०७३ कैकेयीनिर्भर्त्सनम्

वाचनम्
ಭಾಗಸೂಚನಾ

ಭರತನು ಕೈಕೇಯಿಯನ್ನು ಧಿಕ್ಕರಿಸಿದುದು, ಅವಳ ಮೇಲೆ ಮಹಾರೋಷವನ್ನು ಪ್ರಕಟಿಸಿದುದು

ಮೂಲಮ್ - 1

ಶ್ರುತ್ವಾ ಚ ಸ ಪಿತುರ್ವೃಚತ್ತಂ ಭ್ರಾತರೌ ಚವಿವಾಸಿತೌ ।
ಭರತೋ ದುಃಖಸಂತಪ್ತಃ ಇದಂ ವಚನಮಬ್ರವೀತ್ ॥

ಅನುವಾದ

ಪಿತನ ಪರಲೋಕವಾಸ ಮತ್ತು ಇಬ್ಬರೂ ಸಹೋದರರ ವನವಾಸದ ಸಮಾಚಾರ ಕೇಳಿ ಭರತನು ದುಃಖದಿಂದ ಸಂತಪ್ತನಾಗಿ ತಾಯಿ ಕೈಕೇಯಿಯ ಬಳಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಕಿಂ ನು ಕಾರ್ಯಂ ಹತಸ್ಯೇಹ ಮಮ ರಾಜ್ಯೇನ ಶೋಚತಃ ।
ವಿಹೀನಸ್ಯಾಥ ಪಿತ್ರಾ ಚ ಭ್ರಾತ್ರಾ ಪಿತೃಸಮೇನ ಚ ॥

ಅನುವಾದ

ಅಯ್ಯೋ! ನೀನು ನನ್ನನ್ನು ಕೊಂದುಹಾಕಿದೆ. ನಾನು ತಂದೆಯಿಂದ ಮತ್ತು ತಂದೆಯಂತಿದ್ದ ಅಣ್ಣನಿಂದಲೂ ಅಗಲಿ ಹೋದೆ. ಈಗ ನಾನಾದರೋ ಶೋಕದಲ್ಲಿ ಮುಳುಗಿದ್ದೇನೆ, ನಾನು ರಾಜ್ಯವನ್ನು ಪಡೆದು ಏನು ಮಾಡುವುದು.॥2॥

ಮೂಲಮ್ - 3

ದುಃಖೇ ಮೇ ದುಃಖಮಕರೋರ್ವ್ರಣೇ ಕ್ಷಾರಮಿವಾದದಾಃ ।
ರಾಜಾನಂ ಪ್ರೇತಭಾವಸ್ಥಂ ಕೃತ್ವಾ ರಾಮಂ ಚ ತಾಪಸಮ್ ॥

ಅನುವಾದ

ನೀನು ಮಹಾರಾಜರನ್ನು ಪರಲೋಕವಾಗಿಸಿ, ಶ್ರೀರಾಮನನ್ನು ತಪಸ್ವಿಯಾಗಿಸಿ ನನಗೆ ದುಃಖದ ಮೇಲೆ ದುಃಖವನ್ನು ಕೊಟ್ಟಿರುವೆ. ಗಾಯದ ಮೇಲೆ ಉಪ್ಪನ್ನು ಸವರಿದೆ.॥3॥

ಮೂಲಮ್ - 4

ಕುಲಸ್ಯ ತ್ವಮಭಾವಾಯ ಕಾಲರಾತ್ರಿರಿವಾಗತಾ ।
ಅಂಗಾರಮುಪಗೂಹ್ಯ ಸ್ಮ ಪಿತಾ ಮೇ ನಾವಬುದ್ಧವಾನ್ ॥

ಅನುವಾದ

ನೀನು ಈ ಕುಲವನ್ನು ನಾಶಮಾಡಲೆಂದೇ ಕಾಲರಾತ್ರಿಯಾಗಿ ಬಂದಿರುವೆ. ನಮ್ಮ ತಂದೆವರು ನಿನ್ನನ್ನು ತನ್ನ ಪತ್ನಿಯಾಗಿ ಏಕೆ ಮಾಡಿಕೊಂಡನೋ, ಉರಿಯುವ ಕೆಂಡವನ್ನು ಉಡಿಯಲ್ಲಿ ಕಟ್ಟಿಕೊಂಡಿದ್ದನು. ಆದರೆ ಈ ಮಾತು ಆಗ ಅವರಿಗೆ ತಿಳಿದಿರಲಿಕ್ಕಿಲ್ಲ.॥4॥

ಮೂಲಮ್ - 5

ಮೃತ್ಯುಮಾಪಾದಿತೋ ರಾಜಾ ತ್ವಯಾ ಮೇ ಪಾಪದರ್ಶಿನಿ ।
ಸುಖಂ ಪರಿಹೃತಂ ಮೋಹಾತ್ಕುಲೇಽಸ್ಮಿನ್ ಕುಲಪಾಂಸನಿ ॥

ಅನುವಾದ

ಪಾಪವನ್ನೇ ನೋಡುವ ಕಳಂಕಿನಿಯೇ! ನೀನು ನಮ್ಮ ತಂದೆಯವರನ್ನು ಕಾಲನ ಬಾಯಿಗೆ ನೂಕಿದೆ ಮತ್ತು ಮೋಹವಶಳಾಗಿ ಕುಲದ ಸುಖವನ್ನು ಎಂದೆಂದಿಗೂ ಕಿತ್ತುಕೊಂಡೆ.॥5॥

ಮೂಲಮ್ - 6

ತ್ವಾಂ ಪ್ರಾಪ್ಯ ಹಿ ಪಿತಾ ಮೇಽದ್ಯ ಸತ್ಯಸಂಧೋ ಮಹಾಯಶಾಃ ।
ತೀವ್ರದುಃಖಾಭಿಸಂತಪ್ತೋ ವೃತ್ತೋ ದಶರಥೋ ನೃಪಃ ॥

ಅನುವಾದ

ನಿನ್ನನ್ನು ಪಡೆದು ಸತ್ಯಪ್ರತಿಜ್ಞ, ಮಹಾಯಶಸ್ವೀ ತಂದೆಯವರಾದ ಮಹಾರಾಜರು ದುಃಸಹ ದುಃಖದಿಂದ ಸಂತಪ್ತರಾಗಿ ಪ್ರಾಣತ್ಯಜಿಸಲು ವಿವಶರಾದರು.॥6॥

ಮೂಲಮ್ - 7

ವಿನಾಶಿತೋ ಮಹಾರಾಜಃ ಪಿತಾ ಮೇ ಧರ್ಮವತ್ಸಲಃ ।
ಕಸ್ಮಾತ್ ಪ್ರವ್ರಾಜಿತೋ ರಾಮಃ ಕಸ್ಮಾದೇವ ವನಂ ಗತಃ ॥

ಅನುವಾದ

ನೀನು ನನ್ನ ಧರ್ಮವತ್ಸಲ ತಂದೆಯಾದ ಮಹಾರಾಜರನ್ನು ಏಕೆ ವಿನಾಶಗೊಳಿಸಿದೆ? ಹೇಳು. ನನ್ನ ಅಣ್ಣ ಶ್ರೀರಾಮನನ್ನು ಮನೆಯಿಂದ ಏಕೆ ಓಡಿಸಿದೆ? ನೀನು ಹೇಳಿದ್ದರಿಂದ ಅವನು ಏಕೆ ಕಾಡಿಗೆ ಹೋದನು.॥7॥

ಮೂಲಮ್ - 8

ಕೌಸಲ್ಯಾ ಚ ಸುಮಿತ್ರಾ ಚ ಪುತ್ರಶೋಕಾಭಿಪೀಡಿತೇ ।
ದುಷ್ಕರಂ ಯದಿ ಜೀವೇತಾಂ ಪ್ರಾಪ್ಯ ತ್ವಾಂ ಜನನೀಂ ಮಮ ॥

ಅನುವಾದ

ಕೌಸಲ್ಯೆ ಮತ್ತು ಸುಮಿತ್ರೆಯರೂ ಕೂಡ ನನ್ನ ತಾಯಿ ಎನಿಸಿದ ಕೈಕೇಯಿಯಾದ ನಿನ್ನನ್ನು ಪಡೆದು ಪುತ್ರಶೋಕದಿಂದ ಪೀಡಿತರಾದರು. ಇನ್ನು ಅವರು ಜೀವಿಸಿ ಇರುವುದೂ ಕಠಿಣವಾಗಿದೆ.॥8॥

ಮೂಲಮ್ - 9

ನನ್ವಾರ್ಯೋಽಪಿ ಚ ಧರ್ಮಾತ್ಮಾ ತ್ವಯಿ ವೃತ್ತಿಮನುತ್ತಮಾಮ್ ।
ವರ್ತತೇ ಗುರುವೃತ್ತಿಜ್ಞೋ ಯಥಾ ಮಾತರಿ ವರ್ತತೇ ॥

ಅನುವಾದ

ಅಣ್ಣನಾದ ಶ್ರೀರಾಮನು ಧರ್ಮಾತ್ಮಾ ಆಗಿದ್ದಾನೆ. ಗುರು-ಹಿರಿಯರೊಡನೆ ಹೇಗೆ ವರ್ತಿಸಬೇಕೆಂಬುದನ್ನು ಚೆನ್ನಾಗಿ ತಿಳಿದಿರುವನು. ಅದರಿಂದ ತನ್ನ ತಾಯಿಯ ಕುರಿತು ಅವನು ವರ್ತಿಸುತ್ತಿರುವಂತೆ ನಿನ್ನೊಡನೆಯೂ ಉತ್ತಮವಾಗಿ ವರ್ತಿಸುತ್ತಿದ್ದನು.॥9॥

ಮೂಲಮ್ - 10

ತಥಾ ಜ್ಯೇಷ್ಠಾ ಹಿ ಮೇ ಮಾತಾ ಕೌಸಲ್ಯಾ ದೀರ್ಘದರ್ಶಿನೀ ।
ತ್ವಯಿ ಧರ್ಮಂ ಸಮಾಸ್ಥಾಯ ಭಗಿನ್ಯಾಮಿವ ವರ್ತತೇ ॥

ಅನುವಾದ

ನನ್ನ ದೊಡ್ಡಮ್ಮ ಕೌಸಲ್ಯೆಯೂ ಬಹಳ ದೂರದರ್ಶಿನಿಯಾಗಿದ್ದಾಳೆ. ಆಕೆಯು ಧರ್ಮವನ್ನು ಆಶ್ರಯಿಸಿ ನಿನ್ನೊಂದಿಗೆ ತಾಯಿಯಂತೆ ವರ್ತಿಸುತ್ತಿರುವಳು.॥10॥

ಮೂಲಮ್ - 11

ತಸ್ಯಾಃ ಪುತ್ರಂ ಮಹಾತ್ಮಾನಂ ಚೀರವಲ್ಕಲವಾಸಸಮ್ ।
ಪ್ರಸ್ಥಾಪ್ಯ ವನವಾಸಾಯಕಥಂ ಪಾಪೇ ನ ಶೋಚಸೇ ॥

ಅನುವಾದ

ಪಾಪಿನಿಯೇ! ಅವಳ ಮಹಾತ್ಮಾ ಪುತ್ರನಿಗೆ ವಲ್ಕಲಗಳನ್ನು ಉಡಿಸಿ ನೀನು ವನವಾಸಕ್ಕೆ ಅಟ್ಟಿಬಿಟ್ಟೆ. ಹೀಗಿದ್ದರೂ ನಿನಗೆ ಶೋಕ ಏಕೆ ಆಗುತ್ತಿಲ್ಲ.॥11॥

ಮೂಲಮ್ - 12

ಅಪಾಪದರ್ಶಿನಂ ಶೂರಂ ಕೃತಾತ್ಮಾನಂ ಯಶಸ್ವಿನಮ್ ।
ಪ್ರವ್ರಾಜ್ಯ ಚೀರವಸನಂ ಕಿಂ ನು ಪಶ್ಯಸಿ ಕಾರಣಮ್ ॥

ಅನುವಾದ

ಶ್ರೀರಾಮನು ಯಾರ ಕೆಡುಕನ್ನೂ ಬಯಸುವುದಿಲ್ಲ. ಅವನು ಶೂರವೀರ, ಪವಿತ್ರಾತ್ಮಾ ಮತ್ತು ಯಶಸ್ವಿಯಾಗಿದ್ದಾನೆ. ಅವನಿಗೆ ನಾರುಮಡಿಯನ್ನುಡಿಸಿ ವನವಾಸಕ್ಕೆ ಕಳಿಸಿ ನೀನು ಯಾವ ಲಾಭವನ್ನು ನೋಡುತ್ತಿರುವೆ.॥12॥

ಮೂಲಮ್ - 13

ಲುಬ್ಧಾಯಾ ವಿದಿತೋ ಮನ್ಯೇ ನ ತೇಽಹಂ ರಾಘವಂ ಯಥಾ ।
ತಥಾ ಹ್ಯನರ್ಥೋ ರಾಜ್ಯಾರ್ಥಂ ತ್ವಯಾನೀಽಽತೋ ಮಹಾನಯಮ್ ॥

ಅನುವಾದ

ನೀನು ಲೋಭಿಯಾಗಿರುವೆ ಎಂದು ನಾನು ತಿಳಿಯುತ್ತೇನೆ, ನನಗೆ ಶ್ರೀರಾಮಚಂದ್ರನಲ್ಲಿ ಎಂತಹ ಭಾವವಿದೆ ಎಂಬುದು ನಿನಗೆ ತಿಳಿದಿಲ್ಲ. ಆದ್ದರಿಂದ ನೀನು ರಾಜ್ಯಕ್ಕಾಗಿ ಈ ಮಹಾ ಅನರ್ಥವನ್ನು ಮಾಡಿಬಿಟ್ಟೆ.॥13॥

ಮೂಲಮ್ - 14

ಅಹಂ ಹಿ ಪುರುಷವ್ಯಾಘ್ರಾವಪಶ್ಯನ್ ರಾಮಲಕ್ಷ್ಯಣೌ ।
ಕೇನ ಶಕ್ತಿಪ್ರಭಾವೇಣ ರಾಜ್ಯಂ ರಕ್ಷಿತುಮುತ್ಸಹೇ ॥

ಅನುವಾದ

ಪುರುಷಸಿಂಹ ಶ್ರೀರಾಮ ಮತ್ತು ಲಕ್ಷ್ಮಣನನ್ನು ನೋಡದೆ ನಾನು ಯಾವ ಶಕ್ತಿಯ ಪ್ರಭಾವದಿಂದ ಈ ರಾಜ್ಯವನ್ನು ಹೇಗೆ ರಕ್ಷಿಸಬಲ್ಲೆನು? (ನನ್ನ ಬಲವಾದರೋ ನನ್ನ ಅಣ್ಣನೇ ಆಗಿದ್ದಾನೆ.॥14॥

ಮೂಲಮ್ - 15

ತಂ ಹಿ ನಿತ್ಯಂ ಮಹಾರಾಜೋ ಬಲವಂತಂ ಮಹೌಜಸಮ್ ।
ಉಪಾಶ್ರಿತೋಽಭೂದ್ಧರ್ಮಾತ್ಮಾ ಮೇರುರ್ಮೇರುವನಂ ಯಥಾ ॥

ಅನುವಾದ

ಮೇರುಪರ್ವತವು ತನ್ನ ರಕ್ಷಣೆಗಾಗಿ ತನ್ನ ಮೇಲೆ ಹುಟ್ಟಿದ ಗಹನ ವನವನ್ನು ಆಶ್ರಯಿಸಿದಂತೆ (ಆ ದುರ್ಗಮ ವನದಿಂದ ಆವರಿಸದಿದ್ದರೆ ಬೇರೆ ಜನರು ನಿಶ್ಚಯವಾಗಿ ಅದರ ಮೇಲೆ ಆಕ್ರಮಣ ಮಾಡಬಲ್ಲರು?) ನನ್ನ ಧರ್ಮಾತ್ಮ ತಂದೆ ಮಹಾರಾಜರೂ ಕೂಡ ಸದಾ ಆ ಮಹಾತೇಜಸ್ವೀ ಬಲವಂತ ಶ್ರೀರಾಮನ ಆಶ್ರಯವನ್ನೇ ಪಡೆಯುತ್ತಿದ್ದರು. (ಅವನಲ್ಲೇ ತನ್ನ ಲೋಕ-ಪರಲೋಕದ ಸಿದ್ಧಿಯ ಆಸೆಯನ್ನಿಟ್ಟಿದ್ದರು.॥15॥

ಮೂಲಮ್ - 16

ಸೋಽಹಂ ಕಥಮಿಮಂ ಭಾರಂ ಮಹಾಧುರ್ಯಸಮುದ್ಯತಮ್ ।
ದಮ್ಯೋ ಧುರಮಿವಾಸಾದ್ಯ ಸಹೇಯಂ ಕೇನ ಚೌಜಸಾ ॥

ಅನುವಾದ

ಈ ರಾಜ್ಯದ ಭಾರವನ್ನು ಮಹಾ ಧುರಂಧನು ಧರಿಸಿದಂತೆ, ನಾನು ಯಾವ ಬಲದಿಂದ ಧರಿಸಬಲ್ಲೆನು? ಯಾವುದಾದರೂ ಸಣ್ಣದಾದ ಕರುವು ದೊಡ್ಡ-ದೊಡ್ಡ ಎತ್ತುಗಳು ಎಳೆಯುವ ಮಹಾಭಾರವನ್ನು ಎಳೆಯಲಾರದೋ ಹಾಗೆಯೇ ಈ ರಾಜ್ಯದ ಮಹಾಭಾರವನ್ನು ನಾನು ಸಹಿಸಲಾರೆ.॥16॥

ಮೂಲಮ್ - 17

ಅಥವಾ ಮೇಭವೇಚ್ಛಕ್ತಿರ್ಯೋಗೈರ್ಬುದ್ಧಿಬಲೇನ ವಾ
ಸಕಾಮಾಂ ನ ಕರಿಷ್ಯಾಮಿ ತ್ವಾಮಹಂ ಪುತ್ರಗರ್ದ್ಧಿನೀಮ್ ॥

ಅನುವಾದ

ಅಥವಾ ನಾನಾ ಪ್ರಕಾರದ ಉಪಾಯಗಳಿಂದ ಹಾಗೂ ಬುದ್ಧಿಬಲದಿಂದ ರಾಜ್ಯವಾಳುವ ಶಕ್ತಿ ನನ್ನಲ್ಲಿ ಇದ್ದರೂ ಕೇವಲ ತನ್ನ ಮಗನಿಗಾಗಿ ರಾಜ್ಯವನ್ನು ಬಯಸುವ ನಿನ್ನ ಮನೋ ಕಾಮನೆ ಪೂರ್ಣವಾಗಿಸಲು ಬಿಡುವುದಿಲ್ಲ.॥17॥

ಮೂಲಮ್ - 18

ನ ಮೇ ವಿಕಾಂಕ್ಷಾ ಜಾಯೇತ ತ್ಯಕ್ತುಂ ತ್ವಾಂ ಪಾಪನಿಶ್ಚಯಾಮ್ ।
ಯದಿ ರಾಮಸ್ಯ ನಾವೇಕ್ಷಾ ತ್ವಯಿ ಸ್ಯಾನ್ಮಾತೃವತ್ಸದಾ ॥

ಅನುವಾದ

ಶ್ರೀರಾಮನು ನಿನ್ನನ್ನು ಸದಾ ತನ್ನ ಮಾತೆಯಂತೆ ನೋಡದಿದ್ದರೆ, ನಿನ್ನಂತಹ ಪಾಪಪೂರ್ಣ ವಿಚಾರವುಳ್ಳ ಮಾತೆಯನ್ನು ತ್ಯಜಿಸಲು ನಾನು ಕೊಂಚವೂ ಹಿಂಜರಿಯುವುದಿಲ್ಲ.॥18॥

ಮೂಲಮ್ - 19

ಉತ್ಪನ್ನಾ ತು ಕಥಂ ಬುದ್ಧಿಸ್ತವೇಯಂ ಪಾಪದರ್ಶಿನೀ ।
ಸಾಧುಚಾರಿತ್ರವಿಭ್ರಷ್ಟೇ ಪೂರ್ವೇಷಾಂ ನೋ ವಿಗರ್ಹಿತಾ ॥

ಅನುವಾದ

ಉತ್ತಮ ಚರಿತ್ರದಿಂದ ಪತನಗೊಂಡ ಪಾಪಿನಿಯೇ! ನನ್ನ ಪೂರ್ವಜರು ಸದಾ ನಿಂದಿಸುತ್ತಿದ್ದ, ಪಾಪದಲ್ಲೇ ದೃಷ್ಟಿಯನ್ನಿಡುವ ಬುದ್ಧಿಯು ನಿನ್ನಲ್ಲಿ ಹೇಗೆ ಉತ್ಪನ್ನವಾಯಿತು.॥19॥

ಮೂಲಮ್ - 20

ಅಸ್ಮ್ಮಿನ್ಕುಲೇ ಹಿ ಸರ್ವೇಷಾಂ ಜ್ಯೇಷ್ಠೋರಾಜ್ಯೇಽಭಿಷಿಚ್ಯತೇ ।
ಅಪರೇ ಭ್ರಾತರಸ್ತಸ್ಮಿನ್ ಪ್ರವರ್ತಂತೇ ಸಮಾಹಿತಾಃ ॥

ಅನುವಾದ

ಈ ಕುಲದಲ್ಲಿ ಎಲ್ಲರಿಗಿಂತ ಹಿರಿಯವನಾದವನಿಗೆ ರಾಜ್ಯಾಭಿಷೇಕ ಆಗುತ್ತದೆ. ಇತರ ಸಹೋದರರು ಏಕಾಗ್ರಚಿತ್ತದಿಂದ ಹಿರಿಯವನ ಆಜ್ಞೆಗಧೀನವಾಗಿದ್ದು ಕಾರ್ಯ ಮಾಡುತ್ತಾರೆ.॥20॥

ಮೂಲಮ್ - 21

ನ ಹಿ ಮನ್ಯೇ ನೃಶಂಸೇ ತ್ವಂ ರಾಜಧರ್ಮಮವೇಕ್ಷಸೇ ।
ಗತಿಂ ವಾ ನ ವಿಜಾನಾಸಿ ರಾಜವೃತ್ತಸ್ಯ ಶಾಶ್ವತೀಮ್ ॥

ಅನುವಾದ

ಕ್ರೂರಸ್ವಭಾವವುಳ್ಳ ಕೈಕೇಯಿ! ನಾನು ತಿಳಿದಂತೆ ನೀನು ರಾಜಧರ್ಮವನ್ನು ನೋಡಿಯೇ ಇಲ್ಲ ಅಥವಾ ಅದನ್ನು ಏನೂ ತಿಳಿದಿಲ್ಲ. ರಾಜರುಗಳ ವರ್ತನೆಯ ಸನಾತನ ಸ್ವರೂಪವೂ ನಿನಗೆ ಅರಿವಿಲ್ಲ.॥21॥

ಮೂಲಮ್ - 22

ಸತತಂ ರಾಜಪುತ್ರೇಷು ಜ್ಯೇಷ್ಠೋ ರಾಜಾಭಿಷಿಚ್ಯತೇ ।
ರಾಜ್ಞಾಮೇತತ್ಸಮಂ ತತ್ ಸ್ಯಾದಿಕ್ಷ್ವಾಕೂಣಾಂ ವಿಶೇಷತಃ ॥

ಅನುವಾದ

ರಾಜಕುಮಾರರಲ್ಲಿ ಹಿರಿಯವನಾದವನಿಗೇ ರಾಜ್ಯ ಪಟ್ಟಾಭಿಷೇಕ ಮಾಡಲಾಗುತ್ತದೆ. ಎಲ್ಲ ರಾಜರಲ್ಲಿ ಇದೇ ನಿಯಮ ಪಾಲಿಸಲಾಗುತ್ತದೆ. ಇಕ್ಷ್ವಾಕುವಂಶೀ ಅರಸರಲ್ಲಿ ಇದರ ವಿಶೇಷ ಆದರವಿದೆ.॥22॥

ಮೂಲಮ್ - 23

ತೇಷಾಂ ಧರ್ಮೈಕರಕ್ಷಾಣಾಂ ಕುಲಚಾರಿತ್ರಶೋಭಿನಾಮ್ ।
ಅದ್ಯ ಚಾರಿತ್ರಶೌಟಾರ್ಯಂ ತ್ವಾಂ ಪ್ರಾಪ್ಯವಿನಿವರ್ತಿತಮ್ ॥

ಅನುವಾದ

ಯಾವುದು ಏಕಮಾತ್ರ ಧರ್ಮದಿಂದಲೇ ರಕ್ಷಣೆ ಆಗುತ್ತಾ ಬಂದಿದೆಯೋ, ಕುಲೋಚಿತ ಸದಾಚಾರದ ಪಾಲನೆಯಿಂದಲೇ ಸುಶೋಭಿತವಾಗಿದೆಯೋ, ಆ ಚಾರಿತ್ರ್ಯ ವಿಷಯಕ ಅಭಿಮಾನವು ಇಂದು ನಿನ್ನನ್ನು ಪಡೆದು, ನಿನ್ನ ಸಂಬಂಧದಿಂದ ದೂರವಾಯಿತು.॥23॥

ಮೂಲಮ್ - 24

ತವಾಪಿ ಸು ಮಹಾಭಾಗೇ ಜನೇಂದ್ರಕುಲಪೂರ್ವಕೇ ।
ಬುದ್ಧೇರ್ಮೋಹಃ ಕಥಮಯಂ ಸಂಭೂತಸ್ತ್ವಯಿ ಗರ್ಹಿತಃ ॥

ಅನುವಾದ

ಮಹಾಭಾಗೇ! ನೀನೂ ಮಹಾರಾಜ ಕೇಕಯ ಕುಲದಲ್ಲೇ ಹುಟ್ಟಿರುವೆ, ಹೀಗಿದ್ದರೂ ನಿನ್ನ ಹೃದಯದಲ್ಲಿ ಇಂತಹ ನಿಂದಿತ ಬುದ್ಧಿಮೋಹ ಹೇಗೆ ಉಂಟಾಯಿತು.॥24॥

ಮೂಲಮ್ - 25

ನ ತು ಕಾಮಂ ಕರಿಷ್ಯಾಮಿ ತವಾಹಂ ಪಾಪನಿಶ್ಚಯೇ ।
ಯಯಾ ವ್ಯಸನಮಾರಬ್ಧಂ ಜೀವಿತಾಂತಕರಂ ಮಮ ॥

ಅನುವಾದ

ಎಲೆಗೆ! ನಿನ್ನ ವಿಚಾರ ಬಹಳ ಪಾಪಪೂರ್ಣವಾಗಿದೆ. ನಿನ್ನ ಇಚ್ಛೆಯನ್ನು ನಾನು ಎಂದಿಗೂ ಪೂರ್ಣ ಮಾಡಲಾರೆ. ನೀನು ನನ್ನ ಪ್ರಾಣವೇ ಕಳೆಯುವಂತಹ ವಿಪತ್ತಿನ ಅಡಿಪಾಯವನ್ನೇ ಹಾಕಿರುವೆ.॥25॥

ಮೂಲಮ್ - 26

ಏಷ ತ್ವಿದಾನೀಮೇವಾಹಮ ಪ್ರಿಯಾರ್ಥಂ ತವಾನಘಮ್ ।
ನಿವರ್ತಯಿಷ್ಯಾಮಿ ವನಾದ್ಭ್ರಾತರಂ ಸ್ವಜನಪ್ರಿಯಮ್ ॥

ಅನುವಾದ

ನೋಡು, ನಾನು ಈಗ ನಿನಗೆ ಅಪ್ರಿಯವಾದುದನ್ನು ಮಾಡಲು ಹೊರಟಿರುವೆನು. ಸ್ವಜನರ ಪ್ರಿಯನಾದ ನಿಷ್ಪಾಪ ಅಣ್ಣನಾದ ಶ್ರೀರಾಮನನ್ನು ವನದಿಂದ ನಾನು ಮರಳಿ ಕರೆದುಕೊಂಡು ಬರುತ್ತೇನೆ.॥26॥

ಮೂಲಮ್ - 27

ನಿವರ್ತಯಿತ್ವಾ ರಾಮಂ ಚ ತಸ್ಯಾಹಂ ದೀಪ್ತತೇಜಸಃ ।
ದಾಸಭೂತೋ ಭವಿಷ್ಯಾಮಿ ಸುಸ್ಥಿತೇನಾಂತರಾತ್ಮನಾ ॥

ಅನುವಾದ

ಶ್ರೀರಾಮ ನನ್ನು ಮರಳಿ ಕರೆದುಕೊಂಡುಬಂದು, ಉದ್ದೀಪ್ತ ತೇಜವುಳ್ಳ ಮಹಾಪುರುಷನಾದ ಅವನ ದಾಸನಾಗಿ ಸ್ವಸ್ಥಚಿತ್ತದಿಂದ ಜೀವನ ಕಳೆಯುವೆನು.॥27॥

ಮೂಲಮ್ - 28

ಇತ್ಯೇವಮುಕ್ತ್ವಾ ಭರತೋ ಮಹಾತ್ಮಾ
ಪ್ರಿಯೇತರೈರ್ವಾಕ್ಯಗಣೈಸ್ತುದಂಸ್ತಾಮ್ ।
ಶೋಕಾರ್ದಿತಶ್ಚಾಪಿ ನನಾದ ಭೂಯಃ
ಸಿಂಹೋ ಯಥಾ ಮಂದರಕಂದರಸ್ಥಃ ॥

ಅನುವಾದ

ಹೀಗೆ ಹೇಳಿ ಮಹಾತ್ಮಾ ಭರತನು ಶೋಕದಿಂದ ಪೀಡಿತನಾಗಿ ಪುನಃ ಕಟುಮಾತುಗಳಿಂದ ಕೈಕೇಯನ್ನು ನೋಯಿಸುತ್ತಾ, ಮಂದರಾಚಲದ ಗುಹೆಯಲ್ಲಿ ಕುಳಿತಿರುವ ಸಿಂಹವು ಗರ್ಜಿಸುವಂತೆ ಆಕೆಯನ್ನು ತೆಗಳುತ್ತಿದ್ದನು.॥28॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು.॥73॥