०११ कैकेय्याः वरयाचना

वाचनम्
ಭಾಗಸೂಚನಾ

ಕೈಕೆಯಿಯು ರಾಜನನ್ನು ಪ್ರತಿಜ್ಞಾಬದ್ಧನಾಗಿಸಿ, ಹಿಂದೆ ಕೊಟ್ಟಿದ್ದ ಎರಡು ವರಗಳನ್ನು ಅವನ ಸ್ಮರಣೆಗೆ ತಂದು ಭರತನಿಗೆ ಪಟ್ಟಾಭಿಷೇಕವನ್ನು, ರಾಮನಿಗೆ ವನವಾಸವನ್ನು ಬೇಡಿದುದು

ಮೂಲಮ್ - 1

ತಂ ಮನ್ಮಥಶರೈರ್ವಿದ್ಧಂ ಕಾಮವೇಗವಶಾನುಗಮ್ ।
ಉವಾಚ ಪೃಥಿವೀಪಾಲಂ ಕೈಕೇಯೀ ದಾರುಣಂ ವಚಃ ॥

ಅನುವಾದ

ಆಗ ರಾಜನು ಮನ್ಮಥನ ಬಾಣಕ್ಕೆ ಈಡಾಗಿದ್ದನು. ಕಾಮವೇಗಕ್ಕೆ ಕಟ್ಟುಬಿದ್ದಿದ್ದನು. ಅದನ್ನರಿತ ಕೈಕೆಯಿಯು ಅತ್ಯಂತ ಕರ್ಣಕಠೋರವಾದ ಮಾತನ್ನು ಹೇಳಿದಳು .॥1॥

ಮೂಲಮ್ - 2

ನಾಸ್ಮಿ ವಿಪ್ರಕೃತಾ ದೇವ ಕೇನಚಿನ್ನಾವಮಾನಿತಾ ।
ಅಭಿಪ್ರಾಯಸ್ತು ಮೇ ಕಶ್ಚಿತ್ ತಮಿಚ್ಛಾಮಿ ತ್ವಯಾಕೃತಮ್ ॥

ಅನುವಾದ

ಸ್ವಾಮಿ! ಯಾರೂ ನನಗೆ ಅಪಕಾರ ಮಾಡಿಲ್ಲ, ಯಾರಿಂದಲೂ ನಾನು ಅಪಮಾನಿತಳಾಗಲಿಲ್ಲ; ನಿಂದಿತಳೂ ಆಗಲಿಲ್ಲ. ನನಗೆ ಯಾವುದೋ ಮನೋರಥವಿದೆ, ಅದನ್ನು ನಿಮ್ಮಿಂದ ಪೂರ್ಣಗೊಳಿಸಲು ಬಯಸುತ್ತಿರುವೆನು.॥2॥

ಮೂಲಮ್ - 3

ಪ್ರತಿಜ್ಞಾಂ ಪ್ರತಿಜಾನೀಷ್ವ ಯದಿ ತ್ವಂ ಕರ್ತುಮಿಚ್ಛಸಿ ।
ಅಥ ತೇ ವ್ಯಾಹರಿಷ್ಯಾಮಿ ಯಥಾಭಿಪ್ರಾರ್ಥಿತಂ ಮಯಾ ॥

ಅನುವಾದ

ನೀವು ಅದನ್ನು ಪೂರ್ಣಗೊಳಿಸಲು ಬಯಸುವಿರಾದರೆ ಪ್ರತಿಜ್ಞೆ ಮಾಡಿರಿ. ಅನಂತರ ನಾನು ನನ್ನ ವಾಸ್ತವಿಕವಾದ ಅಭಿಪ್ರಾಯವನ್ನು ನಿಮಗೆ ತಿಳಿಸುವೆನು.॥3॥

ಮೂಲಮ್ - 4

ತಾಮುವಾಚ ಮಹಾರಾಜಃ ಕೈಕೇಯೀಮೀಷದುತ್ಸ್ಮಯಃ ।
ಕಾಮೀ ಹಸ್ತೇನ ಸಂಗೃಹ್ಯ ಮೂರ್ಧಜೇಷು ಭುವಿ ಸ್ಥಿತಾಮ್ ॥

ಅನುವಾದ

ಮಹಾರಾಜ ದಶರಥನು ಕಾಮಕ್ಕೆ ಅಧೀನನಾಗಿದ್ದನು. ಅವನು ಕೈಕೆಯಿಯ ಮಾತನ್ನು ಕೇಳಿ ಕೊಂಚ ಮುಗುಳ್ನಕ್ಕು, ನೆಲದಲ್ಲಿ ಬಿದ್ದಿದ್ದ ಆ ದೇವಿಯ ಕೂದಲನ್ನು ಹಿಡಿದೆತ್ತಿ ತಲೆಯನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡು ಆಕೆಯಲ್ಲಿ ಇಂತೆಂದನು.॥4॥

ಮೂಲಮ್ - 5

ಅವಲಿಪ್ತೇ ನಜಾನಾಸಿ ತ್ವತ್ತಃ ಪ್ರಿಯತರೋ ಮಮ ।
ಮನುಜೋ ಮನುಜವ್ಯಾಘ್ರಾದ್ ರಾಮಾದನ್ಯೋ ನ ವಿದ್ಯತೇ ॥

ಅನುವಾದ

ತನ್ನ ಸೌಭಾಗ್ಯದ ಮೇಲೆ ಗರ್ವಪಡುವ ಕೈಕೇ! ನರಶ್ರೇಷ್ಠ ಶ್ರೀರಾಮನಲ್ಲದೆ ನಿನಗಿಂತ ಹೆಚ್ಚು ಪ್ರಿಯರಾದವರು ಯಾರೂ ಇಲ್ಲವೆಂಬುದು ನಿನಗೆ ತಿಳಿದಿಲ್ಲವೇ.॥5॥

ಮೂಲಮ್ - 6

ತೇನಾಜಯ್ಯೇನ ಮುಖ್ಯೇನರಾಘವೇಣ ಮಹಾತ್ಮನಾ ।
ಶಪೇ ತೇ ಜೀವನಾರ್ಹೇಣ ಬ್ರೂಹಿ ಯನ್ಮನಸೇಪ್ಸಿತಮ್ ॥

ಅನುವಾದ

ಅಜೇಯನಾದ ರಘುವಂಶೀಯರಲ್ಲಿಯೇ ಮುಖ್ಯನಾದ, ಮಹಾತ್ಮನಾದ, ನನ್ನ ಪ್ರಾಣಗಳಿಗಿಂತಲೂ ಅಧಿಕನೆನಿಸಿದ ರಾಘವನ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನಿನ್ನ ಮನಸ್ಸಿನ ಬಯಕೆಯನ್ನು ಹೇಳು.॥6॥

ಮೂಲಮ್ - 7

ಯಂ ಮುಹೂರ್ತಮಪಶ್ಯಂಸ್ತು ನ ಜೀವೇ ತಮಹಂ ಧ್ರುವಮ್ ।
ತೇನ ರಾಮೇಣ ಕೈಕೇಯಿ ಶಪೇ ತೇ ವಚನಕ್ರಿಯಾಮ್ ॥

ಅನುವಾದ

ಕೈಕೇಯಿ! ಯಾರನ್ನು ಮುಹೂರ್ತಕಾಲ ನೋಡದಿದ್ದರೆ ನಿಶ್ಚಯವಾಗಿಯೂ ನಾನು ಜೀವಿಸಿರಲಾರನೋ, ಅಂತಹ ಶ್ರೀರಾಮನ ಮೇಲೆ ಆಣೆ ಇಟ್ಟು ಹೇಳುತ್ತೇನೆ - ನೀನು ಹೇಳಿದುದನ್ನು ಪೂರ್ಣಗೊಳಿಸುವೆನು.॥7॥

ಮೂಲಮ್ - 8

ಆತ್ಮನಾ ಚಾತ್ಮಜೈಶ್ಚಾನ್ಯೈರ್ವೃಣೇ ಯಂ ಮನುಜರ್ಷಭಮ್ ।
ತೇನ ರಾಮೇಣ ಕೈಕೇಯಿ ಶಪೇ ತೇ ವಚನಕ್ರಿಯಾಮ್ ॥

ಅನುವಾದ

ಕೈಕೆಯೇ! ನನ್ನ ಪ್ರಾಣಗಳಿಗಿಂತಲೂ ಹೆಚ್ಚಾಗಿ, ನನ್ನ ಇತರ ಮಕ್ಕಳಿಗಿಂತಲೂ ಹೆಚ್ಚಾಗಿ, ನನ್ನ ಬಂಧು-ಬಾಂಧವರಿಗಿಂತಲೂ ಹೆಚ್ಚಾಗಿ ಯಾವ ಪುರುಷ ಶ್ರೇಷ್ಠನಾದ ಶ್ರೀರಾಮನನ್ನು ನಾನು ನೋಡುತ್ತಿರುವೆನೋ, ಅಂತಹ ಶ್ರೀರಾಮನ ಮೇಲೆ ಆಣೆ ಇಟ್ಟು ಹೇಳುತ್ತೇನೆ-ನಿನ್ನ ಎಲ್ಲ ಮಾತುಗಳನ್ನು ನಡೆಸಿಕೊಡುವೆನು.॥8॥

ಮೂಲಮ್ - 9

ಭದ್ರೇ ಹೃದಯಮಪ್ಯೇತದನುಮೃಶ್ಶೋದ್ಧರಸ್ವ ಮೇ ।
ಏತತ್ಸಮೀಕ್ಷ್ಯ ಕೈಕೇಯಿ ಬ್ರೂಹಿ ಯತ್ ಸಾಧು ಮನ್ಯಸೇ ॥

ಅನುವಾದ

ಮಂಗಳ ಸ್ವರೂಪಳೇ! ಕೈಕೇ! ನನ್ನ ಈ ಹೃದಯವೂ ಕೂಡ ನಿನ್ನ ವಚನಗಳ ಪೂರ್ತಿಗಾಗಿ ತತ್ಪರವಾಗಿದೆ. ಹೀಗೆ ಯೋಚಿಸಿ ನೀನು ನಿನ್ನ ಇಚ್ಛೆಯನ್ನು ವ್ಯಕ್ತಗೊಳಿಸಿ ಈ ದುಃಖಸಾಗರದಿಂದ ನನ್ನನ್ನು ಕಾಪಾಡು. ಶ್ರೀರಾಮನು ಎಲ್ಲರಿಗೆ ಪ್ರಿಯನಾಗಿರುವನು ಇದನ್ನು ನೋಡಿ, ನಿನಗೆ ಒಳ್ಳೆಯದೆನಿಸಿದ್ದನ್ನು ಹೇಳು.॥9॥

ಮೂಲಮ್ - 10

ಬಲಮಾತ್ಮನಿ ಪಶ್ಯಂತಿ ನ ವಿಶಂಕಿತುಮರ್ಹಸಿ ।
ಕರಿಷ್ಯಾಮಿ ತವ ಪ್ರೀತಿಂ ಸುಕೃತೇನಾಪಿ ತೇ ಶಪೇ ॥

ಅನುವಾದ

ನನ್ನ ಸಾಮರ್ಥ್ಯವನ್ನು ನೋಡಿಯೂ ನೀನು ನನ್ನ ಮೇಲೆ ಸಂಶಯಪಡಬಾರದು. ನಾನು ನನ್ನ ಸತ್ಕರ್ಮಗಳ ಮೇಲೆ ಆಣೆಯಿಟ್ಟು ಪ್ರತಿಜ್ಞಾಪೂರ್ವಕ ಹೇಳುವೆನು - ನಿನ್ನ ಕಾರ್ಯವನ್ನು ಖಂಡಿತವಾಗಿ ನಡೆಸಿಕೊಡುವೆನು.॥10॥

ಮೂಲಮ್ - 11

ಸಾ ತದರ್ಥಮನಾ ದೇವೀ ತಮಭಿಪ್ರಾಯಮಾಗತಮ್ ।
ನಿರ್ಮಾಧ್ಯಸ್ಥ್ಯಾಚ್ಚ ಹರ್ಷಾಚ್ಚ ಬಭಾಷೇ ದುರ್ವಚಂ ವಚಃ ॥

ಅನುವಾದ

ರಾಣಿ ಕೈಕೆಯ ಮನಸ್ಸು ಸ್ವಾರ್ಥದ ಸಿದ್ಧಿಯಲ್ಲೇ ತೊಡಗಿತ್ತು. ಆಕೆಯ ಮನಸ್ಸಿನಲ್ಲಿ ಭರತನ ಕುರಿತು ಪಕ್ಷಪಾತವಿತ್ತು. ರಾಜನು ನನಗೆ ವಶನಾಗಿರುವನು ಎಂದು ನೋಡಿ ಹರ್ಷಿತಳಾಗಿ, ಈಗ ನಾನು ನನ್ನ ಅಭಿಪ್ರಾಯವನ್ನು ಸಾಧಿಸಿಕೊಳ್ಳುವ ಸಮಯ ಬಂದಿದೆ ಎಂದು ಯೋಚಿಸಿ, ಶತ್ರುವಿನ ಕುರಿತು ಕೂಡ ಹೇಳಲು ಕಠಿಣವಾದ ಮಾತನ್ನು ನುಡಿದಳು.॥11॥

ಮೂಲಮ್ - 12

ತೇನ ವಾಕ್ಯೇನ ಸಂಹೃಷ್ಟಾ ತಮಭಿಪ್ರಾಯಮಾತ್ಮನಃ ।
ವ್ಯಾಜಹಾರ ಮಹಾಘೋರಮಭ್ಯಾಗತಮಿವಾಂತಕಮ್ ॥

ಅನುವಾದ

ರಾಜನ ಪ್ರತಿಜ್ಞಾಯುಕ್ತ ಮಾತಿನಿಂದ ಆಕೆಗೆ ಬಹಳ ಹರ್ಷವಾಗಿತ್ತು. ಬಳಿಗೆ ಬಂದ ಯಮರಾಜನಂತೆ ಅತ್ಯಂತ ಭಯಂಕರವಾದ ತನ್ನ ಅಭಿಪ್ರಾಯವನ್ನು ಆಕೆಯು ಈ ಶಬ್ದಗಳಲ್ಲಿ ವ್ಯಕ್ತಗೊಳಿಸಿದಳು.॥12॥

ಮೂಲಮ್ - 13

ಯಥಾ ಕ್ರಮೇಣ ಶಪಸೆ ವರಂ ಮಮ ದದಾಸಿ ಚ ।
ತಚ್ಛಣ್ವಂತು ತ್ರಯಸಿಂಶದ್ದೇವಾಃ ಸೇಂದ್ರಪುರೋಗಮಾಃ ॥

ಅನುವಾದ

ಮಹಾರಾಜರೇ! ನೀವು ಯಾವ ರೀತಿ ಆಣೆಯಿಟ್ಟು ನನಗೆ ವರವನ್ನು ಕೊಡಲು ಹೊರಟಿರುವುದನ್ನು ಇಂದ್ರಾದಿ ಮೂವತ್ತ ಮೂರು ದೇವತೆಗಳೂ ಕೇಳಿರುವರು.॥13॥

ಮೂಲಮ್ - 14

ಚಂದ್ರಾದಿತ್ಯೌ ನಭಶ್ಚೈವ ಗ್ರಹಾ ರಾತ್ರ್ಯಹನೀ ದಿಶಃ ।
ಜಗಚ್ಚ ಪೃಥಿವೀ ಚೇಯಂ ಸಗಂಧರ್ವಾಃ ಸರಾಕ್ಷಸಾಃ ॥

ಮೂಲಮ್ - 15

ನಿಶಾಚರಾಣಿ ಭೂತಾನಿ ಗೃಹೇಷು ಗೃಹದೇವತಾಃ ।
ಯಾನಿ ಚಾನ್ಯಾನಿ ಭೂತಾನಿ ಜಾನೀಯುರ್ಭಾಷಿತಂ ತವ ॥

ಅನುವಾದ

ಚಂದ್ರ, ಸೂರ್ಯ, ಆಕಾಶ, ಗ್ರಹ, ಹಗಲು, ರಾತ್ರೆ, ದಿಕ್ಕು, ಜಗತ್ತು, ಈ ಭೂಮಿ, ಗಂಧರ್ವರು, ರಾಕ್ಷಸರು, ರಾತ್ರೆಯಲ್ಲಿ ಸಂಚರಿಸುವ ಪ್ರಾಣಿಗಳು, ಗೃಹದೇವತೆ ಹಾಗೂ ಇವರಿಗಿಂತ ಬೇರೆಯಾದ ಎಲ್ಲ ಪ್ರಾಣಿಗಳು ನಿಮ್ಮ ಮಾತನ್ನು ಕೇಳಿ, ನಿಮ್ಮ ಮಾತಿಗೆ ಸಾಕ್ಷಿಯಾಗಿರುವರು.॥14-15॥

ಮೂಲಮ್ - 16

ಸತ್ಯಸಂಧೋ ಮಹಾತೇಜಾ ಧರ್ಮಜ್ಞಃ ಸತ್ಯವಾಕ್ಶುಚಿಃ ।
ವರಂ ಮಮ ದದಾತ್ಯೇಷ ಸರ್ವೇ ಶೃಣ್ವಂತು ದೇವತಾಃ ॥

ಅನುವಾದ

ಎಲ್ಲ ದೇವತೆಗಳಿರಾ ಕೇಳಿರಿ! ಮಹಾತೇಜಸ್ವೀ, ಸತ್ಯಪ್ರತಿಜ್ಞ, ಧರ್ಮಜ್ಞ, ಸತ್ಯವಾದೀ ಹಾಗೂ ಶುದ್ಧ ಆಚಾರ-ವಿಚಾರವುಳ್ಳ ಈ ಮಹಾರಾಜರು ನನಗೆ ವರವನ್ನು ಕೊಡುತ್ತಿರುವರು.॥16॥

ಮೂಲಮ್ - 17

ಇತಿ ದೇವೀ ಮಹೇಷ್ವಾಸಂ ಪರಿಗೃಹ್ಯಾಭಿಶಸ್ಯ ಚ ।
ತತಃ ಪರಮುವಾಚೇದಂ ವರದಂ ಕಾಮಮೋಹಿತಮ್ ॥

ಅನುವಾದ

ಈ ಪ್ರಕಾರ ಕಾಮಮೋಹಿತನಾಗಿ ವರವನ್ನು ಕೊಡಲು ಹೊರಟಿರುವ ಮಹಾಧನುರ್ಧರ ದಶರಥನನ್ನು ಕೈವಶಮಾಡಿಕೊಂಡು ದೇವಿ ಕೈಕೆಯಿಯು ಮೊದಲು ಅವನನ್ನು ಪ್ರಶಂಸಿಸುತ್ತಾ ಮತ್ತೆ ಇಂತೆಂದಳು.॥17॥

ಮೂಲಮ್ - 18

ಸ್ಮರ ರಾಜನ್ ಪುರಾ ವೃತ್ತಂ ತಸ್ಮಿನ್ ದೇವಾಸುರೇ ರಣೇ ।
ತತ್ರ ತ್ವಾಂ ಚ್ಯಾವಯಚ್ಛತ್ರುಸ್ತವ ಜೀವಿತಮಂತರಾ ॥

ಅನುವಾದ

ಮಹಾರಾಜ! ಹಿಂದೆ ನಡೆದ ದೇವಾಸುರ ಸಂಗ್ರಾಮವನ್ನು ಜ್ಞಾಪಿಸಿಕೊಳ್ಳಿರಿ, ಅಲ್ಲಿ ಶತ್ರುಗಳು ನಿಮ್ಮನ್ನು ಗಾಯಗೊಳಿಸಿ ಕೇವಲ ಪ್ರಾಣಗಳು ಮಾತ್ರ ಉಳಿದಿದ್ದವು.॥18॥

ಮೂಲಮ್ - 19

ತತ್ರ ಚಾಪಿ ಮಯಾ ದೇವ ಯತ್ತ್ವಂ ಸಮಭಿರಕ್ಷಿತಃ ।
ಜಾಗ್ರತ್ಯಾ ಯತಮಾನಾಯಾಸ್ತತೋ ಮೇ ಪ್ರದದೌ ವರೌ ॥

ಅನುವಾದ

ಸ್ವಾಮಿ! ಆ ಯುದ್ಧರಂಗದಲ್ಲಿ ಇಡೀ ರಾತ್ರೆ ಎಚ್ಚರವಾಗಿದ್ದು ಅನೇಕ ಪ್ರಕಾರಗಳಿಂದ ನಾನು ನಿಮ್ಮ ಜೀವನವನ್ನು ರಕ್ಷಿಸಿದ್ದೆ. ಅದರಿಂದ ಸಂತುಷ್ಟರಾಗಿ ನೀವು ನನಗೆ ಎರಡು ವರಗಳನ್ನು ಕೊಟ್ಟಿದ್ದಿರಿ.॥19॥

ಮೂಲಮ್ - 20

ತೌ ದತ್ತೌ ಚ ವರೌ ದೇವ ನಿಕ್ಷೇಪೌ ಮೃಗಯಾಮ್ಯಹಮ್ ।
ತವೈವ ಪೃಥಿವೀಪಾಲ ಸಕಾಶೇ ರಘುನಂದನ ॥

ಅನುವಾದ

ದೇವ! ಪೃಥಿವಿ ಪಾಲಕ ರಘುನಂದನರೇ! ನೀವು ಕೊಟ್ಟ ಆ ಎರಡು ವರಗಳನ್ನು ಅಂದು ನಿಮ್ಮಲ್ಲೇ ನ್ಯಾಸವಾಗಿ ನಾನು ಇರಿಸಿದ್ದೆ. ಇಂದು ಈಗ ಅವನ್ನು ಪಡೆಯಲು ಬಯಸುತ್ತಿರುವೆನು.॥20॥

ಮೂಲಮ್ - 21

ತತ್ಪ್ರತಿಶ್ರುತ್ಯ ಧರ್ಮೇಣ ನ ಚೇದ್ ದಾಸ್ಯಸಿ ಮೇ ವರಮ್ ।
ಅದ್ಯೈವಹಿ ಪ್ರಹಾಸ್ಯಾಮಿ ಜೀವಿತಂ ತ್ವದ್ವಿಮಾನಿತಾ ॥

ಅನುವಾದ

ಈ ಪ್ರಕಾರ ಧರ್ಮತಃ ಪ್ರತಿಜ್ಞೆಮಾಡಿ ನೀವು ನನಗೆ ಆ ವರಗಳನ್ನು ಕೊಡದಿದ್ದರೆ ನಾನು ನಿಮ್ಮಿಂದ ಅಪಮಾನಿತಳೆಂದು ತಿಳಿದು ಇಂದೇ ಪ್ರಾಣಗಳನ್ನು ತ್ಯಜಿಸಿಬಿಡುವೆನು.॥21॥

ಮೂಲಮ್ - 22

ವಾಙ್ಮಾತ್ರೇಣ ತದಾ ರಾಜಾ ಕೈಕೇಯ್ಯಾ ಸ್ವವಶೇ ಕೃತಃ ।
ಪ್ರಚಸ್ಕಂದ ವಿನಾಶಾಯ ಪಾಶಂ ಮೃಗ ಇವಾತ್ಮನಃ ॥

ಅನುವಾದ

ವ್ಯಾಧನ ಆಕರ್ಷಕ ಮಾತುಗಳಿಂದ ಜಿಂಕೆಯು ತನ್ನ ವಿನಾಶಕ್ಕಾಗಿ ಬಲೆಯಲ್ಲಿ ಬೀಳುವಂತೆಯೇ, ಕೈಕೆಯಿಗೆ ವಶೀಭೂತನಾದ ದಶರಥನು ಆಗ ಹಿಂದಿನ ವರಗಳ ಸ್ಮರಣೆಮಾತ್ರದಿಂದಲೇ ತನ್ನ ವಿನಾಶಕ್ಕಾಗಿ ಪ್ರತಿಜ್ಞೆಯ ಬಂಧನದಲ್ಲಿ ಬಂಧಿತನಾಗಿದ್ದನು.॥22॥

ಮೂಲಮ್ - 23

ತತಃ ಪರಮುವಾಚೇದಂವರದಂ ಕಾಮಮೋಹಿತಮ್ ।
ವರೌ ದೇಯೌ ತ್ವಯಾ ದೇವ ತದಾ ದತ್ತೌ ಮಹೀಪತೇ ॥

ಮೂಲಮ್ - 24½

ತೌ ತಾವದಹಮದ್ಯೈವ ವಕ್ಷ್ಯಾಮಿ ಶೃಣು ಮೇ ವಚಃ ।
ಅಭಿಷೇಕ ಸಮಾರಂಭೋ ರಾಘವಸ್ಯೋಪಕಲ್ಪಿತಃ ॥
ಅನೇನೈವಾಭಿಷೇಕೇಣ ಭರತೋ ಮೇಽಭಿಷಿಚ್ಯತಾಮ್ ।

ಅನುವಾದ

ಅನಂತರ ಕೈಕೆಯಿಯು ಕಾಮಮೋಹಿತನಾಗಿ ವರವನ್ನು ಕೊಡಲು ಹೊರಟಿರುವ ರಾಜನಲ್ಲಿ ಈ ಪ್ರಕಾರ ಹೇಳಿದಳು - ಸ್ವಾಮಿ! ಪೃಥಿವೀಪಾಲಕರೇ! ಅಂದು ನೀವು ಎರಡು ವರಗಳನ್ನು ಕೊಡಲು ಪ್ರತಿಜ್ಞೆ ಮಾಡಿದ್ದೀರಲ್ಲ, ಅವನ್ನು ಈಗ ನನಗೆ ಕೊಡಿರಿ. ಆ ಎರಡು ವರಗಳನ್ನು ನಿಮಗೆ ತಿಳಿಸುವೆನು, ಕೇಳಿರಿ - ಒಂದು ವರದಿಂದ ಶ್ರೀರಾಮನ ಪಟ್ಟಾಭಿಷೇಕಕ್ಕೆ ಮಾಡಿದ ಸಿದ್ಧತೆಗಳಿಂದ ನನ್ನ ಪುತ್ರ ಭರತನಿಗೆ ಪಟ್ಟಾಭಿಷೇಕ ಮಾಡಬೇಕು.॥23-24½॥

ಮೂಲಮ್ - 25½

ಯೋ ದ್ವಿತೀಯೋ ವರೋ ದೇವ ದತ್ತಃ ಪ್ರೀತೇನ ಮೇ ತ್ವಯಾ ॥
ತದಾ ದೇವಾಸುರೇ ಯುದ್ಧೇ ತಸ್ಯಕಾಲೋಽಯಮಾಗತಃ ।

ಅನುವಾದ

ಸ್ವಾಮಿ! ದೇವಾಸುರ ಸಂಗ್ರಾಮದಲ್ಲಿ ನೀವು ಪ್ರಸನ್ನರಾಗಿ ನನಗೆ ಕೊಟ್ಟ ಇನ್ನೊಂದು ವರವನ್ನು ಪಡೆದುಕೊಳ್ಳುವ ಸಮಯವೂ ಈಗ ಬಂದಿದೆ.॥25½॥

ಮೂಲಮ್ - 26

ನವ ಪಂಚ ಚ ವರ್ಷಾಣಿ ದಂಡಕಾರಣ್ಯಮಾಶ್ರಿತಃ ॥

ಮೂಲಮ್ - 27

ಚೀರಾಜಿನಧರೋ ಧೀರೋ ರಾಮೋ ಭವತು ತಾಪಸಃ ।
ಭರತೋಭಜತಾಮದ್ಯ ಯೌವರಾಜ್ಯಮಕಂಟಕಮ್ ॥

ಅನುವಾದ

ಧೀರ ಸ್ವಭಾವವುಳ್ಳ ಶ್ರೀರಾಮನು ತಪಸ್ವಿಯಾಗಿ, ಮೃಗ ಚರ್ಮ-ವಲ್ಕಲಗಳನ್ನು ಧರಿಸಿ ಹದಿನಾಲ್ಕು ವರ್ಷಗಳವರೆಗೆ ದಂಡಕಾರಣ್ಯದಲ್ಲಿ ಇರಬೇಕು. ಭರತನಿಗೆ ಇಂದೇ ನಿಷ್ಕಂಟಕ ಯುವರಾಜಪದವಿ ಸಿಗಬೇಕು.॥26-27॥

ಮೂಲಮ್ - 28

ಏಷ ಮೇ ಪರಮಃ ಕಾಮೋ ದತ್ತಮೇವ ವರಂ ವೃಣೇ ।
ಅದ್ಯ ಚೈವ ಹಿ ಪಶ್ಯೇಯಂ ಪ್ರಯಾಂತಂ ರಾಘವಂವನೇ ॥

ಅನುವಾದ

ಇದೇ ನನ್ನ ಸರ್ವಶ್ರೇಷ್ಠ ಕಾಮನೆಯಾಗಿದೆ. ನಾನು ನಿಮ್ಮಲ್ಲಿ ಮೊದಲಿಗೆ ಕೊಟ್ಟ ವರಗಳನ್ನು ಬೇಡುತ್ತಿರುವೆನು. ನಾನು ಇಂದೇ ಶ್ರೀರಾಮನು ವನಕ್ಕೆ ಹೋಗುವುದನ್ನು ನೋಡುವಂತೆ ವ್ಯವಸ್ಥೆ ಮಾಡಿರಿ.॥28॥

ಮೂಲಮ್ - 29

ಸ ರಾಜರಾಜೋ ಭವ ಸತ್ಯಸಂಗರಃ
ಕುಲಂ ಚ ಶೀಲಂ ಚ ಹಿ ಜನ್ಮ ರಕ್ಷ ಚ ।
ಪರತ್ರ ವಾಸೇ ಹಿ ವದಂತ್ಯನುತ್ತಮಂ
ತಪೋಧನಾಃ ಸತ್ಯವಚೋ ಹಿತಂ ನೃಣಾಮ್ ॥

ಅನುವಾದ

ನೀವು ರಾಜರ ಮಹಾರಾಜರಾಗಿರುವಿರಿ. ಆದ್ದರಿಂದ ಸತ್ಯ ಪ್ರತಿಜ್ಞರಾಗಿ, ಆ ಸತ್ಯದಿಂದ ನಿಮ್ಮ ಕುಲ, ಶೀಲ ಮತ್ತು ಜೀವನವನ್ನು ರಕ್ಷಿಸಿಕೊಳ್ಳಿರಿ. ಸತ್ಯಮಾತನಾಡುವುದು ಎಲ್ಲಕ್ಕಿಂತ ಶ್ರೇಷ್ಠ ಧರ್ಮವಾಗಿದೆ ಎಂದು ತಪಸ್ವಿಗಳು ಹೇಳುತ್ತಾರೆ. ಅದು ಪರಲೋಕದಲ್ಲಿಯೂ ಮನುಷ್ಯನಿಗೆ ಪರಮ ಶ್ರೇಯಸ್ಕರವಾಗಿರುತ್ತದೆ.॥29॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹನ್ನೊಂದನೆಯ ಸರ್ಗ ಪೂರ್ಣವಾಯಿತು. ॥11॥