०७२ भरतविलापः

वाचनम्
ಭಾಗಸೂಚನಾ

ಭರತನು ಕೈಕೇಯಿಯ ಅಂತಃಪುರಕ್ಕೆ ಹೋಗಿ ತಾಯಿಯನ್ನು ವಂದಿಸಿ ಆಕೆಯಿಂದ ದಶರಥನ ಮರಣವಾರ್ತೆಯನ್ನು ಕೇಳಿ ವಿಲಪಿಸುದುದು, ಶ್ರೀರಾಮನು ಅರಣ್ಯಕ್ಕೆ ಹೋದ ವೃತ್ತಾಂತವನ್ನು ತಾಯಿಯು ತಿಳಿಸಿದುದು

ಮೂಲಮ್ - 1

ಅಪಶ್ಯಂಸ್ತು ತತಸ್ತತ್ರ ಪಿತರಂ ಪಿತುರಾಲಯೇ ।
ಜಗಾಮ ಭರತೋ ದ್ರಷ್ಟುಂ ಮಾತರಂ ಮಾತುರಾಲಯೇ ॥

ಅನುವಾದ

ತಂದೆಯ ಭವನವನ್ನು ಪ್ರವೇಶಿಸಿದ ಭರತನು ಅಲ್ಲಿ ಪಿತನು ಇಲ್ಲದಿರುವುದನ್ನು ನೋಡಿ ತಾಯಿಯ ದರ್ಶನಕ್ಕಾಗಿ ಕೈಕೆಯಿಯ ಅಂತಃಪುರಕ್ಕೆ ಹೋದನು.॥1॥

ಮೂಲಮ್ - 2

ಅನುಪ್ರಾಪ್ತಂ ತು ತಂ ದೃಷ್ಟ್ವಾ ಕೈಕೇಯೀ ಪ್ರೋಷಿತಂ ಸುತಮ್ ।
ಉತ್ಪಪಾತ ತದಾ ಹೃಷ್ಟಾ ತ್ಯಕ್ತ್ವಾ ಸೌವರ್ಣಮಾಸನಮ್ ॥

ಅನುವಾದ

ತನ್ನ ತಂದೆಯ ಮನೆಯಿಂದ ಹಿಂದಿರುಗಿದ ಪುತ್ರನನ್ನು ನೋಡಿ ಕೈಕೇಯಿಯು ಹರ್ಷಗೊಂಡು ತಾನು ಕುಳಿತಿದ್ದ ಸುವರ್ಣ ಆಸನವನ್ನು ಬಿಟ್ಟು ಸಟ್ಟನೆ ಎದ್ದುನಿಂತಳು.॥2॥

ಮೂಲಮ್ - 3

ಸ ಪ್ರವಿಶ್ಯೈವ ಧರ್ಮಾತ್ಮಾ ಸ್ವಗೃಹಂ ಶ್ರೀವಿವರ್ಜಿತಮ್ ।
ಭರತಃ ಪ್ರೇಕ್ಷ ಜಗ್ರಾಹ ಜನನ್ಯಾಶ್ಚರಣೌ ಶುಭೌ ॥

ಅನುವಾದ

ಧರ್ಮಾತ್ಮಾ ಭರತನು ತನ್ನ ಆ ಅಂತಃಪುರವನ್ನು ಪ್ರವೇಶಿಸಿ ಅದು ಶೋಭಾಹೀನವಾಗಿರುವುದನ್ನು ನೋಡಿ ಮತ್ತೆ ತಾಯಿಯ ಶುಭ ಚರಣಗಳನ್ನು ಮುಟ್ಟಿ ನಮಸ್ಕರಿಸಿದನು.॥3॥

ಮೂಲಮ್ - 4

ತಂ ಮೂರ್ಧ್ನಿ ಸಮುಪಾಘ್ರಾಯ ಪರಿಷ್ವಜ್ಯ ಯಶಸ್ವಿನಮ್ ।
ಅಂಕೇ ಭರತಮಾರೋಪ್ಯ ಪ್ರಷ್ಟಂ ಸಮುಪಚಕ್ರಮೇ ॥

ಅನುವಾದ

ತನ್ನ ಯಶಸ್ವೀ ಪುತ್ರ ಭರತನನ್ನು ಅಪ್ಪಿಕೊಂಡು ಕೈಕೇಯಿಯು ಅವನ ಶಿರವನ್ನು ಆಘ್ರಾಣಿಸಿ, ಅವನನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಸಮಾಚಾರ ಕೇಳಲು ಪ್ರಾರಂಭಿಸಿದಳು.॥4॥

ಮೂಲಮ್ - 5

ಆದ್ಯ ತೇ ಕತಿಚಿದ್ರಾತ್ರ್ಯಶ್ಚ್ಯುತಸ್ಯಾರ್ಯಕವೇಶ್ಮನಃ ।
ಅಪಿ ನಾಧ್ವಶ್ರಮಃ ಶೀಘ್ರಂ ರಥೇನಾಪತತಸ್ತವ ॥

ಅನುವಾದ

ಮಗು! ನೀನು ತಾತನ ಮನೆಯಿಂದ ಹೊರಟು ಇಂದಿಗೆ ಎಷ್ಟು ದಿನಗಳಾದವು? ನೀನು ರಥದಲ್ಲಿ ಕುಳಿತು ಬಹಳ ಶೀಘ್ರವಾಗಿ ಬಂದಿರುವೆ. ದಾರಿಯಲ್ಲಿ ಹೆಚ್ಚು ಆಯಾಸವಾಗಿಲ್ಲವಲ್ಲ.॥5॥

ಮೂಲಮ್ - 6

ಆರ್ಯಕಸ್ತೇ ಸುಕುಶಲೀ ಯುಧಾಜಿನ್ಮಾತುಲಸ್ತವ ।
ಪ್ರವಾಸಾಚ್ಚ ಸುಖಂ ಪುತ್ರ ಸರ್ವಂ ಮೇ ವಕ್ತುಮರ್ಹಸಿ ॥

ಅನುವಾದ

ನಿನ್ನ ತಾತನವರು ಕ್ಷೇಮತಾನೇ? ನಿನ್ನ ಮಾವ ಯುಧಾಜಿತ್ತು ಕುಶಲವಾಗಿರುವನು ತಾನೇ? ಮಗು! ನೀನು ಇಲ್ಲಿಂದ ಹೋದಂದಿನಿಂದ ಇಂದಿನವರೆಗೆ ಸುಖವಾಗಿದ್ದೆಯಲ್ಲ? ಇದೆಲ್ಲವನ್ನು ತಿಳಿಸಪ್ಪ.॥6॥

ಮೂಲಮ್ - 7

ಏವಂ ಪೃಷ್ಟಸ್ತು ಕೈಕೇಯ್ಯಾ ಪ್ರಿಯಂ ಪಾರ್ಥಿವನಂದನಃ ।
ಅಪಷ್ಟ ಭರತಃ ಸರ್ವಂ ಮಾತ್ರೇ ರಾಜೀವಲೋಚನಃ ॥

ಅನುವಾದ

ಕೈಕೇಯಿಯು ಹೀಗೆ ಪ್ರೇಮದಿಂದ ಕೇಳಿದಾಗ ದಶರಥ ನಂದನ ಕಮಲ ನಯನ ಭರತನು ತಾಯಿಗೆ ಎಲ್ಲವನ್ನು ತಿಳಿಸಿದನು.॥7॥

ಮೂಲಮ್ - 8

ಅದ್ಯ ಮೇ ಸಪ್ತಮೀ ರಾತ್ರಿಶ್ಚ್ಯುತಸ್ಯಾರ್ಯಕವೇಶ್ಮನಃ ।
ಅಂಬಾಯಾಃ ಕುಶಲೀ ತಾತೋ ಯುಧಾಜಿನ್ಮಾತುಲಶ್ಚ ಮೇ ॥

ಅನುವಾದ

ಭರತನು ಹೇಳುತ್ತಾನೆ - ಅಮ್ಮಾ! ತಾತನ ಮನೆಯಿಂದ ಹೊರಟು ಇಂದು ಎಂಟನೆಯ ದಿನವಾಗಿದೆ. ನನ್ನ ತಾತ ಮತ್ತು ಮಾವ ಯುಧಾಜಿತ್ತು ಕ್ಷೇಮವಾಗಿದ್ದಾರೆ.॥8॥

ಮೂಲಮ್ - 9

ಯನ್ಮೇ ಧನಂ ಚ ರತ್ನಂ ಚ ದದೌ ರಾಜಾಪರಂತಪಃ ।
ಪರಿಶ್ರಾಂತಂ ಪಥ್ಯಭವತ್ತತೋಽಹಂ ಪೂರ್ವಮಾಗತಃ ॥

ಮೂಲಮ್ - 10

ರಾಜವಾಕ್ಯಹರೈರ್ದೂತೈಸ್ತ್ವರ್ಯಮಾಣೋಽಹಮಾಗತಃ ।
ಯದಿಹಂ ಪ್ರಷ್ಟುಮಿಚ್ಛಾಮಿ ತದಂಬಾ ವಕ್ತುಮರ್ಹಸಿ ॥

ಅನುವಾದ

ಪರಂತಪ ಕೇಕಯ ರಾಜನು ನನಗೆ ಕೊಟ್ಟ ಧನ-ರತ್ನಾದಿಗಗಳ ಭಾರದಿಂದ ಸೈನ್ಯವೆಲ್ಲ ಬಳಲಿಹೋಗಿದೆ. ಅವರು ಹಿಂದಿನಿಂದ ಬರುತ್ತಾ ಇದ್ದಾರೆ. ರಾಜಕೀಯ ಸಂದೇಶ ತಂದ ದೂತರು ಅವಸರಪಡಿಸಿದ್ದರಿಂದ ನಾನು ಮೊದಲೇ ಬಂದುಬಿಟ್ಟೆ. ಸರಿ, ಅಮ್ಮ! ನಾನು ಕೇಳುವುದನ್ನು ಹೇಳಮ್ಮ.॥9-10॥

ಮೂಲಮ್ - 11

ಶೂನ್ಯೋಽಯಂ ಶಯನೀಯಸ್ತೇ ಪರ್ಯಂಕೋ ಹೇಮಭೂಷಿತಃ ।
ನ ಚಾಯಮಿಕ್ಷ್ವಾಕುಜನಃ ಪ್ರಹೃಷ್ಟಃ ಪ್ರತಿಭಾತಿ ಮೇ ॥

ಅನುವಾದ

ಈ ನಿನ್ನ ಸುವರ್ಣಭೂಷಿತ ಮಂಚದ ಮೇಲಿರುವ ಶಯ್ಯೆ ಈಗ ಬರಿದಾಗಿರುವ ಕಾರಣವೇನು? (ಇಂದು ಮಹಾರಾಜರು ಇಲ್ಲಿ ಏಕೆ ಇಲ್ಲ?) ಈ ಮಹಾರಾಜರ ಪರಿಜನರು ಇಂದು ಪ್ರಸನ್ನರಾಗಿ ಏಕೆ ಕಾಣುವುದಿಲ್ಲ.॥11॥

ಮೂಲಮ್ - 12

ರಾಜಾ ಭವತಿ ಭೂಯಿಷ್ಠಮಿಹಾಂಬಾಯಾ ನಿವೇಶನೇ ।
ತಮಹಂ ನಾದ್ಯ ಪಶ್ಯಾಮಿ ದ್ರಷ್ಟುಮಿಚ್ಛನ್ನಿಹಾಗತಃ ॥

ಅನುವಾದ

ತಂದೆಯವರಾದ ಮಹಾರಾಜರು ಸಾಮಾನ್ಯವಾಗಿ ನಿನ್ನ ಅಂತಃಪುರದಲ್ಲೇ ಇರುತ್ತಿದ್ದರು. ಆದರೆ ಇಂದು ನಾನು ಅವರನ್ನೂ ಇಲ್ಲಿ ನೋಡುತ್ತಿಲ್ಲವಲ್ಲ? ಅವರ ದರ್ಶನ ಪಡೆಯಲೆಂದೇ ನಾನು ಇಲ್ಲಿಗೆ ಬಂದಿರುವೆನು.॥12॥

ಮೂಲಮ್ - 13

ಪಿತುರ್ಗ್ರಹೀಷ್ಯೇ ಪಾದೌ ಚ ತಂ ಮಮಾಖ್ಯಾಹಿ ಪೃಚ್ಛತಃ ।
ಆಹೋಸ್ವಿದಂಬಾಜ್ಯೇಷ್ಠಾಯಾಃ ಕೌಸಲ್ಯಾಯಾ ನಿವೇಶನೇ ॥

ಅನುವಾದ

ಅಮ್ಮ! ತಂದೆಯವರು ಎಲ್ಲಿದ್ದಾರೆ? ಹೇಳು. ನಾನು ಅವರ ಕಾಲಿಗೆ ಬೀಳಬೇಕು ಅಥವಾ ದೊಡ್ಡಮ್ಮ ಕೌಸಲ್ಯೆಯ ಅಂತಃಪುರದಲ್ಲಿ ಅವರು ಇಲ್ಲವಲ್ಲ.॥13॥

ಮೂಲಮ್ - 14

ತಂ ಪ್ರತ್ಯುವಾಚ ಕೈಕೇಯೀ ಪ್ರಿಯವದ್ ಘೋರಮಪ್ರಿಯಮ್ ।
ಅಜಾನಂತಂ ಪ್ರಜಾನಂತೀ ರಾಜ್ಯಲೋಭೇನಮೋಹಿತಾ ॥

ಅನುವಾದ

ಕೈಕೇಯಿಯು ರಾಜ್ಯಲೋಭದಿಂದ ಮೋಹಿತಳಾಗಿದ್ದಳು. ರಾಜನ ವೃತ್ತಾಂತವನ್ನು ಅರಿಯದ ಭರತನಲ್ಲಿ ಆ ಘೋರ ಅಪ್ರಿಯ ಸಮಾಚಾರವನ್ನು ಪ್ರಿಯವೆಂದೇ ತಿಳಿದು ಈ ಪ್ರಕಾರ ಹೇಳತೊಡಗಿದಳು.॥14॥

ಮೂಲಮ್ - 15

ಯಾ ಗತಿಃ ಸರ್ವಭೂತಾನಾಂ ತಾಂ ಗತಿಂ ತೇ ಪಿತಾ ಗತಃ ।
ರಾಜಾ ಮಹಾತ್ಮಾ ತೇಜಸ್ವೀ ಯಾಯಜೂಕಃ ಸತಾಂಗತಿಃ ॥

ಅನುವಾದ

ಮಗು! ನಿನ್ನ ತಂದೆಯವರಾದ ಮಹಾರಾಜರು ಬಹಳ ಮಹಾತ್ಮರೂ, ತೇಜಸ್ವಿಗಳೂ, ಯಜ್ಞಶೀಲರೂ, ಸತ್ಪುರುಷರ ಆಶ್ರಯದಾತರೂ ಆಗಿದ್ದರು. ಒಂದಲ್ಲ ಒಂದು ದಿನ ಸಮಸ್ತ ಪ್ರಾಣಿಗಳಿಗೆ ಆಗುವ ಗತಿಯೇ ಅವರಿಗೆ ಪ್ರಾಪ್ತವಾಯಿತು.॥15॥

ಮೂಲಮ್ - 16

ತಚ್ಛ್ರುತ್ವಾ ಭರತೋ ವಾಕ್ಯಂ ಧರ್ಮಾಭಿಜನವಾನ್ಛುಚಿಃ ।
ಪಪಾತ ಸಹಸಾ ಭೂಮೌ ಪಿತೃಶೋಕಬಲಾರ್ದಿತಃ ॥

ಮೂಲಮ್ - 17

ಹಾ ಹತೋಽಸ್ಮೀತಿ ಕೃಪಣಾಂ ದೀನಾಂ ವಾಚಮುದೀರಯನ್ ।
ನಿಪಪಾತ ಮಹಾಬಾಹುರ್ಬಾಹೂ ವಿಕ್ಷಿಪ್ಯ ವೀರ್ಯವಾನ್ ॥

ಅನುವಾದ

ಧಾರ್ಮಿಕ ಕುಲದಲ್ಲಿ ಹುಟ್ಟಿದ ಭರತನ ಹೃದಯ ಶುದ್ಧವಾಗಿತ್ತು. ತಾಯಿಯ ಮಾತನ್ನು ಕೇಳಿ ಅವನು ಪಿತೃಶೋಕದಿಂದ ಅತ್ಯಂತ ಪೀಡಿತನಾಗಿ ಕೂಡಲೇ ನೆಲಕ್ಕೆ ಕುಸಿದನು. ‘ಅಯ್ಯೋ! ನಾನು ಸತ್ತೆ’ ಎಂದು ಅತ್ಯಂತ ದೀನ ಮತ್ತು ದುಃಖಮಯ ಮಾತನ್ನು ಹೇಳುತ್ತಾ ಅಳತೊಡಗಿದನು. ಪರಾಕ್ರಮೀ ಮಹಾಬಾಹು ಭರತನು ಕೈಗಳನ್ನು ಪದೇ-ಪದೇ ನೆಲಕ್ಕೆ ಬಡಿಯುತ್ತಾ, ಹೊರಳಾಡಿದನು.॥16-17॥

ಮೂಲಮ್ - 18

ತತಃ ಶೋಕೇನ ಸಂವೀತಃ ಪಿತುರ್ಮರಣದುಃಖಿತಃ ।
ವಿಲಲಾಪ ಮಹಾತೇಜಾ ಭ್ರಾಂತಾಕುಲಿತಚೇತನಃ ॥

ಅನುವಾದ

ಆ ಮಹಾತೇಜಸ್ವೀ ರಾಜಕುಮಾರನ ಚಿತ್ತ ಭ್ರಾಂತ ಹಾಗೂ ವ್ಯಾಕುಲವಾಯಿತು. ಅವನು ತಂದೆಯ ಮೃತ್ಯುವಿನಿಂದಾಗಿ ದುಃಖ-ಶೋಕದಿಂದ ವ್ಯಾಕುಲಚಿತ್ತನಾಗಿ ವಿಲಪಿಸ ತೊಡಗಿದನು.॥18॥

ಮೂಲಮ್ - 19

ಏತತ್ಸುರುಚಿರಂ ಭಾತಿ ಪಿತುರ್ಮೇ ಶಯನಂ ಪುರಾ ।
ಶಶಿನೇವಾಮಲಂ ರಾತ್ರೌ ಗಗನಂತೋಯದಾತ್ಯಯೇ ॥

ಮೂಲಮ್ - 20

ತದಿದಂ ನ ವಿಭಾತ್ಯದ್ಯ ವಿಹೀನಂ ತೇನ ಧೀಮತಾ ।
ವ್ಯೋಮೇವ ಶಶಿನಾ ಹೀನಮಪ್ಶುಷ್ಕ ಇವ ಸಾಗರಃ ॥

ಅನುವಾದ

ಅಯ್ಯೋ! ನನ್ನ ತಂದೆಯ ಈ ಅತ್ಯಂತ ಸುಂದರ ಶಯ್ಯೆಯು ಮೊದಲು ಶರತ್ಕಾಲದ ರಾತ್ರಿಯು ಚಂದ್ರನಿಂದ ಸುಶೋಭಿತವಾಗುವ ನಿರ್ಮಲ ಆಕಾಶದಂತೆ ಶೋಭಿಸುತ್ತಿತ್ತು. ಅದೇ ಇಂದು ಬುದ್ಧಿವಂತ ಮಹಾರಾಜರಿಂದ ರಹಿತವಾಗಿ ಚಂದ್ರನಿಲ್ಲದ ಆಕಾಶದಂತೆ, ಒಣಗಿದ ಸಮುದ್ರದಂತೆ ಕಳಾಹೀನವಾಗಿ ಕಾಣುತ್ತಿದೆ.॥19-20॥

ಮೂಲಮ್ - 21

ಬಾಷ್ಪಮುತ್ಸೃಜ್ಯ ಕಂಠೇನ ಸ್ವಾತ್ಮನಾ ಪರಿಪೀಡಿತಃ ।
ಪ್ರಚ್ಛಾದ್ಯ ವದನಂ ಶ್ರೀಮದ್ವಸ್ತ್ರೇಣ ಜಯತಾಂ ವರಃ ॥

ಅನುವಾದ

ವಿಜಯೀ ವೀರರಲ್ಲಿ ಶ್ರೇಷ್ಠನಾದ ಭರತನು ತನ್ನ ಸುಂದರ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಬಿಸುಸುಯ್ದು ಕಂಬನಿಗರೆಯುತ್ತಾ ಅತ್ಯಂತ ಪೀಡಿತನಾಗಿ ನೆಲದಲ್ಲಿ ಬಿದ್ದು ಗೋಳಾಡತೊಡಗಿದನು.॥21॥

ಮೂಲಮ್ - 22

ತಮಾರ್ತಂ ದೇವಸಂಕಾಶಂ ಸಮೀಕ್ಷ್ಯ ಪತಿತಂ ಭುವಿ ।
ನಿಕೃತ್ತಮಿವ ಸಾಲಸ್ಯ ಸ್ಕಂಧಂ ಪರಶುನಾ ವನೇ ॥

ಮೂಲಮ್ - 23

ಮಾತಾ ಮಾತಂಗಸಂಕಾಶಂ ಚಂದ್ರಾರ್ಕಸದೃಶಂ ಸುತಮ್ ।
ಉತ್ಥಾಪಯಿತ್ವಾ ಶೋಕಾರ್ತಂ ವಚನಂ ಚೇದಮಬ್ರವೀತ್ ॥

ಅನುವಾದ

ದೇವತುಲ್ಯ ಭರತನು ಶೋಕದಿಂದ ವ್ಯಾಕುಲನಾಗಿ ಕೊಡಲಿಯಿಂದ ಕಡಿದ ಸಾಲವೃಕ್ಷದಂತೆ ಭೂಮಿಗೆ ಬಿದ್ದುಬಿಟ್ಟನು. ಮತ್ತಗಜದಂತೆ ಪುಷ್ಟನಾದ ಚಂದ್ರ-ಸೂರ್ಯರಂತೆ ತೇಜಸ್ವಿ, ಶೋಕಾಕುಲನಾದ ತನ್ನ ಪುತ್ರನು ಹೀಗೆ ನೆಲದಲ್ಲಿ ಬಿದ್ದಿರುವುದನ್ನು ನೋಡಿ ತಾಯಿ ಕೈಕೇಯಿಯು ಅವನನ್ನು ಎಬ್ಬಿಸಿ, ಈ ಪ್ರಕಾರ ಹೇಳಿದಳು.॥22-23॥

ಮೂಲಮ್ - 24

ಉತ್ತಿಷ್ಠೋತ್ತಿಷ್ಠ ಕಿಂ ಶೇಷೇ ರಾಜನ್ನತ್ರ ಮಹಾಯಶಃ ।
ತ್ವದ್ವಿಧಾ ನಹಿ ಶೋಚಂತಿ ಸಂತಃ ಸದಸಿ ಸಮ್ಮತಾಃ ॥

ಅನುವಾದ

ರಾಜಾ! ಏಳು, ಏಳು! ಮಹಾಯಶಸ್ವೀ ಕುಮಾರ! ನೀನು ಹೀಗೆ ಇಲ್ಲಿ ಧರೆಯಲ್ಲಿ ಏಕೆ ಬಿದ್ದಿರುವೆ? ಸಭೆಯಲ್ಲಿ ಸಮ್ಮಾನಿತರಾಗುವ ನಿನ್ನಂತಹ ಸತ್ಪುರುಷರು ಶೋಕಿಸುವುದಿಲ್ಲ.॥24॥

ಮೂಲಮ್ - 25

ದಾನಯಜ್ಞಾಧಿಕಾರಾ ಹಿ ಶೀಲಶ್ರುತಿತಪೋನುಗಾ ।
ಬುದ್ಧಿಸ್ತೇ ಬುದ್ಧಿಸಂಪನ್ನ ಪ್ರಭೇವಾರ್ಕಸ್ಯ ಮಂದಿರೇ ॥

ಅನುವಾದ

ಬುದ್ಧಿಸಂಪನ್ನ ಮಗನೇ! ಸೂರ್ಯನಲ್ಲಿ ಪ್ರಭೆಯು ನಿಶ್ಚಲವಾಗಿ ಇರುವಂತೆ ನಿನ್ನ ಬುದ್ಧಿ ಸುಸ್ಥಿರವಾಗಿದೆ. ಅದು ದಾನ-ಯಜ್ಞದಲ್ಲಿ ತೊಡಗುವಂತಹುದಾಗಿದೆ; ಏಕೆಂದರೆ ಸದಾಚಾರ ಹಾಗೂ ವೇದವಾಕ್ಯಗಳನ್ನು ಅನುಸರಿಸುವಂತಹುದಾಗಿದೆ.॥25॥

ಮೂಲಮ್ - 26

ಸ ರುದಿತ್ವಾ ಚಿರಂ ಕಾಲಂ ಭೂಮೌ ಪರಿವಿವೃತ್ಯ ಚ ।
ಜನನೀಂ ಪ್ರತ್ಯುವಾಚೇದಂ ಶೋಕೈರ್ಬಹುಭಿರಾವೃತಃ ॥

ಅನುವಾದ

ಭರತನು ಭೂಮಿಯಲ್ಲಿ ಹೀಗೆ ಬಹಳ ಹೊತ್ತು ಹೊರಳಾಡುತ್ತಾ ಇದ್ದು, ಮತ್ತೆ ಹೆಚ್ಚಾದ ಶೋಕದಿಂದ ವ್ಯಾಕುಲನಾಗಿ ಅವನು ತಾಯಿಯಲ್ಲಿ ಹೀಗೆ ಹೇಳಿದನು.॥26॥

ಮೂಲಮ್ - 27

ಅಭೀಷೇಕ್ಷ್ಯತಿ ರಾಮಂ ತು ರಾಜಾ ಯಜ್ಞಂ ನು ಯಕ್ಷ್ಯತೇ ।
ಇತ್ಯಹಂ ಕೃತಸಂಕಲ್ಪೋ ಹೃಷ್ಟೋ ಯಾತ್ರಾಮಯಾಸಿಷಮ್ ॥

ಅನುವಾದ

ಮಹಾರಾಜರು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ, ಯಜ್ಞಾನುಷ್ಠಾನ ಮಾಡುವರು ಹೀಗೆ ಯೋಚಿಸಿಯೇ ನಾನು ಬಹಳ ಹರ್ಷದಿಂದ ಅಲ್ಲಿಂದ ಪ್ರಯಾಣ ಮಾಡಿದ್ದೆ.॥27॥

ಮೂಲಮ್ - 28

ತದಿದಂ ಹ್ಯನ್ಯಥಾಭೂತಂ ವ್ಯವದೀರ್ಣಂ ಮನೋ ಮಮ ।
ಪಿತರಂ ಯೋ ನ ಪಶ್ಯಾಮಿ ನಿತ್ಯಂ ಪ್ರಿಯಹಿತೇ ರತಮ್ ॥

ಅನುವಾದ

ಆದರೆ ಇಲ್ಲಿಗೆ ಬಂದಾಗ ಎಲ್ಲ ಸಂಗತಿಗಳು ನನ್ನ ಆಸೆಗೆ ವಿಪರೀತವಾಗಿಯೇ ಆದುವು. ನನ್ನ ಎದೆ ಬಿರಿಯುತ್ತಿದೆ; ಏಕೆಂದರೆ ಸದಾ ನಮ್ಮ ಪ್ರಿಯ ಮತ್ತು ಹಿತದಲ್ಲೇ ಇದ್ದ ತಂದೆಯನ್ನು ನಾನು ಇಂದು ನೋಡುತ್ತಿಲ್ಲ.॥28॥

ಮೂಲಮ್ - 29

ಅಂಬ ಕೇನಾತ್ಯಗಾದ್ರಾಜಾ ವ್ಯಾಧಿನಾ ಮಯ್ಯನಾಗತೇ ।
ಧನ್ಯಾ ರಾಮಾದಯಃ ಸರ್ವೇ ಯೈಃ ಪಿತಾಸೃಂಸ್ಕೃತಃ ಸ್ವಯಮ್ ॥

ಅನುವಾದ

ಅಮ್ಮಾ! ನಾನು ಬರುವ ಮೊದಲೇ ತೀರಿಹೋಗಲು ಮಹಾರಾಜರಿಗೆ ಯಾವ ರೋಗ ಉಂಟಾಗಿತ್ತು? ಶ್ರೀರಾಮನೇ ಆದಿ ಎಲ್ಲ ಸಹೋದರರು ಧನ್ಯರಾಗಿದ್ದಾರೆ. ಅವರು ಸ್ವತಃ ನಿಂತು ತಂದೆಯವರ ಅಂತ್ಯೇಷ್ಟಿಯನ್ನು ಮಾಡಿದರು.॥29॥

ಮೂಲಮ್ - 30

ನ ನೂನಂ ಮಾಂ ಮಹಾರಾಜಃ ಪ್ರಾಪ್ತಂ ಜಾನಾತಿಕೀರ್ತಿಮಾನ್ ।
ಉಪಜಿಘ್ರೇತ್ ತು ಮಾಂ ಮೂರ್ಧ್ನಿ ತಾತಃ ಸಂನಾಮ್ಯ ಸತ್ವರಮ್ ॥

ಅನುವಾದ

ನಿಶ್ಚಯವಾಗಿ ಪೂಜ್ಯರಾದ ನನ್ನ ತಂದೆ ಯಶಸ್ವೀ ಮಹಾರಾಜರಿಗೆ ನಾನು ಬರುವುದು ತಿಳಿದಿರಲಿಕ್ಕಿಲ್ಲ. ಇಲ್ಲದಿದ್ದರೆ ಅವರು ಶೀಘ್ರವಾಗಿ ನನ್ನ ತಲೆಯನ್ನು ಬಗ್ಗಿಸಿ ಪ್ರೀತಿಯಿಂದ ಆಘ್ರಾಣಿಸುತ್ತಿದ್ದರು.॥30॥

ಮೂಲಮ್ - 31

ಕ್ವ ಸ ಪಾಣಿಃ ಸುಖಸ್ಪರ್ಶಸ್ತಾತಸ್ಯಾಕ್ಲಿಷ್ಟಕರ್ಮಣಃ ।
ಯೋ ಮಾಂ ರಜಸಾ ಧ್ವಸ್ತಮಭೀಕ್ಷ್ಣಂ ಪರಿಮಾರ್ಜತಿ ॥

ಅನುವಾದ

ಅಯ್ಯೋ! ಸುಲಭವಾಗಿ ಮಹತ್ಕಾರ್ಯ ಮಾಡುವ ನನ್ನ ತಂದೆಯವರ ಆ ಕೋಮಲ ಕೈ ಎಲ್ಲಿದೆ? ಅದರ ಸ್ಪರ್ಶದಿಂದ ನನಗೆ ಬಹಳ ಸುಖವಾಗುತ್ತಿತ್ತು. ಅವರು ಅದೇ ಕೈಯಿಂದ ಪದೇ-ಪದೇ ಧೂಳಿಧೂಸರಿತನಾದ ನನ್ನ ಶರೀರವನ್ನು ನೇವರಿಸುತ್ತಿದ್ದರು.॥31॥

ಮೂಲಮ್ - 32

ಯೋ ಮೇ ಭ್ರಾತಾ ಪಿತಾ ಬಂಧುರ್ಯಸ್ಯ ದಾಸೋಽಸ್ಮಿ ಸಮ್ಮತಃ ।
ತಸ್ಯ ಮಾಂ ಶೀಘ್ರಮಾಖ್ಯಾಹಿ ರಾಮಸ್ಯಾಕ್ಲಿಷ್ಟಕರ್ಮಣಃ ॥

ಅನುವಾದ

ಈಗ ನನಗೆ ಅಣ್ಣನೂ, ತಂದೆಯೂ, ಬಂಧುವೂ ಆದ ಶ್ರೀರಾಮಚಂದ್ರನಿಗೆ ನಾನು ಪರಮಪ್ರಿಯದಾಸನಾಗಿರುವೆನು. ಅನಾಯಾಸವಾಗಿಯೇ ಮಹಾಪರಾಕ್ರಮ ತೋರುವ ಅವನಿಗೆ ನಾನು ಬಂದಿರುವ ಸೂಚನೆಯನ್ನು ಬೇಗನೇ ಕೊಡು.॥32॥

ಮೂಲಮ್ - 33

ಪಿತಾ ಹಿ ಭವತಿ ಜ್ಯೇಷ್ಠೋ ಧರ್ಮಮಾರ್ಯಸ್ಯ ಜಾನತಃ ।
ತಸ್ಯ ಪಾದೌ ಗ್ರಹೀಷ್ಯಾಮಿ ಸ ಹೀದಾನೀಂ ಗತಿರ್ಮಮ ॥

ಅನುವಾದ

ಧರ್ಮಜ್ಞನಾದ ಶ್ರೇಷ್ಠ ಪುರುಷನಿಗೆ ಜ್ಯೇಷ್ಠ ಸಹೋದರ ತಂದೆಯಂತೆ ಆಗಿರುತ್ತಾನೆ. ನಾನು ಅವನ ಚರಣಗಳಲ್ಲಿ ನಮಸ್ಕಾರ ಮಾಡುವೆನು. ಈಗ ಅವನೇ ನನಗೆ ಆಶ್ರಯವಾಗಿದ್ದಾನೆ.॥33॥

ಮೂಲಮ್ - 34½

ಧರ್ಮವಿದ್ಧರ್ಮಶೀಲಶ್ಚ ಮಹಾಭಾಗೋ ದೃಢವ್ರತಃ ।
ಆರ್ಯೇ ಕಿಮಬ್ರವೀದ್ರಾಜಾ ಪಿತಾ ಮೇಸತ್ಯವಿಕ್ರಮಃ ॥
ಪಶ್ಚಿಮಃ ಸಾಧುಸಂದೇಶಮಿಚ್ಛಾಮಿ ಶ್ರೋತುಮಾತ್ಮನಃ ।

ಅನುವಾದ

ಆರ್ಯೆ! ಧರ್ಮದ ಆಚರಣೆಯೇ ಸ್ವಭಾವವಾಗಿದ್ದ, ದೃಢತೆಯಿಂದ ಉತ್ತಮವ್ರತವನ್ನು ಪಾಲಿಸುವ, ಸತ್ಯಪರಾಕ್ರಮಿ ಹಾಗೂ ಧರ್ಮಜ್ಞ ನನ್ನ ತಂದೆ ಮಹಾರಾಜರು ಅಂತ್ಯಸಮಯದಲ್ಲಿ ಏನು ಹೇಳುತ್ತಿದ್ದರು? ನನಗಾಗಿ ಅವರ ಏನಾದರೂ ಸಂದೇಶವಿದ್ದರೆ ನಾನು ಕೇಳಲು ಬಯಸುತ್ತೇನೆ.॥34॥

ಮೂಲಮ್ - 35

ಇತಿ ಪೃಷ್ಟಾ ಯಥಾತತ್ತ್ವಂ ಕೈಕೇಯೀ ವಾಕ್ಯಮಬ್ರವೀತ್ ॥

ಮೂಲಮ್ - 36

ರಾಮೇತಿ ರಾಜಾ ವಿಲಪನ್ ಹಾ ಸೀತೇ ಲಕ್ಷ್ಮಣೇತಿ ಚ ।
ಸ ಮಹಾತ್ಮಾ ಪರಂ ಲೋಕಂ ಗತೋ ಮತಿಮತಾಂ ವರಃ ॥

ಅನುವಾದ

ಭರತನು ಹೀಗೆ ಕೇಳಿದಾಗ ಕೈಕೇಯಿಯು ಎಲ್ಲ ಸಂಗತಿಯನ್ನು ಸರಿಯಾಗಿ ತಿಳಿಸಿದಳು. ಅವಳು ಹೇಳಿದಳು - ಮಗು! ಬುದ್ಧಿವಂತರಲ್ಲಿ ಶ್ರೇಷ್ಠರಾದ ನಿನ್ನ ತಂದೆ ಮಹಾರಾಜರು ಹಾ ರಾಮಾ! ಹಾ ಸೀತೆ! ಹಾ ಲಕ್ಷ್ಮಣಾ! ಹೀಗೆ ಪ್ರಲಾಪಮಾಡುತ್ತಾ ಪರಲೋಕದ ಯಾತ್ರೆ ಮಾಡಿದರು.॥35-36॥

ಮೂಲಮ್ - 37

ಇತೀಮಾಂ ಪಶ್ಚಿಮಾಂ ವಾಚಂ ವ್ಯಾಜಹಾರಪಿತಾ ತವ ।
ಕಾಲಧರ್ಮಂ ಪರಿಕ್ಷಿಪ್ತಃ ಪಾಶೈರಿವ ಮಹಾಗಜಃ ॥

ಅನುವಾದ

ಬಂಧನದಲ್ಲಿದ್ದ ಗಜರಾಜ ವಿವಶವಾದಂತೆ ಕಾಲಧರ್ಮಕ್ಕೆ ವಶೀಭೂತರಾದ ನಿನ್ನ ತಂದೆಯವರು ಅಂತಿಮವಾಗಿ ಹೀಗೆ ಹೇಳುತ್ತಿದ್ದರು.॥37॥

ಮೂಲಮ್ - 38

ಸಿದ್ಧಾರ್ಥಾಸ್ತು ನರಾ ರಾಮಮಾಗತಂ ಸಹ ಸೀತಯಾ ।
ಲಕ್ಷ್ಮಣಂ ಚ ಮಹಾಬಾಹುಂ ದ್ರಕ್ಷ್ಯಂತಿ ಪುನರಾಗತಮ್ ॥

ಅನುವಾದ

ಸೀತಾಸಹಿತ ಪುನಃ ಮರಳಿ ಬಂದ ಶ್ರೀರಾಮನನ್ನು ಮತ್ತು ಮಹಾಬಾಹು ಲಕ್ಷ್ಮಣನನ್ನು ನೋಡುವವರೆ ಕೃತಾರ್ಥರಾಗುವರು.॥38॥

ಮೂಲಮ್ - 39

ತಚ್ಛ್ರುತ್ವಾ ವಿಷಸಾದೈವ ದ್ವಿತೀಯಾಪ್ರಿಯಶಂಸನಾತ್ ।
ವಿಷಣ್ಣವದನೋ ಭೂತ್ವಾ ಭೂಯಃ ಪಪ್ರಚ್ಛ ಮಾತರಮ್ ॥

ಅನುವಾದ

ತಾಯಿಯು ಹೇಳಿದ ಈ ಇನ್ನೊಂದು ಅಪ್ರಿಯ ಮಾತನ್ನು ಕೇಳಿ ಭರತನು ಇನ್ನೂ ದುಃಖಿತನಾದನು. ಅವನ ಮುಖದಲ್ಲಿ ವಿಷಾದ ಆವರಿಸಿತು. ಅವನು ಪುನಃ ತಾಯಿಯ ಬಳಿ ಕೇಳಿದನು .॥39॥

ಮೂಲಮ್ - 40

ಕ್ವ ಚೇದಾನೀಂ ಸ ಧರ್ಮಾತ್ಮಾ ಕೌಸಲ್ಯಾನಂದವರ್ಧನಃ ।
ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಚ ಸಮಾಗತಃ ॥

ಅನುವಾದ

ಅಮ್ಮಾ! ಕೌಸಲ್ಯಾನಂದವರ್ಧನ ಧರ್ಮಾತ್ಮಾ ಶ್ರೀರಾಮಚಂದ್ರನು ಈ ಸಂದರ್ಭದಲ್ಲಿ ಲಕ್ಷ್ಮಣ ಮತ್ತು ಸೀತೆಯೊಂದಿಗೆ ಎಲ್ಲಿಗೆ ಹೋಗಿರುವರು.॥40॥

ಮೂಲಮ್ - 41

ತಥಾ ಪೃಷ್ಟಾ ಯಥಾನ್ಯಾಯಮಾಖ್ಯಾತುಮುಪಚಕ್ರಮೇ ।
ಮಾತಾಸ್ಯ ಯುಗಪದ್ವಾಕ್ಯಂ ವಿಪ್ರಿಯಂ ಪ್ರಿಯಶಂಸಯಾ ॥

ಅನುವಾದ

ಹೀಗೆ ಕೇಳಿದಾಗ ಅವನ ತಾಯಿ ಕೈಕೇಯಿಯು ಒಂದೇ ಸಮನೆ ಪ್ರಿಯಬುದ್ಧಿಯಿಂದ ಆ ಅಪ್ರಿಯ ಸಂವಾದವನ್ನು ಯಥೋಚಿತವಾಗಿ ಹೇಳಲು ಪ್ರಾರಂಭಿಸಿದಳು.॥41॥

ಮೂಲಮ್ - 42

ಸ ಹಿ ರಾಜಸುತಃ ಪುತ್ರ ಚೀರವಾಸಾ ಮಹಾವನಮ್ ।
ದಂಡಕಾನ್ಸಹ ವೈದೇಹ್ಯಾ ಲಕ್ಷ್ಮಣಾನುಚರೋ ಗತಃ ॥

ಅನುವಾದ

ಮಗನೇ! ರಾಜಕುಮಾರ ಶ್ರೀರಾಮನು ವಲ್ಕಲಗಳನ್ನು ಧರಿಸಿ ಸೀತೆಯೊಂದಿಗೆ ದಂಡಕಾರಣ್ಯಕ್ಕೆ ಹೊರಟು ಹೋದನು. ಲಕ್ಷ್ಮಣನೂ ಅವನನ್ನು ಅನುಸರಿಸಿ ಹೋಗಿರುವನು.॥42॥

ಮೂಲಮ್ - 43

ತಚ್ಛ್ರುತ್ವಾ ಭರತಸ್ತ್ರಸ್ತೋ ಭ್ರಾತುಶ್ಚಾರಿತ್ರಶಂಕಯಾ ।
ಸ್ವಸ್ಯ ವಂಶಸ್ಯ ಮಾಹಾತ್ಮ್ಯಾತ್ ಪ್ರಷ್ಟುಂ ಸಮುಪಚಕ್ರಮೇ ॥

ಅನುವಾದ

ಇದನ್ನು ಕೇಳಿ ಭರತನು ಹೆದರಿಹೋದನು, ಅವನಿಗೆ ಅಣ್ಣನ ಚರಿತ್ರದಲ್ಲಿ ಶಂಕೆ ಉಂಟಾಯಿತು (ಶ್ರೀರಾಮನು ಎಲ್ಲಾದರೂ ಧರ್ಮದಿಂದ ಪತಿತನಾಗಿಲ್ಲವಲ್ಲ ಎಂದು ಯೋಚಿಸತೊಡಗಿದನು) ತನ್ನ ವಂಶದ ಮಹತಿಯನ್ನು ನೆನೆದು ಅವನು ಕೈಕೇಯಿಯ ಬಳಿ ಕೇಳಿದನು.॥43॥

ಮೂಲಮ್ - 44

ಕಚ್ಛಿನ್ನ ಬ್ರಾಹ್ಮಣಧನಂ ಹೃತಂ ರಾಮೇಣ ಕಸ್ಯಚಿತ್ ।
ಕಚ್ಛಿನ್ನಾಢ್ಯೋ ದರಿದ್ರೋ ವಾ ತೇನಾಪಾಪೋ ವಿಹಿಂಸಿತಃ ॥

ಅನುವಾದ

ಅಮ್ಮಾ! ಶ್ರೀರಾಮನು ಯಾವುದೋ ಕಾರಣದಿಂದ ಬ್ರಾಹ್ಮಣರ ಧನವನ್ನು ಅಪಹರಿಸಲಿಲ್ಲವಲ್ಲ? ಯಾವನಾದರೂ ನಿಷ್ಪಾಪಿ ಶ್ರೀಮಂತನ ಅಥವಾ ದರಿದ್ರನ ಹತ್ಯೆಯನ್ನು ಮಾಡಿಬಿಟ್ಟನೇ.॥44॥

ಮೂಲಮ್ - 45

ಕಚ್ಚಿನ್ನ ಪರದಾರಾನ್ವಾ ರಾಜಪುತ್ರೋಭಿಮನ್ಯತೇ ।
ಕಸ್ಮಾತ್ಸ ದಂಡಕಾರಣ್ಯೇಭ್ರಾತಾ ರಾಮೋ ವಿವಾಸಿತಃ ॥

ಅನುವಾದ

ರಾಜಕುಮಾರ ಶ್ರೀರಾಮನ ಮನಸ್ಸು ಯಾವುದಾದರೂ ಪರಸ್ತ್ರೀಯ ಕಡೆಗೆ ಹೋಗಿಲ್ಲವಲ್ಲ? ಯಾವ ಅಪರಾಧಕ್ಕಾಗಿ ಅಣ್ಣನಾದ ಶ್ರೀರಾಮನನ್ನು ದಂಡಕಾರಣ್ಯಕ್ಕೆ ಕಳಿಸಲಾಯಿತು.॥45॥

ಮೂಲಮ್ - 46

ಅಥಾಸ್ಯ ಚಪಲಾ ಮಾತಾ ತತ್ಸ್ವಕರ್ಮ ಯಥಾತಥಮ್ ।
ತೇನೈವ ಸ್ತ್ರೀಸ್ವಭಾವೇನ ವ್ಯಾಹರ್ತುಮುಪಚಕ್ರಮೇ ॥

ಅನುವಾದ

ಆಗ ಚಪಲ ಸ್ವಭಾವದ ಭರತನ ತಾಯಿ ಕೈಕೇಯಿಯು ವಿವೇಕಶೂನ್ಯ ಚಂಚಲ ನಾರೀಸ್ವಭಾವದಿಂದ ತನ್ನ ಕಾರಸ್ಥಾನವನ್ನು ಸರಿಯಾಗಿ ತಿಳಿಸಲು ಪ್ರಾರಂಭಿಸಿದಳು.॥46॥

ಮೂಲಮ್ - 47

ಏವಮುಕ್ತಾ ತು ಕೈಕೇಯೀ ಭರತೇನ ಮಹಾತ್ಮನಾ ।
ಉವಾಚ ವಚನಂ ಹೃಷ್ಟಾ ವೃಥಾಪಂಡಿತಮಾನಿನೀ ॥

ಅನುವಾದ

ಮಹಾತ್ಮಾ ಭರತನು ಹಿಂದೆ ಹೇಳಿದಂತೆ ಕೇಳಿದಾಗ ವ್ಯರ್ಥವಾಗಿ ತನ್ನನ್ನು ವಿದುಷಿ ಎಂದು ತಿಳಿದಿರುವ ಕೈಕೇಯಿಯು ಬಹಳ ಹರ್ಷಗೊಂಡು ಹೇಳಿದಳು.॥47॥

ಮೂಲಮ್ - 48

ನ ಬ್ರಾಹ್ಮಣಧನಂ ಕಿಂಚಿದ್ಧೃತಂ ರಾಮೇಣ ಕಸ್ಯಚಿತ್ ।
ಕಚ್ಛಿನ್ನಾಢ್ಯೋ ದರಿದ್ರೋ ವಾ ತೇನಾಪಾಪೋ ವಿಹಿಂಸಿತಃ ।
ನ ರಾಮಃ ಪರದಾರಾನ್ ಸ ಚಕ್ಷುರ್ಭ್ಯಾಮಪಿ ಪಶ್ಯತಿ ॥

ಅನುವಾದ

ಮಗು! ಶ್ರೀರಾಮನು ಯಾವುದೇ ಕಾರಣದಿಂದ ಕಿಂಚಿನ್ಮಾತ್ರವೂ ಬ್ರಾಹ್ಮಣರ ಧನ ಅಪಹಾರ ಮಾಡಿಲ್ಲ. ಯಾವುದೇ ನಿರಪರಾಧೀ ಶ್ರೀಮಂತ ಅಥವಾ ದರಿದ್ರರ ಹತ್ಯೆಯನ್ನು ಅವನು ಮಾಡಲಿಲ್ಲ. ಶ್ರೀರಾಮನು ಯಾವುದೇ ಪರಸ್ತ್ರೀಯ ಕಡೆಗೆ ದೃಷ್ಟಿ ಹರಿಸುವುದಿಲ್ಲ.॥48॥

ಮೂಲಮ್ - 49

ಮಯಾ ತು ಪುತ್ರ ಶ್ರುತ್ವೈವ ರಾಮಸ್ಯೈಹಾಭಿಷೇಚನಮ್ ।
ಯಾಚಿತಸ್ತೇ ಪಿತಾ ರಾಜ್ಯಂ ರಾಮಸ್ಯ ಚ ವಿವಾಸನಮ್ ॥

ಅನುವಾದ

ಮಗನೇ! (ಶ್ರೀರಾಮನು ಕಾಡಿಗೆ ಹೋದ ಕಾರಣ ಇಂತಿದೆ-) ಅಯೋಧ್ಯೆಯಲ್ಲಿ ಶ್ರೀರಾಮ ಪಟ್ಟಾಭಿಷೇಕವಾಗುವುದೆಂದು ಕೇಳಿದಾಗ ನಾನು ನಿನ್ನ ತಂದೆಯ ಬಳಿ ನಿನಗಾಗಿ ರಾಜ್ಯ ಮತ್ತು ಶ್ರೀರಾಮನಿಗಾಗಿ ವನವಾಸವನ್ನು ಬೇಡಿದ್ದೆ.॥49॥

ಮೂಲಮ್ - 50

ಸ ಸ್ವವೃತ್ತಿಂ ಸಮಾಸ್ಥಾಯಪಿತಾ ತೇ ತತ್ತಥಾಕರೋತ್ ।
ರಾಮಸ್ತು ಸಹಸೌಮಿತ್ರಿಃ ಪ್ರೇಷಿತಃ ಸಹ ಸೀತಯಾ ॥

ಮೂಲಮ್ - 51

ತಮಪಶ್ಯನ್ಪ್ರಿಯಂ ಪುತ್ರಂ ಮಹೀಪಾಲೋ ಮಹಾಯಶಾಃ ।
ಪುತ್ರಶೋಕಪರಿದ್ಯೂನಃ ಪಂಚತ್ವಮುಪಪೇದಿವಾನ್ ॥

ಅನುವಾದ

ಅವರು ತನ್ನ ಸತ್ಯಪ್ರತಿಜ್ಞ ಸ್ವಭಾವಕ್ಕನುಸಾರ ನನ್ನ ಬೇಡಿಕೆಯನ್ನು ಪೂರ್ಣಗೊಳಿಸಿ, ಶ್ರೀರಾಮ-ಲಕ್ಷ್ಮಣರನ್ನು ಸೀತೆಯೊಂದಿಗೆ ವನಕ್ಕೆ ಕಳಿಸಿಕೊಟ್ಟರು. ಮತ್ತೆ ತನ್ನ ಪ್ರಿಯಪುತ್ರ ಶ್ರೀರಾಮನನ್ನು ನೋಡದೆ ಆ ಮಹಾಯಶಸ್ವೀ ಮಹಾರಾಜರು ಪುತ್ರಶೋಕದಿಂದ ಪೀಡಿತರಾಗಿ ಪರಲೋಕವಾಸಿಗಳಾದರು.॥50-51॥

ಮೂಲಮ್ - 52

ತ್ವಯಾ ತ್ವಿದಾನೀಂ ಧರ್ಮಜ್ಞ ರಾಜತ್ವಮವಲಂಬ್ಯತಾಮ್ ।
ತ್ವತ್ಕೃತೇ ಹಿ ಮಯಾ ಸರ್ವಮಿದಮೇವಂವಿಧಂ ಕೃತಮ್ ॥

ಅನುವಾದ

ಧರ್ಮಜ್ಞನೇ! ಈಗ ನೀನು ರಾಜಪದವಿಯನ್ನು ಸ್ವೀಕರಿಸು. ನಿನಗಾಗಿಯೇ ನಾನು ಹೀಗೆಲ್ಲ ಮಾಡಿರುವೆನು.॥52॥

ಮೂಲಮ್ - 53

ಮಾ ಶೋಕಂ ಮಾ ಚ ಸಂತಾಪಂ ಧೈರ್ಯಮಾಶ್ರಯ ಪುತ್ರಕ ।
ತ್ವದಧೀನಾ ಹಿ ನಗರೀ ರಾಜ್ಯಂ ಚೈತದನಾಮಯಮ್ ॥

ಅನುವಾದ

ಮಗು! ಶೋಕ ಮತ್ತು ಸಂತಾಪವನ್ನು ಪಡಬೇಡ, ಧೈರ್ಯವನ್ನು ಆಶ್ರಯಿಸು. ಈಗ ಈ ನಗರ ಮತ್ತು ನಿಷ್ಕಂಟಕ ರಾಜ್ಯ ನಿನ್ನ ಅಧೀನವೇ ಇದೆ.॥53॥

ಮೂಲಮ್ - 54

ತತ್ಪುತ್ರ ಶೀಘ್ರಂ ವಿಧಿನಾ ವಿಧಿಜ್ಞೈ-
ರ್ವಸಿಷ್ಠಮುಖ್ಯೈಃ ಸಹಿತೋ ದ್ವಿಜೇಂದ್ರೈಃ ।
ಸಂಕಾಲ್ಯ ರಾಜಾನಮದೀನಸತ್ವ -
ಮಾತ್ಮಾನಮುರ್ವ್ಯಾಮಭೀಷೇಚಯಸ್ವ ॥

ಅನುವಾದ

ಆದ್ದರಿಂದ ಮಗನೇ! ಈಗ ವಿಧಿ-ವಿಧಾನಬಲ್ಲ ವಸಿಷ್ಠಾದಿ ಬ್ರಾಹ್ಮಣರೊಂದಿಗೆ ನೀನು ಉದಾರಹೃದಯೀ ಮಹಾರಾಜರ ಅಂತ್ಯಕ್ರಿಯೆ ನಡೆಸಿ ಈ ಪೃಥವಿಯ ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿಕೋ.॥54॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು ॥72॥