ನಮ್ಮೂರು ಗೊರೂರು

ನಮ್ಮೂರು ಗೊರೂರು

“ನಮ್ಮೂರು ಗೊರೂರು” ಎಂದು ಬೇರೆ ಊರಿನಲ್ಲಿರುವ ಗೊರೂರಿನವರು ಹೇಳಿದಾಗ ಕೇಳುವವರು, “ಗೊರೂರು ರಾಮಸ್ವಾಮಯ್ಯಂಗಾರರ ಗೊರೂರೇನು?” ಎಂದು ತತ್ಕ್ಷಣ ಕೇಳುತ್ತಾರೆ.“ಹೌದು, ಅದೇ ಗೊರೂರು” ಎಂದು ಹೆಮ್ಮೆಯಿಂದ ನಾವು ಗೊರೂರಿನವರು ಹೇಳಿಕೊಳ್ಳುತ್ತೇವೆ. ಗೊರೂರಿಗೂ ಡಾ. ಗೊರೂರುರಾಮಸ್ವಾಮಿ ಅಯ್ಯಂಗಾರರಿಗೂ ಎಷ್ಟರಮಟ್ಟಿಗೆ ಒಂದು ಅವಿನಾಭಾವ ಸಂಬಂಧ ಬೆಳೆಯಿತು ಎಂದರೆ ಅವರ ಬರಹಗಳನ್ನು ಮೆಚ್ಚಿದ ರಸಿಕರು ಅವರನ್ನು ಡಾ. ಗೊರೂರು ಎಂದೇ ಕರೆದರು. ಅವರ ಬರಹಗಳಲ್ಲಿ ಕಾಣುವ ಗ್ರಾಮಸ್ಥರು, ಅವರ ನಡೆ,ನುಡಿ, ಹಾಸ್ಯಗಳ ಮೂಲವನ್ನು ಗೊರೂರು ಗ್ರಾಮ ಅವರಿಗೆ ಕೊಟ್ಟಿದ್ದಕ್ಕೆ ಪ್ರತ್ಯುಪಕಾರವೆಂಬಂತೆ ಡಾ.ಗೊರೂರರು ಯಾವುದೋ ಅಭುಕ್ತಮೂಲೆಯಲ್ಲಿದ್ದ ಒಂದು ಚಿಕ್ಕ ಗ್ರಾಮದ ಹೆಸರನ್ನು ಕರ್ಣಾಟಕದಲ್ಲಿ,ಇಂಡಿಯಾದಲ್ಲಿ, ಅಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಪರಿಚಯಮಾಡಿಕೊಟ್ಟರು. ಅವರ ಯಶಸ್ಸೆ ಗೊರೂರಿನ ತೋರುದೀಪವಾಯಿತು.

ಈ ಲೇಖನವನ್ನು ಬರೆಯುತ್ತಿರುವುದರ ಮುಖ್ಯ ಕಾರಣ ನಾನು ಗೊರೂರಿನವನೆಂದಲ್ಲ. ಡಾ. ಗೊರೂರರ ಕುಟುಂಬಕ್ಕೆ ಸೇರಿದವನೆಂದು..ಗೊರೂರಿನಲ್ಲಿ ಡಾ.ಗೊರೂರವರ ವಂಶಕ್ಕೆ ಸೇರಿದವರೆಂದು ಹೇಳುವ ಮನೆಗಳು ಮೂರು ಇದ್ದವು. ಈ ವಂಶದ ಪೂರ್ವಿಕರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಎಂಬ ಊರಿನಿಂದ ಗೊರೂರಿಗೆ ವಲಸೆ ಬಂದ ಶ್ರೀವೈಷ್ಣವರು.ಈ ಮೂರು ಮನೆಯವರನ್ನು “ಕಡಬದಮನೆಯವರು” ಎಂದೇ ಗೊರೂರಿನವರು ಕರೆಯುತ್ತಿದ್ದರು. ಡಾ. ಗೊರೂರವರ ತಂದೆ ಪ್ರಾತಃ ಸ್ಮರಣೀಯ ಕುಟ್ಟಯ್ಯಂಗಾರ್ಯರು ಸಂಸ್ಕೃತದಲ್ಲಿ ಅಗಾಧಪಾಂಡಿತ್ಯವನ್ನು ಪಡೆದಿದ್ದ ಶ್ರೋತ್ರಿಯರು. ಕುಟ್ಟಯ್ಯಂಗಾರ್ಯರ ಮನೆ ಯೋಗಾನರಸಿಂಹಸ್ವಾಮಿಯ ರಥದ ರಸ್ತೆಯ ದಕ್ಷಿಣಾಭಿಮುಖವಾದ ಮೊದಲ ಮನೆ. ಅವರ ಮನೆ ರಥ ನಿಲ್ಲುವ ಸ್ಥಲವನ್ನು ಎದುರು ನೋಡುತ್ತದೆ. ಅವರ ಮನೆಯ ಬಲ ಭಾಗದಲ್ಲಿಯೆ ರಸ್ತೆ ದಾಟಿದರೆ ಪರವಾಸುದೇವರ ದೇವಸ್ಥಾನ.ರಸ್ತೆಯಿಂದ ರಸ್ತೆಯವರಿಗೆ ದಕ್ಷಿಣೋತ್ತರವಾಗಿ ಹರಡಿದ್ದ ಆ ಮನೆಯಲ್ಲೆ ಡಾ ಗೊರೂರರ ಮುಕ್ಕಾಲು ಪಾಲು ವ್ಯಾಸಂಗ ಬರವಣಿಗೆ ಎಲ್ಲವೂ ನಡೆದುದು.

ನಮ್ಮ ಪೂಜ್ಯ ತಂದೆ ಶೆಲ್ವಪಿಳ್ಳೈ ಅಯ್ಯಂಗಾರ್ಯರ ಮನೆ ಬೇರೆ ರಸ್ತೆಯಲ್ಲಿದ್ದುದರೀಂದ ನನಗೆ ಡಾ. ಗೊರೂರರ ಮನೆಯಲ್ಲೇ ಹುಟ್ಟಿಬೆಳದವರಷ್ಟು ಡಾ.ಗೊರೂರವರಲ್ಲಿ ಸಲಿಗೆಯಿರಲಿಲ್ಲ. ಹಾಗಾದರೂ ಅವರೊಡನೆ ಸಂಪರ್ಕಕ್ಕೆ ಸಾಕಷ್ಟು ಅವಕಾಶವಿದ್ದಿತು. ನಮ್ಮ ತಂದೆಯವರಿಗೆ ಕುಟ್ಟಯ್ಯಂಗಾರ್ಯರಲ್ಲಿ ಅಪಾರ ಗೌರವ ವಿಶ್ವಾಸವಿದ್ದಿತು. ಆದುದರಿಂದ ಆಗಾಗ್ಗೆ ನನ್ನನ್ನು ಯಾವುದೋ ಗ್ರಂಥದ ಸಂಶಯನಿವಾರಣೆಗಾಗಿ ಅವರ ಹತ್ತಿರ ಕಳುಹಿಸುತ್ತಿದ್ದರು. ಅದೇ ಅಲ್ಲದೆ ಡ.ಗೊರೂರರ ಮೂರನೆಯ ಪುತ್ರ ಗೋವಿಂದರಾಜು [ಈಗ ಕೆನಡಾದಲ್ಲಿ ಡಾ.ಗೋವಿಂದರಾಜು, ವಿಂಡ್ಸರ್‌ ವಿಶ್ವವಿದ್ಯಾಲಯದಲ್ಲಿ ಎಮೆರಿಟಸ್‌ ಪ್ರಾಧ್ಯಾಪಕರು.] ನಾನೂ ಎಸ್ಸೆಸಲ್ಸಿ ಯವರೆಗೂ ಒಂದೇ ಬೆಂಚಿನ ಸಹಪಾಠಿಗಳು. ಇನ್ನೊಂದು ಕಾರಣ ಡಾ.ಗೊರೂರರ ತಮ್ಮಂದಿರು ಕೀರ್ತಿಶೇಷ ಪಂಡಿತ ನರಸಿಂಹಾಚಾರ್ಯರಿಗೂ ನಮ್ಮ ತಂದೆಯವರಿಗೂ ಇದ್ದ ಗುರುಶಿಷ್ಯ ಸಂಬಂಧ.ಸಂಸ್ಕೃತವನ್ನು ಕಲಿಯುವುದಕ್ಕಾಗಿ ನಮ್ಮ ತಂದೆಯವರು ವಯಸ್ಸಿನಲ್ಲಿ ದೊಡ್ಡವರಾಗಿದ್ದರೂ ಪಂಡಿತ ನರಸಿಂಹಾಚಾರ್ಯರ ಶಿಷ್ಯರಾದರು.ಈ ಕಾರಣಗಳು ಡಾ.ಗೊರೂರವರೊಡನೆಯಿದ್ದ ನನ್ನ ಸಂಪರ್ಕವನ್ನು ಬಲಪಡಿಸಿದ್ದವು.

ಡಾ.ಗೊರೂರರ ಬಹುಮುಖಪ್ರತಿಭೆಯಬಗ್ಗೆ ಅವರ ಚಟುವಟಿಕೆಗಳ ಬಗ್ಗೆ ಬರೆಯುವ ಸಾಮರ್ಥ್ಯ ನನಗೆ ಇಲ್ಲ. ಬರಹಗಾರರಾಗಿ ಹಾಸ್ಯ ಸಾಹಿತ್ಯ, ಸಣ್ಣಕಥೆಗಳು,ಕಾದಂಬರಿ, ಜೀವನಚರಿತ್ರೆ, ಅನುವಾದ, ಗಾಂಧೀ ಸಾಹಿತ್ಯ ಮುಂತಾದ ಶ್ರೇಣಿಗಳಲ್ಲಿ ಶ್ರೇಷ್ಠತೆಯನ್ನು ಪಡೆದರು. ವಾಗ್ಮಿಗಳಾಗಿ, ಗಾಂಧೀವಾದಿಗಳಾಗಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿದವರಾಗಿ, ಖಾದಿ ಗ್ರಾಮೋದ್ಯೋಗಕ್ಷೇತ್ರದಲ್ಲಿ, ಗ್ರಾಮದ ಹಾಡುಗಳ ಸಂಗ್ರಹಣಕಾರ್ಯದಲ್ಲಿ ದುಡಿದವರಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರವಾದುದು. ಅವರ ಸೇವೆಯ ಅಗಾಧತೆಯನ್ನು ನಾನು ಅಳೆಯ ಹೋದರೆ ಉಪ್ಪಿನ ಬೊಂಬೆ ಸಮುದ್ರದ ಆಳವನ್ನು ಅಳೆಯಲು ಹೋಗುವಂತಾಗುತ್ತದೆ.

ದೇಶಕ್ಕೆ ಗಾಂಧೀಜಿಯವರು ಸ್ವಾತಂತ್ರ್ಯವನ್ನು ತಂದು ಕೊಟ್ಟಾಗ ನಾನು ಇನ್ನೂ ಮಿಡಲ್‌ ಸ್ಕೂಲಿನ ವಿದ್ಯಾರ್ಥಿಯಾಗಿದ್ದೆ. ಆದರೂ ಆ ದಿನಗಳಲ್ಲಿನ ಗ್ರಾಮದ ವಾತಾವರಣವನ್ನು ನೆನೆಸಿಕೊಂಡರೆ ಈಗಲೂ ನವಿರೆದ್ದು ರೋಮಾಂಚವಾಗುತ್ತದೆ.

ಡಾ.ಗೊರೂರರ ಮತ್ತು ಅವರ ಸಹ-ಕಾರ್ಯಕರ್ತರು ಸ್ವಾತಂತ್ರ್ಯಸಮರದ ಮುಖ್ಯದಿನಗಳಲ್ಲಿ ಬೆಳಕು ಹರಿಯುವ ಕಾಲಕ್ಕೆ “ಪ್ರಭಾತಫೇರಿ” ಹೊರಡಿಸುತ್ತಿದ್ದರು. ನಾವೆಲ್ಲ ಹುಡುಗರು ಗ್ರಾಮೋದ್ಯೋಗಭವನದ ಹತ್ತಿರ ಸೇರಿ ಊರಿನ ಸುತ್ತ “ಮಹಾತ್ಮಾ ಗಾಂಧೀಜೀಕಿ ಜಯ್‌”,” ಜವಹರ್ಲಾಲ್‌ ನೆಹ್ರೂಜೀಕೀ ಜಯ್‌” , “ಗೊರೂರುರಾಮಸ್ವಾಮಿ ಅಯ್ಯಂಗಾರ್‌ ಕಿ ಜಯ್‌”,”ಗೊರೂರ್‌ ಸಂಪತ್‌ ಅಯ್ಯಂಗಾರ್‌[ ಇವರು ನನ್ನ ಚಿಕ್ಕಪ್ಪ] ಕಿ ಜಯ್‌ ಎಂದು ಉತ್ಸಾಹದಿಂದ ಕೂಗು ಹಾಕಿ, ನಮ್ಮ ಕೂಗೇ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ ಎಂಬ ಭ್ರಾಂತಿಯಿದ್ದವರಂತೆ ಮನೆಗೆ ಹಿಂತಿರುಗುತ್ತಿದ್ದೆವು. [ಗೊರೂರಿನ ಗ್ರಾಮೊದ್ಯೊಗಭವನ ಡಾ. ಗೊರೂರರು. ಗೊರೂರು ಸಂಪತ್ತಯ್ಯಂಗಾರ್ಯರು ಮತ್ತು ಅವರ ಸಹಕಾರ್ಯಕರ್ತರು ಗೊರೂರಿಗೆ ಕೊಟ್ಟ ಒಂದು ಉಡುಗೊರೆ. ಅಲ್ಲಿ ಎಣ್ಣೆಯ ಗಾಣ, ವಾಚನಾಲಯ, ಚರಖ ಮುಂತಾದ ಸೌಕರ್ಯಗಳಿದ್ದವು.]

ಈಗ ಆ ದಿನಗಳನ್ನು ನೆನೆಸಿಕೊಂಡರೆ ಡಾ. ಗೊರೂರರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಗುಣ ಅವರ ಸರಳತೆ. ಆಜಾನುಬಾಹು ಗೊರೂರರು ನದಿಯಲ್ಲಿ ಈಜಿ,ಮಿಂದು, ಒಗೆದ ಬಟ್ಟೆಯನ್ನು ತಲೆಯಮೇಲೆ ಇಟ್ಟುಕೊಂಡು ನಮ್ಮ ಮನೆಯ ಮುಂದೆ ಹಾದು ಹೋಗುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ಒಂದೇ ಮನೆಯವರಾದುದರಿಂದ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಭೋಜನ ಮಾಡುವ ಪದ್ಧತಿಯಿತ್ತು. ಆ ಊಟದ ಕೂಟಗಳಲ್ಲಿ ಗೊರೂರರು, ನಮ್ಮ ಚಿಕ್ಕಪ್ಪ ಸಂಪತ್ತಯ್ಯಂಗಾರ್‌ ಮತ್ತೆ ಇನ್ನೂ ಇತರರು ಜಗತ್ತಿನ ದೇಶದ ಸಮಸ್ಯಗಳ ಬಗ್ಗೆ ನಡೆಸುತ್ತಿದ್ದ ವಿಶ್ಲೇಷಣೆ ಊಟಕ್ಕಿಂತ ರೋಚಕವಾಗಿರುತ್ತಿದ್ದಿತು.

ದೇಶದಾದ್ಯಂತ ಖ್ಯಾತಿ ಪಡೆದಿದ್ದರೂ ಕೂಡ ಸಂಪ್ರದಾಯದ ಕಟ್ಟಲೆಗಳನ್ನು ನಡೆಸಿಕೊಂಡು ಬಂದರು. ಶಾರದ ನವರಾತ್ರಿಯಲ್ಲಿ ಪರವಾಸುದೇವರ ದೇವಸ್ಥಾನದಲ್ಲಿ ವಾಲ್ಮೀಕಿರಾಮಾಯಣದ ಪಾರಾಯಣವನ್ನು ಮಾಡುತ್ತಿದ್ದರು. ರಥೋತ್ಸವದ ಕಾಲದಲ್ಲಿ ಪುರಾಣಪ್ರವಚನವನ್ನು ತಪ್ಪದೆ ನಡೆಸುತ್ತಿದ್ದರು. ತಂದೆ ಕುಟ್ಟಯ್ಯಂಗಾರ್ಯರನ್ನು ಅವರ ಜೀವನಾಂತ್ಯದವರೆಗೂ ನೋಡಿಕೊಂಡ ಹೆಗ್ಗಳಿಕೆ ಡಾ. ಗೊರೂರು ಮತ್ತು ಅವರ ಧಮಪತ್ನಿ ಕೀರ್ತಿಶೇಷರಾದ ಮಾ.ಶ್ರೀ.ಶೇಷಮ್ಮ ಅವರಿಗೆ ಸೇರುತ್ತದೆ.

ಗೊರೂರಿನಲ್ಲ್ಲಿ ಹೈಸ್ಕೂಲಿನಲ್ಲಿ ನಾನು ಓದುತ್ತಿದ್ದಾಗ ಸ್ಕೂಲಿನಲ್ಲಿ ಒಂದು ಪ್ರಬಂಧ ಸ್ಪರ್ಧೆ ನಡೆಯಿತು. ಆ ಸ್ಪರ್ಧೆಗೆ ಡಾ.ಗೊರೂರರೇ ತೀರ್ಪುಗಾರರು. ನಾನೂ ಸ್ಪರ್ಧಿಸಿದ್ದೆ. ವಿಷಯ ದೇಶದ ಆಹಾರ ಸಮಸ್ಯೆ. ಅವರು ನನ್ನ ಪ್ರಬಂಧವನ್ನು ಓದುತ್ತಿರುವಾಗ ನಾನು ಅವರ ಮನೆಯಲ್ಲೇ ಇದ್ದೆ. ಆಗ ಅವರು ನನ್ನನ್ನು ಕರೆದು, “ಪಾಪ, [ಗೊರೂರಿನವರಿಗೆ ನನ್ನ ಹೆಸರು ಪಾಪ.]ಒಂದು ಮಿಲಿಯನ್‌ ಅಂದರೆ ಹತ್ತು ಲಕ್ಷ. ಒಂದು ಲಕ್ಷವಲ್ಲ” ಎಂದು ನನ್ನ ತಪ್ಪನ್ನು ತಿದ್ದಿದರು.

ನಾನು ಹಾಸನದಲ್ಲಿ ಓದುತ್ತಿದ್ದಾಗ ಉದಾರಿಗಳೊಬ್ಬರ ಮನೆಯ ಕೊಠಡಿಯಲ್ಲಿ ವಾಸವಾಗಿದ್ದೆ. ಕಾರಣಾಂತರದಿಂದ ಗೊರೂರರು ಹಾಸನದಲ್ಲಿ ಒಂದು ರಾತ್ರಿ ಉಳಿಯಬೇಕಾಯಿತು. ಅವರ ಸ್ನೇಹಿತರೊಡನೆ ನನ್ನ ರೂಮಿನಲ್ಲೆ ಬಂದು ಮಲಗಿದ್ದರು.

ಹಾಸನದಲ್ಲಿ ಇಂಟರ್ಮೀಡಿಯಟ್‌ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಕಾಲೇಜಿನವರ ಸಮಾರಂಭಒಂದಕ್ಕೆ ಡಾ.ಗೊರೂರರು ಮುಖ್ಯ ಅತಿಥಿಗಳಾಗಿದ್ದರು. ಆಶುಭಾಷಣಕ್ಕೆ ಪ್ರಸಿದ್ಧರಾಗಿದ್ದ ಗೊರೂರರು ನಿರರ್ಗಲವಾಗಿ ಮಾತನ್ನಾಡುತ್ತ ಅವರ ಜೀವನದ ಒಂದು ಪ್ರಸಂಗವನ್ನು ತಿಳಿಸಿ ಹಾಸ್ಯದಹೊನಲನ್ನೇ ಎಬ್ಬಿಸಿದರು.

ನಾನು ನನ್ನ ನವ್ಯ ಭಾರ್ಯೆಯೊಡನೆ ಗೊರೂರಿನಿಂದ ಬಸ್ಸಿನಲ್ಲಿ ಪ್ರಯಾಣಮಾಡುತ್ತಿದ್ದಾಗ ಡಾ.ಗೊರೂರರೂ ನಮ್ಮ ಸಹ-ಪ್ರಯಾಣಿಕರಾಗಿದ್ದರು. ಬಸ್ಸಿನಲ್ಲಿ ಜನ ತುಂಬಿದ್ದರು. ಕುಳಿತುಕೊಳ್ಳುವುದಕ್ಕೂ ಸ್ಥಳವಿಲ್ಲವಾಗಿತ್ತು. ನಮ್ಮ ಅವಸ್ಥೆ ಅವರ “ಬಸ್ಸಿನಲ್ಲಿ ಹನೀಮೂನ್‌” ಎಂಬ ಕಥೆಗೆ ಸ್ಫೂರ್ತಿ ಕೊಟ್ಟಿತು. ನಾನು ಅವರನ್ನು ಭೇಟಿ ಮಾಡಿದಾಗ, ಆ ಕಥೆಯನ್ನು ನನಗೆ ತೋರಿಸಿದರು.

ಈ ವಿಧವಾದ ಪ್ರಸಂಗಗಳು ಡಾ.ಗೊರೂರರ ಸೌಶೀಲ್ಯವನ್ನು ಸೌಲಭ್ಯವನ್ನು ನನಗೆ ಪರಿಚಯ ಮಾಡಿ ಕೊಟ್ಟವು.

ಜಿ ಎಸ್‌ ಶ್ರೀನಿವಾಸಮೂರ್ತಿ