००९ कैकेय्याः क्रोधागारप्रवेशः

वाचनम्
ಭಾಗಸೂಚನಾ

ಮಂಥರೆಯ ದುರ್ಬೋಧನೆಯಿಂದ ಕೈಕೇಯಿಯು ದಶರಥನನ್ನು ವಿಮೋಹಗೊಳಿಸಲು ಕೋಪ ಭವನವನ್ನು ಪ್ರವೇಶಿಸಿದುದು

ಮೂಲಮ್ - 1

ಏವಮುಕ್ತಾ ತುಕೈಕೇಯೀ ಕ್ರೋಧೇನ ಜ್ವಲಿತಾನನಾ ।
ದೀರ್ಘಮುಷ್ಣಂ ವಿನಿಃಶ್ವಸ್ಯ ಮಂಥರಾಮಿದಮಬ್ರವೀತ್ ॥

ಅನುವಾದ

ಮಂಥರೆಯು ಹೀಗೆ ಹೇಳಿದಾಗ ಕೈಕೇಯಿಯ ಮುಖ ಕ್ರೋಧದಿಂದ ಉರಿದೆದ್ದಿತು. ಅವಳು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಮಂಥರೆಯಲ್ಲಿ ಇಂತೆಂದಳು .॥1॥

ಮೂಲಮ್ - 2

ಅದ್ಯ ರಾಮಮಿತಃ ಕ್ಷಿಪ್ರಂ ವನಂ ಪ್ರಸ್ಥಾಪಯಾಮ್ಯಹಮ್ ।
ಯೌವರಾಜ್ಯೇನ ಭರತಂ ಕ್ಷಿಪ್ರಮದ್ಯಾಭಿಷೇಚಯೇ ॥

ಅನುವಾದ

ಕುಬ್ಜೆ! ನಾನು ಶ್ರೀರಾಮನನ್ನು ಶೀಘ್ರವಾಗಿ ಕಾಡಿಗೆ ಕಳಿಸುವೆನು ಹಾಗೂ ಕೂಡಲೇ ಭರತನಿಗೆ ಯುವರಾಜನಾಗಿ ಪಟ್ಟಾಭಿಷೇಕ ಮಾಡಿಸುವೆನು.॥2॥

ಮೂಲಮ್ - 3

ಇದಂ ತ್ವಿದಾನೀಂ ಸಂಪಶ್ಯ ಕೇನೋಪಾಯೇನ ಸಾಧಯೇ ।
ಭರತಃ ಪ್ರಾಪ್ನುಯಾದ್ ರಾಜ್ಯಂ ನ ತು ರಾಮಃ ಕಥಂಚನ ॥

ಅನುವಾದ

ಆದರೆ ಈಗ ಯಾವ ಉಪಾಯದಿಂದ ನನ್ನ ಅಭೀಷ್ಟವನ್ನು ಸಾಧಿಸಿಕೊಳ್ಳಬಹುದು? ಭರತನಿಗೆ ರಾಜ್ಯ ಪ್ರಾಪ್ತವಾಗಿ, ಶ್ರೀರಾಮನು ಯಾವ ರೀತಿಯಿಂದಲೂ ರಾಜ್ಯ ಪಡೆಯದಂತಹ ಕೆಲಸ ಹೇಗಾಗುವುದು ಯೋಚಿಸು.॥3॥

ಮೂಲಮ್ - 4

ಏವಮುಕ್ತಾ ತು ಸಾ ದೇವ್ಯಾ ಮಂಥರಾ ಪಾಪದರ್ಶಿನೀ ।
ರಾಮಾರ್ಥಮುಪಹಿಂಸಂತೀ ಕೈಕೇಯೀಮಿದಮಬ್ರವೀತ್ ॥

ಅನುವಾದ

ದೇವೀ ಕೈಕೆಯು ಹೀಗೆ ಹೇಳಿದಾಗ ಪಾಪದ ದಾರಿ ತೋರುವ ಮಂಥರೆಯು ಶ್ರೀರಾಮನ ಸ್ವಾರ್ಥದ ಮೇಲೆ ಕುಠಾರಘಾತ ಮಾಡುತ್ತಾ ಕೈಕೆಯ ಬಳಿ ಇಂತೆಂದಳು .॥4॥

ಮೂಲಮ್ - 5

ಹಂತೇದಾನೀಂ ಪ್ರಪಶ್ಯ ತ್ವಂ ಕೈಕೇಯಿ ಶ್ರೂಯತಾಂ ವಚಃ ।
ಯಥಾ ತೇ ಭರತೋ ರಾಜ್ಯಂ ಪುತ್ರಃ ಪ್ರಾಪ್ಸ್ಯತಿ ಕೇವಲಮ್ ॥

ಅನುವಾದ

ಕೇಕಯನಂದಿನಿ! ಸರಿ, ಈಗ ನೋಡು ನಾನು ಏನು ಮಾಡುತ್ತಿರುವೆ? ನೀನು ನನ್ನ ಮಾತನ್ನು ಕೇಳಬೇಕು. ಅದರಿಂದ ಕೇವಲ ನಿನ್ನ ಪುತ್ರ ಭರತನೇ ರಾಜ್ಯವನ್ನು ಪಡೆಯುವನು (ಶ್ರೀರಾಮನಲ್ಲ).॥5॥

ಮೂಲಮ್ - 6

ಕಿಂ ನ ಸ್ಮರಸಿ ಕೈಕೇಯಿ ಸ್ಮರಂತೀ ವಾ ನಿಗೂಹಸೇ ।
ಯದುಚ್ಯಮಾನಮಾತ್ಮಾರ್ಥಂ ಮತ್ತಸ್ತ್ವಂ ಶ್ರೋತುಮಿಚ್ಛಸಿ ॥

ಅನುವಾದ

ಕೈಕೇ! ನೀನು ನನ್ನೊಂದಿಗೆ ಅನೇಕ ಸಲ ಚರ್ಚಿಸಿದ್ದುದು ನಿನಗೆ ನೆನಪಿಲ್ಲವೇ? ನೆನಪಿದ್ದರೂ ನನ್ನಲ್ಲಿ ಅಡಗಿಸಿಡುವೆಯಾ? ಅದನ್ನು ನನ್ನಿಂದಲೇ ಕೇಳಲು ಬಯಸುತ್ತಿರುವೆಯಾ? ಏನು ಕಾರಣ.॥6॥

ಮೂಲಮ್ - 7

ಮಯೋಚ್ಯಮಾನಂ ಯದಿ ತೇಶ್ರೋತುಂಛಂದೋ ವಿಲಾಸಿನಿ ।
ಶ್ರೂಯತಾಮಭಿಧಾಸ್ಯಾಮಿ ಶ್ರುತ್ವಾ ಚೈತದ್ ವಿಧೀಯತಾಮ್ ॥

ಅನುವಾದ

ವಿಲಾಸಿನಿಯೇ! ನನ್ನ ಬಾಯಿಯಿಂದಲೇ ಕೇಳಬೇಕೆಂಬ ಆಗ್ರಹ ನಿನಗಿದ್ದರೆ ಹೇಳುವೆನು ಕೇಳು. ಕೇಳಿ ಅದಕ್ಕನುಸಾರ ಕಾರ್ಯಮಾಡು.॥7॥

ಮೂಲಮ್ - 8

ಶ್ರುತ್ವೈವಂ ವಚನಂ ತಸ್ಯಾ ಮಂಥರಾಯಾಸ್ತು ಕೈಕಯೀ ।
ಕಿಂಚಿದುತ್ಥಾಯ ಶಯನಾತ್ ಸ್ವಾಸ್ತೀರ್ಣಾದಿದಮಬ್ರವೀತ್ ॥

ಅನುವಾದ

ಮಂಥರೆಯ ಈ ಮಾತನ್ನು ಕೇಳಿ ಕೈಕೆಯು ಆ ಮೆತ್ತನೆಯ ಹಾಸಿಗೆಯಿಂದ ಸ್ವಲ್ಪ ಮೇಲೆದ್ದು ಆಕೆಯಲ್ಲಿ ಹೇಳಿದಳು.॥8॥

ಮೂಲಮ್ - 9

ಕಥಯಸ್ತ್ವ ಮಮೋಪಾಯಂ ಕೇನೋಪಾಯೇನ ಮಂಥರೇ ।
ಭರತಃ ಪ್ರಾಪ್ನು ಯಾದ್ರಾಜ್ಯಂ ನ ತು ರಾಮಃ ಕಥಂಚನ ॥

ಅನುವಾದ

ಮಂಥರೆ! ಯಾವ ಉಪಾಯದಿಂದ ಭರತನಿಗೆ ರಾಜ್ಯ ಸಿಗುವುದು? ಆದರೆ ಶ್ರೀರಾಮನಿಗೆ ಅದು ಯಾವ ರೀತಿಯಿಂದಲೂ ಸಿಗದಿರುವ ಉಪಾಯವನ್ನು ನನಗೆ ತಿಳಿಸು.॥9॥

ಮೂಲಮ್ - 10

ಏವಮುಕ್ತಾ ತದಾ ದೇವ್ಯಾ ಮಂಥರಾ ಪಾಪದರ್ಶಿನೀ ।
ರಾಮಾರ್ಥಮುಪಹಿಂಸಂತೀ ಕೈಕೇಯೀಮಿದಮಬ್ರವೀತ್ ॥

ಅನುವಾದ

ದೇವಿ ಕೈಕೆಯಿ ಹೀಗೆ ಹೇಳಿದಾಗ ಪಾಪದ ಮಾರ್ಗ ತೋರುವ ಮಂಥರೆಯು ಶ್ರೀರಾಮ ಸ್ವಾರ್ಥಕ್ಕೆ ನೀರೆರೆಚುತ್ತಾ ಕೈಕೆಯ ಬಳಿ ಈ ಪ್ರಕಾರ ಹೇಳಿದಳು .॥10॥

ಮೂಲಮ್ - 11

ಪುರಾ ದೇವಾಸುರೇ ಯುದ್ಧೇ ಸಹರಾಜರ್ಷಿಭಿಃ ಪತಿಃ ।
ಅಗಚ್ಛತ್ ತ್ವಾ ಮುಪಾದಾಯ ದೇವರಾಜಸ್ಯ ಸಾಹ್ಯಕೃತ್ ॥

ಅನುವಾದ

ದೇವಿ! ಹಿಂದೊಮ್ಮೆ ದೇವಾಸುರ ಸಂಗ್ರಾಮದ ಸಂದರ್ಭ ರಾಜರ್ಷಿಗಳ ಜೊತೆಗೆ ನಿನ್ನ ಪತಿಯು ನಿನ್ನನ್ನು ಜೊತೆಗೆ ಕರೆದುಕೊಂಡು ದೇವೇಂದ್ರನ ಸಹಾಯಕ್ಕಾಗಿ ಸ್ವರ್ಗಲೋಕಕ್ಕೆ ಹೋಗಿದ್ದನು.॥11॥

ಮೂಲಮ್ - 12

ದಿಶಮಾಸ್ಥಾಯ ಕೈಕೇಯೀ ದಕ್ಷಿಣಾಂ ದಂಡಕಾನ್ಪ್ರತಿ ।
ವೈಜಯಂತಮಿತಿಖ್ಯಾತಂ ಪುರಂ ಯತ್ರ ತಿಮಿಧ್ವಜಃ ॥

ಮೂಲಮ್ - 13

ಸ ಶಂಬರ ಇತಿ ಖ್ಯಾತಃ ಶತಮಾಯೋ ಮಹಾಸುರಃ ।
ದದೌ ಶಕ್ರಸ್ಯ ಸಂಗ್ರಾಮಂ ದೇವಸಂಘೈರನಿರ್ಜಿತಃ ॥

ಅನುವಾದ

ಕೇಕಯ ರಾಜಕುಮಾರಿ! ದಕ್ಷಿಣ ದಿಕ್ಕಿನ ದಂಡಕಾರಣ್ಯದಲ್ಲಿ ವೈಜಯಂತ ಎಂಬ ವಿಖ್ಯಾತ ನಗರವೊಂದಿತ್ತು. ಅಲ್ಲಿ ಶಂಬರನೆಂಬ ಪ್ರಸಿದ್ಧ ಮಹಾ ಅಸುರನೊಬ್ಬ ಇರುತ್ತಿದ್ದನು. ಆ ತಿಮಿ ಧ್ವಜನು ನೂರಾರು ಮಾಯೆಗಳನ್ನು ಬಲ್ಲವನಾಗಿದ್ದನು. ದೇವತೆಗಳಿಂದಲೂ ಸೋಲಲರಿಯದ ಅವನು ಒಮ್ಮೆ ಇಂದ್ರನೊಡನೆ ಯುದ್ಧ ಸಾರಿದನು.॥12-13॥

ಮೂಲಮ್ - 14

ತಸ್ಮಿನ್ಮಮಹತಿ ಸಂಗ್ರಾಮೇ ಪುರುಷಾನ್ ಕ್ಷತವಿಕ್ಷತಾನ್ ।
ರಾತ್ರೌ ಪ್ರಸುಪ್ತಾನ್ ಘ್ನಂತಿ ಸ್ಮ ತರಸಾಪಾಸ್ಯ ರಾಕ್ಷಸಾಃ ॥

ಅನುವಾದ

ಆ ಮಹಾಸಂಗ್ರಾಮದಲ್ಲಿ ಕ್ಷತ-ವಿಕ್ಷಿತನಾದ ವೀರನು ಬಳಲಿ ರಾತ್ರೆಯಲ್ಲಿ ಮಲಗಿದ್ದಾಗ ರಾಕ್ಷಸನು ಅವನನ್ನು ಹಾಸಿಗೆಯಿಂದಲೇ ಎತ್ತಿಕೊಂಡು ಹೋಗಿ ಕೊಂದುಹಾಕುತ್ತಿದ್ದನು.॥14॥

ಮೂಲಮ್ - 15

ತತ್ರಾಕರೋನ್ಮಹಾಯುದ್ಧಂ ರಾಜಾ ದಶರಥಸ್ತದಾ ।
ಅಸುರೈಶ್ಚ ಮಹಾಬಾಹುಃ ಶಸ್ತ್ರೈಶ್ಚ ಶಕಲೀಕೃತಃ ॥

ಅನುವಾದ

ಆಗ ಮಹಾಬಾಹು ದಶರಥ ಮಹಾರಾಜನೂ ಅಲ್ಲಿ ಅಸುರರೊಂದಿಗೆ ಭಾರೀ ಯುದ್ಧಮಾಡಿದನು. ಆ ಯುದ್ಧದಲ್ಲಿ ಅಸುರರು ಅಸ್ತ್ರ-ಶಸ್ತ್ರಗಳಿಂದ ರಾಜನ ಶರೀರವನ್ನು ಜರ್ಜರಿತಗೊಳಿಸಿದರು.॥15॥

ಮೂಲಮ್ - 16

ಅಪವಾಹ್ಯ ತ್ವಯಾ ದೇವಿ ಸಂಗ್ರಾಮಾನ್ನಷ್ಟಚೇತನಃ ।
ತತ್ರಾಪಿ ವಿಕ್ಷತಃ ಶಸ್ತ್ರೈಃ ಪತಿಸ್ತೇ ರಕ್ಷಿತಸ್ತ್ವಯಾ ॥

ಅನುವಾದ

ದೇವಿ! ರಾಜನು ಎಚ್ಚರ ತಪ್ಪಿದಾಗ ಸಾರಥಿಯ ಕೆಲಸ ಮಾಡುತ್ತಿದ್ದ ನೀನು ತನ್ನ ಪತಿಯನ್ನು ರಣಭೂಮಿಯಿಂದ ದೂರ ಕೊಂಡುಹೋಗಿ ಅವನನ್ನು ರಕ್ಷಿಸಿದೆ. ಅಲ್ಲಿಯೂ ರಾಕ್ಷಸರ ಅಸಗಳಿಂದ ಗಾಯಗೊಂಡಾಗ ನೀನು ಪುನಃ ಅಲ್ಲಿಂದ ಬೇರೆಡೆಗೆ ಕೊಂಡಹೋಗಿ ಅವನನ್ನು ರಕ್ಷಿಸಿದೆ.॥16॥

ಮೂಲಮ್ - 17

ತುಷ್ಟೇನ ತೇನದತ್ತೌ ತೇ ದ್ವೌ ವರೌ ಶುಭದರ್ಶನೇ ।
ಸ ತ್ವಯೋಕ್ತಃ ಪತಿರ್ದೇವಿ ಯದೇಚ್ಛೇಯಂ ತದಾ ವರಮ್ ॥

ಮೂಲಮ್ - 18

ಗೃಹ್ಣೀಯಾಂ ತು ತದಾಭರ್ತಸ್ತಥೇತ್ಯುಕ್ತಂ ಮಹಾತ್ಮನಾ ।
ಅನಭಿಜ್ಞಾ ಹ್ಯಹಂ ದೇವಿ ತ್ವಯೈವ ಕಥಿತಂ ಪುರಾ ॥

ಅನುವಾದ

ಶುಭದರ್ಶನೆ! ಇದರಿಂದ ಸಂತುಷ್ಟಗೊಂಡ ಮಹಾರಾಜರು ನಿನಗೆ ಎರಡು ವರವನ್ನು ಕೊಡುವುದಾಗಿ ಹೇಳಿದನು - ದೇವಿ! ಆಗ ಪ್ರಾಣನಾಥ! ನನಗೆ ಇಚ್ಛೆಯಾದಾಗ ಈ ವರಗಳನ್ನು ಕೇಳಿಕೊಳ್ಳುವೆನು ಎಂದು ನೀನು ಹೇಳಿದೆ. ನಾನು ಈ ಕಥೆಯನ್ನು ತಿಳಿದಿರಲಿಲ್ಲ, ಹಿಂದೆ ನೀನೇ ನನಗೆ ಇದನ್ನು ಹೇಳಿದ್ದೆ.॥17-18॥

ಮೂಲಮ್ - 19

ಕಥೈಷಾ ತವ ತು ಸ್ನೇಹಾನ್ಮನಸಾ ಧಾರ್ಯತೇ ಮಯಾ ।
ರಾಮಾಭಿಷೇಕಸಂಭಾರಾನ್ನಿಗೃಹ್ಯ ವಿನಿವರ್ತಯ ॥

ಅನುವಾದ

ಅಂದಿನಿಂದ ನಿನ್ನಲ್ಲಿರುವ ಪ್ರೀತಿಯಿಂದ ನಾನು ಈ ಮಾತನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದೆ. ನೀನು ಈ ವರಗಳ ಪ್ರಭಾವದಿಂದ ಗಂಡನನ್ನು ವಶಪಡಿಸಿಕೊಂಡು ಶ್ರೀರಾಮನ ಪಟ್ಟಾಭಿಷೇಕವನ್ನು ನಿಲ್ಲಿಸಿ ಬಿಡು.॥19॥

ಮೂಲಮ್ - 20

ತೌ ಚ ಯಾಚಸ್ವ ಭರ್ತಾರಂ ಭರತಸ್ಯಾಭಿಷೇಚನಮ್ ।
ಪ್ರವ್ರಾಜನಂ ಚ ರಾಮಸ್ಯ ವರ್ಷಾಣಿ ಚ ಚತುರ್ದಶ ॥

ಅನುವಾದ

ನೀನು ಆ ಎರಡು ವರಗಳನ್ನು ಪತಿಯಲ್ಲಿ ಕೇಳು. ಒಂದು ವರದಿಂದ ಭರತನಿಗೆ ರಾಜ್ಯವನ್ನು ಹಾಗೂ ಮತ್ತೊಂದರಿಂದ ಶ್ರೀರಾಮನಿಗೆ ಹದಿನಾಲ್ಕು ವರ್ಷ ವನವಾಸವನ್ನು ಕೇಳಿಕೋ.॥20॥

ಮೂಲಮ್ - 21

ಚತುರ್ದಶ ಹಿ ವರ್ಷಾಣಿ ರಾಮೇ ಪ್ರವ್ರಾಜಿತೇ ವನಮ್ ।
ಪ್ರಜಾಭಾವಗತಸ್ನೇಹಃ ಸ್ಥಿರಃ ಪುತ್ರೋ ಭವಿಷ್ಯತಿ ॥

ಅನುವಾದ

ಶ್ರೀರಾಮನು ಹದಿನಾಲ್ಕು ವರ್ಷ ವನಕ್ಕೆ ಹೋದಾಗ, ಅಷ್ಟು ಅವಧಿಯಲ್ಲಿ ನಿನ್ನ ಪುತ್ರ ಭರತನು ಸಮಸ್ತ ಪ್ರಜೆಗಳ ಹೃದಯದಲ್ಲಿ ಸ್ನೇಹವನ್ನು ಉಂಟು ಮಾಡಿ, ಈ ರಾಜ್ಯದಲ್ಲಿ ಸ್ಥಿರವಾಗಿ ನೆಲೆಸುವನು.॥21॥

ಮೂಲಮ್ - 22

ಕ್ರೋಧಾಗಾರಂ ಪ್ರವಿಶ್ಯಾದ್ಯ ಕ್ರುದ್ಧೇವಾಶ್ವಪತೇಃ ಸುತೇ ।
ಶೇಷ್ವಾನಂತರ್ಹಿತಾಯಾಂ ತ್ವಂ ಭೂಮೌ ಮಲಿನವಾಸಿನೀ ॥

ಅನುವಾದ

ಅಶ್ವಪತಿಕುಮಾರಿಯೇ! ನೀನು ಈಗ ಮಲಿನ ವಸ್ತ್ರವನ್ನುಟ್ಟು, ಕೋಪಭವನವನ್ನು ಪ್ರವೇಶಿಸಿ ಸಿಟ್ಟುಗೊಂಡವಳಂತೆ ನೆಲದ ಮೇಲೆ ಬಿದ್ದುಕೊಂಡಿರು.॥22॥

ಮೂಲಮ್ - 23

ಮಾ ಸ್ಮೈನಂ ಪ್ರತ್ಯುದೀಕ್ಷೇಥಾ ಮಾ ಚೈನಮಭಿಭಾಷಥಾಃ ।
ರುದಂತೀ ಪಾರ್ಥಿವಂ ದೃಷ್ಟ್ವಾ ಜಗತ್ಯಾಂ ಶೋಕಲಾಲಸಾ ॥

ಅನುವಾದ

ರಾಜನು ಬಂದಾಗ ಅವನ ಕಡೆಗೆ ಕಣ್ಣೆತ್ತಿಯೂ ನೋಡದೆ, ಏನನ್ನೂ ಮಾತನಾಡ ಬೇಡ. ಮಹಾರಾಜರನ್ನು ನೋಡುತ್ತಲೇ ಅಳುತ್ತಾ ನೆಲದಲ್ಲೇ ಹೊರಳಾಡುತ್ತಾ ಇರು.॥23॥

ಮೂಲಮ್ - 24

ದಯಿತಾ ತ್ವಂ ಸದಾ ಭರ್ತುರತ್ರ ಮೇ ನಾಸ್ತಿ ಸಂಶಯಃ ।
ತ್ವತ್ಕೃತೇ ಚ ಮಹಾರಾಜೋ ವಿಶೇದಪಿ ಹುತಾಶನಮ್ ॥

ಅನುವಾದ

ನೀನು ನಿನ್ನ ಪತಿಗೆ ಸದಾಕಾಲ ತುಂಬಾ ಪ್ರಿಯಳಾಗಿರುವೆ ಇದರಲ್ಲಿ ಕೊಂಚವೂ ಸಂದೇಹವಿಲ್ಲ. ನಿನಗಾಗಿ ಮಹಾ ರಾಜರು ಬೆಂಕಿಗೂ ಹಾರಬಲ್ಲರು.॥24॥

ಮೂಲಮ್ - 25

ನ ತ್ವಾಂ ಕ್ರೋಧಯಿತುಂ ಶಕ್ತೋ ನ ಕ್ರುದ್ಧಾಂ ಪ್ರತ್ಯುದೀಕ್ಷಿತುಮ್ ।
ತವ ಪ್ರಿಯಾರ್ಥಂ ರಾಜಾ ತು ಪ್ರಾಣಾನಪಿ ಪರಿತ್ಯಜೇತ್ ॥

ಅನುವಾದ

ಅವನು ನಿನ್ನ ಮೇಲೆ ಸಿಟ್ಟಾಗಲಾರನು ಹಾಗೂ ಕೋಪಗೊಂಡಿರುವ ನಿನ್ನನ್ನು ನೋಡಲಾರನು. ದಶರಥ ರಾಜನು ನಿನಗೆ ಪ್ರಿಯವಾದುದನ್ನು ಮಾಡಲು ತನ್ನ ಪ್ರಾಣಗಳನ್ನು ತ್ಯಜಿಸಬಲ್ಲನು.॥25॥

ಮೂಲಮ್ - 26

ನ ಹ್ಯತಿಕ್ರಮಿತುಂ ಶಕ್ತಸ್ತವ ವಾಕ್ಯಂ ಮಹೀಪತಿಃ ।
ಮಂದಸ್ವಭಾವೇ ಬುಧ್ಯಸ್ವ ಸೌಭಾಗ್ಯಬಲಮಾತ್ಮನಃ ॥

ಅನುವಾದ

ಮಹಾರಾಜರು ನಿನ್ನ ಮಾತನ್ನು ಯಾವ ರೀತಿಯಿಂದಲೂ ಅಲ್ಲಗಳೆಯಲಾರನು. ಮುಗ್ಧೆ! ನೀನು ನಿನ್ನ ಸೌಭಾಗ್ಯದ ಬಲವನ್ನು ಸ್ಮರಿಸಿಕೋ.॥26॥

ಮೂಲಮ್ - 27

ಮಣಿಮುಕ್ತಾಸುವರ್ಣಾನಿ ರತ್ನಾನಿ ವಿವಿಧಾನಿ ಚ ।
ದದ್ಯಾದ್ದಶರಥೋ ರಾಜಾ ಮಾ ಸ್ಮ ತೇಷು ಮನಃ ಕೃಥಾಃ ॥

ಅನುವಾದ

ದಶರಥರಾಜನು ನಿನ್ನನ್ನು ಮರಳುಗೊಳಿಸಲು ಮಣಿ, ಮುತ್ತು, ಸುವರ್ಣ, ಬಗೆ-ಬಗೆಯ ರತ್ನಗಳನ್ನು ಕೊಡಲು ಪ್ರಯತ್ನಿಸುವನು; ಆದರೆ ನೀನು ಅದರ ಕಡೆಗೆ ಮನಗೊಡಬೇಡ.॥27॥

ಮೂಲಮ್ - 28

ಯೌ ತೌ ದೇವಾಸುರೇ ಯುದ್ಧೇ ವರೌ ದಶರಥೋದದೌ ।
ತೌ ಸ್ಮಾರಯ ಮಹಾಭಾಗೇ ಸೋರ್ಥೋ ನತ್ವಾ ಕ್ರಮೇದತಿ ॥

ಅನುವಾದ

ಮಹಾಭಾಗಳೇ! ದೇವಾಸುರ ಸಂಗ್ರಾಮದ ಸಂದರ್ಭದಲ್ಲಿ ದಶರಥನು ನಿನಗೆ ಕೊಟ್ಟ ವರಗಳನ್ನು ಅವನಿಗೆ ನೆನಪು ಮಾಡಿಕೊಡು. ವರದಾನವಾಗಿ ಕೇಳಿದ ನಿನ್ನ ಅಭೀಷ್ಟವು ಸಿದ್ಧಿಯಾಗದೆ ಇರಲಾದರು.॥28॥

ಮೂಲಮ್ - 29

ಯದಾ ತು ತೇ ವರಂ ದದ್ಯಾತ್ ಸ್ವಯಮುತ್ಥಾಪ್ಯ ರಾಘವಃ ।
ವ್ಯವಸ್ಥಾಪ್ಯ ಮಹಾರಾಜಂ ತ್ವಮಿಮಂ ವೃಣುಯಾವರಮ್ ॥

ಅನುವಾದ

ರಘುಕುಲನಂದನ ದಶರಥ ರಾಜನು ಸ್ವತಃ ನಿನ್ನನ್ನು ನೆಲದಿಂದ ಎಬ್ಬಿಸಿ ವರವನ್ನು ಕೊಡಲು ಮುಂದಾದಾಗ, ಮಹಾರಾಜನು ಸತ್ಯದ ಮೇಲೆ ಆಣೆಯಿಟ್ಟು ಕೊಡುವುದಾಗಿ ಗಟ್ಟಿಯಾದ ಮೇಲೆ ಅವನಲ್ಲಿ ವರಗಳನ್ನು ಕೇಳು.॥29॥

ಮೂಲಮ್ - 30

ರಾಮಪ್ರವ್ರಜನಂ ದೂರಂ ನವ ವರ್ಷಾಣಿ ಪಂಚ ಚ ।
ಭರತಃ ಕ್ರಿಯತಾಂ ರಾಜಾ ಪೃಥಿವ್ಯಾಂ ಪಾರ್ಥಿವರ್ಷಭ ॥

ಅನುವಾದ

ವರಗಳನ್ನು ಕೇಳುವಾಗ ‘ಮಹಾರಾಜರೇ! ನೀವು ಶ್ರೀರಾಮನನ್ನು ಹದಿನಾಲ್ಕು ವರ್ಷ ಬಹಳ ದೂರ ಕಾಡಿಗೆ ಕಳಿಸಿಬಿಡಿರಿ ಮತ್ತು ಭರತನಿಗೆ ಭೂಮಂಡಲದ ರಾಜನನ್ನಾಗಿಸಿರಿ’ ಎಂದು ಹೇಳು.॥30॥

ಮೂಲಮ್ - 31

ಚತುರ್ದಶ ಹಿ ವರ್ಷಾಣಿ ರಾಮೇ ಪ್ರವ್ರಾಜಿತೇ ವನಮ್ ।
ರೂಢಶ್ಚ ಕೃತಮೂಲಶ್ಚ ಶೇಷಂ ಸ್ಥಾಸ್ಯತಿ ತೇ ಸುತಃ ॥

ಅನುವಾದ

ಶ್ರೀರಾಮನು ಹದಿನಾಲ್ಕು ವರ್ಷಕ್ಕಾಗಿ ಕಾಡಿಗೆ ಹೋದ ಮೇಲೆ ನಿನ್ನ ಪುತ್ರ ಭರತನ ರಾಜ್ಯ ಸುದೃಢವಾಗುವುದು ಹಾಗೂ ಪ್ರಜೆಗಳ ಮನಸ್ಸಿನಲ್ಲೇ ಬೇರೂರಿಕೊಂಡಿದ್ದರಿಂದ ಅವನ ಪ್ರಭಾವ ಹೆಚ್ಚಿ ಮತ್ತೆ ಹದಿನಾಲ್ಕು ವರ್ಷಗಳ ಬಳಿಕವೂ ಅವನೇ ಶಾಶ್ವತವಾಗಿ ರಾಜನಾಗುವನು.॥31॥

ಮೂಲಮ್ - 32

ರಾಮಪ್ರವ್ರಾಜನಂ ಚೈವ ದೇವಿ ಯಾಚಸ್ವ ತಂ ವರಮ್ ।
ಏವಂ ಸೇತ್ಸ್ಯಂತಿ ಪುತ್ರಸ್ಯ ಸರ್ವಾರ್ಥಾಸ್ತವ ಕಾಮಿನಿ ॥

ಅನುವಾದ

ದೇವಿ! ನೀನು ರಾಜನಲ್ಲಿ ಶ್ರೀರಾಮನ ವನವಾಸದ ವರವನ್ನು ಅವಶ್ಯವಾಗಿ ಕೇಳಿಕೋ. ಮಗನಿಗಾಗಿ ರಾಜ್ಯವನ್ನು ಬಯಸುತ್ತಿರುವ ಕೈಕೇ! ಹೀಗೆ ಮಾಡುವುದರಿಂದ ನಿನ್ನ ಎಲ್ಲ ಮನೋರಥಗಳು ಸಿದ್ಧವಾಗುವವು.॥32॥

ಮೂಲಮ್ - 33

ಏವಂ ಪ್ರವ್ರಾಜಿತಶ್ಚೈವ ರಾಮೋಽರಾಮೋ ಭವಿಷ್ಯತಿ ।
ಭರತಶ್ಚ ಹತಾಮಿತ್ರಸ್ತವ ರಾಜಾ ಭವಿಷ್ಯತಿ ॥

ಅನುವಾದ

ಈ ಪ್ರಕಾರ ವನವಾಸ ಪಡೆದ ರಾಮನು ರಾಮನಾಗಿ ಉಳಿಯಲಾರನು. (ಇಂದು ಇರುವ ಅವನ ಪ್ರಭಾವ ಮುಂದೆ ಇರಲಾರದು). ನಿನ್ನ ಪುತ್ರ ಭರತನೂ ಶತ್ರುರಹಿತನಾಗಿ ರಾಜನಾಗುವನು.॥33॥

ಮೂಲಮ್ - 34

ಯೇನ ಕಾಲೇನ ರಾಮಶ್ಚ ವನಾತ್ ಪ್ರತ್ಯಾಗಮಿಷ್ಯತಿ ।
ಅಂತರ್ಬಹಿಶ್ಚ ಪುತ್ರಸ್ತೇ ಕೃತಮೂಲೋ ಭವಿಷ್ಯತಿ ॥

ಅನುವಾದ

ಶ್ರೀರಾಮನು ವನವಾಸದಿಂದ ಮರಳಿ ಬಂದಾಗ ನಿನ್ನ ಪುತ್ರ ಭರತನು ಹೊರಗಿನಿಂದ ಮತ್ತು ಒಳಗಿನಿಂದ ದೃಢಮೂಲನಾಗುವನು, ಸಮರ್ಥನಾಗುವನು.॥34॥

ಮೂಲಮ್ - 35½

ಸಂಗೃಹೀತಮನುಷ್ಯಶ್ಚ ಸುಹೃದ್ಭಿಃ ಸಾಕಮಾತ್ಮವಾನ್ ।
ಪ್ರಾಪ್ತಕಾಲಂ ನು ಮನ್ಯೇಽಹಂ ರಾಜಾನಂವೀತಸಾಧ್ವಸಾ ॥
ರಾಮಾಭಿಷೇಕಸಂಕಲ್ಪಾನ್ನಿಗೃಹ್ಯ ವಿನಿವರ್ತಯ ।

ಅನುವಾದ

ಅವನ ಬಳಿ ಸೈನ್ಯ ಬಲದ ಸಂಗ್ರಹ ಇರುವುದು, ಜಿತೇಂದ್ರಿಯನಾದರೋ ಅವನು ಆಗಿಯೇ ಇದ್ದಾನೆ; ತನ್ನ ಸುಹೃದರೊಂದಿಗೆ ಇದ್ದು ಬೇರೂರಿ ದೃಢವಾಗುವನು. ಈಗ ನಾನು ತಿಳಿದಂತೆ ರಾಜನನ್ನು ಶ್ರೀರಾಮನ ಪಟ್ಟಾಭಿಷೇಕ ಸಂಕಲ್ಪದಿಂದ ತಡೆಯುವ ಸಮಯ ಬಂದಿದೆ. ಆದ್ದರಿಂದ ನೀನು ನಿರ್ಭಯಳಾಗಿ ರಾಜನನ್ನು ನಿನ್ನ ಮಾತುಗಳಿಂದ ಕಟ್ಟಿಹಾಕಿ, ಅವನಲ್ಲಿದ್ದ ಶ್ರೀರಾಮ ಪಟ್ಟಾಭಿಷೇಕದ ಸಂಕಲ್ಪವನ್ನು ಅಳಿಸಿಹಾಕಿಬಿಡು.॥35॥

ಮೂಲಮ್ - 36

ಅನರ್ಥಮರ್ಥರೂಪೇಣ ಗ್ರಾಹಿತಾ ಸಾ ತತಸ್ತಯಾ ॥

ಮೂಲಮ್ - 37½

ಹೃಷ್ಟಾ ಪ್ರತೀತಾ ಕೈಕೇಯೀ ಮಂಥರಾಮಿದಮಬ್ರವೀತ್ ।
ಸಾ ಹಿ ವಾಕ್ಯೇನ ಕುಬ್ಜಾಯಾಃ ಕಿಶೋರೀವೋತ್ಪಥಂ ಗತಾ ॥
ಕೈಕೇಯೀ ವಿಸ್ಮಯಂ ಪ್ರಾಪ್ಯ ಪರಂ ಪರಮದರ್ಶನಾ ।

ಅನುವಾದ

ಇಂತಹ ಮಾತುಗಳನ್ನಾಡಿ ಮಂಥರೆಯು ಕೈಕೆಯ ಶುದ್ಧಾಂತಃಕರಣವನ್ನು ಕದಡಿಬಿಟ್ಟಳು. ಬುದ್ಧಿಯಲ್ಲಿ ಅನರ್ಥ ಉಂಟಾಗಿ ಆಕೆಯ ಮಾತಿನಲ್ಲಿ ವಿಶ್ವಾಸಹೊಂದಿ ಮನಸ್ಸಿನಲ್ಲೇ ಸಂತೋಷಗೊಂಡಳು. ಒಂದು ವೇಳೆ ಆಕೆಯು ಬಹಳ ಬುದ್ಧಿವಂತಳಾಗಿದ್ದರೂ ಕುಬ್ಜೆಯು ಹೇಳಿದ್ದರಿಂದ ತಿಳಿವಳಿಕೆ ಇಲ್ಲದ ಬಾಲಕಿಯಂತೆ ಕುಮಾರ್ಗವನ್ನು ಹಿಡಿದು ಅನುಚಿತ ಕಾರ್ಯಮಾಡಲು ಮುಂದಾದಳು. ಆಕೆಗೆ ಮಂಥರೆಯ ಬುದ್ಧಿಯ ಕುರಿತು ಆಶ್ಚರ್ಯಹೊಂದಿ ಆಕೆಯಲ್ಲಿ ಈ ಪ್ರಕಾರ ನುಡಿದಳು.॥36-37½॥

ಮೂಲಮ್ - 38

ಪ್ರಜ್ಞಾಂ ತೇ ನಾವಜಾನಾಮಿ ಶ್ರೇಷ್ಠೇ ಶ್ರೇಷ್ಠಾ ಭಿಧಾಯಿನಿ ॥

ಮೂಲಮ್ - 39

ಪೃಥಿವ್ಯಾಮಸಿ ಕುಬ್ಜಾನಾಮುತ್ತಮಾ ಬುದ್ಧಿನಿಶ್ಚಯೇ ।
ತ್ವಮೇವ ತು ಮಮಾರ್ಥೇಷು ನಿತ್ಯಯುಕ್ತಾ ಹಿತೈಷಿಣೀ ॥

ಅನುವಾದ

ಹಿತದ ಮಾತನ್ನು ಹೇಳುವುದರಲ್ಲಿ ಕುಶಲಳಾದ ಕುಬ್ಜೆಯೇ! ನೀನು ಓರ್ವ ಶ್ರೇಷ್ಠ ಸ್ತ್ರೀಯಾಗಿದ್ದು, ನಿನ್ನ ಬುದ್ಧಿಯನ್ನು ನಾನು ಅವಹೇಳನ ಮಾಡಲಾರೆ. ಬುದ್ಧಿವಂತಿಕೆಯಿಂದ ಯಾವುದೇ ಕಾರ್ಯವನ್ನು ನಿಶ್ಚಯಿಸುವುದರಲ್ಲಿ ನೀನು ಭೂಮಿಯಲ್ಲಿ ಎಲ್ಲ ಕುಬ್ಜೆಯರಲ್ಲಿ ಉತ್ತಮಳಾಗಿರುವೆ. ಕೇವಲ ನೀನೇ ನನಗೆ ಹಿತೈಷಿಯಾಗಿರುವೆ. ಸದಾಕಾಲ ಎಚ್ಚರವಾಗಿದ್ದು ನನ್ನ ಕಾರ್ಯವನ್ನು ಮಾಡುವುದರಲ್ಲಿ ತೊಡಗಿರುತ್ತಿಯೇ.॥38-39॥

ಮೂಲಮ್ - 40

ನಾಹಂ ಸಮವಬುಧ್ಯೇಯಂ ಕುಬ್ಜೇ ರಾಜ್ಞಶ್ಚಿಕೀರ್ಷಿತಮ್ ।
ಸಂತಿ ದುಃಸಂಸ್ಥಿತಾಃ ಕುಬ್ಜಾ ವಕ್ರಾಃ ಪರಮಪಾಪಿಕಾಃ ॥

ಅನುವಾದ

ಕುಬ್ಜೆ! ನೀನು ಇಲ್ಲದಿದ್ದರೆ ರಾಜನು ರಚಿಸಿದ ಷಡ್ಯಂತ್ರವು ನನಗೆ ಎಂದಿಗೂ ತಿಳಿಯುತ್ತಿರಲಿಲ್ಲ. ನೀನಲ್ಲದೆ ಜಗತ್ತಿನಲ್ಲಿ ಇರುವ ಕುಬ್ಜೆಯರೆಲ್ಲ ಸ್ಥೂಲಕಾಯರಾಗಿ ಅಕ್ರವಕ್ರರಾಗಿ ಮಹಾಪಾಪಿಗಳಾಗಿದ್ದಾರೆ.॥40॥

ಮೂಲಮ್ - 41

ತ್ವಂ ಪದ್ಮಮಿವ ವಾತೇನ ಸಂವತಾ ಪ್ರಿಯದರ್ಶನಾ ।
ಉರಸ್ತೇಽಭಿನಿವಿಷ್ಟಂ ವೈ ಯಾವತ್ ಸ್ಕಂಧಾತ್ಸಮುನ್ನತಮ್ ॥

ಅನುವಾದ

ನೀನಾದರೋ ವಾಯುವಿನಿಂದ ಬಾಗಿದ ಕಮಲಿನಿಯಂತೆ ಸ್ವಲ್ಪಬಾಗಿದ್ದರೂ ನೋಡಲು ಸುಂದರವಾಗಿರುವೆ. ನಿನ್ನ ವಕ್ಷಸ್ಥಲವು ಕುಬ್ಜತೆಯ ದೋಷದಿಂದ ಕೂಡಿದ್ದು, ಭುಜಗಳವರೆಗೆ ಎತ್ತರವಾಗಿ ಕಾಣುತ್ತದೆ.॥41॥

ಮೂಲಮ್ - 42

ಅಧಸ್ತಾಚ್ಚೋದರಂ ಶಾಂತಂಸುನಾಭಮಿವ ಲಜ್ಜಿತಮ್ ।
ಪ್ರತಿಪೂರ್ಣಂ ಚ ಜಘನಂ ಸುಪೀನೌ ಚ ಪಯೋಧರೌ ॥

ಅನುವಾದ

ವಕ್ಷಸ್ಥಳದ ಕೆಳಗೆ ಸುಂದರ ನಾಭಿಯಿಂದ ಯುಕ್ತವಾದ ಉದರವು, ವಕ್ಷಸ್ಥಳದ ಹಿರಿಮೆಯನ್ನು ಕಂಡು ನಾಚಿದಂತೆ ಆಗಿ ಕೃಶವಾಗಿದೆ. ನಿನ್ನ ಜಘನಗಳು ವಿಸ್ತೃತವಾಗಿ, ಎರಡೂ ಸ್ತನಗಳು ಸ್ಥೂಲವಾಗಿದ್ದು ಸುಂದರವಾಗಿವೆ.॥42॥

ಮೂಲಮ್ - 43

ವಿಮಲೇಂದುಸಮಂ ವಕ್ತ್ರಮಹೋ ರಾಜಸಿ ಮಂಥರೇ ।
ಜಘನಂ ತವ ನಿರ್ಮೃಷ್ಟಂ ರಶನಾದಾಮಭೂಷಿತಮ್ ॥

ಅನುವಾದ

ಮಂಥರೇ! ನಿನ್ನ ಮುಖವು ನಿರ್ಮಲ ಚಂದ್ರನಂತೆ ಅದ್ಭುತವಾಗಿ ಶೋಭಿಸುತ್ತದೆ. ಒಡ್ಯಾಣದಿಂದ ಪರಿಶೋಭಿಸುವ ನಿನ್ನ ಕಟಿಯ ಪುರೋಭಾಗವು ರೋಮರಾಜಿಯಿಂದ ರಹಿತವಾಗಿ ಸ್ವಚ್ಛವಾಗಿದೆ.॥43॥

ಮೂಲಮ್ - 44½

ಜಂಘೇಭೃಶಮುಪನ್ಯಸ್ತೇ ಪಾದೌ ಚ ವ್ಯಾಯತಾವುಭೌ ।
ತ್ವಮಾಯತಾಭ್ಯಾಂ ಸಕ್ಥಿಭ್ಯಾಂ ಮಂಥರೇ ಕ್ಷೌಮವಾಸಿನೀ ॥
ಅಗ್ರತೋ ಮಮ ಗಚ್ಛಂತೀ ರಾಜಸೇತೀವ ಶೋಭನೇ ।

ಅನುವಾದ

ಮಂಥರೇ! ನಿನ್ನ ತೊಡೆಗಳು ಪರಸ್ಪರ ತಾಗಿಕೊಂಡಿದ್ದು, ಎರಡೂ ಕಾಲುಗಳು ಸ್ಥೂಲವಾಗಿವೆ. ಶೋಭನೇ! ನೀನು ವಿಶಾಲವಾದ ಜಂಘೆಗಳಿಂದ ಕೂಡಿದ್ದು, ರೇಶ್ಮೆಯ ಸೀರೆಯನ್ನುಟ್ಟು ನನ್ನ ಮುಂದೆ ಸುಳಿದಾಗ ನಿನ್ನ ಶೋಭೆ ಎಷ್ಟೆಂದು ಹೇಳಲಿ.॥44॥

ಮೂಲಮ್ - 45

ಆಸನ್ ಯಾಃ ಶಂಬರೇ ಮಾಯಾಃ ಸಹಸ್ರಮಸುರಾಧಿಪೇ ॥

ಮೂಲಮ್ - 46½

ಹೃದಯೇ ತೇ ನಿವಿಷ್ಟಾಸ್ತಾಭೂಯಶ್ಚಾನ್ಯಾಃ ಸಹಸ್ರಶಃ ।
ತವೇದಂ ಸ್ಥಗು ಯುದ್ದೀರ್ಘಂ ರಥಘೋಣಮಿವಾಯತಮ್ ॥
ಮತಯಃ ಕ್ಷತ್ರವಿದ್ಯಾಶ್ಚ ಮಾಯಾಶ್ಚಾತ್ರ ವಸಂತಿ ತೇ ।

ಅನುವಾದ

ಅಸುರರಾಜಾ ಶಂಬರನಿಗೆ ತಿಳಿದಿದ್ದ ಸಾವಿರಾರು ಮಾಯೆಗಳ ಜ್ಞಾನವೆಲ್ಲವೂ ನಿನ್ನ ಹೃದಯದಲ್ಲಿ ನೆಲಿಸಿವೆ. ಇವುಗಳಲ್ಲದೆಯೂ ನೀನು ಸಾವಿರಾರು ಮಾಯೆಗಳನ್ನು ತಿಳಿದಿರುವೆ. ರಥಚಕ್ರದ ನಡುವಿನ ಗುಂಭದಂತೆ ಇರುವ ನಿನ್ನ ಗೂನು ಈ ಮಾಯೆಗಳ ಸಮುದಾಯವೇ ಆಗಿದೆ. ಇದರಲ್ಲೇ ನಿನ್ನ ಮತಿ, ಸ್ಮೃತಿ, ಬುದ್ಧಿ ರಾಜನೀತಿ ಹಾಗೂ ನಾನಾ ಪ್ರಕಾರದ ಮಾಯೆಗಳು ವಾಸಿಸುತ್ತಿವೆ.॥45-46½॥

ಮೂಲಮ್ - 47

ಅತ್ರ ತೇಹಂ ಪ್ರಮೋಕ್ಷ್ಯಾಮಿ ಮಾಲಾಂ ಕುಬ್ಜೇ ಹಿರಣ್ಮಯೀಮ್ ॥

ಮೂಲಮ್ - 48½

ಅಭಿಷಿಕ್ತೇ ಚ ಭರತೇ ರಾಘವೇ ಚ ವನಂ ಗತೇ ।
ಜಾತ್ಯೇನ ಚ ಸುವರ್ಣೇನ ಸುನಿಷ್ಟಪ್ತೇನ ಸುಂದರಿ ॥
ಲಬ್ಧಾರ್ಥಾ ಚ ಪ್ರತೀತಾ ಚ ಲೇಪಯಿಷ್ಯಾಮಿ ತೇ ಸ್ಥಗು ।

ಅನುವಾದ

ಸುಂದರೀ ಕುಬ್ಜೆ! ಭರತನ ರಾಜ್ಯಾಭಿಷೇಕವಾಗಿ ಶ್ರೀರಾಮನು ಕಾಡಿಗೆ ಹೊರಟು ಹೋದರೆ ನಾನು ಸಫಲ ಮನೋರಥ ಹಾಗೂ ಸಂತುಷ್ಟಳಾಗಿ, ಉತ್ತಮ ಜಾತಿಯ ಕಾದ ಬಂಗಾರದಿಂದ ಮಾಡಿದ ಸುಂದರ ಸುವರ್ಣಮಾಲೆಯನ್ನು ನಿನ್ನ ಈ ಗೂನಿಗೆ ತೊಡಿಸಿ, ಚಂದನ ಲೇಪನ ಮಾಡುವೆನು.॥47-48½॥

ಮೂಲಮ್ - 49

ಮುಖೇ ಚ ತಿಲಕಂ ಚಿತ್ರಂ ಜಾತರೂಪಮಯಂ ಶುಭಮ್ ॥

ಮೂಲಮ್ - 50

ಕಾರಯಿಷ್ಯಾಮಿ ತೇ ಕುಬ್ಜೇ ಶುಭಾನ್ಯಾಭರಣಾನಿಚ ।
ಪರಿಧಾಯ ಶುಭೇ ವಸ್ತ್ರೇ ದೇವತೇವ ಚರಿಷ್ಯಸಿ ॥

ಅನುವಾದ

ಕುಬ್ಜೆ! ನಿನ್ನ ಸುಂದರ ಹಣೆಯ ಮೇಲೆ ಸುವರ್ಣದಿಂದ ಚಿತ್ರಿತವಾದ ತಿಲಕ (ಹಣೆ ಬೊಟ್ಟು)ವನ್ನಿಡುವೆನು. ನೀನು ಸುಂದರ ಒಡವೆಗಳನ್ನು ಉತ್ತಮ ಎರಡು ರೇಶ್ಮೆ ವಸ್ತ್ರಗಳನ್ನು ಧರಿಸಿ ದೇವಾಂಗನೆಯರಂತೆ ಒಡಾಡುವೆ.॥49-50॥

ಮೂಲಮ್ - 51

ಚಂದ್ರಮಾಹ್ವಯಮಾನೇನ ಮುಖೇನಾಪ್ರತಿಮಾನನಾ ।
ಗಮಿಷ್ಯಸಿ ಗತಿಂ ಮುಖ್ಯಾಂ ಗರ್ವಯಂತೀ ದ್ವಿಷಜ್ಜನೇ ॥

ಅನುವಾದ

ಚಂದ್ರನೊಡನೆ ಸ್ಪರ್ಧಿಸುವ ನಿನ್ನ ಮನೋಹರ ಮುಖದ ಸಮಾನತೆ ಎಲ್ಲಿಯೂ ಇಲ್ಲದೆ ಸುಂದರಳಾಗಿರುವೆ. ಶತ್ರುಗಳ ನಡುವೆ ತನ್ನ ಸೌಭಾಗ್ಯದ ಗರ್ವದಿಂದ ನೀನು ಸರ್ವಶ್ರೇಷ್ಠ ಸ್ಥಾನ ಪಡೆದುಕೊಳ್ಳುವೆ.॥51॥

ಮೂಲಮ್ - 52

ತವಾಪಿ ಕುಬ್ಜಾಃ ಕುಬ್ಜಾಯಾಃ ಸರ್ವಾಭರಣಭೂಷಿತಾಃ ।
ಪಾದೌ ಪರಿಚರಿಷ್ಯಂತಿ ಯಥೈವ ತ್ವಂ ಸದಾ ಮಮ ॥

ಅನುವಾದ

ನೀನು ಸದಾ ನನ್ನ ಚರಣಗಳ ಸೇವೆಮಾಡುತ್ತಿರುವಂತೆಯೇ ಸಮಸ್ತ ಒಡವೆಗಳಿಂದ ಅಲಂಕೃತರಾಗದ ಅನೇಕ ಕುಬ್ಜೆಯರು ನಿನ್ನ ಚರಣಗಳ ಸೇವೆ ಮಾಡುವರು.॥52॥

ಮೂಲಮ್ - 53

ಇತಿ ಪ್ರಶಸ್ಯಮಾನಾ ಸಾ ಕೈಕೇಯೀಮಿದಮಬ್ರವೀತ್ ।
ಶಯಾನಾಂ ಶಯನೇ ಶುಭ್ರೇ ವೇದ್ಯಾಮಗ್ನಿ ಶಿಖಾಮಿವ ॥

ಅನುವಾದ

ಹೀಗೆ ಕುಬ್ಜೆಯನ್ನು ಪ್ರಶಂಸಿಸಿದಾಗ ಆಕೆಯು ಯಜ್ಞ ವೇದಿಯಲ್ಲಿ ಪ್ರಜ್ವಲಿತ ಅಗ್ನಿಯಂತೆ ಶುಭ್ರಶಯ್ಯೆಯಲ್ಲಿ ಶಯನ ಮಾಡುವ ಕೈಕೆಯ ಬಳಿ ಈ ಪ್ರಕಾರ ಹೇಳಿದಳು.॥53॥

ಮೂಲಮ್ - 54

ಗತೋದಕೇ ಸೇತುಬಂಧೋ ನ ಕಲ್ಯಾಣಿ ವಿಧೀಯತೇ ।
ಉತ್ತಿಷ್ಠ ಕುರು ಕಲ್ಯಾಣಂ ರಾಜಾನಮನುದರ್ಶಯ ॥

ಅನುವಾದ

ಕಲ್ಯಾಣೀ! ನದಿಯ ನೀರು ಆರಿಹೋದ ಮೇಲೆ ಅಣೆಕಟ್ಟು ಕಟ್ಟುವುದಿಲ್ಲ. (ರಾಮನ ಪಟ್ಟಾಭಿಷೇಕ ಆಗಿ ಹೋದರೆ ನೀನು ವರ ಕೇಳುವುದು ವ್ಯರ್ಥವಾದೀತು. ಆದ್ದರಿಂದ ಮಾತುಗಳಲ್ಲಿ ಸಮಯ ಕಳೆಯಬೇಡ) ಬೇಗ ಏಳು ಮತ್ತು ನಿನ್ನ ಶ್ರೇಯಸ್ಸನ್ನು ಮಾಡಿಕೋ. ಕೋಪಭವನಕ್ಕೆ ಹೋಗಿ ರಾಜನಿಗೆ ನಿನ್ನ ಸ್ಥಿತಿಯ ಪರಿಚಯ ಮಾಡಿಸು.॥54॥

ಮೂಲಮ್ - 55

ತಥಾ ಪ್ರೋತ್ಸಾಹಿತಾ ದೇವೀ ಗತ್ವಾ ಮಂಥರಯಾ ಸಹ ।
ಕ್ರೋಧಾಗಾರಂ ವಿಶಾಲಾಕ್ಷೀ ಸೌಭಾಗ್ಯಮದಗರ್ವಿತಾ ॥

ಮೂಲಮ್ - 56

ಅನೇಕಶತಸಾಹಸ್ರಂ ಮುಕ್ತಾಹಾರಂ ವರಾಂಗನಾ ।
ಅವಮುಚ್ಯ ವರಾರ್ಹಾಣಿ ಶುಭಾನ್ಯಾಭರಣಾನಿ ಚ ॥

ಅನುವಾದ

ಮಂಥರೆಯು ಹೀಗೆ ಪ್ರೋತ್ಸಾಹಿಸಿದಾಗ ಸೌಭಾಗ್ಯದ ಮದದಿಂದ ಗರ್ವಿತಳಾದ ವಿಶಾಲಲೋಚನೆ ಸುಂದರೀ ಕೈಕಾದೇವಿಯು ಆಕೆಯೊಂದಿಗೇ ಕೋಪಭವನಕ್ಕೆ ಹೋಗಿ ಅನೇಕ ಲಕ್ಷ ವರಹಗಳ ಮೌಲ್ಯದ ಮುತ್ತಿನ ಹಾರಗಳನ್ನೂ, ಇತರ ಸುಂದರ-ಸುಂದರ ಒಡವೆಗಳನ್ನು ಶರೀರದಿಂದ ಕಳಚಿ ಎಸೆಯತೊಡಗಿದಳು.॥55-56॥

ಮೂಲಮ್ - 57

ತದಾ ಹೇಮೋಪಮಾ ತತ್ರ ಕುಬ್ಜಾವಾಕ್ಯವಶಂಗತಾ ।
ಸಂವಿಶ್ಯ ಭೂವೌ ಕೈಕೇಯೀ ಮಂಥರಾಮಿದಮಬ್ರವೀತ್ ॥

ಅನುವಾದ

ಸ್ವರ್ಣಕಾಂತಿಯಂತೆ ಸುಂದರ ಕಾಂತಿಯುಳ್ಳ ಕೈಕೆಯು ಕುಬ್ಜೆಯ ಮಾತಿಗೆ ವಶೀಭೂತಳಾಗಿದ್ದಳು; ಆದ್ದರಿಂದ ಅವಳು ನೆಲದಲ್ಲಿ ಮಲಗಿ ಮಂಥರೆಯಲ್ಲಿ ಇಂತೆಂದಳು .॥57॥

ಮೂಲಮ್ - 58

ಇಹ ವಾ ಮಾಂ ಮೃತಾಂ ಕುಬ್ಜೇ ನೃಪಾಯಾವೇದಯಿಷ್ಯಸಿ ।
ವನಂ ತು ರಾಘವೇ ಪ್ರಾಪ್ತೇ ಭರತಃಪ್ರಾಪ್ಸ್ಯತೇ ಕ್ಷಿತಿಮ್ ॥

ಮೂಲಮ್ - 59

ಸುವರ್ಣೇನ ನ ಮೇ ಹ್ಯರ್ಥೋ ನ ರತ್ನೈರ್ನ ಚ ಭೋಜನೈಃ ।
ಏಷ ಮೇ ಜೀವಿತಸ್ಯಾಂತೋ ರಾಮೋಯದ್ಯಭಿಷಿಚ್ಯತೇ ॥

ಅನುವಾದ

ಕುಬ್ಜೆ! ನನಗೆ ಸುವರ್ಣದಿಂದ, ರತ್ನಗಳಿಂದ, ಬಗೆ-ಬಗೆಯ ಭೋಜನಗಳಿಂದ ಯಾವುದೇ ಪ್ರಯೋಜನವಿಲ್ಲ. ಶ್ರೀರಾಮನ ಪಟ್ಟಾಭಿಷೇಕ ನಡೆದರೆ ಈ ನನ್ನ ಜೀವನದ ಅಂತ್ಯವಾಗುವುದು. ಈಗ ಒಂದೋ ಶ್ರೀರಾಮನು ವನಕ್ಕೆ ಹೋದಮೇಲೆ ಭರತನಿಗೆ ಈ ಭೂತಲದ ರಾಜ್ಯ ಪ್ರಾಪ್ತವಾಗುವುದು ಅಥವಾ ನೀನು ಇಲ್ಲಿ ಮಹಾರಾಜರಿಗೆ ನನ್ನ ಮೃತ್ಯುವಿನ ಸಮಾಚಾರ ತಿಳಿಸುವೆ.॥58-59॥

ಮೂಲಮ್ - 60

ಅಥೋ ಪುನಸ್ತಾಂ ಮಹಿಷೀಂ ಮಹೀಕ್ಷಿತೋ
ವಚೋಭಿರತ್ಯರ್ಥಮಹಾಪರಾಕ್ರಮೈಃ ।
ಉವಾಚ ಕುಬ್ಜಾ ಭರತಸ್ಯ ಮಾತರಂ
ಹಿತಂ ವಚೋ ರಾಮಮುಪೇತ್ಯ ಚಾಹಿತಮ್ ॥

ಅನುವಾದ

ಅನಂತರ ಕಬ್ಜೆಯು ದಶರಥನ ರಾಣಿ ಮತ್ತು ಭರತನ ತಾಯಿ ಕೈಕೆಯಿಯ ಬಳಿ ಲೌಕಿಕ ದೃಷ್ಟಿಯಿಂದ ಭರತನಿಗಾಗಿ ಹಿತಕರ ಹಾಗೂ ಶ್ರೀರಾಮನಿಗಾಗಿ ಅಹಿತಕರ ಕ್ರೂರವಾದ ಮಾತನ್ನು ಪುನಃ ಹೇಳಿದಳು.॥60॥

ಮೂಲಮ್ - 61

ಪ್ರಪತ್ಸ್ಯತೇ ರಾಜ್ಯಮಿದಂ ಹಿ ರಾಘವೋ
ಯದಿ ಧ್ರುವಂ ತ್ವಂ ಸಸುತಾ ಚ ತಪ್ಸ್ಯಸೇ ।
ತತೋ ಹಿ ಕಲ್ಯಾಣಿ ಯತಸ್ವ ತತ್ ತಥಾ
ಯಥಾ ಸುತಸ್ತೇ ಭರತೋಽಭಿಷೇಕ್ಷ್ಯತೇ ॥

ಅನುವಾದ

ಕಲ್ಯಾಣಿ! ಶ್ರೀರಾಮನು ಈ ರಾಜ್ಯವನ್ನು ಪಡೆದುಕೊಂಡರೆ ನಿಶ್ಚಯವಾಗಿಯೂ ನೀನು ಪುತ್ರನೊಂದಿಗೆ ಭಾರೀ ಸಂತಾಪದಲ್ಲಿ ಬೀಳುವೆ. ಆದ್ದರಿಂದ ನಿನ್ನ ಪುತ್ರ ಭರತನ ಪಟ್ಟಾಭಿಷೇಕವಾಗುವಂತೆ ಪ್ರಯತ್ನಿಸು.॥61॥

ಮೂಲಮ್ - 62

ತಥಾತಿವಿದ್ಧಾ ಮಹಿಷೀತಿ ಕುಬ್ಜಯಾ
ಸಮಾಹತಾ ವಾಗಿಷುಭಿರ್ಮುಹುರ್ಮುಹುಃ ।
ವಿಧಾಯ ಹಸ್ತೌ ಹೃದಯೇಽತಿವಿಸ್ಮಿತಾ
ಶಶಂಸಕುಬ್ಜಾಂಕುಪಿತಾ ಪುನಃ ಪುನಃ ॥

ಅನುವಾದ

ಹೀಗೆ ಕುಬ್ಜೆಯು ತನ್ನ ವಾಗ್ಬಾಣಗಳಿಂದ ಪದೇ ಪದೇ ಪ್ರಹಾರ ಮಾಡುತ್ತಾ ಕೈಕೆಯನ್ನು ಅತ್ಯಂತ ಘಾಸಿಗೊಳಿಸಿದಳು. ಆಗ ಆಕೆಯು ವಿಸ್ಮಿತಳಾಗಿ ಹಾಗೂ ಕುಪಿತಳಾಗಿ ಎದೆಯ ಮೇಲೆ ಕೈಗಳನ್ನಿರಿಸಿಕೊಂಡು ಕುಬ್ಜೆಯ ಬಳಿ ಮತ್ತೆ ಮತ್ತೆ ಹೀಗೆ ನುಡಿಯತೊಡಗಿದಳು .॥62॥

ಮೂಲಮ್ - 63

ಯಮಸ್ಯ ವಾ ಮಾಂ ವಿಷಯಂ ಗತಾಮಿತೋ
ನಿಶಮ್ಯ ಕುಬ್ಜೇ ಪ್ರತಿವೇದಯಿಷ್ಯಸಿ ।
ವನಂ ಗತೇ ವಾ ಸುಚಿರಾಯ ರಾಘವೇ
ಸಮೃದ್ಧಕಾಮೋ ಭರತೋ ಭವಿಷ್ಯತಿ ॥

ಅನುವಾದ

ಕುಬ್ಜೆ! ಈಗಲಾದರೋ ರಾಮಚಂದ್ರನು ಹೆಚ್ಚು ಸಮಯದವರೆಗೆ ಕಾಡಿಗೆ ಹೋದಮೇಲೆ ಭರತನ ಮನೋರಥ ಸಫಲವಾಗಬೇಕು; ಇಲ್ಲದಿದ್ದರೆ ನಾವು ಯಮಲೋಕಕ್ಕೆ ತೆರಳಿದ ಸಮಾಚಾರವನ್ನು ನೀನು ಮಹಾರಾಜರಿಗೆ ತಿಳಿಸುವುದು.॥63॥

ಮೂಲಮ್ - 64

ಅಹಂ ಹಿ ನೈವಾಸ್ತರಣಾನಿ ನ ಸ್ರಜೋ
ನ ಚಂದನಂ ನಾಂಜನಪಾನಭೋಜನಮ್ ।
ನ ಕಿಂಚಿದಿಚ್ಛಾಮಿ ನ ಚೇಹ ಜೀವನಂ
ನ ಚೇದಿತೋ ಗಚ್ಛತಿ ರಾಘವೋ ವನಮ್ ॥

ಅನುವಾದ

ರಾಮನು ಇಲ್ಲಿಂದ ವನಕ್ಕೆ ಹೋಗದಿದ್ದರೆ, ನಾನು ಬಗೆ ಬಗೆಯ ಶಯ್ಯೆ, ಹೂವಿನಹಾರ, ಚಂದನ, ಕಾಡಿಗೆ, ತಾಂಬೂಲ, ಭೋಜನ ಹಾಗೂ ಇತರ ಯಾವುದೇ ವಸ್ತುವನ್ನು ಪಡೆಯಲಾರೆನು. ಆ ಸ್ಥಿತಿಯಲ್ಲಿ ನಾನು ಇಲ್ಲಿ ಬದುಕಿರಲೂ ಬಯಸುವುದಿಲ್.॥64॥

ಮೂಲಮ್ - 65

ಅಥೈವಮುಕ್ತ್ವಾ ವಚನಂ ಸುದಾರುಣಂ
ನಿಧಾಯ ಸರ್ವಾಭರಣಾನಿಭಾಮಿನೀ ।
ಅಸಂಸ್ಕೃತಾಮಾಸ್ತರಣೇನ ಮೇದಿನೀಂ
ತದಾಧಿಶಿಶ್ಯೇ ಪತಿತೇವ ಕಿನ್ನರೀ ॥

ಅನುವಾದ

ಹೀಗೆ ಅತ್ಯಂತ ಕಠೋರ ಮಾತುಗಳನ್ನು ಹೇಳಿ ಕೈಕೆಯಿಯು ಎಲ್ಲ ಆಭೂಷಣಗಳನ್ನು ಕಳಚಿ ಎಸೆದು, ಬರೇ ನೆಲದಲ್ಲಿ ಮಲಗಿಬಿಟ್ಟಳು. ಆಗ ಆಕೆಯು ಸ್ವರ್ಗದಿಂದ ಭೂಮಿಗೆ ಪತಿತಳಾದ ಯಾವುದೋ ಕಿನ್ನರಿಯಂತೆ ಕಂಡು ಬರುತ್ತಿದ್ದಳು.॥65॥

ಮೂಲಮ್ - 66

ಉದೀರ್ಣಸಂರಂಭತಮೋವೃತಾನನಾ
ತಥಾವಮುಕ್ತೋತ್ತಮ ಮಾಲ್ಯಭೂಷಣಾ ।
ನರೇಂದ್ರಪತ್ನೀ ವಿಮನಾ ಬಭೂವ ಸಾ
ತಮೋವೃತಾದ್ಯೌರಿವ ಮಗ್ನತಾರಕಾ ॥

ಅನುವಾದ

ಆಕೆಯ ಮುಖವು ಮತ್ಸರದ ಅಂಧಕಾರದಿಂದ ಮುಚ್ಚಿಹೋಗಿತ್ತು. ಆಕೆಯ ಶರೀರದಿಂದ ಉತ್ತಮ ಆಭೂಷಣಗಳು ಕಳಚಿಬಿದ್ದುಹೋಗಿದ್ದವು. ಆ ಸ್ಥಿತಿಯಲ್ಲಿ ಉದಾಸ ಮನಸ್ಸುಳ್ಳ ಕೈಕೆಯಿಯು ನಕ್ಷತ್ರಗಳು ಮುಳುಗಿಹೋಗಿ ಅಂಧಕಾರ ತುಂಬಿದ ಆಕಾಶದಂತೆ ಅನಿಸುತ್ತಿದ್ದಳು.॥66॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂಭತ್ತನೆಯ ಸರ್ಗ ಪೂರ್ಣವಾಯಿತು. ॥9॥