०७० भरतस्य निशाक्रमणम्

वाचनम्
ಭಾಗಸೂಚನಾ

ಅಯೋಧ್ಯೆಯ ದೂತರು ಭರತನಿಗೂ, ಭರತನ ಸೋದರಮಾವನಿಗೂ ಉಡುಗೊರೆಯ ವಸ್ತುಗಳನ್ನು ಅರ್ಪಿಸಿದುದು, ವಸಿಷ್ಠರ ಸಂದೇಶವನ್ನು ತಿಳಿಯಪಡಿಸಿದುದು, ಭರತನು ತಂದೆಯೇ ಮೊದಲಾದವರ ಕುಶಲವನ್ನು ಕೇಳಿ ತಾತನ ಅನುಮತಿಯನ್ನು ಪಡೆದು ಶತ್ರುಘ್ನನೋಡನೆ ಅಯೋಧ್ಯೆಗೆ ಹೊರಡುವುದು

ಮೂಲಮ್ - 1

ಭರತೇ ಬ್ರುವತಿ ಸ್ವಪ್ನಂ ದೂತಾಸ್ತೇ ಕ್ಲಾಂತವಾಹನಾಃ ।
ಪ್ರವಿಶ್ಯಾಸಹ್ಯಪರಿಖಂ ರಮ್ಯಂ ರಾಜಗೃಹಂ ಪುರಮ್ ॥

ಅನುವಾದ

ಈ ಪ್ರಕಾರ ಭರತನು ಮಿತ್ರರಿಗೆ ತನ್ನ ಸ್ವಪ್ನವೃತ್ತಾಂತವನ್ನು ತಿಳಿಸುತ್ತಿರುವಾಗ, ಬಳಲಿದ ಕುದುರೆಗಳಿಂದ ಬಂದ ಆ ದೂತರು ಆ ರಮಣೀಯ ರಾಜಗೃಹಪುರ ಪ್ರವೇಶಿಸಿದರು. ಸುತ್ತಲಿರುವ ಕಂದಕವನ್ನು ದಾಟುವುದು ಶತ್ರುಗಳಿಗೆ ಬಹಳ ಕಠಿಣವಾಗಿತ್ತು.॥1॥

ಮೂಲಮ್ - 2

ಸಮಾಗಮ್ಯ ಚ ರಾಜ್ಞಾ ತೇ ರಾಜಪುತ್ರೇಣ ಚಾರ್ಚಿತಾಃ ।
ರಾಜ್ಞಃ ಪಾದೌ ಗೃಹೀತ್ವಾ ಚ ತಮೂಚುರ್ಭರತಂ ವಚಃ ॥

ಅನುವಾದ

ನಗರಕ್ಕೆ ಬಂದ ಆ ದೂತರು ಕೇಕೆಯ ದೇಶದ ರಾಜನನ್ನು ಮತ್ತು ರಾಜಕುಮಾರನನ್ನು ಭೆಟ್ಟಿಯಾದರು ಹಾಗೂ ಅವರಿಬ್ಬರನ್ನೂ ಸತ್ಕರಿಸಿದರು. ಮತ್ತೆ ಅವರು ಭಾವೀರಾಜನಾದ ಭರತನ ಕಾಲು ಮುಟ್ಟಿ ಇಂತೆಂದರು.॥2॥

ಮೂಲಮ್ - 3

ಪುರೋಹಿತಸ್ತ್ವಾಂ ಕುಶಲಂ ಪ್ರಾಹ ಸರ್ವೇ ಚ ಮಂತ್ರಿಣಃ ।
ತ್ವರಮಾಣಶ್ಚ ನಿರ್ಯಾಹಿ ಕೃತ್ಯಮಾತ್ಯಯಿಕಂ ತ್ವಯಾ ॥

ಅನುವಾದ

ಕುಮಾರ! ಪುರೋಹಿತರು ಹಾಗೂ ಸಮಸ್ತ ಮಂತ್ರಿಗಳು ನಿಮ್ಮಲ್ಲಿ ಕುಶಲವನ್ನು ಕೇಳಿರುವರು. ಈಗ ನೀವು ಶೀಘ್ರವಾಗಿ ಇಲ್ಲಿಂದ ಹೊರಡಿರಿ. ಅಯೋಧ್ಯೆಯಲ್ಲಿ ನಿಮಗೆ ಅತ್ಯಂತ ಆವಶ್ಯಕ ಕಾರ್ಯವಿದೆ.॥3॥

ಮೂಲಮ್ - 4

ಇಮಾನಿ ಚ ಮಹಾರ್ಹಾಣಿ ವಸ್ತ್ರಾಣ್ಯಾರಣಾನಿ ಚ ।
ಪ್ರತಿಗೃಹ್ಯ ವಿಶಾಲಾಕ್ಷ ಮಾತುಲಸ್ಯ ಚ ದಾಪಯ ॥

ಅನುವಾದ

ವಿಶಾಲನೇತ್ರವುಳ್ಳ ರಾಜ ಕುಮಾರನೇ! ಈ ಅಮೂಲ್ಯವಾದ ವಸ್ತ್ರ-ಒಡವೆಗಳನ್ನು ನೀವು ಸ್ವತಃ ಸ್ವೀಕರಿಸಿರಿ ಮತ್ತು ನಿಮ್ಮ ಮಾವನವರಿಗೂ ಕೊಡಿರಿ.॥4॥

ಮೂಲಮ್ - 5

ಅತ್ರ ವಿಂಶತಿಕೋಟ್ಯಸ್ತು ನೃಪತೇರ್ಮಾತುಲಸ್ಯ ತೇ ।
ದಶಕೋಟ್ಯಸ್ತು ಸಂಪೂರ್ಣಾಸ್ತಥೈವ ಚ ನೃಪಾತ್ಮಜ ॥

ಅನುವಾದ

ರಾಜಕುಮಾರ! ಇಲ್ಲಿಗೆ ತಂದಿರುವ ಸಾಮಗ್ರಿಯಲ್ಲಿ ಇಪ್ಪತ್ತುಕೋಟಿಯ ಸಾಮಗ್ರಿಯು ನಿಮ್ಮ ತಾತನವರಾದ ಕೇಕಯ ನರೇಶನಿಗಾಗಿ ಇದೆ ಹಾಗೂ ಹತ್ತುಕೋಟಿಯ ವಸ್ತುಗಳು ನಿಮ್ಮ ಮಾವನವರಿಗಾಗಿ ಇದೆ.॥5॥

ಮೂಲಮ್ - 6

ಪ್ರತಿಗೃಹ್ಯ ತು ತತ್ಸರ್ವಂ ಸ್ವನುರಕ್ತಃ ಸಹೃಜ್ಜನೇ ।
ದೂತಾನುವಾಚ ಭರತಃ ಕಾಮೈಃ ಸಂಪ್ರತಿಪೂಜ್ಯ ತಾನ್ ॥

ಅನುವಾದ

ಅವೆಲ್ಲ ವಸ್ತುಗಳನ್ನು ಪಡೆದು ಮಾವನೇ ಆದಿ ಸುಹೃದರಲ್ಲಿ ಅನುರಾಗವುಳ್ಳ ಭರತನು ಅವರಿಗೆ ಹಂಚಿದನು. ಅನಂತರ ಇಚ್ಛಾನುಸಾರ ವಸ್ತುಗಳನ್ನು ಕೊಟ್ಟು, ದೂತರನ್ನು ಸತ್ಕರಿಸಿದ ಬಳಿಕ ಅವನು ಇಂತೆಂದನು.॥6॥

ಮೂಲಮ್ - 7

ಕಚ್ಚಿತ್ ಸ ಕುಶಲೀರಾಜಾ ಪಿತಾ ದಶರಥೋ ಮಮ ।
ಕಚ್ಚಿದಾರೋಗತಾ ರಾಮೇ ಲಕ್ಷ್ಮಣೇ ಚ ಮಹಾತ್ಮನಿ ॥

ಅನುವಾದ

ನಮ್ಮ ತಂದೆಯವರಾದ ಮಹಾರಾಜರು ಕ್ಷೇಮವಾಗಿದ್ದಾರೆ ತಾನೆ? ಮಹಾತ್ಮಾ ಶ್ರೀರಾಮ ಮತ್ತು ಲಕ್ಷ್ಮಣರು ನಿರೋಗಿಯಾಗಿರುವರಲ್ಲ.॥7॥

ಮೂಲಮ್ - 8

ಆರ್ಯಾ ಚ ಧರ್ಮನಿರತಾ ಧರ್ಮಜ್ಞಾ ಧರ್ಮವಾದಿನೀ ।
ಅರೋಗಾ ಚಾಪಿ ಕೌಸಲ್ಯಾ ಮಾತಾ ರಾಮಸ್ಯ ಧೀಮತಃ ॥

ಅನುವಾದ

ಧರ್ಮವನ್ನು ತಿಳಿದ, ಧರ್ಮವನ್ನೇ ಚರ್ಚಿಸುತ್ತಿರುವ ಬುದ್ಧಿವಂತಳಾದ ಶ್ರೀರಾಮ ಮಾತೆ ಆರ್ಯೆ ಕೌಸಲ್ಯೆಯು ಆರೋಗ್ಯವಾಗಿ ಇರುವಳಲ್ಲ.॥8॥

ಮೂಲಮ್ - 9

ಕಚ್ಚಿತ್ಸುಮಿತ್ರಾ ಧರ್ಮಜ್ಞಾ ಜನನೀ ಲಕ್ಷ್ಮಣಸ್ಯ ಯಾ ।
ಶತ್ರುಘ್ನಸ್ಯ ಚ ವೀರಸ್ಯ ಅರೋಗಾ ಚಾಪಿ ಮಧ್ಯಮಾ ॥

ಅನುವಾದ

ವೀರ ಲಕ್ಷ್ಮಣನ ಮತ್ತು ಶತ್ರುಘ್ನನ ಮಾತೆ ನನ್ನ ಮಧ್ಯಮತಾಯಿ ಧರ್ಮಜ್ಞಾ ಸುಮಿತ್ರೆಯು ಸ್ವಸ್ಥ ಮತ್ತು ಸುಖವಾಗಿರುವಳಲ್ಲ.॥9॥

ಮೂಲಮ್ - 10

ಆತ್ಮಕಾಮಾ ಸದಾ ಚಂಡೀ ಕ್ರೋಧನಾ ಪ್ರಾಜ್ಞಮಾನಿನೀ ।
ಅರೋಗಾ ಚಾಪಿ ಮೇ ಮಾತಾ ಕೈಕೇಯೀ ಕಿಮುವಾಚ ಹ ॥

ಅನುವಾದ

ಸದಾ ತನ್ನ ಸ್ವಾರ್ಥವನ್ನೇ ಸಿದ್ಧಗೊಳಿಸಲು ಬಯಸುವ, ತನ್ನನ್ನು ದೊಡ್ಡ ಬುದ್ಧಿವಂತಳೆಂದು ತಿಳಿದುಕೊಂಡ ಆ ಉಗ್ರಸ್ವಭಾವವುಳ್ಳ, ಕೋಪಶೀಲಾ ನನ್ನ ತಾಯಿ ಕೈಕೇಯಿಗೆ ಯಾವುದೇ ಕಷ್ಟವಿಲ್ಲ ತಾನೆ? ಅವಳು ಏನು ಹೇಳಿರುವಳು.॥10॥

ಮೂಲಮ್ - 11

ಏವಮುಕ್ತಾಸ್ತು ತೇ ದೂತಾ ಭರತೇನ ಮಹಾತ್ಮನಾ ।
ಊಚುಃ ಸಪ್ರಶ್ರಿತಂ ವಾಕ್ಯಮಿದಂ ತಂ ಭರತಂ ತದಾ ॥

ಅನುವಾದ

ಮಹಾತ್ಮಾ ಭರತನು ಹೀಗೆ ಕೇಳಿದಾಗ ದೂತರು ವಿನಯದಿಂದ ಅವನಲ್ಲಿ ಹೇಳಿದರು.॥11॥

ಮೂಲಮ್ - 12

ಕುಶಲಾಸ್ತೇ ನರವ್ಯಾಘ್ರ ಯೇಷಾಂ ಕುಶಲಮಿಚ್ಛಸಿ ।
ಶ್ರೀಶ್ಚ ತ್ವಾಂ ವೃಣುತೇ ಪದ್ಮಾ ಯುಜ್ಯತಾಂ ಚಾಪಿ ತೇ ರಥಃ ॥

ಅನುವಾದ

ಪುರುಷಸಿಂಹನೇ! ನಿಮಗೆ ಅಭಿಪ್ರೇತವಿರುವವರು ಸಕುಶಲರಾಗಿದ್ದಾರೆ. ಕೈಯಲ್ಲಿ ಕಮಲವನ್ನು ಧರಿಸಿದ ಲಕ್ಷ್ಮಿಯು ನಿಮ್ಮನ್ನು ವರಣ ಮಾಡುತ್ತಿರುವಳು. ಈಗ ಪ್ರಯಾಣಕ್ಕಾಗಿ ನಿಮ್ಮ ರಥ ಶೀಘ್ರವಾಗಿ ಸಿದ್ಧವಾಗಲೀ.॥12॥

ಮೂಲಮ್ - 13

ಭರತಶ್ಚಾಪಿ ತಾನ್ ದೂತಾನೇವಮುಕ್ತೋಽಭ್ಯಭಾಷತಃ ।
ಆಪೃಚ್ಛೇಹಂ ಮಹಾರಾಜಂ ದೂತಾಃ ಸಂತ್ವರಯಂತಿ ಮಾಮ್ ॥

ಅನುವಾದ

ಆ ದೂತರು ಹೀಗೆ ಹೇಳಿದಾಗ ಭರತನು ಹೇಳಿದನು - ಸರಿ, ‘ದೂತರು ನನ್ನನ್ನು ಶೀಘ್ರವಾಗಿ ಅಯೋಧ್ಯೆಗೆ ಹೊರಡಲು ಹೇಳುತ್ತಿದ್ದಾರೆ. ತಮ್ಮ ಅಪ್ಪಣೆ ಏನು?’ ಎಂದು ಮಹಾರಾಜರಲ್ಲಿ ನಾನು ಕೇಳುತ್ತೇನೆ.॥13॥

ಮೂಲಮ್ - 14

ಏವಮುಕ್ತ್ವಾತು ತಾನ್ ದೂತಾನ್ ಭರತಃ ಪಾರ್ಥಿವಾತ್ಮಜಃ ।
ದೂತೈಃ ಸಂಚೋದಿತೋ ವಾಕ್ಯಂ ಮಾತಾಮಹಮುವಾಚ ಹ ॥

ಅನುವಾದ

ದೂತರಲ್ಲಿ ಹೀಗೆ ಹೇಳಿ ರಾಜಕುಮಾರ ಭರತನು ಅವರಿಂದ ಪ್ರೇರಿತನಾಗಿ ತಾತನ ಬಳಿಗೆ ಹೋಗಿ ಹೇಳಿದನು.॥14॥

ಮೂಲಮ್ - 15

ರಾಜನ್ ಪಿತುರ್ಗಮಿಷ್ಯಾಮಿ ಸಕಾಶಂ ದೂತಚೋದಿತಃ ।
ಪುನರಪ್ಯಹಮೇಷ್ಯಾಮಿ ಯದಾ ಮೇ ತ್ವಂ ಸ್ಮರಿಷ್ಯಸಿ ॥

ಅನುವಾದ

ಮಹಾರಾಜರೇ! ದೂತರು ಹೇಳಿದಂತೆ ನಾನು ಈಗ ತಂದೆಯವರ ಬಳಿಗೆ ಹೋಗುತ್ತಿದ್ದೇನೆ. ಮತ್ತೆ ನೀವು ನೆನೆದಾಗ ನಾನು ಇಲ್ಲಿಗೆ ಬಂದುಬಿಡುವೆನು.॥15॥

ಮೂಲಮ್ - 16

ಭರತೇನೈವಮುಕ್ತಸ್ತು ನೃಪೋ ಮಾತಾಮಹಸ್ತದಾ ।
ತಮುವಾಚ ಶುಭಂ ವಾಕ್ಯಂ ಶಿರಸ್ಯಾಘ್ರಾಯ ರಾಘವಮ್ ॥

ಅನುವಾದ

ಭರತನು ಹೀಗೆ ಹೇಳಿದಾಗ ತಾತ ಕೇಕಯ ನರೇಶನು ಆಗ ಆ ರಘುಕುಲಭೂಷಣ ಭರತನ ಶಿರವನ್ನು ಆಘ್ರಾಣಿಸಿ ಈ ಶುಭವಚನವನ್ನು ಹೇಳಿದನು-॥16॥

ಮೂಲಮ್ - 17

ಗಚ್ಛ ತಾತಾನುಜಾನೇ ತ್ವಾಂ ಕೈಕೇಯೀ ಸುಪ್ರಜಾಸ್ತ್ವಯಾ ।
ಮಾತರಂ ಕುಶಲಂ ಬ್ರೂಯಾಃ ಪಿತರಂ ಚ ಪರಂತಪ ॥

ಅನುವಾದ

ಅಪ್ಪಾ! ಹೋಗು, ನಾನು ನಿನಗೆ ಅಪ್ಪಣೆ ಕೊಡುತ್ತೇನೆ. ನಿನ್ನನ್ನು ಪಡೆದು ಕೈಕೇಯಿಯು ಉತ್ತಮ ಸಂತಾನವುಳ್ಳವಳಾಗಿದ್ದಾಳೆ. ಪರಂತಪ ವೀರನೇ! ನೀನು ನಿನ್ನ ತಾಯಿ-ತಂದೆಯವರಲ್ಲಿ ಇಲ್ಲಿಯ ಕ್ಷೇಮ-ಸಮಾಚಾರ ಹೇಳು.॥17॥

ಮೂಲಮ್ - 18

ಪುರೋಹಿತಂ ಚ ಕುಶಲಂ ಯೇ ಚಾನ್ಯೇ ದ್ವಿಜಸತ್ತಮಾಃ ।
ತೌ ಚ ತಾತ ಮಹೇಷ್ವಾಸೌ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಮಗು ನಿಮ್ಮ ಪುರೋಹಿತರಲ್ಲಿ ಹಾಗೂ ಇತರ ಶ್ರೇಷ್ಠ ಬ್ರಾಹ್ಮಣರಲ್ಲಿಯೂ ನಮ್ಮ ಕುಶಲವನ್ನು ಹೇಳುವುದು. ಆ ಮಹಾಧನುರ್ಧರ ಶ್ರೀರಾಮ-ಲಕ್ಷ್ಮಣರಲ್ಲಿಯೂ ಇಲ್ಲಿಯ ಕ್ಷೇಮ-ಸಮಾಚಾರ ತಿಳಿಸುವುದು.॥18॥

ಮೂಲಮ್ - 19

ತಸ್ಮೈ ಹಸ್ತ್ಯುತ್ತಮಾಂಶ್ಚಿತ್ರಾನ್ ಕಂಬಲಾನಜಿನಾನಿ ಚ ।
ಸತ್ಕೃತ್ಯ ಕೇಕಯೋ ರಾಜಾ ಭರತಾಯ ದದೌ ಧನಮ್ ॥

ಅನುವಾದ

ಹೀಗೆ ಹೇಳಿ ಕೇಕೆಯ ನರೇಶನು ಭರತನನ್ನು ಸತ್ಕರಿಸಿ, ಅವನಿಗೆ ಬಹಳಷ್ಟು ಉತ್ತಮ ಆನೆಗಳನ್ನು, ಚಿತ್ರಿತವಾದ ರತ್ನಗಂಬಳಿಗಳನ್ನು, ಮೃಗಚರ್ಮ ಮತ್ತು ಅಪಾರ ಧನವನ್ನು ಕೊಟ್ಟನು.॥19॥

ಮೂಲಮ್ - 20

ಅಂತಃಪುರೇಽತಿಸಂವೃದ್ಧಾನ್ ವ್ಯಾಘ್ರವೀರ್ಯಬಲೋಪಮಾನ್ ।
ದಂಷ್ಟ್ರಾಯುಕ್ತಾನ್ ಮಹಾಕಾಯಾನ್ ಶುನಶ್ಚೋಪಾಯನಂ ದದೌ ॥

ಅನುವಾದ

ಅಂತಃಪುರದಲ್ಲೇ ಸಾಕಿ ಬೆಳೆಸಿದ, ಬಲ-ಪರಾಕ್ರಮದಲ್ಲಿ ಹುಲಿಯಂತಿದ್ದ, ದಾಡೆಹಲ್ಲುಗಳಿಂದ ಕೂಡಿದ, ವಿಶಾಲ ಕಾಯವಾಗಿದ್ದ ಅನೇಕ ನಾಯಿಗಳನ್ನು ಕೇಕಯ ನರೇಶನು ಭರತನಿಗೆ ಕಾಣಿಕೆಯಾಗಿ ನೀಡಿದನು.॥20॥

ಮೂಲಮ್ - 21

ರುಕ್ಮನಿಷ್ಕಸಹಸ್ರೇ ದ್ವೇ ಷೋಡಶಾಶ್ವಶತಾನಿ ಚ ।
ಸತ್ಕತ್ಯ ಕೇಕಯೀ ಪುತ್ರಂ ಕೇಕಯೋ ಧನಮಾದಿಶತ್ ॥

ಅನುವಾದ

ಎರಡುಸಾವಿರ ಚಿನ್ನದ ನಾಣ್ಯಗಳು, ಸಾವಿರದ ಆರು ನೂರು ಕುದುರೆಗಳನ್ನು ಕೊಟ್ಟನು. ಹೀಗೆ ಕೇಕೆಯನರೇಶನು ಕೈಕೇಯೀ ಕುಮಾರ ಭರತನಿಗೆ ಸತ್ಕಾರಪೂರ್ವಕ ಬಹಳಷ್ಟು ಧನವನ್ನು ನೀಡಿದನು.॥21॥

ಮೂಲಮ್ - 22

ತದಾಮಾತ್ಯಾನಭಿಪ್ರೇತಾನ್ ವಿಶ್ವಾಸ್ಯಾಂಶ್ಚ ಗುಣಾನ್ವಿತಾನ್ ।
ದದಾವಶ್ವಪತಿಃ ಶೀಘ್ರಂ ಭರತಾಯಾನುಯಾಯಿನಃ ॥

ಅನುವಾದ

ಆಗ ಕೈಕೆಯನರೇಶ ಅಶ್ವಪತಿಯು ತನಗೆ ಬೇಕಾದ, ವಿಶ್ವಾಸಪಾತ್ರ, ಗುಣವಂತ ಮಂತ್ರಿಗಳನ್ನು ಭರತನೊಂದಿಗೆ ಹೋಗಲು ಆಜ್ಞಾಪಿಸಿದನು.॥22॥

ಮೂಲಮ್ - 23

ಐರಾವತಾನೈಂದ್ರಶಿರಾನ್ ನಾಗಾನ್ ವೈ ಪ್ರಿಯದರ್ಶನಾನ್ ।
ಖರಾನ್ಶೀಘ್ರಾನ್ಸುಸಂಯುಕ್ತಾನ್ಮಾತುಲೋಽಸ್ಮೈಧನಂ ದದೌ ॥

ಅನುವಾದ

ಭರತನ ಮಾವನೂ ಅವನಿಗೆ ಉಡುಗೊರೆಯಾಗಿ ಇರಾವಾನ್ ಪರ್ವತ ಮತ್ತು ಇಂದ್ರಶಿರ ಎಂಬ ಸ್ಥಾನಗಳಲ್ಲಿ ಹುಟ್ಟಿದ ಅನೇಕ ಸುಂದರ ಆನೆಗಳನ್ನು ಹಾಗೂ ವೇಗವಾಗಿ ನಡೆಯುವ ಹೇಸರಕತ್ತೆಗಳನ್ನು ಕೊಟ್ಟನು.॥23॥

ಮೂಲಮ್ - 24

ಸ ದತ್ತಂ ಕೇಕಯೇಂದ್ರೇಣ ಧನಂ ತನ್ನಾಭ್ಯನಂದತ ।
ಭರತಃ ಕೇಕಯೀಪುತ್ರೋ ಗಮನತ್ವರಯಾ ತದಾ ॥

ಅನುವಾದ

ಆಗ ಹೊರಡುವ ಅವಸರವಿದ್ದ ಕಾರಣ ಕೈಕಯೀಪುತ್ರ ಭರತನು ಕೇಕಯರಾಜನು ಕೊಡ ಮಾಡಿದ ಆ ಧನದ ಕುರಿತು ಅಭಿವಂದಿಸಲಿಲ್ಲ.॥24॥

ಮೂಲಮ್ - 25

ಬಭೂವ ಹ್ಯಸ್ಯ ಹೃದಯೇ ಚಿಂತಾ ಸುಮಹತೀ ತದಾ ।
ತ್ವರಯಾ ಚಾಪಿ ದೂತಾನಾಂ ಸ್ವಪ್ನಸ್ಯಾಪಿ ಚ ದರ್ಶನಾತ್ ॥

ಅನುವಾದ

ಆ ಸಮಯದಲ್ಲಿ ಅವನ ಹೃದಯದಲ್ಲಿ ಭಾರೀ ಚಿಂತೆ ತುಂಬಿತ್ತು. ಒಂದು, ದೂತರು ತಕ್ಷಣ ಅಲ್ಲಿಂದ ಹೊರಡಲು ಅವಸರಪಡಿಸುತ್ತಿದ್ದಾರೆ. ಇನ್ನೊಂದು, ದುಃಸ್ವಪ್ನದರ್ಶನ ಈ ಕಾರಣಗಳಿಂದ ಚಿಂತಿತನಾಗಿದ್ದನು.॥25॥

ಮೂಲಮ್ - 26

ಸ ಸ್ವವೇಶ್ಮಾಭ್ಯತಿಕ್ರಮ್ಯ ನರನಾಗಾಶ್ವಸಂಕುಲಮ್ ।
ಪ್ರಪೇದೇ ಸುಮಹಚ್ಛ್ರೀಮಾನ್ ರಾಜಮಾರ್ಗಮನುತ್ತಮಮ್ ॥

ಅನುವಾದ

ಅವರು ಪ್ರಯಾಣದ ಸಿದ್ಧತೆಯಲ್ಲಿ ತಮ್ಮ ನಿವಾಸಸ್ಥಾನಕ್ಕೆ ಹೋದರು. ಮತ್ತೆ ಅಲ್ಲಿಂದ ಹೊರಟು ಜನರು, ಆನೆಗಳು, ಕುದುರೆಗಳಿಂದ ತುಂಬಿದ ಪರಮೋತ್ತಮ ರಾಜಬೀದಿಗೆ ಬಂದರು. ಆಗ ಭರತನಲ್ಲಿ ಬಹಳ ಸಂಪತ್ತು ಒಟ್ಟುಗೂಡಿತ್ತು.॥26॥

ಮೂಲಮ್ - 27

ಅಭ್ಯತೀತ್ಯ ತತೋಽಪಶ್ಯದಂತಃಪುರಮನುತ್ತಮಮ್ ।
ತತಸ್ತದ್ ಭರತಃ ಶ್ರೀಮಾನಾವಿವೇಶಾನಿವಾರಿತಃ ॥

ಅನುವಾದ

ರಾಜಮಾರ್ಗವನ್ನು ದಾಟಿ ಶ್ರೀಮಾನ್ ಭರತನು ಅರಮನೆಯ ಪರಮೋತ್ತಮ ಅಂತಃಪುರವನ್ನು ಅಡೆ-ತಡೆಗಳಿಲ್ಲದೆ ಪ್ರವೇಶಿಸಿದನು.॥27॥

ಮೂಲಮ್ - 28

ಸ ಮಾತಾಮಹಮಾಪೃಚ್ಛ್ಯ ಮಾತುಲಂ ಚ ಯುಧಾಜಿತಮ್ ।
ರಥಮಾರುಹ್ಯ ಭರತಃ ಶತ್ರುಘ್ನಸಹಿತೋ ಯಯೌ ॥

ಅನುವಾದ

ಅಲ್ಲಿ ತಾತ, ಅಜ್ಜಿ, ಮಾವ ಯುಧಾಜಿತ್ತು ಮತ್ತು ಸೋದರತ್ತೆ ಇವರಿಂದ ಬೀಳ್ಕೊಂಡು ಶತ್ರುಘ್ನನೊಡನೆ ರಥಾರೂಢನಾಗಿ ಪ್ರಯಾಣ ಪ್ರಾರಂಭಿಸಿದನು.॥28॥

ಮೂಲಮ್ - 29

ರಥಾನ್ಮಂಡಲಚತ್ರಾಂಶ್ಚ ಯೋಜಯಿತ್ವಾ ಪರಃ ಶತಮ್ ।
ಉಷ್ಟ್ರಗೋಶ್ವಖರೈರ್ಭೃತ್ಯಾ ಭರತಂ ಯಾಂತಮನ್ವಯುಃ ॥

ಅನುವಾದ

ನೂರಕ್ಕಿಂತಲೂ ಹೆಚ್ಚಾದ ರಥಗಳು, ಒಂಟೆ, ಎತ್ತು, ಕುದುರೆ, ಹೇಸರಗತ್ತೆ ಹೂಡಿದ ಬಂಡಿಗಳು, ಸೇವಕರು ಭರತನನ್ನು ಅನುಸರಿಸಿದವು.॥29॥

ಮೂಲಮ್ - 30

ಬಲೇನ ಗುಪ್ತೋ ಭರತೋ ಮಹಾತ್ಮಾ
ಸಹಾರ್ಯಕಸ್ಯಾತ್ಮಸಮೈರಮಾತ್ಯೈ ।
ಆದಾಯ ಶತ್ರುಘ್ನಮಪೇತಶತ್ರು-
ರ್ಗೃಹಾದ್ಯಯೌ ಸಿದ್ಧ ಇವೇಂದ್ರಲೋಕಾತ್ ॥

ಅನುವಾದ

ಶತ್ರುಹೀನ ಮಹಾಮನಾ ಭರತನು ತನ್ನ ಮತ್ತು ಮಾವನ ಸೈನ್ಯದಿಂದ ಸುರಕ್ಷಿತವಾಗಿ ಶತ್ರುಘ್ನನನ್ನು ರಥದಲ್ಲಿ ತನ್ನೊಂದಿಗೆ ಕುಳ್ಳಿರಿಸಿಕೊಂಡು, ತಾತನಿಗೆ ಸಮಾನರಾದ ಮಾನನೀಯ ಮಂತ್ರಿಗಳೊಂದಿಗೆ ಮಾವನ ಮನೆಯಿಂದ ಹೊರಟನು. ಯಾರೋ ಸಿದ್ಧಪುರುಷನು ಇಂದ್ರಲೋಕದಿಂದ ಬೇರೆ ಲೋಕಕ್ಕೆ ಹೋಗುತ್ತಿರುವನೋ ಎಂಬಂತೆ ಅವನು ಹೊರಟನು.॥30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತನೆಯ ಸರ್ಗ ಪೂರ್ಣವಾಯಿತು.॥70॥