०१३ दशरथस्य वैक्लव्यम्

वाचनम्
ಭಾಗಸೂಚನಾ

ದಶರಥನ ವಿಲಾಪ ಮತ್ತು ಕೈಕೆಯಲ್ಲಿ ಅನುನಯ - ವಿನಯ

ಮೂಲಮ್ - 1

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್ ।
ಯಯಾತಿಮಿವ ಪುಣ್ಯಾಂತೇ ದೇವಲೋಕಾತ್ಪರಿಚ್ಯುತಮ್ ॥

ಮೂಲಮ್ - 2

ಅನರ್ಥರೂಪಾ ಸಿದ್ಧಾರ್ಥಾ ಹ್ಯಭೀತಾ ಭಯದರ್ಶಿನೀ ।
ಪುನರಾಕಾರಯಾಮಾಸ ತಮೇವ ವರಮಂಗನಾ ॥

ಅನುವಾದ

ಪುಣ್ಯ ಕ್ಷಯಿಸಿ ದೇವಲೋಕದಿಂದ ಭ್ರಷ್ಟನಾದ ಯಯಾತಿಯಂತೆ ನೆಲಕ್ಕೆ ಕುಸಿದು ಬಿದ್ದ ಮಹಾರಾಜಾ ದಶರಥನು ಅನುಚಿತ ಮತ್ತು ಅಯೋಗ್ಯ ಸ್ಥಿತಿಯಲ್ಲಿ ಆಗ ಕಂಡುಬರುತ್ತಿದ್ದನು. ಅವನನ್ನು ನೋಡಿ ಅನರ್ಥದ ಸಾಕ್ಷಾತ್ ಮೂರ್ತಿಯಂತಿರುವ ಕೈಕೆಯು ತನ್ನ ಪ್ರಯೋಜನ ಇಷ್ಟರವರೆಗೆ ಸಿದ್ಧವಾಗದೇ ಇರುವುದರಿಂದ ಲೋಕಾಪವಾದದ ಭಯವನ್ನು ತ್ಯಜಿಸಿದ, ರಾಮನಿಂದ ಭರತನಿಗೆ ಇರುವ ಭಯವನ್ನು ನೋಡುವ ಆಕೆಯು ತನ್ನ ವರಗಳ ಬಗ್ಗೆ ರಾಜನನ್ನು ಸಂಬೋಧಿಸಿ ಹೀಗೆ ಹೇಳಿದಳು.॥1-2॥

ಮೂಲಮ್ - 3

ತ್ವಂ ಕತ್ಥಸೇ ಮಹಾರಾಜ ಸತ್ಯವಾದೀ ದೃಢವ್ರತಃ ।
ಮಮ ಚೇದಂ ವರಂ ಕಸ್ಮಾದ್ ವಿಧಾರಯಿತುಮಿಚ್ಛಸಿ ॥

ಅನುವಾದ

ಮಹಾರಾಜರೇ! ನಾನು ದೊಡ್ಡ ಸತ್ಯವಾದಿ ಮತ್ತು ದೃಢ ಪ್ರತಿಜ್ಞನೆಂದು ಕೊಚ್ಚಿಕೊಳ್ಳುತ್ತಿದ್ದೆ. ಹಾಗಿರುವಾಗ ನನ್ನ ವರಗಳನ್ನು ನನಗೆ ಕೊಡದೆ ಏಕೆ ನಿನ್ನಲ್ಲಿ ಉಳಿಸಿಕೊಳ್ಳಲು ನೋಡುತ್ತಿರುವೇ.॥3॥

ಮೂಲಮ್ - 4

ಏವಮುಕ್ತಸ್ತು ಕೈಕೇಯ್ಯಾ ರಾಜಾ ದಶರಥಸ್ತದಾ ।
ಪ್ರತ್ಯುವಾಚ ತತಃ ಕ್ರುದ್ಧೋ ಮುಹೂರ್ತಂ ವಿಹ್ವಲನ್ನಿವ ॥

ಅನುವಾದ

ಕೈಕೇಯಿಯು ಹೀಗೆ ಹೇಳಿದಾಗ ದಶರಥನು ಮುಹೂರ್ತಕಾಲ ಕೋಪದಿಂದ ಉದ್ವಿಗ್ನನಂತಿದ್ದು, ಇಂತೆಂದನು .॥4॥

ಮೂಲಮ್ - 5

ಮೃತೇ ಮಯಿ ಗತೇ ರಾಮೇ ವನಂ ಮನುಜಪುಂಗವೇ ।
ಹಂತಾನಾರ್ಯೇ ಮಮಾಮಿತ್ರೇ ಸಕಾಮಾ ಸುಖಿನೀ ಭವ ॥

ಅನುವಾದ

ಎಲೈ ನೀಚಳೇ! ನೀನು ನನ್ನ ಶತ್ರು ಆಗಿರುವೆ. ನರಶ್ರೇಷ್ಠ ಶ್ರೀರಾಮನು ಕಾಡಿಗೆ ಹೋದಮೇಲೆ ನನ್ನ ಮೃತ್ಯು ಆಗುವುದು; ಆಗ ನೀನು ಸಫಲ ಮನೋರಥಳಾಗಿ ಸುಖವಾಗಿ ಇರು.॥5॥

ಮೂಲಮ್ - 6

ಸ್ವರ್ಗೇಽಪಿ ಖಲು ರಾಮಸ್ಯಕುಶಲಂ ದೈವತೈರಹಮ್ ।
ಪ್ರತ್ಯಾದೇಶಾದಭಿಹಿತಂ ಧಾರಯಿಷ್ಯೇ ಕಥಂ ಬತ ॥

ಅನುವಾದ

ಅಯ್ಯೋ! ಸ್ವರ್ಗದಲ್ಲಿ ದೇವತೆಗಳು ನನ್ನಲ್ಲಿ ಶ್ರೀರಾಮನ ಕ್ಷೇಮವನ್ನು ಕೇಳಿದಾಗ ನಾನು ಏನು ಉತ್ತರಿಸಲಿ? ಅವನನ್ನು ಕಾಡಿಗೆ ಕಳಿಸಿದೆ ಎಂದು ಹೇಳಿದಾಗ ಅವರು ನನ್ನ ಕುರಿತು ಧಿಕ್ಕರಿಸಿ ಮಾತನಾಡುವರು. ಅದನ್ನು ನಾನು ಹೇಗೆ ಸಹಿಸಲಿ? ಅದಕ್ಕಾಗಿ ನನಗೆ ಬಹಳ ದುಃಖವಾಗುತ್ತಿದೆ.॥6॥

ಮೂಲಮ್ - 7

ಕೈಕೇಯ್ಯಾಃ ಪ್ರಿಯಕಾಮೇನ ರಾಮಃ ಪ್ರವ್ರಾಜಿತೋ ವನಮ್ ।
ಯದಿ ಸತ್ಯಂ ಬ್ರವೀಮ್ಯೇತತ್ ತದಸತ್ಯಂ ಭವಿಷ್ಯತಿ ॥

ಅನುವಾದ

ಕೈಕೆಯಿಗೆ ಪ್ರಿಯವನ್ನುಂಟುಮಾಡುವ ಇಚ್ಛೆಯಿಂದ ಆಕೆ ಕೇಳಿದ ವರಕ್ಕನುಸಾರ ನಾನು ಶ್ರೀರಾಮನನ್ನು ಕಾಡಿಗೆ ಕಳಿಸಿದೆ ಎಂದು ಸತ್ಯವನ್ನು ಹೇಳಿದರೆ, ನಾನು ಹಿಂದೆ ರಾಮನಿಗೆ ರಾಜ್ಯವನ್ನು ಕೊಡುವೆನು ಎಂದು ಹೇಳಿದ ನನ್ನ ಹಿಂದಿನ ಮಾತು ಸುಳ್ಳಾದೀತು.॥7॥

ಮೂಲಮ್ - 8

ಅಪುತ್ರೇಣ ಮಯಾ ಪುತ್ರಃ ಶ್ರಮೇಣ ಮಹತಾಮಹಾನ್ ।
ರಾಮೋ ಲಬ್ಧೋ ಮಹಾತೇಜಾಃ ಸ ಕಥಂ ತ್ಯಜ್ಯತೇಮಯಾ ॥

ಅನುವಾದ

ನಾನು ಮೊದಲು ಪುತ್ರಹೀನನಾಗಿದ್ದೆ, ಮತ್ತೆ ತುಂಬಾ ಪರಿಶ್ರಮಪಟ್ಟು ಮಹಾತೇಜಸ್ವೀ ಮಹಾಪುರುಷ ಶ್ರೀರಾಮನನ್ನು ಪುತ್ರನನ್ನಾಗಿ ನಾನು ಪಡೆದುಕೊಂಡೆ. ಅವನನ್ನು ನಾನು ಹೇಗೆ ತ್ಯಜಿಸಲಿ.॥8॥

ಮೂಲಮ್ - 9

ಶೂರಶ್ಚ ಕೃತವಿದ್ಯಶ್ಚ ಜಿತಕ್ರೋಧಃ ಕ್ಷಮಾಪರಃ ।
ಕಥಂ ಕಮಲಪತ್ರಾಕ್ಷೋ ಮಯಾ ರಾಮೋ ವಿವಾಸ್ಯತೇ ॥

ಅನುವಾದ

ಮಹಾಶೂರನಾದ, ಸಕಲವಿದ್ಯಾ ಪಾರಂಗತನಾದ, ಕ್ರೋಧವನ್ನು ಜಯಿಸಿದ, ಕ್ಷಮಾವಂತನಾದ, ಕಮಲನಯನ ಶ್ರೀರಾಮನನ್ನು ನಾನು ಹೇಗೆ ಕಾಡಿಗೆ ಕಳಿಸಬಲ್ಲೆನು.॥9॥

ಮೂಲಮ್ - 10

ಕಥಮಿಂದಿವರಶ್ಯಾಮಂ ದೀರ್ಘಬಾಹುಂ ಮಹಾಬಲಮ್ ।
ಅಭಿರಾಮಮಹಂ ರಾಮಂ ಸ್ಥಾಪಯಿಷ್ಯಾಮಿದಂಡಕಾನ್ ॥

ಅನುವಾದ

ಕನ್ನೈದಿಲೆಯಂತೆ ಶ್ಯಾಮಲ ಅಂಗಕಾಂತಿಯುಳ್ಳ, ದೀರ್ಘಬಾಹುವಾದ, ಮಹಾಬಲನಾದ, ನಯನಾಭಿರಾಮನಾದ ಶ್ರೀರಾಮನನ್ನು ದಂಡಕಾರಣ್ಯಕ್ಕೆ ಹೇಗೆ ಕಳಿಸಲಿ.॥10॥

ಮೂಲಮ್ - 11

ಸುಖಾನಾಮುಚಿತಸ್ಯೈವ ದುಃಖೈರನುಚಿತಸ್ಯ ಚ ।
ದುಃಖಂ ನಾಮಾನುಪಶ್ಯೇಯಂ ಕಥಂ ರಾಮಸ್ಯ ಧೀಮತಃ ॥

ಅನುವಾದ

ಸುಖಾನುಭವಗಳಿಗೆ ಯೋಗ್ಯನಾದ, ದುಃಖಾನುಭವಕ್ಕೆ ಅನರ್ಹನಾದ, ಬುದ್ಧಿವಂತ ಶ್ರೀರಾಮನನ್ನು ಕಾಡಿಗೆ ಕಳಿಸಿ ದುಃಖಪಡುವುದನ್ನು ನಾನು ಹೇಗೆ ನೋಡಲಿ.॥11॥

ಮೂಲಮ್ - 12

ಯದಿ ದುಃಖಮಕೃತ್ವಾತು ಮಮ ಸಂಕ್ರಮಣಂ ಭವೇತ್ ।
ಅದುಃಖಾರ್ಹಸ್ಯ ರಾಮಸ್ಯ ತತಃ ಸುಖಮವಾಪ್ನುಯಾಮ್ ॥

ಅನುವಾದ

ದುಃಖವನ್ನು ಅನುಭವಿಸಲು ಅನರ್ಹನಾದ ಶ್ರೀರಾಮನಿಗೆ ಈ ವನವಾಸದ ದುಃಖ ಕೊಡದೆಯೇ ನಾನು ಮರಣ ಹೊಂದಿದರೆ ನನಗೆ ಬಹಳ ಸುಖ ಸಿಗಬಹುದು.॥12॥

ಮೂಲಮ್ - 13½

ನೃಶಂಸೇ ಪಾಪಸಂಕಲ್ಪೇ ರಾಮಂ ಸತ್ಯಪರಾಕ್ರಮಮ್ ।
ಕಿಂ ವಿಪ್ರಿಯೇಣ ಕೈಕೇಯೀ ಪ್ರಿಯಂ ಯೋಜಯಸೇ ಮಮ ॥
ಅಕೀರ್ತಿರತುಲಾ ಲೋಕೇ ಧ್ರುವಃ ಪರಿಭವಿಶ್ಯತಿ ।

ಅನುವಾದ

ಎಲೈ ಪಾಪಸಂಕಲ್ಪಳೇ! ಪಾಷಾಣ ಹೃದಯಿ ಕೈಕೇ! ಸತ್ಯ ಪರಾಕ್ರಮಿ ಶ್ರೀರಾಮನು ನನಗೆ ಬಹಳ ಪ್ರಿಯನಾಗಿದ್ದಾನೆ, ಅವನನ್ನು ನನ್ನಿಂದ ಅಗಲಿಸಬೇಡ. ಎಲಗೆ! ಹೀಗೆ ಮಾಡುವುದರಿಂದ ನಿಶ್ಚಯವಾಗಿಯೇ ಜಗತ್ತಿನಲ್ಲಿ ಹರಡುವ ನಿನ್ನ ಅಪಕೀರ್ತಿಗೆ ತುಲನೆಯೇ ಇರಲಾರದು.॥13½॥

ಮೂಲಮ್ - 14½

ತಥಾ ವಿಲಪತಸ್ತಸ್ಯ ಪರಿಭ್ರಮಿತಚೇತಸಃ ॥
ಅಸ್ತಮಭ್ಯಾಗಮತ್ ಸೂರ್ಯೋ ರಜನೀಚಾಭ್ಯವರ್ತತ ।

ಅನುವಾದ

ಈ ಪ್ರಕಾರ ವಿಲಾಪಿಸುತ್ತಾ ದಶರಥನ ಮನಸ್ಸು ಅತ್ಯಂತ ವ್ಯಾಕುಲವಾಯಿತು. ಅಷ್ಟರಲ್ಲಿ ಭಗವಾನ್ ಸೂರ್ಯನು ಅಸ್ತಾಚಲಕ್ಕೆ ಸರಿದನು ಹಾಗೂ ರಾತ್ರಿಯಾಯಿತು.॥14½॥

ಮೂಲಮ್ - 15½

ಸಾ ತ್ರಿಯಾಮಾ ತದಾರ್ತಸ್ಯ ಚಂದ್ರಮಂಡಲಮಂಡಿತಾ ॥
ರಾಜ್ಞೋ ವಿಲಪಮಾನಸ್ಯ ನ ವ್ಯಭಾಸತ ಶರ್ವರೀ ।

ಅನುವಾದ

ಆ ಮೂರು ಯಾಮಗಳ ರಾತ್ರಿಯಲ್ಲಿ ಚಂದ್ರಮಂಡಲವು ಬೆಳಗುತ್ತಿದ್ದರೂ, ಆರ್ತನಾಗಿ ವಿಲಾಪಿಸುತ್ತಿರುವ ದಶರಥನಿಗೆ ಕತ್ತಲೆಯಂತೆ ಇತ್ತು.॥15½॥

ಮೂಲಮ್ - 16½

ಸದೈವೋಷ್ಣಂ ವಿನಿಃಶ್ವಸ್ಯ ವೃದ್ಧೋ ದಶರಥೋ ನೃಪಃ ॥
ವಿಲಲಾಪಾರ್ತವದ್ದುಃಖಂ ಗಗನಾಸಕ್ತಲೋಚನಃ ।

ಅನುವಾದ

ವೃದ್ಧನಾದ ದಶರಥನು ನಿರಂತರ ದೀರ್ಘವಾಗಿ ಬಿಸಿಯಾದ ನಿಟ್ಟುಸಿರು ಬಿಡುತ್ತಾ ಆಕಾಶದ ಕಡೆಗೆ ದಿಟ್ಟಿಸಿ ನೋಡುತ್ತಾ ಆರ್ತನಂತೆ ದುಃಖಪೂರ್ಣವಾಗಿ ವಿಲಪಿಸತೊಡಗಿದನು.॥16½॥

ಮೂಲಮ್ - 17½

ನ ಪ್ರಭಾತಂ ತ್ವಯೇಚ್ಛಾಮಿ ನಿಶೇ ನಕ್ಷತ್ರಭೂಷಿತೇ ॥
ಕ್ರಿಯತಾಂ ಮೇ ದಯಾ ಭದ್ರೇ ಮಯಾಯಂ ರಚಿತೋಽಂಜಲಿಃ ।

ಅನುವಾದ

ನಕ್ಷತ್ರಗಳಿಂದ ಸಮಲಂಕೃತವಾದ ನಿಶಾದೇವಿಯೇ! ನಾನು ನಿನ್ನಿಂದ ಪ್ರಭಾತವಾಗುವುದನ್ನು ಇಚ್ಛಿಸುವುದಿಲ್ಲ. ಬೆಳಗಾಗುವುದು ಬೇಡ. ತಾಯೇ! ಕೈಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಮೇಲೆ ದಯೆದೋರು.॥17½॥

ಮೂಲಮ್ - 18½

ಅಥವಾ ಗಮ್ಯತಾಂ ಶೀಘ್ರಂ ನಾಹಮಿಚ್ಛಾಮಿ ನಿರ್ಘೃಣಾಮ್ ॥
ನೃಶಂಸಾಂ ಕೇಕಯೀಂ ದ್ರಷ್ಟುಂ ಯತ್ಕೃತೇ ವ್ಯಸನಂ ಮಮ ।

ಅನುವಾದ

ಅಥವಾ ಬೇಗ ಕಳೆದುಹೋಗು; ಏಕೆಂದರೆ ಯಾರ ಕಾರಣದಿಂದ ಈ ಭಾರೀ ದುಃಖ ಉಂಟಾಗಿದೆಯೋ ಆ ನಿರ್ದಯಿ, ಕ್ರೂರ ಕೈಕೆಯನ್ನು ಇನ್ನು ಹೆಚ್ಚು ಹೊತ್ತು ನೋಡಲು ಬಯಸುವುದಿಲ್ಲ.॥18½॥

ಮೂಲಮ್ - 19½

ಏವಮುಕ್ತ್ವಾ ತತೋ ರಾಜಾ ಕೈಕೇಯೀಂ ಸಂಯತಾಂಜಲಿಃ ॥
ಪ್ರಸಾದಯಾಮಾಸ ಪುನಃ ಕೈಕೇಯೀಂ ರಾಜಧರ್ಮವಿತ್ ।

ಅನುವಾದ

ರಾಜನು ಹೀಗೆ ನಿಶಾದೇವಿಗೆ ಹೇಳಿ ರಾಜಧರ್ಮವನ್ನು ಬಲ್ಲ ದಶರಥನು ಪುನಃ ಕೈಮುಗಿದು ಕೈಕೆಯನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುತ್ತಾ ಹೇಳಿದನು.॥19½॥

ಮೂಲಮ್ - 20½

ಸಾಧುವೃತ್ತಸ್ಯ ದೀನಸ್ಯ ತ್ವದ್ಗತಸ್ಯ ಗತಾಯುಷಃ ॥
ಪ್ರಸಾದಃ ಕ್ರಿಯತಾಂ ಭದ್ರೇ ದೇವಿ ರಾಜ್ಞೋ ವಿಶೇಷತಃ ।

ಅನುವಾದ

ಮಂಗಳಸ್ವರೂಪಳೇ! ದೇವಿ! ಸದಾಚಾರಿಯೂ, ದೀನನೂ, ನಿನ್ನ ಆಶ್ರಿತನೂ, ಮರಣಾಸನ್ನನೂ, ವಿಶೇಷವಾಗಿ ರಾಜನೂ ಆದ ಈ ದಶರಥನ ಮೇಲೆ ಪ್ರಸನ್ನಳಾಗು.॥20½॥

ಮೂಲಮ್ - 21½

ಶೂನ್ಯೇ ನ ಖಲು ಸುಶ್ರೋಣಿ ಮಯೇದಂ ಸಮುದಾಹೃತಮ್ ॥
ಕುರು ಸಾಧುಪ್ರಸಾದಂ ಮೇ ಬಾಲೇ ಸಹೃದಯಾ ಹ್ಯಸಿ ।

ಅನುವಾದ

ಸುಂದರೀ! ಶ್ರೀರಾಮನಿಗೆ ರಾಜ್ಯವನ್ನು ಕೊಡುವೆನು ಎಂದು ನಾನು ಹೇಳಿದುದು ಯಾವುದೋ ಜನರಹಿತ ಸ್ಥಳದಲ್ಲಿ ಹೇಳದೆ, ತುಂಬಿದ ಸಭೆಯಲ್ಲಿ ಘೋಷಿಸಿದ್ದೆ. ನೀನು ಬಹಳ ಸುಹೃದಯಳಾಗಿರುವೆ. ಆದ್ದರಿಂದ ನನ್ನ ಮೇಲೆ ಚೆನ್ನಾಗಿ ಕೃಪೆಮಾಡು. ಇದರಿಂದ ಸಭಾಸದರಿಂದ ನನ್ನ ಉಪಹಾಸ ಆಗದಿರಲಿ.॥21½॥

ಮೂಲಮ್ - 22½

ಪ್ರಸೀದ ದೇವಿ ರಾಮೋ ಮೇ ತ್ವದ್ದತ್ತಂ ರಾಜ್ಯಮವ್ಯಯಮ್ ॥
ಲಭತಾಮಸಿತಾಪಾಂಗೇ ಯಶಃ ಪರಮವಾಪ್ಸ್ಯಸಿ ।

ಅನುವಾದ

ಕಪ್ಪಾದ ಕಡೆಗಣ್ಣುಗಳುಳ್ಳವಳೇ! ಪ್ರಸನ್ನಳಾಗು. ನನ್ನ ರಾಮನು ನಿನ್ನದಾದ ಈ ರಾಜ್ಯವನ್ನು ನೀನೇ ಕೊಟ್ಟಿರುವೆ ಎಂದು ತಿಳಿದು ಅಕ್ಷಯ ರಾಜ್ಯವನ್ನು ಪಡೆಯಲಿ. ಇದರಿಂದ ನೀನು ಉತ್ತಮ ಯಶವನ್ನು ಪಡೆಯುವೆ.॥22½॥

ಮೂಲಮ್ - 23

ಮಮ ರಾಮಸ್ಯ ಲೋಕಸ್ಯಗುರೂಣಾಂ ಭರತಸ್ಯ ಚ ।
ಪ್ರಿಯಮೇತದ್ಗುರುಶ್ರೋಣಿ ಕುರು ಚಾರುಮುಖೇಕ್ಷಣೇ ॥

ಅನುವಾದ

ಸುಮುಖೀ! ಸುಲೋಚನೇ ಈ ಕಾರ್ಯವು ನನಗೆ, ಶ್ರೀರಾಮನಿಗೆ, ಸಮಸ್ತ ಪ್ರಜಾಜನರಿಗೆ, ಗುರುಗಳಿಗೆ ಹಾಗೂ ಭರತನಿಗೂ ಕೂಡ ಪ್ರಿಯವಾಗುವುದು; ಆದ್ದರಿಂದ ಇದನ್ನು ಪೂರ್ಣಗೊಳಿಸು.॥23॥

ಮೂಲಮ್ - 24

ವಿಶುದ್ಧ ಭಾವಸ್ಯ ಹಿ ದುಷ್ಟಭಾವಾ
ದೀನಸ್ಯ ತಾಮ್ರಾಶ್ರುಕಲಸ್ಯ ರಾಜ್ಞಃ ।
ಶ್ರುತ್ವಾ ವಿಚಿತ್ರಂ ಕರುಣಂ ವಿಲಾಪಂ
ಭರ್ತುರ್ನೃಶಂಸಾ ನ ಚಕಾರ ವಾಕ್ಯಮ್ ॥

ಅನುವಾದ

ರಾಜನ ಹೃದಯದ ಭಾವ ಅತ್ಯಂತ ಶುದ್ಧವಾಗಿತ್ತು, ನೀರು ತುಂಬಿ ಕಣ್ಣುಗಳು ಕೆಂಪಾಗಿದ್ದವು ಹಾಗೂ ಆವನು ದೀನನಾಗಿ ವಿಚಿತ್ರವಾದ ಕರುಣಾಜನಕ ವಿಲಾಪ ಮಾಡುತ್ತಿದ್ದನು; ಆದರೂ ಮನಸ್ಸಿನಲ್ಲಿ ದೂಷಿತ ವಿಚಾರವುಳ್ಳ ನಿಷ್ಠುರ ಕೈಕೆಯಿಯು ಪತಿಯ ಈ ವಿಲಾಪವನ್ನು ಕೇಳಿಯೂ ಅವನ ಮಾತನ್ನು ಪಾಲಿಸಲಿಲ್ಲ.॥24॥

ಮೂಲಮ್ - 25

ತತಃ ಸ ರಾಜಾ ಪುನರೇವ ಮೂರ್ಛಿತಃ
ಪ್ರಿಯಾಮತುಷ್ಟಾಂ ಪ್ರತಿಕೂಲಭಾಷಿಣೀಮ್ ।
ಸಮೀಕ್ಷ್ಯ ಪುತ್ರಸ್ಯ ವಿವಾಸನಂ ಪ್ರತಿ
ಕ್ಷಿತೌ ವಿಸಂಜ್ಞೋ ನಿಪಪಾತ ದುಃಖಿತಃ ॥

ಅನುವಾದ

ಇಷ್ಟು ಬೇಡಿಕೊಂಡರೂ ಕೈಕೆಯಿಯು ಯಾವ ರೀತಿಯಿಂದಲೂ ಸಂತುಷ್ಟಳಾಗದೆ ಪದೇ-ಪದೇ ಪ್ರತಿಕೂಲ ಮಾತುಗಳನ್ನೇ ಆಡುತ್ತಿರುವಾಗ, ಪುತ್ರನ ವನವಾಸವನ್ನು ನೆನೆದು ರಾಜನು ದುಃಖದ ಉದ್ವೇಗದಿಂದ ಪುನಃ ಮೂರ್ಛಿತನಾಗಿ ಭೂಮಿಯಲ್ಲಿ ಕುಸಿದುಬಿದ್ದನು.॥25॥

ಮೂಲಮ್ - 26

ಇತೀವ ರಾಜ್ಞೋ ವ್ಯಥಿತಸ್ಯ ಸಾ ನಿಶಾ
ಜಗಾಮ ಘೋರಂ ಶ್ವಸತೋ ಮನಸ್ವಿನಃ ।
ವಿಬೋಧ್ಯಮಾನಃ ಪ್ರತಿಬೋಧನಂ ತದಾ
ನಿವಾರಯಾಮಾಸ ಸ ರಾಜಸತ್ತಮಃ ॥

ಅನುವಾದ

ಈ ಪ್ರಕಾರ ವ್ಯಥಿಸುತ್ತಾ ಭಯಂಕರವಾಗಿ ನಿಟ್ಟುಸಿರುಬಿಡುತ್ತಾ ಒಳ್ಳೆಯ ಮನಸ್ಸುಳ್ಳ ದಶರಥನ ಆ ರಾತ್ರಿಯು ನಿಧಾನವಾಗಿ ಕಳೆಯಿತು. ಮಂಗಳವಾದ್ಯಗಳು ಮೊಳಗುತ್ತಿರಲು, ವಂದಿಮಾಗಧರು ಹೊಗಳುತ್ತಾ ರಾಜನನ್ನು ಎಚ್ಚರ ಗೊಳಿಸಲು ಬಂದ ಎಲ್ಲರನ್ನೂ ಹಿಂದಕ್ಕೆ ಕಳಿಸಿದನು.॥26॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮಿಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹದಿಮೂರನೆಯ ಸರ್ಗ ಪೂರ್ಣವಾಯಿತು ॥13॥