०१६ रामप्रस्थानम्

वाचनम्
ಭಾಗಸೂಚನಾ

ಸುಮಂತ್ರನು ರಾಜನ ಸಂದೇಶವನ್ನು ಶ್ರೀರಾಮನಿಗೆ ತಿಳಿಸಿದುದು, ಶ್ರೀರಾಮನು ಸೀತಾದೇವಿಯ ಅನುಮತಿ ಪಡೆದು ಲಕ್ಷ್ಮಣನೊಡನೆ ರಥಾರೂಢನಾಗಿ ಹೋಗುವಾಗ ದಾರಿಯಲ್ಲಿ ಸ್ತ್ರೀಪುರುಷರು ಆಡುತ್ತಿದ್ದ ಮಾತನ್ನು ಕೇಳಿದುದು

ಮೂಲಮ್ - 1

ಸ ತದಂತಃಪುರದ್ವಾರಂ ಸಮತೀತ್ಯ ಜನಾಕುಲಮ್ ।
ಪ್ರವಿವಿಕ್ತಾಂ ತತಃ ಕಕ್ಷ್ಯಾಮಾಸಸಾದ ಪುರಾಣವಿತ್ ॥

ಅನುವಾದ

ಹಿಂದಿನ ವೃತ್ತಾಂತವನ್ನು ಬಲ್ಲ ಸುಮಂತ್ರನು ಜನರಿಂದ ನಿಬಿಡವಾಗಿದ್ದ ಅರಮನೆಯ ಹೊರಾಂಗಣವನ್ನು ದಾಟಿ ಜನಬಾಹುಳ್ಯವಿಲ್ಲದ ಅರಮನೆಯ ಒಳಾಂಗಣವನ್ನು ಪ್ರವೇಶಿಸಿದನು.॥1॥

ಮೂಲಮ್ - 2

ಪ್ರಾಸಕಾರ್ಮುಕಬಿಭ್ರದ್ಭಿರ್ಯುವಭಿರ್ಮೃಷ್ಟಕುಂಡಲೈಃ ।
ಅಪ್ರಮಾದಿಭಿರೇಕಾಗ್ರೈಃ ಸ್ವಾನುರಕ್ತೈರಧಿಷ್ಠಿತಾಮ್ ॥

ಅನುವಾದ

ಶ್ರೀರಾಮನ ಅರಮನೆಯ ಒಳಾಂಗಣದಲ್ಲಿ ಪ್ರಾಸ, ಧನುಸ್ಸುಗಳನ್ನು, ಪರಿಶುದ್ಧವಾದ ಕರ್ಣಕುಂಡಲಗಳನ್ನು ಧರಿಸಿದ್ದ, ರಕ್ಷಣೆಯಲ್ಲೇ ಏಕಾಗ್ರ ಚಿತ್ತರಾಗಿದ್ದ, ಜಾಗರೂಕರಾಗಿದ್ದ, ಶ್ರೀರಾಮನಲ್ಲೇ ಹೆಚ್ಚು ಅನುರಕ್ತರಾಗಿದ್ದ ಯುವಕರು ನಿಂತಿದ್ದರು.॥2॥

ಮೂಲಮ್ - 3

ತತ್ರ ಕಾಷಾಯಿಣೋ ವೃದ್ಧಾನ್ ವೇತ್ರಪಾಣೀನ್ ಸ್ವಲಂಕೃತಾನ್ ।
ದದರ್ಶ ವಿಷ್ಟಿತಾನ್ ದ್ವಾರಿಸ್ತ್ರ್ಯಧ್ಯಕ್ಷಾನ್ ಸುಸಮಾಹಿತಾನ್ ॥

ಅನುವಾದ

ಕಾಷಾಯ ವಸ್ತ್ರಗಳನ್ನು ಧರಿಸಿ ಬೆತ್ತಗಳನ್ನು ಹಿಡಿದು ವಸ್ತ್ರಾಭೂಷಣಗಳಿಂದ ಅಲಂಕೃತರಾದ ಅನೇಕ ವೃದ್ಧರಾದ ಅಂತಃಪುರದ ಅಧಿಕಾರಿಗಳು ದ್ವಾರದಲ್ಲಿ ಕುಳಿತಿರುವುದನ್ನು ಸುಮಂತ್ರನು ನೋಡಿದನು.॥3॥

ಮೂಲಮ್ - 4

ತೇ ಸಮೀಕ್ಷ್ಯ ಸಮಾಯಾಂತಂ ರಾಮಪ್ರಿಯಚಿಕೀರ್ಷವಃ ।
ಸಹಸೋತ್ಪತಿತಾಃ ಸರ್ವೇ ಹ್ಯಾಸನೇಭ್ಯಃ ಸಸಂಭ್ರಮಾಃ ॥

ಅನುವಾದ

ಸುಮಂತ್ರನು ಬಂದಿರುವುದನ್ನು ನೋಡಿ ಸಂಭ್ರಮಯುಕ್ತರಾದ ಶ್ರೀರಾಮನ ಪ್ರಿಯವನ್ನು ಮಾಡುವ ಆ ಎಲ್ಲ ಪುರುಷರು ಸಟ್ಟನೆ ಆಸನಗಳಿಂದ ಎದ್ದು ನಿಂತರು.॥4॥

ಮೂಲಮ್ - 5

ತಾನುವಾಚ ವಿನೀತಾತ್ಮಾ ಸೂತಪುತ್ರಃ ಪ್ರದಕ್ಷಿಣಃ ।
ಕ್ಷಿಪ್ರಮಾಖ್ಯಾತ ರಾಮಾಯ ಸುಮಂತ್ರೋ ದ್ವಾರಿ ತಿಷ್ಠತಿ ॥

ಅನುವಾದ

ರಾಜಸೇವೆಯಲ್ಲಿ ಅತ್ಯಂತ ಕುಶಲ, ವಿನೀತ ಹೃದಯವುಳ್ಳ ಸೂತಪುತ್ರ ಸುಮಂತ್ರನು ದ್ವಾರಪಾಲಕರಲ್ಲಿ ‘ಸುಮಂತ್ರನು ದ್ವಾರದಲ್ಲಿ ನಿಂತಿರುವನು ಎಂದು ಶ್ರೀರಾಮಚಂದ್ರನಿಗೆ ಬೇಗನೇ ತಿಳಿಸಿರಿ’ ಎಂದು ಹೇಳಿದನು.॥5॥

ಮೂಲಮ್ - 6

ತೇ ರಾಮಮುಪಸಂಗಮ್ಯ ಭರ್ತುಃ ಪ್ರಿಯಚಿಕೀರ್ಷವಃ ।
ಸಹಭಾರ್ಯಾಯ ರಾಮಾಯ ಕ್ಷಿಪ್ರಮೇವಾಚಚಕ್ಷಿರೇ ॥

ಅನುವಾದ

ಒಡೆಯನ ಪ್ರಿಯ ಮಾಡುವ ಆ ಎಲ್ಲ ಸೇವಕರು ಶ್ರೀರಾಮಚಂದ್ರನ ಬಳಿಗೆ ಹೋದರು. ಆಗ ಶ್ರೀರಾಮನು ಧರ್ಮಪತ್ನಿಯಾದ ಸೀತೆಯೊಂದಿಗೆ ವಿರಾಜಿಸುತ್ತಿದ್ದನು. ಆ ಸೇವಕರು ಶೀಘ್ರವಾಗಿ ಸಮಂತ್ರನ ಸಂದೇಶವನ್ನು ರಾಮನಿಗೆ ತಿಳಿಸಿದರು.॥6॥

ಮೂಲಮ್ - 7

ಪ್ರತಿವೇದಿತಮಾಜ್ಞಾಯ ಸೂತಮಭ್ಯಂತರಂ ಪಿತುಃ ।
ತತ್ರೈವಾನಾಯಯಾಮಾಸ ರಾಘವಃ ಪ್ರಿಯಕಾಮ್ಯಯಾ ॥

ಅನುವಾದ

ದ್ವಾರಪಾಲಕರು ಕೊಟ್ಟ ಸೂಚನೆಯಂತೆ ಶ್ರೀರಾಮನು ತಂದೆಯ ಪ್ರಸನ್ನತೆಗಾಗಿ ಅವರ ಅಂತರಂಗ ಸೇವಕ ಸುಮಂತ್ರನನ್ನು ಅಲ್ಲೇ ಅಂತಃಪುರಕ್ಕೆ ಕರೆಸಿಕೊಂಡನು.॥7॥

ಮೂಲಮ್ - 8

ತಂ ವೈಶ್ರವಣಸಂಕಾಶಮುಪವಿಷ್ಟಂ ಸ್ವಲಂಕೃತಮ್ ।
ದದರ್ಶ ಸೂತಃ ಪರ್ಯಂಕೇ ಸೌವರ್ಣೇ ಸೋತ್ತರಚ್ಛದೇ ॥

ಅನುವಾದ

ಅಲ್ಲಿಗೆ ಹೋಗಿ ಸುಮಂತ್ರನು ನೋಡಿದನು - ಶ್ರೀರಾಮಚಂದ್ರನು ವಸ್ತ್ರಾಭೂಷಗಳಿಂದ ಅಲಂಕೃತವಾಗಿ ಕುಬೇರನಂತೆ ಕಂಡುಬರುತ್ತಿದ್ದು, ಸ್ವರ್ಣಮಂಚದಲ್ಲಿ ಹಂಸತೂಲಿಕಾತಲ್ಪದಲ್ಲಿ ವಿರಾಜಮಾನನಾಗಿದ್ದನು.॥8॥

ಮೂಲಮ್ - 9

ವರಾಹರುಧಿರಾಭೇಣ ಶುಚಿನಾ ಚ ಸುಗಂಧಿನಾ ।
ಅನುಲಿಪ್ತಂ ಪರಾರ್ಧ್ಯೇನ ಚಂದನೇನ ಪರಂತಪಮ್ ॥

ಮೂಲಮ್ - 10

ಸ್ಥಿತಯಾ ಪಾರ್ಶ್ವತಶ್ಚಾಪಿ ವಾಲವ್ಯಜನಹಸ್ತಯಾ ।
ಉಪೇತಂ ಸೀತಯಾ ಭೂಯಶ್ಚಿತ್ರಯಾ ಶಶಿನಂ ಯಥಾ ॥

ಅನುವಾದ

ಹಂದಿಯ ರಕ್ತದ ಕಾಂತಿಯಂತೆ ಅಂಗಕಾಂತಿಯುಳ್ಳ, ಅತಿಪವಿತ್ರವಾದ, ಸುಗಂಧಯುಕ್ತ ಅತ್ಯಮೂಲ್ಯ ರಕ್ತಚಂದನವನ್ನು ಲೇಪಿಸಿಕೊಂಡಿದ್ದ, ಶತ್ರುಗಳಿಗೆ ಸಂತಾಪ ಕೊಡುವ ಶ್ರೀರಾಮನನ್ನು ಸುಮಂತ್ರನು ನೋಡಿದನು. ಚಿತ್ತಾ ನಕ್ಷತ್ರದಿಂದ ಕೂಡಿದ ಚಂದ್ರನಂತೆ ಚಾಮರಗಳನ್ನು ಹಿಡಿದು ಪಕ್ಕದಲ್ಲಿ ನಿಂತಿದ್ದ ಸೀತೆಯೊಡನೆ ಕುಳಿತಿದ್ದನ.॥9-10॥

ಮೂಲಮ್ - 11

ತಂ ತಪಂತಮಿವಾದಿತ್ಯಮುಪಪನ್ನಂ ಸ್ವತೇಜಸಾ ।
ವವಂದೇ ವರದಂ ವಂದೀ ವಿನಿಯಜ್ಞೋ ವಿನೀತವತ್ ॥

ಅನುವಾದ

ಸ್ವಯಂಪ್ರಕಾಶನಾದ ಸೂರ್ಯನಂತೆ ತನ್ನ ದಿವ್ಯ ತೇಜಸ್ಸಿನಿಂದ ಬೆಳಗುತ್ತಿದ್ದ ವರದಾಯಕ ಶ್ರೀರಾಮನನ್ನು ವಿನಯಗುಣಜ್ಞನಾದ ಸುಮಂತ್ರನು ವಿನೀತವಾಗಿ ಸಾಷ್ಟಾಂಗ ನಮಸ್ಕಾರ ಮಾಡಿದನು.॥11॥

ಮೂಲಮ್ - 12

ಪ್ರಾಂಜಲಿಃ ಸುಮುಖಂ ದೃಷ್ಟ್ವಾ ವಿಹಾರಶಯನಾಸನೇ ।
ರಾಜಪುತ್ರಮುವಾಚೇದಂ ಸುಮಂತ್ರೋ ರಾಜಸತ್ಕೃತಃ ॥

ಅನುವಾದ

ಬಳಿಕ ಶ್ರೀರಾಮನಿಂದ ಯಥೋಚಿತ ಸತ್ಕೃತನಾದ ಸುಮಂತ್ರನು ಕೈಮುಗಿದುಕೊಂಡು ವಿಹಾರಾರ್ಥವಾಗಿಯೂ ಶಯನಾರ್ಥವಾಗಿಯೂ ಸಿದ್ಧಪಡಿಸಿದ್ದ ಚಿನ್ನದ ಮಂಚದಲ್ಲಿ ಮಂದಸ್ಮಿತನಾಗಿ ಸೀತೆಯೊಡನೆ ಕುಳಿತಿದ್ದ ಶ್ರೀರಾಮನಲ್ಲಿ ಹೇಳಿದನು.॥12॥

ಮೂಲಮ್ - 13

ಕೌಸಲ್ಯಾ ಸುಪ್ರಜಾ ರಾಮ ಪಿತಾ ತ್ವಾಂ ದ್ರಷ್ಟುಮಿಚ್ಛತಿ ।
ಮಹಿಷ್ಯಾಪಿ ಹಿ ಕೈಕೇಯ್ಯಾ ಗಮ್ಯತಾಂ ತತ್ರ ಮಾ ಚಿರಮ್ ॥

ಅನುವಾದ

ಶ್ರೀರಾಮಾ! ಮಹಾರಾಣೀ ಕೌಸಲ್ಯಾ ದೇವಿಯು ನಿನಗೆ ಜನ್ಮವಿತ್ತು ಸುಪುತ್ರವಂತಳಾದಳು. ಈಗ ರಾಣಿ ಕೈಕೆಯಿಯ ಜೊತೆಗೆ ಕುಳಿತಿದ್ದ ನಿಮ್ಮ ತಂದೆ ದಶರಥರಾಜರು ನಿನ್ನನ್ನು ನೋಡಲು ಬಯಸುತ್ತಿರುವರು. ತಡಮಾಡದೆ ಅಲ್ಲಿಗೆ ಬರಬೇಕು.॥13॥

ಮೂಲಮ್ - 14

ಏವಮುಕ್ತಸ್ತು ಸಂಹೃಷ್ಟೋ ನರಸಿಂಹೋ ಮಹಾದ್ಯುತಿಃ ।
ತತಃ ಸಮ್ಮಾನಯಾಮಾಸ ಸೀತಾಮಿದಮುವಾಚ ಹ ॥

ಅನುವಾದ

ಸುಮಂತ್ರನು ಹೀಗೆ ಹೇಳಿದಾಗ ಮಹಾತೇಜಸ್ವೀ ನರಶ್ರೇಷ್ಠ ಶ್ರೀರಾಮನು ಸೀತೆಯನ್ನು ಸಮ್ಮಾನಿಸುತ್ತಾ ಸಂತೋಷದಿಂದ ಆಕೆಯಲ್ಲಿ ಈ ಪ್ರಕಾರ ಹೇಳಿದನು.॥14॥

ಮೂಲಮ್ - 15

ದೇವಿ ದೇವಶ್ಚ ದೇವೀ ಚ ಸಮಾಗಮ್ಯ ಮದಂತರೇ ।
ಮಂತ್ರಯೇತೇ ಧ್ರುವಂ ಕಿಂಚಿದಭಿಷೇಚನಸಂಹಿತಮ್ ॥

ಅನುವಾದ

ದೇವಿ! ತಂದೆಯವರು ಮತ್ತು ತಾಯಿ ಕೈಕೆಯಿಯು ಸೇರಿ ನನ್ನ ಕುರಿತು ಏನೋ ವಿಚಾರಮಾಡುತ್ತಿರುವಂತೆ ಕಾಣುತ್ತದೆ. ಖಂಡಿತವಾಗಿ ನನ್ನ ಪಟ್ಟಾಭಿಷೇಕದ ಸಂಬಂಧವಾಗಿ ಏನೋ ಮಾತು ನಡೆಯುತ್ತಿದೆ ಎನಿಸುತ್ತಿದೆ.॥15॥

ಮೂಲಮ್ - 16

ಲಕ್ಷಯಿತ್ವಾ ಹ್ಯಭಿಪ್ರಾಯಂ ಪ್ರಿಯಕಾಮಾ ಸುದಕ್ಷಿಣಾ ।
ಸಂಚೋದಯತಿ ರಾಜಾನಂ ಮದರ್ಥಮಸೀತೇಕ್ಷಣಾ ॥

ಅನುವಾದ

ನನ್ನ ಪಟ್ಟಾಭಿಷೇಕದ ವಿಷಯದಲ್ಲಿ ರಾಜರ ಅಭಿಪ್ರಾಯಕ್ಕೆ ಅನುಸಾರ ಪತಿಯ ಹಿತವನ್ನು ಮಾಡುವ ಪರಮ ಉದಾರ ಹಾಗೂ ಸಮರ್ಥಳೂ ಆದ ಕೈಕಾಮಾತೆಯು ನನ್ನ ಪಟ್ಟಾಭಿಷೇಕಕ್ಕಾಗಿ ರಾಜರನ್ನು ಪ್ರೇರೇಪಿಸುತ್ತಾ ಇರಬಹುದು.॥16॥

ಮೂಲಮ್ - 17

ಸಾ ಪ್ರಹೃಷ್ಟಾ ಮಹಾರಾಜಂ ಹಿತಕಾಮಾನುವರ್ತಿನೀ ।
ಜನನೀ ಚಾರ್ಥಕಾಮಾ ಮೇ ಕೇಕಯಾಧಿಪತೇಃ ಸುತಾ ॥

ಅನುವಾದ

ನನ್ನ ತಾಯಿ ಕೇಕೆಯ ರಾಜಕುಮಾರಿಯು ಈ ಸಮಾಚಾರದಿಂದ ಬಹಳ ಪ್ರಸನ್ನಳಾಗಿರಬಹುದು. ಆಕೆಯು ಮಹಾರಾಜರ ಹಿತವನ್ನು ಬಯಸುವವಳೂ, ಅನುಗಾಮಿನಿಯೂ ಆಗಿರುವಳು. ಜೊತೆಗೆ ನನ್ನ ಹಿತವನ್ನು ಬಯಸುತ್ತಿರುವವಳಾಗಿದ್ದಾಳೆ. ಆದ್ದರಿಂದ ಆಕೆಯು ಮಹಾರಾಜರನ್ನು ಅಭಿಷೇಕಕ್ಕಾಗಿ ಅವಸರಪಡಿಸಬಹುದು.॥17॥

ಮೂಲಮ್ - 18

ದಿಷ್ಟ್ಯಾ ಖಲು ಮಹಾರಾಜೋ ಮಹಿಷ್ಯಾ ಪ್ರಿಯಯಾ ಸಹ ।
ಸುಮಂತ್ರಂ ಪ್ರಾಹಿಣೋದ್ದೂತಮರ್ಥಕಾಮಕರಂ ಮಮ ॥

ಅನುವಾದ

ಮಹಾರಾಜರು ತನ್ನ ಪ್ರಿಯ ರಾಣಿಯೊಂದಿಗೆ ಕುಳಿತು ನನ್ನ ಅಭೀಷ್ಟಾರ್ಥದ ಸಿದ್ಧಿಗಾಗಿ ಸುಮಂತ್ರನನ್ನು ಕಳಿಸಿರುವರು, ಇದು ಸೌಭಾಗ್ಯದ ಮಾತಾಗಿದೆ.॥18॥

ಮೂಲಮ್ - 19

ಯಾದೃಶೀ ಪರಿಷತ್ತತ್ರ ತಾದೃಶೋ ದೂತ ಆಗತಃ ।
ಧ್ರುವಮದ್ಯೈವ ಮಾಂ ರಾಜಾ ಯೌವರಾಜ್ಯೇಽಭಿಷೇಕ್ಷ್ಯತಿ ॥

ಅನುವಾದ

ಅಲ್ಲಿ ಅಂತರಂಗ ಮಂತ್ರಾಲೋಚನೆ ನಡೆಯುತ್ತಿದ್ದಂತೆ ಇಲ್ಲಿಗೆ ದೂತನನ್ನು ಕಳಿಸಿರುವರು. ಖಂಡಿತವಾಗಿ ಮಹಾರಾಜರು ಇಂದೇ ನನ್ನ ಪಟ್ಟಾಭಿಷೇಕ ಮಾಡುವರು.॥19॥

ಮೂಲಮ್ - 20

ಹಂತ ಶೀಘ್ರಮಿತೋ ಗತ್ವಾ ದ್ರಕ್ಷ್ಯಾಮಿ ಚ ಮಹೀಪತಿಮ್ ।
ಸಹ ತ್ವಂ ಪರಿವಾರೇಣ ಸುಖಮಾಸ್ಸ್ವರಮಸ್ವ ಚ ॥

ಅನುವಾದ

ಆದ್ದರಿಂದ ನಾನು ಸಂತೋಷವಾಗಿ ಇಲ್ಲಿಂದ ಹೋಗಿ ಮಹಾರಾಜರನ್ನು ದರ್ಶಿಸುವೆನು. ನೀನು ಪರಿವಾರದವರೊಡನೆ ಇಲ್ಲೇ ಸುಖವಾಗಿ ಕುಳಿತು ಆನಂದವನ್ನು ಅನುಭವಿಸು.॥20॥

ಮೂಲಮ್ - 21

ಪತಿಸಮ್ಮಾನಿತಾ ಸೀತಾ ಭರ್ತಾರಮಸಿತೇಕ್ಷಣಾ ।
ಆ ದ್ವಾರಮನುವವ್ರಾಜ ಮಂಗಲಾನ್ಯಭಿದಧ್ಯುಷೀ ॥

ಅನುವಾದ

ಶ್ರೀರಾಮನು ಸೀತೆಯನ್ನು ಹೀಗೆ ಸಂತೈಸಿದ ಬಳಿಕ ಸೀತಾದೇವಿಯು ಪತಿಗೆ ಮಂಗಳವಾಗಲೆಂದು ಪ್ರಾರ್ಥಿಸುತ್ತಾ ಪತಿಯ ಜೊತೆಗೇ ಮಹಾದ್ವಾರದವರೆಗೆ ಹೋದಳು.॥21॥

ಮೂಲಮ್ - 22

ರಾಜ್ಯಂ ದ್ವಿಜಾತಿಭಿರ್ಜುಷ್ಟಂ ರಾಜಸೂಯಾಭಿಷೇಚನಮ್ ।
ಕರ್ತುಮರ್ಹತಿ ತೇ ರಾಜಾ ವಾಸವಸ್ಯೇವ ಲೋಕಕೃತ್ ॥

ಅನುವಾದ

ಆಗ ಆಕೆಯು-ಆರ್ಯಪುತ್ರ! ಲೋಕಸ್ರಷ್ಟಾ ಬ್ರಹ್ಮದೇವರು ದೇವೇಂದ್ರನಿಗೆ ಪಟ್ಟಾಭಿಷೇಕ ಮಾಡಿದಂತೆ, ಬ್ರಾಹ್ಮಣರಿಂದೊಡಗೂಡಿ ಮಹಾರಾಜರು ನಿಮಗೆ ಈ ರಾಜ್ಯದ ರಾಜಸೂಯಾಭಿಷೇಕ ಮಾಡಲಿ (ಚಕ್ರವರ್ತಿಯಾಗಿ ನಿಮಗೆ ಪಟ್ಟಕಟ್ಟಲಿ).॥22॥

ಮೂಲಮ್ - 23

ದೀಕ್ಷಿತಂ ವ್ರತಸಂಪನ್ನಂ ವರಾಜಿನಧರಂ ಶುಚಿಮ್ ।
ಕುರಂಗಶೃಂಗಪಾಣಿಂ ಚ ಪಶ್ಯಂತೀ ತ್ವಾಂ ಭಜಾಮ್ಯಹಮ್ ॥

ಅನುವಾದ

ನೀವು ರಾಜಸೂಯ ಯಾಗದಲ್ಲಿ ದೀಕ್ಷಿತನಾಗಿ ಅದಕ್ಕನು ಕೂಲವಾದ ವ್ರತವನ್ನು ಪಾಲಿಸಲು ತತ್ಪರರಾಗಿ, ಶ್ರೇಷ್ಠ ಮೃಗಚರ್ಮವನ್ನು ಧರಿಸಿ, ಕೈಯಲ್ಲಿ ಮೃಗ ಶೃಂಗವನ್ನು ಹಿಡಿದಿರುವ ನಿಮ್ಮ ಮಂಗಳ ರೂಪವನ್ನು ದರ್ಶಿಸುತ್ತಾ ನಾನು ನಿಮ್ಮ ಸೇವೆಯಲ್ಲಿ ತೊಡಗುವುದೇ ನನ್ನ ಶುಭಕಾಮನೆಯಾಗಿದೆ.॥23॥

ಮೂಲಮ್ - 24

ಪೂರ್ವಾಂ ದಿಶಂ ವ್ರಜಧರೋ ದಕ್ಷಿಣಾಂ ಪಾತು ತೇ ಯಮಃ ।
ವರುಣಃ ಪಶ್ಚಿಮಾಮಾಶಾಂ ಧನೇಶಸ್ತೂತ್ತರಾಂ ದಿಶಮ್ ॥

ಅನುವಾದ

ಪೂರ್ವದಲ್ಲಿ ವಜ್ರಧಾರೀ ಇಂದ್ರನೂ, ದಕ್ಷಿಣದಲ್ಲಿ ಯಮರಾಜನೂ, ಪಶ್ಚಿಮದಲ್ಲಿ ವರುಣನೂ, ಉತ್ತರದಲ್ಲಿ ಕುಬೇರನೂ ನಿಮ್ಮನ್ನು ರಕ್ಷಿಸಲಿ.॥24॥

ಮೂಲಮ್ - 25

ಅಥ ಸೀತಾಮನುಜ್ಞಾಪ್ಯ ಕೃತಕೌತುಕಮಂಗಲಃ ।
ನಿಶ್ಚಕ್ರಾಮ ಸುಮಂತ್ರೇಣ ಸಹ ರಾಮೋ ನಿವೇಶನಾತ್ ॥

ಅನುವಾದ

ಅನಂತರ ಶ್ರೀರಾಮನು ಮಂಗಳ ಸ್ನಾನ-ಕೌತುಕಬಂಧನಾದಿ ಮಾಂಗಲಿಕ ಕೃತ್ಯಗಳನ್ನು ಪೂರೈಸಿ ಸೀತೆಯನ್ನು ಬೀಳ್ಕೊಂಡು ಸುಮಂತ್ರನೊಂದಿಗೆ ತನ್ನ ಭವನದಿಂದ ಹೊರಟನು.॥25॥

ಮೂಲಮ್ - 26

ಪರ್ವತಾದಿವ ನಿಷ್ಕ್ರಮ್ಯ ಸಿಂಹೋ ಗಿರಿಗುಹಾಶಯಃ ।
ಲಕ್ಷಣಂ ದ್ವಾರಿ ಸೋಽಪಶ್ಯತ್ ಪ್ರಹ್ವಾಂಜಲಿಪುಟಂ ಸ್ಥಿತಮ್ ॥

ಅನುವಾದ

ಪರ್ವತದ ಗುಹೆಯಲ್ಲಿ ಮಲಗಿರುವ ಸಿಂಹವು ಗುಹೆಯಿಂದ ಹೊರಬರುವಂತೆ ಅಂತಃಪುರದಿಂದ ಹೊರಬಂದ ಶ್ರೀರಾಮನು ಬಾಗಿಲಲ್ಲಿ ಕೈಮುಗಿದುಕೊಂಡು ವಿನೀತ ಭಾವದಿಂದ ನಿಂತಿದ್ದ ಲಕ್ಷ್ಮಣನನ್ನು ನೋಡಿದನು.॥26॥

ಮೂಲಮ್ - 27

ಅಥ ಮಧ್ಯಮಕಕ್ಷ್ಯಾಯಾಂ ಸಮಾಗಚ್ಛತ್ ಸುಹೃಜ್ಜನೈಃ ।
ಸ ಸರ್ವಾನರ್ಥಿನೋ ದೃಷ್ಟ್ವಾ ಸಮೇತ್ಯ ಪ್ರತಿನಂದ್ಯ ಚ ॥

ಮೂಲಮ್ - 28

ತತಃ ಪಾವಕಸಂಕಾಶಮಾರುರೋಹ ರಥೋತ್ತಮಮ್ ।
ವೈಯಾಘ್ರಂ ಪುರುಷವ್ಯಾಘ್ರೋ ರಾಜಿತಂ ರಾಜನಂದನಃ ॥

ಅನುವಾದ

ಅನಂತರ ಮಧ್ಯಕಕ್ಷೆಗೆ ಬಂದು ಮಿತ್ರರನ್ನು ಭೆಟ್ಟಿಯಾಗಿ, ಪಟ್ಟಾಭಿಷೇಕಕ್ಕೆ ಬಂದ ಪ್ರಜೆಗಳೆಲ್ಲರನ್ನು ಆದರಪೂರ್ವಕ ಅಭಿನಂದಿಸಿ, ಪುರುಷಸಿಂಹ ರಾಜಕುಮಾರ ಶ್ರೀರಾಮನು ವ್ಯಾಘ್ರಚರ್ಮವನ್ನು ಹಾಸಿದ್ದ, ಅಗ್ನಿಯಂತೆ ಪ್ರಕಾಶಮಾನವಾದ ಉತ್ತಮ ರಥವನ್ನು ಹತ್ತಿದನು.॥27-28॥

ಮೂಲಮ್ - 29

ಮೇಘನಾದಮಸಂಬಾಧಂ ಮಣಿಹೇಮವಿಭೂಷಿತಮ್ ।
ಮುಷ್ಣಂತಮಿವ ಚಕ್ಷೂಂಷಿ ಪ್ರಭಯಾ ಮೇರುವರ್ಚಸಮ್ ॥

ಅನುವಾದ

ಶ್ರೀರಾಮನು ಕುಳಿತಿದ್ದ ಆ ದಿವ್ಯ ರಥದ ಧ್ವನಿಯು ಮೇಘಗಂಭೀರ ಧ್ವನಿಯಂತೆ ಇತ್ತು. ರಥದ ಒಳಭಾಗವು ವಿಸ್ತಾರವಾಗಿತ್ತು. ಅದು ನವರತ್ನಗಳಿಂದಲೂ, ಸುವರ್ಣದಿಂದಲೂ ವಿಭೂಷಿತವಾಗಿತ್ತು. ಮೇರುಪರ್ವತದ ಸುವರ್ಣಕಾಂತಿಯಂತೆ ಹೊಳೆಯುತ್ತಿತ್ತು. ಆ ರಥವು ನೋಡುವ ಜನರ ಕಣ್ಣು ಕುಕ್ಕುವಂತಹ ಪ್ರಭೆಯನ್ನು ಹೊರಸೂಸುತ್ತಿತ್ತು.॥29॥

ಮೂಲಮ್ - 30

ಕರೇಣುಶಿಶುಕಲ್ಪೈಶ್ಚ ಯುಕ್ತಂ ಪರಮವಾಜಿಭಿಃ ।
ಹರಿಯುಕ್ತಂ ಸಹಸ್ರಾಕ್ಷೋ ರಥಮಿಂದ್ರ ಇವಾಶುಗಮ್ ॥

ಅನುವಾದ

ಆನೆಯ ಮರಿಗಳಂತೆ ಪುಷ್ಟವಾದ ಉತ್ತಮ ಕುದುರೆಗಳನ್ನು ರಥಕ್ಕೆ ಹೂಡಿದ್ದರು. ಸಹಸ್ರಾಕ್ಷ ಇಂದ್ರನು ದಿವ್ಯಾಶ್ವಗಳನ್ನು ಹೂಡಿದ ಶೀಘ್ರಗಾಮಿ ರಥದಲ್ಲಿ ಕುಳಿತಿರುವಂತೆ ಶ್ರೀರಾಮನು ಆ ದಿವ್ಯರಥದಲ್ಲಿ ಆರೂಢನಾದನು.॥30॥

ಮೂಲಮ್ - 31½

ಪ್ರಯಯೌ ತೂರ್ಣಮಾಸ್ಥಾಯ ರಾಘವೋ ಜ್ವಲಿತಃ ಶ್ರಿಯಾ ।
ಸ ಪರ್ಜನ್ಯ ಇವಾಕಾಶೇ ಸ್ವನವಾನಭಿನಾದಯನ್ ॥
ನಿಕೇತಾನ್ನಿರ್ಯಯೌ ಶ್ರೀಮನ್ಮಹಾಭ್ರಾದಿವ ಚಂದ್ರಮಾಃ ।

ಅನುವಾದ

ತನ್ನ ಸಹಜ ಶೋಭೆಯಿಂದ ಪ್ರಕಾಶಿಸುತ್ತಿದ್ದ ಶ್ರೀರಾಮಚಂದ್ರನು ಆ ರಥವನ್ನಡರಿ ಕೂಡಲೇ ಅಲ್ಲಿಂದ ಹೊರಟನು. ಆ ತೇಜಸ್ವೀ ರಥವು ಮೇಘಗಂಭೀರ ಧ್ವನಿಯಿಂದ ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಮಹಾ ಮೇಘಗಳ ಎಡೆಯಿಂದ ಹೊರಬರುವ ಚಂದ್ರನಂತೆ ಶ್ರೀರಾಮನು ಆ ಭವನದಿಂದ ಹೊರಟನು.॥3½1॥

ಮೂಲಮ್ - 32½

ಚಿತ್ರಚಾಮರಪಾಣಿಸ್ತು ಲಕ್ಷ್ಮಣೋ ರಾಘವಾನುಜಃ ॥
ಜುಗೋಪ ಭ್ರಾತರಂ ಭ್ರಾತಾ ರಥಮಾಸ್ಥಾಯ ಪೃಪ್ಠತಃ ।

ಅನುವಾದ

ಶ್ರೀರಾಮನ ತಮ್ಮ ಲಕ್ಷ್ಮಣನೂ ಕೂಡ ಕೈಯಲ್ಲಿ ಚಾಮರಗಳನ್ನೆತ್ತಿಕೊಂಡು ಅಣ್ಣನಾದ ಶ್ರೀರಾಮನ ಹಿಂದೆ ಅಂಗರಕ್ಷಕನಾಗಿ ರಥದಲ್ಲಿ ನಿಂತಿದ್ದನು.॥32½॥

ಮೂಲಮ್ - 33½

ತತೋ ಹಲಹಲಾಶಬ್ದಸ್ತುಮುಲಃ ಸಮಜಾಯತ ॥
ತಸ್ಯ ನಿಷ್ಕ್ರಮಮಾಣಸ್ಯ ಜನೌಘಸ್ಯ ಸಮಂತತಃ ।

ಅನುವಾದ

ಬಹಳ ಹೊತ್ತಿನಿಂದ ಅಲ್ಲಿ ನಿಂತಿದ್ದ ಜನ ಜಂಗುಳಿ ಶ್ರೀರಾಮನು ರಥಾರೂಢನಾಗಿ ಹೊರಟಾಗ ಹರ್ಷಾಧಿಕ್ಯದಿಂದ ಮಾಡಿದ ಜಯಘೋಷದ ಕೋಲಾಹಲವೇ ನಡೆಯಿತು.॥33½॥

ಮೂಲಮ್ - 34½

ತತೋ ಹಯವರಾ ಮುಖ್ಯಾ ನಾಗಾಶ್ಚ ಗಿರಿಸಂನಿಭಾಃ ॥
ಅನುಜಗ್ಮುಸ್ತಥಾ ರಾಮಂ ಶತಶೋಽಥ ಸಹಸ್ರಶಃ ।

ಅನುವಾದ

ಶ್ರೀರಾಮನ ರಥವನ್ನು ಹಿಂಬಾಲಿಸಿ ಶ್ರೇಷ್ಠವಾದ ಕುದುರೆಗಳೂ, ಪರ್ವತೋಪಮ ಆನೆಗಳೂ, ಸಾವಿರಾರು ಸಂಖ್ಯೆಯಲ್ಲಿ ಹೊರಟವು.॥34½॥

ಮೂಲಮ್ - 35½

ಅಗ್ರತಶ್ಚಾಸ್ಯ ಸನ್ನದ್ಧಾಶ್ಚಂದನಾಗರುಭೂಷಿತಾಃ ॥
ಖಡ್ಗಚಾಪಧರಾಃ ಶೂರಾ ಜಗ್ಮುರಾಶಂಸವೋ ಜನಾಃ ।

ಅನುವಾದ

ರಥದ ಮುಂದೆ ಸಮವಸ್ತ್ರಧಾರಿಗಳಾಗಿದ್ದ, ಚಂದನಾಗರುಗಳನ್ನು ಲೇಪಿಸಿಕೊಂಡಿದ್ದ, ಖಡ್ಗ, ಧನುಸ್ಸುಗಳನ್ನು ಹಿಡಿದು ಸನ್ನದ್ಧರಾದ ಅನೇಕ ಶೂರರಾದ ಸೈನಿಕರೂ, ಮಂಗಳವನ್ನು ಹರಸುತ್ತಿದ್ದ ವಂದಿಮಾಗಧರು ನಡೆಯುತ್ತಿದ್ದರು.॥35½॥

ಮೂಲಮ್ - 36

ತತೋ ವಾದಿತ್ರಶಬ್ದಾಶ್ಚ ಸ್ತುತಿಶಬ್ದಾಶ್ಚ ವಂದಿನಾಮ್ ॥
ಸಿಂಹನಾದಾಶ್ಚ ಶೂರಾಣಾಂ ತತಃ ಶುಶ್ರುವಿರೇ ಪಥಿ ।

ಮೂಲಮ್ - 37½

ಹರ್ಮ್ಯವಾತಾಯನಸ್ಥಾಭಿರ್ಭೂಷಿತಾಭಿಃ ಸಮಂತತಃ ॥
ಕೀರ್ಯಮಾಣಃ ಸುಪುಷ್ಪೌಘೈರ್ಯಯೌ ಸ್ತ್ರೀಭಿರರಿಂದಮಃ ।

ಅನುವಾದ

ರಥವು ಸಾಗುತ್ತಿದ್ದ ರಾಜಮಾರ್ಗದಲ್ಲಿ ಮಂಗಳ ವಾದ್ಯಘೋಷ, ವಂದಿ-ಮಾಗಧರ ಸ್ತುತಿಪರ ಶಬ್ದಗಳು, ಶೂರವೀರರ ಸಿಂಹನಾದ ಕೇಳಿ ಬರುತ್ತಿದ್ದವು. ರಾಜಮಾರ್ಗದ ಇಕ್ಕೆಡೆಗಳಲ್ಲಿ ಉಪ್ಪರಿಗೆಯ ಮನೆಯ ಕಿಡಕಿಗಳ ಸಮೀಪ ಸರ್ವಾಲಂಕಾರ ಭೂಷಿತೆಯರಾಗಿ ನಿಂತಿದ್ದ ವನಿತೆಯರು ಶ್ರೀರಾಮನ ಮೇಲೆ ಪುಷ್ಪಾಂಜಲಿಗಳನ್ನು ಸುರಿಸುತ್ತಿದ್ದರು. ಹೀಗೆ ಶ್ರೀರಾಮನು ಮುಂದುವರಿಯುತ್ತಿದ್ದನು.॥36-37½॥

ಮೂಲಮ್ - 38½

ರಾಮಂ ಸರ್ವಾನವದ್ಯಾಂಗೋ ರಾಮಪಿಪ್ರೀಷಯಾ ತತಃ ॥
ವಚೋಭಿರಗ್ರೈರ್ಹರ್ಮ್ಯಸ್ಥಾಃ ಕ್ಷಿತಿಸ್ಥಾಶ್ಚವವಂದಿರೇ ।

ಅನುವಾದ

ಉಪ್ಪರಿಗೆಯ ಮೇಲೆ ಮತ್ತು ಕೆಳಗೆ ನಿಂತಿದ್ದ ಸರ್ವಾಂಗ ಸುಂದರ ಯುವತಿಯರು ಶ್ರೀರಾಮನನ್ನು ಸಂತೋಷ ಪಡಿಸುವ ಇಚ್ಛೆಯಿಂದ ಅವನ ಹಿರಿಮೆಯನ್ನು ಮುಕ್ತಕಂಠದಿಂದ ಹೊಗಳುತ್ತಾ ಅಭಿನಂದಿಸುತ್ತಿದ್ದರು.॥38½॥

ಮೂಲಮ್ - 39½

ನೂನಂ ನಂದತಿ ತೇ ಮಾತಾ ಕೌಸಲ್ಯಾಮಾತೃನಂದನ ॥
ಪಶ್ಯಂತಿ ಸಿದ್ಧಯಾತ್ರಂ ತ್ವಾಂ ಪಿತ್ರ್ಯಂ ರಾಜ್ಯಮುಪಸ್ಥಿತಮ್ ।

ಅನುವಾದ

ತಾಯಿಗೆ ಸಂತೋಷವನ್ನುಂಟುಮಾಡುವ ಶ್ರೀರಾಮನೇ! ನಿನ್ನ ಈ ಯಾತ್ರೆಯು ಸಫಲವಾಗಿ, ನಿನಗೆ ತಂದೆಯ ರಾಜ್ಯ ಸಿಗುವುದು. ಇದನ್ನು ನೋಡಿದ ನಿನ್ನ ತಾಯಿ ಕೌಸಲ್ಯೆಯು ಅಮಿತವಾದ ಆನಂದವನ್ನು ಪಡೆಯುವಳು.॥39½॥

ಮೂಲಮ್ - 40

ಸರ್ವಸೀಮಂತಿನೀಭ್ಯಶ್ಚ ಸೀತಾಂ ಸೀಮಂತಿನೀಂ ವರಾಮ್ ॥
ಅಮನ್ಯಂತ ಹಿ ತಾ ನಾರ್ಯೋ ರಾಮಸ್ಯ ಹೃದಯಪ್ರಿಯಾಮ್ ।

ಮೂಲಮ್ - 41

ತಯಾ ಸುಚರಿತಂ ದೇವ್ಯಾ ಪುರಾ ನೂನಂ ಮಹತ್ತಪಃ ॥
ರೋಹಿಣೀವ ಶಶಾಂಕೇನ ರಾಮಸಂಯೋಗಮಾಪ ಯಾ ।

ಅನುವಾದ

ಶ್ರೀರಾಮನ ಹೃದಯವಲ್ಲಭೆಯಾದ ಸೀಮಂತಿನೀ ಸೀತೆಯು ಪ್ರಪಂಚದ ಸಮಸ್ತ ಸ್ತ್ರೀಯರಲ್ಲಿ ಶ್ರೇಷ್ಠಳೆಂದು ಆ ಅಯೋಧ್ಯಾಪಟ್ಟಣದ ಸ್ತ್ರೀಯರು ಭಾವಿಸಿದರು. ನಿಶ್ಚಯವಾಗಿಯೂ ಸೀತಾದೇವಿಯು ಹಿಂದಿನ ಜನ್ಮದಲ್ಲಿ ಮಹಾ ತಪಸ್ಸನ್ನು ಮಾಡಿದ್ದಾಳೆ; ಆದುದರಿಂದಲೇ ಆಕೆಯು ಈ ಜನ್ಮದಲ್ಲಿ ರೋಹಿಣಿಯು ಚಂದ್ರನನ್ನು ಸೇರುವಂತೆ ಶ್ರೀರಾಮನನ್ನು ಸೇರಿರುವಳು.॥40-41॥

ಮೂಲಮ್ - 42

ಇತಿ ಪ್ರಾಸಾದಶೃಂಗೇಷು ಪ್ರಮದಾಭಿರ್ನರೋತ್ತಮಃ ।
ಶುಶ್ರಾವ ರಾಜಮಾರ್ಗಸ್ಥಃ ಪ್ರಿಯಾ ವಾಚ ಉದಾಜ್ಞತಾಃ ॥

ಅನುವಾದ

ಹೀಗೆ ರಾಜಮಾರ್ಗದಲ್ಲಿ ರಥಾರೂಢನಾಗಿ ಹೋಗುತ್ತಿದ್ದ ಶ್ರೀರಾಮಚಂದ್ರನು ಪ್ರಾಸಾದ ಶಿಖರಗಳಲ್ಲಿ ಕುಳಿತಿದ್ದ ಪ್ರಮದೆಯರು ಆಡುತ್ತಿದ್ದ ಪ್ರಿಯವಚನಗಳನ್ನು ಕೇಳುತ್ತಿದ್ದನು.॥42॥

ಮೂಲಮ್ - 43

ಸ ರಾಘವಸ್ತತ್ರ ತದಾ ಪ್ರಲಾಪಾನ್
ಶುಶ್ರಾವ ಲೋಕಸ್ಯ ಸಮಾಗತಸ್ಯ ।
ಆತ್ಮಾಧಿಕಾರಾ ವಿವಿಧಾಶ್ಚ ವಾಚಃ
ಪ್ರಹೃಷ್ಟರೂಪಸ್ಯ ಪುರೇಜನಸ್ಯ ॥

ಅನುವಾದ

ಆಗ ಅಯೋಧ್ಯೆಗೆ ಬಂದಿರುವ ದೂರ-ದೂರ ದೇಶದ ಜನರು ಅತ್ಯಂತ ಹರ್ಷಗೊಂಡು ಶ್ರೀರಾಮಚಂದ್ರನ ವಿಷಯದಲ್ಲಿ ಬಗೆ-ಬಗೆಯಾಗಿ ವಾರ್ತಾಲಾಪಮಾಡುತ್ತಿದ್ದ ಎಲ್ಲ ಮಾತುಗಳನ್ನು ಶ್ರೀರಾಮನು ಕೇಳುತ್ತಾ ಹೋಗುತ್ತಿದ್ದನು.॥43॥

ಮೂಲಮ್ - 44

ಏಷ ಶ್ರಿಯಂ ಗಚ್ಛತಿ ರಾಘವೋಽದ್ಯ
ರಾಜಪ್ರಸಾದಾದ್ ವಿಪುಲಾಂ ಗಮಿಷ್ಯನ್ ।
ಏತೇ ವಯಂ ಸರ್ವಸಮೃದ್ಧಕಾಮಾ
ಯೇಷಾಮಯಂ ನೋ ಭವಿತಾ ಪ್ರಶಾಸ್ತಾ ॥

ಅನುವಾದ

ಈಗ ಈ ಶ್ರೀರಾಮಚಂದ್ರನು ಮಹಾರಾಜಾ ದಶರಥನ ಕೃಪೆಯಿಂದ ಬಹಳ ದೊಡ್ಡ ಸಂಪತ್ತಿನ ಅಧಿಕಾರಿಯಾಗುವನು. ನಮ್ಮ ಎಲ್ಲ ಜನರ ಸಮಸ್ತ ಕಾಮನೆಗಳು ಪೂರ್ಣವಾಗುವವು, ಏಕೆಂದರೆ ಈ ಶ್ರೀರಾಮನು ನಮಗೆ ರಾಜನಾಗುವನು ಎಂದು ಹೇಳುತ್ತಿದ್ದರು.॥44॥

ಮೂಲಮ್ - 45

ಲಾಭೋ ಜನಸ್ಯಾಸ್ಯ ಯದೇಷ ಸರ್ವಂ
ಪ್ರಪತ್ಸ್ಯತೇ ರಾಷ್ಟ್ರಮಿದಂ ಚಿರಾಯ ।
ನ ಹ್ಯಪ್ರಿಯಂ ಕಿಂಚನ ಜಾತು ಕಶ್ಚಿತ್
ಪಶ್ಯೇನ್ನ ದುಃಖಂ ಮನುಜಾಧಿಪೇಽಸ್ಮಿನ್ ॥

ಅನುವಾದ

ಈ ಇಡೀ ರಾಜ್ಯವು ಚಿರಕಾಲ ಶ್ರೀರಾಮನ ಕೈಗೆ ಬಂದರೆ ಈ ಜಗತ್ತಿನ ಸಮಸ್ತ ಜನರಿಗೆ ಮಹಾಲಾಭವಾಗುವುದು. ಇವನು ರಾಜನಾದರೆ ಎಂದಿಗೂ ಯಾರಿಗೂ ಅಪ್ರಿಯವಾಗಲಾರದು. ಯಾರೂ ದುಃಖಿತನೂ ಇರಲಾರನು ಎಂದು ಅವರೆಲ್ಲರೂ ಮಾತನಾಡಿಕೊಳ್ಳುತ್ತಿದ್ದರು.॥45॥

ಮೂಲಮ್ - 46

ನ ಘೋಷವದ್ಭಿಶ್ಚ ಹಯೈಃ ಸನಾಗೈಃ
ಪುರಃಸರೈಃ ಸ್ವಸ್ತಿಕಸೂತಮಾಗಧೈಃ ।
ಮಹೀಯಮಾನಃ ಪ್ರವರೈಶ್ಚ ವಾದಕೈ-
ರಾಭಿಷ್ಟುತೋ ವೈಶ್ರವಣೋ ಯಥಾಯಯೌ ॥

ಅನುವಾದ

ಕುದುರೆಗಳ ಹೇಷಾರವ, ಆನೆಗಳ ಚೀತ್ಕಾರ, ಜಯ-ಜಯಕಾರ ಮಾಡುತ್ತಾ ಮುಂದುಗಡೆ ಹೋಗುತ್ತಿದ್ದ ವಂದಿಗಳ ಜಯಧ್ವನಿ, ಸೂತರ ಸ್ತುತಿಪಾಠಗಳ, ಮಾಗಧರು ಮಾಡುತ್ತಿದ್ದ ವಂಶದ ಬಿರುದಾವಳಿ, ಗಾಯಕರ ತುಮುಲ ಧ್ವನಿಗಳೊಂದಿಗೆ ಶ್ರೀರಾಮಚಂದ್ರನು ಕುಬೇರನಂತೆ ಸಾಗುತ್ತಿದ್ದನು.॥46॥

ಮೂಲಮ್ - 47

ಕರೇಣುಮಾತಂಗರಥಾಶ್ವಸಂಕುಲಂ
ಮಹಾಜನೌಘೈಃ ಪರಿಪೂರ್ಣಚತ್ವರಮ್ ।
ಪ್ರಭೂತರತ್ನಂ ಬಹುಪಣ್ಯಸಂಚಯಂ
ದದರ್ಶ ರಾಮೋ ವಿಮಲಂ ಮಹಾಪಥಮ್ ॥

ಅನುವಾದ

ರಾಮನು ಸಾಗುತ್ತಿದ್ದ ಆ ವಿಶಾಲ ರಾಜಮಾರ್ಗವು ಹೆಣ್ಣಾನೆಗಳಿಂದ, ಮತ್ತ ಗಜಗಳಿಂದ, ರಥಾಶ್ವಗಳಿಂದ ನಿಬಿಡವಾಗಿ ತುಂಬಿಹೋಗಿತ್ತು, ಪ್ರತಿಯೊಂದು ಕೂಡುರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಇಕ್ಕೆಲಗಳಲ್ಲಿ ವಿಪುಲ ರತ್ನಗಳಿಂದ ತುಂಬಿದ ಅಂಗಡಿಗಳಿದ್ದು ಹಾಗೂ ಇತರ ಮಾರಾಟದ ವಸ್ತುಗಳು ರಾಶಿ-ರಾಶಿಯಾಗಿ ಕಾಣುತ್ತಿದ್ದವು. ಆ ಸ್ವಚ್ಛ-ಸುಂದರವಾದ ರಾಜಬೀದಿಯಲ್ಲಿ ಶ್ರೀರಾಮನು ಹೋಗುತ್ತಿದ್ದನು.॥47॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹದಿನಾರನೆಯ ಸರ್ಗ ಪೂರ್ಣವಾಯಿತು ॥16॥