ಎಮ್. ವಿ. ರಾಮ ಚೈತನ್ಯ - ಡಿವಿಜಿ

ಪ್ರಾತಃಸ್ಮರಣೀಯ ಡಿವಿಜಿ

ಲೇಖಕರು: ಎಮ್. ವಿ. ರಾಮ ಚೈತನ್ಯ

ದುರ್ಲಭಂ ತ್ರಯಮೇವೈತದ್
ದೈವಾನುಗ್ರಹ ಹೇತುಕಮ್
ಮನುಷ್ಯತ್ವಂ ಮುಮುಕ್ಷತ್ವಂ
ಮಹಾಪುರುಷ ಸಂಶ್ರಯಃ||
ವಿವೇಕ ಚೂಡಾಮಣಿ

ಮಹಾ ಪುರುಷರ ಸಂಘ ಭಗವಂತನ ಅನುಗ್ರಹದಿಂದ ಮಾತ್ರ ಸಾಧ್ಯ.

17-3-2009 ರಂದು ಕೀರ್ತಿ ಶೇಷ ಪೂಜ್ಯ ಡಿವಿಜಿಯವರ 122ನೆಯ ವರ್ಷದ ಜಯಂತಿ .(ಹುಟ್ಟು 17-3 1887) ಅವರ ನೆನಪೇ ನಮ್ಮನ್ನು ಪವಿತ್ರ ಗೊಳಿಸುತ್ತದೆ.

ಯೋಗ ಯೋಗದಿಂದ ಅವರ ಒಡನಾಟ ಮತ್ತು ಪರಿಚರ್ಯೆ ಮಾಡುವ ಭಾಗ್ಯ ನನಗೆ ದೊರಕಿತ್ತು. (1957 ರಿಂದ 1 975ರಲ್ಲಿಅವರು ಕಾಲವಶರಾಗುವವರೆಗೂ) ಅವರ ವ್ಯಕ್ತಿತ್ವದಲ್ಲಿ ನಾನು ಕಂಡ, ನನಗೆ ಒಪ್ಪಿದ ಕೆಲವು ಮಹನೀಯ ಗುಣಗಳನ್ನು ಇಲ್ಲಿ ನಿರೋಪಿಸಿದ್ದೇನೆ . ರಾಮಾಯಣದಲ್ಲಿ ಬರುವ ‘ಸ್ಮಿತ ಪೂರ್ವ ಭಾಷಿ ‘ಎಂಬ ಮಾತು ಅವರಿಗೆ ಪೂರ್ಣವಾಗಿ ಅನ್ವಯವಾಗುತ್ತದೆ. ಅವರ ಗುಣವೇ ಅವರ ಮತ್ತು ನಮ್ಮ (ಮಿತ್ರ ಡಿ. ಆರ್. ವೆಂಕಟರಮಣನ್ ಮತ್ತು ನಾನು) ಪರಿಚಯಕ್ಕೆ ನಾಂದಿಯಾಯಿತು . 1957 ಅಕ್ಟೋಬರ್ ಸುಮಾರಲ್ಲಿ ನಾವು ದಿವಂಗತ ಕೆ. ಸಂಪತ್ ಗಿರಿರಾಯರ ಮನೆಗೆ ವಾಸಕ್ಕೆ ಬಂದೆವು .ಶ್ರೀಯುತರು ನ್ಯಾಷನಲ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ನಿವೃತ್ತಿ ಹೊಂದಿದ್ದರು ಡಿವಿಜಿಯವರ ಸ್ನೇಹಿತರು . ಮನೆ ಫಸ್ಟ್ ಕ್ರಾಸ್ ಎನ್. ಆರ್. ಕಾಲೋನಿಯಲ್ಲಿ . ಆ ಮನೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಬಹು ಹತ್ತಿರ. ಹಾಗಾಗಿ ಸಂಜೆಯ ವೇಳೆ ಸಂಸ್ಥೆಯ ರೀಡಿಂಗ್ ರೂಮಿಗೆ ಹೋಗುತ್ತಿದ್ದೆವು, ಅನೇಕ ದೇಶ ವಿದೇಶಗಳ ಪತ್ರಿಕೆ ,ಮಾಸಿಕಗಳು ಇದ್ದವು .ನಾಲ್ಕಾರು ದಿನಗಳ ನಂತರ ಡಿವಿಜಿಯವರು ನಮ್ಮನ್ನು ಕರೆದು ಆದರದಿಂದ ಮಾತನಾಡಿಸಿದರು. ನಮ್ಮನ್ನು ಸಂಸ್ಥೆಯ ಸದಸ್ಯರಾಗಲು ಅದರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು .

ಅನೇಕ ವರ್ಷಗಳ ಹಿಂದೆ ನನ್ನ ತಂದೆಯವರು ನಮ್ಮ ಉಪನಿಷತ್ತುಗಳಲ್ಲಿ ಏನಿದೆ ಎಂದು ತಿಳಿಯುವ ಕುತೂಹಲವಿದ್ದರೆ ‘ಮಂಕುತಿಮ್ಮನ ಕಗ್ಗ’ ಓದು ಎಂದಿದ್ದರು. ಕಗ್ಗವನ್ನು ಬರೆದ ಮಹನೀಯರ ಒಡನಾಟ ದೊರಕಿದ್ದು ನನ್ನ ಸುಕೃತ. ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ.

ಅವರಿಗೆ ಜೀವ ಜಗತ್ತುಗಳಲ್ಲಿ ಅಪಾರ ಗೌರವ. ಜಗತ್ತು ಬ್ರಹ್ಮ ವಸ್ತುವಿನ ಆವಾಸವಲ್ಲವೇ. ಕಗ್ಗದ ‘ಗೌರವಿಸು ಜೀವನವ ‘ ಎಂಬುದು ಇಂದು ಮನೆ ಮಾತಾಗಿದೆ. ಜಗತ್ತು ಬ್ರಹ್ಮ ವಸ್ತುವಿನ ಲೀಲೆ ಎಂಬುದು ಅವರ ದೃಢವಾದ ನಂಬಿಕೆ. ಅವರು ಹದಿ ಹರೆಯದಲ್ಲೇ ಬರೆದ ನಿವೇದನ ಕವನ ಸಂಗ್ರಹದ(1924 )ಈ ಮಾತನ್ನು ಗಮನಿಸಿ.

ಅವನ ಕೃತಿಯ ನೋಡಿ ಮಣಿವೆವ್
ಅವನ ದನಿಯ ಕೇಳಿ ನಲಿವೆವ್
ಅವನ ಭಿಕ್ಷೆಯುಂಡು ಬೆಳೆವೆವ್
ಅವನ ಲೀಲೆಗಳನ್ನು ಕಾಣ್ಬೆ
ಅವನ ಕಾಣೆವು|| +++(4)+++

ಅವರು 19 23ರಲ್ಲಿ ಬರೆದ ಒಂದು ಕಾಗದದಲ್ಲಿ”I have always viewed life as supreme leela– sport if you please “ ಎಂದಿದ್ದಾರೆ. (ಡಿ. ಆರ್ .ವೆಂಕಟರಮಣನ್ ಬರೆದಿರುವ ಡಿವಿಜಿಯವರ ಜೀವನ ಚರಿತ್ರೆ ವಿರಕ್ತ ರಾಷ್ಟ್ರಕ, ಪುಟ್ಟ 128 ಮೊದಲ ಮುದ್ರಣ )ಇಲ್ಲಿ ನೀಲ್ಸ್ ಬೋರ್ ಎಂಬ ಮಹಾ ವಿಜ್ಞಾನಿಯ ಮಾತನ್ನು ಸ್ಮರಿಸಬಹುದು “In the drama of existence we are ourselves both actors and spectators”.+++(5)+++ ಈ ಕಾರಣದಿಂದಲೇ ಅವರು ಎಲ್ಲ ಬಗೆಯ ಜನರನ್ನು ಆದರ ದಿಂದ ಕಾಣುತ್ತಿದ್ದರು.” ಎಲ್ಲರೊಳಗೊಂದಾಗು” ಅವರ ಜೀವನದ ಆದರ್ಶ. ನೆಟ್ಟ ಕಲ್ಲಪ್ಪ ಸರ್ಕಲ್ ಬಳಿ ಇದ್ದ ಜಟಕಾ ಸಾಹೇಬರುಗಳು ಇವರನ್ನು ಯಜಮಾನ್ ಎಂದು ಗೌರವಿಸುತ್ತಿದ್ದರು. ಅವರಲ್ಲಿ ಜಗಳ ಬಂದರೆ ಇವರು ಸಮಾಧಾನ ಮಾಡುತ್ತಿದ್ದರು .+++(4)+++ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಯುವಕರಿಗೆ ಅವರು”Chief “. ಅವರ ಮನೆಗೆ ಎಲ್ಲ ರೀತಿಯ ಜನರೂ ಬರುತ್ತಿದ್ದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಪ್ರೊ. ಕೆ .ಅನಂತರಾಮಯ್ಯನವರು “ಡಿವಿಜಿಯವರ ಮನೆ ಒಂದು variety fair. You can meet all kinds of people from fools to philosophers “ ಎಂದು ಹೇಳಿದ್ದರು.

ಬಂದವರು ಯಾರೇ ಇರಲಿ ಒಳ್ಳೆಯ ಮಾತಿನಿಂದ ಆದರಿಸುತ್ತಿದ್ದರು ಅವರ ಮನೆಗೆ ಒಮ್ಮೆ ವೆಂಕಟಾಚಾರ್ಯ ಎನ್ನುವರು ಬಂದರು. ವೃತ್ತಿ ಅಡಿಗೆ ಕೆಲಸ, ಸಂಗೀತದಲ್ಲಿ ಒಲವು, ಆದರೆ ಬೇಕಾದ ಹಣಕಾಸಿಲ್ಲ . ರೇಡಿಯೋ ಕೇಳಿ ಹಾಡಲು ಕಲಿತಿದ್ದರು. ಡಿವಿಜಿಯವರ ಬಳಿ ಅವರ ಅಂತಪುರ ಗೀತೆಯ ಒಂದೆರಡು ಹಾಡು ಹಾಡಿದರು. ಡಿವಿಜಿಯವರು ತಮ್ಮ ಮೆಚ್ಚಿಗೆ ಸೂಚಿಸಿದರು. ಆಗ ವೆಂಕಟಚಾರ್ಯ ಕಗ್ಗದ ಒಂದು ಪ್ರತಿಯನ್ನು ಆಟೋಗ್ರಾಫ್ ಮಾಡಿ ಕೊಡಲು ಕೇಳಿದರು . ಡಿವಿಜಿಯವರ ಬಳಿ ಪ್ರತಿ ಇರಲಿಲ್ಲ. ನನ್ನ ಬಳಿ ಇದ್ದ ಒಂದು ಪ್ರತಿಯನ್ನು ತರಿಸಿಕೊಂಡು ಆಟೋಗ್ರಾಫ್ ಮಾಡಿ ಕೊಟ್ಟರು.

ಸಹಾಯ ಕೇಳಿದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು, ಅಲ್ಲದೆ ಇತರರಿಂದಲೂ ಮಾಡಿಸುತ್ತಿದ್ದರು. ಆದರೆ ಕೇಳಿದವರ ಉದ್ದೇಶ ಮಾತ್ರ ಪ್ರಾಮಾಣಿಕವಾಗಿರಬೇಕು. ಒಮ್ಮೆ ಜಟಕಾ ಸಾಹೇಬರೊಬ್ಬರಿಗೆ ಅನಾರೋಗ್ಯ ಕಾರಣ ದುಡಿಯಲು ಆಗದಿದ್ದಾಗ ಡಿವಿಜಿಯವರು,ಇವರಿಗೆಸಹಾಯ ಮಾಡಿ ಎಂದು ನಮಗೆ ಒಂದು ಚೀಟಿ ಕಳುಹಿಸಿದರು. ಇವನು ಪ್ರಾಮಾಣಿಕ. ಅವನಿಗೆ ದುಡಿಯಲು ಆಗದಿದ್ದಾಗ ಅವನ ಕುದುರೆಯ ಪಾಡೇನು ?ನೀವು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ತಿಳಿಸಿದರು.+++(4)+++ ಒಬ್ಬ ಬಡ ವಿದ್ಯಾರ್ಥಿಗೆ ವಾರಾನ್ನ ಸೌಕರ್ಯ ಕಲ್ಪಿಸಿ ವಿದ್ಯಾವಂತನಾಗಲು ಸಹಾಯ ಮಾಡಿದರು.

ಅವರು ಸುಲಭರು “ಸಂತೋಷಂ ಜನಯೇತ್ ಪ್ರಾಜ್ಞಃ” ಎಂಬ ಮಾತು ಅವರ ವಿಷಯದಲ್ಲಿ ಅಕ್ಷರಶಃ ಸತ್ಯ. ಮಿತ್ರ ವೆಂಕಟರಮಣನ್ ಮತ್ತು ನಾನು ಅವರನ್ನು ವಾಲ್ಟ್ ಡಿಸ್ನಿಯ “Perry”ಎಂಬ ಸಿನಿಮಾ ನೋಡಲು ಆಹ್ವಾನಿಸಿದಾಗ ನಮ್ಮ ಸಂತೋಷಕ್ಕೆ ಸಿನಿಮಾಕ್ಕೆ ಬಂದರು . ನಂತರ ಕೋಶಿಸ್ ನಲ್ಲಿ ಕಾಫಿ ತಿಂಡಿ ಖುಷ್- ಭಾಷ್( ಇದು ಅವರ ಮಾತು ಹರಟೆಗೆ). ಇದೇ ರೀತಿ ಅನೇಕ ಸಂಜೆಗಳನ್ನು ಎಮ್ .ಎನ್ .ಕೃಷ್ಣರಾವ್ ಪಾರ್ಕನಲ್ಲೋ ,ಬಸವನಗುಡಿ ಟ್ಯಾಕ್ಸಿ ಸ್ಟಾಂಡ್ ಬಳಿಯ ಟ್ಯಾಗೋರ್ ಸರ್ಕಲ್ಲಿನಲ್ಲೋ ಕುಳಿತು ವಿನೋದ ಸಲ್ಲಾಪದಲ್ಲಿ ಕಳೆದ ಸವಿ ನೆನಪಿದೆ. ಆಗ ಅವರ ಮಾತುಗಳನ್ನು, ಹಾಸ್ಯ ಚಟಾಕಿಗಳನ್ನು ಬರೆದುಕೊಂಡಿದ್ದರೆ ಅದೇ ಜೀವನಕ್ಕೆ ಮಾರ್ಗದರ್ಶನ ಕೊಡುವ ಪುಸ್ತಕವಾಗುತ್ತಿತ್ತೇನೋ.

ಡಿವಿಜಿಯವರು ರಸಿಕರು .ಅವರ ಮನೆಯ ಅಟ್ಟದ ಮೇಲೆ attic ನಲ್ಲಿ ಅವರ ಗ್ರಂಥಾಲಯ. ಕೂರಲು ಮೆತ್ತನೆಯ ಹಾಸು ಒರಗು ದಿಂಬು ,ತಾವು ಓದುತ್ತಿದ್ದ ಪುಸ್ತಕದ ಬಗೆಯೋ ಇಲ್ಲವೇ ಯಾವುದಾದರೂ ಓದಿ ನಮಗೆ (ವೆಂಕಟರಮಣನ್ ಮತ್ತು ನಾನು) ತಿಳುವಳಿಕೆ ಕೊಡುತ್ತಿದ್ದರು. ಮಿಲ್ಟನ್ ಮಹಾ ಕವಿಯ ”They also serve who stand and wait” ಎಂಬ ಸಾಲಿಗೆ ಮಾಡಿದ ಯಾಕೆ ನನ್ನ ಜ್ಞಾಪಕದಲ್ಲಿದೆ ಅಟ್ಟದ ಮೆಟ್ಟಲೇರಿದಂತೆ ಒಂದು ಚಿಕ್ಕ ಕೋಣೆ ಅಲ್ಲಿ ಒಂದು ಏಕನಾದ (single stringed musical instrument). ಮೊದಲ ಬಾರಿ ನಾನು ಅದನ್ನು ಗಮನಿಸಿದಾಗ ಬೇಜಾರಾದಾಗ ಗುನುಗುವುದಕ್ಕೆ ಎಂದರು. ಆದರೆ ಅವರ ಸಂಗೀತ ಜ್ಞಾನ ಅಪಾರ. ನಿವೇದನದಲ್ಲಿನ ಕೆಲವು ಕವನಗಳನ್ನು, ಅಂತಃಪುರ ಗೀತೆಯ ಹಾಡುಗಳನ್ನು ಯಾವ ರಾಗದಲ್ಲಿ ಹಾಡಿದರೆ ಚೆನ್ನು ಎಂದು ತಿಳಿಸಿದ್ದಾರೆ. ಸಂಗೀತ ವಿದ್ವಾಂಸರುಗಳಾದ ಎಂ. ಡಿ .ರಾಮನಾಥನ್ ,ಚಿನ್ನ ಮೌಲಾನಾ ಸಾಹೇಬ್ ಮೊದಲಾದವರು ಬೆಂಗಳೂರಿನಲ್ಲಿ ಮೊದಲ ಕಚೇರಿ ನಡೆಸಿದಾಗ ಇವರನ್ನು ಕರೆಸಿಕೊಂಡು , ಈ ರಸಿಕರ ಮುಂದೆ ಕಚೇರಿ ಮಾಡುವುದೇ ಭಾಗ್ಯ ಎಂದುಕೊಂಡರು.

ಅಲಂಕಾರಕ್ಕೆ ಅವರ ಈ ವ್ಯಾಖ್ಯೆಯನ್ನು ಗಮನಿಸಿ . ಮನೆಯ ಮುಂದಿನ ಕೋಣೆಯಲ್ಲಿ ಒಬ್ಬ ಯುವತಿಯ ಸುಂದರ ಮುಖ ಚಿತ್ರ ,ತುರುಬು ಹಾಕಿಕೊಂಡಿದ್ದಳು, ಅದರಲ್ಲಿ ಒಂದು ಗುಲಾಬಿ . ಅದನ್ನು ತೋರಿಸಿ ಎಷ್ಟು ಇದ್ದರೆ ನೋಡಲು ಹಿತ, ಸಂಗೀತವಾದರೆ ಕೇಳಲು ಮತ್ತು ಮನಸ್ಸಿಗೆ ಹಿತವಾಗುತ್ತೋ ಅದು ಅಲಂಕಾರ .ಬಂಗಾಳದ ಸುಪ್ರಸಿದ್ಧ ಕವಿ ವಿದ್ಯಾಪತಿಯ ಈ ಮಾತು ಜ್ಞಾಪಕಕ್ಕೆ ಬರುತ್ತದೆ.

“ ಸುಂದರವದನೇ ಸಿಂದುರ ಬಿಂದು”

ಡಿವಿಜಿಯವರು ಹುಡುಗರಿಗೆ ಉತ್ಸಾಹ ತುಂಬಿ ಬರೆಯಲು ಪ್ರೋತ್ಸಾಹಿಸುತ್ತಿದ್ದರು . ವೆಂಕಟರಮಣನ್ ಅವರ ಓದು ಬಹುಮುಖ ಮತ್ತು ವಿಸೃತ. ಓದಿದ್ದನ್ನು ಮನನ ಮಾಡುತ್ತಿದ್ದರು . ಅವರ ಒಳ್ಳೆಯ ಗ್ರಂಥಗಳಿಗೆ ಡಿವಿಜಿಯವರೇ ಪ್ರೇರಣೆ . ಅವರ ಉತ್ತಮ ಕೃತಿಗಳಾದ ವಿರಕ್ತ ರಾಷ್ಟ್ರಕ ಡಿವಿಜಿ, ಕಗ್ಗ ಕೊಂದು ಕೈಪಿಡಿ, ಸ್ನೇಹ ಯೋಗ ಡಿವಿಜಿಯವರ ಶಿಷ್ಯ ವೃತ್ತಿಯ ಫಲ ಎನ್ನಬಹುದು.

ನಾನು ಕಾರ್ಯ ನಿಮಿತ್ತ ಬೇರೆ ಊರುಗಳಿಗೆ ಹೋಗಬೇಕಾಗಿತ್ತು ಅಲ್ಲಿಂದ ಕಾಗದ ಬರೆಯಲು ಆಜ್ಞಾಪಿಸಿದ್ದರು. ಧೈರ್ಯ ಮಾಡಿ ಬರೆದೆ . ಅವರಿಗೆ ಯಾರೇ ಕಾಗದ ಬರೆಯಲಿ ತಕ್ಷಣವೇ ಜವಾಬು ಕೊಡುವುದು ಅವರ ಸ್ವಭಾವ . ನನ್ನ ಪತ್ರಕ್ಕೆ ಈ ರೀತಿ ಉತ್ತರಿಸಿದ್ದರು.

“Your letter is like yourself- simple and direct. It is not in your nature to attempt artistry.You know I do not despise art. While artistic work man ship exited admiration, naturalness touches the heart.

You are apologetic about your English. If my word is worth anything, your English is faultless and adequate.What I good English? What is good Kannada? You have been reading the “Ramayana” and can form some idea of what good Sanskrit is.The languages are different, but the quality we call the “good” is common to all three. It is straight forwardness and effectiveness and sufficiency in the expression of an idea or emotion.

Let us be content to keep true to our nature. You cannot be both grand and banal in one and the same sentence. The best thing for each of us is to be himself- that is true to his own capacity and his own judgement- simple in his own natural way rather than grand and imposing in somebody else’s way. “

ಇದು ಅವರು ಒಳ್ಳೆಯ ಬರವಣಿಗೆಗೆ ನೀಡುವ ವ್ಯಾಖ್ಯಾನ . ಡಿವಿಜಿಯವರು ಹಾಸ್ಯ ಪ್ರಿಯರು ನಾನು ತಂಗಿದ್ದ ಜಾಗದಲ್ಲಿ ಕೋತಿಗಳು ಹೆಚ್ಚಾಗಿ ಇದ್ದವು ಅದನ್ನು ತಿಳಿಸಿದ್ದೆ, ಅದಕ್ಕೆ ಹಾಸ್ಯವಾಗಿ ”The pretty ones of Bangalore are lucky. They will look prettier to your eyes in contrast to the monkey mugs and bleak bores”.

ನನಗೆ ಹಿರಿಯರನ್ನು ಹೇಗೆ ಸಂಭೋದಿಸಬೇಕೆಂಬ ಚಿಂತೆ ಕಾಡಿತ್ತು ಇದನ್ನು ಊಹಿಸಿ ಅವರು ಈ ರೀತಿ ಬರೆದರು

“ You are puzzled as to how to address me. My dear ‘G’ is not sanctioned by tradition, my dear sir is formal and implies distance. A new device must be found. Why not my dear “innonimate”( ಹೆಸರಿಲ್ಲದವ ಅನಾಮಿಕ).But that need not worry us, why not my dear “Ashmika”, he was a ಋಷಿ. ಅಶ್ಮಕ also means a stone or stoneman.”

ತಮ್ಮ ಹೆಸರನ್ನೇ ತೆಗೆದುಕೊಂಡು ಮಾಡುವ ಈ ರೀತಿಯ ಹಾಸ್ಯ ಅಪರೂಪ.

ಅವರ ಪ್ರೀತಿ ವಾತ್ಸಲ್ಯ ಗಾಢವಾದದ್ದು ಹೊರ ನೋಟಕ್ಕೆ ಗಂಭೀರವಾಗಿ ಕಂಡರೂ(Rough exterior) ಹೃದಯ ಮೃದು. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ . ಕೆಲಸ ತೆಗೆಯುವಾಗ ”hard task master”. ಪೂ.ತಿ .ನರಸಿಂಹಾಚಾರ್ ಅವರಿಗೆ ಡಿವಿಜಿಯವರು ಬರೆದ ಒಂದು ಕಾಗದದಲ್ಲಿ ಹೀಗೆ ಹೇಳಿದ್ದಾರೆ “ಮೈತ್ರಿಯೇ ನನಗೆ ಬೇಕಾದ ಭಾಗ್ಯ. ಇತರ ಭಾಗ್ಯವನ್ನು ನಾನು ಹೆಚ್ಚಾಗಿ ಬಯಸುತ್ತಿಲ್ಲ . ದೇವರು ನನಗೆ ಪ್ರೀತಿ ಮಮತೆಗಳುಳ್ಳ ಸ್ನೇಹದ ಸಂತೋಷವನ್ನು ಸರ್ವದಾ ಕರುಣಿಸಲಿ”.+++(4)+++

ಡಿವಿಜಿ ಅವರ ವಾತ್ಸಲ್ಯಕ್ಕೆ ಭಾಗಿಯಾಗುವ ಅನುಗ್ರಹ ನನಗೆ ಲಭ್ಯವಾಗಿತ್ತು. ನಾನು ಕಾರ್ಯ ನಿಮಿತ್ತ ಬೆಂಗಳೂರಿನಿಂದ ಹೊರಗಿದ್ದೆ . ಸದಾ ಒಡನಾಡಿಯಾದ ವೆಂಕಟರಮಣನ್ ಅವರಿಗೆ ಇದರಿಂದ ಬೇಸರವಾಯಿತು. ಇದನ್ನು ತಿಳಿದು ಡಿವಿಜಿಯವರು 1961 ರಲ್ಲಿ ಕಾಗದ ಬರೆದರು.

“Ramnan is butter.( ಇದುವೇ ವೆಂಕಟರಮಣನ್ ಅವರ ಸ್ವಭಾವ ಚಿತ್ರಣ ಅವರನ್ನು ಡಿವಿಜಿಯವರು ಮಗು ಎಂದೇ ಕರೆಯುತ್ತಿದ್ದರು).I am granite; what are you - ice Berg?…. You are made of the stuff of which great bhaktas are made- sincere and eager to make sacrifices where loyalty is once reposed. There was a time when I could not help weeping and sighing at separation from a dear one. That was before 1925. My heart is rock. No ಆಸ್ಥಾನ ಕಾರುಣ್ಯand ಧರ್ಮ– pleasant or harsh .This is the hard lesson life has taught me.”.

ಈ ಅಳಲು ಅವರ ಬಾಳಿನ ಬೆಳಕಾಗಿದ್ದ ಸಂಗಾತಿಯನ್ನು ನೆನೆದು ಬರೆದದ್ದು. ಅವರ ಪತ್ನಿ ಶ್ರೀಮತಿ ಭಾಗಿರಥಮ್ಮನವರು 9-3-1924 ರಲ್ಲಿ ಅಕಾಲ ಮೃತ್ಯುವನ್ನ ಪ್ಪಿದರು . ಈ ವಿಯೋಗ ದುಃಖವನ್ನು ಅವರ ಅನೇಕ ಕವನಗಳಲ್ಲಿ ಕಾಣಬಹುದು (.ನಿವೇದನ; ಕೇತಕೀವನ). ಈ ಸಾಲುಗಳನ್ನು ಗಮನಿಸಿ

ಎನ್ನ ಮನೆಯೊಳೆಸೆದ ಬೆಳಕೆ
ಎನ್ನ ಬದುಕಿ ನೊಂದು ಸಿರಿಯೇ
ನಿನ್ನನ್ ಇನಿಸು ಹರುಷ ಗೊಳಿಸೆ ಬರೆದ ಬರಹವ
ಇನ್ನದ್ ಎಂತು ನೋಡಿ ನಗುತ
ಲೊಸವೆ ಸರಸವ.

ಕಿರಿಯ ಮಕ್ಕಳ್ ಅಳುವ ದನಿಗೆ
ಪಿರಿಯುರ್ ಇಡುವ ಕಣ್ಣಪನಿಗೆ
ಕರಗದ್ ಎದೆಯ ಬಿದಿಯ ಬಣಗು
ಕವಿತೆಗ್ ಒಲಿವನ್ ಏಂ!

ವಿಧಿ ಎಷ್ಟು ಕ್ರೂರಿ . ಶ್ರೀಮತಿ ಭಗೀರಥತಮ್ಮನವರು ಸಹ ಡಿವಿಜಿಯವರನ್ನು ಹರುಷ ಗೊಳಿಸಲು ಕವನ ಬರೆಯುತ್ತಿದ್ದರು.

ಇರಲಿ ಜಗದ ಜನರ ಕಣ್ಗೆ
ದೊರೆಯದ್ ಒಂದ ನೆನೆದು ಕುಸುಮವ್
ಇರಿಸಿ ಪೂಜೆ-ಗೈದೆವ್ ಎಂದು
ನಲ್ವ-ತಾಳ್ವ ವೊಲ್
ಕರಗಿ ನಿನ್ನ ನೆನಪಿಗ್ ಅದನು
ಸಲಿಪೆನಳ್ತಿಯೊಳ್

ಶ್ರೀ ಕೃಷ್ಣ ಪರಮಾತ್ಮ ಅರ್ಜುನನನ್ನು “ಪ್ರಣಯರಸಜುಷಾ ಚಕ್ಷುಶಾ” ಪ್ರೀತಿ ಸುರಿಯುತ್ತಿದ್ದ ಕಣ್ಣಿನಿಂದ ನೋಡಿದನಂತೆ .ಇದು ಡಿವಿಜಿಯವರಿಗೆ ಪ್ರಿಯವಾದ ಮಾತು .ಅನೇಕ ದಶಕಗಳು ಕಳೆದಿದ್ದರೂ ಹೊರಗೆ ಲೋಕಸಕ್ತಿ ಒಳಗೆ ವಿರಕ್ತಿ ರೂಢಿಸಿಕೊಂಡಿದ್ದರೂ, ಕಷ್ಟಗಳ ಸುರಿ ಮಳೆಯನ್ನೇ ಸಹಿಸಿದ್ದರು. ಒಳಗಿನ ಗಾಯ ಮಾದಿರಲಿಲ್ಲ . ಬಗೆಯಲ್ ವಾಂಚೆಯ ಗೆಲ್ಲುವುದೇ ಸುಖಮಲೈ ಎಂದರೂ, ಸ್ನೇಹ ಪ್ರೀತಿ ಇಲ್ಲದ ಜೀವ ಬರಡಲ್ಲವೇ? ದುಃಖವಿದ್ದರೂ ಅವರ ಸ್ನೇಹ ಚಿಲುಮೆ ಬತ್ತಲೆ ಇಲ್ಲ.

ಅವರ ಮತ್ತೊಂದು ಗುಣ ಸಮಯಕ್ಕೆ ಕೊಡುತ್ತಿದ್ದ ಪ್ರಾಧಾನ್ಯಯತೆ.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ವಿಚಾರಗೋಷ್ಠಿಗಳು ಭಾಷಣಗಳು ಸಾಮಾನ್ಯವಾಗಿ ಸಂಜೆ ಆರು ಮೂವತ್ತಕ್ಕೆ ಶುರುವಾಗುತ್ತಿದ್ದವು . ಯಾರು ಬರಲಿ ಬಿಡಲಿ ನಿಗದಿತ ಸಮಯಕ್ಕೆ ಶುರು ಆಗಬೇಕು . ಐದು ನಿಮಿಷ ಮಾರ್ಜಿನ್ . ಪರಿಚಯ ಭಾಷಣವಾಗಲಿ ವಂದನಾರ್ಪಣೆ ಯಾಗಲಿ ಮಿತವಾಗಿರಬೇಕು . ವೆಂಕಟರಮಣನ್ ಅವರಿಗೆ ಈ ಕೆಲಸ ವಹಿಸಿದ್ದರು . ಅವರು ಮೊದಲೇ ಬರೆದುಕೊಂಡು ತಯಾರಾಗಿ ಬರುತ್ತಿದ್ದರು.

ಡಿವಿಜಿಯವರು ಸಾರ್ವಜನಿಕ ಭಾಷಣಗಳನ್ನು ಮಾಡುವ ಮೊದಲು ಕಾಲಮಿತಿಯನ್ನು ತಿಳಿದುಕೊಳ್ಳುತ್ತಿದ್ದರು. ಭಾಷಣದ ಎರಡನ್ನು ಸಿದ್ಧಪಡಿಸಿ ಮಿತ್ರರು ಟೈಮ್ ಕೀಪರ್ ಆಗಿರುತ್ತಿದ್ದರು. ಅವರ ಎದುರು ಓದಿ ಕಾಲ ಮಿತಿ ಮೀರಿದರೆ ಕರಡು ಪ್ರತಿಯಿಂದ ಅನಾವಶ್ಯಕ ಎನ್ನುವ ಪದಗಳನ್ನು ತೆಗೆದು ತಿದ್ದಿ ಕಾಲಮಿತಿಗೆ ಸರಿಯಾಗುವಂತೆ ಮಾಡುತ್ತಿದ್ದರು.

ಅವರು ನಮ್ಮ ತಪ್ಪನ್ನು ಎತ್ತಿ ತೋರಿಸುತ್ತಿರಲಿಲ್ಲ. ಆದರೆ ಒಂದು ನಯದಿಂದ ತಿದ್ದಿಕೊಳ್ಳುವಂತೆ ಮಾಡುತ್ತಿದ್ದರು .ಒಂದು ವ್ಯಾಸಂಗ ಗೋಷ್ಠಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಬೇಕಾದ ವಿಷಯ ಹೊರತುಪಡಿಸಿ ಬೇರೆಲ್ಲ ಪ್ರಸ್ತಾಪವಾಗುತ್ತಿತ್ತು, ನಾನು ಬೇಜಾರಿನಿಂದ ದುಡುಕಿ, ಭಾರತದಲ್ಲಿ ಎಲ್ಲರೂ ವೇದಾಂತವನ್ನು ಹೇಳುವವರೇ ಆದರೆ ನಡೆಯುವುದೇ ಬೇರೆ ಎಂದೆ. ಅವರೇ ನಮಗೆಲ್ಲ ಮೀಟಿಂಗ್ ಗೆ ಬರುವಾಗ ಅಂದಿನ ಚರ್ಚೆಗೆ ಬರುವ ವಿಷಯವನ್ನು ಯೋಚಿಸಿಕೊಂಡು ಬರಬೇಕೆಂದು ಹೇಳಬೇಕಾದುದನ್ನು ಸ್ಪಷ್ಟವಾಗಿ ಪ್ರತಿಪಾದಿಸಬೇಕೆಂದು ಹೇಳುತ್ತಿದ್ದರು. ಅಂದಿನ ಮೀಟಿಂಗ್ ಅಂದಿಗೆ ಬರ್ಕಾಸ್ತ ಆಯಿತು. ಇತರ ಸದಸ್ಯರಿಗೆ ಬೇಜಾರಾಗಿತ್ತು. ಮಾರನೆಯ ದಿನ ಅವರು ನನ್ನನ್ನು ಮಾತನಾಡಿಸಲಿಲ್ಲ ,ನಾನೇ ಕ್ಷಮೆ ಕೇಳಿದೆ .ಅವರು ನೀನು ನಿಜವನ್ನೇ ಹೇಳಿರಬಹುದು ,ಆದರೆ ಹೇಳಿದ ರೀತಿ ಸರಿ ಇರಲಿಲ್ಲ.+++(4)+++ ನಿನ್ನ ಇತರ ಸ್ನೇಹಿತರಿಗೆ ಇದರಿಂದ ಬೇಜಾರಾಯಿತಲ್ಲವೇ ಎಂದರು .ಅನಂತರ ‘forget it’ಎಂದು ಒಂದೆರಡು ಹಾಸ್ಯ ಪ್ರಸಂಗ ಹೇಳಿ ಮನಸ್ಸಿನ ದುಗುಡ ಕಳೆದರು.

ತಾವು ಮಾಡಿದ್ದು ಸರಿಯಲ್ಲ ವೆನಿಸಿದರೆ ತಾವಾಗಿಯೇ ಒಪ್ಪಿಕೊಳ್ಳುತ್ತಿದ್ದರು. ನಾನು ಹೇಳಿದ್ದೆ ವೇದ ವಾಕ್ಯ ನಾನು ಮಾಡಿದ್ದೆ ಸರಿ ಎಂಬ ಮೊಂಡುತನವಿರಲಿಲ್ಲ . ವ್ಯಾಸಂಗ ಗೋಷ್ಠಿಯ ಸದಸ್ಯರು ಸ್ನೇಹಿತ ಶ್ರೀ ಸುಬ್ಬ ನರಸಿಂಹಯ್ಯನವರ ನೇತೃತ್ವದಲ್ಲಿ ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳನ್ನು ಅದರಲ್ಲೂ ಸ್ಲಂ ಗಳನ್ನು ಪರಿಶೀಲಿಸಿ ಅಲ್ಲಿ ಕುಂದುಗಳ ಪಟ್ಟಿಯನ್ನು ಕಾರ್ಪೊರೇಷನ್ ಮತ್ತು ಸರಕಾರದ ಗಮನಕ್ಕೆ ತರುತ್ತಿದ್ದರು. ಇದೇ ರೀತಿ ಅನೇಕ ಸಂಘ ಸಂಸ್ಥೆಗಳು ಮಾಡುತ್ತಿದ್ದವು .ಆ ಸಂಘ ಸಂಸ್ಥೆಗಳ ಜೊತೆ ಕೂಡಿ ವಿಚಾರ ವಿನಿಮಯ ಮಾಡಲು ಗೋಖಲೆ ಸಂಸ್ಥೆ ಯ ಲ್ಲಿ’civic worker’s convention ‘ ಎಂಬುದನ್ನು 26-6-1960 ರಂದು ಸಾರ್ವಜನಿಕ ಸಭೆ ಕರೆಯಲಾಗಿತ್ತು . ಬಹಳ ಜನ ಸೇರುತ್ತಾರೆ ಅದಕ್ಕಾಗಿ ಸಂಸ್ಥೆಯ ಹೊರಾಂಗಣದಲ್ಲಿ ಸಭೆ ನಡೆಯಲು ಏರ್ಪಾಡಾಗಿತ್ತು. ಆದರೆ ಅಂದಿನ ಹವಾಮಾನ ವರದಿ ಸಂಜೆ ಗುಡುಗಿನಿಂದ ಕೂಡಿದ ಮಳೆ ಸಂಭವವೆಂದು ತಿಳಿಸಿತು .ಡಿವಿಜಿಯವರು ಮಳೆ ಬಂದರೆ ಹೇಗೆ ಎಂದು ಸಭೆಯನ್ನು ಸಂಸ್ಥೆಯ ಹಾಲಿನಲ್ಲೇ ಮಾಡಲು ನಿಶ್ಚಯಿಸಿದರು. ನಾವು ಹವಾಮಾನ ವರದಿ ಎಂದೂ ಕರಾರುವಕ್ಕಾಗಿಲ್ಲ ಒಳಗಡೆ ಸಭೆ ಬೇಡ ಎಂದೆವು. ಅವರು ಕಟುವಾಗಿ ಹೇಳಿದಷ್ಟು ಮಾಡಿ ಎಂದು ಆದೇಶಿಸಿದರು. ಸಂಸ್ಥೆಯ ಹಾಲಿನಲ್ಲಿ ಎಲ್ಲಾ ಏರ್ಪಾಟು ಆದವು, ಆದರೆ ಮಳೆ ಬರಲಿಲ್ಲ. ಜಾಗ ಕಿಷ್ಕಿಂದ ಆಯಿತು, ಸಭಾಂಗಣದ ಹೊರಗೂ ಜಾಗ ಸಾಲದೆ ಜನ ಕಿಕ್ಕಿರಿದಿದ್ದರು. ಧ್ವನಿ ವರ್ಧಕ ಕೈ ಕೊಟ್ಟಿತು . ಇದನ್ನು ಕಂಡು ಡಿವಿಜಿಯವರು ತಮ್ಮ ಭಾಷಣದಲ್ಲಿ ಅಂದಿನ ಪ್ರಸಂಗವನ್ನು ಹೇಳಿ ತಾವು ಮಾಡಿದ್ದು ಸರಿ ಅಲ್ಲವೆಂದೂ, ಹುಡುಗರಿಗೆ ದುಡುಕಿ ಮಾತನಾಡಿ ಮನ ನೋಯಿಸಿದನೆಂದು ಕಣ್ಣೀರಿಡುತ್ತಾ ಕ್ಷಮೆ ಕೇಳಿದರು.+++(4)+++

ಡಿವಿಜಿಯವರಿಗೆ ಪ್ರಜಾಪ್ರಭುತ್ವದಲ್ಲಿ ಅಚಲ ವಿಶ್ವಾಸ. ಇದೇ ಕಾರಣದಿಂದ ಅವರ ಸ್ನೇಹಿತರು ಮೈಸೂರಿನ ದಿವಾನರು ಆಗಿದ್ದ ಸರ್ ಮಿರ್ಜಾ ಇಸ್ಮೈಲ್ ಅವರ ಜೊತೆ ವಿರಸವಾಗಿತ್ತು. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ತಿಳುವಳಿಕೆ ಇರಬೇಕು, ಜನರಿಗೆ ಬೇಕಾದ ಮಾಹಿತಿ ತರಬೇತಿಗಾಗಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ಅದರ motto “ಜ್ಞಾನಿನಾ ಚರಿತುಂ ಶಕ್ಯಂ ಸಂಯಗ್ ರಾಜ್ಯಾಧಿ ಲೌಕಿಕಂ” ಎಂದು.+++(5)+++ ಸಂಸ್ಥೆಯ ಕಾರ್ಯಕ್ಕೆ ಯುವಕರನ್ನು ಆಕರ್ಷಿಸಲು ವ್ಯಾಸಂಗ ಗೋಷ್ಠಿ(Study circle) ಪ್ರಾರಂಭಿಸಿದ್ದರು. ಇದು ಸಂಸ್ಥೆಯ ಅವಿಭಾಜ್ಯ ಅಂಗವಾಗಿತ್ತು.+++(4)+++ ವ್ಯಕ್ತಿಗೆ ಹೇಗೋ ಹಾಗೆ ಸಂಸ್ಥೆಗೆ ಹಣ ಬೇಕು . ಅವಶ್ಯಕತೆಗೆ ಎಷ್ಟೋ ಅಷ್ಟು. ಅದು ಬೇಕು ಇದು ಬೇಕು ಎಂದು ಹೆಚ್ಚು ಹಣ ಪಡೆಯಬಾರದು. ಹೆಚ್ಚು ಹಣ ಇದ್ದರೆ ಬಕಾಸುರರು ದೋಚಲು ಬರುತ್ತಾರೆ ಎನ್ನುತ್ತಿದ್ದರು . ಹಣದ ಕೊರತೆ ಇದ್ದಾಗ ಸ್ನೇಹಿತರಿಂದ ಅಭಿಮಾನಿಗಳಿಂದ ಹಣ ಕೇಳಿ ಪಡೆಯುತ್ತಿದ್ದರು. ಸಂಸ್ಥೆಯು ಬಡತನದಲ್ಲಿದ್ದಾಗ ಅದರಿಂದ ಯಾವ ಪ್ರತಿಫಲವನ್ನು ಪಡೆಯದೆ ಅಪೇಕ್ಷಿಸದೆ ದುಡಿದವರು ಎಸ್ .ವೆಂಕಟಚಲಪತಿಯವರು. ನಾವು ಸಂಸ್ಥೆಯ ಸದಸ್ಯರಾದಾಗ ಅವರೇ ಲೈಬ್ರರಿಯನ್, ಅಕೌಂಟೆಂಟ್ ಕ್ಲರ್ಕ್ , ಟೈಪಿಸ್ಟ್ ಎಲ್ಲಾ. ಅವರೂ ಸಹ ಬಡತನದಲ್ಲೇ ಜೀವನ ನಡೆಸಿದರು. ಇಲ್ಲಿ ಸ್ಮರಿಸಲೇಬೇಕಾದ ಇನ್ನೊಬ್ಬ ವ್ಯಕ್ತಿ ಕರಪಣ್ಣ . ಇವನ ಹೆಸರು ನಾರಾಯಣಸ್ವಾಮಿ ನಾಯ್ಡು . ಸಂಸ್ಥೆಯ ಅಟೆಂಡರ್ ಸ್ವಿಪರ್ ಮೆಸೆಂಜರ್ ಅಲ್ಲದೆ ಡಿವಿಜಿಯವರ ಆಪ್ತ ಸೇವಕ. ಅವರ ಕೊನೆ ಉಸಿರವರೆಗೂ ಸೇವೆ ಸಲ್ಲಿಸಿದ ಮಹಾನುಭಾವ.

ಡಿವಿಜಿಯವರ ಅಗಾಧ ಪಾಂಡಿತ್ಯ ಎಲ್ಲರಿಗೂ ತಿಳಿದ ವಿಷಯ . ಸಾಹಿತ್ಯ ರಾಜಕೀಯ ಇತಿಹಾಸ ಕಲೆ ಪತ್ರಿಕೋದ್ಯಮ ಎಲ್ಲದರಲ್ಲೂ ಪರಿಣಿತರು. ವಿಜ್ಞಾನದ ಸಂಶೋಧನೆಗಳ ಪರಿಚಯವಿತ್ತು. ’Current science’ ಎಂಬ ವಿಜ್ಞಾನ ನಿಯತ ಕಾಲದ ನಿಯತಕಾಲಿಕದಲ್ಲಿ ಅವರ ಬರಹ ಪ್ರಕಟವಾಗಿತ್ತು ಅದನ್ನು ಬ್ರಿಟನ್ ನ ಪ್ರಸಿದ್ದ ಪತ್ರಿಕೆ ’Nature’ ಉದ್ದರಿಸಿತ್ತು .+++(4 क्व लभ्यते??)+++ ವಿಸೀ ಅವರು ಹೇಳಿದಂತೆ ಅವರದ್ದು ’Massive intellect’.

ಡಿವಿಜಿಯವರ ಜ್ಞಾಪಕಶಕ್ತಿ ಅದ್ಭುತವಾಗಿತ್ತು . ಊಹೆಗೂ ಸಿಲುಕದ್ದು .ಮೂವತ್ತರ ದಶಕದಲ್ಲಿ ಮಡಿಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಹೋದಾಗ ಒಬ್ಬ ಮಹನೀಯರ ಆತಿಥ್ಯ ಸ್ವೀಕರಿಸಿದ್ದರು . ಅವರು 60ರ ದಶಕದಲ್ಲಿ ಡಿವಿಜಿಯವರನ್ನು ನೋಡಲು ಬಂದಾಗ ಅವರನ್ನು ಗುರುತಿಸಿ , ಸ್ವಾಗತಿಸಿ , ಯೋಗ ಕ್ಷೇಮ ವಿಚಾರಿಸಿದರು. ಅಷ್ಟೇ ಅಲ್ಲದೆ ಅವರ ಕುಟುಂಬದ ಸದಸ್ಯರನ್ನು ಹೆಸರಿಸಿ ಅವರೆಲ್ಲರ ಅಭಿವೃದ್ಧಿಯನ್ನು ತಿಳಿದು ಸಂತೋಷವನ್ನು ವ್ಯಕ್ತಪಡಿಸಿದರು . ಆ ಮಹನೀಯರಿಗೆ ಇವರ ಜ್ಞಾಪಕ ಶಕ್ತಿ ಕಂಡು ಆಶ್ಚರ್ಯವಾಯಿತು . ಡಿವಿಜಿಯವರು ಬರೆಯುತ್ತಿದ್ದ ಜ್ಞಾಪಕ ಚಿತ್ರ ಶಾಲೆಗೆ ಆರ್ ಕಾಟ್ ಶ್ರೀನಿವಾಸಚಾರ್ಯ ಅವರ ಭಾವಚಿತ್ರ ಬೇಕಿತ್ತು .ಅನೇಕ ವರ್ಷಗಳ ಹಿಂದೆ ಚಾಮರಾಜಪೇಟೆಯಲ್ಲಿ ಅವರ ಮೊಮ್ಮಗಳ ಮನೆಗೆ ಹೋಗಿದ್ದರಂತೆ . ನನಗೆ ಮತ್ತು ವೆಂಕಟರಮಣನ್ ಅವರಿಗೆ ಆ ಮನೆ ಇರುವ ಜಾಗ ಮತ್ತು ಗುರುತು ತಿಳಿಸಿ, ಭಾವ ಚಿತ್ರವಿದ್ದರೆ ಒಂದು ಪ್ರತಿ ತರಲು ತಿಳಿಸಿದರು .ಅವರು ಹೇಳಿದ ಮಾಹಿತಿಯಿಂದ ಆ ಮನೆಯನ್ನು ಗುರುತಿಸಲು ಸಾಧ್ಯವಾಯಿತು .+++(4)+++ ಇದೇ ರೀತಿಯ’photographic memory’ ಅವರ ಆಪ್ತರಾದ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾಯರಿಗೂ ಇತ್ತು .ಅನಂತರ ನಾವು ಮಿತ್ರ ಶ್ರೀ ಎಸ್. ಆರ್ .ರಾಮಸ್ವಾಮಿಯವರ ನೆರವಿನಿಂದ ಫೋಟೋದ ಒಂದು ಪ್ರತಿ ಯನ್ನು ತಂದೆವು.

ಸಂಸ್ಥೆಯ ವ್ಯಾಸಂಗ ಗೋಷ್ಠಿಯು ನಡೆಸುತ್ತಿದ್ದ’Annual social gatherings’ ಒಂದು memorable event. ಸ್ನೇಹಿತರೆಲ್ಲ ಒಂದೆಡೆ ಸೇರುವ ಸದವಕಾಶ . ಸಂಗೀತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಮುಖ್ಯ ಅತಿಥಿಗಳ ಭಾಷಣ ,ಅನಂತರ ಊಟ ಇದು ನಡೆಯುತ್ತಿದ್ದದ್ದು ಸಾಧಾರಣವಾಗಿ ಡಿಸೆಂಬರ್ ನಲ್ಲಿ . ಅವರೇ ಕಾಯಿ ಕಾಲ. ಅವರೆಕಾಯಿ ಕೂಟಿಗೆ ಅಗ್ರಸ್ಥಾನ . ಎಲ್ಲವೂ ಶುಚಿ ರುಚಿ. ಇದರ ಬಗ್ಗೆ ಒಮ್ಮೆ ಆಕಾಶವಾಣಿ ಬಿತ್ತರಿಸಿತ್ತು( ಸುತ್ತಮುತ್ತ ಎಂಬ ಕಾರ್ಯಕ್ರಮದಲ್ಲಿ ಎಂದು ಜ್ಞಾಪಕ ). ಡಿವಿಜಿಯವರು ಎಂದೂ ಮೊದಲ ಪಂಕ್ತಿಯಲ್ಲಿ ಊಟ ಮಾಡುತ್ತಿರಲಿಲ್ಲ . ಎಲ್ಲರ ಊಟ ಆದ ನಂತರ ಬಂದವರನ್ನು ಬೀಳ್ಕೊಟ್ಟು ನಂತರ ಹುಡುಗರೊಂದಿಗೆ ಎಂದರೆ ನಮ್ಮಂತವರು ಮತ್ತು ಕೆಲಸಗಾರರೊಂದಿಗೆ ಊಟ ಮಾಡುತ್ತಿದ್ದರು . ಅವರಿಗೆ ಶುಚಿ ರುಚಿಯಾದ ತಿಂಡಿ ತೀರ್ಥಗಳು ಪ್ರಿಯ . ಅನೇಕ ದಿನ ನಮ್ಮೊಂದಿಗೆ ಎಂ. ಟಿ .ಆರ್ ಗೆ ಬಂದಿದ್ದರು .ಆದರೆ ಅವರು ತಿಂಡಿಪೋತರಲ್ಲ . ಅನೇಕ ವೇಳೆ ಕಡ್ಲೆಪುರಿ ಕಡಲೆಕಾಯಿಯಲ್ಲಿ ತೃಪ್ತಿ, ಒಂದೆರಡು ಬಾರಿ ನನ್ನ ಪತ್ನಿ ಸೀತಮ್ಮ ಚಕ್ಕುಲಿ ಮಾಡಿ ಕಳುಹಿಸಿದಾಗ ಅದರ ರುಚಿಯನ್ನು ಹೊಗಳಿಕೆ ಹೊಗಳಿ ಅವಳಿಗೆ ಧನ್ಯವಾದ ತಿಳಿಸಿ ಕಾಗದ ಬರೆದರು.

ಇದೆಲ್ಲ ಸ್ನೇಹಿತರ ಜೊತೆ ಸಂತೋಷವಾಗಿ ವಿನೋದವಾಗಿ ಕಾಲ ಕಳೆಯಲು ಒಂದು ನೆಪ ಅಷ್ಟೇ. ರಾತ್ರಿ ವೇಳೆ ಲಘು ಆಹಾರ ಸೇವಿಸುತ್ತಿದ್ದರು ,ಆಗೊಮ್ಮೆ ಈಗೊಮ್ಮೆ ಬಿಸಿ ಪಕೋಡ ಅಥವಾ ಜಿಲೇಬಿ ಬೇಕೆನಿಸುವುದು ಸಹಜ. ಡಿವಿಜಿಯವರು ಇದಕ್ಕೆ ಹೊರತಲ್ಲ. ಯಾವುದೇ ಸಮಸ್ಯೆಯನ್ನು ವಿಷಯವನ್ನು ಅನೇಕ ಮುಖಗಳಿಂದ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರುತ್ತಿದ್ದರು. ಅನಂತರ ಬರೆಯುವುದು. ಮರೆತುದ್ದನ್ನು ಪುನಹ ಓದಿ ತಿದ್ದಿ ಬರವಣಿಗೆಗೆ ಒಂದು ರೂಪ ಕೊಡುತ್ತಿದ್ದರು. ಒಬ್ಬ ಶಿಲ್ಪಿಯಂತೆ .+++(4)+++ ಉದಾಹರಣೆಗೆ ಶ್ರೀರಾಮ ಪರಿಕ್ಷಣಂ ಹಾಗೂ ಶ್ರೀ ಕೃಷ್ಣ ಪರೀಕ್ಷಣಂ.

ನಾನು ಹೇಳಿದೆ ಎಂದು ಒಪ್ಪಿಕೊಳ್ಳಬೇಡಿ , ಗೀತೆಯಲ್ಲಿ ಹೇಳಿದಂತೆ ಪ್ರಶ್ನೆಯನ್ನು ಪರಿಪ್ರಶ್ನೇನ ಮತ್ತೆ ಮತ್ತೆ ಕೇಳಿ ತಿಳಿದುಕೊಂಡು ಜ್ಞಾನಾರ್ಜನೆ ಮಾಡಬೇಕು ಎಂದು ನಮಗೆಲ್ಲ ಆಗಾಗ ಹೇಳುತ್ತಿದ್ದರು.+++(4)+++ ಅವರ ಪುಸ್ತಕಗಳ ಒಂದು ಪ್ರತಿಯನ್ನು ಪ್ರೀತಿ ವಾತ್ಸಲ್ಯದ ಕುರುಹಾಗಿ ಕೊಡುತ್ತಿದ್ದರು. ಒಂದೊಂದು ಪುಸ್ತಕ ಕೊಡುವಾಗಲು ಬೇರೆ ಬೇರೆ ರೀತಿಯ ಆಶೀರ್ವಾದ .ಅವರ ಪ್ರೀತಿ ವಾತ್ಸಲ್ಯ ಪಡೆದ ನಾವೆಲ್ಲರೂ ಧನ್ಯರು. ಅವರ ರೂಪ ಸವಿ ಮಾತು ಅವರನ್ನು ತಿಳಿದವರಲ್ಲಿ ಅಚ್ಚಳಿಯದೇ ಇದೆ.

The man of our time whom we can admire without any reservation are rare – DVG is one.

೧. ಮೊದಲನೇಯದು ಶ್ರೀ ಎಮ್ ವಿ ರಾಮಚೈತನ್ಯ ಮತ್ತು ಶ್ರೀ ಡಿ ಅರ್ ವೆಂಕಟರಮಣನ್ ಅವರು
೨. ಎರಡನೇಯದು ಡಾ. ಡಿ ವಿ ಗುಂಡಪ್ಪನವರು.