ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ

Source: prekshaa series

[[ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ Source: prekshaa]]

ಇಂದಿಗೆ ಸುಮಾರು ಇಪ್ಪತ್ತೊಂಬತ್ತು-ಮೂವತ್ತು ವರ್ಷಗಳ ಹಿಂದೆ, ಅಂದರೆ ೧೯೮೯-೯೦ರ ಆಸುಪಾಸಿನಲ್ಲಿ, ಬೆಂಗಳೂರಿನ ರಾಜಾಜಿನಗರನದಲ್ಲಿಯ ಕುಮಾರವ್ಯಾಸಮಂಟಪದ ಯಾವುದೋ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳನ್ನು ನಾನು ಮೊದಲ ಬಾರಿ ನೋಡಿದ ನೆನಪು. ಅನಂತರ ಸ್ವಲ್ಪದ ಅಂತರದಲ್ಲಿಯೇ ಮತ್ತೆ ಬ್ರಾಹ್ಮಣಮಹಾಸಭೆಯ ಹಲಕೆಲವು ಕಾರ್ಯಕ್ರಮಗಳಲ್ಲಿ, ಶಂಕರಜಯಂತಿಯ ಕಾರ್ಯಕ್ರಮಗಳಲ್ಲಿ ಅವರು ಕಂಡಿದ್ದರು. ಆದರೆ ಹೆಚ್ಚಿನ ಪರಿಚಯ ಮತ್ತು ಬಳಕೆ ಆದದ್ದು ಶ್ರೀಪರಮಾನಂದಭಾರತೀಸ್ವಾಮಿಗಳು ಆಯೋಜಿಸಿದ ಮೊತ್ತಮೊದಲ ಗಾಯತ್ರೀಮಹಾಯಾಗದ ಸಂದರ್ಭದಲ್ಲಿ. ಇದೇ ಸಮಯದಲ್ಲಿ ಸಂಧ್ಯಾವಂದನೆ, ಸಮಿದಾಧಾನ, ಬ್ರಹ್ಮಯಜ್ಞ ಮುಂತಾದ ನಿತ್ಯ ಕರ್ಮಗಳ ಪ್ರಾಚೀನ ಮತ್ತು ಪರಿಶುದ್ಧವಾದ ರೂಪವನ್ನು ಶ್ರುತಿ-ಸೂತ್ರಗಳಿಗೆ ಸಮ್ಮತವಾಗಿ ಕೊಡಬೇಕೆಂಬ ಇರಾದೆಯಲ್ಲಿ ನಾನಿದ್ದೆ. ಇದಕ್ಕೆ ಸ್ವಾಮಿಗಳ ಬೆಂಬಲವೂ ಇತ್ತು.

ಇದಕ್ಕೆ ಸಂಬಂಧಿಸಿದಂತೆ ಶಂಕರಸಮಿತಿಯಲ್ಲಿ ಒಂದು ಗೋಷ್ಠಿಯನ್ನು ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಮೊದಲಿಗೆ ಸಂಧ್ಯಾವಂದನೆಯೇ ಮುಂತಾದ ನಿತ್ಯಕರ್ಮಗಳಿಗೆ ಸಂಬಂಧಿಸಿದ ನೂರಾರು ಪ್ರಶ್ನೆಗಳ ಪಟ್ಟಿಯೊಂದನ್ನು ಮಾಡಿಕೊಂಡು ಅದನ್ನು ವಿದ್ವಜ್ಜನರ ಅವಗಾಹನೆಗಾಗಿ ಕಳುಹಲಾಗಿತ್ತು. ಅವರಿಂದ ಬಂದ ಲಿಖಿತರೂಪದ ಉತ್ತರಗಳ ಜೊತೆಗೆ ಮೌಖಿಕವಾಗಿಯೇ ಉತ್ತರಿಸಲು ಬಂದ ವಿದ್ವಾಂಸರನ್ನೂ ಒಟ್ಟುಗೂಡಿಸಿಕೊಂಡು ಚರ್ಚಿಸಬೇಕಿತ್ತು. ಇದಕ್ಕಾಗಿ ಹತ್ತಾರು ಮಂದಿ ವೈದಿಕರು ಆಗಮಿಸಿದ್ದರು. ಇವರಲ್ಲಿ ಪುರೋಹಿತರು, ಪ್ರಯೋಗಪಾಠಗಳನ್ನು ಮಾಡಬಲ್ಲವರು, ಧರ್ಮಶಾಸ್ತ್ರಗಳನ್ನು ಓದಿಕೊಂಡವರು ಕೂಡ ಸೇರಿದ್ದರು. ದೊಡ್ಡ ವಿದ್ವಾಂಸರಾದ ತರ್ಕಂ ಕೃಷ್ಣಶಾಸ್ತ್ರಿಗಳು, ಬನವತಿ ರಾಮಕೃಷ್ಣಶಾಸ್ತ್ರಿಗಳು, ಎಸ್. ವಿ. ಶ್ಯಾಮಭಟ್ಟರು, ಧಾಳಿ ಲಕ್ಷ್ಮೀನರಸಿಂಹಭಟ್ಟರು, ಪುಟ್ಟನರಸಿಂಹಶಾಸ್ತ್ರಿಗಳೇ ಮುಂತಾದವರು ಅಲ್ಲಿದ್ದರು. ಇವರೆಲ್ಲರ ವಾದ-ಉಪವಾದಗಳಿಗೆ ನಾನು ಯಥಾಶಕ್ತಿ ಉತ್ತರಿಸುತ್ತಿದ್ದೆ. ಜೊತೆಗೆ, ನನ್ನದಾದ ಪ್ರಶೆಗಳನ್ನೂ ಅವರ ಮುಂದಿಟ್ಟು ಅಭಿಪ್ರಾಯಗಳನ್ನು ಕೇಳುತ್ತಿದ್ದೆ. ಸಾಕಷ್ಟು ಬಿಸಿಬಿಸಿಯಾದ ವಾಗ್ವಾದಗಳು ನಡೆದವು. ಇಂಥ ಕೋಲಾಹಲದ ನಡುವೆ ಶೇಷಣ್ಣನವರೊಬ್ಬರೇ ಒಪ್ಪವಾಗಿ ಪ್ರತಿಯೊಂದನ್ನೂ ಗುರುತುಮಾಡಿಕೊಂಡು ತಮ್ಮದಾದ ಅಭಿಪ್ರಾಯಗಳನ್ನು ಯಥೋಚಿತವಾಗಿ ನಿವೇದಿಸುತ್ತ ಹೆಚ್ಚಿನ ಗೊಂದಲವಾಗದಂತೆ ನೆರವಾದರು.

ಇಲ್ಲೆಲ್ಲ ನನಗೆ ಎದ್ದುಕಂಡದ್ದು ಅವರ ಸಮಾಹಿತಮನಸ್ಸು; ಮತ್ತದು ಧರ್ಮ-ಕರ್ಮಗಳ ವಿಷಯದಲ್ಲಿ ಹೊಂದಿದ್ದ ನಿಷ್ಠೆ. ಸ್ವಾಮಿಗಳ ನಿಯಂತ್ರಣ ಮತ್ತು ಶೇಷಣ್ಣನವರ ಸಮಯಪ್ರಜ್ಞೆಗಳೆರಡೂ ಅಂದಿನ ಗೋಷ್ಠಿಯನ್ನು ಸಾಕಷ್ಟು ಫಲಪ್ರದವಾಗಿಸಿದವು. ಇಷ್ಟಾದರೂ ನಾನು ಕಡೆಗೆ ನನ್ನ ಅಧ್ಯಯನವನ್ನು ನಚ್ಚಿಕೊಂಡೇ ಪುಸ್ತಕವನ್ನು ಬರೆಯಬೇಕಾಗಿ ಬಂದದ್ದು ಬೇರೊಂದು ಕಥೆ. ಅದು ನಮ್ಮ ವೈದಿಕರ, ವಿದ್ವಾಂಸರ ಹಾಗೂ ಇಡಿಯ ಕರ್ಮಕಾಂಡದ ಗೋಜಲಿಗೆ ಮಾರ್ಮಿಕವಾದ ದೃಷ್ಟಾಂತವೂ ಹೌದು.

ಈ ಕಾರ್ಯವನ್ನು ಎಲ್ಲ ವೇದಶಾಖೆಗಳಿಗೆ ಸೇರಿದವರಿಗೂ ಅನ್ವಯಿಸುವಂತೆ ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ಮಿಗಿಲಾದ ನೆರವನ್ನಿತ್ತವರು ಶೇಷಣ್ಣಶ್ರೌತಿಗಳು. ನನ್ನ “ಸಂಧ್ಯಾದರ್ಶನ”ಕೃತಿಗಾಗಿ ಸಾಮವೇದದ ಸಂಧ್ಯಾವಂದನೆಯೇ ಮುಂತಾದ ಎಲ್ಲ ನಿತ್ಯಕರ್ಮಗಳ ವಿವಿರಗಳನ್ನು ಅವರೇ ಹವಣಿಸಿಕೊಟ್ಟರು. ಆಗ ನನಗೆ ಅವರ ಸಾಮವೇದಜ್ಞತೆಯ ಪರಿಚಯವಾಯಿತು. ಇದನ್ನು ಕುರಿತು ಮತ್ತೂ ವಿಸ್ತರಿಸಬೇಕು; ಅದನ್ನು ಮುಂದಕ್ಕಿರಿಸಿಕೊಳ್ಳೋಣ.

* * *

ಮೊದಲಿಗೆ ಶೇಷಣ್ಣನವರ ವ್ಯಕ್ತಿತ್ವದ ನಿರೂಪಣೆ ಪರಮಾವಶ್ಯ. ಅವರ ಎಲ್ಲ ಶ್ರದ್ಧೆ-ಸಿದ್ಧಿಗಳೂ ದುಡಿದು ಪರಿಪಾಕ ಕಂಡಿರುವುದು ಇಲ್ಲಿಯೇ ಎಂದು ನನ್ನ ವಿಶ್ವಾಸ. ಇದು ಆರ್ಷಧರ್ಮದ ಉದ್ದೇಶವೂ ಹೌದು.

ಶೇಷಣ್ಣನವರು ಎದ್ದುಕಾಣುವ ಬಣ್ಣ-ಮೈಕಟ್ಟುಗಳ ವ್ಯಕ್ತಿಯಲ್ಲ. ಮಾತಿನ ಅಬ್ಬರವೂ ಅವರದಲ್ಲ. ಆದರೆ ಪರಿಶುದ್ಧತೆ, ಪ್ರಾಮಾಣಿಕತೆ, ಸಮರ್ಪಣೆ, ನಿಃಸ್ವಾರ್ಥತೆ ಮುಂತಾದ ಏನೆಲ್ಲ ಸದ್ಗುಣಗಳನ್ನು ನಾವು ಪಟ್ಟಿ ಮಾಡಬಲ್ಲೆವೋ ಅವೆಲ್ಲವೂ ಅವರಲ್ಲಿ ಗೊಂದಲವಿಲ್ಲದೆ ನೆಲೆಸಿದ್ದವು. ಲಾಗಾಯ್ತಿನಿಂದಲೂ ಅವರ ಉಡುಪು ಖಾದಿಯ ಬಟ್ಟೆ. ಇಲ್ಲಿ ಕೂಡ ಅಂಚು-ಸೆರಗಿನ ಬಣ್ಣ-ಬೆಡಗಿಲ್ಲದ ಬಿಳಿಯ ಪಂಚೆ, ಬಿಳಿಯ ಉತ್ತರೀಯ, ಬಿಳಿಯ ಮೇಲಂಗಿ; ಎಲ್ಲವೂ ಅವರ ಅಂತರಂಗ-ಬಹಿರಂಗಗಳಂತೆಯೇ ಅವದಾತ, ಅನಾವಿಲ. ಈ ಖಾದಿವ್ರತವನ್ನವರು ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಮೈಗೂಡಿಸಿ ಕೊಂಡರಂತೆ. ಆಗಲೇ ಅವರಿಗೆ ಹಿಂದಿ ಭಾಷೆಯ ಪರಿಚಯವೂ ಆಗಿ ಮುಂದೆ ಅದರ ಸಾಹಿತ್ಯವನ್ನು ವ್ಯಾಸಂಗಮಾಡಿ ರಾಷ್ಟçಭಾಷಾಪ್ರವೀಣ, ಸಾಹಿತ್ಯರತ್ನ, ವಿಜ್ಞಾನರತ್ನ ಮೊದಲಾದ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗುವ ಪ್ರೌಢಿಮೆ ದಕ್ಕಿತು.

ಅವರ ಉಡುಪಿನಂತೆಯೇ ನಿರ್ವಿಶಿಷ್ಟವಾದರೂ ವಿಶಿಷ್ಟವಾದುದು ಅವರ ಹಳೆಯದಾದರೂ ಸುಸ್ಥಿತಿಯಲ್ಲಿ ಇದ್ದ ಬೈಸಿಕಲ್. ಶೇಷಣ್ಣನವರು ಬಹುಕಾಲದಿಂದ ತಮ್ಮ ಎಲ್ಲ ಸುತ್ತಾಟಗಳಿಗೆ ಇದನ್ನೇ ನಚ್ಚಿಕೊಂಡಿದ್ದರು. ಹೀಗೂ ಅವರು ಸ್ವಾವಲಂಬಿ. ತಮ್ಮ ಎಂಬತ್ತು-ಎಂಬತ್ತೈದರ ಹರೆಯದಲ್ಲಿಯೂ ಬೆಂಗಳೂರಿನ ಹದಗೆಟ್ಟ ರಸ್ತೆಗಳಲ್ಲಿ ಕೂಡ ಕಷ್ಟವೆನ್ನದೆ ಬೈಸಿಕಲ್ ಚಾಲಿಸುತ್ತಿದ್ದರು.+++(5)+++ ಹಲವೊಮ್ಮೆ ನೆಪಕ್ಕೆ ಮಾತ್ರ ಸೈಕಲ್ ಹಿಡಿದು ದಾರಿಯುದ್ದಕ್ಕೂ ಅದನ್ನು ತಳ್ಳಿಕೊಂಡೇ ಬರುತ್ತಿದ್ದರು. ಇದನ್ನು ಕುರಿತು ಯಾರಾದರೂ ಕೇಳಿದರೆ “ಇದೇನೂ ಕಷ್ಟವಿಲ್ಲ, ಅದಕ್ಕೆ ನಾನು ಜೊತೆ, ನನಗೆ ಅದು ಜೊತೆ” ಎಂದು ಹಗುರವಾಗಿ ತೇಲಿಸುತ್ತಿದ್ದರು.

* * *

ಮೂಲತಃ ಹೊಯ್ಸಳಕರ್ಣಾಟಕ ಎಂಬ ಬ್ರಾಹ್ಮಣಸಮುದಾಯಕ್ಕೆ ಸೇರಿದ ಶೇಷಣ್ಣನವರು ತುಮಕೂರು ಜಿಲ್ಲೆಯ ಕಡಬದವರು.+++(5)+++ ಅವರ ಹೆಸರಿಗೂ ಈ ಊರು ಅಂಟಿಕೊಂಡಿತ್ತೆಂದು ನನ್ನ ನೆನಪು. ಕದಂಬಪುರಿ ಎಂದು ಹಳೆಯ ದಾಖಲೆಗಳಲ್ಲಿ ಈ ಊರು ಸೇರಿದೆ. ಅಲ್ಲಿಯ ಶ್ರೀಕಾಶೀಪತಿ ಮತ್ತು ಶ್ರೀಮತಿ ಚೆಲುವಮ್ಮ ದಂಪತಿಗಳ ಕೊನೆಯ ಮಗನಾಗಿ ೧೯.೭.೧೯೨೩ರಲ್ಲಿ ಹುಟ್ಟಿದರು. ನಾಲ್ಕು ಜನ ಅಣ್ಣಂದಿರು, ಇಬ್ಬರು ಅಕ್ಕಂದಿರ ತುಂಬು ಸಂಸಾರದಲ್ಲಿ ಆ ಕಾಲದ ಬ್ರಾಹ್ಮಣವರ್ಗದ ಕಷ್ಟ-ಕಾರ್ಪಣ್ಯಗಳನ್ನೆಲ್ಲ ಸಮೃದ್ಧವಾಗಿ ಅನುಭವಿಸಿದವರು ಶೇಷಣ್ಣನವರು. ಆದರೆ ಯಾವುದೇ ಸಂದರ್ಭದಲ್ಲಿ ತಮ್ಮ ಬದುಕಿನ ಎಂಥದ್ದೇ ಕಷ್ಟವನ್ನು ಹೇಳಿಕೊಂಡವರಲ್ಲ; ಈಚಿನವರ ಅನುಕೂಲತೆಗಳನ್ನು ಕಂಡು ಕರುಬಿದವರೂ ಅಲ್ಲ.

ಕೃಷಿವಿಜ್ಞಾನದಲ್ಲಿ ಡಿಪ್ಲೊಮೋ ಪದವಿ ಪಡೆದು ಅದೇ ಕ್ಷೇತ್ರದಲ್ಲಿ ದುಡಿಯತೊಡಗಿದ ಶೇಷಣ್ಣನವರು ರೈತರಿಗೆ ನಿರಂತರವಾಗಿ ಸಲಹೆ, ನೆರವು, ತರಪೇತಿಗಳನ್ನು ಕೊಡುತ್ತಿದ್ದವರು, ಕೃಷಿವಿಶ್ವವಿದ್ಯಾಲಯಕ್ಕಾಗಿ ಹಲವಾರು ಆಂಗ್ಲಗ್ರಂಥಗಳನ್ನು ಕನ್ನಡಿಸಿಕೊಟ್ಟವರು, ಆಕಾಶವಾಣಿ-ದೂರದರ್ಶನಗಳಲ್ಲಿ ಕೃಷಿರಂಗದ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟವರು.+++(4)+++ ಆಧುನಿಕಕೃಷಿಶಾಸ್ತ್ರವನ್ನು ನಮ್ಮ ರೈತರಿಗೆ ತಿಳಿಸಿಕೊಟ್ಟಂತೆಯೇ ಸಾಂಪ್ರದಾಯಿಕವಾದ ಭಾರತೀಯಕೃಷಿಪದ್ಧತಿಯಲ್ಲಿರುವ ಮೌಲಿಕಾಂಶಗಳನ್ನೂ ಗಟ್ಟಿಯಾಗಿ ಅವರು ಪ್ರತಿಪಾದಿಸಿದರು. ಶೇಷಣ್ಣನವರಿಗೆ ಇಂಗ್ಲಿಷ್, ಕನ್ನಡ, ಮತ್ತು ಹಿಂದೀಭಾಷೆಗಳಲ್ಲಿ ಒಳ್ಳೆಯ ಗತಿ ಸಿದ್ಧಿಸಿತ್ತು.+++(4)+++ ಹೀಗಾಗಿ ಅದೆಷ್ಟೋ ಮಂದಿ ಕೃಷಿತಜ್ಞರ ಇಂಗ್ಲಿಷ್-ಹಿಂದೀಭಾಷಣಗಳನ್ನು ಅವರು ಕನ್ನಡದಲ್ಲಿ ಆಶುವಾಗಿ ಅನುವಾದಿಸಿ ರೈತರಿಗೆ ತಿಳಿಸುತ್ತಿದ್ದರು. ಸಾವಿರದ ಒಂಬೈನೂರ ಎಪ್ಪತ್ತೆಂಟರಲ್ಲಿಯೇ ಹಿರಿಯ ಸಹಾಯಕನಿರ್ದೇಶಕರಾಗಿ ನಿವೃತ್ತಿ ಪಡೆದರು. ಅವರ ಈ ಪೂರ್ವಾಶ್ರಮದ ವಿವರಗಳೆಲ್ಲ ನನಗೆ ಪರೋಕ್ಷ. ಇದನ್ನೆಲ್ಲ ಕುರಿತು ಅವರು ಹೆಚ್ಚಾಗಿ ಹೇಳಿಕೊಳ್ಳುತ್ತಲೂ ಇರಲಿಲ್ಲ. ಈಚೆಗಷ್ಟೇ ಅವರ ಬಂಧುಗಳಿಂದ ಇಂಥ ಹಲಕೆಲವು ವಿಚಾರಗಳು ನನಗೆ ತಿಳಿದುಬಂದವು.

* * *

ಶೇಷಣ್ಣನವರ ಸುಪುತ್ರ ಪಾರ್ಥಸಾರಥಿ ಬಹುಶಃ ನನ್ನ ಜೊತೆಯಲ್ಲಿಯೇ ಯು.ವಿ.ಸಿ.ಇ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು. ಬಹುಶಃ ಅವರು ಸಿವಿಲ್ ವಿಭಾಗದವರಾದ ಕಾರಣ ನನಗೆ ಅವರ ಬಳಕೆ ಹೆಚ್ಚಾಗಿ ಒದಗಿಬರಲಿಲ್ಲ. ನಾನು ಮ್ಯೆಕಾನಿಕಲ್ ವಿಭಾಗದವನು; ಬೆಂಗಳೂರು ನಗರದ ಕೇಂದ್ರಭಾಗದಲ್ಲಿದ್ದ ಕಟ್ಟಡದಲ್ಲಿ ವ್ಯಾಸಂಗ ಮಾಡಿದವನು. ಆದರೆ ಪಾರ್ಥಸಾರಥಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಪರಿಸರದಲ್ಲಿದ್ದ ಕಾರಣ ಆಗೀಗ ನೋಡುವ ಅವಕಾಶವೂ ಇರಲಿಲ್ಲ. ಹೀಗಾಗಿ ಶೇಷಣ್ಣನವರ ಮೂಲಕವೇ ನನಗೆ ಪಾರ್ಥಸಾರಥಿ ಅವರ ಪರಿಚಯ ಬೆಳೆದದ್ದು. ಯಾವಾಗ ‘ಸಂಧ್ಯಾದರ್ಶನ’ದ ಕೆಲಸ ಮೊದಲಾಯಿತೋ ಆಗಲೇ ಶೇಷಣ್ಣನವರ ಮನೆಗೆ ಹೋಗಿಬರುವುದು ಬಳಕೆಯಾಯಿತು. ಅವರ ಮನೆಮಂದಿಯ, ಬಂಧುವರ್ಗದ ಎಲ್ಲರ ಪರಿಚಯವೂ ದಕ್ಕಿತು.

ಕುಮಾರವ್ಯಾಸಮಂಟಪದ ಹತ್ತಿರವೇ ಶೇಷಣ್ಣನವರ ಮನೆ, ‘ದ್ರಾಹ್ಯಾಯಣ.’ ಸ್ವಶಾಖೆಯ ಸೂತ್ರ ಪ್ರವರ್ತಕರಾದ ದ್ರಾಹ್ಯಾಯಣಮುನಿಗಳ ಹೆಸರನ್ನೇ ಅವರು ಮನೆಗಿಟ್ಟಿದ್ದರು. ಮನೆ ಚಿಕ್ಕದಾಗಿದ್ದರೂ ಮನೆಯ ಮುಂದಿನ ಅಂಗಳ ವಿಶಾಲವಾಗಿತ್ತು. ತೆಂಗು, ಬಾಳೆ ಮೊದಲಾದ ಫಲವೃಕ್ಷಗಳಲ್ಲದೆ ನಿತ್ಯಾರ್ಚನೆಗೆ ಸಮೃದ್ಧವಾಗಿ ಒದಗಿಬರುವ ಹೂಗಿಡಗಳೂ ಅಲ್ಲಿ ನಳನಳಿಸಿದ್ದವು.+++(4)+++ ಪಾರ್ಥಸಾರಥಿ ಅವರ ಮದುವೆಯ ಬಳಿಕವೇ ಆ ಅಂಗಳ ಮನೆಯ ವಿಸ್ತರಣವಾಗಿ ಮರೆಯಾದದ್ದು. ಒಟ್ಟಿನಲ್ಲಿ ಶೇಷಣ್ಣನವರ ಮನೆ ಆ ಹೊತ್ತಿಗೂ ಬೆಂಗಳೂರಿನಲ್ಲಿ ವಿರಳವೆನಿಸಬಲ್ಲ ಸಾಂಪ್ರದಾಯಿಕಸ್ವರೂಪದ್ದು, ಮಡಿವಂತಿಕೆಯ ಕೋಲಾಹಲವಿಲ್ಲದೆ ತನ್ನ ಹಸುರು-ಹಸನುಗಳಿಂದಲೇ+++(=ಸೌನ್ದರ್ಯ)+++ ನೋಡುಗರ ಮನಸ್ಸನ್ನು ತಂಪುಗೊಳಿಸುವಂಥದ್ದು.

ಶೇಷಣ್ಣನವರ ಧರ್ಮಪತ್ನಿ ಶಾರದಮ್ಮನವರು ಅವರಿಗೆ ತಕ್ಕ ಕುಟುಂಬಿನಿ. ನಾಗಮಂಗಲದವರಾದ ಈಕೆಯ ಸಹೋದರ ವೇದಮೂರ್ತಿ ಶ್ರೀನಾರಾಯಣಶಾಸ್ತ್ರಿಗಳ ಪರಿಚಯವೂ ನನಗುಂಟು. ಅವರ ವೇದಶ್ರದ್ಧೆ, ಜನಜಾಗರಣ ಮತ್ತು ಆತ್ಮವಂತಿಕೆಗಳು ನಿಜವಾಗಿಯೂ ಸ್ತವನೀಯ. ಇವರ ಸುಪುತ್ರಿ ಶ್ರೀಮತಿ ಶಾಂತಾ ಗೋಪಾಲ್ ಅವರು ಇಂದಿಗೂ ನನ್ನ ಬಳಕೆಯಲ್ಲಿರುವ ವಿದ್ವತ್ಸಹೋದರಿ. ಶೇಷಣ್ಣನವರ ಧರ್ಮನಿಷ್ಠೆ ಎಂಥದ್ದೆಂದರೆ ಮದುವೆಯಾದ ಬಳಿಕ ಶಾರದಮ್ಮನವರಿಗೆ ಆಕೆ ಸಂಸಾರಕ್ಕೆ ಬರುವುದರೊಳಗೆ ಭಗವದ್ಗೀತೆಯನ್ನು ಸಮಗ್ರವಾಗಿ ಕಂಠಪಾಠ ಮಾಡಬೇಕೆಂದು ತಾಕೀತು ಮಾಡುವ ಮಟ್ಟದ್ದು!+++(5)+++ ಈ ಕಾಲದಲ್ಲಿ ಇಂಥವನ್ನೆಲ್ಲ ಊಹಿಸಲೂ ಸಾಧ್ಯವಿಲ್ಲ. ಪುಣ್ಯವಶಾತ್ ಶಾರದಮ್ಮನವರು ಪತಿಗೆ ತಕ್ಕ ಸತಿ. ಹೀಗಾಗಿ ಭಗವದ್ಗೀತೆ ಅವರ ಪಾಲಿಗೆ ಬರಿಯ ಕಂಠಪಾಠದ ಗಂಟೆಯಾಗದೆ ಜೀವನಧರ್ಮಕ್ಕೂ ಅಂಟಿ ಬಂದ ನಂಟನಾಯಿತು. ಮುಂದೆ ಅವರೂ ಗಂಡನ ಹಾಗೆ ರಾಷ್ಟçಭಾಷಾಪ್ರವೀಣರಾದರು. ಶೇಷಣ್ಣನವರ ಭಗವದ್ಗೀತಾಭಕ್ತಿಯೇ ಅವರ ಮಕ್ಕಳಿಗೆ ಗೀತಾ ಮತ್ತು ಪಾರ್ಥಸಾರಥಿ ಎಂದು ಹೆಸರಿಡುವಂತೆ ಮಾಡಿತು. ಹೀಗೆ ಅವರ ಬದುಕ್ಕೆಲ್ಲ ಭಗವದ್ಗೀತೆ; ಅದನ್ನು ನಡಸಿದವನು ಆ ಪಾರ್ಥಸಾರಥಿ.

* * *

ವಿದ್ಯಾರ್ಥಿದಶೆಯಲ್ಲಿ ಇದ್ದಾಗಲೇ ಶೇಷಣ್ಣನವರು ದಯಾನಂದಸರಸ್ವತಿಗಳ, ಸ್ವಾಮಿ ವಿವೇಕಾನಂದರ, ರಮಣಮಹರ್ಷಿಗಳ ಹಾಗೂ ಚಿನ್ಮಯಾನಂದರ ಬರೆವಣಿಗೆಗಳನ್ನು ಓದಿಕೊಂಡು ಪ್ರಭಾವಿತರಾದರು. ವಿಶೇಷತಃ ಚಿನ್ಮಯಾನಂದರ ವೇದಾಂತಗ್ರಂಥಗಳು ಅವರಿಗೆ ಅಚ್ಚುಮೆಚ್ಚಾಗಿದ್ದವು. ಇದರ ಜೊತೆಗೆ ಡಿವಿಜಿ, ಕುವೆಂಪು, ದೇವುಡು, ಮಾಸ್ತಿ, ತೀನಂಶ್ರೀ, ವಿಸೀ, ನರಸಿಂಹಸ್ವಾಮಿ ಮುಂತಾದ ಕನ್ನಡನವೋದಯದ ಮಹಾಶಿಖರಗಳನ್ನು ಹತ್ತಿ ಇಳಿದು ಹೊಸಹುರುಪನ್ನು ಗಳಿಸಿದ್ದರು. ಹಿಂದಿಯಲ್ಲಿಯೂ ಅವರು ಮೈಥಿಲಿ ಶರಣಗುಪ್ತ, ಜಯಶಂಕರ ಪ್ರಸಾದ್, ಸುಮಿತ್ರಾನಂದನ್ ಪಂತ್, ನಿರಾಲಾ ಮೊದಲಾದ ಖ್ಯಾತನಾಮರನ್ನು ಓದಿಕೊಂಡಿದ್ದರು. ಅವರಿಗೆ ವೇದ, ವೇದಾಂತ, ಕರ್ಮಕಾಂಡಗಳಲ್ಲಿ ಅದೆಷ್ಟು ಆಸಕ್ತಿಯೋ ಒಳ್ಳೆಯ ಸಾಹಿತ್ಯದಲ್ಲಿಯೂ ಅಷ್ಟೇ ಪ್ರೀತಿ-ಆದರಗಳಿದ್ದವು.+++(4)+++ ಇವರಂತೆ ಸಾಹಿತ್ಯರಸಿಕರಾದ ಮತ್ತೊಬ್ಬ ವೈದಿಕರನ್ನು ನಾನು ಕಂಡಿಲ್ಲ.

ಈ ಎಲ್ಲ ಸತ್ಪ್ರಭಾವಗಳೊಟ್ಟಿಗೆ ಅವರ ವ್ಯಕ್ತಿತ್ವದಲ್ಲಿಯೇ ಧಾರ್ಮಿಕಪ್ರಜ್ಞೆ ನೆಲೆನಿಂತ ಕಾರಣ ವೇದಾಧ್ಯಯನ ಅವರಿಗೆ ಅನಿವಾರ್ಯವಾಯಿತು. ಅವರ ಅಣ್ಣಂದಿರು ವಿದ್ವಲ್ಲೋಕದಲ್ಲಿ ವಿಶ್ರುತರಾದ ವೇದಬ್ರಹ್ಮಶ್ರೀ ನಾಗಪ್ಪಶ್ರೌತಿಗಳು, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತಮಹಾಪಾಠಶಾಲೆಯಲ್ಲಿ ಸಾಮವೇದ ಪ್ರಾಧ್ಯಾಪಕರು. ಮನೆಮಂದಿಯೆಲ್ಲ ಸಾಮವೇದವನ್ನು ಕಲಿತವರೇ. ಸಾಮಾನ್ಯವಾಗಿ ಎಷ್ಟೋ ಜನರು ಕಾಲೋಚಿತವಾದ ಮಂತ್ರಭಾಗಗಳನ್ನೂ ಅಲ್ಪಸ್ವಲ್ಪದ ಪ್ರಯೋಗಭಾಗವನ್ನೂ ಕಲಿತು ಅಲ್ಲಿಗೆ ತಮ್ಮ ವೇದಾಭ್ಯಾಸವನ್ನು ನಿಲ್ಲಿಸುತ್ತಾರೆ. ಆದರೆ ಶೇಷಣ್ಣನವರು ಹಾಗಲ್ಲ. ತಮ್ಮ ಅಣ್ಣಂದಿರ ಬಳಿ ಸಂಹಿತಾ-ಬ್ರಾಹ್ಮಣಗಳನ್ನೆಲ್ಲ ಸಭಾಷ್ಯವಾಗಿ ಅಧ್ಯಯನಮಾಡಿದರು. ಸಾಮವೇದಕ್ಕೆ ಉಳಿದೆಲ್ಲ ವೇದಗಳಿಗಿಂತ ಹೆಚ್ಚಾಗಿ ಬ್ರಾಹ್ಮಣಗಳ ಭಾರವಿದೆ (ಅಷ್ಟಬ್ರಾಹ್ಮಣಾತ್ಮಕವಾದ ಸಂಹಿತೆಯೆಂದೇ ಸಾಮವೇದದ ಪ್ರಸಿದ್ಧಿ). ಹೀಗಾಗಿ ಅವುಗಳ ಅರಿವು ಅನಿವಾರ್ಯ.

ಶೇಷಣ್ಣನವರು ಸಾಯಣಭಾಷ್ಯವನ್ನಲ್ಲದೆ ಇನ್ನುಳಿದ ವೇದಭಾಷ್ಯಗಳನ್ನೂ ತಾವಾಗಿ ಓದಿಕೊಂಡರು. ಗಾನವೇ ಜೀವಾಳವಾದ ಸಾಮವೇದಕ್ಕೆ ಶಿಕ್ಷಾ-ಪ್ರಾತಿಶಾಖ್ಯಗಳ ಪರಿಜ್ಞಾನ ಅತ್ಯವಶ್ಯ. ಹೀಗಾಗಿ ಅವನ್ನೂ ಚೆನ್ನಾಗಿ ಕಲಿತರು. ಹತ್ತಿರದಲ್ಲಿಯೇ ನವರಂಗ್ ಚಿತ್ರಮಂದಿರದ ಬಳಿಯಿದ್ದ ವೇದಮೂರ್ತಿ ಶ್ರೀ ಎಸ್. ವಿ. ಶ್ಯಾಮಭಟ್ಟರ ಬಳಿ ಋಕ್-ಯಜುರ್ವೇದಗಳ ಪರಿಚಯವನ್ನೂ ಸಕ್ರಮವಾಗಿ ಮಾಡಿಕೊಂಡದ್ದಲ್ಲದೆ ಶ್ರೀಶಂಕರಭಗವತ್ಪಾದರ ಪ್ರಸ್ಥಾನತ್ರಯಭಾಷ್ಯಗಳ ಪಾಠವನ್ನೂ ಹೇಳಿಸಿಕೊಂಡರು. ವಿದ್ವಾನ್ ಶ್ಯಾಮಭಟ್ಟರು ಮಹಾಪ್ರಸಿದ್ಧರಾದ ನವೀನಂ ವೇಂಕಟೇಶಶಾಸ್ತ್ರಿಗಳ ಬಳಿ ವೇದಾಂತವನ್ನು ಕಲಿತವರು. ವೇದ-ಪ್ರಯೋಗ-ವೇದಾಂತಾದಿಗಳನ್ನು ಕುರಿತು ಹತ್ತಾರು ಗ್ರಂಥಗಳನ್ನು ರಚಿಸಿದ್ದಲ್ಲದೆ ಅನೇಕರಿಗೆ ವೇದ-ಶಾಸ್ತ್ರಗಳನ್ನು ಕಲಿಸಿದವರು. ಸುರಸರಸ್ವತೀಸಭೆಯ ಸಂಸ್ಕೃತಪರೀಕ್ಷೆಗಳಿಗೆ ಒತ್ತಾಸೆಯಾಗಿ ದುಡಿದವರು ಕೂಡ.

ಉಳಿದಂತೆ ಶೇಷಣ್ಣನವರು ಸ್ವಯಮಾಚಾರ್ಯರಾಗಿ ರಾಮಾಯಣ-ಮಹಾಭಾರತಗಳನ್ನು, ವಿಷ್ಣು-ಸ್ಕಾಂದ -ಪಾದ್ಮ-ಭಾಗವತಗಳಂಥ ಪುರಾಣಗಳನ್ನು ಆದ್ಯಂತ ವ್ಯಾಸಂಗಮಾಡಿದರು. ಯಾವಾಗ ಅವರ ಮನಸ್ಸು ಪ್ರಯೋಗ ಮತ್ತು ಕರ್ಮಕಾಂಡಗಳ ಕಡೆ ತಿರುಗಿತೋ ಆಗಲೇ ಖಾದಿರ, ದ್ರಾಹ್ಯಾಯಣ, ಆಪಸ್ತಂಬ, ಆಶ್ವಲಾಯನ, ಬೋಧಾಯನ, ಗೌತಮ ಮುಂತಾದ ಮಹರ್ಷಿಗಳ ಧರ್ಮ-ಗೃಹ್ಯಸೂತ್ರಗಳನ್ನೂ ಮನ್ವಾದಿ ಸ್ಮೃತಿಗಳನ್ನೂ ಮತ್ತಿತರ ನಿಬಂಧಗ್ರಂಥಗಳನ್ನೂ ಓದಿಕೊಂಡರು. ಈ ಎಲ್ಲ ವ್ಯಾಸಂಗದ ಹಾದಿಯಲ್ಲಿ ಅವರಿಗೆ ಉತ್ತರಭಾರತದ ಅವೆಷ್ಟೋ ಹಿಂದೀಗ್ರಂಥಗಳು ನೆರವಿಗೆ ಬಂದವು. ತಮ್ಮದಾದ ಕೌಥುಮಶಾಖೆಯ ಸಾಮವೇದವು ತಮಿಳುನಾಡಿನಲ್ಲಿ ಹೆಚ್ಚಾಗಿ ವ್ಯಾಪ್ತವಾದ ಕಾರಣ ಅಲ್ಲಿಯ ವಿದ್ವಾಂಸರ ಗ್ರಂಥಗಳನ್ನು ಕಷ್ಟಪಟ್ಟು ತರಿಸಿಕೊಂಡು ಓದಿಕೊಂಡರು. ಇದಕ್ಕಾಗಿ ಅವರು ಗ್ರಂಥಲಿಪಿಯನ್ನೂ ಕಲಿತಂತೆ ನನ್ನ ನೆನಪು. ಆಧುನಿಕರಾದ ಆರ್ಯಸಮಾಜಿಗಳ ಅನೇಕಗ್ರಂಥಗಳನ್ನೂ ಅವರು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಪುಣೆಯ ವೈದಿಕಸಂಶೋಧನಮಂಡಲದ ಕೃತಿಗಳ ಅರಿವು ಕೂಡ ಅವರಿಗಿತ್ತು. ವೇದಾರ್ಥವನ್ನು ಗ್ರಹಿಸುವಲ್ಲಿ ಯಾವುದೇ ಮತೀಯವಾದ ಆಗ್ರಹಗಳಿಲ್ಲದೆ, ಎಲ್ಲ ಬಗೆಯ ಒಳ್ಳೆಯ ವಿವರಣೆಗಳೂ ಉಪಾದೇಯವೆಂಬ ವಿವೇಕದ, ಔದಾರ್ಯದ ನಿಲವು ಅವರದಾಗಿತ್ತು.+++(5)+++ ಹೀಗೆ ಒಬ್ಬ ಸಾಮಾನ್ಯವ್ಯಕ್ತಿಯಾಗಿ, ಯಾವುದೇ ಶಿಕ್ಷಣಸಂಸ್ಥೆಗಳ, ಸಂಶೋಧನಕೇಂದ್ರಗಳ, ಮಠ-ಪಾಠಶಾಲೆಗಳ ನೆರವಿಲ್ಲದಿದ್ದರೂ ಸ್ವಪ್ರಯತ್ನದಿಂದಲೇ ವೇದವಿದ್ಯೆಯಲ್ಲಿ ನಿಷ್ಣಾತರಾಗಿದ್ದರು.

[[ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ–ಸಾಮವೇದಸೇವೆ Source: prekshaa]]

ನಾನು ಊಹಿಸುವಂತೆ ಅವರ ಮನಃಸಿದ್ಧತೆ ಬಹುಕಾಲದ ಮುನ್ನವೇ ಆಗಿತ್ತಾದರೂ ವ್ಯಾಸಂಗಸಿದ್ಧತೆಗೆ ಹೆಚ್ಚಿನ ಅನುಕೂಲ ಬಂದದ್ದು ನಿವೃತ್ತಿಯ ಬಳಿಕ. ದಿಟವೇ, ಅವರು ನಿವೃತ್ತರಾದಾಗ ಮಗಳ ಮದುವೆಯ ಬಾಧ್ಯತೆ ಉಳಿದಿತ್ತು, ಮಗನ ವಿದ್ಯಾಭ್ಯಾಸ ಪೂರ್ಣವಾಗಬೇಕಿತ್ತು. ಇದಕ್ಕಾಗಿಯೇ ಶೇಷಣ್ಣನವರು ನಿವೃತ್ತಿಯ ಬಳಿಕವೂ ಕೆಲವು ಕಾಲ ದುಡಿಯಬೇಕಾಗಿ ಬಂತು. ಈ ಎಲ್ಲ ಬಾಧ್ಯತೆಗಳು ತೀರಿದ ಬಳಿಕ ಹೆಂಡತಿ-ಮಕ್ಕಳನ್ನು ಕೂಡಿಸಿಕೊಂಡು ಕೇಳಿದರಂತೆ:

“ನಾನು ತಿಳಿದ ಮಟ್ಟಿಗೆ ಮನೆಯ ಬಾಧ್ಯತೆಯನ್ನು ನೆರವೇರಿಸಿದ್ದೇನೆ. ಕೈಗೆ ಬರುವ ನಿವೃತ್ತಿವೇತನ ಮನೆವಾರ್ತೆಗೆ ಸಾಕು. ಪಾರ್ಥನೂ ಅವನ ಕಾಲಿನ ಮೇಲೆ ನಿಂತಿದ್ದಾನೆ. ನಿಮಗೆಲ್ಲರಿಗೂ ಒಪ್ಪಿಗೆಯಿದ್ದರೆ ನಾನು ಇನ್ನುಮೇಲಾದರೂ ನನ್ನಿಷ್ಟದ ಕೆಲಸಗಳಿಗೆ ಬದುಕನ್ನು ಮೀಸಲಿಡುತ್ತೇನೆ. ಇದರಿಂದ ನಿಮಗಾರಿಗೂ ತೊಂದರೆ ಇಲ್ಲ ತಾನೆ? ಅಥವಾ ಮನೆಯನ್ನು ನಡಸಲು ನನ್ನ ದುಡಿಮೆ ಇನ್ನೂ ಬೇಕಾಗಿದ್ದಲ್ಲಿ ನಿಸ್ಸಂಕೋಚವಾಗಿ ತಿಳಿಸಿ”

ಎಂದು.

ಇದನ್ನು ಕೇಳಿದೊಡನೆ, “ನೀವು ಈವರೆಗೆ ದುಡಿದದ್ದೇ ಸಾಕು, ಇನ್ನುಮುಂದೆ ನಿಮ್ಮ ಇಷ್ಟದ ಹಾದಿಯಲ್ಲಿ ನೀವು ನಿರಾತಂಕವಾಗಿ ಸಾಗಿ” ಎಂದು ಮನೆಯವರೆಲ್ಲ ಏಕಕಂಠದಿಂದ ಒತ್ತಾಸೆ ನೀಡಿದರಂತೆ. ಈ ಕೆಲವು ವಿವರಗಳನ್ನು ನನಗೆ ಶೇಷಣ್ಣನವರೇ ತಿಳಿಸಿದ್ದರು.+++(5)+++

ಅಲ್ಲವೇ ಮತ್ತೆ, “ಸರ್ವೇಷಾಮ್ ಅವಿರೋಧೇನ ಬ್ರಹ್ಮಕರ್ಮ.”+++(कुतः?)+++ ಬ್ರಹ್ಮಕ್ಕೆ ಸಂಬಂಧಿಸಿದ ಕೆಲಸವನ್ನು ವ್ಯಕ್ತಿ, ಕುಟುಂಬ, ಸಮಾಜಗಳ ಸಹಮತದಿಂದ ಸಾಮರಸ್ಯದೊಡನೆ ಸಾಗಿಸಬೇಕು; ಇಲ್ಲಿ ವಿರೋಧ-ಅತಿವಾದಗಳು ಸಲ್ಲವು. ಹೀಗೆ ಅವರ ವ್ಯಾಸಂಗವ್ರತ ಏಕದೀಕ್ಷೆಯಿಂದ ಸಾಗಿತು. ನಾನು ಶೇಷಣ್ಣನವರನ್ನು ಕಂಡದ್ದು ಇಂಥ ಪರಿಪಾಕದ ಹಂತದಲ್ಲಿ.

* * *

‘ಸಂಧ್ಯಾದರ್ಶನ’ದ ರಚನೆಯ ಬಳಿಕ ನಾನು ಶೇಷಣ್ಣಶ್ರೌತಿಗಳ ಬಳಿ ಕೆಲವು ಕಾಲ ಸಾಮವೇದಪಾಠಕ್ಕಾಗಿ ಹೋಗುತ್ತಿದ್ದೆ. ಪ್ರತಿದಿನ ಮುಂಜಾನೆ ಸುಮಾರು ಹತ್ತು ಘಂಟೆಯ ಹೊತ್ತಿಗೆ ಅವರ ಮನೆಗೆ ನಡೆದುಕೊಂಡೇ ಹೋಗಿ ಅರ್ಧ-ಮುಕ್ಕಾಲು ಘಂಟೆಗಳ ಕಾಲ ಪಾಠ ಹೇಳಿಸಿಕೊಂಡು ಮರಳುತ್ತಿದ್ದೆ. ಅವರು ನನಗಾಗಿ ತುಂಬ ಉದಾರತೆಯಿಂದ ಪಾಠ ಹೇಳಿದರು. ವಿಶೇಷವಿಷ್ಟೆ: ನಾನು ಮೊದಲೇ ಅವರಿಗೆ ನಿವೇದಿಸಿಕೊಂಡಿದ್ದೆ,

“ನನ್ನ ಸಾಮವೇದಾಸಕ್ತಿ ಇಡಿಯ ವೇದವನ್ನು ಕಲಿಯುವಷ್ಟು ದೃಢವಲ್ಲ, ಅಷ್ಟು ತಾಳ್ಮೆಯದೂ ಅಲ್ಲ. ಕೇವಲ ಕೆಲವೊಂದು ಕಾಲೋಚಿತಸಾಮಗಳ ಕಲಿಕೆ ಹಾಗೂ ಸಾಮಗಾನದ ಸಾಮಾನ್ಯಕ್ರಮವೇನುಂಟು, ಅದರ ಸ್ವಾರಸ್ಯಗಳನ್ನು ಚಿಕಿತ್ಸಕವಾದ—ಆದರೆ ವೇದಭಾವಕ್ಕೆ ಧಕ್ಕೆಯಾಗದ—ರೀತಿಯಲ್ಲಿ ತಿಳಿಯುವ ಮಾತ್ರದ್ದು. ಮುಖ್ಯವಾಗಿ ಸಾಮವೇದಕ್ಕೂ ಸಂಗೀತಕ್ಕೂ ಇರುವ ಸಂಬಂಧ ಎಂಥದ್ದೆಂಬುದನ್ನು ತಿಳಿಯಲು ಸಾಧ್ಯವಾಗುವ ಮಟ್ಟಿಗೆ ಸಾಮಗಾನದ ವೈವಿಧ್ಯಗಳನ್ನು ಕಲಿಯುವ ಆಶೆ ನನ್ನದು”

ಎಂದು.

ಹೀಗಿದ್ದರೂ ಅವರು ಬೇಸರಪಡದೆ ನನ್ನ ಕುತೂಹಲ ತಣಿಯುವಂತೆ, ಪ್ರಶ್ನೆಗಳಿಗೆ ಸಮಾಧಾನವಾಗುವಂತೆ ಪಾಠ ಹೇಳಿದರು. ಅಷ್ಟೇ ಅಲ್ಲ, ನನ್ನ ಮೂಲಕ ಅವರಿಗೂ ಸಾಮ ಮತ್ತು ಸಂಗೀತಗಳ ಹುಚ್ಚು ಹತ್ತಿತು! ಈ ನಿಟ್ಟಿನಲ್ಲಿ ಅವರ ಅಣ್ಣನ ಮಗ ಕಡಬ ಸುಬ್ರಹ್ಮಣ್ಯ ಅವರನ್ನೂ ಮತ್ತೊಬ್ಬ ಬಂಧುಗಳಾದ ವಿದುಷಿ ನಳಿನಾ ಮೋಹನ್ ಅವರನ್ನೂ ಸಾಕಷ್ಟು ಅಭ್ಯರ್ಥಿಸಿದ್ದರು ಕೂಡ. ಇವರಿಬ್ಬರೂ ಸಂಗೀತವನ್ನು ಬಲ್ಲವರು. ಸುಬ್ರಹ್ಮಣ್ಯ ಅವರು ಸಾಮವೇದವನ್ನು ಕಲಿತವರಲ್ಲದೆ ಗಮಕವನ್ನೂ ಬಲ್ಲವರು. ನಳಿನಾ ಮೋಹನ್ ಅವರಾದರೋ ಸಾಮವೇದಿಗಳ ಕುಟುಂಬಕ್ಕೆ ಸೇರಿದವರು; ವಿಖ್ಯಾತ ವಯೋಲಿನ್ ವಾದಕಿ. ಆದರೂ ಅಂದುಕೊಂಡಂತೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಶೇಷಣ್ಣನವರೇನೋ ಪುಣೆ, ಚೆನ್ನೈ ಮುಂತಾದ ವಿಶ್ವವಿದ್ಯಾಲಯಗಳಿಂದ ಈ ದಿಕ್ಕಿನಲ್ಲಿ ಹೊರಬಂದ ಸಂಶೋಧನಲೇಖನಗಳನ್ನೂ ಪ್ರಬಂಧಗಳನ್ನೂ ಆಸ್ಥೆಯಿಂದ ಸಂಗ್ರಹಿಸಿಟ್ಟರು. ಏನು ಮಾಡುವುದು, ಎಲ್ಲರ ಅನ್ಯಾನ್ಯವ್ಯಾಪೃತಿಗಳ ಕಾರಣ ಪರಿಶ್ರಮವು ಒಂದೆಡೆ ಕೇಂದ್ರೀಕೃತವಾಗಲಿಲ್ಲ.

ಈ ವಿಷಯ ಹಾಗಿರಲಿ. ಶೇಷಣ್ಣನವರ ಪಾಠಕ್ರಮಕ್ಕೇ ಮತ್ತೆ ಮರಳುವುದಾದರೆ, ಅವರು ಪಾಠಕ್ಕೆ ಬಂದ ಪ್ರತಿಯೊಬ್ಬರನ್ನೂ “ಸಂಧ್ಯಾವಂದನೆ ಮಾಡಿಕೊಂಡು ಬಂದಿರಾ?” “ಬ್ರಹ್ಮಯಜ್ಞವಾಯಿತೇ?” ಎಂದು ಪ್ರಶ್ನಿಸಿಯೇ ಮುಂದುವರಿಯುತ್ತಿದ್ದರು. ಗೃಹಸ್ಥರಿಗೆ “ದೇವತಾರ್ಚನೆ ಇಟ್ಟುಕೊಂಡಿದ್ದೀರಾ?” ಎಂಬ ವಿಶೇಷಪ್ರಶ್ನೆಯಾದರೆ, ಬ್ರಹ್ಮಚಾರಿಗಳಿಗೆ “ಸಮಿದಾಧಾನವನ್ನೋ ಕನಿಷ್ಠಪಕ್ಷ ಆ ಮಂತ್ರಗಳ ಪಾರಾಯಣ ವನ್ನೋ ಮಾಡುತ್ತಿದ್ದೀರಾ?” ಎಂಬ ವಿಚಾರಣೆ ಸಲ್ಲುತ್ತಿತ್ತು.+++(5)+++ ವಿದ್ಯಾರ್ಥಿಗಳು ಅವರವರ ಮತಲಾಂಛನ ಗಳನ್ನು ಧರಿಸಿ ಬರಬೇಕಿತ್ತು. ಆದರೆ ಶೇಷಣ್ಣನವರಿಗೆ ಇವಾವುದರಲ್ಲಿಯೂ ಆಗ್ರಹವಿರಲಿಲ್ಲ. ಅವರಾದರೂ ಅಷ್ಟೆ, ಮೊಹರಮ್ಮಿನ ಹುಲಿವೇಷದಂಥ ಆಡಂಬರದ ಭಸ್ಮಧಾರಣವನ್ನು ಒಪ್ಪುತ್ತಿರಲಿಲ್ಲ. ಅದೇನಿದ್ದರೂ ಅವರ ಸರಳವಾದ ಖಾದಿಯ ಬಟ್ಟೆಯಷ್ಟೇ ನಮ್ರ, ಅಂತರಂಗನಿಷ್ಠ. ವಿದ್ಯಾರ್ಥಿಗಳು ಪ್ರತಿಯೊಂದು ಪಾಠವನ್ನೂ ಆವರ್ತಿಸಿಕೊಂಡು ಬರಬೇಕಿತ್ತು. ಆದರೆ ನನಗೆಂದೂ ಬಾಯಿಪಾಠದ ಕಟ್ಟಲೆ ಮಾಡಿರಲಿಲ್ಲ. ಇದು ಅವರ ದೊಡ್ಡತನ. ಶಿಷ್ಯರು ಪಾಠಕ್ಕೆ ಬರುವ ಮುನ್ನವೇ ತಮಗೂ ಅವರಿಗೂ ಚಾಪೆ ಹಾಸಿ, ಕುಡಿಯುವ ನೀರಿಟ್ಟು ವ್ಯವಸ್ಥೆ ಮಾಡಿರುತ್ತಿದ್ದರು. ಯಾವುದೇ ಕಾರಣಕ್ಕಾಗಲಿ ಪಾಠಕ್ಕಾಗಿ ಬಂದ ಶಿಷ್ಯರು ಕಾಯಬಾರದೆಂಬುದು ಅವರ ವ್ರತವಾಗಿತ್ತು. ಅಕಸ್ಮಾತ್ ಕೈಮೀರಿ ಹೀಗಾದಲ್ಲಿ ಅವರ ಪೇಚಾಟ ಹೇಳತೀರದು.

ವೇದಾಭ್ಯಾಸಕ್ಕೆಂದು ಬಂದ ಯಾರನ್ನೂ ಅವರು ನಿರಾಕರಿಸಿದಂತಿಲ್ಲ. ಎಷ್ಟೋ ಜನರಿಗೆ ಇಳಿವಯಸ್ಸಿನಲ್ಲಿ ವೇದಾಭ್ಯಾಸದ ಆಶೆ ಕೆರಳುತ್ತದೆ. ಅಂಥವರಿಗೆ ಸ್ವರ ನಿಲ್ಲುವುದು ಹೋಗಲಿ, ಉಚ್ಚಾರಣೆ ಕೂಡ ಕಷ್ಟವಾಗಿರುತ್ತದೆ. ಇಂಥವರನ್ನೂ ಶೇಷಣ್ಣನವರು ತುಂಬ ಸಹಾನುಭೂತಿಯಿಂದ ಕಾಣುತ್ತಿದ್ದರು.

“ಈಗಲಾದರೂ ಅವರಿಗೆ ವೇದಾಸಕ್ತಿ ಬಂದಿತಲ್ಲಾ, ಅದು ದೊಡ್ಡದು. ಏನೋ ಪಾಪ ನಾಲ್ಕು ವೇದಾಕ್ಷರ ಕಲಿತರೆ ಅವರಿಗೊಂದು ಸಮಾಧಾನ ಸಿಗುತ್ತದೆ. ನಾವೇಕೆ ಅವರಿಗೆ ಆ ನೆಮ್ಮದಿಯನ್ನು ಕೊಡಬಾರದು?” +++(4)+++

ಎಂಬುದು ಅವರ ನಿಲವು. ವೇದಪಾಠದಲ್ಲಿ ಸ್ತ್ರೀ-ಪುರುಷಭೇದವನ್ನವರು ಇಟ್ಟುಕೊಂಡಿರಲಿಲ್ಲ; ಉಪನೀತ-ಅನುಪನೀತ ಎಂಬ ಆಗ್ರಹವೂ ಅವರಿಗೆ ಇದ್ದಂತೆ ತೋರದು. ತಮ್ಮ ಸೊಸೆಯೂ ಸೇರಿದಂತೆ ಹಲವರು ಹೆಣ್ಣುಮಕ್ಕಳಿಗೆ ಸಾಮವೇದವನ್ನು ಕಲಿಸಿದ್ದರು.+++(5)+++

प्रामाण्य-विचारः

श्रीवत्सस्य भ्रमः -

For the project of comparing saama with sangita some sangita viduShis of his family were roped in. They had to be taught for that project. To these women he taught a few gaanas only.

(He taught no other anupanIta.) None among the students know of any regular woman / girl student. In fact when I didn’t know these subtleties i had asked for a female school friend. At that time Acharya had clearly refused. When I persisted another time he told me “please don’t raise this again, it will cause me mujugara”.

किञ्च नैतद् एवम् इति गणेशो ऽवधानी।

my uncle didn’t have any reservation in teaching vedas to ladies.
In he insisted me also to learn samaveda and taught few days also.
But learning sama is not as easy as learning rigveda..I felt this and could not continue.
Ladies those who are eligible and came forward - he never said no. Except his close circle relatives.. came to.

ಸ್ತ್ರೀಯರಿಗೆ ಉಪನಯನ….. ಇಂಥಾ ಹುಂಬತನದ ಕೆಲಸಗಳನ್ನು ಮಾಡುತ್ತಿರಲಿಲ್ಲ… Eligibility means… pronounciation, interest, little knowledge of Sanskrit language…ವೇದ ಕಿವಿಯಿಂದಾದರೂ ಕೇಳಿ ಗೊತ್ತಿರೋದು… ಹೀಗೆ…

इति शान्ता।

ಆದರೆ ಪಾಠಪರಿಷ್ಕಾರದಲ್ಲಿ ಯಾವುದೇ ವಿನಾಯಿತಿ ಇರಲಿಲ್ಲ. ಎಲ್ಲ ಶಿಸ್ತಿನಂತೆಯೇ ಸಾಗಬೇಕು. ಶೇಷಣ್ಣನವರದೇನಿದ್ದರೂ ಅಬ್ಬರವಿಲ್ಲದ ಕ್ರಾಂತಿ. ಹೀಗಾಗಿಯೇ ಇಂದು ಅವರ ಬಂಧುವರ್ಗದಲ್ಲಿ, ಪರಿಚಿತರಲ್ಲಿ ಅನೇಕರು ಸಾಮಗರಾಗಿದ್ದಾರೆ. ಅದೆಷ್ಟೋ ಮಂದಿ ಅನ್ಯಶಾಖೆಗಳವರು ಕೂಡ ಇವರ ವ್ಯಕ್ತಿಮಾಹಾತ್ಮ್ಯದ ಕಾರಣ ಸ್ವಲ್ಪವಾದರೂ ಸಾಮವೇದವನ್ನು ಅಧ್ಯಯನ ಮಾಡಿದ್ದಾರೆ.

ಶೇಷಣ್ಣನವರು ಸುಮಾರು ಹನ್ನೆರಡು ವಿದ್ಯಾರ್ಥಿಗಳಿಗೆ ಋಕ್-ಪದ-ಗಾನ-ಭಾಷ್ಯಗಳ ಸಮೇತ ಸಂಪೂರ್ಣಸಂಹಿತೆಯ ಪಾಠ ಹೇಳಿದ್ದಾರೆ. ಮೂವತ್ತಾರು ಮಂದಿಗೆ ಸಂಕ್ಷಿಪ್ತವಾದ ಅಧ್ಯಯನ ಮಾಡಿಸಿದ್ದಾರೆ. ಆದರೆ ವೇದಾರ್ಥವನ್ನು ತಿಳಿಸದೆ, ಸದಾಚಾರವನ್ನು ಬೋಧಿಸದೆ ಯಾರಿಗೂ ಪಾಠ ಹೇಳಿದವರಲ್ಲ.+++(4)+++ ಇದು ಅವರ ವೇದಾಧ್ಯಾಪನದ ವೈಶಿಷ್ಟ್ಯವೂ ಹೌದು.

* * *

ಹೀಗೆ ಆರಂಭವಾದ ಸಾಮವೇದಪ್ರಸಾರಯಾಗ ಮುಂದೆ ಗ್ರಂಥರಚನೆಯ ಮೂಲಕವೂ ಬೆಳೆಯಿತು. ಇದಕ್ಕಾಗಿ ತಮ್ಮ ಮನೆಯಲ್ಲಿಯೇ ‘ದ್ರಾಹ್ಯಾಯಣಪ್ರತಿಷ್ಠಾನ’ ಎಂಬ ಸಂಸ್ಥೆಯನ್ನೂ ಕಟ್ಟಿಕೊಂಡರು.+++(4)+++ ಈ ವಿಷಯದಲ್ಲಿ ಅವರಿಗೆ ನೆರವಾದ ಸರ್ವಶ್ರೀ ಗೌರೀಪತಿ, ವೆಂಕಟರಾಮ ಪುರಾಣಿಕ, ನರಸಿಂಹಸ್ವಾಮಿ, ರಾಮಸ್ವಾಮಿ, ನಾರಾಯಣಶಾಸ್ತ್ರಿ ಮುಂತಾದ ಹಲವರು ಸ್ಮರಣೀಯರು. ರಾಮಸ್ವಾಮಿಯವರು ಇವರಿಗೆ ಸ್ವತಃ ಅಣ್ಣನ ಮಗ. ಪ್ರಯೋಗವೂ ಸೇರಿದಂತೆ ಎಲ್ಲವನ್ನೂ ಬಲ್ಲವರು. ನಾರಾಯಣಶಾಸ್ತ್ರಿಗಳು ಇವರ ಭಾವಮೈದುನ. ಅವರು ಸ್ವತಃ ಸಾಮವೇದಿಗಳಲ್ಲವಾದರೂ ಪೂರ್ವಾಪರಕರ್ಮಗಳಲ್ಲಿ ನುರಿತು ಅಸಂಖ್ಯ ಜನರಿಗೆ ವೇದಪಾಠ ಮಾಡಿದವರು. ಗೌರೀಪತಿಗಳ ಗಾನಕ್ರಮದ ಗಟ್ಟಿತನವನ್ನು ಶೇಷಣ್ಣನವರು ಮೆಚ್ಚಿಕೊಂಡಿದ್ದರು.

ಅವರು ತಮ್ಮ ಸಮವಯಸ್ಕರನ್ನೂ ನಿಕಟಸಮವಯಸ್ಕರನ್ನೂ ಅವರವರ ಗುಣವಿಶೇಷಗಳಿಗಾಗಿ ಮೆಚ್ಚಿಕೊಂಡದ್ದಲ್ಲದೆ ತಮಗಿಂತ ಎಷ್ಟೋ ವರ್ಷ ಕಿರಿಯರಾದ ವಿದ್ಯಾರ್ಥಿಗಳನ್ನೂ ಆದರಿಸಿದ್ದರು. ನನಗೆ ತತ್ಕ್ಷಣ ನೆನಪಾಗುವುದು ಬಿ. ಶ್ರೀವತ್ಸ ಮತ್ತು ಕೇದಾರನಾಥ ಪಾಂಡೇಯ. ಏಕೆಂದರೆ, ಇವರಿಬ್ಬರು ನನ್ನ ಬಳಕೆಯಲ್ಲಿಯೂ ಇರುವವರು. ಶ್ರೀವತ್ಸನ ಶ್ರದ್ಧೆ, ಬುದ್ಧಿನೈಶಿತ್ಯಗಳನ್ನು ಮತ್ತೆ ಮತ್ತೆ ಹೊಗಳುತ್ತಿದ್ದುದಲ್ಲದೆ ಅವನು ಶೀಘ್ರವಾಗಿ ಎಲ್ಲವನ್ನೂ ಕಲಿತ ಕೌಶಲವನ್ನು ಅಭಿನಂದಿಸಿದ್ದರು.+++(5)+++ ಕೇದಾರನಾಥನ ಸೌಮ್ಯತೆ, ಆರ್ಜವ ಮತ್ತು ವಿನಯೋನ್ನತಿಗಳನ್ನು ಗಾಢವಾಗಿ ಮನಸ್ಸಿಗೆ ತಂದುಕೊಂಡಿದ್ದರು. ಇಷ್ಟು ಮಾತ್ರವಲ್ಲ, ಯಾವ ಶಿಷ್ಯನನ್ನೂ ಅವರು ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ತೀರಾ ಬಳಕೆಯಾಗಿದ್ದ ಬಂಧು ವರ್ಗದ ಬಾಲಕರನ್ನು, ಒಬ್ಬಿಬ್ಬರು ಚಿಕ್ಕವಯಸ್ಸಿನ ಪ್ರಿಯಶಿಷ್ಯರನ್ನು ಬಿಟ್ಟರೆ ನನ್ನನ್ನೂ ಸೇರಿದಂತೆ ಯಾರನ್ನೂ ಏಕವಚನದಲ್ಲಿ ಸಂಬೋಧಿಸುತ್ತಿರಲಿಲ್ಲ. ಹಾಗೆಂದು ಸಲುಗೆ-ಸ್ನೇಹಗಳಿಗೆ ಯಾವುದೇ ಕೊರತೆ ಇರಲಿಲ್ಲ.

ಈ ಸಂದರ್ಭದಲ್ಲಿ ನನಗೆ ಮತ್ತೊಬ್ಬ ಗೆಳೆಯ ಅಮರನಾರಾಯಣನ ನೆನಪಾಗುತ್ತದೆ. ವಸ್ತುತಃ ‘ಸಂಧ್ಯಾದರ್ಶನ’ದ ರಚನಾವಧಿಯಲ್ಲಿ ಇವನೂ ಕ್ಯಾಲನೂರು ರವೀಂದ್ರನೂ ನನ್ನೊಡನೆ ವಿದ್ವಾಂಸರ ಸಂಘಟನೆಗಾಗಿ ಹೆಚ್ಚು ದುಡಿದವರು. ಅಮರನಾರಾಯಣನಿಂದಲೇ ಶೇಷಣ್ಣನವರ ಹೆಚ್ಚಿನ ಪರಿಚಯವೂ ನನಗೆ ದೊರಕಿತು. ನನಗಿಂತ ಸಾಕಷ್ಟು ಚಿಕ್ಕವನಾದ ಅಮರ ಶೇಷಣ್ಣನವರಲ್ಲಿ ತುಂಬ ಸಲುಗೆಯಿಂದ ವಿನೋದ ಮಾಡುತ್ತಿದ್ದ. ಇದು ನನಗೆ ಅವರ ಹೃದಯವೈಶಾಲ್ಯವನ್ನು ಸ್ಪಷ್ಟಪಡಿಸಿತ್ತಲ್ಲದೆ ಹೆಚ್ಚಿನ ಬಳಕೆಗೆ ಒದಗಿಬಂತು. ಅಮರನ ವೇದಶ್ರದ್ಧೆ, ಸಂಪ್ರದಾಯಪ್ರೀತಿ ಮತ್ತು ವ್ರತನಿಷ್ಠೆಗಳನ್ನು ಮನಸಾರೆ ಮೆಚ್ಚಿದ ಕಾರಣ ಶೇಷಣ್ಣನವರಿಗೆ ಆತನ ಅಕ್ಕರೆಯ ಜಬರದಸ್ತು ಕೂಡ ಇಷ್ಟವಾಗಿದ್ದುದರಲ್ಲಿ ಅಚ್ಚರಿಯಿಲ್ಲ.

‘ಸಾಮವೇದ ಪರಿಚಯ’ ಎಂಬ ಕೃತಿ ಪ್ರತಿಷ್ಠಾನದ ಮೊದಲ ಪ್ರಕಾಶನವಾಗಿ ಹೊರಬಂದಿತು. ಹೆಸರಿಗೆ ಇದು ಸಂಸ್ಥೆಯ ಸದಸ್ಯರ ಸಮಷ್ಟಿಫಲವಾದರೂ ಇದಕ್ಕೆ ಬೇಕಾದ ಸಮಸ್ತವನ್ನೂ ಶೇಷಣ್ಣನವರೊಬ್ಬರೇ ಮಾಡಿದ್ದರು. ಆದರೆ ಎಲ್ಲಿಯೂ ತಮ್ಮ ಹೆಸರನ್ನು ಪ್ರಚುರಪಡಿಸಲಿಲ್ಲ. ಇದು ಪ್ರಾಯಶಃ ಪ್ರತಿಷ್ಠಾನದ ಎಲ್ಲ ಪ್ರಕಟನೆಗಳ ವಿಷಯದಲ್ಲಿಯೂ ಸಲ್ಲುವ ಮಾತು. ಇದನ್ನು ಕುರಿತು ನಾನು ಆಗೀಗ ಪ್ರಸ್ತಾವಿಸಿದಾಗ ಅವರು ಹಸನ್ಮುಖದಿಂದ ಹೇಳುತ್ತಿದ್ದುದು ಹೀಗೆ:

“ಹತ್ತಾರು ಮಂದಿ ಸೇರಿ ಮಾಡಿದ ಸಂಸ್ಥೆಯ ಮೂಲಕ ಕೃತಿಯೊಂದು ಹೊರಬಂದಾಗ ಅದರಲ್ಲಿ ನನ್ನಂಥ ಯಾವೊಬ್ಬನ ಹೆಸರೂ ಮುಂದಾಗಬಾರದು. ಹೇಗೂ ಸಮಿತಿಯವರ ಹೆಸರುಗಳು ಒಳಗಿದ್ದೇ ಇರುತ್ತವೆ. ಇನ್ನು ನನ್ನದೇಕೆ? ಮುಖ್ಯವಾಗಿ ಒಳ್ಳೆಯ ವಿಷಯ ಜನಕ್ಕೆ ತಿಳಿಯಬೇಕು, ಸಾಮವೇದದ ಪ್ರಸಾರವಾಗಬೇಕು.”

ಇತ್ತೀಚೆಗೆ, ಅಂದರೆ ಶೇಷಣ್ಣಶ್ರೌತಿಗಳು ತೀರಿಕೊಳ್ಳುವ ಮುನ್ನ, ಅವರ ಬಂಧು-ಮಿತ್ರರಲ್ಲಿ ಒಬ್ಬಿಬ್ಬರು ಕೆಲವೊಂದು ಪ್ರಕಟನೆಗಳಿಗಾದರೂ ಅವರ ಹೆಸರನ್ನು ಛಾಪಿಸುವುದು ಉಚಿತವೆಂದಾಗ ಶ್ರೌತಿಗಳು ಖಂಡತುಂಡವಾಗಿ ಪ್ರತಿಭಟಿಸಿದ್ದರಂತೆ:

“ಎಲ್ಲಾದರೂ ಉಂಟೇ! ಇದೆಲ್ಲ ತುಂಬ ತಪ್ಪು. ನಮ್ಮ ಋಷಿಗಳು, ಶಾಸ್ತ್ರಪ್ರವರ್ತಕರು ಹೀಗೆಲ್ಲ ತಮ್ಮ ತಮ್ಮ ಗ್ರಂಥಗಳ ಮೇಲೆ ಹೆಸರುಗಳನ್ನು ಛಾಪಿಸಿಕೊಂಡವರೇ? ಇದಾವುದೂ ಬೇಡ, ಇಂಥದ್ದೆಲ್ಲ ಅವೈದಿಕ.”

ಈ ಬಗೆಯ ಪ್ರತಿಷ್ಠಾವಿಮುಖತೆ ಅದೆಷ್ಟರ ಮಟ್ಟಿಗಿತ್ತೆಂದರೆ, ಇವರ ವೇದವ್ಯಾಸಂಗ ಮತ್ತು ಸೇವೆಗಳನ್ನು ಮೆಚ್ಚಿದ ಹಲವು ಮಠಗಳೂ ಸಂಸ್ಥೆಗಳೂ ಸಮ್ಮಾನಿಸಲು ಮುಂದೆಬಂದಾಗ ತಾನು ಅದಕ್ಕೆ ಅರ್ಹನಲ್ಲವೆಂದು ದೂರ ಸರಿದಿದ್ದರು. ತುಂಬ ಒತ್ತಾಯದ ಮೇರೆಗೆ ಸ್ವರ್ಣವಲ್ಲೀಮಠದ ಸಮ್ಮಾನವನ್ನೂ ಭಾರತೀಯವಿದ್ಯಾಭವನದ ಗೌರವವನ್ನೂ ಒಪ್ಪಿಕೊಂಡಿದ್ದರು. ಇದರಲ್ಲಿ ನನ್ನ ಆಗ್ರಹವೇ ಫಲಕಾರಿ ಆದದ್ದು ನನಗೆ ಸಂತಸದ ಸಂಗತಿ.

* * *

ಪ್ರತಿಷ್ಠಾನದ ಕೆಲಸ ಆರಂಭವಾದ ಬಳಿಕ ಶೇಷಣ್ಣನವರು ಹೊರಗಿನ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳಲಿಲ್ಲ. ಹಗಲು-ರಾತ್ರಿ ಇದರದೇ ಕೆಲಸ, ಇದರದೇ ಧ್ಯಾನ. ಅವರೊಂದು ರೀತಿಯಲ್ಲಿ ಏಕವ್ಯಕ್ತಿ ಸಂಸ್ಥೆ ಎನ್ನಬೇಕು. ಸಂಶೋಧನೆ, ಆಲೋಚನೆ, ಬರೆಹ—ಇವೆಲ್ಲವನ್ನೂ ಏಕಾಂಗಿಯಾಗಿ ಮಾಡಿದರು. ಹಲಕೆಲವರ ಅಷ್ಟೋ ಇಷ್ಟೋ ನೆರವಿತ್ತು, ಆದರೆ ಅದೆಲ್ಲ ಗೌಣ. ಜೊತೆಗೆ, ಪ್ರತಿಷ್ಠಾನದ ಹಣಕಾಸಿನ ಬೆಂಬಲಕ್ಕೆ ಹೆಚ್ಚಾಗಿ ಅವರ ಮನೆಯವರೂ ಬಂಧುಗಳೂ ಒತ್ತಾಸೆಯಾಗಿ ನಿಂತರಲ್ಲದೆ ಸಾರ್ವಜನಿಕರ ನೆರವು ಸಿಕ್ಕಲಿಲ್ಲವೆಂಬಷ್ಟು ಕಡಮೆ.

ಅದೊಮ್ಮೆ ಬೆಂಗಳೂರಿನ ಆರ್ಯಸಮಾಜದವರು ತಮ್ಮ ವೇದಾನುವಾದದ ಪ್ರಕಟನೆಗಳೊಳಗೆ ಶೇಷಣ್ಣನವರ ಸಾಮಸಂಹಿತೆಯ ಅನುವಾದ-ವಿವರಣೆಗಳನ್ನು ಸೇರಿಸಿಕೊಳ್ಳಲು ಮುಂದೆಬಂದಿದ್ದರು. ಆದರೆ ಸುಧಾಕರಚತುರ್ವೇದಿಯವರೂ ಸೇರಿದಂತೆ ಅಲ್ಲಿಯ ಹಲವರು ಸದಸ್ಯರು ಸಾಯಣಭಾಷ್ಯವನ್ನು ಸೇರಿಸಿಕೊಳ್ಳಲು ಒಪ್ಪದ ಕಾರಣ ಶೇಷಣ್ಣನವರು ಈ ಯೋಜನೆಯಿಂದ ಹಿಂದೆ ಸರಿದರು.+++(5)+++ ಅವರಿಗೆ ಸಾಯಣಭಾಷ್ಯದಲ್ಲಿ ನಿರತಿಶಯವಾದ ಗೌರವ. ಇದು ಅರ್ಹವಾದುದರಲ್ಲಿ ಸಂದ ಆರಾಧನೆಯಲ್ಲದೆ ಅಭಿನಿವೇಶವಲ್ಲ. ಇಷ್ಟಾದರೂ ಆರ್ಯಸಮಾಜದ ಸಾಮವೇದಪ್ರಕಟನೆಯ ಕೆಲಸದಲ್ಲಿ ತಮ್ಮ ಕೈಲಾದ ನೆರವನ್ನೆಲ್ಲ ನಿರ್ವಂಚನೆಯಾಗಿ ನೀಡಿದರು. ಎಂದಿನಂತೆ ಹೆಸರಿಲ್ಲದೆ ದುಡಿದರು. ಇದು ನನಗೆ ಸ್ವಲ್ಪ ಬೇಸರ ತಂದಿತು. ಆಗೀಗ ಈ ಕುರಿತು ಪ್ರಸ್ತಾವಿಸಿದಾಗಲೆಲ್ಲ ಶೇಷಣ್ಣನವರು,

“ಅವರದೂ ಒಂದು ಕ್ರಮ. ಅದೂ ವೇದಪುರುಷನ ಸೇವೆ. ನಾವು ಯಾಕೆ ಬೇಸರಗೊಳ್ಳಬೇಕು? ನೀವು ಹೇಳುವುದು ಸತ್ಯ, ಆದರೆ ಸತ್ಯಕ್ಕಿಂತ ಕೆಲವೊಮ್ಮೆ ಸೌಜನ್ಯ ದೊಡ್ಡದಾಗುತ್ತದೆ”

ಎನ್ನುತ್ತಿದ್ದರು. ಶೇಷಣ್ಣನವರ ಸತ್ತ್ವ ನನ್ನದಾಗಲಿಲ್ಲ.

ಪ್ರತಿಷ್ಠಾನದ ಕೆಲಸ ಮೊದಲಾಗುತ್ತಿದ್ದಂತೆಯೇ ಅಲ್ಲಿಂದ ಸಾಮವೇದಕ್ಕೆ ಸಂಬಂಧಿಸಿದ ಎಲ್ಲ ಪೂರ್ವಾಪರ ಕರ್ಮಗಳ ಪ್ರಯೋಗಪುಸ್ತಕಗಳು ಪುಂಖಾನುಪುಂಖವಾಗಿ ಪ್ರಕಟಿತವಾದವು. ಪ್ರತಿಯೊಂದು ಗ್ರಂಥವೂ ಸಸ್ವರವಾದ ಮಂತ್ರಭಾಗ, ಭಾಷ್ಯಾನುಸಾರಿಯಾದ ಅರ್ಥ, ಆಯಾ ಪ್ರಯೋಗಗಳ ನೆಲೆ-ಹಿನ್ನೆಲೆ, ದೇಶಾಚಾರಗಳ ವೈವಿಧ್ಯವೇ ಮುಂತಾದ ಎಷ್ಟೋ ಅಂಶಗಳನ್ನು ಒಳಗೊಂಡಿದ್ದಲ್ಲದೆ ವ್ಯಾಪಕವಾದ ಅಧ್ಯಯನಸಾಮಗ್ರಿಯನ್ನು ಕೂಡ ಮೈದುಂಬಿಸಿಕೊಂಡಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ, ಆ ಪ್ರಕಟನೆಗಳೆಲ್ಲ ಹೆಸರಿಗೆ ಪ್ರಯೋಗಪುಸ್ತಕಗಳು, ಆದರೆ ತತ್ತ್ವತಃ ಆಯಾ ಕರ್ಮಕಾಂಡಕ್ಕೆ ಸಂಬಂಧಿಸಿದ ಸಂಕ್ಷಿಪ್ತವಿಶ್ವಕೋಶಗಳು. ಇದಕ್ಕೆ ಸಣ್ಣ ಉದಾಹರಣೆಯೊಂದನ್ನು ಕೊಡಬಹುದು: ಎಲ್ಲರೂ ಬಲ್ಲಂತೆ ಸಂಧ್ಯಾವಂದನೆಯಲ್ಲಿ ದಿಕ್ಕುಗಳಿಗೆ ನಮಸ್ಕಾರ ಸಲ್ಲಿಸುವ ಒಂದು ಅಂಗ ವಾಡಿಕೆಯಲ್ಲಿ ಉಂಟಷ್ಟೆ. ಅದಕ್ಕೆ ಸಂಬಂಧಿಸಿದಂತೆ ಹತ್ತಾರು ಪುಟಗಳ ಟಿಪ್ಪಣಿಯನ್ನು ನಾನಾಮೂಲಗಳಿಂದ ಸಂಗ್ರಹಿಸಿ ಶೇಷಣ್ಣನವರು ಕೊಟ್ಟಿದ್ದಾರೆ.+++(5)+++ ಹೀಗೆ ಪ್ರತಿಯೊಂದು ಅಂಶವನ್ನೂ ಗಮನಿಸಬಹುದು. ಹೀಗಾಗಿ ಆ ಗ್ರಂಥಗಳು ಕೇವಲ ಸಾಮವೇದಿಗಳಿಗೆ ಮಾತ್ರವಲ್ಲದೆ ಎಲ್ಲ ವೇದಗಳವರಿಗೂ ಉಪಾದೇಯವಾಗಿವೆ; ಭಾರತೀಯ ಸಂಸ್ಕೃತಿಯನ್ನು ತಿಳಿಯಲೆಳಸುವ ಆಸಕ್ತರಿಗೂ ಆಪ್ತವೆನಿಸಿವೆ.

ಸಮಗ್ರವಾದ ಸಾಮವೇದವನ್ನು ಸಭಾಷ್ಯವಾಗಿ ಕನ್ನಡಕ್ಕೆ ತರುವಲ್ಲಿಯೂ ಇದೇ ರೀತಿಯ ಅಚ್ಚುಕಟ್ಟು, ಪರಿಪೂರ್ಣತೆಗಳನ್ನು ಅನುಸರಿಸಿದ್ದಾರೆ. ಸುಮಾರು ಮುನ್ನೂರು ಪುಟಗಳಷ್ಟು ವಿಸ್ತೃತವಾದ ಪೀಠಿಕೆಯಲ್ಲಿ ಅನೇಕ ಮೌಲಿಕವಿಚಾರಗಳನ್ನು ಕ್ರೋಡೀಕರಿಸಿಕೊಟ್ಟಿದ್ದಾರೆ. ಪ್ರತಿಯೊಂದು ಅಂಶಕ್ಕೂ ಆಧಾರಗಳನ್ನು ಅಲ್ಲಲ್ಲಿಯೇ ಕೊಟ್ಟಿರುವುದಲ್ಲದೆ ಮಂತ್ರಗಳೂ ಸೇರಿದಂತೆ ಅನೇಕಾಂಶಗಳಿಗೆ ಅಕಾರಾದಿಪಟ್ಟಿಯನ್ನು ಕೂಡ ನೀಡಿದ್ದಾರೆ. ಋಕ್ಕು, ಪದಪಾಠ, ಗಾನಪ್ರಭೇದಗಳು, ಸಾಯಣಭಾಷ್ಯ, ಪ್ರತಿಪದಾರ್ಥ, ಮಹಾತಾತ್ಪರ್ಯ ಮತ್ತು ಪದ್ಯರೂಪದ ಅನುವಾದ ಎಂಬ ಏಳು ಹಂತಗಳಲ್ಲಿ ಪ್ರತಿಯೊಂದು ಮಂತ್ರವೂ ವಿವೃತವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಕೆಲಸವನ್ನು ಕೈಗೊಂಡಾಗ ಅವರ ಮಗ, ಸೊಸೆ ಹಾಗೂ ಮತ್ತಿತರ ಬಂಧು-ಮಿತ್ರರು ಕಣ್ಣಲ್ಲಿ ಕಣ್ಣಿಟ್ಟು ಸಾವಿರಾರು ಪುಟಗಳನ್ನು ಟಂಕಿಸಿ ಕರಡಚ್ಚು ತಿದ್ದಿದ ಸೇವೆ ಸದಾ ಸ್ಮರಣೀಯ.+++(5)+++ ತಪ್ಪಿಲ್ಲದ ಮುದ್ರಣ, ಸರಳವೂ ಅರ್ಥಪೂರ್ಣವೂ ಆದ ಮುಖಪುಟ, ಯಾರಿಗೂ ಕೈಗೆಟುಕಬಲ್ಲ ಸುಲಭದ ಬೆಲೆ ಮುಂತಾದ ಮಹತ್ತ್ವಗಳೂ ಈ ಕೃತಿಶ್ರೇಣಿಗುಂಟು. ಇದು ಮೈಸೂರು ಮಹಾರಾಜರು ಪ್ರಾಯೋಜಿಸಿದ ಲೋಕಪ್ರಸಿದ್ಧವಾದ ಋಗ್ವೇದದ ಕನ್ನಡಾನುವಾದವನ್ನು ಹೋಲುವ ಅನನ್ಯಸಾಹಸ. ಇಂಥ ಸಾರಸ್ವತಸವನ ಹೆಚ್ಚಿನ ವಿದ್ಯಾಜಗತ್ತಿಗೆ ತಿಳಿಯದೆ ಹೋದದ್ದು ತುಂಬ ವಿಷಾದನೀಯ. ಏನು ಮಾಡುವುದು, ಯಾವುದಕ್ಕೂ ನಮ್ಮ ನಾಡು-ನುಡಿಗಳು ಕೇಳಿಕೊಂಡು ಬಂದಿರಬೇಕಲ್ಲ?

* * *

[[ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ–ವ್ಯಕ್ತಿತ್ವ Source: prekshaa]]

‘ಸಂಧ್ಯಾದರ್ಶನ’ವನ್ನು ಬರೆದ ಆಚೀಚಿನ ವರ್ಷಗಳಲ್ಲಿ ನನಗೆ ನಮ್ಮ ಕರ್ಮಕಾಂಡಗಳ ರೂಪ-ಸ್ವರೂಪಗಳನ್ನು ಪರಿಷ್ಕರಿಸಬೇಕು, ಸುಧಾರಣೆಗಳನ್ನು ಮಾಡಬೇಕು, ಜಳ್ಳು-ಕಾಳುಗಳನ್ನು ಬೇರ್ಪಡಿಸಿ ನಮ್ಮ ಕಾಲಕ್ಕೂ ಶ್ರುತಿ-ಸೂತ್ರ-ಸ್ಮೃತಿಗಳ ಆಂತರ್ಯಕ್ಕೂ ಒಪ್ಪಿಗೆಯಾಗುವಂಥ ಶುದ್ಧವಾದ ವ್ಯವಸ್ಥೆಗಳನ್ನು ಹವಣಿಸಬೇಕೆಂಬ ಹಂಬಲ ಹೆಚ್ಚಾಗಿತ್ತು. ಇದನ್ನು ಕುರಿತು ಶೇಷಣ್ಣನವರೊಡನೆ ಸಾಕಷ್ಟು ಹೇಳಿಕೊಂಡಿದ್ದೆ. ಆಗೆಲ್ಲ ಅವರು ನನ್ನ ವಿಚಾರಧಾರೆಯನ್ನು ಮೆಚ್ಚುವುದಲ್ಲದೆ ತಮ್ಮ ದೃಷ್ಟಿ-ಧೋರಣೆಗಳನ್ನೂ ಹೇಳುತ್ತಿದ್ದರು. ಅಂಥ ಒಂದು ಸಂವಾದದಲ್ಲಿ ಒಮ್ಮೆ ನಾನು ಮದುವೆ-ಮುಂಜಿಗಳಂಥ ಸಮಾರಂಭಗಳಲ್ಲಿ ಆಡಂಬರ-ಅಬ್ಬರ ಹೆಚ್ಚಾಗುತ್ತಿದೆ, ಅಶಾಸ್ತ್ರೀಯವೂ ಅನವಶ್ಯವೂ ಆದ ಆರ್ಭಟಗಳನ್ನು ಪುರೋಹಿತರೂ ಕರ್ತರೂ ಮೆರೆಸುತ್ತಿದ್ದಾರೆಂದು ಆಕ್ಷೇಪಿಸಿದೆ. ಆಗ ಅವರೆಂದರು:

“ನೀವು ಹೇಳುವುದೇನೋ ಸರಿ. ಆದರೆ ಒಂದಿಷ್ಟಾದರೂ ವೈಭವ ಇಲ್ಲದಿದ್ದರೆ ಆಯಾ ಕರ್ಮಗಳ ಭವ್ಯತೆ
ಹೇಗೆ ತಾನೆ ಮನಸ್ಸಿಗೆ ಮುಟ್ಟುತ್ತದೆ?
ಹೆಣ್ಣುಮಕ್ಕಳು ಒಳ್ಳೊಳ್ಳೆಯ ಸೀರೆ-ಒಡವೆಗಳನ್ನು ಉಟ್ಟು-ತೊಟ್ಟು, ಹೂವು-ಗಂಧ ಮುಡಿದು-ತಳಿದು ಆ ಪರಿಸರದಲ್ಲೆಲ್ಲ ಓಡಾಡುತ್ತಿರಬೇಕೆಂದು ಯಾವ ಆಪಸ್ತಂಬರೂ ಆಶ್ವಲಾಯನರೂ ಹೇಳಿಲ್ಲ. ಆದರೆ ಇವೆಲ್ಲ ಇಲ್ಲದಿದ್ದರೆ ಸಾಮಾನ್ಯರ ಕಣ್ಣಿನಲ್ಲಿ ಇವುಗಳಿಗೂ ಶ್ರಾದ್ಧಕ್ಕೂ ಏನು ತಾನೆ ಉಳಿಯುತ್ತದಪ್ಪ ವ್ಯತ್ಯಾಸ? ಹೀಗಾಗಿ ನೀವು ಇಂಥವನ್ನೆಲ್ಲ ಪರಿಷ್ಕರಿಸುವಾಗ ಲೋಕ ಸಾಮಾನ್ಯದ ಭಾವನೆಗಳಿಗೂ ಸ್ವಲ್ಪ ಬೆಲೆ ಕೊಡಿ. ನಾನೂ ನಮ್ಮ ಆಚಾರ-ವಿಚಾರಗಳಲ್ಲಿ ಆಡಂಬರವನ್ನು ಒಪ್ಪುವುದಿಲ್ಲ. ನಿಮಗೇ ಅದು ಗೊತ್ತಿದೆ. ಆದರೂ ಹೇಳುತ್ತಿದ್ದೀನಿ…”

ಇದನ್ನು ಆಲಿಸಿದ ಬಳಿಕ ನನಗೂ ಶೇಷಣ್ಣನವರ ಇಂಗಿತ ಸರಿಯೆನಿಸಿತು. ಈಚಿನ ವರ್ಷಗಳಲ್ಲಂತೂ ಇದು ಮತ್ತಷ್ಟು ಮನದಟ್ಟಾಗಿದೆ. ಅಷ್ಟಲ್ಲದೆ ಧರ್ಮ-ಗೃಹ್ಯಸೂತ್ರಕಾರರು “ಅತ್ರ ಗ್ರಾಮವೃದ್ಧಾಃ ಪ್ರಷ್ಟವ್ಯಾಃ”; ಹಳ್ಳಿಯ ಮುದುಕ-ಮುದುಕಿಯರ ಮಾತುಗಳು ಪ್ರಮಾಣ, ಅನುದಿನದ ಜಾನಪದಜೀವನದ ಅಂಶಗಳು ಅನುಷ್ಠೇಯವೆಂದು ಹೇಳುತ್ತಿದ್ದರೇ! ಭಗವಾನ್ ಬುದ್ಧನು ಹೇಳುವಂತೆ ಸನಾತನಧರ್ಮವು “ಬಹುಜನಹಿತಾಯ ಬಹುಜನಸುಖಾಯ” ಇರುವಂಥದ್ದು. ಎಲ್ಲರಿಗೂ ಎಟುಕಿ, ಎಲ್ಲರನ್ನೂ ತೃಪ್ತಿಗೊಳಿಸಿ ಆ ಬಳಿಕ ಅವ್ಯಾಜನಿಷ್ಠೆಯಿರುವ ಕೆಲವರನ್ನಾದರೂ ಉನ್ನತೋನ್ನತವಾದ ಮಟ್ಟಕ್ಕೇರಿಸುವ ಸೌಕರ್ಯವನ್ನು ಸನಾತನಧರ್ಮವಲ್ಲದೆ ಮತ್ತಾವುದು ಕೊಡುತ್ತದೆ? ಹೀಗೆ ಅದು ನೀಡುವ ಸೌಲಭ್ಯಗಳಲ್ಲೊಂದು ಶ್ರೀಶೇಷಣ್ಣ ಶ್ರೌತಿಗಳಂಥವರು ಎಲ್ಲರ ಕೈಯಳತೆಗೂ ಸಿಗುವಂಥ ಹವಣು.

ವೇದಗಳ ಆಧ್ಯಾತ್ಮಿಕಾರ್ಥವನ್ನು ಎತ್ತಿಹಿಡಿಯುವ ಭರದಲ್ಲಿ ಅವುಗಳಿಗಿರುವ ಅಧಿಯಜ್ಞೀಯವಾದ ಸ್ವಾರಸ್ಯವನ್ನು ಆಧುನಿಕರು ಉಪೇಕ್ಷಿಸುವುದರ ಬಗೆಗೆ ಶೇಷಣ್ಣನವರಿಗೆ ಬೇಸರವಿತ್ತು. ದಯಾನಂದರು, ಅರವಿಂದರು, ಕಪಾಲಿಶಾಸ್ತ್ರಿಗಳೇ ಮೊದಲಾದವರು ಹಠ ತೊಟ್ಟವರಂತೆ ವೇದಗಳ ಪ್ರತಿಯೊಂದು ಮಂತ್ರಕ್ಕೂ ತಾವೆಣಿಸಿಕೊಂಡ ಆಧ್ಯಾತ್ಮಿಕಾರ್ಥವನ್ನು ಬಲವಂತವಾಗಿ ಹೇರುವುದು ಅವರಿಗೆ ಸರಿ ಬರುತ್ತಿರಲಿಲ್ಲ.+++(4)+++ ಇಷ್ಟಾದರೂ ಅಂಥವರೊಡನೆ ಕಟುವಾದ ವಿರೋಧವನ್ನು ಶೇಷಣ್ಣನವರು ಇಟ್ಟುಕೊಳ್ಳಲಿಲ್ಲ. ನಾನಾದರೋ ಇಂಥ ಉಪದ್ವ್ಯಾಪಗಳನ್ನು ಖಂಡತುಂಡವಾಗಿ ವಿರೋಧಿಸಿಕೊಂಡು ಬಂದವನು. ತತ್ತ್ವತಃ ಶೇಷಣ್ಣನವರು ನನ್ನ ಪಕ್ಷದವರೇ. ಆದರೆ ಅವಧಾರಣೆ ಮಾತ್ರ ವಿಭಿನ್ನ.

ಈ ಸಂದರ್ಭದಲ್ಲಿ ನಾನು ಹೇಳಿದೆ,

“ಆಧ್ಯಾತ್ಮಿಕಾರ್ಥ ಎಂಬುದು ಹೂವಿನ ಮಕರಂದದಂತೆ. ನೂರಾರು ಹೂಗಳಿಂದ ಸಂಗ್ರಹಿಸಿದರೂ ಅದರ ಸವಿಯೊಂದೇ, ಪ್ರಮಾಣ ಮಾತ್ರ ಸ್ವಲ್ಪ. ಆದರೆ ಆಧಿಭೌತಿಕ, ಆಧಿ ದೈವಿಕ ಮತ್ತು ಆಧಿಯಾಜ್ಞಿಕಸ್ತರಗಳ ಅರ್ಥ ಹಾಗಲ್ಲ. ಅವು ಗಿಡ, ಬಳ್ಳಿ, ಕೊಂಬೆ, ರೆಂಬೆ, ಎಲೆ, ಹೂವು, ದಳಗಳ ಆಕಾರ-ಬಣ್ಣ, ಅವುಗಳ ಪರಿಮಳ ಮುಂತಾದ ಎಲ್ಲ ಅಂಶಗಳನ್ನೂ ಸ್ವಾರಸ್ಯಕರವಾಗಿ ಪ್ರತಿನಿಧಿಸುತ್ತವೆ. ಹೂವಿನ ಪರಮಾರ್ಥವು ಮಕರಂದವೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅದಕ್ಕಾಗಿ ಇಡಿಯ ಗಿಡ-ಬಳ್ಳಿಗಳ ಸೊಗಸನ್ನೂ ಸತ್ತ್ವವನ್ನೂ ಹಂಗಿಸಬೇಕಿಲ್ಲ. ಇಹದ ಪರಿಪಾಕವೇ ಪರ; ನಮ್ಮ ಮಟ್ಟಿಗಂತೂ ಇದು ಶೂನ್ಯದಿಂದ ಸಾಕ್ಷಾತ್ಕೃತವಾಗುವುದಿಲ್ಲ. ಈಶಾವಾಸ್ಯವು ‘ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾ ಅಮೃತಮಶ್ನುತೇ’ ಇತ್ಯಾದಿ ಮಂತ್ರಗಳ ಮೂಲಕ ಈ ಸತ್ಯವನ್ನೇ ಸಾರಿ ಎಚ್ಚರಿಸಿದೆ”

ಎಂದು. ಇದನ್ನು ಕೇಳಿದ ಶೇಷಣ್ಣನವರು ತುಂಬ ಹರ್ಷಿಸಿದ್ದಲ್ಲದೆ ಈ ಭಾವವನ್ನೇ ಸಾಮವೇದ ಸಂಪುಟವೊಂದರ ಮುನ್ನುಡಿಯಾಗಿಯೂ ಬರೆಸಿಕೊಂಡರು. ಅವರ ಬದುಕೇ ಈ ಸತ್ಯದ ವ್ಯಾಖ್ಯಾನ.

* * *

ಶೇಷಣ್ಣಶ್ರೌತಿಗಳಲ್ಲಿದ್ದ ಮಹಾಗುಣಗಳಲ್ಲೊಂದು ಅಪರಿಗ್ರಹವ್ರತ. ಅವರಂಥ ಬೇರೊಬ್ಬ ಅಪರಿಗ್ರಹಿಯನ್ನು ನಾನು ಕಂಡಿಲ್ಲ. ಅದೆಷ್ಟೋ ಬಾರಿ ಅವರು ಹಲವು ನಿಟ್ಟಿನಿಂದ ನನಗೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾದರ್ಶನ’ದಲ್ಲಿ ಬರುವ ಬುಡಿಲರ ಹಾಗೆ ತೋರಿದ್ದಾರೆ. ಶೇಷಣ್ಣನವರು ಯಾವ ದಾನವನ್ನೂ ಸ್ವೀಕರಿಸುತ್ತಿರಲಿಲ್ಲ. ದಕ್ಷಿಣೆಯು ಕರ್ಮಾಂಗವಾದ ಕಾರಣ ಅದನ್ನು ನಿರಾಕರಿಸುವಂತಿಲ್ಲ. ಹೀಗಾಗಿ ಅದರ ಅನಿವಾರ್ಯಭಾರವನ್ನು ತಪ್ಪಿಸಿಕೊಳ್ಳಲು ಅವರು ಆಚಾರ್ಯತ್ವವನ್ನೇ ವಹಿಸುತ್ತಿರಲಿಲ್ಲ.+++(4)+++ ತೀರ ವಿರಳವಾಗಿ ವಹಿಸಿದಾಗಲೂ ದಕ್ಷಿಣೆಯ ಹೆಸರಿನಲ್ಲಿ ಹೆಚ್ಚಾಗಿ ತಮಗೆ ನೀಡುವುದನ್ನು ಒಪ್ಪುತ್ತಿರಲಿಲ್ಲ. ಆದರೆ ವೈದಿಕರಿಗೆ ನ್ಯಾಯವಾಗಿ ಸಲ್ಲಬೇಕಾದುದರ ಬಗೆಗೆ ತುಂಬ ಮುತುವರ್ಜಿ ವಹಿಸುತ್ತಿದ್ದರು. ಮಾತ್ರವಲ್ಲ, ದಾನ-ದಕ್ಷಿಣೆಗಳನ್ನು ದಾತೃ-ಕರ್ತೃಗಳು ತಮ್ಮ ಶಕ್ತ್ಯನುಸಾರ ನೀಡುವಾಗ ವಿತ್ತಶಾಠ್ಯವನ್ನು ಮಾಡಬಾರದೆಂದೂ ವೈದಿಕರಿಗೆ ಯುಕ್ತರೀತಿಯ ಪೋಷಣೆ ಬೇಕೆಂದೂ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.+++(4)+++

ಧಾರ್ಮಿಕಕರ್ಮಗಳನ್ನು ಮಾಡಿಸುವ ಎಲ್ಲ ವರ್ಗಗಳ ಬಗೆಗೂ ಅವರ ಆಸ್ಥೆ-ಕಾಳಜಿಗಳು ಮಿಗಿಲಾಗಿದ್ದವು. ಒಮ್ಮೆ ಹೇಳಿದ್ದರು:

“ದಾಸಯ್ಯ ಮನೆಯ ಬಾಗಿಲಿಗೆ ಬಂದರೆ ನಾನು ಸಂಭ್ರಮದಿಂದ ಆತನಿಗೆ ದಾನ-ದಕ್ಷಿಣೆ ಕೊಡುತ್ತೇನೆ. ಬ್ರಾಹ್ಮಣವರ್ಗದ ಪುರೋಹಿತರು ಯಾರಲ್ಲಿ ಹೋಗಿ ಕರ್ಮಗಳನ್ನು ನಡಸಿಕೊಡುವುದಿಲ್ಲವೋ ಅಂಥ ನಿಮ್ನವರ್ಗದವರಿಗೆ ಇವರೇ ಆಚಾರ್ಯರಾಗಿ ಪೂರ್ವಾಪರ ಕರ್ಮಗಳನ್ನು ನಿರ್ವಹಿಸುತ್ತಾರೆ.+++(5)+++ ಇಂಥವರಿಗೆ ನಾವೇ ಗೌರವ ಕೊಡುವುದಿಲ್ಲ, ಆದರಿಸುವುದಿಲ್ಲ ಅಂದರೆ ಏನು ಗತಿ? ಸನಾತನಧರ್ಮ ಎಲ್ಲ ಸಮುದಾಯಗಳಲ್ಲೂ ಉಳಿದಿರುವುದು ಇವರಂಥ ಪುಣ್ಯವಂತರಿಂದ.”

ನನ್ನ ತಂದೆಯವರು ತೀರಿಕೊಂಡಾಗ ಶೇಷಣ್ಣನವರು ಮೊದಲ ದಿನವೇ ಆಗಮಿಸಿದ್ದರು. ಆಗ ಕಾಲೋಚಿತವಾದ ಒಂದೆರಡು ಸಾಂತ್ವನದ ಮಾತುಗಳನ್ನು ಹೇಳಿ,

“ನಿಮಗೇ ಎಲ್ಲ ಗೊತ್ತಿದೆಯಲ್ಲ, ನೀವೇ ನಿಮ್ಮ ಪುರೋಹಿತರಿಗೆ ಯಾವುದು ಶಾಸ್ತ್ರಸಮ್ಮತ, ಮತ್ತಾವುದು ಅಸಮ್ಮತ ಎನ್ನುವುದನ್ನು ತಿಳಿಸಿ ಮುಂದುವರಿಯಿರಿ”

ಎಂದು ಹೇಳಿದ್ದಲ್ಲದೆ ವೈಕುಂಠಸಮಾರಾಧನೆಯಂದು ಅವರೇ ಸಾಮಗಾನವನ್ನೂ ಉಪನಿಷತ್ಪಾರಾಯಣವನ್ನೂ ನಡಸಿಕೊಟ್ಟಿದ್ದರು. ಆದರೆ ಯಾವ ದಾನವನ್ನೂ ಸ್ವೀಕರಿಸಲು ಒಪ್ಪಲಿಲ್ಲ.

ಹೀಗೆ ಪ್ರೀತಿಗೆ ಪ್ರೀತಿ, ಕಾಳಜಿಗೆ ಕಾಳಜಿ, ಶಿಸ್ತಿಗೆ ಶಿಸ್ತು ಶೇಷಣ್ಣನವರ ಪರಿ.

* * *

ಶೇಷಣ್ಣಶ್ರೌತಿಗಳಿಗೆ ನನ್ನಲ್ಲಿ ಅಪಾರವಾದ ಪ್ರೀತಿ, ವಿಶ್ವಾಸ, ಅಭಿಮಾನ. ಸಾಮಾನ್ಯವಾಗಿ ಯತಿಗಳೂ ವೈದಿಕರೂ ಸಾಂಪ್ರದಾಯಿಕಪಂಡಿತರೂ ಕವಿ-ಕಾವ್ಯ-ಕಲೆಗಳ ವಿಷಯದಲ್ಲಿ ಉಪೇಕ್ಷೆ ತೋರುವುದುಂಟು. ಕಾವ್ಯವೆಂಬುದು ಅವರ ದೃಷ್ಟಿಯಲ್ಲಿ ಕಾಲಹರಣದ ಸಾಧನ, ಭೋಗಲೌಲ್ಯದ ಸಂಕೇತ, ಶಾಸ್ತ್ರಗಳನ್ನು ಕರಗತವಾಗಿಸಿಕೊಳ್ಳಲಾರದ ಸುಕುಮಾರಮತಿಗಳ ಅಪ್ರಬುದ್ಧ ಅಪಲಾಪ. ಶೇಷಣ್ಣಶ್ರೌತಿಗಳು ಇದಕ್ಕೆ ಹಿತವಾದ ಅಪವಾದ. ಅವರ ದೃಷ್ಟಿಯಲ್ಲಿ ಕಾವ್ಯಾನಂದವು ಬ್ರಹ್ಮಾನಂದಸಹೋದರ, ಸತ್ಕವಿಯು ಮತ್ತೊಬ್ಬ ಬ್ರಹ್ಮನಿದ್ದಂತೆ. ಇದು ನಮ್ಮ ಆರ್ಷದೃಷ್ಟಿಗೆ ಅನುಗುಣವಾದ ಅರಿವು. ಈ ಕಾರಣದಿಂದಲೇ ಅವರು ಸಾಮವೇದಸಂಹಿತೆಯನ್ನು ಸಭಾಷ್ಯವಾಗಿ ಕನ್ನಡಕ್ಕೆ ತರುವಾಗ ಪ್ರತಿಯೊಂದು ಮಂತ್ರಕ್ಕೂ ಗದ್ಯರೂಪದ ಅನುವಾದ-ವಿವರಣೆಗಳ ಜೊತೆಗೆ ಹಾಡಿಕೊಳ್ಳಲಾಗುವಂತೆ ಪದ್ಯರೂಪದ ಭಾಷಾಂತರವೂ ಇರಬೇಕೆಂದು ಬಯಸಿದರು. ಇದಕ್ಕಾಗಿ ನನ್ನ ಮನೆಗೆ ತಾವೇ ಬಂದು ಫಲ-ತಾಂಬೂಲ-ದಕ್ಷಿಣೆಗಳನ್ನು ಮುಂದಿರಿಸಿ ವಿಧ್ಯುಕ್ತವಾದ ರೀತಿಯಲ್ಲಿ ಅಭ್ಯರ್ಥಿಸಿದ್ದರು ಕೂಡ!+++(4)+++ ನಾನು ಅವರ ಈ ಔಪಚಾರಿಕವಿಧಾನಕ್ಕೆ ತುಂಬ ಸಂಕೋಚಗೊಂಡು ಆಕ್ಷೇಪಿಸಿದಾಗ ತಮ್ಮ ನಿಲವನ್ನೇ ಸಮರ್ಥಿಸಿಕೊಂಡಿದ್ದರು.

ಅವರು ನನ್ನ ಕಾವ್ಯರಚನೆ-ಅವಧಾನಾದಿಗಳನ್ನು ಮಿಗಿಲಾಗಿ ಮೆಚ್ಚಿದ್ದರು. ನನ್ನ ಅನೇಕಭಾಷಣಗಳನ್ನು ಕೇಳಿದ್ದರು, ಅವಧಾನಗಳನ್ನು ನೋಡಿದ್ದರು, ಹಲಕೆಲವು ಪುಸ್ತಕಗಳನ್ನು ಕೂಡ ಓದಿದ್ದರು. ನನ್ನ ಕನ್ನಡ ಶತಾವಧಾನವನ್ನು ಅಂತರ್ಜಾಲದ ಮೂಲಕ ನೋಡಿ ಆಸ್ವಾದಿಸಿದ್ದುದಲ್ಲದೆ ಆ ಕಾರ್ಯಕ್ರಮಕ್ಕಾಗಿ ಆಯೋಜಕರು ತಯಾರಿಸಿದ ನನ್ನ ಭಾವಚಿತ್ರವಿರುವ ಪೋಸ್ಟರ್ ಒಂದನ್ನು ಸಂಪಾದಿಸಿಕೊಂಡು ತಮ್ಮ ಮೇಜಿನ ಬಳಿಯಲ್ಲಿಯೇ ಇಟ್ಟುಕೊಂಡಿದ್ದರು. ನಾನು ಅವರನ್ನು ಕಾಣಲೆಂದು ಯಾವಾಗಲಾದರೂ ಹೋದಾಗ, “ನೀವು ಸದಾ ನನ್ನ ಬಳಿಯಲ್ಲಿ ಇರುತ್ತೀರಿ” ಎಂದು ಆ ಚಿತ್ರವನ್ನು ತೆಗೆದು ತೋರಿಸಿ ಹಿಗ್ಗುತ್ತಿದ್ದರು. ಈ ಪ್ರೀತಿಗೆ ಯಾವ ಪಡಿಯನ್ನು ತಾನೆ ಕೊಡಲು ಸಾಧ್ಯ?

* * *

ಶೇಷಣ್ಣನವರು ತಾವು ವೇದಪಾಠ ಹೇಳಿದ ಯಾರೊಬ್ಬರನ್ನೂ ತಮ್ಮ ಶಿಷ್ಯರೆಂಬಂತೆ ಭಾವಿಸಿರಲಿಲ್ಲ. ವಯಸ್ಸಿನ ಅಂತರವನ್ನೂ ಗಮನಿಸದೆ ಎಲ್ಲರನ್ನೂ ಗೆಳೆಯರಂತೆ ಕಾಣುತ್ತಿದ್ದರು. ಹೀಗಿರುವಾಗ ನನಗೂ ಅವರಲ್ಲಿ ಯಥೇಷ್ಟವಾದ ಸಲುಗೆಯಿದ್ದದ್ದು ಅತಿಶಯದ ಸಂಗತಿಯಲ್ಲ. ನಮ್ಮಿಬ್ಬರ ನಡುವೆ ಹೆಚ್ಚಾಗಿ ಸಾಗುತ್ತಿದ್ದ ಮಾತೆಲ್ಲ ವೇದವನ್ನು ಕುರಿತೇ. ನಾನು ಸ್ವಶಾಖೆಯಾದ ಕೃಷ್ಣಯಜುರ್ವೇದದ ಘೋಷವು ತರುವ ಭವ್ಯತೆ-ಘನತೆಗಳನ್ನು ಕುರಿತು ಮಾತನಾಡಿದಾಗಲೆಲ್ಲ ಅವರು ಅದನ್ನೊಪ್ಪುತ್ತ,

“ಏನು ಮಾಡುವುದಪ್ಪ, ಶಂಕರಭಗವತ್ಪಾದರೂ ಸಾಯಣಾಚಾರ್ಯರೂ ನಿಮ್ಮ ಶಾಖೆಯವರೇ ಆಗಿಬಿಟ್ಟಿದ್ದಾರೆ ಅಂತ ನಿಮಗೆಲ್ಲ ಹೆಮ್ಮೆ. ಇರಲಿ, ವೇದಾಂತಭಾಷ್ಯಕರ್ತರೂ ವೇದಭಾಷ್ಯಕರ್ತರೂ ನಿಮ್ಮವರಾದರೆ ನಮ್ಮ ವೇದವನ್ನು ಸಾಕ್ಷಾತ್ ಶ್ರೀಕೃಷ್ಣನೇ ತಾನೆಂಬುದಾಗಿ ಭಗವದ್ಗೀತೆಯಲ್ಲಿ ಹೇಳಿಕೊಂಡಿದ್ದಾನೆ. ಇದನ್ನು ಒಪ್ಪುತ್ತೀರಲ್ಲವೇ!”

ಎಂದು ನವುರಾಗಿ ವಿನೋದ ಮಾಡುವರು.

ಶ್ರೀರಾಮನಿಗೆ ತನ್ನ ಕುಲೋಚಿತವಾದ ಕ್ಷಾತ್ರಧರ್ಮದಲ್ಲಿ ಬಹುಮಾನವಿದ್ದಂತೆ ಶೇಷಣ್ಣನವರಿಗೆ ತಮ್ಮದಾದ ಸಾಮವೇದದ ಬಗೆಗೆ ಎಣೆಯಿಲ್ಲದ ಆದರಾಭಿಮಾನಗಳಿದ್ದವು. ಇದು ಉಪಾಸನವೇದವೆಂದು ಅವರ ಅವಧಾರಣೆ. ವಿಶೇಷತಃ ಛಾಂದೋಗ್ಯೋಪನಿಷತ್ತಿನ ಉದ್ಗೀಥಪ್ರಕರಣವನ್ನು ಅವರು ನೆನೆಯುತ್ತಿದ್ದರು. ಅಲ್ಲದೆ ಸಾಮವೇದಿಗಳು ಗಾಯತ್ರೀಮಂತ್ರವನ್ನು ಜಪಿಸುವಾಗ ಮಿಕ್ಕ ವೇದಗಳವರಂತೆ ಪ್ರಣವ-ಮಹಾವ್ಯಾಹೃತಿಗಳನ್ನು ಮೊದಲಿಗೆ ಹೇಳದೆ ಕಡೆಯಲ್ಲಿ ಹೇಳಬೇಕು; ಹಾಗೆ ಹೇಳುವಾಗಲೂ ಮಹಾವ್ಯಾಹೃತಿಗಳ ಬಳಿಕವೇ ಪ್ರಣವವನ್ನು ಉಚ್ಚರಿಸಬೇಕೆಂದು ಗೋಭಿಲ-ದ್ರಾಹ್ಯಾಯಣಾದಿಗಳ ಸೂತ್ರಗಳನ್ನು ಪ್ರಮಾಣವಾಗಿ ಮುಂದಿಡುತ್ತಿದ್ದರು. ಇದೇ ರೀತಿ ಕೇನ-ಛಾಂದೋಗ್ಯಗಳ ಹಲವು ಪ್ರಕರಣಗಳನ್ನೂ ವಿಸ್ತರಿಸುತ್ತಿದ್ದರು.

ಶೇಷಣ್ಣನವರಿಗೆ ನಮ್ಮ ಕರ್ಮಕಾಂಡದ ಸಣ್ಣಪುಟ್ಟ ವಿಷಯಗಳಲ್ಲಿಯೂ ಅದೆಷ್ಟು ಎಚ್ಚರ, ಆರ್ಷತ್ವದ ಬಗೆಗೆ ಅದೆಷ್ಟು ಕಾಳಜಿಯೆಂದರೆ ಸಾಮಾನ್ಯವಾಗಿ ಹೋಮಗಳ ಕಡೆಯಲ್ಲಾಗುವ ಪೂರ್ಣಾಹುತಿಯ ಹೊತ್ತಿಗೆ ಲೋಕರೂಢಿಯಾಗಿ ಬಂದಿರುವ ಚಪ್ಪಾಳೆ ತಟ್ಟುವುದರ ಬಗೆಗೂ ವಿಮರ್ಶಿಸುವಷ್ಟು! ವೈದಿಕವಾದ ಇಂಥ ಪ್ರಶಸ್ತಕಾರ್ಯದಲ್ಲಿ ಲೌಕಿಕವಾದ ಸಾಧುವಾದಗಳ ಸಂಕೇತವೆನಿಸಿದ ಚಪ್ಪಾಳೆ ಸರಿಯಾಗದು, ಅದು ಸಂದರ್ಭದ ಗಾಂಭೀರ್ಯವನ್ನು ತಗ್ಗಿಸುತ್ತದೆ; ಜೊತೆಗೆ ಶಾಸ್ತ್ರಕಾರರೂ ಇದನ್ನು ವಿಧಿಸಿಲ್ಲ ಎಂದು ಅವರ ಆಕ್ಷೇಪ. ಇದಕ್ಕೆ ಪ್ರತ್ಯಾಮ್ನಾಯವಾಗಿ ದೀರ್ಘೋಚ್ಚಸ್ವರದಿಂದ ಎಲ್ಲರೂ ಓಂಕಾರವನ್ನು ಘೋಷಿಸಬೇಕು ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಮಾತ್ರವಲ್ಲ, ಅದೆಷ್ಟೋ ಪೂರ್ಣಾಹುತಿಗಳ ಹೊತ್ತಿನಲ್ಲಿ ನೂರಾರು ಚಪ್ಪಾಳೆಗಳ ಕೋಲಾಟದ ನಡುವೆ ಅವರೊಬ್ಬರದೇ ಓಂಕಾರ ಮೊಳಗುತ್ತಿತ್ತು.+++(5)+++ ಹೀಗೆ ತಾವು ಶಾಸ್ತ್ರಶುದ್ಧವಾಗಿ, ಸಂದರ್ಭನಿಷ್ಠವಾಗಿ ಕಂಡುಕೊಂಡದ್ದನ್ನು ಯಾರೊಬ್ಬರ ಸಹಮತಕ್ಕೂ ಕಾಯದೆ ಆಚರಣೆಗೆ ತರುವಲ್ಲಿ ಅವರು ಎಂದೂ ಹಿಂಜರಿದವರಲ್ಲ: “ಮನಃಪೂತಂ ಸಮಾಚರೇತ್.”

ನಾನೊಮ್ಮೆ ಅವರನ್ನು ಕೇಳಿದ್ದೆ, “ಸಕಾರಣವಾಗಿಯೇ ನಮಗೆ ಕೋಪ ಬಂದಾಗ ಏನು ಮಾಡಬೇಕು?” ಎಂದು. ಆಗ ಅವರು ಹೇಳಿದ್ದರು:

“ನಾನು ಹತ್ತು ಪ್ರಾಣಾಯಾಮ ಮಾಡುತ್ತೇನೆ, ಇಪ್ಪತ್ತನಾಲ್ಕು ಪ್ರಣವ ಹೇಳಿಕೊಳ್ಳುತ್ತೇನೆ. ಆ ಹೊತ್ತಿಗೆ ಕೋಪ ಇಳಿದು ಕಾರಣ ಮಾತ್ರ ಉಳಿದಿರುತ್ತದೆ. ಅನಂತರ ಅದನ್ನು ತಕ್ಕಂತೆ ನಿರ್ವಹಿಸಿದರೆ ಸಾಕು.” +++(5)+++

ಹೀಗೆ ಓಂಕಾರವು ಶೇಷಣ್ಣನವರ ಜೀವನದಲ್ಲಿ ಅದೆಷ್ಟೋ ರೀತಿ ಪ್ರಭಾವಕಾರಿಯಾಗಿತ್ತು. ಅವರ ಪೌತ್ರನಿಗೆ ಪ್ರಣವ ಎಂದು ಹೆಸರಿಟ್ಟಿದ್ದು ಆಕಸ್ಮಿಕವಲ್ಲ.

ಇಂಥದ್ದೇ ಮತ್ತೊಂದು ಸಂಗತಿ ನೆನಪಾಗುತ್ತದೆ. ಅನುದಿನದ ಬ್ರಹ್ಮಯಜ್ಞದ ಅಂಗವಾಗಿ ನಾವೆಲ್ಲ ಮಾಡುವ ದೇವ-ಋಷಿ-ಪಿತೃತರ್ಪಣದ ವಿಷಯದಲ್ಲಿಯೂ ಶೇಷಣ್ಣನವರ ಚಿಕಿತ್ಸಕದೃಷ್ಟಿ ಹಾಯ್ದಿತ್ತು. ದೇವತೆಗಳಿಗೆ ಒಂದು ತರ್ಪಣ, ಋಷಿಗಳಿಗೆ ಎರಡು ತರ್ಪಣ ಮತ್ತು ಪಿತೃಗಳಿಗೆ ಮೂರು ತರ್ಪಣ ಎಂಬ ವಿಧಿ ಪ್ರಸಿದ್ಧವಷ್ಟೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಯೋಗಪುಸ್ತಕಗಳು ಮುದ್ರಣದ ಸ್ಥಳವನ್ನು ಉಳಿಸಲೆಂದೋ ಅಚ್ಚಿನ ಮೊಳೆಗಳನ್ನು ಮಿಗಿಸಲೆಂದೋ ಅಥವಾ ಮತ್ತಾವ ಆಲಸ್ಯದಿಂದಲೋ ಪ್ರತಿಯೊಂದು ಬಾರಿಯೂ ತರ್ಪಣವನ್ನು ಅಚ್ಚಿಡುವಾಗ ಪೂರ್ಣಪಾಠವನ್ನು ಕೊಡದೆ (ಉದಾಹರಣೆಗೆ: ಸೋಮಂ ಕಾಂಡರ್ಷಿಂ ತರ್ಪಯಾಮಿ, ಸೋಮಂ ಕಾಂಡರ್ಷಿಂ ತರ್ಪಯಾಮಿ; ಅಗ್ನಿಂ ಕವ್ಯವಾಹನಂ ತರ್ಪಯಾಮಿ, ಅಗ್ನಿಂ ಕವ್ಯವಾಹನಂ ತರ್ಪಯಾಮಿ, ಅಗ್ನಿಂ ಕವ್ಯವಾಹನಂ ತರ್ಪಯಾಮಿ) ಸಂಕ್ಷೇಪಿಸುವುದುಂಟು (ಉದಾಹರಣೆಗೆ: ಸೋಮಂ ಕಾಂಡರ್ಷಿಂ ತರ್ಪಯಾಮಿ ತರ್ಪಯಾಮಿ … ಅಗ್ನಿಂ ಕವ್ಯವಾಹನಂ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ). ಇದನ್ನೇ ನಚ್ಚಿಕೊಂಡು ಅದೆಷ್ಟೋ ಮಂದಿ ಲೌಕಿಕರೂ ವೈದಿಕರೂ ತಮ್ಮ ನಿತ್ಯಕರ್ಮಗಳನ್ನು ಸಾಗಿಸುವುದುಂಟು.+++(5)+++ ಇದು ಕರ್ತರಿಗೂ ಅನುಕೂಲಕರವಷ್ಟೆ—ಸೂಕ್ಷ್ಮದಲ್ಲಿ ಮೋಕ್ಷ! ಆದರೆ ಶೇಷಣ್ಣನವರು ಇಂಥ ಅಶಾಸ್ತ್ರೀಯಸಂಕ್ಷೇಪಗಳನ್ನು ಒಪ್ಪುತ್ತಿರಲಿಲ್ಲ. ಅವರು ಇದನ್ನೆಲ್ಲ ಪೂರ್ತಿಯಾಗಿ ಹೇಳಬೇಕಲ್ಲದೆ ಅರೆಬರೆಯಾಗಿ ಹೇಳುವ ಮೈಗಳ್ಳತನ ಕೂಡದೆಂದು ಮತ್ತೆಮತ್ತೆ ಎಚ್ಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಭಾವಪೂರ್ಣವಾದ ಅನುವಚನವೂ ಸ್ಮರಣೀಯ:

“ನಮಗಿಷ್ಟೆಲ್ಲ ತಿಳಿವನ್ನು ಕೊಟ್ಟಿರುವ ಋಷಿಗಳಿಗೂ ನಮ್ಮ ಅಸ್ತಿತ್ವಕ್ಕೇ ಕಾರಣರಾದ ಪಿತೃಗಳಿಗೂ ಬಾಯ್ತುಂಬ ಹೆಸರು ಹೇಳಿ ತರ್ಪಣ ಕೊಡುವುದಕ್ಕೂ ಸೋಮಾರಿತನವಾದರೆ ಹೇಗಪ್ಪ!”

ಇಲ್ಲೆಲ್ಲ ಅವರ ಶುಷ್ಕಸಂಪ್ರದಾಯಶ್ರದ್ಧೆಗಿಂತ ಮಿಗಿಲಾದದ್ದು ಭಾವಾರ್ದ್ರವಾದ ಕೃತಜ್ಞತೆಯೆಂದು ನನ್ನ ಅನಿಸಿಕೆ.

ಶೇಷಣ್ಣನವರಿಗೆ ಸಾವನ್ನು ಕುರಿತು ಭೀತಿಯಿರಲಿಲ್ಲ, ಬದುಕಿನ ಬಗೆಗೆ ಮೋಹವಿರಲಿಲ್ಲ. ಆದರೆ ನೆಮ್ಮದಿಯಾದ ಸಾವನ್ನು ಸ್ವಾಗತಿಸುವಲ್ಲಿ ತುಂಬ ಕುತೂಹಲವಿದ್ದಿತು. ಪ್ರಾಯಶಃ ಈ ಕಾರಣದಿಂದಲೇ ಇರಬೇಕು, ಅವರು ತಮಗೆ ಎಪ್ಪತ್ತೈದು ವರ್ಷಗಳಾದ ಬಳಿಕ ಆರೇಳು ಬಾರಿ ದೈವಜ್ಞರನ್ನು ತಮ್ಮ ಸಾವಿನ ಹೊತ್ತು ಏನಿರಬಹುದೆಂದು ಪ್ರಶ್ನಿಸಿದ್ದರಂತೆ. ದುರ್ದೈವದಿಂದ (ಸುದೈವವೆಂದೇ ಹೇಳಬೇಕು!) ಒಮ್ಮೆಯೂ ಆ ಸಾವಿನ ಗಳಿಗೆ ಬರಲಿಲ್ಲ. ಪಾಪ, ಅವರು ಕಾಲನ ಕರೆಯನ್ನು ಕಾದದ್ದೇ ಬಂತು. ಈ ಸಂಗತಿ ಶ್ರೌತಿಗಳ ಆತ್ಮೀಯಶಿಷ್ಯರ ವಲಯದಲ್ಲಿ ಒಂದು ಲಘುವಿನೋದದ ವಸ್ತುವಾಗಿತ್ತು. “ಅಂತೂ ನಮ್ಮ ಗುರುಗಳು ಮೃತ್ಯುವಿಗೇ ಆರು ಬಾರಿ ಚಳ್ಳೇಹಣ್ಣು ತಿನ್ನಿಸಿದರು!” ಎಂದು ಆಗೀಗ ಶ್ರೀವತ್ಸ ಮೊದಲಾದವರು ಹೇಳಿ ಹಿಗ್ಗುತ್ತಿದ್ದರು.+++(5)+++ ಫಲಜ್ಯ್ಯೋತಿಷದ ಸಾಫಲ್ಯ-ವೈಫಲ್ಯಗಳ ಬಗೆಗೆ ಇದೂ ಒಂದು ದಿಕ್ಸೂಚಿಯಾದೀತು.

* * *

[[ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ—ಉಪಸಂಹಾರ Source: prekshaa]]

ಶೇಷಣ್ಣನವರ ಜೀವನದ ಕಡೆಯ ದಶಕಗಳಲ್ಲಿ ಬಂದೆರಗಿದ ಆಘಾತವೆಂದರೆ ಅವರ ಧರ್ಮಪತ್ನಿ ಶಾರದಮ್ಮನವರ ವಿಸ್ಮೃತಿರೋಗ. ಎಷ್ಟೆಲ್ಲ ಸಂಪ್ರದಾಯದ ಹಾಡು, ಸ್ತೋತ್ರ, ಗೀತಗಳನ್ನು ವಾಚೋ ವಿಧೇಯವಾಗಿ ಇರಿಸಿಕೊಂಡಿದ್ದ ಅವರಿಗೆ ಒಂದು ಅಕ್ಷರವನ್ನೂ ಮಾತನಾಡಲಾಗದಂಥ ಭೀಕರವಿಸ್ಮೃತಿ ಬಂದೆರಗಿತ್ತು.+++(5)+++ ಅವರಿಗೆ ತಮ್ಮ ದೇಹದ ಮೇಲೆಯೇ ನಿಯಂತ್ರಣವಿರುತ್ತಿರಲಿಲ್ಲ. ಮನೆಯಿಂದ ಹೊರಟರೆ ಮತ್ತೆ ಬರುವ ದಾರಿ ಗೊತ್ತಾಗುತ್ತಿರಲಿಲ್ಲ. ಅನುದಿನದ ಗೃಹಕೃತ್ಯಗಳಿರಲಿ, ವೈಯಕ್ತಿಕವಾದ ಕೆಲಸಗಳನ್ನು ನಿರ್ವಹಿಸಲು ಕೂಡ ಅರಿವಾಗುತ್ತಿರಲಿಲ್ಲ. ಇದೊಂದು ಬಗೆಯಲ್ಲಿ ಬೆಳೆದ ಮಗುವಿನ ಪರಿಸ್ಥಿತಿ. ಇಂಥ ಅನಾರೋಗ್ಯದ ತೊಂದರೆ ಎಂಥದ್ದೆಂಬುದನ್ನು ನಾನು ಆ ಬಳಿಕ ನನ್ನ ತಾಯಿಗೆ ಇದೇ ರೀತಿಯ ಸ್ಥಿತಿ ಬಂದಾಗಲೇ ಅರಿತದ್ದು, ಅನುಭವಿಸಿದ್ದು. ಆ ಹಿನ್ನೆಲೆಯಲ್ಲಿ ಹೇಳುವುದಾದರೆ, ಶೇಷಣ್ಣನವರಿಗೆ ಉಂಟಾದ ನೋವು-ಕಷ್ಟಗಳ ಪ್ರಮಾಣ ನನಗೆ ಚೆನ್ನಾಗಿ ತಿಳಿಯುತ್ತದೆ.

ಪರಿಸ್ಥಿತಿ ಹೀಗಿದ್ದರೂ ಅವರು ವಿಧಿಯನ್ನು ಹಳಿಯದೆ, ದೈವಶ್ರದ್ಧೆಯನ್ನು ಕಳೆದುಕೊಳ್ಳದೆ, ಎಲ್ಲರೊಡನೆ ಗೋಳಾಡದೆ, ಮನೆಯಾಕೆಯನ್ನೂ ದೂರದೆ ತುಂಬ ಆಸ್ಥೆಯಿಂದ ಅವರ ಯೋಗಕ್ಷೇಮವನ್ನು ಗಮನಿಸಿಕೊಂಡರು. ಈ ವಿಚಾರದಲ್ಲಿ ಕುಟುಂಬಸದಸ್ಯರ ನೆರವು ಚೆನ್ನಾಗಿದ್ದಿತಾದರೂ ಶೇಷಣ್ಣನವರೇ ಎಲ್ಲವನ್ನೂ ಹೆಚ್ಚಾಗಿ ನಿಭಾಯಿಸುತ್ತಿದ್ದರು. ನಿತ್ಯದ ವೇದಪಾಠಕ್ಕೆ ಹೋಗುತ್ತಿದ್ದ ನಾನು ಅವರ ಕಷ್ಟ-ಸುಖ ವಿಚಾರಿಸಿದಾಗ ತುಂಬ ಸಮಾಧಾನದಿಂದಲೇ ಉತ್ತರಿಸುತ್ತಿದ್ದರು:

“ಇಷ್ಟು ವರ್ಷ ಅವರು ನಮಗೆ ಮಾಡಿಲ್ಲವೇ? ಈಗ ನಾನಲ್ಲದೆ ಮತ್ತೆ ಯಾರು ಯಾಕೆ ಮಾಡಬೇಕು? ಇದು ನನಗೆ ಭಗವಂತನೇ ಕೊಟ್ಟಿರುವ ಅವಕಾಶ. ಈ ಸೇವೆ ನನ್ನಿಂದ ಅವರಿಗೆ ಸಲ್ಲಬೇಕು. ಮಕ್ಕಳಿಗೂ ಹೇಳಿದ್ದೀನಿ, ‘ನೀವು ನಿಮ್ಮ ಪಾಡಿಗೆ ಬೇರೆ ಮನೆಯಲ್ಲಿರಿ, ಮೊಮ್ಮಕ್ಕಳಿಗೆಲ್ಲ ಇದನ್ನು ನೋಡಿ ಮುಜುಗರವಾಗುವುದು ಬೇಡ’ ಎಂದು.+++(4)+++ ನನಗೇನು, ಹೇಗೋ ನಡೆದುಹೋಗುತ್ತದೆ. ಊಟ-ತಿಂಡಿಗೆಲ್ಲ ವ್ಯವಸ್ಥೆ ಆಗಿದೆ. ಬಂಧು-ಬಳಗ ಬಂದು ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ.”

ನನಗೆ ಮಾತ್ರ ಶೇಷಣ್ಣನವರ ಪರಿಸ್ಥಿತಿ ತುಂಬ ಕಷ್ಟದ್ದೆನಿಸಿತು. ಆದರೆ ಅವರ ಮನೋಬಲ, ಧರ್ಮಶ್ರದ್ಧೆಗಳು ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವು. ಸುಮಾರು ಆರು ವರ್ಷಗಳ ಕಾಲ ಶಾರದಮ್ಮನವರ ಪರಿಸ್ಥಿತಿ ಹೀಗೆಯೇ ಇತ್ತು; ದಿನದಿನಕ್ಕೆ ಮತ್ತಷ್ಟು ಹದಗೆಟ್ಟಿತೆಂದೇ ಹೇಳಬೇಕು. ಶೇಷಣ್ಣನವರು ಮಾತ್ರ ಒಂದಿಷ್ಟೂ ಉಪಶಾಂತಿಯನ್ನು ಕೆಡಿಸಿಕೊಳ್ಳಲಿಲ್ಲ. ಎಂದಿನಂತೆ ಅವರ ಅಧ್ಯಯನ, ಅಧ್ಯಾಪನ, ಲೇಖನಗಳು ಸಾಗಿದವು.

* * *

ಶಾರದಮ್ಮನವರ ಅವಸಾನದ ಬಳಿಕ ಮನೆಗೆಲ್ಲ ಅವರೊಬ್ಬರೇ ಆದರು. ತುಂಬ ಹಿಂದೆ ಚಿಕ್ಕದಾಗಿದ್ದ ಮನೆ ಮಗ ಪಾರ್ಥಸಾರಥಿಯ ಮದುವೆಯ ಬಳಿಕ ವಿಸ್ತಾರಗೊಂಡು ಕಟ್ಟಡ ದೊಡ್ಡದಾಗಿತ್ತು; ಮಹಡಿಯೂ ಸೇರಿದಂತೆ ಮನೆ ಬೆಳೆದಿತ್ತು. ಇಷ್ಟು ದೊಡ್ಡ ಮನೆಯನ್ನು ಗಮನಿಸಿಕೊಂಡು ಒಂಟಿಯಾಗಿ ಅಲ್ಲಿಯೇ ಉಳಿಯುವುದು ಕಷ್ಟವೆಂದು ಮಗ-ಸೊಸೆ ಅನುನಯಿಸಿದರೂ ಶೇಷಣ್ಣನವರು ಸಸೇಮಿರಾ ಒಪ್ಪಿಕೊಳ್ಳಲಿಲ್ಲ. ಅನುದಿನವೂ ಮಗನ ಬರುವಿಕೆ, ಹೋಗುವಿಕೆ ಇದ್ದೇ ಇತ್ತು. ವಾರಕ್ಕೊಮ್ಮೆ ಮಗನ ಮನೆಗೆ ಅವರು ಹೋಗುತ್ತಲೂ ಇದ್ದರು. ಅದನ್ನು ವಿನೋದವಾಗಿ,

“ವಾರಕ್ಕೊಂದು ದಿವಸ ಪಾರ್ಥಸಾರಥಿಯ ಸಾರಥ್ಯದಲ್ಲಿ ಇಲ್ಲಿಂದ ಅಲ್ಲಿಗೆ ನನ್ನ ಮೆರವಣಿಗೆ ಆಗುತ್ತದೆ. ಊಟ-ತಿಂಡಿಗೆಲ್ಲ ವ್ಯವಸ್ಥೆಯಾಗಿದೆ. ಕಸ-ಮುಸುರೆಗೆ ಕೆಲಸದವರಿದ್ದಾರೆ. ಸಂಪರ್ಕಕ್ಕೆ ಫೋನಿದೆ. ಬಂದುಹೋಗುವ ಬಂಧುಗಳೂ ವಿದ್ಯಾರ್ಥಿಗಳೂ ಬೇಕಾದಷ್ಟು ಜನರಿದ್ದಾರೆ. ಇನ್ನೇಕೆ ಈ ಮನೆ ಬಿಟ್ಟು ತೆರಳಬೇಕು?”

ಎನ್ನುತ್ತಿದ್ದರಾದರೂ ಆಳದಲ್ಲಿ ಅವರಿಗೆ ತಮ್ಮ ಕಷ್ಟಾರ್ಜಿತದ ಮನೆಯಲ್ಲಿ ತಾವು ಕಳೆದ ಬದುಕಿನೊಡನೆ ಗಾಢವಾದ ನಂಟಿತ್ತೆಂದು ಯಾರೂ ಊಹಿಸಬಹುದು. ಆದರೆ ಇದಕ್ಕೂ ಮಿಗಿಲಾದ ಘನತೆ ಅವರ ನಿರ್ಣಯದಲ್ಲಿತ್ತು.

ಯಾವಾಗಲೋ ಒಮ್ಮೆ ತಾವೇ ವಿಧಿಸಿಕೊಂಡ ಅವರ ಈ ಏಕಾಂತವಾಸದ ಬಗೆಗೆ ನಾನು ಪ್ರಶ್ನಿಸಿದಾಗ ನಕ್ಕು ನುಡಿದಿದ್ದರು:

“ನಾವೆಲ್ಲ ಎಲ್ಲಿ ಒಂಟಿಯಾಗಿರುತ್ತೇವೆ? ವಿಶ್ವೇದೇವತೆಗಳೇ ನಮ್ಮ ಜೊತೆ ಇದ್ದಾರೆ. ಪಂಚಭೂತಗಳು, ದಿಕ್ಪಾಲಕರು, ಸೂರ್ಯ-ಚಂದ್ರರು ಸದಾ ನಮ್ಮೊಡನೆ ಇಲ್ಲವೇ?”+++(4)+++

ಎಂದು. ಅವರಿಂದ ನಿರಾಲೋಚಿತವಾಗಿ ಬಂದ ಈ ಉತ್ತರವನ್ನು ಕೇಳಿ ನಾನು ಭವ್ಯತಾನುಭೂತಿಯಿಂದ ತತ್ತರಿಸಿದ್ದೆ. ಇದು ನಿಜವಾಗಿ ವೇದವನ್ನು ನಚ್ಚಿಕೊಂಡವರ ನೆಲೆಯೆಂದಿನಿಸಿತ್ತು.

ನಾನು ಯಾವುದನ್ನೂ ಸುಮ್ಮನೆ ಬಿಡುವ ಘಟವಲ್ಲ. ಈ ವಿಷಯವನ್ನು ಮತ್ತೆ ಮತ್ತೆ ಪ್ರಕಾರಾಂತರವಾಗಿ ಕೇಳುತ್ತಿದ್ದೆ:

“ನೀವು ಹೇಳಿದ್ದು ಪರಮಾರ್ಥವಾಯಿತು. ಆದರೆ ವ್ಯವಹಾರವೆನ್ನುವುದು ಒಂದು ಇದೆಯೆಲ್ಲ? ಅದಕ್ಕಾದರೂ ಬೆಲೆ ಕೊಡಬೇಕು. ಪಾರ್ಥಸಾರಥಿಯವರ ಮನೆ ಚೆನ್ನಾಗಿದೆ. ಈಚೆಗಂತೂ ನಮ್ಮ ಮನೆಯ ಹತ್ತಿರಕ್ಕೇ ಬಂದಿದ್ದಾರೆ. ವಿಶಾಲವಾದ ಮನೆ, ಸೊಗಸಾದ ವಾತಾವರಣ, ಯಾವುದೇ ವಿಕ್ಷೇಪವಿಲ್ಲದ ಶಾಂತಸುಂದರಪರಿಸರ. ಅವರೂ ಪಾಪ ನಿಮ್ಮ ಆಗಮನಕ್ಕಾಗಿ ಕಾದಿದ್ದಾರೆ.”

ನನ್ನ ಈ ವರಸೆಯನ್ನು ಅವರು ಬಹಳ ಸುಲಭವಾಗಿ ಎದುರಿಸಿದ್ದರು:

“ವ್ಯವಹಾರವೇನು, ಪರಮಾರ್ಥವೇನು; ಎಲ್ಲ ಒಂದೇ. ಆದರೂ ನಿಮ್ಮ ಸಮಾಧಾನಕ್ಕೆ ಒಂದು ಮಾತು ಹೇಳುತ್ತೇನೆ. ವೇದಪಾಠಕ್ಕೆ ಬರುವವರಿಗೆ ಈ ಮನೆಯಲ್ಲಿ ತುಂಬ ಸೌಕರ್ಯವಿದೆ. ಬಿಡುಬೀಸಾಗಿ ಬರುತ್ತಾರೆ, ಹೋಗುತ್ತಾರೆ. ಈ ಸ್ವಾತಂತ್ರ್ಯ ಅಪಾರ್ಟ್ಮೆಂಟುಗಳಲ್ಲಿ ಇರುವುದಿಲ್ಲ. ಅಲ್ಲೆಲ್ಲ ತಮ್ಮತಮ್ಮದೇ ಜಗತ್ತಿನಲ್ಲಿರುವ ಜನ. ಅದೂ ಅಲ್ಲದೆ ನನ್ನ ಹತ್ತಿರ ವೇದ ಕಲಿಯುವುದಕ್ಕೆ ಬರುವ ಜನರೆಲ್ಲ ಹೆಚ್ಚಾಗಿ ಹಳೆಯ ಕಾಲದವರು, ಸಂಪ್ರದಾಯಸ್ಥರು, ಮಧ್ಯಮವರ್ಗದವರು. ಇವರಿಗೆ ಅತ್ಯಾಧುನಿಕವಾದ ಅಪಾರ್ಟ್ಮೆಂಟುಗಳ, ಎನ್‌ಕ್ಲೇವ್‌ಗಳ ಪರಿಸರ ಸಂಕೋಚ ತರಬಹುದು. ಗೇಟಿನ ಹತ್ತಿರವೇ ಒಂದು ಸಹಿ, ಒಳಗೆ ಬಂದಮೇಲೆ ಮತ್ತೊಂದು ಸಹಿ, ಇದರ ಮಧ್ಯದಲ್ಲಿ ಫೋನು ಮಾಡಬೇಕು … ಇಷ್ಟೆಲ್ಲ ನಿಯಮಗಳು ಇರುವ ಜಾಗದಲ್ಲಿ ಇಂಥ ಜನಕ್ಕೆ ಮುಜುಗರವಾಗುತ್ತದೆ.+++(4)+++ ಇದು ಕ್ರಮೇಣ ಅವರು ಪಾಠಕ್ಕೇ ಬರದಂತೆ ಮಾಡುತ್ತದೆ. ನನ್ನ ಮಗ-ಸೊಸೆ ಅಲ್ಲಿ ಚೆನ್ನಾಗಿದ್ದಾರೆ, ಆ ವ್ಯವಸ್ಥೆ ಅವರಿಗೆ ಸರಿ. ನಾನು ಇಲ್ಲಿ ಚೆನ್ನಾಗಿದ್ದೀನಿ, ಈ ವ್ಯವಸ್ಥೆ ನನಗೆ ಸರಿ. ಹೇಗೂ ವಾರಕ್ಕೊಮ್ಮೆ ಮೆರವಣಿಗೆ ನಡೆಯುತ್ತಲೇ ಇರುತ್ತದಲ್ಲಾ.”

ಶೇಷಣ್ಣನವರ ಮಾತಿಗೆ ಮೂಕನಾಗಿ ದಂಡವತ್ ಪ್ರಣಾಮ ಸಲ್ಲಿಸಿದ್ದೆ. ಯಾರನ್ನೂ ದೂರದ, ಯಾವುದರಲ್ಲಿಯೂ ಆಗ್ರಹವಿಲ್ಲದ, ಆದರೆ ತನ್ನ ಉದ್ದೇಶದಲ್ಲಿ ಸ್ವಲ್ಪವೂ ರಾಜಿಯಿಲ್ಲದ ಈ ಹದ ಅದೆಷ್ಟು ಜನ್ಮಗಳ ತಪಸ್ಸಿನ ಫಲವೋ! ಪಾರ್ಥಸಾರಥಿಯವರ ಹೊಸಮನೆಯ ಗೃಹಪ್ರವೇಶಕ್ಕೆ ಶೇಷಣ್ಣನವರೇ ಮುಂದಾಗಿ ನಿಂತಿದ್ದರು. ವೈದಿಕವೈಭವದಿಂದ ಎಲ್ಲ ಬಂಧು-ಮಿತ್ರರ ಜೊತೆಯಲ್ಲಿ ಪಾಂಕ್ತವಾಗಿ ಸಮಾರಂಭ ಸಾಗಿಸಿದ್ದರು. ನನ್ನೊಡನೆ ಸಹಪಂಕ್ತಿಭೋಜನವನ್ನು ಮಾಡಬೇಕೆಂದೇ ಕಾದುಕೊಂಡಿದ್ದರು. ಅದೇ ಅವರೊಡನೆ ನಾನು ಮಾಡಿದ ಕಡೆಯ ಊಟ. ಇಷ್ಟೆಲ್ಲ ವಿಶ್ವಾಸ-ವಾತ್ಸಲ್ಯಗಳಿದ್ದರೂ ಅವರಿಗೆ ಅವರದಾದ ಗುರಿಯಲ್ಲಿ ನಿಶ್ಚಯವಿತ್ತು; ಅದರಲ್ಲಿ ನಯವೂ ಇತ್ತು.

* * *

ಸನಾತನಧರ್ಮದ ಅವಿಭಾಜ್ಯಾಂಗವೇ ಆದ ಸರಳಸಂಯಮದ ಜೀವನ ಶೇಷಣ್ಣನವರಿಗೆ ಸಹಜವಾಗಿಯೇ ಅಳವಟ್ಟಿತ್ತು. ನಿಯತವಾದ ವ್ಯಾಯಾಮ, ಹಿತವೆನಿಸುವ ಆಹಾರನಿಯಮ, ಏಕಾದಶಿಯಂಥ ನಿರಶನ ವ್ರತಗಳು, ನಿಸರ್ಗಚಿಕಿತ್ಸೆ, ತಿಂಗಳಿಗೊಂದು ದಿನ ಮೌನ+++(5)+++ ಇತ್ಯಾದಿ ಶಿಸ್ತುಗಳು ಅವರ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿದ್ದವೆನ್ನಬೇಕು. ಇಂತಾದರೂ ಕೊನೆಕೊನೆಯ ವರ್ಷಗಳಲ್ಲಿ ಬರೆಯುವಾಗ ಅವರ ಕೈ ತುಂಬ ನಡುಗುತ್ತಿತ್ತು. ಸಂಧಿಗಳಲ್ಲಿ ನೋವೂ ಸಾಕಷ್ಟಿತ್ತು. ಆದರೂ ಅವನ್ನು ಹಾಡಿಕೊಂಡು ಹಳಿಯದೆ ವ್ರತಬುದ್ಧಿಯಿಂದ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಆ ಕಾಲದಲ್ಲಿ ಅವರ ಎಂದಿನ ವೇಷಕ್ಕೆ ಉಣ್ಣೆಯ ಟೋಪಿ, ತೋಳಿಲ್ಲದ ಸ್ವೆಟರ್, ಕಾಲುಚೀಲ ಮತ್ತು ಕೈಪಟ್ಟಿ ಸೇರಿದ್ದವು. “ಇದೇನು ಹೊಸ ವೇಷ?” ಎಂದು ನಾನು ಸಲುಗೆಯಿಂದ ಕೇಳಿದಾಗ, “ನಮ್ಮ ಆರೋಗ್ಯವನ್ನು ನಮ್ಮ ಕೈಯಲ್ಲೇ ಇಟ್ಟುಕೊಳ್ಳುವುದಕ್ಕೆ ಇದೂ ಒಂದು ಬಗೆಯ ಯೋಗ” ಎಂದಿದ್ದರು. ಶೇಷಣ್ಣನವರು ಮೊದಲಿನಿಂದಲೂ ಯೋಗಾಭ್ಯಾಸ ಮಾಡುತ್ತಿದ್ದವರು. ಅವರದ್ದು ಸರ್ವಾರ್ಥಗಳಲ್ಲಿಯೂ ಸಂಪೂರ್ಣವಾದ ಅಷ್ಟಾಂಗಯೋಗ. ಯಮ-ನಿಯಮಗಳ ಅನುಷ್ಠಾನ ಉಸಿರಾಟದಂತಿತ್ತು. ಹಲವು ಬಗೆಯ ಆಸನಗಳನ್ನು ಮಾಡುತ್ತಿದ್ದರು. ಎಂಬತ್ತರ ವಯಸ್ಸಿನಲ್ಲಿಯೂ ಶೀರ್ಷಾಸನ ಹಾಕುತ್ತಿದ್ದರು!+++(5)+++ ಪ್ರಾಣಾಯಾಮವಂತೂ ಅವರಿಗೆ ಕರ್ಮಕಾಂಡದ ಒಂದು ಅಂಗವಷ್ಟೇ ಆಗಿರದೆ ಆತ್ಮನಿಯಂತ್ರಣದ ಬಗೆಯೂ ಆಗಿತ್ತು. ಇನ್ನು ಉಳಿದ ನಾಲ್ಕು ಅಂಗಗಳು ಅವರಿಗೆ ಸಿದ್ಧಿಸಿದ್ದುದರಲ್ಲಿ ನನಗಾವ ಸಂದೇಹವೂ ಇಲ್ಲ. ಅವು ಅಂತರಂಗದ ಅಂಶಗಳಾದ ಕಾರಣ ಅಚಿಂತ್ಯ, ಸ್ವಸಂವೇದ್ಯ.

ಇಂಥ ಪರಿಸ್ಥಿತಿಯಲ್ಲಿಯೂ ಮನೆಗೆ ಬಂದವರಿಗೆ ಆತಿಥ್ಯ ಸಲ್ಲುತ್ತಿತ್ತು. ತಾವೇ ಕಾಯಿಸಿಟ್ಟ ಹಾಲು, ಹೆಚ್ಚಿದ ಹಣ್ಣು ಸದಾ ಸಿದ್ಧವಿರುತ್ತಿದ್ದವು. ಬಾದಾಮಿ, ಒಣದ್ರಾಕ್ಷಿ, ಖರ್ಜೂರ ಮುಂತಾದವನ್ನು ಬಂದವರಿಗೆ ಧಾರಾಳವಾಗಿ ಹಂಚುತ್ತಿದ್ದರು. ನಿತ್ಯಾಹ್ನಿಕ, ದೇವತಾರ್ಚನೆ, ಬ್ರಹ್ಮಯಜ್ಞಾದಿಗಳು ಒಂದು ದಿನವೂ ತಪ್ಪಲಿಲ್ಲ. ಭಾರತೀಯಸಂಸ್ಕೃತಿಯಲ್ಲಿ ಆಸಕ್ತಿಯುಳ್ಳ ನನ್ನ ಹಲಕೆಲವು ತರುಣಮಿತ್ರರನ್ನು ಯಾವಾಗಲಾದರೂ ನಾನು ಕರೆದುಕೊಂಡು ಹೋಗಿ ಆವರಿಗೆ ಪರಿಚಯಿಸಿದರೆ ತುಂಬ ಸಂತೋಷಪಡುತ್ತಿದ್ದರು. ಎಂಥ ಚಿಕ್ಕ ವಯಸ್ಸಿನವರನ್ನೂ ಪ್ರೀತಿ-ಗೌರವಗಳಿಂದ ಕಾಣುತ್ತಿದ್ದರು. ಆಗೆಲ್ಲ ಹೇಳುತ್ತಿದ್ದುದುಂಟು: “ನೀವೆಲ್ಲ ಬಂದರೆ ನನಗೆ ನಿಮ್ಮ ನಿಮ್ಮ ಗೋತ್ರಪ್ರವರ್ತಕರಾದ ಮಹರ್ಷಿಗಳೇ ಬಂದಂತೆ ಭಾವ ತುಂಬಿಬರುತ್ತದೆ” ಎಂದು.+++(5)+++ ಇಂಥ ವಿಶ್ವಾಸಕ್ಕೆ ನಾವೇನು ಪಡಿ ತೆರೋಣ?

ಹೀಗೆ ಮನೆಗೆ ಬಂದ ಆತ್ಮೀಯರಿಗೆಲ್ಲ ತಮ್ಮ ವಿಧುರಜೀವನದಲ್ಲಿಯೂ ಆತಿಥ್ಯ ಸಲ್ಲಿಸುತ್ತಿದ್ದ ಶೇಷಣ್ಣನವರು ತಾವು ಮಾತ್ರ ಯಾರಿಂದಲೂ ಯಾವುದೇ ತಿಂಡಿ-ತಿನಿಸುಗಳನ್ನು ಅಷ್ಟಾಗಿ ಸ್ವೀಕರಿಸುತ್ತಿರಲಿಲ್ಲ. ಇದಕ್ಕೆ ಮಡಿವಂತಿಕೆ ಕಾರಣವಲ್ಲ. ಒಮ್ಮೆ ಅವರು ರುಚಿಕಟ್ಟಾದ ಅವಲಕ್ಕಿಯ ಪುರಿಯನ್ನು ಮಾಡಿಕೊಳ್ಳುವುದನ್ನು ಕಂಡ ಶ್ರೀವತ್ಸ ಗುರುಗಳಿಗೇಕೆ ಈ ತೊಂದರೆ ಎಂದು ತಾನೇ ಮಾಡಿ ತಂದುಕೊಟ್ಟ. ಆಗ ಅದನ್ನು ನಿರಾಕರಿಸದ ಶೇಷಣ್ಣನವರು ಇದು ಮತ್ತೊಮ್ಮೆಯೂ ಪುನರಾವರ್ತನೆಯಾದಾಗ ಹೇಳಿದರಂತೆ:

“ನೋಡಿ, ನೀವೇನೋ ಪ್ರೀತಿಯಿಂದ ತಂದುಕೊಡುತ್ತೀರಿ. ಆದರೆ ನಾನು ಇಂಥದ್ದನ್ನೆಲ್ಲ ಹೆಚ್ಚಾಗಿ ತೆಗೆದುಕೊಳ್ಳ ಬಾರದು. ಏಕೆಂದರೆ ನಾನೀಗ ನನ್ನ ಮಗ, ಸೊಸೆ, ಮೊಮ್ಮಕ್ಕಳ ನೆರಳಿನಲ್ಲಿದ್ದೇನೆ. ಅವರು ಏನಾದರೂ ನಾವು ನಮ್ಮ ತಂದೆಗೆ ಮಾಡುತ್ತಿರುವುದು ಸಾಕಾಗಲಿಲ್ಲವೇ ಏನೋ ಎಂದು ಭಾವಿಸಿಕೊಂಡು ನೊಂದರೆ ಎಷ್ಟು ಅನ್ಯಾಯ!+++(5)+++ ನಾವು ಯಾವತ್ತೂ ನಮ್ಮ ಹತ್ತಿರದವರಿಗೆ ಅವರು ನಮಗಾಗಿ ಮಾಡುತ್ತಿರುವುದು ಸಾಲದು ಎನ್ನುವ ಭಾವನೆಯನ್ನು ಬರಿಸಬಾರದು. ದಯಮಾಡಿ ನೀವೂ ಇದನ್ನು ತಪ್ಪಾಗಿ ತಿಳಿಯಬೇಡಿ.”

ಇಂಥ ಸಂವೇದನಶೀಲರನ್ನು ಯಾರು ತಾನೆ ತಪ್ಪಾಗಿ ತಿಳಿದಾರು?

ಸಾಮಾನ್ಯವಾಗಿ ನೀತಿ-ನಿಯಮಗಳನ್ನು ಕುರಿತಾಗಲಿ, ಮಾನವಸಂಬಂಧಗಳ ಸೂಕ್ಷ್ಮತೆಯನ್ನು ಕುರಿತಾಗಲಿ ವಿವರಿಸುವಾಗ ಸೂತ್ರಪ್ರಾಯವಾದ ವಿಧಾಯಕವಾಕ್ಯಗಳಿಗಿಂತ ಇಂಥ ಸಂದರ್ಭಗಳು ತುಂಬ ಸಮರ್ಥವಾಗಿ ಉದ್ದಿಷ್ಟಪರಿಣಾಮವನ್ನು ಬೀರುತ್ತವೆ. ಈ ಕಾರಣದಿಂದಲೇ ಸಜ್ಜನರ ಆಚಾರ (ಎಲ್ಲ ನಿಟ್ಟಿನಿಂದಲೂ ಒಳಿತೆನಿಸುವ ವರ್ತನೆ) ಧರ್ಮಶಾಸ್ತ್ರಕ್ಕೆ ಪರಮಪ್ರಮಾಣವೆಂದು ಹೇಳಿರುವುದು:

“ಅಥ ಯದಿ ತೇ ಕರ್ಮವಿಚಿಕಿತ್ಸಾ ವಾ ವೃತ್ತವಿಚಿಕಿತ್ಸಾ ವಾ ಸ್ಯಾತ್ । ಯೇ ತತ್ರ ಬ್ರಾಹ್ಮಣಾಃ ಸಂಮರ್ಶಿನಃ । ಯುಕ್ತಾ ಆಯುಕ್ತಾಃ । ಅಲೂಕ್ಷಾ ಧರ್ಮಕಾಮಾಃ ಸ್ಯುಃ । ಯಥಾ ತೇ ತತ್ರ ವರ್ತೇರನ್ । ತಥಾ ತತ್ರ ವರ್ತೇಥಾಃ ॥” (ತೈತ್ತಿರೀಯೋಪನಿಷತ್ತು, ೧.೧೧)

ಹೀಗೆಯೇ ಬಂದವರು ಹೊರಟಾಗ ಗೇಟಿನವರೆಗೆ ಬಂದು ಬೀಳ್ಗೊಡುತ್ತಿದ್ದರು. ಅವರಿಗೆ ದೈಹಿಕ ದಾರ್ಢ್ಯವಿದ್ದಾಗ ಅವರ ಮನೆಯ ಮುಂದಿನ ರಸ್ತೆಯಂಚಿನವರೆಗೂ ಬಂದು ಬೀಳ್ಗೊಡುತ್ತಿದ್ದರು.+++(5)+++ ಆದರೆ ಅವರ ಕೊನೆಕೊನೆಯ ವರ್ಷಗಳಲ್ಲಿ ಈ ಸೌಲಭ್ಯವಿಲ್ಲದಿದ್ದಾಗ ಅದು ಕೇವಲ ಗೇಟಿಗೆ ಸೀಮಿತವಾಗಿತ್ತು. ಇದನ್ನೂ ಅವರು ವಿನೋದವಾಗಿ ಹೇಳುತ್ತಿದ್ದರು:

“ಧರ್ಮಶಾಸ್ತ್ರಗಳಲ್ಲಿ ಹೇಳುತ್ತಾರಲ್ಲ, ನೀರಿನ ಆಸರೆಯಿರುವ ಜಾಗದವರೆಗೆ ಬಂದು ಬೀಳ್ಗೊಡಬೇಕು ಎಂದು; ಈಗ ಮನೆಯ ಮುಂದಿರುವ ಮ್ಯಾನ್ ಹೋಲ್‌ವರೆಗೆ ಬಂದು ಬೀಳ್ಗೊಟ್ಟರೆ ಅದೇ ಜಲಸ್ಥಾನ”

ಎಂದು. ಹೀಗೆ ಬೀಳ್ಗೊಡುವಾಗಲೆಲ್ಲ ನಿರಪವಾದವಾಗಿ ಸ್ವಸ್ತಿವಾಚನಮಂತ್ರಗಳನ್ನು ಹೇಳಿ ಎಲ್ಲರನ್ನೂ ಹಾರೈಸಿ ಕಳುಹುತ್ತಿದ್ದರು. ಆ ಸಾಮಗಳ ಹಿಂದಿರುವ ಆರ್ದ್ರತೆಯನ್ನು ಅನುಭವಿಸಿದವರೇ ಅವರ ಆತ್ಮೀಯತೆಯನ್ನು ಬಲ್ಲರು.

* * *

ಶೇಷಣ್ಣನವರು ಅವರ ಕಡೆಕಡೆಯ ದಿನಗಳಲ್ಲಿಯೂ ಆನಂದದ ಚಿಲುಮೆಯಾಗಿದ್ದರು, ಸ್ವಾವಲಂಬಿಗಳಾಗಿ ಬಾಳಿದ್ದರು. ಆ ದಿನಗಳಲ್ಲೊಮ್ಮೆ ಅವರನ್ನು ಕಾಣಲು ಹೋದಾಗ ಲೋಕಾಭಿರಾಮವಾದ ಮಾತಿನ ನಡುವೆ, “ಸುಮಾರು ತೊಂಬತ್ತೈದು ವರ್ಷಗಳಷ್ಟು ವಿಸ್ತರಿಸಿಕೊಂಡಿರುವ ನಿಮ್ಮ ಈ ದೀರ್ಘಜೀವನದ ಸಂಧ್ಯೆಯಲ್ಲಿ ಇದೀಗ ನಿಮ್ಮೊಳಗೆ ಯಾವುದಾದರೂ ಕೊರತೆ ಉಳಿದುಕೊಂಡಿದೆಯೇ? ಮತ್ತಾವುದಾದರೂ ಅಪೇಕ್ಷೆ ಇದೆಯೇ?” ಎಂದು ಕೇಳಿದೆ. ನನ್ನದು ತುಂಬ ಸಾಹಸದ ಮಾತೆಂದು ಯಾರೂ ಹೇಳಿಯಾರು. ಅದರೆ ಇಂಥ ಮಾತುಗಳನ್ನು ಹಿರಿಯರನೇಕರಲ್ಲಿ ಕೇಳಿದ್ದ ಕಾರಣ ನನಗೆ ಯಾವುದೇ ಸಂಕೋಚ ಕಾಡಲಿಲ್ಲ. ಅಲ್ಲದೆ ಶೇಷಣ್ಣನವರು ನನ್ನ ವಿಷಯದಲ್ಲಿ ತುಂಬ ವಾತ್ಸಲ್ಯವುಳ್ಳವರು. ಆಗ ಅವರು ಸಹಜವಾಗಿ, ಯಥಾಲಾಪವೆಂಬಂತೆ ಹೇಳಿದ ಮಾತಿದು:

“ಬೇರೆ ಯಾವ ಕೊರತೆ-ಕೋರಿಕೆಗಳೂ ಇಲ್ಲ; ಒಂದು ಕೊರತೆ ಮಾತ್ರ ಉಳಿದುಹೋಗಿದೆ. ಹಗಲಿಡೀ ಭಗವಂತನ ಧ್ಯಾನದಲ್ಲಿ, ವೇದಪುರುಷನ ಸೇವೆಯಲ್ಲಿ ಹೊತ್ತು ಕಳೆಯುತ್ತದೆ. ಮಲಗುವಾಗ ಕೂಡ ದೇವರ ಸ್ಮರಣೆ ಮಾಡಿಕೊಂಡು ನಿದ್ರೆ ಬರುವವರೆಗೂ ಹೊತ್ತು ಕಳೆಯುವುದಾಗುತ್ತದೆ. ಬೆಳಗ್ಗೆ ಏಳುವಾಗ ಮಾತ್ರ ಜ್ಞಾಪಕ ಮಾಡಿಕೊಂಡು ಭಗವನ್ನಾಮಸ್ಮರಣೆಗೆ ತೊಡಗಬೇಕು. ನಿದ್ರೆಯಿಂದ ಏಳುವಾಗಲೇ ನನ್ನ ಉಸಿರಾಟದಷ್ಟು ಸಹಜವಾಗಿ ಭಗವಂತನ ಚಿಂತನೆ ಹೊರಹೊಮ್ಮುವುದಿಲ್ಲ. ಅದೇ ನನಗಿರುವ ಕೊರತೆ.”+++(5)+++

“ಸ ಏಷ ರಸಾನಾಂ ರಸತಮಃ ಪರಮಃ ಪರಾರ್ಧ್ಯಃ” (ಛಾಂದೋಗ್ಯೋಪನಿಷತ್ತು, ೧.೧.೩)