०१२ कैकेय्युपलम्भः

वाचनम्
ಭಾಗಸೂಚನಾ

ದಶರಥನ ಚಿಂತೆ, ವಿಲಾಪ, ಕೈಕೆಯನ್ನು ನಿಂದಿಸಿದುದು, ಆಕೆಯನ್ನು ಬಗೆ ಬಗೆಯಾಗಿ ಸಮಾಧಾನಗೊಳಿಸಿ, ಇಂತಹ ಘೋರವಾದ ವರಗಳನ್ನು ಕೇಳದಂತೆ ಯಾಚಿಸಿದುದು

ಮೂಲಮ್ - 1

ತತಃ ಶ್ರುತ್ವಾ ಮಹಾರಾಜಃ ಕೈಕೇಯ್ಯಾ ದಾರುಣಂ ವಚಃ ।
ಚಿಂತಾಮಭಿಸಮಾಪೇದೇ ಮುಹೂರ್ತಂ ಪ್ರತತಾಪ ಚ ॥

ಅನುವಾದ

ಕೈಕೆಯಿಯ ಇಂತಹ ಕಠೋರವಾದ ಮಾತನ್ನು ಕೇಳಿ ದಶರಥನಿಗೆ ಬಹಳ ಚಿಂತೆ ಉಂಟಾಯಿತು. ಅವನು ಒಂದು ಮುಹೂರ್ತಕಾಲ ಅತ್ಯಂತ ಸಂತಾಪಗೊಂಡನು.॥1॥

ಮೂಲಮ್ - 2

ಕಿಂ ನು ಮೇಽಯಂ ದಿವಾಸ್ವಪ್ನಶ್ಚಿತ್ತಮೋಹೋಽಪಿ ವಾ ಮಮ ।
ಅನುಭೂತೋಪಸರ್ಗೋ ವಾ ಮನಸೋ ವಾಪ್ಯುಪದ್ರವಃ ॥

ಅನುವಾದ

ಅವನು ಯೋಚಿಸುತ್ತಿದ್ದಾನೆ - ಏನು ನಾನು ಹಗಲಿನಲ್ಲೇ ಸ್ವಪ್ನ ನೋಡುತ್ತಾ ಇದ್ದೇನೆಯೇ? ನನ್ನ ಚಿತ್ತವೇ ಮೋಹ ಗೊಂಡಿರುವುದೇ? ಅಥವಾ ಯಾವುದಾದರೂ ಭೂತ (ಗ್ರಹ)ದ ಆವೇಶದಿಂದ ಚಿತ್ತದಲ್ಲಿ ವಿಕಲತೆ ಬಂದಿದೆಯೇ? ಇಲ್ಲವೇ ಆಧಿ ವ್ಯಾಧಿಯ ಕಾರಣದಿಂದ ಯಾವುದಾದರೂ ಮನಸ್ಸಿನ ವಿಕಾರವೇ.॥2॥

ಮೂಲಮ್ - 3

ಇತಿ ಸಂಚಿಂತ್ಯ ತದ್ರಾಜಾ ನಾಧ್ಯಗಚ್ಛತ್ತದಾ ಸುಖಮ್ ।
ಪ್ರತಿಲಭ್ಯ ತತಃ ಸಂಜ್ಞಾಂ ಕೈಕೇಯೀವಾಕ್ಯತಾಪಿತಃ ॥

ಅನುವಾದ

ಹೀಗೆ ಆಲೋಚಿಸುತ್ತಾ ಅವನಿಗೆ ತನ್ನ ಭ್ರಮೆಯ ಕಾರಣ ತಿಳಿಯದೆ ಹೋಯಿತು. ಆಗ ರಾಜನಿಗೆ ಮೂರ್ಛಿತಗೊಳಿಸುವಂತಹ ದುಃಖಪ್ರಾಪ್ತವಾಯಿತು. ಬಳಿಕ ಎಚ್ಚರಗೊಂಡಾಗ ಕೈಕೆಯ ಮಾತನ್ನು ನೆನೆದು ಪುನಃ ಸಂತಾಪಕ್ಕೆ ಈಡಾದನು.॥3॥

ಮೂಲಮ್ - 4½

ವ್ಯಥಿತೋ ವಿಕ್ಲವಶ್ಚೈವ ವ್ಯಾಘ್ರೀಂ ದೃಷ್ಟ್ವಾಯಥಾ ಮೃಗಃ ।
ಅಸಂವೃತಾಯಾಮಾಸೀನೋ ಜಗತ್ಯಾಂ ದೀರ್ಘಮುಚ್ಛ್ವಸನ್ ॥
ಮಂಡಲೇ ಪನ್ನಗೋ ರುದ್ಧೋ ಮಂತ್ರೇರಿವ ಮಹಾವಿಷಃ ।

ಅನುವಾದ

ಹೆಣ್ಣು ಹುಲಿಯನ್ನು ಕಂಡು ಜಿಂಕೆಯು ವ್ಯಥಿತವಾಗುವಂತೆ ಆ ರಾಜನು ಕೈಕೆಯನ್ನು ನೋಡಿ ಪೀಡಿತನಾಗಿ ವ್ಯಾಕುಲಗೊಂಡನು. ಬರೇ ನೆಲದಲ್ಲಿ ಕುಳಿತಿದ್ದ ರಾಜನು ದೀರ್ಘವಾಗಿ ನಿಟ್ಟುಸಿರುಬಿಡುತ್ತಾ, ಮಹಾವಿಷ ಸರ್ಪವು ಮಂತ್ರದಿಂದ ಮಂಡಲದಲ್ಲಿ ಬಂಧಿತವಾದಂತೆ ಆಗಿದ್ದನು.॥4½॥

ಮೂಲಮ್ - 5½

ಅಹೋ ಧಿಗಿತಿ ಸಾಮರ್ಷೋ ವಾಚಮುಕ್ತ್ವಾ ನರಾಧಿಪಃ ॥
ಮೋಹಮಾಪೇದಿವಾನ್ಭೂಯಃ ಶೋಕೋಪಹತಚೇತನಃ ।

ಅನುವಾದ

ದಶರಥ ರಾಜನು ರೋಷಗೊಂಡು, ಅಯ್ಯೋ! ಧಿಕ್ಕಾರವಿರಲಿ ಎಂದು ಹೇಳುತ್ತಾ ಮೂರ್ಛಿತನಾದನು. ಶೋಕದಿಂದ ಎಚ್ಚರ ತಪ್ಪಿದವನಂತೆ ಆದನು.॥5½॥

ಮೂಲಮ್ - 6½

ಚಿರೇಣ ತುನೃಪಃ ಸಂಜ್ಞಾಂ ಪ್ರತಿಲಭ್ಯ ಸುದುಃಖಿತಃ ॥
ಕೈಕೇಯೀಮಬ್ರವೀತ್ ಕ್ರುದ್ಧೋ ನಿರ್ದಹನ್ನಿವ ತೇಜಸಾ ।

ಅನುವಾದ

ಬಹಳ ಹೊತ್ತಿನ ನಂತರ ಎಚ್ಚರಗೊಂಡಾಗ ರಾಜನು ಅತ್ಯಂತ ದುಃಖಿತನಾಗಿ ತನ್ನ ತೇಜದಿಂದ ಕೈಕೆಯನ್ನು ಸುಡುವಂತೆ ಕ್ರೋಧಗೊಂಡು ಆಕೆಯಲ್ಲಿ ಹೇಳಿದನು.॥6½॥

ಮೂಲಮ್ - 7½

ನೃಶಂಸೇ ದುಷ್ಟಚಾರಿತ್ರೇ ಕುಲಸ್ಯಾಸ್ಯ ವಿನಾಶಿನಿ ॥
ಕಿಂ ಕೃತಂ ತವ ರಾಮೇಣ ಪಾಪೇ ಪಾಪಂ ಮಯಾಪಿ ವಾ ।

ಅನುವಾದ

ದಯಾಹೀನ ದುರಾಚಾರೀ ಕೈಕೇಯಿ! ಕುಲ ವಿನಾಶನಿಯೇ! ಪಾಪಿಷ್ಠಳೇ! ರಾಮನು ನಿನಗೆ ಯಾವ ಅಪರಾಧವನ್ನು ಮಾಡಿರುವನು? ಅಥವಾ ನಾನಾದರೂ ನಿನಗೆ ಯಾವ ಅಪರಾಧವನ್ನು ಮಾಡಿರುವೆ.॥7½॥

ಮೂಲಮ್ - 8½

ಸದಾ ತೇ ಜನನೀತುಲ್ಯಾಂ ವೃತ್ತಿಂ ವಹತಿ ರಾಘವಃ ॥
ತಸ್ಯೈವಂ ತ್ವಮನರ್ಥಾಯ ಕಿಂ ನಿಮಿತ್ತಮಿಹೋದ್ಯತಾ ।

ಅನುವಾದ

ಶ್ರೀರಾಮಚಂದ್ರನಾದರೋ ನಿನ್ನೊಂದಿಗೆ ನಿಜತಾಯಿಯಂತೆ ವರ್ತಿಸುತ್ತಾ ಇರುವನು. ಹೀಗಿದ್ದರೂ ನೀನು ಯಾಕೆ ಇಂತಹ ಅನಿಷ್ಟವನ್ನು ಮಾಡಲು ಹೊರಟಿರುವೆ.॥8½॥

ಮೂಲಮ್ - 9½

ತ್ವಂ ಮಯಾಽಽತ್ಮವಿನಾಶಾಯ ಭವನಂ ಸ್ವಂ ಪ್ರವೇಶಿತಾ ॥
ಅವಿಜ್ಞಾನಾನ್ನೃಪಸುತಾ ವ್ಯಾಲಾ ತೀಕ್ಷ್ಣವಿಷಾ ಯಥಾ ।

ಅನುವಾದ

ನನ್ನ ನಾಶಕ್ಕಾಗಿಯೇ ನಿನ್ನನ್ನು ತಂದಿರಿಸಿದಂತೆ ಅನಿಸುತ್ತಿದೆ. ನೀನು ರಾಜಕನ್ಯೆಯ ರೂಪದಲ್ಲಿರುವ ತೀಕ್ಷ್ಣವಿಷವುಳ್ಳ ನಾಗಿನಿ ಎಂದು ನಾನು ತಿಳಿದಿರಲಿಲ್ಲ.॥9½॥

ಮೂಲಮ್ - 10½

ಜೀವಲೋಕೋ ಯದಾ ಸರ್ವೋ ರಾಮಸ್ಯಾಹ ಗುಣಸ್ತವಮ್ ॥
ಅಪರಾಧಂ ಕಮುದ್ದಿಶ್ಯ ತ್ಯಕ್ಷ್ಯಾಮೀಷ್ಟಮಹಂ ಸುತಮ್ ।

ಅನುವಾದ

ಇಡೀ ಜಗತ್ತೇ ಶ್ರೀರಾಮನ ಗುಣಗಳನ್ನು ಪ್ರಶಂಸಿಸುತ್ತಿರುವಾಗ ನಾನು ಯಾವ ಅಪರಾಧಕ್ಕಾಗಿ ಅಂತಹ ಪ್ರಿಯ ಪುತ್ರನನ್ನು ತ್ಯಜಿಸಲಿ.॥10½॥

ಮೂಲಮ್ - 11½

ಕೌಸಲ್ಯಾಂ ಚ ಸುಮಿತ್ರಾಂ ಚ ತ್ಯಜೇಯಮಪಿ ವಾಶ್ರಿಯಮ್ ॥
ಜೀವಿತಂ ಚಾತ್ಮನೋ ರಾಮಂ ನ ತ್ವೇವ ಪಿತೃವತ್ಸಲಮ್ ।

ಅನುವಾದ

ನಾನು ಕೌಸಲ್ಯೆ ಮತ್ತು ಸುಮಿತ್ರೆಯರನ್ನೂ ಬಿಡಬಲ್ಲೆ, ರಾಜ ಲಕ್ಷ್ಮಿಯನ್ನು ತ್ಯಜಿಸಬಲ್ಲೆ, ಆದರೆ ನನ್ನ ಪ್ರಾಣ ಸ್ವರೂಪನಾದ ಪಿತೃಭಕ್ತ ಶ್ರೀರಾಮನನ್ನು ಬಿಡಲಾರೆನು.॥11½॥

ಮೂಲಮ್ - 12½

ಪರಾ ಭವತಿ ಮೇ ಪ್ರೀತಿರ್ದೃಷ್ಟ್ವಾತನಯಮಗ್ರಜಮ್ ॥
ಅಪಶ್ಯತಸ್ತು ಮೇ ರಾಮಂ ನಷ್ಟಂ ಭವತಿ ಚೇತನಮ್ ।

ಅನುವಾದ

ನನ್ನ ಹಿರಿಯ ಪುತ್ರ ಶ್ರೀರಾಮನನ್ನು ನೋಡುತ್ತಲೇ ನನ್ನ ಹೃದಯದಲ್ಲಿ ಪ್ರೇಮ ಉಕ್ಕಿ ಬರುತ್ತದೆ; ಆದರೆ ನಾನು ಶ್ರೀರಾಮನನ್ನು ನೋಡದಿದ್ದಾಗ ನನ್ನ ಚೇತನವೇ ಉಡುಗಿ ಹೋಗುತ್ತದೆ.॥12½॥

ಮೂಲಮ್ - 13½

ತಿಷ್ಠೇಲ್ಲೋಕೋ ವಿನಾ ಸೂರ್ಯಂ ಸಸ್ಯಂ ವಾ ಸಲಿಲಂ ವಿನಾ ॥
ನ ತು ರಾಮಂ ವಿನಾ ದೇಹೇ ತಿಷ್ಠೇತ್ತು ಮಮಜೀವಿತಮ್ ।

ಅನುವಾದ

ಸೂರ್ಯನಿಲ್ಲದೆ ಈ ಜಗತ್ತು ಇರಬಲ್ಲದು, ಅಥವಾ ನೀರು ಇಲ್ಲದೆ ಹೊಲ ಬೆಳೆಯಬಹುದು, ಆದರೆ ಶ್ರೀರಾಮನು ಇಲ್ಲದೆ ನನ್ನ ಶರೀರದಲ್ಲಿ ಪ್ರಾಣಗಳು ಇರಲಾರವು.॥13½॥

ಮೂಲಮ್ - 14

ತದಲಂ ತ್ಯಜ್ಯತಾಮೇಷ ನಿಶ್ಚಯಃ ಪಾಪನಿಶ್ಚಯೇ ॥

ಮೂಲಮ್ - 15

ಅಪಿ ತೇ ಚರಣೌ ಮೂರ್ಧ್ನಾ ಸ್ಪೃಶಾಮ್ಯೇಷ ಪ್ರಸೀದ ಮೇ ।
ಕಿಮರ್ಥಂ ಚಿಂತಿತಂ ಪಾಪೇ ತ್ವಯಾ ಪರಮದಾರುಣಮ್ ॥

ಅನುವಾದ

ಆದ್ದರಿಂದ ಇಂತಹ ವರವನ್ನು ಕೇಳುವುದರಿಂದ ಯಾವ ಲಾಭವೂ ಆಗಲಾರದು. ಪಾಪನಿಶ್ಚಯವುಳ್ಳ ಕೈಕೇ! ನೀನು ಈ ನಿಶ್ಚಯವನ್ನು ಅಥವಾ ದುರಾಗ್ರಹವನ್ನು ಬಿಟ್ಟುಬಿಡು. ನೋಡು, ನಾನು ನಿನ್ನ ಕಾಲುಗಳಲ್ಲಿ ತಲೆಯನ್ನಿಡುವೆ. ನನ್ನ ಮೇಲೆ ಪ್ರಸನ್ನಳಾಗು. ಎಲೈ ಪಾಪಿನಿ! ನೀನು ಇಂತಹ ಪರಮ ಕ್ರೂರವಾದ ಮಾತನ್ನು ಏಕೆ ಯೋಚಿಸಿದೆ.॥14-15॥

ಮೂಲಮ್ - 16

ಅಥ ಜಿಜ್ಞಾಸಸೇ ಮಾಂ ತ್ವಂ ಭರತಸ್ಯ ಪ್ರಿಯಾಪ್ರಿಯೇ ।
ಅಸ್ತು ಯತ್ತತ್ತ್ವಯಾ ಪೂರ್ವಂ ವ್ಯಾಹೃತಂ ರಾಘವಂ ಪ್ರತಿ ॥

ಅನುವಾದ

ಭರತನು ನನಗೆ ಪ್ರಿಯನೋ, ಅಪ್ರಿಯನೋ ಎಂದು ತಿಳಿಯಲು ಬಯಸುತ್ತಿರುವೆಯಾ? ರಘುನಂದನ ಭರತನ ಸಂಬಂಧದಲ್ಲಿ ನೀನು ಮೊದಲು ಹೇಳಿದಂತೆ ಪೂರ್ಣವಾಗಲಿ. ನಿನ್ನ ಮೊದಲ ವರದಂತೆ ನಾನು ಭರತನಿಗೆ ಪಟ್ಟಾಭಿಷೇಕ ಮಾಡುವೆನು.॥16॥

ಮೂಲಮ್ - 17

ಸ ಮೇ ಜ್ಯೇಷ್ಠಃಸುತಃ ಶ್ರೀಮಾನ್ಧರ್ಮಜ್ಯೇಷ್ಠ ಇತೀವ ಮೇ ।
ತತ್ತ್ವಯಾ ಪ್ರಿಯವಾದಿನ್ಯಾ ಸೇವಾರ್ಥಂ ಕಥಿತಂ ಭವೇತ್ ॥

ಅನುವಾದ

ಶ್ರೀರಾಮನು ನನಗೆ ಹಿರಿಯ ಮಗನು, ಅವನು ಧರ್ಮಾಚರಣೆಯಲ್ಲಿ ಎಲ್ಲರಿಗಿಂತ ಹಿರಿಯನಾಗಿದ್ದಾನೆ ಎಂದು ನೀನೇ ಹೇಳುತ್ತಿದ್ದೆಯಲ್ಲ! ಆದರೆ ನೀನು ತೋರಿಕೆಯ ಮಾತುಗಳನ್ನಾಡುತ್ತಾ, ಶ್ರೀರಾಮನಿಂದ ಸೇವೆ ಮಾಡಿಸಿಕೊಳ್ಳಲೆಂದೇ ಹೇಳುತ್ತಿದ್ದೆ ಎಂಬುದು ಈಗ ಗೊತ್ತಾಯಿತು.॥17॥

ಮೂಲಮ್ - 18

ತಚ್ಛ್ರುತ್ವಾ ಶೋಕಸಂತಪ್ತಾ ಸಂತಾಪಯಸಿ ಮಾಂ ಭೃಶಮ್ ।
ಆವಿಷ್ಟಾಸಿ ಗೃಹೆ ಶೂನ್ಯೇಸಾ ತ್ವಂ ಪರವಶಂ ಗತಾ ॥

ಅನುವಾದ

ಇಂದು ಶ್ರೀರಾಮನ ಪಟ್ಟಾಭಿಷೇಕದ ಮಾತನ್ನು ಕೇಳಿ ನೀನು ಶೋಕಸಂತಪ್ತಳಾಗಿರುವೆ ಹಾಗೂ ನನಗೂ ಬಹಳ ಸಂತಾಪವನ್ನು ಕೊಡುತ್ತಿರುವೆ. ಈ ಶೂನ್ಯವಾದ ಕ್ರೋಧಾಗಾರದಲ್ಲಿ ನಿನ್ನ ಮೇಲೆ ಭೂತವು ಆವೇಶಿತವಾಗಿ ನೀನು ಪರವಶಳಾಗಿ ಇಂತಹ ಮಾತುಗಳನ್ನು ಆಡುತ್ತಿರುವೆ ಎಂದು ತಿಳಿಯುತ್ತೇನೆ.॥18॥

ಮೂಲಮ್ - 19

ಇಕ್ಷ್ವಾಕೂಣಾಂ ಕುಲೇ ದೇವಿ ಸಂಪ್ರಾಪ್ತಃ ಸುಮಹಾನಯಮ್ ।
ಅನಯೋ ನಯಸಂಪನ್ನೇ ಯತ್ರ ತೇ ವಿಕೃತಾ ಮತಿಃ ॥

ಅನುವಾದ

ದೇವಿ! ನ್ಯಾಯಶೀಲ ಇಕ್ಷ್ವಾಕುವಂಶದಲ್ಲಿ ನಿನ್ನ ಬುದ್ಧಿಯು ಹೀಗೆ ವಿಕೃತವಾಗಿ ಇಂತಹ ಭಾರೀ ದೊಡ್ಡ ಅನ್ಯಾಯ ಬಂದು ಇದಿರಾಗಿದೆ.॥19॥

ಮೂಲಮ್ - 20

ನಹಿ ಕಿಂಚಿದಯುಕ್ತಂ ವಾ ವಿಪ್ರಿಯಂ ವಾ ಪುರಾ ಮಮ ।
ಅಕರೋಸ್ತ್ವಂ ವಿಶಾಲಾಕ್ಷಿ ತೇನ ನ ಶ್ರದ್ಧಧಾಮಿತೇ ॥

ಅನುವಾದ

ವಿಶಾಲಲೋಚನೆ! ಈ ಮೊದಲು ನೀನು ಎಂದೂ ಇಂತಹ ಅನುಚಿತವಾದ ಅಥವಾ ನನಗೆ ಅಪ್ರಿಯವಾದ ಆಚರಣೆಯನ್ನು ಮಾಡಿರಲಿಲ್ಲ. ಆದ್ದರಿಂದ ನಿನ್ನ ಇಂದಿನ ಮಾತಿನಲ್ಲಿ ನನಗೆ ವಿಶ್ವಾಸವೇ ಉಂಟಾಗುತ್ತಿಲ್ಲ.॥20॥

ಮೂಲಮ್ - 21

ನನು ತೇ ರಾಘವಸ್ತುಲ್ಯೋ ಭರತೇನ ಮಹಾತ್ಮನಾ ।
ಬಹುಶೋ ಹಿ ಸ್ಮ ಬಾಲೇ ತ್ವಂ ಕಥಾಃ ಕಥಯಸೇ ಮಮ ॥

ಅನುವಾದ

ಬಾಲೇ! ನಿನಗಾದರೋ ಶ್ರೀರಾಮನು ಮಹಾತ್ಮನಾದ ಭರತನಿಗೆ ಸಮಾನನಾಗಿದ್ದಾನೆ ಎಂದು ಮಾತುಕತೆಯಲ್ಲಿ ಅನೇಕ ಸಲ ನನ್ನೊಡನೆ ಹೇಳುತ್ತಿದ್ದೆಯಲ್ಲ.॥21॥

ಮೂಲಮ್ - 22

ತಸ್ಯ ಧರ್ಮಾತ್ಮನೋ ದೇವಿ ವನೇ ವಾಸಂ ಯಶಸ್ವಿನಃ ।
ಕಥಂ ರೋಚಯಸೇ ಭೀರು ನವ ವರ್ಷಾಣಿ ಪಂಚ ಚ ॥

ಅನುವಾದ

ದೇವಿ! ಅಂತಹ ಧರ್ಮಾತ್ಮಾ, ಮಹಾಯಶಸ್ವೀ ಶ್ರೀರಾಮನ ಹದಿನಾಲ್ಕು ವರ್ಷದ ವನವಾಸವು ನಿನಗೆ ಹೇಗೆ ರುಚಿಸುತ್ತದೆ.॥22॥

ಮೂಲಮ್ - 23

ಅತ್ಯಂತಸುಕುಮಾರಸ್ಯ ತಸ್ಯ ಧರ್ಮೇ ಕೃತಾತ್ಮನಃ ।
ಕಥಂ ರೋಚಯಸೇ ವಾಸಮರಣ್ಯೇ ಭೃಶದಾರುಣೇ ॥

ಅನುವಾದ

ಅತ್ಯಂತ ಸುಕುಮಾರ ಮತ್ತು ಧರ್ಮದಲ್ಲಿ ದೃಢವಾದ ಮನಸ್ಸುಳ್ಳ ಶ್ರೀರಾಮನಿಗೆ ವನವಾಸಕ್ಕೆ ಕಳಿಸುವುದು ನಿನಗೆ ಹೇಗೆ ಒಳ್ಳೆಯದೆನಿಸಿದೆ? ಅಯ್ಯೋ! ನಿನ್ನ ಹೃದಯ ಬಹಳ ಕಠೋರವಾಗಿದೆ.॥23॥

ಮೂಲಮ್ - 24

ರೋಚಯಸ್ಯಭಿರಾಮಸ್ಯ ರಾಮಸ್ಯ ಶುಭಲೋಚನೇ ।
ತವ ಶುಶ್ರೂಷಮಾಣಸ್ಯ ಕಿಮರ್ಥಂ ವಿಪ್ರವಾಸನಮ್ ॥

ಅನುವಾದ

ಸುಂದರ ಕಣ್ಣುಗಳುಳ್ಳ ಕೈಕೆಯಿಯೇ! ಸದಾಕಾಲ ನಿನ್ನ ಸೇವೆ, ಶುಶ್ರೂಷೆಯಲ್ಲೇ ತೊಡಗಿರುವ ಆ ನಯ ನಾಭಿರಾಮ ಶ್ರೀರಾಮನನ್ನು ನಗರದಿಂದ ಹೊರಗಟ್ಟಲು ನೀನು ಏಕೆ ಇಚ್ಛಿಸುತ್ತಿರುವೆ.॥24॥

ಮೂಲಮ್ - 25

ರಾಮೋ ಹಿ ಭರತಾದ್ ಭೂಯಸ್ತವ ಶುಶ್ರೂಷತೇ ಸದಾ ।
ವಿಶೇಷಂ ತ್ವಯಿ ತಸ್ಮಾತ್ತು ಭರತಸ್ಯ ನ ಲಕ್ಷಯೇ ॥

ಅನುವಾದ

ಭರತನಿಗಿಂತ ಹೆಚ್ಚಾಗಿಯೇ ಶ್ರೀರಾಮನೇ ಸದಾ ನಿನ್ನ ಸೇವೆ ಮಾಡುತ್ತಿರುವುದನ್ನು ನಾನು ನೋಡುತ್ತಿರುವೆನು. ಭರತನು ಶ್ರೀರಾಮನಿಗಿಂತ ಹೆಚ್ಚು ನಿನ್ನ ಸೇವೆ ಮಾಡುವುದನ್ನು ನಾನು ನೋಡಿಯೇ ಇಲ್ಲ.॥25॥

ಮೂಲಮ್ - 26

ಶುಶ್ರೂಷಾಂ ಗೌರವಂ ಚೈವ ಪ್ರಮಾಣಂ ವಚನ ಕ್ರಿಯಾಮ್ ।
ಕಸ್ತು ಭೂಯಸ್ತರಂ ಕುರ್ಯಾದನ್ಯತ್ರ ಪುರುಷರ್ಷಭಾತ್ ॥

ಅನುವಾದ

ಗುರು-ಹಿರಿಯರ ಸೇವೆ ಮಾಡುವುದರಲ್ಲಿ, ಅವರನ್ನು ಗೌರವಿಸುವ, ಅವರ ಮಾತನ್ನು ಮನ್ನಿಸುವ ಹಾಗೂ ಅವರ ಆಜ್ಞೆಯನ್ನು ಕೂಡಲೇ ಪಾಲಿಸುವ ನರಶ್ರೇಷ್ಠ ಶ್ರೀರಾಮನಿಗಿಂತ ಮಿಗಿಲಾದವರು ಯಾರು ತಾನೇ ಇರುವನು.॥26॥

ಮೂಲಮ್ - 27

ಬಹೂನಾಂ ಸ್ತ್ರೀಸಹಸ್ರಾಣಾಂ ಬಹೂನಾಂ ಚೋಪಜೀವಿನಾಮ್ ।
ಪರಿವಾದೋಽಪವಾದೋ ವಾ ರಾಘವೇ ನೋಪಪದ್ಯತೇ ॥

ಅನುವಾದ

ನಮ್ಮ ಅರಮನೆಯಲ್ಲಿ ಸಾವಿರಾರು ಸ್ತ್ರೀಯರು ಮತ್ತು ಆಶ್ರಿತ ಸೇವಕರು ಇರುವರು; ಆದರೆ ಯಾರಿಂದಲೂ ಕೂಡ ಶ್ರೀರಾಮನ ಕುರಿತು ನಿಜವಾದ ಅಥವಾ ಸಟೆಯಾದ ಯಾವುದೇ ಅಪವಾದವನ್ನು ನಾನು ಕೇಳಿಲ್ಲ.॥27॥

ಮೂಲಮ್ - 28

ಸಾಂತ್ವಯನ್ ಸರ್ವಭೂತಾನಿ ರಾಮಃ ಶುದ್ಧೇನ ಚೇತಸಾ ।
ಗೃಹ್ಣಾತಿ ಮನುಜವ್ಯಾಘ್ರಃ ಪ್ರಿಯೈರ್ವಿಷಯವಾಸಿನಃ ॥

ಅನುವಾದ

ಪುರುಷಸಿಂಹ ಶ್ರೀರಾಮನು ಸಮಸ್ತ ಪ್ರಾಣಿಗಳನ್ನು ಶುದ್ಧ ಹೃದಯದಿಂದ ಸಾಂತ್ವನ ನೀಡುತ್ತಾ, ಪ್ರಿಯ ಆಚರಣೆಯಿಂದ ರಾಜ್ಯದ ಎಲ್ಲ ಪ್ರಜೆಗಳನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವನು.॥28॥

ಮೂಲಮ್ - 29

ಸತ್ಯೇನ ಲೋಕಾಂಜಯತಿ ದ್ವಿಜಾನ್ ದಾನೇನ ರಾಘವಃ ।
ಗುರೂನ್ಛುಶ್ರೂಷಯಾ ವೀರೋ ಧನುಷಾ ಯುಧಿ ಶಾತ್ರವಾನ್ ॥

ಅನುವಾದ

ವೀರ ಶ್ರೀರಾಮಚಂದ್ರನು ತನ್ನ ಸಾತ್ವಿಕ ಭಾವದಿಂದ ಸಮಸ್ತ ಜನರನ್ನು, ದಾನದಿಂದ ದ್ವಿಜರನ್ನು, ಸೇವೆಯಿಂದ ಗುರುಹಿರಿಯರನ್ನು, ಧನುರ್ಬಾಣಗಳಿಂದ ರಣರಂಗದಲ್ಲಿ ಶತ್ರುಗಳನ್ನು ಗೆದ್ದು ತನ್ನ ವಶಪಡಿಸಿಕೊಂಡಿರುವನು.॥29॥

ಮೂಲಮ್ - 30

ಸತ್ಯಂ ದಾನಂ ತಪಸ್ತ್ಯಾಗೋ ಮಿತ್ರತಾ ಶೌಚಮಾರ್ಜವಮ್ ।
ವಿದ್ಯಾ ಚ ಗುರುಶುಶ್ರೂಷಾ ಧ್ರುವಾಣ್ಯೇತಾನಿ ರಾಘವೇ ॥

ಅನುವಾದ

ಸತ್ಯ, ದಾನ, ತಪಸ್ಸು, ತ್ಯಾಗ, ಮಿತ್ರತೆ, ಪವಿತ್ರತೆ, ಸರಳತೆ, ವಿದ್ಯೆ ಮತ್ತು ಗುರು-ಶುಶ್ರೂಷೆ ಇವೆಲ್ಲ ಸದ್ಗುಣಗಳು ಶ್ರೀರಾಮನಲ್ಲಿ ಸ್ಥಿರವಾಗಿ ನೆಲೆಸಿವೆ.॥30॥

ಮೂಲಮ್ - 31

ತಸ್ಮಿನ್ನಾರ್ಜವಸಂಪನ್ನೇ ದೇವಿ ದೇವೋಪಮೇ ಕಥಮ್ ।
ಪಾಪಮಾಶಂಸಸೇ ರಾಮೇ ಮಹರ್ಷಿಸಮತೇಜಸಿ ॥

ಅನುವಾದ

ದೇವಿ! ಮಹರ್ಷಿಗಳಂತೆ ತೇಜಸ್ವಿಯಾದ, ದೇವತೆಗಳಂತೆ ಇರುವ ಶ್ರೀರಾಮನಿಗೆ ನೀನು ಏಕೆ ಅನಿಷ್ಟವನ್ನು ಮಾಡಲು ಬಯಸುತ್ತಿರುವೆ.॥31॥

ಮೂಲಮ್ - 32

ನ ಸ್ಮರಾಮ್ಯಪ್ರಿಯಂ ವಾಕ್ಯಂ ಲೋಕಸ್ಯ ಪ್ರಿಯವಾದಿನಃ ।
ಸ ಕಥಂ ತ್ವತ್ಕೃತೇ ರಾಮಂ ವಕ್ಷ್ಯಾಮಿ ಪ್ರಿಯ ಮಪ್ರಿಯಮ್ ॥

ಅನುವಾದ

ಶ್ರೀರಾಮನು ಎಲ್ಲ ಜನರಲ್ಲಿ ಪ್ರಿಯವಾಗಿ ಮಾತನಾಡುವನು. ಅವನು ಎಂದೂ ಯಾರಲ್ಲಿಯೂ ಅಪ್ರಿಯವಾಗಿ ಮಾತನಾಡಿದುದು ನನಗೆ ನೆನಪಿಲ್ಲ. ಇಂತಹ ಸರ್ವಪ್ರಿಯ ರಾಮನಲ್ಲಿ ನಾನು ಇಂತಹ ಅಪ್ರಿಯ ಮಾತನ್ನು ಹೇಗೆ ಹೇಳಲಿ.॥32॥

ಮೂಲಮ್ - 33

ಕ್ಷಮಾ ಯಸ್ಮಿಂಸ್ತಪಸ್ತ್ಯಾಗಃ ಸತ್ಯಂ ಧರ್ಮಃ ಕೃತಜ್ಞತಾ ।
ಅಪ್ಯಹಿಂಸಾ ಚ ಭೂತಾನಾಂ ತಮೃತೇ ಕಾ ಗತಿರ್ಮಮ ॥

ಅನುವಾದ

ಕ್ಷಮೆ, ತಪಸ್ಸು, ತ್ಯಾಗ, ಸತ್ಯ, ಧರ್ಮ, ಕೃತಜ್ಞತೆ ಮತ್ತು ಸಮಸ್ತ ಜೀವಿಗಳ ಕುರಿತು ದಯೆ ತುಂಬಿರುವ ಶ್ರೀರಾಮನಿಲ್ಲದ ನನ್ನ ಗತಿ ಏನಾದೀತು.॥33॥

ಮೂಲಮ್ - 34

ಮಮ ವೃದ್ಧಸ್ಯ ಕೈಕೇಯಿ ಗತಾಂತಸ್ಯ ತಪಸ್ವಿನಃ ।
ದೀನಂ ಲಾಲಪ್ಯಮಾನಸ್ಯಕಾರುಣ್ಯಂ ಕರ್ತುಮರ್ಹಸಿ ॥

ಅನುವಾದ

ಕೈಕೇಯಿ! ನಾನು ಮುದುಕನಾಗಿದ್ದೇನೆ. ಸಾವಿನ ಅಂಚಿನಲ್ಲಿ ಕುಳಿತಿರುವೆನು. ನನ್ನ ಸ್ಥಿತಿ ಶೋಚನೀಯವಾಗಿದೆ. ನಾನು ದೀನನಾಗಿ ನಿನ್ನ ಮುಂದೆ ಅಂಗಲಾಚುತ್ತಿದ್ದೇನೆ. ನಿನಗೆ ನನ್ನ ಮೇಲೆ ದಯೆ ಏಕೆ ಉಂಟಾಗುತ್ತಿಲ್ಲ.॥34॥

ಮೂಲಮ್ - 35

ಪೃಥಿವ್ಯಾಂ ಸಾಗರಾಂತಾಯಾಂ ಯತ್ಕಿಂಚಿದಧಿಗಮ್ಯತೇ ।
ತತ್ಸರ್ವಂ ತವ ದಾಸ್ಯಾಮಿ ಮಾ ಚತ್ವಂ ಮನ್ಯುರಾವಿಶ ॥

ಅನುವಾದ

ಸಾಗರಾಂತವಾದ ನನ್ನ ಈ ರಾಜ್ಯದಲ್ಲಿ ದೊರೆಯುವುದೆಲ್ಲವನ್ನೂ ನಿನಗೆ ಕೊಡುತ್ತೇನೆ. ಆದರೆ ಇಂತಹ ದುರಾಗ್ರಹದಿಂದ ನನ್ನನ್ನು ಮೃತ್ಯುಮುಖದಲ್ಲಿ ನೂಕಬೇಡ.॥35॥

ಮೂಲಮ್ - 36

ಅಂಜಲಿಂ ಕುರ್ಮಿ ಕೈಕೇಯಿ ಪಾದೌ ಚಾಪಿಸ್ಪೃಶಾಮಿ ತೇ ।
ಶರಣಂ ಭವ ರಾಮಸ್ಯ ಮಾಧರ್ಮೋ ಮಾಮಿಹ ಸ್ಪೃಶೇತ್ ॥

ಅನುವಾದ

ಕೇಕಯ ನಂದನೀ! ನಾನು ಕೈಮುಗಿದು, ನಿನ್ನ ಕಾಲಿಗೆ ಬೀಳುತ್ತೇನೆ. ನೀನು ರಾಮನಿಗೆ ಶರಣಳಾಗು, ಅವನನ್ನು ರಕ್ಷಿಸು. ಪ್ರತಿಜ್ಞಾವಚನ ನಡೆಸಿಕೊಡಲು ಹೋಗಿ ಜ್ಯೇಷ್ಠ ವ್ಯತಿಕ್ರಮ ಎಂಬ ಅಧರ್ಮಕ್ಕೆ ನಾನು ತುತ್ತಾಗದಿರಲಿ.॥36॥

ಮೂಲಮ್ - 37

ಇತಿ ದುಃಖಾಭಿಸಂತಪ್ತಂ ವಿಲಪಂತಮಚೇತನಮ್ ।
ಘೂರ್ಣಮಾನಂ ಮಹಾರಾಜಂ ಶೋಕೇನ ಸಮಭಿಪ್ಲುತಮ್ ॥

ಮೂಲಮ್ - 38

ಪಾರಂ ಶೋಕಾರ್ಣವಸ್ಯಾಶು ಪ್ರಾರ್ಥಯಂತಂ ಪುನಃ ಪುನಃ ।
ಪ್ರತ್ಯುವಾಚಾಥ ಕೈಕೇಯೀ ರೌದ್ರಾರೌದ್ರತರಂ ವಚಃ ॥

ಅನುವಾದ

ಮಹಾರಾಜಾ ದಶರಥನು ಈ ಪ್ರಕಾರ ದುಃಖದಿಂದ ಸಂತಪ್ತನಾಗಿ ವಿಲಾಪಿಸುತ್ತಿದ್ದನು. ಅವನು ಆಗಾಗ ಎಚ್ಚರ ತಪ್ಪುತ್ತಿದ್ದನು. ತಲೆ ತಿರುಗುತ್ತಾ ಇದ್ದು, ಶೋಕಮಗ್ನನಾಗಿ, ಶೋಕಸಾಗರದಿಂದ ಪಾರಾಗಿಹೋಗಲು ಪದೇ ಪದೇ ಬೇಡುತ್ತಿದ್ದರೂ ಕೈಕೆಯಿಯ ಹೃದಯ ಕರಗಲಿಲ್ಲ. ಅದು ಇನ್ನೂ ಭೀಷಣರೂಪತಳೆದು ಅತ್ಯಂತ ಕಠೋರ ಮಾತಿನಿಂದ ಕೈಕೆಯಿಯು ಈ ಪ್ರಕಾರ ಉತ್ತರಿಸಿದಳು .॥37-38॥

ಮೂಲಮ್ - 39

ಯದಿ ದತ್ತ್ವಾ ವರೌ ರಾಜನ್ ಪುನಃ ಪ್ರತ್ಯನುತಪ್ಯಸೇ ।
ಧಾರ್ಮಿಕತ್ವಂ ಕಥಂ ವೀರ ಪೃಥಿವ್ಯಾಂ ಕಥಯಿಷ್ಯಸಿ ॥

ಅನುವಾದ

ಮಹಾರಾಜರೇ! ಎರಡು ವರಗಳನ್ನು ಕೊಟ್ಟು ನೀವು ಮತ್ತೆ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿರುವಿರಲ್ಲ! ವೀರ ಅರಸರೇ! ಈ ಭೂಮಂಡಲದಲ್ಲಿ ನಾನು ಧಾರ್ಮಿಕನು ಎಂದು ಹೇಗೆ ಹೇಳಿಸಿಕೊಳ್ಳುವೆ.॥39॥

ಮೂಲಮ್ - 40

ಯದಾ ಸಮೇತಾ ಬಹವಸ್ತ್ವಯಾ ರಾಜರ್ಷಯಃ ಸಹ ।
ಕಥಯಿಷ್ಯಂತಿ ಧರ್ಮಜ್ಞ ತತ್ರ ಕಿಂ ಪ್ರತಿವಕ್ಷ್ಯಸಿ ॥

ಅನುವಾದ

ಧರ್ಮಜ್ಞ ಮಹಾರಾಜರೇ! ಅನೇಕ ರಾಜರ್ಷಿಗಳು ಒಂದೆಡೆ ಸೇರಿ ನನಗೆ ಕೊಟ್ಟ ವರಗಳ ಕುರಿತು ನಿಮ್ಮೊಡನೆ ಮಾತನಾಡಿದಾಗ ನೀವು ಅವರಿಗೆ ಏನು ಉತ್ತರಿಸುವಿರಿ.॥40॥

ಮೂಲಮ್ - 41

ಯಸ್ಯಾಃ ಪ್ರಸಾದೇ ಜೀವಾಮಿ ಯಾ ಚ ಮಾಮಭ್ಯಪಾಲಯತ್ ।
ತಸ್ಯಾಃ ಕೃತಾ ಮಯಾ ಮಿಥ್ಯಾ ಕೈಕೇಯ್ಯಾ ಇತಿ ವಕ್ಷ್ಯಸಿ ॥

ಅನುವಾದ

ಯಾರ ಪ್ರಸಾದದಿಂದ ನಾನು ಬದುಕಿರುವೆನೋ, ಯಾರು ನನ್ನನ್ನು ದೊಡ್ಡ ಸಂಕಟದಿಂದ ರಕ್ಷಿಸಿರುವಳೋ, ಆ ಕೈಕೆಯಿಗೆ ವರ ಕೊಡುವಂತೆ ಮಾಡಿದ ಪ್ರತಿಜ್ಞೆಯನ್ನು ನಾನು ಸುಳ್ಳಾಗಿಸಿದೆ ಎಂದು ಹೇಳುವಿರಾ.॥41॥

ಮೂಲಮ್ - 42

ಕಿಲ್ಬಿಷಂ ತ್ವಂ ನರೇಂದ್ರಾಣಾಂ ಕರಿಷ್ಯಸಿ ನರಾಧಿಪ ।
ಯೋ ದತ್ತ್ವಾ ವರಮದ್ಯೈವ ಪುನರನ್ಯಾನಿ ಭಾಷಸೇ ॥

ಅನುವಾದ

ಮಹಾರಾಜರೇ! ವರವನ್ನು ಕೊಡುವೆ ಎಂದು ಇಂದು ಹೇಳಿ ಮತ್ತೆ ಅದಕ್ಕೆ ವಿಪರೀತವಾದ ಮಾತನಾಡಿ ತಮ್ಮ ಕುಲದ ರಾಜರಿಗೆ ಕಲಂಕ ಹಚ್ಚಿರುವಿರಲ್ಲ.॥42॥

ಮೂಲಮ್ - 43

ಶೈಬ್ಯಃ ಶ್ಯೇನಕಪೋತೀಯೇಸ್ವಮಾಂಸಂ ಪಕ್ಷಿಣೇ ದದೌ ।
ಅಲರ್ಕಶ್ಚಕ್ಷುಷೀ ದತ್ತ್ವಾ ಜಗಾಮ ಗತಿಮುತ್ತಮಾಮ್ ॥

ಅನುವಾದ

ರಾಜಾ ಶೈಬ್ಯನು ಗಿಡುಗ ಮತ್ತು ಪಾರಿವಾಳದ ಜಗಳದಲ್ಲಿ (ಪಾರಿವಾಳದ ಪ್ರಾಣಗಳನ್ನು ಉಳಿಸಲು ಮಾಡಿದ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು) ಗಿಡುಗನಿಗೆ ತನ್ನ ಶರೀರದ ಮಾಂಸವನ್ನೇ ಕತ್ತರಿಸಿಕೊಟ್ಟಿದ್ದನು. ಹೀಗೆ ಅಲರ್ಕರಾಜನು (ಓರ್ವ ಕುರುಡ ಬ್ರಾಹ್ಮಣನಿಗೆ) ತನ್ನ ಎರಡು ಕಣ್ಣುಗಳನ್ನು ದಾನಮಾಡಿ ಪರಮೋತ್ತಮ ಗತಿಯನ್ನು ಪಡೆದಿದ್ದನು.॥43॥

ಮೂಲಮ್ - 44

ಸಾಗರಃ ಸಮಯಂ ಕೃತ್ವಾ ನ ವೇಲಾಮತಿವರ್ತತೇ ।
ಸಮಯಂ ಮಾನೃತಂ ಕಾರ್ಷೀಃ ಪೂರ್ವವೃತ್ತಮನುಸ್ಮರನ್ ॥

ಅನುವಾದ

ದೇವತೆಗಳ ಮುಂದೆ ಸಮುದ್ರವು ಮೇರೆ ಮೀರದಂತೆ ಮಾಡಿದ ಪ್ರತಿಜ್ಞೆಯನ್ನು ಇಂದಿನವರೆವಿಗೂ ಮೀರುವುದಿಲ್ಲ. ನೀವೂ ಕೂಡ ಹಿಂದಿನ ಮಹಾಪುರುಷರಂತೆ ವರ್ತಿಸಿದುದನ್ನು ಗಮನದಲ್ಲಿಟ್ಟು ತನ್ನ ಪ್ರತಿಜ್ಞೆಯನ್ನು ಸುಳ್ಳಾಗಿಸಬೇಡಿರಿ.॥44॥

ಮೂಲಮ್ - 45

ಸ ತ್ವಂ ಧರ್ಮಂ ಪರಿತ್ಯಜ್ಯ ರಾಮಂ ರಾಜ್ಯೇಭಿಷಿಚ್ಯ ಚ ।
ಸಹ ಕೌಸಲ್ಯಯಾ ನಿತ್ಯಂ ರಂತುಮಿಚ್ಛಸಿ ದುರ್ಮತೇ ॥

ಅನುವಾದ

ಆದರೆ ನೀವು ನನ್ನ ಮಾತನ್ನು ಏಕೆ ಕೇಳುತ್ತಿದ್ದೀರಿ? ದುರ್ಬುದ್ಧಿ ನರೇಶ! ನೀವಾದರೋ ಧರ್ಮಕ್ಕೆ ತಿಲಾಂಜಲಿಯನಿತ್ತು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ ರಾಣಿ ಕೌಸಲ್ಯೆಯೊಂದಿಗೆ ಸುಖಿಸಲು ಬಯಸುತ್ತಿರುವಿರಿ.॥45॥

ಮೂಲಮ್ - 46

ಭವತ್ವಧರ್ಮೋ ಧರ್ಮೋ ವಾ ಸತ್ಯಂ ವಾ ಯದಿ ವಾನೃತಮ್ ।
ಯತ್ತ್ವಯಾ ಸಂಶ್ರುತಂ ಮಹ್ಯಂ ತಸ್ಯ ನಾಸ್ತಿ ವ್ಯತಿಕ್ರಮಃ ॥

ಅನುವಾದ

ಈಗ ಧರ್ಮವಿರಲಿ ಇಲ್ಲವೇ ಅಧರ್ಮವಿರಲಿ, ಸುಳ್ಳು ಇರಲಿ, ನಿಜವಿರಲಿ, ಯಾವ ಮಾತಿಗಾಗಿ ನನ್ನಲ್ಲಿ ಪ್ರತಿಜ್ಞೆ ಮಾಡಿರುವಿರೋ ಅದರಲ್ಲಿ ಯಾವುದೇ ಪರಿವರ್ತನೆ ಆಗಲಾರದು.॥46॥

ಮೂಲಮ್ - 47

ಅಹಂ ಹಿ ವಿಷಮದ್ಯೈವ ಪೀತ್ವಾ ಬಹು ತವಾಗ್ರತಃ ।
ಪಶ್ಯತಸ್ತೇ ಮರಿಷ್ಯಾಮಿ ರಾಮೋ ಯದ್ಯಭಿಷಿಚ್ಯತೇ ॥

ಅನುವಾದ

ಶ್ರೀರಾಮನ ಪಟ್ಟಾಭಿಷೇಕ ನಡೆದರೆ ನಾನು ನಿಮ್ಮ ಮುಂದೆಯೇ, ನೀವು ನೋಡುತ್ತಿರುವಂತೆ ಇಂದು ತೀಕ್ಷ್ಣವಾದ ವಿಷವನ್ನು ಸೇವಿಸುವೆನು.॥47॥

ಮೂಲಮ್ - 48

ಏಕಾಹಮಪಿ ಪಶ್ಯೇಯಂ ಯದ್ಯಹಂ ರಾಮಮಾತರಮ್ ।
ಅಂಜಲಿಂ ಪ್ರತಿಗೃಹ್ಣಂತೀಂ ಶ್ರೇಯೋ ನನು ಮೃತಿರ್ಮಮ ॥

ಅನುವಾದ

ಒಂದು ದಿನವಾದರೂ ರಾಮಮಾತೆ ಕೌಸಲ್ಯೆಯ ಮುಂದೆ ರಾಜಮಾತೆ ಎಂದು ಇತರರು ಕೈಮುಗಿದು ವಂದಿಸುವುದನ್ನು ನೋಡಿದರೆ, ಆಗಲೇ ನಾನು ಸಾಯುವುದು ಒಳ್ಳೆಯದೆಂದು ತಿಳಿಯುತ್ತೇನೆ.॥48॥

ಮೂಲಮ್ - 49

ಭರತೇನಾತ್ಮನಾ ಚಾಹಂ ಶಪೇ ತೇ ಮನುಜಾಧಿಪ ।
ಯಥಾ ನಾನ್ಯೇನ ತುಷ್ಯೇಯಮೃತೇ ರಾಮವಿವಾಸನಾತ್ ॥

ಅನುವಾದ

ಶ್ರೀರಾಮನು ಈ ದೇಶದಿಂದ ಹೊರಟು ವನಕ್ಕೆ ಹೋಗುವುದಲ್ಲದೆ ಬೇರೆ ಯಾವುದೇ ವರದಿಂದ ನನಗೆ ಸಂತೋಷ ಆಗಲಾರದೆಂದು. ನಿಮ್ಮ ಮುಂದೆ ಭರತನ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ.॥49॥

ಮೂಲಮ್ - 50

ಏತಾವದುಕ್ತ್ವಾ ವಚನಂ ಕೈಕೇಯೀ ವಿರರಾಮ ಹ ।
ವಿಲಪಂತಂ ಚ ರಾಜಾನಂ ನ ಪ್ರತಿವ್ಯಾಜಹಾರ ಸಾ ॥

ಅನುವಾದ

ಇಷ್ಟು ಹೇಳಿ ಕೈಕೆಯಿಯು ಸುಮ್ಮನಾದಳು. ರಾಜನು ಬಹಳ ಅಳುತ್ತಾ ಕೊರಗಿದನು; ಆದರೆ ಆಕೆಯು ಅವನ ಯಾವುದೇ ಮಾತಿಗೆ ಉತ್ತರಿಸಲಿಲ್ಲ.॥50॥

ಮೂಲಮ್ - 51

ಶ್ರುತ್ವಾ ತು ರಾಜಾ ಕೈಕೇಯ್ಯಾ ವಾಕ್ಯಂ ಪರಮಶೋಭನಮ್ ।
ರಾಮಸ್ಯ ಚ ವನೇ ವಾಸಮೈಶ್ಚರ್ಯಂ ಭರತಸ್ಯ ಚ ॥

ಮೂಲಮ್ - 52

ನಾಭ್ಯಭಾಷತ ಕೈಕೇಯೀಂ ಮುಹೂರ್ತಂ ವ್ಯಾಕುಲೇಂದ್ರಿಯಃ ।
ಪ್ರೈಕ್ಷತಾನಿಮಿಷೋ ದೇವೀಂ ಪ್ರಿಯಾಮಪ್ರಿಯವಾದಿನೀಮ್ ॥

ಅನುವಾದ

ಶ್ರೀರಾಮನಿಗೆ ವನವಾಸ ಮತ್ತು ಭರತನಿಗೆ ಪಟ್ಟಾಭಿಷೇಕ ಆಗಲೇಬೇಕು ಎಂದು ಕೈಕೆಯಿಯು ಹೇಳಿದ ಪರಮ ಅಮಂಗಲಕರ ಮಾತನ್ನು ಕೇಳಿ ರಾಜನ ಎಲ್ಲ ಇಂದ್ರಿಯಗಳು ವ್ಯಾಕುಲಗೊಂಡವು. ಅವನು ಒಂದು ಮುಹೂರ್ತ ಏನನ್ನೂ ಮಾತನಾಡಲಿಲ್ಲ. ಹೀಗೆ ಅಪ್ರಿಯವಾಗಿ ನುಡಿಯುವ ಪ್ರಿಯ ರಾಣಿಯ ಕಡೆಗೆ ಕೇವಲ ನೆಟ್ಟ ನೋಟದಿಂದ ನೋಡುತ್ತಲೇ ಇದ್ದನು.॥51-52॥

ಮೂಲಮ್ - 53

ತಾಂ ಹಿ ವಜ್ರಸಮಾಂ ವಾಚಮಾಕರ್ಣ್ಯ ಹೃದಯಾಪ್ರಿಯಾಮ್ ।
ದುಃಖಶೋಕಮಯೀಂ ಶ್ರುತ್ವಾ ರಾಜಾ ನ ಸುಖಿತೋಭವತ್ ॥

ಅನುವಾದ

ಮನಸ್ಸಿಗೆ ಅಪ್ರಿಯವಾದ ಕೈಕೆಯಿಯ ಆ ವಜ್ರದಂತಹ ಕಠೋರ ಹಾಗೂ ದುಃಖಶೋಕಮಯ ವಾಣಿಯನ್ನು ಕೇಳಿ ರಾಜನಿಗೆ ಬಹಳ ದುಃಖವಾಯಿತು. ಅವನ ಸುಖ-ಶಾಂತಿ ದೂರವಾಯಿತು.॥53॥

ಮೂಲಮ್ - 54

ಸ ದೇವ್ಯಾ ವ್ಯವಸಾಯಂ ಚ ಘೋರಂ ಚ ಶಪಥಂ ಕೃತಮ್ ।
ಧ್ಯಾತ್ವಾ ರಾಮೇತಿ ನಿಃಶ್ವಸ್ಯ ಚ್ಛಿನ್ನಸ್ತರುರಿವಾಪತತ್ ॥

ಅನುವಾದ

ದೇವೀ ಕೈಕೆಯ ಆ ಘೋರ ನಿಶ್ಚಯ ಮತ್ತು ತಾನು ಮಾಡಿದ ಶಪಥವನ್ನು ನೆನೆಯುತ್ತಲೇ ಅವನು ‘ಹಾ ರಾಮಾ!’ ಎಂದು ಹೇಳುತ್ತಾ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಬುಡ ಕಡಿದ ಮರದಂತೆ ಕುಸಿದುಬಿದ್ದನು.॥54॥

ಮೂಲಮ್ - 55

ನಷ್ಟಚಿತ್ತೋ ಯಥೋನ್ಮತ್ತೋ ವಿಪರೀತೋ ಯಥಾತುರಃ ।
ಹೃತತೇಜಾ ಯಥಾ ಸರ್ಪೋ ಬಭೂವ ಜಗತೀಪತಿಃ ॥

ಅನುವಾದ

ಮೂರ್ಛಿತನಂತಾಗಿ ಅವನು ಉನ್ಮಾದಗ್ರಸ್ತನಂತೆ ಕಂಡು ಬರುತ್ತಿದ್ದನು. ಅವನ ಪ್ರಕೃತಿ ವಿಪರೀತವಾಗಿತ್ತು. ಅವನು ರೋಗಿಯಂತೆ ಕಾಣುತ್ತಿದ್ದನು. ಈ ಪ್ರಕಾರ ದಶರಥನು ಮಂತ್ರದಿಂದ ಬಂಧಿತವಾದ ಸರ್ಪದಂತೆ ನಿಶ್ಚೇಷ್ಟಿತನಂತಾದನು.॥55॥

ಮೂಲಮ್ - 56

ದೀನಯಾಽಽತುರಯಾ ವಾಚಾ ಇತಿ ಹೋವಾಚ ಕೇಕಯೀಮ್ ।
ಅನರ್ಥಮಿವಮರ್ಥಾಭಂ ಕೇನ ತ್ವಮುಪದೇಶಿತಾ ॥

ಅನುವಾದ

ಅನಂತರ ರಾಜನು ದೀನನಾಗಿ ಕರುಣಾಸ್ವರದಿಂದ ಕೈಕೆಯ ಬಳಿ ಹೇಳಿದನು - ಎಲೆಗೆ! ನಿನಗೆ ಅನರ್ಥವೇ ಲಾಭದಾಯಕವಾಗಿ ಕಂಡುಬರುತ್ತಿದೆ, ಯಾರು ನಿನಗೆ ಈ ಉಪದೇಶ ಮಾಡಿದರು.॥56॥

ಮೂಲಮ್ - 57

ಭೂತೋಪಹತಚಿತ್ತೇವ ಬ್ರುವಂತೀ ಮಾಂ ನ ಲಜ್ಜಸೇ ।
ಶೀಲವ್ಯಸನಮೇತತ್ ತೆ ನಾಭಿಜಾನಾಮ್ಯಹಂ ಪುರಾ ॥

ಅನುವಾದ

ನಿನ್ನ ಚಿತ್ತಕ್ಕೆ ಯಾವುದೆ ಭೂತ ಬಡೆದಂತೆ ಕಾಣುತ್ತದೆ. ಪಿಶಾಚಿ ಹಿಡಿದ ಹೆಣ್ಣಿನಂತೆ ನನ್ನ ಎದುರಿಗೆ ಹೀಗೆ ಮಾತನಾಡಲು ನಿನಗೆ ನಾಚಿಕೆಯೂ ಆಗುವುದಿಲ್ಲವೇ? ನಿನ್ನ ಕುಲಾಂಗನೋಚಿತವಾದ ಶೀಲವು ಈ ರೀತಿ ನಾಶವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ.॥57॥

ಮೂಲಮ್ - 58

ಬಾಲಾಯಾಸ್ತತ್ತ್ವಿದಾನೀಂ ತೇ ಲಕ್ಷಯೇ ವಿಪರೀತವತ್ ।
ಕುತೋ ವಾ ತೇ ಭಯಂ ಜಾತಂ ಯಾ ತ್ವಮೇವಂವಿಧಂ ವರಮ್ ॥

ಮೂಲಮ್ - 59

ರಾಷ್ಟ್ರೇ ಭರತಮಾಸೀನಂ ವೃಣೀಷೇ ರಾಘವಂ ವನೇ ।
ವಿರಮೈತೇನ ಭಾವೇನ ತ್ವಮೇತೇನಾನೃತೇನ ಚ ॥

ಅನುವಾದ

ಬಾಲ್ಯದಲ್ಲಿ ಇದ್ದ ನಿನ್ನ ಶೀಲವು ಈಗ ವಿಪರೀತವಾಗಿ ನಾನು ನೋಡುತ್ತಿದ್ದೇನೆ. ಇಂತಹ ವರವನ್ನು ಕೇಳಲು ನಿನಗೆ ಯಾವ ಮಾತಿನ ಭಯ ಉಂಟಾಗಿದೆ? ಭರತನು ರಾಜ್ಯ ಸಿಂಹಾಸನದಲ್ಲಿ ಕುಳಿತಿರಬೇಕು ಮತ್ತು ಶ್ರೀರಾಮನು ಕಾಡಿನಲ್ಲಿ ಇರಬೇಕೆಂದು ತಾನೇ ಬೇಡುತ್ತಿರುವುದು. ಇಂತಹ ಅನಿಷ್ಟವಾದ ದುಷ್ಟಭಾವವನ್ನು ಈಗಲಾದರೂ ತ್ಯಜಿಸು.॥58-59॥

ಮೂಲಮ್ - 60

ಯದಿ ಭರ್ತುಃ ಪ್ರಿಯಂ ಕಾರ್ಯಂ ಲೋಕಸ್ಯ ಭರತಸ್ಯ ಚ ।
ನೃಶಂಸೇ ಪಾಪಸಂಕಲ್ಪೇ ಕ್ಷುದ್ರೇ ದುಷ್ಕೃತಕಾರಿಣಿ ॥

ಅನುವಾದ

ಕ್ರೂರ ಸ್ವಭಾವ ಮತ್ತು ಪಾಪಪೂರ್ಣ ವಿಚಾರವುಳ್ಳ ದುರಾಚಾರಿಯಾದ ಹೆಣ್ಣೇ! ನೀನು ನಿನ್ನ ಪತಿಯ, ಇಡೀ ಜಗತ್ತಿನ ಮತ್ತು ಭರತನ ಒಳಿತನ್ನು ಮಾಡಬೇಕೆಂದು ಬಯಸುವೆಯಾದರೆ ಈ ದೂಷಿತ ಸಂಕಲ್ಪವನ್ನು ತ್ಯಜಿಸು.॥60॥

ಮೂಲಮ್ - 61

ಕಿಂ ನು ದುಃಖಮಲೀಕಂ ವಾ ಮಯಿ ರಾಮೇ ಚ ಪಶ್ಯಸಿ ।
ನ ಕಥಂಚಿದೃತೇ ರಾಮಾದ್ ಭರತೋ ರಾಜ್ಯಮಾವಸೇತ್ ॥

ಅನುವಾದ

ನೀನು ನನ್ನಲ್ಲಿ ಅಥವಾ ಶ್ರೀರಾಮನಲ್ಲಿ ಯಾವ ದುಃಖದಾಯಕ ಅಥವಾ ಅಪ್ರಿಯ ವರ್ತನೆಯನ್ನು ನೋಡಿ ಇಂತಹ ನೀಚ ಕರ್ಮವನ್ನು ಮಾಡಲು ಹೊರಟಿರುವೆ? ಶ್ರೀರಾಮನನ್ನು ಬಿಟ್ಟು ಭರತನು ಯಾವ ರೀತಿಯಿಂದಲೂ ರಾಜ್ಯವನ್ನು ಸ್ವೀಕರಿಸಲಾರನು.॥61॥

ಮೂಲಮ್ - 62½

ರಾಮಾದಪಿ ಹಿ ತಂ ಮನ್ಯೇ ಧರ್ಮತೋ ಬಲವತ್ತರಮ್ ।
ಕಥಂ ದ್ರಕ್ಷ್ಯಾಮಿ ರಾಮಸ್ಯ ವನಂ ಗಚ್ಛೇತಿ ಭಾಷಿತೇ ॥
ಮುಖವರ್ಣಂ ವಿವರ್ಣಂ ತು ಯಥೈವೇಂದುಮುಪಪ್ಲುತಮ್ ।

ಅನುವಾದ

ಏಕೆಂದರೆ ನಾನು ತಿಳಿದಂತೆ ಧರ್ಮಪಾಲನೆಯ ದೃಷ್ಟಿಯಿಂದ ಭರತನು ಶ್ರೀರಾಮನಿಗಿಂತಲೂ ಶ್ರೇಷ್ಠನಾಗಿದ್ದಾನೆ. ರಾಮಾ! ನೀನು ಕಾಡಿಗೆ ಹೋಗು ಎಂದು ಹೇಳಿದಾಗ ಅವನ ಮುಖವು ರಾಹುಗ್ರಹಸ್ತ ಚಂದ್ರನಂತೆ ಮಂಕಾಗಿರುವಾಗ ನಾನು ಹೇಗೆ ಅವನ ಆ ಬಾಡಿದ ಮುಖವನ್ನು ನೋಡಬಲ್ಲೆನು.॥62½॥

ಮೂಲಮ್ - 63½

ತಾಂ ತು ಮೇ ಸುಕೃತಾಂ ಬುದ್ಧಿಂ ಸುಹೃದ್ಭಿಃ ಸಹ ನಿಶ್ಚಿತಾಮ್ ॥
ಕಥಂ ದ್ರಕ್ಷ್ಯಾಮ್ಯಪಾವೃತ್ತಾಂ ಪರೈರಿವ ಹತಾಂ ಚಮೂಮ್ ।

ಅನುವಾದ

ಶ್ರೀರಾಮನ ಪಟ್ಟಾಭಿಷೇಕದ ನಿಶ್ಚಯವನ್ನು ನಾನು ಸುಹೃದರೊಂದಿಗೆ ವಿಚಾರ ವಿನಿಮಯ ಮಾಡಿರುವೆನು. ನನ್ನ ಈ ಬುದ್ಧಿ ಶುಭಕರ್ಮದಲ್ಲಿ ಪ್ರವೃತ್ತವಾಗಿದೆ. ಈಗ ನಾನು ಅದನ್ನು, ಶತ್ರುಗಳಿಂದ ಪರಾಜಿತವಾದ ಸೈನ್ಯದಂತೆ ತಿರುಗು ಮುರುಗಾಗುವುದನ್ನು ಹೇಗೆ ನೋಡಲಿ.॥63½॥

ಮೂಲಮ್ - 64½

ಕಿಂ ಮಾಂ ವಕ್ಷ್ಯಂತಿ ರಾಜಾನೋ ನಾನಾದಿಗ್ಭ್ಯಃ ಸಮಾಗತಾಃ ॥
ಬಾಲೋ ಬತಾಯಮೈಕ್ಷ್ವಾಕಶ್ಚಿರಂ ರಾಜ್ಯಮಕಾರಯತ್ ।

ಅನುವಾದ

ನಾನಾ ದೇಶಗಳಿಂದ ಬಂದ ರಾಜರು ನನ್ನನ್ನು ಕುರಿತು - ‘ಈ ಮೂಢ ಇಕ್ಷ್ವಾಕುವಂಶೀ ರಾಜನು ಹೇಗೆ ಇಷ್ಟು ದೀರ್ಘಕಾಲ ರಾಜ್ಯವಾಳಿದನು?’ ಎಂದು ಬೇಸರಗೊಂಡು ಹೇಳುವರು.॥64½॥

ಮೂಲಮ್ - 65

ಯದಾ ಹಿ ಬಹವೋ ವೃದ್ಧಾ ಗುಣವಂತೋ ಬಹುಶ್ರುತಾಃ ॥

ಮೂಲಮ್ - 66

ಪರಿಪ್ರಕ್ಷ್ಯಂತಿ ಕಾಕುತ್ಸ್ಥಂ ವಕ್ಷ್ಯಾಮೀಹ ಕಥಂ ತದಾ ।
ಕೈಕೇಯ್ಯಾ ಕ್ಲಿಶ್ಯಮಾನೇನ ಪುತ್ರಃ ಪ್ರವ್ರಾಜಿತೋ ಮಯಾ ॥

ಅನುವಾದ

ಅನೇಕ ಬಹುಶ್ರುತ-ಗುಣವಂತ ಹಾಗೂ ವೃದ್ಧರು ಬಂದು ಶ್ರೀರಾಮನು ಎಲ್ಲಿ? ಎಂದು ನನ್ನಲ್ಲಿ ಕೇಳಿದರೆ ಆಗ ನಾನು ಅವರಲ್ಲಿ ಕೈಕೆಯಿಯ ಒತ್ತಡದಿಂದ ನಾನು ನನ್ನ ಮಗನನ್ನು ಕಾಡಿಗೆ ಕಳಿಸಿದೆ ಎಂದು ಹೇಗೆ ಹೇಳಲಿ.॥65-66॥

ಮೂಲಮ್ - 67½

ಯದಿ ಸತ್ಯಂ ಬ್ರವೀಮ್ಯೇತತ್ತದಸತ್ಯಂ ಭವಿಷ್ಯತಿ ।
ಕಿಂ ಮಾಂ ವಕ್ಷ್ಯತಿ ಕೌಸಲ್ಯಾ ರಾಘವೇ ವನಮಾಸ್ಥಿತೇ ॥
ಕಿಂ ಚೈನಾಂ ಪ್ರತಿವಕ್ಷ್ಯಾಮಿ ಕೃತ್ವಾ ವಿಪ್ರಿಯಮೀದೃಶಮ್ ।

ಅನುವಾದ

ಶ್ರೀರಾಮನಿಗೆ ವನವಾಸಕ್ಕೆ ಕಳಿಸಿ ನಾನು ಸತ್ಯವನ್ನು ಪಾಲಿಸಿದೆ ಎಂದು ಹೇಳಿದರೆ, ಮೊದಲು ಅವನಿಗೆ ರಾಜ್ಯವನ್ನು ಕೊಡುವೆ ಎಂದು ಹೇಳಿದ ಮಾತು ಸುಳ್ಳಾಗಲಿಕ್ಕಿಲ್ಲವೇ? ಶ್ರೀರಾಮನು ಕಾಡಿಗೆ ಹೋದರೆ ಕೌಸಲ್ಯೆಯು ನನಗೆ ಏನು ಹೇಳುವಳು? ಆಕೆಗೆ ಇಂತಹ ಮಹಾ ಅಪಕಾರಮಾಡಿ ನಾನು ಏನೆಂದು ಉತ್ತರಿಸಲಿ.॥67½॥

ಮೂಲಮ್ - 68

ಯದಾ ಯದಾ ಚ ಕೌಸಲ್ಯಾ ದಾಸೀವ ಚ ಸಖೀವ ಚ ॥

ಮೂಲಮ್ - 69½

ಭಾರ್ಯಾವದ್ ಭಗಿನೀವಚ್ಚ ಮಾತೃವಚ್ಚೋಪತಿಷ್ಠತಿ ।
ಸತತಂ ಪ್ರಿಯಕಾಮಾ ಮೇ ಪ್ರಿಯಪುತ್ರಾ ಪ್ರಿಯಂವದಾ ॥
ನ ಮಯಾ ಸತ್ಕೃತಾ ದೇವೀ ಸತ್ಕಾರಾರ್ಹ ಕೃತೇ ತವ ।

ಅನುವಾದ

ಅಯ್ಯೋ! ಯಾರ ಪುತ್ರನು ನನಗೆ ಎಲ್ಲರಿಗಿಂತ ಹೆಚ್ಚು ಪ್ರಿಯನಾಗಿರುವನೋ, ಆ ಪ್ರಿಯವಚನವನ್ನಾಡುವ ಕೌಸಲ್ಯೆಯು ದಾಸೀ, ಸಖೀ, ಪತ್ನೀ, ಸಹೋದರಿ ಮತ್ತು ತಾಯಿಯಂತೆ ನನ್ನ ಸೇವೆಯಲ್ಲಿ ಉಪಸ್ಥಿತಳಾಗಿದ್ದಾಗಲೆಲ್ಲ ಆ ಸತ್ಕಾರವನ್ನು ಪಡೆಯಲು ಯೋಗ್ಯಳಾದ ದೇವಿಯನ್ನು ನಾನು ನಿನ್ನ ಕಾರಣದಿಂದ ಎಂದೂ ಸತ್ಕರಿಸಲಿಲ್ಲ.॥68-69½॥

ಮೂಲಮ್ - 70½

ಇದಾನೀಂ ತತ್ತಪತಿ ಮಾಂ ಯನ್ಮಯಾ ಸುಕೃತಂ ತ್ವಯಿ ॥
ಅಪಥ್ಯವ್ಯಂಜನೋಪೇತಂ ಭುಕ್ತಮನ್ನಮಿವಾತುರಮ್ ।

ಅನುವಾದ

ನಿನ್ನ ಜೊತೆಗೆ ನಾನು ಇಷ್ಟು ಚೆನ್ನಾಗಿ ವರ್ತಿಸಿದುದನ್ನು ನೆನೆದರೆ - ಅಪಥ್ಯ (ಹಾನಿ ಕಾರಕ) ವ್ಯಂಜನಗಳಿಂದ ತಿಂದ ಅನ್ನವು ರೋಗಿಯನ್ನು ನಾಶ ಗೊಳಿಸುವಂತೆ ಈಗ ನನಗೆ ಸಂತಾಪವಾಗುತ್ತಾ ಇದೆ.॥70½॥

ಮೂಲಮ್ - 71½

ವಿಪ್ರಕಾರಂ ಚ ರಾಮಸ್ಯ ಸಂಪ್ರಯಾಣಂ ವನಸ್ಯ ಚ ॥
ಸುಮಿತ್ರಾ ಪ್ರೇಕ್ಷ್ಯ ವೈ ಭೀತಾ ಕಥಂ ಮೇ ವಿಶ್ವಸಿಷ್ಯತಿ ।

ಅನುವಾದ

ಶ್ರೀರಾಮನ ಪಟ್ಟಾಭಿಷೇಕದ ನಿವಾರಣೆ ಮತ್ತು ಅವನು ಕಾಡಿಗೆ ಹೋಗುವುದನ್ನು ನೋಡಿ ಸುಮಿತ್ರೆಯು ಭಯಗೊಂಡು ಮತ್ತೆ ನನ್ನ ಮೇಲೆ ಹೇಗೆ ವಿಶ್ವಾಸ ಇರಿಸುವಳು.॥71½॥

ಮೂಲಮ್ - 72½

ಕೃಪಣಂ ಬತ ವೈದೇಹೀ ಶ್ರೋಷತಿ ದ್ವಯಮಪ್ರಿಯಮ್ ॥
ಮಾಂ ಚ ಪಂಚತ್ವಮಾಪನ್ನಂ ರಾಮಂ ಚ ವನಮಾಶ್ರಿತಮ್ ।

ಅನುವಾದ

ಅಯ್ಯೋ! ಬಡಪಾಯಿ ಸೀತೆಗೆ ಒಟ್ಟಿಗೆ-ಶ್ರೀರಾಮನ ವನವಾಸ ಮತ್ತು ನನ್ನ ಸಾವು ಎಂಬ ಎರಡು ದುಃಖದಾಯಕ ಅಪ್ರಿಯ ಸಮಾಚಾರ ಕೇಳಬೇಕಾಗುವುದಲ್ಲ.॥72½॥

ಮೂಲಮ್ - 73½

ವೈದೇಹೀ ಬತ ಮೇ ಪ್ರಾಣಾನ್ ಶೋಚಂತೀ ಕ್ಷಪಯಿಷ್ಯತಿ ॥
ಹೀನಾ ಹಿಮವತಃ ಪಾರ್ಶ್ವೇ ಕಿನ್ನರೇಣೇವ ಕಿನ್ನರೀ ।

ಅನುವಾದ

ಅವಳು ಶ್ರೀರಾಮನಿಗಾಗಿ ಶೋಕಿಸತೊಡಗಿದಾಗ ನನ್ನ ಪ್ರಾಣಗಳನ್ನು ನಾಶಮಾಡಿ ಬಿಡುವಳು - ಆಕೆಯ ಶೋಕವನ್ನು ನೋಡಿ ನನ್ನ ಪ್ರಾಣಗಳು ಈ ಶರೀರದಲ್ಲಿ ಇರಲಾರವು. ಆಕೆಯ ಸ್ಥಿತಿ ಹಿಮಾಲಯದ ತಪ್ಪಲಿನಲ್ಲಿ ಗಂಡನಾದ ಕಿನ್ನರನಿಂದ ಅಗಲಿದ ಕಿನ್ನರಿಯಂತೆ ಆಗುವುದು.॥73½॥

ಮೂಲಮ್ - 74

ನ ಹಿ ರಾಮಮಹಂ ದೃಷ್ಟ್ವಾ ಪ್ರವಸಂತಂಮಹಾವನೇ ॥

ಮೂಲಮ್ - 75

ಚಿರಂ ಜೀವಿತುಮಾಶಂಸೇ ರುದಂತೀಂ ಚಾಪಿಮೈಥಿಲೀಮ್ ।
ಸಾ ನೂನಂ ವಿಧವಾ ರಾಜ್ಯಂ ಸು ಪುತ್ರಾ ಕಾರಯಿಷ್ಯಸಿ ॥

ಅನುವಾದ

ಶ್ರೀರಾಮನನು ವಿಶಾಲ ವನದಲ್ಲಿ ವಾಸಿಸುವುದನ್ನು ಮತ್ತು ಮಿಥಿಲೇಶ ಕುಮಾರೀ ಸೀತೆಯು ಅಳುತ್ತಿರುವುದನ್ನು ನೋಡಿ ನಾನು ಹೆಚ್ಚು ಕಾಲ ಬದುಕಲು ಬಯಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀನು ನಿಶ್ಚಯವಾಗಿ ವಿಧವೆಯಾಗಿ ಮಗನೊಂದಿಗೆ ಅಯೋಧ್ಯೆಯ ರಾಜ್ಯವಾಳು.॥74-75॥

ಮೂಲಮ್ - 76

ಸತೀಂ ತ್ವಾಮಹಮತ್ಯಂತಂ ವ್ಯವಸ್ಯಾಮ್ಯಸತೀಂ ಸತೀಮ್ ।
ರೂಪಿಣೀಂ ವಿಷಸಂಯುಕ್ತಾಂ ಪೀತ್ವೇವ ಮದಿರಾಂ ನರಃ ॥

ಅನುವಾದ

ಅಯ್ಯೋ! ನೀನು ಅತ್ಯಂತ ಸತೀ-ಸಾಧ್ವೀ ಎಂದು ನಾನು ತಿಳಿದಿದ್ದೆ, ಆದರೆ ನೀನು ಬಹಳ ದುಷ್ಟಳಾಗಿರುವೆ. ಯಾವನಾದರೂ ಮನುಷ್ಯನು ಸುಂದರವಾಗಿ ಕಂಡುಬಂದ ಮದ್ಯವನ್ನು ಕುಡಿದು ಮತ್ತೆ ಉಂಟಾದ ವಿಕಾರದಿಂದ ಅದರಲ್ಲಿ ವಿಷಬೆರೆಸಿತ್ತು ಎಂದು ತಿಳಿದಂತೆ ನನ್ನ ಸ್ಥಿತಿಯಾಯಿತು.॥76॥

ಮೂಲಮ್ - 77

ಅನೃತೈರ್ಬಹು ಮಾಂ ಸಾಂತ್ವೈಃ ಸಾಂತ್ವಯಂತೀ ಸ್ಮ ಭಾಷಸೇ ।
ಗೀತಶಬ್ದೇನಸಂರುಧ್ಯ ಲುಬ್ಧೋ ಮೃಗಮಿವಾವಧೀಃ ॥

ಅನುವಾದ

ಬೇಡನು ಮಧುರಸಂಗೀತದಿಂದ ಮರಳುಗೊಳಿಸಿ ಮತ್ತೆ ಜಿಂಕೆಯನ್ನು ಕೊಂದು ಹಾಕುವಂತೆ ನೀನೂ ಕೂಡ ಮೊದಲು ನನ್ನನ್ನು ಮಧುರ ಮಾತುಗಳಿಂದ ಮರಳುಗೊಳಿಸಿ, ಈಗ ನನ್ನನ್ನು ಕೊಲ್ಲುತ್ತಿರುವೆ. ನೀನು ಆಡಿದ ಆ ಮಾತುಗಳೆಲ್ಲ ಸುಳ್ಳು ಎಂದು ಈಗ ತಿಳಿಯಿತು.॥77॥

ಮೂಲಮ್ - 78

ಅನಾರ್ಯ ಇತಿ ಮಾಮಾರ್ಯಾಃ ಪುತ್ರವಿಕ್ರಾಯಕಂ ಧ್ರುವಮ್ ।
ವಿಕರಿಷ್ಯಂತಿ ರಥ್ಯಾಸುಸುರಾಪಂ ಬ್ರಾಹ್ಮಣಂ ಯಥಾ ॥

ಅನುವಾದ

ಸುರಾಪಾನ ಮಾಡುವ ಬ್ರಾಹ್ಮಣನನ್ನು ಆರ್ಯಜನರು ಧಿಕ್ಕರಿಸುವಂತೆಯೇ ಮೋಹ ವಶನಾಗಿ ಧರ್ಮಾತ್ಮನಾದ ನಿಜಸುತನನ್ನು ಸ್ತ್ರೀ ವ್ಯಾಮೋಹಕ್ಕೆ ಮಾರಿದವನೆಂದೂ, ಅನಾರ್ಯನೆಂದೂ ಬೀದಿ - ಬೀದಿಗಳ ಸತ್ಪುರುಷರು ನನ್ನನ್ನು ಧಿಕ್ಕರಿಸುವರು.॥78॥

ಮೂಲಮ್ - 79

ಅಹೋ ದುಃಖಮಹೋ ಕೃಚ್ಛ್ರಂ ಯತ್ರ ವಾಚಃ ಕ್ಷಮೇ ತವ ।
ದುಃಖಮೇವಂವಿಧಂ ಪ್ರಾಪ್ತಂ ಪುರಾ ಕೃತಮಿವಾಶುಭಮ್ ॥

ಅನುವಾದ

ಅಯ್ಯೋ! ನಾನೀ ದುಃಖವನ್ನು ಸಹಿಸಲಾರೆನು. ನಿನ್ನ ಈ ಮಾತುಗಳನ್ನು ಸಹಿಸಬೇಕಾಯಿತಲ್ಲ! ಕಷ್ಟ, ಕಷ್ಟ! ಇಂತಹ ಮಹಾದುಃಖವನ್ನು ಇದು ನನ್ನ ಪೂರ್ವಜನ್ಮದಲ್ಲಿ ಮಾಡಿದ ಪಾಪದ ಅಶುಭ ಫಲವೇ ಆಗಿರಬೇಕು.॥79॥

ಮೂಲಮ್ - 80

ಚಿರಂ ಖಲು ಮಯಾ ಪಾಪೇ ತ್ವಂ ಪಾಪೇನಾಭಿರಕ್ಷಿತಾ ।
ಅಜ್ಞಾನಾದುಪಸಂಪನ್ನಾ ರಜ್ಜುರುದ್ಬಂಧನೀ ಯಥಾ ॥

ಅನುವಾದ

ಎಲೈ ಪಾಪಿಯೇ! ಪಾಪಿಯಾದ ನಾನು ಬಹಳ ದಿನಗಳಿಂದ ರಕ್ಷಿಸಿ, ಅಜ್ಞಾನದಿಂದ ನಿನ್ನನ್ನು ಬಿಗಿದಪ್ಪಿಕೊಂಡಿದ್ದೆ, ಆದರೆ ಇಂದು ನೀನೇ ನನ್ನ ಕತ್ತಿಗೆ ಬಿಗಿದ ಉರುಳು ಎಂಬುದು ತಿಳಿಯಿತು.॥80॥

ಮೂಲಮ್ - 81

ರಮಮಾಣಸ್ತ್ವಯಾ ಸಾರ್ಧಂ ಮೃತ್ಯುಂ ತ್ವಾಂ ನಾಭಿಲಕ್ಷಯೇ ।
ಬಾಲೋರಹಸಿ ಹಸ್ತೇನ ಕೃಷ್ಣಸರ್ಪಮಿವಾಸ್ಪೃಶಮ್ ॥

ಅನುವಾದ

ಪುಟ್ಟಮಗು ಏಕಾಂತದಲ್ಲಿ ಕರಿನಾಗರ ಹಾವನ್ನು ಹಿಡಿದು ಆಡುವಂತೆ ನಾನೂ ಕೂಡ ಏಕಾಂತದಲ್ಲಿ ನಿನ್ನೊಡನೆ ಕ್ರೀಡಿಸುವಾಗ ಆಲಿಂಗಿಸಿಕೊಂಡೆ, ಆದರೆ ನೀನು ಒಂದು ದಿನ ನನಗೆ ಮೃತ್ಯುವಾಗುವೆ ಎಂದು ಆಗ ನನಗೆ ತೋಚಲಿಲ್ಲ.॥81॥

ಮೂಲಮ್ - 82

ತಂ ತು ಮಾಂ ಜೀವಲೋಕೋಯಂ ನೂನಮಾಕ್ರೋಷ್ಟುಮರ್ಹತಿ ।
ಮಯಾ ಹ್ಯಪಿತೃಕಃ ಪುತ್ರಃ ಸ ಮಹಾತ್ಮಾ ದುರಾತ್ಮನಾ ॥

ಅನುವಾದ

ಅಯ್ಯೋ! ದುರಾತ್ಮನಾದ ನಾನು ಬದುಕಿರುವಾಗಲೇ ಮಹಾತ್ಮಾ ಪುತ್ರನನ್ನು ಪಿತೃಹೀನನ್ನಾಗಿಸಿದೆನಲ್ಲ! ಇಡೀ ಜಗತ್ತು ನನ್ನನ್ನು ಧಿಕ್ಕರಿಸೀತು, ಬೈಯುತ್ತಾ ಇರಬಹುದು; ಇದು ಉಚಿತವೇ ಆಗಿರುವುದು.॥82॥

ಮೂಲಮ್ - 83

ಬಾಲಿಶೋ ಬತ ಕಾಮಾತ್ಮಾ ರಾಜಾ ದಶರಥೋ ಭೃಶಮ್ ।
ಸೀಕೃತೇ ಯಃ ಪ್ರಿಯಂ ಪುತ್ರಂ ವನಂ ಪ್ರಸ್ಥಾಪಯಿಷ್ಯತಿ ॥

ಅನುವಾದ

ದಶರಥರಾಜನು ದೊಡ್ಡ ಮೂರ್ಖ ಮತ್ತು ಕಾಮುಕನಾಗಿದ್ದಾನೆ, ಓರ್ವ ಸ್ತ್ರೀಯನ್ನು ಸಂತೋಷಪಡಿಸಲು ತನ್ನ ಪ್ರಿಯ ಪುತ್ರನನ್ನೇ ಕಾಡಿಗೆ ಕಳಿಸುತ್ತಿದ್ದಾನಲ್ಲ! ಎಂದು ಜನರು ನನ್ನನ್ನು ನಿಂದಿಸುತ್ತಾ ಅಂದುಕೊಳ್ಳುವರು.॥83॥

ಮೂಲಮ್ - 84

ವೇದೈಶ್ಚ ಬ್ರಹ್ಮಚರ್ಯೈಶ್ಚ ಗುರುಭಿಶ್ಚೋಪಕರ್ಶಿತಃ ।
ಭೋಗಕಾಲೇ ಮಹತ್ಕೃಚ್ಛ್ರಂ ಪುನರೇವ ಪ್ರಪತ್ಸ್ಯತೇ ॥

ಅನುವಾದ

ಅಯ್ಯೋ! ಕೃಚ್ಛ್ರ ಚಾಂದ್ರಾಯಣಾದಿ ವ್ರತಗಳಿಂದಲೂ, ಬ್ರಹ್ಮ್ಮಚರ್ಯ ವ್ರತಗಳಿಂದಲೂ, ಗುರು ಶುಶ್ರೂಷೆಯಿಂದಲೂ ಕೃಶವಾಗಿದ್ದ ರಾಮನು ಗೃಹಸ್ಥಾಶ್ರಮಿಯಾದ ನಂತರ ಸುಖ ಭೋಗಗಳನ್ನು ಅನುಭವಿಸುವ ಈ ಕಾಲದಲ್ಲಿ ವನವಾಸದ ಮಹಾಕಷ್ಟಗಳನ್ನು ಅನುಭವಿಸಬೇಕಾಯಿತಲ್ಲ.॥84॥

ಮೂಲಮ್ - 85

ನಾಲಂ ದ್ವಿತೀಯಂ ವಚನಂ ಪುತ್ರೋ ಮಾಂ ಪ್ರತಿಭಾಷಿತುಮ್ ।
ಸವನಂ ಪ್ರವ್ರಜೇತ್ಯುಕ್ತೋ ಬಾಢಮಿತ್ಯೇವ ವಕ್ಷ್ಯತಿ ॥

ಅನುವಾದ

ನನ್ನ ಮಗ ಶ್ರೀರಾಮನಲ್ಲಿ ನೀನು ಕಾಡಿಗೆ ಹೋಗು ಎಂದು ನಾನು ಹೇಳುತ್ತಲೇ ಕೂಡಲೇ ‘ಹಾಗೆಯೇ ಆಗಲಿ’ ಎಂದು ಹೇಳಿ ನನ್ನ ಆಜ್ಞೆಯನ್ನು ಸ್ವೀಕರಿಸುವನು. ಶ್ರೀರಾಮನು ಬೇರೆ ಏನನ್ನೂ ಹೇಳದೆ ನನಗೆ ಪ್ರತಿಕೂಲ ಉತ್ತರವನ್ನು ಕೊಡಲಾರನು.॥85॥

ಮೂಲಮ್ - 86

ಯದಿ ಮೇ ರಾಘವಃ ಕುರ್ಯಾದ್ ವನಂ ಗಚ್ಛೇತಿ ಜೋದಿತಃ ।
ಪ್ರತಿಕೂಲಂ ಪ್ರಿಯಂ ಮೇ ಸ್ಯಾನ್ನ ತು ವತ್ಸಃ ಕರಿಷ್ಯತಿ ॥

ಅನುವಾದ

ಕಾಡಿಗೆ ಹೋಗು ಎಂದು ನಾನು ಶ್ರೀರಾಮಚಂದ್ರನಿಗೆ ಆಜ್ಞಾಪಿಸಿದಾಗ ಅವನು ನನ್ನನ್ನು ಧಿಕ್ಕರಿಸಿ ವನಕ್ಕೆ ಹೋಗದಿದ್ದರೆ ಅದೇ ನನಗೆ ಪ್ರಿಯ ಕಾರ್ಯ ಆಗಬಹುದು. ಆದರೆ ನನ್ನ ಪುತ್ರನು ಹಾಗೆ ಮಾಡಲಾರನು.॥86॥

ಮೂಲಮ್ - 87

ರಾಘವೇ ಹಿ ವನಂ ಪ್ರಾಪ್ತೇ ಸರ್ವಲೋಕಸ್ಯಧಿಕ್ಕೃತಮ್ ।
ಮೃತ್ಯುರಕ್ಷಮಣೀಯಂ ಮಾಂ ನಯಿಷ್ಯತಿ ಯಮಕ್ಷಯಮ್ ॥

ಅನುವಾದ

ರಘುನಂದನ ರಾಮನು ವನಕ್ಕೆ ಹೊರಟು ಹೋದರೆ ಎಲ್ಲ ಜನರಿಂದ ಧಿಕ್ಕಾರಕ್ಕೆ ಪಾತ್ರನಾದ, ಅಕ್ಷಮ್ಯ ಅಪರಾಧಿಯಾದ ನನ್ನನ್ನು ಖಂಡಿತವಾಗಿ ಮೃತ್ಯು ಯಮಲೋಕಕ್ಕೆ ಕೊಂಡು ಹೋಗುವುದು.॥87॥

ಮೂಲಮ್ - 88

ಮೃತೇ ಮಯಿ ಗತೇ ರಾಮೇ ವನಂ ಮನುಜಪುಂಗವೇ ।
ಇಷ್ಟೇ ಮಮ ಜನೇ ಶೇಷೇ ಕಿಂ ಪಾಪಂ ಪ್ರತಿಪತ್ಸ್ಯಸೇ ॥

ಅನುವಾದ

ನರಶ್ರೇಷ್ಠ ಶ್ರೀರಾಮನು ಕಾಡಿಗೆ ಹೋದ ಬಳಿಕ ನನ್ನ ಮೃತ್ಯುವಾದರೆ ಉಳಿದ ನನ್ನ ಪ್ರಿಯಜನ(ಕೌಸಲ್ಯಾದಿ)ರ ಮೇಲೆ ನೀನು ಏನೇನು ಅತ್ಯಾಚಾರ ಮಾಡುವಿಯೋ? ತಿಳಿಯದು.॥88॥

ಮೂಲಮ್ - 89

ಕೌಸಲ್ಯಾಂ ಮಾಂ ಚ ರಾಮಂ ಚ ಪುತ್ರೌ ಚ ಯದಿ ಹಾಸ್ಯತಿ ।
ದುಃಖಾನ್ಯಸಹತೀ ದೇವೀ ಮಾಮೇವಾನುಗಮಿಷ್ಯತಿ ॥

ಅನುವಾದ

ದೇವೀ ಕೌಸಲ್ಯೆಯು ನನ್ನಿಂದ, ಶ್ರೀರಾಮನಿಂದ, ಲಕ್ಷ್ಮಣ-ಶತ್ರುಘ್ನರಿಂದ ಅಗಲಿದ ಭಾರೀ ದುಃಖವನ್ನು ಸಹಿಸಲಾರದೆ ನನ್ನ ಹಿಂದೆಯೇ ಪರಲೋಕಕ್ಕೆ ತೆರಳುವಳು. ಸುಮಿತ್ರೆಯ ಸ್ಥಿತಿಯೂ ಇದೇ ಆಗುವುದು.॥89॥

ಮೂಲಮ್ - 90

ಕೌಸಲ್ಯಾಂ ಚ ಸುಮಿತ್ರಾಂ ಚ ಮಾಂ ಚ ಪುತ್ರೈಸ್ತ್ರಿಭಿಃ ಸಹ ।
ಪ್ರಕ್ಷಿಪ್ಯ ನರಕೇ ಸಾ ತ್ವಂ ಕೈಕೇಯಿ ಸುಖಿತಾ ಭವ ॥

ಅನುವಾದ

ಕೈಕೆಯಿ! ಹೀಗೆ ಕೌಸಲ್ಯೆ, ಸುಮಿತ್ರೆ ಹಾಗೂ ಮೂರು ಪುತ್ರರೊಂದಿಗೆ ನನ್ನನ್ನೂ ನರಕದಂತಹ ಮಹಾಶೋಕದಲ್ಲಿ ಕೆಡಹಿದ ನೀನು ಸುಖವಾಗಿರು.॥90॥

ಮೂಲಮ್ - 91

ಮಯಾ ರಾಮೇಣ ಚ ತ್ಯಕ್ತಂ ಶಾಶ್ವತಂ ಸತ್ಕೃತಂ ಗುಣೈಃ ।
ಇಕ್ಷ್ವಾಕುಕುಲಮಕ್ಷೋಭ್ಯಮಾಕುಲಂ ಪಾಲಯಿಷ್ಯಸಿ ॥

ಅನುವಾದ

ಅನೇಕಾನೇಕ ಗುಣಗಳಿಂದ ಸತ್ಕೃತ, ಶಾಶ್ವತ ಹಾಗೂ ಕ್ಷೋಭರಹಿತ ಈ ಇಕ್ಷ್ವಾಕುಕುಲವು ನನ್ನಿಂದ ಮತ್ತು ಶ್ರೀರಾಮನಿಂದ ಪರಿತ್ಯಕ್ತವಾಗಿ ಶೋಕಾಕುಲವಾದಾಗ, ಆ ಸ್ಥಿತಿಯಲ್ಲಿ ನೀನು ಅದನ್ನು ಪಾಲಿಸುವೆ.॥91॥

ಮೂಲಮ್ - 92

ಪ್ರಿಯಂ ಚೇದ್ ಭರತಸ್ಯೈತದ್ ರಾಮಪ್ರವ್ರಾಜನಂ ಭವೇತ್ ।
ಮಾ ಸ್ಮ ಮೇ ಭರತಃ ಕಾರ್ಷಿತ್ಪ್ರೇತಕೃತ್ಯಂ ಗತಾಯುಷಃ ॥

ಅನುವಾದ

ಭರತನಿಗೂ ಶ್ರೀರಾಮನ ಈ ವನಗಮನವು ಪ್ರಿಯವಾದರೆ, ನಾನು ಮರಣಿಸಿದ ನಂತರ ಅವನು ನನ್ನ ಶರೀರದ ದಹನ ಸಂಸ್ಕಾರವನ್ನೂ ಮಾಡದಿರಲಿ.॥92॥

ಮೂಲಮ್ - 93

ಮೃತೇ ಮಯಿ ಗತೇ ರಾಮೇ ವನಂ ಪುರುಷಪುಂಗವೇ ।
ಸೆದಾನೀಂ ವಿಧವಾ ರಾಜ್ಯಂ ಸಪುತ್ರಾ ಕಾರಯಿಷ್ಯಸಿ ॥

ಅನುವಾದ

ಪುರುಷಶಿರೋಮಣಿ ಶ್ರೀರಾಮನ ವನಗಮನದ ಬಳಿಕ ನನ್ನ ಸಾವು ಆದಮೇಲೆ ನೀನು ವಿಧವೆಯಾಗಿ ಮಗನೊಂದಿಗೆ ಅಯೋಧ್ಯೆಯ ರಾಜ್ಯವನ್ನಾಳುವೆ.॥93॥

ಮೂಲಮ್ - 94

ತ್ವಂ ರಾಜಪುತ್ರಿ ದೈವೇನ ನ್ಯವಸೋ ಮಮ ವೇಶ್ಮನಿ ।
ಅಕೀರ್ತಿಶ್ಚಾತುಲಾ ಲೋಕೇ ಧ್ರುವಃ ಪರಿಭವಶ್ಚ ಮೇ ।
ಸರ್ವಭೂತೇಷು ಚಾವಜ್ಞಾ ಯಥಾ ಪಾಪಕೃತಸ್ತಥಾ ॥

ಅನುವಾದ

ರಾಜಕುಮಾರೀ! ನೀನು ನನ್ನ ದುರ್ಭಾಗ್ಯದಿಂದಲೇ ನನ್ನ ಮನೆಯಲ್ಲಿ ವಾಸಿಸುತ್ತಿರುವೆ. ನಿನ್ನ ಕಾರಣದಿಂದಾಗಿಯೇ ಜಗತ್ತಿನಲ್ಲಿ ಪಾಪಾಚಾರಿಯಂತೆ ನನಗೆ ನಿಶ್ಚಯವಾಗಿಯೇ ಅನುಪಮ ಅಪಯಶ, ಸಮಸ್ತ ಪ್ರಾಣಿಗಳಿಂದ ತಿರಸ್ಕಾರ ಮತ್ತು ಅವಹೇಳನೆ ಪ್ರಾಪ್ತವಾಗಬಹುದು.॥94॥

ಮೂಲಮ್ - 95

ಕಥಂ ರಥೈರ್ವಿಭುರ್ಯಾತ್ವಾ ಗಜಾಶ್ವೈಶ್ಚ ಮುಹುರ್ಮುಹುಃ ।
ಪದ್ಭ್ಯಾಂ ರಾಮೋ ಮಹಾರಣ್ಯೇ ವತ್ಸೋ ಮೇ ವಿಚರಿಷ್ಯತಿ ॥

ಅನುವಾದ

ಸಮರ್ಥ್ಯಶಾಲಿಯಾದ ನನ್ನ ಪುತ್ರ ಶ್ರೀರಾಮನು ಆಗಾಗ್ಗೆ ರಥಗಳಲ್ಲಿ, ಆನೆಗಳ ಮೇಲೆ, ಕುದುರೆಗಳ ಮೇಲೆ ಸಂಚರಿಸುತ್ತಿದ್ದನು. ಅವನೇ ಈಗ ಮಹಾರಣ್ಯದಲ್ಲಿ ಕಾಲು ನಡಿಗೆಯಿಂದ ಹೇಗೆ ಸಂಚರಿಸುವನು.॥95॥

ಮೂಲಮ್ - 96

ಯಸ್ಯ ಚಾಹಾರಸಮಯೇ ಸೂದಾಃ ಕುಂಡಲಧಾರಿಣಃ ।
ಅಹಂಪೂರ್ವಾಃ ಪಚಂತಿ ಸ್ಮ ಪ್ರಸನ್ನಾಃ ಪಾನಭೋಜನಮ್ ॥

ಮೂಲಮ್ - 97

ಸ ಕಥಂ ನು ಕಷಾಯಾಣಿ ತಿಕ್ತಾನಿ ಕಟುಕಾನಿ ಚ ।
ಭಕ್ಷಯನ್ ವನ್ಯಮಾಹಾರಂ ಸುತೋಮೇವರ್ತಯಿಷ್ಯತಿ ॥

ಅನುವಾದ

ಶ್ರೀರಾಮನಿಗೆ ಆಹಾರವನ್ನು ಸಿದ್ಧಪಡಿಸುವ ಸಮಯದಲ್ಲಿ ಕುಂಡಲಗಳನ್ನು ಧರಿಸಿದ ಅಡಿಗೆಯವರು ನಾಮುಂದು- ತಾಮುಂದು ಎಂಬ ಸ್ಪರ್ಧೆಯಿಂದ ಭಕ್ಷ್ಯ-ಭೋಜ್ಯಗಳನ್ನು ಸಿದ್ಧಪಡಿಸಿ ಶ್ರೀರಾಮನಿಗೆ ಬಡಿಸುತ್ತಿದ್ದರು. ಅಂತಹ ಪ್ರಶಸ್ತವಾದ ಭೋಜನ ಮಾಡುತ್ತಿದ್ದ ರಾಮಚಂದ್ರನು ಕಾಡಿನಲ್ಲಿ ಸಿಕ್ಕುವ ಕಹಿಯಾದ, ಒಗರಾದ ಕಂದಮೂಲ ಫಲಗಳನ್ನು ತಿಂದು ಹೇಗೆ ಇರಬಲ್ಲನು.॥96-97॥

ಮೂಲಮ್ - 98

ಮಹಾರ್ಹವಸ್ತ್ರಸಂಬದ್ಧೋ ಭೂತ್ವಾ ಚಿರಸುಖೋಚಿತಃ ।
ಕಾಷಾಯಪರಿಧಾನಸ್ತು ಕಥಂ ರಾಮೋ ಭವಿಷ್ಯತಿ ॥

ಅನುವಾದ

ಶ್ರೀರಾಮನು ಸದಾಕಾಲ ಬಹುಮೂಲ್ಯ ವಸ್ತ್ರಗಳನ್ನು ಧರಿಸುತ್ತಾ ಇಷ್ಟರವರೆಗೆ ಸುಖವಾಗಿ ಸಮಯ ಕಳೆದಿರುವನು. ವನದಲ್ಲಿ ಅವನೇ ಈಗ ನಾರುಮಡಿಯನ್ನು ಉಟ್ಟುಕೊಂಡು ಹೇಗೆ ಇರಬಲ್ಲನು.॥98॥

ಮೂಲಮ್ - 99

ಕಸ್ಯೈಂದಂ ದಾರುಣಂ ವಾಕ್ಯಮೇವಂವಿಧಮಪೀರಿತಮ್ ।
ರಾಮಸ್ಯಾರಣ್ಯಗಮನಂ ಭರತಸ್ಯಾಭಿಷೇಚನಮ್ ॥

ಮೂಲಮ್ - 100

ಧಿಗಸ್ತು ಯೋಷಿತೋ ನಾಮ ಶಠಾಃ ಸ್ವಾರ್ಥಪರಾಯಣಾಃ ।
ನ ಬ್ರವೀಮಿ ಸ್ತ್ರಿಯಃ ಸರ್ವಾ ಭರತಸ್ಯೈವ ಮಾತರಮ್ ॥

ಅನುವಾದ

ಶ್ರೀರಾಮನ ವನಗಮನ ಮತ್ತು ಭರತನಿಗೆ ಪಟ್ಟಾಭಿಷೇಕ - ಇಂತಹ ಕಠೋರ ವಾಕ್ಯಗಳನ್ನು ನೀನು ಯಾರ ಪ್ರೇರಣೆಯಿಂದ ನುಡಿದಿರುವೆ? ಸ್ತ್ರೀಯರಿಗೆ ಧಿಕ್ಕಾರವಿರಲಿ; ಏಕೆಂದರೆ ಅವರು ಶಠರೂ, ಸ್ವಾರ್ಥಪರಾಯಣರೂ ಆಗಿರುತ್ತಾರೆ. ಆದರೆ ನಾನು ಎಲ್ಲ ಸ್ತ್ರೀಯರಿಗಾಗಿ ಹೀಗೆ ಹೇಳಲಾರೆ, ಕೇವಲ ಭರತನ ತಾಯಿಯನ್ನೇ ನಿಂದಿಸುತ್ತಿದ್ದೇನೆ.॥100॥

ಮೂಲಮ್ - 101

ಅನರ್ಥಭಾವೇಽರ್ಥಪರೇ ನೃಶಂಸೇ
ಮಮಾನುತಾಪಾಯ ನಿವೇಶಿತಾಸಿ ।
ಕಿಮಪ್ರಿಯಂ ಪಶ್ಯಸಿ ಮನ್ನಿಮಿತ್ತಂ
ಹಿತಾನುಕಾರಿಣ್ಯಥವಾಪಿ ರಾಮೇ ॥

ಅನುವಾದ

ಅನರ್ಥವನ್ನೇ ಲಾಭವೆಂದು ತಿಳಿಯುವ ಕ್ರೂರ ಕೈಕೆಯಿಯೇ! ನೀನು ನನಗೆ ಸಂತಾಪವನ್ನು ಕೊಡಲೆಂದೆ ಈ ಅರಮನೆಯಲ್ಲಿ ನೆಲೆಸಿರುವೆ. ಎಲಗೆ! ನನ್ನಿಂದ ನಿನ್ನ ಯಾವುದು ಅಪ್ರಿಯವಾಗುವುದನ್ನು ನೋಡುತ್ತಿರುವೆ? ಅಥವಾ ನಿರಂತರ ಎಲ್ಲರ ಹಿತವನ್ನು ಮಾಡುವ ಶ್ರೀರಾಮನಲ್ಲಿ ನೀನು ಯಾವ ಕೆಡುಕನ್ನು ನೋಡಿದೆ.॥101॥

ಮೂಲಮ್ - 102

ಪರಿತ್ಯಜೇಯುಃ ಪಿತರೋಽಪಿ ಪುತ್ರಾನ್
ಭಾರ್ಯಾಃ ಪತೀಂಶ್ಚಾಪಿ ಕೃತಾನುರಾಗಾಃ ।
ಕೃತ್ಸ್ನಂ ಹಿ ಸರ್ವಂ ಕುಪಿತಂ ಜಗತ್ ಸ್ಯಾದ್
ದೃಷ್ಟೈವ ರಾಮಂ ವ್ಯಸನೇ ನಿಮಗ್ನಮ್ ॥

ಅನುವಾದ

ಶ್ರೀರಾಮನು ಸಂಕಟ ಸಮುದ್ರದಲ್ಲಿ ಮುಳುಗಿರುವುದನ್ನು ನೋಡಿ ತಂದೆಯವರು ತಮ್ಮ ಪುತ್ರರನ್ನು ಮತ್ತು ಅನುರಾಗಿಣಿಯರಾದ ಸ್ತ್ರೀಯರು ತಮ್ಮ ಪತಿಗಳನ್ನು ತ್ಯಜಿಸ ಬಿಡುವರು. ಹೀಗೆ ಇಡೀ ಜಗತ್ತೇ ಕುಪಿತವಾಗಿ ವಿಪರೀತ ವ್ಯವಹಾರ ಮಾಡುವುದು ಆಗಿಹೋಯಿತು.॥102॥

ಮೂಲಮ್ - 103

ಅಹಂ ಪುನರ್ದೇವಕುಮಾರರೂಪ-
ಮಲಂಕೃತಂ ತಂ ಸುತಮಾವ್ರಜಂತಮ್ ।
ನಂದಾಮಿ ಪಶ್ಯನ್ನಿವ ದರ್ಶನೇನ
ಭವಾಮಿ ದೃಷ್ಟೈವ ಪುನರ್ಯುವೇವ ॥

ಅನುವಾದ

ದೇವಕುಮಾರನಂತಹ ಕಮನೀಯ ರೂಪವುಳ್ಳ ನನ್ನ ಪುತ್ರ ಶ್ರೀರಾಮನು ವಸ್ತ್ರಾಭರಣಭೂಷಣಗಳಿಂದ ಅಲಂಕೃತನಾಗಿ ಕಣ್ಣಮುಂದೆ ಬಂದಾಗ ಅವನ ಶೋಭೆಯನ್ನು ನೋಡುತ್ತಾ ಆನಂದಿತನಾಗುತ್ತೇನೆ. ಅವನನ್ನು ಕಂಡಾಗ ನಾನು ಪುನಃ ತರುಣನಾಗಿರುವಂತೆ ಕಾಣುತ್ತದೆ.॥103॥

ಮೂಲಮ್ - 104

ವಿನಾ ಹಿ ಸೂರ್ಯೇಣ ಭವೇತ್ ಪ್ರವೃತ್ತಿ-
ರವರ್ಷತಾ ವಜ್ರಧರೇಣ ವಾಪಿ ।
ರಾಮಂ ತು ಗಚ್ಛಂತಮಿತಃ ಸಮೀಕ್ಷ್ಯ
ಜೀವೇನ್ನ ಕಶ್ಚಿತ್ತ್ವಿತಿ ಚೇತನಾ ಮೇ ॥

ಅನುವಾದ

ಒಂದೊಮ್ಮೆ ಸೂರ್ಯನಿಲ್ಲದೆಯೂ ಜಗತ್ತಿನ ಕಾರ್ಯ ನಡೆಯಬಲ್ಲದು, ವಜ್ರಧಾರಿ ಇಂದ್ರನು ಮಳೆಗರೆಯದಿದ್ದರೂ ಪ್ರಾಣಿಗಳು ಬದುಕಿರಬಲ್ಲವು. ಆದರೆ ರಾಮನು ವನವಾಸಕ್ಕೆ ಹೋಗುವುದನ್ನು ನೋಡಿ ಯಾರೂ ಬದುಕಿರಲಾರರು ಎಂಬುದೇ ನನ್ನ ಅಭಿಪ್ರಾಯವಾಗಿದೆ.॥104॥

ಮೂಲಮ್ - 105

ವಿನಾಶಕಾಮಾಮಹಿತಾಮಮಿತ್ರಾ-
ಮಾವಾಸಯಂ ಮೃತ್ಯುಮಿವಾತ್ಮನಸ್ತ್ವಾಮ್ ।
ಚಿರಂ ಬತಾಂಕೇನ ಧೃತಾಸಿ ಸರ್ಪೀ
ಮಹಾವಿಷಾ ತೇನ ಹತೋಸ್ಮಿ ಮೋಹಾತ್ ॥

ಅನುವಾದ

ಎಲೆಗೆ! ನೀನು ನನ್ನ ವಿನಾಶಮಾಡುವ, ಅಹಿತ ಮಾಡುವ ಶತ್ರುವೇ ಆಗಿರುವೆ. ಯಾರಾದರೂ ತನ್ನ ಮೃತ್ಯುವನ್ನೇ ಮನೆಯಲ್ಲಿ ಇರಿಸಿಕೊಂಡಂತೆ, ನಾನು ನಿನ್ನನ್ನು ಮನೆಯಲ್ಲಿ ನೆಲೆಸಿಕೊಂಡಿರುವೆ. ನಾನು ಮೋಹವಶನಾಗಿ ಮಹಾವಿಷವುಳ್ಳ ಹೆಣ್ಣು ಹಾವಾದ ನಿನ್ನನ್ನು ಅನೇಕ ದಿನಗಳಿಂದ ತೊಡೆಯಲ್ಲಿ ಕುಳ್ಳಿರಿಸಿ ಕೊಂಡಿದ್ದೆ, ಆದಕ್ಕಾಗಿ ಇಂದು ನಾನು ಸಾಯುತ್ತಾ ಇದ್ದೇನೆ.॥105॥

ಮೂಲಮ್ - 106

ಮಯಾ ಚ ರಾಮೇಣ ಸಲಕ್ಷ್ಮಣೇನ
ಪ್ರಶಾಸ್ತು ಹೀನೋ ಭರತಸ್ತ್ವಯಾ ಸಹ ।
ಪುರಂ ಚ ರಾಷ್ಟ್ರಂ ಚ ನಿಹತ್ಯ ಬಾಂಧವಾನ್
ಮಮಾಹಿತಾನಾಂ ಚ ಭವಾಭಿಹರ್ಷಿಣೀ ॥

ಅನುವಾದ

ನನ್ನಿಂದ ರಾಮ-ಲಕ್ಷ್ಮಣರನ್ನು ದೂರಗೊಳಿಸಿ, ಭರತನು ಸಮಸ್ತ ಬಾಂಧವರನ್ನು ವಿನಾಶ ಮಾಡಿ, ವಿಧವೆಯಾದ ನಿನ್ನೊಡನೆ ಈ ನಗರ ಹಾಗೂ ರಾಷ್ಟ್ರವನ್ನು ಆಳುತ್ತಿರಲಿ. ನೀನು ನನ್ನ ಶತ್ರುಗಳ ಹರ್ಷವನ್ನು ಹೆಚ್ಚಿಸುವವಳಾಗಿರುವೆ.॥106॥

ಮೂಲಮ್ - 107

ನೃಶಂಸವೃತ್ತೇ ವ್ಯಸನಪ್ರಹಾರಿಣಿ
ಪ್ರಸಹ್ಯ ವಾಕ್ಯಂ ಯದಿಹಾದ್ಯ ಭಾಷಸೇ ।
ನ ನಾಮ ತೇ ತೇನ ಮುಖಾತ್ಪತಂತ್ಯಧೋ
ವಿಶೀರ್ಯಮಾಣಾ ದಶನಾಃ ಸಹಸ್ರಧಾ ॥

ಅನುವಾದ

ಕ್ರೂರವಾಗಿ ವರ್ತಿಸುವ ಕೈಕೇಯಿ! ನೀನು ಸಂಕಟದಲ್ಲಿ ಬಿದ್ದಿರುವವನ ಮೇಲೆ ಪ್ರಹಾರಮಾಡುತ್ತಿರುವೆ. ಎಲಗೆ! ನೀನು ದುರಾಗ್ರಹದಿಂದ ಇಂದು ಇಂತಹ ಕಠೋರ ಮಾತುಗಳನ್ನು ಆಡುವಾಗ ನಿನ್ನ ಹಲ್ಲುಗಳು ನುಚ್ಚುನೂರಾಗಿ ಬಾಯಿಯಿಂದ ಬಿದ್ದು ಹೋಗುವುದಿಲ್ಲ ಏಕೆ.॥107॥

ಮೂಲಮ್ - 108

ನ ಕಿಂಚಿದಾಹಾಹಿತಮಪ್ರಿಯಂ ವಚೋ
ನ ವೇತ್ತಿ ರಾಮಃ ಪರುಷಾಣಿ ಭಾಷಿತುಮ್ ।
ಕಥಂ ನು ರಾಮೇ ಹ್ಯಭಿರಾಮವಾದಿನಿ
ಬ್ರವೀಷಿ ದೋಷಾನ್ ಗುಣನಿತ್ಯಸಮ್ಮತೇ ॥

ಅನುವಾದ

ಶ್ರೀರಾಮನು ಯಾರೊಂದಿಗೂ ಯಾವುದೇ ಅಹಿತಕರ, ಅಪ್ರಿಯವಾದ ಮಾತನ್ನು ಎಂದಿಗೂ ಹೇಳುವುದಿಲ್ಲ. ಅವನು ಕೆಟ್ಟಮಾತನ್ನಾಡಲು ಅರಿಯುವುದೇ ಇಲ್ಲ. ಅವನ ಸದ್ಗುಣಗಳಿಂದಾಗಿ ಸದಾಕಾಲ ಅವನು ಸಮ್ಮಾನಿತನಾಗುತ್ತಿದ್ದಾನೆ. ಅಂತಹ ಮನೋಹರವಾಗಿ ಮಾತನ್ನಾಡುವ ಶ್ರೀರಾಮನಲ್ಲಿ ನೀನು ಹೇಗೆ ದೋಷಗಳನ್ನು ಹೇಳುತ್ತಿರುವೆ? ಏಕೆಂದರೆ ಯಾರಲ್ಲಿ ಅನೇಕ ದೋಷವುಳ್ಳವನಿಗೇ ವನವಾಸವನ್ನು ವಿಧಿಸಲಾಗುತ್ತದೆ.॥108॥

ಮೂಲಮ್ - 109

ಪ್ರತಾಮ್ಯ ವಾ ಪ್ರಜ್ವಲ ವಾ ಪ್ರಣಶ್ಯ ವಾ
ಸಹಸ್ರಶೋ ವಾ ಸ್ಫುಟಿತಾಂ ಮಹೀಂ ವ್ರಜ ।
ನ ತೇ ಕರಿಷ್ಯಾಮಿ ವಚಃ ಸುದಾರುಣಂ
ಮಮಾಹಿತಂ ಕೇಕಯರಾಜಪಾಂಸನೆ ॥

ಅನುವಾದ

ಎಲೈ ಕೇಕಯ ರಾಜನ ಕುಲದ ಮೂರ್ತಿಮಂತ ಕಲಂಕಿನಿಯೇ! ನೀನು ಗ್ಲಾನಿಯಲ್ಲಿ ಮುಳುಗಿದರೂ, ಬೆಂಕಿಯಲ್ಲಿ ಬಿದ್ದು ಸುಟ್ಟುಹೋದರೂ, ವಿಷ ತಿಂದು ಸತ್ತುಹೋದರೂ, ಭೂಮಿ ಬಿರಿದು ನೀನು ಭೂಗತಳಾದರೂ ನನ್ನ ಅಹಿತವನ್ನು ಮಾಡುವ ನಿನ್ನ ಈ ಕಠೋರವಾದ ಮಾತನ್ನು ನಾನು ಎಂದೂ ಒಪ್ಪಿಕೊಳ್ಳಲಾರೆನು.॥109॥

ಮೂಲಮ್ - 110

ಕ್ಷುರೋಪಮಾಂ ನಿತ್ಯಮಸತ್ಪ್ರಿಯಂವದಾಂ
ಪ್ರದುಷ್ಟಭಾವಾಂ ಸ್ವಕುಲೋಪಘಾತಿನೀಮ್ ।
ನ ಜೀವಿತುಂ ತ್ವಾಂ ವಿಷಹೇಽಮನೋರಮಾಂ
ದಿಧಕ್ಷಮಾಣಾಂ ಹೃದಯಂ ಸಬಂಧನಮ್ ॥

ಅನುವಾದ

ನೀನು ಕತ್ತಿಯಂತೆ ಘಾತಕಳಾಗಿರುವೆ. ಆಕರ್ಷಕ ಮಧುರವಾದ ಮಾತನ್ನು ಆಡುತ್ತಿರುವೆ, ಆದರೆ ಸದಾಕಾಲ ಸುಳ್ಳು ಮತ್ತು ಸದ್ಭಾವನಾರಹಿತವಾಗಿದೆ. ನಿನ್ನ ಹೃದಯದ ಭಾವವು ಅತ್ಯಂತ ದೂಷಿತವಾಗಿದೆ ಹಾಗೂ ನೀನು ನಿನ್ನ ಕುಲವನ್ನೇ ನಾಶಮಾಡುವವಳಾಗಿರುವೆ. ಇಷ್ಟೇ ಅಲ್ಲ, ನೀನು ಪ್ರಾಣಗಳ ಸಹಿತ ನನ್ನ ಹೃದಯವನ್ನು ಸುಟ್ಟು ಬೂದಿಮಾಡಿ ಬಿಡಲು ಬಯಸುತ್ತಿರುವೆ. ಅದಕ್ಕಾಗಿ ನನ್ನ ಮನಸ್ಸಿಗೆ ನೀನು ಮೆಚ್ಚುವುದಿಲ್ಲ. ನೀನು ಬದುಕಿರುವುದೂ ನನಗೆ ಸಹನೆಯಾಗುವುದಿಲ್ಲ.॥110॥

ಮೂಲಮ್ - 111

ನ ಜೀವಿತಂ ಮೇಽಸ್ತಿ ಕುತಃ ಪುನಃ ಸುಖಂ
ವಿನಾತ್ಮಜೇನಾತ್ಮವತಾಂ ಕುತೋ ರತಿಃ ।
ಮಮಾಹಿತಂ ದೇವಿ ನ ಕರ್ತುಮರ್ಹಸಿ
ಸ್ಪೃಶಾಮಿ ಪಾದಾವಪಿ ತೇ ಪ್ರಸೀದ ಮೇ ॥

ಅನುವಾದ

ದೇವಿ! ನನ್ನ ಮಗ ಶ್ರೀರಾಮನಿಲ್ಲದೆ ನಾನು ಬದುಕಿರಲಾರೆನು, ಮತ್ತೆ ಎಲ್ಲಿ ಸುಖಸಿಗುವುದು? ಆತ್ಮಜ್ಞ ಪುರುಷನಿಗೂ ಕೂಡ ತನ್ನ ಪುತ್ರವಿಯೋಗವಾದರೆ ಹೇಗೆ ಸುಖವಾಗಿರ ಬಲ್ಲನು? ಆದ್ದರಿಂದ ನನ್ನ ಅಹಿತವನ್ನು ಮಾಡಬೇಡ. ನಾನು ನಿನ್ನ ಕಾಲಿಗೆ ಬೀಳುತ್ತೇನೆ, ನನ್ನ ಮೇಲೆ ಪ್ರಸನ್ನಳಾಗು.॥111॥

ಮೂಲಮ್ - 112

ಸ ಭೂಮಿಪಾಲೋ ವಿಲಪನ್ನನಾಥವತ್
ಸ್ತ್ರಿಯಾ ಗೃಹೀತೋಹೃದಯೇಽತಿಮಾತ್ರಯಾ ।
ಪಪಾತ ದೇವ್ಯಾಶ್ಚರಣೌ ಪ್ರಸಾರಿತಾ-
ವುಭಾವಸಂಪ್ರಾಪ್ಯ ಯಥಾಽಽತುರಸ್ತಥಾ ॥

ಅನುವಾದ

ಲೋಕಮರ್ಯಾದೆಯನ್ನು ಮೀರಿ, ದೃಢಸಂಕಲ್ಪಳಾಗಿದ್ದ ಕೈಕೇಗೆ ಅಧೀನನಾಗಿದ್ದ ದಶರಥರಾಜನು ಅನಾಥನಂತೆ ಗೋಳಾಡುತ್ತಾ ಕೈಕೆಯಿಯ ಪಾದಗಳ ಮೇಲೆ ಬೀಳಲು ಬಾಗಿದನು, ಆದರೆ ಆಕೆಯು ಅವೆರಡನ್ನು ಹಿಂದಕ್ಕೆ ತಿರಸ್ಕಾರದಿಂದ ಎಳೆದುಕೊಂಡಳು. ಅವು ಸಿಕ್ಕದೆ ರೋಗಿಯೊಬ್ಬನು ತತ್ತರಿಸಿ ಬೀಳುವಂತೆ ನೆಲಕ್ಕೆ ಕುಸಿದುಬಿದ್ದನು.॥112॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮಿಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹನ್ನೆರಡನೆಯ ಸರ್ಗ ಪೂರ್ಣವಾಯಿತು ॥12॥