००७ मन्थरामन्त्रणम्

वाचनम्
ಭಾಗಸೂಚನಾ

ಶ್ರೀರಾಮನ ಪಟ್ಟಾಭಿಷೇಕದ ಸಮಾಚಾರ ತಿಳಿದು ಖಿನ್ನಳಾದ ಮಂಥರೆಯು ಕೈಕೆಯನ್ನು ಜರೆದುದು, ಆದರೆ ಪ್ರಸನ್ನಳಾದ ಕೈಕೇಯಿ ಆಕೆಗೆ ಉಡುಗೊರೆಯಾಗಿ ಒಡವೆಗಳನ್ನು ಕೊಡುವುದು, ಮಂಥರೆಯು ಕೈಕೆಯನ್ನು ಪುಸಲಾಯಿಸಿ ವರಗಳನ್ನು ಕೇಳುವಂತೆ ಪ್ರೇರೇಪಿಸಿದುದು

ಮೂಲಮ್ - 1

ಜ್ಞಾತಿದಾಸೀ ಯತೋ ಜಾತಾ ಕೈಕೇಯ್ಯಾತುಸಹೋಷಿತಾ ।
ಪ್ರಾಸಾದಂ ಚಂದ್ರ ಸಂಕಾಶಮಾರುರೋಹ ಯದೃಚ್ಛಯಾ ॥

ಅನುವಾದ

ಮಹಾರಾಣಿ ಕೈಕೆಯ ಬಳಿ ಓರ್ವ ದಾಸಿಯಿದ್ದಳು, ಆಕೆಯನ್ನು ಅವಳು ತವರುಮನೆಯಿಂದ ತಂದಿದ್ದಳು. ಆಕೆಯು ಸದಾ ಕೈಕೆಯಿಯ ಜೊತೆಗೇ ಇರುತ್ತಿದ್ದಳು. ಆಕೆ ಎಲ್ಲಿ ಹುಟ್ಟಿದಳು? ಆಕೆಯ ತಂದೆ-ತಾಯಿ ಯಾರು? ಇದು ಯಾರಿಗೂ ತಿಳಿದಿರಲಿಲ್ಲ. ಪಟ್ಟಾಭಿಷೇಕದ ಹಿಂದಿನ ದಿನ ಅವಳು ಸ್ವೇಚ್ಛೆಯಿಂದ ಚಂದ್ರನಂತೆ ಕಾಂತಿಯುಳ್ಳ ಅರಮನೆಯ ಬಿಸಿಲು ಮಾಳಿಗೆಯನ್ನು ಹತ್ತಿದಳು.॥1॥

ಮೂಲಮ್ - 2

ಸಿಕ್ತರಾಜಪಥಾಂ ಕೃತ್ಸ್ನಾಂ ಪ್ರಕೀರ್ಣಕುಮಲೋತ್ಪಲಾಮ್ ।
ಅಯೋಧ್ಯಾಂ ಮಂಥರಾ ತಸ್ಮಾತ್ಪ್ರಾ ಸಾದಾದನ್ವವೈಕ್ಷತ ॥

ಅನುವಾದ

ಮಂಥರೆ ಎಂಬ ಆ ದಾಸಿಯು ಆ ಭವನದ ಮಾಳಿಗೆಯಿಂದ ನೋಡಿದಳು - ಅಯೋಧ್ಯೆಯ ರಾಜಬೀದಿಗಳು ಪನ್ನೀರಿನಿಂದ ಸಿಂಪಡಿಸಲಾಗಿತ್ತು. ನಗರದ ಎಲ್ಲೆಡೆ ಅರಳಿದ ಕಮಲ ಮತ್ತು ಉತ್ಪಲ ಪುಷ್ಪಗಳನ್ನು ಚೆಲ್ಲಿದ್ದರು.॥2॥

ಮೂಲಮ್ - 3

ಪತಾಕಾಭಿರ್ವರಾರ್ಹಾಭಿರ್ಧ್ವಜೈಶ್ಚ ಸಮಲಂಕೃತಾಮ್ ।
ಸಿಕ್ತಾಂ ಚಂದನತೋಯೈಶ್ಚ ಶಿರಃ ಸ್ನಾತಜನೈರ್ಯುತಾಮ್ ॥

ಅನುವಾದ

ಎಲ್ಲೆಡೆ ಸುಂದರ ಪತಾಕೆಗಳು ಹಾರಾಡುತ್ತಿದ್ದವು. ಧ್ವಜಗಳಿಂದ ಆ ಪುರಿಯ ಶೋಭೆ ಅಪೂರ್ವವಾಗಿತ್ತು. ರಾಜಬೀದಿಗಳಲ್ಲಿ ಸುಗಂಧಿತ ನೀರನ್ನು ಚಿಮುಕಿಸಲಾಗಿತ್ತು. ಅಯೋಧ್ಯೆಯ ಎಲ್ಲ ಜನರು ಅಭ್ಯಂಗ ಸ್ನಾತರಾಗಿ ಅಲಂಕೃತರಾಗಿ ಓಡಾಡುತ್ತಿದ್ದರು.॥3॥

ಮೂಲಮ್ - 4

ಮಾಲ್ಯಮೋದಕಹಸ್ತೈಶ್ಚ ದ್ವಿಜೇಂದ್ರೈರಭಿನಾದಿತಾಮ್ ।
ಶುಕ್ಲದೇವಗೃಹದ್ವಾರಾಂ ಸರ್ವವಾದಿತ್ರನಾದಿತಾಮ್ ॥

ಮೂಲಮ್ - 5

ಸಂಪ್ರಹೃಷ್ಟ ಜನಾಕೀರ್ಣಾಂ ಬ್ರಹ್ಮಘೋಷನಿನಾದಿತಾಮ್ ।
ಪ್ರಹೃಷ್ಟ ವರಹಸ್ತ್ಯಶ್ವಾಂ ಸಂಪ್ರಣರ್ದಿತಗೋವೃಷಾಮ್ ॥

ಅನುವಾದ

ಶ್ರೀರಾಮನಿಗೆ ಅರ್ಪಿಸಲು ಮಾಲೆಗಳನ್ನು ಮತ್ತು ಮೋದಕಗಳನ್ನು ಕೈಗಳಲ್ಲೆತ್ತಿಕೊಂಡ ಶ್ರೇಷ್ಠ ಬ್ರಾಹ್ಮಣರು ಹರ್ಷನಾದ ಮಾಡುತ್ತಾ ಇದ್ದಾರೆ. ದೇವಾಲಯಗಳ ಮಹಾದ್ವಾರಗಳನ್ನು ಚಂದನಾದಿಗಳಿಂದ ಸುಂದರವಾಗಿ ಅಲಂಕರಿಸಿದ್ದರು. ಎಲ್ಲ ಪ್ರಕಾರದ ವಾದ್ಯಗಳ ಮಧುರ ಧ್ವನಿ ಎಲ್ಲೆಡೆ ಮೊಳಗುತ್ತಿತ್ತು. ಅತ್ಯಂತ ಹರ್ಷಿತರಾದ ಜನರಿಂದ ನಗರವೆಲ್ಲ ತುಂಬಿಹೋಗಿತ್ತು. ಎಲ್ಲೆಡೆ ವೇದಪಾಠಿಗಳ ಮಂತ್ರ ಧ್ವನಿಗಳು ಪ್ರತಿಧ್ವನಿಸುತ್ತಿದ್ದವು. ಶ್ರೇಷ್ಠ ಗಜ, ಅಶ್ವಗಳು ಹರ್ಷದಿಂದ ಮೆರೆಯುತ್ತಿದ್ದವು. ಹಸುಗಳು ಮತ್ತು ಕರುಗಳು ಆನಂದದಿಂದ ‘ಅಂಬಾ’ ಎಂದು ಕೂಗುತ್ತಿದ್ದವು.॥4-5॥

ಮೂಲಮ್ - 6

ಪ್ರಹೃಷ್ಟಮುದಿತೈಃ ಪೌರೈರುಚ್ಛ್ರಿತಧ್ವಜಮಾಲಿನೀಮ್ ।
ಅಯೋಧ್ಯಾಂ ಮಂಥರಾ ದೃಷ್ಟ್ವಾಪರಂ ವಿಸ್ಮಯಮಾಗತಾ ॥

ಅನುವಾದ

ಎಲ್ಲ ನಗರ ನಿವಾಸಿಗಳು ಹರ್ಷದಿಂದ ರೋಮಾಂಚನಗೊಂಡು ಆನಂದಮಗ್ನರಾಗಿದ್ದಾರೆ. ನಗರದ ಎಲ್ಲೆಡೆ ಎತ್ತರವಾದ ಧ್ವಜಗಳು ಹಾರಾಡುತ್ತಿದ್ದವು. ಅಯೋಧ್ಯೇಯ ಇಂತಹ ಶೋಭೆಯನ್ನು ನೋಡಿ ಮಂಥರೆಗೆ ಆಶ್ಚರ್ಯವಾಯಿತು.॥6॥

ಮೂಲಮ್ - 7

ಸಾ ಹರ್ಷೋತ್ಫುಲ್ಲನಯನಾಂ ಪಾಂಡುರಕ್ಷೌ ಮವಾಸಿನೀಮ್ ।
ಅವಿದೂರೇ ಸ್ಥಿತಾಂ ದೃಷ್ಟ್ವಾ ಧಾತ್ರೀಂಪಪ್ರಚ್ಛ ಮಂಥರಾ ॥

ಅನುವಾದ

ಅಲ್ಲೇ ಬಳಿಯ ಮಹಡಿಯಲ್ಲಿ ರಾಮನ ದಾಸಿಯನ್ನು ನೋಡಿದಳು. ಅವಳ ಕಣ್ಣುಗಳು ಪ್ರಸನ್ನತೆಯಿಂದ ಅರಳಿತ್ತು. ಶರೀರದಲ್ಲಿ ಬಿಳಿಯ ರೇಷ್ಮೆಯ ಸೀರೆಯನ್ನು ಉಟ್ಟಿದ್ದಳು. ಆಕೆಯನ್ನು ನೋಡಿ ಮಂಥರೆ ಕೇಳಿದಳು.॥7॥

ಮೂಲಮ್ - 8

ಉತ್ತಮೇನಾಭಿಸಂಯುಕ್ತಾ ಹರ್ಷೇಣಾರ್ಥಪರಾಸತೀ ।
ರಾಮಮಾತಾ ಧನಂ ಕಿಂ ನು ಜನೇಭ್ಯಃ ಸಂಪ್ರಯಚ್ಛತಿ ॥

ಮೂಲಮ್ - 9

ಅತಿಮಾತ್ರಂ ಪ್ರಹರ್ಷಃ ಕಿಂಜನಸ್ಯಾಸ್ಯ ಚ ಶಂಸ ಮೇ ।
ಕಾರಯಿಷ್ಯತಿ ಕಿಂವಾಪಿ ಸಂಪ್ರಹೃಷ್ಟೋ ಮಹೀಪತಿಃ ॥

ಅನುವಾದ

ಧಾತ್ರಿ! ಇಂದು ಶ್ರೀರಾಮಚಂದ್ರನ ಮಾತೆಯು ಯಾವುದೋ ಅಭೀಷ್ಟ ಮನೋರಥದ ಸಾಧನೆಯಲ್ಲಿ ತತ್ಪರಳಾಗಿ ಅತ್ಯಂತ ಹರ್ಷದಿಂದ ಜನರಿಗೆ ಧನವನ್ನು ಏಕೆ ಹಂಚುತ್ತಿದ್ದಾಳೆ? ಇಂದು ಇಲ್ಲಿಯ ಎಲ್ಲ ಜನರು ಇಷ್ಟು ಪ್ರಸನ್ನರಾಗಿರುವರು ಏಕೆ? ಇದರ ಕಾರಣವನ್ನು ನನಗೆ ತಿಳಿಸು. ಇಂದು ದಶರಥ ಮಹಾರಾಜ ಅತ್ಯಂತ ಪ್ರಸನ್ನರಾಗಿ ಯಾವ ಕಾರ್ಯವನ್ನು ಮಾಡುವರು.॥8-9॥

ಮೂಲಮ್ - 10

ವಿದೀರ್ಯಮಾಣಾ ಹರ್ಷೇಣ ಧಾತ್ರೀ ತು ಪರಯಾ ಮುದಾ ।
ಆಚಚಕ್ಷೇಽಥ ಕುಬ್ಜಾಯೈ ಭೂಯಸೀಂ ರಾಘವೇಶ್ರಿಯಮ್ ॥

ಮೂಲಮ್ - 11

ಶ್ವಃ ಪುಷ್ಯೇಣ ಜಿತಕ್ರೋಧಂ ಯೌವರಾಜ್ಯೇನ ಚಾನಘಮ್ ।
ರಾಜಾ ದಶರಥೋ ರಾಮಮಭಿಷೇಕ್ತಾ ಹಿ ರಾಘವಮ್ ॥

ಅನುವಾದ

ಶ್ರೀರಾಮನ ದಾಸಿಯು ಹರ್ಷಾತಿರೇಕದಿಂದ ಕುಬ್ಜಾ ಮಂಥರೆಯು ಕೇಳಿದಾಗ ಬಹಳ ಆನಂದದಿಂದ ತಿಳಿಸಿದಳು- ಕುಬ್ಜೇ! ರಘುನಾಥನಿಗೆ ಬಹಳ ದೊಡ್ಡ ಸಂಪತ್ತು ಪ್ರಾಪ್ತವಾಗುವುದಿದೆ. ನಾಳೆ ದಶರಥ ಮಹಾರಾಜರು ಪುಷ್ಯ ನಕ್ಷತ್ರದ ಶುಭಯೋಗದಲ್ಲಿ ಕ್ರೋಧವನ್ನು ಗೆದ್ದಿರುವ, ಪಾಪರಹಿತ, ರಘುಕುಲನಂದನ ಶ್ರೀರಾಮನಿಗೆ ಯುವರಾಜ ಪಟ್ಟಾಭಿಷೇಕ ಮಾಡುವರು.॥10-11॥

ಮೂಲಮ್ - 12

ಧಾತ್ರ್ಯಾಸ್ತು ವಚನಂ ಶ್ರುತ್ವಾ ಕುಬ್ಜಾ ಕ್ಷಿಪ್ರಮಮರ್ಷಿತಃ ।
ಕೈಲಾಸಶಿಖರಾಕಾರಾತ್ ಪ್ರಾಸಾದಾದವರೋಹತ ॥

ಅನುವಾದ

ದಾಸಿಯ ಆ ಮಾತನ್ನು ಕೇಳಿ ಮಂಥರೆಯು ಮನಸ್ಸಿನಲ್ಲೇ ಕುದಿಯತೊಡಗಿದಳು. ಕೂಡಲೇ ಆ ಕೈಲಾಸ ಶಿಖರದಂತೆ ಉಜ್ವಲ, ಗಗನಚುಂಬೀ ಸೌಧದಿಂದ ಕೆಳಗೆ ಇಳಿದಳು.॥12॥

ಮೂಲಮ್ - 13

ಸಾ ದಹ್ಯಮಾನಾ ಕ್ರೋಧೇನ ಮಂಥರಾ ಪಾಪದರ್ಶಿನೀ ।
ಶಯಾನಾಮೇವ ಕೈಕೇಯೀಮಿದಂ ವಚನಮಬ್ರವೀತ್ ॥

ಅನುವಾದ

ಮಂಥರೆಗೆ ಇದರಲ್ಲಿ ಕೈಕೆಯ ಅನಿಷ್ಟ ಕಾಣುತ್ತಿತ್ತು. ಆಕೆ ಸಿಟ್ಟಿನಿಂದ ಉರಿದೆದ್ದಳು. ಅವಳು ಅಂತಃಪುರದಲ್ಲಿ ಮಲಗಿರುವ ಕೈಕೆಯ ಬಳಿಗೆ ಬಂದು ಈ ಪ್ರಕಾರ ಹೇಳಿದಳು.॥13॥

ಮೂಲಮ್ - 14

ಉತ್ತಿಷ್ಠ ಮೂಢೇ ಕಿಂ ಶೇಷೇ ಭಯಂ ತ್ವಾಮಭಿವರ್ತತೇ ।
ಉಪಪ್ಲುತಮಘೌಘೇನ ನಾತ್ಮಾನಮವಬುಧ್ಯಸೇ ॥

ಅನುವಾದ

ಮೂರ್ಖಳೇ! ಏಳು, ಏಕೆ ಮಲಗಿರುವೆ? ನಿನ್ನ ಮೇಲೆ ಭಾರೀ ಭಯ ಆವರಿಸಿದೆ. ಎಲೆಗೆ! ನಿನ್ನ ಮೇಲೆ ವಿಪತ್ತಿನ ಬೆಟ್ಟವೇ ಕುಸಿದು ಬಿದ್ದಿದೆ. ಹೀಗಿದ್ದರೂ ನಿನಗೆ ಈ ದುರವಸ್ಥೆಯು ತಿಳಿಯಲೇ ಇಲ್ಲವಲ್ಲ.॥14॥

ಮೂಲಮ್ - 15

ಅನಿಷ್ಟೇ ಸುಭಗಾಕಾರೇ ಸೌಭಾಗ್ಯೇನ ವಿಕತ್ಥಸೇ ।
ಚಲಂ ಹಿ ತವ ಸೌಭಾಗ್ಯಂ ನದ್ಯಾಃಸ್ರೋತ ಇವೋಷ್ಮಗೇ ॥

ಅನುವಾದ

ನಿನ್ನ ಪ್ರಿಯತಮನು ನಿನ್ನ ಮುಂದೆ ಬಂದು ನಿನಗೆ ಎಲ್ಲ ಸೌಭಾಗ್ಯ ಅರ್ಪಿಸುತ್ತಾನೆ, ಆದರೆ ಬೆನ್ನ ಹಿಂದೆ ಅವನು ನಿನ್ನ ಅನಿಷ್ಟ ಮಾಡುವಂತೆ ಇದೆ, ಇದು ನೀನು ಅವನನ್ನು ತನ್ನಲ್ಲಿ ಅನುರಕ್ತನೆಂದು ತಿಳಿದು ಸೌಭಾಗ್ಯದ ಹಿರಿಮೆಯನ್ನು ಹೊಗಳಿಕೊಳ್ಳುತ್ತಿರುವೆ. ಆದರೆ ಗ್ರೀಷ್ಮ ಋತುವಿನಲ್ಲಿ ನದಿಯ ಪ್ರವಾಹ ಒಣಗಿ ಹೋಗುವಂತೆ ನಿನ್ನ ಆ ಸೌಭಾಗ್ಯ ಈಗ ಅಸ್ಥಿರವಾಗಿದೆ - ನಿನ್ನ ಕೈಯಿಂದ ಜಾರಿ ಹೋಗುತ್ತಾ ಇದೆ.॥15॥

ಮೂಲಮ್ - 16

ಏವಮುಕ್ತಾ ತು ಕೈಕೇಯೀರುಷ್ಟಯಾ ಪರುಷಂ ವಚಃ ।
ಕುಬ್ಜಯಾ ಪಾಪದರ್ಶಿನ್ಯಾ ವಿಷಾದಮಗಮತ್ಪರಮ್ ॥

ಅನುವಾದ

ಇಷ್ಟದಲ್ಲಿಯೂ ಅನಿಷ್ಟವನ್ನು ನೋಡುವ ರೋಷ ತುಂಬಿದ ಕುಬ್ಜೆಯು ಈ ರೀತಿಯ ಕಠೋರ ಮಾತನ್ನು ಹೇಳಿದಾಗ ಕೈಕೆಯಿಯ ಮನಸ್ಸಿನಲ್ಲಿ ಬಹಳ ದುಃಖವಾಯಿತು.॥16॥

ಮೂಲಮ್ - 17

ಕೈಕೇಯೀ ತ್ವಬ್ರವೀತ್ ಕುಬ್ಜಾಂ ಕಚ್ಚಿತ್ಕ್ಷೇಮಂ ನ ಮಂಥರೇ ।
ವಿಷಣ್ಣವದನಾಂ ಹಿ ತ್ವಾಂ ಲಕ್ಷಯೇ ಭೃಶದುಃಖಿತಾಮ್ ॥

ಅನುವಾದ

ಆಗ ಕೈಕೆಯಿಯು ಕುಬ್ಜೆಯಲ್ಲಿ ಕೇಳಿದಳು - ಮಂಥರೇ! ಯಾವುದೇ ಅಮಂಗಲದ ಮಾತು ನಡೆಯಲಿಲ್ಲವಲ್ಲ; ಏಕೆಂದರೆ ನಿನ್ನ ಮುಖದಲ್ಲಿ ವಿಷಾದ ಆವರಿಸಿದೆ ಹಾಗೂ ನೀನು ಬಹಳ ದುಃಖಿಯಾಗಿ ಕಾಣುತ್ತಿರುವೆ.॥17॥

ಮೂಲಮ್ - 18

ಮಂಥರಾ ತು ವಚಃ ಶ್ರುತ್ವಾ ಕೈಕೇಯ್ಯಾ ಮಧುರಾಕ್ಷರಮ್ ।
ಉವಾಚ ಕ್ರೋಧಸಂಯುಕ್ತಾ ವಾಕ್ಯಂವಾಕ್ಯವಿಶಾರದಾ ॥

ಮೂಲಮ್ - 19

ಸಾ ವಿಷಣ್ಣತರಾಭೂತ್ವಾ ಕುಬ್ಜಾ ತಸ್ಯಾಂ ಹಿತೈಷಿಣೀ ।
ವಿಷಾದಯಂತೀ ಪ್ರೋವಾಚ ಭೇದಯಂತೀ ಚ ರಾಘವಮ್ ॥

ಅನುವಾದ

ಮಂಥರೆಯು ಮಾತಿನಲ್ಲಿ ಬಹಳ ಕುಶಲಿಯಾಗಿದ್ದಳು. ಅವಳು ಕೈಕೆಯಿಯ ಮಧುರವಚನ ಕೇಳಿಯೂ ಖಿನ್ನಳಾದಳು. ಆಕೆಯ ಕುರಿತು ತನ್ನ ಹಿತೈಷಿತೆಯನ್ನು ಪ್ರಕಟಿಸುತ್ತಾ ಕುಪಿತಳಾದಳು ಹಾಗೂ ಕೈಕೆಯ ಮನಸ್ಸಿನಲ್ಲಿ ಶ್ರೀರಾಮನ ಕುರಿತು ಭೇದಭಾವ ಮತ್ತು ವಿಷಾದವನ್ನುಂಟುಮಾಡುತ್ತಾ ಈ ಪ್ರಕಾರ ಹೇಳಿದಳು.॥18-19॥

ಮೂಲಮ್ - 20

ಅಕ್ಷಯ್ಯಂ ಸುಮಹದ್ದೇವಿ ಪ್ರವೃತ್ತಂ ತ್ವದ್ವಿನಾಶನಮ್ ।
ರಾಮಂ ದಶರಥೋ ರಾಜಾ ಯೌವರಾಜ್ಯೇಽಭಿಷೇಕ್ಷ್ಯತಿ ॥

ಅನುವಾದ

ದೇವಿಯೇ! ನಿನ್ನ ಸೌಭಾಗ್ಯದ ಮಹಾವಿನಾಶದ ಕಾರ್ಯ ಆರಂಭವಾಗಿದೆ. ಅದರ ಯಾವುದೇ ಪ್ರತೀಕಾರ ಇಲ್ಲ. ನಾಳೆ ದಶರಥ ಮಹಾರಾಜರು ಶ್ರೀರಾಮನಿಗೆ ಯುವರಾಜ ಪಟ್ಟಾಭಿಷೇಕ ಮಾಡಿಬಿಡುವರು.॥20॥

ಮೂಲಮ್ - 21

ಸಾಸ್ಮ್ಯಗಾಧೇ ಭಯೇ ಮಗ್ನಾ ದುಃಖಶೋಕಸಮನ್ವಿತಾ ।
ದಹ್ಯಮಾನಾನಲೇನೇವ ತ್ವದ್ಧಿತಾರ್ಥಮಿಹಾಗತಾ ॥

ಅನುವಾದ

ಈ ಸಮಾಚಾರ ಪಡೆದು ನಾನು ದುಃಖ-ಶೋಕದಿಂದ ವ್ಯಾಕುಲಳಾಗಿ ಆಳವಾದ ಭಯಸಮುದ್ರದಲ್ಲಿ ಮುಳುಗಿಹೋದೆ. ಚಿಂತಾಗ್ನಿಯಿಂದ ಸುಡುತ್ತಿರುವಂತಿದೆ ಹಾಗೂ ನಿನ್ನ ಹಿತದ ಮಾತನ್ನು ತಿಳಿಸಲಿಕ್ಕಾಗಿ ಇಲ್ಲಿಗೆ ಬಂದಿರುವೆನು.॥21॥

ಮೂಲಮ್ - 22

ತವ ದುಃಖೇನ ಕೈಕೇಯಿ ಮಮ ದುಃಖಂಮಹದ್ ಭವೇತ್ ।
ತ್ವದ್ವದ್ಧೌ ಮಮ ವೃದ್ಧಿಶ್ಚ ಭವೇದಿಹ ನ ಸಂಶಯಃ ॥

ಅನುವಾದ

ಕೇಕಯನಂದಿನಿ! ನಿನ್ನ ಮೇಲೆ ಯಾವುದಾದರೂ ದುಃಖ ಬಂದರೆ ನನಗೂ ತುಂಬಾ ದುಃಖವನ್ನು ಅನುಭವಿಸಬೇಕಾದೀತು. ನಿನ್ನ ಉನ್ನತಿಯಲ್ಲೇ ನನ್ನ ಉನ್ನತಿ ಇದೆ, ಇದರಲ್ಲಿ ಸಂಶಯವೇ ಇಲ್ಲ.॥22॥

ಮೂಲಮ್ - 23

ನರಾಧಿಪಕುಲೇ ಜಾತಾಮಹಿಷೀ ತ್ವಂ ಮಹೀಪತೇಃ ।
ಉಗ್ರತ್ವಂ ರಾಜಧರ್ಮಾಣಾಂ ಕಥಂ ದೇವಿ ನ ಬುಧ್ಯಸೇ ॥

ಅನುವಾದ

ದೇವಿ! ನೀನು ಕ್ಷತ್ರಿಯ ಕುಲದಲ್ಲಿ ಹುಟ್ಟಿ, ಓರ್ವ ಚಕ್ರವರ್ತಿ ಮಹಾರಾಜನ ಮಹಾರಾಣಿಯಾಗಿರುವೆ. ಹೀಗಿದ್ದರೂ ರಾಜಧರ್ಮಗಳ ಉಗ್ರತೆಯನ್ನು ಏಕೆ ತಿಳಿದು ಕೊಳ್ಳುತ್ತಿಲ್ಲ.॥23॥

ಮೂಲಮ್ - 24

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ ।
ಶುದ್ಧಭಾವೇನ ಜಾನೀಷೇ ತೇನೈವಮತಿಸಂಧಿತಾ ॥

ಅನುವಾದ

ನಿನ್ನ ಸ್ವಾಮಿ ಧರ್ಮದ ಮಾತು ತುಂಬಾ ಆಡುತ್ತಾನೆ, ಆದರೆ ಅವನು ಬಹಳ ಶಠನಾಗಿದ್ದಾನೆ. ಬಾಯಿಯಲ್ಲಿ ಜೇನಿನಂತೆ ಮಾತನಾಡುವನು, ಆದರೆ ಹೃದಯದಲ್ಲಿ ಬಹಳ ಕ್ರೂರನಾಗಿದ್ದಾನೆ. ಅವರು ಎಲ್ಲ ಮಾತುಗಳನ್ನು ಶುದ್ಧ ಭಾವದಿಂದಲೇ ಆಡುತ್ತಿದ್ದಾರೆ ಎಂದು ನೀನು ತಿಳಿಯುತ್ತಿರುವೆ. ಅದರಿಂದ ಇಂದು ಅವನಿಂದ ನೀನು ಮೋಸ ಹೋದೆ.॥24॥

ಮೂಲಮ್ - 25

ಉಪಸ್ಥಿತಃ ಪ್ರಯುಂಜಾನಸ್ತ್ವಯಿಸಾಂತ್ವ ಮನರ್ಥಕಮ್ ।
ಅರ್ಥೇನೈವಾದ್ಯ ತೇ ಭರ್ತಾ ಕೌಸಲ್ಯಾಂಯೋಜಯಿಷ್ಯತಿ ॥

ಅನುವಾದ

ನಿನ್ನ ಪತಿಯು ನಿನಗೆ ವ್ಯರ್ಥ ಸಾಂತ್ವನ ನೀಡಲು ಇಲ್ಲಿಗೆ ಬರುವನು. ಅವನೇ ಈಗ ರಾಣಿ ಕೌಸಲ್ಯೆಯನ್ನು ಅರ್ಥದಿಂದ ಸಂಪನ್ನನಾಗಿಸಲು ಹೊರಟಿರುವನು.॥25॥

ಮೂಲಮ್ - 26

ಅಪವಾಹ್ಯ ಸ ದುಷ್ಟಾತ್ಮಾ ಭರತಂ ತವ ಬಂಧುಷು ।
ಕಾಲ್ಯೇ ಸ್ಥಾಪಯಿತಾ ರಾಮಂ ರಾಜ್ಯೇ ನಿಹತಕಂಟಕೇ ॥

ಅನುವಾದ

ಅವನು ಭರತನನ್ನು ನಿನ್ನ ತವರು ಮನೆಗೆ ಕಳಿಸಿಕೊಟ್ಟನು ಮತ್ತು ನಾಳೆ ಬೆಳಿಗ್ಗೆಯೇ ಅಯೋಧ್ಯೆಯ ನಿಷ್ಕಂಟಕ ರಾಜ್ಯದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವನು.॥26॥

ಮೂಲಮ್ - 27

ಶತ್ರುಃ ಪತಿಪ್ರವಾದೇನ ಮಾತ್ರೇವ ಹಿತಕಾಮ್ಯಯಾ ।
ಆಶೀವಿಷ ಇವಾಂಗೇನ ಬಾಲೇ ಪರಿಧೃತಸ್ತ್ವಯಾ ॥

ಅನುವಾದ

ಬಾಲೇ! ತಾಯಿಯು ಹಿತದ ಕಾಮನೆಯಿಂದ ಪುತ್ರನನ್ನು ಪೋಷಿಸುವಂತೆ, ‘ಪತಿ’ ಎಂದು ಹೇಳುವ ಯಾವ ವ್ಯಕ್ತಿಯನ್ನು ನೀನು ಪೋಷಿಸಿದೆಯೋ ಅವನೇ ಶತ್ರು ಆದನು. ಯಾರಾದರೂ ಅಜ್ಞಾನದಿಂದ ಹಾವನ್ನು ತೊಡೆಯಲ್ಲೆತ್ತಿಕೊಂಡು ಲಾಲನೆ ಮಾಡುವಂತೆಯೇ ನೀನು ಆ ಸರ್ಪದಂತೆ ವರ್ತಿಸುವ ಮಹಾರಾಜನಿಗೆ ತೊಡೆಯಲ್ಲಿ ಸ್ಥಾನ ನೀಡಿದೆ.॥27॥

ಮೂಲಮ್ - 28

ಯಥಾ ಹಿ ಕುರ್ಯಾಚ್ಛತ್ರುರ್ವಾ ಸರ್ಪೋ ವಾ ಪ್ರತ್ಯುಪೇಕ್ಷಿತಃ ।
ರಾಜ್ಞಾ ದಶರಥೇನಾದ್ಯ ಸಪುತ್ರಾ ತ್ವಂ ತಥಾ ಕೃತಾ ॥

ಅನುವಾದ

ಉಪೇಕ್ಷಿತ ಶತ್ರು ಅಥವಾ ಸರ್ಪವು ವರ್ತಿಸುವಂತೆಯೇ ರಾಜಾ ದಶರಥನು ಇಂದು ಪುತ್ರಸಹಿತ ಕೈಕೇಯಿಯಾದ ನಿನ್ನ ಕುರಿತು ವರ್ತಿಸುತ್ತಿರುವನು.॥28॥

ಮೂಲಮ್ - 29

ಪಾಪೇನಾನೃತಸಾಂತ್ವೇನ ಬಾಲೇ ನಿತ್ಯಂ ಸುಖೋಚಿತಾ ।
ರಾಮಂ ಸ್ಥಾಪಯತಾ ರಾಜ್ಯೇ ಸಾನುಬಂಧಾ ಹತಾ ಹ್ಯಸಿ ॥

ಅನುವಾದ

ಬಾಲೆ! ನೀನು ಸದಾ ಸುಖ ಭೋಗಿಸಲು ಯೋಗ್ಯಳಾಗಿರುವೆ, ಆದರೆ ಮನಸ್ಸಿನಲ್ಲಿ ದುರ್ಭಾವನೆ ಇಟ್ಟುಕೊಂಡು ಮೇಲ್ಮೇಲೆ ಸಾಂತ್ವನ ಕೊಡುವ ಮಹಾರಾಜನು ತನ್ನ ರಾಜ್ಯದಲ್ಲಿ ಶ್ರೀರಾಮನನ್ನು ಸ್ಥಾಪಿಸುವ ವಿಚಾರಮಾಡಿ ಇಂದು ಸಂಬಂಧಿಗಳ ಸಹಿತ ನಿನ್ನನ್ನು ಮೃತ್ಯು ಮುಖದಲ್ಲಿ ತಳ್ಳಿದಂತೆ ಇದೆ.॥29॥

ಮೂಲಮ್ - 30

ಸಾ ಪ್ರಾಪ್ತಕಾಲಂ ಕೈಕೇಯಿ ಕ್ಷಿಪ್ರಂ ಕುರು ಹಿತಂ ತವ ।
ತ್ರಾಯಸ್ವ ಪುತ್ರಮಾತ್ಮಾನಂ ಮಾಂ ಚ ವಿಸ್ಮಯದರ್ಶನೇ ॥

ಅನುವಾದ

ಕೇಕಯ ರಾಜಕುಮಾರಿಯೇ! ದುಃಖಜನಕ ಮಾತನ್ನು ಕೇಳಿಯೂ ನೀನು ಸಂತೋಷಗೊಂಡವಳಂತೆ ನನ್ನ ಕಡೆಗೆ ನೋಡುತ್ತಿರುವೆ. ನನ್ನ ಮಾತುಗಳಿಂದ ವಿಸ್ಮಯಹೊಂದಿರುವಂತೆ ಇದೆ, ಆದರೆ ಈ ವಿಸ್ಮಯವನ್ನು ಬಿಟ್ಟು ತನ್ನ ಹಿತದ ಕಾರ್ಯವನ್ನು ಬೇಗನೇ ಮಾಡುವ ಸಮಯ ಈಗ ಬಂದಿದೆ. ಹೀಗೆ ಮಾಡಿ ನಿನ್ನ, ನಿನ್ನ ಪುತ್ರನ ಮತ್ತು ನನ್ನ ರಕ್ಷಣೆಯನ್ನು ಮಾಡು.॥30॥

ಮೂಲಮ್ - 31

ಮಂಥರಾಯಾ ವಚಃ ಶ್ರುತ್ವಾ ಶಯನಾತ್ಸಾ ಶುಭಾನನಾ ।
ಉತ್ತಸ್ಥೌ ಹರ್ಷಸಂಪೂರ್ಣಾ ಚಂದ್ರಲೇಖೇವ ಶಾರದೀ ॥

ಅನುವಾದ

ಮಂಥರೆಯ ಮಾತನ್ನು ಕೇಳಿ ಸುಂದರ ಮುಖವುಳ್ಳ ಕೈಕೆಯಿಯು ಒಮ್ಮೆಲೆ ಎದ್ದು ಕುಳಿತಳು. ಆಕೆಯ ಹೃದಯ ಹರ್ಷದಿಂದ ತುಂಬಿಹೋಗಿತ್ತು. ಅವಳು ಶರತ್ ಪೂರ್ಣಿಮೆಯ ಚಂದ್ರನಂತೆ ಪ್ರಕಾಶಿಸುತ್ತಿದ್ದಳು.॥31॥

ಮೂಲಮ್ - 32

ಅತೀವ ಸಾ ತುಸಂತುಷ್ಟಾ ಕೈಕೇಯೀ ವಿಸ್ಮಯಾನ್ವಿತಾ ।
ದಿವ್ಯಮಾಭರಣಂ ತಸ್ಯೈ ಕುಬ್ಜಾಯೈ ಪ್ರದದೌ ಶುಭಮ್ ॥

ಅನುವಾದ

ಕೈಕೆಯು ಮನಸ್ಸಿನಲ್ಲೇ ಸಂತೋಷಗೊಂಡು ವಿಸ್ಮಯ ಮುಗ್ಧಳಾಗಿ ಮುಗುಳ್ನಗುತ್ತಾ ಕುಬ್ಜೆಗೆ ಉಡುಗೊರೆಯಾಗಿ ಒಂದು ಬಹಳ ಸುಂದರ ಒಡವೆಯನ್ನು ಕೊಟ್ಟಳು.॥32॥

ಮೂಲಮ್ - 33

ದತ್ತ್ವಾ ತ್ವಾಭರಣಂ ತಸ್ಯೈ ಕುಬ್ಜಾಯೈ ಪ್ರಮದೋತ್ತಮಾ ।
ಕೈಕೇಯೀ ಮಂಥರಾಂ ಹೃಷ್ಟ್ವಾ ಪುನರೇವಾಬ್ರವೀದಿದಮ್ ॥

ಮೂಲಮ್ - 34

ಇದಂ ತು ಮಂಥರೇ ಮಹ್ಯಮಾಖ್ಯಾತಂ ಪರಮಂ ಪ್ರಿಯಮ್ ।
ಏತನ್ಮೇ ಪ್ರಿಯಮಾಖ್ಯಾತಂ ಕಿಂ ವಾ ಭೂಯಃ ಕರೋಮಿ ತೇ ॥

ಅನುವಾದ

ಕುಬ್ಜೆಗೆ ಆ ಒಡವೆಯನ್ನು ಕೊಟ್ಟು ಹರ್ಷಗೊಂಡು ರಮಣಿ ಶ್ರೇಷ್ಠ ಕೈಕೆಯಿಯು ಪುನಃ ಮಂಥರೆಯಲ್ಲಿ ಹೀಗೆ ಹೇಳಿದಳು - ಮಂಥರೇ! ನೀನು ಬಹಳ ಪ್ರಿಯವಾದ ಸಮಾಚಾರವನ್ನು ನನಗೆ ತಿಳಿಸಿದೆ. ನೀನು ನನಗಾಗಿ ತಿಳಿಸಿದ ಈ ಪ್ರಿಯ ಸಮಾಚಾರಕ್ಕಾಗಿ ನಾನು ನಿನಗೆ ಇನ್ನೇನು ಉಪಕಾರ ಮಾಡಲೀ.॥33-34॥

ಮೂಲಮ್ - 35

ರಾಮೇ ವಾ ಭರತೇ ವಾಹಂ ವಿಶೇಷಂನೋಪಲಕ್ಷಯೇ ।
ತಸ್ಮಾತ್ತುಷ್ಟಾಸ್ಮಿ ಯದ್ ರಾಜಾ ರಾಮಂ ರಾಜ್ಯೇಽಭಿಷೇಕ್ಷ್ಯತಿ ॥

ಅನುವಾದ

ನಾನೂ ಕೂಡ ರಾಮ ಮತ್ತು ಭರತರಲ್ಲಿ ಯಾವ ಭೇದವನ್ನೂ ತಿಳಿಯುವುದಿಲ್ಲ. ಆದ್ದರಿಂದ ಇದನ್ನು ತಿಳಿದುಕೊಂಡೇ ಮಹಾರಾಜರು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವವರಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಯಿತು.॥35॥

ಮೂಲಮ್ - 36

ನ ಮೇ ಪರಂ ಕಿಂಚಿದಿತೋ ವರಂ ಪುನಃ
ಪ್ರಿಯಂ ಪ್ರಿಯಾರ್ಹೇ ಸುವಚಂ ವಚೋಽಮೃತಮ್ ।
ತಥಾ ಹ್ಯವೋಚಸ್ತ್ವಮತಃ ಪ್ರಿಯೋತ್ತರಂ
ವರಂ ಪರಂ ತೇ ಪ್ರದದಾಮಿ ತಂ ವೃಣು ॥

ಅನುವಾದ

ಮಂಥರೇ! ನೀನು ನನ್ನಿಂದ ಪ್ರಿಯವಸ್ತುವನ್ನು ಪಡೆಯಲು ಯೋಗ್ಯಳಾಗಿರುವೆ. ನನಗಾಗಿ ಶ್ರೀರಾಮ ಪಟ್ಟಾಭಿಷೇಕದ ಸಮಾಚಾರಕ್ಕಿಂತ ಬೇರೆ ಯಾವುದೇ ಪ್ರಿಯ ಹಾಗೂ ಅಮೃತದಂತಹ ಮಧುರ ಮಾತು ಇಲ್ಲವೆಂದೇ ಹೇಳಬಹುದು. ಅಂತಹ ಪ್ರಿಯವಾದ ಮಾತನ್ನು ನೀನು ಹೇಳಿರುವೆ; ಆದ್ದರಿಂದ ಈಗ ನೀನು ಈ ಪ್ರಿಯ ಸಮಾಚಾರ ಹೇಳಿದುದಕ್ಕೆ ಯಾವುದಾದರೂ ಶ್ರೇಷ್ಠವಾದ ವರವನ್ನು ಬೇಡಿಕೋ ನಾನು ಅವಶ್ಯವಾಗಿ ಕೊಡುವೆನು.॥36॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಏಳನೆಯ ಸರ್ಗ ಪೂರ್ಣವಾಯಿತು. ॥7॥