००८ मन्थरादुर्बोधः

वाचनम्
ಭಾಗಸೂಚನಾ

ಮಂಥರೆಯು ಪುನಃ ಶ್ರೀರಾಮನ ಪಟ್ಟಾಭಿಷೇಕವನ್ನು ಅನಿಷ್ಟಕಾರಿ ಎಂದು ತಿಳಿಸುವುದು, ಕೈಕೆಯು ಶ್ರೀರಾಮನ ಸದ್ಗುಣಗಳನ್ನು ತಿಳಿಸಿ ಅವನ ಪಟ್ಟಾಭಿಷೇಕವನ್ನು ಸಮರ್ಥಿಸಿದುದು, ಕುಬ್ಜೆಯು ಪುನಃ ಶ್ರೀರಾಮಪಟ್ಟಾಭಿಷೇಕವು ಭರತನಿಗೆ ಭಯಾವಹವೆಂದು ತಿಳಿಸಿ ಕೈಕೆಯನ್ನು ಜರೆದುದು

ಮೂಲಮ್ - 1

ಮಂಥರಾ ತ್ವಭ್ಯಸೂಯ್ಯೈನಾಮುತ್ಸೃಜ್ಯಾಭರಣಂ ಹಿ ತತ್ ।
ಉವಾಚೇದಂ ತತೋ ವಾಕ್ಯಂಕೋಪದುಃಖಸಮನ್ವಿತಾ ॥

ಅನುವಾದ

ಕೈಕೆಯಿಯು ಹೇಳಿದ ಮಾತನ್ನು ಕೇಳಿ ಮಂಥರೆಯು ಆಕೆಯನ್ನು ನಿಂದಿಸುತ್ತಾ ಅವಳು ಕೊಟ್ಟ ಒಡವೆಯನ್ನು ಕಿತ್ತೆಸೆದು, ಕೋಪ ಮತ್ತು ದುಃಖದಿಂದ ತುಂಬಿಕೊಂಡು ಈ ಪ್ರಕಾರ ನುಡಿದಳು .॥1॥

ಮೂಲಮ್ - 2

ಹರ್ಷಂ ಕಿಮರ್ಥಮಸ್ಥಾನೇ ಕೃತವತ್ಯಸಿ ಬಾಲಿಶೇ ।
ಶೋಕಸಾಗರಮಧ್ಯಸ್ಥಂ ನಾತ್ಮಾನಮವಬುಧ್ಯಸೇ ॥

ಅನುವಾದ

ರಾಣಿಯೇ! ನೀನು ಮೂರ್ಖಳಾಗಿರುವೆ. ನೋಡು, ನೀನು ವ್ಯರ್ಥವಾದ ಹರ್ಷವನ್ನು ಏಕೆ ಪಡುತ್ತಿರುವೆ? ಶೋಕಿಸುವ ಸಂದರ್ಭದಲ್ಲಿ ಸಂತೋಷಪಡುತ್ತಿರುವೆಯಲ್ಲ! ಎಲೆಗೇ! ನೀನು ಶೋಕಸಮುದ್ರದಲ್ಲಿ, ಮುಳುಗುತ್ತಿರುವೆ, ಹೀಗಿದ್ದರೂ ನಿನಗೆ ಈ ವಿಪನ್ನಾವಸ್ಥೆ ಏಕೆ ತಿಳಿಯುತ್ತಿಲ್ಲ.॥2॥

ಮೂಲಮ್ - 3

ಮನಸಾ ಪ್ರಸಹಾಮಿ ತ್ವಾಂ ದೇವಿ ದುಃಖಾರ್ದಿತಾ ಸತೀ ।
ಯಚ್ಛೋಚಿತವ್ಯೇ ಹೃಷ್ಟಾಸಿ ಪ್ರಾಪ್ಯ ತ್ವಂ ವ್ಯಸನಂ ಮಹತ್ ॥

ಅನುವಾದ

ದೇವಿ! ಮಹಾ ಸಂಕಟದಲ್ಲಿ ಬಿದ್ದು ಶೋಕಪಡುವ ಸ್ಥಾನದಲ್ಲಿ ಹರ್ಷಿತಳಾಗುತ್ತಿರುವೆ. ನಿನ್ನ ಈ ಸ್ಥಿತಿಯನ್ನು ನೋಡಿ ಮನಸ್ಸಿನಲ್ಲಿ ದುಃಖ ಸಹಿಸಬೇಕಾಗಿದೆ. ನಾನು ದುಃಖದಿಂದ ವ್ಯಾಕುಲಳಾಗುತ್ತಿದ್ದೇನೆ.॥3॥

ಮೂಲಮ್ - 4

ಶೋಚಾಮಿ ದುರ್ಮತಿತ್ವಂ ತೇ ಕಾ ಹಿ ಪ್ರಾಜ್ಞಾ ಪ್ರಹರ್ಷಯೇತ್ ।
ಅರೇಃ ಸಪತ್ನೀ ಪುತ್ರಸ್ಯ ವೃದ್ಧಿಂ ಮೃತ್ಯೋರಿವಾಗತಾಮ್ ॥

ಅನುವಾದ

ನನಗೆ ನಿನ್ನ ದುರ್ಬುದ್ಧಿಯ ಕುರಿತು ಹೆಚ್ಚು ಶೋಕವಾಗುತ್ತಿದೆ. ಎಲೆಗೆ! ಸವತಿಯ ಮಗನು ಶತ್ರು ಆಗಿರುತ್ತಾನೆ. ಅವನು ಮಲತಾಯಿಗೆ ಸಾಕ್ಷಾತ್ ಮೃತ್ಯುವಿನಂತೆಯೇ ಇರುವನು. ಅವನ ಅಭ್ಯುದಯದ ಸಂದರ್ಭವನ್ನು ನೋಡಿ ಯಾವ ಬುದ್ಧಿವಂತಳಾದ ಸ್ತ್ರೀಯು ತಾನೇ ಮನಸ್ಸಿನಲ್ಲಿ ಹರ್ಷಪಡುವಳು.॥4॥

ಮೂಲಮ್ - 5

ಭರತಾದೇವ ರಾಮಸ್ಯ ರಾಜ್ಯಸಾಧಾರಣಾದ್ಭಯಮ್ ।
ತದ್ವಿಚಿಂತ್ಯ ವಿಷಣ್ಣಾಸ್ಮಿ ಭಯಂ ಭೀತಾದ್ಧಿ ಜಾಯತೇ ॥

ಅನುವಾದ

ಈ ರಾಜ್ಯವು ಭರತ ಮತ್ತು ರಾಮ ಇಬ್ಬರಿಗೂ ಭೋಗ ವಸ್ತುವಾಗಿದೆ. ಇದರಲ್ಲಿ ಇಬ್ಬರಿಗೂ ಸಮಾನ ಅಧಿಕಾರವಿದೆ. ಅದಕ್ಕಾಗಿ ಶ್ರೀರಾಮನಿಗೆ ಭರತನ ಭಯವಿದೆ. ಇದನ್ನು ಯೋಚಿಸಿಯೇ ನಾನು ವಿಷಾದದಲ್ಲಿ ಮುಳುಗಿರುವೆನು; ಏಕೆಂದರೆ ಭಯಭೀತದಿಂದಲೇ ಭಯ ಪ್ರಾಪ್ತವಾಗುತ್ತದೆ. ಅರ್ಥಾತ್ ಇಂದು ಯಾರಿಗೆ ಭಯವಿದೆಯೋ ಅವನು ರಾಜ್ಯವನ್ನು ಪಡೆದು ಬಳಿಕ ಬಲಿಷ್ಠನಾದಾಗ ತನ್ನ ಭಯದ ಕಾರಣವನ್ನು ಕಿತ್ತುಬಿಸುಡುವನು.॥5॥

ಮೂಲಮ್ - 6

ಲಕ್ಷ್ಮಣೋ ಹಿ ಮಹಾಬಾಹೂ ರಾಮಂ ಸರ್ವಾತ್ಮನಾ ಗತಃ ।
ಶತ್ರುಘ್ನಶ್ಚಾಪಿ ಭರತಂ ಕಾಕುತ್ಸ್ಥಂ ಲಕ್ಷ್ಮಣೋ ಯಥಾ ॥

ಅನುವಾದ

ಮಹಾಬಾಹು ಲಕ್ಷ್ಮಣನು ಹೃತ್ಪೂರ್ವಕ ಶ್ರೀರಾಮಚಂದ್ರನ ಅನುಗತನಾಗಿದ್ದಾನೆ. ಲಕ್ಷ್ಮಣನು ಶ್ರೀರಾಮನ ಅನುಗತ ನಾಗಿರುವಂತೆ ಶತ್ರುಘ್ನನು ಭರತನನ್ನು ಅನುಸರಿಸುವನು.॥6॥

ಮೂಲಮ್ - 7

ಪ್ರತ್ಯಾಸನ್ನಕ್ರಮೇಣಾಪಿ ಭರತಸ್ಯೈವ ಭಾಮಿನಿ ।
ರಾಜ್ಯಕ್ರಮೋ ವಿಸೃಷ್ಟಸ್ತು ತಯೋಸ್ತಾವದ್ಯವೀಯಸೋಃ ॥

ಅನುವಾದ

ಭಾಮಿನಿ! ಹುಟ್ಟಿದ ಕ್ರಮದಲ್ಲಿ ಶ್ರೀರಾಮನ ಬಳಿಕ ಭರತನೇ ಮೊದಲು ರಾಜ್ಯಕ್ಕೆ ಅಧಿಕಾರಿಯಾಗಬಲ್ಲನು. (ಆದ್ದರಿಂದ ಭರತನಿಂದ ಭಯವಿರುವುದು ಸಹಜವೇ ಆಗಿದೆ.) ಲಕ್ಷ್ಣಣ-ಶತ್ರುಘ್ನರು ಸಣ್ಣವರಾಗಿದ್ದಾರೆ. ಆದ್ದರಿಂದ ಅವರಿಗೆ ರಾಜ್ಯಪ್ರಾಪ್ತಿಯ ಸಂಭವ ದೂರವೇ ಆಗಿದೆ.॥7॥

ಮೂಲಮ್ - 8

ವಿದುಷಃ ಕ್ಷತ್ರಚಾರಿತ್ರೇ ಪ್ರಾಜ್ಞಸ್ಯ ಪ್ರಾಪ್ತಕಾರಿಣಃ ।
ಭಯಾತ್ಪ್ರವೇಪೇ ರಾಮಸ್ಯ ಚಿಂತಯಂತೀ ತವಾತ್ಮಜಮ್ ॥

ಅನುವಾದ

ಶ್ರೀರಾಮನು ಸಮಸ್ತ ಶಾಸ್ತ್ರಗಳ ಜ್ಞಾನಿಯಾಗಿದ್ದಾನೆ. ವಿಶೇಷವಾಗಿ ರಾಜನೀತಿಯ ಪಂಡಿತನಾಗಿದ್ದಾನೆ ಹಾಗೂ ಸಮಯೋಚಿತ ಕರ್ತವ್ಯ ಪಾಲಿಸುವವನಾಗಿದ್ದಾನೆ. ಆದ್ದರಿಂದ ಅವನಿಂದ ನಿನ್ನ ಪುತ್ರನ ಮೇಲೆ ಆಗುವ ಕ್ರೂರ ವರ್ತನೆಯನ್ನು ನೆನೆದು ಭಯದಿಂದ ನಡುಗುತ್ತಿದ್ದೇನೆ.॥8॥

ಮೂಲಮ್ - 9

ಸುಭಗಾ ಕಿಲ ಕೌಸಲ್ಯಾ ಯಸ್ಯಾಃ ಪುತ್ರೋಽಭಿಷೇಕ್ಷ್ಯತೇ ।
ಯೌವರಾಜ್ಯೇನ ಮಹತಾ ಶ್ವಃ ಪುಷ್ಯೇಣ ದ್ವಿಜೋತ್ತಮೈಃ ॥

ಅನುವಾದ

ವಾಸ್ತವವಾಗಿ ಕೌಸಲ್ಯೆಯೇ ಸೌಭಾಗ್ಯವತಿಯಾಗಿದ್ದಾಳೆ. ಆಕೆಯ ಪುತ್ರನು ನಾಳೆ ಪುಷ್ಯ ನಕ್ಷತ್ರದ ಯೋಗದಲ್ಲಿ ಶ್ರೇಷ್ಠ ಬ್ರಾಹ್ಮಣರ ಮೂಲಕ ಯುವರಾಜನಾಗಿ ಪಟ್ಟಾಭಿಷಿಕ್ತನಾಗುವನು.॥9॥

ಮೂಲಮ್ - 10

ಪ್ರಾಪ್ತಾಂ ವಸುಮತೀಂ ಪ್ರೀತಿಂ ಪ್ರತೀತಾಂ ಹತವಿದ್ವಿಷಮ್ ।
ಉಪಸ್ಥಾಸ್ಯಸಿ ಕೌಸಲ್ಯಾಂ ದಾಸೀವತ್ ತ್ವಂ ಕೃತಾಂಜಲಿಃ ॥

ಅನುವಾದ

ಆಕೆಯು ಭೂಮಂಡಲದ ನಿಷ್ಕಂಟಕ ರಾಜ್ಯಪಡೆದು ಪ್ರಸನ್ನಳಾಗುವಳು. ಏಕೆಂದರೆ ಅವಳು ರಾಜನಿಗೆ ವಿಶ್ವಾಸ ಪಾತ್ರಳಾಗಿದ್ದಾಳೆ ಹಾಗೂ ನೀನು ದಾಸಿಯಂತೆ ಕೈಮುಗಿದು ಅವಳ ಸೇವೆಯಲ್ಲಿ ಇರುವೆ.॥10॥

ಮೂಲಮ್ - 11

ಏವಂ ಚ ತ್ವಂ ಸಹಾಸ್ಮಾಭಿಸ್ತಸ್ಯಾಃ ಪ್ರೇಷ್ಯಾ ಭವಿಷ್ಯಸಿ ।
ಪುತ್ರಶ್ಚ ತವ ರಾಮಸ್ಯ ಪ್ರೇಷ್ಯತ್ವಂ ಹಿ ಗಮಿಷ್ಯತಿ ॥

ಅನುವಾದ

ಹೀಗೆ ನಮ್ಮೊಂದಿಗೆ ನೀನೂ ಕೂಡ ಕೌಸಲ್ಯೆಯ ದಾಸಿಯಾಗುವೆ. ನಿನ್ನ ಪುತ್ರ ಭರತನೂ ಕೂಡ ಶ್ರೀರಾಮಚಂದ್ರನ ಗುಲಾಮನಾಗಬೇಕಾದೀತು.॥11॥

ಮೂಲಮ್ - 12

ಹೃಷ್ಟಾಃ ಖಲು ಭವಿಷ್ಯಂತಿ ರಾಮಸ್ಯ ಪರಮಾಃ ಸ್ತ್ರಿಯಃ ।
ಅಪ್ರಹೃಷ್ಟಾ ಭವಿಷ್ಯಂತಿ ಸ್ನುಷಾಸ್ತೇ ಭರತಕ್ಷಯೇ ॥

ಅನುವಾದ

ಶ್ರೀರಾಮಚಂದ್ರನ ಅಂತಃಪುರದ ಪರಮ ಸುಂದರ ಸ್ತ್ರೀಯರು-ಸೀತಾದೇವೀ ಮತ್ತು ಆಕೆಯ ಸಖಿಯರು ನಿಶ್ಚಯವಾಗಿಯೂ ಬಹಳ ಪ್ರಸನ್ನರಾಗುವರು. ಭರತನ ಪ್ರಭುತ್ವ ನಾಶವಾದ್ದರಿಂದ ನಿನ್ನ ಸೊಸೆಯರು ಶೋಕಮಗ್ನರಾಗುವರು.॥12॥

ಮೂಲಮ್ - 13

ತಾಂ ದೃಷ್ಟ್ವಾ ಪರಮಪ್ರೀತಾಂ ಬ್ರುವಂತೀಂ ಮಂಥರಾಂ ತತಃ ।
ರಾಮಸ್ಯೈವ ಗುಣಾನ್ ದೇವೀ ಕೈಕೇಯೀ ಪ್ರಶಶಂಸ ಹ ॥

ಅನುವಾದ

ಮಂಥರೆಯು ಬೇಸರದಿಂದ ಈ ಪ್ರಕಾರ ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ನೋಡಿ ದೇವೀ ಕೈಕೆಯಿಯು ಶ್ರೀರಾಮನ ಗುಣಗಳನ್ನು ಪ್ರಶಂಸಿಸತೊಡಗಿದಳು.॥13॥

ಮೂಲಮ್ - 14

ಧರ್ಮಜ್ಞೋ ಗುಣವಾನ್ ದಾಂತಃ ಕೃತಜ್ಞಃ ಸತ್ಯವಾನ್ ಫುಚಿಃ ।
ರಾಮೋ ರಾಜಸುತೋ ಜ್ಯೇಷ್ಠೋ ಯೌವರಾಜ್ಯಮತೋರ್ಹತಿ ॥

ಅನುವಾದ

ಕುಬ್ಜೆ! ಶ್ರೀರಾಮನು ಧರ್ಮಜ್ಞನೂ, ಗುಣವಂತನೂ, ಜಿತೇಂದ್ರಿಯನೂ, ಕೃತಜ್ಞನೂ, ಸತ್ಯವಾದಿಯೂ, ಪವಿತ್ರನೂ ಆಗಿರುವನು. ಜೊತೆಗೆ ಮಹಾರಾಜರ ಜ್ಯೇಷ್ಠಪುತ್ರನಾಗಿರುವನು, ಆದ್ದರಿಂದ ಯುವರಾಜನಾಗಲು ಯೋಗ್ಯನಾಗಿದ್ದಾನೆ.॥14॥

ಮೂಲಮ್ - 15

ಭ್ರಾತೄನ್ ಭೃತ್ಯಾಂಶ್ಚ ದೀರ್ಘಾಯುಃ ಪಿತೃವತ್ಪಾಲಯಿಷ್ಯತಿ ।
ಸಂತಪ್ಯಸೇ ಕಥಂ ಕುಬ್ಜೇ ಶ್ರುತ್ವಾ ರಾಮಾಭಿಷೇಚನಮ್ ॥

ಅನುವಾದ

ಶ್ರೀರಾಮನು ದೀರ್ಘಾಯುಸ್ಸು ಉಳ್ಳವನಾಗಿ ಸಹೋದರರನ್ನು ಮತ್ತು ಸೇವಕರನ್ನು ತಂದೆಯಂತೆ ಪಾಲಿಸುವನು. ಕುಬ್ಜೆ! ಅವನ ಪಟ್ಟಾಭಿಷೇಕದ ಮಾತನ್ನು ಕೇಳಿ ನೀನು ಏಕೆ ಇಷ್ಟೊಂದು ಉರಿಯುತ್ತಿರುವೆ.॥15॥

ಮೂಲಮ್ - 16

ಭರತಶ್ಚಾಪಿ ರಾಮಸ್ಯ ಧ್ರುವಂ ವರ್ಷಶತಾತ್ಪರಮ್ ।
ಪಿತೃಪೈತಾಮಹಂ ರಾಜ್ಯಮವಾಪ್ಸ್ಯತಿ ನರರ್ಷಭಃ ॥

ಅನುವಾದ

ಶ್ರೀರಾಮನಿಗೆ ರಾಜ್ಯಪ್ರಾಪ್ತಿಯಾಗಿ ನೂರು ವರ್ಷಗಳ ಬಳಿಕ ನರಶ್ರೇಷ್ಠ ಭರತನಿಗೂ ಖಂಡಿತವಾಗಿ ತನ್ನ ತಂದೆ-ಅಜ್ಜಂದಿರ ರಾಜ್ಯ ಸಿಗಬಹುದು.॥16॥

ಮೂಲಮ್ - 17

ಸಾ ತ್ವಮಭ್ಯುದಯೇ ಪ್ರಾಪ್ತೇ ದಹ್ಯಮಾನೇ ವ ಮಂಥರೇ ।
ಭವಿಷ್ಯತಿ ಚ ಕಲ್ಯಾಣೇ ಕಿಮಿದಂ ಪರಿತಪ್ಯಸೇ ॥

ಅನುವಾದ

ಮಂಥರೇ! ಇಂತಹ ಅಭ್ಯುದಯದ ಪ್ರಾಪ್ತಿಯ ಸಮಯದಲ್ಲಿ ಭವಿಷ್ಯದಲ್ಲಿ ಶ್ರೇಯಸ್ಸೇ ಕಂಡುಬಂದಾಗ ನೀನು ಈ ಪ್ರಕಾರ ಏಕೆ ಉರಿದು ಸಂತಪ್ತಳಾಗುತ್ತಿರುವೆ.॥17॥

ಮೂಲಮ್ - 18

ಯಥಾ ಮೈ ಭರತೋ ಮಾನ್ಯಸ್ತಥಾ ಭೂಯೋಽಪಿ ರಾಘವಃ ।
ಕೌಸಲ್ಯಾತೋಽತಿರಿಕ್ತಂ ಚಮಮ ಶುಶ್ರೂಷತೇ ಬಹು ॥

ಅನುವಾದ

ನನಗೆ ಭರತನು ಆದರಕ್ಕೆ ಪಾತ್ರವಾಗಿರುವುದಕ್ಕಿಂತ ಹೆಚ್ಚು ಶ್ರೀರಾಮನು ಆದರಕ್ಕೆ ಪಾತ್ರನಾಗಿರುವನು; ಏಕೆಂದರೆ, ಅವನು ಕೌಸಲ್ಯೆಗಿಂತಲೂ ಹೆಚ್ಚಾಗಿಯೇ ನನ್ನ ಸೇವೆ ಮಾಡುತ್ತಾ ಇದ್ದಾನೆ.॥18॥

ಮೂಲಮ್ - 19

ರಾಜ್ಯಂ ಯದಿ ಹಿ ರಾಮಸ್ಯ ಭರತಸ್ಯಾಪಿ ತತ್ತದಾ ।
ಮನ್ಯತೇ ಹಿ ಯಥಾಽಽತ್ಮಾನಂ ಯಥಾ ಭ್ರಾತೄಂಸ್ತು ರಾಘವಃ ॥

ಅನುವಾದ

ಶ್ರೀರಾಮನಿಗೆ ರಾಜ್ಯ ದೊರೆತರೆ ಅದನ್ನು ಭರತನಿಗೇ ಸಿಕ್ಕಿದೆ ಎಂದು ತಿಳಿ; ಏಕೆಂದರೆ ಶ್ರೀರಾಮಚಂದ್ರನು ತನ್ನ ಸಹೋದರರನ್ನು ತನ್ನಂತೆಯೇ ತಿಳಿಯುತ್ತಾನೆ.॥19॥

ಮೂಲಮ್ - 20

ಕೈಕೇಯ್ಯಾ ವಚನಂ ಶ್ರುತ್ವಾ ಮಂಥರಾ ಭೃಶದುಃಖಿತಾ ।
ದೀರ್ಘಮುಷ್ಣಂ ವಿನಿಃಶ್ವಸ್ಯ ಕೈಕೇಯೀಮಿದಮಬ್ರವೀತ್ ॥

ಅನುವಾದ

ಕೈಕೆಯ ಈ ಮಾತನ್ನು ಕೇಳಿ ಮಂಥರೆಗೆ ಬಹಳ ದುಃಖವಾಯಿತು. ಅವಳು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಕೈಕೆಯ ಬಳಿ ಹೇಳಿದಳು .॥20॥

ಮೂಲಮ್ - 21

ಅನರ್ಥದರ್ಶಿನೀ ಮೌರ್ಖ್ಯಾನ್ನಾತ್ಮಾನಮವಬುಧ್ಯಸೇ ।
ಶೋಕವ್ಯಸನವಿಸ್ತೀರ್ಣೇ ಮಜ್ಜಂತೀ ದುಃಖಸಾಗರೇ ॥

ಅನುವಾದ

ರಾಣಿಯೇ! ನೀನು ಮೂರ್ಖತೆಯಿಂದ ಅನರ್ಥವನ್ನೇ ಅರ್ಥವೆಂದು ತಿಳಿಯುತ್ತಿರುವೆ. ನಿನಗೆ ನಿನ್ನ ಸ್ಥಿತಿಯ ಅರಿವು ಇಲ್ಲ. ನೀನು ಶೋಕ (ಇಷ್ಟದ ವಿಯೋಗದ ಚಿಂತೆ) ಮತ್ತು ವ್ಯಸನ (ಅನಿಷ್ಟದ ಪ್ರಾಪ್ತಿಯ ದುಃಖ) ಎಂಬ ದುಃಖದ ಮಹಾಸಾಗರದಲ್ಲಿ ಮುಳುಗುತ್ತಿರುವೆ.॥21॥

ಮೂಲಮ್ - 22

ಭವಿತಾ ರಾಘವೋ ರಾಜಾ ರಾಘವಸ್ಯ ಚ ಯಃ ಸುತಃ ।
ರಾಜವಂಶಾಸ್ತು ಭರತಃ ಕೈಕೇಯಿ ಪರಿಹಾಸ್ಯತೇ ॥

ಅನುವಾದ

ಕೇಕಯ ರಾಜಕುಮಾರಿಯೇ! ಶ್ರೀರಾಮಚಂದ್ರನು ರಾಜನಾದಾಗ, ಅವನ ಬಳಿಕ ಅವನಿಗೆ ಹುಟ್ಟುವ ಪುತ್ರನಿಗೇ ರಾಜ್ಯ ಸಿಗುವುದು. ಭರತನಾದರೋ ರಾಜ್ಯಪರಂಪರೆಯಿಂದ ಬೇರೆಯೇ ಆಗುವನು.॥22॥

ಮೂಲಮ್ - 23

ನಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಠಂತಿ ಭಾಮಿನಿ ।
ಸ್ಥಾಪ್ಯಮಾನೇಷು ಸರ್ವೇಷು ಸುಮಹಾನನಯೋ ಭವೇತ್ ॥

ಅನುವಾದ

ಭಾಮಿನಿ! ರಾಜನ ಎಲ್ಲ ಮಕ್ಕಳು ರಾಜಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ. ಎಲ್ಲರನ್ನು ಕುಳ್ಳಿರಿಸಿದರೆ ದೊಡ್ಡ ಅನರ್ಥವಾದೀತು.॥23॥

ಮೂಲಮ್ - 24

ತಸ್ಮಾಜ್ಜ್ಯೇಷ್ಠೇ ಹಿ ಕೈಕೇಯಿ ರಾಜ್ಯತಂತ್ರಾಣಿ ಪಾರ್ಥಿವಾಃ ।
ಸ್ಥಾಪಯಂತ್ಯನವದ್ಯಾಂಗಿ ಗುಣವತ್ಸ್ವಿತರೇಷ್ವಪಿ ॥

ಅನುವಾದ

ಪರಮ ಸುಂದರೀ ಕೈಕೇ! ಅದಕ್ಕಾಗಿ ಮಹಾರಾಜರು ರಾಜಭಾರದ ಹೊರೆಯನ್ನು ಹಿರಿಯ ಪುತ್ರನಿಗೆ ಒಪ್ಪಿಸುವರು. ಜ್ಯೇಷ್ಠ ಪುತ್ರನು ಗುಣವಂತನಲ್ಲದಿದ್ದರೆ, ಬೇರೆ ಗುಣವಂತ ಪುತ್ರರಿಗೆ ವಹಿಸಿಕೊಡುವರು.॥24॥

ಮೂಲಮ್ - 25

ಅಸಾವತ್ಯಂತ ನಿರ್ಭಗ್ನಸ್ತವ ಪುತ್ರೋ ಭವಿಷ್ಯತಿ ।
ಅನಾಥವತ್ಸುಖೇಭ್ಯಶ್ಚ ರಾಜವಂಶಾಚ್ಚ ವತ್ಸಲೇ ॥

ಅನುವಾದ

ಪುತ್ರವತ್ಸಲೇ! ನಿನ್ನ ಪುತ್ರನು ರಾಜ್ಯಾಧಿಕಾರದಿಂದ ಬಹಳ ದೂರ ಸರಿಯುವನು. ಅವನು ಅನಾಥನಂತೆ ಸಮಸ್ತ ಸುಖಗಳಿಂದ ವಂಚಿತನಾಗುವನು.॥25॥

ಮೂಲಮ್ - 26

ಸಾಹಂ ತ್ವದರ್ಥೇ ಸಂಪ್ರಾಪ್ತಾ ತ್ವಂ ತು ಮಾಂ ನಾವಬುಧ್ಯಸೇ ।
ಸಪತ್ನಿ ವೃದ್ಧೌ ಯಾ ಮೇ ತ್ವಂ ಪ್ರದೇಯಂ ದಾತುಮರ್ಹಸಿ ॥

ಅನುವಾದ

ಅದಕ್ಕಾಗಿ ನಾನು ನಿನ್ನ ಹಿತದ ಮಾತನ್ನೇ ನೆನಪು ಮಾಡಿಕೊಡಲು ಇಲ್ಲಿಗೆ ಬಂದಿರುವೆನು. ಆದರೆ ನೀನು ನನ್ನ ಅಭಿಪ್ರಾಯವನ್ನು ತಿಳಿಯುವುದೇ ಇಲ್ಲವಲ್ಲ! ಬದಲಿಗೆ ಸವತಿಯ ಅಭ್ಯುದಯವನ್ನು ಕೇಳಿ ನನಗೆ ಉಡುಗೊರೆ ಕೊಡಲು ಹೊರಟಿರುವೆಯಲ್ಲ.॥26॥

ಮೂಲಮ್ - 27

ಧ್ರುವಂ ತು ಭರತಂ ರಾಮಃ ಪ್ರಾಪ್ಯ ರಾಜ್ಯಮಕಂಟಕಮ್ ।
ದೇಶಾಂತರಂ ನಾಯಯಿತಾ ಲೋಕಾಂತರಮಥಾಪಿ ವಾ ॥

ಅನುವಾದ

ಶ್ರೀರಾಮನಿಗೆ ನಿಷ್ಕಂಟಕ ರಾಜ್ಯ ದೊರಕಿದರೆ ಅವನು ಭರತನನ್ನು ಅವಶ್ಯವಾಗಿ ದೇಶಭ್ರಷ್ಟನಾಗಿಸುವನು ಇಲ್ಲವೇ ಅವನನ್ನು ಪರಲೋಕಕ್ಕೆ ಕಳಿಸಬಲ್ಲನು, ಎಂಬುದನ್ನು ನೆನಪಿಡು.॥27॥

ಮೂಲಮ್ - 28

ಬಾಲ ಏವ ತು ಮಾತುಲ್ಯಂ ಭರತೋ ನಾಯಿತಸ್ತ್ವಯಾ ।
ಸಂನಿಕರ್ಷಾಚ್ಚ ಸೌಹಾರ್ದಂ ಜಾಯತೇ ಸ್ಥಾವರೇಷ್ವಿವ ॥

ಅನುವಾದ

ಸಣ್ಣ ಪ್ರಾಯದಲ್ಲೇ ನೀನು ಭರತನನ್ನು ಸೋದರಮಾವನ ಮನೆಗೆ ಕಳಿಸಿಕೊಟ್ಟಿರುವೆ. ಹತ್ತಿರವಿದ್ದರೆ ಸೌಹಾರ್ದ ಉಂಟಾಗುತ್ತದೆ. ಈ ಮಾತು ಸ್ಥಾವರ ಯೋನಿಗಳಲ್ಲಿಯೂ ನೋಡಲಾಗುತ್ತದೆ. (ಲತೆ ಮತ್ತು ಮರ ಹತ್ತಿರ ಇರುವುದರಿಂದ ಪರಸ್ಪರ ಆಲಿಂಗಿಸಿ ಪಾಶಬದ್ಧವಾಗುತ್ತವೆ. ಭರತನು ಇಲ್ಲೇ ಇದ್ದಿದ್ದರೆ ರಾಜನಿಗೆ ಅವನಲ್ಲಿಯೂ ಸ್ನೇಹ ಬೆಳೆದು, ಅವನಿಗೂ ಅರ್ಧರಾಜ್ಯವನ್ನು ಕೊಡುತ್ತಿದ್ದನು..॥28॥

ಮೂಲಮ್ - 29

ಭರತಾನುವಶಾತ್ ಸೋಽಪಿಶತ್ರುಘ್ನಸ್ತತ್ಸಮಂ ಗತಃ ।
ಲಕ್ಷ್ಮಣೋ ಹಿ ಯಥಾ ರಾಮಂ ತಥಾಯಂ ಭರತಂ ಗತಃ ॥

ಅನುವಾದ

ಭರತನ ಒತ್ತಾಯದಿಂದ ಶತ್ರುಘ್ನನೂ ಅವನೊಂದಿಗೆ ಹೋಗಿರುವನು. (ಅವನು ಇಲ್ಲಿ ಇದ್ದಿದ್ದರೆ ಭರತನ ಕಾರ್ಯವು ಕೆಡುತ್ತಿರಲಿಲ್ಲ; ಏಕೆಂದರೆ-) ಲಕ್ಷ್ಮಣನು ರಾಮನ ಅನುಗಾಮಿಯಾಗಿರುವಂತೆಯೇ ಶತ್ರುಘ್ನನು ಭರತನ ಅನುಗಾಮಿಯಾಗಿದ್ದಾನೆ.॥29॥

ಮೂಲಮ್ - 30

ಶ್ರೂಯತೇ ಹಿ ದ್ರುಮಃ ಕಶ್ಚಿಚ್ಛೇತ್ತವ್ಯೋ ವನಜೀವನೈಃ ।
ಸಂನಿಕರ್ಷಾದಿಷೀಕಾಭಿರ್ಮೋಚಿತಃ ಪರಮಾದ್ಭಯಾತ್ ॥

ಅನುವಾದ

ಇದರಿಂದ ಒಂದು ಸನ್ನಿವೇಶ ನೆನಪಾಗುತ್ತದೆ - ಅರಣ್ಯವಾಸಿಗಳು ಸೌದೆಗಾಗಿ ಮರವೊಂದನ್ನು ಕಡಿಯಬೇಕಾಗಿತ್ತು. ಆದರೆ ಆ ಮರದ ಸುತ್ತಲೂ ಮುಳ್ಳುಗಿಡಗಳು ಇದ್ದುದರಿಂದ ಆ ವೃಕ್ಷವು ವಿನಾಶ ಭಯದಿಂದ ಮುಕ್ತವಾಯಿತು.॥30॥

ಮೂಲಮ್ - 31

ಗೋಪ್ತಾ ಹಿ ರಾಮಂ ಸೌಮಿತ್ರಿರ್ಲಕ್ಷ್ಮಣಂ ಚಾಪಿ ರಾಘವಃ ।
ಅಶ್ವಿನೋರಿವ ಸೌಭ್ರಾತ್ರಂ ತಯೋರ್ಲೋಕೇಷುವಿಶ್ರುತಮ್ ॥

ಅನುವಾದ

ಸುಮಿತ್ರಾ ಕುಮಾರ ಲಕ್ಷ್ಮಣನು ಶ್ರೀರಾಮನನ್ನು ರಕ್ಷಿಸುತ್ತಿರುವನು ಮತ್ತು ರಾಮನು ಅವನನ್ನು ರಕ್ಷಿಸುತ್ತಿರುವನು. ಅವರಿಬ್ಬರು ಸಹೋದರರ ಭ್ರಾತೃಪ್ರೇಮವು ಅಶ್ವಿನಿಕುಮಾರರಂತೆ ಲೋಕದಲ್ಲಿ ಪ್ರಸಿದ್ಧವಾಗಿದೆ.॥31॥

ಮೂಲಮ್ - 32

ತಸ್ಮಾನ್ನ ಲಕ್ಷ್ಮಣೇ ರಾಮಃ ಪಾಪಂ ಕಿಂಚಿತ್ಕರಿಷ್ಯತಿ ।
ರಾಮಸ್ತು ಭರತೇ ಪಾಪಂ ಕುರ್ಯಾದೇವ ನ ಸಂಶಯಃ ॥

ಅನುವಾದ

ಅದಕ್ಕಾಗಿ ಶ್ರೀರಾಮನು ಲಕ್ಷ್ಮಣನ ಅನಿಷ್ಟವನ್ನು ಕೊಂಚವೂ ಮಾಡಲಾರನು. ಆದರೆ ಭರತನ ಅನಿಷ್ಟವನ್ನು ಮಾಡದೇ ಇರಲಾರನು; ಇದರಲ್ಲಿ ಸಂಶಯವೇ ಇಲ್ಲ.॥32॥

ಮೂಲಮ್ - 33

ತಸ್ಮಾದ್ರಾಜಗೃಹಾದೇವ ವನಂ ಗಚ್ಛತು ರಾಘವಃ ।
ಏತದ್ಧಿ ರೋಚತೇ ಮಹ್ಯಂ ಭೃಶಂ ಚಾಪಿ ಹಿತಂ ತವ ॥

ಅನುವಾದ

ಆದ್ದರಿಂದ ಶ್ರೀರಾಮಚಂದ್ರನು ಅರಮನೆಯಿಂದ ನೇರವಾಗಿ ಕಾಡಿಗೆ ಹೋಗುವುದೇ ನನಗೆ ಒಳ್ಳೆಯದೆಂದು ತೋರುತ್ತದೆ ಹಾಗೂ ಇದರಲ್ಲೇ ನಿನ್ನ ಪರಮಹಿತವಿದೆ.॥33॥

ಮೂಲಮ್ - 34

ಏವಂ ತೇ ಜ್ಞಾತಿಪಕ್ಷಸ್ಯ ಶ್ರೇಯಶ್ಚೈವ ಭವಿಷ್ಯತಿ ।
ಯದಿ ಚೇದ್ಭರತೋ ಧರ್ಮಾತ್ ಪಿತ್ರ್ಯಂ ರಾಜ್ಯಮವಾಪ್ಸ್ಯತಿ ॥

ಅನುವಾದ

ಭರತನು ಧರ್ಮಾನುಸಾರ ತನ್ನ ತಂದೆಯ ರಾಜ್ಯ ಪಡೆದುಕೊಂಡರೆ ನಿನ್ನ ಮತ್ತು ನಿನ್ನ ಪಕ್ಷದ ಇತರ ಎಲ್ಲ ಜನರ ಶ್ರೇಯಸ್ಸು ಆಗುವುದು.॥34॥

ಮೂಲಮ್ - 35

ಸ ತೇ ಸುಖೋಚಿತೋ ಬಾಲೋ ರಾಮಸ್ಯ ಸಹಜೋ ರಿಪುಃ ।
ಸಮೃದ್ಧಾರ್ಥಸ್ಯ ನಷ್ಟಾರ್ಥೋ ಜೀವಿಷ್ಯತಿ ಕಥಂ ವಶೇ॥

ಅನುವಾದ

ಮಲ ಸಹೋದರನಾದ್ದರಿಂದ ಭರತನು ಶ್ರೀರಾಮನ ಸಹಜ ಶತ್ರು ಆಗಿದ್ದಾನೆ. ಸುಖಭೋಗಿಸಲು ಯೋಗ್ಯನಾದ ನಿನ್ನ ಬಾಲಕ ಭರತನು ರಾಜ್ಯ ಮತ್ತು ಧನದಿಂದ ವಂಚಿತನಾಗಿ ರಾಜ್ಯಪಡೆದು ಸಮೃದ್ಧಿಶಾಲಿಯಾದ ಶ್ರೀರಾಮನ ವಶದಲ್ಲಿ ಹೇಗೆ ಬದುಕಬಲ್ಲನು.॥35॥

ಮೂಲಮ್ - 36

ಅಭಿದ್ರುತಮಿವಾರಣ್ಯೇ ಸಿಂಹೇನ ಗಜಯೂಥಪಮ್ ।
ಪ್ರಚ್ಛಾದ್ಯಮಾನಂ ರಾಮೇಣಭರತಂ ತ್ರಾತುಮರ್ಹಸಿ ॥

ಅನುವಾದ

ಕಾಡಿನಲ್ಲಿ ಸಿಂಹವು ಆನೆಗಳ ಗುಂಪಿನ ಮೇಲೆ ಆಕ್ರಮಣ ಮಾಡಿದಾಗ ಅವು ದಿಕ್ಕೆಟ್ಟು ಓಡುವಂತೆಯೇ ರಾಜಾರಾಮನು ಭರತನನ್ನು ತಿರಸ್ಕರಿಸುವನು. ಆದ್ದರಿಂದ ಆ ತಿರಸ್ಕಾರದಿಂದ ನೀನು ಭರತನನ್ನು ರಕ್ಷಿಸು.॥36॥

ಮೂಲಮ್ - 37

ದರ್ಪಾನ್ನಿರಾಕೃತಾ ಪೂರ್ವಂ ತ್ವಯಾ ಸೌಭಾಗ್ಯವತ್ತಯಾ ।
ರಾಮಮಾತಾ ಸಪತ್ನೀ ತೇ ಕಥಂ ವೈರಂ ನ ಯಾಪಯೇತ್ ॥

ಅನುವಾದ

ನೀನು ಮೊದಲು ಪತಿಯ ಅತ್ಯಂತ ಪ್ರೇಮ ಪಡೆದು ಅಹಂಕಾರದಿಂದ ಯಾರನ್ನು ಅನಾದರಿಸುತ್ತಿದ್ದೆಯೋ, ಆ ನಿನ್ನ ಸವತಿ ಶ್ರೀರಾಮನ ಮಾತೆ ಕೌಸಲ್ಯೆಯು ಪುತ್ರನ ರಾಜ್ಯ ಪ್ರಾಪ್ತಿಯಿಂದ ಸೌಭಾಗ್ಯಶಾಲಿನಿಯಾಗುವಳು. ಆಗ ಆಕೆಯು ನಿನ್ನೊಡನೆ ವೈರದ ಪ್ರತೀಕಾರ ಮಾಡದೆ ಇರುವಳೇ.॥37॥

ಮೂಲಮ್ - 38

ಯದಾ ಚ ರಾಮಃ ಪೃಥಿವೀಮವಾಪ್ಸ್ಯತೇ
ಪ್ರಭೂತರತ್ನಾಕರಶೈಲ ಸಂಯುತಾಮ್ ।
ತದಾ ಗಮಿಷ್ಯಸ್ಯ ಶುಭಂ ಪರಾಭವಂ
ಸಹೈವ ದೀನಾ ಭರತೇನ ಭಾಮಿನಿ ॥

ಅನುವಾದ

ಭಾಮಿನಿ! ಶ್ರೀರಾಮನು ಸಮುದ್ರ-ಪರ್ವತಗಳಿಂದ ಆವೃತವಾದ ಅಖಂಡ ಭೂಮಂಡಲದ ರಾಜ್ಯವನ್ನು ಪಡೆದುಕೊಂಡಾಗ ನೀನು ತನ್ನ ಭರತಪುತ್ರನೊಂದಿಗೆ ದೀನ-ಹೀನಳಾಗಿ ಅಶುಭ ಪರಾಭವಕ್ಕೆ ಪಾತ್ರಳಾಗುವೆ.॥38॥

ಮೂಲಮ್ - 39

ಯದಾ ಹಿ ರಾಮಃ ಪ್ರಥಿವೀಮವಾಪ್ಸ್ಯತೇ
ಧ್ರುವಂ ಪ್ರಣಷ್ಟೋ ಭರತೋ ಭವಿಷ್ಯತಿ ।
ಅತೋ ಹಿ ಸಂಚಿಂತಯ ರಾಜ್ಯಮಾತ್ಮಜೇ
ಪರಸ್ಯ ಚೈವಾಸ್ಯ ವಿವಾಸಕಾರಣಮ್ ॥

ಅನುವಾದ

ನೆನಪಿಡು, ಶ್ರೀರಾಮನು ಪೃಥ್ವಿಯ ಅಧಿಕಾರ ಪಡೆದುಕೊಂಡಾಗ ನಿಶ್ಚಯವಾಗಿ ನಿನ್ನ ಮಗ ಭರತನು ನಾಶವಾಗಿ ಹೋಗುವನು. ಆದ್ದರಿಂದ ನಿನ್ನ ಪುತ್ರನಿಗೆ ರಾಜ್ಯ ಸಿಗಲಿ ಮತ್ತು ಶತ್ರುವಾದ ಶ್ರೀರಾಮನಿಗೆ ವನವಾಸ ಉಂಟಾಗುವಂತಹ ಏನಾದರೂ ಉಪಾಯ ಯೋಚಿಸು.॥39॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಂಟನೆಯ ಸರ್ಗ ಪೂರ್ಣವಾಯಿತು. ॥8॥