०१८ रामेण दशरथसान्त्वनम्

वाचनम्
ಭಾಗಸೂಚನಾ

ಶ್ರೀರಾಮನು ತಂದೆಯು ಚಿಂತಿತನಾದ ಕಾರಣ ಕೈಕೆಯಲ್ಲಿ ಕೇಳಿದುದು, ಕೈಕೆಯು ಕಠೋರವಾಗಿ ತಾನು ಕೇಳಿದ ವರಗಳ ವೃತ್ತಾಂತ ತಿಳಿಸಿ, ಶ್ರೀರಾಮನಿಗೆ ವನವಾಸಕ್ಕಾಗಿ ಪ್ರೇರೇಪಿಸಿದುದು

ಮೂಲಮ್ - 1

ಸ ದದರ್ಶಾಸನೇ ರಾಮೋ ವಿಷಣ್ಣಂ ಪಿತರಂ ಶುಭೇ ।
ಕೈಕೇಯಿಸಹಿತಂ ದೀನಂ ಮುಖೇನ ಪರಿಶುಷ್ಯತಾ ॥

ಅನುವಾದ

ಶ್ರೀರಾಮನು ಅಂತಃಪುರವನ್ನು ಪ್ರವೇಶಿಸಿ ಕೈಕೆಯೊಂದಿಗೆ ತಂದೆಯು ಒಂದು ಸುಂದರ ಆಸನದಲ್ಲಿ ಕುಳಿತಿರುವುದನ್ನು ನೋಡಿದನು - ರಾಜನು ವಿಷಾದದಲ್ಲಿ ಮುಳುಗಿ, ಮುಖ ಒಣಗಿ ದಯನೀಯವಾಗಿ ಕಾಣುತ್ತಿದ್ದನು.॥1॥

ಮೂಲಮ್ - 2

ಸ ಪಿತುಶ್ಚರಣೌ ಪೂರ್ವಮಭಿವಾದ್ಯ ವಿನೀತವತ್ ।
ತತೋ ವವಂದೇ ಚರಣೌ ಕೈಕೇಯ್ಯಾಃ ಸುಸಮಾಹಿತಃ ॥

ಅನುವಾದ

ಬಳಿಗೆ ಹೋಗಿ ಶ್ರೀರಾಮನು ವಿನೀತನಾಗಿ ಮೊದಲಿಗೆ ತಂದೆಯ ಚರಣಗಳಿಗೆ ವಂದಿಸಿದನು, ಬಳಿಕ ಕೈಕೆಯಿಯ ಚರಣಗಳಲ್ಲಿಯೂ ತಲೆ ಚಾಚಿದನು.॥2॥

ಮೂಲಮ್ - 3

ರಾಮೇತ್ಯುಕ್ತ್ವಾ ತು ವಚನಂ ವಾಷ್ಪಪರ್ಯಾಕುಲೇಕ್ಷಣಃ ।
ಶಶಾಕ ನೃಪತಿರ್ದೀನೋ ನೇಕ್ಷಿತುಂನಾಭಿಭಾಷಿತುಮ್ ॥

ಅನುವಾದ

ಆಗ ದೀನಸ್ಥಿತಿಯಲ್ಲಿದ್ದ ದಶರಥನು ‘ರಾಮಾ!’ ಎಂದು ಹೇಳಿ ಮುಂದೆ ಮಾತನಾಡದೆ ಸುಮ್ಮನಾದನು. ಅವನ ಕಣ್ಣುಗಳು ತುಂಬಿ, ಗಂಟಲು ಬಿಗಿದು ಮಾತನಾಡಲಾರದೇ, ನೋಡಲಾರದೆ ಸುಮ್ಮನೇ ಕುಳಿತಿದ್ದನು.॥3॥

ಮೂಲಮ್ - 4

ತದಪೂರ್ವಂ ನರಪತೇರ್ದೃಷ್ಟ್ವಾ ರೂಪಂ ಭಯಾವಹಮ್ ।
ರಾಮೋಽಪಿ ಭಯಮಾಪನ್ನಃ ಪದಾ ಸ್ಪೃಷ್ಟ್ವೇವ ಪನ್ನಗಮ್ ॥

ಅನುವಾದ

ಮಹಾರಾಜರ ಆ ಅಭೂತಪೂರ್ವ ಭಯಂಕರ ರೂಪವನ್ನು ನೋಡಿ ಶ್ರೀರಾಮನೂ ಕೂಡ ಹಾವನ್ನು ತುಳಿದವನಂತೆ ಭಯಗೊಂಡನು.॥4॥

ಮೂಲಮ್ - 5

ಇಂದ್ರಿಯೈರಪ್ರಹೃಷ್ಟೈಸ್ತಂ ಶೋಕಸಂತಾಪಕರ್ಷಿತಮ್ ।
ನಿಃಶ್ವಸಂತಂ ಮಹಾರಾಜಂ ವ್ಯಥಿತಾಕುಲಚೇತಸಮ್ ॥

ಮೂಲಮ್ - 6

ಊರ್ಮಿಮಾಲಿನಮಕ್ಷೋಭ್ಯಂ ಕ್ಷುಭ್ಯಂತಮಿವ ಸಾಗರಮ್ ।
ಉಪಪ್ಲುತಮಿವಾದಿತ್ಯಮುಕ್ತಾನೃತಮೃಷಿಂ ಯಥಾ ॥

ಅನುವಾದ

ರಾಜನ ಇಂದ್ರಿಯಗಳು ಅಸಂತುಷ್ಟರಾಗಿದ್ದವು; ಶೋಕ-ಸಂತಾಪದಿಂದ ದುರ್ಬಲನಾಗಿದ್ದನು. ಪದೇ-ಪದೇ ನಿಟ್ಟುಸಿರುಬಿಡುತ್ತಾ, ಚಿತ್ತದಲ್ಲಿ ಬಹಳ ವ್ಯಥೆ, ವ್ಯಾಕುಲತೆ ತುಂಬಿತ್ತು. ಆಗ ಅವನ ಸ್ಥಿತಿಯು ಪರ್ವಕಾಲದಲ್ಲಿ ಪ್ರಕ್ಷುಬ್ಧವಾದ ಊರ್ಮಿಮಾಲಿಯಾದ ಅಕ್ಷೋಭ್ಯವಾದ ಸಮುದ್ರದಂತೆಯೂ, ರಾಹುಗ್ರಸ್ತ ಸೂರ್ಯನಂತೆ ಅಥವಾ ಸುಳ್ಳು ಹೇಳಿದ ಮಹರ್ಷಿಯಂತೆ ಆಗಿತ್ತು.॥5-6॥

ಮೂಲಮ್ - 7

ಅಂಚಿತ್ಯಕಲ್ಪಂ ನೃಪತೇಸ್ತಂ ಶೋಕಮುಪಧಾರಯನ್ ।
ಬಭೂವ ಸಂರಬ್ಧತರಃ ಸಮುದ್ರ ಇವ ಪರ್ವಣಿ ॥

ಅನುವಾದ

ಯೋಚಿಸಲೂ ಕೂಡ ಸಾಧ್ಯವಾಗದ ರಾಜನ ಆ ಶೋಕಕ್ಕೆ ಕಾರಣವೇನೆಂಬುದನ್ನು ಚಿಂತಿಸುತ್ತಾ ಶ್ರೀರಾಮನು ಪರ್ವಕಾಲದಲ್ಲಿನ ಸಮುದ್ರದಂತೆ ಹೆಚ್ಚು ಕ್ಷೋಭೆಗೊಂಡನು.॥7॥

ಮೂಲಮ್ - 8

ಚಿಂತಯಾಮಾಸ ಚತುರೋ ರಾಮಃ ಪಿತೃಹಿತೇ ರತಃ ।
ಕಿಂಸ್ವಿದದ್ಯೈವ ನೃಪತಿರ್ನ ಮಾಂ ಪ್ರತ್ಯಭಿನಂದತಿ ॥

ಅನುವಾದ

ತಂದೆಯ ಹಿತದಲ್ಲಿ ತತ್ಪರನಾಗಿದ್ದ ಪರಮ ಚತುರ ಶ್ರೀರಾಮನು ‘ಇಂದು ಮಹಾರಾಜರು ನನ್ನಲ್ಲಿ ಪ್ರಸನ್ನರಾಗಿ ಮಾತನಾಡದಿರುವಂತಹ ಕಾರಣ ಏನಿರಬಹುದು’? ಎಂದು ಯೋಚಿಸತೊಡಗಿದನು.॥8॥

ಮೂಲಮ್ - 9

ಅನ್ಯದಾ ಮಾಂ ಪಿತಾ ದೃಷ್ಟ್ವಾ ಕುಪಿತೋಪಿ ಪ್ರಸೀದತಿ ।
ತಸ್ಯ ಮಾಮದ್ಯ ಸಂಪ್ರೇಕ್ಷ್ಯ ಕಿಮಾಯಾಸಃ ಪ್ರವರ್ತತೇ ॥

ಅನುವಾದ

ಉಳಿದ ಸಮಯದಲ್ಲಿ ತಂದೆಯು ಕೋಪಗೊಂಡಿದ್ದರೂ ನನ್ನನ್ನು ನೋಡಿದೊಡನೆಯೇ ಪ್ರಸನ್ನನಾಗುತ್ತಿದ್ದವನು. ಆದರೆ ಇಂದು ನನ್ನನ್ನು ನೋಡಿಯೂ ಏಕೆ ಕ್ಲೇಶಪಡುತ್ತಿರುವರು.॥9॥

ಮೂಲಮ್ - 10

ಸ ದೀನ ಇವ ಶೋಕಾರ್ತೋ ವಿಷಣ್ಣವದನದ್ಯುತಿಃ ।
ಕೈಕೇಯೀಮಭಿವಾದ್ಯೈವ ರಾಮೋ ವಚನಮಬ್ರವೀತ್ ॥

ಅನುವಾದ

ಹೀಗೆ ಯೋಚಿಸುತ್ತಾ ಶ್ರೀರಾಮನು ದೀನನಂತಾಗಿ ಶೋಕದಿಂದ ಕಾತರನಾಗಿ, ವಿಷಾದದ ಕಾರಣ ಮುಖದ ಕಾಂತಿಯು ಕಂದಿಹೋಯಿತು. ಅವನು ಕೈಕೆಯಿಗೆ ನಮಸ್ಕರಿಸಿ ಆಕೆಯಲ್ಲಿ ಕೇಳತೊಡಗಿದನು.॥10॥

ಮೂಲಮ್ - 11

ಕಚ್ಚಿನ್ಮಯಾ ನಾಪರಾದ್ಧಮಜ್ಞಾನಾದ್ ಯೇನ ಮೇ ಪಿತಾ ।
ಕುಪಿತಸ್ತನ್ಮಮಾಚಕ್ಷ್ವ ತ್ವಮೇವೈನಂ ಪ್ರಸಾದಯ ॥

ಅನುವಾದ

ಅಮ್ಮಾ! ತಂದೆಯವರು ಬೇಸರಗೊಳ್ಳುವಂತಹ ಏನಾದರೂ ತಿಳಿಯದೆ ನನ್ನಿಂದ ಅಪರಾಧ ಆಗಿಲ್ಲವಲ್ಲ! ನೀನು ಅದನ್ನು ನನಗೆ ಹೇಳು ಹಾಗೂ ನೀನೇ ಅವರನ್ನು ಪ್ರಸನ್ನಗೊಳಿಸು.॥11॥

ಮೂಲಮ್ - 12

ಅಪ್ರಸನ್ನಮನಾಃ ಕಿಂ ನು ಸದಾ ಮಾಂ ಪ್ರತಿ ವತ್ಸಲಃ ।
ವಿಷಣ್ಣವದನೋ ದೀನಃ ನಹಿ ಮಾಂ ಪ್ರತಿ ಭಾಷತೇ ॥

ಅನುವಾದ

ಇವರಾದರೋ ಸದಾ ನನ್ನನ್ನು ಪ್ರೀತಿಸುತ್ತಿದ್ದರು. ಇಂದು ಇವರ ಮನಸ್ಸು ಏಕೆ ಅಪ್ರಸನ್ನವಾಗಿದೆ? ಇವರು ಇಂದು ನನ್ನಲ್ಲಿ ಮಾತನಾಡುತ್ತಲೂ ಇಲ್ಲ, ಅವರ ಮುಖದಲ್ಲಿ ವಿಷಾದ ತುಂಬಿ ಅತ್ಯಂತ ದುಃಖಿತರಾಗಿರುವುದನ್ನು ನೋಡುತ್ತಿದ್ದೇನೆ.॥12॥

ಮೂಲಮ್ - 13

ಶರೀರೋ ಮಾನಸೋ ವಾಪಿ ಕಚ್ಚಿದೇನಂ ನ ಬಾಧತೇ ।
ಸಂತಾಪೋ ವಾಭಿತಾಪೋ ವಾ ದುರ್ಲಭಂ ಹಿ ಸದಾಸುಖಮ್ ॥

ಅನುವಾದ

ಯಾವುದಾದರೂ ಶಾರೀರಿಕ ವ್ಯಾಧಿಯಿಂದ ಅಥವಾ ಮಾನಸಿಕ ಚಿಂತೆ, ಸಂತಾಪದಿಂದ ಇವರು ಪೀಡಿತರಾಗಿಲ್ಲವಲ್ಲ? ಏಕೆಂದರೆ ಮನುಷ್ಯನಿಗೆ ಸದಾ ಸಂತೋಷವೇ ದೊರಕುವಂತಹ ಸುಯೋಗ ದುರ್ಲಭವಾಗಿರುತ್ತದೆ.॥13॥

ಮೂಲಮ್ - 14

ಕಚ್ಚಿನ್ನ ಕಿಂಚಿತ್ ಭರತೇ ಕುಮಾರೇ ಪ್ರಿಯದರ್ಶನೇ ।
ಶತ್ರುಘ್ನೇ ವಾ ಮಹಾಸತ್ತ್ವೇ ಮಾತೃಣಾಂ ವಾ ಮಮಾಶುಭಮ್ ॥

ಅನುವಾದ

ಪ್ರಿಯದರ್ಶನ ಭರತ, ಮಹಾಬಲಿ ಶತ್ರುಘ್ನ ಅಥವಾ ನನ್ನ ಯಾವುದೇ ತಾಯಂದಿರ ಅಮಂಗಲವಾಗಿಲ್ಲವಲ್ಲ.॥14॥

ಮೂಲಮ್ - 15

ಅತೋಷಯನ್ ಮಹಾರಾಜಮಕುರ್ವನ್ ವಾ ಪಿತುರ್ವಚಃ ।
ಮುಹೂರ್ತಮಪಿ ನೇಚ್ಛೇಯಂ ಜೀವಿತುಂ ಕುಪಿತೇ ನೃಪೇ ॥

ಅನುವಾದ

ಮಹಾರಾಜರನ್ನು ಅಸಂತುಷ್ಟಗೊಳಿಸಿ ಅಥವಾ ಇವರ ಆಜ್ಞೆಯನ್ನು ಮೀರಿ ಅವರಿಗೆ ಸಿಟ್ಟು ಬರುವಂತಾದರೆ ನಾನು ಒಂದು ಮುಹೂರ್ತವೂ ಕೂಡ ಬದುಕಿರಲು ಬಯಸುವುದಿಲ್ಲ.॥15॥

ಮೂಲಮ್ - 16

ಯತೋಮೂಲಂ ನರಃ ಪಶ್ಯೇತ್ ಪ್ರಾದುರ್ಭಾವಮಿಹಾತ್ಮನಃ ।
ಕಥಂ ತಸ್ಮಿನ್ನ ವರ್ತೇತ ಪ್ರತ್ಯಕ್ಷೇ ಸತಿ ದೈವತೇ ॥

ಅನುವಾದ

ಮನುಷ್ಯನು ಯಾರ ಕಾರಣದಿಂದ ಈ ಜಗತ್ತಿನಲ್ಲಿ ಹುಟ್ಟಿ ಬರುತ್ತಾನೋ, ಆ ಪ್ರತ್ಯಕ್ಷ ದೇವತೆಯಾದ ತಂದೆಯು ಜೀವಿಸಿ ಇರುವಾಗ ಅವನ ಮುಂದೆ ಯಾರು ತಾನೇ ವಿಧೇಯನಾಗಿ ನಡೆದುಕೊಳ್ಳುವುದಿಲ್ಲ.॥16॥

ಮೂಲಮ್ - 17

ಕಚ್ಚಿತ್ತೇ ಪರುಷಂ ಕಿಂಚಿದಭಿಮಾನಾತ್ಪಿತಾ ಮಮ ।
ಉಕ್ತೋ ಭವತ್ಯಾ ರೋಷೇಣ ಯೇನಾಸ್ಯ ಲುಲಿತಂ ಮನಃ ॥

ಅನುವಾದ

ನೀನೇನಾದರೂ ಅಭಿಮಾನ ಅಥವಾ ಸಿಟ್ಟಿನಿಂದ ನನ್ನ ತಂದೆಯವರಲ್ಲಿ ಅವರ ಮನಸ್ಸು ದುಃಖಿತವಾಗುವಂತಹ ಯಾವುದಾದೂ ಕಠೋರವಾದ ಮಾತು ಆಡಿಲ್ಲವಲ್ಲ.॥17॥

ಮೂಲಮ್ - 18

ಏತದಾಚ್ಚಕ್ಷ್ವಮೇ ದೇವಿ ತತ್ತ್ವೇನ ಪರಿಪೃಚ್ಛತಃ ।
ಕಿಂನಿಮಿತ್ತಮಪೂರ್ವೋಽಯಂ ವಿಕಾರೋ ಮನುಜಾಧಿಪೇ ॥

ಅನುವಾದ

ದೇವಿ! ನಾನು ನಿಜವನ್ನೆ ಕೇಳುತ್ತಿದ್ದೇನೆ-ಹೇಳು, ಯಾವ ಕಾರಣದಿಂದ ಮಹಾರಾಜರ ಮನಸ್ಸಿನಲ್ಲಿ ಇಂದು ಇಷ್ಟು ಸಂತಾಪವಾಗುತ್ತಿದೆಯಲ್ಲ! ಇವರ ಇಂತಹ ಸ್ಥಿತಿ ಮೊದಲು ಎಂದೂ ನೋಡಿರಲಿಲ್ಲ.॥18॥

ಮೂಲಮ್ - 19

ಏವಮುಕ್ತಾ ತು ಕೈಕೇಯೀರಾಘವೇಣ ಮಹಾತ್ಮನಾ ।
ಉವಾಚೇದಂ ಸುನಿರ್ಲಜ್ಜಾ ಧೃಷ್ಟಮಾತ್ಮಹಿತಂ ವಚಃ ॥

ಅನುವಾದ

ಮಹಾತ್ಮಾ ಶ್ರೀರಾಮನು ಈ ಪ್ರಕಾರ ಕೇಳಿದಾಗ ನಿರ್ಲಜ್ಜಳಾದ ಕೈಕೆಯು ಬಹಳ ದರ್ಪದಿಂದ ತನ್ನ ಅಭಿಪ್ರಾಯವನ್ನು ಈ ಪ್ರಕಾರ ಹೇಳಿದಳು.॥19॥

ಮೂಲಮ್ - 20

ನ ರಾಜಾ ಕುಪಿತೋ ರಾಮ ವ್ಯಸನಂ ನಾಸ್ಯ ಕಿಂಚನ ।
ಕಿಂಚಿನ್ಮನೋಗತಂ ತ್ವಸ್ಯ ತ್ವದ್ಭಯಾನ್ನಾನುಭಾಷತೇ ॥

ಅನುವಾದ

ರಾಮಾ! ಮಹಾರಾಜರು ಕುಪಿತರಾಗಿಲ್ಲ ಮತ್ತು ಅವರಿಗೆ ಯಾವುದೇ ಕಷ್ಟವೂ ಇಲ್ಲ. ಇವರ ಮನಸ್ಸಿನಲ್ಲಿರುವ ಮಾತನ್ನು ನಿನ್ನ ಭಯದಿಂದ ಹೇಳಲೊಲ್ಲರು.॥20॥

ಮೂಲಮ್ - 21

ಪ್ರಿಯಂ ತ್ವಾಮಪ್ರಿಯಂ ವಕ್ತುಂ ವಾಣೀನಾಸ್ಯ ಪ್ರವರ್ತತೇ ।
ತದವಶ್ಯಂ ತ್ವಯಾ ಕಾರ್ಯಂ ಯದನೇನಾಶ್ರುತಂ ಮಮ ॥

ಅನುವಾದ

ನೀನು ಇವರಿಗೆ ಪ್ರಿಯನಾಗಿರುವೆ, ನಿನ್ನಲ್ಲಿ ಯಾವುದೇ ಅಪ್ರಿಯವಾದ ಮಾತನ್ನು ಹೇಳಲು ಇವರಿಗೆ ಬಾಯೇ ಬರುತ್ತಿಲ್ಲ. ಆದರೆ ಇವರು ಯಾವ ಕಾರ್ಯಕ್ಕಾಗಿ ನನ್ನ ಮುಂದೆ ಪ್ರತಿಜ್ಞೆ ಮಾಡಿದ್ದರೋ ಅದನ್ನು ನೀನು ಅವಶ್ಯವಾಗಿ ಪಾಲಿಸಬೇಕು.॥21॥

ಮೂಲಮ್ - 22

ಏಷ ಮಹ್ಯಂ ವರಂ ದತ್ತ್ವಾ ಪುರಾ ಮಾಮಭಿಪೂಜ್ಯ ಚ ।
ಸ ಪಶ್ಚಾತ್ ತಪ್ಯತೇ ರಾಜಾ ಯಥಾನ್ಯಃ ಪ್ರಾಕೃತಸ್ತಥಾ ॥

ಅನುವಾದ

ಇವರು ಮೊದಲಿಗೆ ನನ್ನನ್ನು ಸತ್ಕರಿಸುತ್ತಾ ನಾನು ಬೇಡಿದ ವರಗಳನ್ನು ಕೊಟ್ಟರು. ಆದರೆ ಈಗ ಅದನ್ನು ಕೊಡಲಾರದೆ ಇವರು ಸಾಮಾನ್ಯ ಮನುಷ್ಯನಂತೆ ಪಶ್ಚಾತ್ತಾಪಪಡುತ್ತಿದ್ದಾರೆ.॥22॥

ಮೂಲಮ್ - 23

ಅತಿಸೃಜ್ಯ ದದಾನೀತಿ ವರಂ ಮಮ ವಿಶಾಂಪತಿಃ ।
ಸ ನಿರರ್ಥಂ ಗತಜಲೇ ಸೇತುಂ ಬಂಧಿತುಮಿಚ್ಛತಿ ॥

ಅನುವಾದ

ಇವರು ಮೊದಲಿಗೆ ‘ನಾನು ಕೊಡುವೆ’ ಎಂದು ಪ್ರತಿಜ್ಞೆ ಮಾಡಿ ನನಗೆ ಎರಡು ವರವನ್ನು ಕೊಟ್ಟಿರುವರು. ಆದರೆ ಈಗ ಅದನ್ನು ನಿವಾರಿಸಲು ನೀರು ಹರಿದುಹೋದಮೇಲೆ ಒಡ್ಡು ಕಟ್ಟುವಂತೆ ವ್ಯರ್ಥವಾಗಿ ಪ್ರಯತ್ನಿಸುತ್ತಿರುವರು.॥23॥

ಮೂಲಮ್ - 24

ಧರ್ಮಮೂಲಮಿದಂ ರಾಮವಿದಿತಂ ಚ ಸತಾಮಪಿ ।
ತತ್ಸತ್ಯಂ ನ ತ್ಯಜೇದ್ರಾಜಾ ಕುಪಿತಸ್ತ್ವತ್ಕೃತೇ ಯಥಾ ॥

ಅನುವಾದ

ರಾಮಾ! ಸತ್ಯವೇ ಧರ್ಮದ ಮೂಲವಾಗಿದೆ ಎಂದು ಸತ್ಪುರುಷರು ನಿಶ್ಚಯಿಸಿರುವರು. ಈ ಮಹಾರಾಜರು ನಿನ್ನಿಂದಾಗಿ ನನ್ನ ಮೇಲೆ ಕುಪಿತರಾಗಿ ತನ್ನ ಸತ್ಯವನ್ನು ತ್ಯಜಿಸುವಂತೆ ಆಗಬಾರದು. ಇವರು ಸತ್ಯವನ್ನು ಪಾಲಿಸುವಂತೆ ನೀನು ಮಾಡಬೇಕು.॥24॥

ಮೂಲಮ್ - 25

ಯದಿ ತದ್ವಕ್ಷ್ಯತೇ ರಾಜಾ ಶುಭಂ ವಾ ಯದಿ ವಾಶುಭಮ್ ।
ಕರಿಷ್ಯಸಿ ತತಃ ಸರ್ವಮಾಖ್ಯಾಸ್ಯಾಮಿ ಪುನಸ್ತ್ವಹಮ್ ॥

ಅನುವಾದ

ಮಹಾರಾಜರು ಹೇಳಲು ಬಯಸುವ ಮಾತು ಶುಭವಿರಲೀ, ಅಶುಭವೇ ಆಗಿರಲಿ, ನೀನು ಅದನ್ನು ಪೂರ್ಣವಾಗಿ ಪಾಲಿಸುವೆಯಾದರೆ ನಾನು ಅದೆಲ್ಲವನ್ನು ಪುನಃ ನಿನಗೆ ಹೇಳುತ್ತೇನೆ.॥25॥

ಮೂಲಮ್ - 26

ಯದಿ ತ್ವಭಿಹಿತಂ ರಾಜ್ಞಾತ್ವಯಿ ತನ್ನ ವಿಪತ್ಸ್ಯತೇ ।
ತತೋಹಮಭಿಧಾಸ್ಯಾಮಿ ನ ಹ್ಯೇಷ ತ್ವಯಿ ವಕ್ಷ್ಯತಿ ॥

ಅನುವಾದ

ರಾಜನು ಹೇಳಿರುವ ಮಾತು ನಿನ್ನ ಕಿವಿಗೆ ಬಿದ್ದು ಅಲ್ಲೇ ನಾಶವಾಗಬಾರದು. ನೀನು ಅದರ ಪ್ರತಿಯೊಂದು ಆಜ್ಞೆಯನ್ನು ಪಾಲಿಸಬಲ್ಲೆಯಾದರೆ ನಾನು ನಿನ್ನಲ್ಲಿ ಬಿಡಿಸಿ ಹೇಳುವೆನು. ಇವರು ಸ್ವತಃ ನಿನ್ನಲ್ಲಿ ಏನನ್ನೂ ಹೇಳಲಾರರು.॥26॥

ಮೂಲಮ್ - 27

ಏತತ್ತು ವಚನಂ ಶ್ರುತ್ವಾ ಕೈಕೆಯ್ಯಾ ಸಮುದಾಹೃತಮ್ ।
ಉವಾಚ ವ್ಯಥಿತೋ ರಾಮಸ್ತಾಂ ದೇವೀಂ ನೃಪಸಂನಿಧೌ ॥

ಅನುವಾದ

ಕೈಕೆಯಿಯು ಹೇಳಿದ ಮಾತನ್ನು ಕೇಳಿ ಶ್ರೀರಾಮನ ಮನಸ್ಸಿನಲ್ಲಿ ಭಾರೀ ದುಃಖವಾಯಿತು. ಅವನು ರಾಜನ ಬಳಿಯಲ್ಲೇ ಕೈಕಾದೇವಿಯಲ್ಲಿ ಈ ಪ್ರಕಾರ ನುಡಿದನು.॥27॥

ಮೂಲಮ್ - 28

ಅಹೋ ದಿಙ್ನಾರ್ಹಸೇ ದೇವಿ ವಕ್ತುಂ ಮಾಮೀದೃಶಂ ವಚಃ ।
ಅಹಂಹಿ ವಚನಾದ್ರಾಜ್ಞಃ ಪತೇಯಮಪಿ ಪಾವಕೇ ॥

ಮೂಲಮ್ - 29

ಭಕ್ಷಯೇಯಂ ವಿಷಂ ತೀಕ್ಷ್ಣಂ ಪತೇಯಮಪಿ ಚಾರ್ಣವೇ ।
ನಿಯುಕ್ತೋ ಗುರುಣಾ ಪಿತ್ರಾ ನೃಪೇಣ ಚ ಹಿತೇನ ಚ ॥

ಮೂಲಮ್ - 30

ತದ್ಬ್ರೂಹಿ ವಚನಂ ದೇವಿ ರಾಜ್ಞೋ ಯದಭಿಕಾಂಕ್ಷಿತಮ್
ಕರಿಷ್ಯೇ ಪ್ರತಿಜಾನೇ ಚ ರಾಮೋ ದ್ವಿರ್ನಾಭಿಭಾಷತೇ ॥

ಅನುವಾದ

ಅಯ್ಯೋ! ದೇವಿ! ನೀವು ನನ್ನ ಕುರಿತು ಇಂತಹ ಮಾತನ್ನು ಆಡಬಾರದು; ಮಹಾರಾಜರ ಮಾತಿನಂತೆ ನಾನು ಬೆಂಕಿಯಲ್ಲಿ ಹಾರಬಲ್ಲೆ; ತೀವ್ರವಾದ ವಿಷವನ್ನು ಕುಡಿಯಬಲ್ಲೆ; ಸಮುದ್ರಕ್ಕೂ ಹಾರಬಲ್ಲೆ! ಮಹಾರಾಜರು ನನಗೆ ಗುರು, ತಂದೆ, ಹಿತೈಷಿ ಎಲ್ಲವೂ ಆಗಿರುವರು. ಅವರ ಅಪ್ಪಣೆಯಾದರೆ ಏನು ತಾನೇ ಮಾಡಲಾರೆ? ಅದಕ್ಕಾಗಿ ದೇವಿಯೇ! ಮಹಾರಾಜರಿಗೆ ಅಭೀಷ್ಟವಾದುದನ್ನು ನನಗೆ ತಿಳಿಸು. ನಾನು ಪ್ರತಿಜ್ಞೆಮಾಡಿ ಹೇಳುತ್ತೇನೆ-ಅದನ್ನು ಪೂರ್ಣಗೊಳಿಸುವೆನು. ರಾಮನು ಎಂದೂ ಎರಡು ಮಾತನ್ನಾಡುವುದಿಲ್ಲ.॥28-30॥

ಮೂಲಮ್ - 31

ತಮಾರ್ಜವಸಮಾಯುಕ್ತಮನಾರ್ಯಾ ಸತ್ಯವಾದಿನಮ್ ।
ಉವಾಚ ರಾಮಂ ಕೈಕೇಯೀ ವಚನಂ ಭೃಶದಾರುಣಮ್ ॥

ಅನುವಾದ

ಶ್ರೀರಾಮನು ಸರಳ ಸ್ವಭಾವದವನು ಮತ್ತು ಸತ್ಯವಾದಿಯಾಗಿದ್ದನು. ಅವನ ಮಾತನ್ನು ಕೇಳಿ ಅನಾರ್ಯ ಕೈಕೆಯಿಯು ಅತ್ಯಂತ ದಾರುಣವಾದ ಮಾತನ್ನು ಹೇಳಲು ಪ್ರಾರಂಭಿಸಿದಳು.॥31॥

ಮೂಲಮ್ - 32

ಪುರಾ ದೇವಾಸುರೇ ಯುದ್ಧೇ ಪಿತ್ರಾ ತೇ ಮಮ ರಾಘವ ।
ರಕ್ಷಿತೇನ ವರೌ ದತ್ತೌ ಸಶಲ್ಯೇನ ಮಹಾರಣೇ ॥

ಅನುವಾದ

ರಘುನಂದನ! ಬಹಳ ಹಿಂದಿನ ಮಾತು, ದೇವಾಸುರ ಸಂಗ್ರಾಮದಲ್ಲಿ ನಿನ್ನ ತಂದೆಯವರು ಬಾಣಗಳಿಂದ ಘಾಸಿಗೊಂಡಿದ್ದರು, ಆ ಮಹಾಸಮರದಲ್ಲಿ ನಾನು ಇವರನ್ನು ರಕ್ಷಿಸಿದ್ದೆ. ಅದಕ್ಕೆ ಪ್ರಸನ್ನರಾಗಿ ಇವರು ನನಗೆ ಎರಡು ವರಗಳನ್ನು ಕೊಟ್ಟಿದ್ದರು.॥32॥

ಮೂಲಮ್ - 33

ತತ್ರ ಮೇ ಯಾಚಿತೋ ರಾಜಾ ಭರತಸ್ಯಾಭಿಷೇಚನಮ್ ।
ಗಮನಂ ದಂಡಕಾರಣ್ಯೇ ತವ ಚಾದ್ಯೈವ ರಾಘವ ॥

ಅನುವಾದ

ರಾಘವಾ! ಅವುಗಳಲ್ಲಿ ಒಂದು ವರದಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕೆಂದು ಮಹಾರಾಜರಲ್ಲಿ ಬೇಡಿದ್ದೆ ಮತ್ತು ಇನ್ನೊಂದು ವರದಿಂದ ನಿನ್ನನ್ನು ದಂಡಕಾರಣ್ಯಕ್ಕೆ ಕಳಿಸಿಕೊಡ ಬೇಕೆಂದು ಬೇಡಿಕೊಂಡಿದ್ದೆ.॥33॥

ಮೂಲಮ್ - 34

ಯದಿ ಸತ್ಯಪತ್ರಿಜ್ಞಂ ತ್ವಂ ಪಿತರಂ ಕರ್ತುಮಿಚ್ಛಸಿ ।
ಆತ್ಮಾನಂ ಚ ನರಶ್ರೇಷ್ಠ ಮಮ ವಾಕ್ಯಮಿದಂ ಶೃಣು ॥

ಅನುವಾದ

ನರಶ್ರೇಷ್ಠನೇ! ನೀನು ನಿನ್ನ ತಂದೆಯನ್ನು ಸತ್ಯಪ್ರತಿಜ್ಞನನ್ನಾಗಿಸಲು ಬಯಸುವೆಯಾದರೆ ಹಾಗೂ ತನ್ನನ್ನು ಸತ್ಯವಾದಿ ಎಂದು ಸಿದ್ಧಪಡಿಸಲು ಇಚ್ಛಿಸುವೆಯಾದರೆ ನನ್ನ ಮಾತನ್ನು ಕೇಳು.॥34॥

ಮೂಲಮ್ - 35

ಸನ್ನಿದೇಶೇ ಪಿತುಸ್ತಿಷ್ಠ ಯಥಾನೇನ ಪ್ರತಿಶ್ರುತಮ್ ।
ತ್ವಯಾರಣ್ಯಂ ಪ್ರವೇಷ್ಟವ್ಯಂ ನವ ವರ್ಷಾಣಿ ಪಂಚ ಚ ॥

ಅನುವಾದ

ನೀನು ತಂದೆಯ ಆಜ್ಞೆಗೆ ಅಧೀನನಾಗಿ, ಇವರು ಮಾಡಿದ ಪ್ರತಿಜ್ಞೆಯಂತೆ ನೀನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು.॥35॥

ಮೂಲಮ್ - 36

ಭರತಶ್ಚಾಭಿಷಿಚ್ಯೇತ ಯದೇತದಭಿಷೇಚನಮ್ ।
ತ್ವದರ್ಥೇ ವಿಹಿತಂ ರಾಜ್ಞಾ ತೇನ ಸರ್ವೇಣ ರಾಘವ ॥

ಅನುವಾದ

ರಘುನಂದನ! ಮಹಾರಾಜರು ನಿನ್ನ ಪಟ್ಟಾಭಿಷೇಕಕ್ಕಾಗಿ ಅಣಿಗೊಳಿಸಿದ ಸಾಮಗ್ರಿಗಳಿಂದ ಇಲ್ಲಿ ಭರತನಿಗೆ ರಾಜ್ಯಾಭಿಷೇಕ ಮಾಡಬೇಕು.॥36॥

ಮೂಲಮ್ - 37

ಸಪ್ತ ಸಪ್ತ ಚ ವರ್ಷಾಣಿ ದಂಡಕಾರಣ್ಯಮಾಶ್ರಿತಃ ।
ಅಭಿಷೇಕಮಿಮಂ ತ್ಯಕ್ತ್ವಾ ಜಟಾಚೀರಧರೋ ಭವ ॥

ಅನುವಾದ

ನೀನು ಈ ಪಟ್ಟಾಭಿಷೇಕವನ್ನು ತ್ಯಜಿಸಿ ಹದಿನಾಲ್ಕು ವರ್ಷ ದಂಡಕಾರಣದಲ್ಲಿ ಜಟಾ-ವಲ್ಕಲ ಧರಿಸಿ ವಾಸಿಸು.॥37॥

ಮೂಲಮ್ - 38

ಭರತಃ ಕೋಸಲಪತೇಃ ಪ್ರಶಾಸ್ತು ವಸುಧಾಮಿಮಾಮ್ ।
ನಾನಾರತ್ನಸಮಾಕೀರ್ಣಾಂ ಸವಾಜಿರಥಸಂಕುಲಾಮ್ ॥

ಅನುವಾದ

ನಾನಾ ಪ್ರಕಾರದ ರತ್ನಗಳಿಂದ ತುಂಬಿದ, ರಥಾಶ್ವಗಳಿಂದ ಕೂಡಿದ ಕೋಸಲನರೇಶನ ಈ ವಸುಧೆಯನ್ನು ಭರತನು ಪಾಲಿಸಲಿ.॥38॥

ಮೂಲಮ್ - 39

ಏತೇನ ತ್ವಾಂ ನರೇಂದ್ರೋಽಯಂ ಕಾರುಣ್ಯೇನ ಸಮಾಪ್ಲುತಃ ।
ಶೋಕೈಃ ಸಂಕ್ಲಿಷ್ಟವದನೋ ನ ಶಕ್ನೋತಿ ನಿರೀಕ್ಷಿತುಮ್ ॥

ಅನುವಾದ

ಇಷ್ಟೇ ಮಾತು ಇರುವುದು. ಹೀಗೆ ಮಾಡುವುದರಿಂದ ನಿನ್ನ ವಿಯೋಗದ ಕಷ್ಟವನ್ನು ಸಹಿಸಲಾಗುವುದು ಎಂದು ಯೋಚಿಸಿ ಮಹಾರಾಜರು ಕರುಣೆಯಲ್ಲಿ ಮುಳುಗಿರುವರು. ಈ ಶೋಕದಿಂದ ಇವರ ಮುಖ ಬಾಡಿದೆ ಹಾಗೂ ಇವರಿಗೆ ನಿನ್ನ ಕಡೆಗೆ ನೋಡಲೂ ಆಗುವುದಿಲ್ಲ.॥39॥

ಮೂಲಮ್ - 40

ಏತತ್ಕುರು ನರೇಂದ್ರಸ್ಯ ವಚನಂ ರಘುನಂದನ ।
ಸತ್ಯೇನ ಮಹತಾ ರಾಮ ತಾರಯಸ್ವ ನರೇಶ್ವರಮ್ ॥

ಅನುವಾದ

ರಘುನಂದನ ರಾಮ! ನೀನು ರಾಜನ ಆಜ್ಞೆಯನ್ನು ಪಾಲಿಸು ಹಾಗೂ ಇವರ ಮಹಾಸತ್ಯವನ್ನು ರಕ್ಷಿಸಿ ಈ ನರೇಶನನ್ನು ಸಂಕಟದಿಂದ ಪಾರುಮಾಡು.॥40॥

ಮೂಲಮ್ - 41

ಇತೀವ ತಸ್ಯಾಂ ಪರುಷಂ ವದಂತ್ಯಾಂ
ನ ಚೈವ ರಾಮಃ ಪ್ರವಿವೇಶ ಶೋಕಮ್ ।
ಪ್ರವಿವ್ಯಥೇ ಚಾಪಿ ಮಹಾನುಭಾವೋ
ರಾಜಾ ಚ ಪುತ್ರವ್ಯಸನಾಭಿತಪ್ತಃ ॥

ಅನುವಾದ

ಕೈಕೆಯಿಯ ಇಂತಹ ಕಠೋರ ಮಾತನ್ನು ಕೇಳಿಯೂ ಶ್ರೀರಾಮನ ಹೃದಯದಲ್ಲಿ ಶೋಕವಾಗಲಿಲ್ಲ. ಆದರೆ ಮಹಾನುಭಾವ ರಾಜಾ ದಶರಥನು ಪುತ್ರನ ಭಾವೀ ವಿಯೋಗ ಜನಿತ ದುಃಖದಿಂದ ಸಂತಪ್ತನಾಗಿ ವ್ಯಥಿತನಾದನು.॥41॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹದಿನೆಂಟನೆಯ ಸರ್ಗ ಪೂರ್ಣವಾಯಿತು.॥18॥