್ಟಾನ್ನಭೋಜನ ಮಾಡುವ ಪಾಪಕ್ಕೆ ಭಾಗಿಯಾಗಲಿ.॥34॥

ಮೂಲಮ್ - 35

ಅಪ್ರಾಪ್ಯ ಸದೃಶಾನ್ ದಾರಾನನಪತ್ಯಃ ಪ್ರಮೀಯತಾಮ್ ।
ಅನವಾಪ್ಯ ಕ್ರಿಯಾಂ ಧರ್ಮ್ಯಾಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಅನುಮತಿಯಿಂದ ಶ್ರೀರಾಮನಿಗೆ ವನವಾಸವಾಯಿತೋ, ಅವನು ತನಗೆ ಅನುರೂಪಳಾದ ಪತ್ನಿಯನ್ನು ಪಡೆಯದೆ ಅಗ್ನಿಹೋತ್ರಾದಿ ಧಾರ್ಮಿಕ ಕರ್ಮಗಳ ಅನುಷ್ಠಾನಮಾಡದೆ ಸಂತಾನಹೀನ ಸ್ಥಿತಿಯಲ್ಲಿ ಸತ್ತುಹೋಗಲಿ.॥35॥

ಮೂಲಮ್ - 36

ಮಾಽಽತ್ಮನಃ ಸಂತತಿಂ ದ್ರಾಕ್ಷೀತ್ ಸ್ವೇಷು ದಾರೇಷು ದುಃಖಿತಃ ।
ಆಯುಃ ಸಮಗ್ರಮಪ್ರಾಪ್ಯ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಅನುಮತಿಯಿಂದ ಶ್ರೀರಾಮನಿಗೆ ವನವಾಸವಾಯಿತೋ, ಅವನು ಸದಾ ದುಃಖಿತನಾಗಿ ಧರ್ಮಪತ್ನಿಯಿಂದ ಹುಟ್ಟುವ ಸಂತಾನದ ಮುಖವನ್ನು ನೋಡದೆ ಹೋಗಲಿ, ಅಕಾಲಮರಣಕ್ಕೆ ತುತ್ತಾಗಲಿ.॥36॥

ಮೂಲಮ್ - 37

ರಾಜಸ್ತ್ರೀಬಾಲವೃದ್ಧಾನಾಂ ವಧೇ ಯತ್ ಪಾಪಮುಚ್ಯತೇ ।
ಭೃತ್ಯತ್ಯಾಗೇ ಚ ಯತ್ಪಾಪಂ ತತ್ಪಾಪಂ ಪ್ರತಿಪದ್ಯತಾಮ್ ॥

ಅನುವಾದ

ರಾಜಾ, ಸ್ತ್ರೀ, ಬಾಲಕ, ವೃದ್ಧ ಇವರನ್ನು ವಧಿಸಿದ ಮತ್ತು ಭೃತ್ಯರನ್ನು ತ್ಯಜಿಸಿದ ಪಾಪವು ಅವನಿಗೆ ತಟ್ಟಲಿ.॥37॥

ಮೂಲಮ್ - 38

ಲಾಕ್ಷಯಾ ಮಧುಮಾಂಸೇನ ಲೋಹೇನ ಚ ವಿಷೇಣ ಚ ।
ಸದೈವ ಬಿಭೃಯಾದ್ ಭೃತ್ಯಾನ್ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಮ್ಮತಿಯಿಂದ ಶ್ರೀರಾಮನಿಗೆ ಅರಣ್ಯವಾಸವಾಯಿತೋ, ಅವನು ಅರಗು, ಮಧು, ಮಾಂಸ, ಕಬ್ಬಿಣ ಮತ್ತು ವಿಷ ಮುಂತಾದ ನಿಷಿದ್ಧ ಪದಾರ್ಥಗಳನ್ನು ಮಾರಿ ಗಳಿಸಿದ ಧನದಿಂದ ಕುಟುಂಬವನ್ನು ಸಾಕಲಿ.॥38॥

ಮೂಲಮ್ - 39

ಸಂಗ್ರಾಮೇಸಮುಪೋಢೇ ಚ ಶತ್ರುಪಕ್ಷಭಯಂಕರೇ ।
ಪಲಾಯಮಾನೋ ವಧ್ಯೇತ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಂತೆ ಶ್ರೀರಾಮನು ಕಾಡಿಗೆ ಹೋಗಲು ವಿವಶನಾದನೋ, ಅವನು ಶತ್ರುಪಕ್ಷವನ್ನು ಭಯಪಡಿಸುವ ಯುದ್ಧ ಪ್ರಾಪ್ತವಾದರೂ ಬೆನ್ನುಹಾಕಿ ಓಡಿಹೋಗುತ್ತಾ ಸತ್ತುಹೋಗಲಿ.॥39॥

ಮೂಲಮ್ - 40

ಕಪಾಲಪಾಣಿಃ ಪೃಥಿವೀಮಟತಾಂ ಚೀರಸಂವೃತಃ ।
ಭಿಕ್ಷಮಾಣೋ ಯಥೋನ್ಮತ್ತೋ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಮ್ಮತಿಯಿಂದ ಶ್ರೀರಾಮನು ವನಕ್ಕೆ ಹೋಗಿರುವನೋ, ಅವನು ಹರಿದ ಹಳೆಯ, ಕೊಳೆಯಾದ ಬಟ್ಟೆಯಿಂದ ಶರೀರವನ್ನು ಮುಚ್ಚಿಕೊಂಡು. ಕೈಯಲ್ಲಿ ಕಪಾಲ ಹಿಡಿದು ಭಿಕ್ಷೆ ಎತ್ತುತ್ತಾ ಹುಚ್ಚನಂತೆ ಪೃಥಿವಿಯಲ್ಲಿ ಅಲೆಯುವನು.॥40॥

ಮೂಲಮ್ - 41

ಮದ್ಯಪ್ರಸಕ್ತೋ ಭವತು ಸ್ತ್ರೀಷ್ವಕ್ಷೇಷು ಚ ನಿತ್ಯಶಃ ।
ಕಾಮಕ್ರೋಧಾಭಿಭೂತಶ್ಚ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರಿಂದಾಗಿ ಶ್ರೀರಾಮಚಂದ್ರನು ಅರಣ್ಯಕ್ಕೆ ಹೋಗಬೇಕಾಯಿತೋ, ಅವನು ಕಾಮ-ಕ್ರೋಧಕ್ಕೆ ವಶನಾಗಿ, ಸದಾ ಮದ್ಯಪಾನ, ಪರಸ್ತ್ರೀ ಸಮಾಗಮ ಹಾಗೂ ಜೂಜಿನಲ್ಲಿ ಆಸಕ್ತನಾಗಲಿ.॥41॥

ಮೂಲಮ್ - 42

ಮಾಸ್ಯ ಧರ್ಮೇ ಮನೋ ಭೂಯಾದರ್ಧರ್ಮಂ ಸ ನಿಷೇವತಾಮ್ ।
ಅಪಾತ್ರವರ್ಷೀ ಭವತು ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಅನುಮತಿಯಿಂದ ಶ್ರೀರಾಮನು ವನಕ್ಕೆ ಹೋದನೋ, ಅವನ ಮನಸ್ಸು ಎಂದೂ ಧರ್ಮದಲ್ಲಿ ತೊಡಗದಿರಲಿ. ಅವನು ಅಧರ್ಮವನ್ನೇ ಪಾಲಿಸುತ್ತಾ, ಅಪಾತ್ರರಿಗೆ ದಾನ ಮಾಡಲಿ.॥42॥

ಮೂಲಮ್ - 43

ಸಂಚಿತಾನ್ಯಸ್ಯ ವಿತ್ತಾನಿ ವಿವಿಧಾನಿ ಸಹಸ್ರಶಃ ।
ದಸ್ಯುಭಿರ್ವಿಪ್ರಲುಪ್ಯಂತಾಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಿಂದ ಶ್ರೀರಾಮನ ವನಗಮನವಾಯಿತೋ, ಅವನು ಗಳಿಸಿದ ಸಾವಿರಾರು ಸಂಖ್ಯೆಯ ನಾನಾ ಪ್ರಕಾರದ ಧನ-ವೈಭವಗಳನ್ನು ದರೋಡೆಕೋರರು ಲೂಟಿಮಾಡಲಿ.॥43॥

ಮೂಲಮ್ - 44

ಉಭೇ ಸಂಧ್ಯೇ ಶಯಾನಸ್ಯ ಯತ್ಪಾಪಂ ಪರಿಕಲ್ಪ್ಯತೇ ।
ತಚ್ಛ ಪಾಪಂ ಭವೇತ್ತಸ್ಯ ಯಸ್ಯಾರ್ಯೋಽನುಮತೇಗತಃ ॥

ಮೂಲಮ್ - 45

ಯದಗ್ನಿದಾಯಕೇ ಪಾಪಂ ಯತ್ಪಾಪಂ ಗುರುತಲ್ಪಗೇ ।
ಮಿತ್ರದ್ರೋಹೇ ಚ ಯತ್ಪಾಪಂ ತತ್ಪಾಪಂ ಪ್ರತಿಪದ್ಯತಾಮ್ ॥

ಅನುವಾದ

ಯಾರು ಹೇಳಿದ್ದರಿಂದ ಅಣ್ಣ ಶ್ರೀರಾಮನನ್ನು ಕಾಡಿಗೆ ಕಳಿಸಲಾಯಿತೋ, ಅವನಿಗೆ ಎರಡೂ ಸಂಧ್ಯೆಯಲ್ಲಿ ಮಲಗಿದವನಿಗೆ, ಬೆಂಕಿ ಹಚ್ಚುವವನಿಗೆ, ಗುರುಪತ್ನೀಗಾಮಿಗೆ, ಮಿತ್ರದ್ರೋಹ ಮಾಡುವವನಿಗೆ ತಗಲುವ ಪಾಪಗಳು ಅಂಟಿಕೊಳ್ಳಲಿ.॥44-45॥

ಮೂಲಮ್ - 46

ದೇವತಾನಾಂ ಪಿತೄಣಾಂ ಚ ಮಾತಾಪಿತ್ರೋಸ್ತಥೈವ ಚ ।
ಮಾ ಸ್ಮ ಕಾರ್ಷೀತ್ಸ ಶುಶ್ರೂಷಾಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಮ್ಮತಿಯಿಂದ ಆರ್ಯ ಶ್ರೀರಾಮನಿಗೆ ಕಾಡಿಗೆ ಹೋಗಬೇಕಾಯಿತೋ, ಅವನು ದೇವತೆಗಳ, ಪಿತೃಗಳ, ತಂದೆ- ತಾಯಿಯರ ಸೇವೆ ಎಂದೂ ಮಾಡದಿರಲಿ (ಅವರ ಸೇವೆಯ ಪುಣ್ಯದಿಂದ ವಂಚಿತನಾಗಲಿ).॥46॥

ಮೂಲಮ್ - 47

ಸತಾಂ ಲೋಕಾತ್ಸತಾಂ ಕೀರ್ತ್ಯಾಃ ಸಜ್ಜುಷ್ಟಾತ್ಕರ್ಮಣಸ್ತಥಾ ।
ಭ್ರಶ್ಯತು ಕ್ಷಿಪ್ರಮದ್ಯೈವ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಅನುಮತಿಗೆ ವಿವಶನಾಗಿ ಅಣ್ಣ ಶ್ರೀರಾಮನು ವನಕ್ಕೆ ನಡೆದಿರುವನೋ, ಅಂತಹ ಪಾಪಿಯು ಸತ್ಪುರುಷರ ಲೋಕದಿಂದ, ಸತ್ಪುರುಷರ ಕೀರ್ತಿಯಿಂದ, ಸತ್ಪುರುಷರು ಮಾಡುವ ಕರ್ಮಗಳಿಂದ ಶೀಘ್ರವಾಗಿ ಭ್ರಷ್ಟನಾಗಲಿ.॥47॥

ಮೂಲಮ್ - 48

ಅಪಾಸ್ಯ ಮಾತೃಶುಶ್ರೂಷಾಮನರ್ಥೇ ಸೋಽವತಿಷ್ಠತಾಮ್ ।
ದೀರ್ಘಬಾಹುರ್ಮಹಾವಕ್ಷಾ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಮ್ಮತಿಯಿಂದ ದೀರ್ಘಬಾಹು, ವಿಶಾಲವಕ್ಷವುಳ್ಳ ಆರ್ಯ ಶ್ರೀರಾಮನು ವನಕ್ಕೆ ಹೋಗಬೇಕಾಯಿತೋ ಅವನು ತಾಯಿಯ ಸೇವೆ ಬಿಟ್ಟು ಅನರ್ಥಗಳ ಪಥದಲ್ಲಿ ಸ್ಥಿತನಾಗಲೀ.॥48॥

ಮೂಲಮ್ - 49

ಬಹುಭೃತ್ಯೋ ದರಿದ್ರಶ್ಚ ಜ್ವರರೋಗಸಮನ್ವಿತಃ ।
ಸಮಾಯಾತ್ ಸತತಂ ಕ್ಲೇಶಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಲಾಲಸೆಯಿಂದ ಶ್ರೀರಾಮನಿಗೆ ವನವಾಸವಾಯಿತೋ, ಅವನು ದರಿದ್ರನಾಗಿ, ಸಾಕಲು ಯೋಗ್ಯರಾದ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಾಗಲೀ ಹಾಗೂ ಜ್ವರದಿಂದ ಪೀಡಿತನಾಗಿ ಸದಾ ಕ್ಲೇಶವನ್ನೇ ಅನುಭವಿಸಲಿ.॥49॥

ಮೂಲಮ್ - 50

ಆಶಾಮಾಶಂಸಮಾನಾನಾಂ ದೀನಾನಾಮೂರ್ಧ್ವಚಕ್ಷುಷಾಮ್ ।
ಅರ್ಥಿನಾಂ ವಿತಥಾಂ ಕುರ್ಯಾದ್ ಯಸ್ಯಾರ್ಯೋಽನುಮತೇಗತಃ ॥

ಅನುವಾದ

ಯಾರ ಅನುಮತಿ ಪಡೆದು ಆರ್ಯ ಶ್ರೀರಾಮನು ಕಾಡಿಗೆ ಹೋದನೋ, ಅವನು ದಾತೃಗಳ ಮುಖವನ್ನು ನೋಡುತ್ತಾ ದೀನರಾಗಿ ಯಾಚಿಸುವವರ ಆಸೆಯನ್ನು ನಿಷ್ಫಲ ಮಾಡುವವನಾಗಲಿ.॥50॥

ಮೂಲಮ್ - 51

ಮಯಯಾ ರಮತಾಂ ನಿತ್ಯಂ ಪುರುಷಃ ಪಿಶುನೋಽಶುಚಿಃ ।
ರಾಜ್ಞೋ ಭೀತಸ್ತ್ವಧರ್ಮಾತ್ಮಾ ಯಸ್ಯಾರ್ಯೋಽನುಮತೇಗತಃ ॥

ಅನುವಾದ

ಯಾರು ಹೇಳಿದ್ದರಿಂದ ಅಣ್ಣ ಶ್ರೀರಾಮನು ವನವಾಸಕ್ಕೆ ತೆರಳಿರುವನೋ, ಆ ಪಾಪಾತ್ಮ ಪುರುಷನು ಚಾಡಿಕೋರ, ಅಪವಿತ್ರ ಹಾಗೂ ರಾಜನಿಂದ ಭಯಗೊಂಡು ಸದಾ ಕಪಟದಲ್ಲೇ ನಿರತನಾಗಿರಲಿ.॥51॥

ಮೂಲಮ್ - 52

ಋತುಸ್ನಾತಾಂ ಸತೀಂ ಭಾರ್ಯಾಮೃತುಕಾಲಾನುರೋಧಿನೀಮ್ ।
ಅತಿವರ್ತೇತ ದುಷ್ಟಾತ್ಮಾ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಲಹೆಯಂತೆ ಆರ್ಯನಿಗೆ ವನವಾಸವಾಯಿತೋ ಆ ದುಷ್ಟಾತ್ಮನು ಋತುಕಾಲದಲ್ಲಿ ತನ್ನ ಬಳಿಗೆ ಬಂದ ಸತೀಸಾಧ್ವೀ ಋತುಸ್ನಾತಳಾದ ಪತ್ನಿಯನ್ನು ತಿರಸ್ಕರಿಸುವನು. (ಆಕೆಯ ಇಚ್ಛೆಯನ್ನು ಪೂರ್ಣಮಾಡದಿರುವ ಪಾಪಕ್ಕೆ ಭಾಗಿಯಾಗಲಿ.॥52॥

ಮೂಲಮ್ - 53

ವಿಪ್ರಲುಪ್ತಪ್ರಜಾತಸ್ಯ ದುಷ್ಕೃತಂ ಬ್ರಾಹ್ಮಣಸ್ಯ ಯತ್ ।
ತದೇತತ್ ಪ್ರತಿಪದ್ಯೇತ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಪಿತೂರಿಯಿಂದ ಅಣ್ಣನಿಗೆ ಕಾಡಿಗೆ ಹೋಗಬೇಕಾಯಿತೋ, ಅವನಿಗೆ ಅನ್ನಾದಿಗಳನ್ನು ದಾನ ಮಾಡದೆ, ಪತ್ನಿಯನ್ನು ದ್ವೇಷಿಸುವ, ಸಂತಾನ ಕಳೆದುಕೊಂಡ ಬ್ರಾಹ್ಮಣನಿಗೆ ತಗಲುವ ಪಾಪವು ಪ್ರಾಪ್ತವಾಗಲಿ.॥53॥

ಮೂಲಮ್ - 54

ಬ್ರಾಹ್ಮಣಾಯೋದ್ಯತಾಂ ಪೂಜಾಂ ವಿಹಂತು ಕಲುಷೇಂದ್ರಿಯಃ ।
ಬಾಲವತ್ಸಾಂ ಚ ಗಾಂ ದೋಗ್ಧು ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಒಪ್ಪಿಗೆಯಿಂದ ಶ್ರೀರಾಮನು ವನಕ್ಕೆ ನಡೆದನೋ, ಆ ಮಲಿನ ಇಂದ್ರಿಯವುಳ್ಳ ಪುರುಷನು ಬ್ರಾಹ್ಮಣರ ಪೂಜೆಯಲ್ಲಿ ವಿಘ್ನವನ್ನೊಡ್ಡಲಿ ಮತ್ತು ಕರು ಹಾಕಿ ಹತ್ತು ದಿನದೊಳಗೆ ಹಸುವಿನ ಹಾಲನ್ನು ಕರೆಯುವ ಪಾಪಿಯಾಗಲಿ.॥54॥

ಮೂಲಮ್ - 55

ಧರ್ಮದಾರಾನ್ಪರಿತ್ಯಜ್ಯ ಪರದಾರಾನ್ವಿಷೇವತಾಮ್ ।
ತ್ಯಕ್ತಧರ್ಮರತಿರ್ಮೂಢೋ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಶ್ರೀರಾಮನಿಗೆ ವನಗಮನದ ಅನುಮತಿಯನ್ನು ಕೊಟ್ಟ ಮೂಢನು ಧರ್ಮಪತ್ನಿಯನ್ನು ಬಿಟ್ಟು ಪರಸ್ತ್ರೀಯನ್ನು ಸೇವಿಸುತ್ತಾ ಧರ್ಮವಿಷಯುಕ್ತವಾದ ಅನುರಾಗವನ್ನು ತ್ಯಜಿಸಿಬಿಡಲಿ.॥55॥

ಮೂಲಮ್ - 56

ಪಾನೀಯದೂಷಕೇ ಪಾಪಂ ತಥೈವ ವಿಷದಾಯಕೇ ।
ಯತ್ತದೇಕಃ ಸ ಲಭತಾಂ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ನೀರನ್ನು ಮಲಿನಗೊಳಿಸುವ, ಬೇರೆಯವರಿಗೆ ವಿಷ ಕೊಡುವ ಮನುಷ್ಯನಿಗೆ ತಗಲುವ ಪಾಪವು ಯಾರ ಅನುಮತಿ ವಿವಶನಾಗಿ ಶ್ರೀರಾಮನಿಗೆ ಕಾಡಿಗೆ ಹೋಗಬೇಕಾಯಿತೋ ಅವನೊಬ್ಬನಿಗೆ ಆ ಎಲ್ಲ ಪಾಪಗಳು ಪ್ರಾಪ್ತವಾಗಲಿ.॥56॥

ಮೂಲಮ್ - 57

ತೃಷಾರ್ತಂ ಸತಿ ಪಾನೀಯೇ ವಿಪ್ರಲಂಭೇನ ಯೋಜಯನ್ ।
ಯತ್ಪಾಪಂ ಲಭತೇ ತತ್ಸ್ಯಾದ್ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಸಮ್ಮತಿಯಿಂದ ಆರ್ಯನಿಗೆ ವನವಾಸ ಉಂಟಾಯಿತೋ, ಅವನಿಗೆ ನೀರಿದ್ದರೂ ಬಾಯಾರಿದವನಿಗೆ ಕೊಡದಿರುವ ಮನುಷ್ಯನಿಗೆ ಬರುವ ಪಾಪವು ಉಂಟಾಗಲಿ.॥57॥

ಮೂಲಮ್ - 58

ಭಕ್ತ್ಯಾ ವಿವದಮಾನೇಷು ಮಾರ್ಗಮಾಶ್ರಿತ್ಯ ಪಶ್ಯತಃ ।
ತೇನ ಪಾಪೇನ ಯುಜ್ಯೇತ ಯಸ್ಯಾರ್ಯೋಽನುಮತೇ ಗತಃ ॥

ಅನುವಾದ

ಯಾರ ಅನುಮತಿಯಿಂದ ಶ್ರೀರಾಮನು ವನವಾಸಕ್ಕೆ ಹೋಗಿರುವನೋ, ಆ ಮನುಷ್ಯನಿಗೆ ಪರಸ್ಪರ ಜಗಳಮಾಡುತ್ತಿದ್ದ ಜನರಲ್ಲಿ ಒಬ್ಬನ ಪಕ್ಷ ವಹಿಸಿ ನಿಂತು ಜಗಳವನ್ನು ನೋಡುವ ಕಲಹಪ್ರಿಯನಿಗೆ ತಗಲುವ ಪಾಪವು ಉಂಟಾಗಲಿ.॥58॥

ಮೂಲಮ್ - 59

ಏವಮಾಶ್ವಾಸಯನ್ನೇವ ದುಃಖಾರ್ತೋನುಪಪಾತ ಹ ।
ವಿಹೀನಾಂ ಪರಿಪುತ್ರಾಭ್ಯಾಂ ಕೌಸಲ್ಯಾಂಪಾರ್ಥಿವಾತ್ಮಜಃ ॥

ಅನುವಾದ

ಹೀಗೆ ಪತಿ ಮತ್ತು ಪುತ್ರನಿಂದ ಅಗಲಿದ ಕೌಸಲ್ಯೆಗೆ ಶಪಥದ ಮೂಲಕ ಆಶ್ವಾಸನೆಯನ್ನಿತ್ತು ರಾಜಕುಮಾರ ಭರತನು ದುಃಖದಿಂದ ವ್ಯಾಕುಲನಾಗಿ ಭೂಮಿಯಲ್ಲಿ ಕುಸಿದುಬಿದ್ದನು.॥59॥

ಮೂಲಮ್ - 60

ತದಾ ತಂ ಶಪಥೈಃ ಕಷ್ಟೈಃ ಶಪಮಾನಮಚೇತನಮ್ ।
ಭರತಂ ಶೋಕಸಂತಪ್ತಂ ಕೌಸಲ್ಯಾ ವಾಕ್ಯಮಬ್ರವೀತ್ ॥

ಅನುವಾದ

ಆಗ ದುಷ್ಕರವಾದ ಶಪಥಗಳಿಂದ ಪ್ರತಿಜ್ಞೆ ಮಾಡಿ ಶೋಕಸಂತಪ್ತನಾದ ಬುದ್ಧಿಗೆಟ್ಟಿದ್ದ ಭರತನಲ್ಲಿ ಕೌಸಲ್ಯೆಯು ಈ ಪ್ರಕಾರ ಹೇಳಿದಳು.॥60॥

ಮೂಲಮ್ - 61

ಮಮ ದುಃಖಮಿದಂ ಪುತ್ರ ಭೂಯಃಸಮುಪಜಾಯತೇ ।
ಶಪಥೈಃ ಶಪಮಾನೋ ಹಿ ಪ್ರಾಣಾನುಪರುಣತ್ಸಿ ಮೇ ॥

ಅನುವಾದ

ಮಗು! ನೀನು ಅನೇಕಾನೇಕ ಶಪಥಗಳನ್ನು ಮಾಡಿ ನನ್ನ ಪ್ರಾಣಗಳಿಗೆ ಸಂಕಟಕೊಡುತ್ತಿರುವೆ; ಇದರಿಂದ ನನ್ನ ದುಃಖ ಇನ್ನೂ ಜಾಸ್ತಿಯಾಗುತ್ತಾ ಇದೆ.॥61॥

ಮೂಲಮ್ - 62

ದಿಷ್ಟ್ಯಾ ನ ಚಲಿತೋ ಧರ್ಮಾದಾತ್ಮಾ ತೇ ಸಹಲಕ್ಷ್ಮಣಃ ।
ವತ್ಸ ಸತ್ಯಪ್ರತಿಜ್ಞೋ ಹಿ ಸತಾಂ ಲೋಕಾನವಾಪ್ಸ್ಯಸಿ ॥

ಅನುವಾದ

ವತ್ಸ! ಶುಭಲಕ್ಷಣಗಳಿಂದ ಕೂಡಿದ ನಿನ್ನ ಚಿತ್ತ ಧರ್ಮದಿಂದ ವಿಚಲಿತವಾಗದಿರುವುದು ಸೌಭಾಗ್ಯದ ಮಾತಾಗಿದೆ. ನೀನು ಸತ್ಯ ಪ್ರತಿಜ್ಞನಾಗಿರುವೆ, ಇದರಿಂದ ನಿನಗೆ ಸತ್ಪುರುಷರ ಲೋಕ ಪ್ರಾಪ್ತವಾಗುವುದು.॥62॥

ಮೂಲಮ್ - 63

ಇತ್ಯುಕ್ತ್ವಾ ಚಾಂಕಮಾನೀಯ ಭರತಂ ಭ್ರಾತೃವತ್ಸಲಮ್ ।
ಪರಿಷ್ವಜ್ಯ ಮಹಾಬಾಹುಂ ರುರೋದ ಭೃಶದುಃಖಿತಾ ॥

ಅನುವಾದ

ಹೀಗೆ ಹೇಳಿ ಕೌಸಲ್ಯೆಯು ಭ್ರಾತೃಭಕ್ತ ಮಹಾಬಾಹು ಭರತನನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು, ಅತ್ಯಂತ ದುಃಖಿತಳಾಗಿ ಅಪ್ಪಿಕೊಂಡು ಬಿಕ್ಕಿ-ಬಿಕ್ಕಿ ಅಳತೊಡಗಿದಳು.॥63॥

ಮೂಲಮ್ - 64

ಏವಂ ವಿಲಪಮಾನಸ್ಯ ದುಃಖಾರ್ತಸ್ಯ ಮಹಾತ್ಮನಃ ।
ಮೋಹಾಚ್ಚ ಶೋಕಸಂರಂಭಾದ್ ಬಭೂವ ಲುಲಿತಂ ಮನಃ ॥

ಅನುವಾದ

ಮಹಾತ್ಮಾ ಭರತನೂ ಕೂಡ ದುಃಖದಿಂದ ಆರ್ತನಾಗಿ ವಿಲಪಿಸುತ್ತಿದ್ದನು. ಅವನ ಮನಸ್ಸು ಶೋಕ, ಮೋಹಗಳಿಂದ ವ್ಯಾಕುಲವಾಗಿತ್ತು.॥64॥

ಮೂಲಮ್ - 65

ಲಾಲಪ್ಯಮಾನಸ್ಯ ವಿಚೇತನಸ್ಯ
ಪ್ರಣಷ್ಟಬುದ್ಧೇಃ ಪತಿತಸ್ಯ ಭೂಮೌ ।
ಮುಹುರ್ಮುಹುರ್ನಿಃಶ್ವಸತಶ್ಚ ದೀರ್ಘಂ
ಸಾ ತಸ್ಯ ಶೋಕೇನ ಜಗಾಮ ರಾತ್ರಿಃ ॥

ಅನುವಾದ

ನೆಲದಲ್ಲಿ ಬಿದ್ದಿರುವ ಭರತನ ಬುದ್ಧಿಶಕ್ತಿ ನಾಶವಾಗಿತ್ತು. ಅವನು ಎಚ್ಚರವಿಲ್ಲದೆ ವಿಲಪಿಸುತ್ತಾ ಪದೇ-ಪದೇ ದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದನು. ಈ ರೀತಿ ಶೋಕದಲ್ಲೇ ಅವನ ಆ ರಾತ್ರಿ ಕಳೆದುಹೋಯಿತು.॥65॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತೈದನೆಯ ಸರ್ಗ ಪೂರ್ಣವಾಯಿತು ॥75॥