०१४ रामानयनाय सुमन्त्रप्रेषणम्

वाचनम्
ಭಾಗಸೂಚನಾ

ಕೈಕೆಯಿಯು ರಾಜನಿಗೆ ಸತ್ಯನಿಷ್ಠೆಯಲ್ಲಿ ದೃಢವಾಗಿರಲು ಹೇಳಿ ವರಗಳನ್ನು ಕೊಡುವಂತೆ ಆಗ್ರಹಪಡಿಸಿದುದು, ವಸಿಷ್ಠರ ಆಗಮನವನ್ನು ತಿಳಿಸಲು ಅಂತಃಪುರಕ್ಕೆ ಹೋದ ಸುಮಂತ್ರನು ರಾಜನ ಆಜ್ಞಾನುಸಾರ ಶ್ರೀರಾಮನನ್ನು ಕರೆತರಲು ಹೋದುದು

ಮೂಲಮ್ - 1

ಪುತ್ರಶೋಕಾರ್ದಿತಂ ಪಾಪಾ ವಿಸಂಜ್ಞಂ ಪತಿತಂ ಭುವಿ ।
ವಿಚೇಷ್ಟಮಾನಮುತ್ಪ್ರೇಕ್ಷ್ಯ ಐಕ್ಷ್ವಾಕಮಿದಮಬ್ರವೀತ್ ॥

ಅನುವಾದ

ಇಕ್ಷ್ವಾಕುನಂದನ ದಶರಥನು ಪುತ್ರಶೋಕ ಪೀಡಿತನಾಗಿ ನೆಲದಲ್ಲಿ ನಿಃಶ್ಚೇಷ್ಟಿತನಾಗಿ ಬಿದ್ದು, ವೇದನೆಯಿಂದ ಚಡಪಡಿಸುತ್ತಿದ್ದನು. ಈ ಸ್ಥಿತಿಯಲ್ಲಿರುವುದನ್ನು ನೋಡಿ ಪಾಪಿನಿ ಕೈಕೆಯಿಯು ಇಂತೆಂದಳು.॥1॥

ಮೂಲಮ್ - 2

ಪಾಪಂ ಕೃತ್ವೇವ ಕಿಮಿದಂ ಮಮ ಸಂಶ್ರುತ್ಯ ಸಂಶ್ರವಮ್ ।
ಶೇಷೇ ಕ್ಷಿತಿತಲೇ ಸನ್ನಃ ಸ್ಥಿತ್ಯಾಂ ಸ್ಥಾತುಂ ತ್ವಮರ್ಹಸಿ ॥

ಅನುವಾದ

ಮಹಾರಾಜರೇ! ನೀವು ನನಗೆ ಎರಡು ವರಗಳನ್ನು ಕೊಡುವುದಾಗಿ ಪ್ರತಿಜ್ಞೆ ಮಾಡಿದಿರಿ. ನಾನು ಅವನ್ನು ಕೇಳಿದಾಗ ಈಗ ಮಹಾಪಾಪ ಮಾಡಿದವರಂತೆ ದುಃಖಪೀಡಿತನಾಗಿ ನೆಲದ ಮೇಲೆ ಏಕೆ ಮಲಗಿರುವೆ? ಇದೇಕೆ ಹೀಗೇ? ಸತ್ಪುರುಷರಂತೆ ಸತ್ಯವಾಕ್ಯಪರಿಪಾಲನೆಯಲ್ಲಿ ನೀವು ಸ್ಥಿರವಾಗಿರಬೇಕು.॥2॥

ಮೂಲಮ್ - 3

ಆಹುಃ ಸತ್ಯಂ ಹಿ ಪರಮಂ ಧರ್ಮಂ ಧರ್ಮವಿದೋ ಜನಾಃ ।
ಸತ್ಯಮಾಶ್ರಿತ್ಯ ಚ ಮಯಾ ತ್ವಂ ಧರ್ಮಂ ಪ್ರಚೋದಿತಃ ॥

ಅನುವಾದ

ಧರ್ಮಜ್ಞರು ಸತ್ಯವನ್ನೇ ಎಲ್ಲಕ್ಕಿಂತ ಶ್ರೇಷ್ಠಧರ್ಮವೆಂದು ಹೇಳುತ್ತಾರೆ. ಆ ಸತ್ಯವನ್ನು ಆಶ್ರಯಿಸಿಯೇ ನಾನು ನಿಮ್ಮನ್ನು ಧರ್ಮಪಾಲನೆಗಾಗಿ ಪ್ರೇರೇಪಿಸುತ್ತಿದ್ದೇನೆ.॥3॥

ಮೂಲಮ್ - 4

ಸಂಶ್ರುತ್ಯ ಶೈಬ್ಯಃ ಶ್ಯೇನಾಯಸ್ವಾಂ ತನುಂ ಜಗತೀಪತಿಃ ।
ಪ್ರದಾಯ ಪಕ್ಷಿಣೇ ರಾಜಾ ಜಗಾಮ ಗತಿಮುತ್ತಮಾಮ್ ॥

ಅನುವಾದ

ಪೃಥಿವೀ ಪತಿ ಶೈಬ್ಯರಾಜನು ತಾನು ಪ್ರತಿಜ್ಞೆ ಮಾಡಿದಂತೆ ಗಿಡುಗ ಪಕ್ಷಿಗೆ ತನ್ನ ಶರೀರದ ಮಾಂಸವನ್ನೇ ಕತ್ತರಿಸಿಕೊಟ್ಟು ಉತ್ತಮ ಗತಿಯನ್ನು ಪಡೆದನು.॥4॥

ಮೂಲಮ್ - 5

ತಥಾ ಹ್ಯಲರ್ಕಸ್ತೇಜಸ್ವೀ ಬ್ರಾಹ್ಮಣೇ ವೇದಪಾರಗೇ ।
ಯಾಚಮಾನೇ ಸ್ವಕೇ ನೇತ್ರೆ ಉದ್ಧೃತ್ಯಾವಿಮನಾ ದದೌ ॥

ಅನುವಾದ

ಹೀಗೆಯೇ ತೇಜಸ್ವೀ ಅಲರ್ಕರಾಜನು ವೇದಪಾರಂಗತ ಕುರುಡ ಬ್ರಾಹ್ಮಣನು ಕಣ್ಣುಗಳನ್ನು ಕೇಳಿದಾಗ ಏನನ್ನೂ ಯೋಚಿಸದೆ ತನ್ನ ಎರಡೂ ಕಣ್ಣುಗಳನ್ನು ಕೊಟ್ಟುಬಿಟ್ಟಿದ್ದನು.॥5॥

ಮೂಲಮ್ - 6

ಸರಿತಾಂ ತು ಪತಿಃ ಸ್ವಲ್ಪಾಂ ಮರ್ಯಾದಾಂ ಸತ್ಯಮನ್ವಿತಃ ।
ಸತ್ಯಾನುರೋಧಾತ್ಸಮಯೇ ವೇಲಾಂ ಸ್ವಾಂ ನಾತಿವರ್ತತೇ ॥

ಅನುವಾದ

ಸತ್ಯವನ್ನು ಆಶ್ರಯಿಸಿದ ಸಮುದ್ರವು ಪರ್ವಕಾಲದಲ್ಲಿಯೂ ತನ್ನ ಮೇರೆ ಮೀರದೆ ಇರುತ್ತದೆ.॥6॥

ಮೂಲಮ್ - 7

ಸತ್ಯಮೇಕಪದಂ ಬ್ರಹ್ಮ ಸತ್ಯೇ ಧರ್ಮಃ ಪ್ರತಿಷ್ಠಿತಃ ।
ಸತ್ಯೇಮೇವಾಕ್ಷಯಾ ವೇದಾಃ ಸತ್ಯೇನಾವಾಪ್ಯತೇ ಪರಮ್ ॥

ಅನುವಾದ

ಸತ್ಯವೇ ಪ್ರಣವರೂಪೀ ಶಬ್ದಬ್ರಹ್ಮವಾಗಿದೆ, ಸತ್ಯದಲ್ಲೇ ಧರ್ಮವು ಪ್ರತಿಷ್ಠಿತವಾಗಿದೆ, ಸತ್ಯವೇ ಅವಿನಾಶೀ ವೇದವಾಗಿದೆ ಮತ್ತು ಸತ್ಯದಿಂದಲೇ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ.॥7॥

ಮೂಲಮ್ - 8

ಸತ್ಯಂ ಸಮನುವರ್ತಸ್ವ ಯದಿ ಧರ್ಮೇ ಧೃತಾ ಮತಿಃ ।
ಸ ವರಃ ಸಲೋ ಮೇಽಸ್ತು ವರದೋ ಹ್ಯಸಿ ಸತ್ತಮ ॥

ಅನುವಾದ

ಅದಕ್ಕಾಗಿ ನಿಮ್ಮ ಬುದ್ಧಿ ಸತ್ಯದಲ್ಲಿ ಸ್ಥಿತವಾಗಿದ್ದರೆ ಸತ್ಯವನ್ನು ಅನುಸರಿಸಿ. ಸಾಧುಶಿರೋಮಣಿಯೇ! ನಾನು ಕೇಳಿದ ವರಗಳು ಸಫಲವಾಗಲೇಬೇಕು. ಏಕೆಂದರೆ ನೀವೇ ಆ ವರಗಳ ಧಾತೃನಾಗಿರುವಿರಿ.॥8॥

ಮೂಲಮ್ - 9

ಧರ್ಮಸ್ಯೈವಾಭಿಕಾಮಾರ್ಥಂ ಮಮ ಚೈವಾಭಿಚೋದನಾತ್ ।
ಪ್ರವ್ರಾಜಯ ಸುತಂ ರಾಮಂ ತ್ರಿಃ ಖಲು ತ್ವಾಂಬ್ರವೀಮ್ಯಹಮ್ ॥

ಅನುವಾದ

ಧರ್ಮದ ಅಭೀಷ್ಟ ಫಲ ಸಿದ್ಧಿಗಾಗಿ ಹಾಗೂ ನನ್ನ ಪ್ರೇರಣೆಯಿಂದಲೂ ನೀವು ನಿಮ್ಮ ಪುತ್ರ ಶ್ರೀರಾಮನನ್ನು ವನಕ್ಕೆ ಕಳಿಸಿರಿ. ನಾನು ನನ್ನ ಮಾತನ್ನು ಮೂರು ಬಾರಿ ಹೇಳುತ್ತಿದ್ದೇನೆ.॥9॥

ಮೂಲಮ್ - 10

ಸಮಯಂ ಚ ಮಮಾರ್ಯೇಮಂ ಯದಿ ತ್ವಂ ನ ಕರಿಷ್ಯಸಿ ।
ಅಗ್ರತಸ್ತೇ ಪರಿತ್ಯಕ್ತಾ ಪರಿತ್ಯಕ್ಷ್ಯಾಮಿ ಜೀವಿತಮ್ ॥

ಅನುವಾದ

ಆರ್ಯ! ನನ್ನಲ್ಲಿ ಮಾಡಿದ ಪ್ರತಿಜ್ಞೆಯನ್ನು ನೀವು ಪಾಲಿಸದಿದ್ದರೆ ನಾನು ನಿಮ್ಮಿಂದ ಪರಿತ್ಯಕ್ತಳಾಗಿ ನಿಮ್ಮ ಮುಂದೆಯೇ ಪ್ರಾಣಗಳನ್ನು ಕಳೆದುಕೊಳ್ಳುವೆ.॥10॥

ಮೂಲಮ್ - 11

ಏವಂ ಪ್ರಚೋದಿತೋ ರಾಜಾ ಕೈಕೇಯ್ಯಾ ನಿರ್ವಿಶಂಕಯಾ ।
ನಾಶಕತ್ ಪಾಶಮುನ್ಮೋಕ್ತುಂಬಲಿರಿಂದ್ರಕೃತಂ ಯಥಾ ॥

ಅನುವಾದ

ಈ ಪ್ರಕಾರ ಕೈಕೆಯಿಯು ನಿಃಶಂಕೆಯಾಗಿ ರಾಜನನ್ನು ಪ್ರೇರೇಪಿಸಿದಾಗ ಬಲಿರಾಜನು ಇಂದ್ರಪ್ರೇರಿತ ವಾಮನನ ಪಾಶದಿಂದ ತನ್ನನ್ನು ಬಿಡಿಸಿಕೊಳ್ಳದಿರುವಂತೆ, ಆ ಸತ್ಯರೂಪೀ ಬಂಧನದಿಂದ ರಾಜನು ತನ್ನನ್ನು ಬಿಡಿಸಿಕೊಳ್ಳಲಾರದೆ ಅಸಮರ್ಥನಾಗಿದ್ದನು.॥11॥

ಮೂಲಮ್ - 12

ಉದ್ ಭ್ರಾಂತಹೃದಯಶ್ಚಾಪಿ ವಿವರ್ಣವದನೋಽಭವತ್ ।
ಸ ಧುರ್ಯೋ ವೈ ಪರಿಸ್ಪಂದ್ ಯುಗಚಕ್ರಾಂತರಂ ಯಥಾ ॥

ಅನುವಾದ

ಗಾಡಿಯ ಎರಡು ಚಕ್ರಗಳ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡುವ ಎತ್ತುಗಳಂತೆ - ದಶರಥನು ‘ಪ್ರತಿಜ್ಞಾ ಭಂಗ ಇಲ್ಲವೇ ರಾಮನ ವನವಾಸ’ ಎಂಬ ಎರಡು ಚಕ್ರಗಳ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡು ಭ್ರಾಂತನಾಗಿದ್ದನು. ಅವನ ಮುಖ ಕಾಂತಿಯು ಕಳೆಗುಂದಿ ಹೋಗಿತ್ತು.॥12॥

ಮೂಲಮ್ - 13

ವಿಕಲಾಭ್ಯಾಂ ಚ ನೇತ್ರಾಭ್ಯಾಮಪಶ್ಯನ್ನಿವ ಭೂಮಿಪಃ ।
ಕ್ರಚ್ಛ್ರಾದ್ಧೈರ್ಯೇಣ ಸಂಸ್ತಭ್ಯ ಕೈಕೇಯೀಮಿದಮಬ್ರವೀತ್ ॥

ಅನುವಾದ

ತೇಜಸ್ಸನ್ನು ಕಳೆದುಕೊಂಡು ಕಣ್ಣುಗಳಿಂದ ಏನನ್ನೂ ನೋಡಲು ಅಸಮರ್ಥವಾಗಿದ್ದವೋ ಎಂಬತ್ತಿದ್ದ ದಶರಥರಾಜನು ಬಹಳ ಕಷ್ಟದಿಂದ ಧೈರ್ಯವಹಿಸಿ, ತನ್ನನ್ನು ಸಾವರಿಸಿಕೊಂಡು ಕೈಕೆಯ ಬಳಿ ಹೀಗೆ ಹೇಳಿದನು.॥13॥

ಮೂಲಮ್ - 14

ಯಸ್ತೇ ಮಂತ್ರಕೃತಃ ಪಾಣಿರಗ್ನೌ ಪಾಪೇ ಮಯಾ ಧೃತಃ ।
ಸಂತ್ಯಜಾಮಿ ಸ್ವಜಂ ಚೈವ ತವ ಪುತ್ರಂ ಸಹ ತ್ವಯಾ ॥

ಅನುವಾದ

ಎಲೈ ಪಾಪಿಯೇ! ನಾನು ಅಗ್ನಿಸಾಕ್ಷಿಯಾಗಿ ‘ಸಾಂಗುಷ್ಠಂ ತೇ ಗೃಭ್ಣಾಮಿ ಸೌಭಗತ್ವಾಯ ಹಸ್ತಮ್’ ಮುಂತಾದ ವೈದಿಕ ಮಂತ್ರಗಳನ್ನು ಜಪಿಸುತ್ತಾ ಹಿಡಿದಿರುವ ನಿನ್ನ ಕೈಯನ್ನು ಇಂದು ಬಿಡುತ್ತಿದ್ದೇನೆ. ಜೊತೆಗೆ ನಿನ್ನಲ್ಲಿ ಹುಟ್ಟಿದ ನಿನ್ನ ಪುತ್ರನನ್ನು ತ್ಯಜಿಸುತ್ತಾ ಇದ್ದೇನೆ.॥14॥

ಮೂಲಮ್ - 15

ಪ್ರಯಾತಾ ರಜನೀ ದೇವಿ ಸೂರ್ಯಸ್ಯೋದಯನಂ ಪ್ರತಿ ।
ಅಭಿಷೇಕಾಯ ಹಿ ಜನಸ್ತ್ವರಯಿಷ್ಯತಿ ಮಾಂ ಧ್ರುವಮ್ ॥

ಅನುವಾದ

ದೇವಿ! ರಾತ್ರೆ ಕಳೆದಿದೆ. ಸೂರ್ಯೋದಯವಾಗುತ್ತಲೇ ಜನರು ಖಂಡಿತವಾಗಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ನನ್ನನ್ನು ಅವಸರ ಪಡಿಸುವರು.॥15॥

ಮೂಲಮ್ - 16½

ರಾಮಾಭಿಷೇಕಸಂಭಾರೈಸ್ತದರ್ಥಮುಪಕಲ್ಪಿತೈಃ ।
ರಾಮಃ ಕಾರಯಿತವ್ಯೋ ಮೇ ಮೃತಸ್ಯಸಲಿಲಕ್ರಿಯಾಮ್ ॥
ಸಪುತ್ರಯಾ ತ್ವಯಾ ನೈವ ಕರ್ತವ್ಯಾ ಸಲಿಲಕ್ರಿಯಾ ।

ಅನುವಾದ

ಆಗ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಸಿದ್ಧಪಡಿಸಿದ ಪಡಿ ಪದಾರ್ಥಗಳಿಂದ ನಾನು ಸತ್ತ ಬಳಿಕ ಶ್ರೀರಾಮನು ನನ್ನ ಉತ್ತರ ಕ್ರಿಯೆಗಳನ್ನು ಮಾಡಲಿ. ಆದರೆ ನೀನಾಗಲೀ ನಿನ್ನ ಪುತ್ರನಾಗಲೀ ನನಗೆ ಉತ್ತರ ಕ್ರಿಯೆಗಳನ್ನು ಮಾಡದಿರಲಿ.॥16॥

ಮೂಲಮ್ - 17

ವ್ಯಾಹಂತಾಸ್ಯಶುಭಾಚಾರೇ ಯದಿ ರಾಮಾಭಿಷೇಚನಮ್ ॥

ಮೂಲಮ್ - 18

ನ ಶಕ್ತೋಽದ್ಯಾಸ್ಮ್ಯಹಂ ದ್ರಷ್ಟುಂ ದೃಷ್ಟ್ವಾ ಪೂರ್ವಂ ತಥಾಸುಖಮ್ ।
ಹತಹರ್ಷಂ ತಥಾನಂದಂ ಪುನರ್ಜನಮವಾಙ್ಮುಖಮ್ ॥

ಅನುವಾದ

ಪಾಪಾಚಾರಿಣಿಯೇ! ನೀನು ಶ್ರೀರಾಮನ ಪಟ್ಟಾಭಿಷೇಕಕ್ಕೆ ಅಡ್ಡಿಪಡಿಸಿದರೆ ನಿನಗೆ ನನ್ನ ಉತ್ತರಕ್ರಿಯೆಯ ಅಧಿಕಾರ ಇರಲಾರದು. ನಾನು ಮೊದಲು ಶ್ರೀರಾಮನ ಪಟ್ಟಾಭಿಷೇಕದ ಸಮಾಚಾರದಿಂದ ಹರ್ಷೋಲ್ಲಸಿತ ಜನ ಸಮುದಾಯವನ್ನು ನೋಡಿದ್ದೆ. ಅದನ್ನು ನೋಡಿದ ಬಳಿಕ, ಇಂದು ಅದೇ ಜನತೆಯ ಹರ್ಷ-ಆನಂದದಿಂದ ಶೂನ್ಯವಾದ, ಬಾಡಿದ ಮುಖಗಳನ್ನು ನೋಡಲಾರೆನು.॥17-18॥

ಮೂಲಮ್ - 19

ತಾಂ ತಥಾ ಬ್ರುವತಸ್ತಸ್ಯ ಭೂಮಿಪಸ್ಯ ಮಹಾತ್ಮನಃ ।
ಪ್ರಭಾತಾ ಶರ್ವರೀ ಪುಣ್ಯಾ ಚಂದ್ರನಕ್ಷತ್ರಮಾಲಿನೀ ॥

ಅನುವಾದ

ಮಹಾತ್ಮಾ ದಶರಥನು ಕೈಕೆಯ ಬಳಿ ಈ ರೀತಿ ಮಾತುಗಳನ್ನಾಡುತ್ತಾ ಇರುವಾಗ ಚಂದ್ರ ಮತ್ತು ನಕ್ಷತ್ರಗಳಿಂದ ಅಲಂಕೃತವಾದ ಪುಣ್ಯಮಯ ರಜನಿಯು ಕಳೆದುಹೋಗಿ, ಪ್ರಭಾತಕಾಲ ಆಗಮಿಸಿತು.॥19॥

ಮೂಲಮ್ - 20

ತತಃ ಪಾಪಸಮಾಚಾರಾ ಕೈಕೇಯೀ ಪಾರ್ಥಿವಂ ಪುನಃ ।
ಉವಾಚ ಪರುಷಂ ವಾಕ್ಯಂ ವಾಕ್ಯಜ್ಞಾ ರೋಷಮೂರ್ಛಿತಾ ॥

ಅನುವಾದ

ಅನಂತರ ಮಾತಿನ ಮರ್ಮವನ್ನು ತಿಳಿದ ಪಾಪಾಚಾರಿಣಿ ಕೈಕೆಯಿಯು ಕ್ರೋಧದಿಂದ ಮೈಮರೆತು ರಾಜನಲ್ಲಿ ಪುನಃ ಕಠೋರವಾಗಿ ಹೀಗೆ ನುಡಿದಳು.॥20॥

ಮೂಲಮ್ - 21

ಕಿಮಿದಂ ಭಾಷಸೇ ರಾಜನ್ ವಾಕ್ಯಂ ಗರರುಜೋಪಮಮ್ ।
ಅನಾಯಯಿತುಮಕ್ಲಿಷ್ಟಂ ಪುತ್ರಂ ರಾಮಮಿಹಾರ್ಹಸಿ ॥

ಮೂಲಮ್ - 22

ಸ್ಥಾಪ್ಯ ರಾಜ್ಯೇ ಮಮ ಸುತಂ ಕೃತ್ವಾ ರಾಮಂ ವನೇಚರಮ್ ।
ನಿಃ ಸಪತ್ನಾಂ ಚ ಮಾಂ ಕೃತ್ವಾ ಕೃತಕೃತ್ಯೋ ಭವಿಷ್ಯಸಿ ॥

ಅನುವಾದ

ರಾಜನೇ! ನೀವು ವಿಷ ಮತ್ತು ಶೂಲೆಯಂತಹ ರೋಗದಿಂದ ಉಂಟಾಗುವ ಕಷ್ಟದಂತೆ ಇಂತಹ ಮಾತನ್ನು ಏಕೆ ಮಾತನಾಡುತ್ತಿರುವಿರಿ? (ಈ ಮಾತುಗಳಿಂದ ಏನೂ ಆಗಲಾರದು.) ನೀವು ಯಾವುದೇ ಕ್ಲೇಶಪಡದೆ ನಿಮ್ಮ ಪುತ್ರ ಶ್ರೀರಾಮನನ್ನು ಇಲ್ಲಿಗೆ ಕರೆಸಿರಿ. ನನ್ನ ಪುತ್ರನನ್ನು ರಾಜ್ಯದಲ್ಲಿ ಕುಳ್ಳಿರಿಸಿ ಹಾಗೂ ಶ್ರೀರಾಮನನ್ನು ಕಾಡಿಗೆ ಕಳಿಸಿ, ನನ್ನನ್ನು ನಿಷ್ಕಂಟಕಳಾಗಿಸಿರಿ; ಆಗಲೇ ನಾನು ಕೃತಕೃತ್ಯಳಾಗುವೆನು.॥21-22॥

ಮೂಲಮ್ - 23

ಸ ತುನ್ನ ಇವ ತೀಕ್ಷ್ಣೇಣ ಪ್ರತೋದೇನ ಹಯೋತ್ತಮಃ ।
ರಾಜಾ ಪ್ರಚೋದಿತೋಽಭೀಕ್ಷ್ಣಂ ಕೈಕೇಯ್ಯಾ ವಾಕ್ಯಮಬ್ರವೀತ್ ॥

ಅನುವಾದ

ತೀಕ್ಷ್ಣವಾದ ಚಾವಟಿ ಏಟಿನಿಂದ ನೋವಾಗಿದ್ದ ಉತ್ತಮ ಕುದುರೆಯಂತೆ ಕೈಕೆಯಿಯ ಮೂಲಕ ಪದೇ-ಪದೇ ಪ್ರೇರಿತನಾಗಿ ವ್ಯಥಿತನಾದ ದಶರಥನು ಈ ಪ್ರಕಾರ ಹೇಳಿದನು.॥23॥

ಮೂಲಮ್ - 24

ಧರ್ಮಬಂಧೇನ ಬದ್ಧೋಽಸ್ಮಿ ನಷ್ಟಾ ಚ ಮಮ ಚೇತನಾ ।
ಜ್ಯೇಷ್ಠಂ ಪುತ್ರಂ ಪ್ರಿಯಂ ರಾಮಂ ದ್ರಷ್ಟುಮಿಚ್ಛಾಮಿ ಧಾರ್ಮಿಕಮ್ ॥

ಅನುವಾದ

ನಾನು ಧರ್ಮಬಂಧನದಲ್ಲಿ ಬಂಧಿತನಾಗಿದ್ದೇನೆ. ನನ್ನ ಚೈತನ್ಯ ಉಡುಗಿ ಹೋಗುತ್ತಿದೆ. ಅದಕ್ಕಾಗಿ ಈಗ ನಾನು ಧರ್ಮಪರಾಯಣ ಪರಮಪ್ರಿಯ ಜ್ಯೇಷ್ಠಪುತ್ರನಾದ ಶ್ರೀರಾಮನನ್ನು ನೋಡಬಯಸುತ್ತಿರುವೆನು.॥24॥

ಮೂಲಮ್ - 25

ತತಃ ಪ್ರಭಾತಾಂ ರಜನೀಮುದಿತೇ ಚ ದಿವಾಕರೇ ।
ಪುಣ್ಯೇ ನಕ್ಷತ್ರಯೋಗೇ ಚ ಮುಹೂರ್ತೇ ಚ ಸಮಾಗತೇ ॥

ಮೂಲಮ್ - 26

ವಸಿಷ್ಠೋ ಗುಣಸಂಪನ್ನಃ ಶಿಷ್ಯೈಃ ಪರಿವೃತಸ್ತಥಾ ।
ಉಪಗೃಹ್ಯಾಶು ಸಂಭರಾನ್ ಪ್ರವಿವೇಶ ಪುರೋತ್ತಮಮ್ ॥

ಅನುವಾದ

ರಾತ್ರೆ ಕಳೆದು ಸೂರ್ಯೋದಯವಾಗಿ, ಪುಣ್ಯನಕ್ಷತ್ರ ಯೋಗದಲ್ಲಿ ಪಟ್ಟಾಭಿಷೇಕದ ಮುಹೂರ್ತ ಸಮೀಪಿಸಿದಾಗ ಶಿಷ್ಯ ಸಮೂಹದೊಂದಿಗೆ ಶುಭಗುಣಸಂಪನ್ನ ಮಹರ್ಷಿ ವಸಿಷ್ಠರು ಪಟ್ಟಾಭಿಷೇಕದ ಆವಶ್ಯಕ ಸಾಮಗ್ರಿಗಳನ್ನು ಸಂಗ್ರಹಿಸಿ ಲಗುಬಗೆಯಿಂದ ಅಯೋಧ್ಯೆಯನ್ನು ಪ್ರವೇಶಿಸಿದರು.॥25-26॥

ಮೂಲಮ್ - 27

ಸಿಕ್ತಸಮ್ಮಾರ್ಜಿತಪಥಾಂ ಪತಾಕೋತ್ತಮಭೂಷಿತಾಮ್ ।
ಸಂಹೃಷ್ಟಮನುಜೋಪೇತಾಂ ಸಮೃದ್ಧವಿಪಣಾಪಣಾಮ್ ॥

ಅನುವಾದ

ಆ ಮಂಗಳ ಸಮಯದಲ್ಲಿ ಅಯೋಧ್ಯೆಯ ರಾಜಬೀದಿಗಳನ್ನು ಸ್ವಚ್ಛಗೊಳಿಸಿ ಪನ್ನೀರನ್ನು ಸಿಂಪಡಿಸಿದ್ದರು. ಇಡೀ ನಗರವು ಧ್ವಜ-ಪತಾಕೆಗಳಿಂದ ಸುಶೋಭಿತವಾಗಿತ್ತು. ಸಮೃದ್ಧವಾದ ಅಂಗಡಿ ಬೀದಿಗಳು ಅಲಂಕೃತವಾಗಿದ್ದವು.॥27॥

ಮೂಲಮ್ - 28

ಮಹೋತ್ಸವಸಮಾಯುಕ್ತಾಂ ರಾಘವಾರ್ಥೇ ಸಮುತ್ಸುಕಾಮ್ ।
ಚಂದನಾಗುರುಧೂಪೈಶ್ಚ ಸರ್ವತಃ ಪ್ರತಿಧೂಮಿತಾಮ್ ॥

ಅನುವಾದ

ಎಲ್ಲೆಡೆ ಮಹೋತ್ಸವಗಳು ನಡೆಯುತ್ತಿದ್ದವು. ಇಡೀ ನಗರಿಯೇ ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕಾಗಿ ಉತ್ಸುಕವಾಗಿತ್ತು. ಎಲ್ಲೆಡೆ ಚಂದನ, ಅಗರು ಮತ್ತು ಸುಗಂಧಿತ ಧೂಪವು ಆವರಿಸಿಕೊಂಡಿತ್ತು.॥28॥

ಮೂಲಮ್ - 29

ತಾಂ ಪುರೀಂ ಸಮತಿಕ್ರಮ್ಯ ಪುರಂದರಪುರೋಪಮಾಮ್ ।
ದದರ್ಶಾಂತಃಪುರಂ ಶ್ರೀಮಾನ್ ನಾನಾ ಧ್ವಜಗಣಾಯುತಮ್ ॥

ಅನುವಾದ

ಇಂದ್ರನಗರಿ ಅಮರಾವತಿಯಂತೆ ಶೋಭಿಸುವ ಆ ನಗರವನ್ನು ದಾಟಿ ಶ್ರೀಮಾನ್ ವಸಿಷ್ಠರು ದಶರಥರಾಜನ ಅಂತಃಪುರವನ್ನು ನೋಡಿದರು. ಅಲ್ಲಿ ಸಾವಿರಾರು ಧ್ವಜ- ಪತಾಕೆಗಳು ಹಾರಾಡುತ್ತಿದ್ದವು.॥29॥

ಮೂಲಮ್ - 30

ಪೌರಜಾನಪದಾಕೀರ್ಣಂ ಬ್ರಾಹ್ಮಣೈರುಪಶೋಭಿತಮ್ ।
ಯಷ್ಟಿಮದ್ಭಿಃ ಸುಸಂಪೂರ್ಣಂ ಸದಶ್ವೈಃ ಪರಮಾರ್ಚಿತೈಃ ॥

ಅನುವಾದ

ನಗರವಾಸಿಗಳು ಮತ್ತು ಗ್ರಾಮವಾಸಿಗಳು ಅಲ್ಲಿ ನೆರೆದಿದ್ದರು. ಅನೇಕ ಬ್ರಾಹ್ಮಣರು ಅಲ್ಲಿಯ ಶೋಭೆಯನ್ನು ಹೆಚ್ಚಿಸಿದ್ದರು. ಆಯುಧ ಧಾರೀ ಸೇವಕರು ಹಾಗೂ ಅಲಂಕರಿಸಿದ ಸುಂದರ ಕುದುರೆಗಳು ಅಲ್ಲಿ ಅಸಂಖ್ಯವಾಗಿ ನಿಂತಿದ್ದವು.॥30॥

ಮೂಲಮ್ - 31

ತದಂತಃ ಪುರಮಾಸಾದ್ಯ ವ್ಯತಿಚಕ್ರಾಮ ತಂ ಜನಮ್ ।
ವಸಿಷ್ಠಃ ಪರಮಪ್ರೀತಃ ಪರಮರ್ಷಿಭಿರಾವೃತಃ ॥

ಅನುವಾದ

ಶ್ರೇಷ್ಠ ಮಹರ್ಷಿಗಳಿಂದೊಡಗೂಡಿ ವಸಿಷ್ಠರು ಪರಮ ಸಂತೋಷಗೊಂಡು, ಜನಸಮುದಾಯವನ್ನು ದಾಟಿ ಅಂತಃಪುರ ತಲುಪಿದರು.॥31॥

ಮೂಲಮ್ - 32

ಸ ತ್ವಪಶ್ಯದ್ ವಿನಿಷ್ಕ್ರಾಂತಂ ಸುಮಂತ್ರಂ ನಾಮ ಸಾರಥಿಮ್ ।
ದ್ವಾರೇ ಮನುಜಸಿಂಹಸ್ಯ ಸಚಿವಂ ಪ್ರಿಯದರ್ಶನಮ್ ॥

ಅನುವಾದ

ಅಲ್ಲಿ ಮಹಾರಾಜರ ಪ್ರಿಯದರ್ಶನನಾದ ಸಚಿವನೂ, ಸಾರಥಿಯೂ ಆದ ಸುಮಂತ್ರನು ಅಂತಃಪುರದ ಬಾಗಿಲಿಗೆ ಬರುವುದನ್ನು ನೋಡಿದರು.॥32॥

ಮೂಲಮ್ - 33

ತಮುವಾಚ ಮಹಾತೇಜಾಃ ಸೂತಪುತ್ರಂ ವಿಶಾರದಮ್ ।
ವಸಿಷ್ಠಃ ಕ್ಷಿಪ್ರಮಾಚಕ್ಷ್ವ ನೃಪತೇರ್ಮಾಮಿಹಾಗತಮ್ ॥

ಅನುವಾದ

ಆಗ ಮಹಾತೇಜಸ್ವೀ ವಸಿಷ್ಠರು ಪರಮ ಚತುರನೂ, ಸೂತಪುತ್ರನೂ ಆದ ಸುಮಂತ್ರನಲ್ಲಿ ಹೇಳಿದರು - ಸೂತನೇ! ನಾನು ಬಂದಿರುವುದನ್ನು ಮಹಾರಾಜರಿಗೆ ನೀನು ಬೇಗನೇ ಸೂಚಿಸು.॥33॥

ಮೂಲಮ್ - 34

ಇಮೇ ಗಂಗೋದಕಘಟಾಃ ಸಾಗರೇಭ್ಯಶ್ಚ ಕಾಂಚನಾಃ ।
ಔದುಂಬರಂ ಭದ್ರಪೀಠಮಭಿಷೇಕಾರ್ಥಮಾಹೃತಮ್ ॥

ಅನುವಾದ

ಅವರಿಗೆ ಹೇಳು-ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಎಲ್ಲ ಸಾಮಗ್ರಿಗಳು ಸಿದ್ಧವಾಗಿವೆ. ಗಂಗಾಜಲದಿಂದ ತುಂಬಿದ ಕಲಶಗಳು ಇಲ್ಲಿವೆ. ಈ ಚಿನ್ನದ ಕಲಶಗಳಲ್ಲಿ ಸಮುದ್ರಗಳ ಜಲ ತುಂಬಿಟ್ಟಿವೆ. ಈ ಔದುಂಬರ ಭದ್ರಪೀಠವನ್ನು ಅಭಿಷೇಕಕ್ಕಾಗಿ ತಂದಿರಿಸಲಾಗಿದೆ. (ಇದರಲ್ಲಿ ಕುಳ್ಳಿರಿಸಿ ಶ್ರೀರಾಮನಿಗೆ ಅಭಿಷೇಕವಾಗುವುದು.॥34॥

ಮೂಲಮ್ - 35

ಸರ್ವಬೀಜಾನಿ ಗಂಧಾಶ್ಚ ರತ್ನಾನಿ ವಿವಿಧಾನಿ ಚ ।
ಕ್ಷೌದ್ರಂ ದಧಿ ಘೃತಂ ಲಾಜಾ ದರ್ಭಾಃ ಸುಮನಸಃ ಪಯಃ ॥

ಮೂಲಮ್ - 36

ಅಷ್ಟೌ ಚ ಕನ್ಯಾ ರುಚಿರಾ ಮತ್ತಶ್ಚ ವರವಾರಣಃ ।
ಚತುರಶ್ವೋ ರಥಃ ಶ್ರೀಮಾನ್ನಿಸ್ತ್ರಿಂಶೋ ಧನುರುತ್ತಮಮ್ ॥

ಮೂಲಮ್ - 37

ವಾಹನಂ ನರಸಂಯುಕ್ತಂ ಛತ್ರಂ ಚ ಶಶಿಸಂನಿಭಮ್ ।
ಶ್ವೇತೇ ಚ ವಾಲವ್ಯಜನೇ ಭೃಂಗಾರಂ ಚ ಹಿರಣ್ಮಯಮ್ ॥

ಮೂಲಮ್ - 38

ಹೇಮದಾಮಪಿನದ್ಧಶ್ಚ ಕುಕುದ್ಮಾನ್ಪಾಂಡುರೋ ವೃಷಃ ।
ಕೇಸರೀ ಚ ಚತುರ್ದಂಷ್ಟ್ರೋ ಹರಿಶ್ರೇಷ್ಠೋ ಮಹಾಬಲಃ ॥

ಮೂಲಮ್ - 39

ಸಿಂಹಾಸನಂ ವ್ಯಾಘ್ರತನುಃ ಸಮಿಧಶ್ಚ ಹುತಾಶನಃ ।
ಸರ್ವೇ ವಾದಿತ್ರಸಂಘಾಶ್ಚ ವೇಶ್ಯಾಶ್ಚಾಲಂಕೃತಾಃ ಸ್ತ್ರಿಯಃ ॥

ಮೂಲಮ್ - 40

ಆಚಾರ್ಯ ಬ್ರಾಹ್ಮಣಾ ಗಾವಃ ಪುಣ್ಯಾಶ್ಚ ಮೃಗಪಕ್ಷಿಣಃ ।
ಪೌರಜಾನಪದಶ್ರೇಷ್ಠಾ ನೈಗಮಾಶ್ಚ ಗಣೈಃ ಸಹ ॥

ಮೂಲಮ್ - 41

ಏತೇ ಚಾನ್ಯೇ ಚ ಬಹವಃ ಪ್ರೀಯಮಾಣಾಃ ಪ್ರಿಯಂವದಾಃ ।
ಅಭಿಷೇಕಾಯ ರಾಮಸ್ಯ ಸಹ ತಿಷ್ಠಂತಿ ಪಾರ್ಥಿವೈಃ ॥

ಅನುವಾದ

ಪಟ್ಟಾಭಿಷೇಕಕ್ಕಾಗಿ ಸಮಸ್ತ ಬೀಜಗಳನ್ನೂ, ಗಂಧ, ವಿಧ-ವಿಧವಾದ ರತ್ನಗಳು, ಜೇನುತುಪ್ಪ, ಮೊಸರು, ತುಪ್ಪ, ಅರಳು, ದರ್ಭೆ, ಪುಷ್ಪಗಳು, ಹಾಲು, ಎಂಟು ಮಂದಿ ಸುಂದರಿಯರಾದ ಕನ್ಯೆಯರು, ಮದಿಸಿದ ಪಟ್ಟದಾನೆ, ನಾಲ್ಕು ಕುದುರೆಗಳನ್ನು ಹೂಡಿದ ರಥ, ಝಳಪಿಸುವ ಖಡ್ಗ, ಉತ್ತಮ ಧನಸ್ಸು, ಮನುಷ್ಯರು ಹೊರುವ ಪಲ್ಲಕ್ಕಿ, ಚಂದ್ರನಂತಿರುವ ಶ್ವೇತಚ್ಛತ್ರ, ಬಿಳುಪಾಗಿರುವ ಚಾಮರ, ಸ್ವರ್ಣಮಯ ಗಿಂಡಿ, ಸ್ವರ್ಣಮಯ ಮಾಲೆಗಳಿಂದ ಅಲಂಕೃತವಾದ ಎತ್ತರವಾದ ಹಿಳಿಲುಳ್ಳ ಬಿಳಿ ಎತ್ತು, ನಾಲ್ಕು ಕೋರೆ ದಾಡೆಗಳುಳ್ಳ ಮಹಾಬಲ ಶಾಲಿಯಾದ ಸಿಂಹ, ಮಹಾಬಲಶಾಲಿ ಉತ್ತಮ ಕುದುರೆ, ಸಿಂಹಾಸನ, ವ್ಯಾಘ್ರಚರ್ಮ, ಸಮಿಧೆಗಳು, ಯಜ್ಞೇಶ್ವರ, ಇವುಗಳಲ್ಲದೆ, ಎಲ್ಲ ವಿಧದ ವಾದ್ಯದವರು, ವಾರಾಂಗನೆಯರು, ಸಿಂಗರಿಸಿಕೊಂಡಿರುವ ಸುಮಂಗಲಿಯರು, ಆಚಾರ್ಯರು, ಬ್ರಾಹ್ಮಣರು, ಗೋವು, ಪವಿತ್ರ ಪಶು-ಪಕ್ಷಿಗಳು, ಪುರ ಪ್ರಮುಖರು, ಗ್ರಾಮಪ್ರಮುಖರು, ಬಂಧುಗಳ ಸಹಿತ ಮುಖ್ಯ-ಮುಖ್ಯ ವೈಶ್ಯರು ಇವರೆಲ್ಲರೂ ಅಲ್ಲದೆ ಇನ್ನೂ ಅನೇಕ ಪ್ರಿಯ ಭಾಷಿಗಳಾದ ಸಾವಿರಾರು ಜನರು ರಾಜರೊಂದಿಗೆ ಸಂತೋಷದಿಂದ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಇಲ್ಲಿ ಉಪಸ್ಥಿತರಾಗಿದ್ದಾರೆ.॥35-41॥

ಮೂಲಮ್ - 42

ತ್ವರಯಸ್ವ ಮಹಾರಾಜಂ ಯಥಾ ಸಮುದಿತೇಽಹನಿ ।
ಪುಷ್ಯೇ ನಕ್ಷತ್ರಯೋಗೇ ಚ ರಾಮೋ ರಾಜ್ಯಮವಾಪ್ನುಯಾತ್ ॥

ಅನುವಾದ

ನೀನು ಮಹಾರಾಜರಲ್ಲಿ ಬೇಗನೇ ಸಿದ್ಧವಾಗಲು ಹೇಳು. ಈಗ ಸೂರ್ಯೋದಯದ ಬಳಿಕ ಪುಷ್ಯ ನಕ್ಷತ್ರದ ಯೋಗದಲ್ಲಿ ಶ್ರೀರಾಮನ ಪಟ್ಟಾಭಿಷೇಕ ನಡೆಯಲಿದೆ.॥42॥

ಮೂಲಮ್ - 43

ಇತಿ ತಸ್ಯ ವಚಃ ಶ್ರುತ್ವಾ ಸೂತಪುತ್ರೋ ಮಹಾಬಲಃ ।
ಸ್ತುವನ್ನೃಪತಿಶಾರ್ದೂಲಂ ಪ್ರವಿವೇಶ ನಿವೇಶನಮ್ ॥

ಅನುವಾದ

ವಸಿಷ್ಠರ ಮಾತನ್ನು ಕೇಳಿ ಮಹಾಬಲಿ ಸೂತಪುತ್ರ ಸುಮಂತ್ರನು ರಾಜಸಿಂಹ ದಶರಥನನ್ನು ಸ್ತುತಿಸುತ್ತಾ ಅಂತಃಪುರವನ್ನು ಪ್ರವೇಶಿಸಿದನು.॥43॥

ಮೂಲಮ್ - 44

ತಂ ತು ಪೂರ್ವೋದಿತಂ ವೃದ್ಧಂ ದ್ವಾರಸ್ಥಾ ರಾಜಮ್ಮತಾಃ
ನ ಶೇಕುರಭಿಸಂರೋದ್ಧುಂ ರಾಜ್ಞಃ ಪ್ರಿಯಚಿಕೀರ್ಷವಃ ॥

ಅನುವಾದ

ರಾಜನ ಪ್ರಿಯವನ್ನು ಮಾಡುವ, ರಾಜನಿಂದ ಸಮ್ಮಾನಿತರಾದ ದ್ವಾರಪಾಲಕರು ಆ ವೃದ್ಧ ಸಚಿವನನ್ನು ಒಳಗೆ ಹೋಗಲು ತಡೆಯಲಿಲ್ಲ. ಏಕೆಂದರೆ ಇವರು ಒಳಗೆ ಬರಲು ತಡೆಯಬಾರದೆಂದು ಮೊದಲಿನಿಂದಲೂ ಮಹಾರಾಜರ ಆಜ್ಞೆ ಇತ್ತು.॥44॥

ಮೂಲಮ್ - 45

ಸ ಸಮೀಪಸ್ಥಿತೋ ರಾಜ್ಞಸ್ತಾಮವಸ್ಥಾಮಜಜ್ಞಿವಾನ್ ।
ವಾಗ್ಭಿಃ ಪರಮತುಷ್ಟಾಭಿರಭಿಷ್ಟೋತುಂ ಪ್ರಚಕ್ರಮೇ ॥

ಅನುವಾದ

ಸುಮಂತ್ರನು ರಾಜನ ಬಳಿಗೆ ಹೋಗಿ ನಿಂತುಕೊಂಡನು. ಅವನಿಗೆ ರಾಜನ ಸ್ಥಿತಿಯ ಅರಿವು ಇರಲಿಲ್ಲ; ಆದ್ದರಿಂದ ಅವನು ಬಹಳ ಸಂತೋಷದಾಯಕ ಮಾತುಗಳಿಂದ ಅವನನ್ನು ಸ್ತುತಿಸಲು ತೊಡಗಿದನು.॥45॥

ಮೂಲಮ್ - 46

ತತಃ ಸೂತೋ ಯಥಾಪೂರ್ವಂ ಪಾರ್ಥಿವಸ್ಯ ನಿವೇಶನೇ ।
ಸುಮಂತ್ರಃ ಪ್ರಾಂಜಲಿರ್ಭೂತ್ವಾ ತುಷ್ಟಾವ ಜಗತೀಪತಿಮ್ ॥

ಅನುವಾದ

ಸೂತನಾದ ಸುಮಂತ್ರನು ರಾಜನ ಆ ಅಂತಃಪುರದಲ್ಲಿ ಹಿಂದಿನಂತೆ ಕೈಮುಗಿದು ಮಹಾರಾಜನನ್ನು ಸ್ತುತಿಸ ತೊಡಗಿದನು.॥46॥

ಮೂಲಮ್ - 47

ಯಥಾ ನಂದತಿ ತೇಜಸ್ವೀ ಸಾಗರೋ ಭಾಸ್ಕರೋದಯೇ ।
ಪ್ರೀತಃ ಪ್ರೀತೇನ ಮನಸಾ ತಥಾ ನಂದಯ ನಸ್ತತಃ ॥

ಅನುವಾದ

ಮಹಾರಾಜರೇ! ಸೂರ್ಯೋದಯವಾಗುತ್ತಲೇ ತೇಜಸ್ವೀ ಸಮುದ್ರವು ಹರ್ಷದಿಂದ ಉಕ್ಕಿ, ಅದರಲ್ಲಿ ಸ್ನಾನ ಮಾಡಲು ಇಚ್ಛಿಸುವ ಮನುಷ್ಯರನ್ನು ಸಂತೋಷಗೊಳಿಸುವಂತೆಯೇ ತಾವು ಪ್ರಸನ್ನರಾಗಿ ಪ್ರಸನ್ನತಾಪೂರ್ಣ ಹೃದಯದಿಂದ ಸೇವಕರಾದ ನಮ್ನನ್ನು ಆನಂದಿತಗೊಳಿಸಿರಿ.॥47॥

ಮೂಲಮ್ - 48

ಇಂದ್ರಮಸ್ಯಾಂ ತು ವೇಲಾಯಾಮಭಿತುಷ್ಟಾವ ಮಾತಲಿಃ ।
ಸೋಽಜಯದ್ದಾನವಾನ್ ಸರ್ವಾಂಸ್ತಥಾ ತ್ವಾಂ ಬೋಧಯಾಮ್ಯಹಮ್ ॥

ಅನುವಾದ

ದೇವಸಾರಥಿ ಮಾತಲಿಯೂ ಇದೇ ಹೊತ್ತಿನಲ್ಲಿ ದೇವೇಂದ್ರನನ್ನು ಸ್ತುತಿಸಿದ್ದನು, ಅದರಿಂದ ಇಂದ್ರನು ಸಮಸ್ತ ದಾನವರನ್ನು ಗೆದ್ದಿದ್ದನು. ಹಾಗೆಯೇ ನಾನೂ ಸ್ತುತಿ ವಚನಗಳಿಂದ ನಿಮ್ಮನ್ನು ಏಳಿಸುತ್ತಿದ್ದೇನೆ.॥48॥

ಮೂಲಮ್ - 49

ವೇದಾಃ ಸಹಾಂಗಾವಿದ್ಯಾಶ್ಚ ಯಥಾ ಹ್ಯಾತ್ಮಭುವಂ ಪ್ರಭುಮ್ ।
ಬ್ರಹ್ಮಾಣಂ ಬೋಧಯಂತ್ಯದ್ಯ ತಥಾತ್ವಾಂ ಬೋಧಯಾಮ್ಯಹಮ್ ॥

ಅನುವಾದ

ಆರು ಅಂಗಗಳ ಸಹಿತ ನಾಲ್ಕು ವೇದಗಳೂ ಹಾಗೂ ಸಮಸ್ತ ವಿದ್ಯೆಗಳು ಸ್ವಯಂಭೂ ಭಗವಾನ್ ಬ್ರಹ್ಮದೇವರನ್ನು ಎಚ್ಚರ ಗೊಳಿಸುವಂತೆ ಇಂದು ನಾನು ನಿಮ್ಮನ್ನು ಎಚ್ಚರಗೊಳಿಸುತ್ತಿದ್ದೇನೆ.॥49॥

ಮೂಲಮ್ - 50

ಆದಿತ್ಯಃ ಸಹ ಚಂದ್ರೇಣ ಯಥಾ ಭೂತಧರಾಂ ಶುಭಾಮ್ ।
ಬೋಧಯತ್ಯದ್ಯ ತಥಾ ತ್ವಾಂ ಬೋಧಯಾಮ್ಯಹಮ್ ॥

ಅನುವಾದ

ಚಂದ್ರನೊಂದಿಗೆ ಸೂರ್ಯನು ಸಮಸ್ತ ಪ್ರಾಣಿಗಳ ಆಧಾರಭೂತ ಈ ಶುಭ ಸ್ವರೂಪಾ ಪೃಥಿವಿಯನ್ನು ಎಚ್ಚರಗೊಳಿಸುವಂತೆ ಇಂದು ನಾನು ನಿಮ್ಮನ್ನು ಎಚ್ಚರಗೊಳಿಸುತ್ತಿದ್ದೇನೆ.॥50॥

ಮೂಲಮ್ - 51

ಉತ್ತಿಷ್ಠ ಸುಮಹಾರಾಜ ಕೃತಕೌತುಕಮಂಗಲಃ ।
ವಿರಾಜಮಾನೋ ವಪುಷಾ ಮೇರೋರಿವ ದಿವಾಕರಃ ॥

ಅನುವಾದ

ಮಹಾರಾಜರೇ! ಏಳಿರಿ ಮತ್ತು ಅಭಿಷೇಕಾಂಗಭೂತವಾಗಿ ಮಂಗಳಸ್ನಾನ ಮಾಡಿ ವಸ್ತ್ರಾಭೂಷಣಗಳಿಂದ ಅಲಂಕೃತರಾಗಿ, ಮೇರು ಪರ್ವತದಲ್ಲಿನ ಸೂರ್ಯನಂತೆ ಸಿಂಹಾಸನದಲ್ಲಿ ವಿರಾಜಮಾನರಾಗಿರಿ.॥51॥

ಮೂಲಮ್ - 52

ಸೋಮ ಸೂರ್ಯೌ ಚ ಕಾಕುತ್ಸ್ಥಶಿವವೈಶ್ರವಣಾವಪಿ ।
ವರುಣಶ್ಚಾಗ್ನಿರಿಂದ್ರಶ್ಚ ವಿಜಯಂ ಪ್ರದಿಶಂತು ತೇ ॥

ಅನುವಾದ

ಕಕುತ್ಸ್ಥ ಕುಲನಂದರೇ! ಸೂರ್ಯ, ಚಂದ್ರ, ಶಿವ, ಕುಬೇರ, ವರುಣ, ಅಗ್ನಿ ಇಂದ್ರ ಇವರೆಲ್ಲರೂ ನಿಮಗೆ ವಿಜಯವನ್ನು ಉಂಟುಮಾಡಲಿ.॥52॥

ಮೂಲಮ್ - 53

ಗತಾ ಭಗವತೀ ರಾತ್ರಿಃ ಕೃತಂ ಕೃತ್ಯಮಿದಂ ತವ ।
ಬುಧ್ಯಸ್ವ ನೃಪಶಾರ್ದೂಲ ಕುರು ಕಾರ್ಯಮನಂತರಮ್ ॥

ಅನುವಾದ

ರಾಜಸಿಂಹನೇ! ಭಗವತಿ ರಾತ್ರಿದೇವಿಯು ಸರಿದಳು. ನೀವು ಯಾವುದಕ್ಕಾಗಿ ಆಜ್ಞಾಪಿಸಿದ್ದಿರೋ ಅದೆಲ್ಲ ಕಾರ್ಯಗಳು ಪೂರ್ಣವಾಗಿವೆ. ಇದನ್ನು ತಿಳಿದು ಪಟ್ಟಾಭಿಷೇಕದ ಉಳಿದ ಕಾರ್ಯವನ್ನು ಪೂರ್ಣಗೊಳಿಸಿರಿ.॥53॥

ಮೂಲಮ್ - 54

ಉದತಿಷ್ಠತ ರಾಮಸ್ಯ ಸಮಗ್ರಮಭಿಷೇಚನಮ್ ।
ಪೌರಜಾನಪದಾಶ್ಚಾಪಿ ನೈಗಮಶ್ಚ ಕೃತಾಂಜಲಿಃ ॥

ಅನುವಾದ

ಶ್ರೀರಾಮನ ಪಟ್ಟಾಭಿಷೇಕದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ನಗರ ವಾಸಿಗಳು, ಮುಖ್ಯ-ಮುಖ್ಯ ವ್ಯಾಪಾರಿಗಳೂ ಕೈಮುಗಿದುಕೊಂಡು ಸಿದ್ಧರಾಗಿ ಹೊರಗೆ ನಿಂತಿರುವರು.॥54॥

ಮೂಲಮ್ - 55

ಸ್ವಯಂ ವಸಿಷ್ಠೋಭಗವಾನ್ ಬ್ರಾಹ್ಮಣೈಃ ಸಹ ತಿಷ್ಠತಿ ।
ಕ್ಷಿಪ್ರಮಾಜ್ಞಾಪ್ಯತಾಂ ರಾಜನ್ ರಾಘವಸ್ಯಾಭಿಷೇಚನಮ್ ॥

ಅನುವಾದ

ಮಹಾರಾಜರೇ! ಭಗವಾನ್ ವಸಿಷ್ಠ ಮುನಿಗಳು ಬ್ರಾಹ್ಮಣರೊಂದಿಗೆ ಬಾಗಿಲಲ್ಲಿ ನಿಂತಿರುವರು. ಆದ್ದರಿಂದ ಶ್ರೀರಾಮನ ಪಟ್ಟಾಭಿಷೇಕದ ಕಾರ್ಯವನ್ನು ಪ್ರಾರಂಭಿಸಲು ಬೇಗನೇ ಅಪ್ಪಣೆಯಾಗಲ.॥55॥

ಮೂಲಮ್ - 56½

ಯಥಾ ಹ್ಯಪಾಲಾಃ ಪಶವೋ ಯಥಾ ಸೇನಾ ಹ್ಯನಾಯಕಾ ।
ಯಥಾ ಚಂದ್ರಂ ವಿನಾ ರಾತ್ರಿರ್ಯಥಾ ಗಾವೋ ವಿನಾ ವೃಷಮ್ ॥
ಏವಂ ಹಿ ಭವಿತಾ ರಾಷ್ಟ್ರಂ ಯತ್ರ ರಾಜಾ ನ ದೃಶ್ಯತೇ ।

ಅನುವಾದ

ದನಗಾಹಿಗಳಿಲ್ಲದ ಪಶುಗಳು, ಸೇನಾಪತಿಯಿಲ್ಲದ ಸೈನ್ಯ, ಚಂದ್ರನಿಲ್ಲದ ರಾತ್ರೆ, ಗೂಳಿ ಇಲ್ಲದೆ ಗೋವುಗಳು ಶೋಭಿಸುವುದಿಲ್ಲವೋ ಹಾಗೆಯೇ ರಾಜನ ದರ್ಶನ ಆಗದಿರುವ ರಾಷ್ಟ್ರದ ಸ್ಥಿತಿಯಾಗುತ್ತದೆ.॥56½॥

ಮೂಲಮ್ - 57½

ಏವಂ ತಸ್ಯ ವಚಃ ಶ್ರುತ್ವಾ ಸಾಂತ್ವ್ವಪೂರ್ವಮಿವಾರ್ಥವತ್ ॥
ಅಭ್ಯಕೀರ್ಯತ ಶೋಕೇನ ಭೂಯ ಏವ ಮಹೀಪತಿಃ ।

ಅನುವಾದ

ಈ ಪ್ರಕಾರ ಸುಮಂತ್ರನು ಹೇಳಿದ ಸಾಂತ್ವನ ಪೂರ್ಣ ಹಾಗೂ ಸಾರ್ಥಕ ಮಾತುಗಳನ್ನು ಕೇಳಿ ದಶರಥನು ಪುನಃ ಶೋಕಗ್ರಸ್ತನಾದನು.॥57½॥

ಮೂಲಮ್ - 58

ತತಸ್ತು ರಾಜಾ ತಂ ಸೂತಂ ಸನ್ನಹರ್ಷಃ ಸುತಂ ಪ್ರತಿ ॥

ಮೂಲಮ್ - 59

ಶೋಕರಕ್ತೇಕ್ಷಣಃ ಶ್ರೀಮಾನುದ್ವೀಕ್ಷ್ಯೋವಾಚ ಧಾರ್ಮಿಕಃ ।
ವಾಕ್ಯೈಸ್ತು ಖಲು ಮರ್ಮಾಣಿ ಮಮ ಭೂಯೋ ನಿಕೃಂತಸಿ ॥

ಅನುವಾದ

ಆಗ ಪುತ್ರವಿಯೋಗದ ಆಶಂಕೆಯಿಂದ ಅವನ ಪ್ರಸನ್ನತೆ ನಾಶವಾಗಿಹೋಗಿತ್ತು. ಶೋಕದಿಂದಾಗಿ ಅವನ ಕಣ್ಣುಗಳು ಕೆಂಪಾಗಿದ್ದವು. ಧರ್ಮಾತ್ಮನಾದ ಶ್ರೀಮಾನ್ ರಾಜನು ಒಮ್ಮೆ ಕಣ್ಣೆತ್ತಿ ಸೂತನ ಕಡೆಗೆ ನೋಡಿ ಈ ಪ್ರಕಾರ ಹೇಳಿದನು - ನೀನು ಇಂತಹ ಮಾತುಗಳನ್ನಾಡಿ ನನ್ನ ಮರ್ಮಸ್ಥಾನಗಳಿಗೆ ಇನ್ನೂ ಹೆಚ್ಚು ಆಘಾತ ಏಕೆ ಮಾಡುತ್ತಿರುವೆ.॥58-59॥

ಮೂಲಮ್ - 60

ಸುಮಂತ್ರಃ ಕರುಣಂ ಶ್ರುತ್ವಾ ದೃಷ್ಟ್ವಾ ದೀನಂ ಚ ಪಾರ್ಥಿವಮ್ ।
ಪ್ರಗೃಹೀತಾಂಜಲಿಃ ಕಿಂಚಿತ್ ತಸ್ಮಾದ್ದೇಶಾದಪಾಕ್ರಮತ್ ॥

ಅನುವಾದ

ರಾಜನ ಈ ಕರುಣ ವಚನವನ್ನು ಕೇಳಿ, ಅವರ ದೀನಸ್ಥಿತಿಯನ್ನು ನೋಡಿ ಸುಮಂತ್ರನು ಕೈಮುಗಿಯುತ್ತಲೇ ಸ್ವಲ್ಪ ಹಿಂದೆ ಸರಿದನು.॥60॥

ಮೂಲಮ್ - 61

ಯದಾ ವಕ್ತುಂ ಸ್ವಯಂ ದೈನ್ಯಾನ್ನ ಶಶಾಕ ಮಹೀಪತಿಃ ।
ತದಾ ಸುಮಂತ್ರಂ ಮಂತ್ರಜ್ಞಾ ಕೈಕೇಯೀ ಪ್ರತ್ಯುವಾಚ ಹ ॥

ಅನುವಾದ

ದುಃಖ ಮತ್ತು ದೀನತೆಯ ಕಾರಣ ರಾಜನು ಸ್ವತಃ ಏನನ್ನೂ ಮಾತನಾಡದಿದ್ದಾಗ ರಾಜನೀತಿಜ್ಞಳಾದ ಕೈಕೆಯಿಯು ಸುಮಂತ್ರನಲ್ಲಿ ಇಂತೆಂದಳು.॥61॥

ಮೂಲಮ್ - 62

ಸುಮಂತ್ರ ರಾಜಾ ರಜನೀಂ ರಾಮಹರ್ಷಸಮುತ್ಸುಕಃ ।
ಪ್ರಜಾಗರಪರಿಶ್ರಾಂತೋ ನಿದ್ರಾವಶಮುಪಾಗತಃ ॥

ಅನುವಾದ

ಸುಮಂತ್ರನೇ! ರಾಜರು ರಾತ್ರಿಯಿಡೀ ಶ್ರೀರಾಮನ ಪಟ್ಟಾಭಿಷೇಕದ ಹರ್ಷದಿಂದ ಉತ್ಕಂಠಿತನಾಗಿ ನಿದ್ದೆಯೇ ಮಾಡಲಿಲ್ಲ. ಜಾಗರಣೆಯಿಂದ ಬಳಲಿದ ಕಾರಣ ಅವರಿಗೆ ಈಗ ನಿದ್ದೆ ಬಂದಿದೆ.॥62॥

ಮೂಲಮ್ - 63

ತದ್ಗಚ್ಛ ತ್ವರಿತಂ ಸೂತ ರಾಜಪುತ್ರಂ ಯಶಸ್ವಿನಮ್ ।
ರಾಮಮಾನಯ ಭದ್ರಂ ತೇ ನಾತ್ರ ಕಾರ್ಯಾವಿಚಾರಣಾ ॥

ಅನುವಾದ

ಆದ್ದರಿಂದ ಸೂತನೇ! ನಿನಗೆ ಒಳ್ಳೆಯದಾಗಲಿ. ನೀನು ಬೇಗನೇ ಹೋಗಿ, ಯಶಸ್ವೀ ರಾಜಕುಮಾರ ಶ್ರೀರಾಮನನ್ನು ಇಲ್ಲಿಗೆ ಕರೆದುಕೊಂಡು ಬಾ. ಈ ವಿಷಯದಲ್ಲಿ ಬೇರೇನೂ ಯೋಚಿಸಬೇಡ.॥63॥

ಮೂಲಮ್ - 64

ಅಶ್ರುತ್ವಾ ರಾಜವಚನಂ ಕಥಂ ಗಚ್ಛಾಮಿ ಭಾಮಿನಿ ।
ತಚ್ಛ್ರುತ್ವಾ ಮಂತ್ರಿಣೋ ವಾಕ್ಯಂ ರಾಜಾಮಂತ್ರಿಣಮಬ್ರವೀತ್ ॥

ಅನುವಾದ

ಆಗ ಸುಮಂತ್ರನು-ಭಾಮಿನಿ! ಮಹಾರಾಜರ ಆಜ್ಞೆಯಿಲ್ಲದೆ ನಾನು ಹೇಗೆ ಹೋಗಲಿ? ಎಂದು ಹೇಳಿದಾಗ, ಮಂತ್ರಿಯ ಮಾತನ್ನು ಕೇಳಿದ ರಾಜನು ಅವನಲ್ಲಿ ಇಂತೆಂದನು.॥64॥

ಮೂಲಮ್ - 65

ಸುಮಂತ್ರ ರಾಮಂ ದಕ್ಷ್ಯಾಮಿ ಶೀಘ್ರಮಾನಯ ಸುಂದರಮ್ ।
ಸ ಮನ್ಯಮಾನಃ ಕಲ್ಯಾಣಂ ಹೃದಯೇನ ನನಂದ ಚ ॥

ಅನುವಾದ

ಸುಮಂತ್ರನೇ! ಸುಂದರನಾದ ರಾಮನನ್ನು ನಾನು ನೋಡಬಯಸುವೆನು. ನೀನು ಬೇಗನೇ ಅವನನ್ನು ಇಲ್ಲಿಗೆ ಕರೆದುಕೊಂಡು ಬಾ. ಆಗ ಶ್ರೀರಾಮದರ್ಶನದಿಂದಲೇ ಕಲ್ಯಾಣವನ್ನು ತಿಳಿದ ರಾಜನು ಮನಸ್ಸಿನಲ್ಲಿ ಆನಂದಗೊಂಡನು.॥65॥

ಮೂಲಮ್ - 66

ನಿರ್ಜಗಾಮ ಚ ಸ ಪ್ರೀತ್ಯಾ ತ್ವರಿತೋ ರಾಜಶಾಸನಾತ್ ।
ಸುಮಂತ್ರಶ್ಚಿಂತಯಾಮಾಸ ತ್ವರಿತಂ ಚೋದಿತಸ್ತಯಾ ॥

ಅನುವಾದ

ಸುಮಂತ್ರನು ರಾಜಾಜ್ಞೆಯಂತೆ ಕೂಡಲೇ ಸಂತೋಷವಾಗಿ ಅಲ್ಲಿಂದ ತೆರಳಿದನು. ಕೈಕೆಯಿಯೂ ಕೂಡ ಬೇಗನೇ ಶ್ರೀರಾಮನನ್ನು ಕರೆತರುವಂತೆ ಆಜ್ಞಾಪಿಸಿದಳು. ಅದನ್ನು ನೆನೆದು ಶ್ರೀರಾಮನನ್ನು ಕರೆಸಲು ಇಷ್ಟೊಂದು ಆತುರ ಏಕೆ ಉಂಟಾಗಿದೆ ಎಂದು ಯೋಚಿಸತೊಡಗಿದನು.॥66॥

ಮೂಲಮ್ - 67

ವ್ಯಕ್ತಂ ರಾಮೋಭಿಷೇಕಾರ್ಥೇ ಇಹಾಯಾಸ್ಯತಿ ಧರ್ಮರಾಟ್ ।
ಇತಿ ಸೂತೋ ಮತಿಂ ಕೃತ್ವಾ ಹರ್ಷೇಣ ಮಹತಾ ಪುನಃ ॥

ಮೂಲಮ್ - 68

ನಿರ್ಜಗಾಮ ಮಹಾತೇಜಾ ರಾಘವಸ್ಯ ದಿದೃಕ್ಷಯಾ ।
ಸಾಗರಹ್ರದಸಂಕಾಶಾತ್ಸುಮಂತ್ರೋಂಽತಃಪುರಾಚ್ಛುಭಾತ್ ।
ನಿಷ್ಕ್ರಮ್ಯ ಜನಸಂಬಾಧಂ ದದರ್ಶ ದ್ವಾರಮಗ್ರತಃ ॥

ಅನುವಾದ

ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕಾಗಿಯೇ ಹೀಗೆ ಅವಸರ ಪಡಿಸುತ್ತಿದ್ದಾರೆ, ಎಂದೆನಿಸುತ್ತದೆ. ಈ ಕಾರ್ಯದಲ್ಲಿ ಧರ್ಮಾತ್ಮಾ ದಶರಥ ರಾಜರಿಗೆ ಹೆಚ್ಚು ಆಯಾಸವಾದ್ದರಿಂದ ಹೊರಗೆ ಬರುವುದಿಲ್ಲ. ಹೀಗೆ ನಿಶ್ಚಯಿಸಿ ಮಹಾತೇಜಸ್ವಿ ಸೂತನಾದ ಸುಮಂತ್ರನು ಹರ್ಷದೊಂದಿಗೆ ಶ್ರೀರಾಮನ ದರ್ಶನ ಇಚ್ಛೆಯಿಂದ ಹೊರಟನು. ಸಮುದ್ರದ ಮಡುವಿನಂತಿದ್ದ ಅಂತಃಪುರದಿಂದ ಹೊರಟ ಸುಮಂತ್ರನು ಬಾಗಿಲಲ್ಲಿ ಅನೇಕ ಮನುಷ್ಯರು ಸೇರಿದ್ದನ್ನು ನೋಡಿದನು.॥67-68॥

ಮೂಲಮ್ - 69

ತತಃ ಪುರಸ್ತಾತ್ಸಹಸಾ ವಿನಿಃಸೃತೋ
ಮಹೀಪತೇರ್ದ್ವಾರಗತಾನ್ ವಿಲೋಕಯನ್ ।
ದದರ್ಶ ಪೌರಾನ್ ವಿವಿಧಾನ್ಮಹಾಧನಾ-
ನುಪಸ್ಥಿತಾನ್ದ್ವಾರಮುಪೇತ್ಯ ವಿಷ್ಠಿತಾನ್ ॥

ಅನುವಾದ

ರಾಜನ ಅಂತಃಪುರದಿಂದ ಹೊರಟ ಸುಮಂತ್ರನು ಬಾಗಿಲಲ್ಲಿ ನೆರೆದ ಜನರತ್ತ ನೋಡಿದನು. ಬಹು ಸಂಖ್ಯೆಯಲ್ಲಿ ಪುರಜನರು ಅಲ್ಲಿ ಉಪಸ್ಥಿತರಾಗಿದ್ದರು ಹಾಗೂ ಅನೇಕ ಶ್ರೀಮಂತ ಜನರೂ ರಾಜದ್ವಾರದಲ್ಲಿ ನಿಂತಿದ್ದರು.॥69॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹದಿನಾಲ್ಕನೆಯ ಸರ್ಗ ಪೂರ್ಣವಾಯಿತು ॥14॥