ರಾಜರತ್ನಂ - interview

Source: TW

ರಾಜರತ್ನಂ: ತಾವು ಬರೆಯುವುದಕ್ಕೆ ಶುರು ಮಾಡಿದ್ದು ಯಾಕೆ ಅಂತ?

ಡಿವಿಜಿ: ನನ್ನ ಮನಸ್ಸಿನಲ್ಲಿ ಆದ ಸಂತೋಷವನ್ನು ನನಗೆ ಬೇಕಾದವರ ಜೊತೆಯಲ್ಲಿ ಹಂಚಿಕೊಂಡರೆ ಆ ಸಂತೋಷ ಇಮ್ಮಡಿಯಾಗುತ್ತದೆ.

ರಾಜರತ್ನಂ: ನಮ್ಮ ಜನ ನೆಮ್ಮದಿಯಿಂದ ಸುಖವಾಗಿ ಬದುಕಬೇಕಾದರೆ ಏನು ಮಾಡಬೇಕು?

ಡಿವಿಜಿ: ಸುಖ ಎನ್ನುವುದು ಒಂದು ಕ್ಷಣದ ವಿಷಯವಲ್ಲ; ಒಂದು ಕಾಲವಿಸ್ತಾರದ ವಿಷಯ. ಅದು point of time ಅಲ್ಲ; period of time.
ಖಂಡಿತವಾಗಿ ಪ್ರತಿ ಮನುಷ್ಯನೂ ಅದಕ್ಕೋಸ್ಕರ ಶ್ರಮ ಪಡಬೇಕು.
ಈ ಶ್ರಮದಲ್ಲಿ ಒಂದು ನೀತಿ ಇಟ್ಟುಕೊಳ್ಳಬೇಕು.

ಮೊದಲನೆಯದು - ಸತ್ಯ, ಶೋಧಿಸಿದ ಸತ್ಯ.
ಎಷ್ಟೋ ವಿಷಯಗಳನ್ನು ನಮಗೆ ಸತ್ಯ ಎಂದು ಹೇಳುತ್ತಾರೆ.
ನಾವು ಅದನ್ನು ಶೋಧಿಸಬೇಕು.

ಎರಡನೆಯದು - ಸತ್ಯ-ಪ್ರಯೋಗದಲ್ಲಿ ಯುಕ್ತಾಯುಕ್ತವಿವೇಕ.

ಈ ಎರಡಕ್ಕೂ ಮೂಲವಾದದ್ದು ಸೌಜನ್ಯ.

ಇವು ಮೂರನ್ನು ಹಿಡಿದುಕೊಂಡು
ದೇಶದ ಕೆಲಸಗಳನ್ನು ನಡೆಸಿದರೆ
ಸುಭಿಕ್ಷೆ ಉಂಟಾಗುತ್ತದೆ,
ಸೌಖ್ಯ ಉಂಟಾಗುತ್ತದೆ, ಶಾಂತಿ ಉಂಟಾಗುತ್ತದೆ.

ರಾಜರತ್ನಂ: ನಮ್ಮ ದೇಶದ ಉದ್ಧಾರಕಾರ್ಯದಲ್ಲಿ ಯುವಕರ ಪಾತ್ರವೇನು ಸರ್?

ಡಿವಿಜಿ:
ಯುವಕರದ್ದೇ ದೊಡ್ಡ ಪಾತ್ರ.
ದಾದಾಭಾಯಿ ನವರೋಜಿಯವರ ಕಾಲದಿಂದ ಗಾಂಧಿಯವರ ವರೆಗೆ
ಕೆಲವು ಉದ್ದೇಶಗಳನ್ನು, ಧ್ಯೇಯಗಳನ್ನು ಎತ್ತಿಹಿಡಿದಿದ್ದಾರೆ.
ಅವುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ಯುವಕರದ್ದು. ಗಾಂಧಿಯವರ ಕಾಲದಲ್ಲಿ ಸ್ವಾತಂತ್ರ್ಯ ಸಂಪಾದನೆಗೆ ಹೇಗೆ ಯುವಕರು ಸಾವಿರಸಾವಿರವಾಗಿ ಬಂದರೋ,
ಆ ಸ್ವಾತಂತ್ರ್ಯವನ್ನು ಸಂರಕ್ಷಣೆ ಮಾಡಿ
ಅದರಿಂದ ಪ್ರಯೋಜನ ಪಡೆಯುವ ಕೆಲಸಕ್ಕಾಗಿ
ಹತ್ತುಸಾವಿರ-ಹತ್ತುಸಾವಿರವಾಗಿ ಯುವಕರು ಬರಬೇಕು.

ಆದರೆ, ಸತ್ಯದಲ್ಲಿ ಪ್ರೀತಿ ಇರತಕ್ಕವರಾಗಬೇಕು,
ವಿಚಾರದಲ್ಲಿ ಅಭ್ಯಾಸ ಇರತಕ್ಕವರಾಗಬೇಕು,
ಸೌಜನ್ಯದಲ್ಲಿ ನಂಬಿಕೆ ಇರತಕ್ಕವರಾಗಬೇಕು.
ಯುವಕರಲ್ಲಿ ಇದೇ ನನ್ನ ಪ್ರಾರ್ಥನೆ.

ಇನ್ನೇನಾದರೂ ಉಂಟೇ ರಾಜರತ್ನಂ?

ರಾಜರತ್ನಂ: ಇನ್ನೇನೂ ಕೇಳಬೇಕಾದುದು ಇಲ್ಲ ಸರ್.
ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು.

ಡಿವಿಜಿ: ಸಂತೋಷ. ಸಕಲಂ ಭದ್ರಮಸ್ತು ನಃ